ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 22, 2011

ಬೆಳಗಲಾದೀಪಗಳು ಕತ್ತಲೆಯನಳಿಸುತ್ತ


ಬೆಳಗಲಾದೀಪಗಳು ಕತ್ತಲೆಯನಳಿಸುತ್ತ

ಹಂಡೆ ಹರಿವೆಯ ತುಂಬ ಮಂಗಳದ ಜಲತುಂಬಿ
ಸಿಂಡಲೆಯ ಬಳ್ಳಿಗಳ ಸಂಕೋಲೆ ತೊಡಿಸಿ
ತಂಡದಲಿ ಕೂತು ಮಣೆಗಳ ಮೇಲೆ ಜಾವದಲಿ
ತಿಂಡಿಗೂ ಮುನ್ನ ಮಂಗಳ ಸೇಸೆ ಸ್ನಾನ

ಮೂರು ದಿನಗಳ ಭಾಗ್ಯ ಪಡೆದಿರುವ ಬಲಿರಾಯ
ತೇರನೇರುತ ಬರುವ ಭುವಿಯನಾಳಲಿಕೆ
ಯಾರಿಗೇನಿದೆ ಕೊರತೆ ಮಹಾಬಲೀ ರಾಜ್ಯದಲಿ ?
ಸಾರಿ ನೀವ್ ಕೇಳುವನು ಎಲ್ಲರಹವಾಲು

ಹದಿನಾರು ಸಾವಿರದ ಹೆಮ್ಮಕ್ಕಳಾ ಸೆರೆಯ
ಉದಯಕಾಲದವೇಳೆ ಬಿಡಿಸಿ ಗೋಪಾಲ
ಸದೆಬಡಿದ ನರಕನಾ ಕೊಂದಾದ ನೋವುಗಳ
ಒದೆದೋಡಿಸಲು ಮಿಂದ ಚಂದದಭ್ಯಂಗ

ಜಯಸಿರಿಯು ಹೊಸಿಲೊಳಗೆ ಹೆಜ್ಜೆಯಿರಿಸುವ ಸಮಯ
ವಯಸು ವರ್ಚಸ್ಸುಗಳ ಬದಿಗಿರಿಸುತಿಲ್ಲಿ
ಬಯಸಿ ಆವಾಸವನು ಪೂಜಿಸುವ ಕೈಂಕರ್ಯ
ಜಯಿಸಲೆಮ್ಮಯ ಗೆಯ್ಮೆ ಹರಸೆನ್ನುತಲ್ಲಿ

ಇಂದಿರನ ಮಳೆಯಲ್ಲಿ ಗೋವುಗಳು ನೆನೆವಾಗ
ಸುಂದರದ ಗೋವರ್ಧನವೆತ್ತಿ ಬೆರಳೊಳ್
ಚಂದಿರಾನನ ನಿಂತ ಗೋವಳರ ರಕ್ಷಣೆಗೆ
ಹಂದರದಿ ಗೋಕುಲದ ಜಯಘೋಷ ಮೊಳಗೆ

ಅನ್ನದಾತನ ಮಗಗೆ ಅಂದದುಡುಗೆಯ ಕೊಡುಗೆ !
ಚನ್ನೆಮಣೆ ಚಿನ್ನಿದಾಂಡಿನ ಜೊತೆಗೆ ಭೂರೆ !!
ಹೊನ್ನಕಳಸಗಳೆಲ್ಲ ಹೊಳೆಯುವವು ದೇವಳದಿ
ಚಿನ್ನದಾ ಹಣತೆಗಳು ಹೊಡೆದು ಮನ ಸೂರೆ

ಬೆಳಗಲಾದೀಪಗಳು ಕತ್ತಲೆಯನಳಿಸುತ್ತ
ತೊಳೆದು ಮನಕಾವರಿಸಿ ನಿಂತಂಧಕಾರ
ಕಳೆಕಳೆಯ ಬೆಳ್ಳಿ ಬೆಳಕಿನ ಹಬ್ಬ ಇಳೆಯೊಳಗೆ
ಕೊಳೆಯಳಿಸಿ ನೀಡಲಿಕೆ ತತ್ವದಾಧಾರ !

7 comments:

  1. thumba sundaravagie moodi bandide niima i kavana deepavaliya hardhika shubhashyagalu

    ReplyDelete
  2. ಭಟ್ಟರೆ,
    ನಿಮಗೂ ಸಹ ದೀಪಾವಳಿಯ ಶುಭಾಶಯಗಳು.

    ReplyDelete
  3. ದೀಪಾವಳಿಯ ಶುಭಾಶಯಗಳು..... ಚೆಂದದ ಸಾಲುಗಳು ಸರ್

    ReplyDelete
  4. ಭಟ್ ಸರ್;ಚಂದದ ಕವನ.ದೀಪಾವಳಿ ಹಬ್ಬದ ಶುಭಾಶಯಗಳು.ಬ್ಲಾಗಿಗೆ ಬನ್ನಿ.ಪುಷ್ಕಳ ಭೋಜನ ನಿಮಗಾಗಿ ಕಾದಿದೆ!ನಮಸ್ಕಾರ.

    ReplyDelete
  5. ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು.. :)

    ReplyDelete
  6. ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು, ಧನ್ಯವಾದಗಳು.

    ReplyDelete