ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 26, 2010

|| ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು ||

ಚಿತ್ರ ಋಣ : ಅಂತರ್ಜಾಲ

|| ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು ||

ನಮ್ಮ ಪೂರ್ವಜರ ಪರಮಾನುಗ್ರಹದಿಂದ ನಮಗೆ ದೊರೆತ ಅನರ್ಘ್ಯರತ್ನಗಳಲ್ಲಿ ವೇದ, ವೇದಾಂಗಳೂ, ಉಪನಿಷತ್ತುಗಳೂ, ಭಾಷ್ಯಗಳೂ, ಪುರಾಣ-ಸಂಕೀರ್ತನೆಗಳೂ ಇದುವರೆಗೂ ನಮಗೆ ಲಭ್ಯವಿವೆ. ಇಂತಹ ವೇದಮಂತ್ರಗಳ ಸಾಲಿನಲ್ಲಿ ಕೃಷ್ಣಯಜುರ್ವೇದದ ಮೇಧಾಸೂಕ್ತವನ್ನು ಆಧರಿಸಿ ಸ್ವಲ್ಪ ವ್ಯಾಖ್ಯಾನಿಸಬೇಕೆನಿಸಿತು. ಇಲ್ಲಿ ನಾವು ಪ್ರಾರ್ಥಿಸುವುದು " ಓ ದೇವರೇ ನಮಗೆ ನಮ್ಮ ಬುದ್ಧಿಗೆ ಅಗ್ನಿಯ ತೇಜಸ್ಸನ್ನೂ, ಇಂದ್ರನ ಇಂದ್ರಿಯಗಳನ್ನೂ, ಸೂರ್ಯನ ಪ್ರಖರತೆಯನ್ನೂ ಕರುಣಿಸು" ಎನ್ನುವುದು ಸ್ಥೂಲರೂಪ. ನಮ್ಮಲ್ಲಿ ನಾವು ಇಂತಹ ಒಳ್ಳೆಯದೆಲ್ಲವನ್ನೂ ಬಿಟ್ಟು ಬೇಡದ್ದನ್ನು ಓದಲು ಹಾತೊರೆಯುತ್ತೇವೆ. ಯಾವುದು ಅಪಥ್ಯವೋ ಅದನ್ನು ಬಯಸುತ್ತೇವೆ.

ಮನುಷ್ಯ ಬೆಳೆಯಬೇಕಾದರೆ ಆತನಿಗೆ ವಿದ್ಯೆಯ ಜೊತೆಗೆ ವಿನಯ ಬೇಕೇ ಬೇಕು. ಕೆಲವರನ್ನು ಕಂಡಾಗ ನಮ್ಮ ಮನಸ್ಸು ಸಹಜವಾಗಿ ನಾವು ಹೊರಗೆ ಕೈಮುಗಿಯದೇ ಇದ್ದರೂ ಅದು ತನ್ನ ಕೆಲಸವನ್ನು ಮುಗಿಸಿರುತ್ತದೆ, ಅಂದರೆ ನಾವು ಮನಸಾ ಅವರಿಗೆ ವಂದಿಸಿರುತ್ತೇವೆ. ಅವರಲ್ಲಿನ ಸೂಜಿಗಲ್ಲಿನ ಆಕರ್ಷಣೆಯೇ ಅದಕ್ಕೆ ಕಾರಣ. ಇದು ಯಾವುದೋ ಹರೆಯದ ಹುಡುಗ-ಹುಡುಗಿಯರ ಕಾಮ-ಪ್ರೇಮದ ಆಕರ್ಷಣೆಯಲ್ಲ, ಬದಲಾಗಿ ಮಹಾತ್ಮ ಸಾಧಕರೊಬ್ಬರ ಸಾಹಸಗಾಥೆಯನ್ನು ಕೇಳಿದಾಗ, ಅವರನ್ನು ಸಂಪರ್ಕಿಸುವ ಮನಸ್ಸಾಗುತ್ತದೆ, ಸಂಪರ್ಕವಾದಮೇಲೆ ಸಾನ್ನಿಧ್ಯದ ಬಯಕೆಯಾಗುತ್ತದೆ, ಸಾನ್ನಿಧ್ಯದಲ್ಲಿ ಮೊದಲಾಗಿ ಅವರು ಕಂಡಾಗ ನಮ್ಮ ಮನಸ್ಸು ನಮಗೆ ತಿಳಿಯದೇನೆ ಅವರನ್ನು ಅಭಿನಂದಿಸುತ್ತದೆ!

ಒಂದುಕಡೆ ಇಬ್ಬರು ಸನ್ಯಾಸಿಗಳು ಕೂತಿದ್ದರಂತೆ, ಒಬ್ಬರು ಅತಿ ಪುರಾತನ ಪರಂಪರೆಯಿಂದ ಜಗದ್ಗುರುವೆನ್ನಿಸಿಕೊಂಡವರು, ಇನ್ನೊಬ್ಬರು ಇತ್ತೀಚೆಗೆ ಜಗದ್ಗುರುವೆಂದು ಬೋರ್ಡು ತಗುಲಿಸಿಕೊಂಡವರು! ಪರಂಪರೆಯಿಂದ ಬಂದವರು ಸಾದಾ ಆಸನದಲ್ಲಿ ಕೂತಿದ್ದರೆ ’ಬೋರ್ಡಿನವರು’ ಬಹಳ ಚಂದದ ಬೆಳ್ಳಿಯ ಸಿಂಹಾಸನದಲ್ಲಿ ಆಸೀನರಾಗಿದ್ದರಂತೆ. ನೆರೆದಿದ್ದ ಸಭಿಕರು ಸನ್ಯಾಸಿಗಳಿಬ್ಬರಿಗೂ ನಮಿಸುವಾಗ ಜ್ಞಾನವೃದ್ಧರೂ, ತಪೋಧನರೂ, ಪರಂಪರೆಯಿಂದ ಬಂದ ಪೀಠದವರೂ ಆದ ಜಗದ್ಗುರುಗಳಿಗೆ ನಮಿಸುತ್ತಿದ್ದರಂತೇ ಹೊರತು ’ ಜಗದ್ಗುರು’ವೆಂಬ ಬೋರ್ಡಿನವರಿಗಲ್ಲ. ಬೋರ್ಡಿನ ಜಗದ್ಗುರುಗಳಿಗೆ ನಿಜವಾದ ಜ್ಞಾನೋದಯ ಅಂದಿಗೆ ಆಗಿರಬೇಕು. ಅದರ ನಂತರ ಅವರ ಲೌಕಿಕ ಮೆರೆಯುವಿಕೆ ಸ್ವಲ್ಪ ತಗ್ಗಿತು ಎಂದು ಕೇಳಿದ್ದೇನೆ.

ಕೇವಲ ಡಿಗ್ರೀ ಮಾಡಿ ಡಾಕ್ಟರೋ ಎಂಜಿನೀಯರೋ ಅಥವಾ ಇನ್ನೇನೋ ಆಗಿಬಿಟ್ಟರೆ ನಾವೆಲ್ಲಾ ನಮ್ಮಪಾಡಿಗೆ ’ಲೈಫು ಇಷ್ಟೇನೆ’ ಎಂದುಬಿಡುತ್ತೇವೆ, ಆದರೆ ನಾವು ಕಾಣದ ಅಗಣಿತ ಘಟನಾ ಮಾಯಾವಿನೋದ ವಿಲಾಸಗಳಿಂದ ಕೂಡಿದ ನಿಜವಾದ ಲೋಕ ಬೇರೊಂದಿದೆ-ಅದನ್ನು ಪಡೆಯಲು ಲೌಕಿಕ ಡಿಗ್ರೀ ಸಾಲದು ಎಂಬುದರ ಅರಿವು ನಮಗಿರುವುದಿಲ್ಲ! ವಿದ್ಯೆಗೂ ಸಂಸ್ಕಾರಕ್ಕೂ ಬಹಳ ಅಂತರವೂ ಇದೆ. ವಿದ್ಯೆ ಕಲಿತವರೆಲ್ಲಾ ಸಂಸ್ಕಾರವಂತರೇನಲ್ಲ, ಅಥವಾ ವಿದ್ಯೆಯಿಲ್ಲದವರು ಸಂಸ್ಕಾರವಂತರಲ್ಲವೆಂದೇನೂ ಅಲ್ಲ. ಇವೆರಡೂ ಪರಸ್ಪರ ಪೂರಕವಾಗಿದ್ದರೆ ಅದು ಬಹಳ ಉತ್ತಮ ಸ್ಥಿತಿ. ಎರಡೂ ಇಲ್ಲದಿದ್ದರೆ ಅದು ಮಧ್ಯಮ ಸ್ಥಿತಿ. ವಿದ್ಯೆಯಿದ್ದೂ ಸಂಸ್ಕಾರವಿಲ್ಲದಿದ್ದರೆ ಅದು ಅಧಮಸ್ಥಿತಿ.

ಒಮ್ಮೆ ನಾನು ಸಣ್ಣವನಿದ್ದಾಗ, ಹಳ್ಳಿಯಲ್ಲಿದ್ದಾಗ ಅನಿವಾರ್ಯವಾಗಿ ಎಲ್ಲಿಗೋ ಹೋದಾಗ ಮಳೆ ಬಂದುಬಿಟ್ಟಿತು. ನನ್ನ ಹತ್ತಿರ ಕೊಡೆ ಇರಲಿಲ್ಲ. ಅಲ್ಲೇ ಮರವೊಂದರ ನೆರಳಲ್ಲಿ ನಿಂತಿದ್ದೆ. ಕಣ್ಣಿಗೆ ಕಾಣುವ ದೂರದಲ್ಲಿ ಹರಿಜನರ ಚಿಕ್ಕ ಗುಡಿಸಲೊಂದಿತ್ತು. ಅವರಿಗೆ ನಾನು ನಿಂತಿದ್ದು ಕಂಡಿತೋ ಏನೋ. ಪಾಪ ಒಳಗೊಳಗೇ ಅಳುಕು, ಪರಿಚಯದ ಮನೆಯ ನನಗೆ ಕೊಡೆ ಕೊಟ್ಟರೆ ಮೇಲ್ವರ್ಗದವನಾದ ನಾನು ಏನಾದರೂ ಅಂದುಬಿಟ್ಟರೆ ಎಂಬ ಅಂಜಿಕೆಯಿರಬೇಕು. ಚಿಕ್ಕವಯಸ್ಸಿನ ನಮಗೆಲ್ಲಾ ಅವರು ಭಟ್ರೇ ಅಂತಲೋ ಒಡೆಯಾ ಅಂತಲೋ ಕರೆಯುವಾಗ ನನಗೆ ಅದು ಭಾರವಾದಂತೆನಿಸುತ್ತಿತ್ತು. ಅಂತೂ ಆ ಮನೆಯ ಹುಡುಗನೊಬ್ಬ ನನಗೆ ಕೊಡೆ ತಂದುಕೊಟ್ಟ. ನಾನು ಸ್ವಲ್ಪ ಹೊತ್ತು ಅಲ್ಲಿದ್ದು, ಮಳೆ ಕಮ್ಮಿಯಾದಮೇಲೆ ಕೃತಜ್ಞತೆಯೊಂದಿಗೆ ಕೊಡೆ ಮರಳಿಸಿ ಹೊರಟುಬಂದೆ. ಮಳೆಯಲ್ಲಿ ನೆನೆದುದನ್ನು ಕಂಡು, ಮಡಿವಂತಿಕೆಗೆ ಹೆದರಿಯೂ ಕೊಡೆಕೊಡುವ ಮನಸ್ಸನ್ನು ಮಾಡಿದ ಅವರ ಸಹಾಯದ ಹೃದಯವನ್ನು, ಆ ಸಂಸ್ಕಾರವನ್ನು ಏನೆನ್ನಬೇಕು?

ಹಿಂದೆ ಒಮ್ಮೆ ಇನ್ಫೋಸಿಸ್ ನ ಒಡತಿ ಶ್ರೀಮತಿ ಸುಧಾಮೂರ್ತಿ ತಮಿಳುನಾಡಿನ ಯಾವುದೋ ಜಿಲ್ಲೆಯಲ್ಲಿ ಹಳ್ಳಿಯಲ್ಲಿ ಓಡಾಡುತ್ತ ಇರುವಾಗ ಅವರ ಕಾರು ಕೆಟ್ಟುನಿಂತಿತಂತೆ. ಆಗ ಅವರು ಕಾರನ್ನು ಅಲ್ಲಿಯೇ ನಿಲ್ಲಿಸಿ ರಿಪೇರಿ ಆಗುವವರೆಗೆ ಕಾಲಹಾಕಲು ಹತ್ತಿರದಲ್ಲಿಯೇ ಇರುವ ಹಳೆಯ ದೇವಸ್ಥಾನವೊಂದಕ್ಕೆ ಹೋದರಂತೆ. ಅಲ್ಲಿ ಒಳಗೆ ಹೋದಾಗ ಅವರಿಗೆ ಕಂಡಿದ್ದು ಅದು ಈಶ್ವರನ ದೇವಸ್ಥಾನವಾಗಿತ್ತು ಮತ್ತು ಯಾರೋ ಮುದುಕರೊಬ್ಬರು ಪೂಜೆ ಸಲ್ಲಿಸುತ್ತಿದ್ದರಂತೆ. ಸುಧಾರವರು ಮಾತನಾಡಿಸಲಾಗಿ ಆ ಮುದುಕರು ಹೊರಬಂದು ಮಾತನಾಡಿದರಂತೆ. ತಾನು ವೇದಾಧ್ಯಾಯಿಯೆಂದೂ ಇದು ತ್ರಿಕಾಲ ಪೂಜೆಯ ಸ್ಥಳವೆಂದೂ,ತನಗೆ ಸರಿಯಾಗಿ ಕಣ್ಣುಕಾಣದೆಂದೂ ಹೇಳಿದ ಅವರು ಸುಧಾ ಅವರ ಬಗ್ಗೆ ತಿಳಿದುಕೊಂಡು ಅವರಹತ್ತಿರ ಅಂದು ಅಲ್ಲೇ ಉಳಿಯಿರಿ, ತಾನೇ ಉಳಿಯಲು ವ್ಯವಸ್ಥೆಮಾಡುವುದಾಗಿ ಹೇಳಿದರಂತೆ. ಅಲ್ಲದೇ ದೇವರಿಗೆ ಆರತಿ ಮಾಡಿ ಅದನ್ನು ಸುಧಾರವರ ಎದುರು ಹಿಡಿದಾಗ ಸುಧಾಮೂರ್ತಿಯವರು ಐನೂರು ರೂಪಾಯಿಯ ನೋಟನ್ನು ದಕ್ಷಿಣೆಯಾಗಿ ನೀಡಿದರಂತೆ. ತಕ್ಷಣವೇ ಅದನ್ನು ಕೇಳಿತಿಳಿದ ಆ ಮುದುಕರು ಅದನ್ನು ಹಿಂದಿರುಗಿಸುತ್ತಾ ಇದು ತನಗೆ ಸಲ್ಲ, ತಾನು ದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ ಎಂದರಂತೆ. ನೋಡಿ ಎಂತಹ ಆಶ್ಚರ್ಯ! ಹಳ್ಳಿಯ ಮೂಲೆಯಲ್ಲಿ ಕಡುಬಡತನದಲ್ಲಿ ಕಣ್ಣುಕಾಣಿಸದಿದ್ದರೂ ದೇವರ ಸನ್ನಿಧಿಯಲ್ಲಿ ಎಲ್ಲವನ್ನೂ ಪಡೆದ ಸೌಭಾಗ್ಯವೆಂಬ ತೃಪ್ತಿಯಿಂದ ಬದುಕುತ್ತಿರುವ ಮತ್ತು ಬಂದ ಅತಿಥಿಯನ್ನು ಆದರಿಸಿ ಉಪಚರಿಸಿದ ಮುದುಕರ ತಾಳ್ಮೆ ಮತ್ತು ಸಂಸ್ಕಾರ ಎಂಥದು ಅಲ್ಲವೇ ?

ಗೋಕರ್ಣದಲ್ಲಿ ಕಳೆದ ಶತಮಾನದಲ್ಲಿ ಅಂದರೆ ೧೯೭೫ರ ವೆರೆಗೂ ಬ್ರಹ್ಮರ್ಷಿಯೊಬ್ಬರು ಮಾನವದೇಹದಿಂದಿದ್ದರು ಎಂಬುದು ತಿಳಿದುಬಂದಿದೆ. ಹುಟ್ಟಿನಿಂದ ಶ್ರೀ ಗಣೇಶಭಟ್ಟರೆಂದು ನಾಮಾಂಕಿತರಾಗಿದ್ದ ಶ್ರೀಯುತರು ಜ್ಞಾನಕ್ಕಾಗಿ ಅಲೆಯದ ಊರಿಲ್ಲ. ಎಳವೆಯಲ್ಲೇ ಮನೆ ತೊರೆದು, ಮಹಾರಾಷ್ಟ್ರ, ಕಾಶಿ,ಹಿಮಾಲಯ, ರಾಮೇಶ್ವರ ಹೀಗೇ ಒಂದರ್ಥದಲ್ಲಿ ಆಸೇತು ಹಿಮಾಚಲ ಪರ್ಯಂತ ಓಡಾಡಿದ ಅವರಿಗೆ ಜ್ಞಾನದ ತೆವಲು ಅಷ್ಟಿಷ್ಟಾಗಿರಲಿಲ್ಲ. ಅಂತೂ ರಮಣ ಮಹರ್ಷಿಗಳ ಶಿಷ್ಯರಾದ ಕಾವ್ಯಕಂಠ ಗಣಪತಿ ಮುನಿಗಳ ಮಾರ್ಗದರ್ಶನದಲ್ಲಿ ತಮಿಳುನಾಡಿನ ಗುಹೆಯೊಂದರಲ್ಲಿ ವರುಷಗಳಕಾಲ ತಪಸ್ಸಾಚರಿಸುವಾಗ, ಸಮಾಧಿ ಸ್ಥಿತಿಯಲ್ಲಿ ಶಿಷ್ಯನ ಬಾಯಿಂದ ಪ್ರಯಾಸರಹಿತವಾಗಿ ಬಂದ, ಸಂಸ್ಕೃತದಲ್ಲಿರುವ ವಿಚಿತ್ರ ಕಾವ್ಯವನ್ನು ಸ್ವತಃ ಗುರು ಕಾವ್ಯಕಂಠ ಗಣಪತಿಉ ಮುನಿಗಳೇ ಬರೆದು ದಾಖಲಿಸಿದರಂತೆ. ಅದನ್ನು ಪುಸ್ತಕವಾಗಿ ಬರೆದು ಅದಕ್ಕೆ ’ಛಂದೋದರ್ಶನ’ ಎಂಬ ಹೆಸರಿಟ್ಟು, ವೇದದ ತತ್ಸಮಾನರೂಪ ಅದಾಗಿರುವುದರಿಂದ ಅದನ್ನು ಮಹಾಮಹೋಪಾಧ್ಯಾಯರ ಸಮಕ್ಷಮ ತರ್ಕಿಸಿ, ಅರ್ಥೈಸಿ, ಅಂತಹ ಪರಿಪೂರ್ಣ ವೇದಸಾರವನ್ನು ತನಗೇ ಅರಿವಿಲ್ಲದೇ ತನ್ನ ಬಾಯಿಂದ ಹೊರಡಿಸಿದ ಶಿಷ್ಯನಿಗೆ ’ಬ್ರಹ್ಮರ್ಷಿ ದೈವರಾತ’ ಎಂಬ ಅಭಿದಾನವಿತ್ತು ನಮಿಸಿದರಂತೆ! ತಾಳ್ಮೆಯಿಂದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದ ದೈವರಾತರಿಗೆ ಸುಮಾರು ೧೫ ಭಾಷೆಗಳು ಕರಗತವಾಗಿದ್ದವಂತೆ. ಜಯಂತ್ ಕಾಯ್ಕಿಣಿಯವರ ತಂದೆ ದಿ|ಗೌರೀಶ್ ಕಾಯ್ಕಿಣಿಯವರು ಅವರ ಕುರಿತಾಗಿ ಬರೆಯುತ್ತ, ದೈವರಾತರು ನೆಲೆಸಿದ್ದರಿಂದ ಗೋಕರ್ಣಕ್ಕೇ ಅದು ಸಂದ ಗೌರವ ಎಂದಿದ್ದನ್ನೂ, ಮತ್ತು ಅಂದಿನ ಸರಕಾರಕ್ಕೆ ಪತ್ರಿಸಿ ದೈವರಾತರಿಗೆ ಮಾಶಾಸನವಾಗಿ ಗೌರವಧನ ನೀಡಬೇಕೆಂದು ತಿಳಿಸಿದ್ದರಂತೆ. ಹಾಗಂತ ದೈವರಾತರು ಗೃಹಸ್ಥರಾಗಿದ್ದರೂ ಕಾಲಾನಂತರದಲ್ಲಿ ಗೃಹಸ್ಥರಿಗೆ ಹೇಳಿದ ಬ್ರಹ್ಮಚರ್ಯವನ್ನು ಅನುಸರಿಸಿದರು. ಇಂತಹ ’ಛಂದೋದರ್ಶನ’ವೆಂಬ ವೇದವನ್ನೇ ಬರೆದವರೂ ಕೂಡ ತಾನು ಬ್ರಹ್ಮರ್ಷಿ ಎಂಬುದು ತನ್ನ ಆತ್ಮಕ್ಕೆ ತಿಳಿದಿದ್ದರೂ ಅದನ್ನು ಪ್ರಚುರಗೊಳಿಸಲಿಲ್ಲ ಮತ್ತು ತಾನು ಪ್ರಚಾರವನ್ನೂ ಬಯಸಲಿಲ್ಲ!

ಕ್ಯಾಪ್ಟನ್ ಗೋಪೀನಾಥ್ ರವರ ಕಥೆ ಓದುತ್ತಿದ್ದೆ. ಬಾಲ್ಯದಲ್ಲೇ ಅತಿಸಹಜವಾಗಿ ಏನೋ ಹೊಸದನ್ನು ಮಾಡಬೇಕೆನ್ನುವ ತುಡಿತ ಅವರಲ್ಲಿತ್ತು. ಆಗಲೇ ಅವರು ಮಿಲಿಟ್ರಿ ಎಂಬ ಹೆಸರಿನಿಂದ ಆಕರ್ಷಿತರಾಗಿದ್ದು, ನಂಜುಡಯ್ಯನೆಂಬ ಮೇಷ್ಟ್ರ ಸಹಕಾರದಲ್ಲಿ ಅವರು ಸೇನಾಪರೀಕ್ಷೆಗೆ ಕೂತು ತೇರ್ಗಡೆಯಾಗಿ ಸೈನ್ಯಕ್ಕೆ ಸೇರಿ, ತನ್ನ ಗುಂಪಿನವರೂ ಕರ್ನಾಟಕದವರೂ ಆದ ಹಲವರನ್ನು ಯುದ್ಧದಲ್ಲಿ ಕಳೆದುಕೊಂಡು ನಂತರ ಅನೇಕ ವರ್ಷಗಳ ತರುವಾಯ ಊರಿಗೆ ಮರಳಿದ್ದು, ಹೇಮಾವತಿ ಜಲಾನಯನ ಪ್ರದೇಶದಲ್ಲಿ ಅವರ ಹಳ್ಳಿ ಮುಳುಗಡೆಯಾದಾಗ ಹಾಸನ ಜಿಲ್ಲೆಯ ಜಾವಗಲ್ಲಿನಲ್ಲಿ ಹೋಗಿ ತೋಟಮಾಡಿ ಬದುಕಿದ್ದು, ಅದರ ನಂತರದ ಅವರ ಬುಲೆಟ್ ಬೈಕ್ ಡೀಲರ್ ಶಿಪ್, ಹೆಲಿಕಾಪ್ಟರ್ ನಿರ್ಮಾಣ, ಜನಸಾಮಾನ್ಯನ ಪ್ರವಾಸಕ್ಕೆ ಅನುಕೂಲ ಕಲ್ಪಿಸುವ ವಿಮಾನಯಾನ ಆರಂಭ ಹೀಗೇ ಒಂದೊಂದನ್ನೂ ಎಳೆಯೆಳೆಯಾಗಿ ಬರೆದಿದ್ದಾರೆ. ಬಡತನದ ಮೂಸೆಯಲ್ಲಿ ಅರಳಿದ ಈ ಗಿಡಕ್ಕೆ ತನ್ನಲ್ಲೇ ಮರವಾಗುವ, ಹಲವರಿಗೆ ನೆರಳಾಗುವ, ಕಾಯಿ-ಹಣ್ಣುಗಳನ್ನೀಯುವ ಚೈತನ್ಯ ಅಡಗಿತ್ತು. ಕನಸುಗಳ ಜೊತೆಗೆ, ಶ್ರಮಿಸುವ ಮನಸ್ಸಿತ್ತು, ಅಚಲ ನಿರ್ಧಾರವಿತ್ತು, ಅಪಾರ ಶ್ರದ್ಧೆ-ಆಸಕ್ತಿಗಳಿದ್ದವು, ಅವಿರತ ಪ್ರಯತ್ನವೂ ಇತ್ತು. ಸೋಲಲೊಪ್ಪದ ಅವರ ಮನಸ್ಸು ಗೆಲುವಿಗೆ ಮಾರ್ಗ ಹುಡುಕುತ್ತಿತ್ತು. ಇಂತಹ ಗೋಪಿನಾಥ್ ತಮ್ಮ ಸಾಧನೆಯ ಹಾದಿಯಲ್ಲಿ ಕಂಡ ಕಲ್ಲು-ಮುಳ್ಳುಗಳು ಕಮ್ಮಿಯೇನಿಲ್ಲ! ಬೇಕರಿಯ ವ್ಯವಹಾರವನ್ನೂ ನಡೆಸಿದ ಅವರನ್ನು ನಾನು ಖುದ್ದಾಗಿ ನೋಡಿಲ್ಲ ಆದರೆ ಅವರ ಹೆಂಡತಿ ಶ್ರೀಮತಿ ಭಾರ್ಗವಿ ಗೋಪಿನಾಥ್ ರನ್ನು ಮಲ್ಲೇಶ್ವರದ ಅವರ ಬೇಕರಿಯಲ್ಲಿ ಕಂಡಿದ್ದೇನೆ, ಮಾತಾಡಿದ್ದೇನೆ. ಒಮ್ಮೆ ಕ್ಯಾಪ್ಟನ್ ಸಾಹೇಬರನ್ನು ಕಾಣುವ ಇಚ್ಛೆ ಇದೆ. ಮೊನ್ನೆ ಅವರ ’ಬಾನಯಾನ’ ಪುಸ್ತಕ ಬಿಡುಗಡೆಗೆ ಆಹ್ವಾನವಿದ್ದರೂ ಹೋಗಲಾಗಲಿಲ್ಲ. ಒಂದು ರೂಪಾಯಿಯಲ್ಲಿ ವಿಮಾನವೇರುವಷ್ಟು ವ್ಯವಸ್ಥೆ ಕಲ್ಪಿಸಿದ ಸಮಾಜಪ್ರೇಮಿ ಈ ಗೋಪೀನಾಥ್ ರವರು. ನೋಡಿ ಎಂತಹ ಒಳ್ಳೆಯ ಸಂಸ್ಕಾರವಂತ ನಿಗರ್ವೀ ಸಹೃದಯಿ!

ನಾನು ಬಹುವಾಗಿ ಇಷ್ಟಪಟ್ಟ ವಿಜ್ಞಾನಿಗಳಲ್ಲಿ ಒಬ್ಬರು ಡಾ| ರಾಜಾರಾಮಣ್ಣ. ಅವರು ಬರೇ ವಿಜ್ಞಾನಿಯಷ್ಟೇ ಅಲ್ಲ ತತ್ವಜ್ಞಾನಿಯೂ ಆಗಿದ್ದರು. ಅವರು ಬಹಳ ಸಮಯಪಾಲನೆಯ ಶಿಸ್ತಿನ ಸಿಪಾಯಿ ಎಂದೂ ಸರಳ ಸಜ್ಜನಿಕೆಯುಳ್ಳವರೆಂದೂ ಕೇಳಿದ್ದೆ. ೨೦೦೪ ರ ಸಪ್ಟೆಂಬರ್ ವರೆಗೆ ಬದುಕಿದ್ದ ಅವರನ್ನು ಭೇಟಿಮಾಡುವ ಇಚ್ಛೆ ಬಹಳವಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ನಮ್ಮಂಥವರಿಗೆಲ್ಲಾ ಅವರು ಸಮಯ ನೀಡುವರೇ ಎಂಬುದೇ ನನ್ನೊಳಗಿನ ಸಂದೇಹವಾಗಿತ್ತು. ಮೊನ್ನೆ ಫ್ರೊ. ಕೆ.ಈ.ರಾಧಾಕೃಷ್ಣ ದಿನಪತ್ರಿಕೆಯೊಂದರಲ್ಲಿ ಅವರ ಬಗ್ಗೆ ಬರೆದಾಗ ಅವರ ಸರಳ ಸಜ್ಜನಿಕೆಯ ಅರ್ಥವಾಯಿತು. ಈಗ ಅಂದುಕೊಂಡೆ ಅಂದು ಅವರನ್ನು ಭೇಟಿಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಕಾಲದ ತಿರುಗುವಿಕೆಯಲ್ಲಿ ಹಲವನ್ನು ಕಳೆದುಕೊಳ್ಳುತ್ತೇವೆ, ಕೆಲವನ್ನು ಪಡೆಯುತ್ತೇವೆ. ಒಂದರ್ಥದಲ್ಲಿ ಭಾವಸಂಬಂಧಗಳ ಕೊಡುಕೊಳ್ಳುವಿಕೆಯೇ ಜೀವನ !

ಹಿರಿಯರಾದ ಮಾಸ್ಟರ್ ಹಿರಣ್ಣಯ್ಯ ಅಂದು ಬ್ಲಾಗಗೆ ಬಂದು ನನ್ನನ್ನು ಮೇಲ್ ಮುಖಾಂತರ ಹರಸಿದರು.ಇದನ್ನು ಪ್ರಚಾರಕ್ಕಾಗಿ ಹೇಳುತ್ತಿಲ್ಲ, ಬದಲಾಗಿ ಅವರ ಸೌಜನ್ಯವನ್ನೂ ಸರಳ ಮನಸ್ಸನ್ನೂ ಉಲ್ಲೇಖಿಸಲು ಬರೆಯುತ್ತಿರುವೆ. ದಶಕಗಳ ಕಾಲ ತನ್ನ ನಾಟಕ ಜೀವನದಿಂದ ಅನೇಕರ ಜೀವನ ನಾಟಕದಲ್ಲಿ ಉತ್ಸಾಹ ತುಂಬಿದ, ಬದಲಾವಣೆ ತಂದ ಶ್ರೀಯುತರು ನನ್ನ ಸಂಪರ್ಕದಲ್ಲಿ ನನಗೇ ಗೊತ್ತಿರದೇ ಬಂದಿದ್ದರು! ತುಂಬಿದ ಕೊಡ ತುಳುಕುವುದಿಲ್ಲ ಎಂಬುದು ಸದಾ ಸರ್ವದಾ ಸತ್ಯ.

ನಮ್ಮ ಯುವ ಪೀಳಿಗೆಯಲ್ಲಿ ಕೆಲವು ಬರಹಗಾರರನ್ನು ಕಂಡಿದ್ದೇನೆ. ಅವರ ಬರಹಕ್ಕಿಂತ ಅವರ ತಲೆಭಾರ[ಹೆಡ್ ವ್ಹೇಟ್]ತುಂಬಾ ಜಾಸ್ತಿ ಅನಿಸುತ್ತಿದೆ. ಬಹುಶಃ ಅವರ ಲೆಕ್ಕದಲ್ಲಿ ಹಿಂದಿನ ಕವಿ-ಸಾಹಿತಿಗಳೂ ಏನೂ ಅಲ್ಲ! ಬರೆದ ಮೂರು ಮತ್ತೊಂದು ಲೇಖನಗಳು ಒಂದೆರಡು ಪತ್ರಿಕೆಗಳಲ್ಲಿ ಬಂದಿವೆ ಎಂಬ ಕಾರಣಕ್ಕೆ ಅವರು ನೆಲದಮೇಲೇ ಉಳಿದಿಲ್ಲ! ಅಲ್ಲಲ್ಲಿ ಕೆಲವು ಸಭೆಗಳಲ್ಲಿ ಕಾಣಸಿಗುವ ಅವರು ತಾವೇ ಬೇರೆ ತಮ್ಮ ಲೆವೆಲ್ಲೇ ಬೇರೆ ಎಂದು ಯಾರೊಡನೆಯೂ ಬೆರೆಯದೇ ಮೌನವಾಗಿ ಮಹಾನ್ ದಾರ್ಶನಿಕರಂತೇ ಪೋಸುಕೊಡುತ್ತಾರೆ. ಅವರ ಕನಸುಗಳಲ್ಲಿ ಅವರು ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದಾಗಿದೆ! ಅನೇಕರಿಗೆ ಆಟೋಗ್ರಾಫ್ ಬರೆದೂ ಕೊಟ್ಟಾಗಿದೆ!ಬುದ್ಧಿಮಟ್ಟದಲ್ಲಿ ತಮ್ಮನ್ನೂ ಹಾಗೂ ತಮ್ಮ ಕೃತಿಗಳನ್ನೂ ಮೀರಿಸುವ ಇನ್ನೊಬ್ಬರಿಲ್ಲಾ ಎಂಬ ಅನಿಸಿಕೆ ಅವರನ್ನು ಅವಿಶ್ರಾಂತವಾಗಿ ಅಟ್ಟದಮೇಲೇ ಇಟ್ಟಿದೆ! ಸರಿಯಾಗಿ ಪಿಲ್ಲರ್ ಇಲ್ಲದ ಆ ಬಿಲ್ಡಿಂಗ್ ಯಾವಾಗ ಉದುರಿಹೋಗುತ್ತದೋ ಅವರಿಗೇ ಗೊತ್ತಿಲ್ಲ! ನೀರಲ್ಲಿ ಮೀನಿನ ಹೆಜ್ಜೆಯೆ ಗುರುತನ್ನು ಪತ್ತೆ ಹಚ್ಚುವುದು ಎಷ್ಟುಕಷ್ಟವೋ ಅವರ ಮನವನ್ನು ತಿಳಿಯುವುದು ಅದಕ್ಕಿಂತಾ ಕಷ್ಟ ಎಂಬುದು ಹಲವು ಮಿತ್ರರ ಅಂಬೋಣ. ಮನದ ಮೌನದಲ್ಲೇ ಮಂಡಿಗೆ ತಿನ್ನುತ್ತಿರುವ ಹಲವು ಸ್ನೇಹಿತರಿಗೆ ಅಂತಹ ಮೀನುಗಳಿಗೆ ಗಾಳಹಾಕುವುದು ಬೇಕಾಗಿಲ್ಲ ಎಂಬುದು ತಿಳಿದಿಲ್ಲ. ಇದೊಂದು ವಿಪರ್ಯಾಸ! ಇದು ಯಾರೊಬ್ಬರ ಸಲುವಾಗಿ ಹೇಳುತ್ತಿರುವುದಲ್ಲ, ಬದಲಾಗಿ ನಮ್ಮ ಎಲ್ಲಾ ದುರಭಿಮಾನೀ ಬ್ಲಾಗಿಗ ಹಾಗೂ ಬರಹಗಾರ ಮಿತ್ರರನ್ನು ಉದ್ದೇಶಿಸಿ ಬರೆದಿದ್ದು. ಅಹಂಕಾರಕ್ಕೆ ಉದಾಸೀನವೇ ಮದ್ದೆಂಬುದು ಅವರೆಲ್ಲರಿಗೂ ತಿಳಿದರೆ[ತಿಳಿಯಬೇಕಲ್ಲ!] ಸಾಕು. ಕೇವಲ ಪ್ರತಿಕ್ರಿಯೆಗಳಿಗಾಗಿ ಆಸೆಪಡುವ, ಚೆನ್ನಾಗಿದೆಯೆಂದು ಹೇಳಿಬಿಟ್ಟರೆ ನೆಲಬಿಟ್ಟು ಕುಣಿಯುವ ಅಪ್ರಬುದ್ಧ ಮನಸ್ಥಿತಿಯನ್ನು ವಿಸರ್ಜಿಸಿ ನಾವೆಲ್ಲಾ ಪ್ರಬುದ್ಧರಾಗೋಣ. ಕೆಲವೊಮ್ಮೆ ಕೆಲವು ಬ್ಲಾಗಿಗ ಮಿತ್ರರ ಅಂಕಣ ಅಥವಾ ಕೃತಿಗಳಿಗೆ-ಅವರ ಕಾಗುಣಿತ, ವ್ಯಾಕರಣ ತಪ್ಪಿದ್ದಾಗ, ವಸ್ತುವಿಷಯ ನನಗೆ ಬಾಲಿಶವಾಗಿ ಕಂಡಾಗ ನೇರವಾಗಿ ಖಾರವಾಗಿ ನಾನು ಪ್ರತಿಕ್ರಿಯಿಸುವುದಿದೆ, ಇದು ನನ್ನ ಜಾಯಮಾನ. ನನ್ನ ಕೃತಿಗಳಿಗೂ ಕೂಡ ನಾನು ಎಲ್ಲಾರೀತಿಯ ಪ್ರತಿಕ್ರಿಯೆಗಳನ್ನೂ ಪಡೆಯಲು ಸಿದ್ಧನಿದ್ದೇನೆ ; ಸ್ವೀಕರಿಸಿದ್ದೇನೆ.

ಎಲ್ಲಾ ಹಿರಿಯ ಕವಿ-ಸಾಹಿತಿಗಳು ಅತ್ಯಂತ ವಿನಯವಂತರೂ, ಸೌಹಾರ್ದಶೀಲರೂ ಆಗಿದ್ದರು. ತಮ್ಮಲ್ಲಿ ಅಂತಹ ಮಹತ್ತರವಾದುದೇನೋ ಇದೆ ಎಂದು ಅವರೆಂದೂ ತಿಳಿದಿರಲಿಲ್ಲ. ಈಶ್ವರಚಂದ್ರ ವಿದ್ಯಾಸಾಗರ್ ರವರು ಯಾವುದೋ ಕಾರ್ಯಕ್ರಮಕ್ಕೆ ಬರುವವರಿದ್ದರೆಂಬುದನ್ನು ತಿಳಿದ ಹುಡುಗನೊಬ್ಬ ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಂತಿದ್ದದಂತೆ. ಅವರು ಬರಬೇಕಾದ ರೈಲ್ವೇ ಬಂತು. ಕೆಲವರು ಇಳಿದರು. ಯಾರೋ ಒಬ್ಬಾತ ತಲೆಯಮೇಲೆ ಸೂಟ್ಕೇಸ್ ಹೊತ್ತು ನಡೆದ. ಆತ ಎದುರಾದ ಆ ಹುಡುಗನ ಹತ್ತಿರ ಕೇಳಿದ " ಮಗೂ ಇಲ್ಲಿ ಈಶ್ವರಚಂದ್ರ ವಿದ್ಯಾಸಾಗರ್ ರವರ ಭಾಷಣ ಕಾರ್ಯಕ್ರಮವಿದೆಯಲ್ಲಪ್ಪಾ ಅಲ್ಲಿಗೆ ಹೇಗೆ ಹೋಗಬೇಕು " ಹುಡುಗ ದಾರಿಯನ್ನು ಕೈಮಾಡಿ ತೋರಿಸಿದ. ಹುಡುಗ ಆ ವ್ಯಕ್ತಿಯ ಪರಿಚಯ ಕೇಳಲಿಲ್ಲ, ಆ ವ್ಯಕ್ತಿಯೂ ಹೇಳಲಿಲ್ಲ.ಹುಡುಗನ ಮನಸ್ಸಲ್ಲಿ ಬರುವ ಈಶ್ವರಚಂದ್ರರು ಬಹಳ ಸೂಟುಬೂಟಿನವರೆಂಬ ಚಿತ್ರತುಂಬಿತ್ತು. ಬಂದ ಈ ವ್ಯಕ್ತಿಯಂತೂ ಬಹಳ ಸಿಂಪಲ್ಲು ಹೀಗಾಗಿ ಆತನಂತೂ ಅಲ್ಲ ಎಂದು ಹುಡುಗ ಚಿಂತನೆ ನಡೆಸಿದ. ಬಹಳ ಹೊತ್ತಾಯಿತು ಇನ್ನೂ ಬರಲಿಲ್ಲವೆಂದುಕೊಳ್ಳುತ್ತಾ ಹುಡುಗ ಸಭಾಂಗಣಕ್ಕೆ ಬಂದರೆ ಅಲ್ಲಿ ಭಾಷಣಕ್ಕೆ ನಿಂತಿದ್ದ ವ್ಯಕ್ತಿ ರೈಲ್ವೇ ನಿಲ್ದಾಣದಿಂದ ನಡೆದು ಬಂದವರೇ ಆಗಿದ್ದರು! ಅವರೇ ಈಶ್ವರಚಂದ್ರ ವಿದ್ಯಾಸಾಗರ್! ಸನ್ಮಾನ್ಯ ಡೀವೀಜಿಯವರು ಪ್ರತೀವ್ಯಕ್ತಿಯನ್ನು [ಆತ ಚಿಕ್ಕವನೇ ಇರಲಿ, ದೊಡ್ಡವನೇ ಇರಲಿ]ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಎಲ್ಲರ ಜೊತೆ ಬೆರೆಯುತ್ತಿದ್ದರು. ವರಕವಿ ಬೇಂದ್ರೆಯವರು ಹೋದಲ್ಲಿ ಜನಜಾತ್ರೆಯೇ ನೆರೆಯುತ್ತಿದ್ದುದು ಅವರ ಪ್ರಾದೇಶಿಕ ಭಾಷಾಶೈಲಿ ಮತ್ತು ಸ್ನೇಹಪರತೆಯಿಂದ. ಕುವೆಂಪು ತನ್ನ ಅನೇಕ ಕೃತಿಗಳನ್ನು ಬರೆಯಲು ಸಾಧ್ಯವಾಗಿದ್ದು ಎಲ್ಲರೊಡನೆ ಅವರ ಒಡನಾಟ. ಕಾರಂತರು ಕಡಲ ತೀರದ ಭಾರ್ಗವರಾದದ್ದು ಅವರು ಬೆಟ್ಟದ ಹೂವಾಗಿ ಎಲ್ಲರ ಕಣ್ಣಿಗೂ ಕಾಣಿಸಿದ್ದರಿಂದ. ಅಷ್ಟೇ ಏಕೆ ಮಹಾನ್ ಕಲಾವಿದರೂ ತಾವು ಬೆಳೆದಿದ್ದು ತಮ್ಮ ವಿನಯವಂತಿಕೆಯಿಂದ: ಡಾ| ರಾಜ್ ಕುಮಾರ್ ಯಾರಾನ್ನಾದರೂ ಮೊದಲಾಗಿ ಕಂಡಾಗ ಬಂದವರು ಚಿಕ್ಕವರೇ ಇದ್ದರೂ ಎದ್ದುನಿಂತು ಅವರನ್ನು ಸ್ವಾಗತಿಸುತ್ತಿದ್ದರಂತೆ, ದಿ | ವಿಷ್ಣುವರ್ಧನ್ ಕೂಡ ಈ ವಿಷಯದಲ್ಲಿ ಹಿಂದೆಬಿದ್ದಿರಲಿಲ್ಲ.

ಬ್ಲಾಗಿಗ ಮಿತ್ರರಲ್ಲಿ ಒಂದು ಕಳಕಳಿಯ ವಿನಂತಿ:

ಬ್ಲಾಗಿಗರಲ್ಲಿ ಕೆಲವರು ಬರೆದುಕೊಳ್ಳುತ್ತಿರುವ ರಾಜಕಾರಣ-ಕೂಟ ಇವುಗಳ ಬಗ್ಗೆಲ್ಲ ಓದಿದೆ, ಮನಸ್ಸಿಗೆ ಅವೆಲ್ಲಾ ಸ್ವಲ್ಪ ನೋವುಂಟುಮಾಡಿದವು. ಅಷ್ಟಾಗಿ ಬರೇ ಬ್ಲಾಗಿಗ ಮಿತ್ರರು ಯಾರೂ ಯಾರನ್ನೂ ಎಲ್ಲೂ ಬಂಧಿಸಿಲ್ಲವಲ್ಲ! ಒಬ್ಬರ ಹಿಂದೆಯೋ ಸುತ್ತವೋ ಸುತ್ತುವುದು ಆ ವ್ಯಕ್ತಿಯನ್ನು ಇಷ್ಟಪಟ್ಟಾಗ ಮಾತ್ರವಷ್ಟೇ ? ಕೇವಲ ವ್ಯಕ್ತಿಗಳನ್ನು ಇಷ್ಟಪಟ್ಟಾಗ ಅವರ ವ್ಯವಹಾರಾವನ್ನಗಲೀ ಅಥವಾ ಅವರ ಎಲ್ಲಾ ವೈಯಕ್ತಿಕ ಧೋರಣೆಗಳನ್ನಾಗಲೀ ಒಪ್ಪಬೇಕೆಂದೇನೂ ಇಲ್ಲವಲ್ಲ ! ವಿಶಾಲವಾದ ನದಿಯಿಂದ ನಮಗೆ ಬೇಕಾದಷ್ಟು ಒಳ್ಳೆಯ ನೀರನ್ನು ಪಡೆಯೋಣ ಅಲ್ಲವೇ ? ಅದು ಬಿಟ್ಟು ಪ್ರತಿಕ್ರಿಯೆಗಳ ಬಗ್ಗೆ, ಹಳೇ-ಹೊಸ ಬ್ಲಾಗರ್ಸ್ ಎಂಬ ಧೋರಣೆಗಳ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುವುದು. ಸಕ್ಕರೆ ಇರುವಲ್ಲಿ ಇರುವೆಗಳು ಬರುವಂತೇ ಒಳ್ಳೇಯತನವಿದ್ದು ಉತ್ತಮ ಕೃತಿಗಳನ್ನು ಬರೆಯುವ ಲೇಖಕರನ್ನು ಸಾಹಿತ್ಯಾಸಕ್ತರು ಹುಡುಕಿ ಬಂದೇ ಬರುತ್ತಾರೆ. ಬರಲು ದಾರಿ ಸಿಗದೇ ಸ್ವಲ್ಪ ತಡವಾಗಬಹುದಷ್ಟೇ! ನನ್ನ ಬ್ಲಾಗ್ ಆರಂಭದಲ್ಲಿ ನಾನು ಎಲ್ಲಾ ಸ್ನೇಹಿತರಿಗೆ ಮೇಲ್ ಅಲರ್ಟ್ ಮಾಡಿ ಬ್ಲಾಗ್ ಅಪ್ಡೇಟ್ ಆಗಿದ್ದನ್ನು ಸೂಚಿಸುತ್ತಿದ್ದೆ ಮತ್ತು ಲಿಂಕ್ ಕೊಡುತ್ತಿದ್ದೆ, ಇದಕ್ಕೆ ಕಾರಣ ಅವರು ಬರಲೇಬೇಕೆಂಬ ಹಠವಾಗಿರಲಿಲ್ಲ, ಬದಲಾಗಿ ನಾನೂ ಬರೆಯಲು ಪ್ರಾರಂಭಿಸಿದ್ದೇನೆ ಸಾಧ್ಯವಾದರೆ ಓದಿ ನಿಮ್ಮ ಅಭಿಪ್ರಾಯ ಹೇಳಿ ಎಂಬುದಾಗಿತ್ತು. ಅದನ್ನೇ ಬಹಳವಾಗಿ ಇಷ್ಟಪಟ್ಟ ಹಲವು ಮಿತ್ರರು ತಮಗೆ ಈಗ ಯಾಕೆ ಮೇಲ್ ಮಾಡುವುದೇ ಇಲ್ಲಾ ಎಂದು ಕೇಳುತ್ತಾರೆ. ನಾನು ಕಳಿಸುವ ಅಂತಹ ಮಿಂಚಂಚೆಯಲ್ಲಿ ಬ್ಲಾಗ್ ನಲ್ಲಿ ನಾನು ಬರೆಯದ ಕೆಲವು ಆಪ್ತ ವಿಷಯಗಳು ಬರುತ್ತವೆ ಎಂಬುದು ಅವರೆಲ್ಲರ ಅಭಿಪ್ರಾಯ. ದಿನವೂ ನಿಮ್ಮ ಲೇಖನ ಓದದಿದ್ದರೆ ಏನನ್ನೋ ಕಳೆದುಕೊಂಡಹಾಗಾಗುತ್ತದೆ ಎಂಬ ಅನನ್ಯ ಆಪ್ತತೆಯನ್ನು ಹೇಳುತ್ತಾರೆ. ಆದರೆ ಕೆಲಸದ ಒತ್ತಡದಲ್ಲಿ ನನಗೇ ಮೇಲ್ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ನನಗೆ ಬರೆಯಲೇ ಸಮಯವಿರದಿದ್ದರೂ ಬಹಳಜನ ಮಿತ್ರರು ಕಾಯುತ್ತಿರುತ್ತಾರಲ್ಲಾ ಎಂಬ ಅನಿಸಿಕೆಗೆ ಕಟ್ಟುಬಿದ್ದು ಬರೆದ ದಿನಗಳಿವೆ.

ಕಳೆದವಾರ ವಿಜಯ ನೆಕ್ಸ್ಟ್ ಪತ್ರಿಕೆಯಲ್ಲಿ ಬ್ಲಾಗಿಗರ ಬರೆದಾತ ಯಾರೋ ಪರಿಚಯವಿಲ್ಲ. ಆತ ಏನು ಬರೆದನೆಂಬುದೇ ನನಗೆ ತಿಳಿಯಲಿಲ್ಲ! ಎಲ್ಲರ ಬಗ್ಗೆಯೂ ಬರೆಯುತ್ತೇನೆ ಲಿಂಕ್ ಕೊಡಿ ಎಂದಾಗ ಸಹಜವಾಗಿ ಬಹಳ ಬ್ಲಾಗಿಗರು ಅದಕ್ಕೆ ಸ್ಪಂದಿಸಿದ್ದಾರೆ. ಆತ ’ವಿಜಯಕರ್ನಾಟಕ’ದಲ್ಲಿ ಮುಂದಿನ ತನ್ನ ’ನೆಟ್ಟಣಿಗ’ ಚುಟುಕು ಮಾಹಿತಿಗೆ ತಯಾರಿ ನಡೆಸಲು ಕಂಡುಕೊಂಡ ದಾರಿ ಇದು ಎಂಬುದು ನನ್ನ ಅನಿಸಿಕೆ. ನಮ್ಮಲ್ಲಿ ಅಂತವರ ಸಂಪರ್ಕಕ್ಕೆ ಬಂದವರು ಅವರು ಬರೆಯುವ ಲೇಖನಗಳನ್ನು ಪ್ರಕಟಣಾ ಪೂರ್ವ ಓದಿ ಸಮ್ಮತಿಸಿದರೆ ಒಳಿತು ಎಂಬುದೂ ನನ್ನ ಅಭಿಮತ. ಎಲ್ಲಾ ಮಾಹಿತಿಯನ್ನೂ ಪಡೆದು ಆಮೇಲೆ ಯಾರೋ ಒಬ್ಬಿಬ್ಬರನ್ನೇ ಕುರಿತು ಬರೆಯುವ
ಅವರ ರೀತಿ ನನಗೆ ಹಿಡಿಸಲಿಲ್ಲ. ಹೀಗೆ ಬರೆಯಲೂ ನನಗೆ ಅಳುಕಾಗಲೀ, ಮುಜುಗರವಾಗಲೀ ಇಲ್ಲ, ಯಾಕೆಂದರೆ ನಾನು ರಬ್ಬರ್ ಸ್ಟಾಂಪ್ ಬರೆಹಗಾರನಲ್ಲ! ಲೀಡರ್ ಶಿಪ್ ಬಹಳ ಜನರಲ್ಲಿಒ ಇರಬಹುದು, ಆದರೆ ಅದರ ವ್ಯಾಪ್ತಿ ಮತ್ತು ಅವಶ್ಯಕತೆ ಸೀಮಿತಗೊಳಿಸಿರಬಹುದು. ಕೆಲವರಿಗೆ ಅವರವರ ನಿರಂತರ ಕೆಲಸದ ಒತ್ತಡ ಮತ್ತು ಆರ್ಥಿಕ ಅನಾನುಕೂಲತೆಯಿಂದ ಅವರು ಮುನ್ನುಗ್ಗದೇ ಇರಬಹುದು. ಆದರೆ ನಮ್ಮಲ್ಲಿ ಅನುಕೂಲವಿರುವ ಯಾರೊಬ್ಬರಾದರೂ ಮುಂದಾಗಿ ಒಂದು ಕೆಲಸ ನಡೆದಾಗ ಅದನ್ನು ಮೆಚ್ಚಿಕೊಳ್ಳಬೇಕಾದುದು ನಮ್ಮ ಧರ್ಮ.

ಬ್ಲಾಗ್ ಮತ್ತು ಬಜ್ ಮೂಲಕ ವ್ಯವಹಾರ ಚೆಂದಕಾಣುವುದಿಲ್ಲ! ನೋ ಬ್ಯಾಕ್ಡೋರ್ ಎಂಟ್ರಿ ಪ್ಲೀಸ್ ! ನನ್ನದೂ ವ್ಯವಹಾರವಿದೆ, ಆದ್ರೆ ನಾನು ಅದನ್ನು ನಿಮ್ಮ ಮುಂದೆ ಈ ದಾರಿಯಿಂದ ತಳ್ಳುವುದಿಲ್ಲ. ಇದೇನಿದ್ದರೂ ಜ್ಞಾನಕ್ಕಾಗಿ, ಮಿತಮನೋರಂಜನೆಗಾಗಿ ಮೀಸಲಾದ ಕ್ಷೇತ್ರವಾಗಿರಲಿ ಎನ್ನುವುದು ನನ್ನ ಅಂಬೋಣ. ಆದಾಗ್ಯೂ ನಿಮ್ಮಲ್ಲಿ ಅಂತಹ ಅತಿವಿಶೇಷ ಕೊಡುಗೆಗಳು, ಮಾರಾಟದ ವಸ್ತುಗಳು ಉತ್ತಮ ಗುಣಮಟ್ಟದವಾಗಿದ್ದು ಯಾರೂ ಕೊಡದ ಅಗ್ಗದ ದರದಲ್ಲಿ ನೀವು ಪೂರೈಸುತ್ತಿದ್ದರೆ ಅದರ ಪ್ರಶ್ನೆಯೇ ಬೇರೆ! ಹೀಗಾಗಿ ಬ್ಲಾಗನ್ನು ವ್ಯಾಪಾರೀಕರಣಕ್ಕಾಗಿ ಬಳಸುವುದು ಬೇಡ ಎಂಬುದು ನನ್ನ ಸಲಹೆ. ವ್ಯವಹಾರಕ್ಕಾಗಿ ಬೇಕಾಗಿ ಅದರ ಕುರಿತಾದ ಒಂದು ಬ್ಲಾಗನ್ನೋ ಅಥವಾ ವೆಬ್ ಸೈಟನ್ನೋ ಪ್ರತ್ಯೇಕ ಇಟ್ಟುಕೊಂಡರೆ ಅದು ಉತ್ತಮ.

ಎಲ್ಲಾ ಬ್ಲಾಗಿಗರಲ್ಲಿ ನನ್ನದೊಂದು ವಿನಂತಿ. ನಾವೆಲ್ಲಾ ಋಜುಮಾರ್ಗದವರು. ವಿದ್ಯೆಯಿರುವವರು. ವಿದ್ಯೆಗೆ ವಿನಯವೇ ಭೂಷಣ. ನಮ್ನಮ್ಮಲ್ಲಿ ಚೂರುಪಾರು ಕುಂದುಕೊರತೆಗಳಿದ್ದರೆ ನೇರ ಸಂವಹಿಸಿ ಪರಿಹರಿಸಿಕೊಳ್ಳೋಣ. ಬ್ಲಾಗನ್ನು ಬರೆಯಲು ಮುಕ್ತ ಅವಕಾಶವನ್ನು ಬ್ಲಾಗ್ ಸ್ಪಾಟ್ ಮತ್ತು ವರ್ಡ್ ಪ್ರೆಸ್ಸ್ ನವರು ಕೊಟ್ಟಿದ್ದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ವಿನಾಕಾರಣ ಒಬ್ಬೊಬ್ಬರೇ ಅನೇಕ ಬ್ಲಾಗ್ ಗಳನ್ನು ಹುಟ್ಟುಹಾಕುವ ಬದಲು ಬರೆಯುವ ಬ್ಲಾಗನ್ನೇ ಸಮರ್ಪಕವಾಗಿ ನಿಭಾಯಿಸಿ, ಆಗ ಅದಕ್ಕೆ ಅರ್ಥವಿರುತ್ತದೆ. ರಸವಿರದ ಕಬ್ಬನ್ನೂ ಒಣಗಿರುವ ಲಿಂಬೆಯ ಹಣ್ಣನ್ನೂ ಯಾರೂ ಬಯಸುವುದಿಲ್ಲ. ಅಂತಹ ಕಸಗಳಿಂದಲೇ ರಸತೆಗೆಯುವ ಪ್ರಯತ್ನದಲ್ಲಿ ನಾವಿರಬೇಕಾಗುತ್ತದೆ. ನಾವು ಪರಸ್ಪರ ಏನೇನೋ ಅಂದುಕೊಳ್ಳುತ್ತಾ, ಕೆಲವರಿಗೆ ಗುಂಪುಗಾರಿಕೆ ಅಂದೆಲ್ಲಾ ಯಾರನ್ನೋ ಉದ್ದೇಶಿಸಿ ಬರೆಯುತ್ತಾ ಇರುವ ಬದಲು, ನಮ್ಮ ನ್ಯೂನತೆಗಳನ್ನು ನಾವೇ ತಿದ್ದಿಕೊಂಡರೆ ಆಗ ಎಲ್ಲ ಗುಂಪಿನಲ್ಲೂ ನಾವಿರುತ್ತೇವೆ ಅಥವಾ ಯಾವ ಗುಂಪಿನಲ್ಲೂ ನಾವಿರುವುದಿಲ್ಲ. ಹೀಗಾಗಿ ಆರೋಪ-ಪ್ರತ್ಯಾರೋಪಗಳು, ತಕರಾರುಗಳು ಬೇಡವೆಂಬುದು ನನ್ನ ಅನಿಸಿಕೆ. ಹೃತ್ಪೂರ್ವಕವಾಗಿ ಎಲ್ಲರಿಗೂ ಶುಭವನ್ನು ಹಾರೈಸುತ್ತೇನೆ.

ಪ್ರಾರಂಭಿಸಿದ ಅದೇ ಮಂತ್ರದಿಂದ ಪೂರ್ಣವಿರಾಮ ಹಾಕುವುದು ಒಳ್ಳೆಯದು ಅನಿಸುತ್ತಿದೆ--

|| ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು ಮಯಿ ಮೇಧಾಂ ಮಯಿ ಪ್ರಜಾಂ ಮಯೀಂದ್ರ ಇಂದ್ರಿಯಂ ದಧಾತು ಮಯಿ ಮೇಧಾಂ ಮಯಿ ಪ್ರಜಾಂ ಮಯಿ ಸೂರ್ಯೋಭ್ರಾಜೋ ದಧಾತು ||

|| ಓಂ ಶಾಂತಿಃ ಶಾಂತಿಃ ಶಾಂತಿಃ ||

19 comments:

  1. ಭಟ್ಟರೆ,
    ಬ್ಲಾಗಿಗರಿಗೆ ಮನದಾಳದಿಂದ ಹಿತವಚನ ಹೇಳಿದ್ದೀರಿ. ಎಲ್ಲ ಬ್ಲಾಗಿಗರೂ ಈ ಹಿತನುಡಿಗಳನ್ನುಆರಿತುಕೊಳ್ಳುವರೆಂದು ಆಶಿಸುವೆ.

    ReplyDelete
  2. ಗುರುಗಳೇ, ನಾನೇನು ಹೇಳುವುದೆಂದು ಅರ್ಥ ಆಗ್ತ ಇಲ್ಲ! ನಿಮ್ಮ ಹಿತನುಡಿಗಳನ್ನು ಸದಾ ನನ್ನ ಮನದಲ್ಲಿ ತುಂಬಿಕೊಂಡಿರುತ್ತೇನೆ.
    ನಿಮ್ಮ ಈ ಲೆಖನ, ಹಿತನುಡಿ, ಎಲ್ಲರಿಗೂ ಅರ್ಥವಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
    ಗುರುಗಳೇ, ಧನ್ಯೋಸ್ಮಿ.........

    ReplyDelete
  3. ಭಟ್ ಸರ್ ನಿಮ್ಮ ಲೇಖನ ನೇರವಾಗಿ ಹೃದಯಕ್ಕೆ ದಾಳಿ ಇಟ್ಟಿದೆ ಈ ಗುಂಪುಗಾರಿಕೆ,ಹಳಬರು ಹೊಸಬರು ಅನ್ನೋ ಭೇದ ಖಂಡಿತ ಬೇಡ ಇದು ನಾವು ಅಂದ್ಕೋಳ್ಳೋದು ಆದ್ರ ಕೆಲಜನ ಅದ್ಯಾಕೊ ಆ ಹಾದಿ ಹಿಡೀಬೇಕಂತಾರ
    ಅವರಿಗೆ ಶುಭವಾಗಲಿ. ಬ್ಲಾಗು ಒಂದು ಪ್ರಮುಖ ಮಾಧ್ಯಮ.ಸದುಪಯೋಗ ಪಡಿಸಿಕೊಳ್ಳಿ ಎಂಬ ನಿಮ್ಮ ದನಿಗೆ
    ನನ್ನ ದನಿಯೂ ಸೇರಿದೆ.

    ReplyDelete
  4. ಭಟ್ಟರೆ,

    ನನ್ನ ಮನಸಿನಲ್ಲಿದ್ದುದನ್ನೇ ಹೇಳಿದ್ದೀರಿ.
    "ಬ್ಲಾಗನ್ನು ಬರೆಯಲು ಮುಕ್ತ ಅವಕಾಶವನ್ನು ಬ್ಲಾಗ್ ಸ್ಪಾಟ್ ಮತ್ತು ವರ್ಡ್ ಪ್ರೆಸ್ಸ್ ನವರು ಕೊಟ್ಟಿದ್ದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು." ...ಅರ್ಥಮಾಡಿಕೊಳ್ಳುವವರಿಗೆ ಇದಿಷ್ಟೇ ಸಾಕೆನಿಸುತ್ತದೆ.
    ಬ್ಲಾಗೆಂಬುದು ನನಗಂತೂ ಕಲಿಯುವ, ತಿಳಿಯುವ ಮತ್ತು ಪರಸ್ಪರ ಹಂಚಿಕೊಳ್ಳುವ ಮಾಧ್ಯಮವಷ್ಟೇ ಆಗಿದೆ. ಇಲ್ಲಿ ವ್ಯಕ್ತಿ ಮತ್ತು ವೈಯಕ್ತಿಕ ವಿಚಾರಗಳು ಅನಗತ್ಯವೆನಿಸುತ್ತದೆ. ಮುಖ್ಯವಾಗಿ ನನಗೆ ಬೇಕಿರುವುದು ನಿಮ್ಮಂತಹ ಮತ್ತು ಎಲ್ಲರ ಸೃಜನಶೀಲ ಬರಹಗಳು. ಮಿಕ್ಕಿದ್ದು ನಗಣ್ಯ...

    ಇದ್ದುದನ್ನು ಇದ್ದಹಾಗೇ ಹೇಳಿದ್ದಕ್ಕೆ ಮತ್ತೊಂದು thanks.

    ReplyDelete
  5. ಕ್ಷಮಿಸಿ, ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಲೇಖನ ಬಹಳ ಚೆನ್ನಾಗಿದೆ. ಇನ್ನಷ್ಟು ಬರೆಯಿರಿ.

    ReplyDelete
  6. chenagide sir.. nimma itavachanavannu nijavagiyu ellaru arta maadikollabekadudde.. nangu ee hale hosa blogger anno visya aratane agtila sir elli hige ide anta.. nimma matu 100 ke 1000 satya sir sakkare iruvedege eruve bande baruttave.... thanks sir... chenagide nimma lekana..

    ReplyDelete
  7. ಭಟ್ಟರೇ,
    ನಿಮ್ಮ ಚಿಂತನಾ ಲಹರಿಗೆ ಸೋತು ಹೋದೆ.

    ReplyDelete
  8. ವಿ.ಆರ್.ಭಟ್ ಸರ್, ನಮಸ್ತೆ.
    ಈ ಲೇಖನೆ ನನಗೆ ತುಂಬಾ ಯೋಚಿಸುವಂತೆ ಮಾಡಿದೆ, ಹಾಗೇನೆ ತುಂಬಾ ಇಷ್ಟ ಆಯಿತು.
    ನಿಮ್ಮ ಮಾರ್ಗದರ್ಶನ ಸದಾ ಇರಲಿ.
    ನಿಮಗೆ ನನ್ನ ನಮನಗಳು.

    ReplyDelete
  9. ಭಟ್ ಸರ್;ನಿಮ್ಮ ಲೇಖನ ಯಥಾ ಪ್ರಕಾರ ಅದ್ಭುತ.ಸುಮಾರು ವಿಷಯಗಳ ಬಗ್ಗೆ ಹೇಳಿದ್ದೀರಿ.ಇಲ್ಲಿ ನಾನೂ ಕೂಡ ಒಂದು ವಿಷಯ ಸ್ಪಷ್ಟ ಪಡಿಸಬೇಕು.ನಾನು ನನ್ನ ಬ್ಲಾಗ್ ಶುರು ಮಾಡಿದ್ದು, ಇದು ಒಂದು ಕನ್ನಡ ಸಾಹಿತ್ಯ ವೇದಿಕೆಯಾಗಲಿ ಎಂದು.ಹೆಚ್ಚು ಕನ್ನಡ ಬಳಕೆಯಾಗಲಿ ಎಂದು.ಸ್ವಂತಿಕೆ ಮೆರೆಯುವ ಉದ್ದೇಶದಿಂದ ಅಲ್ಲ.ಇಲ್ಲೂ ಕೂಡ ಹಲವರು ರಾಜಕೀಯ,ಗುಂಪುಗಾರಿಕೆ,ಹಾಳೂ ಮೂಳೂ,ಎಂದರೆ ಬೇಸರವಾಗುತ್ತದೆ.ನಿಮ್ಮತಹ,ಪ್ರಕಾಶಣ್ಣನಂತಹ ಮತ್ತು ಹಲವಾರು ಅದ್ಭುತ ಸ್ನೇಹಿತರನ್ನು ಕೊಟ್ಟ ಬ್ಲಾಗ್ ಲೋಕಕ್ಕೆ ನಾನು ಅಭಾರಿಯಾಗಿದ್ದೇನೆ.ಸ್ನೇಹವನ್ನು ಮೆರೆಯೋಣ,ಗುಂಪುಗಾರಿಕೆ ಮರೆಯೋಣ.ಕ್ಯಾಪ್ಟನ್ ಗೋಪಿನಾಥ್ ನನ್ನ ಚಿಕ್ಕಪ್ಪನ(ಅವರೀಗ ಇಲ್ಲ)ಕಸಿನ್.ಅವರ ತಂದೆ ,ತಾಯಿ ಮತ್ತಿತರ ಬಂಧುಗಳನ್ನು ಗೊರೂರಿನಲ್ಲಿ ಭೇಟಿಯಾಗಿದ್ದೇನೆ.ಆದರೆ ಗೋಪಿನಾಥ್ ಹೆಚ್ಚು ಹೊರಗೇ ಇರುತ್ತಿದ್ದರಿಂದ ಅಷ್ಟು ಪರಿಚಯವಿಲ್ಲ.ಮುಂದೆ ಬೆಂಗಳೂರಿಗೆ ಬಂದಾಗ ಭೇಟಿಯಾಗೋಣ.ನಮಸ್ಕಾರ.

    ReplyDelete
  10. ನೀವು ಹಲವು ಮಹನೀಯರ ದೃಷ್ಟಾ೦ತ ಸಹಿತ ನೀಡಿರುವ ಹಿತವಚನ ಸ್ವೀಕಾರಾರ್ಹ. ಹೇಳಬೇಕಾದ್ದನ್ನು ನೇರವಾಗಿ, ಮುಚ್ಚುಮರೆಯಿಲ್ಲದೆ ಹೇಳಿದ್ದೀರಿ, ಖುಷಿಯಾಯಿತು. ತಪ್ಪುಗ್ರಹಿಕೆಗಳುತೊಲಗಲಿ, ಬ್ಲಾಗಿಗರಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ವರ್ಧಿಸಲಿ, ಎಲ್ಲರಿಗೂ ಒಳ್ಳೆಯದಾಗಲಿ.

    ReplyDelete
  11. ನಮಸ್ತೆ ಭಟ್ ಸರ್‍, ಲೇಖನ ಪೂರ್ತಿ ಓದಿದೆ. ಹಿತಕರವಾಗಿ, ಸೂಕ್ಷ್ಮವಾಗಿ ತಿಳಿಸಬೇಕಾದ ವಿಷಯ ತಿಳಿಸಿದ್ದೀರಿ. ವಿಷಯ ಮನದಟ್ಟಾಗುವಂತೆ ಇದೆ.
    ಧನ್ಯವಾದಗಳು.

    ReplyDelete
  12. ಭಟ್ಟರೆ...

    ನೀವು ಹೇಳಿದಷ್ಟು ಗಂಭೀರವಾಗಿ ನಾನು ಯಾವಾಗಲೂ ಚಿಂತಿಸಿಲ್ಲ..

    ನನಗೆ ಸಿಗುವ ಸ್ವಲ್ಪ ಸಮಯದಲ್ಲಿ ಬರವಣಿಗೆಗೆ ಅಂತ ಮೀಸಲಿರಿಸಿದ್ದೇನೆ...
    ನಾನು ಸಾಹಿತ್ಯ ಓದಿದ್ದೂ ಬಹಳ ಕಡಿಮೆ...

    ಅಭಿಪ್ರಾಯ ಅಂದ ಮೇಲೆ ಎಲ್ಲರೀಗೂ ಒಂದೊಂದು ಇರುತ್ತದೆ..
    ಆದರೆ ಅದು ಭಿನ್ನಾಭಿಪ್ರಾಯವಾಗಿ..

    ಸಂಬಂಧಗಳಿಗೆ.. ಸೌಹಾರ್ಧತೆಗೆ ತೊಡಕನ್ನುಂಟು ಮಾಡ ಬಾರದು..
    ಅಲ್ಲವೆ..?

    ತುಂಬಾ ಸೊಗಸಾದ ಬರಹ ಅಭಿನಂದನೆಗಳು...

    ಇಂಥಹ ಇನ್ನಷ್ಟು ಲೇಖನ ಬರಲೆಂದು ಆಶಿಸುವೆ...

    ReplyDelete
  13. sir,
    sakkat aagi baredidhira....chennagide...

    ReplyDelete
  14. ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು, ಇದು ಯಾವುದೇ ದುರುದ್ದೇಶ ಪೂರಿತ ಲೇಖನವಲ್ಲ, ಯಾರಮೇಲೆಯೂ ಕೇಂದ್ರೀಕೃತವಲ್ಲ, ನಾನು ಮೊನ್ನೆ ಓದಿದ್ದ ಬ್ಲಾಗೊಂದರ ಲೇಖನಕ್ಕೆ ಉತ್ತರಿಸುವ ಪ್ರಯತ್ನವಷ್ಟೇ! ಪ್ರತಿಕ್ರಿಯಿಸುವುದರ ಜೊತೆಗೆ ಗುಂಪುಗಾರಿಕೆ ಮರೆತು ಸಕ್ರಿಯವಾಗಿ ತೊಡಗಿಕೊಂಡ ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು

    ReplyDelete
  15. ವಿ.ಆರ್ಬಿ ಸರ್, ವಿಚಾರ ಮಂಥನದ ಆಳಕ್ಕೆ ಎಳೆದೊಯ್ಯುವ ಲೇಖನ ಮೊದಲ ಸಾಲುಗಳು ನೋಡಿ ಏನಪ್ಪಾ ಇದು ನಿತ್ಯಾನಂದನ ಆನಂದ ಹಾಳು ಮಾಡ್ತಿದ್ದಾರೆ ವಿ.ಆರ್ಬಿ ಅಂದ್ಕೊಂಡೆ...ಆದ್ರೆ ಈ ಗುಂಪುಗಾರಿಕೆ ಮಾಡೋರಿಗೆ...ಹಿಂದೆ ಒಂದು ಮುಂದೆ ಒಂದು ರೀತಿ ನಡೆಯೋರಿಗೆ ಒಳ್ಳೆ ಸಲಹೆಯ ರೂಪದಲ್ಲಿ ಚುರುಕು ಮುಟ್ಟಿಸಿದ್ದೀರಿ..ನಾವು ನಮ್ಮ ಪುಸ್ತಕದ ಬಿಡುಗಡೆಯಂದು ಬೆಳ್ಚಪ್ಪನ ಬೇನಾಮಿ ಬ್ಲಾಗ್ ಬಂದಾಗಲೇ ಇದನ್ನು ಚರ್ಚಿಸಿದ್ದೆವಲ್ಲವೇ..? ನಿಜವಲ್ಲವೇ ನಿಮ್ಮ ಮಾತು...? ನಮಗೆ ನಮ್ಮ ಪರಸ್ಪರ ಸ್ನೇಹ ವಿಚಾರ ವಿನಿಮಯಗಳು ಮುಖ್ಯ...ಅಲ್ಲವೇ..ವಿ.ಕ. ದ ಲೇಖನ ಅಪೂರ್ಣ ಮತ್ತು ಅಪಕ್ವವಾಗಿತ್ತು ಎಂದು ಎಲ್ಲರಂತೆ ನನಗೂ ಅನಿಸಿತ್ತು ಬಹುಶಃ ಇನ್ನೂ ಶ್ರಂಖಲೆ ಮುಂದುವರೆಯುತ್ತೆ ಎಂದುಕೊಂಡೆ...(ಬರುತ್ತದೇನೋ ಗೊತ್ತಿಲ್ಲ).
    ಹೌದು ನಮ್ಮಲ್ಲಿ ಯಾಕೆ ಈ ಗುಂಪುಗಾರಿಕೆ (ನನಗೆ ಸಕಾರಾತ್ಮಕದಲ್ಲಿ ನಂಬಿಕೆ)..ಏನೋ ತಪ್ಪು ಕಲ್ಪನೆ..ಎಲ್ಲಾ ಸರಿಯಾಗುತ್ತೆ ಎನ್ನೋ ಆಶಾವಾದ.
    ನಾವೆಲ್ಲಾ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಲೇಖನ...ಏನಿದ್ದರೂ ಎದುರಿಗೆ ನೀವು ಹೇಳಿದಂತೆ ಮಾತನಾಡಿ ಸ್ಪಷ್ಟಪಡ್ಿಸಿಕೊಂಡು ನಮ್ಮ ಬ್ಲಾಗ್ ಕುಟುಂಬ ಒಂದು ಎನ್ನೋಣ ಅಲ್ಲವೇ...?
    ಊರಲ್ಲಿ ಬ್ಲಾಗ್ ನೋಡಲಾಗಲಿಲ್ಲ ಇಲ್ಲಿ ಬಂದು ಬಾಕಿ ಕೆಲಸ ಎಲ್ಲ ಮುಗಿಸಿಕೊಂಡು ನೋಡಲಾರಂಭಿಸಿದ್ದೇನೆ...ಹಾಗಾಗಿ ನಿಮ್ಮ ಕೆಲವು ಲೇಖನಗಳನ್ನು ನೋಡಿಲ್ಲ ಅಥವಾ ಬಜ್ ನಲ್ಲೇ ಪ್ರತಿಕ್ರಿಯೆ ನೀಡಿದೇನೇನೋ...

    ReplyDelete
  16. ಮತ್ತೊಮ್ಮೆ ಹಾಗೂ ಈ ಲೇಖನದ ಬಗ್ಗೆ ಕೊನೆಯ ನುಡಿ:ನೋಡಿ ಯಾರನ್ನೋ ಉದ್ದೇಶಿಸಿ ಬರೆದುದಲ್ಲ, ವೃತ್ತಿಯನ್ನು ಪ್ರವೃತ್ತಿಯ ಜೊತೆಗೆ ಸೇರಿಸುವುದು ಬೇಡ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ, 'ನನ್ನ ಹತ್ತಿರ ಹಳೆಯ ಬೆಲ್ಜಿಯಂ ಗಾಜಿನ ಚೂರುಗಳಿವೆ, ಬೆಲೆ ಹನ್ನೊಂದು ಸಾವಿರ' ಎಂದು ಹಾಕಲೇ ? ಅಥವಾ ಗಣಕ ಯಂತ್ರ ಮಾರಾಟದ ಲಿಸ್ಟ್ ಹಾಕಲೇ ? ಇದೆಲ್ಲಾ ಒಂಥರಾ ಆಗುವುದಲ್ಲವೇ ? ನಮ್ಮದೊಂದು ಎಂ ಎಲ್ ಎಂ ಇದೆ, ನಾನು ಯಾರಿಗೂ ಪ್ರವೇಶ ಕೊಟ್ಟಿಲ್ಲ, ಬೆಳಗಾದ್ರೆ ಅದರಲ್ಲಿ ಬರೇ ಮಾರ್ಕೆಟಿಂಗ್, ಹೇಳಿ ಅದನ್ನು ತಂದರೆ ಎನೆನ್ನಿಸಬಹುದು? ವೈಯಕ್ತಿಕ ಕುಂದುಕೊರತೆಗಳನ್ನು ನಾವೆಲ್ಲಾ ಪ್ರತ್ಯೇಕ ಬೈಠಕ್ ನಲ್ಲಿ ಮಾತಾಡೋಣ, ಯಾರಿಗೋ ಸಹಾಯ, ಯಾರಿಗೋ ಜಾಬು ಅದು ಓಕೆ, ಮಾರ್ಕೆಟಿಂಗ್ ಯಾಕೆ ? ನಮಗೆ ನಮ್ಮ ನಂಬರುಗಳು ಗೊತ್ತಿವೆ, ಮೇಲ್ ಐಡಿಗಳು ಗೊತ್ತಿವೆ, ಅಂದಮೇಲೆ ಆ ಮಾರ್ಗದಲ್ಲೇ ಸಂವಹಿಸಿದರೆ ಒಳಿತು ಎಂಬುದು, ಇನ್ನು ಪಬ್ಲಿಕ್ ಆಗಬೇಕಾದರೆ ಅದಕ್ಕೆ ಪ್ರತ್ಯೇಕ ಬ್ಲಾಗೋ,ವೆಬ್ ಸೈಟೋ ಒಳ್ಳೆಯದು. ಇಲ್ಲಿಗೆ ಈ ಸಮಾಚಾರ ಮುಕ್ತಾಯವಾಯಿತು , ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  17. ಯಾರೂ ಏನೂ ತಿಳಿಯಬೇಕಾಗಿಲ್ಲ, 'ಬೆರ್ಚಪ್ಪ'ನ ಕೆಲಸ ನನದಲ್ಲ, ಅದು ಬೇರೆ ಯಾರೋ ಇರುತ್ತಾರೆ, ನಾನು ಯಾವಾಗಲೂ ನೇರವಾಗಿ ಹೇಳುವವನು, ದಯವಿಟ್ಟು ಈ ಬಗ್ಗೆ ಮಿಸ್ಟೇಕ್ ಬೇಡ!

    ReplyDelete
  18. ಮಾರ್ಮಿಕ ಲೇಖನ. ಅವಶ್ಯಕವೂ ಸಹಾ...

    ReplyDelete