ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 8, 2010

’ಸೋಹಂ’ ಭಾವ


’ಸೋಹಂ’ ಭಾವ

’ ಸೋಹಂ’ ಎಂಬ ಭಾವದಿಂದ
ಒಳಗೆ ಹೊರಗೆ ಆಡುತಿರುವೆ
ನಿನಗೆ ಗೊತ್ತು ನಾನು ಯಾರು
ನನ್ನ ಊರು ನನ್ನ ಕೇರಿ
ನನ್ನ ಮೂಲ ಹೇಳೆಯಾ ?

ಭುವಿಯ ದೇಶ ನೆಲದಮನೆಯು
ಜಗದ ಗುಡಿಯು ಗಡಿಯು ನನಗೆ
ಅದಕು ಮೀರಿ ದೂರವೆಲ್ಲೋ
ನನ್ನ ತಾಣ ನೆಲೆಸಿದೆ
ಅದನು ತಿಳಿಸಬಾರದೇ?

ದೇಹದೊಳಗೆ ಎಲ್ಲಬಿಟ್ಟು
ಏನೂ ಇಲ್ಲ ಎಂಬ ತೆರದಿ
ಜೀವ ಭಾವಗಳನು ಮಿಳಿಸಿ
ನಡುವೆ ತಂತಿ ಮೀಟಿದೆ
ಬದುಕ ರಾಗ ಹಾಡಿದೆ !

ಅರಿವಿನೊಂದು ಕೊಳದ ಮಧ್ಯೆ
ಬಿಳಿಯ ಹಂಸವೊಂದು ತೇಲಿ
ಆಚೆ ಈಚೆ ತೆವಳಿ ತೀಡಿ
ತೆರೆದಕಣ್ಣಿನಿಂದ ರವಿಯ
ಸತತ ನೋಡುತಿರುವುದೇ ?

8 comments:

  1. ಜಟಿಲ ತತ್ವಜ್ಞಾನವನ್ನು ಸರಳವಾಗಿ ಕವನದಲ್ಲಿ ಹೇಳುತ್ತಲಿದ್ದೀರಿ. ಕನ್ಡಡದ ತಾತ್ವಿಕ ಕವಿಗಳಾದ ಸರ್ವಜ್ಞ, ಡಿ.ವಿ.ಜಿ ಇವರ ಪರಂಪರೆಯನ್ನು ಈ ರೀತಿಯಲ್ಲಿ ಮುಂದುವರೆಸಿದ್ದೀರಿ.

    ReplyDelete
  2. ಬದುಕಿನ ಜಟಿಲತೆಗಳ ಅನಾವರಣ ಸರಳ ಸುಂದರ ರೀತಿಯಲ್ಲಿ
    ಮಂಕುತಿಮ್ಮ ನೆನಪಿಗೆ ಬಂತು

    ReplyDelete
  3. ಭಟ್ ಸಾರ್ - "ನಿನಗೆ ಗೊತ್ತು ನಾನು ಯಾರು, ನನ್ನ ಊರು, ನನ್ನ ಕೇರಿ"... ಸ ಅಹ೦..ಅ೦ದಾಗ "ನನ್ನ ಊರು, ಕೇರಿ"..ಎ೦ಬ ಪ್ರಶ್ನೆಗೆ ಇಲ್ಲೆ ದ್ವೈತಭಾವ ಮೂಡಲಿಲ್ಲವೆ? ಅಥವಾ ಇದು mind ಗೆ ಕೇಳಿದ ಪ್ರಶ್ನೆಯೇ?

    ಅನ೦ತ್

    ReplyDelete
  4. ಇದು ಅನ0ತದ ಕಡೆಗಿನ ಪ್ರಶ್ನೆ ....,ಕೆಸರಿನ ಕಮಲದ ಹಾಗೆ ,ಬದುಕಿನ ಒಳಗೆ ಇದ್ದು - ಇಲ್ಲದ ಪರಿ ಚನ್ನಾಗಿದೆ.

    ReplyDelete
  5. anantada kadegina, sarala adhyaatmada kavana tumbaa ishTa aaytu sir...

    ReplyDelete
  6. ಅನಂತ್ ಸರ್, ಇಲ್ಲಿ ದ್ವೈತ ಭಾವವಿಲ್ಲ. ಇದು ಸೋಹಂಭಾವ, ಅರ್ಥವನ್ನು ನಿಮ್ಮ ಊಹೆಗೆ ಬಿಟ್ಟಿದ್ದೇನೆ. ನನ್ನ ಮೂಲ ಯಾವುದು ಎಂಬುದು ಪ್ರಶ್ನಾರ್ಥಕ, ’ನನ್ನ ಊರು ನನ್ನ ಕೇರಿ’-ಇವೆಲ್ಲಾ ನನ್ನ ಮೂಲಕ್ಕೆ ಸಂಬಂಧಿಸಿದ್ದೇ ಹೊರತು ಲೌಕಿಕ ಮೂಲಕ್ಕಲ್ಲ!

    ಓದುವ, ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ಕೃತಜ್ಞತೆಗಳು.

    ReplyDelete