ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, September 8, 2011

ಸಾರ್ಸಂಬಾಳೆ ಹೂವು ಸೀತಾರಾಂಭಟ್ಟರ ಪ್ರೀತಿಗೆ ಪಾತ್ರವಾದ ಕಥೆ !

[ಅಂತರ್ಜಾಲ ದಯೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗೆ, ಸಾರ್ಸಂಬಾಳೆ ಹೂವಿನ ಹೋಲಿಕೆ ಇರುವ ಹೂವು ]

ಸಾರ್ಸಂಬಾಳೆ ಹೂವು ಸೀತಾರಾಂಭಟ್ಟರ ಪ್ರೀತಿಗೆ ಪಾತ್ರವಾದ ಕಥೆ !

ಮೇಲಿನಗಂಟ್ಗೆಯ ಮೂಲೆಮನೆಯ ಹಿತ್ತಲ ಏರಿಯಲ್ಲಿ ಕೊರೆಜಾಗದಲ್ಲಿ ಕುಟುಕು ಜೀವ ಹಿಡಿದಿದ್ದ ಆ ಗಿಡ ಅಲ್ಲೇ ಚಿಗಿತು ಹೂವು ಬಿಡುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇಳಿಮಳೆಗಾಲ ಸರಿದು ಚಳಿಬೀಳುವ ಸಮಯಕ್ಕೆ ಬೆಳ್ಳಂಬೆಳಿಗ್ಗೆ ಚಿಕ್ಕ ಚಿಕ್ಕ ಹಳದಿ ಹೂವುಗಳಿಂದ ಮೈದುಂಬಿಕೊಂಡು ಮೈಮೇಲೆ ಬಿದ್ದ ಇಬ್ಬನಿಗಳ ಮುತ್ತಿನ ಮಣಿಗಳನ್ನು ಹೊತ್ತು ನಳನಳಿಸುವ ಚಿಕ್ಕ ಶರೀರದ ಗಿಡವದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೇ ಮಲೆನಾಡು-ಕರಾವಳಿಯ ಬಹುತೇಕರಿಗೆ ಸಾರ್ಸಂಬಾಳೆಯನ್ನು [ಪ್ರಾಂತೀಯ ಹೆಸರು ವಿಭಿನ್ನವಾಗಿರಬಹುದು] ಬಿಟ್ಟಿರಲಾಗಲೀ ಮರೆಯಲಾಗಲೀ ಆಗುವುದಿಲ್ಲ. ಪಕ್ಕದ ಮನೆಯ ಹುಡುಗಿ ಹೇಗೆ ಆಪ್ತವಾಗಿ ಕಾಣುತ್ತಾಳೋ ಅಷ್ಟೇ ಆಪ್ತವಾಗಿಬಿಡುವ ಸಹಜತೆಯುಳ್ಳ ಮುದ್ದು ಗಿಡ. ಅಲ್ಲಲ್ಲಿ ಚಿಕ್ಕ ಚಿಕ್ಕ ಚುಚ್ಚುವ ಮುಳ್ಳಿನಂತಹ ಗುಚ್ಛಗಳಲ್ಲಿ ಹಳದಿ ಹೂವುಗಳಿರುವುದು ಈ ಗಿಡದ ವಿಶೇಷ. ಹಾಗಂತ ಇದು ಪೂರ್ತಿ ಗೆಂಟ್ಗೆ ಹೂವಿನ ಜಾತಿಗೆ ಸೇರುವುದೂ ಇಲ್ಲ.

ಶ್ಯಾಮ ಭಟ್ಟರು ೧೮ರ ಹರೆಯದಲ್ಲಿದ್ದಾಗ ಅವರ ಮನೆಯ ಹಿತ್ತಿಲತುಂಬಾ ಆ ಗಿಡಗಳಿದ್ದವಂತೆ. ಆಮೇಲೆ ಅದೂ ಇದೂ ಕೆಲಸಮಾಡುತ್ತಾ ಹೋಗಲಿಬಿಡು ಎಲ್ಲಾ ಕಡೆ ಇರುತ್ತದೆ ಎಂದುಕೊಂಡ ಅವರು ಎಲ್ಲವನ್ನೂ ಕಿತ್ತೆಸೆದು ಕೇವಲ ಒಂದೇ ಬುಡವನ್ನು ಬಿಟ್ಟಿದ್ದರು. ಹೋಗೇಬಿಡ್ತು ಎನ್ನುವ ಹೊತ್ತಿಗೆ ಇನ್ನೂ ಇದ್ದೇನೆ ಅನಿಸೋ ಹಾಗೇ ಇನ್ನೂ ಜೀವದಿಂದಲೇ ಇದ್ದ ಗಿಡಕ್ಕೆ ಯಾರೂ ಗೊಬ್ಬರ ನೀರು ಹಾಕಿದವರಿಲ್ಲ. ಏರು ಜವ್ವನದ ಸೀತಾರಾಂಭಟ್ಟರಿಗೆ ಅದೆಲ್ಲದರ ಬಗ್ಗೆ ಆಸ್ಥೆಯಾಗಲೀ ಆಸಕ್ತಿಯಾಗಲೀ ಇರಲೇ ಇಲ್ಲ. ಯೌವ್ವನದಲ್ಲಿ ಕತ್ತೆಯೂ ಚೆನ್ನಾಗಿ ಕಾಣಿಸುತ್ತದೆ ಎಂಬಂತೇ ಎಳೆಯ ಭಟ್ಟರ ಕಳಿಯದ ಹೃದಯಕ್ಕೆ ಹೊಳೆವ ಕಣ್ಣಿನ ಹುಡುಗಿಯರು ಕನ್ನಹಾಕಿಬಿಡುತ್ತಿದ್ದರು! ಹಾಗಂತ ಅದು ಅವರ ತಪ್ಪೂ ಅಲ್ಲ ! ಭಟ್ಟರು ನೋಡಿದಾಗ ಅಲ್ಲೇಲ್ಲೋ ಹಾದಿಯಲ್ಲಿ ಅಲೆದಾಡುವ ಹುಡುಗಿಯರು ತಾವೂ ನೋಡಿದರು, ಏನಾಗುತ್ತಿದೆ ಎನ್ನುವ ಮೊದಲೇ ಕಣ್ಣುಗಳು ಒಂಥರಾ ಚಾಟಿಂಗ್ ಶುರುಮಾಡಿಬಿಡುತ್ತಿದ್ದವು!

ಅಪ್ಪಯ್ಯ ಮನೆಯಲ್ಲೇ ಇರುವಾಗ ಭಟ್ಟರು ಹೊರಗೆ ಹಾಗೆಲ್ಲಾ ಬಂದು ನಿಲ್ಲುತ್ತಿರಲಿಲ್ಲ. ಹಜಾರದಲ್ಲಿ ನಿಲ್ಲಲೂ ಹೆದರುವ ಸಂಪ್ರದಾಯಸ್ಥ ಮನೆತನ ! ೯ ಮೊಳದ ಕಂದುಪಟ್ಟೆ ಅಂಚಿನ ಬಿಳೇ ಧೋತಿ ಉಟ್ಟ ಅಪ್ಪಯ್ಯ ಶಾಲಿಬಟ್ಟೆಯ ಬನೀನು ತೊಟ್ಟು ಹೆಗಲಿಗೆ ಬಿಳೇ ಶಾಲನ್ನು ಹೊದ್ದು ಕೈಲಿ ಬೆಳ್ಳಿಕಟ್ಟಿನ ಬೆತ್ತದ ದೊಣ್ಣೆ ಹಿಡಿದು ಕೂತರೆ ಸರ್ದಾರ್ ಪಟೇಲರ ಥರಾ ಕಾಣ್ತಿದ್ರು. ಪೊದೆ ಮೀಸೆಯಲ್ಲಿ ಬಾಯಗಲಿಸಿ ಅದೂ ಇದೂ ಮಾತನಾಡುತ್ತಾ ಸಣ್ಣಗೆ ನಕ್ಕರೂ ಎಳೆಮಕ್ಕಳಲ್ಲಿ ಅದರಿಂದಲೇ ನಡುಕ ಹುಟ್ಟಿಸುವಂಥಾ ಘನಗಾಂಭೀರ್ಯ ಅವರದ್ದು.

" ಸೀತಾರಾಮ " ಎಂದು ಕರೆದರೆ ಸಾಕು ಹರೆಯದ ಭಟ್ಟರು ಹಸುಗೂಸಿನ ರೀತಿ ಹೆದರುತ್ತಲೇ ಓಡಿಬಂದು
" ಏನಪ್ಪಯ್ಯಾ ? " ಎಂದು ತಲೆಬಾಗಿ ನಿಲ್ಲುತ್ತಿದ್ದರು.

ಸಂಪ್ರದಾಯವನ್ನು ಬಿಡಲೂ ಮನಸ್ಸಿಲ್ಲದ ಆದ್ರೆ ಅಷ್ಟೇ ಸಹಜವಾಗಿ ಹೃದಯದ ಭಾವನೆಗಳನ್ನೂ ಅದುಮಿಡಲಾರದ ದ್ವಂದ್ವದಲ್ಲಿ ಸೀತಾರಾಮರು ತೊಳಲಾಡುತ್ತಿದ್ದರು. ಇದಕ್ಕೆಲ್ಲಾ ಕಾರಣವೂ ಇರದೇ ಇರಲಿಲ್ಲ. ಅಂಚಿಮನೆಯ ಸುಧಾ, ಮೇಗಣಮನೆಯ ರಾಧೆ, ಆರ್ಕೋಡ್ಲು ಸೀತಕ್ಕನ ಮಗಳು ಸೌಮ್ಯ ಈ ಮೂರರಲ್ಲಿ ’ ಯಾರು ಹಿತವರು ನಿನಗೆ ಈ ಮೂವರೊಳಗೆ ? ’ ಎಂಬ ಪ್ರಶ್ನೆ ಭಟ್ಟರ ಮನದಲ್ಲಿ ಕೊರೆಯುತ್ತಿದ್ದರೆ ಯಾರನ್ನೂ ಬಿಡಲೂ ಆಗುತ್ತಿರಲಿಲ್ಲ. ಹದವಾಗಿ ಬೆಳೆದ ಸುಧಾಳ ಕಪ್ಪು ನೀಳ ಜಡೆ ತನ್ನನ್ನು ಸೆಳೆದಿದ್ದರೆ ರಾಧೆಯ ಚಾಲಾಕಿತನದ ಚಿಗರೆ ಕಣ್ಣುಗಳು ಯಾವಗಲೂ ಕಣ್ಣಿಗೆ ಕಟ್ಟಿದ ಹಾಗಿದ್ದವು! ಗುಣದಲ್ಲಿ ಶ್ರೀಮಂತೆಯಾದ ಸೌಮ್ಯ ರೂಪದಲ್ಲೂ ಈ ಇಬ್ಬರಿಗೆ ಕಮ್ಮಿಯೇನೂ ಇರಲಿಲ್ಲ !

ಸೀತಾರಾಂಭಟ್ಟರು ಕಮ್ಮಿ ಎಂದುಕೊಳ್ಳಬೇಡಿ, ಥೇಟ್ ಶ್ರೀರಾಮಚಂದ್ರ. ಬಸ್ಸಿನಲ್ಲಿ ಒಮ್ಮೆ ಕುಮಟಾಕ್ಕೆ ಹೊರಟಾಗ ಗೇರುಸೊಪ್ಪೆ ಬಾಷಾ ಸಾಬರ ಮಗಳು ಸಬೀಹಬಾನು ಬುರ್ಖಾದೊಳಗಿಂದ ದಿಟ್ಟಿಸಿದ್ದೇ ದಿಟ್ಟಿಸಿದ್ದು ! ಆಕೆಗೆ ಭಟ್ಟರಂತಹ ಚೆಲುವ ಅದುವರೆಗೆ ಕಂಡಿರಲೇ ಇಲ್ಲವೇನೋ ಅನ್ನುವಹಾಗೇ ಎವೆಯಿಕ್ಕದೆ ನೋಡುತ್ತಿದ್ದಳು. ಅವಳಿನ್ನೂ ಹುಡುಗಿ ಭಾಷಾರ ಮಗಳು ಎಂಬುದು ಅವಳ ಪಕ್ಕ ಕುಳಿತ ವ್ಯಕ್ತಿ ಯಾರಿಗೋ ಪರಿಚಯಿಸುವಾಗ ತಿಳಿಯಿತು. ಸಹಜವಾಗಿ ಆಕೆ ಹೇಗಿದ್ದಾಳೆಂದು ಭಟ್ಟರಿಗೂ ಕುತೂಹಲ ಹುಟ್ಟಿತ್ತು. ಆದರೆ " ಬುರ್ಖಾ ತೆಗಿ ನಾನು ನೋಡಬೇಕು " ಎನ್ನಲಿಕ್ಕೆ ಸಾಧ್ಯವೇ ? ಹಾಗಂತ ಅವಳನ್ನೇ ಆಗಲೀ ಮತ್ಯಾರನ್ನೇ ಆಗಲಿ ಕಂಡ ತಕ್ಷಣ ಲವ್ವಿ ಡವ್ವಿ ಹಾಡುವ ಇರಾದೆ ಭಟ್ಟರದಲ್ಲ, ಆದರೂ ಎದೆಯಾಳದಲ್ಲಿ ಹುದುಗಿರುವ ಹೇಳಲಾಗದ ಭಾವಗಳಿಗೆ ಬಣ್ಣ ಹಚ್ಚಲು ಮನ ಬಯಸುತ್ತಿತ್ತು! ಹಾಗೊಮ್ಮೆ ನೋಡಿದರೆ ಅದು ಪ್ರೀತಿಯೋ ಪ್ರೇಮವೋ ಕಾಮವೋ ಒಂದೂ ಭಟ್ಟರಿಗರ್ಥವಿಲ್ಲ.

ಕ್ರಿಸ್ತಿಯನ್ ಕೇರಿಯ ಇನಾಸ ಆಗಾಗ ಹಳೆಯ ತೆಂಗಿನಕಾಯಿಗಳನ್ನು ನೆಲಕ್ಕೆ ಉಕ್ಕಿನ ಸೂಲಿಗೆ ಹೂತು ಸಿಪ್ಪೆ ಸುಲಿದುಕೊಡಲು ಬರುತ್ತಿದ್ದ. ಸುಲಿದ ಕಾಯಿಗಳನ್ನು ರಾಶಿಹಾಕಿ ವ್ಯಾಪಾರಿಗಳಿಗೆ ಹೇಳಿಕಳಿಸಿ ಮಾರುವುದು ಅಪ್ಪಯ್ಯನ ವ್ಯವಹಾರ. ಒಬ್ಬಿಬ್ಬರು ವ್ಯಾಪಾರಿಗಳು ಬಂದುನೋಡಿ ಅವರಲ್ಲಿ ಯಾರು ಜಾಸ್ತಿ ಹಣಕ್ಕೆ ಖರೀದಿಸಲು ಒಪ್ಪುತ್ತಾರೋ ಅವರಿಗೆ ಮಾರುವುದು ವಾಡಿಕೆಯಾಗಿತ್ತು. ಒಮ್ಮೆ ಕಾಯಿ ಸುಲಿಯದೇ ಬಹಳದಿನ ಕಳೆದಿತ್ತು. ಕಾಯಿಗಳು ಹಾಳಾಗಿ ಹೋಗುವ ಪ್ರಮೇಯ ಇರುವುದರಿಂದ ಇನಾಸನಿಗೆ ಬರಹೇಳುವಂತೇ ಅಪ್ಪಯ್ಯ ಸೀತಾರಾಂಭಟ್ಟರನ್ನು ಕಳಿಸಿದ್ದರು. ಇನಾಸನ ಮನೆಗೆ ಹೋದಾಗ ಆತ ಊರಲ್ಲಿ ಇಲ್ಲಾ ಎನ್ನುತ್ತಾ ಬಂದಾಕೆ ಇನಾಸನ ಮಗಳು ಮೇರಿ ; ಏನು ಚಂದ ಅಂತೀರಿ -ಚಂದ್ರನನ್ನೂ ನಾಚಿಸುವ ದುಂಡು ಮುಖ, ಗೋಧಿ ಬಣ್ಣ, ಕಾಮನ ಬಿಲ್ಲಿನ ಹುಬ್ಬು, ಹೊಳೆವ ತುಟಿ. ಭಟ್ಟರು ಎಲ್ಲಿ ಯಾವುದನ್ನು ನೋಡಿ ಸೋತರು ಎಂಬುದು ಅವರಿಗೂ ಅರಿವಿಲ್ಲ; ಅಷ್ಟೇ ಚೆನ್ನಾಗಿ ಬಂದು ಅಪ್ಪಿಕೊಳ್ಳುತ್ತೇನೆ ಎಂಬ ರೀತಿ ನೋಡುತ್ತಿದ್ದ ಮೇರಿಗೂ ತಿಳಿದಿರಲಿಲ್ಲ!

ಭಟ್ಟರು ಮನೆಯಲ್ಲಿ ಕುಳಿತಾಗ ಲೆಕ್ಕಾಹಾಕೀ ಹಾಕೀ ಸೋತು ಬಿಟ್ಟರು. ಸುಂದರ ಹುಡುಗಿಯರ ಯಾವುದಕ್ಕೆ ತಾನು ಸೋತೆ ಎನ್ನುವುದು ಸ್ಪಷ್ಟವಾಗದ ವಿಷಯವಾಗಿತ್ತು. ಒಮ್ಮೆ ಸುಧಾ ಇಷ್ಟವಾದರೆ ಇನ್ನೊಮ್ಮೆ ರಾಧೆ ಮನವನ್ನು ಕದ್ದೊಯ್ಯುತ್ತಾಳೆ, ಮಗುದೊಮ್ಮೆ ಸೌಮ್ಯ ಮತ್ತೊಮ್ಮೆ ಮೇರಿ !! ಯಾರಲ್ಲೂ ಹೇಳಿಕೊಳ್ಳಲೂ ಆಗದ ತನ್ನೊಳಗೇ ಬಚ್ಚಿಟ್ಟುಕೊಳ್ಳಲೂ ಆಗದ ಆ ಭಾವಗಳಿಗೆ ಏನೆಂದು ಕರೆಯೋಣ? ಕೆಲವೊಮ್ಮೆ ಹೀಗೂ ಯೋಚಿಸಿದರು : ರಾಜರ ಹಾಗೇ ಎಲ್ಲರನ್ನೂ ಮದುವೆಯಾಗುವುದು. ಮರುಕ್ಷಣ ಪಾಪ ಪ್ರಜ್ಞೆ ಭಟ್ಟರನ್ನು ಕಾಡಿ ಛೆ ಛೆ ಹಾಗೆಲ್ಲಾ ಮಾಡಲು ಸಾಧ್ಯವೇ ? ಪ್ರೀತಿಯನ್ನೂ ಶರೀರವನ್ನೂ ಒಬ್ಬಳಿಗೇ ಕೊಡಬೇಕಲ್ಲವೇ ? ಎಂದುಕೊಳ್ಳುತ್ತಾರೆ. ಆದರೂ ಒಬ್ಬರನ್ನೂ ಕಳೆದುಕೊಳ್ಳಲು ಮನಸ್ಸು ಸಿದ್ಧವಾಗುವುದೇ ಇಲ್ಲ.

ಹೆಗಡೆ ಮಾಸ್ತರು ವರ್ಗವಾಗಿ ಹೊಸಾಕುಳಿ ಶಾಲೆಗೆ ಬಂದವರು ಮೇಲಿನಗಂಟ್ಗೇಲೇ ಅಂಚಿಮನೆ ಪಕ್ಕದಮನೇಲಿ ಬಾಡಿಗೆಮನೆ ಮಾಡಿಕೊಂಡರು. ಹೀಗೇ ಅಡ್ಡಾಡ್ತಾ ಅಡ್ಡಾಡ್ತಾ ಇರೋ ಭಟ್ಟರು ಒಂದಿನ ಮಾಸ್ತರ ಮನೆ ಎದುರಿನಿಂದ ಹಾದು ಹೋಗ್ತಾ ಇರೋವಾಗ ಇಂಪಾದ ಗಾನವನ್ನು ಕೇಳಿ ಕ್ಷಣ ನಿಂತುಬಿಟ್ಟರು. ಅಬ್ಬಬ್ಬಾ ಎಂಥಾ ಕಂಠ, ಏನು ಸುಖ !! ಹಾಡುಕೇಳುತ್ತಾ ನಿಂತಿದ್ದ ಅವರಿಗೆ ಎಚ್ಚರವಾಗಿದ್ದು " ಅಮ್ಮಾ ನಾನು ಕಾಲೇಜಿಗೆ ಹೋಗಿ ಬತ್ತೆ " ಎಂಬ ದನಿ ಕೇಳಿ. ನೋಡುತ್ತಾರೆ ಸುರಲೋಕ ಸುಂದರಿ; ರಂಭೆ, ಮೇನಕೆ, ತಿಲೋತ್ತಮೆ ಎಲ್ಲರನ್ನೂ ಸೇರಿಸಿ ಎರಕಹೊಯ್ದ ಬೊಂಬೆ ಹೊರಟು ನಿಂತಿದ್ದಾಳೆ. ಕೈಲಿ ಒಂದೆರಡು ಪುಸ್ತಕಗಳು, ಬಣ್ಣದ ಛತ್ರಿ, ಚೂಡೀ ದಾರದಲ್ಲಿದ್ದ ಆಕೆಯ ತಲೆಯಲ್ಲಿ ಸಾರ್ಸಂಬಾಳೆ ಹೂವಿನ ಚಿಕ್ಕ ಮಾಲೆ!!

ಯಸ್, ಭಟ್ಟರು ನಿರ್ಧಾರಕ್ಕೆ ಬಂದುಬಿಟ್ಟರು! ಇದೇ ತನ್ನ ಹೂವು ! ತಿಳಿಸುವುದು ಹೇಗೆ? ಗೋತ್ರ,ಜಾತಕ-ಪಾತಕ ಇವನ್ನೆಲ್ಲಾ ನೋಡಬೇಡವೇ? ಮಾಸ್ತರು ತನಗೆ ಜಾತಕ ಕೊಟ್ಟಾರೆ ? ಯಾವುದನ್ನೂ ಯೋಚಿಸಲು ಸಮಯವಾಗಲೀ ಅದಕ್ಕೆಲ್ಲಾ ಮನಸ್ಸಾಗಲೀ ಇರಲಿಲ್ಲ. ಮುಂದೆ ನಡೆದವಳ ಹಿಂದೆ ನಡೆದು ಕೇಳಿದರು

" ಹಲೋ "

ಮುಖ ತಿರುಗಿಸಿ ನೋಡಿದಳು ಮಂದಗಮನೆ.

" ನಾನು ಶ್ಯಾಮ ಭಟ್ಟರ ಮಗ ಸೀತಾರಾಮ ಅಂತ, ನೀವು ತುಂಬಾ ಚೆನ್ನಾಗಿ ಹಾಡ್ತೀರಿ "

" ಇಲ್ಲಪ್ಪಾ ಏನೋ ಸುಮ್ನೇ ಹಾಡ್ದೆ ಅಷ್ಟೇ "

" ನೀವು ಹೆಗಡೆ ಮಾಸ್ತರ ಮಗಳಲ್ವೇ ? "

" ಹೌದು "

" ನಿಮ್ಮ ಹೆಸರು ಕೇಳ್ಬೋದೇ ? "

" ಸೌದಾಮಿನಿ "

ಇಬ್ಬರೂ ಕೆಲಹೊತ್ತು ಪರಸ್ಪರ ನೋಡುತ್ತಿದ್ದರೇ ಹೊರತು ಮಾತಿರಲಿಲ್ಲ. ಪಕ್ಕದಲ್ಲಿ ಯಾರೋ ಸರಿದುಹೋದಾಗ ಎಚ್ಚೆತ್ತು ಮುಂದೆ ಸಾಗಿದರು. ಮತ್ತೆ ಮಾತಿಲ್ಲ ಕತೆಯಿಲ್ಲ.

ಕಾಲೇಜು ಬರುವವರೆಗೂ ತನಗರಿವಿಲ್ಲದೇ ಹಿಂದೆ ಕೋಲೇ ಬಸವನ ರೀತಿ ಅಲೆದ ಸೀತಾರಾಂಭಟ್ಟರು ಸೌದಾಮಿನಿ ಕಾಲೇಜಿನೊಳಗೆ ಹೆಜ್ಜೆ ಹಾಕಿದಾಗ ಈ ಲೋಕಕ್ಕೆ ಮರಳಿ ಬಂದರು ! ಕೈಗಡಿಯಾರ ನೋಡಿಕೊಂಡು ನಿತ್ಯವೂ ಆ ಸಮಯಕ್ಕೆ ಕಾಲೇಜಿನ ವರೆಗೂ ಬರುವ ಸಾಹಸಕ್ಕೆ ಇಳಿದುಬಿಟ್ಟರು !

ಭಟ್ಟರ ಹಿತ್ತಿಲಲ್ಲಿರುವ ಸಾರ್ಸಂಬಾಳೆ ಕುಲದ ಏಕಮಾತ್ರ ಗಿಡ ನೀರು-ಗೊಬ್ಬರ ಕಾಣಹತ್ತಿತ್ತು. ಅಪ್ಪಯ್ಯ ಅದೆಲ್ಲಾ ಯಾಕೆ ಎಂದರೂ ಯಾಕೋ ತನಗಿಷ್ಟ ಎಂದ ಮಗನ ಧೋರಣೆಗೆ ವಿರುದ್ಧವಾಡಲಿಲ್ಲ. ಗಿರಿಮನೆ ನಾಗಪ್ಪ ಶೆಟ್ಟರು ಪೇಟೆಗೆ ಸಾಮಾನು ತರಲು ಹೋದವರು ಹಾದಿಯಲ್ಲಿ ನಿಂತು ಮಾತಾಡುತ್ತಿದ್ದ ಹೆಗಡೆ ಮಾಸ್ತರ ಮಗಳು ಮತ್ತು ಸೀತಾರಾಮನನ್ನು ಕಂಡುಬಿಟ್ಟರು. ಹಲ್ಲು ಕೀಳಿಸಲು ಹೊನ್ನಾವರಕ್ಕೆ ಬಂದ ಭಾಗೀರಥಕ್ಕ ಬಗ್ಗಿ ಬಗ್ಗಿ ನೋಡಿಯೂ ನೋಡದಂತೇ ನೋಡಿಕೊಂಡು ಬಂದಿದ್ದು ಮಾರನೇ ಮಧ್ಯಾಹ್ನದಿಂದ ಹಕ್ಕೆಚಡಿಯಲ್ಲಿ [ಹೊರಜಗುಲಿ ಹರಟೆಕಟ್ಟೆ] ಪುರಾಣ ಆರಂಭವಾಗಿಬಿಟ್ಟಿತು!

" ಆಯ್ಯಯ್ಯೋ ಕಾಲ್ಮಾನ ಕೆಟ್ಟೋಯ್ದು ಗಂಗಕ್ಕಾ.....ಆ ಮಾಸ್ತರ ಮಗ್ಳು ಮತ್ತೆ ಮೂಲೆಮನೆ ಶ್ಯಾಮನ ಮಾಣಿ ಪ್ಯಾಟೆಲಿ ನಿಂತ್ಗಂಡು ಮಾತಾಡಿದ್ದೇ ಮಾತಾಡಿದ್ದು ....ನೋಡ್ತ್ನಾ ಇರು ಇನ್ನೊಂದ್ ತಿಂಗ್ಳ ಕಳೀಲಿ ....ಇಬ್ರೂ ನಾಪತ್ತೆ ಆಯ್ದ್ವಿಲ್ಲೆ ಅಂದ್ರೆ ನನ್ ಹೆಸರ್ ತಗಿ. ಸಮಾ ಆತು ಆ ಶ್ಯಾಮಂಗೇನ್ ಕಮ್ಮಿ ಸೊಕ್ಕನೇ .....ಅಲ್ದಾ ? ಅಲ್ಲಾ ವಿಷ್ಯ ನಿನ್ ಕೈಲೇ ಇರ್ಲಿ ನಾ ಹೇಳಿದ್ದೇಳಿ ಹೇಳಡ ಮತೆ ......"

ಇಂಥಾ ಸುದ್ದಿಗೆ ಪತ್ರಿಕೆಯ ಯಾ ಮಾಧ್ಯಮದ ಅವಶ್ಯಕತೆ ಇರೋದಿಲ್ಲ. ಕಾಲಿಲ್ಲದ ಹಾವು ನುಣುಪು ಮೈಯ್ಯಿಂದ ಜಾರಿ ಓಡುವಂತೇ ಹಲ್ಲಿಲ್ಲದ ನಾಲಿಗೆಯಿಂದ ಕಿವಿಗೆ ಮತ್ತೆ ಕಿವಿಯಿಂದ ನಾಲಿಗೆಗೆ ಆವು ಹರೆದಾಡುತ್ತವೆ ! ಕೆಲವೊಮ್ಮೆ ಮಾಧ್ಯಮಗಳು ತಲುಪಲಾರದ ಜಾಗವನ್ನೂ ತಲ್ಪಿಬಿಡುತ್ತವೆ !

ಬೆಂಕಿಯನ್ನು ಬಹಳಕಾಲ ಮುಚ್ಚಿಡಲೂ ಬಚ್ಚಿಡಲೂ ಸಾಧ್ಯವಾಗುವುದಿಲ್ಲ ಹೇರ್‍ಗೋ ಹಾಗೇ ಇಂಥಾ ವಿಷಯಗಳೂ ಕೂಡ. ವಿಷಯವೇ ಇರದಿದ್ದರೂ ಸೃಷ್ಟಿಸುವ ’ವಿರಂಚಿ’ಗಳು ಸಮಾಜದಲ್ಲಿರುತ್ತಾರೆ ಅಂದಮೇಲೆ ಇದ್ದ ವಿಷಯಕ್ಕೆ ಮತ್ತಷ್ಟು ಸೇರಿಸಿ ಕಥೆ ಹೊಸೆಯಲು ಅವರಿಂದ ಆಗುವುದಿಲ್ಲ ಎನ್ನಲು ಆದೀತೇ ? ಹಾಗೆ ನೋಡಿದರೆ ಲೋಕದ ಅಷ್ಟೂ ಮಾನವ ಮುಖಗಳ ಹಿಂದೆ ಅಷ್ಟೇ ಕಥೆಗಳು ಅಡಗಿವೆ! ಆದರೆ ಕೆಲವೊಮ್ಮೆ ಕೆಲವು ಇಷ್ಟವಾಗುತ್ತವೆ ; ಇನ್ನು ಕೆಲವು ಸಹಿಸಲು ಕಷ್ಟವೆನಿಸುತ್ತವೆ! ಇಂತಹ ಕಷ್ಟವೆನಿಸುವ ಸರದಿ ಶ್ಯಾಮ ಭಟ್ಟರಿಗೆ ಬಂದಿದ್ದು ಇದೇ ಮೊದಲು. ಯಾರಿಗೂ ತಲೆಬಾಗಿದ ಜನವಲ್ಲ ಅದು! ಅಜಾನುಬಾಹು ಶರೀರದಂತೇ ವ್ಯಕ್ತಿತ್ವವನ್ನೂ ಆ ಮಟ್ಟಕ್ಕೆ ಬೆಳೆಸಿನಿಂತ ಜನ ಅವರು. ಹಾಗಂತೇಳಿ ಅನುಕಂಪ, ದಯೆ, ದಾನ-ಧರ್ಮ, ಕಟ್ಲ-ಕಂದಾಚಾರ ಇವೆಕ್ಕಲ್ಲಾ ಕೊರತೆಮಾಡಿದವರಲ್ಲ. ಆದರೂ ಸಮಾಜದಲ್ಲಿ ’ ದೇಹಿ ’ ಎಂದು ಸಹಾಯ ಕೇಳುವ ದಿನ ಅವರ ಪಾಲಿಗೆ ಬಂದಿರಲಿಲ್ಲ. ನಾಕು ಜನರ ಮಧ್ಯೆ ಎದ್ದುಕಾಣುವ ಮನುಷ್ಯನಾಗಿ ಕಾಲಹಾಕಿದ್ದರು. ಮಗ ಹೀಗೆ ಮಾಡಬಹುದೆಂಬ ಅನಿಸಿಕೆ ಇರಲಿಲ್ಲ.

ಇಲ್ಕೇಳಿ ನಿಮ್ಗೊಂದ್ ಸಣ್ ವಿಷಯ ಹೇಳಲೇಬೇಕು. ಶ್ಯಾಮ ಭಟ್ಟರು ಸಾರ್ಸಂಬಾಳೆ ಗಿಡಗಳನ್ನು ಯಾಕೆ ಕಿತ್ತುಹಾಕಿಸಿದ್ದರು ಬಲ್ಲಿರೋ ? ಇಲ್ಲತಾನೇ ? ಹಾಗಾದ್ರೆ ಕೇಳಿ-- ಶ್ಯಾಮಭಟ್ಟರಿಗೆ ಅವರ ಹರೆಯದಲ್ಲಿ ಒಬ್ಬಳು ಇಷ್ಟವಾಗಿದ್ದಳು. ಅತೀವ ಅಂಧಶ್ರದ್ಧೆ ಮತ್ತು ಕುರುಡು ಸಂಪ್ರದಾಯಗಳೇ ಮೆರೆದಿದ್ದ ಆ ಕಾಲದಲ್ಲಿ ಅತ್ಯಂತ ರೂಪಸಿಯಾಗಿ ಶ್ಯಾಮ ಭಟ್ಟರ ಮನಗೆದ್ದಿದ್ದ ಆ ಹುಡುಗಿಯನ್ನು ಮನೆಯವರನ್ನೆಲ್ಲಾ ವಿರೋಧಿಸಿ ಕಟ್ಟಿಕೊಳ್ಳುವುದು ಸಾಧ್ಯವಿರಲಿಲ್ಲ. ಸಾರ್ಸಂಬಾಳೆ ಹೂವಿನ ದಂಡೆಯನ್ನು ಚಳಿಗಾಲದ ಆದಿಯಲ್ಲಿ ಸದಾ ಮುಡಿದಿರುತ್ತಿದ್ದ ಆಕೆಯನ್ನು ಹೇಗಾದರೂ ಮದುವೆ ಆಗುವ ಮನಸ್ಸಿನಿಂದಿದ್ದ ಶ್ಯಾಮ ಭಟ್ಟರಿಗೆ ಅಂದು ನಿರಾಸೆಯೇ ಕಾದಿತ್ತು. ಹೇಗಾದರೂ ಮಾಡಿ ಹೇಳುವುದಕ್ಕೂ ಕೇಳುವುದಕ್ಕೂ ಮುನ್ನ ತುಮುಲಗಳೇ ಅಮರಿಕೊಂಡಿದ್ದ ಆ ದಿನಗಳಲ್ಲಿ ಒಂದಿನ ಆ ಹುಡುಗಿಯ ಮದುವೆ ನಿಶ್ಚಿತಾರ್ಥ ಬೇರೇ ಗಂಡಿನೊಟ್ಟಿಗೆ ನಡೆದಿದ್ದು ತಿಳಿದುಬಂದಿತ್ತು. ಶ್ಯಾಮ ಭಟ್ಟರಿಗೆ ಊಟ ಬೇಡಾ ...ನಿದ್ದೆ ಬೇಡಾ. ಹಿಂದಿನ ಕಾಲದಲ್ಲಿ ಗಂಡಸತ್ತಾಗ ಅಳುತ್ತಾ ಕೊರುವ ಹೆಂಡತಿಯಂತಾಗಿಬಿಟ್ಟಿದ್ದರು ಶ್ಯಾಮಭಟ್ಟರು. ಅಂತೂ ಗಟ್ಟಿ ಮನಸ್ಸು ಮಾಡಿಕೊಂಡು ಎಲ್ಲಾದರೂ ಇರಲಿ ಸುಖವಾಗಿರಲಿ ಎಂದು ಮನದಲ್ಲೇ ಬೀಳ್ಕೊಟ್ಟರು. ಅಂದಿನಿಂದ ಸಾರ್ಸಂಬಾಳೆ ಹೂವನ್ನು ಕಂಡಾಗೆಲ್ಲಾ ಅವರಿಗೆ ಆ ನೆನಪು ಕಾಡುತ್ತಿತ್ತು ! ಅದಕ್ಕಾಗಿಯೇ ಸಾತ್ವಿಕ ಮನದಲ್ಲೂ ಆ ಗಿಡಗಳೇ ಬೇಡ ಎಂಬ ಕಠೋರ ನಿರ್ಧಾರವನ್ನು ಕೈಗೊಂಡು ಕೀಳಿಸಿಹಾಕಿಬಿಟ್ಟಿದ್ದರು. ಆದರೂ ಒಂದನ್ನು ಕೀಳದೇ ಹಾಗೇ ಬಿಟ್ಟಿದ್ದು ಅವರ ಕಮರಿದ ಪ್ರೀತಿಗೆ ದ್ಯೋತಕವಾಗಿಯೋ ಎಂಬಂತಿತ್ತು.

ತನಗಾದಂತೇ ಮಗನಿಗೂ ನೋವಾಗುವುದು ಶ್ಯಾಮ ಭಟ್ಟರಿಗೆ ಇಷ್ಟವಿರಲಿಲ್ಲ. ವಿಷಯ ತಿಳಿದ ಅವರು ಹೊರಗೆ ಮಗನಿಗೆ ಅದನ್ನು ತೋರಗೊಡಲೂ ಇಲ್ಲ. ಸುಮ್ನೇ ಎದ್ದು ಶಾಲು ಹೆಗಲಿಗೇರಿಸಿಕೊಂಡು ಬೆಳ್ಳಿಕಟ್ಟಿನ ಬೆತ್ತದ ದೊಣ್ಣೆ ಹಿಡಿದು ಹೆಗಡೆ ಮಾಸ್ತರ ಹೊಸಿಲು ತುಳಿದರು. ವಾರದಲ್ಲೇ ಎರಡೂ ಮನೆಗಳಲ್ಲಿ ಮಾವಿನ ತೋರಣಗಳು ಕಂಡವು. ನೋಡನೋಡುತ್ತಿದ್ದಂತೇ ಮಾಸ್ತರ ಮಗಳನ್ನು ಪಾಲಕರು-ಹೆಣ್ಣಿನ ಕಡೆಯವರೊಟ್ಟಿಗೆ ಶ್ಯಾಮ ಭಟ್ಟರು ತಮ್ಮನೆಗೇ ಕರೆಸಿಕೊಂಡರು. ಹಾಕಿದ್ದ ದೊಡ್ಡ ಚಪ್ಪರದಲ್ಲಿ ತಯಾರಿಸಿದ್ದ ಸುಂದರ ಮಂಟಪದಲ್ಲಿ ವಿಧಿವತ್ತಾಗಿ ಸೀತಾರಾಂಭಟ್ಟರು ಮತ್ತು ಸೌದಾಮಿನಿ-ಯರ ಮದುವೆ ಆ ಊರಿಗೇ ಅತ್ಯಂತ ವಿಜೃಂಭಣೆ ಎನ್ನುವ ರೀತಿಯಲ್ಲಿ ನಡೆದುಹೋಯಿತು. ಹಾಡುಹಕ್ಕಿಯೊಂದು ಸುಂದರ ಮಾಮರದ ಆಶ್ರಯ ಪಡೆಯಿತು. ಪ್ರಸ್ತದ ರಾತ್ರಿಯಲ್ಲಿ ಸೀತಾರಾಂಭಟ್ಟರು ತಾವೇ ಪ್ರೀತಿಯಿಂದ ಬೆಳೆತೆಗೆದ ಸಾರ್ಸಂಬಾಳೆ ಹೂವಿನ ಮಾಲೆಯನ್ನು ಮನದನ್ನೆಗೆ ಮುಡಿಸಿದರು.

5 comments:

  1. ಭಟ್ರೇ ಸೂಪರ್ರು .. ನಾವೂ ಸೀತಾರಾಮನಂತೆ ಅಲೆಯುತ್ತಿದ್ದೇವೆ.. ಸಾರ್ಸಂಬಾಳೆ ಸಿಗದಿದ್ದರೂ ನಮಗೆ ಬೇಜಾರಿಲ್ಲ.

    ಎಷ್ಟೋ ಶಬ್ಧಗಳು ತುಂಬ ಆಪ್ಯಾಯಮಾನವಾಗಿದೆ. ಏನು ಬರೀಬೇಕೆಂದು ತಿಳೀತಿಲ್ಲ. ರಮ್ಯವಾಗಿತ್ತು .

    http://ishwaratatva.blogspot.com/

    ReplyDelete
  2. ಭಟ್ಭಾಗ, ಆ ಸಾರ್ಸಂಬಾಳೆ ಹೂಗಿಂದು ಫೋಟೊ ಸಿಕ್ಕಿದ್ದಿಲ್ಯಾ ?

    ReplyDelete
  3. ಸಾರ್ಸಂಬಳೆ ಹೂವಿಗೆ ಜಯವಾಗಲಿ!

    ReplyDelete
  4. ಗುರುಗಳೇ,
    ಸೀತಾರಾಂ ಭಟ್ಟರಂತೆ ನಮ್ಮೆಲ್ಲರ ಜೀವನದಲ್ಲೂ ಬಾಲದಲ್ಲಿ ಪ್ರೆಮಕತೆಗಳು ಜರುಗಿ ಹೋಗಿವೆ!
    ಕೆಲವೊಂದು ಉದ್ಧಾರವಾದರೆ ಕೆಲವು ತೋಪಾಗಿವೆ.
    ಕತೆ ಇಷ್ಟವಾಯ್ತು. ರಾಷ್ಟ್ರ ಕವಿ ಕುವೆಂಪು ಅವರ ಬರಹದ ನೆನಪಾಯ್ತು.

    ReplyDelete
  5. ಶ್ರೀಕಾಂತರೇ, ಇಲ್ಲೆ ಸಾರ್ಸಂಬಾಳೆ ಹೂಗಿನ ಚಿತ್ರ ಇಲ್ದೇ ಇದ್ದಿದ್ದಕ್ಕೆ ಅದರ ಪರ್ಯಾಯ ಇದು,

    ಪ್ರವೀಣ್, ಜೀರ್ಣಿಸಿಕೊಳ್ಳಲಾಗದ ಹೋಲಿಕೆ ಮಾಡಿದಿರಿ,

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.

    ReplyDelete