ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 7, 2011

ಇರುವುದೊಂದೇ ಭೂಮಿ ಉರಿವುದೊಂದೇ ದೀಪ


ಇರುವುದೊಂದೇ ಭೂಮಿ ಉರಿವುದೊಂದೇ ದೀಪ

ಟಪಟಪಟಪ ಹನಿಗಳನ್ನು ಮುಂಗಾರಿನ ಆರಿದ್ರಾ ಮಘಾ ಹುಬ್ಬಾ ನಕ್ಷತ್ರದ ಮಳೆಗಳು ಹನಿಸುತ್ತಿರುವಾಗಲೇ ಅಜ್ಜಿ ಕಂಬಳಿ ಕೊಪ್ಪೆ ಹಾಕಿಕೊಂಡು ಮನೆಯ ಎಡಪಾರ್ಶ್ವದಲ್ಲಿ ಎತ್ತರದಲ್ಲಿ ಇದ್ದ ಚಿಕ್ಕ ಹಿತ್ತಿಲ ಕಡೆಗೆ ಸಣ್ಣ ಕತ್ತಿ ಹಿಡಿದು ಹೋಗುತ್ತಿದ್ದಳು. ಅಜ್ಜಿ ಹೊರಗಡೆ ಹೊರಟಳೆಂದರೆ ಮಕ್ಕಳ ಮೆರವಣಿಗೆ ಜೊತೆಗೆ ಹೊರಟಿತೆಂದೇ ಅರ್ಥ. ಯಾರೇ ತಪ್ಪಿಸಿಕೊಂಡರೂ ನಾನು ಮಾತ್ರ ಅಜ್ಜಿಯ ಜೊತೆ ಹಿತ್ತಿಲಕಡೆ ಅಡಕೆ ತೋಟದ ಕಡೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಜಾರುವ ಏರಿಯ ಕಲ್ಲು [ಲ್ಯಾಟರೈಟ್]ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋಗುವಾಗ ಅಜ್ಜಿಯ ಕೈಲಿ ಹಲವು ಸಾಮಾನುಗಳಿರುವುದರಿಂದ ಕೆಲವೊಮ್ಮೆ ನಮ್ಮ ಕೈಗಳನ್ನು ಹಿಡಿದುಕೊಂಡು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಜಾರೆಯಲ್ಲಿ ಮೆಟ್ಟಿಲು ಜಾರಿ ಕುಂಡೆಗೆ ಹೊಡೆತ ಬಿದ್ದು ಕಾಲಿಗೆ ಗೀರಿನ ಗಾಯವಾಗಿ ಆ ನೋವಲ್ಲೂ ಅಜ್ಜಿಯ ಬೆನ್ನು ಹತ್ತದೇ ಬಿಡುತ್ತಿರಲಿಲ್ಲ. " ಬ್ಯಾಡ ಮಗ್ನೇ ಮಳೆ ಬೇರೆ ಬರ್ತಾ ಇದೆ ಜಾರ್ಕೆ ಬೇರೆ ಮನೆಗೆ ಹೋಗು ನಾನು ಸಣ್ಣ ಕೆಲ್ಸ ಮುಗಿಸಿ ಬೇಗ ಬತ್ತೆ ಅಕ್ಕಾ ? " ಎಂಬ ಹೇಳಿಕೆಗಳನ್ನೆಲ್ಲಾ ಸಾರಾಸಗಾಟಾಗಿ ತಿರಸ್ಕರಿಸಿದ ’ತೇನಸಿಂಗರು’ ನಾವು !

ಹಿತ್ತಿಲಿಗೆ ಹೋದ ಅಜ್ಜಿ ಮಳೆಗಾಲದ ಆರಂಭದಲ್ಲಿ ಮಣ್ಣು ಪೇರಿಸಿ ಅದರಲ್ಲಿ ಹಾಕಿದ್ದ ಮೊಗೆ[ಮಂಗಳೂರು ಸೌತೆ], ಸೌತೆ, ಹೀರೆ ಇತ್ಯಾದಿ ಹಿತ್ಲಕಾಯಿಗಳ ಬಳ್ಳಿ ಅದಾಗಲೇ ಮೊಳಕೆಯೊಡೆದು ಗುಂಗುರು ಗುಂಗುರು ಪಾದಗಳನ್ನೆಲ್ಲಾ ನೆಲಕ್ಕೆ ಊರಿ ಹಬ್ಬಿದ್ದನ್ನು ನೋಡಿ ಸಂತಸಪಡುತ್ತಿದ್ದಳು. ಹಸಿರಾದ ಬಳ್ಳಿಗಳು ಠುಂ ಠುಂ ಮೈದುಂಬಿ ಊರಗಲ ಅಡ್ಡಾದಿಡ್ಡಿ ಹರದಾಡಿ ಬೆಳೆಯತೊಡಗುತ್ತಿದ್ದವು. ಅವುಗಳ ಮಾರ್ಗವನ್ನು ನಿರ್ದೇಶಿಸುವ ಸಲುವಾಗಿ ಅಜ್ಜಿ ಅಲ್ಲಿಗೆ ಆಗ ಹೋಗುತ್ತಿದ್ದಳು. ಬೆಟ್ಟದಲ್ಲಿ ಸಿಗುವ ಹಸಿರು ಗಿಡಗಂಟಿಗಳ ಪಕ್ಕೆಗಳ ಗುಜರನ್ನು ಯಾರೋ ಆಳುಗಳು ಕೊಟ್ಟಿಗೆಗೆ ಸೊಪ್ಪು ತರುವಾಗ ಕಾಡೀ ಕಾಡೀ ತರಿಸಿಕೊಂಡು ಅವು ಕೈಗೆ ಸಿಕ್ಕಿದ ಮಾರನೇ ದಿನ ಈ ಕೆಲಸ ನಡೆಯುತ್ತಿತ್ತು. ಹರೆಯುವ ಬಳ್ಳಿಗಳ ಇಕ್ಕೆಲಗಳಲ್ಲಿ ಎತ್ತರದ ಅಡಕೆ ದಬ್ಬೆಗಳನ್ನು ಹೂತು ಮೇಲೆ ಅಡ್ಡಡ್ಡ ಮತ್ತೊಂದು ಅಡಕೆ ದಬ್ಬೆ ಕಟ್ಟಿ ಮಧ್ಯೆ ಸಾಲಾಗಿ ಗುಜರುಗಳನ್ನು ಆನಿಸಿ ಕಟ್ಟಿದರೆ ಬೆಳೆಯುವ ಬಳ್ಳಿಗಳು ಗುಜರಿನ ಆಸರೆಯನ್ನು ಪಡೆದು ಮೇಲಕ್ಕೆ ಹಬ್ಬುತ್ತಿದ್ದವು.

ಹಬ್ಬಿದ ಬಳ್ಳಿಗಳಿಗೆ ತಿಂಗಳಲ್ಲೇ ಬಿಳಿ/ಹಳದಿ ಹೂವುಗಳು ಆಮೇಲೆ ನಿಧಾನಕ್ಕೆ ಹೂವು ಉದುರಿಬೀಳುವ ಸಮಯದಲ್ಲೇ ಅದರ ಹಿಂಭಾಗಕ್ಕೆ ಅಂಟಿಕೊಂಡೇ ಬರುವ ಚಿಕ್ಕ ಚಿಕ್ಕ ಪೀಚುಗಾಯಿಗಳು. ಅಲ್ಲಲ್ಲಿ ಹಾಗೆ ಕಾಣುವ ಪೀಚುಗಾಯಿಗಳನ್ನು ನೋಡಿದಾಗ ಅಜ್ಜಿಯ ಕಣ್ಣುಗಳಲ್ಲಿ ಮುಖದಲ್ಲಿ ಅರಳುವ ಸಂತಸದ ಆ ಭಾವ ಇವತ್ತಿಗೂ ಮರೆಯಲಾಗದ್ದು, ಚಿತ್ರದಲ್ಲೋ ಕವನದಲ್ಲೋ ಕಟ್ಟಿಡಲಾಗದ್ದು. ಬೆಟ್ಟದಲ್ಲಿ ಆಡುವ ಕೋಡಗಳು[ಮಸಿಮಂಗಗಳು] ಹಾರುತ್ತಾ ಜೀಕುತ್ತಾ ಊರಕಡೆ ಬರುವ ವಾಡಿಕೆಯಂತೂ ಇದ್ದೇ ಇತ್ತು. ತೋಟದ ಬದುವಿನಲ್ಲಿ ಬೆಳೆದ ಬಾಳೆಯ ಗೊನೆಗಳನ್ನೂ ಹಿತ್ತಲಲ್ಲಿ ಇರುವ ಬೇರಹಲಸು, ಪಪ್ಪಾಯಿ ಕಾಯಿಗಳನ್ನೂ ಜೊತೆಗೆ ಸಿಗಬಹುದಾದ ಇನ್ನಿತರ ಹಣ್ಣು-ಕಾಯಿಗಳನ್ನು ತಿನ್ನಲು ವಕ್ಕರಿಸುವ ಕೋಡಗಳು ಬಂದರೆ ಹಾಗೆಲ್ಲಾ ಮುಗಿಸದೇ ಬಿಡುವ ಪ್ರಾಣಿಗಳೇ ಅಲ್ಲ! ಮಂಗ ಹೊಕ್ಕ ಬಾಳೆತೋಟ ಎಂಬ ಗಾದೆಯೇ ಇದೆಯಲ್ಲಾ ? ಹಾಗೆ ಹಾರಿಬರುವ ಕೋಡಗಳು ಹಿತ್ತಲ ಪೀಚುಗಾಯಿಗಳನ್ನು ಎತ್ತಿಕೊಂಡು ಬಳ್ಳಿಗಳ ಬೆಳವಣಿಗೆಗೆ ಹಾಕಿದ ಚಪ್ಪರ ಮುರಿದು ಅನಾಚಾರವೆಸಗಿ ಹೋಗುವ ದಿನಗಳೂ ಇದ್ದವು.

ಕೋಡಗಳು ಬಂದ ಸುದ್ದಿ ಯಾರಾದರೊಬ್ಬರ ಕಣ್ಣಿಗೆ ಕಂಡು ಹಬ್ಬುತ್ತಿದ್ದಂತೇ ಜಾಗಟೆ ಬಡಿದು ಬರೇ ಪುಸ್ಸೆನ್ನುವ ಥಂಡಿಹಿಡಿದ ಲಕ್ಷ್ಮೀಪಟಾಕಿ ಹಚ್ಚಿ ವಿಚಿತ್ರವಾಗಿ ನಾವೆಲ್ಲಾ ಹುಯ್ಕೋ ಹುಯ್ಕೋ ಹಾಕಿ ಗಂಟಲು ಬಿದ್ದುಹೋಗುವ ವರೆಗೂ ಕೂಗಿ ಊರಿಗೆ ಊರೇ ಪುಕ್ಕಟೆ ಜಾತ್ರೆ ಅನುಭವಿಸುವ ರೀತಿ ಆಗಿಬಿಡುತ್ತಿತ್ತು. ಕೆಲವೊಮ್ಮೆ " ಅಮ್ಮಾ ಮಂಗ ಬಂದದ್ರೋ " ಎಂದು ಎಚ್ಚರಿಸಿದ ಆಳುಗಳೂ ಕೋಡಗಳನ್ನು ಓಡಿಸಲಿಕ್ಕೆ ಸಹಾಯ ಮಾಡಬೇಕಾದ ಪರಿಸ್ಥಿತಿ ಇತ್ತು. ಒಂದು ಗುಂಪಿನಲ್ಲಿ ಕನಿಷ್ಠ ೧೮-೨೦ ಕೋಡಗಳು ಇರುತ್ತಿದ್ದವು. ಅಂತೂ ಹೆದರಿಸಿದ ಮೇಲೆ ಆ ಗಡಿಬಿಡಿಯಲ್ಲೂ ಪೀಚುಗಾಯಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಹಾರಿಹೋಗಿ ಮನೆಗಳ ಹಂಚಿನಮೇಲೆ ಕೂತುಬಿಡುತ್ತಿದ್ದವು.

ಹಾರುವಾಗ ಹಂಚು ಒಡೆದು ಮನೆಯೊಳಗೆಲ್ಲಾ ಮಳೆ ನೀರು ಸುರಿಯುವುದೂ ಇತ್ತು. ಹಾಗೊಮ್ಮೆ ಹಂಚು ಒಡೆದರೆ ದುರಸ್ತಿ ಅಥವಾ ಬದಲಾಯಿಸುವ ಕೆಲಸ ನಡೆಸುವುದೇ ಕಷ್ಟವಾಗುತ್ತಿತ್ತು. ಕೋಡಗಳ ಉಪದ್ವ್ಯಾಪ ಜಾಸ್ತಿಯಾದಾಗ ಮನೆಯ ಬಾಕಿಜನ ಅಜ್ಜಿಯ ಹಿತ್ತಿಲನ್ನೇ ಗುರಿಯಾಗಿಸಿ ಅಣಕಿಸುತ್ತಿದ್ದರು. ಒತ್ತಾಸೆಯಿಂದ ಬೆಳೆಸಿದ ಹಿತ್ತಿಲಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದಾಗ ಅಜ್ಜಿಯ ಮುಖದಲ್ಲಿನ ಆ ನೋವಿನ ಕ್ಷಣಗಳೂ ಗೋಚರಿಸುತ್ತಿದ್ದವು. ಅಜ್ಜಿಯ ಅಂದಿನ ನೋವಿನಲ್ಲಿ ನಾವೂ ಸಹಭಾಗಿಗಳೇ ಬಿಡಿ; ಅದು ಅವರಿಗೂ ಗೊತ್ತು. " ಥೂ ದರಿದ್ರ ಕೋಡ ಎಲ್ಲಿತ್ತೋ ಸಾಯಕ್ಕೆ ಬಂದೆಲ್ಲಾ ಹಾಳ್ಮಾಡ್ಬುಡ್ತು " ಎನ್ನುತ್ತಾ ಬಿದ್ದ ಚಿಕ್ಕಮಕ್ಕಳೆದುರಲ್ಲಿ ನೆಲವನ್ನು ಗುದ್ದಿ " ನೋಡು ಈ ನೆಲಕ್ಕೆ ಹೊಡದೆ ಸುಮ್ನಿರು " ಎಂದು ಪುಸಲಾಯಿಸಿದ ರೀತಿ ಅಜ್ಜಿಗೆ ನಮ್ಮದೇ ಸಾಂತ್ವನ ಕೊಡುವ ವೈವಾಟಿತ್ತು!


ಎಳೆಯ ಸೌತೇ ಕಾಯಿಗಳು ತಿನ್ನಲು ಬಲುರುಚಿ ಅಲ್ವೇ ? ನಮ್ಮಲ್ಲಿ ಎಳೆಯ ಸೌತೇಕಾಯಿಗಳನ್ನು ಕೊಯ್ಯಲು ಬಿಡುತ್ತಿರಲಿಲ್ಲ. ಕೃಷ್ಣಾಷ್ಟಮಿಯ ದಿನ ಮೊದಲನೇ ಸೌತೇಕಾಯಿ ಕೋಸಂಬರಿ ಕೃಷ್ಣಯ್ಯನಿಗೆ ಕೊಟ್ಟಾದಮೇಲೇ ನಾವೆಲ್ಲಾ ಸೌತೆಕಾಯಿ ತಿನ್ನುವ ಅಲಿಖಿತ ಕಾಯ್ದೆಯೂ ಜಾರಿಯಲ್ಲಿತ್ತು. ಎಷ್ಟೆಂದರೂ ಉಂಡೆ ಕೊಡಿಸುವ ಕೃಷ್ಣಯ್ಯ ನಮಗೂ ಪ್ರೀತಿಯೇ ಅಂದ್ಕಳಿ. ಆದರೂ ಚಪ್ಪರದಲ್ಲಿ ಅಲ್ಲಲ್ಲಿ ಕಣ್ಣುಮಿಟುಕಿಸಿ ಜೋತಾಡುವ ಎಳೆಯ ಸೌತೇಮಿಡಿಗಳು ನಮ್ಮನ್ನು ಕೃಷ್ಣಾಷ್ಟಮಿಗೂ ಮೊದಲೇ ತಮ್ಮತ್ತ ಕರೆದುಬಿಡುತ್ತಿದ್ದವು! ಕೃಷ್ಣಯ್ಯ ಬೆಣ್ಣೆಕದ್ದ ಕಥೆಯನ್ನೆಲ್ಲಾ ಕೇಳುತ್ತಿದ್ದ ನಮಗೆ ಸೌತೇ ಮಿಡಿಗಳಲ್ಲಿ ಕೆಲವನ್ನು ಹಾರಿಸಿಬಿಟ್ಟರೆ ಎಂಬ ಆಲೋಚನೆ ಬಂದಿದ್ದೇ ತಡ ಅದನ್ನು ಪ್ರಾಯೋಗಿಕವಾಗಿ ಮಾಡಿ ಆಮೇಲೆ ಅದನ್ನೇ ಪಕ್ಕಾಮಾಡಿ ಲೆಕ್ಕತಪ್ಪಿಸಿ ತಿನ್ನುವುದೂ ಆಗೋಯ್ತು. ಹಾವುರಾಣಿ, ಹಸಿರು ಬಣ್ಣದ ಕಣ್ಕುಟ್ಟುವ ಹಾವು ಇವೆಲ್ಲಾ ಚಪ್ಪರದ ಬಳಗದವರು ಎನ್ನಬೇಕೇನೋ. ಅವುಗಳಮೇಲೆ ತಪ್ಪು ಹೊರಿಸಿ ಎಲ್ಲೋ ಅವುಗಳೇ ಎಳೆಯ ಮಿಡಿಗಳನ್ನು ಕಚ್ಚಿ ಉದುರಿಸಿದವೇನೋ ಎಂಬಂತೇ ಅಜ್ಜಿಯೆದುರು ಸಂಭಾವಿತ್ಗೆ ಮೆರೆದ ಜನ ನಾವು...ಎಷ್ಟೆಂದರೂ ಮಕ್ಕಳಲ್ಲವೇ? ಹಾಗಂತ ಮಿಡಿಗಳನ್ನು ಲಪಟಾಯಿಸುವಾಗ [ ಬೇಡ ಬೇಡ 'ಲಪಟಾಯಿಸು' ಶಬ್ದ ಯಾಕೋ ಹೆಚ್ಚಿನ ತೂಕದ್ದು ಎನಿಸುತ್ತದೆ ಸಾಮಾನ್ಯದ್ದನ್ನೇ ಬಳಸೋಣ], ಹಾರಿಸುವಾಗ ಒಂದೆರಡು ಬಾರಿ ಅನುಮಾನಾಸ್ಪದವಾಗಿ ಬಂದ ಅಜ್ಜಿಕೈಗೆ ಸಿಕ್ಕಾಕಿಕೊಂಡು ಮುಖ ಬಿಳಿಚಿಕೊಂಡ ವ್ಯಕ್ತಿಗಳೂ ನಾವೇ ಬಿಡಿ! ಆಮೇಲೆ ನಮಗೆ ಮಿಡಿಸೌತೆ ಪ್ರೀತಿಯೆಂಬ ಕಾರಣಕ್ಕೆ ಆಗಾಗ ಕೆಲವು ಮಿಡಿಗಳು ಅಜ್ಜಿಯ ಕೃಪೆಯಿಂದ ದೊರೆಯುತ್ತಿದ್ದವು.

ಚಪ್ಪರದಮೇಲೆ ಕಣ್ಣುಕುಟ್ಟುವ ಹಸಿರು ಹಾವು ಇರುತ್ತಿತ್ತಲ್ಲಾ ಅದು ತೆಳ್ಳತೆಳ್ಳಗೆ ಇರುವ ಸೈಜ್ ಜೀರೋ ಹಾವು! ಮನುಷ್ಯರ ಕಣ್ಣಿಗೇ ಗುರಿಯಿಟ್ಟು ಹಾರಿಬಿಡುತ್ತದಂತೆ ಅದು, ಅಪ್ಪಾ ನಮೆಗೆಲ್ಲಾ ಅದನ್ನು ಕಂಡರೇ ಒಂಥರಾ ಹೆದರಿಕೆ, ಆದರೂ ಸಣ್ಣಗಿರುವುದರಿಂದಲೋ ಏನೋ ತೀರಾ ಜಾಸ್ತಿ ಭಯವೂ ಆಗುತ್ತಿರಲಿಲ್ಲ. ಅಜ್ಜಿಯ ಕಥೆಗಳಲ್ಲಿ ಹಾವು ಚೇಳು ಉಡಮೊದಲಾದ ಹಲವಾರು ಜೀವ ವೈವಿಧ್ಯಗಳು, ಸರೀಸೃಪಗಳು, ಸಸ್ತನಿಗಳ ವರ್ಣನೆಯಿರುತ್ತಿತ್ತು. ಇಂತಿಂಥಾ ಪ್ರಾಣಿ ಇಂತಿಂಥಲ್ಲಿ ವಾಸವಿರುತ್ತದೆ, ಅದು ಇಂತಿಂಥಾ ಆಹಾರ ತಿನ್ನುತ್ತದೆ ಎಂಬೆಲ್ಲಾ ಮಾಹಿತಿ ನಮಗೆ ಸಿಕ್ಕಿಬಿಡುತ್ತಿತ್ತು. ಮೊದಲಾಗಿ ಶತಪದಿ ಸಹಸ್ರಪದಿ ಹೊರಗಡೆ ಜಗುಲಿಗೆ ದೌಡಾಯಿಸಿದಾಗ ಹೆದರಿದ್ದ ನಾವು ಆಮೇಲಾಮೇಲೆ ಸಣ್ಣ ಸಾಮಾನ್ಯ ಪ್ರಾಣಿಗಳಿಗೆಲ್ಲಾ ಕ್ಯಾರೇ ಮಾಡ್ತಿರಲಿಲ್ಲ ಬಿಡಿ. ಜಗುಲಿ ಕಟ್ಟೆಗೆ ಹರೆದು ಬರುವ ಚೋರಟೆ[ಸಹಸ್ರಪದಿ] ಹಿಸ್ಗ[ಬಸವನ ಹುಳು] ಇವನ್ನೆಲ್ಲಾ ಕಾಲಲ್ಲೇ ಸರಿಸಿ ಬಿಸಾಕಿದ ಅಸಾಮಾನ್ಯ ಧೈರ್ಯಶಾಲಿಗಳು ನಾವು, ಏನ್ತಿಳ್ಕೊಂಡಿದೀರಿ !

ಹೊಯ್ಸಳರಿಗಿಂತಲೂ ನಮ್ಮ ತೂಕ ತುಸು ಜಾಸ್ತಿಯೇ ಎಂದುಕೊಳ್ಳುತ್ತಿರುವಾಗಲೇ ಹೊಸ ಸಂಗತಿಯೊಂದು ನಮ್ಮ ಉಡದಾರವನ್ನೇ ಸಡಿಲುಮಾಡಿಬಿಟ್ಟಿತ್ತು ! ಮೂರ್ತಜ್ಜನ ಮನೆ ಅನಂತ ಅತ್ಯಂತ ಸ್ಫುರದ್ರೂಪಿ ಹುಡುಗ. ಓರಗೆಯಲ್ಲಿ ನಮಗಿಂತ ತುಸು ಹಿರಿಯ. ಶಾಲೆಯಲ್ಲಿ ನಮಗೂ ಅವನಿಗೂ ನಾಕು ಕ್ಲಾಸುಗಳ ಅಂತರ; ನಾವೆಲ್ಲಾ ಒಂದನೇ ತರಗತಿ ಇದ್ದಾಗ ಅತ ೫ನೇ ತರಗತಿ ಓದುತ್ತಿದ್ದ. ಹೀಗೇ ಆಡುತ್ತಾ ಇದ್ದವ ಬಚ್ಚಲುಮನೆಯಲ್ಲಿ [ಹಳ್ಳಿಯ ಮನೆಗಳಲ್ಲಿ ಬಚ್ಚಲು ಮನೆ ಮನೆಯ ಹೊರಗಡೆ ಪ್ರತ್ಯೇಕ ಜಾಗದಲ್ಲಿರುತ್ತಿತ್ತು. ಅಲ್ಲಿ ರಾತ್ರಿ ವಿದ್ಯುದ್ದೀಪವಾಗಲೀ ಮತ್ಯಾವುದೇ ದೊಡ್ಡ ಬೆಳಕಿನ ವ್ಯವಸ್ಥೆಯಾಗಲೀ ಇರುತ್ತಿರಲಿಲ್ಲ. ಹಗಲು ಹೊತ್ತಿನಲ್ಲೇ ಮೋಡ ಕಪ್ಪುಗಟ್ಟಿದಾಗ ಒಳಗಡೆ ಕತ್ತಲೆ ಇರುತ್ತಿತ್ತು.] ಗೋಡೆಯಲ್ಲಿ ಬಿಲವೊಂದಿತ್ತಂತೆ. ಅದರಲ್ಲಿ ಕಡ್ಡಿ ಹಾಕಿ ಆಡುತ್ತಿರುವಾಗ ಏನೋ ಕಚ್ಚಿದಂತಾಗಿ ಕೂಗಿಕೊಂಡನಂತೆ. ಪಾಲಕರು ಬಂದು ನೋಡುತ್ತಾರೆ ಹಾವುಕಡಿದ ಗುರುತು ಆತನ ಬೆರಳಿನ ಮೇಲೆ ಮೂಡಿತ್ತು.

ಮರುಕ್ಷಣ ಕಂಗಾಲಾದ ಪಾಲಕರು ಮಗನನ್ನು ದೂರದ ಆಸ್ಪತ್ರೆ [ಆಗಷ್ಟೇ ತಾಲೂಕು ಪ್ರದೇಶದಲ್ಲಿ ಕ್ಲಿನಿಕ್ಕುಗಳು ಆರಂಭವಾಗಿದ್ದವು]ಎತ್ತಿಕೊಂಡು ಹೋದರು. ಬಾಡಿಗೆ ವಾಹನ ತರಿಸಿ ಅದರಲ್ಲಿ ಹೋಗುವ ವರೆಗೆ ಅನಂತನ ಮೈ ಕಪ್ಪುಗಟ್ಟುತ್ತಾ ಸಾಗಿತ್ತು. ಆಸ್ಪತ್ರೆಗೆ ಹೋದ ಪಾಲಕರು ವೈದ್ಯರನ್ನು ಕಂಡು ಏನೇ ಪ್ರಯತ್ನಮಾಡಿದರೂ ನೊರೆಯುಗುಳಿದ ಅನಂತ ಅನಂತದಲ್ಲಿ ಲೀನವಾಗೇಬಿಟ್ಟ. ಸತ್ತ ಅನಂತನ ಕಳೇಬರ ಹೊತ್ತು ಊರಿಗೆ ಮರಳಿದ ಪಾಲಕರ ರೋದನ ಮತ್ತು ವೇದನೆ ನಮಗೆಲ್ಲಾ ಆ ಕಾಲಕ್ಕೆ ಅಷ್ಟೆಲ್ಲಾ ಅರ್ಥವಾಗದ್ದು. ರೋಷದಿಂದ ಊರಜನ ಬಚ್ಚಲುಮನೆಯ ಗೋಡೆಯನ್ನು ಅಗೆದು ಅಡಗಿದ್ದ ಕೃಷ್ಣಸರ್ಪ[ಕಾಳಿಂಗ]ವನ್ನು ಹೊರಗೆಳೆದು ಕೊಂದೇಬಿಟ್ಟರಂತೆ. ಊರಲ್ಲಿ ಆಗೆಲ್ಲ ಒಬ್ಬರಿಗೊಬ್ಬರು ತುಂಬಾ ಆಪ್ತರಾಗಿದ್ದರು; ಈಗಿನಂತೇ ಬೀಜೇಪಿ, ಜೇಡಿಎಸ್ಸು, ಕಾಂಗ್ರೆಸ್ಸು ವಗೈರೆ ಇರಲಿಲ್ಲ. ನೋವು-ನಲಿವುಗಳಲ್ಲಿ ಪರಸ್ಪರ ಭಾಗಿಗಳು, ಊರಮಂದಿ ಪರಸ್ಪರ ಕಷ್ಟಸುಖಕ್ಕೆ ಆಗಿಬರುತ್ತಿದ್ದರು. ಊರಜನೆರಲ್ಲಾ ಸೇರಿ ಸತ್ತ ಅನಂತನಿಗೆ ಅಂತಿಮ ಗೌರವವನ್ನೂ ಸಮರ್ಪಿಸಿ ಆತನ ಕಳೇಬರವನ್ನು ನೆಲದಲ್ಲಿ ಹೂಳಿದರು ಎಂಬುದು ಮಕ್ಕಳಾದ ನಮಗೆ ತಿಳಿದ ಸಂಗತಿ.

ಈ ಲೋಕದಲ್ಲಿ ಅರಳಬೇಕಾಗಿದ್ದ ಸುಂದರ ಮಗುವನ್ನು ಹಾವೊಂದು ಬಲಿಪಡೆದಿತ್ತು. ಅಲ್ಲಿ ಮಗುವಿನ ತಪ್ಪೂ ಇರಲಿಲ್ಲ, ಹಾವಿನ ತಪ್ಪೂ ಇರಲಿಲ್ಲ. ಪಾಲಕರ ನಿರ್ಲಕ್ಷ್ಯ ಎನ್ನಲೂ ಬರುವುದಿಲ್ಲ; ಅದು ವಿಧಿಯಿಚ್ಛೆ ಅಷ್ಟೇ. ಹಾವು ತನ್ನನ್ನು ರಕ್ಷಿಸಿಕೊಳ್ಳಲು ಬಿಲದಲ್ಲಿ ಹುದುಗಿತ್ತು, ಮಗು ಆಟವಡುತ್ತಾ ಸಹಜವಾಗಿ ಬಿಲಕ್ಕೆ ಕೋಲು ತೂರಿತ್ತು, ಮಗು ಆಡಿಕೊಂಡಿದೆ ಎಂದು ಸುಮ್ಮನಿದ್ದ ಪಾಲಕರು ತಂತಮ್ಮ ನಿತ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದರು--ನೀವೇ ಹೇಳಿ ಇಲ್ಲಿ ಯಾರದು ತಪ್ಪು? ಅಂತೂ ನಮ್ಮೆಲ್ಲರ ಪ್ರೀತಿಯ ಗೆಳೆಯ ಅನಂತ ಕಾಣದ ಲೋಕಕ್ಕೆ ಮರಳಿಯೇ ಬಿಟ್ಟಿದ್ದ. ನಿನ್ನೆಯವರೆಗೆ ಕಂಡಿದ್ದ, ಒಟ್ಟಿಗೇ ಶಾಲೆಯ ಬಿಡುವಿನಲ್ಲಿ ಆಡಿದ್ದ ಅನಂತ ಸತ್ತುಹೋದ ಎಂಬ ಸಂಗತಿ ಜೀರ್ಣಮಾಡಿಕೊಳ್ಳಲು ಎಳೆಯ ಮನಸ್ಸಿನ ನಮಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಬಹಳ ಕಾಲ ಆ ನೆನಪು ನಮಗೇ ಕಾಡುತ್ತಿತ್ತು-ಈಗಲೂ ಬರೆಯುತ್ತಿದ್ದೇನೆ ಎಂದಮೇಲೆ ನಿಮಗೆ ಅರ್ಥವಾಗಬೇಕು!

ಬದಲಾದ ಇಂದಿನ ಪರಿಸರದಲ್ಲಿ ಪೇಟೆ ಪಟ್ಟಣಗಳಲ್ಲಿ ವರ್ಗಾ ವರ್ಗೀ ಆಗಿಹೋಗುವ ಸರಕಾರೀ ಯಾ ಖಾಸಗೀ ನೌಕರರ ಚಿಕ್ಕಮಕ್ಕಳಲ್ಲಿ ಕಲಿಯುವ ಶಾಲೆಗಳನ್ನು ಅನಿವಾರ್ಯವಾಗಿ ಬದಲಾಯಿಸಿದಾಗ, ಅನ್ಯೋನ್ಯ ಸ್ನೇಹಿತರು ಅಗಲಬೇಕಾಗಿ ಬಂದಾಗ ಹೇಳಿಕೊಳ್ಳಲಾಗದ ನೋವು ಅನುಭವಿಸಬೇಕಾಗಿ ಬರುತ್ತದೆ. ನೋವು ದೊಡ್ಡದಲ್ಲದಿದ್ದರೂ ಮಕ್ಕಳ ಮನಸ್ಸಿನಲ್ಲಿ ಅದು ಕಾಡುತ್ತದೆ, ಮುಂದೆ ಜೀವನದ ದಾರಿಯಲ್ಲಿ ಎಲ್ಲೋ ಒಮ್ಮೆ ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರು ಸಿಕ್ಕಿದರೆ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಮಕ್ಕಳಲ್ಲಿ ಜಾತಿ-ಮತಗಳ ಗೊಂದಲವಿರುವುದಿಲ್ಲ. ಶ್ರೀಮಂತ, ಬಡವ ಎಂಬ ಭಾವನೆಗಳೂ ಇರುವುದಿಲ್ಲ. ಅವರೆಲ್ಲಾ ಒಂದೇ--ಆಡಬೇಕೋ ಆಡಬೇಕು, ಒಟ್ಟಾಗಿ ಇದ್ದು ಸಂತಸಪಡಬೇಕು. ಆವೆಮಣ್ಣಲ್ಲಿ ಮನೆ ಕಟ್ಟಬೇಕು, ಅದೇ ಮಣ್ಣಿನಲ್ಲಿ ಉಂಡೆ, ಕಜ್ಜಾಯ[ಅತ್ರಾಸ], ಕೋಡುಬಳೆ, ಚಕ್ಕುಲಿ ಎಲ್ಲವನ್ನೂ ಮಾಡಬೇಕು. ವೈದ್ಯ-ರೋಗಿ, ಕಳ್ಳ-ಪೋಲೀಸ್, ಅವಲಕ್ಕಿ-ತವಲಕ್ಕಿ, ಹಾಣೆಗೆಂಡೆ[ಚಿನ್ನಿದಾಂಡು], ಹುತುತು[ಕಬಡ್ಡಿ] ಖೋಖೋ, ಮರಕೋತಿ ಹೀಗೇ ಆಡಿದ ಯಾವುದನ್ನೂ ಮರೆಯಲಾರವು. ವಿಶಾಲಸಾಗರ ದಡದ ಮರಳಿನಲ್ಲಿ ಬೆರಳಿಂದ ಹೆಸರನ್ನು ಕೊರೆದು ಅಲೆಬಂದು ಅದು ಅಳಿಸುವುದನ್ನು ನೋಡುವ ಕೌತುಕ ಮಿಳಿತ ಆನಂದ ಬಲಿತ ಮನಸ್ಸುಗಳಲ್ಲಿ ಇರುವುದಿಲ್ಲ! ಹತ್ತುಸಾವಿರದ ಕಂತೆಯನ್ನು ಆಟದ ಸಾಮಾನುಗಳ ಪಕ್ಕಕ್ಕೆ ಇಟ್ಟರೆ ಅವು ಅದನ್ನು ಮೂಸೂ ನೋಡುವುದಿಲ್ಲ, ಮಕ್ಕಳಿಗೆ ದುಡ್ಡಿನ ವ್ಯಾಮೋಹ ಇರುವುದಿಲ್ಲ. ಮಕ್ಕಳು ಎಂದಿದ್ದರೂ ಮಕ್ಕಳೇ. ಬಾಲ್ಯಕಾಲದಲ್ಲಿ ಕೃಷ್ಣ-ಕುಚೇಲ ಗೆಳೆಯರಾಗಿದ್ದುದು ಬಡತನಕ್ಕೆ ಪರಮೋಚ್ಚ ಉದಾಹರಣೆಯಾದ ಸುದಾಮನ ಹಿಡಿಯವಲಕ್ಕಿಯನ್ನೇ ತಿಂದು ಸ್ವರ್ಣ ಸೌಧವನ್ನೇ ಅನುಗ್ರಹಿಸಿದ ಗೆಳೆಯ ಕೃಷ್ಣನನ್ನು ಯಾರುತಾನೇ ಮರೆಯಲು ಸಾಧ್ಯ?

ಈಗಿನ ಸಮಾಜದಲ್ಲಿ ಜನ ಬಡಿದಾಡುವುದನ್ನು ನೋಡಿದರೆ ಒಮ್ಮೊಮ್ಮೆ ಹೀಗೊಂದು ಅನಿಸಿಕೆಯ ಉದ್ಭವವಾಗುತ್ತದೆ :

ಇರುವುದೊಂದೇ ಭೂಮಿ ಉರಿವುದೊಂದೇ ದೀಪ[ಅಗ್ನಿ]
ಹರಿವುದೊಂದೇ ನೀರು ತಿರುವುದದೆ ಗಾಳಿ
ತೆರೆ ಬೆಳ್ಳಿ ಬೆಳಕಿನದು ಆಗಸದ ಅವಕಾಶ
ಮರೆತವಗೆ ಮತಭೇದ | ಜಗದಮಿತ್ರ

ಸರಿಯಾಗಿರುವಾಗ ಮನುಷ್ಯ ಮನುಷ್ಯರಲ್ಲಿ ಜಾತಿ-ಮತ ಜನಾಂಗಗಳೆಂಬ ಹಲವು ಭೇದಗಳನ್ನು ಕಾಣುತ್ತೇವೆ. ನಿಸರ್ಗವೇ ತಿರುಗಿಬಿದ್ದಾಗ ಎಲ್ಲವನ್ನೂ ಬಿಟ್ಟು ಮನುಷ್ಯ ಮನುಷ್ಯತ್ವಕ್ಕೆ ಬೆಲೆಕೊಡುತ್ತಾನೆ. ಅಲ್ಲೀವರೆಗೂ ಹಾರಾಟ ತಪ್ಪಿದ್ದಲ್ಲ. ಅಲೆಕ್ಸಾಂಡರ್ ಇಡೀ ಜಗತ್ತನ್ನೇ ಗೆದ್ದವನಾದರೂ ಆತನ ಮನಸ್ಸನ್ನು ಗೆಲ್ಲಲು ಆತನಿಂದಲೇ ಆಗಲಿಲ್ಲ. ಈ ಲೋಕದ ಜಗಳ, ದೊಂಬಿ, ಗಲಾಟೆ, ಮುಷ್ಕರ, ಧರಣಿ, ಹಿಂಸೆ ಈ ಎಲ್ಲಾ ಮೂರು ಪ್ರಮುಖ ಉದ್ದೇಶಗಳ ಸುತ್ತ ಘಟಿಸುತ್ತವೆ. ಹೆಣ್ಣು, ಹೊನ್ನು, ಮಣ್ಣು--ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಅದನ್ನು ಬಿಡಲು ಸಾಮಾನ್ಯ ಮನುಷ್ಯರಿಂದ ಸಾಧ್ಯವಾಗುವುದಿಲ್ಲ.

ಗೆಳೆತನದ ಪರಿಧಿಯಲ್ಲಾದರೂ ಈ ವಿಷಯಾಸಕ್ತಿಗೆ[ಇಂದ್ರಿಯಾಸಕ್ತಿಗೆ] ಕಡಿವಾಣ ಬೀಳಲಿ, ಸ್ನೇಹಿತರೇ ಅಧಿಕವಾದಾಗ ದ್ವೇಷ-ವೈಷಮ್ಯ ಕಮ್ಮಿಯಾಗುತ್ತದೆ ಎಂಬ ಭಾವನೆ ಮೂಡುತ್ತದೆ. ಸಹಜವಷ್ಟೇ ? ನನ್ನೆಲ್ಲಾ ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು, ಧನ್ಯವಾದಗಳು.


Saturday, August 6, 2011

ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್ !


ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್ !

ಶಂಭೋ ಶಂಕರ !

ದಿನವೂ ವೇದಾಂತವನ್ನೇ ಕೊರೆದರೆ ಸಂಸಾರಿಗಳಾದ ನಮ್ಮಲ್ಲಿ ಬಹುತೇಕರಿಗೆ ಅದು ರುಚಿಸುವುದಿಲ್ಲ ಅಲ್ಲವೇ? ಯಾಕೆಂದರೆ ನಾವು ರಾಜಸರು. ರಾಜಸರಿಗೆ ರಾಜಸ ಗುಣಗಳುಳ್ಳ ಆಹಾರ, ವಿಹಾರ ಅಥವಾ ಸುರಿದುಣ್ಣುವ ಪರಮಾನ್ನ ಗೊರೆತದ ನಿದ್ರೆ ಎಲ್ಲಾ ಬೇಕು. ಆಚೆಮನೆ ಉಪ್ಪಿನಕಾಯಿ, ಉಪ್ಪಿಟ್ಟು, ಪಲ್ಯ, ಸಾರು ಈಚೆಮನೆ ಕಡಬು, ಎಳ್ಳುಂಡೆ, ತಂಬಿಟ್ಟು ರಾಜಾರಾಯರ ಮನೆ ಬೆಣ್ಣೆ ಮುರುಕು, ನಾಣ ಗೌಡ್ರ ಮನೆ ಮುದ್ದೆ-ಬಸ್ಸಾರು ಇದೆಲ್ಲಾ ಸೇರಿ ನಮ್ದೊಂಥರಾ ವಿಚಿತ್ರಾನ್ನದ ಬದುಕು. ಸೃಷ್ಟಿಸಿದ ಬೊಮ್ಮಂಗೂ ಇಲ್ಲದ ಕಾಳಜಿ ನಮ್ಗೇ ಇದೆ ಈ ಪ್ರಪಂಚದ ಬಗ್ಗೆ!

ಛೆ ಛೆ ಅಳ್ತೆ ಗಿಳ್ತೆ ಎಲ್ಲಾ ಇಲ್ದೆ ಸುಮ್ನೇ ಹೇಳೋ ಜನವೇ ಅಲ್ಲ ನಾವು. ಅದ್ಯಾಕ ಹಾಗ್ ನೋಡ್ತೀರಿ. ಗೋಪಾಲನ ದುಡ್ನಲ್ಲಿ ಬೈಟೂ ಕಾಫೀ ಕುಡಿಯೋದು, ಶೆಟ್ರ ಅಂಗಡೀಲಿ ಸಾಲದ ಸಿಗರೇಟು ಸೇದೋದು, ಪಕ್ಕದ ಸೀಟ್ನಲ್ಲಿ ಕೂತವರ ಕೈಲಿಂದ ಡೈಲಿ ಪೇಪರ್ ಇಸ್ಗೊಂಡು ಸಲ್ಪ ನೋಡ್ಕೊಕ್ಹೋಗಿ ಅವರು ಬಸ್ ಇಳಿದು ಹೋದರೂ ವಾಪಸ್ ಕೊಡದೇ ಓದೋದು, ಬ್ಯಾಂಕಿನಲ್ಲಿ ಬೇರೆಯವರ ಪೆನ್ನು ಕಿತ್ಗೊಂಡು ಬರೀತಾ ಬರೀತಾ ನಮ್ ಜೇಬಿಗೆ ಬಿಟ್ಗೊಂಡ್ಹೋಗೋದು ಇವೆಲ್ಲಾ ಇಲ್ದಿದ್ರೆ ಜೀವನದಲ್ಲಿ ಏನೇನೂ ಹುರುಳೇ ಇರೋದಿಲ್ಲ!

ಹಾಗಂತ ದೇಶ ತಿರುಗೋದಾಗ್ಲೀ ಕೋಶ ಓದೋದಾಗ್ಲೀ ನಮ್ಗೆ ಬೇಕಾಗೇ ಇಲ್ಲ. ಯಾಕಂದ್ರೆ ಹಿಂದ್ನೋರೇ ಹೇಳ್ಬುಟ್ರಲ್ಲ "ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್" ಎಂದು. ಅವರು ಹೇಳಿದ್ ಮೇಲೆ ಮುಗ್ದೇ ಹೋಯ್ತು. ದಿನಾ ಒಂದಷ್ಟು ಸೀರಿಯಲ್ ನೋಡ್ಬುಟ್ರೆ ಸಾಕು. ಮುಕ್ತ ಮುಕ್ತ, ಮನೆಯೊಂದು ಮೂರು ಸಾವಿರ ಬಾಗಿಲು ! ಹಬ್ಬಗಳನ್ನೂ ಅಲ್ಲೇ ಆಚರಿಸಿಬಿಡ್ತೇವೆ ನಾವು. ನಾಗರಪಂಚಮಿ ಇರ್ಲಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಹೀಗೇ ಬಂದಿದ್ದೆಲ್ಲಾ ಅಲ್ಲೇ. ಹಾಗಂತ ನಮಗೇನೂ ಗೊತ್ತಿಲ್ಲಾ ಅಂದ್ಕೋಬೇಡಿ ಸ್ವಾಮೀ ಶ್ರಾವಣ ಮಾಸ ಅಂದ್ರೆ ದೇವರೆಲ್ಲಾ ಉಪಾಸಬಿದ್ದು ಭೂಮಿಗೆ ಬತ್ತವೆ! ಬಂದ ನಾನಾಥರದ ದೇವರಿಗೆ ಮೊಸರನ್ನವಂತೆ, ಪೊಂಗಲ್ಲು ಇನ್ಕೆಲವಕ್ಕೆ ಪುಳಿಯೋಗರೆ ಹೀಗೇ ಪೂಜಾರಪ್ಪ ಹೇಳ್ತಾಯಿತ್ತಪ್ಪ! ಆಯ್ತು ತಗಳಿ ಸೇವೆ ಮಾಡೋಮಿ ಏನ್ ತೊಂದ್ರೆಯಿರಾಕಿಲ್ಲ ಅಂದ್ವು ನಾವು.

ನಮ್ಮಪ್ಪ ನಮ್ಕೊಟ್ಟಿರದ್ ಅಷ್ಟಕಷ್ಟೇ ಐತೆ, ಸ್ಕೂಲು ಅಂತ ಹೋತಿದ್ವಲ್ಲಾ ಅಲ್ಲೇ ನಮ್ಮೆಂಡ್ರುಗೋಳು ವೈನಾಗಿ ಓಡ್ಯಾಡ್ಕಂಡಿದ್ರು. ಕಂಡಿದ್ದೇ ಹಿಂದ್ಬಿದ್ವಾ ಅವ್ರಪ್ಪಂದ್ರು ಅವ್ರತಾತಂದ್ರು ಸೇರ್ಕೆಂಡು ನಮ್ಗೇ ಕೊಡೋದು ಅಂತಾವ ನಿರ್ಣಯಿಸ್ಬುಟ್ರು. ಜಾಸ್ತಿ ಏನಿಲ್ಲಾ ಅಳೀಮಯ್ಯನ ಮರ್ವಾದೆಗೆ ಕಮ್ಮಿ ಆಗ್ದಂಗೆ ಇದೇ ಬೆಂಗಳೂರಾಗೆ ಒಂದ್ ಸೈಟು, ಒಂದ್ ಸೂಟು, ಆ ಕಾಲಕ್ಕೆ ಹೆಚ್.ಎಮ್.ಟಿ ಗೋಲ್ಡ್ ವಾಚು, ಬೀರು, ಫ್ರಿಡ್ಜು, ವಾಷಿಂಗು, ಬಜಾಜ್ ಸ್ಕೂಟ್ರು, ಖರ್ಚಿಗೊಂದಷ್ಟು ಇದ್ಕಳ್ಳಿ ಅಂತಾವ ಅಕೌಂಟ್ನಗೆ ಎರಡಲಕ್ಸ ಇದಿಷ್ಟು ಮಾತ್ರ ಕೊಟ್ಟವ್ರೆ. ಗಂಡೆಂಬೋ ಗಂಡಸರ್ಗೆ ಇಷ್ಟ ಮಾತ್ರಾ ಕೊಟ್ರೆ ಸಾಕಾ ? ನಾಮೂ ಬಿಡ್ಲಿಲ್ಲ ಹೆಂಡ್ರನೆಲ್ಲಾ ಅಗಲಗಲ ತೌರ್ಗೆ ಕಳಸ್ಕ್ಯಬುಟ್ಟು ತಗಂಬಾ ಅಂತದ್ವಿ. ಮಾವ್ಗೇನ್ ನಾವ್ ಬಿಟ್ಟೀಲ್ ಸಿಕ್ಕುದ್ವಾ ? ಓ ಬಾಳಾ ಚೆನ್ನಾಗಿದೆ ನೀವ್ಯೋಳೋದು. ಏನೋ ನಮ್ಮಪ್ಪ ನಮಗೆ ಕೊಡ ಕಾಗ್ಲಿಲ್ಲ ಅಂದ್ಬುಟ್ಟು ನಾವೇನ್ ಅಬ್ಬೆ ಪಾರಿ ಜನ ಅಲ್ಲ ಸ್ವಾಮೀ, ತಿಳ್ಕಳಿ ನಾವು ಇದೇ ಬೆಂಗಳೂರಾಗೇ ಉಟ್ ಬೆಳದಿರಾದು, ಸಲ್ಪ ನಿಮ್ಮಷ್ಟು ಓದ್ದೋರಲ್ಲ ಒಪ್ಗಳವ, ಹಾಗಂತ ಏನೂ ತಿಳೀದೇ ಇರೋ ಮೂದೇವಿಗ್ಳು ಅಂತೆಲ್ಲಾ ಯೋಳುದ್ರೆ ಯಾವ್ ನನ್ಮಗಂಗೆ ಕೋಪ ಬಾರಕಿಲ್ಲ ಯೋಳಿ!

ವ್ಯವಾರ್ದಾಗೆ ನಮ್ಮಷ್ಟ್ ಮುಂದೆ ಯಾರೂ ಹೋಗಾಕಿಲ್ಲ. ಬರ್ಮುಡಾ ಬಂತಾ ಬಂದ್ಮಾರ್ನೇ ದಿನವೇ ಹಾಕಂಡ್ವಿ, ನಮ್ಮೆಂಡ್ರು ನೈಟೀನೇ ಎಲ್ಲಾ ಕಡೆಗೂ ಬಳ್ಸೋದು, ನಾವೂ ಅಷ್ಟೆ ಬ್ಯಾಂಕ್ಗೋಗ್ಲಿ, ಸಿನ್ಮಾ-ನಾಟ್ಕ-ಮಾಲು ಗೀಲು ಅಂತ ಎಲ್ಲಾನಾ ಓಗ್ಲಿ ಬರ್ಮುಡಾ ಟೀಸರ್ಟು ಆರಾಮಾತದೆ! ಮೊನ್ನೆ ನಮ್ಮ ಫ್ರೆಂಡ್ ದೀರು ಸಿಕ್ಕುದ್ರು ಹವ್ರೂ ಅದನ್ನೇ ಡಜನ್ ಡಜನ್ ಮಡ್ಗವ್ರಂತೆ. ಮೊಬೈಲ್ ಹುದ್ಗಾಟ್ನೆ ಮಾಡಿದ್ದೇ ನಾವು. ಬೆಂಗ್ಳೂರಗೆ ಹದೂ ಹಾ ಕಾಲ್ದಗೆ ಸ್ಪೈಸು ಜೆಟಿಎಮ್ಮು ಎರಡೇ ಇತ್ತಲ್ಲಾ ಹಾಗ್ಲೇ ಅವರು ಟಾವರ್ ಕರ್ಚ್ಗೇ ಇಲ್ಲಾ ಕಣ್ಸಾಮೀ ನೀವೂ ತಗಳಿ ಅಂತಾವ ಮನೆ ಬಾಗ್ಲಿಗೆ ಹುಡೀಕ ಬಂದುದ್ರು. ಅಂಥಾ ಯೋಗ್ತೆ ಉಳ್ಳ ಜನಾ ನಾವು ತಿಳ್ಕಳಿ!

ಮಾವ ಕೊಟ್ಟ್ ಸೈಟಿತ್ತಲ್ಲಾ ಖಾಲೀ ಸೈಟು ಯಾವ್ ನನ್ಮಗುಂಗೆ ಬೇಕು ಮನೆ ಕಟ್ಟಿಸ್ಕೊಡಿ ಇಲ್ಲಾ ಮಗಳ್ನ ನಿಮ್ಮನೆಲೇ ಇಟ್ಕಬುಡಿ ಅಂದಿದ್ದಕ್ಕೆ ನಮ್ಮಾವ ೧೬೦೦ ಚದರದ್ ದೊಡ್ ಮನೆ ಕಟ್ಸಾಕ್ಬುಟ್ಟ. ಇದ್ಕಳ್ಳಿ ಬಿಡಿ ಅಳೀಮಯ್ಯ ಮೊಮ್ಮಕ್ಳಗಾದ್ರೂ ಆತದೆ ಅಂತ ಬಾಳ ಧಾರಾಳಿ ಬುಡಿ. ಹೀಗ ಹದೇ ಮನೇ ಬಿಲ್ಡಿಂಗ್ ನಗೆ ಪಾಲ್ಟೀಶನ್ ಹೊಡ್ದು ಒಟ್ಟೂ ಹತ್ ಮನೆ ಐತೆ. ಒಂದ್ ನಮಗಾ ಮಿಕ್ಕಿದ್ದೆಲ್ಲಾ ಬಾಡ್ಗೆ ಕೊಟ್ಟೀವಿ. ತಿಂಗ್ಳಾ ಒಂದ್ ಲಕ್ಸ ಬಾಡ್ಗೆಗೇನ್ ಮೋಸ ಇಲ್ಲ ಬುಡಿ! ಇದ್ಕಿಂತಾ ಇನ್ನೇನ್ ಬೇಕು ಮನ್ಸಂಗೆ ?

ಮದ್ಲೆಲ್ಲಾ ಪ್ಯಾಕ್ಟ್ರಿ ತಾವ ಹದೂ ಇದೂ ಕೆಲ್ಸ ಮಾಡ್ತಿದ್ವಾ ಹೀಗ ಸಾಕು ಹಂತವ ಬುಟ್ಬುಟ್ಟೀವಿ. ಎಂಗೂ ವರಮಾನ ಬತ್ತದೆ ಇನ್ಯಾಕೆ. ಬೇರೇನೂ ತೊಂದ್ರಿಲ್ಲಾ ನಮ್ಮ ಕಿರೀ ಮಗಳವಳಲ್ಲಾ ಕಾಲೇಜ್ಗೆ ಹೋತಾ ಇದ್ಲಾ ಹಲ್ಲಿ ಅದ್ಯಾವನೋ ಅಡ್ಕಸಬಿ ನನ್ಮಗ ಸಿಕ್ಕಾಕಂಬುಟ್ಟು ಲವ್ವು ಲವ್ವು ಹಂತಾವ ಗಂಟ ಬಿದ್ಕಬುಟ್ನಾ ಹಿವ್ಳೂ ಅವನ ಪಕ್ಸವೇ ಆಕ್ಕಬುಟ್ಟವಳೆ ! ತಮ್ದಿಬ್ರುದೂ ಶಾನೆ ದಿವ್ಸಾ ಆಯ್ತು ಅದಾಗಲೇ ಮೂರ್ತಿಂಗ್ಳು ನಿಮ್ಮಗೀಗೆ ನಂಗೇನ ಮದ್ವೆ ಮಾಡ್ಕಬೇಕು ಹಂದೇನಿಲ್ಲ, ಮಾಡ್ಕಬೇಕು ಹಂದ್ರೆ ಒಂದ್ ಸೈಟು ಸೇರ್ದಂಗೆ ಒಂದಷ್ಟು ಯೋಳ್ತೀವಿ ಕೊಡಿ ಆಮ್ಯಾಕೇಯ ಬಾಕಿ ಮಾತು ಅಂತವ್ನೆ.. !

" ಹುಡ್ಗಾ ಯೆಂಗವ್ನೆ "

" ಕಾಣಕೇನೋ ಬೋ ಸಂದಾಕೇ ಅವ್ನೆ....ಪರ್ವಾ ಇಲ್ಲ ಒಳ್ಳೇ ಮಂತನ ಅಂತಾವ ಯಾರ್ನೋ ಇಚಾರ್ಸ್ದಾಗ ಗೊತ್ತಾಯ್ತು "

" ಕೊಟ್ಬುಡಿ ಅತ್ಲಗೆ ....ನಿಮ್ಗೂ ವೈಸಾಯ್ತಾ ಹೋತದೆ. ಹಿನ್ನು ಗಂಡ್ಮಕ್ಳು ನಾಳೆದಿನ ತಂಗೀನ ಚೆನ್ನಾಗ್ ನೋಡ್ಕತವೆ ಹನ್ನೋಕಾಗಲ್ಲ, ನಿಮ್ಕಣ್ಮುಂದೆ ನೀವ್ಗಟ್ಟಿ ಹಿರೋವಾಗ್ಲೆ ಮಗುಳ್ನ ಮದ್ವೆ ಮಾಡ್ಕ್ಯಬುಟ್ರೆ ಸಲೀಸು "

" ಬುಡ್ರೀರೀ ನಂಗಿನ್ನೂ ನಲ್ವತ್ ವರ್ಸ, ಆಕಿಗಿನ್ನೂ ನನ್ನರ್ಧ ! ಇಷ್ಟ ಬೇಗ ಮಾಡಾಕ್ಬುಡೋದಾ ? ಹೋಕ್ಕಳಿ ಆ ನನ್ಮಗಂದು ಡಿಮ್ಯಾಂಡು ತುಂಬಾ ಐತೆ "

" ಹಿರ್ಲಿ ಬಿಡಿ ನಿಮ್ದೇ ಜನಿಕ್ಕೆ ಕೊಟ್ಟಾಂಗಾತದೆ! ನಿಮ್ಮಳ್ಗು ಮೊಮ್ಮಕ್ಳು ಆರಾಮಾಗಿ ತಿಂದ್ಕತವೆ ಬುಡಿ "

" ಹದ್ಯಾರು ಬರ್ತಿದಾರಲ್ಲ ? "

" ಚಲ್ವಯ್ಯ "

" ಬನ್ನಾ ಬರ್ಲಿ ಬರ್ಲಿ ಆವಯ್ಯಂಗೆ ಇನ್ನು ಮಧ್ಯಾಹ್ನತಕ ಬೇರೇ ಕೆಲ್ಸಿರಂಗಿಲ್ಲ "

" ವಿಸ್ಯ ನಿಮ್ಮಲ್ಲೇ ಇರ್ಲಿ ಚಲ್ವಯ್ಯಂಗೆ ತಿಳುದ್ರೆ ಊರ್ಗೆಲ್ಲಾ ಡಾಣಾ ಡಂಗ್ರಾ "
------
ಮಾತುಕತೆ ಮುಂದುವರಿದಿತ್ತು. ಪಾರ್ಕಿನ ಕಲ್ಲಿನ ಬೆಂಚಿನಮೇಲೆ ಪ್ರತಿನಿತ್ಯ ಮೂರ್ನಾಕು ಜನರದ್ದು ಇದೇ ರೀತಿ ಪ್ರಹಸನ, ಕಾವ್ಯ, ಮಹಾಕಾವ್ಯ ಲಹರಿ. ಬೆಂಗಳೂರಿನಲ್ಲಿರೋ ಅನೇಕ ಜನ ಲ್ಯಾಂಡ್ ಲಾರ್ಡ್‍ಗಳು ಇದೇ ರೀತಿ. ಇಲ್ಲೇ ಹುಟ್ಟಿ ಬೆಳೆದಿರೋ ಹಲವು ಜನರಿಗೆ ಅಪ್ಪನೋ ಮಾವನೋ ಮಾಡಿಟ್ಟ, ಕೂಡಿಟ್ಟ ಆಸ್ತಿಯನ್ನು ಅನುಭವಿಸುತ್ತಾ ಮಜಾ ಉಡಾಯಿಸುವುದೇ ಕೆಲಸವಾಗುತ್ತಿತ್ತು. ಯಾವಾಗ ಸೈಕಲ್ ಮುಂದೆ ತಿರುಗಿತೋ ಆಗ ಕೆಲವರಿಗೆ ಜವಾಬ್ದಾರಿ ಬಂತು; ಇನ್ನೂ ಕೆಲವರಿಗೆ ಬರುವುದರಲ್ಲೇ ಇದೆ !

ಎಲ್ಲಾ ರೀತಿಯ ಅನುಕೂಲಗಳಿದ್ದರೂ ಜೀವನಕ್ರಮದಲ್ಲಿ ಶಿಸ್ತು ಇಲ್ಲವೇ ಇಲ್ಲ. ಸಂಸ್ಕಾರದ ಬಗ್ಗೆ ಬರೆಯೋದೇ ಬೇಡ ಬಿಡಿ. ಸ್ನಾನ ವಾರಕ್ಕೆ ಒಂದು ಸರ್ತಿ ಆದರೆ ಸಾಕು; ಅದೂ ಯಾರಿಗೋ ಬೇಸರವಾಗದಿರಲಿ ಎಂಬುದಕ್ಕಾಗಿ. ತಮ್ಮ ಮೈಯ್ಯ ವಾಸನೆಯಲ್ಲೇ ಮಹಾಕಾವ್ಯ ಬರೆಯುವ ತಾಕತ್ತುಳ್ಳ ಇಂತಹ ನಿಸ್ಸೀಮರನ್ನು ನಮ್ಮ ಕವಿಯೇನಾದರೂ ಕಂಡಿದ್ನೇ ? ಗೊತ್ತಿಲ್ಲ. ಆದರೂ ಕವಿಯ ಒಂದು ವಾಣಿ ನೆನಪಾಯ್ತು : ’ಕುಳಿತೋದದೆಯುಂ ಕಾವ್ಯಪರಿಣತಮತಿಗಳ್.’ ಸಾಂಸ್ಕೃತಿಕವಾಗಿ ಯಾವುದೇ ಮೌಲ್ಯಕ್ಕೂ ತೂಗದ ಈ ಜನ ತಿನ್ನುವುದಕ್ಕಾಗೇ ಬದುಕಿರುವುದಂತೂ ಸುಳ್ಳಲ್ಲ![ಕೆಲವು ಅಪವಾದಗಳಿರಬಹುದು] ಹುಟ್ಟು-ಆದಷ್ಟೂ ಬಿಟ್ಟಿ ಆಸ್ತಿಮಾಡು-ತಿನ್ನು-ಕುಪ್ಪಳಿಸು-ನೆಗೆದುಬೀಳು ----ಇದೇ ಅವರ ಜೀವನಚಕ್ರ. ಹೌದು ಕಣ್ರೀ ಇದೂ ಒಂದು ಶೈಲಿಯ ಜೀವನವೇ!


ಶಂಭೋ ಶಂಕರ !

Thursday, August 4, 2011

ಆತಿಥ್ಯ

ಆತಿಥ್ಯ

ಯಾರದೋ ಮನೆಯಲ್ಲಿ ಬಹಳ ದಿನ ಕಳೆಯುತ್ತ
ಭಾರವಾಗಲು ಬೇಡ ಅವರ ಜೀವನಕೆ
ಬೇರೆ ಜಾಗವ ಹುಡುಕಿ ತೂರಿಕೊಳು ಅದರಲ್ಲಿ
ದಾರಿ ಹಲವನು ಗ್ರಹಿಸು | ಜಗದಮಿತ್ರ

ನವಯುಗದ ಹವೆಯಲ್ಲಿ ದುಷ್ಕರದ ದಿನ ಜಾಸ್ತಿ
ಸವೆಯುವುದು ಸಮಯವದು ವ್ಯಾಜ್ಯ ಸಂಕಟದಿ
ಅವಯವಕು ಒಂದೊಂದು ತೊಂದರೆಯೊ ಎಂಬಂತೆ
ಭವವು ಸುಖಕೊಂದಲ್ಲ | ಜಗದಮಿತ್ರ

ಇಲ್ಲಿರಲು ಆ ಕೆಲಸಕಲ್ಲಿಹೋಗಲೆಬೇಕು
ಅಲ್ಲಿರಲು ಬರುವಂತೆ ಮತ್ತಿಲ್ಲಿ ಕರೆಯು
ಎಲ್ಲವೂ ಬೇರೆಯೇ ನಿನ್ನೆಣಿಕೆ ಕರ್ತವ್ಯ
ಬಲ್ಲವರ ಅನುಸರಿಸು | ಜಗದಮಿತ್ರ

ಮೊದಲದಿನ ಇಗೊಮಣೆಯು ಎಂಬರಾದರದಿಂದ
ಅದೊ ನೋಡು ತಗೊಮಣೆಯು ಎರಡನೇ ದಿನದಿ
ಅದುಹೋಗಿ ತಾ ಮಣೆಯರೆಂಬರು ನಂತರದಿ
ಸದರಪ್ಪೆ ಅತಿಯಾಗೆ | ಜಗದಮಿತ್ರ

ಹದವರಿತು ಸ್ವೀಕರಿಸು ಆಹ್ವಾನಗಳನೆಲ್ಲ
ಹೃದಯದೊಳಕರೆಯೊ ಹೊರಕರೆಯೊ ನಿರ್ಣಯಿಸಿ
ಬೆದಕುತ್ತ ಹೆಜ್ಜೆಯಿಡು ಅದಕೆ ಉತ್ತರಿಸುವೊಲು
ಬದುಕು ನಿರ್ಣಯ ಶರಧಿ | ಜಗದಮಿತ್ರ

ಕೊಡುವುದೆಲ್ಲವ ಕಂಡು ಕಣ್ಣನರಳಿಸಬೇಡ
ಪಡೆಯುವುದಕಿಂತ ಕೊಡುವಾಧರ್ಮ ಮಿಗಿಲು
ಅಡಿಗಡಿಗು ತಡೆತಡೆದು ಗಣಿಸು ಪಡೆದಿಹಲೆಕ್ಕ
ಕೊಡುಗೆ ಋಣಭಾರದ್ದು | ಜಗದಮಿತ್ರ

ಅತಿಥಿಗಳು ನಾವಿಂದು ಇಲ್ಲಿ ಈ ಜಗದಲ್ಲಿ
ಮಥಿತ ಬುದ್ಧಿಯನಾಂತು ಕಳೆಯುವುದು ದಿನವ
ಕಥೆಗಳವು ಎಷ್ಟೆಷ್ಟೊ ಜನ್ಮಜನ್ಮಾಂತರದಿ
ವ್ಯಥೆಯು ಜೀವನ ಮಜಲು | ಜಗದಮಿತ್ರ

ಅತಿಥಿ ಸತ್ಕಾರವನು ನಡೆಸುವುದು ಸದ್ಧರ್ಮ
ಪತಿತ ಜೀವಿತದಲ್ಲೂ ಅದು ಪಥ್ಯವಹುದು
ಅತಿಹಸಿವು ಬಾಧೆಯಲು ಅತಿಥಿಯಂ ಮರೆಯದಿರು
ಅತಿಸೌಖ್ಯ ಒದಗುವುದು | ಜಗದಮಿತ್ರ

ಕರೆದು ಅನ್ನವನಿಕ್ಕು ಕಲಿವ ಬಡಮಕ್ಕಳಿಗೆ
ಹೊರೆಯಲ್ಲ ಗತಿಹೀನ ಮಕ್ಕಳಾಶ್ರಮದಿ
ತೊರೆದಿಹರು ಹಡೆದಪ್ಪ-ಅಮ್ಮ ನತದೃಷ್ಟರನು
ಎರೆದು ದಾರಿಯ ತೋರು | ಜಗದಮಿತ್ರ

ಮುಪ್ಪಿನಾ ಮನೆಜನರ ಬೆಪ್ಪೆಂದು ಜರಿಯದಿರು
ತಪ್ಪಿ-ಹಳಿ ಉಗಿಬಂಡಿ ವೇಗ ಕಳೆಯುವುದು
ತಪ್ಪೇನು ಸರಿಯೇನು ಲೆಕ್ಕಿಸದೆ ಗೌರವಿಸು
ಮುಪ್ಪು ಜೀವನ ಸಂಜೆ | ಜಗದಮಿತ್ರ

Wednesday, August 3, 2011

ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !


ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !

ಸೃಷ್ಟಿಕರ್ತ ಬ್ರಹ್ಮನ ಮಗ ಋಷಿ ಕಷ್ಯಪನ ನಾಲ್ಕು ಮಡದಿಯರಲ್ಲಿ ಮೂರನೆಯವಳಾದ ಕದ್ರು ಎಂಬಾಕೆಯಲ್ಲಿ ನಾಗಗಳು ಜನಿಸಿದವು ಎಂಬುದು ಪುರಾಣೋಕ್ತ ಮಾಹಿತಿ. ನಾಗಗಳ ಅಧಿಪತ್ಯವಿರುವುದು ಪಾತಾಳಲೋಕದಲ್ಲಿ ಎಂದೂ ಪುರಾಣಗಳು ಹೇಳುತ್ತವೆ. ಜನಮೇಜಯ ಸರ್ಪಯಾಗವನ್ನೇ ನಡೆಸಿ ಸಹಸ್ರಾರು ನಾಗ ಸಂಕುಲಗಳು ನಶಿಸಿಹೋದರೂ ’ಆಸ್ತಿಕ’ನೆಂಬ ಬ್ರಾಹ್ಮಣ ಕುವರನ ತಡೆಯುವಿಕೆಯಿಂದಾಗಿ ಒಂಬತ್ತು ಪ್ರಮುಖ ನಾಗಗಳು ಮತ್ತು ಅವುಗಳ ವಂಶಗಳು ಉಳಿದುಕೊಂಡವು ಎಂದು ತಿಳಿದುಬರುತ್ತದೆ.


अनन्तं वासुकिं शेषं पद्मनाभं च कम्बलम् ।
शंखपालं धार्तराष्ट्रं तक्षकं कालियं तथा ||

[ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ || ]

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳನ್ನು ಹೆಸರಿಸಿದ್ದಾರೆ. ಹೀಗೆ ಉಳಿದುಕೊಂಡ ನಾಗಗಳಲ್ಲಿ ಕಾಲಿಯನನ್ನು ದ್ವಾಪರಯುಗದಲ್ಲಿ ಶ್ರಾವಣ ಮಾಸದ ಶುದ್ಧ ಅಥವಾ ಶುಕ್ಲಪಕ್ಷದ ಪಂಚಮಿಯ ದಿನ ಶ್ರೀಕೃಷ್ಣ ಮರ್ದಿಸಿ ಆತನ ವಿಷದೂಷಣಗಳನ್ನು ನಿಲ್ಲಿಸಿದ ಎಂಬುದೊಂದು ಐತಿಹ್ಯ.

ಹಿಂದೊಮ್ಮೆ ಕ್ಷತ್ರಿಯ ನಾಗಕುಲವೇ ಜಗತ್ತಿನ ಬಹುಭಾಗವನ್ನು ಆಳಿತ್ತು ಎಂಬ ಕಥೆಯೂ ಇದೆ! ಅವುಗಳಲ್ಲಿ ಮೊದಲನೆಯ ರಾಜ ಅನಂತ- ಇದೀಗ ಸುದ್ದಿಯಲ್ಲಿರುವ ಕೇರಳದ ತಿರುವನಂತಪುರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದನಂತೆ. ವಾಸುಕಿ ಕೈಲಾಸದಲ್ಲಿ ನಿಂತು ಆಳಿದರೆ ತಕ್ಷಕ ತಕ್ಷಶಿಲೆಯಲ್ಲಿ ನೆಲೆನಿಂತು ರಾಜ್ಯಭಾರ ನಡೆಸುತ್ತಿದ್ದ. ಇನ್ನುಳಿದಂತೇ ಕಾರ್ಕೋಟಕ, ಪಿಂಗಳ ಮತ್ತು ಐರಾವತ ಹೀಗೇ ಹಲವು ನಾಗಗಳು ಇಂದಿನ ಪಂಜಾಬಿನ ಐರಾವತಿ ಅಥವಾ ರಾವಿ ನದೀ ಮುಖಜ ಭೂ ಪ್ರದೇಶದಲ್ಲಿ ಆಳುತ್ತಿದ್ದರು. ಇಂತಹ ಒಂದು ಪ್ರದೇಶ ಗಂಗಾನದಿಯೆಡೆಯಲ್ಲೂ ಇತ್ತು. ಅಲ್ಲಿಂದಲೇ ಅರ್ಜುನನ ಹೆಂಡತಿಯಾಗಿ ಉಲೂಪಿ ಬಂದಿದ್ದಳು ಎಂದೂ ಪ್ರತೀತಿ ಇದೆ. ಮತ್ಸ್ಯ ಪುರಾಣದ ಹತ್ತನೇ ಅಧ್ಯಾಯದಲ್ಲಿ ನಾಗಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ. ಆ ಸಮಯದಲ್ಲಿ ಕತ್ತಲೆಯಕಾಲದಲ್ಲಿ ಸುಮಾರು ೧೦೦ ವರ್ಷಗಳ ಕಾಲ ನಾಗಗಳು ಆಳಿದ್ದಾಗಿಯೂ ಅವುಗಳಲ್ಲಿ ಕೆಲವು ಬೌದ್ಧಮತಾವಲಂಬಿಗಳಾಗಿದ್ದರೆಂದೂ ಕ್ರಮೇಣ ಗಂಗಾನದಿಯಲ್ಲಿ ಸ್ನಾನಮಡುತ್ತಾ ಅಶ್ವಮೇಧ ಯಾಗವನ್ನು ಮಾಡಿದ ತರುವಾಯ ಅವರೆಲ್ಲಾ ವೈಷ್ಣವ ಮತವನ್ನು ಸ್ವೀಕರಿಸಿದರು ಎಂದೂ ಆ ಪುರಾಣ ಹೇಳುತ್ತದೆ! ಮಥುರಾ, ಪದ್ಮಾವತಿ, ಕಾಂತಿಪುರ ಮತ್ತು ತಿರುವನಂತಪುರ ಇವು ನಾಗಗಳ ಪ್ರಮುಖ ರಾಜಧಾನಿಗಳಾಗಿದ್ದವು ಎಂಬ ಸಂಗತಿಯೂ ತಿಳಿದುಬರುತ್ತದೆ. ಇಂದಿನ ನಾಗ್ಪುರ್ ಪ್ರದೇಶ ಕೂಡ ನಾಗಗಳಿಗೆ ಸಂಬಂಧಿಸಿದ್ದೇ ಆಗಿತ್ತು ಎಂದೂ ಪುರಾಣೋಕ್ತ ದಾಖಲೆಗಳು ಹೇಳುತ್ತವೆ.

ಇಂದಿಗೂ ನಾಗವಂಶಿ ಕ್ಷತ್ರಿಯರು ಎನಿಸಿರುವ ಹಲವು ಜನ ರಾಜಸ್ತಾನದ ಕೆಲವು ಭಾಗಗಳು, ಮಧ್ಯಪ್ರದೇಶದ ಕೆಲವುಭಾಗಗಳು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲೂ ಕಂಡುಬರುತ್ತವೆ. ಕರ್ನಾಟಕದ ತುಳುನಾಡು ಅಥವಾ ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಕೆಲಭಾಗಗಳಲ್ಲಿಯೂ ಇವರು ಸಿಗುತ್ತಾರೆ.

ನಾಗಪಂಚಮಿ ಅಥವಾ ನಾಗರಪಂಚಮಿಯನ್ನು ಭಾರತದಲ್ಲಷ್ಟೇ ಅಲ್ಲದೇ ನೇಪಾಳೀಯರೂ ಆಚರಿಸುತ್ತಾರೆ. ಜಗತ್ತಿನಲ್ಲಿ ಪರಿಪೂರ್ಣ ಮತ್ತು ಏಕೈಕ ಸನಾತನ ಧರ್ಮ ಇರುವುದು ನೇಪಾಳದಲ್ಲಿ ಮಾತ್ರ! ಅಂತಹ ನೇಪಾಳದ ಕಠ್ಮಂಡುವಿನಲ್ಲಿ ಒಂದಾನೊಂದು ಕಾಲದಲ್ಲಿ ನಾಗಗಳೇ ತುಂಬಿಕೊಂಡಿದ್ದವಂತೆ! ಜನವಸತಿ ಬೆಳೆದಂತೇ ಜನರಿಗೆ ತೊಂದರೆಯಾಗತೊಡಗಿತು. ಹಾವುಗಳಿಗೂ ಕಷ್ಟಕೋಟಲೆ ಎದುರಾಯಿತು. ಅದನ್ನು ನಿವಾರಿಸಿಕೊಳ್ಳಲು ನೇಪಾಳದ ರಾಜ ನಾಗಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಅವುಗಳಿಗೇ ಅಂತಲೇ ಕೆಲವು ಜಾಗಗಳನ್ನು ಬಿಟ್ಟುಕೊಟ್ಟ ಎಂಬುದೂ ಕೂಡ ಇನ್ನೊಂದು ಕಥೆ.

ಹಾಗೆ ನೋಡುತ್ತಾ ನೋಡುತ್ತಾ ಹೋದರೆ ನಾಗಗಳು ಮಳೆಯ ದೇವತೆಗಳೆಂದೂ ಮಳೆಯನ್ನು ನಿಯಂತ್ರಿಸುವ ಅಥವಾ ಬರಿಸುವ ತಾಕತ್ತು, ಆ ಅಧಿಕಾರ ನಾಗಗಳಿಗೆ ಮಾತ್ರ ಇದೆಯೆಂಬುದೂ ಅಲ್ಲಿನ ಜನರ ನಂಬಿಕೆ. ಹಾಗಾಗಿ ರಾಜನಾದವನಿಗೆ ತಾಂತ್ರಿಕ ಶಕ್ತಿಯನ್ನು ಕೊಟ್ಟು ಮಳೆ-ಬೆಳೆಗಳು ಸಕಾಲಕ್ಕೆ ಆಗುವಂತೇ ಮಾಡುವುದು ನಾಗಗಳು ಎನ್ನುತ್ತಾರೆ. ನಾಗಪಂಚಮಿಯ ದಿನ ಅಲ್ಲಿನ ಮನೆಗಳಲ್ಲಿ ನಾಗರ ಛಾಯಾಚಿತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ. ಪ್ರತೀಮನೆಯ ಮುಂಭಾಗದ ಬಾಗಿಲಿನ ಮೇಲೆ ನಾಗನ ಚಿತ್ರ ಅಂಟಿಸಿ ದುಷ್ಟಶಕ್ತಿಗಳು ಬರಗೊಡದಂತೇ ನಾಗನಲ್ಲಿ ಪ್ರಾರ್ಥಿಸುತ್ತಾರೆ. ಭಾರತದಲ್ಲಿ ಇರುವಂತೇ ಅಲ್ಲಿಯೂ ಹಾಲು, ಹೂವು ಹಣ್ಣು ಇತ್ಯಾದಿಗಳಿಂದ ಪೂಜೆ ನಡೆಯುತ್ತದೆ ಎಂಬುದು ಗಮನಾರ್ಹ.


ಇನ್ನು ಭಾರತದಲ್ಲಿ ಅದರಲ್ಲಂತೂ ದಕ್ಷಿಣಭಾರತದಲ್ಲಿ ದ್ರಾವಿಡರು ನಾಗಪೂಜೆ ಇತಿಹಾಸದಲ್ಲೂ ಕಂಡುಬರುತ್ತದೆ. ಇತಿಹಾಸದಲ್ಲಿ ಹೆಸರಿಸಿದ ಪಂಚದ್ರಾವಿಡ ದೇಶಗಳಲ್ಲಿ ನಮ್ಮ ಕರ್ನಾಟಕವೂ ಒಂದು. ಕರ್ನಾಟಕದಲ್ಲಿ ನಾಗರ ಪಂಚಮಿಯಂದು ಕೆಲವೆಡೆ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ತೆರಳಿ ತಮ್ಮ ಅಣ್ಣ-ತಮ್ಮಂದಿರಿಗೆ ತನಿ ಎರೆಯುವ ಪದ್ಧತಿ ಇದೆ. ಇದೊಂದು ಮಮತೆ ತುಂಬಿದ, ಅಕ್ಕರೆ ತುಂಬಿದ ಆತ್ಮೀಯತೆಯ ಕೈಂಕರ್ಯ. ಮದುವೆಯಾಗಿ ಹೋದ ತಂಗಿಯೋ ಅಕ್ಕನೋ ತವರಲ್ಲಿ ಇರುವ ತನ್ನ ಸಹೋದರರನ್ನು ಮರೆತಿಲ್ಲಾ ಎಂಬುದನ್ನು ನೆನಪಿಸುವ ಸಲುವಾಗಿಯೂ ಮತ್ತು ಗಂಡನ ಮನೆಗೆ ತೆರಳಿ ಅಲ್ಲಿನ ಕೆಲಸ-ಕಾರ್ಯಗಳಲ್ಲಿ ಸದಾ ತೊಡಗಿಕೊಂಡಿದ್ದ ಆಕೆಗೆ ಕಾಡುವ ತವರಿನ ನೆನಪು ಮರುಕಳಿಸುತ್ತಾ ಆಕೆ ಬೇಸರಗೊಳ್ಳದಿರಲಿ ಎಂಬುದೂ ಕೂಡ ಇದರ ಹಿಂದಿರುವ ಉದ್ದೇಶ.

ಕೆಲವು ಊರುಗಳಲ್ಲಿ ಇದೇ ಸಮಯ ಜೋಕಾಲಿಗಳನ್ನೂ ಕಟ್ಟಿ ಜೀಕುವ ಪರಿಪಾಠವಿದೆ. ಇನ್ನು ಹಲವೆಡೆ ಮದರಂಗಿಯನ್ನು ಹಚ್ಚಿಕೊಳ್ಳುವ ಅಭ್ಯಾಸಕೂಡ ಇದೆ. ಒಟ್ಟಿನಲ್ಲಿ ನಾಗಪಂಚಮಿಯ ಹೆಸರಿನಲ್ಲಿ ಒಂದಷ್ಟು ಸಂತಸವನ್ನು ಪಡೆದುಕೊಳ್ಳುವ ಸಮಯ ಇದಾಗಿದೆ. ಉತ್ತರಕರ್ನಾಟಕದ ಬತ್ತೀಸ್ ಶಿರಾಳ ಮೊದಲಾದ ಕಡೆ ಜೀವಂತ ಹಾವುಗಳನ್ನೇ ಹಿಡಿದು [ಹಾವಾಡಿಗರ ಸಹಾಯದಿಂದ] ಪೂಜಿಸುವ ವೈಖರಿಯೂ ಇದೆ ! ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬ ಪ್ರಮುಖ ಹಬ್ಬಗಳಲ್ಲೊಂದು, ಹಾಗಾಗಿ ೩ ರಿಂದ ೫ ದಿನಗಳ ವರೆಗೆ ಆಚರಿಸಲ್ಪಡುತ್ತದೆ. ಪಂಚಮಿ ಹಬ್ಬಕ್ಕೆ ಕರೆಯಲು ಅಣ್ಣ ಇನ್ನೂ ಬರಲೇ ಇಲ್ಲವಲ್ಲಾ ಎಂಬ ಕಳವಳದಲ್ಲಿ ತಂಗಿ ಹಾಡಿದ ಜಾನಪದ ಗೀತೆ :

ಪಂಚ್ಮಿ ಹಬ್ಬ ಉಳಿದಾವ ದಿನನಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ ?

....... ಎಂಬ ಹಾಡನ್ನು ನಾವು ಕೇಳಿಯೇ ಇದ್ದೇವಷ್ಟೇ ?


ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು-ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ-ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತಿಳಿದುಬರುವ ಅಂಶವಾಗಿದೆ. ಅದಕ್ಕೆಂತಲೇ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸುವ ಭಕ್ತರು, ಆಸ್ತಿಕರು ಇದ್ದಾರೆ.

ಒಂದುಕಾಲಘಟ್ಟದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಕಮೊದಲಾದ ಸರ್ಪಗಳು ಕಾರ್ತಿಕೇಯನನ್ನು ಆಶ್ರಯಿಸಿದವು ಎಂದು ತಿಳಿಯಲ್ಪಟ್ಟಿದೆ. ಅಲ್ಲಿಂದ ಮುಂದಕ್ಕೆ ಸುಬ್ರಹ್ಮಣ್ಯನಿಗೂ ನಾಗಸಂಕುಲಕ್ಕೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ನಾಗನ ಇನ್ನೊಂದು ರೂಪವೇ ಸುಬ್ರಹ್ಮಣ್ಯ ಎಂಬಷ್ಟು ಆ ಅನ್ಯೋನ್ಯತೆ ಬೆಳೆದುನಿಂತಿದೆ. ದಕ್ಷೀಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಗಳ ಅರಾಧನೆಗೆ ವಿಶೇಷ ಆದ್ಯತೆ ನೀಡಿವೆ, ಪ್ರಸಿದ್ಧವಾಗಿವೆ. ಸಂತಾನಹೀನರು ಪೂಜಿಸಿ, ಪ್ರಾರ್ಥಿಸಿ ಮಕ್ಕಳನ್ನು ಪಡೆದ ಸಾಕ್ಷ್ಯಗಳೂ ದೊರೆಯುತ್ತವೆ!

ಇಂದಿನ ದಿನಗಳಲ್ಲಿ ಎಷ್ಟೇ ಜಂಜಡಗಳಿದ್ದರೂ ಹೆಂಗಳೆಯರು ತಮ್ಮ ನೆಮ್ಮದಿಗಾಗಿ ನಾಗರ ಪಂಚಮಿಯ ದಿನ ಹೊತ್ತಾರೆ ಎದ್ದು ಶೌಚಸ್ನಾನಾದಿಗಳನ್ನು ಮುಗಿಸಿ, ಕಡುಬು-ತಂಬಿಟ್ಟು ಮೊದಲಾದ ತಿನಿಸುಗಳನ್ನು ಮಡಿಯಲ್ಲಿ[ಶುಚಿಯಲ್ಲಿ] ಮಾಡಿ, ಅರಿಶಿನ-ಕುಂಕುಮಾದಿ ಮಂಗಳದ್ರವ್ಯಗಳನ್ನೊಡಗೂಡಿದ ಪೂಜಾ ಸಾಮಗ್ರಿಗಳೊಂದಿಗೆ ನಾಗಸ್ಥಾನಗಳಿಗೆ ತೆರಳಿ ಅಲ್ಲಿ ಹಾಲಿನಿಂದ ಅಭಿಷೇಕಮಾಡಿ ಪೂಜೆಗೈದು ನೈವೇದ್ಯ ಅರ್ಪಿಸುವುದು ಕಾಣುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಎಳೆಯ ತೆಂಗಿನ ಗರಿಗಳ ಓಲೆಗಳಿಂದ ಹಾವು, ಗಿಳಿ ಮೊದಲಾದ ಆಕೃತಿಗಳನ್ನು ಮಾಡಿ ನಾಗಬನಕ್ಕೆ ಅದನ್ನು ಹಚ್ಚುವುದು ಕಂಡುಬರುವ ಆಚರಣೆ. ಅಲ್ಲಲ್ಲಿ ಅನಾದಿ ಕಾಲದಿ ನಾಗಬನಗಳು ಮರದ ಬೀಳಲುಗಳಿಂದ ದೊಡ್ಡ ದೊಡ್ಡ ಮರಗಳಿಂದ ಅಥವಾ ಬಿದಿರುಮೆಳೆಗಳಿಂದ ಆವೃತವಾಗಿದ್ದು ಮಧ್ಯೆ ವಿರಾಜಿಸುವ ಕಲ್ಲಿನ ಅಪರೂಪದ ನಾಗಾಕೃತಿಗಳು ಕಣ್ಣಿಗೆ ನಾಗರ ಹಬ್ಬವನ್ನು ರಂಜನೀಯವಾಗಿಸುತ್ತವೆ.

ಕರಾವಳಿ ಜಿಲ್ಲೆಗಳಲ್ಲಿ ಈ ದಿನ 'ಸುಳಿರೊಟ್ಟಿ' ಎಂಬ ಸಿಹಿ ತಿನಿಸು ಮಾಡುತ್ತಾರೆ. ನಾದುವ ಹದಕ್ಕಿರುವ ಅಕ್ಕಿ ಹಿಟ್ಟನ್ನು ಅರಿಶಿನ ಕೀಳೆಗಳಲ್ಲಿ ಹಚ್ಚಿ ಅದರಮೇಲೆ ಕಾಯಿಸಿ ಹದಗೊಳಿಸಿದ ಕಾಯಿಬೆಲ್ಲ ಲೇಪಿಸಿ ಅದನ್ನು ಮಡಚಿ ಕಾವಲಿಯಮೇಲೆ ಬೇಯಿಸುವ ಒಂದು ಕ್ರಮ ಇದು. ಅಪ್ಪಟ ಅರಿಶಿನದ ಘಮಘಮ ಅಡಿಗೆಮನೆಯನ್ನು ತುಂಬಿಕೊಳ್ಳುವುದೂ ಅಲ್ಲದೇ ತಿನ್ನುವವರಿಗೆ ಅಮೃತತುಲ್ಯ ಸಂತುಷ್ಟಿಯನ್ನು ನೀಡುತ್ತದೆ.

ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ಹಬ್ಬಗಳಿಲ್ಲದೇ ಇದ್ದರೆ ಎಂದಿನಂತೇ ಎಡಬಿಡದ ವ್ಯಾವಹಾರಿಕ, ವ್ಯಾವಸಾಯಿಕ ಒತ್ತಡಗಳ ನಡುವೆ ಬದುಕು ಸಂಪೂರ್ಣ ಯಾಂತ್ರಿಕವಾಗಿಬಿಡುತ್ತದೆ. ಇದನ್ನೆಲ್ಲಾ ನಮ್ಮ ಪೂರ್ವಜರು ಅರಿತಿರಲೂ ಸಾಕು. ಹೀಗಾಗಿ ಮಳೆಗಾಲದಲ್ಲಿ ಉಳಿದೆರಡು ಕಾಲಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಬಿಡುವಿರುವುದರಿಂದ ಹಬ್ಬಗಳ ಸರದಿ ಈ ಕಾಲದಲ್ಲೇ ಜಾಸ್ತಿ ಇರುತ್ತದೆ! ಅದಕ್ಕೆ ಮೇಲುಹೊದಿಕೆಯಾಗಿ ದಕ್ಷಿಣಾಯಣದಲ್ಲಿ ಸ್ವರ್ಗದ ಬಾಗಿಲು ಹಾಕಿ ದೇವತೆಗಳೆಲ್ಲಾ ಭೂಮಿಯಲ್ಲಿ ಸಲ್ಲಿಸುವ ಪೂಜೆಗಳನ್ನು ಸ್ವೀಕರಿಸಲು ಇಲ್ಲಿಗೆ ಬರುತ್ತಾರೆ ಎಂದೂ ಹೇಳಲಾಗಿದೆ.

ನಮಗೆ ತಿಳಿಯದ ಆಳಗಲ ಈ ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿ ಏನೇನು ಅಡಗಿದೆಯೋ ಅದರ ಪರಿಪೂರ್ಣ ಅರಿವು ಸಾಮಾನ್ಯ ಮನುಷ್ಯರಿಗೆ ಯಾರಿಗೂ ಇರುವುದಿಲ್ಲ. ಬೇರೇ ಲೋಕಗಳು ಇರಲಿಕ್ಕೂ ಸಾಕು ಅವುಗಳಲ್ಲಿ ನಮ್ಮನ್ನು ಜರಾಮರಣ ಚಕ್ರದಲ್ಲಿ ಬಂಧಿಸಿರುವ ಶಕ್ತಿಯ ಆವಾಸವಿರಲೂ ಸಾಕು ಯಾರಿಗೆ ಗೊತ್ತು ? ಅಲ್ಲವೇ ? ನಾಗಗಳು ವಿನಾಕಾರಣ ಕಡಿಯುವುದೂ ಇಲ್ಲ. ಕೆಲವರನ್ನು ಮಾತ್ರ ಅಟ್ಟಿಸಿಕೊಂಡು ಬಂದು ಎಲ್ಲಿದ್ದರೂ ಬಿಡದೇ ಕಚ್ಚುತ್ತವೆ. ಇಂತಹ ವೈಜ್ಞಾನಿಕತೆ ಎಂದು ಕೊಚ್ಚಿಕೊಳ್ಳುವ ದಿನಗಳಲ್ಲೂ ಕೆಲವು ಪ್ರದೇಶಗಳಲ್ಲಿ ಕೆಲವರು ವಿಷ ಸರ್ಪಗಳ ಕಡಿತವನ್ನು ಕೇವಲ ನಮಗೆಲ್ಲಾ ಹೇಳದಿರುವ ಯಾವುದೋ ಮಂತ್ರದಿಂದ ಹೊರತೆಗೆದು ವಾಸಿಮಾಡುವುದು ಚಮತ್ಕಾರದ ವಿಷಯವಾಗಿದೆ! ದೂರದಲ್ಲಿ ಯಾರಿಗೋ ಹಾವು ಕಚ್ಚಿದರೆ ಆತ/ ಆತನ ಕಡೆಯವರು ದೂರವಾಣಿಯ ಮೂಲಕ ಆ ವ್ಯಕ್ತಿಗಳಿಗೆ ತಿಳಿಸಿಬಿಟ್ಟರೆ ಕರವಸ್ತ್ರವೊಂದನ್ನು ಗಂಟುಹಾಕುತ್ತಾ ಬಾಯಲ್ಲಿ ಏನೋ ಮಟಮಣ ಮಟಮಣ ಮಾಡುವ ಅವರು ಹಾವುಕಡಿದವನನ್ನು ಅವರಲ್ಲಿಗೆ ಕರೆದುಕೊಂಡು ಹೋಗುವವರೆಗೂ ಏನೂ ಆಗದಂತೇ ಬಂಧನ ಹಾಕುತ್ತಾರೆ! ನಂತರ ಅವರಲ್ಲಿಗೆ ಹೋದಾಗ ಸ್ವಲ್ಪ ನೀರು ಹೊಡೆದು ಏನೋ ಹೇಳಿಬಿಟ್ಟರೆ ವ್ಯಕ್ತಿ ಮಾಮೂಲಿಯಾಗಿ ಎದ್ದು ಕೂರುತ್ತಾನೆ! ಇದೆಲ್ಲವನ್ನೂ ನೋಡಿದಾಗ ಅನಿಸುವುದು ನಾಗಗಳೂ ಕೂಡ ಯಾವುದೋ ಹೊಸ ಆಯಾಮವುಳ್ಳ ಲೋಕದ ಕನೆಕ್ಷನ್ ಇರುವಂಥವು ಎಂಬುದು!

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಧನ್ಯವಾದ :

सर्पाधीश नमस्तुभ्यम्
नागानां च गणाधिपः ।
सर्वारिष्ट प्रशमनं
भक्तानां अभयप्रदः ॥

ಸರ್ಪಾಧೀಶ ನಮಸ್ತುಭ್ಯಮ್
ನಾಗಾನಾಂ ಚ ಗಣಾಧಿಪಃ |
ಸರ್ವಾರಿಷ್ಟ ಪ್ರಶಮನಂ
ಭಕ್ತಾನಾಂ ಅಭಯಪ್ರದಃ ||

|| ಓಂ ಸ್ವಸ್ತಿ ||

Tuesday, August 2, 2011

ಜಯಸಿಂಹಾ ಬಂದಾ ಜಯಸಿಂಹಾ ......


ಜಯಸಿಂಹಾ ಬಂದಾ ಜಯಸಿಂಹಾ ......



ಹಾಡು ಕೇಳಿದಾಗ ಮೈಮನ ತುಂಬಿಕೊಳ್ಳುವ ದಿ| ವಿಷ್ಣುವರ್ಧನ್ ಅಭಿನಯದ ’ಜಯಸಿಂಹ’ದ ಜಯಸಿಂಹನ ಪಾತ್ರ ದೃಶ್ಯಮಾಧ್ಯಮದಲ್ಲಿ ಅದನ್ನು ವೀಕ್ಷಿಸುವಾಗ ಕಾಡಿನ ಅಗಾಧ ಅನುಭೂತಿ ಭಾವುಕರಿಗೆ ಭಾಸವಾಗುತ್ತದೆ. ಮುಂದೊಂದು ದಿನ ಕೇವಲ ಕಥೆಗಳಲ್ಲಷ್ಟೇ ಅಸ್ತಿತ್ವದಲ್ಲಿರುವ ಕಾಡುಗಳು ನಿಸರ್ಗದ ರಮಣೀಯತೆಯ ಅವಿಭಾಜ್ಯ ಅಂಗಗಳು. ಹಲವು ನದಿ ತೊರೆಗಳು ಜೀವಜಂತುಗಳಿಗೆ ಪಶು-ಪಕ್ಷಿಗಳಿಗೆ ಆಶ್ರಯತಾಣಗಳಾಗಿರುವ ಅಂತಹ ಕಾಡುಗಳಲ್ಲಿ ವಿಭಿನ್ನ ಜೀವಸಂಕುಲಗಳು ಮನೆಮಾಡಿ ತಂತಮ್ಮ ಆಹಾರಗಳನ್ನೂ ಅಲ್ಲಲ್ಲೇ ಕಂಡುಕೊಂಡು ಹಾಯಾಗಿರುವುದು ಈ ಸೃಷ್ಟಿಯ ಔಚಿತ್ಯಗಳಲ್ಲೂ ಅದ್ಭುತಗಳಲ್ಲೂ ಒಂದು. ಆಹಾರ ಸರಪಳಿಯ ಮೂಲಕ ವೇದಾಂಗಗಳಲ್ಲಿ ಹೇಳಿದ | ಜೀವೋ ಜೀವಸ್ಯ ಜೀವನಂ | ಎಂಬ ಅಂಶವನ್ನು ಸ್ವಲ್ಪ ಕ್ರೌರ್ಯವೇ ಅನಿಸಿದರೂ ವಿಚಿತ್ರಗತಿಯಲ್ಲಿ ಸಮತೋಲನದಲ್ಲಿರಿಸಿದ್ದ ಸೃಷ್ಟಿಯ ಚಮತ್ಕಾರ ಯಾವುದೇ ವೈಜ್ಞಾನಿಕ ವಿಶ್ಲೇಷಣೆಗೆ ನಿಲುಕುವ ಸೂತ್ರವಲ್ಲ !

ಬೆಟ್ಟದ ತುಂಬ ಹಸಿರು ಕಾಡು ಬೆಳೆದಿದ್ದರೆ, ಅಲ್ಲಿ ಅಸಂಖ್ಯ ಮರಮಟ್ಟುಗಳು ಹಲವು ಪ್ರಭೇದಗಳನ್ನು ತೋರುತ್ತಾ ನಿಂತಿದ್ದರೆ, ವಿಧವಿಧದ ಹೂವು-ಕಾಯಿ-ಹಣ್ಣು-ಹಂಪಲು ತುಂಬಿ ಗಿಡಬಳ್ಳಿಗಳು ಆ ಭಾರಕ್ಕೆ ಬಾಗಿ ತೊನೆಯುತ್ತಿದ್ದರೆ, ಬಹುವಿಧದ ಹಕ್ಕಿಗಳ ಕಲರವ ಅಲ್ಲಿನ ಕ್ಷೇತ್ರದಲ್ಲಿ ಇಂಪಾದ ಗಂಧರ್ವಲೋಕವನ್ನು ಸೃಜಿಸಿದ್ದರೆ, ಹರಿವ ನದಿತೊರೆಗಳ ಜುಳುಜುಳು ನಿನಾದ ತಮ್ಮತನವನ್ನು ಮೆರೆದಿದ್ದರೆ, ಹಾರುತ್ತಾ ಜಿಗಿಯುತ್ತಾ ಮೇಯುವ ಜಿಂಕೆ,ಕಡವೆ, ಸಾರಂಗ, ಕೃಷ್ಣಮೃಗ, ಮೊಲ ಮೊದಲಾದ ಸಸ್ಯಾಹಾರೀ ಸಾತ್ವಿಕ ಪಶುಗಳು ಅಲ್ಲಲ್ಲಿ ನಿಂತು ಮೇಯುತ್ತಾ ಕಿವಿನಿಮಿರಿಸಿ ಎತ್ತೆತ್ತಲೋ ತಮ್ಮ ಚಂಚಲ ಕಣ್ಣುಗಳಿಂದ ನೋಡುತ್ತಾ ಇದ್ದರೆ ಆ ದೃಶ್ಯಕಾವ್ಯಕ್ಕಿಂತಾ ಬೇರೆ ಮಹಾಕಾವ್ಯ ಲೋಕದಲ್ಲೇ ಇಲ್ಲವೇನೋ ಅನಿಸಿಬಿಡುತ್ತದೆ !

ಮಳೆಗಾಲದಲ್ಲಿ ಮೋಡಗಳನ್ನು ನೋಡಿ ಹೆಮ್ಮೆಯಿಂದ ಗರಿಬಿಚ್ಚಿ ಕುಣಿಯುವ ನವಿಲುಗಳು-ಅವುಗಳ ನರ್ತನದ ಜೊತೆಗಿನ ಕೂಗು, ಹಸಿರು, ತಿಳಿಹಸಿರು, ನೀಲಿ, ತಿಳಿಹಳದಿ ಬಣ್ಣಗಳಲ್ಲಿ ನಾನಾ ಗಾತ್ರ ವೈವಿಧ್ಯಗಳಲ್ಲಿ ಕಾಣುವ ಗಿಳಿಗಳು, ಅಲ್ಲಲ್ಲಿ ಕಾಣುವ ಚಕೋರ ಪಕ್ಷಿಗಳು, ಕ್ರೌಂಚಪಕ್ಷಿಗಳು, ಮಂಗಟ್ಟೆ ಹಕ್ಕಿಗಳು, ಯಾರದೋ ಭೇಟಿಗೆ ತಡವಾಯಿತೆಂಬಂತೇ ಸರಸರನೇ ಜಿಗಿಯುತ್ತಾ ಸರಿದಾಡುತ್ತಾ ಓಡಾಡುವ ಅಳಿಲುಗಳು, ಚಂಪ್ ಚಂಪ್ ಚಂಪ್ ಚಂಪ್ ಎಂದು ವಿಶಿಷ್ಟ ದನಿಯಲ್ಲಿ ಕೂಗುವ ಕೆಂಚಳಿಲುಗಳು[ ಕ್ಯಾಸಾಳಗಳು], ನಿಧಾನವಾಗಿ ನಡೆಯುತ್ತಾ ಹಾರುತ್ತಾ ಸಾಗುವಾ ಮೈನಾ ಹಕ್ಕಿಗಳು-ಹುರ್ಸಾನ್ಹಕ್ಕಿಗಳು, ಬುಲ್‍ಬುಲ್‍ಗಳು, ಕವಿಯು ಬರೆದಿದ್ದನ್ನು ಬಾಯಿಪಾಠಮಾಡಿ ಹಾಡುವ ಗಾಯಕಿಯರಂತೇ ಹಾಡುವ ಕೋಗಿಲೆಗಳು ಒಂದೇ ಎರಡೇ ಮುಂದಿನ ಹಲವು ವರ್ಷಗಳು ಇರಬೇಕಾದ ಮುಂದಿನ ಮಾನವ ಸಂಕುಲಕ್ಕೆ ಮುದನೀಡಬೇಕಾದ ಅವುಗಳ ಮನೆಗಳು ಕುಲಗಳು, ವಂಶಗಳು ವಿನಾಶದ ಅಂಚಿನಲ್ಲಿರುವುದು ನಿಸರ್ಗ ಪ್ರಿಯರಿಗೆ ವಿಷಾದನೀಯ ಸಂಗತಿ.

ಪ್ರಾಣಿವರ್ಗದಲ್ಲೇ ಬರುವ ಮಾನವ ಮೂಲಭೂತವಾಗಿ ಹಸಿರುಪ್ರಿಯನಂತೆ. ಹಾಗಂತ ಮನೋವೈಜ್ಞಾನಿಕ ಸಂಶೋಧನೆಗಳೇ ಹೇಳಿವೆ. ದುಡ್ಡು ಕೋಟಿಗಟ್ಟಲೇ ಇದ್ದರೂ ಕಾಡುಗಳಿಲ್ಲದ ಬೋಳುಗುಡ್ಡಗಳ ಜೊತೆಗೆ ವಾಸ ಸಾಧ್ಯವೇ ಇಲ್ಲದ ಮಾತು. ಹಿಂದೆಲ್ಲಾ ನಾವು ಓದುತ್ತಿದ್ದೆವು--ಮರಗಳು ನಮಗೆ ಯಾವೆಲ್ಲಾ ರೀತಿಯಲ್ಲಿ ಉಪಕಾರಿಗಳು ಎಂಬಬಗ್ಗೆ. ಮರಗಳು ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲಾ ಎಂಬುದನ್ನು ಪಟ್ಟಿಮಾಡಿದರೆ ಆ ಪಟ್ಟಿ ಪ್ರಾಯಶಃ ಖಾಲಿಯೇ ಇರುತ್ತದೆ. ಹುಟ್ಟಿದಾರಭ್ಯ ಸಾಯುವವರೆಗೆ ಜಾತಿ-ಮತಗಳ ಭೇದವಿಲ್ಲದೇ ಎಲ್ಲರ ಮನೆಗಳ ಭಾಗವಾಗುವ ಮರಮಟ್ಟುಗಳ ಭಾಗಗಳು ಸತ್ತಮೇಲೂ ಸುಡಲಿಕ್ಕೋ ಶವಪೆಟ್ಟಿಗೆಗೋ ಬಳಸಲ್ಪಡುವುದು ಕಂಡುಬರುತ್ತದೆ. ಇಂದು ಅಧುನಿಕೀಕರಣದಲ್ಲಿ ಸತ್ತನಂತರ ಪರ್ಯಾಯ ಪರಿಕರಗಳನ್ನು ಬಳಸಿದರೂ ಕೊನೇಪಕ್ಷ ಅಲ್ಲೀವರೆಗಾದರೂ ಮರಗಳ ಸಾಂಗತ್ಯ ನಮಗೆ ಬೇಕೇ ಬೇಕಾಗುತ್ತದೆ ಎಂಬುದನ್ನು ಒಮ್ಮೆ ಅವಲೋಕಿಸಿ!

ಜಗತ್ತು ಎಷ್ಟೇ ಮುಂದುವರಿದರೂ ಉಪಜೀವನಕ್ಕೆ ಯಾವ್ಯಾವುದೋ ನೌಕರಿಯೋ ದಂಧೆಯೋ ವಹಿವಾಟೋ ಇದ್ದರೂ, ಹಲವರಿಗೆ ಕೃಷಿ-ವ್ಯವಸಾಯವಿದ್ದರೂ, ಕೈಗಾರಿಕಾ ವಸಾಹತುಗಳು ಕಾಡುಗಳನ್ನು ಮೀರಿಸುವ ಮಟ್ಟದಲ್ಲಿ ಬೆಳೆದಿದ್ದರೂ ಕೇವಲ ಆ ಮೂಲಗಳಿಂದ ಮಾನವ ಜೀವನ ಪರಿಪೂರ್ಣವಾಗುವುದಿಲ್ಲ. ಇವತ್ತಿಗೆ ನಾವು ಮರದ ಪೀಠೋಪಕರಣಗಳಿಗೆ ಬದಲಾಗಿ ಉಪಭೋಗಿಸುತ್ತಿರುವ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಅಥವಾ ಗಾಜಿನ ಪೀಠೋಪಕರಣಗಳು ಮರದ ತುಂಡುಗಳು ನೀಡುವ ಸರ್ವಋತು ಸ್ಪಂದನಾ ಗುಣಮಟ್ಟವನ್ನು ತೋರುವುದಿಲ್ಲ. ಉದಾಹರಣೆಗೆ ಮಳೆ/ಚಳಿಗಾಲದಲ್ಲಿ ಬೆಚ್ಚಗಾಗಿಯೂ ಬೇಸಿಗೆಯಲ್ಲಿ ತಂಪಾಗಿಯೂ ಭಾಸವಾಗುವ ಮರದ ಪೀಠೋಪಕರಣಗಳು ನಮ್ಮ ಚರ್ಮಕ್ಕೆ ಅತ್ಯಂತ ಅನುಕೂಲಕರ ಆಯಾಮಗಳನ್ನು ಕೊಡುವಂಥವು. ಅಲಂಕಾರದಲ್ಲಿಯೂ ಮರಗಳು ನೀಡುವ ’ಫಿನಿಶಿಂಗ್ ಟಚ್’ ಬೇರೇ ಯಾವ ಮೂಲದ ಪರಿಕರಗಳೂ ನೀಡಲು ಸಾಧ್ಯವೇ ಇಲ್ಲ. ಅಂತರವಿಷ್ಟೇ ಮೈಗೆ ಎಣ್ಣೆಹಚ್ಚಿಕೊಳ್ಳುವುದಕ್ಕೂ ನೀರುಹಚ್ಚಿಕೊಳ್ಳುವುದಕ್ಕೂ ಇರುವಂಥದ್ದು. ಎಣ್ಣೆಯಿಂದ ಚರ್ಮ ಸುಕ್ಕುಗಟ್ಟುವುದಿಲ್ಲ; ನೀರು ಬೇಗ ಆರಿಹೋಗುವುದರಿಂದ ಚರ್ಮಕ್ಕೆ ಆರ್ದ್ರತೆಯನ್ನು ಬಹಳಕಾಲ ಕೊಡುವುದಿಲ್ಲ.

ಕಾಡುಗಳು ಅದು ಹೇಗೆ ಸೃಷ್ಟಿಯಾದವೋ ಸಹಸ್ರಾರು ಜೀವಸಂಕುಲಗಳು ಅಲ್ಲಿ ಹೇಗೆ ಮೈದಳೆದವೋ ಸೃಷ್ಟಿಕರ್ತನಿಗೆ ಮಾತ್ರ ಗೊತ್ತು! ಅಂತಹ ಕಾಡುಗಳನ್ನು ಮನುಷ್ಯ ಪುನಃ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಇರುವ ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಕಲೆಹಾಕಿ ಅವುಗಳ ಸಂತಾನೋತ್ಫತ್ತಿಯಲ್ಲಿ ತೊಡಗುತ್ತೇನೆನ್ನುವ ಮನುಷ್ಯನ ಕೈಯ್ಯಲ್ಲಿ ಅವುಗಳ ಅಭ್ಯುದಯವಿಲ್ಲ. ಅವು ಹೇಗೋ ಹುಟ್ಟಿದವು, ತೊಂದರೆಕೊಡದಿದ್ದರೆ ಬೆಳೆಯುತ್ತಿದ್ದವು, ಬಾಳುತ್ತಿದ್ದವು, ತೊಂದರೆಯುಂಟುಮಾಡಿ ಈಗ ರಕ್ಷಿಸುತ್ತೇನೆ ಎಂದರೆ ಅವು ಮರಳಿ ಬರಲಾರವು! ನಾನು ಚಿಕ್ಕವನಿರುವಾಗ ಒಂದಷ್ಟು ದೂರದ ಕಾಡೊಳಗೆ ನಡೆದರೆ ಕಾಣುವ ವನ್ಯಜೀವಿಗಳು-ಕಾಡುಹಕ್ಕಿಗಳು ಇವತ್ತು ಕಾಣುತ್ತಿಲ್ಲ! ಅಂದರೆ ಅರ್ಥಮಾಡಿಕೊಳ್ಳಿ ವರ್ಷಾ ವರ್ಷಾ ಅವುಗಳ ಸಂತತಿ ಕ್ಷೀಣಿಸುತ್ತಲೇ ಇದೆ.

ಮಂಡ್ಯ-ಮೈಸೂರು, ಹಾಸನ-ಸಕಲೇಶಪುರ-ಕೊಡಗಿನ ಕಾಡುಗಳ ಸುತ್ತಮುತ್ತ ಆನೆಗಳ ಹಾವಳಿ ತೀವ್ರವಾಗಿದೆ ಎಂಬುದು ನಮಗೆ ನಿತ್ಯವೂ ಕೇಳಿಬರುವ ಸುದ್ದಿ. ವಾಸ್ತವಿಕತೆಯೆಂದರೆ ಅವುಗಳ ಮೂಲ ಆಹಾರವಾದ ಬಿದಿರಿನ ಬೊಂಬುಗಳು ಹೂ ಬಿಟ್ಟು ಕಾಡಿನಲ್ಲಿ ಬಿದಿರು ಸಂತತಿ ಒಮ್ಮಿಂದೊಮ್ಮೆಲೇ ನಾಶವಾಗುತ್ತಿದೆ. ಅದು ಕೆಲವಾರು ವರ್ಷಗಳಿಗೊಮ್ಮೆ ನಡೆಯುವ ನೈಸರ್ಗಿಕ ಪ್ರಕ್ರಿಯೆ. ನಾಶವಾದ ಬಿದಿರು ಪುನಃ ಚಿಗಿತು ಮೇಲೇಳಲು ಒಂದೆರಡು ವರ್ಷಗಳಾದರೂ ಬೇಕು! ಅಲ್ಲೀವರೆಗೆ ದೈತ್ಯದೇಹೀ ಪ್ರಾಣಿಗಳಿಗೆ ಉದರ ನಿಮಿತ್ತಂ ....ಊಹುಂ ! ಹಿಂದೆಲ್ಲಾ ಹೀಗಾದಾಗ ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಾ ಪರ್ಯಾಯವಾಗಿ ಸಿಗಬಹುದಾದ ಬೈನೆ ಮರಗಳ ತಿರುಳನ್ನೋ ಮತ್ಯಾವುದೋ ಸೊಪ್ಪನ್ನೋ ತಿಂದು ಹೊಟ್ಟೆಹೊರೆದುಕೊಳ್ಳುತ್ತಿದ್ದವು. ಒಂದು ಆನೆಗೆ ಸರಾಸರಿ ೨೫೦ ಕೆಜಿ ಆಹಾರ ಪ್ರತಿನಿತ್ಯ ಬೇಕಾಗುತ್ತದೆ ಎಂದರೆ ಇರುವ ಎಲ್ಲಾ ಆನೆಗಳಿಗೆ ಎಲ್ಲಿ ಆಹಾರವಿದೆ ? ಹಾಗಾದರೆ ಮೊದಲು ಎಲ್ಲಿತ್ತು ?

ಇತ್ತು ಸ್ವಾಮೀ ! ಮೊದಲು ಕಾಡುಗಳೇ ಹೇರಳವಾಗಿದ್ದವು. ಅವುಗಳು ತಿರುಗಾಡಲು ಅವುಗಳದ್ದೇ ರಹದಾರಿಗಳಿದ್ದವು. ವಾಡಿಕೆಯಲ್ಲಿ ನಮ್ಮಲ್ಲಿ ’ಹಾವಸಾಲು’ ಅನ್ನೋ ಪದ ಬಳಕೇಲಿದೆ. ಹಾವಸಾಲು ಎಂದರೆ ಅವು ತಿರುಗಾಡಿ ತಿರುಗಾಡಿ ಸದಾ ಹಾಗೇ ತಿರುಗಾಡುವ ಕೆಲವು ಮಾರ್ಗಗಳು ಅವಕ್ಕೆ ಗುರುತಾಗಿರುತ್ತವೆ. ವೈಜ್ಞಾನಿಕವಾಗಿ ನೋಡಿದರೆ ಅವುಗಳ ಶಾರೀರಿಕ ರಕ್ಷಣೆಗೆ ಒಗ್ಗಬಹುದಾದ ತಗ್ಗು-ದಿಣ್ಣೆ ಜಾಗಗಳನ್ನು ಅವಲೋಕಿಸಿ ಪರಂಪರೆಯಿಂದ ಅವುಗಳು ಆ ಮಾರ್ಗವಾಗಿಯೇ ನಡೆದಾಡುತ್ತಿವೆ. ಅನಾದಿಯಲ್ಲಿ ಅವುಗಳ ಪೂರ್ವಜರು ಹಾಕಿದ ಅಂತಹ ಮಾರ್ಗಗಳ ಮಧ್ಯೆ ಇಂದು ಅಕ್ರಮ-ಸಕ್ರಮಗಳೆಂಬ ಹಲವಾರು ನಾಟಕಗಳಿಂದ ಕಾಡುಗಳು ಕೃಷಿಕರ, ಮಾನವರ ವಶವಾಗಿ ಅಲ್ಲೆಲ್ಲಾ ಮಾನವ ವಸಾಹತು ತಲೆಯೆತ್ತಿದೆ. ತಮ್ಮದಾದ ಜಾಗದಲ್ಲಿ ಇನ್ಯಾರೋ ಬಂದರೆ ನಾವಾದ್ರೆ ಏನುಮಾಡುತ್ತೇವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ! ನಿರುಪದ್ರವಿ ಆನೆಗಳು, ಕಾಡುಪ್ರಾಣಿಗಳು ತಮ್ಮ ದಾರಿ, ತಮ್ಮ ಆಹಾರದ ಕಸಿತಕ್ಕೆ ಒಳಗಾಗಿ ಪರೋಕ್ಷ ದೌರ್ಜನ್ಯಕ್ಕೊಳಗಾಗಿ ಬದುಕುವ ಹಂಬಲದಲ್ಲಿ ಹಸಿದ ಹೊಟ್ಟೆಹೊತ್ತು ಮರಿಗಳೊಂದಿಗೆ ಹಳೆಯ ಜಾಗಗಳನ್ನರಸಿ ಹೊರಡುತ್ತವೆ.

ಅವುಗಳ ಹಳೆಯ ಜಾಡು ಇಂದು ಇಟ್ಟಿಗೆ-ಸಿಮೆಂಟುಗಳು ಗೂಡು ! ಅಥವಾ ಕೃಷಿಕರ ಕೆಲಸದ ಒಳಗೂಡು. ಹೀಗಾಗಿ ಒಂದುಕಾಲಕ್ಕೆ ತಾವು ತಮ್ಮ ವಂಶಸ್ಥರು ಉಪಭೋಗಿಸಿದ್ದ ಜಾಗ ತಮಗೆ ದಕ್ಕದೇ ಇರುವುದರಿಂದಲೂ ಆ ಮಾರ್ಗಗಳನ್ನು ಬಿಟ್ಟು ಪರ್ಯಾಯ ಮಾರ್ಗಗಳು ತಿಳಿಯದೇ ಇರುವುದರಿಂದಲೂ ಅವು ನೇರವಾಗಿ ಆ ಮಾರ್ಗಗಳಲ್ಲೇ ಬರುತ್ತವೆ! ಅದರಲ್ಲೇನಿದೆ ತಪ್ಪು ? ಚಿಂತಿಸಿನೋಡಿ-ಅವುಗಳ ಆಹಾರಕ್ಕೆ ಅವು ಈಗ ಏನುಮಾಡಬೇಕು ? ವಿಧಾನಸೌಧದ ಎದುರು ಸೊಂಡಿಲಲ್ಲಿ ಪತಾಕೆ ಹಿಡಿದು ಧರಣಿನಿಲ್ಲಬೇಕೇ? ಕಬಳಿಸುತ್ತಾ ಬರುವ ಗಣಿಧಣಿಗಳ ಯಂತ್ರಗಳಿಗೆ ತಮ್ಮ ಸಂತಾನವೂ ಸೇರಿದಂತೇ ತಾವು ಬಲಿಯಾಗಬೇಕೇ? ಅಥವಾ ವೀರಪ್ಪನ್ ರೀತಿಯ ಇನ್ನೂ ಅವಿತಿರುವ ಹಲವು ಕಾಡುಗಳ್ಳರ ಗುಂಡಿಗೆ ಬಲಿಯಾಗಬೇಕೆ ? ಅವುಗಳಿಗೂ ಸಾಮಾಜಿಕ ನ್ಯಾಯಬೇಡವೇ? ಮೀಸಲಾತಿ ಬೇಡವೇ ? ಅವುಗಳಿಗೆ ರೇಷನ್ ಕಾರ್ಡ್ ಕೊಡುತ್ತೀರೇ ? ಅನಾರೋಗ್ಯ ಪೀಡಿತವಾದಾಗ ನೈಸರ್ಗಿಕವಾಗಿ ಸಿಗುತ್ತಿದ್ದ ಗಿಡಮೂಲಿಕೆಗಳು ನಾಶವಾಗಿ ಅನಾರೋಗ್ಯ ಉಲ್ಬಣಿಸುತ್ತಿದ್ದರೆ ನಿಮ್ಮ ಯಾವುದೋ ಲಸಿಕೆಗಳು ಅವುಗಳ ಆರೋಗ್ಯವನ್ನು ಕಾಪಿಡಲು ಸಾಧ್ಯವೇ ? ಮರಿಗಳಿಗೆ ಓಡಾಡಲು ಆಟವಾಡಲು ಸ್ವಲ್ಪವಾದರೂ ಕಾಡುಬೇಡವೇ ? ಉತ್ತರ ಇದ್ದರೆ ಮಾತನಾಡಿ!

ರಾಜಕಾರಣದ ಅರಾಜಕತೆಯಲ್ಲಿ ಹೇಳಕೇಳುವವರಿಲ್ಲದ ಕಾಡುಮೇಡುಗಳಲ್ಲಿ ಹಗಲೂರಾತ್ರಿ ತಾವೇ ನೇಮಿಸಿದ ಅರಣ್ಯಾಧಿಕಾರಿಗಳನ್ನೂ ಅರಣ್ಯಪಾಲಕರನ್ನೂ ಬೆದರಿಸಿ ಸುಮ್ಮನಿರುವಂತೇ ಮಾಡಿ ಗಿಡಮರಗಳ, ಪಶುಪಕ್ಷಿಗಳ ಮಾರಣಹೋಮ ಮಾಡಿ ಅವುಗಳಿಂದ ಸಿಗಬಹುದಾದ ಏಕಕಾಲದ ದೊಡ್ಡ ಲಾಭದ ’ಲಾಬಿ’ಗೆ ಮುಂದಾದ ಇಂದಿನ ರಾಜಕಾರಣಿಗಳಿಗೆ ಕಿಂಚಿತ್ತಾದರೂ ಆ ಬಗ್ಗೆ ಆಸಕ್ತಿಯಿದೆಯೇ ? ಕಾಡುಗಳನ್ನು ಉಳಿಸುವ ತನ್ಮೂಲಕ ವನ್ಯಜೀವಿಗಳನ್ನೂ ಕಾಪಾಡುವ ಜವಾಬ್ದಾರಿಯನ್ನು ಯಾರಾದರೂ ಒಬ್ಬನೇ ಒಬ್ಬ ಕಂಕಣಬದ್ಧನಾಗಿ ನಡೆಸಿದ ದಾಖಲೆ ಇದೆಯೇ ? ಪುಸ್ತಕಗಳಲ್ಲಿ [ತೆನ್ನಾಲಿ ರಾಮನೋ ಬೀರ್ಬಲ್ಲನೋ ಹೇಳಿದಂತೇ ]ಮರದಮೇಲೆ ಕುಳಿತ ಹಕ್ಕಿಗಳ, ಅಲೆದಾಡುವ ಆನೆ-ಹುಲಿಗಳ ಲೆಕ್ಕವನ್ನು ಇವರು ಬರೆಯಲು ಹೇಳುತ್ತಾರೆಯೇ ಹೊರತು ನಿಜವಾಗಿಯೂ ಬರೆದಷ್ಟಾದರೂ ಇವತ್ತು ಇವೆಯೇ ? ನಿಜಕ್ಕೂ ಈ ಸಂಖ್ಯೆ ಪ್ರಶ್ನಾರ್ಹವಾಗಿದೆ.

ಡಾರ್ವಿನ್ ವಿಕಾಸವಾದದಂತೇ ಪ್ರತಿಯೊಂದೂ ಜೀವಿ ತನ್ನ ಉಳಿವಿಗೆ ಹೋರಾಡುವ ಸನ್ನಿವೇಶದ ಒಂದು ಪರಿ ಆನೆಗಳ ಚಿರತೆಗಳ ಅಥವಾ ಕಾಡುಪ್ರಾಣಿಗಳ ಪುರಪ್ರವೇಶ! ನಾವೇನಾದರೂ ಅವುಗಳ ಮನೆಗಳನ್ನು ಹೊಕ್ಕದೇ ಇದ್ದಿದ್ದರೆ, ಅವುಗಳ ವಸಾಹತುಗಳನ್ನು ಬಲಿತೆಗೆದುಕೊಳ್ಳದೇ ಇದ್ದಿದ್ದರೆ ಸರ್ವಥಾ ಅವು ನಮ್ಮ ಪುರಗಳಿಗೆ ಪ್ರವೇಶಿಸುತ್ತಿರಲಿಲ್ಲ. ಒಂದು ಹಕ್ಕಿ ತನ್ನ ಗೂಡಿನಿಂದ ಕೆಳಗೆ ಬಿದ್ದ ರೆಕ್ಕೆ ಬಲಿಯದ ಮರಿಯನ್ನು ಮಾನವ ತನ್ನ ಕೈಯ್ಯಿಂದ ಮುಟ್ಟಿ ಗೂಡಿಗೆ ಮರಳಿಸಿದಾಗ ಪುನಃ ಸೇರಿಸಿಕೊಳ್ಳದಷ್ಟು ತಮ್ಮದೇ ನೀತಿಯುಕ್ತ ಕಟ್ಟುಪಾಡುಗಳಿರುವ ಮರ್ಯಾದಿತ ಕಾಡುಸಮಾಜ ತಮ್ಮ ಮರ್ಯಾದೆ ಹಾಳಾದರೂ ಚಿಂತೆಯಿಲ್ಲಾ ಬದುಕಲು ಆಹಾರ ಸಿಕ್ಕರೆ ಸಾಕು ಎಂದುಕೊಂಡು ಹಾಗೆ ಮರ್ಯಾದೆಗೆಡಕ ಕಾರ್ಯಕ್ಕೆ ಮುನ್ನುಗ್ಗಿವೆ ! ತಮ್ಮದೇ ಆದ ರೀತಿ-ರಿವಾಜುಗಳನ್ನು ಗಾಳಿಗೆ ತೂರಿ ತಾವು ಬದುಕಲು ಪ್ರಯತ್ನಿಸುವ ಜೀವವಿಕಾಸವಾದ ಸರಿಯೆನ್ನುತ್ತೀರಷ್ಟೇ?

ಮೈಸೂರು ಪೇಟಾ ತೊಡುವ ಮಂದಿಗೆ ಕಾಳಜಿ ಇರದಿದ್ದರೆ ಹಾಳಾಗಿ ಹೋಗಲಿ ನಮ್ನಮ್ಮಲ್ಲಿ ನಮನಮಗೆ ಎಷ್ಟು ಅವುಗಳ ಬಗ್ಗೆ ಕಾಳಜಿ ಇದೆ? ಯಾರದರೂ ಆನೆ ಸಾಕಲು ಒಪ್ಪುವಿರೇ ಸಾಧ್ಯವೇ ? ನಾಣ್ನುಡಿಗಾದರೂ ಹೇಳುತ್ತೇವೆ --ಅದನ್ನು ಸಾಕುವುದು ಆನೆಸಾಕಿದಂತೇ ಅಂತ ಅಲ್ಲವೇ ? ಅಂದಮೇಲೆ ತಪ್ಪು ಪ್ರಾಣಿಗಳದಲ್ಲಾ ಮಾನವರದು ಎಂಬುದು ನಿರ್ಣಯಿಸಬೇಕಾದ ವಿಷಯವಷ್ಟೇ ? ಪ್ರತ್ಯಕ್ಷವೋ ಪರೋಕ್ಷವೋ ಸಂಭಾವನೆಯಿಲ್ಲದೇ ಯಾ ಉಪಜೀವನಕ್ಕೆ ಅನುಕೂಲವಿಲ್ಲದೇ ಯಾವ ಸಂಗೀತಗಾರನೂ ಹಾಡಲಾರ, ಯಾವಕಲಾವಿದನೂ ಚಿತ್ರಿಸಲಾರ, ಯಾವ ಸಾಹಿತ್ಯಕಾರನೂ ಬಹಳಕಾಲ ಬರೆಯಲಾರ, ಯಾವುದೇ ವೃತ್ತಿಯವನೂ ಆ ವೃತ್ತಿಯನ್ನು ನಡೆಸಲಾರ ಅಲ್ಲವೇ ? ಅಂದಮೇಲೆ ಹೊಟ್ಟೆಗೆ ಹಿಟ್ಟೇ ಸಿಗದ ಬೋಳಾದ ಕಾಡಿನ ಕಲ್ಲು[ಅದೂ ಇದ್ದರೆ!]ಗಳ ಮೇಲೆ ನಿಂತು ನವಿಲು ನರ್ತಿಸೀತೇ? ಗಿಳಿ ಕಿಚ್ಪಿಚ್ ಕಿಚ್ಪಿಚ್ ಉಲಿದೀತೇ ? ಕೋಗಿಲೆ ಇಂಪಾಗಿ ಹಾಡೀತೇ ? ಇಂತಹ ಜೀವಸಂಕುಲಗಳ ಅಳಿವು ಉಳಿವಿನ ಪ್ರಶ್ನೆ ಈಗೀಗ ಜಾಸ್ತಿ ಎದುರಿಗೆ ಬರುತ್ತಿದೆ.

ಮನಸ್ಸು ಈ ಬೇಗುದಿಯಲ್ಲಿ ಹಾಗೊಮ್ಮೆ ಹುಡುಕುತ್ತಾ ಜಯಸಿಂಹನ ಹಾಡನ್ನು ನೆನಪಿಸಿಕೊಳ್ಳುತ್ತದೆ. ನೋವುಂಡ ಮನ ನಲಿವು ಪಡೆಯಲು, ಬೇಸರಗೊಂಡ ಜೀವನದ ಏಕತಾನತೆಯಿಂದ ಕೆಲಕಾಲ ಹೊರಹೋಗಿ ನೋಡಿ ಆನಂದಿಸಲು [ಕೊನೇಪಕ್ಷ ಆ ಮಟ್ಟಕ್ಕಾದರೂ] ಕಾಡುಗಳೂ ಕಾಡಿನ ಸಮಾಜವೂ ಬೇಕಲ್ಲವೇ ? ಇದನ್ನು ನೀವೇ ನಿರ್ಧರಿಸಿ, ಕಾಡಿಗೆ/ಪ್ರಾಣಿಗಳಿಗೆ ಆಗಬಹುದಾದ ಅನ್ಯಾಯವನ್ನು ನಿಮ್ಮ ಕೈಲಾದ ಮಟ್ಟಿಗೆ ನಿಯಂತ್ರಿಸಿ, ಸಾಮೂಹಿಕವಾಗಿಯೋ ವೈಯ್ಯಕ್ತಿಕವಾಗಿಯೋ ಅಂತೂ ಹಾಗೊಂದಷ್ಟು ಕಾರ್ಯ ನಡೆಯುತ್ತಾ ಹೋದರೆ ಎಲ್ಲೋ ಒಂದೆರಡು ದೇವರಕಾಡುಗಳಾದರೂ ಉಳಿದುಕೊಂಡಾವು, ಬೆರಳೆಣಿಕೆಯ ಹಕ್ಕಿಗಳಾದರೂ ಬದುಕಿಕೊಂಡಾವು, ನಮಸ್ಕಾರ.

Monday, August 1, 2011

ತಪ್ಪು-ಒಪ್ಪುಗಳು


ತಪ್ಪು-ಒಪ್ಪುಗಳು

ತಪ್ಪ ಹೊರಿಸುವಾಗ ತೆಪ್ಪಗಿರಬೇಕೇಕೆ ?
ತಪ್ಪು ಒಪ್ಪುಗಳಂತು ಸಹಜ ಜೀವನದಿ
ಉಪ್ಪರಿಗೆಯರಸರೂ ತಪ್ಪುಮಾಡದೆ ಇರರು
ತಪ್ಪು ಪುನರಪಿ ಸಲ್ಲ | ಜಗದಮಿತ್ರ

ಹಣವ ಗುರಿಯಾಗಿಟ್ಟು ಗುಣಗಳೆಲ್ಲವ ಮರೆತು
ಗಣಿತೆಗೆದು ಮರಕಡಿದು ಕತ್ತಲೊಳು ಮಾರಿ
ಝಣಝಣದ ಕಾಂಚಾಣ ಕೈಸೇರುತಿರಬಹುದು
ಕಣಜ ಹಲವರ ಸ್ವತ್ತು | ಜಗದಮಿತ್ರ

ಕುದುರಿಸುತ ಹೊಸ ತಂತ್ರ ನೀತಿಯೆಲ್ಲವ ಮರೆತು
ಕುದುರೆವ್ಯಾಪಾರದಂತಿರಲು ಮುಂದದುವೇ
ಹದವರಿಯದಾಗುತ್ತ ಒದರಿ ಕೊಸರೋಡುವುದು
ಅದುರುವುದು ಗಣತಂತ್ರ | ಜಗದಮಿತ್ರ

ಜಗಕೆ ಸಂತಸವೀವೆ ಬಗೆಬಗೆಯ ಮೃಷ್ಟಾನ್ನ
ಮೊಗೆದು ಕೊಡುವೆನು ಎಂಬ ಹಮ್ಮು-ಬಿಮ್ಮಿನಲಿ
ಅಗೆದಗೆದು ಭೂಗರ್ಭ ತಾಯ ನೋಯಿಸಿದಾಗ
ಸೊಗೆದೊಗೆಯುವುದು ಪ್ರಕೃತಿ | ಜಗದಮಿತ್ರ

ಆನೆ ಹುಲಿ ಕರಡಿಗಳು ಊರೊಳಗೆ ನುಗ್ಗುವವು
ಬ್ಯಾನೆಯೆದ್ದಾಗೊಮ್ಮೆ ಹಸಿದ ಹೊಟ್ಟೆಯಲಿ
ಮಾನವನ ಕುಕೃತ್ಯ ಕಾಡನುಂಗಿರಲಾಗಿ
ಮೀನಿಗೂ ನೀರಿರದು ! ಜಗದಮಿತ್ರ

ಕೋಟಿಕೋಟಿಯನಳೆದು ಬೇಡದುದ ನಿರ್ಮಿಸಲು
ಆಟದಂಗಳವೇನು ರಾಜ್ಯಭಾರವದು ?
ಮೇಟಿಯೋಗಿಯ ಮರೆತು ಮತ್ತೊಂದ ಹಂಬಲಿಸೆ
ಆಟದಲಿ ಅಪಜಯವು | ಜಗದಮಿತ್ರ

ಪಕ್ಷವನು ಕಟ್ಟುವೊಲು ಅಕ್ಷಿಯನು ಓಡಿಸುತ
ವಕ್ಷದಲಿ ನಿಂತ ವಿರಂಚಿಯಂದದಲಿ
ಕಕ್ಷೆಯನು ಪಡೆದಜನ ಇಕ್ಷುಚಾಪದಿ ಮೆರೆವರ್
ರಕ್ಷೆ ಪಕ್ಷಕೆ ಮುಖ್ಯ | ಜಗದಮಿತ್ರ

’ಅಪ್ಪ-ಮಕ್ಕಳು’ ಸೇರೆ ದೇಶವಾಗುವುದಿಲ್ಲ
ರಪ್ಪನೇ ರಾಚುವುದು ಕಪಟ ಧೂರ್ತತನ !
ತೊಪ್ಪೆಹೊರಿಸುವ ಜನರು ಜಗದಿ ಮುಂದಾಗುವರು
ಅಪ್ಪಟವು ಜನಸೇವೆ | ಜಗದಮಿತ್ರ

ಮಾಯಕದ ’ಕೈ’ಗಳಲಿ ದೇಶದಾಟವೆ ಕೆಡುಗು
ನಾಯಕರ ಕೊರತೆಯಿದೆ ಹಲವು ನಾಯಕರು !
ಆಯಕಟ್ಟಳೊಗಿರುವ ಅವಕಾಶ ಮಾರಿದರು ! [ 2g spretrum ]
ಗಾಯ ಹುಲಿ ಹುಣ್ಣಂತೆ | ಜಗದಮಿತ್ರ

ಪಾಯ ಗಟ್ಟೀಗೊಳಿಸಿ ರಾಷ್ಟ್ರದುನ್ನತಿ ಬಯಸು
ಹಾಯಹರಿಗೋಲಂತೆ ಹರಿದು ಬಿಡಬೇಡ
ಹೇಯಕೃತ್ಯವ ಗೈದ ರಾಜಕೀಯಸುರರನು
ಧ್ಯೇಯದಿಂ ಬಗ್ಗುಬಡಿ | ಜಗದಮಿತ್ರ

Saturday, July 30, 2011

ಹತ್ತಾರು ಜನ ಸೇರಿ ಮನೆಯೊಂದ ಕದ್ದರು ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !


ಹತ್ತಾರು ಜನ ಸೇರಿ ಮನೆಯೊಂದ ಕದ್ದರು
ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !

ನಿಮ್ಮ ಹತ್ತಿರ ಹೇಳಲೇಬೇಕಾದ ಕೆಲವು ಅಂಶಗಳು ಇದ್ದವು. ಹೇಳದೇ ಇದ್ದರೂ ಎಂದಾದರೂ ನಿಮ್ಮ ಗಮನಕ್ಕೆ ಬರಬಹುದು, ಆದರೆ ತಡವಾಗಿ ಗಮನಕ್ಕೆ ಬಂದಾಗ ಸ್ವಲ್ಪ ಪಶ್ಚಾತ್ತಾಪವಾಗಬಹುದು. ಕೋತಿ ಬೆಣ್ಣೆಯನ್ನು ತಿಂದುಕೊಂಡು ಮೇಕೆಬಾಯಿಗೆ ಒರೆಸಿದ ಕತೆ ಇದು. ಹೀಗೇ ಚಿಂತಿಸುತ್ತಿದ್ದಾಗ ಮನದಲ್ಲಿ ಕೆಲವು ರಾಜಕೀಯದ ದುಗುಡಗಳು ರಕ್ಕಸರೂಪ ತಳೆದವು. ರೂಪತಳೆದ ರಕ್ಕಸರು ತಾವು ತಾವೇ ಹೊಡೆದಾಡಲು ನಿಂತಾಗ ತಡೆಯುವವರೇ ಇಲ್ಲವಾಗಿ ನಿತ್ರಾಣನಾಗುವ ಸ್ಥಿತಿಯಿತ್ತು. ಹಾಗಾಗುವ ಮುನ್ನ ನನ್ನನ್ನು ಬಚಾವ್ ಮಾಡ್ಕೊಳ್ಳುವುದಕ್ಕೆ ದಾರಿ ಹುಡುಕುತ್ತಿರುವಾಗ ನನಗೆ ದಕ್ಕಿದ ಅಂಶಗಳು ಇಷ್ಟು:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಉದ್ಭವವಾಗಿದ್ದು ನಮ್ಮ ಮತದಾರರ ತಪ್ಪು ಮುಂಧೋರಣೆಯ ಪರಿಣಾಮವೇ. ಅದರಲ್ಲೂ ನಮ್ಮ ಸಂವಿಧಾನದಲ್ಲಿನ ಲೋಪದೋಷಗಳು ಮೆರವಣಿಗೆ ಹೊರಟಾಗ ಪ್ರಜಾಪ್ರಭುತ್ವವೇ ಬಸವಳಿಯುತ್ತದೆ! ಅಂಬೇಡ್ಕರ್ ಕಾಲದ ಸಂವಿಧಾನದ ಕರಡನ್ನು ಇನ್ನೂ ತಿದ್ದದೇ ಇರುವುದು ಮೊದಲ ತಪ್ಪಾಗಿದೆ. ಇವತ್ತಿನ ನೂರಿಪ್ಪತ್ತು ಕೋಟಿ ಜನಸಂಖ್ಯೆಯನ್ನು ಏಕಛತ್ರದಡಿಯಲ್ಲಿ ನಿಭಾಯಿಸುವಲ್ಲಿ ಈಗಿರುವ ಸಂವಿಧಾನದ ಕೆಲವು ಕಟ್ಟುಪಾಡುಗಳು ನ್ಯೂನತೆ ಹೊಂದಿರುವುದು ಕಂಡುಬರುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿರುವಂತೇ ಗಂಜಿಯಲ್ಲಿ ಬಿದ್ದ ನೊಣದ ರೀತಿ ಆಗಿಬಿಟ್ಟಿತ್ತು. ಆರಕ್ಕೇಳದ ಮೂರಕ್ಕಿಳಿಯದ ಬಿಜೆಪಿಯ ಶಾಸಕರ ಸಂಖ್ಯೆಯಲ್ಲಿ ಯಡ್ಯೂರಪ್ಪ ಪಕ್ಷವನ್ನು ಸಂಭಾಳಿಸುತ್ತಾ ವಿರೋಧ ಪಕ್ಷದ ನಾಯಕ್ ಸ್ಥಾನದಲ್ಲಿ ಕೊತು ಭಜನೆಯಲ್ಲಿ ಕಾಲ ಕಳೆದಿದ್ದು ಬಹಳ ಸಮಯವಾಗಿತ್ತು. ಪ್ರತೀಬಾರಿ ತಾಳತಂಬೂರಿ ಕೈಯೊಳಗೆ ವಿಠಲನ ಭಜನೆ ಮನದೊಳಗೆ ಎಂದುಕೊಂಡು ನಾವು ಯಾವುದಕ್ಕೂ ಅಡ್ಡಿಪಡಿಸುವವರಲ್ಲ, ನಮಗೆ ಸಂಖ್ಯಾಬಲ ಕಮ್ಮಿ ಇದೆ, ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂತುಕೊಳ್ಳುತ್ತೇವೆ ಎಂಬ ಮಾತನ್ನು ಉದ್ಗರಿಸುತ್ತಾ ಸೈಲೆಂಟಾಗಿ ವಿಧಾನಸಭೆಯಲ್ಲಿ ಕೂತ ಜನ ಬಿಜೆಪಿಯವರು. ಆಳುವ ಪಕ್ಷಗಳ ತಪ್ಪುಗಳನ್ನು ಅತಿಸೂಕ್ಷ್ಮವಾಗಿ ಗಮನಿಸುವ ಬುದ್ಧಿಮತ್ತೆಯಾಗಲೀ ನುಂಗಣ್ಣಗಳ ಜಾಡನ್ನು ಹಿಡಿದು ಜಾಲಾಡಿ ಅವರನ್ನು ಹಣ್ಣುಗಾಯಿ-ನೀರುಗಾಯಿ ಮಾಡುವ ಜಾಯಮಾನವಾಗಲೀ ಬಿಜೆಪಿಯ ಜನಕ್ಕಿರಲಿಲ್ಲ.

ಕೆಲವೊಮ್ಮೆ ಅಪರೂಪಕ್ಕೆ ಎಲ್ಲೋ ಕತ್ತಲಲ್ಲಿ ಯಾರೋ ದಾರಿಹೋಕನನ್ನು ಕಂಡು ಬೊಗಳುವ ನಾಯಿಗಳಂತೇ ವಿಧಾನ ಸಭೆಯಲ್ಲಿ ಅಡ್ಡಡ್ಡ ಮುಖಹಾಕಿ ಕೂಗಿದ್ದು ಬಿಟ್ಟರೆ ದಾಖಲೆ ಸಮೇತ ಯಾರನ್ನೂ ಹಿಡಿಯುವ ದಾರ್ಷ್ಟ್ಯತನ ಯಾರಲ್ಲೂ ಕಾಣಲಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕೆಳಗಿಳಿದ ನಂತರ ಯಾವೆಲ್ಲಾ ಮುಖ್ಯಮಂತ್ರಿಗಳು ಬಂದರೋ ಎಲ್ಲರೂ ಬೇಕಷ್ಟು ಆಸ್ತಿಗಳನ್ನು ಮಾಡಿಕೊಂಡವರೇ. ಯಾರೂ ಸಂಭಾವಿತರೇನಲ್ಲ. ಕನ್ನಡದ ನಟ ರಾಜ್‍ಕುಮಾರ್ ರ ಬಿಡುಗಡೆಗೆ ವೀರಪ್ಪನ್‍ಗೆ ಕೊಡಲು ಹೊಂದಿಸಿದ ಹಣ ಎಲ್ಲಿಂದ ಬಂತು ಎಂಬುದು ಇನ್ನೂವರೆಗೂ ನಿಗೂಢ! ಎಸ್ಸೆಮ್ ಕೃಷ್ಣ ಸರಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರನ್ನು ಸಿಂಗಪೂರ್ ಮಾಡಲು ಹೊರಟವರು-ಗಾಡಿ ಮುಗ್ಗರಿಸಿಬಿಟ್ಟಿತ್ತು; ಆದರೆ ದಾಖಲಾತಿಗಳಲ್ಲಿ ಖರ್ಚುಗಳು ಕಮ್ಮಿಯೇನಿರಲಿಲ್ಲ! ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪಡಾಬಿದ್ದ ಜಮೀನುಗಳು ರೆಕ್ಕೆ-ಪುಕ್ಕ ಬಲಿತ ಹಕ್ಕಿಗಳಂತೇ ಗರಿಗೆದರಿ ಮೈಕೊಡವಿಕೊಂಡು ಸೈಟುಗಳಾಗಿ ಬದಲಾದವು, ಬದಲಾದ ಸೈಟುಗಳು ಯಾರ್ಯಾರದೋ ಕೈವಶವಾದವು !

ಯಾವುದೇ ಕಳ್ಳತಂತ್ರಗಳು ನಡೆದು ಆಳುವ ಜನ ತಿಮಿಂಗಲಗಳ ಥರಾ ಕಬಳಿಸುತ್ತಾ ಸಾಗಿದ್ದರೂ ಯಡ್ಯೂರಪ್ಪ ಕಂಬಳಿಹೊದ್ದು ಮಲಗಿಬಿಟ್ಟಿದ್ದರು. ಆಗ ದಾಖಲಾತಿಗಳು ಆಳುವವರ ಅದೃಷ್ಟಕ್ಕೋ ಎನ್ನುವಂತೇ ಗಣಕೀಕೃತವಾಗಿರಲಿಲ್ಲ. ರೈಟ್ ಟು ಇನ್ಫಾರ್ಮೇಷನ್ ಕಾಯಿದೆ ಜಾರಿಗೆ ಬಂದಿರಲಿಲ್ಲ! ಹೀಗಾಗಿ ಸಮರ್ಪಕವಾದ ಸರ್ಕಾರೀ ದಾಖಲಾತಿಗಳ ಕ್ರೋಢೀಕರಣವೂ ಅಷ್ಟು ಸಲೀಸಾಗಿರಲಿಲ್ಲ. ಮಣ್ಣಿನ ಮಗನಾಗಿ ಭೂಮಿಯನ್ನೇ ಅತಿಯಾಗಿ ಪ್ರೀತಿಸುವ ಗೌಡರ ಕುಟುಂಬದ ಮೂಲಮಂತ್ರ ಭೂಮಿಯನ್ನು ವಶಕ್ಕೆ ಪಡೆಯುವುದು, ಬೇನಾಮಿ ಹೆಸರಲ್ಲಿ ಅದನ್ನು ಖಾತೆಬರೆಸಿಕೊಳ್ಳುವುದು ಆಗಿತ್ತು. ತಮ್ಮ ಅನುಕೂಲಕ್ಕೆ ಹೇಗೆಲ್ಲಾ ಬೇಕೋ ಹಾಗೆಲ್ಲಾ ಆಳುವ ಪಕ್ಷದೊಳಗೇ ತೂರಿಕೊಂಡು ಕೆಲಸಮಾಡಲು ನೋಡಿದ ಕುತ್ಸಿತ ರಾಜಕೀಯ ಅವರದ್ದು. ಯಾವ ಪಕ್ಷಬಂದರೂ ಅವರೊಂದಿಗೆ ತಾವಿದ್ದೇವೆ ಎನ್ನುವ ಹೇಳಿಕೆಕೊಡುತ್ತಾ ಸಮಯ ಸಿಕ್ಕಾಗಲೆಲ್ಲಾ ದುರುಪಯೋಗ ಪಡಿಸಿಕೊಂಡ ಜನ ಅವರು.

ಇಂತಹ ಸಮಯದಲ್ಲಿ ಜನತಾದಳ ಇಬ್ಭಾಗವಾದಾಗ ಹುಟ್ಟಿಕೊಂಡ ಜನತಾದಳ [ಸೆಕ್ಯೂಲರ್] ಎಂಬ ಹೆಸರಿನ ಪಕ್ಷಕ್ಕೆ ರಾಷ್ಟ್ರೀಯ ಪಕ್ಷವೆಂದು ಸ್ವಘೋಷಣೆ ಮಾಡಿಕೊಂಡಿದ್ದೂ ಅಲ್ಲದೇ ಮುಂದೆ ಅದರಲ್ಲಿ ತಮ್ಮ ಅನುಕೂಲಕ್ಕಾಗಾಗಿ ಎಳೆದು ಸೇರಿಸಿಕೊಂಡಿದ್ದ ಸಿದ್ಧರಾಮಯ್ಯ, ಸಿಂಧ್ಯಾ ಮೊದಲಾದವರನ್ನು ಬೇಷರತ್ತಾಗಿ ಓಡಿಸಿ ಅಪ್ಪ ರಾಷ್ಟ್ರಾಧ್ಯಕ್ಷ ಮಗ ರಾಜ್ಯಾಧ್ಯಕ್ಷ ಆಗಿ ಮನೆಯ ಪಕ್ಷವೆಂದು ಜಗಜ್ಜಾಹೀರು ಪಡಿಸಿದ ಏಕಮೇವಾದ್ವಿತೀಯ ಸಾಹಸ ಗೌಡರದು. ತಾನು ಜನಾನುರಾಗಿ ಮಣ್ಣಿನ ಮಕ್ಕಳ ಆರೈಕೆ ಮಾಡುತ್ತೇನೆನ್ನುತ್ತಾ ತಿರುಗಿದ ದೊಡ್ಡ ಗೌಡರು ಅದೃಷ್ಟ ಖುಲಾಯಿಸಿ ಪ್ರಧಾನ ಮಂತ್ರಿಯಾದಾಗ ೧೫-೨೦ ಬಾರಿ ಇಡೀ ಬೆಂಗಳೂರಿಗೆ ಮಾವಿನ ತೋರಣ ಹಾಕಿಸಿ ಟ್ರಾಫಿಕ್ ಜಾಮ್ ಮಾಡಿಸಿ ಭೇಟಿಕೊಟ್ಟಿದ್ದು ಬಿಟ್ಟರೆ ತಮ್ಮ ತವರು ಜಿಲ್ಲೆ ಹಾಸನದ ಅಭಿವೃದ್ಧಿಗೂ ಕಡ್ಡೀಕೆಲಸ ಮಾಡಿದವರಲ್ಲ!

ಚುನಾವಣೆಯಲ್ಲಿ ಗೆದ್ದವರು ಅತಂತ್ರರಾದಾಗ ತಾವು ಸಪೋರ್ಟ್ ಕೊಡುತ್ತೇವೆ ಎಂದು ಸೂಟ್ ಕೇಸ್ ವ್ಯವಹಾರ ಆರಂಭಿಸಿದ ಗೌರವಕ್ಕೆ ಪಾತ್ರವಾದುದೂ ಅದೇ ಪಕ್ಷ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರಕಾರ ರಚಿಸಿ ಅಲ್ಲಿ ತಮ್ಮ ಬೇಳೆ ಬೇಯಲು ತಡವಾದಾಗ ಕಳ್ಳ ದಾರಿ ಹುಡುಕಿ " ಮಗನೇ ಹೀಗೆ ಮಾಡಿಬಿಡೋಣ " ಎಂದು ಕುಮಾರನಿಗೆ ಕಿವಿಯೂದಿ ತಾನು ಮುಖದ ಮೇಲೆ ಟವೆಲ್ ಹಾಕಿಕೊಂಡವರ ರೀತಿ ಏನೂ ಕಾಣಲಿಲ್ಲ ಎಂದುಕೊಳ್ಳುತ್ತಾ ಇತ್ತ ಮಗನನ್ನು ಬಿಜೆಪಿಯವರ ಜೊತೆ ಕಳಿಸಿ ಮತ್ತೆ ಹೊಸ ಸಮ್ಮಿಶ್ರ ಸರಕಾರ ತಂದು ಕಾಂಗ್ರೆಸ್‍ನ್ನು ದೇಶದಿಂದಲೇ ಉಚ್ಛಾಟಿಸಲು ಹೊರಟಿದ್ದ ನಿಸ್ಸೀಮ ಗೌಡರು ತಮ್ಮ ದಾಳವನ್ನು ಪ್ರಯೋಗಿಸುತ್ತಲೇ ಇದ್ದರು. ಯಾವಾಗ ತಾನು ಹೇಳಿದ್ದನ್ನು ಸಖ್ಯದಲ್ಲಿರುವ ಇತರ ಪಕ್ಷಗಳು ಕೇಳುವುದಿಲ್ಲವೋ ಆಗೆಲ್ಲಾ ಭೂತೋಚ್ಛಾಟನೆ ಮಾಡಿದಂತೇ ಅವರನ್ನು ಉಚ್ಛಾಟಿಸುವ ಮನೋಧರ್ಮ ಬೆಳೆಸಿಕೊಂಡ ಅಪ್ಪ-ಮಕ್ಕಳು ಹರದನ ಹಳ್ಳಿಯ ೧೧ ಎಕರೆ ಕೃಷಿ ಜಮೀನಷ್ಟೇ ಮೂಲವಾಗಿ ಹೊಂದಿದ್ದವರು ಇಂದು ಸಾವಿರಾರು ಎಕರೆ ಕೃಷಿಭೂಮಿ, ಕೋಟಿಗಟ್ಟಲೆ ಆಸ್ತಿಮಾಡಿರುವುದು ಜನರ ಕಣ್ಣಿಗೆ ಕಂಡರೂ ಲೋಕಾಯುಕ್ತರಿಗೆ ಸಿಗುವ ಕಡತಗಳು ಮಾಯವಾಗಿವೆ! ಅಸಲಿಗೆ ಅವರು ಗುಳುಂ ಮಾಡುವ ಹೊತ್ತಿಗೆ ಲೋಕಾಯುಕ್ತರಿಗೆ ಅಷ್ಟು ಸ್ವಾತಂತ್ರ್ಯವೇ ಇರಲಿಲ್ಲ!

ಬಿಜೆಪಿಯ ಅಳಿವು ಉಳಿವೇ ಪ್ರಶ್ನೆಯಾಗಿದ್ದಾಗ ತಾವು ಅದನ್ನು ಬಲಪಡಿಸಿದರೆ ಅದರಿಂದ ಅಧಿಕಾರವೂ ಆ ಮೂಲಕ ಎಲ್ಲಾ ಲಾಭವೂ ತಮದಾಗಬಹುದೆಂಬ ಮುಂಧೋರಣೆ ತಳೆದಿದ್ದ ರೆಡ್ಡಿ ಬ್ರದರ್ಸ್ ಬಿಜೆಪಿಯ ಬಾಗಿಲು ತಟ್ಟಿದ್ದರು. ರೋಗಿ ಬಯಸಿದ್ದೂ ಹಾಲು ವೈದ್ಯರು ಹೇಳಿದ್ದೂ ಹಾಲು ಎನ್ನುವ ಹಾಗೇ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬಿಜೆಪಿಗೆ ಆರ್ಥಿಕ ಸ್ವಾತಂತ್ರಬರುವಂತೇ ಫಂಡಿಂಗ್ ಮಾಡಿಕೊಂಡು ನಿಧಾನವಾಗಿ ಬಿಜೆಪಿಯೊಳಗೆ ಕುಕ್ಕರಿಸಿದವರೇ ರೆಡ್ಡಿಬ್ರದರ್ಸ್ ! ಅಂದಿನ ದಿನಗಳಲ್ಲಿ ಆಗಷ್ಟೇ ಇನ್ನೂ ಕೋಟಿಗಳ ಲೆಕ್ಕದಲ್ಲಿ ಚಿಗಿತಿದ್ದ ಗಣಿದೊರೆಗಳು ಮುಂದೆ ಸಾವಿರಕೋಟಿ ಲಕ್ಷಕೋಟಿ ಎಣಿಸಬಹುದೆಂಬ ಕಾರಣಕ್ಕೆ ಹಾಗೆ ಬಂದರು ಎಂಬುದು ಬಿಜೆಪಿಗೂ ಮೊದಲು ತಿಳಿಯಲಿಲ್ಲ! ಅದು ’ ಆ ಮಟ್ಟಕ್ಕಿದೆ ’ ಎಂದು ಅರ್ಥವಗುವಾಗ ತಡವಾಗಿ ಹೋಗಿತ್ತು ! ಆಕ್ಟೋಪಸ್‍ನಂತೇ ಅವರು ಬಿಜೆಪಿಯನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಸೋತವ ಸತ್ತ ಅನ್ನುವ ಕಾಲ ಇದಾದ್ದರಿಂದ ಗೆಲ್ಲುವ ತಂತ್ರವನ್ನು ಹೆಣೆಯುವಲ್ಲಿ ಬೆಕ್ಕಿಗೆ ಬೆಣ್ಣೆ ತೂಗಲು ಬಂದ ಮಂಗಗಳು ಅವರಾದರು! ಹೊಸದಾಗಿ ಮದುವೆಯಾದ ದಂಪತಿ ತಮ್ಮಲ್ಲಿನ ದೌರ್ಬಲ್ಯಗಳ ಅರಿವಿರದೇ ಅನ್ಯೋನ್ಯವಾಗಿರುವಂತೇ ಈ ಮೈತ್ರಿ ಬೆಳೆಯುತ್ತಲೇ ಸಾಗಿತು.

ತಮಗೆ ಎರಡು ವರ್ಷಗಳ ನಂತರ ಅಧಿಕಾರ ಕೊಡುವುದಾಗಿ ನಂಬಿದ್ದ ಯಡ್ಯೂರಪ್ಪನವರಿಗೆ ಯಾವಾಗ ಭ್ರಮನಿರಸನವಾಯಿತೋ, ಎರಡು ವರ್ಷಗಳು ಮುಗಿದರೂ " ಯಡ್ಯೂರಪ್ಪನವರಿಗೆ ಮುಖ್ಯಮಂತ್ರಿಯಾಗುವ ಯೋಗವೇ ಇಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ " ಎಂಬ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಾ ತಾನೇ ಮುಂದುವರಿಯಲು ಹಪಹಪಿಸಿದ ಅಧಿಕಾರದಾಹೀ ಜನ ಕುಮಾರಸ್ವಾಮಿ. ಕುಮಾರಸ್ವಾಮಿಯ ಕಾಲಘಟ್ಟದಲ್ಲಿಯೇ ಗಣಿರಾಜಕರಣ ತಾರಕ್ಕಕ್ಕೇರಿತ್ತು ಎಂಬುದು ಸುಳ್ಳಲ್ಲ. ಪಡೆಯುವ ಕಪ್ಪುಹಣ ಸಾಲದಾಗಿ ರೆಡ್ಡಿಗಳ ಜತೆ ವೈರತ್ವ ಕಟ್ಟಿಕೊಂಡು ಅನಿಲ್ ಲಾಡು-'ಕೇಸ್ರೀಬಾತು' ಮುಂತಾದ ಜನರನ್ನು ಬೆನ್ನುತಟ್ಟಿ ಬೆಳೆಸಿದ [ಅಪ]ಖ್ಯಾತಿ ಆ ಸರಕಾರಕ್ಕೆ ಸಲ್ಲಬೇಕು. ಜನರೊಂದಿಗೆ ಹಳ್ಳಿಗಳಲ್ಲೇ ರಾತ್ರಿಕಳೆಯುತ್ತೇನೆ ಎಂಬ ಹೊಸ ಪ್ರಹಸನ ಆರಂಭಿಸಿ ಉತ್ತರಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಏನೇನೂ ಅನುಕೂಲವಿಲ್ಲದ ಮನೆಗಳಲ್ಲಿ ವಿಶ್ವಾಮಿತ್ರ ಸೃಷ್ಟಿಯಂತೇ ಹೊಸದಾಗಿ ಎಲ್ಲಾ ಅನುಕೂಲಗಳನ್ನೂ ತನ್ನ ಬರುವಿಕೆಯೊಳಗೆ ನಿರ್ಮಿಸಲು ಆದೇಶಿಸಿ, ತನಗೆ ಬೇಕಾದ ಜನ ಆ ಕೆಲಸವನ್ನು ಪೂರೈಸಿದಾಗ ಅಲ್ಲಿಗೆ ಹೋಗಿದ್ದು ಮಾಧ್ಯಮಕ್ಕೆ ಪೋಸುಕೊಟ್ಟು ಅಲ್ಲಿಂದ ಹೊರಟುಹೋದಮೇಲೆ ಮಡಗಿದ್ದ ಎಲ್ಲಾ ಸವಲತ್ತುಗಳನ್ನೂ ಆ ಮನೆಗಳ ಬಡಪಾಯಿಗಳಿಂದ ಕಿತ್ತುಕೊಂಡ ಹೆಗ್ಗಳಿಕೆ ಕುಮಾರಣ್ಣನಿಗೆ ಸಲ್ಲಬೇಕು !

ಚುನಾವಣೆ ಹೇಗೂ ಇರಲಿ, ಯಾರು ಬಂದರೂ ಅಧಿಕಾರ ನಮ್ಮ ಕೈಯ್ಯಲ್ಲೇ ಎಂಬ ಹಿಂಬಾಗಿಲ ತಂತ್ರ ಆರಂಭಿಸಿದ ಜೆಡಿಎಸ್ ಎಂಬ ಅಪ್ಪ-ಮಕ್ಕಳ ಪಕ್ಷ ಅಧಿಕಾರಕ್ಕಾಗಿ ಏನೇನು ಮಾಡಬೇಕೋ ಅಷ್ಟನ್ನೂ ಮಾಡಿ ಆ ಕಸರತ್ತು ಫಲಕೊಡದಾದಾಗ ಆಳುವ ಪಕ್ಷವನ್ನು ಉರುಳಿಸುವ ಕುತಂತ್ರವನ್ನು ಹೆಣೆಯತೊಡಗಿದರು. ಇಂತಹ ಸಮಯದಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಸನ್ನಿವೇಶದಲ್ಲಿ ಕಮಲಪಾಳಯಕ್ಕೆ ’ಆಪರೇಶನ್ ಕಮಲ’ ಎಂಬ ಹೊಸ ಸರ್ಕಸ್ಸು ಆರಂಭಿಸಬೇಕಾಗಿ ಬಂತು. ಕುಮಾರಣ್ಣ ಕಲಿಸಿದ ಕುದುರೆವ್ಯಾಪಾರದ ’ನೀತಿ’ಯನ್ನು ಸಹೋದ್ಯೋಗಿಗಳಾಗಿ ಇವರೂ ಕಲಿತಿದ್ದರಲ್ಲಾ ಅದು ಇಲ್ಲಿ ಉಪಕಾರಕ್ಕೆ ಬಂತು! ಆ ಕೆಲಸಕ್ಕೆ ಉಪಯೋಗಿಸಿದ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಾಗಬೇಕು---ಅದಕ್ಕಾಗಿ ತಮಗೆ ಗಣಿಗಳಲ್ಲಿ ಏನಾದರೂ ಮಾಡಲು ಬಿಡಿ ಎಂದು ’ ಬ್ಲ್ಯಾಕ್ ಮೇಲ್’ ತಂತ್ರ ಆರಂಭಿಸಿದ್ದೂ ಅದೇ ಜನ[ರೆಡ್ಡಿ ಬ್ರದರ್ಸ್ ].

ಯಡ್ಯೂರಪ್ಪ ಗಣಿಗಳ ಬಗ್ಗೆ ಅಷ್ಟು ಆಸಕ್ತಿ ತಳೆದವರಾಗಿರಲಿಲ್ಲ. ತನ್ನ ಕುರ್ಚಿಯ ಭದ್ರೆತೆಗಾಗಿ ಗಣಿಧಣಿಗಳು ಹೇಳುವ ಮಾತುಗಳನ್ನು ಅಕ್ಷರಶಃ ಪಾಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಯಡ್ಯೂರಪ್ಪರದಾಗಿತ್ತು. ಸದಾ ತಮ್ಮಮಾತು ನಡೆಯಬೇಕೆಂಬ ಅಪೇಕ್ಷೆಯಲ್ಲಿರುವ ಅನಂ‍ಕುಮಾರ್ ಪಕ್ಷದೊಳಗೇ ತನಗೆ ಪ್ರತ್ಯೇಕ ಬಣವನ್ನೂ ಸೃಷ್ಟಿಸಿಕೊಂಡಿದ್ದ ಜನ. ಹೊರಗಿನಿಂದ ಯಡ್ಯೂರಪ್ಪನವರಿಗೆ ಬೆಂಬಲ ಕೊಟ್ಟರೂ " ನಾವೆಲ್ಲಾ ಸೇರಿ ಬಿಜೆಪಿ ಸರಕಾರವನ್ನು ಯಶಸ್ವಿಗೊಳಿಸಬೇಕು " ಎಂದು ಮೇಜು ಮುರಿಯುವಷ್ಟು ಗುದ್ದಿ ಹೇಳಿದರೂ ಆ ಗುದ್ದು ಯಡ್ಯೂರಪ್ಪನವರಿಗೇ ಪರೋಕ್ಷವಾಗಿ ಬೀಳುತ್ತಿತ್ತು. ಹೀಗೇ ಆ ಕಡೆ ಕುಮಾರ ಈ ಕಡೆ ಅನಂತ ಇನ್ನೊಂದು ಕಡೆ ರೆಡ್ಡಿಬ್ರದರ್ಸ್ ಈ ಮೂರೂ ದಿಕ್ಕುಗಳಿಂದ ಥರಥರದ ಮಹಾಮಹಾ ಅಸ್ತ್ರಗಳು ಪ್ರಯೋಗಿಸಲ್ಪಟ್ಟಾಗಲೆಲ್ಲಾ ದೇವರು-ಹೋಮ-ತೀರ್ಥಯಾತ್ರೆ ಅಂತ ಹೆಗಲಿಗೆ ಶಾಲು ಹೊದ್ದು ಕೈಮುಗಿದುಕೊಂಡು ದೇವರನ್ನು ಮೋರೆಹೋದ ಜನ ಯಡ್ಯೂರಪ್ಪ !

ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಚಿಂತನೆಯಲ್ಲಿದ್ದ ಯಡ್ಯೂರಪ್ಪರ ಹೃದಯದ ಬಾಗಿಲು ತಟ್ಟಿದ ವ್ಯಕ್ತಿ ಶೋಭಾ. ಅವರ ವೈಯ್ಯಕ್ತಿಕ ವಿಷಯ ಏನೇ ಇದ್ದರೂ ವ್ಯವಹಾರದಲ್ಲಿ ಚಾಣಾಕ್ಷೆ ಮತ್ತು ಸಾಕಷ್ಟು ಓದಿಕೊಂಡಿದ್ದು, ಆರೆಸ್ಸೆಸ್ ಮೂಲದ ಸಂಸ್ಕೃತಿಯನ್ನು ಹೊಂದಿದ್ದರಿಂದ ಮಿಕ್ಕೆಲ್ಲಾ ಧೂರ್ತರಿಗಿಂತ ಆವಳೇ ವಾಸಿ ಎಂಬುದೂ ಯಡ್ಯೂರಪ್ಪನವರಿಗೆ ಸ್ವಲ್ಪ ಕಷ್ಟವನ್ನೇ ತಂದಿತು. ಶೋಭಾ ಚೆನ್ನಾಗೇ ಕೆಲಸ ನಿರ್ವಹಿಸಿದರೂ ಧೂರ್ತರಾಜಕಾರಣಿಗಳನ್ನು ನಿಯಂತ್ರಿಸುವಲ್ಲಿ ’ಒಳಗಿನಿಂದ’ ಕೆಲಸಮಾಡುತ್ತಿದ್ದಳು. ಇದು ರೇಣುಕಾಚಾರ್ಯ, ಬೇಳೂರು ಮುಂತಾದ ಹಲವಾರು ಹಗಲುದರೋಡೆ ಶಾಸಕರಿಗೆ ನುಂಗಲಾರದ ತುತ್ತಾಗಿತ್ತು. ಈ ಸಮಯವನ್ನೇ ಕತ್ತೆಕಿರುಬ ಎಂಬ ಪ್ರಾಣಿ ದೂರದಿಂದ ಕೈಲಾಗದ ಪ್ರಾಣಿಯನ್ನು ಕಂಡು ಬೆನ್ನತ್ತು ಬರುವಂತೇ ಕುಮಾರಣ್ಣ ಬಳಸಿಕೊಂಡ! ಮತ್ತೆ ಕುದುರೆ ವ್ಯಾಪಾರ ಜೋರಾಗಿ ನಡೆಯಿತು. ಯಾವಾಗಲೆಲ್ಲಾ ಸಾಧ್ಯವಾಗುವುದೋ ಆವಾಗೆಲ್ಲಾ ನಾನಾವಿಧದ ಸರ್ಕಸ್ಸು ಮಾಡಿ ಕುರ್ಚಿ ಹಿಡಿಯಲು ನೋಡಿದಾತ ಕುಮಾರ.

ರಾಜಕೀಯ ಬರೇ ಸಂಬಳದ್ದಾದರೆ ಯಾರೂ ಆ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿದ್ದರೇನೋ ! ಆದರೆ ರಾಜಕೀಯ ಇವತ್ತಿಗೆ ಒಂದು ಉದ್ಯಮ! it is an industry by all means ! ರಾಜಕೀಯ ಪ್ರಜಾಸೇವೆಗೆ ಎಂಬುದು ಗಾಂಧೀಜಿಯ ಕಾಲಕ್ಕೇ ಮುಗಿದುಹೋದ ವಿಷಯ. ನೆಹರೂ ಕಾಲದಿಂದಲೇ ರಾಜಕೀಯ ಹದಗೆಟ್ಟುಹೋಯಿತು. ಪಾರ್ಟಿ ಫಂಡಿಂಗ್ ವ್ಯವಹಾರ ಆಗಿನಿಂದಲೇ ಆರಂಭಗೊಂಡಿದ್ದು! ಫಂಡಿಂಗ್ ಮಾಡುವವರಿಗೆ ಅದರ ನಾಲ್ಕುಪಟ್ಟು ಇನ್ನೂ ಕೆಲವರಿಗೆ ಹತ್ತಾರುಪಟ್ಟು ಮರಳಿಪಡೆಯಬಹುದೆಂಬ ಅನಿಸಿಕೆಯೂ ಶುರುವಾಯ್ತು! ಯಾವಾಗ ಈ ಫಂಡಿಂಗ್ ದಂಧೆಯಲ್ಲಿಯೇ ಪೈಪೋಟಿ ಆರಂಭವಾಯಿತೋ ಆಗ ಪ್ರತಿಯೊಬ್ಬರೂ ತಂತಮ್ಮ ಉಳಿವಿಗಾಗಿ ಶಾಸಕ, ಸಂಸದ ಸ್ಥಾನದ ಭದ್ರತೆಗಾಗಿ ಜಾಸ್ತಿ ಜಾಸ್ತಿ ಇನ್ವೆಷ್ಟ್ ಮಾಡಲೇಬೇಕಾಯಿತು.

ಈಗಂತೂ ರಾಜಕೀಯ ಹೇಗಾಗಿದೆಯೆಂದರೆ ಖೂಳರು, ರಕ್ಕಸರು ಮಾತ್ರ ರಾಜಕೀಯ ನಡೆಸುವಂತಾಗಿದೆ ಎಂಬುದು ಪ್ರಜಾಪ್ರಭುತ್ವದ ಅಥವಾ ಪ್ರಜಾಸತ್ತೆ ಸತ್ತನಂತರ ಭೂತವಾಗಿ ಕಾಡುತ್ತಿದೆ ! ಹಾಗನಿಸಿದಾಗಲೆಲ್ಲಾ ನಮಗನಿಸುವುದು ಹಿಂದಿನ ರಾಜರ ಆಳ್ವಿಕೆಗಳೇ ಎಷ್ಟೋ ವಾಸಿಯಾಗಿತ್ತೆಂಬುದು. ಹಣವಿದ್ದರೇ ಸಾಕು- ಕ್ರಿಮಿನಲ್ ಆದರೂ ಪರವಾಗಿಲ್ಲ, ಅರೆಹುಚ್ಚನಾದರೂ ಪರವಾಗಿಲ್ಲ, ಅವಿದ್ಯಾವಂತನಾದರೂ ಪರವಾಗಿಲ್ಲ, ಒಂದೆರಡು ಕೊಲೆಸುಲಿಗೆ ದರೋಡೆ ಮಾಡಿ ತನ್ನ ಸುತ್ತಲ ಸಮಾಜವನ್ನು ಹೆಸರಿಸಿ ಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಆ ಮೂಲಕ ಅಧರ್ಮದಿಂದ ಅನ್ಯಾಯದಿಂದ ವಾಮಮಾರ್ಗದಿಂದ ಗಳಿಸಿದ ಹಣಚೆಲ್ಲಿ ಚುನಾವಣೆಗೆ ನಿಲ್ಲುವುದು, ಆರಿಸಿಬರುವುದು, ಅಧಿಕಾರ ಹಿಡಿದು ನಮ್ಮನ್ನು ಆಳುವುದು, ಆಳುವಾಗ ಸರಕಾರದ ಹಣ/ಆಸ್ತಿಗಳಲ್ಲಿ ತಮಗೆ ಸಿಗುವಷ್ಟನ್ನೂ ಕಬಳಿಸುವುದು---ಮತ್ತೆ ಮುಂದಿನ ಚುನಾವಣೆಗೆ ವಿರೋಧೀ ಸ್ಥಾನದಲ್ಲಿ ನಿಲ್ಲುವವರನ್ನು ಬಡಿಯಲು ಬೇಕಾಗುವ ಎಲ್ಲಾ ’ವ್ಯವಸ್ಥೆ’ಗಳನ್ನೂ ಮಾಡಿಕೊಳ್ಳುವುದು--ಹೀಗೇ ಇದೊಂದು ಅಧಿಕಾರ ದಾಹೀ ವರ್ತುಲ ನಡೆದೇ ಇದೆ.

ಇಲ್ಲಿ ಯಾರೂ ಸಮಾಜ ಸೇವಕರಿಲ್ಲ. ಪಕ್ಷಾತೀತವಾಗಿ ಎಲ್ಲರೂ ಒಂದೇ. ಹೊರಗೆ ವಿರುದ್ಧವಾಗಿ ಹೇಳಿಕೆಕೊಡು ಜನ ಒಳಗೆ ಒಂದೇ ಮೇಜಿನಮೇಲೆ ಕೈಯ್ಯೂರಿ ಕುಳಿತು ತಿಂದು-ಕುಡಿದು ಮಾಡುತ್ತಾರೆ. ’ರಾಜಕಾರಣಿಗಳಿಗೆ ಆಟ ಪ್ರಜೆಗಳಿಗೆ ಪ್ರಾಣಸಂಕಟ ’ ಎಂಬಂತಾಗಿದೆ. ಇಷ್ಟಾದರೂ ನಮ್ಮ ಜನ ಸಮಾಜದಲ್ಲಿ ಹುಳುಕು ರಾಜಕೀಯದವರು ಮತ್ತೆ ಚಿಗುರಿಸುವ ಜಾತಿ, ಮತಗಳ ವೈಷಮ್ಯಗಳನ್ನು ನಾವೆಲ್ಲಾ ಲಕ್ಷ್ಯಿಸುವುದೇ ಇಲ್ಲ. ಜಾತಿಗೊಬ್ಬ ಸ್ವಾಮಿ, ಮತಕ್ಕೊಬ್ಬ ಗುರು-- ಜಾತೀವಾರು ಪಡೆಯಬೇಕಾದ ಸೌಲಭ್ಯಗಳಿಗೂ ಅಲ್ಲದೇ ಪಡೆಯಲು ಅನರ್ಹವಾದ ಸವಲತ್ತುಗಳೂ ಬೇಕೆಂದು ವಿಧಾನಸಭೆಯ ಮುಂದೆ ಧರಣಿ ಕೂರಲು ಅಂತಹ ಸ್ವಾಮೀ ವೇಷದವರನ್ನು ಸೃಜಿಸಿಕೊಂಡಿದ್ದಾರೆ ! ಸಂಖ್ಯಾಬಲವನ್ನು ತೋರಿಸಲು ಜಾತೀವಾರು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೂ ಇಲ್ಲಿನ ಮರ್ಮವಾಗಿದೆ ! ಒಂದುಕಾಲಕ್ಕೆ ಹಾಗೆ ಕರೆಸಿಕೊಂಡಿದ್ದ ಅಲ್ಪಸಂಖ್ಯಾತರು ನಿಯಂತ್ರಣವಿಲ್ಲದೇ ದೇಶಕ್ಕೆ ಸಮರೋಪಾದಿಯಲ್ಲಿ ಮಕ್ಕಳನ್ನು ಹೆತ್ತುಗೊಡುತ್ತಾ ಇದ್ದರೂ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಅಪ್ಲೈ ಆಗುತ್ತಿಲ್ಲ ! ಇಲ್ಲೂ ವೋಟ್ ಬ್ಯಾಂಕ್ ರಾಜಕಾರಣದ ಹಾವು ಹೆಡೆಯೆತ್ತುತ್ತದೆ!

ಆರ್ಥಿಕವಾಗಿ ಬಡವರು / ಹಿಂದುಳಿದವರು ಎಲ್ಲಾ ಜಾತಿಗಳಲ್ಲೂ ಎಲ್ಲಾ ವರ್ಗಗಳಲ್ಲೂ ಇದ್ದಾರೆ. ನಿಜವಾದ ಬಡತನದ ತೊಳಲಾಟದಲ್ಲಿರುವ ಜನರಿಗೆ ಸಿಗಬೇಕಾದ ಸವಲತ್ತುಗಳು ಕೇವಲ ಮೀಸಲಾತಿಗಳೆಂಬ ಸ್ಲ್ಯಾಬ್‍ಗಳಿಂದ ಕೈತಪ್ಪಿ ಹೋಗಿ ಅವರು ಪರದಾಡುವುದನ್ನು ನೋಡಿದಾಗ ಪಶ್ಚಾತ್ತಾಪವಾಗುತ್ತದೆ. ವಿಧಿಯಿಚ್ಛೆಯೇ ಹೀಗಿರುವಾಗ ಪ್ರಜೆಗಳೇನು ಮಾಡಲು ಸಾಧ್ಯ ಎಂಬುದು ಉತ್ತರ ಸಿಗದ ಸಿಕ್ಕಾಗಿದೆ. ಹೀಗಾಗಿ ರಾಜಕಾರಣದಲ್ಲಿ ಯಾರೂ ಸಂಭಾವಿತರಲ್ಲ. ಸಂಭಾವಿತರಾಗಿರುವ ಕೆಲವೇ ಜನ ಒಬ್ಬ ಸುರೇಶ್ ಕುಮಾರ್ ರಂತೇ, ಒಬ್ಬ ಕಾಗೇರಿಯಂತೇ, ಒಬ್ಬ ವಿ.ಎಸ್ ಆಚಾರ್ಯರಂತೇ ’ಕೆಲಸಕ್ಕೆಬಾರದವರು’ ಎನಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ಹಣಪಡೆದು ಸರ್ಕಸ್ಸು ತೋರಿಸುವ ಜನವಲ್ಲ! ಹೀಗಾಗಿ ಇಂದಿನ ರಾಜಕೀಯದ ನಾಟಕಕ್ಕೆ ಬಲಿಯಾದ ಯಡ್ಯೂರಪ್ಪ ಕೇವಲ ಒಂದು ಸ್ಯಾಂಪಲ್ಲು! ಹತ್ತಾರು ಜನ ಸೇರಿ ಕದ್ದಮನೆಯಲ್ಲಿ ಹಿಡಿಯಲು ಯಾರೋ ಬಂದಾಗ ಸಿಕ್ಕಿಬಿದ್ದೊಬ್ಬಾತ ಮಾತ್ರ ಶಿಕ್ಷೆಗೊಳಗಾದ ಪರಿ ಇದಾಗಿದೆ ಅಂತ ನಿಮಗನಿಸುವುದಿಲ್ಲವೇ ?

ಈ ಹಿಂದೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿ ಇದುವರೆಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪರದಾಡದಷ್ಟು ಒದ್ದಾಟವನ್ನು ಯಡ್ಯೂರಪ್ಪ ನಡೆಸುತ್ತಲೇ ಅಪ್ಪ-ಮಕ್ಕಳಾಗಲೀ ಇಡೀ ಕಾಂಗ್ರೆಸ್ ತಳಿಯಾಗಲೀ ಕೊಡಲಾಗದ ಪ್ರಗತಿಯನ್ನು ಈ ರಾಜ್ಯದ ಜನತೆಗೆ ಅದರಲ್ಲೂ ಬೆಂಗಳೂರಿಗೆ ಮೂರೇ ವರ್ಷದಲ್ಲಿ ಕೊಟ್ಟಿರುವುದು ಕಣ್ಣಿಗೆ ಕಾಣುವ ಅಂಶವಾಗಿದೆ. ಆ ಮಟ್ಟಿಗೆ ವೈಯ್ಯಕ್ತಿಕವಾಗಿ ಅವರಿಗೆ ನಾನು ಆಭಾರಿ, ಬಹುಶಃ ತಾವೂ ಕೂಡಾ ! ಅವರ ಮುಂದಿನ ನಡೆಗೆ ಶುಭಕೋರೋಣ.

Thursday, July 28, 2011

ಸತ್ತ ಬಾಳಿಗೆ ಮತ್ತೆ ಅಮೃತವೆರೆದೂ ಕತ್ತಲಾಳಗಳಲ್ಲಿ ದೀಪವುರಿದೂ

ಸಾಂಕೇತಿಕ ಚಿತ್ರ ಕೃಪೆ : ಅಂತರ್ಜಾಲ

ಸತ್ತ ಬಾಳಿಗೆ ಮತ್ತೆ ಅಮೃತವೆರೆದೂ
ಕತ್ತಲಾಳಗಳಲ್ಲಿ ದೀಪವುರಿದೂ


" ಹಲೋ "

ದೂರವಾಣಿಯಲ್ಲಿ ಅತ್ತ ಕಡೆಯ ಧ್ವನಿ ಕೇಳಿ ಪ್ರಕಾಶನಿಗೆ ಮನಸ್ಸಿನಲ್ಲಿ ಸಾವಿರ ಮೊಂಬತ್ತಿ ಬೆಳಗಿದಷ್ಟು ಸಂತಸವಾಯ್ತು. ಅದು ಚಿರಪರಿಚಿತ ದನಿಯೇ. ಆ ದನಿಯಲ್ಲಿ ಇರುವ ಮಾರ್ದವತೆ, ಇಂಪು, ನಾಜೂಕು ಬೇರೆಲ್ಲೂ ಸಿಗಲೇ ಇಲ್ಲ! ಆ ಕಂಠ ಶಾರೀರವನ್ನು ಆಲಿಸದೇ ಹದಿನೈದು ವರ್ಷಗಳೇ ಕಳೆದಿವೆ; ಆದರೂ ಆ ಕಂಠ ಮರೆತು ಹೋಗುವುದಲ್ಲ, ತನ್ನ ಜೀವವಿರುವವರೆಗೂ ಅದು ಶಾಶ್ವತ ಎಂಬ ಅನಿಸಿಕೆ ಎಂದೋ ಆತನಲ್ಲಿ ನೆಲೆನಿಂತುಬಿಟ್ಟಿದೆ. ಬದುಕಿನಲ್ಲಿ ಹಲವು ಚೌಪದಿಗಳನ್ನೂ ಷಟ್ಪದಿಗಳನ್ನೂ ಹಾಡಿದ ಸಿರಿಕಂಠದ ಮರೆವು ಅದು ಹೇಗೆತಾನೇ ಸಾಧ್ಯ ?

ಅಂದಿನ ದಿನಗಳಲ್ಲಿ ತಾನು ಮತ್ತು ಸುಮಾ ಚಾಮರಾಜಪೇಟೆಯ ವಿದ್ವಾನ್ ಕೃಷ್ಣಮೂರ್ತಿಗಳಲ್ಲಿ ಒಟ್ಟಿಗೇ ಸಂಗೀತವನ್ನು ಅಭ್ಯಸುತ್ತಿದ್ದುದು ಪರಿಚಯಕ್ಕೆ ಮೂಲ ಕಾರಣ. ಕರ್ನಾಟಕ ಸಂಗೀತದ ಹಲವು ಪಲಕುಗಳನ್ನು ಯುಗಳವಾಗಿ ಹಾಡಿ ತೋರಿಸಿ ಗುರುಗಳಿಂದ ಶಹಭಾಷ್ ಗಿಟ್ಟಿಸಿದವರು ಪ್ರಕಾಶ್-ಸುಮಾ. ಆರೋಹಣ ಅವರೋಹಣದ ಕಾಲದಲ್ಲಿ ಲೀಲಾಜಾಲವಾಗಿ ಹೊರಹೊಮ್ಮುವ ವಿಶಿಷ್ಟ ಅನನ್ಯ ಕಂಠ ಮಾರ್ದವವನ್ನು ಕಂಡು ಕೃಷ್ಣಮೂರ್ತಿಗಳು ಸುಮಾರಾಣಿಯನ್ನು ಬಹಳವಾಗಿ ಹೊಗಳುತ್ತಿದ್ದರು. ಆ ಕಾಲಘಟ್ಟದಲ್ಲೇ ಪ್ರಕಾಶನ ಹೃದಯದ ಬಾಗಿಲನ್ನು ತಟ್ಟಿದವಳು ಸುಮಾ. ಅಲ್ಲೀವರೆಗೂ ಕೇವಲ ಸಂಗೀತದ ಸಹಪಾಠಿಯಾಗಿದ್ದ ಸುಮಾ ಆ ದಿನಗಳಲ್ಲಿ ಇನ್ನೂ ಹಲವು ರೂಪಗಳಲ್ಲಿ ಕಂಡಳು.

ಕಾರ್ಯೇಷು ದಾಸಿ ಶಯನೇಷು ರಂಭಾ ....ಮೊದಲಾಗಿ ಬರದ ಆ ಶ್ಲೋಕವನ್ನು ಮನದಲ್ಲೇ ಬರೆದುಕೊಳ್ಳುತ್ತಾ ಆ ಎಲ್ಲಾ ಪಾತ್ರಗಳಲ್ಲಿ ಸುಮಾ ತನಗೊದಗಿಬಿಟ್ಟರೆ ಬ್ರಹ್ಮಾಂಡದಲ್ಲೇ ತನ್ನಷ್ಟು ಸುಖಿ ಬೇರೇ ಯಾರೂ ಇಲ್ಲ ಎಂಬ ಭಾವ ಸ್ಫುರಿಸಲು ಹತ್ತಿತ್ತು. ಪ್ರತಿದಿನವೂ ಭೇಟಿಯಾಗುತ್ತಿದ್ದರೂ ಒಟ್ಟಿಗೇ ಹಲವು ರಾಗಗಳನ್ನು ಹಂಚಿಕೊಂಡು ಹಾಡುತ್ತಿದ್ದರೂ ತನ್ನ ಮನದಿಂಗಿತವನ್ನು ಅವಳಲ್ಲಿ ನಿವೇದಿಸುವ ತಾಕತ್ತು ಯಾಕೋ ಬಂದಿರಲೇ ಇಲ್ಲ! ಆನಂದಭೈರವೀ ರಾಗದ ಆಲಾಪಗಳನ್ನು ಅಭ್ಯಸಿಸುವಾಗ ಆನಂದಭೈರವೀ ಸಿನಿಮಾ ನಾಯಕಿಯ ನೆನಪಾಗಿ ಮತ್ತೆ ಆತನ ಹೃದಯ ಕೋಗಿಲೆ ಹಾಡತೊಡಗಿದ್ದರೂ, ಹೃದಯಕದ್ದ ಕಳ್ಳಿ ಪಕ್ಕದಲ್ಲೇ ಕುಳಿತಿದ್ದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಆತನಿದ್ದ. ಹೇಳಿದಮೇಲೆ ಒಂದೊಮ್ಮೆ ಏನಾದರೂ ಆಕೆ ಬೈದು ಬಿಟ್ಟರೆ ಅಥವಾ ತಮ್ಮನಡುವಿನ ಸ್ನೇಹ ಬಾಂಧವ್ಯ ಆ ಕಾರಣದಿಂದ ಮುರಿದುಹೋಗಿಬಿಟ್ಟರೆ ಎಂಬಿತ್ಯಾದಿ ಹಲವು ಆಲೋಚನೆಗಳು ನಾಮೇಲು ತಾಮೇಲು ಎಂದು ಮನದ ಮೂಸೆಯಲ್ಲಿ ಹಾರಿ ಕುಪ್ಪಳಿಸಿ ಆ ವಿಷಯದಲ್ಲಿ ಆತ ನಿತ್ರಾಣನಾಗಿಬಿಡುತ್ತಿದ್ದ. ಜೊತೆಗೆ ಸತ್ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದ ತನಗೆ ಜಾತಕ-ಗೀತಕ ಹೊಂದಾಣಿಕೆಯಾಗದೇ ಅವಳನ್ನು ಮದುವೆಯಾಗಲು ಮನೆಯವರು ಬಿಡುತ್ತಾರೆಯೇ ಎಂಬ ಪ್ರಶ್ನೆ ಕೂಡ ಕಾದ ಬಾಣಲಿಗೆ ನೀರೆರಚಿದಂತೇ ಆಗಾಗ ಆಗಾಗ ಹೊಡೆತಕೊಡುತ್ತಿತ್ತು.

ಹತ್ತಾರು ತಿಂಗಳು ಕಳೆಯುತ್ತಿದ್ದಂತೇ ಒಂದೆರಡು ದಿನ ಸುಮಾ ಪಾಠಕ್ಕೆ ಬಂದಿರಲಿಲ್ಲ. ಗುರುಗಳಿಗೆ ಆಕೆ ವಿಷಯ ತಿಳಿಸಿದ್ದರೂ ಆತನಿಗೆ ಯಾಕೆ ಎಂಬುದೇ ತಿಳಿಯಲಿಲ್ಲ. ಅಂದಿನ ಪಾಠಗಳು ಮುಗಿದಮೇಲೆ ಮನದಲ್ಲಿನ ತುಮುಲ ತಡೆಯಲಾರದೇ ಮನೆಗೆ ಹೋದಮೇಲೆ ಮಂಕಾಗಿ ಮಲಗಿಬಿಟ್ಟಿದ್ದ ಪ್ರಕಾಶ. ಊಟಬೇಡ, ತಿಂಡಿಬೇಡ, ಟಿವಿ ನೋಡುವುದು-ಎಫ್.ಎಮ್ ರೇಡಿಯೋ ಕೇಳುವುದು ಯಾವುದೂ ಊಹೂಂ. ಮನದಲ್ಲಿ ಸುಮಾ ಹಾಡಿದ ಕೆಲವು ಗೀತೆಗಳೇ ಮೊಳಗುತ್ತಿದ್ದವು. ಹಾಗೆ ಅವು ಮೊಳಗುವಾಗ ಆಕೆಯೇ ಭರತನಾಟ್ಯಗೈದಂತೇ ಭಾಸವಾಗಿ ತನ್ನೊಳಗೇ ಅದೇನೋ ಒಂಚೂರು ಆನಂದವೂ ಆಯಿತು. ಮರುಕ್ಷಣ ಮತ್ತೆ ಆಕೆ ಯಾಕೆ ಬರಲಿಲ್ಲಾ ಎಂಬಾ ಚಿಂತೆ.

ಮಗಯಾಕೆ ಮಬ್ಬಾದ ಎಂದು ತಾಯಿ ಮಂಗಳಮ್ಮ ತಿರುತಿರುಗಿ ನೋಡಿದರು. ಯಾವಾಗಲೂ ಹಾಲ್‍ನಲ್ಲಿ ಕೂತು ಹರಟುತ್ತಿದ್ದ ಮಗ ಹಾಗೆ ಏಕಾಏಕಿ ಮಲಗಿದ್ದೇ ಇರಲಿಲ್ಲ. ಜ್ವರವಿಲ್ಲ-ಶೀತವಿಲ್ಲ, ಹೊಟ್ಟೆನೋವಂತೂ ಇರಲಿಕ್ಕಿಲ್ಲ

" ಯಾಕೆ ಮಗನೇ ಏನಾಯ್ತು ಹೆತ್ತ ಅಮ್ಮನಲ್ಲಿಯೋ ಹೇಳಲು ಸಂಕೋಚವೇನೋ ? " ಕೇಳಿದರು.

" ಏನೂ ಇಲ್ಲಮ್ಮ ಸುಮ್ನೇ ಯಾಕೋ ಬೇಜಾರಾಗಿತ್ತು ಅದ್ಕೇ ಮಲಗಿದ್ದೆ "

" ಊಟ ಮಾಡುಬಾರೋ ಅವರೇಕಾಳಿನ ಹುಳಿ ಮಾಡಿದೀನಿ ನಿನ್ನಿಷ್ಟದ್ದು ಮಾಡದೇ ತುಂಬಾ ದಿನ ಆಗಿತ್ತಲ್ವಾ ? "

" ಯಾಕೋ ಹಸಿವೇನೇ ಇಲ್ಲಮ್ಮಾ ಆಮೇಲೆ ಮಾಡ್ತೀನಿ "

ಅಮ್ಮ ಕರೆಕರೆದು ಸೋತರು. ಅಪ್ಪ ವೆಂಕೋಬರಾಯರು ಸ್ವಲ್ಪ ನಯವಾಗಿಯೇ ಗದರಿಕೊಂಡರು. ಯಾವುದೂ ಫಲಿಸಲಿಲ್ಲ. ಅನೇಕಾವರ್ತಿ ಪ್ರಯತ್ನಿಸಿದಮೇಲೆ ಶಾಸ್ತ್ರಕ್ಕೆ ಊಟಮಾಡಿ ಎದ್ದು ಕೈತೊಳೆದು ಮತ್ತೆ ಮಲಗಿಬಿಟ್ಟ ಪ್ರಕಾಶ.

ದಿನವೊಪ್ಪತ್ತಿನಲ್ಲಿ ಸೋದರಮಾವ ಯಾವುದೋ ಕೆಲಸಕ್ಕೆ ಮನೆಗೆ ಬಂದರು. ಬಂದವರೇ ವಿಷಯ ತಿಳಿದು ಖಾಡಾಖಾಡಿ

" ನಿನ್ನ ಮನಸ್ಸಲ್ಲೇನಿದೆ ಎಂದು ಹೇಳಲೇಬೇಕು " ಹಠಹಿಡಿದು ಕೂತುಬಿಟ್ಟರು.
ಮುಳುಗುವಾತನಿಗೆ ಯಾವುದೋ ಮರದ ಬೀಳಲೊಂದು ಕೈಗೆ ಸಿಕ್ಕು ಬದುಕುವ ಅವಕಾಶ ಲಭ್ಯವಾಗುವಂತೇ ಮಾವನನ್ನು ಬಿಟ್ಟರೆ ಇನ್ನು ಹೇಗೂ ಯಾರಲ್ಲಿಯೂ ಹೇಳಲಾಗದ ಮನೋವ್ಯಾಕುಲತೆಯಿಂದ ತನ್ನ ಮನಸ್ಸಿನ ತುಮುಲವನ್ನು ಅದು ಹೇಗೋ ಸ್ವಲ್ಪ ಹೇಳಿಬಿಟ್ಟ.

ಮಗನ ಆಂತರ್ಯವನ್ನು ಅರಿತ ಮಂಗಳಮ್ಮ-ವೆಂಕೋಬರಾಯ ದಂಪತಿ
" ಮಗಾ ಅದು ಶ್ರೀಮಂತರ ಮನೆ ವಸ್ತು, ನಮಗೆ ದಕ್ಕುವಂಥದ್ದಲ್ಲ, ಸುಮ್ನೇ ಯಾಕೆ ಅದಕ್ಕೆ ಹಂಬಲಿಸಿ ಆಕಾಶಕ್ಕೆ ಏಣಿಹಾಕ್ತೀಯಾ ? ಶೀಘ್ರದಲ್ಲೇ ಸುಂದರ ಹುಡುಗಿಯೊಂದನ್ನು ನೋಡಿ ನಿನಗೆ ಮದುವೆಮಾಡಿಸುತ್ತೇವೆ. ಆಕೆಯನ್ನು ಮರೆತುಬಿಡು " ಎಂದು ಹೇಳಿದರು.

ಆತ ನಿರುತ್ತರಿಯಾಗಿದ್ದ, ಹಿಮಾಲಯದಂತೇ ತನ್ನ ನಿರ್ಧಾರದಲ್ಲಿ ಅಚಲನಾಗಿದ್ದ, ಅಲ್ಲಿರುವ ತಪಸ್ವಿಗಳಂತೇ ಮಹಾಮೌನ ಧರಿಸಿ ಕುಳಿತಿದ್ದ! ಮಗನ ಈ ಸ್ಥಿತಿಕಂಡು ಸಹಿಸಲಾರದ ಪಾಲಕರು ಮಾರನೇ ಬೆಳಿಗ್ಗೆ ಹೂವು-ಹಣ್ಣುಗಳನ್ನು ಹಿಡಿದುಕೊಂಡು ಜಯನಗರದಲ್ಲಿರುವ ದ್ವಾರಕಾನಾಥರ ಮನಗೆ ದೌಡಾಯಿಸಿದರು.

ಬೆಲ್ ಮಾಡಿದಾಗ ಬಾಗಿಲು ತೆರೆದವರೇ ನೀರಜಮ್ಮ.

" ಬನ್ನಿ , ಕೂತ್ಕೊಳಿ ತಾವು ಯಾರೆಂದು ಗೊತ್ತಾಗ್ಲಿಲ್ಲ ? ಯಜಮಾನ್ರು ಬಾತ್‍ರೂಮ್‍ನಲ್ಲಿದ್ದಾರೆ ಇನ್ನೇನು ಬರ್ತಾರೆ ಕೂತಿರಿ " ಎಂದರು.

ಮಗಳು ಅಲ್ಲೆಲ್ಲೂ ಕಾಣಲಿಲ್ಲ. ಸ್ನಾನಮುಗಿಸಿದ ದ್ವಾರಕಾನಾಥರು " ಶುಕ್ಲಾಂಬರಧರಂ ...." ಶ್ಲೋಕಗಳನ್ನೆಲ್ಲಾ ಹೇಳಿಕೊಳ್ಳುತ್ತಾ ಬಂದರು. " ಬಂದೆ ಒಂದ್ನಿಮಿಷ " ಎನ್ನುತ್ತಾ ದೇವರಕೋಣೆಗೆ ಹೋಗಿ ಕಡ್ಡಿಹಚ್ಚಿ ಹೂವಿಟ್ಟು ಕೈಮುಗಿದು ಆಚೆ ಬಂದರು.

" ತಮ್ಮ ಪರ್ಚಯ ಸಿಗ್ಲಿಲ್ಲಾ ? "

" ನಾನು ವೆಂಕೋಬರಾಯ ಈಕೆ ನನ್ನ ಹೆಂಡ್ತಿ ಮಂಗಳ "

" ಏನ್ಕುಡಿತೀರಿ ಕಾಫೀ ಟೀ ? "

" ಏನೂ ಬೇಡ ನಮ್ದಾಗಲೇ ತಿಂಡಿ-ತೀರ್ಥ ಎಲ್ಲಾ ಪೂರೈಸಿದೆ "

" ಅಬ್ಯಂತರವಿಲ್ಲಾಂದ್ರೆ ತಾವು ಬಂದ ಕಾರಣ ಕೇಳ್ಬಹುದೇ ? "

" ನಮ್ಮ ಮಗ ಪ್ರಕಾಶ ......." ಎಂದು ಆರಂಭಿಸಿ ವೃತ್ತಾಂತವನ್ನು ಅರುಹಿದರು.

ಎಲ್ಲವನ್ನೂ ಕೇಳಿಸಿಕೊಂಡ ದ್ವಾರಕಾನಾಥರು " ಸದ್ಯಕ್ಕೆ ಆಕೆಯ ಮದುವೆಯ ಬಗ್ಗೆ ಆಲೋಚನೆ ಇಲ್ಲ ಮಾಡೋ ವಿಚಾರ ಬಂದಾಗ ತಿಳಿಸ್ತೇನೆ " ಎಂದುಬಿಟ್ಟರು. ಅಡ್ಡಗೋಡೆಯಮೇಲೆ ದೀಪವಿಟ್ಟಂತಾಗಿ ವೆಂಕೋಬರಾಯ ದಂಪತಿ ಬಡಾ ಮುಖ ಮಾಡಿಕೊಂಡು ಮನೆ ಕಡೆ ಹೊರಟರು.

ಅದಾದ ಹದಿನೈದಿಪ್ಪತ್ತು ದಿನಗಳಲ್ಲೇ ದ್ವಾರಕಾನಾಥರು ಸುಮಾಗೆ ತಮ್ಮ ಅಂತಸ್ತಿಗೆ ತಕ್ಕ ಶ್ರೀಮಂತ ವರನೊಬ್ಬನನ್ನು ನೋಡಿದರು. ಈ ವಿಷಯ ಪಾಠದ ಮನೆಗೂ ಹೇಗೋ ತಿಳಿಯಿತು. ಗುರು ಕೃಷ್ಣಮೂರ್ತಿಗಳು

" ಏನಮ್ಮಾ ಮದುವೇನಂತೆ? ಮದುವೆ ಆಗೋಕ್ಮುಂಚೆ ಎಲ್ಲಾ ರಾಗಗಳನ್ನೂ ಸಂಪೂರ್ಣ ಅಭ್ಯಾಸ ಮಾಡಿಕೊಂಡು ಬಿಡು. ಆಮೇಲೆ ಅಂದ್ರೆ ನಿಧಾನ ಆಗೋಗುತ್ತೆ, ಆಗ್ದೇ ಹೋದ್ರೂ ಹೋಯ್ತೆ " ಎಂದುಬಿಟ್ಟರು.

ಪಕ್ಕದಲ್ಲೇ ಕುಳಿತಿದ್ದ ಪ್ರಕಾಶನಿಗೆ ಎಲ್ಲವೂ ಕೇಳಿಸಿಬಿಟ್ಟಿತು. ಆದರೂ ಆತ ಸುಮಾಳಲ್ಲಿ ಆ ವಿಷಯ ಮಾತನಾಡಲಿಲ್ಲ. ಒಳಗೊಳಗೇ ನೋವನ್ನು ತಿಂದ. ತಿಂಗಳು ಕಳೆಯುವಷ್ಟರಲ್ಲಿ ಒಂದುದಿನ ಪ್ರಕಾಶನಿಗೆ ಲಗ್ನದ ಆಮಂತ್ರಣ ಪತ್ರಿಕೆ ಸಿಕ್ಕಿತು. ಅಸಾಧ್ಯ ಮನೋಮಂಡಿಗೆಯನ್ನು ಅನುಭವಿಸಿದ ಆತ ಪ್ರೀತಿಸಿದ ಹುಡುಗಿ ಸುಖವಾಗಿದ್ದರೇನೆ ಸಾಕು ಎಂಬ ಅಂತಿಮ ತೀರ್ಮಾನಕ್ಕೆ ಬಂದುಬಿಟ್ಟ! ಪ್ರೀತಿ ನಲುಗಬಾರದು. ಕೇವಲ ಆಕೆ ತನ್ನ ಮಡದಿಯಾಗಿ ಬರಲಿಲ್ಲವೆಂಬ ಕಾರಣಕ್ಕೆ ಆಕೆಗೆ ಹಿಂಸೆ ಕೊಡುವುದಾಗಲೀ ಅಥವಾ ಆಕೆಯ ಲಗ್ನಕ್ಕೆ ತೊಂದರೆ ಕೊಡುವುದಾಗಲೀ ಸರಿಯಲ್ಲ ಎಂಬ ವಿವೇಚನೆ ಆತನಲ್ಲಿತ್ತು. ಎಷ್ಟೆಂದರೂ ಆತ ಸಂಗೀತವನ್ನೂ ಕಲಿತ ಸುಸಂಸ್ಕೃತ ಸದ್ಗುಣಿ.

ವೆಂಕೋಬರಾಯರ ಮನೆಗೆ ಪ್ರತ್ಯೇಕ ಆಮಂತ್ರಣ ಬರಲೇ ಇಲ್ಲ. ಮದುವೆ ಜಯನಗರ ಸೌತೆಂಡ್ ಸರ್ಕಲ್ ಹತ್ತಿರದ ’ ಪೈ ವಿಸ್ಟಾ ’ ಹಾಲ್‍ನಲ್ಲಿ ನಡೆದುಹೋಯಿತು. ಭಾರೀ ಜನಸ್ತೋಮ. ಬಂದವರೆಲ್ಲಾ ಮಿನುಗುವ ದಿರಿಸುಗಳನ್ನು ತೊಟ್ಟವರೇ. ಅಲಂಕಾರದಲ್ಲಿ ತಾವೇನೋ ಕಮ್ಮಿ ಇಲ್ಲ ಎಂಬುದು ಎಲ್ಲರ ಮುಖದಲ್ಲೂ ಕಾಣುತ್ತಿತ್ತು! ಬಗೆಬಗೆಯ ಬ್ಯಾಗ್‍ಗಳು, ವೂಡ್ ಲ್ಯಾಂಡ್ ಶೂ ಚಪ್ಪಲಿಗಳು ಅತ್ತರು-ಪರಿಮಳಗಳ ಘಾಟು, ನಗುವಲ್ಲದ ನಗುವಿನಿಂದ " ಆರಾಮೇನ್ರೀ ? " ಎಂದುಕೊಳ್ಳುತ್ತಾ ಪರಸ್ಪರ ಕೈಕುಲುಕಿ ಮಾತನಾಡಿಕೊಳ್ಳುತ್ತಿದ್ದವರು. ಊಟೋಪಚಾರಕ್ಕೆ ಮೆನು ಬಹಳದೊಡ್ಡ ರೀತಿಯಲ್ಲಿ ಆಯೋಜಿಸಲ್ಪಟ್ಟಿತ್ತು. ನಾಕು ಬಗೆಯ ಸಿಹಿತಿನುಸುಗಳು, ಥರಥರದ ಭಕ್ಷ್ಯ ಭೋಜ್ಯಗಳು, ತಂಪು ಪಾನೀಯಗಳು, ವಿವಿಧ ರೀತಿಯ ಐಸ್ ಕ್ರೀಮ್‍ಗಳು ಹೀಗೇ ಒಂದೇ ಎರಡೇ? ಕೇವಲ ಸುಮಾಳ ಕರೆಗೆ ಮನ್ನಿಸಿ ಮತ್ತು ಅವಳ ಬದುಕು ಹಸನಾಗಲೆಂದು ಅಳುವ ಹೃದಯದಿಂದಲೇ ಹಾರೈಸಿ ಶುಭಕೋರಲು ಪ್ರಕಾಶ ಕೂಡ ಆ ಮದುವೆಗೆ ಬಂದಿದ್ದ.

ಮದುವೆ ಮುಗಿದು ಸುಮಾ ಮುಂಬೈ ಸೇರಿದಳು. ಅಲ್ಲಿ ಎಲ್ಲಿರುವಳೋ ಹೇಗಿರುವಳೋ ಎಂದು ತಿಳಿದುಕೊಳ್ಳುವ ತುಡಿತ ಉಂಟಾದರೂ ಹಾಗೆ ಮಾಡಲು ಯಾಕೋ ಮನ ಅಳುಕುತ್ತಿತ್ತು ಪ್ರಕಾಶನಿಗೆ. ಯಾರಲ್ಲಿ ಕೇಳುವುದು? ಏನೂಂತ ಕೇಳುವುದು ? ಅಲ್ಲವೇ? ತಾನು ಹೇಗೂ ಮದುವೆಯಾಗುವುದಿಲ್ಲವೆಂಬ ನಿರ್ಧಾರವನ್ನು ಪ್ರಕಟಿಸಿಬಿಟ್ಟಿದ್ದ ಮನೆಯಲ್ಲಿ. ಇದ್ದೊಬ್ಬ ಮಗನೂ ಈ ರೀತಿ ಮಾಡುವುದನ್ನು ಸಹಿಸದ ಪಾಲಕರು ಹೈರಾಣಾಗಿದ್ದರು.
" ನೋಡೋ ಪ್ರಕಾಶು, ನಮಗೂ ವಯಸ್ಸಾಗುತ್ತಾ ಬಂತು. ಮುಂದೆ ನಿನ್ನನ್ನು ನೋಡಿಕೊಳ್ಳಲು ನಿನ್ನವರು ಅಂಥ ಯಾರು ಬರ್ತಾರಪ್ಪಾ, ಒಳ್ಳೇ ಮಗ ಕಣೋ ನೀನು ನಮಗಾಗಿಯಾದರೂ ಮದುವೆಯಾಗು " ಎಂದು ಬಹುವಿಧದಲ್ಲಿ ತಿಳಿಹೇಳೀ ಹೇಳೀ ಸೋತುಹೋಗಿದ್ದರು. ತಿರುಪತಿಯಲ್ಲಿ ಶ್ರೀನಿವಾಸನನ್ನು ಕಂಡು

" ಅಪ್ಪಾ ನನ್ನ ಮಗನಿಗೆ ಮದುವೆಯಾದ್ರೆ ಇಲ್ಲಿಗೆ ಕರ್ಕೊಂಡು ಬಂದು ಕಲ್ಯಾಣೋತ್ಸವ ನಡೆಸಿಕೊಡ್ತೇವಪ್ಪಾ ಅನುಗ್ರಹಿಸು " ಎಂದೂ ಬೆಟ್ಟಹತ್ತಿ ಬೇಡಿಕೊಂಡರು.

ಹದಿನೈದು ವರ್ಷಗಳ ತಪಸ್ಸಿನ ಫಲವೋ ಎಂಬಂತೇ ಆ ಹಣ್ಣು ಜೀವಗಳು ಇನ್ನೂ ಬದುಕಿರುವಾಗ ತಿಮ್ಮಪ್ಪ ಕಣ್ಣುತೆರೆದನೋ ನಿಸರ್ಗ ಕರೆಯಿಟ್ಟಿತೋ ಅಂತೂ ಪ್ರಕಾಶ ಮೆತ್ತಗಾಗಿದ್ದ. ಕಾಲಚಕ್ರದ ಹಲ್ಲು ತುಸುಮುಂದೆ ಜಾರಿದಾಗ ಏನೂ ಇಲ್ಲದ ತನ್ನ ಬದುಕು ವಿಧವೆಯೊಬ್ಬಳಿಗೆ ಆಸರೆಯಾದರೆ ಅದೆಷ್ಟೋ ಪುಣ್ಯ ತನ್ನದಾಗಬಹುದೆಂಬ ಅನಿಸಿಕೆ ಆತನಲ್ಲಿ ಒಡಮೂಡಿತ್ತು. ತನ್ನ ಮನದಿಚ್ಛೆಯನ್ನು ನೊಂದ ಪಾಲಕರಿಗೆ ಅರುಹಿದ್ದ ಕೂಡ. ಕಟ್ಟಾ ಸಂಪ್ರದಾಯವಾದಿಗಳಾಗಿದ್ದರೂ ಮಗನ ಮನದ ಹೊಯ್ದಾಟವನ್ನು ನೋಡಿ ಸಹಿಸಲಾಗದೇ ಹಾಗಾದ್ರೂ ಸುಖವಾಗಿರ್ಲಿ ಎಂದು ಅವರಂದುಕೊಂಡಿದ್ದರು.

ನಿತ್ಯವೂ ದಿನಪತ್ರಿಕೆಯಲ್ಲಿ ವಿಧವೆಯರ ಬಗ್ಗೆ ಜಾಹೀರಾತು ಬಂದಾಗ ತೆಗೆದು ಓದುತ್ತಾ ಇದ್ದ ಪ್ರಕಾಶ ಅಂದು ಭಾನುವಾರ ಬೆಳಿಗ್ಗೆ ಹಾಗೇ ಸಿಕ್ಕಿದ ಜಾಹೀರಾತನ್ನು ಕೆಲಹೊತ್ತು ನೋಡುತ್ತಲೇ ಇದ್ದ. ಅದರಲ್ಲಿ ಸುಮಾ ಎಂಬ ಹೆಂಗಸು ತನಗೆ ಅಲಯನ್ಸ್ ಬೇಕು ಎಂಬುದಾಗಿ ತಿಳಿಸಿ ತನ್ನ ನಂಬರನ್ನೂ ನಮೂದಿಸಿದ್ದಳು. ಯಾಕೋ ’ಸುಮಾ’ ಎಂಬ ಆ ಹೆಸರಿನಮೇಲೇ ಅಷ್ಟು ಮಮತ್ಕಾರವಿರುವ ಪ್ರಕಾಶನಿಗೆ ಆ ಹೆಂಗಸಿಗೆ ಕರೆಮಾಡುವ ಮನಸ್ಸು ಉಂಟಾಯಿತು. ಮೊಬೈಲ್ ಹಿಡಿದು ಕರೆಮಾಡಿದಾಗ .......ಹೌದು ಅದೇ ಆ ಚಿರಪರಿಚಿತ ಧ್ವನಿ. ತನ್ನ ಸುಮಾಳೇ ಅವಳು!

ದೂರವಾಣಿಯಲ್ಲಿ ವಿಷಯ ಕೇಳಿ ಒಮ್ಮೆ ಸ್ತಂಭೀಭೂತನಾದರೂ ಮನದ ಯಾವುದೋ ಆಸೆ ಈಡೇರಿದ ತೃಪ್ತಿಯೂ ಮತ್ತು ವಿಧವೆಗೆ ಆಸರೆಕೊಡುವ ಪುಣ್ಯಕೆಲಸಮಾಡುವೆನೆಂಬ ಬದುಕಿನ ಸಾರ್ಥಕ್ಯವೂ ಏಕಕಾಲಕ್ಕೆ ಘಟಿಸಿದಂತಾಗಿ ಖುಶಿಪಟ್ಟ. ದೊಡ್ಡ ಕಂಪನಿಯಲ್ಲಿ ನೌಕರಿಯಲ್ಲಿದ್ದ ಸುಮಾಳ ಗಂಡ ವರ್ಷದ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದ. ಬಹಳಕಾಲ ಮಕ್ಕಳಾಗದಿದ್ದ ಅವರಿಗೆ ಕೊನೆಗೊಮ್ಮೆ ಒಂದು ಹೆಣ್ಣು ಮಗು ಜನಿಸಿತ್ತು. ೪ ವರ್ಷದ ಮಗಳನ್ನು ನೋಡಿಕೊಳ್ಳುತ್ತಾ ಏಕಾಂಗಿಯಾಗಿ ಮುಂದಿನ ಜೀವನ ಸಾಗಿಸುವುದು ಸುಮಾಗೆ ಇಷ್ಟವಿರಲಿಲ್ಲ. ಪಾಲಕರು " ಬೇಡಾ ನಮ್ಮ ಸರ್ಕಲ್ಲಿನಲ್ಲೇ ಎಲ್ಲಾದರೂ ಹುಡುಕೋಣ " ಎಂದರೂ ಕೇಳದೇ ಆಕೆ ಜಾಹೀರಾತು ನೀಡಿದ್ದಳು!ಮಾತುಕತೆ ಮುಂದುವರಿದು ಇಬ್ಬರ ಕಣ್ಣಾಲಿಗಳೂ ಆನಂದಭಾಷ್ಪ ಸುರಿಸಿದವು.

ವಿಷಯ ತಿಳಿದ ದ್ವಾರಕಾನಾಥ ದಂಪತಿ ಶ್ರೀನಗರದ ಹತ್ತಿರದ ಬ್ಯಾಂಕ್ ಕಾಲೋನಿಯಲ್ಲಿರುವ ವೆಂಕೋಬರಾಯರ ಮನೆಗೆ ಹೂವು-ಹಣ್ಣು ಹಿಡಿದು ಬಂದರು. ಬಾಗಿಲು ತೆರೆದ ಮಂಗಳಮ್ಮ ಆದರದಿಂದ ಸ್ವಾಗತಿಸಿದರು. ದ್ವಾರಕಾನಾಥ ದಂಪತಿಗೆ ಮುದಿವಯಸ್ಸಿನ ಆ ದಂಪತಿ ಸತ್ಕರಿಸಿದರು. ಮಧ್ಯಮವರ್ಗದ ಸಾದಾ ಸೀದಾ ಜೀವನವಾದರೂ ಅತ್ಯಂತ ಸುಸಂಸ್ಕೃತರಾದ ವೆಂಕೋಬರಾಯ ದಂಪತಿಯನ್ನೂ ಅವರ ಮಗನನ್ನೂ ನೋಡಿ ದ್ವಾರಕಾನಾಥ ದಂಪತಿಯ ಕಣ್ಣಲ್ಲಿ ನೀರು ಉಕ್ಕಿತು.

" ನಮ್ಮ ಮಗಳನ್ನು ನೀವೇ ಕೇಳಿದಾಗ ನಾವಾಗಿಯೇ ಕೊಡಲಿಲ್ಲ, ಇಂದು ನಾವೇ ಕೇಳುತ್ತಿದ್ದೇವೆ ನಮ್ಮ ಮಗಳನ್ನು ಸೊಸೆಯಾಗಿ ಸ್ವೀಕರಿಸಿ ಅವಳಿಗೆ ನಿಮ್ಮಲ್ಲಿ ಆಶ್ರಯ ಕೊಡುವಿರೇ ? "

" ನೀವು ಬೇಡವೆಂದರೂ ಶ್ರೀನಿವಾಸನ ಮನಸಲ್ಲಿ ಅನುರೂಪ ಹುಡುಗ-ಹುಡುಗಿಯಿವರನ್ನು ಸೇರಿಸಬೇಕೆಂಬ ಸಂಕಲ್ಪವಿದ್ದರೆ ಅದಕ್ಕೆ ನಾವೆಲ್ಲಾ ಕೇವಲ ಆತನ ನಾಟಕದ ಪಾತ್ರಧಾರರಷ್ಟೇ ತಾನೇ ? ಶುಭಸ್ಯ ಶೀಘ್ರಂ " ಎಂದುಬಿಟ್ಟರು ವೆಂಕೋಬರಾಯರು !

ಕಾರಿನ ಹಿಂದುಗಡೆಯ ಸೀಟಿನಿಂದ ಚಿಕ್ಕ ಮಗಳ ಜೊತೆಗೆ ಜರತಾರೀ ಸೀರೆಯುಟ್ಟ ಸ್ಫುರದ್ರೂಪಿ ಸುಮಾ ರಂಭೆಯನ್ನೂ ನಾಚಿಸುವ ಸೌಂದರ್ಯವನ್ನು ಇನ್ನೂ ಹಾಗೇ ಕಾಪಿಟ್ಟುಕೊಂಡು ಕಂಗೊಳಿಸುತ್ತಾ ನಡೆದುಬಂದು ವೆಂಕೋಬರಾಯರ ಮನೆ ಪ್ರವೇಶಿಸಿದಳು. ಒಳಗಡೆ ಕೋಣೆಯಲ್ಲಿ ಯಾವುದೋ ಕಾದಂಬರಿ ಓದಲು ತೊಡಗಿದ್ದ ಶ್ರೀರಾಮಚಂದ್ರನ ಥರದ ಸುಂದರ ಪ್ರಕಾಶ ಹೊರಬಂದು ತನ್ನ ಸದ್ಗುಣದ ತೋಳುಗಳನ್ನು ಚಾಚಿ ಆಕೆಯನ್ನು ಸ್ವಾಗತಿಸಿದ. ಅಪ್ಪನಿಲ್ಲದ ಮಗಳಿಗೆ

" ಇವರೇ ನಿನ್ನ ಅಪ್ಪ ನೋಡಮ್ಮಾ " ಎಂದರು ದ್ವಾರಕಾನಾಥರು. ಚಿಕ್ಕ ಮಗು ಓಡೋಡಿ ತನ್ನ ಅಪ್ಪನನ್ನು ತಬ್ಬಿಕೊಂಡಿತು!

ಕಡಿದುಹೋಗಿದ್ದ ಸಂಬಂಧವೊಂದು ಮರಳಿ ಬೆಸೆದುಕೊಂಡಿತ್ತು. ಒಣಗಿದ ಮರವೊಂದು ಅನಿರೀಕ್ಷಿತವಾಗಿ ಚಿಗಿತುಕೊಂಡಿತ್ತು! ಮನೆಯಲ್ಲಿ ಸಣ್ಣಗೆ ಹಾಕಿದ್ದ ಎಫ್. ಎಮ್ ರೇಡಿಯೋದಲ್ಲಿ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ " ಯಾವುದೀ ಹೊಸಸಂಚು ....." ಹಾಡು ಕರ್ಣಾನಂದಕರವಾಗಿ ತೇಲಿಬರುತ್ತಿತ್ತು.

Wednesday, July 27, 2011

ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ !


ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ !

ತಮಾಷೆಯ ಪ್ರಸಂಗಗಳು ನಮ್ಮನ್ನು ದಿಗಿಲುಗೊಳಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇರುವುದು ಜೀವನದ ಸ ರಿ ಗ ಮ ಪಗಳಲ್ಲಿ ಒಂದು. ಹಾಗಿಲ್ಲದಿದ್ದರೆ ಜಗನ್ನಿಯಾಮಕನಿಗೆ ಜಗತ್ತಿನ ಸೂತ್ರದ ತಾಳ ತಪ್ಪಿಹೋಗುತ್ತದೋ ಏನೋ. ಯಾರೋ ಯಾರಿಗೋ ಬಯ್ಯುವುದು, ಇನ್ನೆಲ್ಲೋ ಜಗಳ ದೊಂಬಿ, ರಸ್ತೆ ಮಧ್ಯೆ ಗಲಾಟೆ, ಮನೆಯೆದುರು ಮಾರಾಮಾರಿ ! ಯಾರೋ ಪಕ್ಕದಮನೆ ಹುಡುಗಿ ಜತೆ ಪರಾರಿ ! ಅಲ್ಲೆಲ್ಲೋ ಲಾಜಿನಲ್ಲಿ ಸಿನಿಮಾ ನಟಿಯ ಮೈವ್ಯವಹಾರ ! ಹೇಗೆ ಮನೆಗಳಲ್ಲಿ ಊಟ ತಿಂಡಿ ರನ್ನಿಂಗ್ ಅಕೌಂಟೋ ಹಾಗೇ ಸಮಾಜದಲ್ಲಿ ಇವೆಲ್ಲಾ ಆಗಾಗ ಘಟಿಸುತ್ತಲೇ ಇರುತ್ತವೆ. ಆಳುವ ದೊರೆಗಳು-ವಂದಿಮಾಗಧರು ನಡೆಸುವ ಅಹೋರಾತ್ರಿ ದಗಲ್‍ಬಾಜಿ ನಾಟಕ ಹೊಸದೇನಲ್ಲ ಬಿಡಿ-ಯಾಕೇಂದ್ರೆ ಈಗ ರಾಜಕೀಯ ಅಂದ್ರೇ ಹಾಗೆ ಅನ್ನಿಸುವಷ್ಟು ಮೈಗೊಂಡುಹೋದ ವೈಖರಿ ಅದು.

ನಾನೂ ಒಂದು ದಿನ ಮಂತ್ರಿಯಾಗಬೇಕು ಎಂಬ ಕನಸು ಕಂಡಿದ್ದೆ! ನೀವು ಹಾಗೆಲ್ಲಾ ಆಡಿಕೊಳ್ಳೋವಷ್ಟು ಪುಕ್ಕಲು ಅಂದ್ಕೋಬೇಡಿ. ಸಂಕಲ್ಪ ಎಲ್ಲಾ ಸರಿಯಾಗೇ ಮಾಡಿದ್ದೆ, ಎಲ್ಲಿ ಎಡವಟ್ಟಾಯ್ತೋ ಗೊತ್ತಾಗ್ಲೇ ಇಲ್ಲ. ಮಂತ್ರಿ ಖುರ್ಚಿಯ ನೆನಪಿನಲ್ಲೇ ಮಲಗಿಕೊಂಡ ದಿನ ಕನಸೊಂದು ಬಿತ್ತು. ಆ ಕನಸಿನಲ್ಲಿ ಯಾರೋ ಕಂಡರು. ನನಗೆ ರಾಜಕೀಯ ಗುರು ಬೇರೇ ಯಾರೂ ಇರಲಿಲ್ಲ. ಏಕಲವ್ಯನ ರೀತಿ ಒದ್ದಾಡಿಕೊಂಡಿದ್ದ ನನಗೆ ಕಂಬಳಿಹೊದ್ದು ಮುಖ ತೋರಿಸದ ಯಾವುದೋ ಆಕೃತಿ ಕಂಡು ಬಿಟ್ಟಿತು. " ನನ್ಮಗನೇ ರಾಜಕೀಯಕ್ಕೆ ನೀನು ಬರ್ಬೇಕಾದ್ರೆ ಕನಿಷ್ಠ ಒಂದು ಕೊಲೆ ಮೂರು ದರೋಡೆ ಹತ್ತಾರು ಸುಲಿಗೆಗಳಲ್ಲಿ ಪರೋಕ್ಷವಾಗಿಯಾದ್ರೂ ಭಾಗವಹಿಸಿರ್ಬೇಕು, ಕಂಡಲ್ಲೆಲ್ಲಾ ತಿನ್ನುವ ಜಾಯಮಾನ ಇಟ್ಕೊಂಡಿರ್ಬೇಕು. ಬೆಳಿಗ್ಗೆ ಎದ್ದು ಧೋಬಿ ಕೊಟ್ಟ ಗರ್ಗರಿ ಖಾದಿ ಧರಿಸಿ ನಾಮ ಎಳೆದುಕೊಂಡು ಹೊರಟುಬಿಟ್ಟರೆ ಹೊತ್ತುಗೊತ್ತಿನ ಅರಿವಿಲ್ಲದೇ ಎಲ್ಲೆಡೆಯೂ ’ನಾಮ’ದ ಬಲವನ್ನು ಸಾರಬೇಕು. "

ಒಮ್ಮೆಲೇ ಅದೇ ೩೦ ನಿಮಿಷದ ಕನಸಲ್ಲಿ ಮಧ್ಯೆಮಧ್ಯೆ ಹತ್ತತ್ತು ನಿಮಿಷ ಬಂದ ಜಾಹೀರಾತು ದಾಸರ ಪದವೊಂದು ನೆನಪಿಗೆ ಬಂದೂ ಹೋಯ್ತು! ನೀನೇಕೋ ನಿನ್ನ ಹಂಗೇಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ. ಈಗ ದೇವರ ಹತ್ತಿರ ಅದನ್ನು ಹೇಳಿದರೆ ಜನರ ಹತ್ತಿರ ಹೇಳುವಾಗ ಸ್ವಲ್ಪ ಕಾಲಕ್ಕೆ ತಕ್ಕ ಬದಲಾವಣೆ ಅಗತ್ಯ ಬಿಡಿ. ನೀನೇಕೋ ನಿನ್ನ ಹಂಗೇಕೋ ನಿನಗೆ ನಾಮಹಾಕುವ ಬಲವೊಂದಿದ್ದರೆ ಸಾಕೋ ! ನಾಮಹಾಕುವ ಬಲ ನನ್ನಲ್ಲಿದೆಯೇ ? ನನ್ನನ್ನೇ ಪ್ರಶ್ನಿಸಿಕೊಳ್ಳುವ ಮೊದಲೇ ಆ ಕಡೆ ಈ ಕಡೆ ಮೈಕೈ ವದರಿಕೊಂಡೆ; ಝಂಡೂ ಬಾಮ್ ಝಂಡೂ ಬಾಮ್ ಪೀಡಾಹಾರಿ ಬಾಮ್ ಝಂಡೂ ಬಾಮ್ .....ಇನ್ನೂ ಮುಗಿದಿರಲಿಲ್ಲ ಅಷ್ಟರಲ್ಲೇ ದಮ್ ಫಾರ್ಮ್ಯುಲಾ ಸಹಿತದ ಹತ್ತು ತಲೆಯ ರಾವಣ ಇಮಾಮಿಯ ನಾಮ ಎಳೆಯಲು ಬಂದುಬಿಟ್ಟ ! ದಾಸರು ಹೇಳುವುದಕ್ಕಿಂತಾ ನಾನೇ ಹೇಳುತ್ತೇನೆ ಕೇಳಿ -- ನಾಮದ ಮಹಿಮೆಯೇ ನಿಜಕ್ಕೂ ಅಗಾಧ. ಅದನ್ನು ನಾವು ಬೆಂಗಳೂರಿನಲ್ಲಂತೂ ನೋಡುತ್ತಲೇ ಇರ್ತೀವಿ.

ಯಾವುದೋ ಒಂದು ಜಾಹೀರಾತು ಮುಗಿದಾಗ ಕಾವಿ9 ನವರು ಮೈಕ್ ಹಿಡಿದು ಬಂದರು ! " ಸ್ವಾಮೀ ನಿತ್ಯಾನಂದನ ಬಗ್ಗೆ ನೀವೇನು ಹೇಳ್ತೀರಿ ? " ಎಂದ್ರು. ನನಗೇ ಸ್ವಾಮಿ ಅಂದ್ರೋ ಅವನಿಗೆ ಸ್ವಾಮಿ ಅಂದ್ರೋ ತಿಳೀಲಿಲ್ಲ. ನನಗೆ ಆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ನಾನು ಧರ್ಮರಾಯನ ರೀತಿಯಲ್ಲೇ " ಯಾವುದಕ್ಕೂ ನೋಡದೆಯೇ ಹೇಳುವುದಿಲ್ಲ " ಎಂದುಬಿಟ್ಟೆ. ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಒಣಮುಖದಲ್ಲಿ ಮೈಕು ಬೇರೇ ಕಡೆ ಹೋಯ್ತು. ಕಾವಿ9 ವಾಹಿನಿಯ ವಾಹನ ಆಕಡೆ ಹೋಯ್ತೋ ಇಲ್ವೋ ೪ನೇ ಮುಖ್ಯರಸ್ತೆಯ ಪದ್ಮಾವತಮ್ಮ ಓಡೋಡಿ ಬಂದ್ರು. ನನ್ನ ಹೆಂಡ್ತಿ ಹತ್ರ ಹೇಳ್ತಾ ಇದ್ದಾಗ ನಾನು ಕೇಳಿಸಿಕೊಂಡಿದ್ದು ಇಷ್ಟು--ಅದ್ಯಾವುದೋ ಹೆಡ್ ಕಾನಸ್ಟೇಬಲ್ ರಾಮಯ್ಯನಂತೆ ಆತನ ಹೆಂಡ್ತಿ ಚೀಟಿ ಮಾಡಿದ್ಲಂತೆ. ಪದ್ಮಾವತಮ್ಮ ಏನಾದ್ರೂ ಆಪತ್ತಿಗಿರ್ಲಿ ಅಂತ ಸಲ್ಸಲ್ಪ ಹಣ ಕೂಡಿಸಿ ಚೀಟಿ ಕಟ್ಟುತ್ತಿದ್ದರಂತೆ. ಆ ಚೀಟಿರಾಣಿ ರಾತ್ರೋರಾತ್ರಿ ಗಂಡಂಗೂ ಹೇಳ್ದೇ ಮನೆಬಿಟ್ಟು ಹೋಗಿದ್ದಾಳಂತೆ!

ಜಾಹೀರಾತುಗಳು ಒಟ್ಟೂ ೨೦ ನಿಮಿಷ ಪ್ರಸಾರವಾಗುವಾಗ ಮುಖ್ಯ ಕಥಾನಕ ೧೦ ನಿಮಿಷ ಮಾತ್ರ ಪ್ರಸಾರವಾಯ್ತು. ಯಾಕೋ ಸಲ್ಪ ಕಾಲು ಹಿಡಿದುಕೊಂಡ ಹಾಗಾಗಿ ಕನಸಿನ ಕತ್ತಲಲ್ಲೇ ಕೈಯ್ಯಾಡಿಸಿ ಮೂವ್ ಎಳೆದುಕೊಂಡೆ, ಥೂ ಯಾವುದನ್ನು ಹಚ್ಚಿಕೊಂಡ್ರೂ ಹೋಗೋದೇ ಇಲ್ಲ ಹಾಳಾದ್ದು. ಇನ್ನೇನು ವಿಷ್ಯ ಮುಗೀಬೇಕು ಅನ್ನೋವಷ್ಟರಲ್ಲೇ ಮತ್ತೆ ಎಂಟ್ರಿಕೊಟ್ಟಿದ್ದು ಅದೇ ಕಂಬಳಿ ಹೊದ್ದ ವ್ಯಕ್ತಿ " ಯಾಕಪ್ಪಾ ಏನಾಯ್ತು? ಸವರ್ಕೋತಾ ಇದ್ದೀಯಾ ನೀನೇ ಸವರ್ಕೋತಾ ಇದ್ರೆ ಬೇರೆಯವರನ್ನು ಸವ್ರೋದು ಯಾವಾಗ ? ರೆಡಿನಾ ಎಲ್ಲಾದಕ್ಕೂ ತಯಾರಿದ್ರೆ ಹೇಳು ನಾಳೇನೇ ....ನಾಳೇನೇ ನಿನ್ನ ಮಂತ್ರಿ ಮಾಡ್ತೀನಿ. " ಅಂದ. ಯಾಕೋ ಆಗದು ಅನಸ್ತು. ಕನಸು ಕರಗೇಹೋಯ್ತು.

ಅದಾಗಿ ಒಂದುವಾರ ಕೂಡ ಆಗಿರ್ಲಿಲ್ಲ. ಹಾಗೇ ಕೂದ್ಲು ಜಾಸ್ತಿ ಬೆಳ್ಕೊಂಡಿದೆ ಅಂತ ಕಟ್ ಮಾಡಿಸಲು ಹಜಾಮನ ಹತ್ರ ಹೋಗಿದ್ದೆ. ಹಜಾಮ ಅನ್ಕೋಬಾರ್ದುರೀ ಈಗೆಲ್ಲಾ ಎಲ್ಲರಿಗೂ ಸುಸಂಸ್ಕೃತವಾಗಿ ಹೇಳಬೇಕಂತೆ ಅದ್ಕೇ ಹಜಾಮ, ನಾಯಿಂದ, ನಾಪಿಕ, ಕೆಲಸಿ ಈ ಕನ್ನಡದ ಹೆಸರುಗಳೆಲ್ಲಾ ಮಾಯವಾಗಿ ಶಿಸ್ತಾಗಿ ಜೆಂಟ್ಸ್ ಬ್ಯೂಟಿಶಿಯನ್ನು ಅನ್ಬೇಕು. ಸುಮ್ನೇ ಮಾತಾಡ್ತಾ ಮಾತಾಡ್ತಾ ರಾಶಿಬಿದ್ದ ತೆಲುಗು ದಿನಪತ್ರಿಕೆಗಳಲ್ಲಿ ಕನ್ನಡದ ಅಕ್ಷರವನ್ನೇ ಹೋಲುತ್ತಿರುವ ಅಕ್ಷರಗಳುಳ್ಳ ಒಂದನ್ನು ಎತ್ತುಕೊಂಡು ಓದಲು ಪ್ರಯತ್ನಿಸಿದೆ. ತೆಲುಗು ಕನ್ನಡದಿಂದಲೇ ಹುಟ್ಟಿದ್ದು ಅಂತ ಗಾಢವಾದ ಅನುಭವ ಸಿಕ್ಕಿತು. ತಮಿಳು ಮತ್ತು ಎಂಗಳ ಮಲಯಾಳಂ ಕೂಡ ಕನ್ನಡಮ್ಮ ಕೊಸರಿಕೊಂಡಾಗ ಹುಟ್ಟಿದ್ದ ಕೂಸುಗಳೇ ಆಗಿದ್ದವು ಅಂತಾರೆ ಕೆಲವ್ರು, ನೋ ಕಾಮೆಂಟ್ಸ್...ಹೇಳುವುದಕ್ಕೂ ಕೇಳುವುದಕ್ಕೂ ಈಗ ಸಮಯವಲ್ಲ.

ಜೆಂಟ್ಸ್ ಬ್ಯೂಟಿಶಿಯನ್ನರ ಪಾರ್ಲರಿನಲ್ಲಿ ಕೂತಿದ್ನಾ ನನ್ನ ಸರದಿಗೆ ಇನ್ನೂ ಸಮಯವಿತ್ತು. ಅಷ್ಟೊತ್ತಿಗೆ ಯಾರೋ ದಂಪತಿ ೫ ವರ್ಷದ ಮಗನನ್ನು ಕರ್ಕೊಂಡು ಬಂದ್ರು. " ಸಾರ್ ಇವ ಬಾಳ ತರ್ಲೆಮಾಡ್ತಾನೆ, ಕಟ್ ಮಾಡಸಕೇ ಬಿಡಲ್ಲ...ಸ್ವಲ್ಪ ಅಡ್ಜಷ್ಟ್ ಮಾಡಿ ಮಾಡ್ಬಿಡಿ ಸಾರ್ " ಎಂದ್ರು. ಎಷ್ಟಂದ್ರೂ ಮಗು ನೋಡಿ.. ನಾವೆಲ್ಲಾ ತಗಾದೆ ತೆಗೀಲಿಲ್ಲ. ಸರದಿ ತಪ್ಪಿಸಿ ಮಧ್ಯೆ ಆ ಹುಡುಗನನ್ನು ಕೂರಿಸಿಕೊಂಡರು. ಆತ ಕಿಲಾಡಿ ಎಂದ್ರೆ ಜಗತ್ ಕಿಲಾಡಿ! ಬಂದಾಗಿನಿಂದ ೪-೫ ನಿಮಿಷಗಳಲ್ಲೇ ಮುಂದೆ ರಾಜಕೀಯಕ್ಕೆ ಸೇರುವ ಎಲ್ಲಾ ಲಕ್ಷಣಗಳನ್ನೂ ತೋರಿಸಿಬಿಟ್ಟಿದ್ದ! ಮಗುವಿನ ಕಿಲಾಡಿ ನೋಡಿ ಬ್ಯೂಟಿಶಿಯನ್ನರಿಗೆ ಸ್ವಲ್ಪ ರೇಗ್ತು. ಅವರು ಯಾವುದೋ ಪ್ಲಾನ್ ಮಾಡಿ ಅಪ್ಪ-ಅಮ್ಮನ ಹತ್ರ ನೀವು ಹೊರಗೆ ನಿಂತ್ಕೊಳಿ, ನಾನು ಸ್ವಲ್ಪ ಹೆದರ್ಸಿ ನೋಡ್ತೀನಿ ಅಂದ್ರು. ಮಗುವಿನ ಅಪ್ಪ-ಅಮ್ಮ ಆಚೆಕಡೆ ನಿಂತಾಗ ಮಗುವಿನ ಹತ್ರ ಬ್ಯೂಟಿಶಿಯನ್ನು ಸ್ವಲ್ಪ ಗೇರ್ ಚೇಂಜ್ ಮಾಡಿ ಮಾತಾಡದ್ರು ನೋಡಿ. " ಸುಮ್ನೇ ಕುತ್ಗೋ ಇಲ್ಲಾಂದ್ರೆ ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ ! " ಮಗು ಸ್ತಬ್ಧವಾಗಿ ಕುಳಿತು ಆರಾಮಾಗಿ ಕೆಲಸಕ್ಕೆ ಅನುಕೂಲಮಾಡಿಕೊಟ್ಟಿತು.

ಮಗುವಿನ ಮೂಲ ಭಾಷೆಯೇ ಅದಾಗಿರುವಾಗ ನಿಧಾನಗತಿಯಲ್ಲಿ ಹೇಳಿದ್ರೆ ಅದು ಅದಕ್ಕೆ ಹೇಳಿದ ಹಾಗೇ ಇರ್ತಾ ಇರ್ಲಿಲ್ಲ. ನಮ್ಮ ಉತ್ತರ ಕರ್ನಾಟಕದಲ್ಲಿ " ಬಾರಲೇ ಸೂಳಾಮಗನ ಅಲ್ಲೇನ್ ಮಾಡಾಕತ್ತೀಯೋ ನನ್ಮಗನ ? " ಅಂತಾರೆ. ಅವರಿಗೆ ಅದೇ ಅಭ್ಯಾಸ. ಆ ’ಸಂಸ್ಕೃತ’ ಪದ ಬರಲಿಲ್ಲ ಎಂದರೆ ಉಪ್ಪಿಟ್ಟಿಗೆ ಉಪ್ಪೇ ಹಾಕಿಲ್ಲದ ರೀತಿ ಮಜಾನೇ ಇರೋದಿಲ್ಲ! ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲಾ ಅನ್ನೋ ಗಾದೇನ ಕನ್ನಡದ ಉಪೇಂದ್ರನ ಅಭಿಮಾನಿಗಳು ಅರ್ಥಾಮಾಡ್ಕೊಂಡಿರೋ ರೀತೀನೇ ಬೇರೇ ಇತ್ತು. ಆದ್ರೆ ಈಗ ಮೊನ್ನೆ ಅಡ್ಡಕಸಬಿ ಥರ ಅದ್ಯಾವ್ದೋ ಶ್ರೀಮತಿ ಅನ್ನೋ ಮಸಾಲೆ ಮಾಡೋಕೋಗಿ ಈಗ ಅದೂ ಯಡವಟ್ಟಾಗೋಗಿದೆ.

ನಮ್ಮ ಕಛೇರಿಗೆ ಕೆಲವು ವಿದ್ಯುನ್ಮಾನ ಯಂತ್ರಗಳನ್ನು ದೆಹಲಿಯಿಂದ ತರಿಸಲಾಗಿತ್ತು. ಅವುಗಳಲ್ಲಿ ಮೂರು ಗ್ಯಾರಂಟೀ ಸಮಯದೊಳಗೇ ಕೈಕೊಟ್ಟಿದ್ದವು. ಫೋನಾಯಿಸಿದರೆ ಯಾವುದೇ ಸಮರ್ಪಕ ಉತ್ತರ ಸಿಗಲಿಲ್ಲ. ಮೇಲ್ ಮಾಡಿದ್ರೆ ತಲ್ಪಲೇ ಇಲ್ಲಾ ಅನ್ನೋ ರೀತಿ ಇರ್ತಾ ಇದ್ರು. ನಾನೂ ಸ್ವಲ್ಪ ಗೇರ್ ಚೇಂಜ್ ಮಾಡ್ದೆ.. ಆಂಗ್ಲ ಹಿಂದಿ ಎಲ್ಲಾ ಮಿಕ್ಸ ಹೊಡ್ದು " ನಿಮ್ಹತ್ರ ಆಗ್ದೇ ಹೋದ್ರೆ ಹೇಳಿ ಮುಂದೇನ್ಮಾಡ್ಬೇಕು ನೋಡ್ಕೋತೀವಿ " ಅಂತ ಮೇಲ್ ಕಳಿಸಿದೆ, ಫ್ಯಾಕ್ಸೂ ಮಾಡ್ದೆ. ಗಂಟೆ ಅರ್ಧಕೂಡ ಕಳೀಲಿಲ್ಲ. ದಿಲ್ಲಿಯಿಂದ ಬಾಂಬೆಯಿಂದ ಬೆಂಗಳೂರಿಂದ ಎಲ್ಲೆಲ್ಲೆಲ್ಲಾ ಅವರ ಬ್ರ್ಯಾಂಚುಗಳಿವೆಯೋ ಅಲ್ಲೆಲ್ಲಾ ಕಡೆಗಿಂದ್ಲೂ ಕಾಲೂ ಕಾಲು. " Sir, no issues we will solve your problem " ಮಾರ್ನೇ ದಿವ್ಸ ಬೆಳಿಗ್ಗೆ ಬೆಳಿಗ್ಗೇನೇ ಪ್ರಾಬ್ಲಮ್ಮು ಇದ್ದಿದ್ದು ನೋ ಪ್ರಾಬ್ಲಮ್ಮು !

ನಂಗನ್ಸಿದ್ದೇನು ಗೊತ್ತೇ ? ನಮ್ಮ ವಿದ್ಯುನ್ಮಾನದಲ್ಲಿ ಥ್ರಿಶೋಲ್ಡ್ ವೋಲ್ಟೇಜ್ ಅಂತ ಕರೀತೀವಿ--ಕೆಲವೊಂದು ಇಂಟಿಗ್ರೇಟೆಡ್ ಸರ್ಕಿಟ್ ಕೆಲಸಮಾಡಲು ನಿಗದಿಪಡಿಸಿದ ವೋಲ್ಟೇಜ್ ಸಪ್ಲೈ ಆದರೆ ಮಾತ್ರ ಅದು ಕೆಲಸವನ್ನು ಆರಂಭಿಸ್ತದೆ. ಅದೇ ರೀತಿ ಅನೇಕ ಜನರಿಗೆ ಅವರವರ ಲೆವೆಲ್ಲಿಗೆ ತಕ್ಕನಾಗಿ ಮಾತಿನ ದಾಟಿಯನ್ನು ಬದಲಿಸಿದರೇ ಕೆಲ್ಸ ಆಗೋದು! ಎಲ್ಲಿ ’ಸ್ವಾಮೀ’ ಅನ್ಬೇಕೋ ಅಲ್ಲಿ ಹೇಯ್ ಅಂದ್ರೆ ಕೆಲ್ಸ ಕೆಟ್ಟೋಗುತ್ತೆ! ಎಲ್ಲಿ ’ಹೋಗಲೇ’ ಅನ್ಬೇಕೋ ಅಲ್ಲಿ ’ಸ್ವಾಮೀ’ ಅಂತಾನೇ ಇದ್ರೂ ಆ ’ಸ್ವಾಮಿ’ ಕಮಕ್ ಕಿಮಕ್ ಅನ್ನದೇ ಪ್ರತಿಷ್ಠಾಪಿಸಿದ ವಿಗ್ರಹದ ಥರ ಕುಳಿತ್ಬಿಟ್ಟಿರುತ್ತೆ. ಹೀಗಾಗಿ ಯಾವಾಗ ಎಲ್ಲಿ ಯಾರಮುಂದೆ ಯಾವ ಶಬ್ದ ಪ್ರಯೋಗ ಸರಿ ಎಂಬುದರ ಮೇಲೆ ಥೀಸಿಸ್ ಬರೆದು ಡಾಕ್ಟರೇಟ್ ಪಡೆಯೋಣ ಅಂತಿದೀನಿ. ಅದ್ರಿಂದ ನಿಮ್ಗೂ ಸಹಾಯವಾಗ್ಬೌದು. ಅಂದಹಾಗೇ ನಿಮಗೀಗ ಯಾವ ಶಬ್ದ ಪ್ರಯೋಗಿಸಲಿ ? ಗೊತ್ತಾಯ್ತು ಬಿಡಿ...ನೀವಿಲ್ಲಿಗೆ ಬಂದು ಓದೋಮಟ್ಟಕ್ಕೆ ಇದೀರೀಂದ್ರೆ ಸ್ವಲ್ಪನಾರು ಆಸಕ್ತಿ ಇದ್ದೋರೇ ಇರ್ಬೇಕಲ್ವೇ ? ಅದಕೇ ನಿಮಗೆಲ್ಲಾ ಗೇರ್ ಚೇಂಜ್ ಮಾಡೋಕಾಗುತ್ಯೇ ಸ್ವಾಮೀ ? ಬರಲೇ ? ಬ ಬಾಯ್!

Tuesday, July 26, 2011

ಜಾವದ ಅಪ್ಸರೆ


ಜಾವದ ಅಪ್ಸರೆ

ಮುಂಜಾವಿನ ಘಳಿಗೆಯಲ್ಲಿ ಮಂಜು ಕವಿದ ಕಣಿವೆಯಲ್ಲಿ
ರಂಜಿಸಿಹುದು ಹಕ್ಕಿಯದರ ಸುಪ್ರಭಾತವು
ಅಂಜುತಲೇ ಮುಂದೆ ಸಾಗೆ-ನಂಜುಸುರಿದ ಮನಸಿನಲ್ಲಿ
ಸಿಂಜಿನಿಗಳ ಘಲಿರುನಾದ ಸೆಳೆಯುತಿದ್ದಿತು

ಬಡಿತ ತೀವ್ರಗೊಂಡ ಎದೆಯ ಕದವ ತಟ್ಟಿ ಬಂದೆನೆನುತ
ಕಡಿತವಿರದ ಪ್ರೀತಿ ಬಯಸಿ ನನ್ನ ಮುಂದಕೆ
ಹಿಡಿತ ತಪ್ಪಿ ಮನವದಲ್ಲಿ ಕುಡಿದ ಮಂಗನಂತೆ ಕುಣಿದು
ನಡತೆ ಸರಿಯೆ ನೋಳ್ಪ ಪರಿಯ ಮರೆತು ಹಿಂದಕೆ

ಕಮಲಮುಖಿಯ ಮೊಗದಲೆರಡು ಚಿಕ್ಕಚಿಕ್ಕ ಕಮಲವರಳಿ
ವಿಮಲ ಮನದ ಭಾವಬಣ್ಣ ಹೊರಗೆ ಸೂಸುತ
ಸುಮಲತೆಗಳು ಬಾಗಿ ಬಳುಕಿ ಮರವನಾತು ಬದುಕಬಯಸಿ
ಅಮಲುತರುವ ಸನ್ನಿವೇಶ ಬೆಳಗಿನಲ್ಲಿಯೇ !

ಯಾವ ಶಿಲ್ಪಿ ಕಡೆದನವಳ ಜೀವಸವೆದು ಜೀವತುಂಬಿ
ದೇವಲೋಕದಿಂದ ಇಳಿದ ಚಲುವಿನಪ್ಸರೆ
ಮಾವ ನಿನ್ನ ಮಗಳು ನನಗೆ ಎನಲು ಮನದಿ ಭಯವುತುಂಬಿ
ಜಾವದಲ್ಲೆ ಕದ್ದು ನಡೆವ ನೇಮದಕ್ಕರೆ !

ಮೂರುಲೋಕಕೆಲ್ಲ ಗಂಡ ಭಾರಿ ಮಲ್ಲ ಆಕೆಯೆದುರು
ಪಾರಿಜಾತ ತರುವ ಗೊಲ್ಲ ತಾನು ಎನುತಲಿ
ಸೂರೆಹೊಡೆಯೆ ಮೈಯ್ಯ ಸುಖವ ದೂರದಲ್ಲಿ ಯಾರೊ ಕಂಡು
ಹಾರಿಬಿದ್ದ ಮಂಚದಲ್ಲಿ ಕನಸು ನಗುತಲಿ !

Sunday, July 24, 2011

|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ|||


|| ಅಹಂ ಏಕಂ ಶತಂ ವ್ಯಾಘ್ರಂ
ಸಪ್ತದೀ ಕುಂಜರಂ ಬಲಂ ||


" ಮಗನೇ ಆ ಕುಂಟು ಕುರಿ ಏನು ಹೇಳ್ತು ಬಲ್ಲೆಯಾ ? "

ಹೀಗೆಂದಾಗ ಅತ್ಯಂತ ಧೈರ್ಯದಿಂದಲೂ ಅತೀವ ಸಂತೋಷದಿಂದಲೂ ಕಣ್ಣರಿಳಿಸಿ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿರುವ ನಾನು ಅಜ್ಜಿಯನ್ನು ಕುಳಿತಲ್ಲೇ ತಿರುಗಿ ತಿರುಗಿ ನೋಡುತ್ತಲೇ ಇದ್ದೆ. ಅಜ್ಜಿ ಒತ್ತಾಸೆಯಿಂದ ಹೇಳುತ್ತಿದ್ದ ಆ ಸಂಗತಿ ನನ್ನಲ್ಲಿರುವ ಭಯವನ್ನು ನಿವಾರಿಸಿಕೊಳ್ಳುವಲ್ಲಿ ಅಂದು ನನಗೆ ನೆರವಾಗಿತ್ತು. ಕನ್ನಡ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಯಲ್ಲಿ ಕಲಿಯುತ್ತಿದ್ದ ನನಗೆ ೨ ಕಿಲೋ ಮೀಟರ್ ದೂರದ ಶಾಲೆಗೆ ಓಡಾಡುವಾಗ ಸಹಪಾಠಿಗಳು ಜೊತೆಗಿರದೇ ಇರುವ ಸಂಭವ ಇರುತ್ತಿತ್ತು. ಏಕಾಕಿಯಾಗಿ ಗುಡ್ಡದ ಕಾಲು ದಾರಿಗಳಲ್ಲಿ ಪಾಟಿಚೀಲ ಹೆಗಲಿಗೇರಿಸಿಕೊಂಡು ನಡೆದೇ ಹೋಗುವ ನನಗೆ ಸರಿಯಾದ ಚಪ್ಪಲಿಯೂ ಇರಲಿಲ್ಲ. ಆಗಿನ ಕಾಲವೇ ಹಾಗಿತ್ತು. ನಮಗೆಲ್ಲಾ ನಿತ್ಯವೂ ಹೊಸ ಯುನಿಫಾರ್ಮ ದಿರಿಸುಗಳು ಅಂತೆಲ್ಲಾ ಇರಲಿಲ್ಲ. ಮನೆಯಲ್ಲಿ ಬೇರೇ ಶಾಲೆಗೇ ಬೇರೆ ಎಂಬ ತೀರಾ ಮಡಿವಂತಿಕೆಯ ಜನ ನನ್ನ ಹಿರಿಯರಾಗಿರಲಿಲ್ಲ. ಕೊಳೆಯಾದಾಗ ತೊಳೆದು ಹಾಕಿಕೊಳ್ಳುವ ಎರಡೇ ಸೆಟ್ಟು ಅಂಗಿ ಚಡ್ಡಿಗಳು; ಅವೂ ದೊಗಳೆಗಳೇ !

ಅಂದಿನ ದಿನ ನಾವು ಏನನ್ನು ತೀರಾ ಪಡೆದಿರಲಿಲ್ಲವೋ ಅದಕ್ಕೆ ಹಳ್ಳಿಯ ಜೀವನ ವೈಖರಿಯೂ ಕಾರಣವಾಗಿದ್ದಿರಬಹುದು. ಪಡೆಯದೇ ಇದ್ದ ಆ ಸೌಕರ್ಯಗಳಿಗಿಂತ ಪಡೆದುಕೊಂಡ ಅನನ್ಯ ಅನುಭೂತಿ ಇದೆಯಲ್ಲಾ ಅದು ಇಂದಿನ ಜನಾಂಗಕ್ಕೆ ದುಡ್ಡುಕೊಟ್ಟರೂ ಸಿಗುವಂಥದ್ದಲ್ಲ. ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿಬೆಳೆದ ನಾನು ಮತ್ತು ನನ್ನೋರಗೆಯ ಜನರಿಗೆ, ನಮಗಿಂತಾ ಹಿಂದಿನ ಪೀಳಿಗೆಯವರಿಗೆ ಅದು ಸಿಕ್ಕಿರಬಹುದು. ಮನೆಯಲ್ಲಿ ಹಿರಿಯರು ನೀಡುವ ಪ್ರೀತ್ಯಾದರಗಳು, ವಾತ್ಸಲ್ಯ ಪೂರಿತ ನಡೆಗಳು ನಮಗೆ ಬೇಕಾದ್ದಕ್ಕಿಂತ ತುಸು ಜಾಸ್ತಿಯೇ ಲಭಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಳೆಗಾಲದಲ್ಲಿ ಎಲ್ಲೆಲ್ಲೂ ನಿಂತ ಮಳೆನೀರು. ತುಂಬಿ ಹರಿವ ತೊರೆ ಹಳ್ಳ ಕೆರೆ ಕಟ್ಟೆಗಳ ನೈಸರ್ಗಿಕ ಪುಟ್ಟ ಪುಟ್ಟ ಜಲಪಾತಗಳು. ಎಲ್ಲೆಲ್ಲೂ ಹಸಿರುಟ್ಟ ಭೂಮಿಯ ಅಂದ. ಸ್ವಲ್ಪ ಚಳಿಮಿಶ್ರಿತ ಹವೆಯಲ್ಲಿ ಮನೆಯೊಳಗೆ ಕುಳಿತು ಸೌದೆಯ ಒಲೆಯಲ್ಲಿ ಸುಟ್ಟು, ಕೊಬ್ಬರಿ ಎಣ್ಣೆ ಸವರಿದ ಹಲಸಿನ ಹಪ್ಪಳ ತಿನ್ನುತ್ತಾ ನಾವು ಕೇಳದ ಕಥೆಗಳಿಲ್ಲ. ಈಗ ಕಥೆ ಕೇಳಿ --

ಒಂದಾನೊಂದು ಕಾಲದಲ್ಲಿ ಒಬ್ಬ ಕುರಿಗಳನ್ನು ಸಾಕಿದ್ದನಂತೆ. ಅಮ್ಮಕುರಿ-ಅಪ್ಪಕುರಿ-ತಮ್ಮಕುರಿ-ಅಣ್ಣಕುರಿ-ಅಕ್ಕಕುರಿ-ಚಿಕ್ಕಪ್ಪಕುರಿಯೋ ಎಂಬಿತ್ಯಾದಿ ಹಲವು ಕುರಿಗಳು ಆತನ ಕೊಟ್ಟಿಗೆಯಲ್ಲಿದ್ದವು. ಅವು ದಿನಾಲೂ ತಾವೇ ಮನೆಯಿಂದ ಕೂಗಳತೆ ದೂರದಲ್ಲಿರುವ ಕಾಡಿಗೆ ಮೇಯಲು ಹೋಗ್ತಾ ಇದ್ವು. ಕಾಡಲ್ಲಿ ಅಲ್ಲಿ ಇಲ್ಲಿ ಒಟ್ಟಿಗೇ ಆ ಮಂದೆ ತಿರುಗಾಡ್ತಾ ಮೇಯ್ತಾ ಇದ್ವು. ಹೀಗೇ ಒಂದಿನ ಮಳೆಗಾಲದಲ್ಲಿ ಮೇಯ್ತಾ ಮೇಯ್ತಾ ಸಮಯ ಕಳ್ದಿದ್ದೇ ಗೊತ್ತಾಗ್ಲಿಲ್ಲ. ಸುಮಾರು ದೂರವೂ ಸಾಗಿಬಿಟ್ಟಿದ್ದವು. ಯಾಕೋ ಜೋರಾಗಿ ಗಾಳಿಬೀಸಿದಂತಾಗಿ ಕಪ್ಪುಗಟ್ಟಿದ ಮೋಡ್ದಿಂದ ಮಳೆ ಬರೋ ಹಾಗಾಯ್ತು. ಎಲ್ಲಾ ಕುರಿಗಳೂ ಓಡಿ ಮನೆಕಡೆ ನಡೆದುಬಿಟ್ಟವು. ಓಡುವ ಗಡಿಬಿಡಿಯಲ್ಲಿ ಕುಂಟುಕುರಿಯನ್ನು ಮರೆತುಬಿಟ್ಟವು. ತಾನೆಷ್ಟೇ ಓಡಿದರೂ ಶಾರೀರಿಕ ದೌರ್ಬಲ್ಯದಿಂದ ಆ ಕುಂಟು ಕುರಿಗೆ ಜಾಸ್ತಿ ಓಡಲಿಕ್ಕೆ ಆಗ್ತಾ ಇರಲಿಲ್ಲ. ಹೀಗಾಗಿ ಗುಂಪು ಮುಂದೆ ದೂರ ಓಡುವಾಗ ಇದ್ಕೆ ದಾರಿತಪ್ಪಿಹೋಯ್ತು !

ಮೊದ್ಲೇ ಕಾಡು ಹುಲಿ-ಸಿಂಹ-ಕರಡಿ ಇತ್ಯಾದಿ ಕ್ರೂರ ಪ್ರಾಣಿಗಳು ಇರೋ ಜಾಗ. [ಅಜ್ಜಿ ಇಷ್ಟನ್ನು ಹೇಳುತ್ತಿರುವಾಗ ನಮಗೆ ಮೈಯ್ಯೆಲ್ಲಾ ರೋಮಾಂಚನ ] ಕೇಳಬೇಕೇ ? ಪಾಪ ಈ ಕುಂಟುಕುರಿ [ನೋಡಿ ಅಜ್ಜಿ ಕುಂಟುಕುರಿ ಪಕ್ಷ! ಹೋದ ಕುರಿಮಂದೆಯನ್ನು ’ಆ’ ಎಂದರು, ಕುಂಟುಕುರಿಗೆ ’ಈ ’ ಎಂದರು-ನಮ್ಮ ಕನ್ನಡದಲ್ಲಿ ಹತ್ತಿರ ಇರುವ ವ್ಯಕ್ತಿ-ವಸ್ತು-ಪ್ರದೇಶಕ್ಕೆ ’ಈ’ ಕಾರ ಬಳಸುತ್ತೇವೆ, ದೂರವಿದ್ದರೆ ’ಆ’ ಕಾರ ಬಳಕೆಯಾಗುತ್ತದೆ] ಹಾಗೇ ಕುಂಟ್ತಾ ಕುಂಟ್ತಾ ಸ್ವಲ್ಪ ಮುನ್ನಡೀತು. ಅಷ್ಟರಲ್ಲೇ ಕತ್ತಲಾಗೇ ಹೋಯ್ತು. ಮಂದಬೆಳಕಿನಲ್ಲಿ ಹತ್ರದಲ್ಲೇ ಅದ್ಕೊಂದು ಗುಹೆ ಕಾಣಿಸ್ತು. ಹೇಗೂ ತಾನಂತೂ ಇವತ್ತು ಮನೆಗೆ ಹೋಗೋದಕ್ಕೆ ಸಾಧ್ಯವಿಲ್ಲಾ ಇಲ್ಲೇ ರಾತ್ರಿ ಕಳಿವಾ ಅಂತೇಳಿ ಕುಂಟುಕುರಿ ಆ ಗುಹೆಯೊಳಗೆ ಹೋಯ್ತು. ಹಗಲಿಡೀ ತಿರುಗಿ ಸುಸ್ತಾಗಿದ್ದ ಅದಕ್ಕೆ ಹೊಟ್ಟೆಯಂತೂ ತುಂಬಿತ್ತು. ಗುಹೆಯ ಒಳಗೆ ಹೋಗ್ತಾ ಹೋಗ್ತಾ ಅಲ್ಲೇ ಒಂದು ಜಾಗ ಹಿಡ್ದು ಮಲಗಿಬಿಡ್ತು. ಮಲ್ಗಿದ ಅದ್ಕೆ ಅಲ್ಲೇ ಜೋಂಪು ಹತ್ತತು.

ರಾತ್ರಿ ಹನ್ನೆರಡು ಹೊಡೆದಿರಬಹುದು. [ನಮ್ಮ ಕಣ್ಣು ಆಗ ಗೋಡೆಯಮೇಲೆ ಅಲ್ಲಾಡಿಸಿಕೊಂಡಿರುತ್ತಿದ್ದ ಸೊಕ್ಕಿನ ಗಡಿಯಾರದ ಮೇಲೆ ಹೋಗುತ್ತಿತ್ತು. ಎಲ್ಲಾ ಕಲ್ಪನೆ ತಾನೇ ಹನ್ನೆರಡು ಹೊಡೀವಾಗ ನಾವು ಮಲ್ಗಿರ್ತೀವಿ, ರಾತ್ರಿ ಅಷ್ಟೊತ್ತು ಎದ್ದಿದ್ದು ದಾಖ್ಲೇನೇ ಇಲ್ಲ. ಅಕಸ್ಮಾತ್ ಎಲ್ಲೋ ಕೃಷ್ಣಾಷ್ಟಮಿಯಂಥಾ ದಿನ ಇದ್ರೆ ಮನೆಯ ಒಳಗೇ ಇದ್ದು ಗೊತ್ತು ಬಿಟ್ರೆ ರಾತ್ರಿ ಹೊರಗೆ ಕಾಡಿಗೆಲ್ಲಾ ಹೋಗಿ ಗೊತ್ತಿದ್ದವರಲ್ಲ. ] ಗುಹೆಯ ಹೊರಗೆ " ಘಾಂವ್ ಘಾಂವ್ ಘಾಂವ್ " ಸಿಂಹ ಘರ್ಜನೆ! ಪಾಪ ಕುರಿಗೆ ಎಚ್ಚರಿಕೆಯಾಗೋಯ್ತು. ಒಬ್ಬನೇ ಅದೂ ಗುಹೆಯೊಳಗೆ ಇದೆಯಲ್ಲಾ ಅದರ ಫಜೀತಿ ಯಾರಿಗೂ ಬೇಡ. ಮೈಯ್ಯೆಲ್ಲಾ ಥರಥರ ನಡುಗ್ತಾ ಇತ್ತು. ಇನ್ನೇನು ಸಿಂಹ ಒಳಗೆ ಬಂದ್ರೆ ಕೊಂದು ತಿನ್ನೋದು ನಿಕ್ಕಿ. ಕುರಿ ಇರೋಬರೋ ಧೈರ್ಯಾನೆಲ್ಲಾ ಸೇರ್ಸ್ಕೊಂಡು ಮನಸ್ನಲ್ಲೇ ಎಲ್ಲಾ ದೇವ್ರನ್ನೂ ಸ್ಮರಣೆಮಾಡ್ಕೊಂಡು [ನೋಡಿ ಈ ಕಥೇಲಿ ಕುರಿಗೂ ದೇವರಿದ್ದಾನೆ !] ಸ್ವಲ್ಪ ಗಂಟ್ಲನ್ನ ಸರಿಮಾಡ್ಕೊಂಡ್ತು. ಹೇಗೂ ಸಾಯೂದ್ ಸಾಯೂದೇ ಬದಕ್ಲಿಕ್ಕೆ ಆದ್ರೆ ನೋಡ್ವ ಹೇಳಿ ಯಾವ್ದೋ ಹೊಸ ಭಯಂಕರ ಕಾಡು ಪ್ರಾಣಿ ಸ್ವರದಲ್ಲಿ ಹೇಳ್ತು " ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ. "

[ಆ ಸಮಯದಲ್ಲಿ ಕುತೂಹಲ ಹೇಗಿತ್ತು ನಮ್ಗೆ ಅಂದ್ರೆ ನಿಜಕ್ಕೂ ಅದನ್ನು ಶಬ್ದಗಳಲ್ಲಿ ಹೇಳೋದಕ್ಕೆ ಸಾಧ್ಯಾವಾಗ್ತಾ ಇಲ್ಲ, ಅಜ್ಜಿ ಮುಂದುವರಿಸಿದ್ರು ] ಅಂಥಾ ಮಾದೊಡ್ಡ ಸಿಂಹಕ್ಕೆ ಗುಹೆಯ ಒಳಗಿನ ವಿಚಿತ್ರ ಪ್ರಾಣಿಯ ಆ ಕೂಗು ಕೇಳಿ ಎದೇಲಿ ಪುಕುಪುಕು ನಡುಕ ಶುರುವಾಯ್ತಂತೆ. ಈ ಕುಂಟುಕುರಿ ಹೇಳ್ತಲ್ಲಾ ಹಾಗಂದ್ರೇನು ಗೊತ್ತೇ ? ನಾನು ಒಬ್ಬನೇ ನೂರಾರು ಹುಲಿಗಳನ್ನೂ ಮತ್ತು ಆನೆಗಳನ್ನೂ ಒಟ್ಟಿಗೆ ಸೇರ್ಸಿದ್ರೆ ಎಷ್ಟು ಶಕ್ತಿ ಇರ್ತದೋ ಅಷ್ಟು ಶಕ್ತಿ ಹೊಂದಿದ್ದೇನೆ ಅಂತ. ಈ ಕೂಗಿಗೇ ಸಿಂಹ ಒಂದೇ ಸಲಕ್ಕೆ ಹೆದರಿಬಿಡ್ತಂತೆ! ಗುಹೆಯೊಳಗೆ ಪ್ರವೇಶಮಾಡೋ ಬದ್ಲು ಅಲ್ಲಿಂದ ಬೇಗ ಬೇಗ ಜಾಗ ಖಾಲಿ ಮಾಡ್ತಂತೆ! ಕುಂಟುಕುರಿ ಅಂತೂ ಬದ್ಕಿದ್ನಲ್ಲಪ್ಪಾ ಅಂದ್ಕೊಂಡು ರಾತ್ರಿ ಅಲ್ಲೇ ಇದ್ದು ಮಾರ್ನೇ ದಿವ್ಸ ಬೆಳಿಗ್ಗೆ ಹೊರಗೆ ಬಂತಂತೆ. ನಿಧಾನಕ್ಕೆ ತಿರುಗ್ತಾ ತನ್ನ ಗುಂಪನ್ನು ಹುಡುಕಿ ಸೇರ್ಕೊಂಡ್ತಂತೆ.

--ಇದು ಪೂರ್ಣಕಥೆ. ಇಂತಹ ಹಲವಾರು ಕಥೆಗಳು ನಮ್ಮನ್ನೆಲ್ಲಾ ಅಂದು ಸ್ವಲ್ಪವಾದರೂ ಸಂಸ್ಕಾರವಂತರನ್ನಾಗಿ, ಸುಸ್ವಭಾವ ಉಳ್ಳವರನ್ನಾಗಿ ಮಾಡಲು ಕಾರಣವಾಯ್ತು ಎಂಬುದು ಇಂದಿನ ನನ್ನೋರಗೆಯ ಹಲವರ ಅಭಿಪ್ರಾಯ. ಇಂದು ಕೂಡುಕುಟುಂಬಗಳೂ ಇಲ್ಲ, ಕಥೆಹೇಳುವ ಹಿರಿಯರೂ ಇಲ್ಲ. ಎಲ್ಲರಿಗೂ ಟಿವಿಯೇ ಪರದೈವ! ಇರೋ ಸ್ವಲ್ಪ ಸಮಯವನ್ನು ಅದರ ಮುಂದೇ ಕಳೆಯುವ ಬಯಕೆ. ಇನ್ನು ಮಕ್ಕಳು ಹೇಗೆ ಸಂಸ್ಕಾರವಂತರಾಗಬೇಕು? ಮುಂದಿನೆ ಪೀಳಿಗೆ ಯಾವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ? ಭಗವದ್ಗೀತೆಯಂತಹ ಒಳಿತನ್ನು ಮತ್ತು ಸರಳ ಸುಖ ಜೀವನ ಸೂತ್ರಗಳನ್ನು ಬೋಧಿಸುವ ಗ್ರಂಥಗಳನ್ನು ಮಕ್ಕಳಿಗೆ ಬೋಧಿಸಲು ತಿಳಿಸಿದರೆ ನಾಗರಿಕತೆ ಅತಿ ಹೆಚ್ಚಾದ ನಮ್ಮಲ್ಲೇ ಕೆಲವರಿಗೆ ಅದು ಧರ್ಮಪ್ರಚಾರವಾಗಿ ಕಾಣುತ್ತದೆ. ಕಾಮಾಲೆಯ ಕಣ್ಣಿಗೆ ಲೋಕವೆಲ್ಲಾ ಹಳದಿ ಎಂಬಂತೇ ಕಂಡಿದ್ದೆಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಂಡರೆ ವಿಷಮಪರಿಸ್ಥಿತಿ ಉದ್ಭವಿಸುತ್ತದೆ. ಒಳ್ಳೆಯದು ಯಾವ ಮತದ ಮೂಲದಿಂದ ಬಂದರೇನು ಅದನ್ನು ಸ್ವೀಕರಿಸೋಣ. ಮತಗಳೆಲ್ಲದರ ಕುರುಡು ನಂಬಿಕೆಗಳನ್ನು ಬಿಟ್ಟುಬಿಡೋಣ ಅಲ್ಲವೇ ?

ಸತ್ಯವನ್ನು ಹೇಳುವುದಾದರೆ ಭಗವದ್ಗೀತೆಯ ಆಂಗ್ಲ ಅನುವಾದವನ್ನೂ, ಅದರ ವ್ಯಾಖ್ಯಾನಗಳನ್ನೂ ಇಡೀ ವಿಶ್ವದ ಎಲ್ಲೆಡೆಯ ಜನ ಒಪ್ಪುತ್ತಾರೆ; ಆದರೂ ಹೊರಗಿನಿಂದ ತಾವು ಅದನ್ನು ಅಳವಡಿಸಿಕೊಂಡಿದ್ದನ್ನು ಹೇಳುವುದಿಲ್ಲ, ತೋರಗೊಡುವುದಿಲ್ಲ. ಎಲ್ಲೋ ಒಬ್ಬಿಬ್ಬರು ಒಬಾಮಾ ಥರದವರು ಹೊರಗಿನಿಂದಲೂ ಒಪ್ಪುತ್ತಾರೆ. ಮನುಷ್ಯ ಹುಟ್ಟುವುದು ಸಾಯುವುದು ನಡೆದೇ ಇರುತ್ತದೆ. ತೀರಾ ಆಧ್ಯಾತ್ಮಿಕವಾಗಿ ನೋಡುವುದಾದದರೆ ಯಾರೂ ಯಾರಿಗೂ ಏನೂ ಅಲ್ಲ ! ಯಾವ ಸಂಬಂಧವೂ ಇಲ್ಲ. ಆದರೂ ಲೌಕಿಕವಾಗಿ ಬದುಕಿರುವವರೆಗೆ ಇಲ್ಲಿರುವ ಸುಖವನ್ನು ಅನುಕೂಲತೆಗಳನ್ನು ಪಡೆಯುವುದು ಜನಸಾಮಾನ್ಯರ ಇಚ್ಛೆಯಾಗಿರುತ್ತದೆ. ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದ ವಿಶ್ವದ ಜನತೆ ವಿಶ್ವಮಾನವ ತತ್ವವನ್ನು ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದೆ!

ಹೀಗೆ ನಾವೊಮ್ಮೆ ಯೋಚಿಸೋಣ. ನಮಗೆಲ್ಲಾ ತಿಳಿದಿರುವಂತೇ ವೈದ್ಯಕೀಯ ಚಿಕಿತ್ಸೆಗಳಿಗೆ ಪ್ರಯೋಗಶಾಲೆ, ಪರಿಕರಗಳು, ಯಂತ್ರಗಳು ಬೇಕು. ಹೊಟ್ಟೆಯೊಳಗಡೆ ಕರುಳಿನಲ್ಲಿ ಏನಾಗುತ್ತಿದೆ ಎಂದು ನೋಡುವುದೇ ಅಲೋಪಥಿ ಚಿಕಿತ್ಸೆಯಲ್ಲ, ಅದು ಆಯುರ್ವೇದವೂ ಅಲ್ಲ, ಹೋಮಿಯೋಪಥಿಯೂ ಅಲ್ಲ. ಏನಾಗಿದೆ ಎಂಬುದನ್ನು ವೈಜ್ಞಾನಿಕ ಉಪಕರಣಗಳ ಮೂಲಕ ತಿಳಿದುಕೊಳ್ಳುವುದು ಆ ಹಂತ. ನಂತರದ ಉಪಚಾರ ಪ್ರಕ್ರಿಯೆಮಾತ್ರ ಆ ಯಾ ಚಿಕಿತ್ಸಾ ಕ್ರಮಗಳಿಗೆ ಬದ್ಧವಾಗಿದ್ದು. ಅದೇ ರೀತಿ ಹಿಂದೂ ಧರ್ಮದಲ್ಲಿ ಬಳಕೆಯಾದ ಭಗವದ್ಗೀತೆ ಕೆಲವು ವೈಜ್ಞಾನಿಕ ಉಪಕರಣಗಳು ಮತ್ತು ಪ್ರಯೋಗಾಲಯವನ್ನು ಬಿಂಬಿಸಿದರೆ ಹೋಮ/ಹವನ/ಪೂಜೆ/ಪುನಸ್ಕಾರಗಳು ಹಿಂದೂ ಮತಕ್ಕಷ್ಟೇ ಮೀಸಲಾದ ಕೈಂಕರ್ಯಗಳಾಗಿರುತ್ತವೆ. ಹೀಗಾಗಿ ಭಗವದ್ಗೀತೆ ಎಂಬಮಾತ್ರಕ್ಕೆ ಜಗತ್ತಿಗೆ ಯಾವನೋ ಮಹಾಜ್ಞಾನಿ ಒದಗಿಸಿಕೊಟ್ಟ ಈ ಮಹಾಯಂತ್ರದ ಪ್ರಯೋಗ ಪರಿವೀಕ್ಷಣಾ ಪಟ್ಟಿ ಸಿಗದೇ ಹೋದರೆ ಅದು ಮನುಕುಲಕ್ಕೆ ನಾವೆಸಗುವ ಅಪಚಾರ ಎಂದರೆ ತಪ್ಪಾಗುವುದಿಲ್ಲ.

ನಿನ್ನೆ ನಾನು ಒಂದು ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಕಾರ್ಯಕ್ರಮ. ಹರಟೆಯ ವಿಷಯ ಹೀಗಿತ್ತು-- ಸಂಸಾರ, ಸಂಸ್ಕಾರ ಮತ್ತು ಸಮಾಚಾರ. ಅನೇಕ ವಿದ್ವಾಂಸರು ವೇದಿಕೆಯ ಮೇಲೂ ಕೆಳಗೂ ಇದ್ದರು. ಅದೊಂದು ಸಾಮಾಜಿಕ ಕಾರ್ಯವಾಗಿದ್ದರಿಂದ ಎಲ್ಲಾ ಮತಗಳವರೂ ಅಲ್ಲಿದ್ದರು. ಸಂಸಾರದ ಸರಿಗಮವನ್ನು ನಿಭಾಯಿಸುವ ಕಲೆ, ಆಧುನಿಕ ಜೀವನದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಸಂಸ್ಕಾರ ಕೊಡಬೇಕು ಹೀಗೆಲ್ಲಾ ಲೋಕಾಭಿರಾಮವಾಗಿ ನಾಕುಜನ ಕಲೆತು ಮಾತನಾಡುವ ಕ್ರಿಯೆ ಒಂದು ರೀತಿಯ ಹರಟೆ. ಅಲ್ಲಿ ಮುಕ್ತವಾಗಿ ಯಾರೂ ಏನನ್ನೂ ಸಂವಹಿಸಬಹುದಿತ್ತು. ಆಗ ವ್ಯಕ್ತವಾಗಿದ್ದೇ ಮನೆಯಲ್ಲಿ ಹಿರಿಯರ, ಅಜ್ಜ-ಅಜ್ಜಿಯರ ಕೊರತೆ ಕಾಣುವುದರಿಂದಲೂ ಮತ್ತು ಅಪ್ಪ-ಅಮ್ಮ ಇಬ್ಬರೂ ಕೆಲಸದ ನಿಮಿತ್ತ ಮಕ್ಕಳನ್ನು ದಾದಿಯರ ಕೈಗೋ ಇನ್ನಾರಕೈಗೋ ಕೊಟ್ಟು ಇಡೀ ದಿನದಲ್ಲಿ ಒಂದಾವರ್ತಿಯೂ ಮಕ್ಕಳನ್ನು ಸರಿಯಾಗಿ ಗಮನಿಸಲಾರದ್ದೇ ಹೋಗುವುದೂ ಹಲವು ನ್ಯೂನತೆಗಳಿಗೆ ಕಾರಣವಾಗುತ್ತದೆ ಎಂಬುದು.

ಪೂರಕ ನೀರು,ಗೊಬ್ಬರ, ಫಲವತ್ತಾದ ಮಣ್ಣು ಇವಿಷ್ಟಿದ್ದಲ್ಲಿ ಒಂದು ಸಸ್ಯ ಹೇಗೆ ಲೀಲಾಜಾಲವಾಗಿ ಬೆಳೆಯುವುದೋ ಹಾಗೇ ಸರಿಯಾದ ಮಾಹಿತಿ, ಪ್ರೀತಿ,ವಾತ್ಸಲ್ಯ, ಹೊತ್ತಿಗೆ ಸರಿಯಾದ ಆಹಾರ, ನಿದ್ರೆ, ವಿದ್ಯೆ ಇವುಗಳನ್ನೆಲ್ಲಾ ಒದಗಿಸಿದಾಗ ಮಾತ್ರ ಹುಟ್ಟಿದ ಮಗು ಸಮರ್ಪಕವಾಗಿ ಬೆಳೆಯುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ’ಕ್ಯಾಲ್ಶಿಯಮ್ ಡೆಫೀಶಿಯೆನ್ಸಿ’ ಅಂತಲೋ ಇನ್ನೇನೋ ಕೊರತೆ ಅಂತಲೋ ಹೇಳುವಂತೇ ಸಲ್ಲಬೇಕಾದ ಹಲವು ಉಪಚಾರಗಳಲ್ಲಿ ಯಾವುದೇ ವ್ಯತ್ಯಯವಾದರೂ ಮಗು ಅದರ ಫಲವನ್ನು ಉಣ್ಣಬೇಕಾಗುತ್ತದೆ-ಪರೋಕ್ಷ ಪಾಲಕರೂ ಅದರ ಫಲಿತ ಫಲವನ್ನು ಅನುಭವಿಸಬೇಕಾಗುತ್ತದೆ. ಎಲ್ಲವೂ ಯಾಂತ್ರಿಕವಾಗಿಯೇ ನಡೆದರೆ ನಮ್ನಮ್ಮಲ್ಲಿ ಆತ್ಮೀಯತೆ ಎಲ್ಲಿ ಬರುತ್ತದೆ ? ಈರುಳ್ಳಿಯ ಒಳಪದರದಲ್ಲಿರುವ ಪಾರದರ್ಶಕ ಸಿಪ್ಪೆಯಂತೇ ಒಂದು ಆತ್ಮಕ್ಕೂ ಇನ್ನೊಂದು ಆತ್ಮಕ್ಕೂ ಇರಬೇಕಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಕೇವಲ ಹತ್ತಿರದ ತೊಡಗಿಕೊಳ್ಳುವಿಕೆಯಿಂದ. ಇವತ್ತು ನಮ್ಮಲ್ಲಿ ಅಪ್ಪ-ಅಮ್ಮ [ ಬೆಟರ್ ಮಾಮ್ ಅಂಡ್ ಡ್ಯಾಡ್ !] ಮಕ್ಕಳನ್ನು ದಿನಕ್ಕೊಂದಾವರ್ತಿಯಾದರೂ ಅಪ್ಪಿಕೊಂಡು ಮುದ್ದಿಸುತ್ತಾರೆಯೇ ? ಅಥವಾ ಮಕ್ಕಳು ಪಾಲಕರನ್ನು ಹಾಗೆ ಪ್ರೀತಿಸುತ್ತಾರೆಯೇ ? -ಕೇಳಿಕೊಳ್ಳಬೇಕಾಗಿದೆ!

ಮಕ್ಕಳೇ ಇರುವ ಸಭೆಯಲ್ಲಿ ಸುಮ್ನೇ ಒಬ್ಬೊಬ್ಬರಿಗೂ ಪ್ರತ್ಯೇಕ ಕಾಗದ ಕೊಟ್ಟು ಹೆಸರು, ವಿಳಾಸ [ಐಡೆಂಟಿಟಿ] ಬರೆಯದೇ ನಿಮ್ಮಪ್ಪ ಅಮ್ಮನ ಬಗ್ಗೆ ಏನಾದರೂ ದೂರುಗಳಿದ್ದರೆ ದಾಖಲಿಸಿ ಎಂದರೆ ಪ್ರತೀ ಮಗುವೂ ಕೊಟ್ಟ ಸಮಯವನ್ನೂ ಮೀರಿ ಬರೆಯುತ್ತಿರುತ್ತದೆ ಮತ್ತು ಮತ್ತೊಂದು ಖಾಲೀ ಹಾಳೆಗೆ ಬೇಡಿಕೆ ಇಡುತ್ತದೆ! ಅಂದಮೇಲೆ ಪಾಲಕರ-ಮಕ್ಕಳ ನಡುವೆ ಹೇಳಿಕೊಳ್ಳಲಾಗದ ದುಗುಡಗಳು ಇರುತ್ತವೆ ಎಂದಾಯಿತಲ್ಲ. ಅಷ್ಟೆಲ್ಲಾ ದುಗುಡಗಳನ್ನು ಮಡುಗಟ್ಟಿಸಿಕೊಂಡೇ ಬೆಳೆವ ಮಗುವಿಗೆ ಸಹಜವಾಗಿ ಪ್ರಾಪ್ತವಯಸ್ಸು ಬಂದಮೇಲೆ ಪಾಲಕರ ಮೇಲೆ ಪ್ರೀತಿ-ಮಮತ್ಕಾರ ಇರಲೇಬೇಕೆಂದೇನೂ ಇಲ್ಲ. ಅಪವಾದಕ್ಕೆ ಕೆಲವರಿಗೆ ಇರಬಹುದು. ಬಹುತೇಕರು ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಬಿಡುವವರೇ ಆಗುತ್ತಾರೆ !

ಅರ್ಧ ಶತಮಾನದ ಹಿಂದಿನವರೆಗೂ ನಮ್ಮ ಕನ್ನಡದ ಮನೆಗಳಲ್ಲಿ ಕೆಲವು ಶಿಷ್ಟಾಚಾರಗಳಿದ್ದವು. ಬೆಳಿಗ್ಗೆ ಹೀಗೀಗೆ, ಮಧ್ಯಾಹ್ನ ಹೀಗೀಗೆ, ಸಾಯಂಕಾಲ ಹೀಗೀಗೆ ಎಂದೆಲ್ಲಾ ಒಂದು ನಿಯಮಿತ ಜೀವನ ಕ್ರಮ ಅಳವಡಿಕೆಯಾಗಿತ್ತು. ಅಲ್ಲಿ ’ದೇವರ ಹೆಸರಿ’ನಲ್ಲಿ ಆ ಭಯದಲ್ಲಿ ಹಲವು ವೈಜ್ಞಾನಿಕ ಶುದ್ಧಾಚರಣೆಗಳು ನಡೆಸಲ್ಪಡುತ್ತಿದ್ದವು. ಮಕ್ಕಳಿಗೆ ಸಾಯಂಕಾಲವಾದರೆ ಕೈಕಾಲು ಮುಖತೊಳೆದು ದೇವರಿಗೆ ದೀಪ ಮುಡಿಸಿ, ಅಜ್ಜಿಯೋ ಅಜ್ಜನೋ ಇನ್ಯಾರೋ ಹಿರಿಯರ ಜೊತೆ ನೆಲದಮೇಲೆ ಕುಳಿತು ಕೋಷ್ಟಕಗಳು, ಮಗ್ಗಿ, ಸುಭಾಷಿತಗಳು, ಶ್ಲೋಕಗಳೇ ಆದಿಯಾಗಿ ಹಲವಾರು ಮಾಹಿತಿಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ತಿನ್ನುವುದಕ್ಕಾಗಿ ಬದುಕುವುದೋ ಬದುಕುವುದಕ್ಕಾಗಿ ತಿನ್ನುವುದೋ ಎಂಬುದರ ಅರ್ಥವನ್ನು ಹಿರಿಯರು ಬಿಡಿಸಿ ಹೇಳುತ್ತಿದ್ದರು. ಎಂತಹ ಆಹಾರ ಹೇಗೆ ಯಾವಾಗ ಎಲ್ಲಿ ಯಾವರೀತಿ ಸ್ವೀಕರಿಸಬೇಕು ಎಂಬುದನ್ನೂ ಕೂಡ ಕಲಿಸಿಕೊಡುತ್ತಿದ್ದರು. ನಶಿಸಿಹೋದ ರಾಜವಂಶದಂತೇ ಇಂದು ಅಂತಹ ಅಪ್ರತಿಮ ಮೇಧಾವಿ ಹಿರಿಯರೂ, ಪಂಡಿತರೂ ನಮ್ಮೊಡನೆ ಸಿಗುತ್ತಿಲ್ಲ, ಎಲ್ಲವೂ ಕನಸಲ್ಲಿ ಕಂಡ ದೃಶ್ಯಗಳಂತೇ ಕಾಣುತ್ತವೆ; ಕನ್ನಡಿಯಲ್ಲಿನ ಗಂಟಾಗಿ ಪರಿಣಮಿಸಿವೆ.

ಸಮಾಜದಲ್ಲಿ ಸ್ವೇಚ್ಛಾಚಾರ, ಸ್ವೈರವರ್ತನೆ ಜಾಸ್ತಿಯಾದಾಗ, ಗುರು-ಹಿರಿಯ ಮಾರ್ಗದರ್ಶಕರು ಇಲ್ಲದೇ ಇರುವಾಗ, ಯಾವುದೇ ಕಟ್ಟುಪಾಡುಗಳಾಗಲೀ ದೈವಭಯವಾಗಲೀ ಇಲ್ಲದೇ ಹೋದಾಗ ನಡೆಯಬಾರದ್ದು ನಡೆಯುತ್ತದೆ, ಘಟಿಸಬಾರದ್ದು ಘಟಿಸುತ್ತದೆ. ಅದರ ಫಲವೇ ಏನೋ ಎಂಬಂತೇ ನಾವಿಂದು ಅತ್ಯಾಧುನಿಕ ಲೈಫ್ ಸ್ಟೈಲ್ ಎಂದುಕೊಳ್ಳುತ್ತಾ ಲಿವ್-ಇನ್ ರಿಲೇಶನ್‍ಶಿಪ್, ಗಂಡನಿಲ್ಲದೇ ಮಗುಪಡೆಯುವ ಕ್ರಿಯೆ ಇನ್ನೂ ಮುಂತಾದ ಹಲವು ತೆರನಾದ ಬದುಕನ್ನು ಕಾಣುತ್ತಿದ್ದೇವೆ. ಒಬ್ಬ ಹುಡುಗನೋ ಹುಡುಗಿಯೋ ತನ್ನನ್ನು ಇನ್ನೊಬ್ಬರೊಂದಿಗೆ ಶಾರೀರಿಕ ಸಂಬಂಧದಲ್ಲಿ ಸಂಪರ್ಕಗಳಲ್ಲಿ ತೊಡಗಿಸಿಕೊಳ್ಳುವಾಗ ಅಲ್ಲಿ ಕೇವಲ ’ ಆ ಯಂತ್ರ ’ ಮಾತ್ರ ಕೆಲಸಮಾಡುವುದೇ ? ಯಾವುದೇ ಭಾವನೆಗಳು ಇಲ್ಲದೇ ಹೋದರೆ ’ ಆ ಕೆಲಸಕ್ಕೆ ಸಿಗಬಹುದಾದ ಯಂತ್ರಗಳ’ನ್ನೇ ಉಪಯೋಗಿಸಬಹುದಿತ್ತಲ್ಲಾ! ಒಬ್ಬ ಹುಡುಗ ಯಾ ಹುಡುಗಿ ಹಲವಾರು ವ್ಯಕ್ತಿಗಳೊಡನೆ ಆ ರೀತಿಯ ಸಂಬಂಧ ಇಟ್ಟುಕೊಳ್ಳಬಹುದೇ ? ಅದರಿಂದ ತೊಂದರೆಯೇನೂ ಇಲ್ಲವೇ? ಮುಂದೆ ಪ್ರಾಯ ಕಳೆದಮೇಲೆ ಮುದುಕಾದಾಗ ಮಕ್ಕಳೂ ಇರದಿದ್ದರೆ ಆಗ ಯಾವ ಲಿವ್-ಇನ್ ಸೌಲಭ್ಯ ಅವರಿಗೆ ದೊರೆಯಬಹುದು? ಎಲ್ಲರೂ ಚಿಂತಿಸಬೇಕಾದ ವಿಷಯ ಎಂದುಕೊಂಡಿದ್ದೇನೆ.

ಹಾದರಕ್ಕೆ ಹುಟ್ಟುವ ಮಕ್ಕಳು ಹಾದಿಯಲ್ಲೇ ಬಿಸುಡಲ್ಪಡುವ ಹಗಲುರಹಸ್ಯ ಪಾಪದ ಆ ಶಿಶುಗಳ ಮಾರಣಹೋಮ ನೋಡಿದರೆ ನಿಜಕ್ಕೂ ನಾಗರಿಕ ಸಮಾಜ ಎಷ್ಟು ಕ್ರೂರಿ ಎನಿಸುತ್ತದೆ. ಬೇಡದ ಮಗುವನ್ನು ಎಲ್ಲೆಲ್ಲೋ ಯಾರಿಗೋ ಸಿಗುವಂತೇ ಕಾಣಿಸಿ ಬಿಟ್ಟು ಕಣ್ಮರೆಯಾಗುವುದೂ ಕಂಡುಬರುತ್ತದೆ. ಇನ್ನು ಕೆಲವರು ನೇರವಾಗಿ ಬೇನಾಮಿ ಹೆಸರಿನಲ್ಲಿ ಅನಾಥಾಶ್ರಮಕ್ಕೆ ಬಿಟ್ಟುಬರುವುದು ತಿಳಿದುಬಂದಿದೆ. ನಾಳೆ ಆ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಿಂದ ವಂಚಿಸಿದ ಸಾಮಾಜಿಕ ಪಾಪ ಆ ಹಾದರದ ಪಾಲಕರದಾಗಲಿಕ್ಕಿಲ್ಲವೇ? ಕಾಲೇಜಿಗೆ ಹೋಗುವ ಹುಡುಗನಿಗೆ ಏಕಾಂತದಲ್ಲಿ ಮಜಾ ಉಡಾಯಿಸಲು ’ಅವಳು’ ಬೇಕು ಆದರೆ ತಾನು ಮದುವೆಯಾಗುವಾಗ ತನಗೆ ’ಕನ್ಯಾಪೊರೆಹರಿಯದ ಕನ್ಯೆಯೇ ಬೇಕು’ ಎಂಬುದು ಎಷ್ಟು ಧೂರ್ತತನ ಅಲ್ಲವೇ? ಪಾಲಕರ ಕಣ್ತಪ್ಪಿಸಿ ಪಾರ್ಕಿನಲ್ಲೋ ಸಿನಿಮಾ ಟಾಕೀಸಿನಲ್ಲೋ ಮತ್ತೆಲ್ಲೋ ಕುಳಿತು ಚಕ್ಕಂದವಾಡುವ ಹುಡುಗಿಗೆ ಎಲ್ಲಾಮುಗಿದು ಮದುವೆಯಾಗುವಾಗ ’ಸರಿಯಿರುವ ಗಂಡು’ ಬೇಕು; ಸರಿಯಿರುವ ಗಂಡು ಎಲ್ಲಾ ಆಟ ಮುಗಿಸಿನಿಂತ ಹುಡುಗಿಗೆ ಸಿಗಲು ಏನವರಪ್ನಮನೆ ಆಸ್ತಿಯೇ ? ಅಂಥಾ ಜನ ಮದುವೆಯಾದಮೇಲೂ ಮೊದಮೊದಲು ಕೀಲಿ ತಿರುಗಿಸಿದ/ತಿರುಗಿಸಿಕೊಂಡ ಹಳೇ ಕೊಂಡಿಗಳ ನೆನಪಾಗಿ ಮತ್ತೆ ಅವರ ಸಂಪರ್ಕವನ್ನು ಪಡೆಯುವ ಕಳ್ಳಮಾರ್ಗವನ್ನು ಹಿಡಿಯುದಿಲ್ಲವೇ?

ಇದನ್ನೆಲ್ಲಾ ತಿಳಿದೇ ನಮ್ಮ ಪೂರ್ವಜರು ಭಾರತೀಯ ಸಂಸ್ಕಾರವನ್ನು ನಮಗೆ ಕೊಟ್ಟರು ಎನ್ನುವುದಕ್ಕಿಂತ ಅನುಗ್ರಹಿಸಿದರು ಎನ್ನುವುದು ಸರಿಯೆನಿಸುತ್ತದೆ. ರಾಮಾಯಣ ಮಹಾಭಾರತಗಳೆಲ್ಲಾ ಕೇವಲ ಪುಸ್ತಕದ ಕಥೆಗಳೆಂದೂ ಅವು ನಡೆಯಲೇ ಇಲ್ಲಾ ಎಂದೂ ವಾದಿಸುವ ಅರ್ತಂಡ ವಿಜ್ಜಾನಿಗಳೂ ಸಮಾಜದ ದಿಕ್ಕುತಪ್ಪಿಸುವಲ್ಲಿ ಮುಂದಿದ್ದಾರೆ. ನೀವು ಹಿಂದೂ ಮುಸ್ಲಿಮ್ ಕ್ರೈಸ್ತ ಬೌದ್ಧ, ಜೈನ ಯಾವುದೇ ಮತದವರಾಗಿರಲಿ ಪ್ರಾಥಮಿಕವಾಗಿ ಜೀವನದ ಸ್ವಾಸ್ಥ್ಯಸಂಹಿತೆಯನ್ನು ನೋಡಿ. ಮಾನವ ಜೀವನಕ್ಕೆ ಬೇಕಾಗುವ ಅಮೂಲ್ಯ ಆದರ್ಶಗಳು ಕೇವಲ ಭಗದ್ಗೀತೆಯಲ್ಲಿ ಹೇಳಲ್ಪಟ್ಟಿವೆ ಎಂಬುದನ್ನು ಎದೆತಟ್ಟಿಹೇಳುತ್ತಿದ್ದೇನೆ. ಅದು ಭಗವಂತ ಹೇಳಿದ್ದೋ ಇನ್ಯಾರೋ ಹೇಳಿದ್ದೋ ಆಗಿರಲಿ, ಪರವಾಗಿಲ್ಲ; ಆದರೆ ಜಗತ್ತಿನಲ್ಲಿ ಅಂತಹುದೇ ಮತ್ತೊಂದು ಮ್ಯಾನೇಜ್‍ಮೆಂಟ್ ಬೋಧಿಸುವ ಗ್ರಂಥದ ಅಸ್ಥಿತ್ವ ಇಲ್ಲ! ಜಗತ್ತಿಗೆ ಅದನ್ನು ನೀಡಿದಾತ ಹೇಳುತ್ತಾನೆ --ನೀವು ನಿಮ್ಮ ನಿಮ್ಮ ಧರ್ಮದಲ್ಲೇ, ನಿಮ್ಮ ನಿಮ್ಮ ವೃತ್ತಿಯಲ್ಲೇ ಇದ್ದುಕೊಂಡು ಭಗವಂತನನ್ನು ಕಾಣಲು ಸಾಧ್ಯವಿದೆ--ಎಂದು. ಮಾಡುವ ಕೆಲಸಗಳನ್ನು ಹೇಗೆ ಮಾಡಬೇಕು, ಕೈಸೋತಾಗ ಹೇಗೆ ಧೃತಿಗೆಡಬಾರದು ಎಂಬಿತ್ಯಾದಿ ಸುಖೀ ಸಮಾಜದ ಸುಖಬೋಧೆಗಳು ಕೇವಲ 'ಮತಪ್ರಚಾರ'ವೆಂದು ರಾಜಕೀಯದವರಿಂದ ಪರಿಗಣಿಸಲ್ಪಟ್ಟಿರುವುದರಿಂದಲೇ ಇಂದು ಭಾರತದ ಜನರ ಜನನಾಯಕರ ಗುಣಗಳು ಈ ರೀತಿ ಅವನತಿಯ ಹಾದಿ ಹಿಡಿಯುತ್ತಿವೆ.

ಯಾಕೆ ಹೀಗೆಲ್ಲಾ ಆಗುತ್ತಿದೆ? ಯಾರು ಇದನ್ನು ಹಾಳುಮಾಡಿದರು? ಯಾರು ಇದನ್ನು ಸರಿಪಡಿಸುವವರು ಎಂದು ಒಮ್ಮೆ ಆಲೋಚಿಸಿ. ಪಾಶ್ಚಾತ್ಯರು ಎಲ್ಲಾ ಸೌಲಭ್ಯಗಳನ್ನೂ ಶ್ರೀಮಂತಿಕೆಯ ಸುಪ್ಪತ್ತಿಗೆಯನ್ನೂ ಅನುಭವಿಸಿ ಅಲ್ಲೆಲ್ಲೂ ’ಶಾಂತಿ’ ಎಂಬುದು ಸಿಗದೇ ಹುಡುಗಾಟ ಬಿಟ್ಟು ’ಶಾಂತಿ’ಗಾಗಿ ಹುಡುಕಾಟ ನಡೆಸಿ ಭಾರತಕ್ಕೆ ಬರುತ್ತಾರೆ. ಯಾರೋ ಒಬ್ಬಾಕೆ ಶ್ರೀ ಸಾಯಿಬಾಬಾರಿಗೆ ಐನೂರು ಕೋಟಿ ರೂಪಾಯಿಗಳ ಚೆಕ್ ಬರೆದ ಕಥೆಯನ್ನು ಹಿಂದೊಮ್ಮೆ ಹೇಳಿದ್ದೆ. ಇವತ್ತು ನೀವು ಸುದ್ದಿ ಮಾಧ್ಯಮಗಳಲ್ಲಿ ’ಎಲ್ಲಾ ಇದ್ದರೂ ಸಾಯಿಬಾಬಾರವರು ಏನನ್ನೂ ಬಳಸುತ್ತಿರಲಿಲ್ಲ’ ಎಂಬುದನ್ನು ಓದುತ್ತಿದ್ದೀರಿ. ತನ್ನ ದರ್ಶನಕ್ಕೆ, ತನ್ನ ಹತ್ತಿರಕ್ಕೆ ಬರುವ ಭಕ್ತರಿಗೆ ತನ್ನ ಭೌತಿಕ ಕಾಯದ ಬೆವರು, ಎಂಜಲು ಇತ್ಯಾದಿ ಯಾವುದೇ ವಾಸನೆಯು ತಲುಪಬಾರದೆಂಬ ಕಾಳಜಿಯಿಂದ ಅತ್ಯುತ್ಕೃಷ್ಟ ಸುಗಂಧ ದ್ರವ್ಯಗಳನ್ನು ಅವರು ಬಳಸುತ್ತಿದ್ದರು-ಇದನ್ನು ಕೆಲವು ಮಠಾಧಿಪತಿಗಳೂ ಬಳಸುತ್ತಾರೆ ; ಮನುಜ ಸಹಜ-ತಪ್ಪೇನಿದೆ ?

’ಶಾಂತಿ’ ಎಂಬುದು ಕೊಳ್ಳುವ ಆಸ್ತಿಯಲ್ಲ, ಅದು ನಮ್ಮೊಳಗೇ ಉದ್ಭವವಾಗುವ ಒಂದು ಮನೋದೈಹಿಕ ಸ್ಥಿತಿ ಅಲ್ಲವೇ ? ಕುರುಬರ ಕಾಳ[ಕಾಳಿದಾಸ]ನಂತೇ ಮರದ ಕೊಂಬೆಯಮೇಲೆ ನಿಂತು ಬುಡವನ್ನು ಕಡಿದರೆ ಏನಾಗಬಹುದು ? ಸಮಾಜದ ಸ್ವಾಸ್ಥ್ಯ ಹದಗೆಟ್ಟಾಗ ಅದರಮೇಲೇ ನಿಂತ ನಮ್ಮ ಸ್ಥಿತಿ ಏನಾಗಬಹುದು? ಯೋಚಿಸುವ ಕಾಲ ಬಂದುಬಿಟ್ಟಿದೆ. ರಸ್ತೆಯಲ್ಲಿ ಓಡಾಡುವಾಗ ಮುಸುಕುಹಾಕಿಕೊಂಡು ಹುಡುಗರನ್ನು ಅಪ್ಪಿಹಿಡಿದು ಓಡಾಡುವ ಹುಡುಗಿಯರನ್ನು ಕಂಡಾಗ ಯಾರೂ ಪ್ರಶ್ನಿಸುವ ಅವಕಾಶವಿಲ್ಲ; ಹಾಗೇನಾದರೂ ಮಾಡಿದರೆ ಮಾಡಿದವನಿಗೆ ಕಠಿಣ ಸಜೆಯಾಗಬಹುದು! ಹೆಣ್ಣುಮಕ್ಕಳನ್ನು ಹೆತ್ತ ಪಾಲಕರೇ ತಮ್ಮ ಅಳಿಯನಾಗುವ ಹುಡುಗನಿಗೆ ಅಪ್ಪ-ಅಮ್ಮ ಸತ್ತಿರಬೇಕು ಅಥವಾ ಬದುಕಿದ್ದರೆ ಜೊತೆಗಿರಬಾರದು ಎಂದು ನಿರ್ಧರಿಸುವುದು, ಅಕ್ಕ-ತಂಗಿ-ಅಣ್ಣ-ತಮ್ಮ ಇವರುಗಳು ಇದ್ದರೆ ಪದೇ ಪದೇ ಅವರು ಬಂದುಹೋಗಿ ಮಾಡಬಾರದು ಎಂಬಿತ್ಯಾದಿಯೆಲ್ಲಾ ಕರಾರುಗಳನ್ನು ಮಗಳಿಗೆ ಕಲಿಸಿಕೊಡುವುದರಿಂದ ’ಅವಿಭಕ್ತ ಕುಟುಂಬ’ ವೆಂಬ ಶಬ್ದ ಇತಿಹಾಸದ ಪುಟಗಳನ್ನು ಸೇರುತ್ತಿದೆ!

ಭೂಮಿ ಯಾರಿಗೂ ಶಾಶ್ವತವಲ್ಲ. ಎಲ್ಲರೂ ಬಂದುಹೋಗುವವರೇ! ಆದರೂ ನಾವೇ ಏರಿಕೊಳ್ಳುವ ಚಲಿಸುತ್ತಿರುವ ರೈಲಿನಲ್ಲಿ ಬೋಗಿಗಳು ಗಲೀಜಾಗಿದ್ದರೆ, ತುಕ್ಕು ಹಿಡಿದು ಕೊಂಡಿ ಕಳಚಿಕೊಳ್ಳುವ ಹಂತ ತಲ್ಪಿದ್ದರೆ ಯಾರಿಗಾದರೂ ಏರಿಕೊಳ್ಳಲು ಇಷ್ಟವಾಗುವುದೇ? ನಾಟಕವೊಂದನ್ನು ಮಾಡಲು ಹೊರಟಾಗ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ ಪಾತ್ರವನ್ನು ಹೇಗೆ ಸಮರ್ಪಕವಾಗಿ ನಿಭಾಯಿಸಲು ಪ್ರಯತ್ನಿಸುವನೋ/ಳೋ ಹಾಗೇ ಭಗವಂತ ಕೊಟ್ಟ ಜೀವನನಾಟಕದ ಪಾತ್ರಧಾರಿಗಳಾದ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸಲು ಬರುತ್ತಿಲ್ಲವಲ್ಲ! ಈ ನಾಟಕದಲ್ಲಿ ಯಾರೂ ಯಾರಿಗೂ ಸಂಬಂಧವಲ್ಲ, ಆದರೆ ನಾಟಕ ಮುಗಿಯುವವರೆಗೂ ಅಣ್ಣನೋ ಅಪ್ಪನೋ ಸ್ನೇಹಿತೆಯೋ ಗಂಡನೋ ಹೆಂಡತಿಯೋ ಮತ್ತಿನ್ಯಾರೋ ಆಗಿ ಪಾತ್ರ ನಿರ್ವಹಿಸುವ ಅನಿವಾರ್ಯತೆ ಇದೆ. ನಾಟಕ ನಡೆಯುತ್ತಿರುವಾಗಲೇ ಅದನ್ನು ಕೆಡಿಸುವ [ಬಾಂಬ್ ಅಟ್ಯಾಕ್, ಹೈಜಾಕ್, ಮತಾಂತರ ಮೊದಲಾದ] ಕೆಲಸ ಎಷ್ಟು ಸಮಂಜಸ?

ಆರ್ಷೇಯ ಋಷಿವರ್ಯರುಗಳು ತಮ್ಮ ದಿವ್ಯಜ್ಞಾನಕ್ಕೆ ಲಭಿಸಿದ ಉತ್ತಮ ಅಂಶಗಳನ್ನು ಜಗತ್ತಿನ ಎಲ್ಲರ ಒಳಿತಿಗಾಗಿ ತಮ್ಮ ಔದಾರ್ಯದಿಂದ ಹಂಚಿಹೋದರು. ವೇದಗಳು ಪುರಾಣಗಳು ಉಪನಿಷತ್ತುಗಳು ಹೀಗೇ ಹಲವಾರು ಜ್ಞಾನನಿಧಿಗಳು ನಮಗೆ ಇಂದಿಗೂ ಲಭಿಸುತ್ತಿವೆ. ಸಾವಿರ ಸುತ್ತುಗಳನ್ನು ಹಾಕಿದರೂ ಗಂಟು ಒಂದೇ ಎಂಬ ತತ್ವದಂತೇ ಅವೆಲ್ಲವೂ ಕೊನೆಗೊಮ್ಮೆ ಸಾರುವುದು : ಮನುಜಮತ-ವಿಶ್ವಪಥ ! |ವಸುಧೈವ ಕುಟುಂಬಕಮ್ | ಎನ್ನುವುದು ಹೊಸದಾಗಿ ಮತಾಂಧರ ದಾಂಧಲೆ ಆರಂಭವಾದ ಮೇಲೆ ಜೋಡಿಸಿದ ವ್ಯಾಖ್ಯೆಯಲ್ಲವಲ್ಲ! ಶ್ರೀಸೂಕ್ತ ಸಾರುತ್ತದೆ --

|| ಪ್ರಾದುರ್ಭೂತೋಸ್ಮಿರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||

'ಉತ್ತಮವಾದ ದೇಶದಲ್ಲಿ ಜನಿಸಿರುವ ನನ್ನ ಪ್ರಾರ್ಥನೆ : ನನ್ನ ರಾಷ್ಟ್ರಕ್ಕೆ ಕೀರ್ತಿಯನ್ನೂ ಸಮೃದ್ಧಿಯನ್ನೂ ಕೊಡು' ಎಂದು. ಯಾವನೋ ಒಬ್ಬ ವ್ಯಕ್ತಿಯೋ ಬ್ರಾಹ್ಮಣನೋ ಎಲ್ಲೋ ಒಂದುಕಡೆ ಕುಳಿತು ಗಾಯತ್ರಿಯನ್ನು ಪಠಿಸಿದರೆ ಅದರಲ್ಲಿ

’ಧೀಯೋ’

ಎಂಬ ಶಬ್ದವನ್ನು ಉಚ್ಚರಿಸುತ್ತಾನೆ-ಅದು ಸಂಸ್ಕೃತ ವ್ಯಾಕರಣದ ಪ್ರಕಾರ ಬಹುವಚನ ಸೂಚಕವಾಗಿದೆ. ಕೇವಲ ತನಗೆ ಮಾತ್ರವಲ್ಲದೇ ನಮಗೆ ಅಥವಾ ಹಲವರಿಗೆ ಎಂಬ ಅರ್ಥವನ್ನು ಕೊಡುತ್ತದೆ. ಹೀಗಿರುವಾಗ ಕಬ್ಬಿಣದ ಕಡಲೆಯೆಂದು ಭ್ರಮಿಸಿ ಓದದೇ ಹೀಗಳೆಯುವ [ದ್ರಾಕ್ಷಿತಿನ್ನಲಾರದ ನರಿಯಂತೇ] ನಮ್ಮ ಯುವಜನಾಂಗ ನಮ್ಮ ಆರ್ಷೇಯ ವಾದಗಳನ್ನೂ ಸೂತ್ರಗಳನ್ನೂ ದೂರೀಕರಿಸಿದೆ. ಕೇವಲ ಅಲ್ಪಕಾಲದಲ್ಲಿ ಸಿಗಬಹುದಾದ ಕ್ಷಣಿಕ ಸುಖವೈಭೋಗಗಳಿಗೆ ಮಾರುಹೋಗಿ ನಿಜವಾದ ಆನಂದವನ್ನೂ ಸುಖವನ್ನೂ ಕಳೆದುಕೊಳ್ಳುತ್ತಿದ್ದಾರೆ. life is short, enjoy the fullest ಎಂದು ಯಾರೋ ರಾಬರ್ಟೋ ಲೋಬೋವೋ ಅಮೇರಿಕಾದಲ್ಲಿ ಹೇಳಿದ್ದನ್ನು ಇಲ್ಲಿನ ನಮ್ಮ ಪಡ್ಡೆಗಳು ನಿತ್ಯವೂ ಪಠಿಸುತ್ತಾರೆ. ಮೊಬೈಲ್ ನಲ್ಲಿ ಎಸ್ಸೆಮ್ಮೆಸ್ಸು ಕಳಿಸುತ್ತಾರೆ ! ಇನ್ನು ನೋಡಬಾರದ ಎಸ್ಸೆಮ್ಮೆಸ್ಸುಗಳು ಎಮ್ಮೆಮ್ಮೆಸ್ಸುಗಳು ಹುಡುಗ-ಹುಡುಗಿಯರು ಕದ್ದುಮುಚ್ಚಿನೋಡುವುದೂ ಪ್ರಸರಿಸುವುದೂ ನಡೆದೇ ಇದೆ. ತಮಾಷೆಗೆ ಕೆಲವರು ಹೇಳುವುದಿದೆ- ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆಯನ್ನು ಮಾತ್ರ ಇಲ್ಲೇ ಬಿಟ್ಟುಹೋದರು-ಎಂದು, ಈಗ ಅದಕ್ಕೆ ಇನ್ನೊಂದನ್ನೂ ಸೇರಿಸಬೇಕು, ’ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆ ಮತ್ತು ಸಂಸ್ಕೃತಿಗಳ ಬೀಜಗಳನ್ನು ಮಾತ್ರ ಇಲ್ಲೇ ಬಿತ್ತುಹೋದರು ’ !


’ನಾವು ನಾವೇ ನಾವು ಅವರಲ್ಲ’ ಎಂದು ನಿನ್ನೆ ಬ್ಲಾಗಿಗ ಮಿತ್ರರೊಬ್ಬರು ಬರೆದಿದ್ದರು, ಅದು ನಿಜವೇ. ನಾವು ನಾವಾಗಿರಬೇಕೇ ಹೊರತು ನಾವು ಅವರಾಗಬಾರದು. ಖ್ಯಾತ ಬರಹಗಾರ ಯಂಡಮೂರಿ ವೀರೇಂದ್ರನಾಥ್ ತಮ್ಮ ’ಮೈಂಡ್ ಪವರ್ ’ ಎಂಬ ಹೊತ್ತಗೆಯಲ್ಲಿ ಬರೆಯುತ್ತಾರೆ [ತುಂಬಾ ಉತ್ತಮ ಪುಸ್ತಕ-ಅಂಥದ್ದನ್ನು ನೀವೆಲ್ಲಾ [ಓದಿರದವರು] ಓದಬೇಕು]-- ಪ್ರತಿಯೊಬ್ಬರ ಜೀವನವೂ ಅವರವರಿಗೆ ಮುಖ್ಯವೇ. ನೀವು ನೀವಾಗಿ ಇಷ್ಟಪಡುವ ವೃತ್ತಿಯನ್ನು ಆಯ್ದುಕೊಳ್ಳಿ ಮತ್ತು ಆ ವೃತ್ತಿಯಲ್ಲಿ ನೀವೇ ಎಲ್ಲರಿಗಿಂತಲೂ ಉತ್ತಮ ಎಂಬುದನ್ನು ನಿಮ್ಮ ಕೃತಿಯಿಂದ ತೋರಿಸಿ. ಆಗ ನಿಮ್ಮ ಜೀವನವೆಂಬ ಸಿನಿಮಾದ ಹೀರೋ ನೀವೇ ಆಗಿರುತ್ತೀರಿ--ಎಂದು. ಭಗವದ್ಗೀತೆ ’ಕರ್ಮಯೋಗ’ದಲ್ಲಿ ಇದನ್ನೇ ಹೇಳುತ್ತದಲ್ಲಾ ! ಬಹುತೇಕ ಅವರ ಆ ಪುಸ್ತಕದ ಬರಹಗಳು ಭಗವದ್ಗೀತೆಯ ಸಾರವನ್ನೇ ಒಳಗೊಂಡಿವೆ. ಜಗತ್ತಿನಲ್ಲಿಯೇ ಅತ್ಯುತ್ತಮ ಪುಸ್ತಕವೆನಿಸಬಲ್ಲ ಆ ಅಂತಹ ಪುಸ್ತಕಗಳಿಗೂ ಆಧಾರವಾಗಿ ಭಗವದ್ಗೀತೆ ನಿಲ್ಲುತ್ತದೆ, ಸಲ್ಲುತ್ತದೆ ಎಂದಾದಾಗ ನಮಗೆ ಮಾತ್ರ ಅದು ಯಾಕೆ ವರ್ಜ್ಯವೋ ತಿಳಿಯದಾಗಿದೆ.

ಓ ನನ್ನ ರಾಷ್ಟ್ರಬಂಧುಗಳೇ, ನೀವು ಯಾವುದೇ ಮತದ ಅನುಯಾಯಿಗಳಾಗಿದ್ದರೂ ಅಡ್ಡಿಯಿಲ್ಲ, ನೀವು ಹಿಂದೂಗಳಾಗಬೇಕೆಂಬ ಆಗ್ರಹವಾಗಲೀ ಬೇಡಿಕೆಯಾಗಲೀ ಇರುವುದಿಲ್ಲ. ಎಲ್ಲಾ ಪೂರ್ವಾಗ್ರಹಗಳನ್ನು ಕಿತ್ತೊಗೆದು ಒಮ್ಮೆ ಮುಕ್ತ ಮನಸ್ಸಿನಿಂದ ಗೀತಾಮೃತವನ್ನು ಪಾನಮಾಡಿ, ಅದರ ರುಚಿಯನ್ನು ಒಮ್ಮೆ ಅರಿತಿರಾದರೆ ಮತ್ತೆ ಆವಾಗ ನಿಮಗೇ ಅದರ ಮಹತ್ವದ ಅರಿವಾಗುತ್ತದೆ. ಯಾರೂ ಜೀವನದಲ್ಲಿ ಸೋಲಬಾರದು, ಜೀವನ ಕೇವಲ ನಾಟಕ, ಯಾವ ಯಾವ ಮಾರ್ಗಗಳಿಂದ ಹೇಗೆ ಹೇಗೆ ಗೆಲ್ಲಬೇಕೆಂಬ ಸುಲಭ ಸೂತ್ರಗಳನ್ನು ಲೇಖಕ ಕೊಟ್ಟಿದ್ದಾನೆ. ಲೇಖಕ ’ಶ್ರೀಕೃಷ್ಣ’ ಎನ್ನುವುದನ್ನೂ ಅದು ’ಭಗವದ್ಗೀತೆ’ ಎಂಬುದನ್ನೂ ಮುಚ್ಚಿಟ್ಟು ಅದೊಂದು ಬರೇ ಉತ್ತಮ ಪುಸ್ತಕವೆಂದು ತಿಳಿದು ಓದಿನೋಡಿ. ನನ್ನ ದೇಶವಾಸಿಗಳು ಬದುಕಿನಲ್ಲಿ ಸಕಲ ಸುಖ ಶಾಂತಿ ಸಮೃದ್ಧಿ ಓಜಸ್ಸು ತೇಜಸ್ಸು ಧೈರ್ಯ ಹೀಗೇ ಎಲ್ಲವನ್ನೂ ಪಡೆದು ತಮ್ಮ ಜೀವನ ನಾಟಕದ ಪಾತ್ರವನ್ನು ಹೀರೋ ಆಗಿ ನಿರ್ವಹಿಸಬೇಕು ಮತ್ತು ಅದನ್ನೇ ಮುಂದಿನ ನಮ್ಮ ದೇಶವಾಸಿಗಳಿಗೆ ಕಲಿಸಬೇಕೆಂಬ ಕಳಕಳಿಯಿಂದ ಇವತ್ತೀ ಲೇಖನ ಬರೆದೆ. ಜಗತ್ತಿನ ಎಲ್ಲರೂ ಸುಖದಿಂದಿರಲಿ ಎಂದು ಪ್ರಾರ್ಥಿಸಿ ಅದನ್ನೇ ಹಾರೈಸಿ ಸದ್ಯ ವಿರಮಿಸುವುದಕ್ಕೆ ತಮ್ಮಲ್ಲಿ ಅಪ್ಪಣೆ ಕೇಳುತ್ತಿದ್ದೇನೆ, ನಮಸ್ಕಾರಗಳು.

Thursday, July 21, 2011

ಭಾವಾಂತರಂಗದಲ್ಲಿ .........


ಭಾವಾಂತರಂಗದಲ್ಲಿ .........

ಕೆಲವೊಮ್ಮೆ ಮನಸ್ಸಿನಲ್ಲಿ ಉದ್ಭವವಾಗುವ ಭಾವಗಳನ್ನು ಹಿಡಿದಿಡಲು ಶಬ್ದಗಳು ಸಿಗುವುದೇ ಇಲ್ಲ. ಯಾಕೆಂದರೆ ನಾವೇನು ಹೇಳಬೇಕೆಂದಿರುವೆವೋ ಅದನ್ನು ನಮಗಿಂತ ಚೆನ್ನಾಗಿ ಇನ್ನೊಬ್ಬರು ಹೇಳಿರುವಾಗ ಅದನ್ನು ಓದುವಲ್ಲಿ, ಆಲಿಸುವಲ್ಲಿ ಇರುವ ಆನಂದ ಮತ್ತೆ ಅದನ್ನೇ ಬೇರೇ ಪದಗಳಲ್ಲಿ ಬರೆಯಲು ಹೊರಟಾಗ ಸಿಗುವುದಿಲ್ಲ. ಅದರಲ್ಲಂತೂ ಹಾಡುಗಳು ಘಮ್ಮನೆ ಹೊಮ್ಮಿ ಅರಳಿಸುವ ಆನಂದ ಮನದಲ್ಲಿ ಅಂತಹ ಭಾವಗಳ ಸ್ಫುರಣೆ ಜಾಸ್ತಿಯಾಗಿ ಯಾವುದೋ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುವಲ್ಲಿ ಯಶಸ್ಸು ಪಡೆದುಬಿಡುತ್ತವೆ!

ಆಗಾಗ ಅಲ್ಲಲ್ಲಿ ಓಡಾಡುವಾಗ ಇಂದಿನ ಫ್ರೀಕ್ವೆನ್ಸಿ ಮಾಡ್ಯುಲೇಟೆಡ್ ರೇಡಿಯೋಗಳಲ್ಲಿ, ಆಟೋ ಚಾಲಕನಲ್ಲಿ ಡ್ರಾಪ್ ತೆಗೆದುಕೊಳ್ಳುವಾಗ, ಕೂದಲು ಕತ್ತರಿಸಲು ಹೋಗಿ ಕ್ಯೂನಲ್ಲಿ ಕುಳಿತಾಗ/ಬ್ಯೂಟಿ ಪಾರ್ಲರಿನಲ್ಲಿ ಐಬ್ರೋ ಮಾಡಿಸಲು ಹೋದಾಗ, ಬಸ್ಸಿನಲ್ಲಿ ಪಕ್ಕದವನ ಮೊಬೈಲ್‍ನಲ್ಲಿ ಅಂತಹ ಹಾಡುಗಳು ಕೇಳಿದಾಗ, ದೂರದ ಯಾವುದೋ ಕಾರ್ಯಕ್ರಮದವರು ಧ್ವನಿವರ್ಧಕದಲ್ಲಿ ಹಾಕಿದ ಹಾಡು ಕೇಳಿದಾಗ [ಇವರು ಉತ್ತಮ ಹಾಡುಗಳನ್ನು ಹಾಕುವುದು ಅಪರೂಪ, ಇರಲಿ] , ಯಾರೋ ಚಿಕ್ಕಮಕ್ಕಳು ಶಾಲೆಗಳಲ್ಲಿ ಹಾಡುಗಳಿಗೆ ನೃತ್ಯರೂಪ ಕೊಟ್ಟಾಗ, ಭವ್ಯವೇದಿಕೆಗಳಲ್ಲಿ ಅತಿಥಿಗಳು ಆಗಮಿಸುವುದಕ್ಕೂ ಮೊದಲು ಸಭಿಕರ ಕಾಲಕ್ಷೇಪಕ್ಕಾಗಿ ಅಂತಹ ಹಾಡುಗಳನ್ನು ಹಾಕಿರುವಾಗ..... ಹೀಗೇ ಒಂದಲ್ಲ ಎರಡಲ್ಲ ಯಾಂತ್ರಿಕ ಜೀವನದ ಹಲವಾರು ಸಂದಿಗೊಂದಿಗಳಲ್ಲಿ ಅಲ್ಲಲ್ಲೇ ಬೈಟು ಟೀ ಕುಡಿದಂತೇ ಎರಡೆರಡು ಕೆಲಸಗಳನ್ನು ಒಟ್ಟಿಗೇ ಮಾಡುವ ಪರಿಪಾಟ ನಮ್ಮಂತಹ ಬಹುತೇಕರದು.

ಶಾಸ್ತ್ರೀಯ ಸಂಗೀತಗಳು ನಮ್ಮ ಮಾನಸಿಕ ನೋವನ್ನು ಕಳೆಯುತ್ತವೆ ಎಂಬುದು ಅಪ್ಪಟ ಸತ್ಯ ಮತ್ತು ಹಲವು ರಾಗಗಳು ಅನೇಕ ಕಾಯಿಲೆಗಳು ಬರದಂತೇ ತಡೆಯಲು ಪೂರಕ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಇದನ್ನು ಪದ್ಮಪಾಣಿಯಂತಹ ಸಂಗೀತ ನಿರ್ದೇಶಕರು ಅಳವಡಿಸಿ ತೋರಿಸಿದ್ದಾರೆ. ಆದರೂ ಎಲ್ಲಾ ಸರ್ತಿನೂ ಸಂಗೀತ ಕಚೇರಿಯಲ್ಲಿ ಕೂತು ಗಂಟೆಗಟ್ಟಲೆ ಕೇಳುವ ವ್ಯವಧಾನವಾಗಲೀ ಅವಕಾಶವಾಗಲೀ ಎಲ್ಲರಿಗೂ ಸಿಗುವ ಸಂಭವ ಕಡಿಮೆ. ಇರುವ ಸಮಯದಲ್ಲೇ ಹಾಗೆ ಮನರಂಜಿಸಲು ಬೇಕಾಗಿ ಹುಟ್ಟಿಕೊಂಡ ಸಂಗೀತ ಮಾರ್ಗವೇ ’ಸುಗಮ ಸಂಗೀತ.’ ಪ್ರಾಯಶಃ ಸುಗಮ ಸಂಗೀತದ ಬಳಕೆಯಾಗದಿದ್ದರೆ ಇಂದು ನಾವು ಹಲವು ಇಂತಹ ಗೀತೆಗಳನ್ನು ಇಷ್ಟು ಸುಲಲಿತವಾಗಿ ಕೇಳಲು ಆಗುತ್ತಿರಲಿಲ್ಲವೇನೋ ! ಸುಗಮ ಸಂಗೀತವೆಂಬುದು ಕನ್ನಡಕ್ಕೆ ಸಿಕ್ಕ ವರವೆಂದರೆ ತಪ್ಪಾಗಲಾರದು.

" ನಾವೆಂದೋ ಕೇಳಬೇಕೆಂದು ಬಯಸಿದ್ದ ಆ ಹಾಡು ಇಂದು ಬಂತಲ್ಲಾ " ಎಂದು ಸಹಜವಾಗಿ ಉದ್ಗಾರ ಹೊರಡುವ ಸನ್ನಿವೇಶಗಳೂ ಇವೆ. ಕೆಲವೇ ಕೆಲವು ಸೀಡಿ [ಧ್ವನಿ ಫಲಕ] ಮಾಧ್ಯಮಗಳಲ್ಲಿ ಅವುಗಳನ್ನು ಶೇಖರಿಸಿಟ್ಟು ನಾವೇ ನಾವಾಗಿ ಹಾಕಿಕೊಂಡು ಕೇಳುವಾಗ ಸಿಗದ ಮಜಾ ಅಲ್ಲಲ್ಲಿ ಚೂರುಪಾರು ಯಾರೋ ಹಾಕಿದ ಹಾಡುಗಳನ್ನು ಕೇಳಿದಾಗ ಸಿಗುತ್ತದೆ-ಅದಕ್ಕೆ ಕಾರಣ ನಮ್ಮ ಮನದ ತುಡಿತ. ಭಾವಜೀವಿಯಾದ ಮನುಜನಿಗೆ ದುಡಿಯುವ ಹಲವಾರು ದಿನಗಳಲ್ಲಿ ಕೆಲವೊಮ್ಮೆ ’ಇವತ್ತು ಏನೂ ಮಾಡುವ ಮನಸ್ಸಿಲ್ಲಾ’ ಎಂದಾಗಿರುತ್ತದೆ ಅಥವಾ ಇನ್ಯಾವುದೋ ಕಾರಣಕ್ಕೆ ಕೆಲಸಗಳಲ್ಲಿ ಜಿಗುಪ್ಸೆ ಬಂದಿರುತ್ತದೆ. ಬದುಕಿನ ಆತಂಕ, ಬೇಸರ, ಕಷ್ಟ, ನೋವು, ಭಯ ಮುಂತಾದ ಹಲವು ಸನ್ನಿವೇಶಗಳಲ್ಲಿ ಯಾವುದೋ ಕವಿ ಬರೆದ ಇಂಪಾದ ಹಾಡೊಂದು ಕಿವಿಯಮೇಲೆ ಹಾದುಹೋದರೆ ಅದು ಕೊಡುವ ಅಲ್ಪ ತೃಪ್ತಿ ಮರೆಯಲಾಗದ್ದಾಗಿರುತ್ತದೆ.

ಬೆಳಗಿನ ಜಾವ ಬೀಳುವ ಸಿಹಿಗನಸಿನಂತೇ, ನಮಗೆ ಪ್ರಿಯರಾದ ವ್ಯಕ್ತಿಗಳು ಬಂದು ಚುಂಬಿಸಿದ ಘಳಿಗೆಯಂತೇ, ಮುದ್ದಾದ ಮಗುವೊಂದು ಅಂಬೆಗಾಲಿಡಲು ಆರಂಭಿಸಿದಾಗ ಅದರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವ ಅಮ್ಮನಂತೇ, ಚಿತ್ರಬರೆದ ಕಲಾಕಾರ ದೂರನಿಂತು ಅದನ್ನೇ ಮತ್ತೆ ಮತ್ತೆ ನೋಡಿ ಆನಂದಿಸುವಂತೇ, ಗಾಯಕನೊಬ್ಬ ತನ್ನ ಗಾಯನವನ್ನೇ ಮತ್ತೆ ಮತ್ತೆ ಕೇಳಿ ಇದು ಚೆನ್ನಾಗಿ ಬಂತೆಂದು ಅಂದುಕೊಳುವಂತೇ, ದೊಡ್ಡ ವಾಣಿಜ್ಯ ಸಂಸ್ಥೆಯೊಂದನ್ನು ಕಟ್ಟಿ ಅದು ಹೆಮ್ಮರವಾಗುವುದನ್ನು ಕಂಡ ಸಂಸ್ಥೆಯ ಮೂಲಪುರುಷ/ಸ್ತ್ರೀ ಯಂತೇ ಇಲ್ಲಿನ ಸಂತಸ ಅವರ್ಣನೀಯ, ಅನಿರ್ವಚನೀಯ !

ಇಂತಹ ಅನಿಸಿಕೆಗಳನ್ನು ಹೇಳಬೇಕೆಂದರೂ ಹೇಳಲು ಸಾಧ್ಯವಾಗುವುದೇ ಇಲ್ಲ ! ತಿರುಪತಿ ನೋಡಿದ ಹಲವರು ದೇವರ ವಿಗ್ರಹ ಹೇಗಿತ್ತೆಂದು ನೇರವಾಗಿ ಹೇಳಲು ತಡಕಾಡುತ್ತಾರೆ ಹೇಗೋ, ಪ್ರಿಯತಮನ ಸುಂದರ ವದನವನ್ನು ಕದ್ದು ನೋಡಿದ ಪ್ರಿಯತಮೆಗೆ ತನ್ನ ಸಖಿಯರ ಕೂಡ ಆತನ ರೂಪಲಾವಣ್ಯವನ್ನು ವಿವರಿಸಲಾಗುವುದಿಲ್ಲ ಹೇಗೋ ಹಾಗೇ ಈ ಭಾವನೆಗಳಿಗೆ ಕಟ್ಟುಹಾಕಿ ಅವುಗಳನ್ನು ಬಂಧಿಸುವುದು ಸಾಧ್ಯವಾಗುವ ಮಾತಲ್ಲ. ಹಾಗಂತ ಅವು ನಗಣ್ಯವೆನಿಸಿದರೂ ಅವುಗಳ ವ್ಯುತ್ಫತ್ತಿಯಿಂದ ಸಿಗುವ ರಂಜನೆ ಟಿಕೆಟ್ಟು ಖರೀದಿಸಿ ಕುಳಿತು ಮೂರು ಗಂಟೆಯೋ ಆರು ಗಂಟೆಯೋ ನೋಡಿದ ಮನೋರಂಜನಾ ಕಾರ್ಯಕ್ರಮಗಳಲ್ಲಿ ಸಿಗುವಂಥದ್ದಲ್ಲ!

ಭಾವುಕರಲ್ಲಿ ಕೆಲವು ಜನ ಕವಿಗಳೂ ಇರುತ್ತಾರಲ್ಲವೇ? ತಮ್ಮ ಯಾವುದೋ ದಿನಗಳ ಯಾವುದೋ ಘಳಿಗೆಗಳ ಯಾವ್ಯಾವುದೋ ಸನ್ನಿವೇಶಗಳಲ್ಲಿ ಅಲ್ಲಿ ಹುಟ್ಟಿದ ಭಾವಗಳಿಗೆ ಜೀವ ತುಂಬುವ ಕೆಲಸವನ್ನು ಅವರು ಮಾಡಿರುತ್ತಾರೆ. ನಾನು ಈ ಮೊದಲೇ ಹೇಳಿರುವಂತೇ ಕೂಸು ಹುಟ್ಟುವ ವರೆಗೆ ಅದು ಅಮ್ಮನ ಹೊಟ್ಟೆಯೊಳಗೆ ಅಮ್ಮನಿಗೆ ಮಾತ್ರ ಸಂಬಂಧಿಸಿದ್ದು ಎನ್ನುವ ಹಾಗಿರುತ್ತದೆ- ಯಾವಾಗ ಕೂಸು ಜನಿಸಿತೋ ಅದು ಅಪ್ಪನಿಗೂ ಸುತ್ತಲ ಬಂಧುಗಳಿಗೂ ಸಂಬಂಧಿಸುತ್ತದೆ ಅಲ್ಲವೇ ? ಅದೇ ರೀತಿ ಇಂತಹ ಭಾವಗಳಿಂದ ಕವಿಯ ಮನ ಬಸಿರಾಗಿ ಕವನ ಜನಿಸುವವರೆಗೆ ಅದು ಕವಿಯ ಸ್ವಸಂತೋಷದ್ದಾಗಿರುತ್ತದೆ, ಯಾವಾಗ ಕವನ ಬರೆದು ಪ್ರಕಟಿಸಲ್ಪಟ್ಟಿತೋ ಆಗ ಆ ಕವನ ಹತ್ತಾರು ಜನರಿಗೆ ತಲುಪುತ್ತದೆ-ಸಂಬಂಧ ಬೆಳೆಯುತ್ತದೆ.

ಇಂತಹ ಕೆಲವು ಕವಿಗಳು ಬರೆದ ಕೆಲವು ಗೀತೆಗಳಂತೂ ನಿಜಕ್ಕೂ ಒಂದನ್ನೊಂದು ಮೀರಿಸುವ ಪೈಪೋಟಿಗಿಳಿಯುತ್ತವೆ. ಈ ಸಾಲಿನಲ್ಲಿ ದಿ| ಅಡಿಗರು, ದಿ| ನರಸಿಂಹ ಸ್ವಾಮಿಗಳು, ಇಂದು ನಮ್ಮ ಮಧ್ಯೆ ಇರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಎಚ್.ಎಸ್.ವೆಂಕಟೇಶ್ ಮೂರ್ತಿಗಳು, ಬಿ.ಆರ್ ಲಕ್ಷ್ಮಣರಾಯರು, ಕೆ.ಜಿ. ಶಿವಪ್ಪನವರು .....ಹೀಗೇ ಕೆಲವರನ್ನು ಮಾತ್ರ ನಾನು ಹೆಸರಿಸಿದ್ದೇನೆ...ಇನ್ನೂ ಹಲವರನ್ನು ಹೆಸರಿಸಬಹುದಾಗಿದೆ. ಅನೇಕ ಕವಿಗಳು, ಗಾಯಕ/ಗಾಯಕಿಯರು ಎಲೆಮರೆಯ ಕಾಯಿಯಂತಿದ್ದು ಕಾಣದಂತೇ ತಮ್ಮ ಕಲೆಯನ್ನು ಹಳ್ಳಿಗಳ ಮಟ್ಟದಲ್ಲೋ ತಾಲೂಕು ಮಟ್ಟದಲ್ಲೋ ಪ್ರದರ್ಶಿಸಿ ಹಾಗೇ ಅಲ್ಲಿಗೇ ನಿಂತುಬಿಡುತ್ತಾರೆ ಅಥವಾ ನಿರ್ಗಮಿಸಿಬಿಡುತ್ತಾರೆ. ಸೃಷ್ಟಿಯೊಡೆಯ ಎಲ್ಲರಿಗೂ ಸಮಾನ ಅವಕಾಶ ಕೊಡುವುದಿಲ್ಲವಲ್ಲ..ಅಂತಹ ಅವಕಾಶ ವಂಚಿತರು ತಮಗೆ ಅವಕಾಶ ಕೊಡಿ ಎಂದು ಬಡಿದಾಡುವ ಮನೋವೃತ್ತಿ ಇಲ್ಲಿ ಕಂಡುಬರುವುದಿಲ್ಲ.

ಶಿವಪ್ಪನವರೂ ಚೆನ್ನಾಗಿ ಬರೆಯುತ್ತಾರೆ ಎಂಬುದು ನನಗೆ ಮೊದಲು ಲಕ್ಷ್ಯಕ್ಕೇ ಬಂದಿರಲಿಲ್ಲ. ಅದೇರೀತಿ ಗರ್ತಿಕೆರೆ ರಾಘಣ್ಣನವರು ಚೆನ್ನಾಗಿ ಹಾಡುತ್ತಾರೆ ಎಂಬುದೂ ಸಹ ತಿಳಿದಿರಲಿಲ್ಲ. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಡಾ | ಗಣೇಶರ ಅವಧಾನ ಕಾರ್ಯಕ್ರಮದಲ್ಲಿ ಅವರು ಬಂದು ಜಾಗವಿರದಿದ್ದ ಕಾರಣ ವೇದಿಕೆಯ ಹಿಂಭಾಗ ಕುಳಿತಿದ್ದುದು ಕಂಡಿತು. ಮಧ್ಯೆ ಯಾವುದೋ ಕರೆಬಂದು ಅವರು ಎದ್ದು ಹೋಗಬೇಕಾಯಿತು-ಮಾತನಾಡಲು ಕಾದೆ ಅಂದು ಅವರು ಸಿಗಲಿಲ್ಲ. ಮತ್ತೆಂದೋ ಅವರು ಪುರಭವನದ ಪಕ್ಕ ರಸ್ತೆ ದಾಟುವಾಗ ನಾನು ಬಸ್ಸಿನೊಳಗಿದ್ದೆ-ಆಗಲಿಲ್ಲ. ಆದರೂ ಅವರನ್ನೊಮ್ಮೆ ಕಂಡು ಮಾತನಾಡುವ ಇಚ್ಛೆ ಮಾತ್ರ ಬಲವಾಗಿದೆ. ರಾಘಣ್ಣ ರಾಗವಾಗಿ ಹಾಡುವಾಗ ಬರೇ ಹಾರ್ಮೋನಿಯಂ ಮತ್ತು ತಬಲಾ ಸಾತ್ ಸಾಕು. ಅದಷ್ಟೇ ಇದ್ದರೆ ಚಂದ. ಇಂದಿನ ಕೆಲವು ಸಂಗೀತ ಕಚೇರಿಗಳಲ್ಲಿ ಹಾಡುವವರ ಸ್ವರಮಾಧುರ್ಯಕ್ಕಿಂತ ಪಕ್ಕ ವಾದ್ಯಗಳೇ ಜಾಸ್ತಿಯಾಗಿಬಿಟ್ಟಿರುತ್ತವೆ- ಹೀಗಾಗಿ ಸಂಗೀತದೊಳಗಣ ಸಾಹಿತ್ಯ ಸ್ಪಷ್ಟವಾಗಿ ಕೇಳಿಸುವುದೇ ಇಲ್ಲ. ಸಂಗೀತದ ಸಾಹಿತ್ಯವೂ ನಮ್ಮ ಕಿವಿಗೆ ತಲ್ಪಿದಾಗ ಸಿಗುವ ಪ್ರಸನ್ನ ಮನಸ್ಕ ಸ್ಥಿತಿ ಬರೇ ವಾದ್ಯಪರಿಕರಗಳಿಂದ ಸಿಗುವುದಿಲ್ಲವಲ್ಲ !

ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಎದ್ದು ಏನೋ ಕೆಲ್ಸಮಾಡುವಾಗಲೋ ಅಥವಾ ಯಾವುದೋ ಹಬ್ಬದ ಸಡಗರದ ತಯಾರಿಯಲ್ಲಿ ಬಹುಬೇಗನೇ ಎದ್ದಿರುವಾಗಲೋ ಇಂತಹ ಹಾಡುಗಳು ಉತ್ಸಾಹವನ್ನು ದ್ವಿಗುಣಗೊಳಿಸುತ್ತವೆ. ಯಾರೂ ಇಲ್ಲಾ ನೀರವ ಮೌನ ಯಾಕೋ ಬೋರು ಎಂದಾದಾಗ ಯಾರೋ ಸ್ನೇಹಿತರು ಜೊತೆಗಿದ್ದಂತೇ ಈ ಭಾವಗೀತೆಗಳು ನಮ್ಮ ಜೊತೆಯಾಗುತ್ತವೆ. ದೂರದೂರಿಗೆ ಪ್ರಯಾಣ ಹೊರಟಾಗ ದಾರಿಯುದ್ಧ ಸಾಗುವ ಸಮಯ ಪರಿಸರದ ಮಾಧುರ್ಯವನ್ನು ಅವಲೋಕಿಸುವಾಗ ಈ ಹಾಡುಗಳು ನಮ್ಮೊಡನೆ ತಂತಾನೇ ತಾಳಹಾಕುತ್ತಾ ನರ್ತಿಸುತ್ತವೆ! ಮದುವೆ, ಮುಂಜಿ ಮುಂತಾದ ಹಲವು ಸಮಾರಂಭಗಳಲ್ಲಿ ಇಂತಹ ಭಾವಗೀತೆಗಳು ತೇಲಿಬಂದರೇ ಸಂಭ್ರಮ ಕಳೆಕಟ್ಟುತ್ತದೆ. ಯಾರೋ ನಮ್ಮಂಥವರು ಹಾಡುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಿದರೂ ಹೇಳದೆಯೇ ಇದ್ದು ಆನಂದಾನುಭೂತಿ ಪಡೆವವರೇ ಅನೇಕರಿದ್ದಾರೆ; ಅದೇ ಈ ಹಾಡುಗಳಲ್ಲಿರುವ ಆಕರ್ಷಣೆ.

ನಾನು ನನ್ನ ಅನೇಕ ಮಿತ್ರರಲ್ಲಿ ಒಂದು ಮಾತು ಹೇಳಿದ್ದಿದೆ ಏನೆಂದರೆ ಹಾಡುಗಳಿಲ್ಲದ ಸಮಾರಂಭಗಳು ಎಣ್ಣೆಕಾಣದ ಕೂದಲಿರುವ ತಲೆಯಂತೇ ಬಣಬಣ ಎಂಬುದಾಗಿ. ಇನ್ನು ಸಾಯುವಾಗ ನನ್ನಲ್ಲಿ ಯಮ ನನ್ನ ಕೊನೆಯ ಆಸೆ ಕೇಳಿದರೆ ಒಂದೋ ನಾಕುದಿನ ಗಡುವು ವಿಸ್ತರಿಸು- ಕನ್ನಡದ ಒಂದಷ್ಟು ಇಂಪಾದ ಹಾಡುಗಳನ್ನು ಕೇಳಿ ಬರುತ್ತೇನೆ ಎನ್ನುತ್ತೇನೆ ಅಥವಾ ನನ್ನ ಜೊತೆಗೇ ಹಲವು ಕನ್ನಡದ ಹಾಡುಗಳ ಸೀಡಿಗಳನ್ನೂ ಮತ್ತು ಕೇಳುವ ಉಪಕರಣಗಳನ್ನೂ ತೆಗೆದುಕೊಂಡು ಹೋಗಲು ಪರ್ಮಿಶನ್ ಕೇಳುತ್ತೇನೆ! ಯಾಕೋ ನನಗೆ ಡೌಟು : ಡ್ಯೂಟಿ ಸಮಯದಲ್ಲಿ ಅದೂ ಇದೂ ಸಬೂಬು ಹೇಳಿ ಯಜಮಾನರ ಕಣ್ತಪ್ಪಿಸಿ ಮಜಾಪಡೆಯುವ ಸಂಬಳದ ಕೆಲಸಗಾರರಂತೇ ಯಮನ ದೂತರು ಭೂಮಿಗೆ ಬಂದವರು ಕೆಲಕಾಲ ಇಲ್ಲೇ ಎಲ್ಲೋ ಠಿಕಾಣಿ ಹೂಡಿ ಅಲ್ಲಿಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ಕನ್ನಡದ ಭಾವಗೀತೆಗಳನ್ನು ಮನಸಾರೆ ಕೇಳಿ ಆನಂದಿಸಿ ಆಮೇಲೆ ತಡವಾಗಿದ್ದಕ್ಕೆ ಯಮನಿಗೆ ಇನ್ಯಾವುದೋ ಕಾರಣಕೊಡುತ್ತಾರೆ ಅನ್ನಿಸುತ್ತಿದೆಯಪ್ಪ ! ನಿಜಕ್ಕೂ ಸತ್ತವ್ಯಕ್ತಿಯೂ ಎದ್ದು ಕುಳಿತು ಕಿವಿನಿಮಿರಿಸಿ ಒಮ್ಮೆ ಕೇಳಲಿಷ್ಟಪಡುವ ಹಾಡುಗಳು ನಮ್ಮಲ್ಲಿವೆ! ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಈ ಕನ್ನಡ ದೇಶಮಂ !

ಈ ಹಾಡನ್ನು ಕೇಳಿ -- ಶಿವಪ್ಪ ಕೃಷ್ಣನ ಒಳಹೊಕ್ಕು ಮಾಮರದ ಎಲೆಯಲೆಯಲ್ಲೂ ರಾಧೆಯನ್ನು ಕಾಣುವ ಪರಿ ನಿಜಕ್ಕೂ ಮನದುಂಬುತ್ತದೆ. ಅಲ್ಲೆಲ್ಲೋ ಆ ರಾಧೆ ಅವಿತುಕೊಂಡೇ ಇರಬಹುದೇನೋ ಎಂಬ ಭಾವನೆ ಉಮ್ಮಳಿಸುತ್ತದೆ.



ಅಲ್ಲಲ್ಲಿ ಕೆಲವು ಸಿನಿಮಾ ಸಾಹಿತಿಗಳೂ ಒಳ್ಳೊಳ್ಳೆಯ ಗೀತೆಗಳನ್ನು ಬರೆದಿದ್ದಾರೆ. ಆದರೂ ಯಾಕೋ ಭಾವಗೀತೆಗಳು ನೀಡುವ ವಿಶಿಷ್ಟ ಸಂತೋಷವನ್ನು ಸಿನಿಮಾ ಹಾಡುಗಳು ನೀಡುವುದಿಲ್ಲ. ಭಾವಗೀತೆಗಳು ನಮ್ಮ ಬದುಕಿನ ಮಜಲುಗಳಲ್ಲೇ ಇದ್ದು ಮನೆ ಊಟದಂತೇ ಇರುತ್ತವೆ, ಸಿನಿಮಾ ಹಾಡುಗಳು ಒಂಥರಾ ಹೋಟೆಲ್ ಊಟದ ರೀತಿ ಇದ್ದು ಯಾವಕಾಲಕ್ಕೂ ಇರುವ ಸಂಭವನೀಯತೆ ಕಡಿಮೆ! ಮನ ಗುನಗುನಿಸಲು ಇಷ್ಟಪಡುವ ಭಾವಗೀತೆಗಳಲ್ಲಿ ಅಡಿಗರ ’ಇಂದು ಕೆಂದಾವರೆಯ’, ಡೀವೀಜಿಯವರ 'ನೀಮಹಾನಂದವೇ' , ಲಕ್ಷ್ಮೀನಾರಾಯಣ ಭಟ್ಟರ 'ಯಾವುದೀ ಹೊಸಸಂಚು', 'ಮಲಗೋ ಮಲಗೆನ್ನ ಮಗುವೆ', 'ಎಲ್ಲೆ ಜಾರಿತೋ ಮನವು', ಲಕ್ಷ್ಮಣರಾಯರ 'ಅಮ್ಮಾ ನಿನ್ನ ಎದೆಯಾಳದಲ್ಲಿ', ವೆಂಕಟೇಶಮೂರ್ತಿಗಳ 'ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ', ಇನ್ನು ನರಸಿಂಹ ಸ್ವಾಮಿಗಳ ಇಡೀ ಮೈಸೂರು ಮಲ್ಲಿಗೆ ಸಂಕಲನದ ಹಾಡುಗಳು, ವರಕವಿ ಬೇಂದ್ರೆಗಳ ಹಲವು ಹಾಡುಗಳು,ಕುವೆಂಪುರವರ ಮತ್ತು ಶಿವರುದ್ರಪ್ಪನವರ ಹಲವು ಹಾಡುಗಳು ನಮಗೆ ತರುವ ಆನಂದ ಅಸದಳ. ನಮ್ಮನ್ನು ಮತ್ತೆ ಮತ್ತೆ ರಂಜಿಸುವ ಎಲ್ಲಾ ಕವಿಗಳಿಗೂ ಸಾಹಿತಿಗಳಿಗೂ ನಮಿಸುತ್ತಾ [ಸಂಬಂಧಪಟ್ಟ ಕಲಾವಿದರು, ತಾಂತ್ರಿಕವರ್ಗ, ಹಿನ್ನೆಲೆವಾದ್ಯಮೇಳ, ಸಂಗೀತ ನಿರ್ದೇಶಕರು ಎಲ್ಲರಿಗೂ ನಮ್ಮನೆನಕೆಗಳು] ಇಂಪಾದ ಎರಡು ಕವನಗಳೊಂದಿಗೆ ಇಂದಿನ ಈ ’ಭಾವಾಂತರಂಗದಲ್ಲಿ .....’ ಅನಿಸಿಕೆಗಳನ್ನು ನಿಮ್ಮ ಕೈಗಿಟ್ಟು ಕೈಮುಗಿಯುತ್ತಿದ್ದೇನೆ, ನಮಸ್ಕಾರ.