ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 10, 2010

ಆಂಜನೇಯ 'ಮಲಬಾರ' ದವನನ್ನು ಅಟ್ಟಿಸಿ ಸೋತ ಕಥೆ !



ಆಂಜನೇಯ 'ಮಲಬಾರ' ದವನನ್ನು ಅಟ್ಟಿಸಿ ಸೋತ ಕಥೆ !

ರಾಮಾಯಣ ಕಾಲದ ಒಂದು ಶುಭ್ರ ಮುಂಜಾವು, ಎಲೆಗಳಮೇಲೆ ಮಂಜಿನ ಹನಿ ಬಿದ್ದು ಪಳ ಪಳಿಸುತ್ತಿರುವ ತಣ್ಣನೆಯ ವಾತಾವರಣ, ಕೋಗಿಲೆ-ಕಾಜಾಣಗಳು ಗಿಡಮರಗಲ್ಲಿ ಅವಿತು ಅಲ್ಲೇ ಅಘೋಷಿತ ಸ್ಪರ್ಧೆಯಿಂದ ತಮ್ಮ ಗಾಯನ ಕಚೇರಿಗಳನ್ನು ಸಾರ್ವಜನಿಕ ಹಿತಾಸಕ್ತಿಗೆ ಸಮರ್ಪಿಸುವ ವೇಳೆ, ಗೋವುಗಳು ಎದ್ದು ಮೇವುಕೊಡಿ ಎಂಬರ್ಥದಲ್ಲಿ 'ಅಂಬಾ' ಎನ್ನುತ್ತಿರುವ ಸಮಯ, ಹೆಂಗಳೆಯರು ತಮ್ಮ ಮನೆವಾರ್ತೆ ಕೆಲಸಗಳನ್ನು ಪ್ರಾರಂಭಿಸಿ ಮುಂದುವರೆಸಿದ ಕಾಲ, ಪರಿಜನರು-ಪುರಜನರು ಶೌಚ-ಸ್ನಾನಾದಿ ನಿತ್ಯ ನೈಮಿತ್ತಿಕ ಕೆಲಸಗಳನ್ನು ಪೂರೈಸಿ ದೇವರ ಪೂಜೆಯಲ್ಲಿತೊಡಗಿರುವ ಸಮಯ, ಶ್ರೀರಾಮಾದಿ ರಾಜ-ಸಂಸ್ಥಾನಿಕರು ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿ ಇನ್ನೇನು ಮುಗಿಸುವ ಕಾಲ ಎಲ್ಲೋ ಒಂದು ಭಯದ ಕೂಗು ಶ್ರೀರಾಮನಿಗೆ ಕೇಳಿಬರುತ್ತದೆ,

" ರಾಮಾ ರಕ್ಷಿಸು, ರಾಮಾ ರಕ್ಷಿಸು "

ಶ್ರೀರಾಮ ತಮಗೆಲ್ಲಾ ತಿಳಿದಿರುವಂತೆ ತನ್ನ ಬದುಕಿನ ಆದರ್ಶದಿಂದ ಮನೆಮಾತಾಗಿದ್ದ ವ್ಯಕ್ತಿ, ಪ್ರಜೆಗಳ ಸುಖದಲ್ಲೇ ವೈಯಕ್ತಿಕ
ದುಃಖವನ್ನು ಮರೆತ ವ್ಯಕ್ತಿ, ಏಕಪತ್ನೀ ವೃತಸ್ಥನಾಗಿ, ತುಂಬಾ ಘನತೆ-ಗಾಂಭೀರ್ಯದಿಂದ,ಸರಳ-ಸಜ್ಜನಿಕೆಯಿಂದ ಹುಣ್ಣಿಮೆಯಚಂದ್ರನೋಪಾದಿಯಲ್ಲಿ ಕಂಗೊಳಿಸಿದ ವ್ಯಕ್ತಿ. ಯಾರಿಗೆ ಶ್ರೀರಾಮ ಗೊತ್ತಿಲ್ಲ ? [except today's little kids who are not much fortunate to learn these world epics from their parents due to overcrowded work commitment & unhealthy 'homework' -'percentage','engineering & medical seat concept' right at the junior age of 5years!] ಬಹುಶಃ ಇಂಥವರಿಗಾದರೂ ಅರ್ಜೆಂಟಿಗೆ ಇರಲಿ ಅಂತ ನಮ್ಮ ಪೂರ್ವಜರು ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ನೆನಪುಮಾಡಿಕೊಳ್ಳಲು ಅನುವುಮಾಡಿಕೊಟ್ಟರು-

ಪೂರ್ವಂ ರಾಮ ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ |
ವೈದೇಹಿ ಹರಣಂ ಜಟಾಯು ಮರಣಂ
ಸುಗ್ರೀವ ಸಂಭಾಷಣಂ|
ವಾಲೀ ನಿಗ್ರಹಣಂ ಸಮುದ್ರ ತರಣಂ
ಲಂಕಾಪುರೀ ದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಹನನಂ
ಏತದ್ಧಿ ರಾಮಾಯಣಮ್ ||

ಎಷ್ಟು ಸುಲಾಲಿತವಾಗಿದೆ ನೋಡಿ, ಬರೇ ನಾಲ್ಕು ಸಾಲುಗಳಲ್ಲಿ ಇಡೀ ರಾಮಾಯಣವನ್ನೇ ಬರೆದಿದ್ದಾರೆ! ಎಂತಹ ದೂರದರ್ಶಿತ್ವನಮ್ಮ ಪೂರ್ವಜರದು! ರಾಮಾಯಣ ಕಾಲ ಹಾಗಿತ್ತು, ನಮ್ಮ ವಿಜಯನಗರಕ್ಕಿಂತ ಅದ್ಬುತವಾಗಿತ್ತು. ಹೆಸರಿಗೆ ಕೂಡ ನಾವೆನ್ನುವುದು 'ರಾಮರಾಜ್ಯ' ಅಂತಲ್ಲವೇ ? ಪ್ರಜೆಗಳು ಸತ್ಪ್ರಜೆಗಳಾಗಿದ್ದರು! ಆಗಲೇ 'ಯಥಾ ರಾಜಾ ತಥಾ ಪ್ರಜಾ' ಎಂಬ ಮಾತು ಹುಟ್ಟಿದ್ದು! ಕೋಸಲ ದೇಶ ಸಮೃದ್ಧವಾಗಿತ್ತು. ಹಾದಿ ಬೀದಿಗಳಲ್ಲಿ ಮುತ್ತು-ರತ್ನ ವಜ್ರ-ವೈಡೂರ್ಯಗಳನ್ನು ರಾಶಿಹಾಕಿ ಮಾರುತ್ತಿದ್ದರು. ಮನೆಗಳಿಗೆ ಬೀಗಮುದ್ರೆ ಇರಲಿಲ್ಲ, ಕಳ್ಳರೇ ಇರದ ಕಾಲವದು. [ಇವತ್ತಿನ 'ಸಂಪಂಗಿ' ಥರದ ರಾಜಕಾರಣಿಗಳ ಕಾಲವಲ್ಲ,ಇವತ್ತು ಶಾಸಕರೇ ಕಳ್ಳರು !ಕಳ್ಳತನಮಾಡಿ ಸಿಕ್ಕಿಬಿದ್ದಾಗ ಎದೆನೋವು ಎಂದು 'ನಾಟಕಮಾಡಿ' ಆಸ್ಪತ್ರೆಸೇರಿ ಒಳಗಡೆಯಿಂದ ಕೇಸು ಖಲಾಸುಮಾಡಿಸುವುದು-ಖುಲಾಸೆ ಮಾಡಿಸುವುದು ಇವತ್ತಿನ ಅದ್ಬುತ ರಾಜಕೀಯ 'ಕಲೆ'! ಹೆಂಡವೇ ಅಮೃತ! ಇದು ಕಲಿಗಾಲ ] ಬೇಕಾದಷ್ಟು ಹಾಲು-ಹೈನ
ಪದಾರ್ಥಗಳಿದ್ದವು, ಬೇಕಷ್ಟು ದವಸ-ಧಾನ್ಯಾದಿಗಳಿದ್ದವು. ಪ್ರಜೆಗಳಿಗೆ ಅಂದಿನಕಾಲಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿದ್ದವು! ಪ್ರಜೆಗಳು ಉಂಡುಟ್ಟು ಸುಖವಾಗಿದ್ದರು,ತೃಪ್ತಿಯಿಂದಿದ್ದರು. ಪ್ರಜೆಗಳು ನೇರವಾಗಿ ಶ್ರೀರಾಮನಲ್ಲಿ ತಮ್ಮ ತೊಂದರೆಗಳಿದ್ದರೆ ಹೇಳಿಕೊಳ್ಳುತ್ತಿದ್ದರು, ಅವೆಲ್ಲ ಅತಿ ಶೀಘ್ರದಲ್ಲಿ ಬಗೆಹರಿಸಲ್ಪಡುತ್ತಿದ್ದವು. ಶ್ರೀರಾಮ ಪಶು-ಪಕ್ಷಿಗಳಿಂದಲೂ ಅವುಗಳ ಅಹವಾಲು ಆಲಿಸುತ್ತಿದ್ದನೆಂಬ ಒಂದು ಪ್ರತೀತಿ ಇದೆ.

ಇಂತಹ ರಾಮರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಯಾಕೀ ಆರ್ತನಾದ ?ಶ್ರೀರಾಮನಿಗೆ ಎಷ್ಟೋ ದೂರದಲ್ಲಿ ಹೊರಡಿಸಿದ ಈ ಕೂಗು ಕೇಳಿತೆಂದರೆ ನಿಮಗೆ ಅರ್ಥವಾಗಬೇಕು ! [ ಇವತ್ತು ವಿಧಾನಸೌಧದ ಎದುರುಗಡೆ ಕುಳಿತು ಕೂಗಿದರೂ ಕೇಳುವುದಿಲ್ಲ, ಇವತ್ತಿನ ಪ್ರಜೆಗಳೂ ಅಂದಿನಂತಿಲ್ಲ, ಬೆಂಕಿಪೊಟ್ಟಣದಲ್ಲಿ ಸರಿಯಾಗಿ 50 ಕಡ್ಡಿ ಇಲ್ಲದಿದ್ದರೂ ಧರಣಿಕೂರುವ ತರಗತಿ ಇವತ್ತಿನ ಪ್ರಜೆಗಳದ್ದು!] ರಾಮಚಂದ್ರ ಕಕ್ಕಾಬಿಕ್ಕಿಯಾದ ! ಹುಡುಕಲು ಅನುವಾದ. ಹೊರಟೇಬಿಟ್ಟ. ರಾಜಧಾನಿಯಿಂದ ಹೊರಗೆ ಬಂದ. ದೂರದಲ್ಲಿ ಒಂದು ಬಯಲು ಪ್ರದೇಶ....ಓ ...ಅಗೋ ......
ಅಲ್ಲಿ ಯಾರೋ ಕಾಣುತ್ತಿದ್ದಾರೆ.....ನಮ್ಮ ಹನುಮನಲ್ಲವೇ ? ಹೌದು ರಾಮನಿಗೆ ಅರ್ಥವಾಯಿತು!

ಹನುಮ ಯಾರನ್ನೋ ಗೋಳುಹುಯ್ದುಕೊಳ್ಳುತ್ತಿದ್ದ! ಯಾಕೆ? ಏನಾಯ್ತು ?

ಶ್ರೀರಾಮ ತಡಮಾಡಲಿಲ್ಲ, ನಡೆದೇ ನಡೆದ. ನಡೆದು ಆ ಸ್ಥಳಕ್ಕೆ ಬಂದ. ಬಂದು ವಿಚಾರಿಸಿದ. ಅರ್ಧ ಕುಳಿತ ಸ್ಥಿತಿಯಲ್ಲಿರುವ , ಕೂಗುತ್ತಿರುವ ಆ ವ್ಯಕ್ತಿಯನ್ನು ಉದ್ದೇಶಿಸಿ ಕೇಳಿದ --" ಯಾಕಪ್ಪಾ, ಏನು ತೊಂದರೆ ?"

" ಸ್ವಾಮೀ ಹನುಮನಿಂದ ಕಾಪಾಡಿ "

" ಯಾಕೋ ಹನುಮ ಅವನಿಗೆ ಹೊಡೆಯುತ್ತಿದ್ದೀಯಲ್ಲ? "

" ಸ್ವಾಮೀ ರಾಮಚಂದ್ರ, ಈತ ಮಲಶೋಧನೆಗೆ ಕುಳಿತಿದ್ದಾನೆ ! ಇಂತಹ ಅಸಹ್ಯಸ್ಥಿತಿಯಲ್ಲಿರುವಾಗ ನಿನ್ನ ನಾಮವನ್ನು ಜಪಿಸಿದ್ದಾನೆ, 'ರಾಮಾ ರಾಮಾ' ಎನ್ನುತ್ತಿದ್ದಾನೆ ,ಹೀಗಾಗಿ ಓಡಾಡುತ್ತ ಈಕಡೆ ಬಂದಿದ್ದ ನನಗೆ ಇದನ್ನು ನೋಡಿ ಸಹಿಸಲಾಗಲಿಲ್ಲ, ಎಲಾ ಮೈಲಿಗೆಯವನೆ ಈ ಸ್ಥಿತಿಯಲ್ಲಿ ನನ್ನ ರಾಮನನ್ನು ಜಪಿಸುವುದೇ ಎಂದುಕೊಂಡು ಒಂದು ಬಿಟ್ಟಿದ್ದೇನೆ "

" ಹನುಮಾ, ಈತ ತುಂಬಾ ಹತ್ತಿರದವನಪ್ಪಾ , ಮಲಬದ್ಧತೆಯಾಗಿ ಮೂರುದಿನಗಳ ಕಾಲ ಮಲವಿಸರ್ಜನೆ ಮಾಡಲಾಗಿರದ ಕಾರಣ ಇಂದು ಅಂತೂ ಇಂತೂ ಮಲವಿಸರ್ಜನೆಯಾಗಿ, ಅದರಿಂದ ಸ್ವಲ್ಪ ದೇಹ ಬಾಧೆ ಕಮ್ಮಿಯಾಗಿ, ಹಿತವಾಗಿ 'ರಾಮಾ ರಾಮಾ' ಎಂದು ನೆನಪುಮಾಡಿಕೊಂಡಿದ್ದಾನೆ, ಇದು ತಪ್ಪಲ್ಲವಪ್ಪಾ. ಇದು ನನಗೆ ಒಪ್ಪೇ, ಒಳ್ಳೆಯ ಭಾವನೆಯಿಂದ ಯಾರೇ ಎಲ್ಲೇ ಎಷ್ಟು ಹೊತ್ತಿಗೇ ನನ್ನನ್ನು ನೆನೆದರೂ ಅದು ನನಗೆ ನಾಟುತ್ತದೆ, ಹೀಗಾಗಿ ಈತನನ್ನು ಬಿಟ್ಟುಬಿಡು "

" ಸ್ವಾಮೀ ತಪ್ಪಾಯ್ತು, ನಾನೇ ಒಬ್ಬ ದೊಡ್ಡ ಭಕ್ತ ಅಂತ ತಿಳಿದುಕೊಂಡಿದ್ದೆ, ನನಗಿಂತಲೂ ಇಂತಹ ಕಷ್ಟದಲ್ಲಿ ಜಪಿಸಿದವರು ಹೆಚ್ಚು ಅಂತ ಮಾರ್ಗದರ್ಶನ ಮಾಡಿದೆಯಲ್ಲ ಸ್ವಾಮೀ, ಅರ್ಥವಾಯ್ತು, ಯಾವುದು ಇದುವರೆಗೆ ಅರ್ಥವಾಗಿರಲಿಲ್ಲವೋ ಈಗ ಅದು ಅರ್ಥವಾಯ್ತು, ಈತನನ್ನು ಬಿಟ್ಟಿದ್ದೇನೆ ಸ್ವಾಮೀ, ಮನ್ನಿಸು "

ನಿಮಗೂ ಈಗ ಅರ್ಥವಾಗಿರಬೇಕಲ್ಲ ? ಅಲ್ಲವೇ ? ಹೀಗೇ ಯಾವುದೇ ಸ್ಥಿತಿಯಲ್ಲಿ ನಾವಿದ್ದರೂ ಒಳ್ಳೆಯ ಸ್ಮರಣೆ, ಒಳ್ಳೆಯ ಜಪ,ನಾಮ ಜಪ ಇವಕ್ಕೆಲ್ಲ ಕಾಲ ದೇಶಗಳನ್ನು ಆತುಕೊಳ್ಳದೇ ಸಮಯವಾದಾಗ ಮಾಡಿಬಿಡಬೇಕು. ಅದರಿಂದ ಒಳಿತೇ ಹೊರತು ಕೆಡುಕಿಲ್ಲ !

ಮಂಗಲಂ ಕೌಸಲೇಂದ್ರಾಮಹನೀಯ ಗುಣಾತ್ಮನೆ|
ಚಕ್ರವರ್ತಿ ತನೂಜಾಯ ಸಾರ್ವಭೌಮಾಯ ಮಂಗಲಂ ||

4 comments:

  1. ಹೃದಯಂಗಮ ಲೇಖನ,ಇದು ಅವಿರತವಾಗಿ ಅವಿಚ್ಛಿನ್ನವಾಗಿ ಅಗ್ರೇಸರವಾಗಲಿ.
    ಉತ್ತಮ ಚಿತ್ರಗಳು.ಇದಕ್ಕಾಗಿ ಧನ್ಯವಾದಗಳು.
    ಸಣ್ಣ ಉಟ್ಟಂಕನ ಪ್ರಮಾದ-(ಮೃಗಃ ಕಾಂಚನಂ)-ಮೃಗಂ ಕಾಂಚನಂ ಎಂದಿರಬೇಕಿತ್ತಲ್ಲವೇ?
    (ಏತದ್ಧಿ ರಾಮಾಯಣಂ)-ಏತದ್ಧಿ ರಾಮಾಯಣಮ್
    ಎಂದಿರಬೇಕಿತ್ತು ಎಂದು ಭಾವಿಸುವೆ.

    ReplyDelete
  2. (ಶ್ರೀರಾಮನಲ್ಲಿ ತಮ್ಮ ತೊಂದರೆಗಳಿದ್ದರೆ ಹೇಳಿಕೊಳ್ಳುತ್ತಿದ್ದರು) ಶ್ರೀರಾಮುಲುವಿನಲ್ಲಲ್ಲವೇ !!!!!!!!!!!

    ReplyDelete
  3. ಒಂದು ಸಣ್ಣ ತೊಂದರೆಯೆಂದರೆ ಈ ಗಣಕಯಂತ್ರದ ಕೀಲಿಮಣೆಯಲ್ಲಿ ನಾವು ಬರೆದ ಅಕ್ಷರಗಳಿಗೆ ಕೆಲವೊಮ್ಮೆ ಒಡಮೂಡುವ ಅಕ್ಷರ ಬದಲಾಗಿ ಈಥರದ ಸಣ್ಣ ಅಪಚಾರಗಳು ಅನಿವಾರ್ಯ! ಆದರೆ ಕನ್ನಡದಲ್ಲಿ ಅವೆರಡೂ ಸುಮಾರಾಗಿ ಒಂದೇ ಆಗಿ ತೋರ್ಪಡುವುದರಿಂದ ಹಾಗೇ ಬಿಟ್ಟಿದ್ದೆನಷ್ಟೇ, ಕ್ಷಮಿಸಿರಿ.

    ಕೊನೇಪಕ್ಷ ಶ್ರೀರಾಮನ ಹೆಸರಿಗಾದರೂ ಕಳಂಕ ಬಾರದಿದ್ದರೆ ಸಾಕು! 'ರಾಮ'ನನ್ನು ತಿರುಚಿ ಮಂಗಾರಾಮ,ಗಂಗಾರಾಮ ಎಂತೆಲ್ಲಾ ಅನೇಕ ರಾಮರುಗಳನ್ನು ಸೃಷ್ಟಿಸಿದ್ದಾರೆ, ಕೆಲವು ಹೆಸರನ್ನು ಕೇಳಿದರೇ ಮೈ ನಡುಗುತ್ತದೆ,ಕಟ್ಟಡ ನಡುಗುವಹಾಗೆ !

    ReplyDelete
  4. ಆಗಿರುವ ಸಣ್ಣ ತಪ್ಪುಗಳನ್ನು ತಮ್ಮ ಅಭಿಪ್ರಾಯದಂತೆ ತಿದ್ದಿ ಸರಿಪಡಿಸಿದ್ದೇನೆ,ಧನ್ಯವಾದಗಳು

    ReplyDelete