ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 20, 2011

ಗಜಾನನಂ ಭೂ ತಗಣಾದಿ ಸೇವಿತಂ !!



ಗಜಾನನಂ ಭೂ ತಗಣಾದಿ ಸೇವಿತಂ !!

ಆರಂಭಕಾಲದಲ್ಲಿ ಶಾಸ್ತ್ರಕಾರರು ಗಣೇಶನನ್ನು ಸ್ತುತಿಸುತ್ತಾರೆ ಎನ್ನುವ ಎಷ್ಟೋ ಕೀರ್ತನೆ ದಾಸರುಗಳು ಅಲ್ಲಿಯೇ ಅಪಭ್ರಂಶವನ್ನು ಆರಂಭಿಸಿಬಿಡುತ್ತಾರೆ:

ಗಜಾನನಂ ಭೂ ತಗಣಾದಿ ಸೇವಿತಂ.....

ಹೌದೌದು ಸ್ವಾಮೀ ನೀವು ಧಾರವಾಡದ ಕಡೆಯವರಾದರೆ ತಿಗಣೆಗಳ ಅನುಭವ ಇನ್ನೊಂದು ಜನ್ಮಕ್ಕೆ ಸಾಕಾಗುವಷ್ಟು ಸಂಚಯವಾಗಿರುತ್ತದೆ! ತಿಗಣೆಗಳಿಗೆ ನಮ್ಮಲ್ಲಿ ತಗಣೆ ಎನ್ನುವುದೂ ಇದೆ. ಬಯಲುಸೀಮೆ ಕಡೆ ’ತಗಣಿ’ ಎನ್ನುವುದನ್ನೂ ಕೇಳಿದ ನೆನಪು. ತಗಣೆ+ಆದಿ = ತಗಣಾದಿ ಎಂದಾಗುತ್ತದಲ್ಲ, ಹೀಗೆ ಆ ಶ್ಲೋಕವನ್ನು ಅವರು ಉಚ್ಚರಿಸಿದಾಗೆಲ್ಲಾ ಮನಸ್ಸಿನಲ್ಲಿ ನೆನಪಾಗುವುದು ಈ ಚಿತ್ರ : ಧಾರವಾಡಕಡೆ ಎಲ್ಲೋ ಗಣಪತಿ ವಿಗ್ರಹ ಹಳೇ ಮಂಚದಮೇಲೆ ಪ್ರತಿಷ್ಠಾಪಿಸಿದ್ದಾರೆ, ಇರುವಷ್ಟು ದಿನ ತಗಣೆಗಳಿಂದಲೂ ಸೇವೆ ಪಡೆದ ಗಣಪತಿಯನ್ನು ನೆನೆದು ಸಂಸ್ಕೃತ ಶ್ಲೋಕರಚನೆಕಾರರು ಇದನ್ನು ಬರೆದಿರಬೇಕು ಎಂಬುದು !

ಶಾಸ್ತ್ರೀಯ ಸಂಗೀತದ ವೈಖರಿಯನ್ನು ಉಳಿಸಿಕೊಳ್ಳುವ ಭರದಲ್ಲಿ ಕೆಲವರು ಹಾಡುತ್ತಾರೆ :

ಬಲ್ಲಿದನು ಕಾಗಿನೆಲೆ ಆದಿ ಕೇ ಶವರಾಯ.......

ಇದು ಕರ್ನಾಟಕ ಸಂಗೀತದಲ್ಲಿ ಇನ್ನೂ ಪಳಗಿರದ ಬಹುತೇಕ ಮಂದಿ ಹಾಡುವ ಪರಿ. ಹಾಡುವಾಗ ಅಕ್ಷರಗಳ ವಿಂಗಡಣೆಮಾಡಲು ಹೋಗಿ ಎಲ್ಲಿ ಯಾವುದನ್ನು ವಿಭಜಿಸಬಾರದೋ ಅದನ್ನೇ ಒಡೆದು ಹಾಡುವುದು ಅವರಿಗೆ ಅರ್ಥವಾಗದೇ ಅಥವಾ ನಿರ್ಲಕ್ಷ್ಯದಿಂದ ನಡೆಯುವ ಕೆಲಸ ಎನ್ನಬಹುದೇ ?

ಇನ್ನು ನಾಟಕಗಳಲ್ಲಿ ಬರುವ ಒಕ್ಕಣಿಕೆಗಳು ಬಹಳ ಸೊಗಸು. ಉದಾಹರಣೆಗೆ

" ಹೇಲತಾ ಕೋಮಲಾಂಗಿ "

ಅಸಹ್ಯಪಟ್ಟು ಓಡಿಹೋಗಬೇಡಿ, ಇಲ್ಲಿ ಹೇಳಿದ್ದು " ಹೇ ಲತಾ ಕೋಮಲಾಂಗಿ " ಅಂತ, ಅರ್ಥವಾಯ್ತಲ್ಲ ? ಮೊದಲನೇದಕ್ಕೂ ಅರ್ಥವಿದೆ ಸ್ವಲ್ಪ ಬದಲು ಅಲ್ವೇ ?

ಹಿಂದೆ ನಿಮಗೊಮ್ಮೆ ಹೇಳಿದ್ದೆ. ಅಪಭ್ರಂಶ ಬರೇ ಅಕ್ಷರವಿಂಗಡಣೆಯ ದೋಷದಿಂದಷ್ಟೇ ಅಲ್ಲ, ಬದಲೀ ಅಕ್ಷರಗಳ ಪ್ರಯೋಗದಿಂದಲೂ ಆಗುತ್ತದೆ. ಬಹಳ ಹಿಂದೆ ಮಾಧ್ಯಮವಹಿನಿಯ ಸಂದರ್ಶಕಿಯಾಗಿದ್ದ ತೇಜಸ್ವಿನಿ ಎಂಬಾಕೆ ತನ್ನನ್ನು ನೋಡಲು ಬಂದವರಲ್ಲಿ ಕೇಳಿದಳಂತೆ :

ಹೇನ್‍ಬೇಕಾಗಿತ್ತು ?

ನನಗೆ ಬಂದ ಒಂದು ನಾಟಕದ ಆಮಂತ್ರಣದಲ್ಲಿ " ಸರ್ವರಿಗೂ ಹಾದರದ ಸ್ವಾಗತ " ಎಂದಿದ್ದುದನ್ನೇ ತಲೆಬರಹವನ್ನಾಗಿ ಹಿಂದೆಲ್ಲೋ ಬರೆದ ಜ್ಞಾಪಕ.

ಇನ್ನು ಕುಚೋದ್ಯದ ಕೆಲವು ಜನ ಹೀಗೂ ಹೇಳುತ್ತಾರೆ [ ರೈತನ ಬಾಳೇತೋಟ ಹೊಕ್ಕ ಮಂಗ ಬಾಳೆಕಾಯಿ ತಿಂದಾಗ ದೇವರಮೇಲೇ ಕೋಪಗೊಂಡ ರೈತ ಈ ರೀತಿ ಹೇಳಿದನಂತೆ] :

" ವಕ್ರತುಂಡ ಮಹಾಕಾಯ ಮಂಗತಿಂತೋ ಬಾಳೆಕಾಯ "

ಹೋಕ್ಕೊಳ್ಳಿಬಿಡಿ ನಮ್ಮ ರಾಜಕಾರಣಿಗಳಲ್ಲಿ ನೂರಕ್ಕೆ ೯೯ ಮಂದಿಗೆ ರಾಷ್ಟ್ರಗೀತೆ ಬರುವುದಿಲ್ಲ! ದೇಶೋದ್ಧಾರ ಜನೋದ್ಧಾರಕ್ಕೆ ಬಂದೆವೆಂದು ಬರುವ ಖಾದೀ ಖದೀಮರನ್ನು ಮಾತಾಡಿಸಿ ನೋಡಿ :

ಪಂಜಾಬ ಸಿಂಧು ಗುಜರಾತ ಮರಾಟ
ದ್ರಾವಿಡ ಉಚ್ಚಲ ಬಂಗ .....
ಹಿಂದೆ ಹಿಮಾಚಲ ಯಮುನಾ ಗಂಗಾ.....

ತವಸುಬ ನಾವೇ ಜಾಗೇ ತವಸುಬ ಆಸಿಸಮಾಗೇ
ಗಾಹೇ ತವಸುಬ ಗಾತಾ .......

ಇಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಅಕ್ಷರ ಶುದ್ಧತೆ, ಭಾಷಾಶುದ್ಧತೆ ಯಾವುದೂ ಲೆಕ್ಕಕ್ಕೇ ಇರುವುದಿಲ್ಲ.

ಮಾಧ್ಯಮಗಳಲ್ಲಿನ ಶಬ್ದಪ್ರಯೋಗಗಳ ಬಗ್ಗೆ ಜಾಸ್ತಿ ಹೇಳುವುದೇ ಬೇಡ. [ಹೇಳಿಕೊಳ್ಳಲು ನಾಚಿಕೆಯಾಗಿ ಕೈಬಿಡಲಾಗಿದೆ ಎಂದು ಅರ್ಥೈಸಿಕೊಳ್ಳಿ!]

ಪ್ರಾದೇಶಿಕವಾಗಿ ಕೆಲವರು ಬಳಸುವ ಶಬ್ದಗಳಂತೂ ಕೇಳಲಿಕ್ಕೆ ತುಂಬಾ ಮಜಕೊಡುತ್ತವೆ. ನಮ್ಮ ಪಕ್ಕದೂರಲ್ಲಿ ಒಬ್ಬಾತ ಕತ್ತರಿಗೆ " ಕತ್ತರ್ಗಿ " " ಕತ್ತರ್ಗಿ " ಅಂತಿದ್ದ. ಅಂವ ಎಲ್ಲಾದರೂ ಎದುರಾದ್ರೆ ಸಾಕು ಕತ್ತರ್ಗಿಯೇ ಎದುರು ಬರುತ್ತಿತ್ತು. ಇನ್ನು ಕೆಲವರು ತಾವೂ ಆಂಗ್ಲ ಭಾಷೆಯಲ್ಲಿ ಏನೂ ಕಮ್ಮಿಯಿಲ್ಲ ಎಂದು ತೋರಿಸಲಿಕ್ಕೆ ಪದಪ್ರಯೋಗಿಸುವ ಕಸರತ್ತು ಹೀಗಿದೆ :

" ಗ್ಯಾಸ್ ಹೌಸು " [ಲಾಲ್ ಬಾಗಿಗೆ ಅಪರೂಪಕ್ಕೆ ಬಂದು ಊರಿಗೆ ಮರಳಿದ ಒಬ್ಬ ಗ್ಲಾಸ್ ಹೌಸ್ ಎನ್ನುವ ಬದಲು ಬಳಸಿದ ಒಕ್ಕಣೆ]

" ಮ್ಯಾಟ್ನಿ ಕಾಲೇಜು " [ತನ್ನ ತಮ್ಮನ ಮಗ ಬಾಟ್ನಿ ಓದ್ತಾ ಇದಾನೆ ಎನ್ನಲು ಹೋದಾಗ ಆದ ಪ್ರಸವ-ಅದೇ ’ಕಲಾವಿದರಿ’ಂದ!]

" ಡಿಸ್ಟೆಂಪಲ್ಲು " [ಇದೂ ಅದೇ ವ್ಯಕ್ತಿಯ ಕೊಡುಗೆ]

ಒಬ್ಬಾಕೆಗೆ ಹೇಗಾದರೂ ಮಾಡಿ ಆಂಗ್ಲ ಭಾಷೆಯಲ್ಲಿ ಮಾತನಾಡಿ ತೋರಿಸುವ ಬಯಕೆ. ವಯಸ್ಸು ಅಜಮಾಸು ೪೮ರ ಆಜು ಬಾಜು, ಕೆಲಸದಲ್ಲಿರುವಾಕೆ, ಇಂಗ್ಲೀಷ್ ಮೇಜರ್ ಬಿಏ ಪದವೀಧರೆ. ಎದುರು ಬಂದ ಹಿಂದೀ ಮಹಿಳೆ ಕಷ್ಟಪತ್ತು ಕನ್ನಡದಲ್ಲೇ ಕೇಳಿದ್ದಾಳೆ " ನಿಮ್ಮ ಮಗಳು ಎಲ್ಲಿಗೆ ಹೋಯ್ತು ? "

" ಹೀ ಗೋ ಸಂ ವ್ಹೇರ್ ಯೂ ನೋ " ----ಇವಳ ಉತ್ತರ !

ರಾಜಸ್ಥಾನ್ ಕಡೆಯ ಪಾನ್ ವಾಲಾ ಒಬ್ಬ ನಮ್ಮ ಕಚೇರಿಗೆ ಹತ್ತಿರವಿದ್ದಾನೆ. ಒಮ್ಮೆ ಮಳೆಗಾಲದ ಆರಂಭದಲ್ಲಿ ಜೋರಾಗಿ ಮಳೆಬಂತು. ಸಂಜೆ ಮನೆಗೆ ಹೋಗುವ ಸಮಯ. ೯ ಗಂಟೆಯಾದ್ರೂ ಮಳೆ ಸ್ವಲ್ಪ ಹನೀತಾನೇ ಇತ್ತು.

" ಸಾರ್, ಮಳೆ ಐತೆ ಮಳೆ ಐತೆ ಬಾಡಿ ಎಲ್ಲಾ ಮೆತ್ಗಾಗ್ಬುಡುತ್ತೆ " ನಾನು ವಾಹನಕ್ಕೆ ಏರುವ ಮೊದಲು
ನನಗೆ ಹೇಳ್ತಾ ಇದ್ದ.

ಇನ್ನೊಮ್ಮೆ ಯಾವಾಗ್ಲೋ ಮನೆ ಸುದ್ದಿ ತೆಗೆದಾಗ ಹೇಳ್ತಾ ಇದ್ದ --
" ಪಕ್ಕದ್ಮನೆ ನಾಯಿ ಇದಾರಲ್ಲ ಅವರು ದಿನಾ ಬೆಳಿಗ್ಗೆ ವಾಕ್ ಹೋಗ್ತಾರೆ......ಮತ್ತೆ ಬರ್ತಾರೆ ಸುಮ್ನೇ ದುಖಾನ್ ಮುಂದೆ ರೆಸ್ಟ್ ಮಾಡ್ತಾರೆ "

ಶತಮಾನಗಳಕಾಲ ಇಲ್ಲೇ ಇದ್ದರೂ ಭಾಷೆಬಾರದ ಕೆಲವರಿದ್ದಾರೆ. ಒಮ್ಮೆ ತುಮಕೂರಿನಿಂದ ಖಾಸಗಿ ಬಸ್ಸಿನಲ್ಲಿ ಬರುತ್ತಿರುವಾಗ ಅದರಲ್ಲಿ ಏನೋ ಒಂಥರಾ ವಾಸನೆ ಬಂತು. ಕೊನೇ ಸೀಟಿನ ಕೆಳಭಾಗಕ್ಕೆ ಬಗ್ಗಿ ನೋಡಿದ್ರೆ ಎರಡು ಕುರಿಗಳು! ಹಣ ವಸೂಲಿಗೆ ಬಂದ ಬಸ್ಸಿನವನಲ್ಲಿ ಕುರಿ ಮಾಲೀಕ ಕೇಳಿದ :

" ಕುರಿಗೆ ಯಾಕೆ ಟಿಕೆಟ್ ಅವ್ರು ನಂದು ನಾಷ್ಟಾ ಅದೆ "

ಆತ ಕೋಡ್ಲೇ ಬೇಕು ಅಂದ. ಕುರಿ ಮಾಲೀಕ ಕೊಡೋದಿಲ್ಲ ಅಂದ, ಅವರ ಸಂಭಾಷಣೆ ಕೇಳಲು ಬಹಳ ಪಸಂದಾಗಿತ್ತು; ಬೆಂಗಳೂರಿಗೆ ಬಂದಿಳಿದದ್ದೇ ತಿಳೀಲಿಲ್ಲ.

ಅರೇ ನಮ್ದೂಕಿ ಗಾಡಿ ಹೋಯ್ತಾನೆ ಹವ್ರೆ, ಒಸಿ ನಿಲ್ಸಿ ಬಿರ್ಯಾನಿ ತಿಂದು ಓಗ್ಬಿಡೋಣ ಹಲ್ವೇ ?

ಅಂದಹಾಗೇ ಮಲಬಾರದ ಹೆಂಗಸೊಬ್ಬಳು ಪಕ್ಕದಮನೆ ಕನ್ನಡತಿಯೊಬ್ಬಳಿಗೆ ಯೋಳಿದ್ದು ಇಸ್ಟು :

" ನಿನ್ನೆ ದಡವಾಗಿ ಬಂತು, ರಾತ್ರಿ ಮಲಗುವಾಗ ಒಂದು ಗಂಡ ಬೆಳಿಗ್ಗೆ ಏಳುವಾಗ ಎಂಟುಗಂಡ " !

ಅರೆ ಇಸ್ಕಿ, ನಿಮ್ದೂಕಿ ಕನಡಾ ಬರಾಕಿಲ್ಲ ? ಯಾಕೆ ಸುಮ್ಕೇ ಮಾತಾಡ್ತದೆ ? ನಂದೂಕಿ ಮಿಸೆಸ್ಗ್ ಭೀ ಬರ್ತಾಇರ್ಲಿಲ್ಲ. ಬಾಳಾ ಕಶ್ಟಾಪಟ್ಟಿ ಹಲ್ಲಿ ಇಲ್ಲಿ ತಿರ್ಗಿಸ್ತಲ್ಲಾ ಹಾಗ ಕಲೀತು.

ಮಂಗಳಾಚರಣೆಗೆ ಯಾರನ್ನು ಹುಡುಕುವುದು ಎಂದುಕೊಂಡಿದ್ದೆ. ಅಷ್ಟರಲ್ಲೇ ಮತ್ತೆ ಕೀರ್ತನೆ ದಾಸರ ಹಾಡೊಂದು ನೆನಪಾಯ್ತು:

ಮಂಗಲವಾಗಾಲಿ ಸರ್ವರಿಗೆ ಸುಬ ಮಂಗಲವಾಗಲಿ ಹೆಲ್ಲರಿಗೆ
ಹಂಗನೆ ಲಕುಮಿಯು ಬಂಗವ ಕಳೆಯಲಿ ರಂಗವಿಟಲಂಗ್ರಿಗೆ ನಮಿಪೆ

4 comments:

  1. ಎಲ್ಲೆಲ್ಲ್ಲಿಂದ ಶ್ಲೇಷೆ(ಕ್ಲೇಷೆ !)ಗಳನ್ನು ತಂದಿಕ್ಕಿದ್ದೀರಿ ಸ್ವಾಮಿ :) . ಗಜಾನನನೂ ತಗಣಾದಿಗಳಿಂದ ಸೇವಿತನಾಗಿ ತಡೆಯಲು ಆಗದೆ ಭುವಿಗೆ ಬಂದು ಕೆರೆಗೋ ( ಬಕೆಟ್ಟಿನ ನೀರಲ್ಲೂ !) , ನದಿಗೋ, ಸಮದ್ರಕ್ಕೋ ಬೀಳುತ್ತಾನೆ ಅನಿಸುತ್ತೆ !

    ReplyDelete
  2. ಭಟ್ಟರೆ,
    ಇಂತಹ ಅದ್ಭುತ ಕನ್ನಡವನ್ನು ಮಾತನಾಡುವ ಎಲ್ಲರಿಗೂ ಸಾಷ್ಟಾಂಗ ನಮಸ್ಕಾರ! ಅಂದ ಹಾಗೆ ಬೇಂದ್ರೆಯವರು ಬರೆದ ಒಂದು ಅಣಕವಾಡು ಹೀಗಿದೆ:
    "ಒರದಾ, ತಗಣಿ ಒರದಾ!"

    ReplyDelete