ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 4, 2011

ಆತಿಥ್ಯ

ಆತಿಥ್ಯ

ಯಾರದೋ ಮನೆಯಲ್ಲಿ ಬಹಳ ದಿನ ಕಳೆಯುತ್ತ
ಭಾರವಾಗಲು ಬೇಡ ಅವರ ಜೀವನಕೆ
ಬೇರೆ ಜಾಗವ ಹುಡುಕಿ ತೂರಿಕೊಳು ಅದರಲ್ಲಿ
ದಾರಿ ಹಲವನು ಗ್ರಹಿಸು | ಜಗದಮಿತ್ರ

ನವಯುಗದ ಹವೆಯಲ್ಲಿ ದುಷ್ಕರದ ದಿನ ಜಾಸ್ತಿ
ಸವೆಯುವುದು ಸಮಯವದು ವ್ಯಾಜ್ಯ ಸಂಕಟದಿ
ಅವಯವಕು ಒಂದೊಂದು ತೊಂದರೆಯೊ ಎಂಬಂತೆ
ಭವವು ಸುಖಕೊಂದಲ್ಲ | ಜಗದಮಿತ್ರ

ಇಲ್ಲಿರಲು ಆ ಕೆಲಸಕಲ್ಲಿಹೋಗಲೆಬೇಕು
ಅಲ್ಲಿರಲು ಬರುವಂತೆ ಮತ್ತಿಲ್ಲಿ ಕರೆಯು
ಎಲ್ಲವೂ ಬೇರೆಯೇ ನಿನ್ನೆಣಿಕೆ ಕರ್ತವ್ಯ
ಬಲ್ಲವರ ಅನುಸರಿಸು | ಜಗದಮಿತ್ರ

ಮೊದಲದಿನ ಇಗೊಮಣೆಯು ಎಂಬರಾದರದಿಂದ
ಅದೊ ನೋಡು ತಗೊಮಣೆಯು ಎರಡನೇ ದಿನದಿ
ಅದುಹೋಗಿ ತಾ ಮಣೆಯರೆಂಬರು ನಂತರದಿ
ಸದರಪ್ಪೆ ಅತಿಯಾಗೆ | ಜಗದಮಿತ್ರ

ಹದವರಿತು ಸ್ವೀಕರಿಸು ಆಹ್ವಾನಗಳನೆಲ್ಲ
ಹೃದಯದೊಳಕರೆಯೊ ಹೊರಕರೆಯೊ ನಿರ್ಣಯಿಸಿ
ಬೆದಕುತ್ತ ಹೆಜ್ಜೆಯಿಡು ಅದಕೆ ಉತ್ತರಿಸುವೊಲು
ಬದುಕು ನಿರ್ಣಯ ಶರಧಿ | ಜಗದಮಿತ್ರ

ಕೊಡುವುದೆಲ್ಲವ ಕಂಡು ಕಣ್ಣನರಳಿಸಬೇಡ
ಪಡೆಯುವುದಕಿಂತ ಕೊಡುವಾಧರ್ಮ ಮಿಗಿಲು
ಅಡಿಗಡಿಗು ತಡೆತಡೆದು ಗಣಿಸು ಪಡೆದಿಹಲೆಕ್ಕ
ಕೊಡುಗೆ ಋಣಭಾರದ್ದು | ಜಗದಮಿತ್ರ

ಅತಿಥಿಗಳು ನಾವಿಂದು ಇಲ್ಲಿ ಈ ಜಗದಲ್ಲಿ
ಮಥಿತ ಬುದ್ಧಿಯನಾಂತು ಕಳೆಯುವುದು ದಿನವ
ಕಥೆಗಳವು ಎಷ್ಟೆಷ್ಟೊ ಜನ್ಮಜನ್ಮಾಂತರದಿ
ವ್ಯಥೆಯು ಜೀವನ ಮಜಲು | ಜಗದಮಿತ್ರ

ಅತಿಥಿ ಸತ್ಕಾರವನು ನಡೆಸುವುದು ಸದ್ಧರ್ಮ
ಪತಿತ ಜೀವಿತದಲ್ಲೂ ಅದು ಪಥ್ಯವಹುದು
ಅತಿಹಸಿವು ಬಾಧೆಯಲು ಅತಿಥಿಯಂ ಮರೆಯದಿರು
ಅತಿಸೌಖ್ಯ ಒದಗುವುದು | ಜಗದಮಿತ್ರ

ಕರೆದು ಅನ್ನವನಿಕ್ಕು ಕಲಿವ ಬಡಮಕ್ಕಳಿಗೆ
ಹೊರೆಯಲ್ಲ ಗತಿಹೀನ ಮಕ್ಕಳಾಶ್ರಮದಿ
ತೊರೆದಿಹರು ಹಡೆದಪ್ಪ-ಅಮ್ಮ ನತದೃಷ್ಟರನು
ಎರೆದು ದಾರಿಯ ತೋರು | ಜಗದಮಿತ್ರ

ಮುಪ್ಪಿನಾ ಮನೆಜನರ ಬೆಪ್ಪೆಂದು ಜರಿಯದಿರು
ತಪ್ಪಿ-ಹಳಿ ಉಗಿಬಂಡಿ ವೇಗ ಕಳೆಯುವುದು
ತಪ್ಪೇನು ಸರಿಯೇನು ಲೆಕ್ಕಿಸದೆ ಗೌರವಿಸು
ಮುಪ್ಪು ಜೀವನ ಸಂಜೆ | ಜಗದಮಿತ್ರ

6 comments:

  1. ವಿಯಾರು ಭಟ್ಟರ ಕಗ್ಗ ಹೊಸೆಯುವ ಶೈಲಿ ಅನುಪಮ

    ReplyDelete
  2. ಕಗ್ಗಗಳು ಅರ್ಥಪೂರ್ಣವಾಗಿವೆ.

    ReplyDelete
  3. ಭಟ್ಟರೆ...

    ಪ್ರತಿಯೊಂದು ಸಾಲುಗಳಲ್ಲಿರುವ ನೀತಿಮಾತು ತುಂಬಾ ಇಷ್ಟವಾಯಿತು..

    ಇನ್ನಷ್ಟು ಬರಲಿ...

    ReplyDelete
  4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.

    ReplyDelete
  5. ಉತ್ತಮ ನೀತಿ ಕಾವ್ಯ ಸರ್, ಧನ್ಯವಾದಗಳು.

    ReplyDelete