ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 6, 2011

ಹಾಲು ಕುಡಿದು ಹೊರಟ ಗಣಪನ ಕಾಲು ಬೆರಳು ಹುಡುಕುತ್ತಿದ್ದ ಆ ದಿನ!


ಹಾಲು ಕುಡಿದು ಹೊರಟ ಗಣಪನ ಕಾಲು ಬೆರಳು ಹುಡುಕುತ್ತಿದ್ದ ಆ ದಿನ !

ಬಾಲ್ಯದ ದಿನಗಳು ಎಲ್ಲರಿಗೂ ಅಚ್ಚುಮೆಚ್ಚು ಎಂಬುದು ನನ್ನ ಕಲ್ಪನೆ. ಅದು ಸಿಹಿಯೋ ಕಹಿಯೋ ಒಟ್ಟಾರೆ ಬದುಕನ್ನು ರೂಪಿಸುವಲ್ಲಿ ಆ ಹಂತ ಹಲವು ಪರಿಣಾಮಗಳನ್ನು ಬೀರಿರುತ್ತದೆ. ಅಂತಹ ನೆನಪುಗಳ ಮಧ್ಯೆ ಮಹಾಚೌತಿ ಎನಿಸಿದ ಗಣೇಶ ಹಬ್ಬದ ನೆನಪೂ ಒಂದು. ಶ್ರಾವಣದ ವೇಳೆ ರುದ್ರಪಠಣ ಶ್ರೀಸೂಕ್ತ ಪುರುಷಸೂಕ್ತಾದಿ ಅಭಿಷೇಕ ಪೂಜೆಗಳೇ ಜಾಸ್ತಿ ನಡೆಯುತ್ತದೆಯಷ್ಟೇ, ನಾಗರ ಪಂಚಮಿ ಮತ್ತು ಕೃಷ್ಣ ಜನ್ಮಾಷ್ಟಮಿ ಮಧ್ಯೆ ಬಂದು ಹೋಗುವ ಹಬ್ಬಗಳಾದವು. ಶ್ರಾವಣದಲ್ಲಿ ನಮ್ಮಲ್ಲಿ ಹೂವುಗಳು ಕಮ್ಮಿ. ಹೂವು ಬೇಕೆಂದರೆ ಪರಸ್ಥಳಗಳಿಂದ ತರಿಸಿಕೊಳ್ಳಬೇಕು. ನಮ್ಮಲ್ಲಿನ ಕುಂಭದ್ರೋಣ ಮಳೆಗೆ ತುಳಸಿ ಮತ್ತು ಬಿಲ್ವಪತ್ರೆಗಳು ಚೆನ್ನಾಗಿ ಚಿಗುರುತ್ತಿದ್ದವೇ ಹೊರತು ಹೂ ಗಿಡಗಳು ನೀರು ಕುಡಿದು ಗೊಬ್ಬರ ತಿಂದು ಹೊಟ್ಟೆಯುಬ್ಬರಿಸಿ ಹೂವರಳಿಸದೇ ನಿಂತುಬಿಡುತ್ತಿದ್ದವು! ನಿತ್ಯ ಪುಷ್ಪ, ದಾಸವಾಳ, ರಂಜಬಟ್ಲು ಯಾನೇ ನಂಜಟ್ಲೆ ಇಂತಹ ಹೂವುಗಳನ್ನು ಬಿಟ್ಟರೆ ಅಲ್ಲಲ್ಲಿ ಡೇರೆಯ ಮೊಗ್ಗುಗಳು ಕಾಣಿಸುತ್ತಿದ್ದವು.

ಯಾವಾಗ ಶ್ರಾವಣ ಮುಗಿಯಿತು ಎಂಬುದು ಗಿಡಗಳಿಗೆ ಹೇಗೆ ಗೊತ್ತು ಎನ್ನುವ ಕುತೂಹಲ ಕೆರಳುವಂತೇ ಭಾದ್ರಪದಾದಿಯಲ್ಲೇ ಅಷ್ಟೂ ಗಿಡಗಳು ನಿಧಾನಕ್ಕೆ ಮೊಗ್ಗುಬಿಟ್ಟು ಇನ್ನೇನು ಗಣೇಶ ಬಂದ ಎನ್ನುವ ಹೊತ್ತಿಗೆ ಬಣ್ಣಬಣ್ಣದ ಹೂವುಗಳನ್ನು ಅರಳಿಸಿಕೊಂಡು ನಾ ಮುಂದು ತಾ ಮುಂದು ಎಂದು ಗಾಳಿಗೆ ತೊನೆದಾಡುತ್ತಾ ನೋಡುಗರನ್ನು ಸೆಳೆಯುತ್ತಿದ್ದವು. ನಮ್ಮಲ್ಲಿ ಗಣಪತಿಗೆ ಬಹಳ ಮಹತ್ವ; ಬಹುತೇಕ ಇದು ತಿಲಕರ ಕಾಲಕ್ಕೆ ಅವರ ಶಕೆಯಿಂದ ಆಗಿರುವ ಮಾರ್ಪಾಡೂ ಆಗಿದ್ದಿರಬಹುದು, ಮೇಲಾಗಿ ಭೂಕೈಲಾಸದ ಸೃಷ್ಟಿಗೆ ಕಾರಣನಾದ ಗೋಕರ್ಣದ ಗಣಪ ಮತ್ತು ವಾಲಖಿಲ್ಯ ಮುನಿಗೆ ಒಲಿದು ಬಂದ ಇಡಗುಂಜಿಯ ವಿನಾಯಕ ಇಬ್ಬರೂ ಇರುವುದರಿಂದಲೂ ಇರಬಹುದು ಗಣಪತಿ ಮೇಲೆ ತೂಕ ಪ್ರೀತಿ ಜಾಸ್ತಿ. ನನ್ನಂಥವರಿಗೆ ಆತ ಬೇಕೇ ಬೇಕು ಯಾಕೆಂದರೆ ಆತನ ನೈವೇದ್ಯವೆಲ್ಲಾ ನಮಗೂ ನೈವೇದ್ಯವೇ !

ಹಸಿರುಟ್ಟ ಭೂಮಿಯ ನಡುವೆ ಬಣ್ಣದ ಗಣಪ ಕುಳಿತರೆ ಹೇಗಿರಬಹುದು ? ನೋಡಲು ಅದು ಕಣ್ಣಿಗೆ ಹಬ್ಬವಾಗಿರುತ್ತದಷ್ಟೇ ? ಎಲ್ಲಾ ವಿಧದ ಹಿತ್ಲಕಾಯಿ [ತರಕಾರಿ]ಗಳು, ಹಣ್ಣು-ಹಂಪಲುಗಳು, ಗಂಗಮ್ಮನ ಕಾಳು, ಕೋಡನ ಗೆಜ್ಜೆ, ಮಡಾಗಲಕಾಯಿ, ಮಾದಲಕಾಯಿ, ಗಜನಿಂಬೆ, ಕೆಸವಿನ ಸೊಪ್ಪು, ಬಾಳೇಕಾಯಿ, ಬೇರು ಹಲಸು, ನೀರುಹಲಸು, ದಾಸ್‍ಕಬ್ಬು, ಜಾಯಿಕಾಯಿ, ಅಡಕೆ, ವೀಳ್ಯದೆಲೆ, ಶಿಂಗಾರ, ತೆಂಗಿನಕಾಯಿ, ಎಳನೀರು........ಹೆಸರು ಬರೆದು ಮುಗಿಯುವುದಿಲ್ಲ - ಗಣಪ ಅಷ್ಟು ಶ್ರೀಮಂತ!! ಆತನ ಬರುವಿಕೆಗೆ ಥರಥರದ ತಯಾರಿ. ಅಂಗೋಡಂಗ ಫಲಗಳ ಫಲಾವಳಿ ! ಮಕ್ಕಳೆಲ್ಲಾ ಸೇರಿ ಒತ್ತಟ್ಟಿಗೆ --

ಬಾರೋ ಬಾರೋ ಗಣಪ
ನಮ್ಮನೀಗೆ ಬಾರೋ ಗಣಪ
ನಮ್ಮನೀಗೆ ಬಾರೋ ಗಣಪ ....

ತಾಯಿ ಗೌರಮ್ಮನ ಕರಕೊಂಡು ಸರಸರ.......

..... ಎನ್ನುವಾಗ ಮುದ್ದು ಬಾಲಕ ಗಣಪ ಅಮ್ಮ ಗೌರಮ್ಮನ ಕೈಹಿಡಿದು ನಮ್ಮಗಳ ಮನೆಗೆಲ್ಲಾ ಬರುತ್ತಿರುವ ಕನಸು ಎಲ್ಲರ ಕಂಗಳಲ್ಲೂ ನುಸುಳುತ್ತಿತ್ತು. ಜಗತ್ತಿನಲ್ಲಿ ಬಹುಸಂಖ್ಯಾಕರು ಪ್ರೀತಿಸುವ ಏಕಮಾತ್ರ ದೈವ ಗಣೇಶ ಎಂದರೆ ತಪ್ಪಾಗಲಾರದೇನೋ. ಅಂತಹ ಗಣಪತಿ ಅಮ್ಮನ ಪುಟ್ಟ ಕಂದನಾಗಿ ಭಾದ್ರಪದ ಶುಕ್ಲ ಚೌತಿಯ ದಿನ ನಮ್ಮೆಲ್ಲರ ಪ್ರೀತಿಯ ಕೊಡುಕೊಳ್ಳುವಿಕೆಗಾಗಿ ಬರುತ್ತಾನಲ್ಲಾ ಹಾಗಾಗಿ ಭಾರೀ ತಯಾರಿ, ಭೂರೀ ತಯಾರಿ !

ಬೆನಕ ಬರುವ ಮುನ್ನಾದಿನ ಹಲವು ಮನೆಗಳಲ್ಲಿ ಆತನ ಕೂರುವಿಕೆಗಾಗಿ ಮಂಟಪವನ್ನು ಸಿದ್ಧಪಡಿಸುತ್ತಾರೆ. ಮರದಲ್ಲಿ ಮಾಡಿದ ಪೀಠಕ್ಕೆ ಚಿನ್ನದ ಬಣ್ಣದ ಕಾಗದ ಅಂಟಿಸಿ ಅದು ಬಂಗಾರದ್ದೇನೋ ಅನ್ನೋ ಹಾಗೇ ಮಾಡುತ್ತಾರೆ. ಬಾಳೇಕಂಬ, ಕಬ್ಬು, ಮಾವಿನ ತುಂಕೆಗಳನ್ನು ಕಟ್ಟುವುದು ಒಂದು ರೀತಿಯಲ್ಲಾದರೆ ಇನ್ನೂ ಕೆಲವರದು ಬಾಳೇ ಹೆಂಬೆಯಿಂದ ಮಾಡುವ ದಂಡಾವಳಿ ಮಂಟಪ. ಮತ್ತೆ ಕೆಲವರ ಮನೆಗಳಲ್ಲಿ ಅಡಕೆ ದಬ್ಬೆ, ಗಾತ್ರದ ಬಿದಿರು ಬೊಂಬು ಇವನ್ನೆಲ್ಲಾ ಬಳಸಿ ಐಮೂಲೆ ತೆಗೆದು ನಾಲ್ಕು ಕಂಬ ನೆಟ್ಟು, ಕಂಬಗಳಿಗೆ ಬಣ್ಣದ ಬೇಡಗೆ ಹಚ್ಚಿ ಬಣ್ಣದ ಕಾಗದದ ಹೂಮಾಲೆಗಳನ್ನು ಇಳಿಬಿಟ್ಟು, ಮಿರಿಮಿರಿಗುಡುವ ವರ್ತಿತಗಡು ಇತ್ಯಾದಿ ಅಲಂಕಾರ ಪರಿಕರಗಳಿಂದ ಸಕತ್ತಾಗಿ ಮಾಡುವ ಮಂಟಪ. ಮಂಟಪ ತಯಾರಿಕೆಯಲ್ಲೇ ಪೈಪೋಟಿ, ಅದರಲ್ಲೇ ತಂದು ಚೆನ್ನಾಗಿದೆ ತಂದು ಚೆನ್ನಾಗಿದೆ ಎನ್ನುವ ಹೇಳಿಕೊಳ್ಳುವಿಕೆ. ನಾವು ಚಿಕ್ಕ ಮಕ್ಕಳಿಗೆ ಮಾತ್ರ ಅವುಗಳನ್ನೆಲ್ಲಾ ಮುಟ್ಟಲು ಹಕ್ಕಿರಲಿಲ್ಲ! ಏನಿದ್ರೂ ಆ ಮನೆಗೆ ಈ ಮನೆಗೆ ಓಡಾಡುತ್ತ ಯಾರ್ಯಾರದು ಎಲ್ಲೆಲ್ಲೀವರೆಗೆ ಬಂತು ಎಂಬುದನ್ನು ಪರಸ್ಪರರಿಗೆ ತಿಳಿಸುವ ಕೆಲಸವಷ್ಟೇ ನಮ್ಮದು.

ಚೌತೀ ದಿವಸ ಉಂಡು ಹೊರಟ ಬೆನಕರಾಯ ಬಿದ್ದಿದ್ದ ಎಂಬ ಕಥೆ ಕೇಳಿದ್ದು ಬಿಟ್ಟರೆ ನಮ್ಮೂರಿಗೆ ಬರುವ ಆತ ಕಮ್ಮೀ ಕಮ್ಮೀ ಅಂದ್ರೆ ಎರಡು ದಿನ ಇದ್ದು ಹೋಗುತ್ತಿದ್ದ. ಕೆಲವರ ಮನೆಗಳಲ್ಲಿ ಐದು ಇನ್ನೂ ಕೆಲವರಲ್ಲಿ ೭ ಇನ್ನೂ ಕೆಲವರಲ್ಲಿ ೯ ಹೀಗೆಲ್ಲಾ ಉಳಿದುಕೊಳ್ಳುತ್ತಿದ್ದನಪ್ಪ! ಆದ್ರೆ ನಮ್ಮಗಳ ಕೆಲವು ಮನೇಲಿ ಎರಡೇ ದಿನ ಇರ್ತಿದ್ದ ಲಂಬೋದರ ಬರುವಾಗಿಂದ ಹೋಗುವವರೆಗೂ ಮಕ್ಕಳಾದಿಯಾಗಿ ಮುದುಕರವರೆಗೆ ಎಲ್ಲರಿಗೂ ಒಂಥರಾ ಖುಷಿ. ನಮಗೆಲ್ಲಾ ೬-೭ ವಯಸ್ಸಿದಾಗ ನಮ್ಮ ಕೇರಿಯ ಅಮ್ಮಣ್ಣ, ರಾಮ, ಗಪ್ಪತಿ, ಶ್ರೀಧರ, ಶ್ರೀಪಾದ, ಶಣಮಾಣಿ, ಯಂಟ್ರೊಣ[ ವೆಂಕಟರಮಣ], ಸುಬ್ಬು, ಕೃಷ್ಣ, ಸತ್ನಾರಣ [ಸತ್ಯನಾರಾಯಣ] ಹೀಗೇ ಇಂಥವರಿಗೆಲ್ಲಾ ಸರಾಸರಿ ೧೪-೧೫ ವರ್ಷ. ನಮ್ಮ ಕೇರಿಯ ಹೊರಗೆ ಒಂದು ಹರಿಯುವ ಹಳ್ಳವಿದೆ. ಅದರಲ್ಲಿ ಆಗ ಮಳೆಗಾಲ-ಬೇಸಿಗೆ ನೀರಿರುತ್ತಿತ್ತು. ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಕಟ್ಟು ಕಟ್ಟಿದರೆ ಅಲ್ಲಿ ಒಂದು ಚಿಕ್ಕ ಜಲಾನಯನ ಪ್ರದೇಶ ಸಿದ್ಧವಾಗುತ್ತಿತ್ತು. ಮಹಾಚೌತಿಯ ದಿನ ಪೂಜೆ, ಹಲವು ವಿಧದ ಆರತಿಗಳಲ್ಲಿ ಮಗ್ನರಾಗಿತ್ತಿದ್ದ ಇವರೆಲ್ಲಾ ಚೌತಿಯ ಮರುದಿನ ಋಷಿಪಂಚಮಿ ಯಾನೇ ಇಲಿಪಂಚಮಿಯ ದಿನ ಹಳ್ಳಕ್ಕೆ ಕಟ್ಟು ಹಾಕಲು ತೆರಳುತ್ತಿದ್ದರು.

ಕಟ್ಟಿಗೆ ಬೇಕಾಗುವ ಸಾಮಗ್ರಿಗಳು ಅಲ್ಲಲ್ಲೇ ಸಿಗುತ್ತಿದ್ದವು. ನಮ್ಮಲ್ಲಿ ಅಡಕೆ ತೋಟಗಳಿರುವುದರಿಂದ ಹಗರದಬ್ಬೆ, ಅಡಕೆಮರದ ಮೋಟು, ಬಾಳೆಮರ, ಅಡಕೆ ಸೋಗೆ, ಅಡಕೆ ಹಾಳೆ, ತೆಂಗಿನಗರಿ ಹೀಗೇ ಕಟ್ಟುಹಾಕಲು ಬೇಕಾದ ಎಲ್ಲವನ್ನೂ ಮೇಲೆ ಹೇಳಿದ ಜನ ಸುತ್ತಲಿನ ತೋಟಗಳಲ್ಲಿ ಗುರುತಿಸುತ್ತಿದ್ದರು. ಹೇಳುವುದು ಕೇಳುವುದು ಏನಿಲ್ಲ, ಅವರು ತೋರಿಸಿದ್ದನ್ನು ಎಳೆದು ತರುವುದು ನಮ್ಮಲ್ಲಿ ಕೆಲವರ ಕರ್ತವ್ಯವಾಗಿತ್ತು, ಯಾಕೆಂದರೆ ಹಾಕಿದ ಕಟ್ಟಿನ ಜಲಾಶಯದಲ್ಲಿ ಈಜು ಕಲಿಯಲು ಅಪ್ಪಣೆ ಸಿಗಬೇಕಲ್ಲಾ? ರಾಮ ಅದೂ ಇದೂ ಅಂತ ಕೂಗುತ್ತಿದ್ದರೆ, ತಂದ ಅಡಕೆಮರದ ಮೋಟನ್ನು ಹಳ್ಳದ ಆಚೀಚೆಯಲ್ಲಿರುವ ಪಾಗಾರಕಟ್ಟೆಗೆ ಸಿಕ್ಕಿಸಿ ಗಟ್ಟಿ ನಿಲ್ಲುವಂತೇ ಮಾಡುತ್ತಿದ್ದವ ಶ್ರೀಪಾದ. ಗಪ್ಪತಿ ಹಗರದಬ್ಬೆಗಳನ್ನು ಹೂತು ಮೇಲ್ಭಾಗವನ್ನು ಆ ಅಡಕೆ ಎಳೆಗೆ ಕಟ್ಟುತ್ತಿದ್ದ. ಮಿಕ್ಕುಳಿದವರು ಅಡಕೆ ಸೋಗೆ ತೆಂಗಿನಗರಿ, ಅಡಕೆ ಹಾಳೆ ಇವುಗಳನ್ನೆಲ್ಲಾ ಆ ದಬ್ಬೆಗಳಿಗೆ ಆನಿಸಿ ಬಳ್ಳಿ ಕಟ್ಟುತ್ತಿದ್ದರು. ನಾವೆಲ್ಲಾ ರಾಮಸೇತುವಿಗೆ ಕಪಿ ಸೈನ್ಯ ಕೆಲಸಮಾಡಿದಂತೇ ಕಷ್ಟಪಟ್ಟು ಸಾಮಗ್ರಿಗಳನ್ನು ಎಳೆದೆಳೆದು ತಂದು ಹಾಕುತ್ತಿದ್ದೆವು. ಕಟ್ಟು ಸಂಪೂರ್ಣ ತಯಾರಾಗಿ ನಿಂತು ಅದರಲ್ಲಿ ನೀರುತುಂಬುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ಹೊಡೀತಿತ್ತು.

" ಹೋಯ್ ಮಂಗನಾರತಿಗಾತಡ ಬರ್ರೋ " ಎಂದು ಹವ್ಯಕಪದಗಳಲ್ಲಿ ಇನ್ನೂ ಸರಿಯಾಗಿ ಮಾತುಕಲಿಯುತ್ತಿರುವ ಪುಟಾಣಿಯೊಂದು ಕೂಗುತ್ತಾ ಬಂದಾಗ ಎಲ್ಲರಿಗೂ ಘೊಳ್ಳೆನ್ನುವ ನಗು; ಸ್ವಲ್ಪ ಹೆದರಿಕೆ ಕೂಡ! ಯಾಕೆಂದರೆ ಕಟ್ಟುಕಟ್ಟಲು ಹಿರಿಯರ ಪರ್ಮಿಶನ್ ಇರುತ್ತಿರಲಿಲ್ಲ. ಹಾಗಂತ ಗಣಪತಿ ವಿಗ್ರಹಗಳನ್ನು ಅಂದು ಸಂಜೆ ವಿಸರ್ಜಿಸಲು ಬರುವುದು ಕಟ್ಟಿನಲ್ಲೇ! ಆದರೂ ಎಲ್ಲಿ ಮಕ್ಕಳು ಅಪಾಯ ಎದುರಿಸಿಯಾರು ಎಂಬ ಭಯಕ್ಕೆ ಅವರು ಹಾಗಿರುತ್ತಿದ್ದರು. ಎಲ್ಲರೂ ಗಡಬಡಿಸಿ ನೀರಲ್ಲಿ ಅಷ್ಟಿಷ್ಟು ಮುಳುಗೆದ್ದು

" ಹೇ ಈ ಸಲ ಕಟ್ಟು ಬಾಳ ಮಸ್ತಾಯ್ದು " ಎಂದುಕೊಳ್ಳುತ್ತಾ ಮನೆಕಡೆ ತೆರಳಿದರೆ ಅಲ್ಲಿ ವೈದಿಕರು ಮನೆಯವರು ಸೇರಿ ಮಂಗಲಾರತಿ ಮುಗಿಸಿ ನಮಗೆಲ್ಲಾ ’ಮಂಗಲಾರತಿ’ ಮಾಡಲು ಕಾಯುತ್ತಿರುತ್ತಿದ್ದರು. ಒಂದಷ್ಟು ಬೈಸಿಕೊಂಡು ತೀರ್ಥ-ಪ್ರಸಾದ ಪಡೆದು ಊಟ ಮುಗಿಸಿಬಿಟ್ಟರೆ ನಂತರ ನಾವು ಕೇರಿಯ-ಊರ ಹಲವಾರು ಮನೆಗಳಿಗೆ ಗಣಪತಿ ನೋಡಲು ಹೋಗುತ್ತಿದ್ದೆವು. ಜಾರಿಕೆಯ ಅಂಗಳದಲ್ಲಿ ಅಲ್ಲಲ್ಲಿ ಅಡಕೆ ದಬ್ಬೆಗಳನ್ನು ಕವುಚಿ ಸಂಕ [ಅದರಮೇಲೆ ನಡೆಯುವಂತೇ] ಹಾಕುತ್ತಿದ್ದರು. ಸತತ ಸುರಿಯುತ್ತಿದ್ದ ಶ್ರಾವಣದ ಮಳೆಯಿಂದ ಹಾವಸೆಗಟ್ಟಿದ್ದ ಸಂಕದ ಮೇಲೆ ನಡೆಯಹೋಗಿ ಹಗಲಲ್ಲೇ ನಕ್ಷತ್ರ ಎಣಿಸಿಹೊರಟ ಭೂಪಂದಿರೂ ಇದ್ದರು. ಅಂಗಳದ ಗಜನಿ ಮಣ್ಣಿನಲ್ಲಿ ಜಾರಿ ಚಡ್ಡಿಗೆ ರಾಡಿಬಡಿದುಕೊಂಡು ಆಚೆಮನೆ ಅಕ್ಕನಕೈಲಿ ಹಿತ್ಲಕಡೆಗೆ ನೀರ ತರಿಸ್ಕೊಂಡು ಅಲ್ಲೇ ಸಲ್ಪ ಒದ್ದೆಮಾಡಿ ಕೆಸರು ತೊಳಕೊಂಡು ಮುಂದಕ್ಕೆ ನಡೆಯುವ ಹುಡುಗರೂ ಇದ್ದರು.

ಮೊದಲೇ ಹೇಳಿದೆನಲ್ಲಾ ಒಬ್ಬಬ್ಬರ ಮನೆಯಲ್ಲೂ ಗಣಪತಿಯದ್ದು ವಿಭಿನ್ನ ಸ್ಟೈಲು ! ಕೆಲವು ಮನೆ ಗಣಪ ಬೆಳ್ಳಗಿದ್ದರೆ ಇನ್ನು ಕೆಲವು ಮನೆಗಳಲ್ಲಿ ಗುಲಾಬಿ ಬಣ್ಣ, ನಮ್ಮನೆಗಳಲ್ಲಿ ಕೆಂಪುಬಣ್ಣ! [ರಕ್ತವರ್ಣ] ಕೆಲವರ ಮನೆಯಲ್ಲಿ ಗೋವ ಕಾಯುವ ಗೊಲ್ಲನಂತೇ ನಿಂತರೆ ಇನ್ನು ಕೆಲವೆಡೆ ಶೇಷಶಾಯಿ, ಮತ್ತೆ ಕೆಲವೆಡೆ ಅಂಬೆಗಾಲಿನ ಬಾಲಗಣಪ, ನಮ್ಮಲ್ಲೆಲ್ಲಾ ಕುಕ್ಕರಗಾಲಿನಲ್ಲಿ ಕುಳಿತ ಸಾಂಪ್ರದಾಯಿಕ ಪಾಶಾಂಕುಶಧಾರಿ ! ಹೋದಲ್ಲೆಲ್ಲಾ ಯಾರು ವಿಗ್ರಹ ತಯಾರಿಸಿದ್ದು, ಅದು ಚೆನ್ನಾಗಿದೆ, ಗಣಪನ ಕಣ್ಣು ಚೆನ್ನಾಗಿದೆ, ಕೈಲಿರುವ ಕೊಳಲು ಚೆನ್ನಾಗಿದೆ, ಮೈಬಣ್ಣ ಚೆನ್ನಾಗಿದೆ, ಕಿರೀಟ ಚಲೋ ಇದೆ, ಹೊಟ್ಟೆ ಭಾಗ ಬಾಳ ಸಕತ್ತಾಗಿದೆ ಹೀಗೇ ತಲೆಗೊಂದು ಹೇಳಿಕೆಗಳು. ಜೊತೆಗೆ ಹಳ್ಳದ ಕಟ್ಟಿನ ಸುದ್ದಿ. ಈಗ ಎರಡಾಳು[ಹನ್ನೆರಡು ಅಡಿ] ಎತ್ತರಕ್ಕೆ ನೀರು ತುಂಬಿರುತ್ತದೆ ಎಂಬ ಹೇಳಿಕೆ.

ಅಸಲಿಗೆ ಕಟ್ಟಿನ ಎತ್ತರ ಇರುವುದೇ ೫ ಅಡಿ. ಹಳ್ಳದ ಮಧ್ಯೆ ಕೆಲವುಕಡೆ ಮಳೆಯಿಂದ ತುಂಬಿ ಹರಿದ ರಭಸಕ್ಕೆ ಅಲ್ಲಲ್ಲಿ ಸಲ್ಪ ಆಳದ ಗುಂಡಿಗಳಿರುತ್ತಿದ್ದವು. ಕಟ್ಟಿನ ಒಳಗೂ ಕೆಲವೆಡೆ ಹಾಗೆ ಆಳದ ಗುಂಡಿಗಳು ಇರುತ್ತಿದ್ದುದ್ದು ಸ್ವಾಭಾವಿಕ. ಆಳದ ಗುಂಡಿಯ ತಳದಿಂದ ಅಬ್ಬಬ್ಬಾ ಅಂದ್ರೆ ೭-೮ ಅಡಿ ಎತ್ತರಕ್ಕೆ ನೀರಿನ ಮಟ್ಟ ಇರುತ್ತಿತ್ತು. ಆದ್ರೂ ನಮ್ಮಂಥಾ ಚಿಕ್ಕವರಿಗೆಲ್ಲ ಅದು ಸಮುದ್ರ ! ಸಂಜೆಯಾಗುತ್ತಿದ್ದರೆ ಅಲ್ಲಿಗೆ ಹೋಗಲೂ ಹೆದರಿಕೆ. ಕಟ್ಟನ್ನು ಮೀರಿ ಹರಿಯುವ ನೀರು ಯಾವುದೋ ಫಾಲ್ಸ್ ಥರ ಕಾಣಿಸುತ್ತಿತ್ತು. ಆದರೂ ಯಾರೂ ಕಟ್ಟಿನ ಮಹಿಮೆಯನ್ನು ಬಿಟ್ಟುಕೊಟ್ಟವರಲ್ಲ!

ಕೇರಿಯಲ್ಲಿ ೧೦ ಮನೆಗಳು; ಹತ್ತು ಗಣಪತಿ ವಿಗ್ರಹಗಳು. ಇಲಿಪಂಚಮಿಯ ದಿನ ಸಾಯಂಕಾಲ ೭ರ ನಂತರ ಪೂಜೆ ಆರಂಭ. ಒಬ್ಬೊಬ್ಬರ ಮನೆಯ ಹಾಗೆ ಪೂಜೆ. ಒಂದುಕಡೆ ಪೂಜೆ ಮುಗಿಸಿ ಜನ ಮತ್ತೊಂದು ಮನೆಗೆ ಬರುತ್ತಿದ್ದರು. ಎಲ್ಲರ ಮನೆಗಳ ಪೂಜೆಗಳೂ ಮುಗಿದ ತರುವಾಯ ಗಣೇಶ ವಿಸರ್ಜನೆ. ಜಾಗಟೆ, ಶಂಖ, ತಾಳ, ಡೋಲು ಇತ್ಯಾದಿ ವಾದ್ಯಗಳು. ಹೆಂಗಳೆಯರ ಇಂಪಾದ ಹಾಡುಗಳು.

" ಏಳಯ್ಯಾ ವಿಘ್ನೇಶ ಹೋಗಿಬಾ ..
ಏಳೂ ಏಳೆಲೆ ಗೌರಿಯ ತನಯ ಶ್ರೀಶಂಕರನಾ ಪ್ರೇಮದ ಕುವರನೇ ....... "

" ನಾದಬ್ರಹ್ಮ ಪರಾತ್ಪರ ಕರುಣ....
ಸಾರಸಗುಣ ಪರಿಶೋಭಿತ ಚರಣ....."

ಹೀಗೇ ನಾನಾವಿಧ ಸಂಗೀತಗಳನ್ನು ಆಲೈಸುತ್ತಾ ಹೊರಟುನಿಂತ ಗಣಪನನ್ನು ಬೀಳ್ಕೊಡುವುದು ನಮಗೆಲ್ಲಾ ಯಾರೋ ಮನೆಮಂದಿಯನ್ನು ಎಲ್ಲಿಗೋ ಕಾಣದ ದೂರದೇಶಕ್ಕೆ ಕಳಿಸಿದ ಹಾಗೇ ಭಾಸವಾಗುತ್ತಿತ್ತು; ಬೇಸರವಾಗುತ್ತಿತ್ತು. ಮಂಗಳ ನಿರಾಜನವನ್ನೂ ಮಂತ್ರಪುಷ್ಪವನ್ನೂ ಅರ್ಪಿಸಿದ ಹಿರಿಯರು ಶ್ರದ್ಧಾ-ಭಕ್ತಿ ಪೂರ್ವಕ ಗಣೇಶನಲ್ಲಿ ಪ್ರಾರ್ಥನೆ ಸಲ್ಲಿಸಿ ವಾರ್ಷಿಕವಾಗಿ ತಾವು ನಡೆಸಿಬಂದ ಪೂಜಾಕೈಂಕರ್ಯದಿಂದ ಸಂಪ್ರೀತನಾಗಿ, ಸಂತುಷ್ಟನಾಗಿ ಆಗಿರಬಹುದಾದ ಯಾವುದೇ ದೋಷಗಳಿದ್ದರೂ ಕ್ಷಮಿಸಿ ಹರಸುವಂತೇ ಸಾಷ್ಟಾಂಗವೆರಗುತ್ತಿದ್ದರು. ಗೋತ್ರಪ್ರವರಗಳನ್ನು ಉದ್ದರಿಸಿ ಪ್ರಸಾದ ಬೇಡಿ ತೆಗೆದ ನಂತರ ಮನೆಮಂದಿಗೂ ನೆರೆದ ಎಲ್ಲರಿಗೂ ಪ್ರಸಾದ ವಿತರಣೆ ನಡೆಯುತ್ತಿತ್ತು. ಋಷಿಪಂಚಮಿಯ ಕೊನೆಯ ಪೂಜೆಯಲ್ಲಿ ಗಣಪತಿಗೆ ಕಾಯಿ-ಜೋನಿಬೆಲ್ಲ ಹಾಕಿ ಕಲಸಿದ ಅರಳು, ವಿಧದ ಹಣ್ಣುಗಳು, ಕಡಲೆ, ಖರ್ಜೂರ, ಕಲ್ಲುಸಕ್ಕರೆ ಇತ್ಯಾದಿಯಾಗಿ ಇರುತ್ತಿದ್ದು ಅದನ್ನು ಎಲ್ಲರಿಗೂ ಹಂಚಿದ ಬಳಿಕ ವಿಗ್ರಹದಲ್ಲಿ ನಿಂತ ಗಣೇಶನಲ್ಲಿ ಮತ್ತೊಮ್ಮೆ ಕಾಯಾ-ವಾಚಾ-ಮನಸಾ ಪ್ರಾರ್ಥಿಸಿ ವ್ರತೋದ್ವಾಸನೆಗೈದು ಮಂಗಲಾಕ್ಷತೆ ಎರಚಿ ಸಿದ್ಧಿವಿನಾಯಕನನ್ನು ವಿಧಿವತ್ತಾಗಿ ಆ ಸ್ಥಾನದಿಂದ ಬೀಳ್ಕೊಳ್ಳುತ್ತಿದ್ದರು.

ಮಂತ್ರದಿಂದ ಬೀಳ್ಕೊಂಡ ಗಣೇಶನ ಭೌತಿಕ ವಿಗ್ರಹ ಮಾತ್ರ ಅಲ್ಲಿದ್ದು ಅದನ್ನು ನಿಧಾನವಾಗಿ ಮಂಟಪದಿಂದ ಇಳಿಸಿ ಹೊರಜಗುಲಿಗೆ ತರಲಾಗುತ್ತಿತ್ತು. ಅಲ್ಲಿ ಹೊರಟುನಿಂತ ಗಣಪನಿಗೆ ಹೆಂಗಸರು ಲೋಟದಲ್ಲಿ ಹಾಲು ಇರಿಸಿ ನಮಸ್ಕರಿಸುತ್ತಿದ್ದರು. ಇದೆಲ್ಲಾ ನಮ್ಮಲ್ಲಿನ ಭಾವನೆ ! ಅಲ್ಲಿ ಮನೆಯ ಎಲ್ಲರೂ ಇನ್ನೊಮ್ಮೆ ನಮಸ್ಕರಿಸಿದ ಮೇಲೆ ಅಭಯಮುದ್ರೆಯ ಗಣೇಶ ದೊಂದಿ [ದೀವಟಿಗೆ], ಒಣಗಿದ ತೆಂಗಿನಗರಿಯ ಸೂಡಿ, ಸೀಮೆ ಎಣ್ಣೆ ಗ್ಯಾಸ್ ಲೈಟ್ ಇತ್ಯಾದಿಗಳ ಬೆಳಕಿನಲ್ಲಿ ಹೊರಗೆ ಮೆರವಣಿಗೆ ಹೊರಡುತ್ತಿದ್ದ. ಅದೇ ವೇಳೆಗೆ ಕೇರಿಯ ಎಲ್ಲರ ಮನೆಗಳ ಗಣಪತೀ ವಿಗ್ರಹಗಳು ಸಾಲಾಗಿ ಬಂದು ಅಲ್ಲಿಗೆ ಸೇರಿಕೊಂಡು ಮುಂದಿರುವ ಅರ್ಧ ಫರ್ಲಾಂಗು ದಾರಿಯನ್ನು ಅತ್ಯಂತ ವಿಜೃಂಭಣೆಯಿಂದ ಕ್ರಮಿಸುತ್ತಿದ್ದವು. ಮೆರವಣಿಗೆ ಹಾದು ಹೋದ ದಾರಿಯಲ್ಲಿ ಜಾಜಿ, ಮಲ್ಲಿಗೆ, ಕರವೀರ, ಮೊಟ್ಟೆ ಸಂಪಿಗೆ, ಕೇದಿಗೆ ಹೀಗೇ ತರಾವರಿ ಹೂಗಳ ಪರಿಮಳಗಳು ಹಿಂದೆ ಬರುವ ಜನಸ್ತೋಮಕ್ಕೆ ಮುದವನ್ನು ನೀಡುತ್ತಿದ್ದವು. ಯಾಕೋ ಎಲ್ಲರಿಗೂ ಬೇಸರ; ಗಣೇಶ ಬಂದಿದ್ದೂ ಗೊತ್ತಾಗಲಿಲ್ಲ-ಹೊರಟಿದ್ದೂ ಗೊತ್ತಾಗಲಿಲ್ಲ ಎನ್ನುವ ಭಾವನೆ, ಇನ್ನೂ ನಾಕುದಿನ ಇದ್ದು ಹೋಗಬಹುದಿತ್ತು ಎಂಬ ಅದಮ್ಯ ಅನಿಸಿಕೆ. ಆದರೂ ಹಿಂದಿನವರು ನಡೆಸಿಬಂದ ನಿರ್ಧರಿತ ಕಾಲಮಾನ, ಹೀಗಾಗಿ ಅದನ್ನು ವಿಸ್ತರಿಸಲಾಗಲೀ ಮೊಟಕುಗೊಳಿಸಲಾಗಲೀ ಯಾರಿಗೂ ಇಷ್ಟವಿರಲಿಲ್ಲ; ಯಾವುದೋ ಅವ್ಯಕ್ತ ಭಯವೂ ಇದ್ದಿರಬಹುದೇನೋ.

" ಗಣಪತಿ ಬಪ್ಪಾ ಮೋರ್ಯಾ ಉಡಚಾ ವರ್ಷಾ ಲವಕರ್ಯಾ " ಎಂಬ ಮರಾಠಿ ಜೈಕಾರವನ್ನೂ ಸೇರಿಸಿದಂತೇ ಹಲವು ತೆರನಾದ ಜೈಕಾರಗಳು ಘೋಷಗಳು ತಾರಕ ಸ್ವರದಲ್ಲಿ ಕೇಳಿಸಿ ಮೆರವಣಿಗೆಗೆ ಮೆರುಗು ತರುತ್ತಿದ್ದವು. ಅಲ್ಲಿಲ್ಲಿ ಇರುವ ವೈದಿಕರು ಇರುವಲ್ಲಿಂದಲೇ ವೇದಘೋಷವನ್ನೂ ನಡೆಸಿಕೊಡುತ್ತಿದ್ದರು. ನಮ್ಮಲ್ಲಿನ ಗಣಪತಿ ವಿಸರ್ಜನೆ ಅತ್ಯಂತ ಸಾಂಪ್ರದಾಯಿಕವಾಗಿಯೂ ಮನೋರಂಜಕವಾಗಿಯೂ ಇರುವುದರಿಂದ ಇರುವ ಹತ್ತೂ ಮನೆಗಳಿಗೆ ಅವರವರ ನೆಂಟರೂ ಇದನ್ನು ನೋಡಬಯಸಿ ಬರುತ್ತಿದ್ದರು. ಮೈಸೂರು ದಸರಾ ಜಂಬೂ ಸವಾರಿಗಿಂತಲೂ ನಮ್ಮ ಜಂಬೋ ಜನಾರ್ದನನ ವಿಸರ್ಜನಾ ಮೆರವಣಿಗೆಯೇ ದೊಡ್ಡದೇನೋ ಎಂಬ ರೀತಿಯಲ್ಲಿ ಉತ್ಸುಕರಾಗಿ ನೋಡುವ ಕೌತುಕದ ಕಣ್ಣುಗಳು ಹಲವಿದ್ದವು.

ಹಳ್ಳದ ಕಟ್ಟಿಗೆ ತೆರಳಿದ ಮೆರವಣಿಗೆ ಕರ್ಪೂರವನ್ನು ವೀಳ್ಯದೆಲೆಯಲ್ಲಿ ಹಚ್ಚಿ ನೀರಲ್ಲಿ ತೇಲಿಬಿಡುವುದರ ಮೂಲಕ ವಿಸರ್ಜನೆಗೆ ತೊಡಗುತ್ತಿತ್ತು. ಬಣ್ಣಬಣ್ಣದ ಗಣಪನ ವಿಗ್ರಹಗಳನ್ನು ಒಂದೊಂದಾಗಿ ಕಟ್ಟಿನ ಜಲಾನಯನ ಪ್ರದೇಶದಲ್ಲಿ ಮುಳುಗಿಸುತ್ತಿದ್ದರು. ಮುಳುಗಿಸುವ ಕೊನೆಯ ಹಂತದಲ್ಲಿ ಗಣೇಶನಿಗೆ ಹಾಕಿದ್ದ ಜನಿವಾರವನ್ನು ವಿಗ್ರಹದ ಶಿರೋಭಾಗದಿಂದ ತೆಗೆಯುವ ಮೊದಲೇ ಮನೆಯ ಹಿರಿಯರು ಯಾರಾದರೂ ಧರಿಸಿ ಅದರ ಪ್ರಭೆಯನ್ನು ಹಾಗೇ ಉಳಿಸಿಕೊಳ್ಳುತ್ತಿದ್ದರು. ಗಣಪಣ್ಣನ ಹೊಕ್ಕಳ ಜಾಗದಲ್ಲಿ ಇರಿಸಿದ್ದ ನಾಣ್ಯವನ್ನು ಎತ್ತಿ ಚಂದ್ರಲೋಕಕ್ಕೆ ಎಸೆಯಲಾಗುತ್ತಿತ್ತು ! ತದನಂತರ ಎರಡು ಸರ್ತಿ ಮೋರ್ಯಾ ಮೋರ್ಯಾ ಎಂದು ನೀರಲ್ಲಿ ವಿಗ್ರಹ ಅದ್ದಿ ಮೂರನೇ ಸಲ ನೀರಲ್ಲಿ ಅದನ್ನು ಬಿಡುವುದಕ್ಕೆ ಯಂಟ್ರೊಣ[ವೆಂಕಟರಮಣ]ನ ಕೈಗೆ ಕೊಡುತ್ತಿದ್ದರು. ಯಂಟ್ರೊಣ ಹೊಳಬೆಳಕಿನ ಕತ್ತಲಲ್ಲೇ ಸಾಗಿ ಗುಂಡಿ ಇರುವ ಜಾಗದಲ್ಲಿ ವಿಗ್ರಹವನ್ನು ವಿಸರ್ಜಿಸುತಿದ್ದ. ಅದಾದ ಸಲ್ಪ ಹೊತ್ತಿಗೆ ನಮ್ಮಂಥ ಬಹುತೇಕ ಮಕ್ಕಳ ದುಂಬಾಲು ಆಲಿಸಿ ಮುಳುಗಿಸಿದವರ ಹೊರತಾಗಿ ಬೇರೇ ಯಾರಾದರೂ ನೀರಲ್ಲಿ ಧುಮುಕಿ ವಿಸರ್ಜಿಸಿದ ಗಣಪನ ವಿಗ್ರಹಗಳನ್ನು ಎತ್ತಿಕೊಂಡು ಬೇರೇ ಮಾರ್ಗವಾಗಿ ಬಂದು ಕೊಡುತ್ತಿದ್ದರು. ಹಾಗೆ ತಂದ ವಿಗ್ರಹವನ್ನು ಬ್ಯಾಟರಿ ಬೆಳಕಿನಲ್ಲಿ ಕೊಟ್ಟಿಗೆಗೆ ಸಾಗಿಸಲಾಗುತ್ತಿತ್ತು.

ಪೂಜಿಸಿದ ಮಣ್ಣಿನ ಅಥವಾ ಪಾರ್ಥಿವ ವಿಗ್ರಹಗಳನ್ನು ಪೂಜಾನಂತರ ಹರಿಯುವ ನೀರಿನಲ್ಲೋ ಇರುವ ಕೆರೆಯಲ್ಲೋ ವಿಸರ್ಜಿಸಿ ಬಿಡಬೇಕು, ಅದಕ್ಕೆ ಯಾವುದೇ ಅಪಚಾರ ಆಗಬಾರದು ಎಂಬುದು ಶಾಸ್ತ್ರಾಧಾರಿತವಾಗಿದೆ. ಆದರೆ ಗಣಪಣ್ಣನ ವಿಷಯದಲ್ಲಿ ಅದೂ ನಮ್ಮಕಡೆ ಸಲ್ಪ ಡಿಸ್ಕೌಂಟು! ವಿಸರ್ಜಿಸಿದ ಗಣಪನ ವಿಗ್ರಹವನ್ನು ಎತ್ತಿ ಕೊಟ್ಟಿಗೆಯಲ್ಲಿ ಇಡುವುದರಿಂದ ದನಗಳಿಗೆ ಉಣ್ಣಿಗಳ ಬಾಧೆ ಕಮ್ಮಿ ಆಗುತ್ತದೆ ಎಂಬ ಹೇಳಿಕೆಯನ್ನು ಯಾರೋ ಹುಟ್ಟಿಸಿ ಹಬ್ಬಿಸಿದ್ದರು. ಅದು ನಮಗೂ ಅನುಕೂಲವೇ ಆಗಿತ್ತು; ಯಾಕೆಂದರೆ ಆಡಲು ಬಣ್ಣದ ಗಣಪತಿಯ ವಿಗ್ರಹ ಸಿಗುವುದಲ್ಲ ? ಎತ್ತಿ ತಂದ ವಿಗ್ರಹದಲ್ಲಿ ಯಾವುದಾದರೂ ಅಂಗವೋ ಆಭರಣವೋ ಮುರಿದುಹೋಗಿರುತ್ತಿತ್ತು ! ನೀರಿನಲ್ಲಿ ಅಷ್ಟೊಂದು ರಭಸದಿಂದ ಎತ್ತಿ ಬಿಟ್ಟಾಗ ಹಾಗೆ ಆಗುವುದು ಸಹಜವಷ್ಟೇ ? ಆದರೂ ನಮ್ಮಲ್ಲಿನ ಗಣಪ ವಿಗ್ರಹಗಳು ಅಚ್ಚಿನಿಂದ ತಯಾರಿಸಿದವಲ್ಲ; ಬದಲಿಗೆ ಹದಗೊಳಿಸಿದ ಮಣ್ಣನ್ನು ಕೈಯ್ಯಿಂದಲೇ ಮೆತ್ತಿ ಆಕಾರ ಕೊಟ್ಟು ಒಣಗಿಸಿ, ತಿದ್ದಿ ತೀಡಿ ನುಣುಪುಗೊಳಿಸಿ ಬಣ್ಣಹಚ್ಚಿ ತಯಾರಿಸಿದವಾಗಿರುತ್ತವೆ. ಬಂಗಾರದ ಬಣ್ಣದ ಆಭರಣಗಳು ಹೊಟ್ಟೆಯಲ್ಲಿ ಹೆಡೆಬಿಚ್ಚಿ ಕುಳಿತ ಸರ್ಪ, ಕಾಲ ಪಕ್ಕದಲ್ಲಿ ಕೈಮುಗಿದೋ ಹಣ್ಣುತಿನ್ನುತ್ತಲೋ ಕುಳಿತ ಪಿಳಿಪಿಳಿ ಕಣ್ಣಿನ ಮೂಷಿಕ ಹೀಗೇ ಇವೆಲ್ಲಾ ನಮ್ಮ ಮನಸ್ಸನ್ನು ಕದ್ದುಬಿಡುತ್ತಿದ್ದವು.

ರಾತ್ರಿ ಬ್ಯಾಟರಿ ಬೆಳಕಿನಲ್ಲಿ ಕೊಟ್ಟಿಗೆಯ ಅಂಗಳದಲ್ಲಿ ಇರಿಸಿದ ಗಣಪನ ವಿಗ್ರಹವನ್ನು ನೋಡಿ ಏನೇನು ಊನವಾಗಿದೆ ಎಂದು ಸುಮಾರಾಗಿ ಅಂದಾಜು ಕಟ್ಟಿದ ನಾವು ಆ ರಾತ್ರಿ ಹಿರಿಯರೆದುರು ಚಕಾರವೆತ್ತುವ ಹಾಗಿರಲಿಲ್ಲ. ಎಲ್ಲಾದರೂ ಆ ವಿಷಯ ಮಾತನಾಡಿದರೆ ಹಿರಿಯರು ಬಂದಿರುವ ನೆಂಟರ ಎದುರಿಗೆ ಬೈದರೆ ನಮ್ಮ ಮರ್ಯಾದೆಯ ಗತಿ ಏನಾಗಬೇಡ ! ಹೀಗಾಗಿ ಆಡಲೂ ಆಗದೇ ಅನುಭವಿಸಲೂ ಆಗದೇ ಆ ರಾತ್ರಿ ನಿದ್ದೆಯೇ ಇಲ್ಲದೇ ಕಳೆದುಹೋಗುತ್ತಿತ್ತು. ಹಾಗಂತ ಗಣಪನ ವಿಸರ್ಜನೆ ಮುಗಿದು ಊಟವಾದ ನಂತರ ಬೇಸರ ಕಳೆಯುವಿಕೆಗಾಗಿ ಕೇರಿಯ ಯಾವುದಾದರೊಂದು ಮನೆಯಲ್ಲಿ ಯಕ್ಷಗಾನದ ಪ್ರಸಂಗವೋ ಅಥವಾ ಚಿಕ್ಕ ಹೆಣ್ಣುಮಕ್ಕಳಿಂದ ನೃತ್ಯವೋ ನಡೆಯುತ್ತಿತ್ತು. ಕೆಲವೊಂದು ಸರ್ತಿ ಹಿಂದೂಸ್ಥಾನೀ ಸಂಗೀತ ಅಥವಾ ದಾಸರ ಪದಗಳನ್ನೂ ಹಾಡಲಾಗುತಿತ್ತು. ಇವೆಲ್ಲಾ ನಮ್ಮಂಥಾ ಮಕ್ಕಳಿಗೆ ಬೇಕೇ ? ನಮದೇನಿದ್ದರೂ ಒಂದೇ ಚಿಂತೆ : ಎಷ್ಟು ಹೊತ್ತಿಗೆ ಬೆಳಕು ಹರಿದೀತು, ಎಷ್ಟು ಬೇಗ ಮುರಿದ ವಿಗ್ರಹದ ತುಣುಕುಗಳು ನಮಗೆ ಸಿಕ್ಕಾವು ---ಇದೇ ಯೋಚನೆಯಲ್ಲೇ ಚಿಕ್ಕ ಜೀವಗಳು ಹೈರಾಣಾಗುತ್ತಿದ್ದವು!

ಬೆಣಚು ಬಿಡುತ್ತಿರುವಹಾಗೇ ಹಾಸಿಗೆಯಿಂದೆದ್ದು ಕೆಂಪಾದ ಕಣ್ಣುಜ್ಜುತ್ತಾ ಹಾಗೇ ಸಲ್ಪ ಮುಖ ತೊಳೆದ ಶಾಸ್ತ್ರಮಾಡಿ ಹಳ್ಳದ ಕಟ್ಟಿನ ಜಲಾನಯನಕ್ಕೆ ಓಡುತ್ತಿದ್ದೆವು. ನಮ್ಮಲ್ಲಿಯೇ ಸಲ್ಪ ದೊಡ್ಡಗಿನ ಈಜುಬಲ್ಲ ಹುಡುಗನನ್ನು ಕರೆದಿರುತ್ತಿದ್ದೆವು. ಅಲ್ಲಿ ನೀರು ಶಾಂತವಾಗಿ ಸ್ಫಟಿಕ ಸದೃಶವಾಗಿದ್ದಾಗ ಮುರಿದ ವಿಗ್ರಹದ ಬಣ್ಣದ ತುಣುಕುಗಳನ್ನು ಹುಡುಕುತ್ತಿದ್ದೆವು. ಒಬ್ಬ ತನಗೆ ತನ್ನ ಗಣಪತಿಯ ಕೈ ಸಿಕ್ಕಿತು ಎಂದರೆ ಇನ್ನೊಬ್ಬ ಕಿರೀಟದ ಭಾಗ ಸಿಕ್ಕಿದ್ದಕ್ಕೆ ಸಂತಸಪಡುತ್ತಿದ್ದ. ಮತ್ತೊಬ್ಬ ಚಿನ್ನದ ಬಣ್ಣದ ಪಾಶಾಂಕುಶ ದೊರೆಯಿತು ಎಂದು ಕೇಕೇ ಹಾಕಿದರೆ ಉಳಿದವನೊಬ್ಬ ಮುರಿದ ಕಾಲುಬೆರಳನ್ನು ಹುಡುಕಿ ಅದೋ ಅಲ್ಲಿದೆ ನೋಡು ಎಂದು ಉದ್ಗಾರ ತೆಗೆಯುತ್ತಿದ್ದ. ಅಂತೂ ವಿಗ್ರಹಗಳ ಭಾಗಗಳು ಹಾಗೆ ಸಿಕ್ಕಾಗ ಆಗುವ ಆನಂದಕ್ಕೆ ಪಾರವೇ ಇರಲಿಲ್ಲ. ಈಜುಬಲ್ಲ ಗೆಳೆಯ ನೀರಿಗೆ ಜಿಗಿದು ಅವನ್ನೆಲ್ಲಾ ಎತ್ತಿಕೊಡುತ್ತಿದ್ದ. ಪಡೆದ ಆ ಭಾಗಗಳ ಮರುಜೋಡಣೆ ಮುಂದಿನ ಕೆಲಸ. ಅದಾದ ನಂತರ ನಾವು ನಮ್ಮಷ್ಟಕ್ಕೇ ಶಾಲೆಗೆ ರಜಾ ಘೋಷಿಸಿಕೊಂಡು ಮನೆಯಲ್ಲಿ ಬಳಸಿಬಿಟ್ಟ ಹೂವು ಪತ್ರೆ ಒಟ್ಟುಗೂಡಿಸಿಕೊಂಡು ಮತ್ತೆ ಕೊಟ್ಟಿಗೆಯ ಅಂಗಳದಲ್ಲಿ ಗಣಪನ ಪೂಜೆ ನಡೆಸುತ್ತಿದ್ದೆವು. ಮನೆಗಳಲ್ಲಿ ನಡೆಸಿದ ಎಲ್ಲಾ ಸೇವೆಗಳಿಗಿಂತಾ ನಮ್ಮ ಪೂಜೆಯೇ ಬಹಳ ಜೋರಾಗಿರುತ್ತಿತ್ತು!

ಇಂದಿಗೆ ಇದೆಲ್ಲಾ ಅಂದಿನ ಜೀವನದ ಕಥೆ ! ಇಂದು ಹಳ್ಳವೇನೋ ಇದೆ. ಆದರೆ ಹಳ್ಳದ ಹರವನ್ನು ಊರಲ್ಲಿ ರಾಜಕೀಯ ಮಾಡುವ ಒಬ್ಬಾತ ಒತ್ತುವರಿಮಾಡಿ ಕಬಳಿಸಿದ್ದಾನೆ. ಆತನಿಗೆ ಮಂತ್ರಿಮಹೋದಯರ ತನಕ ಎಲ್ಲರ ಕೈಯ್ಯೂ ಇರುವುದರಿಂದಲೂ ಕಾಸಿಗಾಗಿ ಆತ ಏನನ್ನೂ ನಡೆಸಲು ಹೇಸದ ವ್ಯಕ್ತಿ ಎಂಬ ಬಿರುದನ್ನು ಅದಾಗಲೇ ಪಡೆದಿರುವುದರಿಂದಲೂ ಕೇರಿಯ ಮಿಕ್ಕುಳಿದ ಜನ ಮಾತಾಡಲು ಹೆದರುತ್ತಾರೆ ! ಇರುವ ಜಾಗವೆಲ್ಲಾ ತನ್ನದೇ ಎನ್ನುತ್ತಾ ಆಕ್ಟೋಪಸ್ ಶೈಲಿಯಲ್ಲಿ ಕಬಳಿಕೆ ನಡೆಸುವ ಆತನನ್ನು ಕಂಡರೆ ಏನನ್ನಬೇಕೋ ತಿಳಿಯುತ್ತಿಲ್ಲ. ಅಮ್ಮಣ್ಣ ಕುಡುಕನಾಗಿದ್ದಾನೆ, ರಾಮ ಊರು ತೊರೆದಿದ್ದಾನೆ, ಶ್ರೀಪಾದ ಸಮರ್ಪಕ ಆದಾಯವಿಲ್ಲದೇ ಹೆಂಡತಿಯ ಸರಕಾರೀ ಆಕ್ಕೊರ್ಕೆಯ ಸಂಬಳವನ್ನೇ ನಂಬಿಕೊಂಡಿದ್ದಾನೆ, ಗಪ್ಪತಿ ಯಾವುದೋ ರಿಸರ್ಚು ಮಾಡಲು ಹೋಗಿ ಯಾವುದೂ ಆಗದೇ ಕೂದಲೆಲ್ಲಾ ಉದುರಿ ವಾನಪ್ರಸ್ಥಾಶ್ರಮ ಸ್ವೀಕರಿಸಿದವರಂತೇ ಕಾಣುತ್ತಿದ್ದಾನೆ, ತಮ್ಮನ ಜೊತೆ ಜಗಳವಾಡಿಕೊಂಡ ಸುಬ್ಬು ಯಾವುದೋ ಊರಿಗೆ ವಿಳಾಸ ನೀಡದೇ ತೆರಳಿದ್ದಾನೆ. ಶಣಮಾಣಿಗೆ ಗುಟ್ಕಾ ಸ್ಯಾಚೆಟ್ಟುಗಳ ಹಾರ ನಿತ್ಯವೂ ಬೇಕಾಗುತ್ತದೆ. ಸತ್ನಾರಣ ಜಮೀನು ನೋಡಿಕೊಂಡಿದ್ದು ಹೆಂಡತಿಗೆ ಸೌಖ್ಯವಿಲ್ಲದ್ದರಿಂದ ನೆಮ್ಮದಿಯಿಂದಿಲ್ಲ ........ಹೀಗೇ ಯಾರ್ಯಾರೋ ಏನೇನೋ ಆಗಿದ್ದಾರೆ!

ನನ್ನ ಓರಗೆಯ ಹುಡುಗರು ಬೆಳೆದು ಓದಿ, ಅದೂ ಇದೂ ಉದ್ಯೋಗ ನಡೆಸಿ ನಗರಗಳಿಗೆ ತೆರಳಿದ್ದಾರೆ, ಹಳ್ಳಿಯಲ್ಲಿ ಈಗಿರುವ ಚಿಕ್ಕಮಕ್ಕಳಿಗೆ ಆ ದೃಶ್ಯಗಳು ಲಭ್ಯವಿಲ್ಲ, ಹಿಂದಿನ ಕಾಲದ ನಡಪತ್ತೂ ಇಲ್ಲ. ಹಾಗೆಯೇ ಈ ಕಥೆಯೂ ಕೂಡ. ಬಹುತೇಕರ ಮನೆಗಳಲ್ಲಿ ಗಣಪತಿಯೇನೋ ಬರುತ್ತಾನೆ ಆದರೆ ಮೊದಲಿನ ಉತ್ಸುಕತೆಯಿಲ್ಲ, ಆ ಶ್ರದ್ಧೆ-ಭಕ್ತಿ ಉಳಿದಿಲ್ಲ, ವಿಸರ್ಜನೆ ತುಳಸಿ ಮುಂದೆ ಇಟ್ಟು ಚೊಂಬು ನೀರನ್ನು ಎರಚುವುದರ ಮೂಲಕ ಮುಗಿದು ಹೋಗುತ್ತದೆ! ಇಂದಿನ ಮಕ್ಕಳಿಗೆ ದೊಂದಿ-ದೀವಟಿಗೆ ಇವೆಲ್ಲಾ ಪುಸ್ತಕದ ಶಬ್ದಗಳಾಗಿಬಿಟ್ಟಿವೆ. ಹಳ್ಳದಲ್ಲಿ ಕಲ್ಮಶ ತುಂಬಿಬಿಟ್ಟಿದೆ. ಯಾರೂ ಕಟ್ಟುಹಾಕುವುದಿಲ್ಲ, ಎಲ್ಲೂ ಮೆರವಣಿಗೆಯ ಸಡಗರ ಕಾಣುವುದಿಲ್ಲ. ಚೌತಿ ಬಂದಿದ್ದಷ್ಟೇ ಪಂಚಾಂಗದಲ್ಲಿ ಗೊತ್ತು, ಹೋಗಿದ್ದನ್ನು ತಿಳಿಯಲು ಮತ್ತೆ ಪಂಚಾಂಗವನ್ನೇ ತೆರೆಯಬೇಕು, ಅಂದಹಾಗೇ ಹೇಳುವುದನ್ನೇ ಮರೆತೆ-ಹತ್ತಾರು ವರ್ಷಗಳಲ್ಲಿ ಪಂಚಾಂಗವನ್ನು ತಯಾರಿಸುವವರಿಗೂ ಅದನ್ನು ಬಳಸಲು ಕಲಿಯುವವರಿಗೂ ಹುಡುಕಾಟ ನಡೆಸಬೇಕಾದೀತು ! ಹಕೀಕತ್ತು ಹೀಗಿರುವಾಗ ಉದರಂಭರಣೆಗೆ ದೇಶ-ವಿದೇಶಗಳಿಗೆ ವಲಸೆ ತೆರಳಿದ ಮುಂದಿನ ಪೀಳಿಗೆ ಶುದ್ಧ ಅಮೇರಿಕನ್ನರ ಸ್ಟೈಲಿನಲ್ಲಿ " ಹಾಯ್ ಹೌ ದೂ ಯು ದೂ ಗಣೇಶ್ ? " ಎಂದರೆ ಅದು ಆಶ್ಚರ್ಯದ ಸಂಗತಿಯಾಗುವುದಿಲ್ಲ ! ಹಬ್ಬಕ್ಕೆ ಬರುವ ಗಣಪ [ಒಂದೊಮ್ಮೆ ಬಂದರೆ!]ಉಂಡೆ-ಚಕ್ಕುಲಿಗಳನ್ನು ಚಿತ್ರಗಳಲ್ಲಿ ನೋಡುತ್ತಾ ಕೂರಬೇಕೇ ಶಿವಾಯಿ ೨೧ ಅಥವಾ ೩೨ ಬಗೆಯ ಖಾದ್ಯ ವೈವಿಧ್ಯಗಳು ಆತನಿಗೆ ಲಭ್ಯವಾಗುವುದು ಡೌಟು !

5 comments:

  1. ಅಂತೂ ಕಾಲ ಬದಲಾಗುತ್ತಿದೆ ಭಟ್ ಸರ್ ! ನಿಮ್ಮ ಕಥೆಯೆದುರು /ನೆನಪುಗಳ ಎದುರು ನಮ್ಮದ್ದೇನೂ ಅಲ್ಲ ಅನಿಸಿಬಿಡುತ್ತದೆ. ಮುಂದೆ ನಮ್ಮಷ್ಟೂ ಇರುವುದಿಲ್ಲವೇನೋ..ಚೆನ್ನಾಗಿದೆ ಬರಹ :) :)

    ReplyDelete
  2. "ನೆನಪಿನಾ ಓರಿಯೊಳಗ
    ಮಿಣಕ್ತಾವ ಎಣ್ಣಿ ದೀಪ!
    ಎಲ್ಲಿ ಹೋದವೊ ಗೆಳೆಯಾ ಆ ಕಾಲ!"
    -ದ.ರಾ.ಬೇಂದ್ರೆ

    ReplyDelete
  3. ಆಹ ಸೊಗಸಾದ ಬರಹ ಭಟ್ಟರೇ, ಮತ್ತೊಮ್ಮೆ ಒಂದು ರೌಂಡ್ ಗಣಪನ ಸಂಭ್ರಮ ಅನುಭವಿಸಿದಂತೆ ಆಯಿತು.

    ReplyDelete
  4. tumba chennagide Bhatre,
    ishtondu vivaravaagi baritiralla, tumba khushi aytu odi

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ನೆನಕೆಗಳು.

    ReplyDelete