ರಾತ್ರಿ ಚಾ ಪಾರ್ಟಿ ಇರುತ್ತದಂತೆ !
ಇದನ್ನು ಕೇಳಿಯೇ ಮಕ್ಕಳಾದ ನಮಗೆಲ್ಲ ಒಂಥರಾ ಥ್ರಿಲ್ಲಿಂಗ್ ! ರಾತ್ರಿ ಹೊತ್ತಿನಲ್ಲೆಲ್ಲ ಚಾ ಕುಡುಯುವುದು ಸಾಮಾನ್ಯವಾಗಿ ನಾವು ನೋಡಿದ್ದಲ್ಲ. ಅದಕ್ಕೇ ಅದು ಹೇಗಿರಬಹುದು ಮತ್ತು ಏನೆಲ್ಲಾ ತಿಂಡಿ ಇರಬಹುದು ಎಂಬುದು ನಮ್ಮ ಕುತೂಹಲ. ಮಕ್ಕಳಿಗೆ ಸಹಜವಾಗಿ ತಿಂಡಿಗಳೆಲ್ಲಾ ಇಷ್ಟ್ ತಾನೇ ? ಅದೂ ಬೇರೆಯವರ ಮನೆಗಳಲ್ಲಿ ಮಾಡಿದ್ದು ಹೇಗಿರುತ್ತದೆ ತಿಳಿಯಬೇಕು ಎಂಬುದೊಂದು ಸ್ವಲ್ಪ ಕೆಟ್ಟ ಬಯಕೆ. ಆಗಾಗ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದರೆ ಕಾಯಿಸುವಾಗ-ಬೇಯಿಸುವಾಗ್ಲೇ ಅದರ ಪರಿಮಳ ನಮ್ಮ ’ ಅಸಾಧಾರಣ ’ ಮೂಗಿಗೆ ಹೊಡೆಯುತ್ತಿತ್ತು. ಆಗ ಪಕ್ಕದ ಮನೆಯ ಮಕ್ಕಳನ್ನು ಆಟಕ್ಕೆ ಕರೆದು
"ಏಯ್ ನಿಮ್ಮನೇಲಿ ಇವತ್ತೇನ್ ಮಾಡಿದಾರೋ "
" ಕೈಮುಗಿಯುವ ಮೊಮ್ಮಿ "
ಈ ಕೈಮುಗಿಯುವ ಮೊಮ್ಮಿ ಎಂದರೆ ಅದು ನಮ್ಮ ಮುಗಿದ ಕೈ ಆಕಾರದ ಸಿಹಿತಿನಿಸು! ಅಕ್ಕಿಹಿಟ್ಟಿನ ಕಡುಬು ನೋಡಿದ್ದೀರಲ್ಲಾ ಆಥರದ್ದೇ ಒಂದು. ಅಂಥದ್ದೆಲ್ಲಾ ದಿನವೂ ಮಾಡುವುದಲ್ಲ. ಅಪರೂಪಕ್ಕೆ ನೂಲು ಹುಣ್ಣಿಮೆ, ನಾಗರ ಪಂಚಮಿ ಇಂತಹ ದಿನಗಳಲ್ಲೇ ಮಾತ್ರ ಸಿಗುವಂತದು. ನಮ್ಮನೆಗಳಲ್ಲಿ ಅಮ್ಮ ತಿಂಗಳ ರಜಾಕ್ಕೆ ಕೂತರೆ ಆಗ ಅದು ಸಿದ್ಧವಾಗುತ್ತಿರಲಿಲ್ಲ, ಇನ್ಯಾವುದೋ ಹಬ್ಬಕ್ಕೆ ಪೋಸ್ಟ್ ಪೋನ್ ಆಗಿಬಿಡುತ್ತಿತ್ತು. ಒಮ್ಮೊಮ್ಮೆ ಅವರ ಮನೆಗಳಲ್ಲೂ ಅದೇ ಕಥೆ. ಹೀಗಾಗಿ ಕೆಲವೊಮ್ಮೆ ತಿನ್ನಬೇಕೆನಿಸುವ ನಮ್ಮ ಜಿಹ್ವಾಚಾಪಲ್ಯಕ್ಕೆ ಅದೇ ಕಾಲಕ್ಕೆ ತುರಿಕೆ ಜಾಸ್ತಿಯಾಗಿಬಿಡೋದು. ಏನಾದರೂ ಉಪಾಯ ಮಾಡಿ ನಾವು ಅವುಗಳನ್ನು ಹೊರಗಡೆ ತಂದು ಎಲ್ಲಾ ಸೇರಿ ಆಟವಾಡುತ್ತಾ ತಿನ್ನುವುದಿತ್ತು.
ನಾಗರ ಪಂಚಮಿಗೆ ’ಸುಳಿರೊಟ್ಟಿ’ ಮಾಡುತ್ತಿದ್ದರು. ಬೇಕಾದರೆನೀವೂ ಮಾಡಿನೋಡಿ--
ನೆನೆಹಾಕಿ ರುಬ್ಬಿದ ಅಕ್ಕಿಯ ಹಿಟ್ಟನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಚಪಾತಿ ಹಿಟ್ಟಿನ ಹದಕ್ಕೆ ಇಟ್ಟುಕೊಂಡು ಅದನ್ನು ತುಂಡು ಬಾಳೆಲೆಯಮೇಲೆ ನಮ್ಮ ಅಂಗೈ ಆಕಾರಕ್ಕೆ ತೆಳ್ಳಗಿನ ಪದರದ ಥರ ಆಗುವವರೆಗೆ ತಟ್ಟಿ[ಕೈಗೆ ಎಣ್ಣೆ ತಗುಲಿಸಿಕೊಂಡು ಮಾಡಬೇಕಾದ ಕೆಲಸ], ನಂತರ ಅದರಮೇಲೆ ಸಿದ್ಧಪಡಿಸಿರುವ ಕಾಯಿಸಿ ಇಳಿಸಿರುವ ಕಾಯಿತುರಿ-ಬೆಲ್ಲದ ಮಿಶ್ರಣವನ್ನು ಒಂದು ಪದರ ಹರಡಿ. ನಿಧಾನಕ್ಕೆ ಅಂಗೈ ಮಡಿಸಿದಂತೇ ಮಡಿಸಿಕೊಳ್ಳಿ, ದೋಸೆ ಕಾವಲಿಯ ಮೇಲೆ ತುಂಡು ಬಾಳೆಲೆ ಸಮೇತ ಇಡಿ, ಒಂದೈದು ನಿಮಿಷ ಆಕಡೆ ಈಕಡೆ ಮಗುಚುತ್ತ ಬೇಯಿಸಿ! ಬಾಳೆಲೆ ಬಣ್ಣ ಬದಲಾಗುತ್ತ ಬಂದಾಗ ಇಳಿಸಿ ತಣಿಯಲು ಬಿಡಿ. ತಿಂದುನೋಡಿ--ಇದು ಸುಳಿರೊಟ್ಟಿ! ಸುಳಿರೊಟ್ಟಿಯನ್ನು ನಿಜವಾಗಿ ಮಾಡುವುದು ಅರಿಶಿನ ಗಿಡದ ಎಲೆ[ಅರಿಶಿನ ಕೀಳೆ]ಯಲ್ಲಿ! ಅದು ಅರಿಶಿನದ ಎಲೆಯ ಪರಿಮಳವನ್ನು ಹೀರಿಕೊಂಡು ಬೇಯುತ್ತದೆ. ಆಗ ತಿಂದರೆ ಅದರ ಪರಿಮಳವೇ ಬೇರೆ. ಆದರೆ ಶಹರ-ಪಟ್ಟಣಗಳಲ್ಲಿ ಅರಿಶಿನದ ಎಲೆ ಎಲ್ಲಿ ಸಿಗುತ್ತದೆ ? ಹೀಗಾಗಿ ಅದಕ್ಕೆ ಪರ್ಯಾಯ ಬಾಳೆಲೆ ಹೇಳಿದ್ದೇನೆ.
ಇರಲಿ ನಾವು ಮರಳಿ ಮಕ್ಕಳಾಗೋಣ! ನಮ್ಮೂರ ದೇವಸ್ಥಾನಗಳಲ್ಲಿ ಕಾರ್ತೀಕಮಾಸ ಮುಗಿಯುವ ಹೊತ್ತಿಗೆ ತಿಂಗಳದಿನ ದಿನವೂ ಸಾಯಂಕಾಲ ನಡೆಸಿಬಂದ ಭಜನಾ ಸೇವೆಗೆ ಮಂಗಳ ಹಾಡುವ ಭಜನೆಸಪ್ತಾಹ ನಡೆಯುತ್ತದೆ. ಈ ಸಪ್ತಾಹದಲ್ಲಿ ಹಲವು ವಿಧ. ಇದರಲ್ಲೇ ಯಾಮಾಷ್ಟಕ ಎಂದರೆ ಒಂದೊಂದು ಯಾಮಕ್ಕೆ ಒಂದೊಂದು ಗುಂಪು ಕುಳಿತು ಅಖಂಡ ಭಜನಾ ಸೇವೆ ನಡೆಯುತ್ತದೆ. ಇದು ಏಳುದಿನಗಳ ಪರ್ಯಂತ ನಡೆಯುವುದರಿಂದ ಸಪ್ತಾಹವೆಂದು ಹೆಸರು. ಆದರೆ ಈಗ ಕಾಲ ಬದಲಾಗಿದೆ. ಕೇವಲ ೨೪ ಘಂಟೆಗೆ ಅಖಂಡ ಭಜನೆ ಮುಗಿದುಹೋಗುತ್ತದೆ! ನಮ್ಮದು ಹಳ್ಳಿಯಾಗಿರುವುದರಿಂದ ಅಲ್ಲಿ ಆಗಿನಕಾಲದಲ್ಲಿ ದ್ವನಿವರ್ಧಕದ ವ್ಯವಸ್ಥೆ ಇರಲಿಲ್ಲ. ಇಂತಹ ವಿಶೇಷ ಕಾರ್ಯಕ್ರಮಗಳಿರುವಾಗ ಮಾತ್ರ ದೂರದ ಪಟ್ಟಣದಿಂದ ಬಾಡಿಗೆಗೆ ಮೈಕು ತರಿಸುತ್ತಿದ್ದರು. ಮೈಕಿನವ ಬಂದು ಶ್ರೀಮತಿ ಎಸ್. ಜಾನಕಿಯವರು ಹಾಡಿರುವ ’ಶುಕ್ಲಾಂಬರಧರಂ ವಿಷ್ಣುಂ ....’ ಎನ್ನುವ ದೋಸೆಥರದ ತಿರುಗುವ ಅದೇನೋ ಹಾಕುತ್ತಿದ್ದ! ತಿರುಗುತ್ತಿರುವ ಅದರ ಮೇಲೆ ಒಂದು ದಪ್ಪ ಕಡ್ಡಿಯ ಥರದ್ದನ್ನು ಎಳೆದು ಬಿಟ್ಟರೆ ಅಲ್ಲಿ ತರತರದ ಹಾಡುಗಳು ಬರುತ್ತಿದ್ದವು ! ಕೆಲವೊಮ್ಮೆ ಹಾಡು ಮುಂದೆಹಾಡಲು ಮರೆತುಹೋದ ಹಾಗೇ ೧೦-೧೨ ಬಾರಿ ಹಾಡಿದ್ದನ್ನೇ ಹಾಡುತ್ತಿತ್ತು. ಆಗ ಮೈಕಣ್ಣ ಅದೇನೋ ಬೆಕ್ಕಿನಮರಿ ಎತ್ತಿ ಬಿಟ್ಟಹಾಗೇ ಆ ದಪ್ಪದ ಕೋಲನ್ನು ಸ್ವಲ್ಪ ಎತ್ತಿ ಪಕ್ಕಕ್ಕೆ ಬಿಡುತ್ತಿದ್ದ. ಅಲ್ಲಿಂದ ಮತ್ತೆ ಮುಂದೆ ಹಾಡುತ್ತಿತ್ತು. ನಮಗೆಲ್ಲಾ ಮೈಕಣ್ಣನನ್ನೂ ಅವನ ಪೆಟ್ಟಿಗೆಯನ್ನೂ ಹೊರಗೆ ಮರಕ್ಕೋ ಎತ್ತರದ ಕಂಬಕ್ಕೋ ಕಟ್ಟುವ ಕಹಳೆಯಾಕಾರದ್ದನ್ನೂ ನೋಡುವುದೇ ಒಂದು ಹಬ್ಬ! ಅದು ಗ್ರಾಮೊಫೋನ್ ಎನ್ನುವುದು ನಮಗಂದಿಗೆ ತಿಳಿದಿರಲಿಲ್ಲ. ಆತನ ಹತ್ತಿರ ಹಲವಾರು ’ದೋಸೆ’ಗಳಿರುತ್ತಿದ್ದವು. ದೇವಸ್ಥಾನಗಳಿಗೆ ಬಂದರೆ ಭಕ್ತಿ ಗೀತೆ ಹಾಡುವ ದೋಸೆಮಾತ್ರ ಹಾಕುತ್ತಿದ್ದ. ಊರಲ್ಲಿ ನಾಟಕಕ್ಕೆ ಬಂದರೆ ಅದಕ್ಕೇ ಬೇರೆ ಸಿನಿಮಾ ಹಾಡುಗಳು. ’ನಾ ಬಿಡಲಾರೆ ಎಂದೂ ನಿನ್ನಾ...ನೀನಾದೆ ನನ್ನಾ ಪ್ರಾಣಾ.....’ಈ ತರದ್ದು. ’ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರನಾರಿಯಾ.....’ ಹಾಡು ಎಲ್ಲರ ಅಚ್ಚುಮೆಚ್ಚಿನದು. ಅದರ ಅರ್ಥ ಅಷ್ಟೆಲ್ಲಾ ತಿಳಿದಿರಲಿಲ್ಲ, ಆದರೆ ದೊಡ್ಡವರೆಲ್ಲಾ ಇಷ್ಟಪಡುತ್ತಾರಲ್ಲ ಅಂತ ನಾವೂ ಇಷ್ಟಪಡುತ್ತಿದ್ದೆವು!
ಮೈಕಣ್ಣನ ಮೈಕಿನಲ್ಲಿ ಕುಳಿತು ಹಾಡಿದರೆ ಊರಿಗೆಲ್ಲಾ ಕೇಳುತ್ತದೆ ಎಂಬುದು ನಮಗೆ ತಿಳಿದುಬಿಟ್ಟಿತ್ತು. ಹಾಗಾಗಿ ಆ ಒಂದು ಅವಕಾಶ ಎಲ್ಲಾದರೂ ಸಿಗುವುದೆಂದರೆ ನಮಗೆ ನಿಧಿಸಿಕ್ಕಿದಷ್ಟು ಖುಷಿ! ಭಜನಾಮಂಡಳಿಯಲ್ಲಿ ಉಸ್ತುವಾರಿ ನೊಡುಕೊಳ್ಳುತ್ತಿದ್ದ ಬಾಳಣ್ಣ ಎಲ್ಲಾದರೂ ಮನಸ್ಸಿದ್ದರೆ ಅವಕಾಶ ಮಾಡಿಕೊಡುತ್ತಿದ್ದ. ಆ ಅವಕಾಶಕ್ಕಾಗಿ ಆತನ ಪಕ್ಕದಲ್ಲೇ ಕೂತು ಮರ್ಜಿಗಾಗಿ ಆಗಾಗ ಆತನ ಮುಖ ನೋಡುತ್ತಾ ಎಲ್ಲರ ಜೊತೆ ಭಜನೆ ಹೇಳುವುದು ನಮ್ಮ ಕೆಲಸ. ಅಲ್ಲಿಕೆಲವರು ದೇವರ ಮೇಲಿನ ಭಕ್ತಿಗಿಂತ ಮೈಕಣ್ಣನ ಮೈಕಿನಲ್ಲಿ ಹಾಡಲಾಗುತ್ತದೆಂದೇ ಬರುತ್ತಿದ್ದರು. ಎಂದೂ ಬಾರದ ಅವರ ಸವಾರಿ ಅಂದು ಮಾತ್ರ ತಪ್ಪದೇ ಹಾಜರಾಗುತ್ತಿತ್ತು. ಬಾಳಣ್ಣನಿಗೆ ಮನಸ್ಸಿಲ್ಲದಿದ್ದರೆ ಆತ ಹಾಲು ಹಿಂಡಲು ಹೋದಾಗ ಒದೆಯುವ ಆಕಳಿನಂತೇ ತನ್ನ ಕಣ್ಣುಬೇಳೆ ತಿರುಗಿಸಿ ’ಒದ್ದ ಹಾಗೇ’ ಮಾಡಿಬಿಟ್ಟರೆ ಮತ್ತೆ ಗಂಟೆಗಟ್ಟಲೆ ಆತನ ಮುಖ ನೋಡಲೇ ಹೆದರಿಕೆಯಾಗುತ್ತಿತ್ತು. ಆ ಹೆದರಿಕೆಯಲ್ಲೂ ಇನ್ನೇನೂ ಆಗದಲ್ಲ ಎಂಬ ಸಮಾಧಾನದ ನಡುವೆ ಎಲ್ಲಾದರೂ ಅವಕಾಶ ಕೊಟ್ಟಾನು ಎಂಬ ಸಣ್ಣ ಆಸೆಯೊಂದು ಅಲ್ಲೇ ತಡೆದು ಕೂರುವಂತೇ ಮಾಡುತ್ತಿತ್ತು. ದೊಡ್ಡವರು ಹಾಡಿ ದಣಿದ ಮೇಲೆ ಜನರ ಕೊರತೆ ಬಿದ್ದರೆ ಆಗಮಾತ್ರ ಮಕ್ಕಳ ಸರದಿ ಬರುತ್ತಿತ್ತು! ಅದು ತುಂಬಾ ಅಪರೂಪ ಅನ್ನಿ. ಮೈಕಿನಲ್ಲಿ ದನಿ ತೂರಿಸಲಷ್ಟೇ ಬಂದ ಅಪರೂಪದ ಜನರಿಗೆ ಭಜನೆಗಳು ಮರೆತುಹೋಗಿರುತ್ತಿದ್ದವು. ಅವರು ಹಾಡಿ ತಾನೂ ಹಾಡಿದ್ದೇನೆ ಎಂದು ಊರಿಗೆಲ್ಲ ಕೇಳಿಸುವ ಚಟದ ನಡುವೆ ಹಾಡುತ್ತಿರುವ ಭಜನೆ ತಾಳತಪ್ಪಿದ್ದಾಗ ಹೂತ ರಥವನು ಕರ್ಣ ಎತ್ತುತ್ತಿರುವಂತೇ ಅವರಿವರು ನೆನಪಿಸಿಕೊಟ್ಟಾರೂ ಎಂದು ಕಾಯುತ್ತ ಹಾಡಿದ್ದನ್ನೇ ಹಾಡುತ್ತ ಆತಂಕದಲ್ಲಿದ್ದರೆ ಉಳಿದಕೆಲವರು ಅವರನ್ನು ನೋಡಿ ಮುಸಿಮುಸಿ ನಗುತ್ತಿದ್ದರು.
ಭಜನೆ ಕಾರ್ಯಕ್ರಮಗಳಿರುವಾಗ ಗಂಟೆಗೊಂದಾವರ್ತಿ ದೇವರಿಗೆ ಆರತಿ ನಡೆಯುತ್ತಿತ್ತು. ಊರವರು ಅವರಿವರು ಅಂತಹೇಳಿ ಹಣ್ಣು-ಕಾಯಿ, ನೈವೇದ್ಯಕ್ಕೆ ಪಂಚಕಜ್ಜಾಯ, ಎಳ್ಳುಂಡೆ, ಹುಳಿಅವಲಕ್ಕಿ, ಕೋಸಂಬರಿ, ಕಡ್ಲೆ ಉಸುಳಿ ಮುಂತಾದ ಹತ್ತಾರು ಬಗೆಯ ಪನವಾರಗಳನ್ನು ತರುತ್ತಿದ್ದರು. ಊರಿಗೆ ಬಂದ ನಾರಿ ನೀರಿಗೆ ಬರದೇ ಹೋಗುತ್ತಾಳೆಯೇ ಎಂಬ ಹಳೆಯ ಗಾದೆಯಂತೇ ದೇವರಿಗೆ ಬಂದ ಪನವಾರ ಭಜನೆಗೆ ಕೂತ ’ ಭಕ್ತಾದಿ’ಗಳಿಗೂ ಪ್ರಸಾದ ರೂಪವಾಗಿ ಸ್ವಲ್ಪ ಸ್ವಲ್ಪ ಸಿಗುತ್ತಿತ್ತು! ರಾತ್ರಿ ೯ ಘಂಟೆಗೆ ದೀಪೋತ್ಸವವಿರುತ್ತಿತ್ತು.ಆಗೊಮ್ಮೆ ಮಹಾಮಂಗಲಾರತಿಗೆ ಊರಬಹುತೇಕರು ಕೊನೇಪಕ್ಷ ಮನೆಗೊಬ್ಬರಂತೇ ಬರುತ್ತಿದ್ದರು. ಅದಾದ ಮೇಲೆ ಮತ್ತೆ ರಾತ್ರಿ ಹನ್ನೆರಡು ಗಂಟೆಗೆ ಮಂಗಲಾರತಿ ಮಾಡುತ್ತಿದ್ದರು. ಮನೆಯವರು ದೀಪೋತ್ಸವ ಮುಗಿದ ಮೇಲೆ ನಮ್ಮನ್ನೆಲ್ಲಾ ಮನೆಗೆ ಹೊರಡುವಂತೇ ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದರು. ನಾವೆಲ್ಲಾ ಸಣ್ಣವರಲ್ಲವೇ-ನಿದ್ದೆ ಇಲ್ಲದೇ ಇರಲಾಗುತ್ತಿರಲಿಲ್ಲ. ಆಮೇಲೆ ಬೆಳಗಿನವರೆಗೆ ಏನೇನು ವಿಶೇಷವಿರುತ್ತದೆ ಎಂದು ನಾವು ಯಾರನ್ನಾದರೂ ಕೇಳುತ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಯ ಆರತಿ ಮುಗಿದ ಸ್ವಲ್ಪ ಹೊತ್ತಿನ ಮೇಲೆ ಭಜನೆಯವರಿಗೆ ’ಚಾ ಪಾರ್ಟಿ’ ಇರುತ್ತದೆ ಮತ್ತೆ ಇನ್ನೊಮ್ಮೆ ಬೆಳಗಿನ ಜಾವ ೪-೫ಗಂಟೆಗೆ ಇರುತ್ತದೆ ಎಂದು ಯಾರೋ ಹೇಳಿದ್ದರು.
ಮಕ್ಕಳಿಗೆ ಕುತೂಹಲ ಶುರುವಾದರೆ ಅದು ತಣಿಯುವವರೆಗೂ ಅವಿರತವಾಗಿ ಅವರು ಅದನ್ನು ತಿಳಿಯಲು ಪ್ರಯತ್ನಿಸುತ್ತಾರಲ್ಲವೇ ಹಾಗೇ ಒಮ್ಮೆ ನಾನೂ ಮತ್ತು ಇನ್ನೊಬ್ಬ ಪಕ್ಕದ ಮನೆಯ ಹುಡುಗನೂ ರಾತ್ರಿಯೆಲ್ಲಾ ಭಜನೆ ಮಾಡುವುದಾಗಿ ಕುಳಿತುಕೊಂಡೆವು. ದೀಪೋತ್ಸವ ಆದ ಮೇಲೆ ಮನೆಗೆ ತೆರಳಿ ಊಟಮುಗಿಸಿ ಮರಳಿಬಂದೆವು. ತಲೆಗೆ ಸುತ್ತಿಕೊಳ್ಳಲು ಕೇವಲ ಒಂದು ಉಣ್ಣೆಯ ’ಮಫ್ಲರ್’ ಎನ್ನುವ ಸಣ್ಣ ಬಟ್ಟೆಯನ್ನು ಬಿಟ್ಟರೆ ಬೇರೆ ಶಾಲು ಅಥವಾ ಬೇಡ್ ಶೀಟ್ ಎಲ್ಲಾ ತಂದಿರಲಿಲ್ಲ. ರಾತ್ರಿ ಹನ್ನೊಂದು ಆಗಿರಬಹುದು. ಆಗ್ಲೇ ಚಳಿಯಾಗಲಿಕ್ಕೆ ಶುರುವಾಯಿತು. ಕುಳಿತಲ್ಲೇ ಭಜನೆ ಹೇಳುತ್ತ ಕಣ್ಣಿಗೆ ಆಗಾಗ ಜೋಂಪು ಹತ್ತಿ ತೂಗುತ್ತಿದ್ದೆವು, ಪಕ್ಕದಲ್ಲಿ ಕುಳಿತವರಿಗೆ ತಾಗಿದ ತಕ್ಷಣ ಎಲ್ಲೂ ಏನೂ ತೊಂದರೆಯಾಗಿಲ್ಲಾ ಎಂಬುದನ್ನು ಗಟ್ಟಿಮಾಡಿಕೊಂಡವರೇ ಭಜನೆಯ ಒಂದೆರಡು ಸೊಲ್ಲುಗಳನ್ನು ಜೋರಾಗಿ ಹಾಡಿ ಮತ್ತೆ ಮತ್ತದೇ ಸ್ಥಿತಿ! ಅಂತೂ ರಾತ್ರಿ ೧೨ ರ ಮಂಗಲಾರತಿಯಾಯ್ತು. ನಮ್ಮ ಕಣ್ಣೆಲ್ಲಾ ಚಾ ಪಾರ್ಟಿಗಾಗಿ ಕಾದಿತ್ತು. ಮನೆಗಳಲ್ಲಾದರೆ ಅದು ಬೇರೆ ವಿಷಯ. ಹಳ್ಳಿಯ ದೇವಸ್ಥಾನಗಳಲ್ಲಿ ಯಾವುದೇ ಅಡಿಗೆಯ ವ್ಯವಸ್ಥೆ ಇರದ ಆ ಕಾಲದಲ್ಲಿ ಅದು ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ ಎಂಬುದರ ಜೊತೆಗೆ ಅದನ್ನು ಅನುಭವಿಸುವುದೇ ರುಚಿಯಾಗಿ ಪರಿಣಮಿಸಿತ್ತು. ಊರವರು ಭಜನೆಮಂಗಲದ ಈ ದಿನವೆರಡಕ್ಕೆ ಎಲ್ಲರೂ ತನು-ಮನ-ಧನಗಳ ಜೊತೆಗೆ ದಿನಸಿ, ಹಾಲು,ಬಾಳೆಹಣ್ಣು,ಬಾಳೆಲೆ ಹಲವಾರು ಸಾಮಗ್ರಿಗಳನ್ನು ಕೊಡುತ್ತಿದ್ದರು. ದೇವಸ್ಥಾನದ ಸ್ಥಾಯೀ ಸಮಿತಿ[ವಿಶ್ವಸ್ಥ ಸಮಿತಿ] ಇದರ ಲೆಕ್ಕಾಚಾರಗಳು ಹಾಗೂ ವ್ಯವಸ್ಥೆಗೆ ಬೇಕಾಗುವ ಪಾತ್ರೆ-ಪಗಡೆ ಎಲ್ಲವನ್ನೂ ಒಟ್ಟುಗೂಡಿಸುತ್ತಿತ್ತು.
ಅಂತೂ ಬಹು ನಿರೀಕ್ಷಿತ ಚಾ ಪಾರ್ಟಿ ಬಂದೇ ಬಿಟ್ಟಿತು. ದೇವಸ್ಥಾನದ ಚಂದ್ರಶಾಲೆಯಲ್ಲಿ [ಪಕ್ಕದ ಹೊರಾವರಣದಲ್ಲಿರುವ ಚಂದ್ರಾಕಾರದ ಕಟ್ಟಡ.] ಕಟ್ಟಿಗೆಯ ಒಲೆ ಉರಿಯತೊಡಗಿತ್ತು. ನಾಣಣ್ಣ[ನಾರಯಣ] ಮತ್ತು ಸೀತಣ್ಣ[ಸೀತಾರಾಮ]ಇಬ್ಬರು ಚಾ ಮಾಡುತ್ತಿದ್ದರು. " ಚಾ ರೆಡಿ"ಅಂತ ಕರೆಬಂದ ತಕ್ಷಣ ಭಜನೆ ಮಾಡುವವರಲ್ಲಿ ಕೆಲವರು ಚಾ ಪಾರ್ಟಿಗೆ ಕುಳಿತುಕೊಳ್ಳಲು ತಯಾರಾದರು. ಭಜನೆ ಮಾಡುವುದಕ್ಕೆ ಪರವೂರ ’ಕಲಾವಿದರೂ’ ಬರುತ್ತಿದ್ದರು. ಅವರಿಗೆ ತಮ್ಮ ಕಂಠಸಿರಿಯನ್ನು ನಮ್ಮೂರ ಜನರಿಗೆ ತೋರಿಸಿಕೊಳ್ಳುವ ಹೆಚ್ಚುಗಾರಿಕೆಯಿರುತ್ತಿತ್ತು. ಅದರಲ್ಲೂ ಮದುವೆಗೆ ಬೆಳೆದ ವಯಸ್ಸಿನ ಹುಡುಗರ ಸಂಖ್ಯೆ ಜಾಸ್ತಿ. ತಾನು ಚೆನ್ನಾಗಿ ಹಾಡುವುದನ್ನು ನೋಡಿ ಯಾರಾದರೂ ಹುಡುಗಿಯರೋ ಅವರ ಅಪ್ಪಂದಿರೋ ತಮ್ಮನ್ನು ಮಾತನಾಡಿಸಿ ಸಂಬಂಧ ಕುದುರಬಹುದೇನೋ ಎಂಬ ಅನಿಸಿಕೆ ಅವರದಾಗಿತ್ತು! ಅಪರೂಪಕ್ಕೊಮ್ಮೆ ಹಾಗೇ ನೋಡಿ ಕಣ್ಣಿಟ್ಟು ಹುಡುಗರಿಗೆ ತಮ್ಮ ಮಕ್ಕಳ ಜಾತಕಗಳನ್ನು ತಲ್ಪಿಸುವ ಕನ್ಯಾಪಿತೃಗಳೂ ಇದ್ದರು ಎಂಬುದು ನಮಗೆ ಆವಾಗ ತಿಳಿಯುತ್ತಿರಲಿಲ್ಲ. ಅಂತಹ ಕಲಾವಿದರಿಗೆ ಚಾ ಪಾರ್ಟಿಯಲ್ಲಿ ಮೊದಲ ಆದ್ಯತೆ. ನಮ್ಮ ಸರದಿ ಬಂದಾಗಲೇ ತಿಳಿದಿದ್ದು ಹಾಲು ಕಮ್ಮಿಹಾಕಿರುವ ಕೆಂಪನೆಯ ಖಡಕ್ ಚಾ ಜೊತೆಗೆ ಒಂದೊಂದು ಕೊಬ್ಬರಿ ಮಿಠಾಯಿ, ಕಲಸಿದ ತೆಳುಅವಲಕ್ಕಿ[ ಕೆಂಪಕ್ಕಿಯ ರುಚಿಯಾದ ಊರ ಮಿಲ್ಲಿನಲ್ಲೇ ಮಾಡಿಸಿದ ಪೇಪರ್ ಅವಲಕ್ಕಿಗೆ ಕಾಯಿತುರಿ,ಬೆಲ್ಲ, ಮೆಣಸು, ಸಾಂಬಾರ್ ಪುಡಿ ಹಾಕಿ ಕಲಸುತ್ತಿದ್ದರು]. ಆ ರಾತ್ರಿ ಅದೂ ದೇವಸ್ಥಾನಗಳಲ್ಲಿ ಇನ್ನೇನು ಮಾಡಲು ಸಾಧ್ಯ ಬಿಡಿ. ಇಲ್ಲಿ ಚಾ ಪಾರ್ಟಿಯಲ್ಲಿ ಸಿಗುವ ಪದಾರ್ಥಗಳಿಗಿಂತ ಚಾ ಪಾರ್ಟಿಯಲ್ಲಿ ಕುಳಿತು ದೇವಸ್ಥಾನದಲ್ಲಿ ಪಡೆದ ಆ ಆತಿಥ್ಯವೇ ಒಂಥರಾ ಥ್ರಿಲ್ಲಿಂಗ್ ಆಗಿರುತ್ತಿತ್ತು. ನಮ್ಮೂರಿಗೆ ಕಲಾವಿದರು ಬಂದಂತೇ ನಮ್ಮೂರ ಹುಡುಗ ’ಕಲಾವಿದರು’ ಪಕ್ಕದ ಊರುಗಳಿಗೆ ಅಲ್ಲಿನ ಭಜನೆ ಮಂಗಲ ಕಾರ್ಯಕ್ಕೆ ಹೋಗುವುದಿತ್ತು. ಇದು ಒಂದು ರೀತಿ ಸೌಹಾರ್ದಕ್ಕೆ, ಸಂಬಂಧಕ್ಕೆ ಅನುಕೂಲವೂ ಆಗಿತ್ತು. ’ಭಾವೀ ಮಾವಂದಿರ’ ಮುಂದೆ ಹಾಡುವ ಕಲೆಗಾರಿಕೆ ಹುಡುಗರನ್ನು ಅಲ್ಲಲ್ಲೇ ಪುಳಕಗೊಳಿಸುತ್ತಿತ್ತು. ಇನ್ನು ಅಪ್ಪಿ ತಪ್ಪಿ ಮದುವೆಗೆ ಬೆಳೆದು ನಿಂತ ಹುಡುಗಿಯರೂ ಆಗಾಗ ಕಂಡರೆ[ಯಾಕೆಂದರೆ ಕಲಾವಿದರು ಹಗಲು ಹೊತ್ತಿನಲ್ಲೂ ಇರುತ್ತಿದ್ದರು] ಭಜನೆಯ ಗತಿಯೇ ಬದಲಾಗುತ್ತಿತ್ತೇನೋ ನಮಗದು ಅರಿವಿಲ್ಲ!
ಬರುಬರುತ್ತ ಮೈಕಾಸುರನ ಬಾಡಿಗೆ ಕಮ್ಮಿಯಾಯ್ತು. ಬಾಡಿಗೆ ಮೈಕಣ್ಣಗಳ ಸಂಖ್ಯೆ ಜಾಸ್ತಿಯಾಯ್ತು. ಹೀಗಾಗಿ ಊರಲ್ಲಿ ಮದುವೆ-ಮುಂಜಿ ಈ ಥರದ ಏನೇ ಕಾರ್ಯಕ್ರಮಗಳಿದ್ದರೂ ಮೊದಲಾಗಿ ಹಾಕುವುದು ಮೈಕು. ಮೈಕಿನ ಅವಾಂತರ ತಾಳಲಾರದೇ ’ಮೈಕಾಸುರ’ನೆಂಬ ಬಿರುದನ್ನು ಮೈಕಿಗೆ ನೀಡಲಾಗಿತ್ತು. ಅಲ್ಲೂ ಅಷ್ಟೇ ಹೆಂಗಸರು-ಮಕ್ಕಳು ನಾ ಮುಂದು ತಾಮುಂದು ಎಂದು ಹಾಡಲು ತರಾತುರಿಯಲ್ಲಿ ನಿಂತಿರುತ್ತಿದ್ದರು. ನಮ್ಮಂತಹ ಗಂಡುಮಕ್ಕಳೂ ಹಿಂದೇನೂ ಇರಲಿಲ್ಲ. ಆದರೆ ಮೈಕ್ ಹಿಡಿದ ಹೆಂಗಸರ ದಂಡಿನ ನಡುವೆ ನಮಗೆ ಬಹಳ ಮುಜುಗರವಾಗುತ್ತಿತ್ತು-ಹೀಗಾಗಿ ಒತ್ತರಿಸಿ ಬರುವ ಒತ್ತಾಸೆಯನ್ನು ಅಲ್ಲೇ ಒತ್ತಿಟ್ಟು ತಾನಾಗೇ ಸಿಕ್ಕರೆ ಮಾತ್ರ ಹಾಡುತ್ತಿದ್ದೆವು. ಯಾರಾದರೂ ಊರವರು " ನಿನ್ನ ಹಾಡು ಕೇಳಿದೆ ಮಾರಾಯ, ಚಲೋ ಇತ್ತು " ಎಂದುಬಿಟ್ಟರೆ ಪಿ.ಬಿ.ಶ್ರೀನಿವಾಸರಿಗೆ ಪ್ರಶಸ್ತಿ ಕೊಟ್ಟರೂ ಸಿಗದಂತಹ ಗೌರವ ನಮ್ಮೊಳಗೇ ನಮಗೆ ದಕ್ಕುತ್ತಿತ್ತು. ಅದರಲ್ಲಂತೂ ಆಚೀಚೆಯ ಮನೆಯವರು ನಮ್ಮನೆಗೆ ಬಂದು " ಇಂವ ಚಲೋ ಹಾಡ್ತ ಮಾರಾಯ " ಅಂತ ಹೇಳಿ ಒಂದು ಚಾ ಕುಡಿದು ಹೋಗಿಬಿಟ್ಟರೆ ಇನ್ನೆಲ್ಲಾದರೂ ಅವರನ್ನು ಮತ್ತೆ ನೋಡಿದಾಗ ನಾಚಿಕೆಯೋ ಅವರಮೇಲೆ ಗೌರವವೋ ಏನೋ ಸಾಧಿಸಿದೆನೆಂಬ ಹೆಗ್ಗಳಿಕೆಯ ಭಾವವೋ ಅಂತೂ ಮನಸ್ಸಿನ ಮೂಲೆಯಲ್ಲಿ ಹೇಳಲಾಗದ ವಿಶೇಷ ಭವನಾಲಹರಿಯೇ ಚಿಮ್ಮಿ ಹರಿಯುತ್ತಿತ್ತು!
ಮದುವೆಗಳಲ್ಲೂ ನಮ್ಮಲ್ಲಿ ಚಾ ಪಾರ್ಟಿಗಳಿರುತ್ತಿದ್ದವು. ಬೆಳಗಿನ ೧೧ ಗಂಟೆಯ ಒಳಗೆ ಬಂದವರಿಗೆ ತಿಂಡಿ-ಚಾ ಕೊಡುವ ಪದ್ಧತಿ ಇತ್ತು. ಅದರದ್ದೇ ಒಂದು ವಿಶೇಷ ಕಥೆಯನ್ನು ಮತ್ತೊಮ್ಮೆ ನೋಡೋಣ, ಸುಮ್ಮನೇ ಓದಿದ ಹಾಗಲ್ಲ, ಮನದಲ್ಲೇ ನಕ್ಕಿ ಮಜಾತೆಗೆದುಕೊಳ್ಳುವುದಲ್ಲ, ಎಲ್ಲಾದರೂ ಚಾ ಪಾರ್ಟಿ ಇದ್ದರೆ ಹೇಳಿ, ಒಮ್ಮೆ ಸೇರಿಕುಳಿತು ಹರಟುತ್ತ ಚಾ ಕುಡಿಯೋಣ ಆಗದೇ ?
ನೀವು ಆಗಾಗ ಹೀಗೆ ನಮ್ಮನ್ನ ನಮ್ಮ ನೆಲದ ಪ್ರವಾಸಕ್ಕೆ Free of cost ಕರ್ಕೊಂಡು ಹೋಗ್ತಿರೋದು ನಮ್ಮ ಪುಣ್ಯ...
ReplyDeleteನೆನಪಿನ ಪುಟಗಳಲ್ಲಿ ಸೇರಿ ಹೋಗಿದ್ದ ಲೋಕವನ್ನ ಮತ್ತೆ ಕಣ್ಣೆದುರು ತಂದು ನಿಲ್ಲಿಸಿದ್ದಕ್ಕೆ ಅನಂತ ನಮನಗಳು...
ಚೆನ್ನಾಗಿದೆ. ನಮ್ಮ ಊರಿನಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ತಾಳಮದ್ದಲೆ ನೋಡಿ, ಅವಲಕ್ಕಿ-ಕಡಲೆ ಉಸ್ಲಿ ತಿ೦ದು, ಅನೇಕ ಬಾರಿ ಚಹಾ ಕುಡಿದ ಅನುಭವ ನೆನಪಾಯಿತು.
ReplyDeleteಭಟ್ಟರೇ ಜಿಹ್ವಾ ಚಾಪಲ್ಯವನ್ನು ತುಂಬಾ ಚೆನ್ನಾಗಿಯೇ ವರ್ಣಿಸಿದ್ದೀರಿ . ನಿಜ ಊಟಕ್ಕಿಂತ ಒಪ್ಪೊತ್ತು ಅಂದ್ರೆ ಈಗಲೂ ಇಷ್ಟ ,ಎಲ್ಲಾದರೂ ಒಮ್ಮೆ ಅನ್ನ ಇದ್ದರೂ ಬದಿಗೆ ಅವಲಕ್ಕಿ ಮಜ್ಜಿಗೆ ಬೆಲ್ಲವನ್ನ ತಿನ್ನುವುದುಂಟು .ನೆನಪಿಸಿದ್ದಕ್ಕೆ ದನ್ಯವಾದಗಳು . (ಬಹುಶ ಇವತ್ತು ರಾತ್ರಿ ಅದೇ ) . ಬಜನಾ ಮಂಡಳಿ ಯ ಕತೆ ನಮ್ಮೂರ ಶಾರದಕ್ಕನನ್ನು ನೆನಪಿಸಿತು . ದೇವಸ್ತಾನದ ಕಾರ್ತೀಕದಲ್ಲಿ ಅವ್ಳು ಮಾಡಿದ ರವೆ ಲಾಡಿನ ರುಚಿಗೆ ಎರೆಡೆರೆಡು ಸಲ ಹೋಗಿ ತಿನ್ನುತ್ತಿದ್ದೆವು. ಒಂದು ಸಲ ಅಂತೂ ಅವಳನ್ನೇ ಮನೆಗೆ ಕರೆಸಿ ಆ ಲಾಡನ್ನು ಮಾಡಿಸಿಕೊಂಡು ತಿಂದಿದ್ದೂ ಇದೆ
ReplyDeleteಬಹಳ ಚೆನ್ನಾಗಿತ್ತು....
ReplyDeleteಬಹಳ ಆಪ್ತ ಪ್ರತಿಕ್ರಿಯೆಗಳು, ನೋಡಿ ನಮ್ಮ ಊರಿನ ಅಂದಿನ ಬದುಕು-ಬರಹ ಎಲ್ಲರಿಗೂ ಇಷ್ಟವಾಗುವಂಥದು,
ReplyDelete* ಶ್ರೀ ದಿಲೀಪ್ ಹೆಗಡೆಯವರೇ, ಒಮ್ಮೊಮ್ಮೆ ಅನಿಸುತ್ತದೆ ಇಂದಿನ ನಮ್ಮ ಮಕ್ಕಳಿಗೆ ಆ ಅಭಿರುಚಿಯೂ ಅವಕಾಶವೂ ಇಲ್ಲ ಅಂತ, ಅಂತಹ 'ಮಾವಿನ ಮರಕ್ಕೆ ಕಲ್ಲು ಹೊಡೆದು ಹಣ್ಣು ಬೀಳಿಸಿ ತಿನ್ನುವ' ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಸ್ತಾರವಾದ ಜಾಗದಲ್ಲಿ ಆಡುವ ಸೌಭಾಗ್ಯ ನಮ್ಮೆಲ್ಲರದಾಗಿತ್ತು ಅಲ್ಲವೇ ? ಇಂದಿನ ಥರ ಅಂದು ಬಹಳ ಆಟಿಕೆಗಳಿರಲಿಲ್ಲ ಆದ್ರೆ ಜನರ ಹೃದಯಗಳು ಹತ್ತಿರವಿದ್ದುದರಿಂದ ಆಟಿಕೆಗಳ ಅವಶ್ಯಕತೆಯೇ ಅಷ್ಟಾಗಿ ಬರುತ್ತಿರಲಿಲ್ಲ ಅಲ್ಲವೇ ? ನಿಮ್ಮ ಅನಿಸಿಕೆಯೇ ನನಗೂ ಬಂದು ಬರೆದಿದ್ದೇನೆ, ಧನ್ಯವಾದಗಳು
* ಶ್ರೀ ಪರಾಂಜಪೆ, ಹೌದು - ನೀವು ಹೇಳಿದಂತೆ ಕಡ್ಲೆ ಉಸ್ಲಿ ಕಾಯಂ ಪನಿಯಾರ ಅಲ್ಲವೇ ? ಚಾ ಅಂತೂ ಇರಲೇಬೇಕಿತ್ತು ! ಧನ್ಯವಾದಗಳು
* ಶ್ರೀ ವೆಂಕಟೇಶ್ , ನಮ್ಮಲ್ಲಿ ನನ್ನಜ್ಜಿ ಒಪ್ಪೊತ್ತಿಗೆ ರಾತ್ರಿ ಮಾಡಿಕೊಳ್ಳುವ ತುಪ್ಪದ ಒಗ್ಗರಣೆ ಅವಲಕ್ಕಿ ಬಗ್ಗೆ ಬರೆದರೆ ನೀವು ನಮ್ಮನೆಗೇ ಬಂದು ಬಾಯಿತೆಗೆದು ಕೇಳುತ್ತೀರಿ, ಬಾಯಲ್ಲಿ ಹರಿದ ನೀರು ಬಿಂದಿಗೆ ತುಂಬಲು ಸಾಕು ! ಅಷ್ಟು ರುಚಿಕಟ್ಟಾಗಿರುತ್ತಿತ್ತು, ಇಂದಿಗೆಲ್ಲ ಅವೆಲ್ಲ ಮಾಯ ! ಈಗ ಎಲ್ಲರಿಗೂ ಗಡಿಬಿಡಿ, ಈಗ ಗರಿಗರಿ ಬಟ್ಟೆ, ಹೊಸ ಹೊಸ ಮೊಬೈಲು ಇಂಥಾ ಗಿಲೀಟಿನ ಗೋಳೇ ಜಾಸ್ತಿ, ಹೀಗಾಗಿ ತಿನ್ನಲಿಕ್ಕೆ ಏನೋ ಒಂದು, ತಿಂದ ಮೇಲೆ ಸ್ವಲ್ಪಹೊತ್ತಿಗೆ ಏನುತಿಂದೆ ? --ಎಂದು ಕೇಳಿದರೆ ಮರೆತೆ ಹೋಗಿರುತ್ತದೆ! ಕಾಲಾಯ ತಸ್ಮೈ ನಮಃ , ತಮಗೆ ಧನ್ಯವಾದಗಳು.
* ಶ್ರೀ ಮಹೇಶ್, ತಾವು ಹಲವುದಿನಗಳ ನಂತರ ಒಮ್ಮೆ ಬಂದಿರಿ, ನಿಜವಾಗಿ ನಿಮ್ಮಲ್ಲಿ ಈ ಥರದ ಪರಿಸರ ಇತ್ತೋ ಇಲ್ಲವೋ ಗೊತ್ತಿಲ್ಲ,ಪ್ರಾದೇಶಿಕ ಭಿನ್ನತೆ ಸ್ವಲ್ಪ ಇದ್ದೇ ಇರುತ್ತದೆ, ಅಂತೂ ನೀವೂ ಇಷ್ಟ ಪಟ್ಟಿರಿ, ತುಂಬಾ ತುಂಬಾ ಧನ್ಯವಾದಗಳು
ಗೂಗಲ್ ಬಜ್ಜಿನಲ್ಲಿ ಆರೇಳು ಜನ ಲೈಕ್ ಮಾಡಿದ್ದಾರಲ್ಲ ಅವರಿಗೂ, ಓದಿದ, ಓದಲಿರುವ ಎಲ್ಲಾ ಮಿತ್ರರಿಗೂ ನಮನಗಳು
V R ಭಟ್ ಸರ್
ReplyDeleteಕೆಲವೊಮ್ಮೆ ನಮ್ಮೂರಿನ ಬರಹಗಳು ಮನೆಯ ನೆನಪು ತರಿಸುತ್ತವೆ
ನಿಮ್ಮ ಬರಹಗಳ ಆಪ್ತತೆ ಅದೇ ನೆನಪನ್ನು ತಂದಿತು
Thanks you
ReplyDeleteಹೌದು..
ReplyDeleteನಮ್ಮ ಮನೆಯ ತಿಂಡಿಗಿಂತ ಬೇರೆ ಮನೆಯ ತಿಂಡಿ ರುಚಿ ಹೆಚ್ಚು..
ನನಗಂತೂ "ನಾಮದಲಗೆ" ಎಂದರೆ ಇಷ್ಟ.. ಆದರೆ ಅದನ್ನು ಮಾಡೋದು ಅಪರೂಪ.
Thank you
ReplyDeleteವಿ ಆರ್ ಭಟ್ ಸರ್,
ReplyDeleteಚಾ ಪಾರ್ಟಿಯಂತಹ ಅನುಭವಗಳು ಇಂದು ಕೇವಲ ರೋಚಕ ಕತೆಗಳು! ಆ ಖುಷಿ ಸಂತೋಷ ಇಂದಿನ ಮಕ್ಕಳಿಗೆ ಕೇವಲ ಕತೆಯಾಗಿದೆಯೇ ಹೊರತು ಅನುಭವವಾಗಿಲ್ಲ.
ಚಂದದ ಬರಹ.......
ನಮ್ಮಲ್ಲಿಗೆ ಬನ್ನಿ, ಚಾ ಪಾರ್ಟಿ ಭಜನೆ ಮಾಡೋಣ!
Thank you Sri Praveen
ReplyDeleteಶಿವರಾತ್ರಿ ಭಜನೆಯಲ್ಲಿ ಚುರುಮುರಿ -ಮಿರ್ಚಿ ಭಜೆ ಸಮಾರಾಧನೆ, ರಾಮ ನವಮಿ ಭಜನೆಯಲ್ಲಿ ಎಗ್ಗಿಲ್ಲದ ಕೋಸಂಬರಿ -ಪಾನಕ, ಕೃಷ್ಣಜನ್ಮಾಶ್ಮಾಸ್ತಮಿಯಲ್ಲಿ ರಾತ್ರಿ ಮಿಂದು ಅರ್ಘ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಚಕ್ಕುಲಿ-ಉಂಡೆ-ಕೋಡುಬಳೆ, ರಾಯರ ಆರಾಧನೆಯ ಮೂರುದಿನ ಅಷ್ಟೋತ್ತರ ಅಕ್ಕಪಕ್ಕದ ಮನೆಯಲ್ಲಿ ಮಾಡಿ ಚಕ್ಕುಲಿ-ಉಂಡೆ-ಹಣ್ಣು-ದಕ್ಷಿಣೆಗಳ ಸಂಗ್ರಹ ಮಾಡಿ ರಾತ್ರಿಯಲ್ಲಿ ಕದ್ದು ಹೋಗಿ ಎರಡನೇ ಶೋ ಸಿನೀಮಾ ನೋಡುವ ನಮ್ಮ ಮಾಧ್ವಮಂಡಳದ ವಿಧ್ಯಾರ್ಥಿ ನಿಲಯದಲ್ಲಿನ ನೆನಪುಗಳು ಕಣ್ಣ ಮುಂದೆ ಓಡಿದವು.
ReplyDeleteಚೆಂದದ ಬರಹ.
ಸೀತಾರಾಮ್ ಸಾಹೇಬರೇ, ನೀವು ಬರದ ಹೊರತು ನಮ್ಮ ರಂಗಸ್ಥಳ ಕಳೆ ಕಟ್ಟುವುದಿಲ್ಲ, ಬಾಯಾರಿಕೆಗೆ ನೀರಿರುವುದಿಲ್ಲ, ಹಸಿದವರಿಗೆ ಊಟವೊ ತಿಂಡಿಯೋ ಸಿಗುವುದಿಲ್ಲ, ನಿಮ್ಮಲ್ಲಿ ಒಬ್ಬೆ ಒಳ್ಳೆಯ ವಿಮರ್ಶಕನ ಎಲ್ಲಾ ಅರ್ಹತೆಗಳು ಕಾಣುತ್ತವೆ, ಹೀಗಾಗಿ ತಮಗೆ ಬರಲೇ ಬೇಕೆಂದು ಒತ್ತಾಯ ಮಾಡಿ ಕರೆಯುತ್ತೇನೆ, ತಮ್ಮ ಅನಿಸಿಕೆಗಳು ಅನುಭವಿಸಲು ಮಜವಾಗಿರುತ್ತವೆ, ಧನ್ಯವಾದಗಳು
ReplyDelete