ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 9, 2010

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ...



ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ...

ಮಾನವ ಮೆದುಳು ಅತೀ ಅದ್ಬುತ ! ಅದ್ಬುತ ಶಕ್ತಿಯನ್ನೂ ಪಡೆದಿದೆ. ವಿಪರ್ಯಾಸವೆಂದರೆ ನಮ್ಮಲ್ಲಿ ಅನೇಕರು ಅದರ ಪೂರ್ತಿ ಉಪಯೋಗ ಪಡೆಯುತ್ತಿಲ್ಲ! ಬಹಳಸಲ ಮೆದುಳು ಆಲಸ್ಯದ ದಾಸನಾಗಿಬಿಡುತ್ತದೆ. ಇಂತಹಮೆದುಳಿಗೆ ನಾವು ಯಾವ ರೀತಿ ಬೋಧಿಸುತ್ತೇವೋ ಆರೀತಿಯಲ್ಲಿ ಅದು ಕೆಲಸ ನಿರ್ವಹಿಸುತ್ತದೆ!

ರಾಮಾಯಣದಲ್ಲಿ ಹನುಮಂತನಿಗೆ ಸಮುದ್ರವನ್ನು ಕಳೆದು ಹಾರುವ ತಾಕತ್ತು ಇದೆಯೆಂದು ಆತನ ಸುಪ್ತಮನಕ್ಕೆ ಗೊತ್ತಿದ್ದರೂ ಅಂಗದ, ಜಾಂಬವ ಮೊದಲಾದ ಕಪಿವೀರರು ಆಂಜನೇಯನಿಗೆ ಆತನ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟು ಹುರಿದುಂಬಿಸಿದಾಗಲೇ ಆತ ಹಾರಲು ಮನಮಾಡುತ್ತಾನೆ;ಹಾರಿ ವಿಜಯಿಯಾಗಿ ಲಂಕೆಯನ್ನು ಸೇರುತ್ತಾನೆ !


ಹಲವು ದಿನಗಳಿಂದ ತಾವು ಶಹರಗಳಲ್ಲಿ ಕೇಳುತ್ತಿರುವ ಒಂದು ಶಬ್ಧ ’ವಕ್ತಿತ್ವ ವಿಕಸನ’ ಅಥವಾ ಹೀಗೆಂದ ಕೂಡಲೇ ಅನೇಕರು ಹೆಳುವುದು-" ನಾನು ಚೆನ್ನಾಗೇ ಇದ್ದೇನಲ್ಲ,ನನಗ್ಯಾಕೆ ವ್ಯಕ್ತಿತ್ವ ವಿಕಾಸದ ಕಲಿಕೆ ? " ಇಲ್ಲಿ ತಾವು ಆಸದ, ವ್ಯಕ್ತಿತ್ವ ಅನ್ನುವುದನ್ನು ಮೊದಲು ಅರ್ಥ ಮಾಡಿಕೊಂಡರೆ ವ್ಯಕ್ತಿತ್ವ ವಿಕಸನ ಆಗಿದೆಯೋ ಇಲ್ಲವೋ ಎನ್ನುವುದು ಗೋಚರಿಸುತ್ತದೆ.

ಕೆಲವರನ್ನು ಕಂಡಾಗ ಮತ್ತೆ ಮತ್ತೆ ಅವರನ್ನು ಒಮ್ಮೆ ನೋಡೋಣ ಅನಿಸುತ್ತದೆ, ತಿರುತಿರುಗಿ ನೋಡುತ್ತೇವೆ! ಕೆಲವರನ್ನು ಕಂಡರೆ ಮತ್ತೆ ನೋಡುವುದೇ ಬೇಡ ಎನ್ನಿಸುತ್ತದೆ, ತಪ್ಪಿಸಿಕೊಂಡು ಓಡುತ್ತೇವೆ! ಕೆಲವರನ್ನು ಕಂಡರೆ ಅವರ ಕೂಡ ಮಾತಾಡಲು ತುಂಬಾ ಇಷ್ಟವಾಗುತ್ತದೆ ! ಇನ್ನು ಕೆಲವರ ಕೂಡ ಮಾತನಾಡಲು ಕಷ್ಟವಾಗುತ್ತದೆ ! ಕೆಲವರು ಏನಾದರೂ ತಿಳಿಸಿಕೊಟ್ಟರೆ ಇನ್ನೂ ಕಲಿಯೋಣ ಅನಿಸುತ್ತದೆ. ಮತ್ತೆ ಕೆಲವರ ಕಲಿಸುವಿಕೆ ಇದ್ದ ದಿನ ನಾವು ಸಿನಿಮಾಗೋ ಪಾರ್ಕಿಗೋ ಹೋಗಿ ತಲೆಮರೆಸಿಕೊಳ್ಳುತ್ತೇವೆ-ತೆನ್ನಾಲಿ ರಾಮಕೃಷ್ಣನ 'ಹಾಲನ್ನು ಕಂಡರೆ ಓಡುವ ಬೆಕ್ಕಿನ' ಥರ ಆಗಿಬಿಡುತ್ತೇವೆ! ಕೆಲವರ ಬರುವಿಕೆಗಾಗಿ ಗಂಟೆಗಟ್ಟಲೆ ಕಾಯಲು ರೆಡಿ, ಇನ್ನು ಕೆಲವರು ಬರುತ್ತಾರೆಂದರೆ 'ಬಂತು ಶನಿ' ಎಂದುಕೊಳ್ಳುತ್ತ ಹುಟ್ಟಿದ ತಪ್ಪಿಗೆ ಅನುಭವಿಸಲೇ ಬೇಕು ಅಂಬ ಅನುಭಾವವನ್ನು ತಾಳುತ್ತೇವೆ. ಕೆಲವರ ನೃತ್ಯವನ್ನು ಸಾವಿರ ಕಿಲೋ ಮೀಟರ್ ದೂರವಾದರೂ ಕ್ರಮಿಸಿ ನೋಡುತ್ತೇವೆ, ಇನ್ನು ಕೆಲವರು ಪಕ್ಕದ ರಂಗಮಂದಿರದಲ್ಲೇ ನೃತ್ಯಮಾಡುತ್ತಿದ್ದರೂ ಚಾದರ ಎಳೆದುಕೊಂಡು ಮಲಗಿಬಿಡುತ್ತೇವೆ! ಕೆಲವರ ಹಾಡು ಬೆಳತನಕ ಹಾಡಿದರೂ ಕಮ್ಮಿ, ಇನ್ನು ಕೆಲವರದು ಕೇಳುವಾಗ 'ಯಾಕಪ್ಪಾ ಈ ಶಿಕ್ಷೆ ಸ್ವಾಮೀ ?' ! ಯಾಕೆ ? ಏನಾಯ್ತು ? ಇದಕ್ಕೆಲ್ಲ ಕಾರಣ ಅವರ ವ್ಯಕ್ತಿತ್ವ ಅವರು ರೂಪಿಸಿಕೊಂಡ ಬಗೆ!

ಕಿಲೋ ಮೀಟರ್ ದೂರ ಕೇಳುವಷ್ಟು ಅಸಹ್ಯವಾಗಿ ನಗುವವರು, ಹಂದಿ ಹೂಂಕರಿಸಿದಂತೆ ನಗುವವರು, ದೊಡ್ಡದಾಗಿ ವಿಚಿತ್ರವಾಗಿ ಸೀನುವವರು, ಅತಿ ಭಯಂಕರವಾಗಿ ಕೂಗುವವರು, ಊಟಮಾಡುವಾಗ 'ಪಚ ಪಚ ಪಚ ಪಚ' ಥರದ ಶಬ್ಧ ಮಾಡುವವರು,ಮೂಗಿನ ಹೊಳ್ಳೆಯಲ್ಲಿ ಆಗಾಗ ಬೆರಳಾಡಿಸಿ 'ಕಿಟ್ಟ' ತೋಡುವವರು, ಕಿವಿಯಲ್ಲಿ ಬೆಂಕಿಕಡ್ಡಿ ಅಥವಾ ಏನಾದರೂ ಕಡ್ಡಿ ಹಾಕಿ ತಿರುಗಿಸಿ ತಲೆಯನ್ನು ನಾಯಿ ಅಲ್ಲಾಡಿಸಿದಂತೆ ಅಲ್ಲಾಡಿಸುವವರು, ಮುಖ ನೋಡಿ ಮಾತಾಡದವರು, ಮುಖವನ್ನೇ ಅತಿಯಾಗಿ ನೋಡುತ್ತಾ ಮಾತಾಡುವವರು, ಆಗಾಗ ಭುಜಗಳನ್ನು ಕುಣಿಸುವವರು, ಸುಮ್ಮನೇ ತಲೆಕೆರೆದುಕೊಳ್ಳುವವರು, ಜಗತ್ತನ್ನೇ ಜಯಿಸಿದ ಪರಾಕ್ರಮಿಯ ಥರ ಕೂರುವವರು, ಏನನ್ನೋ ಕಳೆದುಕೊಂಡ ಹಾಗೇ ಯಾತನೆ ಪಡುವವರು, ಮುಖ ಗಂಟಿಕ್ಕಿಕೊಂಡೆ ಇರುವವರು, ಊಟಮಾಡಿದ ತಾಟಿನಲ್ಲೇ ಕೈತೊಳೆಯುವವರು, ಪಕ್ಕದಲ್ಲೇ ಉಗುಳುತ್ತ ನಿಲ್ಲುವವರು, ಕೆಲಸಮಾಡುವಾಗ ತಲೆತುಂಬ ಬೇರೆ ಏನೋ ಆಲೋಚನೆಗೀಡಾಗುವವರು, "ಸರ್ ಸ್ವಲ್ಪ ಪೆನ್ ಕೊಡಿ", "ಸರ್ ಸ್ವಲ್ಪ ಪೇಪರ್ ಕೊಡಿ " ,"ಸರ್ ಗಂಟೆ ಎಷ್ಟು?" ಎನ್ನುತ್ತಾ ಪರಾವಲಂಬಿಯಾಗುವವರು, ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಹಾಕಿಕೊಂಡು ಸಂದರ್ಶನಕ್ಕೆ[official interview] ಬರುವವರು, ಬರ್ಮುಡಾ ಹಾಕಿಕೊಂಡು ಬ್ಯಾಂಕ್ ಗೆ ಬರುವವರು, ಕಣ್ಣಲ್ಲೇ ಕೊಂದುಬಿಡುವಂಥವರು, ಕಣ್ಣಲ್ಲೇ ಪ್ರೇಮ ಕವಿತೆ ಹಾಡುವವರು --ಅಬ್ಬಾ ಒಂದೇ ಎರಡೇ ? ಎಷ್ಟು ಅದ್ಬುತವೀ ಲೋಕ ! ಕೇವಲ ನಮ್ಮ ಕಣ್ಣಲ್ಲೇ 256 ಬೇರೆ ಥರದ ಸಂದೇಶ ಕೊಡಬಹುದು ಅಂದರೆ ನಂಬುತ್ತೀರಾ ? ಹಾಗಾದರೆ ಇದನ್ನೆಲ್ಲಾ ತಿಳಿಸಿಕೊಡುವ ಶಾಸ್ತ್ರ 'ವ್ಯಕ್ತಿತ್ವ ವಿಕಸನ ' [personality development]

[ ಕಂತಿನ ರೂಪದಲ್ಲಿ ತಮಗೆ ಸಾಧ್ಯವಾದಾಗ ವ್ಯಕ್ತಿತ್ವ ವಿಕಸನದ ಬಗೆಗೆ ಬರೆಯುತ್ತೇನೆ ]


ವ್ಯಕ್ತಿತ್ವ ಎಂದರೇನು ?
ನೋಡಲು ತುಂಬಾ ಎತ್ತರ ಇರುವ ವ್ಯಕ್ತಿ ಬಹಳ ವಿಕಸಿತ ವ್ಯಕ್ತಿಯೇ ? ಅಥವಾ ವ್ಯಕ್ತಿ ಸುಂದರನಾ/ಳಾಗಿದ್ದರೆ ಮಾತ್ರ ವ್ಯಕ್ತಿತ್ವ ಚೆನ್ನಾಗಿದೆ ಎನ್ನುತ್ತಾರೆಯೇ ? ನಿಜವಾಗಿ ಹೇಳುವುದಾದರೆ ನಮ್ಮ ಶರೀರವನ್ನು ನೋಡಿ ಚಂದ,ದಪ್ಪ ಹೀಗೆಲ್ಲ ಇದ್ದರೆಮಾತ್ರ ಬಹಳ ಒಳ್ಳೆಯ ವ್ಯಕ್ತಿ ಅಂತ ಅನ್ನುವುದಿಲ್ಲ. ಶರೀರ ವ್ಯಕ್ತಿತ್ವದ ಒಂದು ಭಾಗ ಅಷ್ಟೇ.

ನಮ್ಮ ಗುಣಸ್ವಭಾವಗಳು, ನಮ್ಮ ನಡವಳಿಕೆಗಳು ಪ್ರತಿಯೊಬ್ಬರಲ್ಲೂ ಭಿನ್ನ ಭಿನ್ನವಾಗಿರುತ್ತವೆ. ಇಂತಹ ಭಿನ್ನ ಭಿನ್ನ ಗುಣಸ್ವಭಾವಗಳಿಂದ, ನಡವಳಿಕೆಗಳಿಂದ ನಮ್ಮ ಶರೀರವೂ ಅದಕ್ಕೆ ತಕ್ಕುದಾಗಿ ವರ್ತಿಸುತ್ತದೆ. ಉದಾಹರಣೆಗೆ- ವಿಜಯೀ ವ್ಯಕ್ತಿಯೊಬ್ಬನ ಮುಖದಲ್ಲಿ ವಿಜಯದ ಲಕ್ಷಣ, ವಿಜಯದ ಹೆಮ್ಮೆಯ ಮುಗುಳ್ನಗೆ ಇರುತ್ತದೆ. ಒಟ್ಟಾರ‍ೆ ನಮ್ಮ ಗುಣಸ್ವಭಾವಗಳು, ನಮ್ಮ ನಡವಳಿಕೆಗಳು ಹಾಗೂ ನಮ್ಮ ಶಾರೀರಿಕ ಮುದ್ರೆಗಳು ಒಟ್ಟಾಗಿ ನಮ್ಮನ್ನು ಬೇರೆಯವರಿಂದ ವಿಭಿನ್ನವಾಗಿ ತೋರುವಂತೆ ಮಾಡುತ್ತವೆ-ಇದನ್ನು ನಾವು ವ್ಯಕ್ತಿಯ ವ್ಯಕ್ತಿತ್ವ ಎನ್ನುವುದು.

ಹೇಗೆ ನಮಗೆ ಬಟ್ಟೆ, ತಿಂಡಿ ಮುಂತಾದವುಗಳಲ್ಲಿ ನಮಗೆ ಇದು ಬೇಕು ಇದು ಬೇಡ ಎಂದು ಆಯ್ದುಕೊಳ್ಳುತ್ತೇವೋ ಹಾಗೆಯೇ ನಾವು ಯಾವಥರದ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಯ್ಕೆಗೆ ಒಳಪಡುತ್ತದೆ. ಕೇವಲ ಕೆಲವೇ ಪರಿಣಿತ ತರಬೇತುದಾರರ ಮುಖಾಂತರ ಇಂತಹ ವ್ಯಕ್ತಿತ್ವದ ಬಗೆಗಿನ ಆಯ್ಕೆಯನ್ನು ಪಡೆದುಕೊಳ್ಳುವುದು ಸಾಧ್ಯ.

ವ್ಯಕ್ತಿತ್ವ ವಿಕಸನದ ತರಬೇತಿಗೆ ತರಬೇತುದಾರರು ತಮ್ಮ ಅನುಭವದ ಮೂಸೆಯಿಂದ ಹೊರತೆಗೆದ ಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ. ಅವುಗಳಿಂದ ಆ ಪರೀಕ್ಷೆಗೊಳಗಾದ ವ್ಯಕ್ತಿ ಯಾವ ತರಗತಿಯವನು/ಯವಳು ಎಂಬುದು ತರಬೇತುದಾರರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಸಮಯಮಿತಿ ಪ್ರಯೋಗದ ಒಂದೆರಡು ಉದಾಹರಣೆ ಕೊಡುತ್ತೇನೆ --

ಇಂಕ್ ಬ್ಲಾಟ್ ಟೆಸ್ಟ್ [ಶಾಯಿ ಮೆತ್ತುವ ಪರೀಕ್ಷೆ]

ಇದರಲ್ಲಿ ಸ್ವಲ್ಪ ಶಾಯಿಯನ್ನು ಒಂದು ಹಾಳೆಯಮೇಲೆ ಚೆಲ್ಲಿ ಅದನ್ನು ಮಡಚಲಾಗುತ್ತದೆ. ಹಾಳೆಯನ್ನು ಪುನಃ ಬಿಡಿಸಿದಾಗ ಅದು ವಿಧವಿಧದ ಚಿತ್ತಾರ ಮೂಡಿಸಿರುತ್ತದೆ, ಮತ್ತೆ ಮತ್ತೆ ಈ ಥರ ಮಾಡಿದಾಗ ವ್ಯಕ್ತಿಯು ಇಷ್ಟಪಡುವ ಯಾವುದೋ ನೋಟ ಅಥವಾ ಚಿತ್ರ ತರಬೇತುದಾರರಿಗೆ ತಿಳಿಯುತ್ತದೆ.

ಬಿಲ್ಡಿಂಗ್ ಬ್ರಿಕ್ಸ್ [ಮರದ ತುಂಡು ಚೌಕಗಳನ್ನು ಜೋಡಿಸುವುದು]

ವ್ಯಕ್ತಿಯ ಮುಂದೆ ಒದಷ್ಟು ಚೌಕಾಕಾರದ ಮರದ ತುಂಡುಗಳನ್ನು ರಾಶಿಹಾಕಲಾಗುತ್ತದೆ. ನಂತರ ವ್ಯಕ್ತಿಯ ಕಣ್ಣನ್ನು ಬಟ್ಟೆಯಿಂದ ಕಟ್ಟಲಾಗುತ್ತದೆ. ವ್ಯಕ್ತಿ ಆ ತುಂಡುಗಳನ್ನು ಒಂದರಮೇಲೊಂದರಂತೆ ಬೀಳದಂತೆ ಜೋಡಿಸಬೇಕು. ಕಡಿಮೆ ಸಮಯದಲ್ಲಿ ಆತ ಅದನ್ನು ಬೀಳಿಸದೇ ಎಷ್ಟು ಹೆಚ್ಚು ಎತ್ತರಕ್ಕೆ ಜೋಡಿಸುತ್ತಾನೆ ಎಂಬುದರ ಮೇಲೆ ವ್ಯಕ್ತಿಯ ಗುರಿಸಾಧಿಸುವ ಕಲೆಯನ್ನು ಗುರುತಿಸಲಾಗುತ್ತದೆ.


ಮೆಮೊರಿ ಪವರ್ ಟೆಸ್ಟ್ [ಜ್ಞಾಪಕ ಶಕ್ತಿ ಪರೀಕ್ಷೆ ]

ವ್ಯಕ್ತಿಯ ಎದುರುಗಡೆ ವಿವಿಧ ಉತ್ಪನ್ನಗಳನ್ನು/ಪದಾರ್ಥ/ವಸ್ತುಗಳನ್ನು ಇಟ್ಟು ನೋಡಲು ಹೇಳಿ, ನಂತರ ಕಣ್ಣನ್ನು ಬಟ್ಟೆಯಿಂದ ಕಟ್ಟಿ ನೋಡಿದ ಒಂದೊಂದನ್ನೂ ಹೆಸರಿಸಲು ಹೇಳುವುದು.ಕೊಟ್ಟ ಸಮಯದಲ್ಲಿ ಆತ ಎಷ್ಟು ಹೆಚ್ಚು ಸರಿಯಾದ ಹೆಸರುಗಳನ್ನು ಹೇಳುತ್ತಾನೆ/ಳೆ ಎಂದು ನೋಡುವುದು. ಇದರಿಂದ ವ್ಯಕ್ತಿಯ ಜ್ಞಾಪಕಶಕ್ತಿಯ ಬಗೆಗೆ ತಿಳಿಯುತ್ತದೆ.


ಗುರಿ ತಲುಪುವುದು ಎಲ್ಲರ ಮನಸ್ಸಿನ ಗುರಿ ! ಗುರಿಯೇ ಇಲ್ಲದಿದ್ದರೆ ಎಲ್ಲಿಗೆ ತಲಪುವುದು ಗುರಿ ? ಒಂದು ಮರದ ಮೇಲೆ ತುಂಬಾಚೆನ್ನಾಗಿರುವ ಮಾವಿನ ಹಣ್ಣು ಕಾಣುತ್ತಿದೆ, ಕಲ್ಲು ಹೊಡೆಯುತ್ತೇವೆ, ಆಯ್ತು , ಕೂಡ ಆಯ್ತು, ೧೦ ನೇ ಕಲ್ಲೂ ಹೊಡೆದಾಯ್ತು. ಆದರೆ ಹಣ್ಣು ಬೀಳುತ್ತಿಲ್ಲ ! ಸ್ವಾಮೀ ತಪ್ಪು ಕಲ್ಲಿನದ್ದೂ ಅಲ್ಲ, ಮರದ್ದೂ ಅಲ್ಲ; ಅದು ನಿಮ್ಮ ಮನಸ್ಸಿನದು! ಒಂದು ಆಳವಾದಕಾಲುವೆಯನ್ನು ಜಿಗಿದು ದಾಟಬೇಕು, ಕೆಲವರು ಸಲೀಸಾಗಿ ಹಾರಿ ದಾಟಿಬಿಡುತ್ತಾರೆ, ಇನ್ನು ಕೆಲವರು ಅನುಮಾನಿಸುತ್ತ ದಾಟಲು-ಜಿಗಿಯಲು ಬರುತ್ತಾರೆ, ಇಂಥವರು ಕಾಲುವೆಯಲ್ಲಿ ಬಿದ್ದೇಹೋಗುತ್ತಾರೆ ! ಕೆಲವರು ದಾಟುವುದೇ ಇಲ್ಲ ಅವರು ಇದ್ದಲ್ಲೇ ನಿಂತು ಏನೂಮಾಡಲಾಗದೆ ಇರುತ್ತಾರೆ, ಅಂಥವರನ್ನು 'ಪುಕ್ಕು' ಅಥವಾ 'ಪೊಕ್ಕು' ಎನ್ನಬಹುದು.

||ಸಂಶಯಾತ್ಮಾ ವಿನಶ್ಯತಿ||

ಸಂಶಯ ನಮ್ಮ ಮೇಲೆ ನಮ್ಮ ಹತೋಟಿ ಇರದ ಸ್ಥಿತಿಗೆ ನಮ್ಮನ್ನು ತಲ್ಪಿಸಿಬಿಡುತ್ತದೆ! ಸಂಶಯ ಹಲವು ಸಂದೇಹಗಳನ್ನೂ ಸೃಷ್ಟಿಸಿ ಜಗಳಗಳು-ದೊಂಬಿಗಳಿಗೆ ಕಾರಣವಾಗುತ್ತದೆ. ಅದಕ್ಕೇ ಸಂಸ್ಕೃತದಲ್ಲಿ ಸಂಶಯ ಇರುವವರು ನಶಿಸಿಹೋಗುತ್ತಾರೆ ಎಂಬ ಉಲ್ಲೇಖಇದೆ.

ಗುರಿ ಸಾಧಿಸಲು ಪಕ್ವವಾದ ಮನಸ್ಸು ಬೇಕು, ಏಕಾಗ್ರತೆ ಬೇಕು, ತಾದಾತ್ಮ್ಯತೆ ಬೇಕು, ಸರಿಯಾದ ಗುರಿ ಇರಬೇಕು, ಸರಿಯಾದ ತತ್ವ ಸಿದ್ಧಾಂತ ಬೇಕು, ಸಮಯದ ಪರಿಜ್ಞಾನ ಇರಬೇಕು, ಕಷ್ಟಪಟ್ಟು ದುಡಿಯುವ ಹಂಬಲ ಇರಬೇಕು, 'ಮಾಡಬೇಕು' ಎಂಬಹಸಿವಿರಬೇಕು, 'ಸಾಧಿಸುತ್ತೇನೆ ' ಎಂಬ ಅಚಲ ವಿಶ್ವಾಸವಿರಬೇಕು.....ಹೀಗೆ ಹಲವು ಅಂಶಗಳನ್ನು ನೆನಪಿನಲ್ಲಿಟ್ಟು ಅಳವಡಿಸಿಕೊಳ್ಳಬೇಕಾಗುತ್ತದೆ.

ಮಹಾಭಾರತದಲ್ಲಿ ದ್ರೋಣ ಮತ್ತು ಅರ್ಜುನರ ಕಥೆ ಕೇಳುತ್ತೇವೆ,ಬಿಲ್ಲು ವಿದ್ಯೆಯನ್ನು ಕಲಿಸುತ್ತಾ ದ್ರೋಣರು ಮರದಮೇಲೆ ಹಕ್ಕಿಯ ಪ್ರತಿರೂಪವೊಂದನ್ನು ಇಟ್ಟು, ಅದರ ಕಣ್ಣಿಗೆ ಗುರಿಯಿಟ್ಟು ಬಾಣ ಹೊಡೆಯಿರಿ ಎಂಬ ಒಂದು ಪರೀಕ್ಷೆಯನ್ನು ಎಲ್ಲರಿಗೂ ಕೊಡಲಾಗಿ, ಮಿಕ್ಕೆಲ್ಲ ಕೂಡ ಮರದಮೇಲೆ ಏನಿದೆಯೆಂದು ಕೇಳಿದಾಗ ಅವರೆಲ್ಲ 'ಹಕ್ಕಿ ಕಾಣುತ್ತಿದೆ' ಎನ್ನುತ್ತಾರೆ. ಆದರೆ ಅರ್ಜುನ ' ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ ಗುರುಗಳೇ,ಅದೊಂದನ್ನು ಬಿಟ್ಟು ಇನ್ನೇನೂ ಕಾಣುತ್ತಿಲ್ಲ' ಎನ್ನುತ್ತಾನೆ! ಅಷ್ಟೇಅಲ್ಲ ಗುರಿಹಿಡಿದು ಗುರಿತಲುಪಿಬಿಡುತ್ತಾನೆ;ಜಯಸಾಧಿಸುತ್ತಾನೆ.

[ಮುಂದಿನ ದಿನಗಳಲ್ಲಿ ನೋಡೋಣ .......]

8 comments:

  1. ನಾನು ಕಾಲೇಜಿನಲ್ಲಿದ್ದಾಗ ಇದರ ಬಗ್ಗೆ ಪುಟ್ಟ ಪಾಠವನ್ನು ನೆಡೆಸಿಕೊಟ್ಟಿದ್ದರು..ಆದರೆ ಇಷ್ಟು ವಿಸ್ತೃತವಾಗಿರಲಿಲ್ಲ..ಮುಂದೆ ಬರೆಯಿರಿ..ಒಂದಷ್ಟು ತಿಳಿದುಕೊಳ್ಳೋಣ...ಧನ್ಯವಾದಗಳು

    ReplyDelete
  2. ಸುಬ್ರಹ್ಮಣ್ಯರೆ, ಈ ವ್ಯಕ್ತಿತ್ವ ವಿಕಸನದ ವಿಷಯ ದಿನ ದಿನವೂ ಹೊಸ ಹೊಸ ಆಯಾಮಗಳನ್ನು ಪಡೆಯುವಂತಹದು. ಇದು ಒಂಥರಾ R & D ಮತ್ತು, surgery ಎರಡೂ ಆಗುತ್ತಿರುವಂತ ರಂಗ, ಹೇಳಿದಷ್ಟೂ ಕಮ್ಮಿಯೇ ಬಿಡಿ, ನನ್ನಿಂದ ಸಾಧ್ಯವಾದಮಟ್ಟಿಗೆ ಕಂತಿನಲ್ಲಿ ಕೊಡುತ್ತೇನೆ ಅಂದಿದ್ದೇನಲ್ಲಾ ಬರೆಯುತ್ತೇನೆ ಬಿಡಿ, ನೀವು ಓದಿ ಹೀಗೇ ಅಲ್ಲಲಿ ಪ್ರತಿಕ್ರಿಯಿಸಿ,ಧನ್ಯವಾದಗಳು

    ReplyDelete
  3. ಮಾಹಿತಿಪೂರ್ಣ ಉಪಯುಕ್ತ ಬರಹ. ಇದನ್ನ ಮುಂದುವರೆಸಿ.

    ReplyDelete
  4. ಬಹಳ ಜನ ಇದನ್ನು ಕೇಳುತ್ತಿದ್ದರು, ಹೀಗಾಗಿ ವಾರದಲ್ಲಿ ಒಂದು ದಿನ ಇದನ್ನು ತಮ್ಮೆಲ್ಲರಿಗೆ ತಲಪಿಸಲು ಇಷ್ಟಪಟ್ಟಿದ್ದೇನೆ, ಎಲ್ಲ್ಲಾ ವಿಷಯಗಳನ್ನೂ ಜೊತೆ ಜೊತೆಗೆ ಬರೆಯುತ್ತಿರುವುದರಿಂದ ಈ ವ್ಯವಸ್ಥೆ,ದಯವಿಟ್ಟು ಇದೊಂದನ್ನು ಅಡ್ಜಸ್ಟ್ ಮಾಡಿಕೊಳ್ಳಿ!ಧನ್ಯವಾದಗಳು

    ReplyDelete
  5. ವ್ಯಕ್ತಿತ್ವದ ವಿಕಸನದ ಬಗ್ಗೆ ಉಪಯುಕ್ತ ಲೇಖನ...ಚೆನ್ನಾಗಿದೆ

    ReplyDelete
  6. ಚಂದಿನ ಅವರೇ, ಇದು ಬಹಳ ಮುಖ್ಯ ಎಲ್ಲರ ಜೀವನದಲ್ಲಿ, ಧನ್ಯವಾದ

    ReplyDelete
  7. ಮಾಹಿತಿಯುಕ್ತ ಲೇಖನ....
    ಧನ್ಯವಾದಗಳು.

    ReplyDelete
  8. ಓದಿ ಹಂಚಿಕೊಂಡ ತಮಗೂ ಧನ್ಯವಾದಗಳು

    ReplyDelete