ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 22, 2011

ಗಜಕೇಸರೀ ಯೋಗ !

ಗಜಕೇಸರೀ ಯೋಗ !

[ಸ್ನೇಹಿತರೇ ನಮಸ್ಕಾರ, ಹಾಸ್ಯ ಸಪ್ತಾಹದಲ್ಲಿ ಇಂದಿನ ಹಾಸ್ಯ ಹೂರಣ ತಯಾರಾಗಿದೆ. ಏಕವ್ಯಕ್ತಿ ಸೈನ್ಯದಂತೇ ರಭಸದಲ್ಲಿ ಮುನ್ನುಗ್ಗುತ್ತಿರುವ ನನ್ನ ಬರಹಗಳಿಗೆ ನಿಮ್ಮ ಸಂತಸದ ಓದೂ ಕಾರಣ. ಸಪ್ತಾಹದ ಪರಿಷೇಚನೆ ಎಲ್ಲರಿಗೂ ತಲುಪಲಿ ಎಂಬ ಇಷ್ಟದಿಂದ ಬಝ್‍ನಲ್ಲಿ ಸುದ್ದಿಮಾಡಿದೆ. ಇವತ್ತು ಮೂರನೇ ದಿನ : ’ಗಜಕೇಸರೀ ಯೋಗ’! ಬನ್ನಿ ಓದುವಿರಂತೆ : ]

ಉಗುರು ಕಡಿಯುತ್ತಾ ಕುಳಿತಿದ್ದ ಶ್ರೀಧರ ತಲೆಯೆತ್ತಿ ಮಾತನಾಡುತ್ತಿರಲಿಲ್ಲ. ಊರಿಗೆ ಹೊರಟು ನಿಂತಿದ್ದ. ಬೆಂಗಳೂರಿಗೆ ಬಂದು ಆಗಷ್ಟೇ ತಿಂಗಳೂ ನೆಟ್ಟಗೆ ಕಳೆದಿರಲಿಲ್ಲ. ಆದರೂ ಯಾಕೆ ಹೀಗೆ ? ಎಂಬ ಪ್ರಶ್ನೆಗೆ ಆತ ಹೇಳಿದ್ದು ಮನೆಯ ಅನಿವಾರ್ಯತೆ. ಆದರೂ ನನಗ್ಯಾಕೋ ಡೌಟಿತ್ತು. ಅಷ್ಟೆಲ್ಲಾ ಶ್ರೀಮಂತಿಕೆಯಿರದ ಕುಟುಂಬದ ತುಂಬಾ ಮಕ್ಕಳು. ಅವರ ನಡುವೆ ಯಾರಿಗಾದರೂ ನೌಕರಿ ಸಿಕ್ಕಿದ್ರೆ ಸಾಕಪ್ಪಾ ಎನಿಸುವ ಮನೆಯ ಯಜಮಾನನ ಪರಿಸ್ಥಿತಿ. ಹೀಗಿದ್ದೂ ಶ್ರೀಧರ ಯಾಕೆ ವಾಪಸ್ಸು ಊರಿಗೆ ಹೋಗುವ ಮಾತನಾಡಿದ?

ನೆಂಟರೊಬ್ಬರ ಒತ್ತಾಯಕ್ಕೆ ಕಟ್ಟುಬಿದ್ದು ಆತನನ್ನು ನನ್ನ ಮನೆಯಲ್ಲಿ ಉಳಿಸಿಕೊಂಡಿದ್ದೆ. ಆತನಿಗೊಂದು ಕೆಲಸವನ್ನೂ ಕೊಡಿಸಿದ್ದೆ. ಹಾಗಂತ ಏನೋ ಅಂತಹ ಮಹತ್ಕಾರ್ಯ ಮಾಡಿದವ ನಾನಲ್ಲ. ಆದರೂ ಬಡ ಹುಡುಗನೊಬ್ಬನಿಗೆ ಸಹಾಯವಾದರೆ ಸಾಕು ಎಂದು ಮನಸ್ಸು ಹೇಳಿತ್ತು, ಮಾಡಿದ್ದೆ. ಆತನಿಗೋ ಸುಟ್ಟುಕೊಂಡು ತಿನ್ನಲೂ ಎರಡೇ ಎರಡು ಶಬ್ದ ಇಂಗ್ಲೀಷು ಬರುತ್ತಿರಲಿಲ್ಲ. ಕಚೇರಿಯಲ್ಲಿ ಯಾರಾದರೂ ಇಂಗ್ಲೀಷಿನಲ್ಲಿ ಏನಾದರೂ ಕೇಳಿ-ಹೇಳಿ ಮಾಡಿದರೆ ಬ್ರಹ್ಮಾಸ್ತ್ರ ಪ್ರಯೋಗದ ತಡೆಯಲಾರದ ವೇದನೆ ಆತನಿಗೆ! ಆಡಲಾರ-ಅನುಭವಿಸಲಾರ. ಹೇಳಿದರೆ ಏನು ತಿಳಿಯುತ್ತಾರೋ ಎಂಬ ಅಳುಕು; ಹೇಳದಿದ್ದರೆ ಅರ್ಥವಾಗದೇ ಏನೇನೋ ಆಗಿಬಿಡುವ ಹೆದರಿಕೆ. ಬೇಡಪ್ಪಾ ಬೇಡ.

ನಂಗೂ ಇದರ ಗಾಳಿ ಹೊಡೆಯದೇ ಇರಲಿಲ್ಲ. ದಿನಾಲೂ ಮನೆಗೆ ಬರುವಾಗ ಸಂಭ್ರಮಿಸುವ ಶ್ರೀಧರ ಬೆಳಗಾದೊಡನೆಯೇ ಡಲ್ ಹೊಡೆಯುತ್ತಿದ್ದ. ಕಚೇರಿಯ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ದಿನಪತ್ರಿಕೆಗಳಲ್ಲಿ ಕನ್ನಡ ಪತ್ರಿಕೆಯನ್ನು ಮಾತ್ರ ಓದುತ್ತಿದ್ದನೇ ಹೊರತು ಇಂಗ್ಲೀಷು ಊಹೂಂ ಮಾರು ದೂರ ಇಟ್ಟುಬಿಡುತ್ತಿದ್ದ! ಇದನ್ನೆಲ್ಲಾ ತಿಳಿದೇ ಆತನಿಗೆ ದಿನಾಲೂ ಹತ್ತಾರು ಸರ್ತಿ ಇಂಗ್ಲೀಷ್ ದಿನಪತ್ರಿಕೆ ಓದಲು ಹೇಳಿದ್ದೆ. ಕಾರಣ ಇಷ್ಟೇ- ಸ್ವಲ್ಪವಾದರೂ ಆತನ ಸ್ಥಿತಿ ಬದಲಾಗಲಿ. ಆತನಿಗೆ ಇಂಗ್ಲೀಷಿನಲ್ಲಿ ಆಸಕ್ತಿ ಬರಲಿ ಎಂಬುದು. ಆದರೂ ಇಂಗ್ಲೀಷ್ ಪತ್ರಿಕೆ ಕಂಡೊಡನೆಯೇ ಅದ್ಯಾಕೋ ತೆನ್ನಾಲಿ ರಾಮನ ಬೆಕ್ಕು ಹಾಲು ಕಂಡ ರೀತಿ ಮಾಡುತ್ತಿದ್ದ! ಸ್ವತಃ ನಾನೇ ಅನೇಕ ಪದಗಳನ್ನೂ ವ್ಯಾಕರಣವನ್ನೂ ಕಲಿಸಲು ತೊಡಗಿದೆ.

ಸತ್ಯವನ್ನು ಹೇಳುತ್ತೇನೆ ಕೇಳಿ : ಆಯಾ ಜಾಗಗಳಲ್ಲಿ ಅಲ್ಲಲ್ಲಿಗೆ ಏನು ಬೇಕೋ ಅದನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. [ವೈಯ್ಯಕ್ತಿಕ ಆಹಾರ, ಆಚರಣೆ ಈ ಮಾತಿನ ವ್ಯಾಪ್ತಿಗೆ ಬರುವುದಿಲ್ಲ]ಅದರಲ್ಲಂತೂ ಭಾಷೆಗಳನ್ನು ಜಾಸ್ತಿ ತಿಳಕೊಂಡಷ್ಟೂ ಉತ್ತಮ. ತಿಳಕೊಂಡಾಕ್ಷಣ ನಾವು ಅದೇ ಭಾಷೆಯನ್ನೇ ಎಲ್ಲಕಡೆಗೂ ಬಳಸಬೇಕೆಂಬ ನಿರ್ಬಂಧವೇನೂ ಇಲ್ಲ. ಕನ್ನಡ ಮೂಲದ ಕೆಲವು ಪಾಲಕರು ಆಂಗ್ಲ ಭಾಷೆಯನ್ನು ಮನೆಯಲ್ಲೂ ಬಳಸುತ್ತಾ ತಮ್ಮ ಮಕ್ಕಳ ಜೊತೆ ಮಾತನಾಡುತ್ತಿರುವಾಗ ಹಲವು ಶಬ್ದಗಳು ನೆನಪಿಗೆ ಬಾರದೇ ಒದ್ದಾಡುವುದೂ ಅಲ್ಲಿ ಕನ್ನಡ ಶಬ್ದಗಳನ್ನೇ ಉಪಯೋಗಿಸಿ ಮುಗಿಸುವುದೂ ನೋಡಿದ್ದೇನೆ. ಮಕ್ಕಳು ಮನೆಯಲ್ಲಾದರೂ ಕನ್ನಡ ಮಾತಾಡಲಿ ಬಿಡಿ, ಅಲ್ಲೂ ಡ್ಯಾಡಿ ಮಮ್ಮಿ ಯಾಕೆ ಬೇಕು? ಕೆಲವರಿಗಂತೂ ಮನೆಯಲ್ಲಿ ಅಪ್ಪಿತಪ್ಪಿ ಕನ್ನಡ ಅಡಿಬಿಟ್ಟರೆ ವಿಶ್ವಾಮಿತ್ರ ಶಾಪ ಕೊಡುವ ರೀತಿ ಆಡುತ್ತಾರೆ. ಮನೆಯ ಖೋಲಿಯಲ್ಲಿ ಮಕ್ಕಳನ್ನು ನೂಕಿ ತಾವೇ ಹೊಸ ತ್ರಿಶಂಕು ಸ್ವರ್ಗ ಸೃಷ್ಟಿಸಿದ ಸಮಾಧಾನಕ್ಕೆ ಬರುತ್ತಾರೆ!

ಹೆಂಗಸೊಬ್ಬಳಿಗೆ ತನ್ನ ಮಗಳು ಹೊರಗಡೆ ಹೋಗಿದ್ದಾಳೆ ಎನುವುದನ್ನು ಇಂಗ್ಲೀಷಿನಲ್ಲಿ ಹೇಳಬೇಕೆಂಬ ಚಡಪಡಿಕೆಯಿತ್ತು. ಆದರೆ ಆ ಹೆಂಗಸು ಕನ್ನಡ ಮೇಜರ್ ಬಿ.ಏ ಓದಿದ್ದು ಇಂಗ್ಲೀಷ್ ಬರುತ್ತಿರಲಿಲ್ಲ. ಭಂಡ ಧೈರ್ಯಕ್ಕೇನೂ ಕಮ್ಮಿ ಇರಲಿಲ್ಲ. ಎದುರಿಗೆ ಕುಳಿತಿರುವ ಹಿಂದೀ ಮಹಿಳೆಯ ಹತ್ತಿರ ಹೇಳಿದಳು " ಹೀ ಗೋ ಸಮ್ ವೇರ್" [ತನ್ನ ಮಗಳು ಎಲ್ಲೋ ಹೋಗಿದ್ದಾಳೆ ಎಂಬುದಕ್ಕೆ]. ಎದುರಿಗಿದ್ದವಳು ನಕ್ಕಳು ಜೊತೆಗೆ ಇವಳೂ ಕೂಡ, ಯಾರ್ಯಾರಿಗೆ ಏನೇನು ಅರ್ಥವಾಯಿತೋ ಶಿವನೇ ಬಲ್ಲ!ನೋಡುತ್ತಿದ್ದ ನಂಗೆ ನಗಲೂ ಆರದ ಅಳಲೂ ಆರದ ಪೇಚಾಟ, ಆದರೂ ಅವರೊಟ್ಟಿಗೆ ನಾನೂ ತಡೆಯಲಾರದೇ ಹಲ್ಲುಕಿರಿದೆ. ಇನ್ನೊಬ್ಬಾತ ಆಗಿನ್ನೂ ಕಲಿತಿದ್ದ ಇಂಗ್ಲೀಷನ್ನು ಉಪಯೋಗಿಸುವ ಗಡಿಬಿಡಿಯಲ್ಲಿದ್ದ. ಮನೆಗೆ ಬಂದ ಸ್ನೇಹಿತ " ನಿನ್ನ ತಂದೆ ಎಲ್ಲೋ " ಎಂದು ಕೇಳಿದ. ಸ್ನೇಹಿತನಿಗೆ ತನ್ನ ವಿದ್ಯೆಯನ್ನು ತೋರಿಸಬೇಕಲ್ಲಾ " ಮೈ ಫಾದರ್ ಈಸ್ ನೋ ಮೋರ್ " ಎಂದುಬಿಟ್ಟ. ಅಲ್ಲಿ ನೋ ಮೋರ್ ಹೀಯರ್ ಎಂದಾದರೂ ಹೇಳಿದ್ದರೆ ಪರವಾಗಿರ್ಲಿಲ್ಲ. ಸ್ನೇಹಿತ ಕಕ್ಕಾವಿಕ್ಕಿಯಾದ. " ಓ ವೆರಿ ಸಾರಿ ಕಣೋ ನಂಗೆ ಗೊತ್ತಿರ್ಲಿಲ್ಲ...ಅಂತೆಲ್ಲಾ ಹೇಳಿಬಿಟ್ಟ". ಆದರೂ ಈ ಬುದ್ಧುವಿಗೆ ಅರ್ಥವಾಗಲೇ ಇಲ್ಲ. ವಾರಕಳೆದು ಮಾರುಕಟ್ಟೆಯಲ್ಲಿ ಆತನ ತಂದೆ ಸ್ನೇಹಿತನಿಗೆ ಸಿಕ್ಕಿದಾಗ ದೆವ್ವವೋ ಅಥವಾ ನಿಜವಾಗಿಯೂ ಅವರೇ ಬದುಕಿದ್ದಾರೋ ಎಂಬ ಸಂದೇಹದಲ್ಲಿ ದಂಗಾಗಿ ಬೆವತುಹೋದ!

ಇನ್ನೂ ಒಂದು ಮಾತು ಇಂಗ್ಲೀಷು ಅಂತ ಒಂದೇ ಅಲ್ಲ, ಯಾವುದೇ ಭಾಷೆಯಾದರೂ ಅಲ್ಪವಿರಾಮ, ಪೂರ್ಣವಿರಾಮ ಇತ್ಯಾದಿ ಚಿಹ್ನೆಗಳನ್ನು ಸರಿಯಾದ ಜಾಗಗಳಲ್ಲಿ ಬಳಸಬೇಕು. ಕೆಲವರು ಬರೆಯುವಾಗ ಈ ಚಿಹ್ನೆಗಳನ್ನೆಲ್ಲಾ ಉಪಯೋಗಿಸಿಯೇ ಗೊತ್ತಿಲ್ಲ. ಅವರ ಲೆಕ್ಕದಲ್ಲಿ ಚಿಹ್ನೆಗಳೆಲ್ಲಾ ಮುದ್ರಿಸಿದಾಗ ತಂತಾನೇ ಬರುವಂಥವು ಎಂದಿರಬೇಕೋ ಏನೋ. ಚಿಹ್ನೆಗಳ ಬಳಕೆಯಲ್ಲಿ ವ್ಯತ್ಯಾಸವಾದರೆ ಪ್ರಮಾದ ಸಂಭವಿಸಿದರೂ ಹೆಚ್ಚಲ್ಲ! ಒಮ್ಮೆ ನ್ಯಾಯಾಲಯದಲ್ಲಿ ನ್ಯಾಯಾಧೀಶ ತೀರ್ಮಾನವಿತ್ತಿದ್ದನ್ನು ಅಲ್ಲಿನ ನೌಕರ ಬರೆದುಕೊಂಡ. ನ್ಯಾಯಾಧೀಶ ಹೇಳಿದ್ದು: leave him, not hang him ಆದರೆ ಆತ ಬರೆಯುವಾಗ leave him not, hang him ! ನಿರಪರಾಧಿಗೆ ಗಲ್ಲು ಶಿಕ್ಷೆ ! ಇದನ್ನೇ ತಿರುವು ಮುರುವು ಮಾಡಿನೋಡಿ, ಆಗ ಅಪರಾಧಿಗೆ ಶಿಕ್ಷೆಯಿಂದ ಮುಕ್ತಿ! ಹೀಗೇ ಚಿಹ್ನೆಗಳನ್ನು ಹೇಗೆ ಬಳಸಬೇಕೆಂಬ ಅರಿವು ಬರೆಯುವಾತನಿಗೆ ಗೊತ್ತಿರ್ಬೇಕು.

ಮರಳಿ ಶ್ರೀಧರನನ್ನು ತಿಳಿಯೋಣ. ಈತನಿಗೆ ಯಾವುದೇ ವ್ಯಾವಹಾರಿಕ ಜ್ಞಾನವಿರಲಿಲ್ಲ. ಸಾಮಾನ್ಯ ಜ್ಞಾನದಲ್ಲಿ ಸೊನ್ನೆ! ಕಾಮನ್ ಸೆನ್ಸ್ ಎನ್ನುವುದರ ಉದ್ಧರಣೆ ಕೆಲವೊಮ್ಮೆ ಹೀಗೆ--ದಿ ಸೆನ್ಸ್ ವಿಚ್ ಈಸ್ ನಾಟ್ ಸೋ ಕಾಮನ್! ಇವನಿಂದ ಕಛೇರಿಯಲ್ಲಿ ಕೆಲಸ ತೆಗೆಯುವುದೂ ಕಷ್ಟವಿತ್ತು. ಪರಿಚಯದವರಾದ ಕಂಪನಿಯ ಯಜಮಾನರಿಗೆ ಕೆಲಸಕ್ಕೆ ಸೇರಿಸಿದ ನನ್ನ ಈ ಕೆಲಸ ಬಿಸಿ ತುಪ್ಪವಾಗಿತ್ತು! ಅವರು ತಿಂಗಳದ ಕೊನೆಗೆ ಸಂಬಳವನ್ನೂ ಗೌರವದಿಂದಲೇ ಕೊಟ್ಟಿದ್ದರು. ಆದರೂ ಯಾಕೀತ ಹೊರಟು ನಿಂತ ?

ಬಂದಾಗಿನಿಂದ ಆತನ ತಲೆಯಲ್ಲಿ ಬೇರೇನೂ ಹೊಳೆಯಲೇ ಇಲ್ಲ. ತಾನು ಕೆಲಸಕ್ಕೆ ಸೇರಿಕೊಂಡ ಕಚೇರಿಯೇ ಚಿಕ್ಕದೆಂದು ಭಾವಿಸಿದ್ದ. ಆತನಿಗೆ ಊರ ಜೋಯಿಸರು ಹೇಳಿಬಿಟ್ಟಿದ್ದರು " ತಮ್ಮಾ ನಿಂಗೆ ಗಜಕೇಸರೀ ಯೋಗವಿದೆ." ಕನ್ನಡ ಮೇಜರ್ ಬಿ.ಏ ಓದುವಾಗಲೇ ಮೂರು ಸಾರಿ ಡುಮುಕಿಹಾಕಿದ್ದ ಆತನಿಗೆ ಬರೇ ಯೋಗದಮೇಲೇ ಕಣ್ಣು! ನಂಗಂತೂ ಒಂದು ಅರ್ಥವಾಗಲಿಲ್ಲ-ಗಜಕೇಸರೀ ಯೋಗವಿದೆ ಎಂತ ಸುಮ್ಮನೇ ಸ್ಟವ್ ಮುಂದೆ ಅಕ್ಕಿ ಪಕ್ಕಕ್ಕಿಟ್ಟು ಕುಳಿತರೆ ಅದು ಅನ್ನವಾಗಿ ಬಂದು ಬೀಳುವುದೇ? ಹೌದೋ ಏನೋ ಯಾರಿಗೆ ಗೊತ್ತು ? ಆದರೆ ಗಜಕೇಸರೀ ಯೋಗ ನಿಜವಾಗಿಯೂ ಬಂದಿರುವುದು ಸದ್ಯ ಜ್ಯೋತಿಷಿಗಳಿಗೆ. ಅದರಲ್ಲೂ ಮಾಧ್ಯಮಗಳಲ್ಲಿ ಬಂದು ಕುಳಿತು ಹುಚ್ಚುಹುಚ್ಚಾಗಿ ಹಲಬುವ ಜ್ಯೋತಿಷಿಗಳಿಗೆ ಭಯಂಕರ ಬುಲಾವು!

ಆದರೂ ನಾನು ಶ್ರೀಧರ ಹೋಗುವುದನ್ನು ತಡೆದೆ. ಆತನಿಗೆ ಹೇಳಿದೆ " ಯಾಕಪ್ಪಾ ಶ್ರೀಧರ ಇಲ್ಲೇ ಇದ್ದು ಇಲ್ಲಿನ ವೈವಾಟುಗಳನ್ನೂ ಕಲಿತು ಭಾಷೆಯನ್ನೂ ಕಲಿತು ನೀನು ನಿನ್ನ ಕಾಲಮೇಲೆ ನಿಂತುಕೊಳ್ಳುವ ಇಚ್ಛೆಯಿಲ್ಲವಾ ? " ಶ್ರೀಧರ ಉತ್ತರಿಸಲೇ ಇಲ್ಲ. ನನ್ನೆಡೆಗೆ ಕಳಿಸಿದ್ದ ಆ ನನ್ನ ನೆಂಟರಿಂದ ನಂಗೆ ಬೆಳ್ಳಂಬೆಳಿಗ್ಗೆ ಫೋನು! " ಆತನಿಗೆ ಅಲ್ಲಿರಲು ಇಷ್ಟವಿಲ್ಲ, ಊರಲ್ಲಿ ಅದೇನೋ ವ್ಯಾಪಾರ ಮಾಡ್ತಾನಂತೆ, ಆತನಿಗೆ ಗಜಕೇಸರೀ ಯೋಗ ಬೇರೇ ಇದೆ. ಏನಾದ್ರೂ ಸಾಧಿಸಬಹುದು ದಯಮಾಡಿ ಅವನನ್ನು ಕಳಿಸಿಕೊಡು "

" ತಥಾಸ್ತು " ಎಂದುಬಿಟ್ಟೆ. ಶ್ರೀಧರ ಹೊರಟೇಬಿಟ್ಟ.

ಕಾಲೇಜು ದಿನಗಳಲ್ಲಿ ಆತ ಕನ್ಯೆ[ಇರಬಹುದೇ?]ಯೋರ್ವಳನ್ನು ಲವ್ ಮಾಡಿದ್ದ. ಶ್ರೀಧರ ಬೆಂಗಳೂರನ್ನು ತೊರೆದು ಬರುತ್ತಿರುವಂತೆಯೇ ದೋಸ್ತರ ಮೂಲಕ ಆತನಿಗೆ ಮೊದಲು ತಲುಪಿದ ಸುದ್ದಿ "ಆ ಹುಡುಗಿಗೆ ಮದುವೆ ಅರೇಂಜ್ ಆಗಿದೆ"! ಶ್ರೀಧರ ಹಲವಾರು ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆ ಮತ್ತೆಲ್ಲೂ ಹೊರಬರದ ಗೃಹಬಂಧನದಲ್ಲಿದ್ದಳು. ಹಿರಿಯರು " ಹುಡುಗನ ಆಸ್ತಿ ನೋಡು ನೀನು ಸುಖವಾಗಿರಬಹುದು " ಎಂದಿದ್ದಕ್ಕೆ ಅಸ್ತು ಎಂದುಬಿಟ್ಟಿದ್ದಳು. ಕೆಲವೇ ದಿನಗಳಲ್ಲಿ ಮದುವೆ ನಡೆದೇ ಹೋಯಿತು. ಶ್ರೀಧರ ಆರೆಂಟು ತಿಂಗ್ಳು ಕರೆಂಟ್ ಹೊಡೆದ ಕಾಗೆಯ ಥರಾ ಇದ್ದ. ಗಜಕೇಸರೀ ಯೋಗ ! ಆಮೇಲೆ ಸ್ವಲ್ಪ ಮನಸ್ಸು ಸಮಾಧಾನಿಸಿ ಕೊಂಡ.

ಶ್ರೀಧರನಲ್ಲಿ ಯಾವ ಶಿಸ್ತೂ ಇರಲಿಲ್ಲ. ಸಾಮಾನುಗಳನ್ನೆಲ್ಲಾ ಹರಡಿಕೊಂಡು ಬಿಡುತ್ತಿದ್ದ. ಬಟ್ಟೆಯ ಬಗ್ಗೆ ಯಾವುದೇ ಆಸ್ಥೆಯಿರಲಿಲ್ಲ. ಹೇಗಾಯಿತ್ಹಾಗೆ ಇದ್ದು ಬಿಡೋದು ಅವನ ವಾಡಿಕೆ. ಸಮಯಕ್ಕೆ ಕೆಲಸವನ್ನು ಮಾಡಿಮುಗಿಸುವ ಜವಾಬ್ದಾರಿಯೂ ಇರಲಿಲ್ಲ. ವ್ಯಾಪಾರವನ್ನೇನೋ ಶುರು ಮಾಡಿದ. ಹೇಗೆ ಮಾಡಬೇಕೆಂಬ ಅನುಭವವಾಗಲೀ ಮಾಡುವ ಚಾಕಚಕ್ಯತೆಯಾಗಲೀ ಇರಲಿಲ್ಲ. ತಿಳಿದವರು ಹೇಳಿದರೆ ಕೇಳುವ ಸ್ವಭಾವವೂ ಅವನದ್ದಲ್ಲ. ವ್ಯಾಪಾರದಲ್ಲಿ ಒಂದಷ್ಟು ಕಳಕೊಂಡ. ಮನೆಯಲ್ಲಿ ಮೊದಲೇ ಹೇಳಿದೆನಲ್ಲ ... ಆ ಸ್ಥಿತಿ. ನಂಗೆ ಮತ್ತೆ ಫೋನು " ಶ್ರೀಧರನಿಗೆ ಅಲ್ಲೇ ಇನ್ನೊಮ್ಮೆ ಹೇಳಿ ಅದೇ ಕೆಲಸ ಕೊಡಿಸಬಹುದಾ ? " ನಾನು ತಡಮಾಡಲಿಲ್ಲ. " ಆತ ಅಲ್ಲೇ ಎಲ್ಲಾದರೂ ಹುಡುಕಲಿ ಸದ್ಯ ಇಲ್ಲಿ ಆ ಜಾಗ ಖಾಲೀ ಇಲ್ಲ. ಮೇಲಾಗಿ ಆತನಿಗೆ ಗಜಕೇಸರೀ ಯೋಗವಿರುವುದರಿಂದ ಮತ್ತೆ ಯೋಗವಶಾತ್ ಊರಿಗೆ ಹೋಗಬೇಕಾಗಬಹುದು. " ನೆಂಟ ವಿಷಾದದ ದನಿಯಲ್ಲಿ ನಕ್ಕ ಜೊತೆಗೆ ನಾನೂ...

ಟಾಟಾ ದವರು ತಮ್ಮ ಇಂಡಿಕಾ ಕಾರಿನ ಬಗ್ಗೆ ಹೇಳುತ್ತಾ ’ ಮೋರ್ ಕಾರ್ ಪರ್ ಕಾರ್’ ಎನ್ನುತ್ತಿದ್ದರು! ಅದರ ಅರ್ಥ ನಿಮಗಾಗಿರಬೇಕಲ್ಲ ? ಹಾಗೆಯೇ ಹಳೆಯ ಮನೆಯಲ್ಲಿ ಹಲವಾರು ಮನೆಗಳು ಬಾಗಿಲು ತೆರೆದವು! ಇದ್ದ ಎಕರೆ ಆಸ್ತಿ ವಿಭಾಗವಾಗಿ ಹತ್ತತ್ತು ಗುಂಟೆ ಪಾಲಿಗೆ ಬಂದಿತ್ತು. ಈಗಲೂ ಆತ ಊರಲ್ಲೇ ಇದ್ದಾನೆ. ಕಷ್ಟದಲ್ಲೇ ಶ್ರೀಧರ ಮದುವೆಯಾಗಿದ್ದಾನೆ. ಆಗಲೇಬೇಕಲ್ಲ ? ಮೂರು ಜನ ಮಕ್ಕಳು ಅಪ್ಪನನ್ನು ಪ್ರೀತಿಯಿಂದ ಮುತ್ತುಕೊಳ್ಳುತ್ತವೆ. ಆರತಿಗೊಂದು ಕೀರುತಿಗೊಂದು ಇನ್ಯಾವುದಕ್ಕೋ ಇನ್ನೊಂದು. ಗಂಡು ಹುಟ್ಟಿಲ್ಲ ಅಂತ ಇನ್ನೂ ಒಂದು ’ಪ್ರಯತ್ನ’ ನಡೆದಿದೆ! ಸದ್ಯದಲ್ಲೇ ಅದೂ ಪ್ರಕಟಗೊಳ್ಳಬಹುದು. ಇದ್ದ ಮಕ್ಕಳಿಗೇ ಗತಿಯಿಲ್ಲದಿದ್ದರೂ ಇನ್ನೊಂದು ಕೊಡುವ ಸದಾಶಿವ ಸುಮ್ಮನೇ ಕೂರುತ್ತಾನೆಯೇ ? ದೇಶಕ್ಕೇ ಅಪಾರ ಕೊಡುಗೆ! ಗಜಕೇಸರೀ ಯೋಗದ ಮಹಿಮೆ!

Tuesday, June 21, 2011

ಒಂದೇ ಮಾಸ್ತರಂ !


ಒಂದೇ ಮಾಸ್ತರಂ !

ಹಿಂದಕ್ಕೆಲ್ಲಾ ಹಳ್ಳಿಗಳಲ್ಲಿ ಸರಕಾರೀ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕೆಲವುಕಡೆ ಏಕೋಪಾಧ್ಯಾಯ ಶಾಲೆಗಳಿದ್ದವು; ಈಗಲೂ ಅಲ್ಲಲ್ಲಿ ಇವೆ ಎಂಬುದನ್ನು ಕೇಳಿದ್ದೇನೆ! ಸ್ನೇಹಿತ ಶಿಕ್ಷಕರೊಬ್ಬರು ಇಂಥಲ್ಲಿಯ ಇಂಥಾ ಏಕೋಪಾಧ್ಯಾಯ ಶಾಲೆಗೆ ತಾನೇ ಮುಖ್ಯೋಪಾಧ್ಯಾಯ ಎನ್ನುತ್ತಿದ್ದರು! ನನಗೆ ಕೆಲವು ಸಮಯ ಗೊತ್ತೇ ಆಗಲಿಲ್ಲ, ಯೋಚಿಸಿನೋಡುತ್ತೇನೆ ಅದು ಏಕೋಪಾಧ್ಯಾಯಶಾಲೆ ಅಲ್ಲಿ ಮುಖ್ಯೋಪಾಧ್ಯಾಯ ಅಂದರೆ.....! ಪಾಪ ಅಂದಿನ ಮಾಸ್ತರುಗಳಿಗೆ ಇಂದಿನ ದರ್ಜೆಯಾಗಲೀ ಈ ಹೆಚ್ಚಿನ ಸಂಬಳವಾಗಲೀ ಇರುತ್ತಿರಲಿಲ್ಲ. ಶಿಕ್ಷಣ ಒಂದು ಸೇವೆ ಎಂದು ಕೆಲವರು ಆ ವೃತ್ತಿ ಮಾಡಿದರೆ ಇನ್ನು ಕೆಲವರು ಹೆಚ್ಚಿನವಿದ್ಯೆಕಲಿಯಲಾಗದುದ್ದಕ್ಕೆ ಜಾಸ್ತಿ ರಿಸ್ಕ್ ತಗೊಳ್ಳೋದು ಬೇಡಾಂತ ಸುಮ್ನೇ ಹೀಗೆ ’ಶಿಕ್ಷಕ’ರಾಗುತ್ತಿದ್ದರು.

ಕುಗ್ರಾಮಗಳ ಮೂಲೆಯಲ್ಲೆಲ್ಲೋ ಹದ್ದೂ ಹಾರಾಡದ ಜಾಗದಲ್ಲಿ ಇವರ ವಾಸ್ತವ್ಯ ಮತ್ತು ವೃತ್ತಿ. ರವಿಕಾಣದ ಜಾಗವನ್ನು ಕವಿ ಕಂಡ ಅಂತಾರಲ್ಲಾ ಕವಿ ಕಾಣದ ಜಾಗವೂ ಕೆಲವು ಇವೆ-ಅವುಗಳನ್ನು ನಮ್ಮ ಇಂತಹ ಮಾಸ್ತರು ಕಂಡಿದ್ದಾರೆ! ನಡೆಯಲು ಸರಿಯಾಗಿ ರಸ್ತೆಯೂ ಇಲ್ಲದ, ವಾಹನವನ್ನು ಚಿತ್ರಗಳಲ್ಲಷ್ಟೇ ಕಂಡ, ಯಾವ ಆಧುನಿಕ ವೈದ್ಯಕೀಯ ತುರ್ತು ಚಿಕಿತ್ಸಾಲಯಗಳೂ ಇಲ್ಲದ ಗ್ರಾಮಗಳಲ್ಲಿ ಇಂತಹ ಏಕೋಪಾಧ್ಯಾಯ ಶಾಲೆಗಳಿರುವುದರಿಂದ ಕಾಡದಾರಿಗಳಲ್ಲಿ ಹಳ್ಳಕೊಳ್ಳಗಳಲ್ಲಿ ನಡೆಯುತ್ತಾ, ಹಾಯುತ್ತಾ, ಕೆಲವೊಮ್ಮೆ ಹಾರುತ್ತಾ ಸಾಗುವ ಇವರಲ್ಲಿ ಅಪರೂಪಕ್ಕೆ ಕೆಲವೊಬ್ಬರಿಗೆ ಸ್ವಂತದ ಸೈಕಲ್ ಇರುತ್ತಿತ್ತು. ಮಿಕ್ಕುಳಿದವರಿಗೆ ’ವಿನೋಬಾಸರ್ವಿಸ್ಸೇ’ [ವಿನೋಬಾ ಭಾವೆಯವರನ್ನು ಸ್ಮರಿಸಿಕೊಳ್ಳಿ] ಗತಿ !

ಇಂತಹ ಶಾಲೆಗಳಲ್ಲಿ ಒಂದೇ ಕೊಠಡಿ ಇರುತ್ತಿದ್ದು ಕೆಲವೊಮ್ಮೆ ತಟ್ಟಿ ಬಿಡಾರಗಳೇ ಶಾಲೆಗಳಾಗಿ ವರ್ತಿಸಬೇಕಾದ ರೀಯಲ್ ಲೈಫು ಅದು. ಬೇಸಿಗೆ, ಮಳೆ,ಚಳಿ ಮೂರೂ ಕಾಲಗಳನ್ನು ಕೊಠಡಿಯ ಒಳಗೇ ದೃಶ್ಯಮಾಧ್ಯಮದ ರೀತಿ ನೈಜವಾಗಿ ತೋರಿಸುವ ಮಲ್ಟಿಮೀಡಿಯಾ ಸ್ಕೂಲು! ಗ್ರಾಮಗಳಲ್ಲಿ ಹದಿನೈದೋ ಇಪ್ಪತ್ತೋ ಮನೆ-ಮನೆಗಳಲ್ಲೇ ಅಂದಿನ ಕಾಲದ ಪಾಲಕರಿಗೆ ಒಬ್ಬೊಬ್ಬರಿಗೆ ಬಡತನಕ್ಕೆ ಇರಲಿ ಅಂತ ಹತ್ತಾರು ಮಕ್ಕಳು! ಹೀಗಾಗಿ ಮನೆ ಇಪ್ಪತ್ತೇ ಇದ್ದರೂ ಶಾಲೆ ನಡೆಸುವಷ್ಟು ವಿದ್ಯಾರ್ಥಿಗಳಿರುತ್ತಿದ್ದರು. ಆಗೆಲ್ಲಾ ಅಂಗನವಾಡಿ, ಬಾಲವಾಡಿ, ಶಿಶುವಿಹಾರ ಇವೆಲ್ಲಾ ಇರಲಿಲ್ಲ. ಹಲವು ಮಕ್ಕಳಿರುವ ಒಂದೊಂದೂ ಮನೆಗಳೇ ಶಿಶುವಿಹಾರಗಳಂಥಿದ್ದವು!

ಆಗಾಗ ಗ್ರಾಮಗಳಿಗೆ ಬರುತ್ತಿದ್ದ ಯಾವುದೋ ಸರಕಾರೀ ಮಂದಿ ನಿರೋಧದ ಉಪಯೋಗವನ್ನೂ ಜಾಹೀರಾತುಗಳನ್ನೂ ಅಲ್ಲಲ್ಲಿ ಕೆಲವು ಮನೆಗಳ ಮಣ್ಣಿನ ಗೋಡೆಗಳಿಗೆ ಅಂಟಿಸಿ ಹೋಗುತ್ತಿದ್ದರು. ವಿದ್ಯೆ ’ಇಲ್ಲದವ ಹದ್ದಿಗಿಂತ ಕಡೆ’ , ’ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ’, ’ಏರಡು ಬೇಕು ಮೂರು ಸಾಕು’ ಇಂತಹ ’ವೇದ ವಾಕ್ಯ’ಗಳು ಕೆಲವು ಆಧುನಿಕ ಅಧಿಕಾರಿಗಳಿಂದ ಗೋಡೆಬರೆಹಗಳಾಗಿ ಅಲ್ಲಲ್ಲಿ ಮನೆಗಳಲ್ಲೇ ಬರೆಯಲ್ಪಟ್ಟಿದ್ದವು! ಯಾಕೆಂದರೆ ಅಲ್ಲಿ ಪಂಚಾಯ್ತಿ ಕಟ್ಟಡವಾಗಲೀ ವ್ಯವಸ್ಥಿತ ಯಾವುದೇ ಸಮೂಹದ ಸಭಾಭವನವಾಗಲೀ ಇರಲಿಲ್ಲ. ಸಭೆಗಳು ನಡೆಯುತ್ತಿದ್ದುದು ಮರಗಳ ಕೆಳಗೆ; ಅದೊಂಥರಾ ಶಾಂತಿನಿಕೇತನ!

ಇಂತಹ ಶಾಲೆಗಳಲ್ಲಿ ಕೆಲಸಮಾಡುವ ಶಿಕ್ಷಕರಲ್ಲಿ ಹಲವರು ನಿಜವಾಗಿಯೂ ಶಿಕ್ಷಕರೇ ಆಗಿರುತ್ತಿದ್ದರು ಎಂದರೆ ಅಲ್ಲಿನ ಪರಿಸ್ಥಿತಿಅವರನ್ನು ಹಾಗೆ ಮಾಡಿಸುತ್ತಿತ್ತು ಎನ್ನಬಹುದೇನೋ. ಬರುವ ಸಂಬಳ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ; ಆ ಸಂಬಳ ಖರ್ಚಿಗೆಸಾಲುತ್ತಿರಲಿಲ್ಲ. ಹೀಗಾಗಿ ಮಾಸ್ತರು ವ್ಯಾಪಾರ ಸಾಪಾರ ಮಾಡಿ ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು. ಇಲ್ಲಿ ಕೆಲವೊಮ್ಮೆಶಾಲೆಗಳ ಬಾಗಿಲುಗಳೇ ತೆರೆಯದೇ ತಿಂಗಳುಗಟ್ಟಲೇ ಶಾಲೆಗಳು ಪುಸ್ತಕದಲ್ಲಿ ಮಾತ್ರ ’ಸಮರ್ಪಕವಾಗಿ ನಡೆಸಲ್ಪಡುತ್ತಿದೆ’ ಎಂದುಬರೆಯಲಾಗುತ್ತಿತ್ತು. ದಾರಿಗಳೇ ಸರಿಯಿರದ ಕಾರಣ ಯಾವುದೇ ಮೇಲಧಿಕಾರಿ ಅಷ್ಟಾಗಿ ಬರುವ ಪ್ರಮೇಯ ಇರುತ್ತಿರಲಿಲ್ಲ! ಹಾಗೊಮ್ಮೆ ಎಲ್ಲೋ ಹತ್ತಾರು ವರ್ಷಕ್ಕೊಮ್ಮೆ ಯಾರೋ ಒಬ್ಬ ಕೋಲಂಬಸ್ ಬಂದಹಾಗೇ ಬಂದರೆ ಅವನನ್ನು ಪ್ರೀತಿಯಿಂದ ಮರುಳುಮಾಡಿ ಮನಗೆಲ್ಲುವ ಕುಶಲಮತಿಗಳಾಗಿರುತ್ತಿದ್ದರು ಈ ನಮ್ಮ ಮಾಸ್ತರರು!

ಇಂತಹ ಮಾಸ್ತರುಗಳಲ್ಲಿ ಕೆಲವರಿಗೆ ಚಟಗಳೂ ಅಂಟಿಕೊಳ್ಳುತ್ತಿದ್ದವು. ಬ್ರಹ್ಮಚಾರಿಯಾಗಿ ಬಂದ ಬಹುತೇಕ ಮಾಸ್ತರು ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆದೇ ಇಲ್ಲಿಂದ ತೆರಳುತ್ತಿದ್ದರು! ಕೆಲವರು ಹಲವು ’ಗೃಹಸ್ಥಾಶ್ರಮಗಳನ್ನೂ’ ಆರಂಭಿಸಿಕೊಂಡುಬಿಡುತ್ತಿದ್ದರು ! ಹಳ್ಳಿಗರ ಜೊತೆಗೆ ಇಸ್ಪೀಟಾಟ, ಹುತುತು-ಕಬಡ್ಡಿ, ಹಾಣೆಕೋಲು[ಚಿನ್ನಿದಾಂಡು] ಇವುಗಳನ್ನೆಲ್ಲಾ ಅಭ್ಯಾಸಮಾಡಿಕೊಂಡು ಅವುಗಳಲ್ಲಿ ಗೆದ್ದು ತಮಗೆ ಬೇಕಾದ ಕೆಲವು ಹೆಂಗಸರ/ಹುಡುಗಿಯರ ಎದುರು ಮೀಸೆ ತಿರುವಿಕೊಳ್ಳುವ ಅಪ್ಪಟ ದೇಸೀ ಗೋವಿಂದಕಲೆಯವರೂ ಇರುತ್ತಿದ್ದರು. ಬೀಡಿ ಸೇದುವುದು ಸರ್ವೇಸಾಮಾನ್ಯವಾದರೆ ಕೆಲವರು ಮೂಗನ್ನೇ ನಸ್ಯದ ಡಬ್ಬವನ್ನಾಗಿ ಮಾಡಿಕೊಳ್ಳುತ್ತಿದ್ದರು! ಅಪರೂಪಕ್ಕೊಮ್ಮೆ ಊರ ಹಬ್ಬದಲ್ಲಿ ಭಂಗೀ ಪಾನಕದ ಸಮಾರಧನೆಯಲ್ಲೂ ಇವರು ಪಾತ್ರವಹಿಸುತ್ತಿದ್ದರು.[ಹಾಗಂತ ಎಲ್ಲಾ ಶಿಕ್ಷಕರೂ ಹೀಗೇ ಎಂದು ತಪ್ಪು ತಿಳಿಯಬೇಡಿ]

ಹಳ್ಳಿಗರೂ ಅಷ್ಟೇ! ತಮ್ಮಲ್ಲಿನ ’ಕಲೆ’ಗಳನ್ನು ಕಲಿತುಕೊಂಡು ತಮ್ಮಲ್ಲಿ ಒಂದಾಗದ ಮಾಸ್ತರ ಅದೆಷ್ಟೇ ದೊಡ್ಡ ಮನುಷ್ಯನಾದರೂ ಅಲ್ಲಿಮಾತ್ರ ಮೂರು ತಿಂಗಳ ನಂತರ ಕಾಲಹಾಕಲಾಗಲೀ ಕಾಲುಹಾಕಲಾಗಲೀ ಕೊಡುತ್ತಿರಲಿಲ್ಲ! ಹೇಗೆ ತಮಿಳುನಾಡಿನ ಜನ ಅಲ್ಲಿಗೆಹೋದರೆ ತಮಿಳನ್ನು ಕಲಿತೇ ಬನ್ನಿ ಎನ್ನುತ್ತಾರೋ ಹಾಗೇ ನಮ್ಮ ಈ ಹಳ್ಳಿಗಳ ಜನ ಅವರದೇ ಆದ ಜೀವನ ಶೈಲಿಯನ್ನು ಎಲ್ಲರಿಗೂ ಹಚ್ಚುತ್ತಿದ್ದರು. ಆದರೂ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಉದಾರ ಮನೋಭಾವವನ್ನು ಹೊಂದಿದ್ದರು ಎಂಬುದು ಮಾತ್ರಇಲ್ಲಿ ಎದ್ದು ಕಾಣುವ ಅಂಶ. ಮೇಲಾಗಿ ಮುಂದುವರಿದ ನಾಗರಿಕ ಸಮಾಜ ತಮ್ಮ ಸಮಾಜದ ಅವಿಭಾಜ್ಯ ಅಂಗವಾದ ಅ ಹಳ್ಳಿಗರನ್ನು ಹಾಗೇ ’ಸತ್ತ ಗಂಟಿಯ ಮೈಮೇಲಿನ ಉಣ್ಣಿ ತೆಗೆಯದೇ ಬಿಟ್ಟಹಾಗೇ’ ಬಿಡಲು ತಯಾರಿರಲಿಲ್ಲ. ಅದಕ್ಕಾಗಿ ಆರಿಸಿ ಬಂದ ಮುಂದಾಳುಗಳು ಸರಕಾರ ನಡೆಸುವಾಗ ಶಿಕ್ಷಣ ಇಲಾಖೆ ಹಳ್ಳಿಗಳಿಗೂ ಅಷ್ಟಿಷ್ಟು ಪ್ರಾಮುಖ್ಯತೆ ಕೊಡಲೇಬೇಕಾಗಿತ್ತು. ಆಗಹುಟ್ಟಿಕೊಂಡವೇ ಈ ಏಕೋಪಾಧ್ಯಾಯ ಶಾಲೆಗಳು.

ಒಬ್ಬನೇ ಶಿಕ್ಷಕ ಬೆಳಗಿನಿಂದ ಸಂಜೆಯವರೆಗೆ ಹಲವು ತರಗತಿಗಳನ್ನು ನಡೆಸುವುದು ಇಲ್ಲಿನ ವಿಶೇಷ. ಒಂದನೇ ತರಗತಿಯಿಂದ ಕನಿಷ್ಠ ನಾಲ್ಕನೇ ತರಗತಿಯವರೆಗೆ ಬೋಧಿಸಬೇಕಾಗುತ್ತಿತ್ತು. ಗಣಿತ, ಕನ್ನಡ, ಸಮಾಜ ಪರಿಚಯ, ವಿಜ್ಞಾನ ಇತ್ಯಾದಿ ಆರುವಿಷಯಗಳಾದರೆ ದೈಹಿಕ ಶಿಕ್ಷಣ-ವ್ಯಾಯಾಮ, ನೀತಿಪಾಠ ಹೀಗೇ ಹಲವು ಸಂಗತಿಗಳನ್ನು ಬೋಧಿಸುವ ’ಸಕಲಕಲಾವಲ್ಲಭ’ ರಾಗಿರಬೇಕಾಗಿತ್ತು ಅಲ್ಲಿನ ಮಾಸ್ತರು. ಆಂಗ್ಲ ಭಾಷೆಯ ಪದಗಳು ಬಂದರೆ ಅರ್ಥಕ್ಕಾಗಿ ’ಗೈಡು’ ಹಿಡಿದು ಒದ್ದಾಡುವುದು ಸದಾಕಾಲ ಕಾಣುತ್ತಿತ್ತು. ಗಣಿತದಲ್ಲಿ ತಪ್ಪುಗಳನ್ನು ಮಾಡುತ್ತಿದ್ದರೂ ಮಕ್ಕಳಿಗೆ ಅದೇ ಸತ್ಯವೆಂಬಂತೇ ಭಾಸವಾಗುತ್ತಿತ್ತು! ಇವತ್ತಿಗೂ ನೀವು ನಿಮ್ಮ ಮಕ್ಕಳನ್ನು ಕೇಳಿ-ಮಿಸ್ ಹೇಳಿದ್ದೇ ಪಾಠ; ಅದೇ ಸತ್ಯ! ಮಕ್ಕಳ ಮನಸ್ಸು ಅಂತಹ ಮುಗ್ಧ.

ಇಂತಹ ಶಾಲೆಗಳಲ್ಲಿ ಕಸಗುಡಿಸುವುದು, ನೆಲದಮೇಲೆ ಕೂರಲು ಮರದ ಹಲಗೆಗಳಿದ್ದರೆ ಅವುಗಳನ್ನು ಜೋಡಿಸುವುದು ಎಲ್ಲಾ ಮಕ್ಕಳೇ. ಕರಿಹಲಗೆಯನ್ನು ಅದು ಹೇಗೋ ಇಲಾಖೆಯ ಜನ ಕಳುಹಿಸುತ್ತಿದ್ದರು. ಸುಣ್ಣದ ಕಡ್ಡಿ[ಚಾಕ್ ಪೀಸ್]ಯನ್ನು ಮಾಸ್ತರು ದೂರದ ಪಟ್ಟಣದಿಂದ ತರಬೇಕಾಗುತ್ತಿತ್ತು. ’ಜಾಕ್ ಅಫ್ ಆಲ್ ಮಾಸ್ಟರ್ ಆಫ್ ನನ್’ ಆದ ಆ ಮಾಸ್ತರು ತಮಗೆ ತೆರಪುಳ್ಳ ಸಮಯದಲ್ಲಿ ಶಾಲೆಗೆ ಬರುತ್ತಿದ್ದರು. ಅವರಿಗೆ ಪುರುಸೊತ್ತಿಲ್ಲದಿದ್ದರೆ " ಮಕ್ಕಳೇ ನಿಮಗೆ ನಾಳೆಯಿಂದ ರಜಾ ಇರುತ್ತದೆ, ಶಾಲೆ ಆರಂಭಿಸಿದಾಗ ಗಂಟೆ ಬಾರಿಸುತ್ತೇನೆ ಬಂದುಬಿಡಿ" ಎಂದು ಕಳಿಸುತ್ತಿದ್ದರು. ತಮ್ಮ ಊರಿಗೆ ಹಬ್ಬಕ್ಕೋ ಹುಣ್ಣಿಮೆಗೋ ತೆರಳುವ ಶಿಕ್ಷಕರು ವಾರಗಟ್ಟಲೆ ಬರುತ್ತಿರಲಿಲ್ಲ. ಬಂದಮೇಲೆ ಲೋಹದ ತುಂಡೊಂದನ್ನು ಬಡಿದಾಗ ಊರ ಜನ ಮಕ್ಕಳಿಗೆ ಮಾಸ್ತರು ಬಂದಿರುವುದಾಗಿ ತಿಳಿಸುತ್ತಿದ್ದರು. ಊರಲ್ಲೂ ಇದಕ್ಕೆ ಯಾರದೇ ಅಕ್ಷೇಪಣೆ ಇರುತ್ತಿರಲಿಲ್ಲ!

ಇಂತಹ ಶಾಲೆಗಳಲ್ಲಿ ಕಲಿತರೂ ಮುಂದೆ ಹಲವೆಡೆ ವಾರಾನ್ನದಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆಯ ನಾಗರಿಕರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿದ್ದಾರೆ ಎಂಬುದು ಗುರುತಿಸಬೇಕಾದ ವಿಷಯ. ಆದರೆ ಅಂದಿನ ಆ ದಿನಗಳಲ್ಲಿ ತಮಗೇ ಬಾರದ ವಿಷಯಗಳನ್ನೂ ಕಲಿಸುತ್ತಿದ್ದ ಆ ಮಾಸ್ತರುಗಳು ಯಾವುದೋ ಸಣ್ಣ-ಪುಟ್ಟ ತಪ್ಪಿಗೆ ವಿದ್ಯಾರ್ಥಿಗಳನ್ನು ಮನಬಂದಂತೇ ಥಳಿಸುತ್ತಿದ್ದರು, ಶಿಕ್ಷಿಸುತ್ತಿದ್ದರು. ಶಿಕ್ಷಕ ನಾಕು ಬಾರಿಸಿದ ಎಂದರೆ ಮಗನಿಗೆ ವಿದ್ಯೆ ಚೆನ್ನಾಗಿ ಬರುತ್ತದೆ ಎಂಬ ಭಾವನೆಯಿಂದ ಪಾಲಕರು ಯಾರೂ ಏನನ್ನೂ ಹೇಳುತ್ತಿರಲಿಲ್ಲ. ಬದಲಾಗಿ ಆಗಾಗ ಶಿಕ್ಷೆ ನೀಡದಿದ್ದರೆ " ಈ ಮಾಸ್ತರ ಏನೂ ಪ್ರಯೋಜನ ಇದ್ದಾಂಗಿಲ್ಲ" ಎಂಬ ನಿರ್ಧಾರಕ್ಕೆ ಬಂದು ಬಿಡುತಿದ್ದರು.

ಯಾರದೋ ಮೇಲಿನ ಸಿಟ್ಟಿಗೆ ತಮಗೆ ಮಾಸ್ತರು ಕೊಡುವ ಶಿಕ್ಷೆಗಳನ್ನೂ ಅವರ ಸರ್ವಾಭರಣ ಸೇವೆಯನ್ನೂ ವರ್ಣಿಸಿ ನೊಂದ ಕೆಲವುಮಕ್ಕಳು ಹಾಡೊಂದನ್ನು ಗುನುಗುತ್ತಿದ್ದರು. ’ವಂದೇ ಮಾತರಂ’ ರಾಗದಲ್ಲಿ ಹುಡುಗರು ಹಾಡುತ್ತಿದ್ದ ಈ ಹಾಡಿನೊಂದಿಗೆ ಅಂತಹ ಮಾಸ್ತರುಗಳನ್ನು ನೆನೆಸಿಕೊಳ್ಳೋಣ ಬನ್ನಿ --

ಒಂದೇ ಮಾಸ್ತರಂ ಒಂದೇ ಮಾಸ್ತರಂ
ಹೊಡಿತಾಂ ಬಡಿತಾಂ ಮಕ್ಳ ಜೀವ ಹಿಡ್ಕ ತಿಂತಾಂ
ನಿತ್ಯ ಅದೇ ಕಥೆಂ ಮಾಸ್ತರಂ ಒಂದೇ ಮಾಸ್ತರಂ

ಮೂವತ್ತು ಮಾರ್ಕಿನ ಬೀಡಿ ಕೈಯ್ಯಲೀಂ
ಮಕ್ಕಳನಾಚೆಗೆ ಅಟ್ಟುತ ಸೇದುವಂ !
’ಸುವಾಸನೇಂ’! ಹೊಗೆಬಿಡುತಿದ್ದನಂ !
ಕುಳ್ಳಗೆ ಇದ್ದರೂ ಮಹಾ ಪರಾಕ್ರಮಿಂ
ಮಾಸ್ತರಂ ! ಒಂದೇ ಮಾಸ್ತರಂ

ಇಸ್ಪೀಟಾಟಕೆ ತಕ್ಷಣ ಹಾಜರುಂ
ಕಾಯ್‍ಯಾಪಾರದಿ ನಿಪುಣಾಗ್ರೇಸರಂ
ಹೋದಲ್ಲೆಲ್ಲಾಂ-ಒಂಥರ ವಾಸನೇಂ !
ಆ ಜಮದಗ್ನಿಯ ಎಡವಟ್ಟಲಿ ಜನಿಸಿದಂ
ಮಾಸ್ತರಂ ! ಒಂದೇ ಮಾಸ್ತರಂ

ಮೂಲಂಗಿ ಪ್ಯಾಂಟಿಗೆ ನೀರು ತಾಗಿಲ್ಲವಂ
ಅಂಗಿಗೆ ಅದು ಬೇಕಾಗಿಲ್ಲವಂ !
ತಿಂಗಳಿಗೊಮ್ಮೆ-ತೊಳೆದರೆ ಜಾಸ್ತಿಯುಂ !
ಕೊಳಕರಲ್ಲಿಯೇ ಕೊಳಕ ಶಿಖಾಮಣೀಂ
ಮಾಸ್ತರಂ ! ಒಂದೇ ಮಾಸ್ತರಂ

ಇದು ಕೇವಲ ತಮಾಷೆಗಾಗಿ, ಉತ್ತಮ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿದ್ದಾರೆ, ಆದರೆ ಆಗಾಗ ಕಾಮುಕರು, ಬ್ರಷ್ಟಾಚಾರಿಗಳು ವಿಶ್ವವಿದ್ಯಾನಿಲಯಗಳವರೆಗೂ ಹಬ್ಬಿದ್ದಾರೆ ಎಂಬ ಸುದ್ದಿ ಬರುತ್ತಿರುತ್ತದೆ. ದಯವಿಟ್ಟು ಆದರ್ಶ ಶಿಕ್ಷಕರು ಇದನ್ನು ಓದಿ ಮನನೋಯುವುದು ಬೇಡ, ಉತ್ತಮ ಶಿಕ್ಷಕರಿಗೆ ಸದಾ ನಮ್ಮ ವಂದನೆಗಳು ಸಲ್ಲುತ್ತವೆ, ಸ್ವಸ್ಥ ಸಮಾಜದ ನಿರ್ಮಾಣ-ನಿರ್ವಹಣೆಯಲ್ಲಿ ಅವರ ಪಾತ್ರ ಹಿರಿದು, ಅಂತಹ ಗುರುಸದೃಶರಿಗೆ ಇನ್ನೊಮ್ಮೆ ಅಭಿನಂದನೆಗಳು, ನಮಸ್ಕಾರ.


Saturday, June 18, 2011

ಬರೇರಾಮ !


ಬರೇರಾಮ !

ಬರೇರಾಮ ಎಂಬುದು ತಾಜಾ ಹೆಸರು. ಎಲ್ಲದರಲ್ಲೂ ನವನಾವೀನ್ಯತೆ ಬಯಸುವ ನವಪೀಳಿಗೆಯ ಜನೆತೆಗೆ ನಾನೂ ಏನಾದರೂ ಕೊಡುಗೆಯಾಗಿ ನೀಡಬೇಕೆಂಬ ಪೈಪೋಟಿಯಿಂದ ನೀಡಿದ ಹೆಸರು! ರಾಮನ ಹೆಸರಿಗೆ ಜೊತೆಗೆ ಏನೇನನ್ನೋ ಸೇರಿಸಿಕೊಂಡು ಹೊಸದನ್ನು ಕಂಡ ಜನ ನಮ್ಮವರು. ಹಳದೀರಾಮ ಎಲ್ಲರಿಗೂ ಕುಚ್ ಕಟ್ಟಾ- ಕುಚ್ ಮೀಟಾ ಸಿಹಿ ಹಂಚುತ್ತಾನಾದರೆ ಗಂಗಾರಾಮ ಬೆಂಗಳೂರಿಗರಿಗೆ ಸಿಂಹಸ್ವಪ್ನ! ಮಂಗಾರಾಮ ಹಿಂದೊಮ್ಮೆ ಬಿಸ್ಕತ್ತುಗಳನ್ನೂ ವೇಫರ್ಸ್‍ಗಳನ್ನೂ ತಯಾರಿಸುತ್ತಿದ್ದ. ಶ್ರೀರಾಮ ಚಿಟ್‍ಫಂಡ್ ನಡೆಸುತ್ತಾನೆಂಬ ಮಾತ್ರಕ್ಕೆ ಈತ ತ್ರೇತಾಯುಗದವನಲ್ಲ! ಇನ್ನುಳಿದಂತೇ ಜಲರಾಮ, ಬಲರಾಮ, ಗಣೇಶರಾಮ, ಮುಕುಂದ್‍ರಾಮ, ಅನಂತ್‍ರಾಮ, ಆನಂದ್‍ರಾಮ, ಲಕ್ಷ್ಮೀರಾಮ, ತುಳಸೀರಾಮ, ಸುಬ್ಬರಾಮ, ಗೋವಿಂದ್‍ರಾಮ, ವಿನಾಯಕರಾಮ, ಸಿದ್ಧರಾಮ!

ಅಯ್ಯಯ್ಯಯ್ಯೋ ಹರೇರಾಮ!

ಹಳೆಯ ಹಾಡುಗಳಿಗೆ ಫ್ಯುಶನ್ ಮ್ಯೂಸಿಕ್ ಜೋಡಿಸಿ ಮಜಾ ಪಡೆದಂತೇ ಈ ನಮ್ಮ ಹೊಸ ಪೀಳಿಗೆಯ ಹೈಕಳು ರಾಮನ ಹೆಸರಿಗೆ ಮುಂಭಡ್ತಿ ಕೊಟ್ಟು ಹಲವು ಸಾವಿರ ’ರಾಮಗಳೇ’ ಸೃಷ್ಟಿಯಾಗಿವೆ. ಇನ್ನು ಅತ್ತಕಡೆ ಹೊರಟರೆ ರಾಮಕೃಷ್ಣ, ರಾಮನಾರಾಯಣ, ರಾಮಗೋಪಾಲ, ರಾಮಚೈತನ್ಯ, ರಾಮೇಶ್ವರ, ರಾಮಪ್ರಸಾದ, ರಾಮಮಾಧವ ಅಂತೂ ಮುಗಿಯದ ಕಥೆ!

ರಾಮನಕಥೆಯಯನ್ನಾದರೂ ಹೇಳಿ ಮುಗಿಸಿಬಿಡಬಹುದು ಆದರೆ ರಾಮನಿಗಂಟಿದ ಈ ನಾಮದ ಮಹಿಮೆಯನ್ನು ಮುಗಿಸಲು ಮನುಷ್ಯಮಾತ್ರರಿಂದ ಸಾಧ್ಯವಿಲ್ಲವೇನೋ. ಯಾಕೆಂದರೆ ರಾಮನನ್ನು ಹಿಂದಕ್ಕೋ ಮುಂದಕ್ಕೋ ನಡುವೆಯೋ ಸೇರಿಸಿ ಇನ್ನೂ ಅದೆಷ್ಟೋ ಹೆಸರುಗಳು ಬರಬಹುದಾಗಿದೆ. ರಸ್ತೆಯಲ್ಲಿನಡೆದು ಹೋಗುತ್ತಿದ್ದಾಗ ’ಮಲಬಾರದವರ ಹೋಟೆಲ’ ಕಣ್ಣಿಗೆ ಬಿತ್ತು. ಉತ್ತರಕರ್ನಾಟಕದ ಕಡೆ ಒಮ್ಮೆ ಹೊರಟರೆ ಹಲವಾರು ಈ ರೀತಿಯ ಹೆಸರುಗಳೂ ಸಿಗುತ್ತವೆ. ’ಏಟಿಯಮ್ಮ’ ಇತ್ತೀಚೆಗೆ ಸೇರ್ಪಡೆಗೊಂಡ ಹೊಸ ಹೆಸರು. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ’ಮಿಲ್ಕ ಭೂತ’, ’ಊರ್ವಶಿ ಅರವಿ ಶಾಪ’ , ’ಮಧುರಾಜ ಕಟ್ಟಿಂಗ ಶಾಪ’,’ಸುಧೀರ ಪಾನ ಬೀಡಿ ಸ್ಟಾಲ’, ’ದಂಡಗುಂಡ ಬಸವೇಶ್ವರ ಮೆಸ್ಸ’, ’ಮೆಣಸಿನಕಾಯಿ ಬ್ರದರ್ಸ’........ಓಹೊಹೊಹೊ ಮುಗೀವಲ್ದು ಬಿಡ್ರೀಯಪಾ!

ಹೆಸರಿನ ಕೊಡುಗೆಯಲ್ಲಿ ಮಲಬಾರದವರದ್ದೇ ನಿಚ್ಚಳ ಬಹುಮತ! ಯಾಕೆಗೊತ್ತೋ ಅಲ್ಲಿ ಅಪ್ಪನ ಒಂದು ಕಾಲು ಮುರಿದು ಅಮ್ಮನ ಕೈಮುರಿದು ಸೇರಿಸಿದರೆ ಬಿಸಿಬಿಸಿ ಹೊಸಾಹೆಸರು ಸಿದ್ಧ! ಇದೇನ್ರೀ ಅಲ್ಲಿ ಅಪ್ಪಂದೂ ಅಮ್ಮಂದೂ ಕೈಕಾಲು ಮುರೀತಾರಾ ಅಂದ್ರಾ ? ನಾ ಹಾಗೇನೂ ಹೇಳ್ಲಿಲ್ಲಾ ಸ್ವಾಮೀ ಅಪ್ಪ-ಅಮ್ಮನ ಹೆಸರಿನ ಒಂದೊಂದು ಭಾಗವನ್ನು ಸೇರಿಸಿ ಎಂದು ಪರ್ಯಾಯವಾಗಿ ಹೇಳಿದೆನಷ್ಟೇ. ಉದಾಹರಣೆಗೆ ಅಪ್ಪನ ಹೆಸರು ಅಜಿತ್ ಮತ್ತು ಅಮ್ಮನ ಹೆಸರು ಸಜಿತಾ ಎಂದಿದ್ದರೆ ಮಗ ’ಅಜಿಸಜಿ’ ಆಗಬಹುದು! ಆಮೇಲೆ ಮುಂದಕ್ಕೆ ಮೋನು ಸೇರಿಸಿಬಿಟ್ಟರೆ ನಾವು ಆಂಧ್ರದಲ್ಲೋ ಕನ್ನಡದಲ್ಲೋ ’ಬಾಬು’ ಎಂದಹಾಗೇ. ಅಜಿಸಜಿ ಮೋನು - ಅಹಹ ಎಂಥಾ ಅದ್ಭುತ ಹೆಸರು. ಮಲಬಾರದವರು ಹೆಸರಿಡುವ ವಿಷಯದಲ್ಲಿ ತಲೆಕೆಡಿಸಿಕೊಳ್ಳುವ ಜನ ಅಲ್ಲ. ಹೀಗಾಗಿ ಇವರಲ್ಲಿ ಭಿನ್ನಮತವಂತೂ ಸದ್ಯಕ್ಕಿಲ್ಲ ಬಿಡಿ!

ಕರ್ನಾಟಕ ಸಂಗೀತದ ಅಭಿಮಾನೀ ಪಂಡಿತರೊಬ್ಬರು ತಮ್ಮ ಹೆಣ್ಣು ಮಕ್ಕಳಿಬ್ಬರಿಗೆ ಹೆಸರಿಟ್ಟರಂತೆ ಏನುಗೊತ್ತೋ? ’ಪೂರ್ಣಚಂದ್ರಿಕಾ ಸುಹಾಸಿನೀ’, ’ರಮ್ಯಸಾರಿಕಾ ಸುಭಾಷಿಣೀ’. ದಿನವೂ ಕರೆಯುವುದು ಎಷ್ಟು ಸುಲಭ ನೋಡಿ. ಹಾಗೆನೋಡಿದರೆ ನಮ್ಮಲ್ಲಿ ಪೂರ್ಣಚಂದ್ರ ತೇಜಸ್ವಿಗಳಿರಲಿಲ್ಲವೇ? ಆದರೆ ಆ ಹೆಸರಿನ ಆದಿಭಾಗವನ್ನು ಬಿಟ್ಟು ಅಂತ್ಯಭಾಗವನ್ನು ಮಾತ್ರ ಜನ ಕರೆಯತೊಡಗಿದ್ದರು ಮತ್ತು ಜನರಿಗೆ ಆ ವ್ಯಕ್ತಿ ಈ ಹೆಸರಿಂದಲೇ ಗೊತ್ತೇ ಹೊರತು ಪೂರ್ಣವಾಗಿ ಹೇಳಿದರೂ " ಹಾಗಂದ್ರೆ ಯಾರು ? " ಎಂದು ಪ್ರಶ್ನಿಸಿದರೂ ತಪ್ಪಿಲ್ಲ!

ಇನ್ನು ಹೆಸರಿಗೂ ವ್ಯಕ್ತಿತ್ವಕ್ಕೂ ಅತ್ಯಂತ ಸಾಮೀಪ್ಯವುಳ್ಳ ಸಂಗ್ತಿ ಹೇಳ್ಲೇ ಬೆಕಲ್ಲ? ಕೂದಲು ಅತಿ ಕಮ್ಮಿ ಇದ್ದ ಕಾಕಮಂಡೆಯವಳಿಗೆ-ನಾಗವೇಣಿ, ಬಿಳಿಗೂದಲು ತಲೆತುಂಬಾ ಇರುವವಳಿಗೆ ಕೃಷ್ಣವೇಣಿ, ಎಲ್‍ಎಲ್‍ಟಿಟಿ [ಲುಕಿಂಗ್ ಟು ಲಂಡನ್ ಟಾಕಿಂಗ್ ಟು ಟೋಕಿಯೋ !-ಅಂದರೆ ಮಾಲಗಣ್ಣು ಅಥವಾ ಮಳ್ಳೆಗಣ್ಣು ಎನ್ನುತ್ತೇವಲ್ಲ ಅಂಥವರಿಗಾಗಿ ಯಾರೋ ಹೊಸೆದಿದ್ದು ] ಹುಡುಗಿಗೆ ಮೀನಾಕ್ಷಿ, ಕಣ್ಣುಗುಡ್ಡೆ ಹೊರಬರುಷ್ಟು ದೊಡ್ಡ ಕಣ್ಣವಳಿಗೆ ಕಮಲಾಕ್ಷಿ,ಈಗ ಸಾಯುತ್ತಾನೋ ಆಗಸಾಯುತ್ತಾನೋ ಅಂಥಿರುವವನಿಗೆ ಬಲರಾಮ, ೨೪/೭ ಎಣ್ಣೆಯನ್ನು ಧರಿಸಿದವನಿಗೆ ಕೌಶಿಕ್, ಏನೂ ಕೆಲಸಮಾಡದ ಸೋಮಾರಿಗೆ ದಕ್ಷ, ತೊಳೆದಿಟ್ಟ ಕೆಂಡದಂತಿರುವ ಜನಕ್ಕೆ ಸುಂದರ, ಮುಖದಲ್ಲಿ ಕಪ್ಪು ಕಲೆಯುಳ್ಳವಳಿಗೆ ಚಂದ್ರಕಲಾ, ಬಡತನವೇ ಹಾಸುಹೊಕ್ಕಾಗಿರುವ ಭಿಕಾರಿಗೆ ಕುಬೇರ, ಕೆಜಿ ಭಾರ ಎತ್ತಲೂ ಹರಿಯದವಗೆ ಭೀಮಸೇನ, ರಾವಣನ ರೋಮಕ್ಕೂ ಲೆಕ್ಕಸಿಗದ ವ್ಯಕ್ತಿಗೆ ಲಂಕೇಶ ....ಇವೆಲ್ಲಾ ಸರ್ವೇಸಾಮಾನ್ಯ.

ನೀವೂ ತಕರಾರು ಮಾಡಬಹುದು: "ಇಟ್ಕೊಳ್ತಾರೆ ಬಿಡ್ರೀ ಇನ್ನೇನು ಇವಾನ, ಥಾಮಸ್ಸು, ಪಿಂಟೋ ಅಂತ ಎಲ್ರೂ ಅಮೇರಿಕಾ ಹೆಸರುಗಳ ಥರದಲ್ಲೇ ಇಟ್ಕೊಳಕಾಗುತ್ತಾ. ಏನೋ ಅವರು ತೋರಿಸಿದ ಜೀವನ ಶೈಲಿಯೇನೋ ಇಷ್ಟವಾಯ್ತಪ್ಪಾ ಅಂದಮಾತ್ರಕ್ಕೆ ನಾವೆಲ್ಲಾ ಭಾರತೀಯರಲ್ಲವೇ ? " ಅನುಕೂಲವಾದ ಹಾಗೇ ಬಳಸುವುದು ಸೂಕ್ತ ಬಿಡಿ. ಬಿಪಾಶಾ [ಬಿಚ್ಹಾಕೋ ಬಸು] ನಾತಾಶಾ ಹತಾಶಾ ಮಲ್ಲಿಕಾ ಶೇರ್ಯಾವತ್ತು ಎಲ್ಲಾ ಇಲ್ಲವೇ ? ರವೀ-ನಾ ಕರೀ-ನಾ ಕತ್ರೀ-ನಾ ಇಲ್ಲವೇ? ಕಂಗನಾ ರನ್ನೌಟು ಇಲ್ಲವೇ ? ದೇವರಿಗೂ ಕೈಲಿ ಗನ್ನು ಕೊಟ್ಟು ’ದೇವಗನ್’ ಮಾಡಿಲ್ಲವೇ? ದೆವ್ವದ ಹಾಗೇ ಇರುವ ’ದೇವಳ್’ ಇಲ್ಲವೇ ? "ಮಿನಿಷಾ ಲಾಂಬ ಕೂಕಣಿ ಕಾಂಬ " ಅಂತಾರೆ ನಮ್ಮ ಕುಂದಾಪ್ರ ಪಡ್ಡೆಗ್ಳು.

ಇನ್ನು ಅನ್ವರ್ಥಕವಾಗಿ ಬಂದ ಹೆಸರುಗಳಿಗೆ ನಾವು ಶರಣೆನ್ನಲೇಬೇಕು. ಕೇಬಲ್ ಪರಮೇಶಿ, ಬ್ಯಾಟರಿಬ್ರಹ್ಮ, ಕಳ್ ಮಂಜ, ಲೂಸ್ ಮಾದ, ಬೆಂಕಿ ಮಾದೇವು, ಸ್ನೇಕ್ ಸೋಮಣ್ಣ, ಮುದ್ದೆ ದ್ಯಾವು, ಟ್ಯಾಂಕರ್ ಸೀನಪ್ಪ, ಪೇಪರ್ ಲಕ್ಷ್ಮಣು, ಫೊಟೋ ಗುರುರಾಜ, ದೇವಸ್ಥಾನ ಮಲ್ಲೇಶಿ, ಕಂಬದ ಮುಂಡಿಗೆ ಮಾಧವ, ತಪರಾಕಿ ರಾಮಣ್ಣ , ಫಿರಂಗಿ ಚಂದ್ರು , ಬಿಜೆಪಿ ಶಾಂತಣ್ಣ, ದಳ ಬಂಡೆಪ್ಪ, ಕೈ ಕೃಷ್ಣಪ್ಪ [ ಈ ಪೈಕಿ ಕೊನೆಯ ಮೂರು ಹೆಸರು ಪರ್ಮನೆಂಟ್ ಅಲ್ಲಾ ಎಂಬುದು ಕುದುರೆ ವ್ಯಾಪಾರ ತಜ್ಞರು ಹೇಳುವ ಮಾತು !] ಇವೆಲ್ಲಾ ಅವರವರ ವೃತ್ತಿಗೋ ಹವ್ಯಾಸಕ್ಕೋ ಅಥವಾ ಇನ್ಯಾವುದಕ್ಕೋ ಸಂಬಂಧಿಸಿದಂತೇ ರೂಢಮೂಲವಾಗಿ ಬಂದಿರುವುದರಿಂದ ಅವುಗಳ ಬಗ್ಗೆ ಅಪದ್ಧವಾಗಿ ಏನಾದರೂ ಹೇಳಿದರೆ ಅಪಚಾರವಾದೀತು ಶಾಂತಂ ಪಾಪಂ ಶಾಂತಂ ಪಾಪಂ .

ಇನ್ನು ಹೆಸರನ್ನು ಹುಡುಕಿಕೊಡೋ ಸಲಹೆಗಾರರೂ ಇದ್ದಾರೆ ! ಆಧಾರವೇ ಇಲ್ಲದ ’ಸಂಖ್ಯಾಶಾಸ್ತ್ರ’ವೆಂಬ ಮರ್ಕಟಶಾಸ್ತ್ರವೊಂದರ ಆಧಾರದಮೇಲೆ ಹೆಸರು ಬದಲಾವಣೆಗೂ ಸಲಹೆ ಸಿಗುತ್ತದೆ. ಹೆಸರಿನ ಮೇಲೆ ಅವಲಂಬಿಸಿ ತಿರುಪತಿಗೆ ಕರೆದುಕೊಂಡು ಹೋಗಿ ಮರುಮಾಂಗಲ್ಯಧಾರಣೆ ಮಾಡಿಸುವ ಜೈಶ್ರೀನಿವಾಸನ್ ಇದ್ದಾರೆ! ಮೂರುನಾಮದ ವೆಂಕಟರಮಣ ಸ್ವಾಮೀ ಗೋವಿಂದಾ ಗೋವಿಂದ! ಹರೇ ಶ್ರೀನಿವಾಸ, ಎಷ್ಟು ಶ್ರೀನಿವಾಸರು ಇಲ್ಲಿ ಸೀನನೋ ಸೀನುವೋ ಆಗಿಲ್ಲ? ಇದು ಎಂಥಾ ಅದ್ಭುತ ಲೋಕವಯ್ಯಾ! ನಿಮಗೆ ಯಾವ ಬಜೆಟ್ ನಲ್ಲಿ ಹೆಸರುಬೇಕು ಹೇಳಿ! ಕೆಂಪೇಗೌಡರು ಕಟ್ಟಿದ ಈ ನಿಮ್ಮ ಬೆಂಗಳೂರಿನಲ್ಲಿ ಎಲ್ಲವೂ ಲಭ್ಯ; ಎಲ್ಲವೂ ಒಂದೇ ಸೂರಿನಡಿಯಲ್ಲಿ! ಕಾಂಚಾಣಂ ಕಾರ್ಯಸಿದ್ಧಿಃ !

ಅಂತೂ ರಾಮಾ ನಿನ್ನ ನಾಮದಿಂದ ಹೊರಟ ಈ ’ರಾಮಾಯಣ’ ಅಭಿಯಾನ ನಡೆಯುತ್ತಿರುವಾಗಲೇ ಶಿವಪೂಜೆಯಲ್ಲಿ ಕರಡಿ ಬಂದಹಾಗೇ ಹಳದೀರಾಮನ ಸೋನ್ ಪಾಪಡಿ ಬಂತು! ಹರೇರಾಮ....ಅಲ್ಲಲ್ಲ... ಬರೇರಾಮ!

Wednesday, June 15, 2011

ನಮ್ಮ ಸುಖ ರೈತನ ಮುಖದ ನಗುವಿನಲ್ಲಡಗಿದೆ !


ನಮ್ಮ ಸುಖ ರೈತನ ಮುಖದ ನಗುವಿನಲ್ಲಡಗಿದೆ !

ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಸುಖದೇವ ಎಂಬೊಬ್ಬ ರೈತನಿದ್ದ. ಹಳ್ಳಿಯಲ್ಲಿ ಹೊಲಗದ್ದೆಗಳಲ್ಲಿ ಬೇಕುಬೇಕಾದ ಬೆಳೆಗಳನ್ನು ಬೆಳೆದು ಸಮೃದ್ಧಿಯಿಂದಿದ್ದ. ಸುಖದೇವನಿಗೊಬ್ಬ ತಮ್ಮ ಸಹದೇವ. ಬೆಳೆದು ದೊಡ್ಡವರಾದ ಅಣ್ಣ-ತಮ್ಮಂದಿರಿಗೆ ಅವರ ಪಾಲಕರು ಮದುವೆಮಾಡಿದರು. ಮದುವೆಯವರೆಗೆ ಪ್ರೀತಿಯಿಂದ ಉಳುಮೆಯೇ ದೇವರೆಂದು ನಂಬಿ ಬದುಕಿದ್ದ ಆ ಜನ ಲಗ್ನದ ನಂತರದ ದಿನಗಳಲ್ಲಿ ಮಾಡುವ ಕೆಲಸಗಳನ್ನು ಪಾಲು ಹಂಚಿಕೊಂಡರು. ಅದರಲ್ಲೂ ಅವರಿಗೆ ತೃಪ್ತಿ ಸಿಗಲಿಲ್ಲ. ಅಣ್ಣನ ಹೆಂಡತಿ ಮತ್ತು ತಮ್ಮನ ಹೆಂಡತಿ ನಡುವೆ ಈಗೀಗ ಕಿತ್ತಾಟ ಶುರುವಾಗಿತ್ತು. ದಿನವೂ ಜಗಳ ಮನಸ್ತಾಪ ಜಾಸ್ತಿಯಾಗುತ್ತಾ ನಡೆದಿತ್ತು. ಮುಪ್ಪಿನ ಪಾಲಕರು ಜಗಳ ಬಗೆಹರಿಸುತ್ತಲೇ ಇದ್ದು ಕಾಲಾನಂತರ ಕಾಲವಾದರು.

ಅಲ್ಲಿಯವರೆಗೂ ಹೇಗೋ ಸಹಿಸಿಕೊಂಡಿದ್ದ ಅಣ್ಣ-ತಮ್ಮ ಪಾಲಕರು ಗತಿಸಿದ ಮರುದಿನವೇ ಇರುವ ಚಿಕ್ಕ ಜಮೀನನ್ನು ಪಾಲುಮಾಡಿಕೊಳ್ಳಲು ಊರ ಮುಖಂಡರ ಮೊರೆಹೋದರು. ಪಂಚಾಯ್ತಿಯಲ್ಲಿ ಜಮೀನು ಇಬ್ಭಾಗವಾಯಿತು. ಇಬ್ಬರೂ ಸಣ್ಣ ಹಿಡುವಳಿದಾರರಾದರು. ಮಕ್ಕಳು ಜನಿಸಿ ಅದಾಗಲೇ ದೊಡ್ಡವರಾಗುತ್ತಿದ್ದರು. ತಮ್ಮ ಮನೆಯಲ್ಲಿ ನಡೆಯುವ ಜಗಳಗಳನ್ನು ನೋಡಿ ಅವರು ರೋಸಿ ಹೋಗಿದ್ದರು. ಹೇಗಾದರೂ ಮಾಡಿ ಇದರಿಂದ ಪಾರಾಗಬೇಕೆಂದು ಬಯಸುತ್ತಿದ್ದರು. ಆಗ ಅವರಿಗೆ ಅನಿಸಿದ್ದು ಸರಕಾರೀ ಉದ್ಯೋಗ ಹಿಡಿದರೆ ಇದು ಸಾಧ್ಯ ಎಂಬುದಾಗಿ. ಅದಕ್ಕಾಗಿ ಹೆಚ್ಚಿನ ವ್ಯಾಸಂಗದ ಅವಶ್ಯಕತೆಯಿತ್ತು. ಹಳ್ಳಿಯ ಹುಡುಗರು ಪಟ್ಟಣಕ್ಕೆ ಬಂದರು. ಇವರ ಪಾಲಕರಾದ ಸುಖದೇವ ಮತ್ತು ಸಹದೇವಂದಿರು ಸಾಲಮಾಡಿ ಮಕ್ಕಳನ್ನು ಓದಿಸಿದರು. ಓದಿದ ಮಕ್ಕಳಿಗೆ ಸರಕಾರೀ ನೌಕರಿಯೂ ದಕ್ಕಿತು. ಓದದೇ ಉಳಿದ ಅವರ ಸಹೋದರರು ಊರಲ್ಲಿ ಹಾಗೇ ಉಳಿದರು. ಓದಿ ಉದ್ಯೋಗ ಹಿಡಿದ ಈ ಜನವೂ ಊರಲ್ಲಿ ತಮ್ಮ ಸಹೋದರರಿಗೆ ಸಿಗುವ ಜಮೀನಿನಲ್ಲಿ ಪಾಲುಕೇಳಿದರು. ಓದಿದ ಮನೆಯ ಸಾಲ ಇನ್ನೂ ಬಾಕಿ ಉಳಿದಿತ್ತು. ಇರುವ ಜಮೀನಿನ ಆದಾಯ ಕುಟುಂಬದ ಖರ್ಚಿಗೂ ಮಿಕ್ಕಿ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಇನ್ನು ಕಾಯಿಲೆ-ಕಸಾಲೆಯಾದರೋ ದೇವರೇ ಗತಿ!

ಜಾಗತೀಕರಣದಿಂದ ನಗರಗಳಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾದವು. ನಿಯತಕಾಲಿಕಗಳಲ್ಲಿ ಉದ್ಯೋಗ ಸಂಬಂಧೀ ಜಾಹೀರಾತುಗಳೂ ಹೆಚ್ಚಾಗತೊಡಗಿದವು. ಉತ್ತು ಬಿತ್ತು ಬೆಳೆದರೂ ಸಕಾಲಕ್ಕೆ ಸರಿಯಾದ ಬೆಳೆಯೂ-ಬೆಲೆಯೂ ಸಿಗುವುದು ದುಸ್ತರವಾಗಿ ಕಾಣಿಸುತ್ತಿತ್ತು. ಸರಿಯಾದ ಸಮಯದಲ್ಲಿ ಬೀಜಗಳು, ಗೊಬ್ಬರಗಳು ಸಿಗುತ್ತಿರಲಿಲ್ಲ. ಬೇಸಿಗೆಯಲ್ಲಿ ನೀರಿನ ಅಗಾಧ ಕೊರತೆ ಕಾಡುತ್ತಿತ್ತು. ಒಂದೇ ಬೆಳೆಯನ್ನು ನಂಬಿದರೆ ಬದುಕುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ ಇವರು ಮಿಶ್ರಬೆಳೆಗಳನ್ನು ಬೆಳೆದರು. ಆದರೂ ಬರುವ ಆದಾಯ ತುತ್ತಿನ ಚೀಲಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನೂ ಹೊಂದಿಸಿಕೊಳ್ಳುವಲ್ಲಿ ಮತ್ತೆ ಸಾಲವನ್ನು ಎತ್ತುವಂತೇ ಮಾಡುತ್ತಿತ್ತು.

ತಮ್ಮ ಈ ಸ್ಥಿತಿಯನ್ನು ಸ್ವಲ್ಪವೇ ಓದಿದ ಹಳ್ಳಿಯಲ್ಲಿರುವ ಮಿಕ್ಕುಳಿದ ಮಕ್ಕಳೂ ಅರಿತರು. ಅವರಿಗೂ ಜಮೀನು-ಮನೆ ಬೇಡವಾಯಿತು. ನಿಧಾನವಾಗಿ ಇರುವ ಜಮೀನಿನ ಭಾಗವನ್ನು ಮಾರಿದರು. ನಗರಗಳತ್ತ ಉದ್ಯೋಗ ಅರಸಿ ಹೊರಟುಬಿಟ್ಟರು. ಹೇಳಿಕೊಳ್ಳುವುದಕ್ಕೆ ಸಹೋದರರು ಸರಕಾರೀ ಉದ್ಯೋಗಗಳಲ್ಲಿದ್ದರೂ ಯಾರೂ ಸಹಾಯಮಾಡಲಿಲ್ಲ. ನಗರಕ್ಕೆ ಬಂದ ರೈತನ ಆ ಮಕ್ಕಳು ಬೀಡಿ ಕಟ್ಟಿದರು, ಗಾರೆ ಕೆಲಸದಲ್ಲಿ ತೊಡಗಿದರು, ವಾಚಮನ್ ಕೆಲಸಗಳಲ್ಲಿ ತೊಡಗಿದರು, ಕಾರ್ಖಾನೆಗಳಲ್ಲಿ ಕೆಲಸಗಾರರಾಗಿ ಸಣ್ಣ ಸಂಬಳಕ್ಕೆ ಕೈಯ್ಯೊಡ್ಡಿದರು. ಊರಲ್ಲಿ ಉಳಿಯಲು ಅದು ಹೇಗೋ ಮನೆಯೊಂದಿದ್ದು ಅದರಲ್ಲಿ ವೃದ್ಧಾಶ್ರಮಗಳಲ್ಲಿ ವಾಸಿಸುವಂತೇ ಈ ಜನರ ತಂದೆ-ತಾಯಿಗಳು ಬದುಕಿದರು. ವ್ಯತ್ಯಾಸ ಇಷ್ಟೇ ವೃದ್ಧಾಶ್ರಮಕ್ಕೆ ನೋಡಿಕೊಳ್ಳಲು ಒಂದು ಸಮಿತಿಯೋ ಅಥವಾ ಇನ್ಯಾರೋ ಇರುತ್ತಾರೆ, ಆದರೆ ಇಲ್ಲಿ ಅದೂ ಇರಲಿಲ್ಲ. ಹೆತ್ತ ಮಕ್ಕಳು ಪಟ್ಟಣ ಸೇರಿದಮೇಲೆ ಮುದಿವಯಸ್ಸಿನ ಆ ಜೀವಗಳಿಗೆ ಬದುಕಾದರೂ ಯಾಕಪ್ಪಾ ಎನಿಸುತ್ತಿತ್ತು.

ಇದು ಇಂದಿನ ಬಹುತೇಕ ಹಳ್ಳಿಗಳ ಚಿತ್ರಣ! ಶತಮಾನಗಳಿಂದಲೂ ಸಣ್ಣ ರೈತ ಸಂಕಷ್ಟದಲ್ಲೇ ಇದ್ದಾನೆ. ಆತನ ಆಯಕ್ಕೂ ವ್ಯಯಕ್ಕೂ ಸಂಬಂಧವೇ ಇರುವುದಿಲ್ಲ. ಕೆಲವೊಮ್ಮೆ ರೈತನಲ್ಲಿ ಬೀಜ-ಗೊಬ್ಬರ ಕೊಳ್ಳುವುದಕ್ಕೂ ರೊಕ್ಕ ಇರುವುದಿಲ್ಲ. ಮಾಸಲು ಬಟ್ಟೆಗಳನ್ನೇ ಧರಿಸುತ್ತಾ ಹೊರಲಾರದ ಹೊರೆಯನ್ನು ಹೊತ್ತ ಮಗುವಿನಂತೇ ಅತಿಯಾದ ಭಾರವನ್ನು ಏರಲ್ಲಿ ಎಳೆಯುವ ಗಾಡಿಯ ಎತ್ತಿನಂತೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಏನೇನೋ ಕಸರತ್ತುಗಳನ್ನು ಮಾಡುತ್ತಾ ದಿನದೂಡುವ ರೈತಾಪಿ ಜೀವನ ಯುವ ಪೀಳಿಗೆಯ ಹಲವು ಜನರಿಗೆ ಬೇಡವೆನಿಸಿಬಿಟ್ಟಿದೆ. ಮಧ್ಯೆ ಕಾಲಪರಿವರ್ತನೆಯಿಂದ ಬೇಸತ್ತಿದ್ದ ಮನಕ್ಕೆ ಮುದನೀಡಲು ಎಡತಾಕಿದ ದೃಶ್ಯಮಾಧ್ಯಮ [ಟಿವಿ]ಬಹುತೇಕರನ್ನು ಸದಾ ತನ್ನ ಮುಂದೇ ಕೂರಿಸಿಕೊಂಡುಬಿಟ್ಟಿದೆ. ಮೊಬೈಲ್ ಫೋನ್ ಬಂದಿದ್ದರಿಂದ ಇರುಚ ಚಿಕ್ಕಾಸನ್ನೇ ವ್ಯಯಿಸಿ ಅದನ್ನು ಕೊಂಡಾಗಿನಿಂದ ಕರೆನ್ಸಿ ಹಾಕಿಸಿ ಹಾಕಿಸಿ ಬೇಕೋ ಬೇಡವೋ ರೈತನ ಮಕ್ಕಳು ಇನ್ನೂ ಬಡವಾದರು ಎನಿಸುತ್ತದೆ. ಸಮಯದಲ್ಲಿ ಕೆಲವೊಮ್ಮೆ ಉಂಟಾಗುವ ತಲೆನೋವಿನ ಜಂಜಡಗಳನ್ನು ಮರೆಯಲು ಅಂತ ಆರಂಭಿಸಿದ ಗುಟ್ಕಾ ಪಾನ್‍ಪರಾಗ್ ಈಗ ಕಾಯಂ ಆಗಿ ಬಾಯಲ್ಲೇ ಇರಬೇಕಾಗುತ್ತದೆ! ಹಾಗೊಮ್ಮೆ ನೋಡಿದಾಗ ರೈತನ ಮಕ್ಕಳು ಸ್ವಲ್ಪ ಆಳಸಿಗಳಾಗುತ್ತಿರುವುದೂ ಕಾಣುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೆ ಆಹಾರ ಅತೀ ಮುಖ್ಯ. ಅಂತಹ ಆಹಾರ ಬೆಳೆಗಳನ್ನು ಹಿಂದಿನಿಂದ ಇಂದಿನವರೆಗೂ ರೈತರು ಕೇವಲ ತಮ್ಮ ಉದರಂಭರಣೆಯ ಉದ್ದೇಶವೇ ಅಲ್ಲದೇ ಲೋಕದ ಹಿತಾರ್ಥ ಬೆಳೆಯುತ್ತಾರೆ. ಸಹಜವಾಗಿ ಭೂಮಿಯ ಮಕ್ಕಳಾದ ಅವರ ಬವಣೆಗಳನ್ನು ನಿಸರ್ಗವೇ ನೋಡಬೇಕೇ ಹೊರತು ಜನರನ್ನು ನಂಬಿ ಅವರು ನಡೆಯುವ ಹಾಗಿಲ್ಲ. ಕೇವಲ ಸರಕಾರ ಕೊಡುತ್ತದೆ ಅಥವಾ ಇನ್ಯಾರೋ ಕೊಡುತ್ತಾರೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಪ್ರತೀವರ್ಷ ಸಕಾಲಿಕ ಮಳೆಯ ಅಭಾವ, ಬಿತ್ತನೆಬೀಜಗಳ ಕೊರತೆ ಮುಂತಾದ ಬಳಲುವಿಕೆ ಇದ್ದೇ ಇದೆ. ಪ್ರತೀ ವರ್ಷ ಸರಕಾರ ಹೇಗೆ ಮುಂಗಡಪತ್ರವನ್ನು ಬರೆಯುತ್ತದೋ ಹಾಗೇ ಪ್ರತಿಯೊಬ್ಬ ರೈತನೂ ತನ್ನ ಆಯ-ವ್ಯಯಗಳನ್ನು ಗಣಿಸಿ ಒಂದು ಮುಂಗಡಪತ್ರವನ್ನು ರಚಿಸಿಕೊಂಡರೆ ಅದು ಆತನ ಸಮಸ್ಯೆಗಳಿಗೆ ಪರಿಹಾರ ಕಾಣುವಲ್ಲಿ ಮೊದಲ ಹೆಜ್ಜೆಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬದಲು ಹಟ್ಟಿಗೊಬ್ಬರಗಳನ್ನು ಬಳಸಿದರೆ ನಿಸರ್ಗ ಹಾಳಾಗದೇ ಇರುವುದರಿಂದ ತೀರಾ ಅಧಿಕ ಇಳುವರಿ ಬರದೇ ಇದ್ದರೂ ಕ್ರಮೇಣ ಅಧಿಕ ಇಳುವರಿಯನ್ನು ಸಾಧಿಸಬಹುದಾದ ಮಾರ್ಗಗಳು ಇವತ್ತು ನೋಡಸಿಗುತ್ತವೆ.

ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗುಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

ಎಂತಹ ಭಾವನಾತ್ಮಕ ಸನ್ನಿವೇಶ ನೋಡಿ. ಜೀವಂತ ಯಂತ್ರಗಳಾದ ಎತ್ತುಗಳು ರೈತನ ಬೆನ್ನೆಲುಬಾಗಿ ಆತನಿಗೆ ಸಹಕರಿಸುತ್ತವೆ. ಹೊಟ್ಟೆಗೆ ತಿನ್ನದಿದ್ದರೂ ತಮ್ಮಿಂದಾಗುವಷ್ಟು ಕಾಲ ಒಡೆಯನ ಸೇವೆಯನ್ನು ಮಾಡುತ್ತವೆ. ಆತನ ಭಾವನೆಗಳಿಗೆ ಮೂಕವಾಗಿ ಸ್ಪಂದಿಸುವ ಅವುಗಳು ಸಿರಿತನಕ್ಕೆ ಹಿಗ್ಗದೇ ಬಡತನಕ್ಕೆ ಕುಗ್ಗದೇ ಏಕರೀತಿಯಿಂದ ರೈತನ ಜೀವಾಳವಾಗಿರುತ್ತವೆ. ಹೃದಯಾಘಾತದಿಂದ ಸತ್ತ ತನ್ನ ಯಜಮಾನನ ದೇಹವನ್ನು ಯಾವುದೇ ಮಾರ್ಗನಿರ್ದೇಶನವಿಲ್ಲದೇ ಕೇವಲ ತಂತಾನೇ ನಡೆದು ಮನೆಗೆ ತಲುಪಿಸಿದ ಎತ್ತೊಂದರ ಬಗ್ಗೆ ಮಾಧ್ಯಮಗಳು ಬಿತ್ತರಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಸಣ್ಣ ರೈತರಿಗೆ ಎತ್ತುಗಳನ್ನು ಸಾಕಲಾಗುವುದಿಲ್ಲಾ ಎಂಬ ಚಿಂತೆಯಾಗಿದೆ. ಆದರೆ ಸರಿಯಾಗಿ ಅವರು ಚಿಂತಿಸಿನೋಡಿದರೆ ಎತ್ತುಗಳ ಹೊಟ್ಟೆಗೆ ಬೇಕಾಗುವ ಆಹಾರವನ್ನು ಅವುಗಳ ದುಡಿಮೆಯೇ ಪೂರೈಸುತ್ತದೆ. ಎತ್ತುಗಳೇ ಇಲ್ಲದ ಕೇವಲ ಟ್ರಾಕ್ಟರ್ ಮತ್ತು ರಾಸಾಯನಿಕಗಳನ್ನು ಬಳಸಿ ಮಾಡುವ ಹೊಲಗಳು ಕಾಲಕ್ರಮೇಣ ನಿಸ್ಸಾರವಾಗಿ ಅಲ್ಲಿರುವ ಮಣ್ಣಿಗೆ ಯಾವ ಅರ್ಹತೆಯೂ ಇರುವುದಿಲ್ಲ. ಈಗ ನಡೆಯುತ್ತಿರುವುದೇ ಅದಾಗಿದೆ. ಆಂಗ್ಲ ಗಾದೆಯೊಂದು ಹೀಗಿದೆ --- At First he calls drink, then Drink in the stomach calls Drinks, at last Drink calls him ಯಾವುದೋ ಕೆಟ್ಟಘಳಿಗೆಯಲ್ಲಿ ಒಮ್ಮೆ ಒಬ್ಬಾತ ಮದಿರೆಯನ್ನು ಕುಡಿಯುತ್ತಾನೆ. ನಂತರದ ದಿನಗಳಲ್ಲಿ ಆತನ ದೇಹದೊಳಗಣ ಮದಿರೆಯೇ ಮತ್ತೆ ಮದಿರೆಯನ್ನು ಕರೆಯುತ್ತದೆ. ಕೊನೆಗೊಮ್ಮೆ ಮದಿರೆಯ ನರ್ತನ ಜಾಸ್ತಿಯಾಗಿ ಆ ಮದಿರೆಯೇ ಆತನನ್ನು ಬಲಿತೆಗೆದುಕೊಳ್ಳುತ್ತದೆ.

ರೈತ ತಾನು ಮಾಡುತ್ತಿರುವ ವೃತ್ತಿ ಒಂದು ಉದ್ಯಮ ಎಂದು ಪರಿಗಣಿಸಬೇಕಾದ ದಿನ ಬಂದಿದೆ. ಹೇಗಾಯಿತ್ಹಾಗೆ ಎಂದುಕೊಂಡು ಸ್ವಲ್ಪ ಹೆಚ್ಚು ಕಮ್ಮಿ ಅಂದಾಜಿನ ಲೆಕ್ಕಾಚಾರದಲ್ಲೇ ದಿನಗಳೆದ ರೈತ ಉದ್ಯಮದಲ್ಲಿ ಲಾಭಗಳಿಸುವ ಮಾರ್ಗವನ್ನು ಸಮರ್ಪಕ ಲೆಕ್ಕಪತ್ರಗಳನ್ನು ಇಡುವುದರಿಂದ ಮತ್ತು ಯಾವಾಗ ಯಾವ ರೀತಿಯ ಬೆಳೆಯನ್ನು ಯಾವ ಭೂಮಿಯಲ್ಲಿ ಬೆಳೆದರೆ ಲಾಭ ಸಿಗಬಹುದೆಂಬ ಮಾರುಕಟ್ಟೆಯ ಮುಂಧೋರಣೆಯಿಂದ ನಡೆದರೆ ಆತ ಗೆಲ್ಲುವುದರಲ್ಲಿ ಸಂಶಯವಿರುವುದಿಲ್ಲ. ಅಲ್ಲಲ್ಲಿ ಕೆಲವು ರೈತರ ಸಂದರ್ಶನಗಳನ್ನು ನೋಡುತ್ತೇವೆ. ರೈತ ಕೇವಲ ಒಂದೇ ಬೆಳೆಯನ್ನು ಅವಲಂಬಿಸಬಾರದು; ಆದಷ್ಟೂ ಮಿಶ್ರಬೆಳೆಗಳನ್ನು ಬೆಳೆದರೆ ಒಂದಿಲ್ಲೊಂದು ಬೆಳೆಗೆ ಬೇಡಿಕೆ ಬರುವುದರಿಂದ ತನ್ನ ಆಯ-ವ್ಯಯಗಳನ್ನು ಸರಿದೂಗಿಸಿಕೊಂಡು ಹೋಗಲು ಅನುಕೂಲವಾಗುತ್ತದೆ.

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇಸಮನೆ ದುಡಿಯುತ


ಯಾವುದೇ ಕೆಲಸವನ್ನು ಮಾಡಿದರೂ ಕೊನೆಗೊಮ್ಮೆ ಮನುಷ್ಯ ಮಾಡುವುದೆಲ್ಲಾ ಗೇಣು ಹೊಟ್ಟೆಗಾಗಿ-ತುಂಡು ಬಟ್ಟೆಗಾಗಿ! ಸಮಾಜದಲ್ಲಿ ಎಲ್ಲಾ ವೃತ್ತಿಗಳೂ ಒಂದನ್ನೊಂದು ಅವಲಂಬಿಸಿವೆ. ಕೇವಲ ಜಾಗತೀಕರಣದಿಂದ ಹುಟ್ಟಿಕೊಂಡ ಹೊಸ ಹೊಸ ಉದ್ಯಮಗಳಿಂದ ಮಾತ್ರ ಜಗತ್ತು ನಡೆಯುತ್ತದೆ ಎಂಬುದು ಸುಳ್ಳು. ಜಾಗತೀಕರಣ ಪರೋಕ್ಷ ನಮ್ಮ ದೇಶದ ಹಲವು ಸಣ್ಣಕೈಗಾರಿಕೆಗಳಿಗೆ ಹೊಡೆತಕೊಟ್ಟಿದೆ. ಬಿಸಿಲು,ಮಳೆ,ಚಳಿಯನ್ನು ಲೆಕ್ಕಿಸದೇ ಹೊಲಗದ್ದೆಗಳಲ್ಲಿ-ತೋಟತುಡಿಕೆಗಳಲ್ಲಿ ಕೃಷಿಕೆಲಸದಲ್ಲಿ ನಿರತನಾಗಿರುವ ರೈತ ನಿಜವಾದ ಅನ್ನದಾತನಾಗಿದ್ದಾನೆ. ಅನ್ನದಾತನನ್ನು ಯಾರೇ ನಿರ್ಲಕ್ಷಿಸಿದರೂ ಅದು ನಮಗೆ ನಾವೇಮಾಡಿಕೊಂಡ ಮೋಸವಾಗುತ್ತದೆ. ಹೇಗೆ ಇಂಧನಗಳ ಬೆಲೆ ಹೆಚ್ಚಳ ಸಾಗಾಣಿಕೆಗಳ ಮೇಲೂ ಆ ಮೂಲಕ ಮುಂದೆ ನಡೆಯಬೇಕಾದ ಕ್ರಯ-ವಿಕ್ರಯ ವ್ಯವಹಾರಗಳಮೇಲೂ ಪರಿಣಾಮ ಬೀರುವುದೋ ಹಾಗೆಯೇ ಅನ್ನದಾತನಿಗೆ ಬೀಳುವ ಹೊಡೆತ ನಮ್ಮೆಲ್ಲರಿಗೂ ತಾಗುವ ಪೆಟ್ಟು. ಇರುವುದರಲ್ಲಿ ತೃಪ್ತಿ ಪಟ್ಟು ಬದುಕುವ ರೈತಾಭಿಜನರನ್ನು ಆದರಿಸುವುದು ಅವರ ಅಗತ್ಯಗಳನ್ನು ನಾಗರಿಕ ಸರಕಾರ ಪೂರೈಸುವಂತೇ ನೋಡಿಕೊಳ್ಳುವುದು ಸಮಾಜದ ಎಲ್ಲರ ಹೊಣೆಯಾಗಿದೆ. ಕೃಷಿಯಿಂದ ಭ್ರಮನಿರಸನಗೊಂಡು ಹೊರಹೊರಡುವ ಗ್ರಾಮೀಣ ಯುವ ಪೀಳಿಗೆಯ ಸಮಸ್ಯೆಗಳನ್ನು ಆಲೈಸಿ ಅವರನ್ನು ಸರಿಯಾದ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಹಿಡುವಳಿದಾರರಾಗಿ ಸಮೃದ್ಧಿಯಿಂದ ಬದುಕುವಂತೇ ಪ್ರೇರೇಪಿಸುವುದು ಸದ್ಯ ಮಾಡಬೇಕಾದ ಕರ್ತವ್ಯವಾಗಿದೆ.


Sunday, June 12, 2011

ಋಣಾನುಬಂಧ ಸಂಧಿ ಮತ್ತದರ ದಾಯಾದೀ ಮಿತ್ರರು !


ಋಣಾನುಬಂಧ ಸಂಧಿ ಮತ್ತದರ ದಾಯಾದೀ ಮಿತ್ರರು!

ಆಶ್ಚರ್ಯವಾಯಿತೇ ? ಕನ್ನಡದಲ್ಲಿ ಆಗಾಗ ನಮಗೆ ಕೆಲವು ಹೊಸ ಹೊಸ ಸಂಧಿ[ಗ್ಧ] ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾಮೂಲಾಗಿ ಹೇಗೋ ಪರಿಹಾರವಾಗಿಬಿಟ್ಟರೆ ಇನ್ನೂ ಕೆಲವು ಅಸಾಧಾರಣ ನೆನಪಾಗಿ ಮನದ ಮೂಸೆಯಲ್ಲೆಲ್ಲೋ ಠಿಕಾಣಿ ಹೂಡಿಬಿಡುತ್ತವೆ. ಮನೆಯೊಳಗೆ ಸೇರಿಕೊಂಡ ಹಾವಿನಹಾಗೇ ಆಗಾಗ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸುವವು ಕೆಲವಾದರೆ ಅವುಗಳಲ್ಲೇ ಹತ್ತಾರು 'ಭಿನ್ನಮತೀಯ' ಸಂಧಿಗಳು ನಗುವನ್ನೂ ತರಿಸುತ್ತವೆ. ಕೆಲವೊಮ್ಮೆ ಈ ನಗು ಹೇಗೆಂದರೆ ಒಬ್ಬರೇ ಕುಳಿತು ಘಟನೆ ನೆನೆದರೆ ಯಾ ಓದಿದರೆ ಓಡಿಬರುವ ನಗು ಪಕ್ಕದಲ್ಲೆಲ್ಲೋ ಹಾದುಹೋಗುವವರನ್ನಾಗಲೀ ಅಥವಾ ಅಲ್ಲೇ ಆಚೆ ಈಚೆ ಕುಳಿತು ತಂತಮ್ಮ ಲೋಕದಲ್ಲೇ ಏನೋ ಓದಿನಲ್ಲಿ ವಿಹರಿಸುತ್ತಿರುವವರಾಗಲೀ ಸರಕ್ಕನೆ ನಮ್ಮತ್ತ ಮುಖಮಾಡಿ ’ನಿನ್ನೆ ತನಕ ಸರಿ ಇದ್ನಲ್ಲ ಏನಾಗಿರಬಹುದು ? ’ ಎಂಬ ತಲೆಕೆರೆತಕ್ಕೊಳಗಾಗುವಷ್ಟು ಪ್ರಭಾವಶಾಲಿಯಾಗಿರುತ್ತವೆ.

ನಾವು ಪದವೀಪೂರ್ವ ವ್ಯಾಸಂಗಕ್ಕೆ ಕಾಲೇಜಿಗೆ ಹೋಗುವಾಗ ಗೋಕರ್ಣದಿಂದ ಸಹಾಧ್ಯಾಯಿಯೊಬ್ಬ ಬರುತ್ತಿದ್ದ. ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರ ಫಲವಾಗಿ ಒತ್ತಾಯಪೂರ್ವಕವಾಗಿ ನಾವು ಸಂಧಿ, ಸಮಾಸ, ಛಂದಸ್ಸು ಇವುಗಳ ಬಗ್ಗೆ ಗಮನವಿರಿಸಲೇ ಬೇಕಾಗುತ್ತಿತ್ತು. ಒಮ್ಮೆ ಗಮನ ಕಮ್ಮಿಯಾಯಿತೋ ನಾವು ಬಳಸುವ ಕನ್ನಡ ನಮ್ಮಕಾಲದ ಹಳ್ಳಿಯ ಮಕ್ಕಳ ದೊಗಳೇ ಚಡ್ಡಿಯಂತೇ ಯಾವುದೋ ಒಂದುಕಡೆ ಜಾರಿಬಿಡುತ್ತಿತ್ತು. ಆಗಾಗ ಹುಕ್ಕುಗಳು ಬಕ್ಕಲ್ಲುಗಳು ಇರದೇ ಹಾಗೇ ಮಡಚಿ ಸೆಕ್ಕಿಕೊಂಡ ಚಡ್ಡಿಯ ಮೇಲಂಚು ಕೈಕೊಟ್ಟು ಕಳವಳಕ್ಕೀಡುಮಾಡಿದಂತೇ ಆಗಿಬಿಡುವ ಸಂಧಿ[ಗ್ಧ]ಕಾಲವೂ ಇತ್ತು. ಹಾಗಾಗಿ ಕನ್ನಡದಮೇಲೆ ಸದಾ ನಿಗಾ ಇರಿಸಲೇ ಬೇಕಾಗಿತ್ತು! "ಇವತ್ತು ಕನ್ನಡ ಉಪಾಧ್ಯಾಯರಿಂದ ಹೇಗಾದರೂ ಬಚಾವ್ ಮಾಡಿ ಮರ್ಯಾದೆ ಕಾಪಾಡು, ನಿಂಗೆ ಕಾಯಿ ಒಡೆಸುತ್ತೇನೆ " ಎಂದು ಸ್ಥಳೀಯ ಕೆಲವು ದೇವರಿಗೆ ಲಂಚದ ಆಮಿಷವೊಡ್ಡುವುದೂ ಇತ್ತು. ಕರಾವಳಿ ಜಿಲ್ಲೆಗಳಲ್ಲಿ ನಿಜಕ್ಕೂ ಕನ್ನಡ ಬಹಳ ಮೇರು ಸ್ಥಾನದಲ್ಲಿರುತ್ತದೆ. ನಿಮಗೆ ಅದರ ಪರಿಶುದ್ಧ ಅನುಭವ ಮಂಗಳೂರಿಗೆ ಹೋದಾಗ ಆಗಬಹುದು. ಪುಸ್ತಕದಲ್ಲಿ ಇರುವ ಸಾಲುಗಳನ್ನು ಬರೆದಷ್ಟೇ ಸಮಯ ತೆಗೆದುಕೊಂಡು [ಮಾತಿನಲ್ಲೂ] ಅದೇರೀತಿ ಬಳಸುವುದು ಅಲ್ಲಿನ ವಾಡಿಕೆ.

ಇರಲಿ, ಕಲಿಸುವ ವಿಷಯದಲ್ಲಿ ಸ್ವಲ್ಪ ಚೆನ್ನಾಗೇ ಪ್ರೌಢಿಮೆ ಹೊಂದಿದ್ದ ಕನ್ನಡ ಪಂಡಿತರು ಆಗಾಗ ಹೂಂಕರಿಸಿದರೆ ಕಟ್ಟಡದ ತಾರಸಿಯೇ ಹಾರಿಹೋಗುವ ನಿರೀಕ್ಷಣೆಯಿತ್ತು. ಮೇಲಾಗಿ ಹೆಣ್ಣು-ಗಂಡುಮಕ್ಕಳ ಸಹಶಿಕ್ಷಣ ಪದ್ಧತಿಯಾಗಿರುವುದರಿಂದ ಆ ಹೆಣ್ಣುಮಕ್ಕಳ ಎದುರಿಗೆ ನಾವು ಗುರುಗಳಿಂದ ’ಮಂತ್ರಾಕ್ಷತೆ’ ಹಾಕಿಸಿಕೊಳ್ಳಲು ಸುತರಾಂ ಸಿದ್ಧರಿರಲಿಲ್ಲ. ಹಾಗಂತ ತೀರಾ ’ಸುಸಂಸ್ಕೃತರಾದ’ ನಮ್ಮಲ್ಲೇ ಕೆಲವರು ಅಸಾಮಾನ್ಯ ಸಾಧನೆಗೈದು ’ರಾಕೆಟ್ಟು’ ಕಂಡುಕೊಂಡಿದ್ದರು! ಅವರಮುಂದೆ ನಮ್ಮ ಅಬ್ದುಲ್ ಕಲಾಮ್ ಸಾಹೇಬರು ಕಂಡುಹಿಡಿದ ರಾಕೆಟ್ಟು ಏನೇನೂ ಅಲ್ಲ! ದುಡ್ಡುಕೊಡುವುದೂ ಬೇಡ ಧೂಪಹಾಕುವುದೂ ಬೇಡ, ಕುಳಿತಲ್ಲೇ ಕಂಡುಹಿಡಿದ ಬಿಟ್ಟಿ ಸಂಶೋಧನೆ: ಒಂದೊಂದು ರಾಕೆಟ್ಟು ಸುಯ್ಯನೆ ಹೊರಟಿತು ಎಂದರೆ ಅದು ಗುರಿಮುಟ್ಟಿಯೇ ತೀರುತ್ತಿತ್ತು! ’ಅಗ್ನಿ’ ಪೃಥ್ವಿ’ ಎಲ್ಲವುಗಳಿಗಿಂತಲೂ ಪರಿಣಾಮಕಾರಿಯಾದ ಅವು ಕೆಲವೊಮ್ಮೆ ಹುಡುಗಿಯರ ಕಡೆಗೂ ಹೋಗಿ ಮಾತನಾಡಿಸುತ್ತಿದ್ದವು. ಪಂಡಿತರು ಕರಿಹಲಗೆಯಮೇಲೆ ಏನನ್ನೋ ವಿಸ್ತರಿಸುವಾಗ ಅವರ ಕಿವಿಯ ವರೆಗೂ ಸಾಗುವ ರಾಕೆಟ್ಟುಗಳು ಯಾವ ’ಬೇಹುಗಾರಿಕಾ ಸಂಸ್ಥೆ’ಗೆ ಸೇರಿದ್ದೆಂದು ತಿಳಿಯದೇ ಕೋಪಗೊಳ್ಳುವ ಅವರಿಗೆ ವಿಷಯಾಂತರಕ್ಕೆ ಕಾರಣವಾದರೆ ಇನ್ನೂ ಕೆಲವು ಸಂದಿ[ಗ್ಧ] ಸಮಯದಲ್ಲಿ ಸುಣ್ಣದ ಕಡ್ಡಿ ಬಿಸಾಕಿ ಅವರು ಹೊರಟೇ ಹೋಗುತ್ತಿದ್ದರು.

ಇಂತಹ ಸಂಧಿ[ಗ್ಧ] ದಿನಗಳಲ್ಲೇ ಗೋಕರ್ಣದಲ್ಲಿ ’ಮಂಗರ್ಷಿ’ ಎಂಬೊಂದು ಅಡ್ಡಹೆಸರಿನ ಕುಟುಂಬವಿದೆ ಎಂಬುದು ಗೊತ್ತಾಗಿದ್ದು! ನನಗಂತೂ ಈ ಸೃಷ್ಟಿಯಲ್ಲಿ ಎಂತೆಂತಹ ಅದ್ಭುತ ಹೆಸರುಗಳಿವೆಯಪ್ಪಾ ಎನ್ನಿಸಿಬಿಟ್ಟಿತ್ತು. ಕೇವಲ ಪ್ರಭಾಕರ, ಕಮಲಾಕರ ಇಂಥಾದ್ದನ್ನು ಬಿಟ್ಟರೆ ಎಮ್ಮೆಕರ, ಆಕಳಕರವನ್ನು ನೋಡಿದ್ದ ನಮಗೆ ಬಾಂಧೇಕರ, ಮಾಲ್ಸೇಕರ, ಕುಮಟಾಕರ, ಹೊನ್ನಾವರಕರ, ಚಂದಾವರಕರ, ಅಸ್ನೋಟೀಕರ ಈ ಥರದ ಹಲವು ಹೊಸಹೊಸ ’ಕರ’ಗಳೂ ಕಂಡವು! ಅವುಗಳಲ್ಲೆಲ್ಲಾ ತೀರಾ ಸಾಮಾನ್ಯ ಸಂಧಿ ಇರುವುದರಿಂದ [ಉದಾಹರಣೆಗೆ ಕುಮಟಾ+ಕರ= ಕುಮಟಾಕರ] ಗಮನಿಸುವಂತಹ ಅಂಥಾ ವಿಶೇಷವೇನೂ ಉಳಿಯಲಿಲ್ಲ. ಆದರೆ ಆಗಷ್ಟೇ ಸವರ್ಣದೀರ್ಘ ಸಂಧಿ, ಜಸ್ತ್ವ ಸಂಧಿ, ಸ್ತುತ್ವಸಂಧಿ ಇತ್ಯಾದಿಗಳನ್ನು ಕನಸಲ್ಲೂ ನೆನೆದು ಅವುಗಳನ್ನು ಮಟ್ಟಹಾಕಲು ಅಣ್ವಸ್ತ್ರಗಳಿಗಾಗಿ ಕೆಲವರು ಶೋಧ ನಡೆಸಿದ್ದರು. ಆಗ ನಮ್ಮಲ್ಲೇ ಒಬ್ಬ ಸಹಾಧ್ಯಾಯಿಯ ಅಡ್ಡಹೆಸರು ’ಮಂಗರ್ಷಿ’ ಎಂದಿತ್ತು. ಶೂನ್ಯವೇಳೆಯಲ್ಲಿ ’ರಾಕೆಟ್ಟು’ ಕಂಡು ಹಿಡಿದ ’ವಿಜ್ಞಾನಿ’ಗಳೆಲ್ಲಾ ಸೇರಿ ತಮ್ಮ ಸಂಶೋಧನೆಗಳ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ಒಬ್ಬಾತ ಸಂಧಿ ಬಿಡಿಸಿದ್ದು ಹೀಗೆ: ಮಂಗ + ಋಷಿ= ಮಂಗರ್ಷಿ [ಋಣಾನುಬಂಧ ಸಂಧಿ] ! ಪಾಪದ ಸಹಾಧ್ಯಾಯಿ ಮಂಗರ್ಷಿ ನೋಡುವುದಕ್ಕೂ ಸ್ವಲ್ಪ ಮಂಗಕ್ಕೆ ಹತ್ತಿರದ ಸಂಬಂಧಿಯಂತೇ ತೋರುತ್ತಿರುವುದರಿಂದ ಆತನಿಗೆ ಹಳೆಯ ಋಣಾನುಬಂಧವಿರಬೇಕೆಂದು ಯಾರೋ ಹಲುಬಿದರು. ’ವಿಜ್ಞಾನಿಗಳು’ ಕೇಕೇ ಹಾಕಿ ನಕ್ಕರು. ನಾವು ಮತ್ತೆ ಏನೂಮಾಡಲಾರದ ಅಸಹಾಯ ಸಂಧಿ[ಗ್ಧ] ಕಾಲದಲ್ಲಿದ್ದೆವು.

ಆ ದಿನಗಳಲ್ಲಿ ಕರ್ನಾಟಕದಾದ್ಯಂತ ಮಡಿ ಉಟ್ಟ[ಕೆಂಪು] ಬಸ್ಸುಗಳು ಓಡಾಡುತ್ತಿದ್ದವು! ಅನೇಕ ಬಸ್ಸುಗಳಲ್ಲಿ ವಿಧವಿಧಾವಾದ ಎಚ್ಚರಿಕೆಗಳನ್ನು ಬರೆದಿಡಲಾಗುತ್ತಿತ್ತು. ’ನಿಮ್ಮ ಸಾಮಾನಿಗೆ ನೀವೇ ಜವಾಬ್ದಾರರು’ , ’ ವಾಹನ ಚಲಿಸುವಾಗ ಯಾವುದೇ ಅಗಾಂಗಗಳನ್ನು ಹೊರಹಾಕಬಾರದು’,’ಧೂಮಪಾನ ನಿಷೇಧಿಸಿದೆ’[ಮದ್ಯಪಾನ ಅಡ್ಡಿಯಿಲ್ಲ ಅಂತಲೇ?] ನಮಗೆಲ್ಲಾ ಈ ಒಕ್ಕಣಿಕೆಗಳ ’ಕೆಮಿಕಲ್ ರಿಯಾಕ್ಷನ್’ ಗೊತ್ತಾಗುತ್ತಿರಲಿಲ್ಲ, ಆದರೆ ನಮ್ಮಜೊತೆಗೆ ಇದ್ದ ’ವಿಜ್ಞಾನಿಗಳು’ ಇವುಗಳ ಬಗ್ಗೆ ಗಮನಹರಿಸುತ್ತಿದ್ದರು. ಅವರುಗಳ ಜೊತೆ ಇರುವಾಗ ಎಲ್ಲೆಲ್ಲೂ ಹಿಮಾಲಯದ ಕಡಿದಾದ ಆಘಾತಕಾರೀ ದಾರಿಗಳೇ ಕಾಣುತ್ತಿದ್ದವು ನಮಗೆ. ಅವರು ಯಾಕೆ ನಕ್ಕರು ನಮ್ಮನ್ನು ನೋಡಿ ನಕ್ಕರೇ ಅಥವಾ ಬೇರೇ ಇನ್ಯಾವುದೋ ವಿಷಯಕ್ಕೆ ನಕ್ಕರೇ ಎಂಬುದನ್ನು ಅರ್ಥೈಸಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದ ’ಟ್ಯೂಬ್‍ಲೈಟುಗಳು’ ನಾವಾಗಿದ್ದೆವು.

ಆಗೆಲ್ಲಾ ಬಸ್ಸುಗಳಲ್ಲೇ ಆಗಲಿ ಯಾವುದೇ ಕಚೇರಿಗಳಲ್ಲೇ ಆಗಲಿ ಗಣಕಯಂತ್ರಗಳು ಇನ್ನೂ ’ಗಣೇಶಪೂಜೆ’ಯಲ್ಲಿದ್ದುದರಿಂದ ಬರಹಗಳನ್ನು ’ಸ್ಟೆನ್ಸಿಲ್’ ಥರದ ಲೋಹದ ತಗಡನ್ನು ಬಳಸಿ ಬಣ್ಣಗಳಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದರು. ಅಕ್ಷರಗಳಲ್ಲಿ ಆಂಗಿಕ ಶುದ್ಧತೆಯಿರದೇ ಅವು ಅಪೂರ್ಣವಾಗಿ ಕೆಲವು ಬಿಟ್ಟಸ್ಥಳಗಳಿಂದ ಕೂಡಿ ಕಲ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಉದಾಹರಣೆಗೆ ’ಹೊನ್ನಾವರ’ ಎಂದು ಬರೆದಿದ್ದು ’ಪೊನ್ನಾದರ’ ಆಗಿಯೂ ಕಾಣುವ ಸಂಧಿಕಾಲ ವಿತ್ತು. ಆದರೂ ’ಅದು’ ’ಇದೇ’ ಎಂಬ ಭಾವನಾತ್ಮಕ ವಿಶ್ಲೇಷಣೆ ಎಮ್ಮೆಫ್ ಹುಸೇನನ ಚಿತ್ರ ನೋಡುಗರಲ್ಲಿರುವಂತೇ ನಮ್ಮ ಹಳ್ಳಿಗರಲ್ಲೂ ಅರ್ಥೈಸುವ ಆ ’ಶಕ್ತಿ’ ಇತ್ತು. ಇಂತಹ ಸಮಯದಲ್ಲಿ ಕೆಲವೊಮ್ಮೆ ಬರೆಯುವಾಗ ಎಲ್ಲಾದರೂ ಅಪ್ಪಿತಪ್ಪಿ ಯಾವುದೋ ಅಕ್ಷರದ ಕಾಲೋ ಕೈಯ್ಯೋ ಅಚ್ಚುಮೂಡದಿದ್ದರೆ ಅಪಾರ್ಥಕೊಡುವ ಸಂಧಿ[ಗ್ಧ]ಕಾಲವೂ ಬರುತ್ತಿತ್ತು. ಕೆಲವೊಮ್ಮೆ ಬೆಂಗಳೂರಿನಿಂದ ಭಟ್ಕಳಕ್ಕೆ ಹೋಗುವ ಬಸ್ಸಿಗೆ ಬೆಂಗಳೂರು-ಭಟ್ಕಳ್ಳ ಎಂದೂ ಗೋಕರ್ಣದಿಂದ ಭಟ್ಕಳಕ್ಕೆ ಹೋಗುವ ಬಸ್ಸಿಗೆ ಗೋಕರ್ಣ-ಭಟ್ಕಳ್ಳ ಎಂದೂ ಬರೆದಿದ್ದರೆ ಸಹಜವಾಗಿ ಬರೆಯುವ ಹಲವು ತಪ್ಪುಗಳಲ್ಲಿ ಇವೂ ಎರಡು ಎಂದು ಸುಮ್ಮನಾಗುವುದು ಕನ್ನಡಿಗರ ಹೆಗ್ಗುಣವಾಗಿತ್ತು. ನಮ್ಮ ’ವಿಜ್ಞಾನಿಗಳು’ ಆಗೆಲ್ಲಾ ರಸ್ತೆಯುದ್ದಕ್ಕೂ ಸಿಗುವ ಮೈಲಿಗಲ್ಲುಗಳಲ್ಲಿ ಬರೆದಿರುವ ಅಕ್ಷರಗಳಲ್ಲಿ ಕೆಲವು ತಿದ್ದುಪಡಿ ಮಾಡುತ್ತಿದ್ದರು. ಉದಾಹರಣೆಗೆ ’ಆರೊಳ್ಳಿ’ ಎಂಬ ಹಳ್ಳಿಯ ಹೆಸರು ’ಆಠೊಳ್ಳಿ’ ಯಾದರೆ ’ಭಾಸ್ಕೇರಿ’ ಇದ್ದಿದ್ದು ’ಭಾಸ್ಕೇಠಿ’ ಯಾಗಿ ಕೂರುತ್ತಿತ್ತು. ಕಪ್ಪು ಅಕ್ಷರಗಳಲ್ಲಿರುವ ಅವುಗಳ ಮಧ್ಯೆ ರಸ್ತೆರಿಪೇರಿಗೆ ತಂದು ಚೆಲ್ಲಿದ್ದ ದಾಮರು ಬಳಸಿ ಅಕ್ಷರಗಳಿಗೆ ’ಗೌರವ’ ಸೂಚಿಸುವುದರಿಂದ ಮುಂದಿನವರ್ಷ ಮತ್ತೆ ಅಲ್ಲಿಗೆ ಬೋರ್ಡು ಬರೆಯುವಾತ ಬರುವಾಗ ಆತನಿಗೆ ಮೂಲಹೆಸರೇ ಹೀಗಿರಬಹುದು ಎಂಬ ಕಲ್ಪನೆ ಬರುತ್ತಿತ್ತು. ಮತ್ತೆ ತಪ್ಪೇ ಬರೆಯಲ್ಪಟ್ಟು ಢಾಳಾಗಿ ಕಣ್ಣಿಗೆ ಹೊಡೆಯುತ್ತಿತ್ತು. ಇದೇ ರೀತಿ ಕಿಲೋ ಮೀಟರು ಲೆಕ್ಕ ೩೦೦ ಎಂದು ಇಂಗ್ಲೀಷ್ ಅಂಕೆಗಳಲ್ಲಿ ನಮೂದಿಸಿದ್ದು ೮೦೦ ಆಗಿರುತ್ತಿತ್ತು ! ಯಾರೋ ಹಾದಿಹೋಕ ಅದನ್ನು ಓದಿಕೊಂಡು ತಪ್ಪಾಗಿ ಗ್ರಹಿಸಿ ತೊಂದರೆಯಾಬಗಹುದೆಂಬ ’ಸಂಶೋಧನೆ’ ನಮ್ಮ ’ವಿಜ್ಞಾನಿಗಳಿಗೆ’ ಇರಲಿಲ್ಲ.

’ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡು’ ಎಂಬುದೊಂದು ಕನ್ನಡದ ಗಾದೆ ಅಲ್ಲವೇ? ಹಾಗೇ ಅಂದು ಅಲ್ಲಿ ವಿಜೃಂಭಿಸಿದ ನಮ್ಮ ’ರಾಕೆಟ್ಟು ವಿಜ್ಞಾನಿಗಳೇ’ ಇಂದು ರಾಜಕೀಯ ಮುಖಂಡರಾಗಿದ್ದಾರೆ! ಯಾವುದೋ ಅಮ್ಮ ಮತ್ತು ಇನ್ಯಾವುದೋ ಅಪ್ಪಗಳ ಕೂಡುವಿಕೆಯ ಸಂಧಿಯಿಂದ ಜನಿಸಿದ ಈ ಜೀವಿಗಳು ಯಾರನ್ನೋ ಬಲಿಹಾಕುತ್ತಾರೆ, ಎಲ್ಲೋ ಮೇಯುತ್ತಾರೆ, ಮಂತ್ರಿಮಾಗಧರೂ ಆಗುತ್ತಾರೆ. ಇದು ಕಲಿಯುಗದ ಧರ್ಮವಾಗಿದೆ ! ವಿಧಾನಸೌಧಗಳಲ್ಲಿ ಮೇಜುಹತ್ತುವುದು, ಮೈಕೈ ಮಿಳಾಯಿಸಿ ಹೊಡೆದಾಡುವುದು ಅದೇ ’ವಿಜ್ಞಾನಿಗಳ’ ಪ್ರತಿರೂಪವಾಗಿದೆ. ನಿಮ್ಮ ಮಕ್ಕಳು ಏನೂ ಆಗದಿದ್ದರೂ ಪರವಾಗಿಲ್ಲ ಇಂತಹ ’ವಿಜ್ಞಾನಿ’ಗಳಾಗಲಿ ಎಲ್ಲಾದರೂ ಮಂತ್ರಿಮಂಡಲ ಸೇರಿ ಬದುಕಿಕೊಂಡು ಹೋಗುತ್ತಾರೆ! ಹಲವಾರು ಜನರಿಗೆ ಸಂಧಿ[ಗ್ಧತೆ]ಯನ್ನು ತಂದಿಡುವ ಇಂಥವರು ಹಲವಾರು ಕಡೆ ತಿರುಗಿ ಅಲ್ಲೆಲ್ಲಾ ಬೇರೆ ಬೇರೆ ಸಂಧಿ[ಸುವ]ಕ್ರಿಯೆಯನ್ನು ಮಾಡಿ ಅನೇಕ ’ಮರಿ ವಿಜ್ಞಾನಿಗಳ’ ಕೊಡುಗೆ ನೀಡುತ್ತಾರೆ! ಬ್ರಷ್ಟಾಚಾರ ನಿರ್ಮೂಲನಾ ಆಂದೋಲನಕ್ಕೆ ಇವರೂ ಸೇರಿಕೊಂಡರೆ ಆಶ್ಚರ್ಯವೇನಿಲ್ಲ. ಅವರಲ್ಲೇ ಕೆಲವರು ಪಾದಯಾತ್ರೆ ಮಾಡುತ್ತಾರೆ-ಕ್ವಿಂಟಾಲುಗಟ್ಟಲೇ ಒಣಹಣ್ಣು-ಬೀಜಗಳನ್ನು [ಡ್ರೈ ಫ್ರೂಟ್ಸ್] ತಿಂದು ಹಾಕುತ್ತಾರೆ!

ಹೊಸ ಪರಿವೀಕ್ಷಣೆ : ಚೆನ್ನಾಗಿ ಓದಿದವರು ವೈದ್ಯರೋ , ತಂತ್ರಜ್ಞರೋ ಆಗುತ್ತಾರೆ, ಸ್ವಲ್ಪ ಓದಿದವರು ಆಡಳಿತಾತ್ಮಕ ಸೇವೆಗೆ ಸೇರುತ್ತಾರೆ, ಚಿಲ್ಲರೇ ಓದಿದವರು ಆಡಳಿತ ನಡೆಸುವವರಿಗೆ ಸಹಾಯಕರೋ ಅಥವಾ ಕಂತ್ರಾಟುದಾರರೋ ಆಗುತ್ತಾರೆ, ಏನೂ ಓದದ ರೌಡಿಗಳು ಈ ಎಲ್ಲರನ್ನೂ ಆಳುವ ಪ್ರಭುಗಳಾಗುತ್ತಾರೆ ! ಇದು ಭಾರತದಲ್ಲಿ ಮಾತ್ರ ಸಾಧ್ಯ, ಜೈ ಹಿಂದ್ !


Saturday, June 11, 2011

ರಮ್ಯ ಚಿತ್ತಾರ !


ಛಾಯಾಚಿತ್ರ
ಕಲಾವಿದ ದಿಗ್ವಾಸ ಹೆಗಡೆಯವರ ಚಿತ್ರಕ್ಕೆ ಅಕ್ಷರ ಪೋಣಿಸುವ ಪ್ರಯತ್ನ ಕೆಳಗಿನ ಕವನ :
ರಮ್ಯ ಚಿತ್ತಾರ !

ಓಹೋ ಎಂಥ ರಮ್ಯ ಚಿತ್ತಾರ ನಿನ್ನ ಮೈಯೊಳು !
ನೋಡುವಾತ ಅಲ್ಲೇ ಸೋತ ಕಣ್ಣನೆಟ್ಟು ಅದರೊಳು

ಕಂಬದಂತೆ ನಿಂತ ಕಾಲ್ಗೆ ಗರಿಯ ಸೂರು ಬಣ್ಣದಿ
ಸಣ್ಣ ಕಣ್ಣೊಳಿರುವ ಭಾವ ಇರಿದು ಕರೆದು ವರ್ಣದಿ

ಕೊಕ್ಕು ಉದ್ದವಾದರೇನು ? ತಕ್ಕದಾಶರೀರಕೆ
ಸೊಕ್ಕಿನಿಂತ ಕೆಂಪು ಆಂಗ್ಲನಂತೆ ತೋರುವುದಕೆ !

ಉದ್ದ ಕತ್ತು ಕಾಣುತಿಹುದು ಶಿಖರ ಕಳಸದಾ ಥರ
ಎದ್ದುನಿಂತು ಮೈಯ ಸೆಟೆದು ಕಾಣುವಾಗ ಹೊಸತರ

ರಥದ ಮೇಲೆ ಹಚ್ಚಿದಂಥ ಪತಾಕೆಗಳ ಸಂಭ್ರಮ
ಪಥಗಳಲ್ಲಿ ಕಪ್ಪು ಬಿಳಿ ಕೆಂಪು ಅಹ ಮನೋರಮ

Friday, June 10, 2011

ವಾರಾನ್ನದಾತೆಗೆ


ವಾರಾನ್ನದಾತೆಗೆ

ಹಿಂದಕ್ಕೆ ಓದುವ ಹಂಬಲವಿರುವ ಮತ್ತು ಆರ್ಥಿಕವಾಗಿ ಯಾವುದೇ ಸೌಲಭ್ಯ ಇರದಿರುವ ಹುಡುಗರಿಗೆ ಪಟ್ಟಣಗಳಲ್ಲಿ ಇರುವ ಕೆಲವು ಕುಲೀನ ಮನೆಗಳವರು ವಾರಾನ್ನದ ಸಹಾಯ ನೀಡುತ್ತಿದ್ದರು. ವಾರಕ್ಕೊಂದು ದಿನದಂತೇ ವಾರದಲ್ಲಿ ಏಳುದಿನ ಏಳುಮನೆಗಳಲ್ಲಿ ಆಹಾರವನ್ನು ಪಡೆಯುತ್ತಾ ಒದಗಬಹುದಾದ ಬೇಸರದ ಸನ್ನಿವೇಶಗಳನ್ನು ಎದುರಿಸುತ್ತಾ ಅಲ್ಲಲ್ಲಿಗೇ ತನ್ನ ಓದುವ ಸರಂಜಾಮುಗಳನ್ನು ಹೊತ್ತು ತಿರುಗುತ್ತಾ ಓದುತ್ತಿದ್ದ ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆಯ ಸ್ಥಾನಗಳಲ್ಲಿ ಇದ್ದಾರೆ.

ಹೀಗೊಂದು ಘಟನೆ : ಒಬ್ಬ ಹುಡುಗನಿಗೆ ವಾರಾನ್ನದ ದಿನಗಳ ಮಧ್ಯೆ ಒಂದು ದಿನ ಅವನು ಹೋಗಬೇಕಾದ ಮನೆಯವರು ಎಲ್ಲೋ ಬೇರೆ ಊರಿಗೆ ಹೋಗಿದ್ದರಿಂದ ಆ ಹುಡುಗ ಉಪವಾಸ ಇರಬೇಕಾಗಿತ್ತು. ಹಸಿವಿಗೆ ಹೆದರಿದ ಹುಡುಗ ತನ್ನ ಸಹಾಧ್ಯಾಯಿ ಮಿತ್ರನಲ್ಲಿ ಕೋರಿಕೊಂಡು " ನಿನ್ನ ಅಮ್ಮನನ್ನು ಕೇಳು .. ಇವತ್ತೊಂದು ದಿನ ನನಗೆ ನಿಮ್ಮಲ್ಲಿ ಊಟ ಸಿಗಬಹುದೇ ? " ಎಂದು ಹೇಳಿಕಳಿಸಿದಾಗ ಆ ಮನೆಯ ಯಜಮಾನಿ ಈತನನ್ನು ಆದರದಿಂದ ಬರಹೇಳುತ್ತಾಳೆ. ಅಲ್ಲಿಗೆ ಹೋದಮೇಲೆ ಈತನಿಗೆ ಆ ಮನೆಯಲ್ಲಿ ಇರುವ ಕಿತ್ತುತಿನ್ನುವ ಬಡತನದ ಅರಿವಾಗುತ್ತದೆ. ಹೇಗೋ ಅಂತೂ ಊಟದ ಸಮಯದಲ್ಲಿ
ಆ ತಾಯಿ ತನ್ನ ನಾಲ್ಕಾರು ಮಕ್ಕಳಿಗೆ ಹಳಸಿದ ಅನ್ನವನ್ನು ಬಡಿಸಿ ಬಂದ ಅತಿಥಿ ಈ ಹುಡುಗನಿಗೆ ಬಿಸಿಬಿಸಿಯಾಗಿ ಮಾಡಿದ ಅನ್ನವನ್ನು ಬಡಿಸುತ್ತಾಳೆ. ಇದನ್ನು ಮನಗಂಡ ಈತ ಆಕೆಯಲ್ಲಿ ಕೇಳಿದಾಗ ಆಕೆ ಅದನ್ನು ವಿಶೇಷವೆಂದು ತೋರಗೊಡದೇ ಸಹಜವೆಂದು ಹೇಳುತ್ತಾಳೆ. ಸಹಾಧ್ಯಾಯಿ ಮಿತ್ರನನ್ನು ಆಮೇಲೆ ಕೇಳಿದಾಗ " ಅಕ್ಕಿ ಕಮ್ಮಿ ಇರುವುದರಿಂದ ಅಮ್ಮ ವಾರದಿಂದ ಒಪ್ಪೊತ್ತು ಮಾತ್ರ ಊಟಮಾಡಿದ್ದಾಳೆ, ಅಪ್ಪ ದುಡಿಮೆಗಾಗಿ ದೂರವೆಲ್ಲೋ ಹೋಗಿದ್ದಾರೆ " ಎಂಬುದಾಗಿ ತಿಳಿಸುತ್ತಾನೆ.

ಇಂದು ಕಾಲ ಬದಲಾಗಿದೆ. ಸೌಕರ್ಯಗಳು, ಸೌಲಭ್ಯಗಳು ತೀರಾ ಜಾಸ್ತಿಯೇ ಆಗಿವೆ. ಆದರೆ ವಾರಾನ್ನವಿರಲಿ ಅಪರೂಪಕ್ಕೊಮ್ಮೆ ಬಂದ ಅತಿಥಿಗಳಿಗೂ ಗೊಣಗದೇ ಬಡಿಸುವ ಗೃಹಿಣಿಯರು ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ! ತನ್ನ ಹಾಗೂ ತನ್ನ ಮಕ್ಕಳ ಬವಣೆಗಳನ್ನು ಗಣಿಸದೇ ಬಂದ ಮುಗ್ಧ ವಿದ್ಯಾರ್ಥಿಯ ಹಸಿವನ್ನು ತಣಿಸಿದ ಅಂತಹ ಸಹಸ್ರಾರು ಅಮ್ಮಂದಿರ ಋಣವನ್ನು ನೆನೆದು ವಂದಿಸುತ್ತ ಮಲ್ಲಿಗೆ ಕವಿ ದಿ| ನರಸಿಂಹ ಸ್ವಾಮಿಯವರ ಸಹಜಗತಿಯಲ್ಲಿ ರಚಿಸಿದ ಈ ಹಾಡು ಇಂದು ನಿಮ್ಮೆಲ್ಲರಿಗೂ ಸೇರಿದಂತೇ ಲೋಕಾರ್ಪಣೆಗೊಳ್ಳುತ್ತಿದೆ--


"ಅಮ್ಮಾ ಹಸಿವು" ಎಂಬ ಕಂದಗಳ ರಮಿಸುತ್ತ |
ವಾರಾನ್ನ ನೀಡಿದಳು ತಾಯಿ | ಆರೇಳು ದಿನದಿಂದ ಒಪ್ಪೊತ್ತು
ಊಟದಲೂ ಸುಖಕಂಡ ಮಮತಾಮಯಿ| ತಾಯಿ ಆ ನನ್ನ ಕರುಣಾಮಯಿ

ಓದುವಗೆ ಇರಬೇಕು ನೆರವು ಸಕಲಾರ್ಥದಲಿ |
ಬೋಧಿಸುವ ಜನಬೇಕು ವಿಹಿತ ಮಾರ್ಗದಲಿ | ಸಾಧಿಸುವ ಛಲಬೇಕು
ಎಂದೆನುತ ಕಷ್ಟಗಳ ಬದಿಗೊತ್ತಿ ನೀಡಿದಳು ಎಂಥಾ ಸಹೃದಯಿ

ಬಿಸಿಯಾದ ಅನ್ನದಲಿ ಹೊಸಬಗೆಯ ತಿನಿಸಿನಲಿ |
ನಸುನಕ್ಕು ಬಡಿಸುವಾ ಅನ್ನಪೂರ್ಣೆಯ ಮುಖವು | ಒಸಗೆಯೇನಿದು ನಮಗೆ
ಪೂರ್ವಜನ್ಮದ ಸುಕೃತ ಹಿತನುಡಿಯ ಹೇಳಿದಳು ಅಮೃತಮಯಿ

ಇಂದು ನಿನ್ನೆಯದಲ್ಲ ತಿಂದು ಸವೆಸಿದ ಸಮಯ |
ಅಂದಿಗಾಗಲೇ ವರುಷ ನಾಲ್ಕು ಕಳೆದೂ | ಎಂದೂ ಕಡೆಗಣಿಸದೇ
" ತೊಂದರೆಯು " ಎನ್ನದೇ ಚಂದದಲಿ ಸಲಹಿದಳು ತಾಯಹೃದಯಿ

ಸಂದು ಹೋದುದು ಕಾಲ ಕುಂದುಕೊರತೆಗಳಿಲ್ಲ |
ಹಿಂದೊಮ್ಮೆ ಅನ್ನವಿತ್ತವಳನ್ನು ನೆನೆಯೆ | ಮಂದ ಲಾಂದ್ರದ ದೀಪ
ಅಂದಿನಲಿ ಹರಡಿತ್ತು ಸುಂದರ ಪಾದಗಳ ಕಂಡೆ ಬಡಪಾಯಿ

Wednesday, June 8, 2011

’ಬ್ರಹ್ಮಪುರಿಯ ಭಿಕ್ಷುಕ’ ನನ್ನು ಕಂಡೆ




’ಬ್ರಹ್ಮಪುರಿಯ ಭಿಕ್ಷುಕ’ ನನ್ನು ಕಂಡೆ

ಹೆಸರೇ ವಿಚಿತ್ರ ಎನಿಸುವುದಿಲ್ಲವೇ ? ಇದು ನಮ್ಮ ಆದ್ಯ ದಿವಂಗತ ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅರ್ಥಾತ್ ಡಿ.ವಿ.ಗುಂಡಪ್ಪನವರ ಬದುಕಿನ ಹಲವು ಪಲುಕುಗಳ ಸಂಗ್ರಹ. ಸೆರೆಹಿಡಿದವರು ಹಲವರು, ಪೋಣಿಸಿದವರು ಹಿರಿಯ ಮಿತ್ರರಾದ ಶತಾವಧಾನಿ ರಾ. ಗಣೇಶ್ ಅವರು. ಪುಸ್ತಕಗಳೆನೋ ಸಾವಿರಾರು ಆದರೆ ಓದುವ ಗುಣಮಟ್ಟ ಮತ್ತು ಓದಿಸುವ ತಾಕತ್ತುಳ್ಳ ಅಂಥಾ ಪುಸ್ತಕಗಳು ಕೇವಲ ಕೆಲವು. ನಾನು ಹೀಗೆ ನೇರಾನೇರ ಹೇಳುತ್ತಿರುವುದಕ್ಕೆ ಬರೆಯುವ ಯಾರೂ ಬೇಸರಿಸಬೇಕಿಲ್ಲ. ಇದರಲ್ಲಿ ನಾವು ಕಲಿತುಕೊಳ್ಳುವ ಔಚಿತ್ಯವಿದೆ. ತಪ್ಪನ್ನು ತಪ್ಪು ಎನ್ನದೇ ಮುಚ್ಚಿಕೊಂಡರೆ ಬೆಳವಣಿಗೆ ಸಾಧ್ಯವಿಲ್ಲ. ಬಸಿರಾಗಿದ್ದು ತಿಳಿಯದೇ ಹೋದರೂ ಮಗುವಾಗಿದ್ದು ಬಹಿರಂಗವಾಗಿಬಿಡುತ್ತದೆ. ಹೆತ್ತಮಗುವನ್ನು ತಿಪ್ಪೆಗೆ ಎಸೆಯುವ ತಾಯಂದಿರಂತಾಗದೇ ಜೋಗುಳಹಾಡಿ ಅನವರತ ಆ ಮಗುವಿನ ಆರೈಕೆ ಮಾಡಿ, ಆದ್ಯತೆನೋಡಿ ಸಲಹುವುದು ಉತ್ತಮ ತಾಯಂದಿರಂತಾಗುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಭಗವತ್ಪಾದ ಶಂಕರರು ಹುಟ್ಟುವ ಮುನ್ನ ಕನಸಲ್ಲಿ ಅವರ ತಂದೆ-ತಾಯಿಗೆ ಕಾಣಿಸಿಕೊಂಡ ದೇವರು ಕೇಳಿದನಂತೆ " ನಿಮಗೆ ನೂರಾರು ವರ್ಷ ಬದುಕುವ ಸಾದಾ ಸೀದಾ ಮಕ್ಕಳು ಬೇಕೋ ಅಥವಾ ಅಪ್ರತಿಮ ಪ್ರತಿಭಾವಂತನಾಗಿ ಅಲ್ಪಾಯುಷಿಯಾಗಿ ಲೋಕವನ್ನೇ ಬೆಳಗುವ ಒಬ್ಬನೇ ಮಗು ಸಾಕೋ ? " ಆಗ ಪುಣ್ಯಾತ್ಮರಾದ ಆ ತಂದೆ-ತಾಯಿ ಕೋರಿಕೊಂಡಿದ್ದು ಲೋಕೋತ್ತರ ಪ್ರತಿಭಾವಂತ ಅಲ್ಪಾಯುಷಿ ಒಬ್ಬನೇ ಮಗುವಿಗಾಗಿ. ಆ ಮಗುವಿನ ಬಗ್ಗೆ ಮತ್ತೆ ಈಗ ಹೊಸದಾಗಿ ಹೇಳಬೇಕಿಲ್ಲ; ಯಾಕೆಂದರೆ ಅದು ಜಗತ್ತೇ ಮೂಕವಿಸ್ಮಿತವಾಗಿ ಕಂಡ ಬೆಳಕು! ಹಲವು ಎಂತೆಂಥದೋ ಕೃತಿಗಳನ್ನು ಬರೆದೆ ಎನ್ನುವುದಕ್ಕಿಂತಾ ಕೆಲವೇ ಉತ್ತಮ ಕೃತಿಗಳನ್ನು ಬರೆದರೆ ಸಾಕು ಎನಿಸುತ್ತದೆ.

ಇತ್ತೀಚೆಗೆ ನಾವು ದಿನವಹಿ ನೋಡುವ, ಅನಿವಾರ್ಯುವಾಗಿ ಓದುವ ಹಲವು ಕೃತಿಗಳು ನಿಜಕ್ಕೂ ಅವಶ್ಯಕವೇ ಎಂಬುದು ಕಾಡುವ ಪ್ರಶ್ನೆಯಾಗುತ್ತದೆ. ಹುಡುಗಿಯಮೇಲೆ, ಅವಳ ಸೊಂಟದಮೇಲೆ, ಅವಳು ಉದ್ಯಾನದಲ್ಲೋ ಇನ್ನೆಲ್ಲೋ ಕುಳಿತ ಭಂಗಿಯಮೇಲೆ ವಾಕರಿಕೆ ಬರುವಷ್ಟು-ತಲೆಚಿಟ್ಟು ಹಿಡಿಸುವಷ್ಟು ಕವನಗಳು ಬರೆಯಲ್ಪಟ್ಟಿವೆ. ಇದನ್ನು ಬಿಟ್ಟು ಹೊರ ಜಗತ್ತೇ ಇಲ್ಲ ಎನ್ನುವ ಮನೋಭಾವದ ತರುಣ ಲೇಖಕರೂ ಇದ್ದಾರೆ. ಇಲ್ಲಿ ಹೀಗೊಂದು ತಮಾಷೆಯ ಉದಾಹರಣೆ ತೆಗೆದುಕೊಳ್ಳುತ್ತೇನೆ. ಒಮ್ಮೆ ಹಳ್ಳಿಯೊಂದರ ಯಾರದೋ ಮನೆಗೆ ಹೋದಾಗ ಅವರು ಬಹಳ ತಮಾಷೆಯಾಗಿ ಮಾತನಾಡುತ್ತಿದ್ದರು. ನಾನೂ ಹಾಗೆ ಲೋಕಾಭಿರಾಮವಾಗಿ ಮಾತನಾಡುತ್ತಾ " ನಿಮ್ಮನೆಯ ಮುಂದೆ ಮಲಗಿರುವ ದಪ್ಪದ ನಾಯಿ ನೋಡಿ ಹೆದರಿಬಿಟ್ಟೆ ಆದರೆ ಏನೂಮಾಡದ ಬಡಪಾಯಿ" ಎಂದೆ. ಅದಕ್ಕವರು " ಹಾಂ ಅದು ನಾಯಿ ಜಾತಿ " ಎಂದು ಗೊಳ್ಳನೆ ನಕ್ಕರು! ನಂಗೆ ಅರ್ಥವಾಗಲಿಲ್ಲ. ಆಗ ಬಿಡಿಸಿ ಹೇಳಿದರು " ನಾಯಿ ಜಾತಿ ಮತ್ತು ಜಾತಿ ನಾಯಿ ಹೀಗೆ ಎರಡು ರೀತಿ ಇರುತ್ತದೆ, ನಾಯಿ ಜಾತಿ ಎಂದರೆ ನಾಯಿಗಳ ವರ್ಗಕ್ಕೆ ಸೇರಿದ್ದು ಅದೇ ಜಾತಿ ನಾಯಿ ಎಂದರೆ ನಾಯಿಗಳ ವರ್ಗದಲ್ಲಿ ವಿಶಿಷ್ಟ ತಳಿಯ ನಾಯಿ " ಎನ್ನುತ್ತಾ ಮತ್ತೆ ನಕ್ಕರು. ಇಅದೇ ಫಾರ್ಮ್ಯುಲಾವನ್ನು ನಾನು ಎಲ್ಲಾರಂಗಗಳಲ್ಲೂ ಉಪಯೋಗಿಸಲು ಕಲಿತುಬಿಟ್ಟೆ! ಅದೇ ರೀತಿ ಲೇಖಕರಲ್ಲೂ ಲೇಖಕರ ಜಾತಿ ಮಾತು ಜಾತಿ ಲೇಖಕರು ಎಂದು ಬಣ್ಣಿಸಬಹುದಾಗಿದೆ. ಜಾತಿ ಲೇಖಕರು ಬರೆದ ಕೃತಿಗಳು ನಿಜವಾಗಿಯೂ ಓದಲೇಬೇಕಾದ ಮತ್ತು ಓದುವುದರಿಂದ ನಮ್ಮ ಜ್ಞಾನವನ್ನು ವೃದ್ಧಿಸುವ ರೀತಿಯಲ್ಲಿದ್ದರೆ ಲೇಖಕರ ಜಾತಿಗೆ ಸೇರಿದವರು ಬರೆದ ಕೃತಿಗಳನ್ನು ಅವರಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ನಮ್ಮ ಸಮಯವನ್ನು ವಿನಾಕಾರಣ ವ್ಯರ್ಥಮಾಡಿಕೊಳ್ಳುತ್ತಾ ಓದಬೇಕಾಗುತ್ತದೆ. ಹೀಗಾಗಿ ಬರೆಯುವಾಗ ತಾನು ಏನು ಬರೆಯುತ್ತಿದ್ದೇನೆ ಮತ್ತು ಆ ಬರಹದಿಂದ ಆಗಬಹುದಾದ ಫಲಶೃತಿ ಏನು ಎಂಬುದನ್ನು ಪರಿಗಣಿಸಿ ಸಾಮಾಜಿಕವಾಗಿ ಎಳ್ಳಷ್ಟಾದರೂ ಉಪಯೋಗಕ್ಕೆ ಬರಬಹುದಾದ ವಿಷಯಗಳನ್ನು ಇಟ್ಟು ಬರೆಯಬೇಕಾಗುತ್ತದೆ. ಇಲ್ಲದೇ

ಜೀವನ ನೂರುದಿನ
ಕಾಲೇಜು ಆರುದಿನ
ಕೂಡಿಬಾಳೋಣ ಬಾರೇ ಮೂರು ದಿನ

-ಎಂದರೂ ಅದು ಕವನ ಎಂದುಕೊಂಡು ಬೀಗುವ ಮಹಾಕವಿಗಳಿಗೆ ನನ್ನ ದೊಡ್ಡ ನಮಸ್ಕಾರ! ಬೇಕಾದರೆ ಇದನ್ನೂ ಸೇರಿಸಿಕೊಳ್ಳಿ :

ಆಮೇಲೆ ನಡೆಯುವುದೇ ಇನ್ನೂರೆಪ್ಪತ್ತು ದಿನ !
ನಾ ಕೈಕೊಟ್ಟಾಗ ನಿನ್ನ ಜೀವನ ಡಂಡಣಾ ಡಣ !

ಆಗಾಗ ಇದನ್ನೇ ಹೇಳುತ್ತಲೇ ಇದ್ದೇನೆ. ಹೌದೌದು ಅವರವರು ಅವರವರಿಗೆ ತೋಚಿದ್ದನ್ನು ಗೀಚುತ್ತಾರೆ-ಅದು ಅವರಿಷ್ಟ: ಕೇಳುವುದಕ್ಕೆ ನೀವ್ಯಾರು ಎನ್ನುವವರಿಗೆ ಉತ್ತರಿಸಲಾರೆ. ಅದಕ್ಕೆಂತಲೇ ಹಿಂದೆ ಹಲವು ಸಾರಿ.. ಸಾರಿ ಹೇಳಿದ್ದೇನೆ ಬರೆಯುವುದೆಲ್ಲಾ ಸಾಹಿತ್ಯವಾಗುವುದಿಲ್ಲಾ ಅಂತ. ಕಥೆಗಾರರಾದ ಶ್ರೀಯುತ ಎಸ್. ದಿವಾಕರರ ಕೂಡ ಮಾತನಾಡುತ್ತಾ ಇರುವಾಗ ಒಮ್ಮೆ ಕೇಳಿದ್ದೆ "ಯುವಪೀಳಿಗೆ ಎತ್ತೆತ್ತಲೋ ಸಾಗುತ್ತಿದೆ, ಈ ಬರಹಗಳು ಎಷ್ಟರಮಟ್ಟಿಗೆ ಬಾಳುತ್ತವೆ ? " ಎಂದು. ಅದಕ್ಕವರು ಹೇಳಿದರು " ಕಾರಂತ, ಬೇಂದ್ರೆ, ಕುವೆಂಪು, ಡಿವೀಜಿ ಇವರೆಲ್ಲಾ ಹೋಗಿ ಶತಮಾನಗಳೇ ಕಳೆದರೂ ಅವರುಗಳ ಕೃತಿಗಳು ಅವರನ್ನು ಇನ್ನೂ ಜೀವಂತವಾಗಿ ಇಡುತ್ತಿವೆ;ಇಡುತ್ತವೆ, ಆದರೆ ಸಮಕಾಲೀನರಾದ ಇನ್ನೂ ಹಲವರ ಹೆಸರುಗಳೇ ಯಾರಿಗೂ ಗೊತ್ತಾಗಿಲ್ಲ ಅದೇ ರೀತಿ ಉತ್ತಮ ಕೃತಿಗಳ ಜನಕರು ಸತ್ತರೂ ಬದುಕುತ್ತಾರೆ, ಕೆಟ್ಟ ಕೃತಿಗಳ ಲೇಖಕರು ಬದುಕಿದ್ದರೂ ಸತ್ತಿರುತ್ತಾರೆ" --ಅವರ ಈ ಮಾತು ನನಗೆ ಬಹಳ ಹಿಡಿಸಿತು. ಅಂತಹ ಉತ್ತಮ ಕೃತಿಗಳನ್ನು ಸಮಾಜಕ್ಕೆ ಕೊಟ್ಟ ಮಹಾನ್ ಮೇಧಾವಿಗಳಲ್ಲಿ ಡೀವೀಜಿ ಒಬ್ಬರಾಗಿದ್ದಾರೆ.

’ಮಂಕು ತಿಮ್ಮನ ಕಗ್ಗ’ ಮರುಳು ಮುನಿಯನ ಕಗ್ಗ’ ಕನ್ನಡ ಸಾಹಿತ್ಯಲೋಕದಲ್ಲಿ ಎಬ್ಬಿಸಿದ ಸಾತ್ವಿಕ ಸಾರಸ್ವತ ಅಲೆಗಳು ಇನ್ನೂ ಮತ್ತೂ ಆಗಾಗ ಎದ್ದೆದ್ದು ಬರುತ್ತಲೇ ಇರುತ್ತವೆ; ನರ್ತಿಸುತ್ತವೆ. ಕಾರಣವಿಷ್ಟೇ : ಬದುಕಿನ ಮೌಲ್ಯಗಳಿಗೆ ಅವು ಕೊಡಮಾಡುವ ಸಂದೇಶಗಳು ಅಪ್ರತಿಮವಾಗಿವೆ. ಸಾಸಿವೆಯಲ್ಲಿ ಸಾಗರದೋಪಾದಿಯ ಜ್ಞಾನವನ್ನು ತುಂಬಿಕೊಡಬಲ್ಲ ಶಕ್ತಿ ಅವುಗಳಿಗಿತ್ತು-ಇದೆ-ಇರುತ್ತದೆ. ಸಮಾಜದಲ್ಲಿ ಯಾರೇ ನೀತಿಬಾಹಿರ ಚಟುವಟಿಕೆಗಳಲ್ಲಿ ನಿರತರಾದಾಗ, ಬ್ರಷ್ಟಾಚಾರಿಗಳಾದಾಗ, ಅನ್ಯಾಯಿಗಳಾದಾಗ ಅವರುಗಳನ್ನು ತನ್ನ ಕೃತಿಗಳಿಂದ ತರಾಟೆಗೆ ತೆಗೆದುಕೊಂಡು ತಿದ್ದುವ ಜವಾಬ್ದಾರಿ ಲೇಖಕನದ್ದಾಗಿರುತ್ತದೆ. ಹರಿತವಾದ ಒಂದು ಖಡ್ಗಕ್ಕಿಂತ ಮೊನಚಾದ ಲೆಕ್ಕಣಿಕೆಯ ಬರಹ ಹೆಚ್ಚಿಗೆ ಘಾಸಿಗೊಳಿಸಬಲ್ಲ ಸಾಮರ್ಥ್ಯವುಳ್ಳದ್ದೆಂದು ಪ್ರಾಜ್ಞರು ತಿಳಿಸುತ್ತಾರೆ. ಸಮಾಜದ ಒಂದು ಮುಖವಾದ ಸ್ವೇಚ್ಛಾಚಾರ ಮತ್ತು ದುರಾಚಾರಗಳಲ್ಲಿ ನಿರತರಾದ ವ್ಯಕ್ತಿಗಳಿಗೆ ಪರೋಕ್ಷ ಸಂದೇಶ ರವಾನಿಸಿ ಸಮಾಜವನ್ನು ತಿದ್ದುವ ಘನಕಾರ್ಯವನ್ನು ಸಾಹಿತಿಗಳು ಮಾಡಿದರೆ ಅದು ಸಾರ್ಥಕವಾಗಿರುತ್ತದೆ. ಬರಿದೇ ಬಂಡಾಯ ಸಾಹಿತಿ, ಬುದ್ಧಿಜೀವಿ ಸಾಹಿತಿ ಎಂದೆಲ್ಲಾ ಕರೆಸಿಕೊಳ್ಳುವ ಅನೇಕರು ಲೇಖಕರ ಜಾತಿಯೇನೋ ಹೌದು; ಆದರೆ ಅವರುಗಳಿಂದ ಸಮಾಜಕ್ಕೆ ಆಘಾತವೇ ಹೊರತು ಪೈಸೆ ಉಪಕಾರವೂ ಆಗುವುದಿಲ್ಲ. ಸಾಹಿತಿಯೊಬ್ಬ ನಿಷ್ಪಕ್ಷಪಾತಿಯಾಗಿದ್ದು ಯಾವುದೇ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿರಬಾರದು. ಹಿಂದಿನಕಾಲದಲ್ಲಿ ನ್ಯಾಯಾಧೀಶರು ಹೇಗೆ ಜನಸಾಮಾನ್ಯರೊಟ್ಟಿಗಾಗಲೀ ರಾಜಕಾರಣಿಗಳೊಟ್ಟಿಗಾಗಲೀ ಬೆರೆಯದೇ ಸನ್ಯಾಸಿಗಳ ಥರಾ ಸರ್ವಸಂಗ ಪರಿತ್ಯಾಗಿಯಾಗಿ ದೂರದಲ್ಲಿದ್ದು ನ್ಯಾಯಸ್ಥಾನಕ್ಕೆ ಆಗಮಿಸಿ ನ್ಯಾಯ ತೀರ್ಪನ್ನು ನೀಡುತ್ತಿದ್ದರೋ ಹಾಗೇ ಸಾಹಿತಿಯೂ ಕೂಡ ಸರ್ವಸಂಗ ಪರಿತ್ಯಾಗಿಯಾಗಿರಬೇಕು. ಇದನ್ನು ಸಾಧಿಸಿದವರು ನಮ್ಮ ಡೀವೀಜಿ.

ಅವರ ಕೃತಿಗಳು ಸ್ವಾನುಭವದಿಂದಲೂ ಲೋಕವನ್ನು ಗಮನಿಸಿ ತಿಳಿದ ಜ್ಞಾನದಿಂದಲೂ ಹೊರಹೊಮ್ಮಿದವಾಗಿವೆ. ಮುಳಬಾಗಿಲು ಕಡೆಯಿಂದ ಬೆಂಗಳೂರಿಗೆ ಓದುವ ಉದ್ದೇಶದಿಂದ ಬಂದ ಡೀವಿಜಿಗೆ ಯಾರ ಸಹಾಯವೂ ಇರಲಿಲ್ಲ. ಉದರಂಭರಣೆಗಾಗಿ ಅವರು ಮಾಡಿದ್ದು ಒಂದೇ ವೃತ್ತಿಯಲ್ಲ. ಕೇವಲ ಅಲ್ಪಕಾಲ ಅವರು ಅಧ್ಯಾಪನ ಮಾಡಿದ್ದು ಬಿಟ್ಟರೆ ಅವರ ಮುಕ್ಕಾಲು ಭಾಗದ ’ಲೋಕಧ್ಯಾಪನ’ ನಡೆದಿದ್ದು ಅವರ ಕೃತಿಗಳಿಂದಲೇ. ಬದುಕುಬಂಡಿಯನ್ನು ದೂಡುವ ಕೆಲವು ಕಾಲ ಅವರು ಕುದುರೆ ಜಟಕಾಬಂಡಿಗಳಿಗೆ ಬಣ್ಣ ಬಡಿಯುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಆ ಅನುಭವದಲ್ಲೇ ಅವರು ಹೇಳಿದರು " ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ......" ಎಂತಹ ಮಾತು ನೋಡಿ! ಬಡತನದಲ್ಲಿ ಹುಟ್ಟಿ, ಕಷ್ಟದಲ್ಲೇ ಬೆಳೆದು, ಹೇಗೆ ಹೇಗೋ ಡಿಪ್ಲೊಮಾ ಮುಗಿಸಿದ ಡೀವೀಜಿಯವರ ಅಗಾಧ ಪಾಂಡಿತ್ಯ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಸಂಸ್ಕೃತದಲ್ಲೂ ಸ್ವಯಂಭುವಾಗಿ ಮೇಲೆದ್ದ ಅವರು ಸ್ವಂತ ಓದಿನಿಂದ ಕಲಿತ ಪಾಠ ಲೋಕದ ಯಾವ ಪದವಿಗಳಿಗಿಂತ ದೊಡ್ಡದಾಗಿದೆ.

ನಂಗಂತೂ ಚಾರಣ, ಪರ್ವತಾರೋಹಣ, ಕವಿ-ಸಾಹಿತಿಗಳ ಒಡನಾಟ, ಅವರುಗಳ ಬದುಕಿನ ದಿನಚರಿ-ಕಾಲಘಟ್ಟಗಳಲ್ಲಿ ನಡೆದ ಘಟನೆಗಳು ಓದಲು ತುಂಬಾ ಹಿತಕರವಾಗಿರುತ್ತವೆ. ’ಶಿಖರಗಾಮಿಗಳು’ ಎಂಬ ಪುಸ್ತಕವೊಂದನ್ನು ಓದುವಾಗ ಮೈಯ್ಯೆಲ್ಲಾ ಮನಸ್ಸಾಗಿ ಒಂದೆರಡೇ ದಿನಗಳಲ್ಲಿ ಓದಿದ್ದೆ. ಆ ನಂತರ ಹಿಮಾಲಯದ ಪರ್ವತ ಶ್ರೇಣಿಗಳನ್ನೂ ಮೌಂಟ್ ಎವರೆಸ್ಟನ್ನೂ ನೋಡುವ ಆಸೆ ಬಹಳವಾಗಿತ್ತು,ಅದು ಈಗಲೂ ಹಾಗೇ ಇದೆ, ಹಾಗೇ ಕಾದಿರಿಸಿ ಸಮಯಕ್ಕಾಗಿ ಕಾದಿದ್ದೇನೆ; ದೇವರು ನಡೆಸಿದರೆ ಹೋಗಿ ಸ್ವಲ್ಪವಾದರೂ ನೋಡಿಬರೋಣ ಎಂದುಕೊಂಡಿದ್ದೇನೆ. ದಿವಂಗತ ತೇನಸಿಂಗ್‍ಗೆ ನಾವು ಕೆಲವರು ಪತ್ರ ಬರೆದಿದ್ದೆವು. ಅವರು ಪ್ರೀತಿಯಿಂದ ಅವರ ಛಾಯಾಚಿತ್ರವನ್ನು ಕಳುಹಿಸಿದ್ದರು. ಅದೇ ರೀತಿ ಉತ್ತಮ ಕವಿ೦-ಸಾಹಿತಿಗಳೂ ಕೂಡ ಸಾರಸ್ವತ ಶಿಖರಗಾಮಿಗಳಾಗಿರುತ್ತಾರೆ. ಅವರ ಜೀವನದ ಕೆಲವು ರಸಮಯ ಸನ್ನಿವೇಶಗಳನ್ನು. ಹಾಸ್ಯಪೂರಿತ ಮಾತಿನ ಚಟಾಕಿಗಳನ್ನು, ಜ್ವಲಂತ ಸಮಸ್ಯೆಗಳನ್ನು ಲಘುವಾಗಿ ಸ್ವೀಕರಿಸಿ ನಿವಾರಿಸಿಕೊಳ್ಳುವ ಜಾಣ್ಮೆಯನ್ನು, ಕೃತಿಗಳ ಮೂಲಕ ಭಗವಂತನನ್ನು ಕಾಣುವ ಹಪಾಹಪಿಯನ್ನು ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ದ್ರವಿಸುತ್ತದೆ; ಕೆಲವೊಮ್ಮೆ ಚಿಕ್ಕ ಚಿಲುಮೆಯಾಗಿ, ಹಲವೊಮ್ಮೆ ಹರಿವ ತೊರೆಯಾಗಿ, ನದಿಯಾಗಿ, ಶರಧಿಯಾಗಿ ವಾಮನಗಾತ್ರಕ್ಕೆ ಬೆಳೆದು ನಿಲ್ಲುತ್ತದೆ! ಇಂತಹ ಆಸೆಗಳನ್ನು ಡೀವಿಜಿಯವರ ಕುರಿತು ಸಂಗ್ರಹಗೊಂಡ " ಬ್ರಹ್ಮಪುರಿಯ ಭಿಕ್ಷುಕ’ ತಣಿಸುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ.

ಸ್ವತಃ ಕೋವಿದರೂ, ಶತಾವಧಾನ ಕಲಾವಿದರೂ ಆಗಿ ವಿದ್ವನ್ಮಣಿಗಳಾದ ಗಣೇಶ್ ಅವರ ಈ ಪ್ರಯತ್ನಕ್ಕೆ ನನ್ನದೊಂದು ಸಲಾಮು ಸಲ್ಲುತ್ತದೆ. ಈ ಲೋಕ ಬ್ರಹ್ಮನ ಸೃಷ್ಟಿ-ಬ್ರಹ್ಮಪುರಿ, ಇಲ್ಲಿರುವ ದಿನಪಡಿಯ ಜೀವಿ ಭಿಕ್ಷುಕ-ಬಹಳ ಗಹನವಾದ ಅರ್ಥದಲ್ಲಿ ಈ ಹೆಸರನ್ನು ಡೀವೀಜಿ ತಮಗೇ ಹೇಳಿಕೊಳ್ಳುತ್ತಿದ್ದರಂತೆ. ಸಾಹಿತಿಗಳಾದ ಹಾಮಾ ನಾಯಕರು ಒಮ್ಮೆ ಹೋದಾಗ ಅಂಗಡಿಯಿಂದ ಬಿಸಿಬಿಸಿ ಜಿಲೇಬಿ ತರಿಸಿ ತಿನ್ನುತ್ತಿದ್ದರಂತೆ ಡೀವೀಜಿ. " ಯಾಕೆ ಸಾರ್ ? ಡಾಕ್ಟರು ನಿಮಗೆ ಪಥ್ಯವನ್ನು ಹೇಳಿದ್ದಾರಲ್ಲವೇ ? " ಎಂದು ನಾಯಕರು ಕೇಳಿದರೆ " ನನ್ನ ದೇಹದಲ್ಲಿ ಎರಡು ಚಾನೆಲ್ ಇವೆಯಪ್ಪಾ. ಒಂದು ಕಾಯಿಲೆಗೆ ಮಾತ್ರೆ, ಕಹಿ ಔಷಧಿ, ನೋವಿನ ಚುಚ್ಚುಮದ್ದು ಇವನ್ನೆಲ್ಲಾ ತೆಗೆದುಕೊಳ್ಳುವಂಥದ್ದು, ಇನ್ನೊಂದು ಬಯಸಿದಾಗ ಬಿಸಿಬಿಸಿ ಬೋಂಡ, ಪಕೋಡ, ಬಜ್ಜಿ, ಸಿಹಿತಿನಿಸು ಸ್ವೀಕರಿಸುವಂಥದ್ದು. ಈ ಎರಡೂ ಬೇರೆ ಬೇರೆ ಅವುಗಳನ್ನು ಒಟ್ಟಿಗೆ ಸೇರಿಸಿಲಾಗದು " ಎಂದು ನಗುತ್ತಾ ನಾಯಕರಿಗೂ ಜಿಲೇಬಿ ತರಿಸಿಕೊಟ್ಟರಂತೆ. ಇನ್ನೊಮ್ಮೆ ವಿದ್ವಾನ್ ರಂಗನಾಥ ಶರ್ಮರು ಅವರ ಮನೆಗೆ ಹೋದಾಗ ಡೀವೀಜಿಯವರ ತಮ್ಮನ ಹೆಂಡತಿ ಬಿಸಿಬಿಸಿಯಾಗಿ ಹೀರೇಕಾಯಿ ಬೋಂಡ ಮಾಡಿ ತಟ್ಟೆಯಲ್ಲಿ ಹಾಕಿ ತಂದುಕೊಟ್ಟರಂತೆ, ಇನ್ನೊಂದು ತಟ್ಟೆಯಲ್ಲಿ ತರಹೇಳಿ ಅದನ್ನು ಡೀವೀಜಿ ಶರ್ಮರಿಗೆ ಕೊಟ್ಟರಂತೆ. ಮಿತಾಹಾರಿಗಳಾದ ಶರ್ಮರು ಒಂದೇ ಬೋಂಡ ತಿಂದು ಸಾಕು ಎಂದರಂತೆ. " ಪಂಡಿತರೇ ನಂಗೆ ಈವಿಷಯದಲ್ಲಿ ಸಂಕೋಚವಿಲ್ಲಾ " ಎಂದ ಡೀವಿಜಿ ಶರ್ಮರ ತಟ್ಟೆಯಲ್ಲಿರುವ ಬೋಂಡಗಳನ್ನೂ ತಾವೇ ತಿಂದರಂತೆ.

ಉತ್ತರ ಕರ್ನಾಟಕದ ಕಡೆ ಆದಿ ಕವಿಗಳ ಊರುಗಳನ್ನು ನೋಡಲು ತೆರಳಿದ್ದ ಡೀವೀಜಿ, ರನ್ನನ ಮುದುವೊಳಲು ಬಂದಾಗ ವಾಹನದಿಂದ ಕೆಳಗಿಳಿದು ಅಲ್ಲಿನ ಮಣ್ಣನ್ನು ತುಸು ತಲೆಯಮೇಲೆ ಹಾಕಿಕೊಂಡರಂತೆ. " ಯಾಕೆ ಸಾರ್ ? " ಎಂದು ಜೊತೆಗಾರರು ಕೇಳಿದಾಗ " ಇದು ರನ್ನನ ಜನ್ಮಸ್ಥಳ..ಅವನು ನಡೆದಾಡಿದ ಪುಣ್ಯಭೂಮಿ, ಈ ನೆಲದ ಮಣ್ಣೇ ನಮಗೆ ಮಂಗಳ ಸೇಸೆ "ಎಂದರಂತೆ. ಕವಿ ಕಲ್ಷ್ಮೀಶನ ಊರಿಗೆ ಹೋಗಿಬಂದ ಡೀವೀಜಿ ಮರಳುವಾಗ ಅಲ್ಲಿಂದ ಮುಷ್ಠಿಗಾತ್ರದ ಮೂರು ಕಲ್ಲುಗಳನ್ನು ತಂದು ತನ್ನ ಬರೆಯುವ ಮೇಜಿನಮೇಲೆ ಇಟ್ಟುಕೊಂಡಿದ್ದು ಪ್ರಾಜ್ಞರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರಮನೆಗೆ ಬಂದಾಗ " ಲಕ್ಷ್ಮೀಶ ಈ ಕಲ್ಲುಗಳಲ್ಲಿ ಇನ್ನೂ ಜೀವಂತವಾಗಿ ಇದ್ದಾನೆ " ಎಂದು ತೋರಿಸಿದ್ದರಂತೆ!

ಹೀಗೇ ಅನೇಕ ಸ್ವಾರಸ್ಯಕರ ಘಟನೆಗಳ ಹಂದರ ’ಬ್ರಹ್ಮಪುರಿಯ ಭಿಕ್ಷುಕ.’ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಇದನ್ನು ಪ್ರಕಟಿಸಿ ಪುಣ್ಯ ಕಟ್ಟಿಕೊಂಡಿದೆ. ಆ ಪ್ರಕಾಶನದವರಿಗೂ ನನ್ನ ನಮನಗಳು. ಇಂತಹ ಪುಸ್ತಕಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರಲಿ. ಕನ್ನಡ ಸಾರಸ್ವತಲೋಕ ತನ್ನ ಖಜಾನೆಯೊಳಗಿನ ವಜ್ರಗಳನ್ನು ಆಗಾಗ ಪ್ರದರ್ಶಿಸುತ್ತಲೇ ಇರಲಿ ಎಂದು ಹಾರೈಸುತ್ತಾ ನಿಮ್ಮಿಂದ ಬೀಳ್ಕೊಂಡು ಮತ್ತೆ ಬರೆಯುತ್ತೇನೆ ಎನ್ನುತ್ತಿದ್ದೇನೆ, ನಮಸ್ಕಾರ.

[ ಚಿತ್ರ ಕೃಪೆ : ಟುಡೇಸ್ ಕಗ್ಗ.ಬ್ಲಾಗ್ ಸ್ಪಾಟ್. ಕಾಂ ]

Tuesday, June 7, 2011

ದುಃಸ್ವಪ್ನವಾಗಿ ಕಾಡಿದ ಮನೆ ’ಪ್ಯಾಕರ್ಸ್ ಆಂಡ್ ಮೂವರ್ಸ್’


ದುಃಸ್ವಪ್ನವಾಗಿ ಕಾಡಿದ ಮನೆಪ್ಯಾಕರ್ಸ್ ಆಂಡ್ ಮೂವರ್ಸ್

ಮನುಷ್ಯನ ಜೀವನಪೂರ್ತಿ ಆತ ಕಲಿಯುವುದಕ್ಕಿದೆ. ಹಿಂದಿನಕಾಲದಲ್ಲಿ ಸ್ವಲ್ಪ ಕಮ್ಮಿ ಇತ್ತೋ ಏನೋ ಈಗಂತೂ ಕ್ಷಣ ಕ್ಷಣವೂ ಕಲಿಯುವುದು ಅನಿವಾರ್ಯವಾಗಿದೆ; ಕಲಿತದ್ದು ಕಮ್ಮಿ ಎಂದುಕೊಂಡು ಮರುಗಬೇಕಾಗಿದೆ. ಯಾವಾಗ ಎಲ್ಲ ಕ್ಷೇತ್ರಗಳಲ್ಲೂ ಕಾಂಚಾಣವೇ ಮುಖ್ಯ ಎಂಬುದು ಹಲವರ ಅನಿಸಿಕೆಯಾಯಿತೋ ಆಗ ಮಾನವೀಯ ಮೌಲ್ಯಗಳು ಕುಸಿದುಹೋಗಿವೆ. ಬದುಕುವ ಹಲವು ರೀತಿಗಳಲ್ಲಿ ಕೆಲವರದು ಬಸಿದುಕೊಂಡು ಬದುಕುವುದು, ಇನ್ನೂ ಕೆಲವರದು ಇಸಿದುಕೊಂಡು ಬದುಕುವುದು, ಮತ್ತೂ ಕೆಲವರದು ಕಸಿದುಕೊಂಡು ಬದುಕುವುದು! ’ನನ್ನದು ನನ್ನದೇ ನಿನ್ನದೂ ನನ್ನದೇಎಂಬ ತತ್ವವನ್ನು ಜನತಾದಳದವರು ಹೇಳಿಕೊಟ್ಟರು. ಆವಾಗಿನಿಂದ ಶುರುವಾದ ತಮ್ಮದೆನ್ನುವ ಪರಿಪಾಟ ಇಂದು ಅತಿರೇಕಕ್ಕೆ ಹೋಗುತ್ತಿದೆ; ಹೋಗಿದೆ. ಭೂಮಿಯ ವ್ಯವಹಾರವಿರಲಿ, ಆಡಳಿತಾತ್ಮಕ ವಿಷಯವಿರಲಿ ಅಲ್ಲೆಲ್ಲಾ ಪರರ ಹಕ್ಕನ್ನು ಕಸಿದು ಎಲ್ಲವೂ ತಮ್ಮದೇ ಎಂಬ ಧೋರ್ಅಣೆಯನ್ನು ಹೊಂದಿ ವಿನಾಕಾರಣ ಹಲವರಿಗೆ ತೊಂದರೆಯಾಗುತ್ತಿದೆ.

ಮಾತಾಡ ಹೊರಟಿದ್ದು ಅತಿ ಚಿಕ್ಕ ವಿಷಯವೇ ಆದರೂ ಇದರ ಅನುಭವ ನಿಮಗೂ ಧಕ್ಕಲಿ ಮೂಲಕ ಎಲ್ಲಾದರೂ ಅಪ್ಪಿತಪ್ಪಿ ನಿಮಗೂ ಆಗಬಹುದಾದ ಇಂತಹ ತೊಂದರೆಗಳು ಬಾಧಿಸದೇ ಇರಲಿ ಎಂಬ ಉದ್ದೇಶದಿಂದ ಹೀಗೆ ಬರೆಯಲು ಹೊರಟಿದ್ದು. ಜೇನು ಹುಳುಗಳು ತಮ್ಮ ಅತಿ ಸಣ್ಣ ಬಾಯಿಯಲ್ಲಿ ಹೀರಿದ ಮಕರಂದವನ್ನು ಗೂಡಿನಲ್ಲಿ ಪೇರಿಸಿ ಪೇರಿಸಿ ಪೇರಿಸಿ ಅಂತೂ ಅದು ಲೀಟರುಗಟ್ಟಲೆಯಾಗುತ್ತದೆ! ಹಾಗೆ ಅವು ಶೇಖರಣೆ ಮಾಡುವುದು ತಮ್ಮ ಮರಿಗಳಿಗಾಗಿ; ಹಾರಲಾಗದ ಅವುಗಳಿಗೂ ಮತ್ತು ಮಕರಂದ ಸಿಗದ ವೇಳೆ ತಮ್ಮೆಲ್ಲರಿಗೂ ಆಹಾರವಾಗಿ ಅದನ್ನು ಬಳಸಲಾಗಿ. ಆದರೆ ಪಾಪಿ ಮನುಷ್ಯನ ಕಣ್ಣಿಗೆ ಬಿದ್ದ ಜೇನುಗೂಡು ಅಮೃತತುಲ್ಯ ಮಕರಂದ ರಹಿತವಾಗಿ ಮತ್ತೆ ಹುಳುಗಳು ತಡಕಾಡುವಂತೇ ಆಗುತ್ತದೆ. ಅದೇ ರೀತಿ ತನ್ನ ಬದುಕಿನ ಮುಂದಿನ ಅಧ್ಯಾಯಕ್ಕಾಗಿ ತನ್ನ ಸುತ್ತ ಗೂಡನ್ನು ಸುತ್ತಿಕೊಳ್ಳುವ ರೇಷ್ಮೆ ಹುಳು ಕಣ್ಣಿಗೆ ಕಂಡಾಗ ಅದನ್ನು ಬಿಸಿನೀರಲ್ಲಿ ಅದ್ದಿ ಸಾಯಿಸಿ ಆಮೇಲೆ ರೇಷ್ಮೆ ದಾರವನ್ನು ಬಿಡಿಸಲಾಗುತ್ತದೆ. ಒಂದೊಂದು ರೇಷ್ಮೆ ಸೀರೆಯ ಹಿಂದೆ, ಬಟ್ಟೆಯ ಹಿಂದೆ ಸಹಸ್ರಾರು ಹುಳಗಳ ಸಾವಿನ ನೋವು ಅಡಗಿರುತ್ತದೆ. ಆದರೂ ಮನುಷ್ಯ ಸಭೆ-ಸಮಾರಂಭಗಳಲ್ಲಿ, ಪೂಜೆ-ಪುನಸ್ಕಾರಗಳಲ್ಲಿ ಬಣ್ಣ ಬಣ್ಣದ ರೇಷ್ಮೆ ಬಟ್ಟೆಗಳನ್ನು ಧರಿಸಿ ತನ್ನ ಅಂದವನ್ನು ಹೆಚ್ಚಿಸಿಕೊಳ್ಳುತ್ತಾನೆ, ಮೆರೆಯುತ್ತಾನೆ. ಕರುವಿನ ಪಾಲಿನ ಹಾಲನ್ನು ತಾನು ಹಿಂಡಿಕೊಂಡು ಕರುವಿಗೆ ಬೇರೇ ಆಹಾರ ನೀಡುತ್ತಾನೆ....ಹೀಗೇ ಎಣಿಸುತ್ತಾ ನಡೆದರೆ ಪ್ರಪಂಚ ಬರೀ ಸ್ವಾರ್ಥದಿಂದ ಕೂಡಿರುತ್ತದೆ. ಯಾರೊಬ್ಬರೂ ಪರರ ನೋವು-ನಲಿವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಲ್ಲವೇ?

ಹೇಗೆ ಜೇನುಹುಳು ಮಕರಂದ ಸಂಗ್ರಹಿಸುತ್ತದೋ ಹೇಗೆ ಗೆದ್ದಲು ಮಣ್ಣಿನ ಕಣಗಳನ್ನು ಪೇರಿಸಿ ಹುತ್ತಕಟ್ಟುತ್ತದೋ ಹಾಗೆಯೇ ನಾವು ಹಲವರು ನಮ್ಮ ಅನುಕೂಲಕ್ಕಾಗಿ ಮನೆಯೊಂದನ್ನು ಕಟ್ಟಿಯೋ ಬಾಡಿಗೆ ಪಡೆದೋ ವಾಸಿಸುತ್ತೇವೆ. ಕಟ್ಟಿದ ಮನೆಗೋ ಇನ್ನೊಂದು ಬಾಡಿಗೆ ಮನೆಗೋ ನಾವು ಸದ್ಯ ಇರುವ ಮನೆಯಿಂದ ನಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತೇವಲ್ಲ. ಅದಕ್ಕೇ ಅಂತಲೇ ಕೆಲವು ಕಂಪನಿಗಳು ಬಾಗಿಲು ತೆರೆದಿವೆ. ನಗರಗಳಲ್ಲಿ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಅಥವಾ ಒಂದು ನಗರದಿಂದ ಇನ್ನೊಂದಕ್ಕೆ ಸಾಮಾನುಗಳನ್ನು ಸುರಕ್ಷಿತವಾಗಿ ಸಾಗಿಸಿಕೊಡುವುದೇ ಅವರ ಕಸುಬು: ಅದಕ್ಕೆ ಅವರು ಪ್ರತಿಫಲವಾಗಿ ಹಣವನ್ನು ತೆಗೆದುಕೊಳ್ಳುತ್ತಾರೆ. ಆಧುನಿಕ ಜೀವನದಲ್ಲಿ ಸಾಗಾಟ ಇದ್ದಿದ್ದೇ. ಹಾಗೆ ಸಾಗಿಸುವಾಗ ಕೇವಲ ಒಬ್ಬಿಬ್ಬರು ಸಾಕಾಗುವುದಿಲ್ಲ. ದೊಡ್ಡ ವಾಹನದ ಅವಶ್ಯಕತೆ ಕೂಡ ಇರುತ್ತದೆ. ಸಾಮಾನುಗಳು ನಜ್ಜುಗುಜ್ಜಾಗದಂತೇ, ನುಗ್ಗಿಹೋಗದಂತೇ. ಐಬಿಗೆ ಈಡಾಗದಂತೇ ನೋಡಿಕೊಳ್ಳುವುದೇ ಒಂದು ಹರಸಾಹಸ! ಹಾಗೆ ಮಾಡಲು ರಟ್ಟಿನ ಹಲವು ಪೆಟ್ಟಿಗೆಗಳು, ಹಗ್ಗಗಳು, ಗುಳ್ಳೆಪದರದ ಪ್ಲಾಸ್ಟಿಕ್ಗಳು[ಬಬಲ್ ಶೀಟ್], ದಾರಗಳು, ಗಮ್ ಟೇಪ್ಗಳು, ಸುತ್ತಿಗೆ, ಇಕ್ಕಳ, ಅಲೆನ್ ಕೀಸ್, ಸ್ಕ್ರ್ ಡ್ರೈವರ್ಸ್, ನಟ್ ಡ್ರೈವರ್ಸ್, ಸ್ಪಾನರ್ ಮುಂತಾದವುಗಳಿರುವ ಟೂಲ್ ಬಾಕ್ಸ್ ಇವೆಲ್ಲಾ ಬೇಕಾಗುತ್ತವೆ. ಇದೆಲ್ಲವನ್ನೂ ತಿಳಿದು ಸಾಗಾಟವನ್ನೇ ದಂಧೆಯನ್ನಾಗಿ ನಡೆಸುವ ಕಂಪನಿಗಳು ಹುಟ್ಟಿದವು. ಏನಾದರೂ ಸಾಗಿಸಬೇಕೆಂದರೆ ಅಂಥವರನ್ನು ಸಂಪರ್ಕಿಸಿದರೆ ಅವರು ಮಾಡಿಕೊಡುತ್ತಾರೆ.

ಹಲವು ದಿನಗಳ, ತಿಂಗಳುಗಳ, ವರುಷಗಳಕಾಲ ವಾಸಿಸಿ ತನ್ಮೂಲಕ ಭಾವನಾತ್ಮಕವಾಗಿದ್ದೂ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧವನ್ನು ಹೊಂದಿರುವ ಮನೆಯನ್ನು ಮನಮುರಿದು ನಮ್ಮ-ನಿನ್ನ ಸಂಬಂಧ ಮುಗಿಯಿತು ಎಂದು ಹೇಳಿ ಬೇರೆ ಮನೆಗೆ ತೆರಳಬೇಕಾಗುತ್ತದೆ. ಓಡಾಡಿ, ನಿಂಟು, ಮಲಗಿ, ಕೂತು, ತಿಂಡಿ-ಊಟ-ವಿಶ್ರಾಂತಿ ಮಾಡಿ ಕಳೆದ ಹಲವು ಅಮೂಲ್ಯ ಗಳಿಗೆಗಳ ಸಾಕ್ಷೀಭೂತವಾದ ಮನೆಯನ್ನು ನಮ್ಮದಲ್ಲದ ಕಾರಣಕ್ಕೆ ಬಿಟ್ಟು ಹೊರಡುವುದು ಅನಿವಾರ್ಯ-ಸಹಜ. ನಮ್ಮ ನಲಿವಿನ ಕ್ಷಣಗಳಲ್ಲಿ ಅಲ್ಲಿನ ಗೋಡೆಗಳು ನಕ್ಕಿವೆ, ನಮ್ಮ ನೋವಿನ ಚಣಗಳಲ್ಲಿ ಅವು ಅತ್ತಿವೆ, ನಮ್ಮ ಅನುವು-ಆಪತ್ತುಗಳಲ್ಲಿ ನಮಗೆ ಕಾಣದ ಯಾವುದೋ ರೀತಿಯಲ್ಲಿ ಸಾಂತ್ವನ ನೀಡಿವೆ! ಇಷ್ಟೇ ಅಲ್ಲ: ಕತ್ತಲಲ್ಲೇ ನಾವು ನಡೆದುಹೋದರೂ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ, ಎಷ್ಟು ದೂರದಲ್ಲಿದೆ ಇವುಗಳೆಲ್ಲಾ ನಮಗೆ ಮನದಲ್ಲಿ ಅಚ್ಚೊತ್ತುಬಿಟ್ಟಿರುತ್ತದೆ. ನಾಳೆಯೇ ಮನೆಯನ್ನು ಬಿಟ್ಟು ಹೊರಡುವವರಿದ್ದರೂ ಇಂದು ರಾತ್ರಿ ಕೂಡ ಮನೆಯ ಒಂದು ಸಂಪರ್ಕ ಕಡಿದುಹೋಗುವುದನ್ನು ನಾವು ಇಷ್ಟಪಡುವವರಲ್ಲ! ಮನೆ ಬಹಳ ಆಧುನಿಕವಲ್ಲದಿರಬಹುದು, ಇಕ್ಕಟ್ಟಾಗಿರಬಹುದು ಅಥವಾ ದೊಡ್ಡದಾಗಿರಬಹುದು, ಅಂದವಾಗಿರಬಹುದು ಅಥವಾ ಆದಿಮಾನವನ ಚಿತ್ರಕಲಾಶಾಲೆಯಂತೇ ಇರಬಹುದು --ಆದರೂ ಮನೆಯನ್ನು ನಾವು ತುಚ್ಛೀಕರಿಸುವುದಿಲ್ಲ: ಅದು ನಮ್ಮನೆ!

ದಾಸರು ಹೇಳುತ್ತಾರೆ: ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ. ಆದರೆ ಸುಮ್ಮನೇ ಇರಲೆಂದಾದರೂ ಉಳಿದ ಮನೆಯಲ್ಲಿ, ಮನೆಯ ವ್ಯವಸ್ಥೆಯಲ್ಲಿ ಒಳಹೊಕ್ಕು ನಮ್ಮ ಮನಸ್ಸು ಮನೆಗೆ ಒಗ್ಗಿಕೊಂಡಿರುತ್ತದೆ. ತಾಯಿ ಸುಂದರವಾಗಿರದಿದ್ದರೂ ತಾಯಿಯೇ ಅಲ್ಲವೇ ? ಹಾಗೇ ಸುಮ್ಮನೆಹೇಗೂ ಇರಲಿ ಅಲ್ಲಿ ಉಳಿದಾಗ ನಿತ್ಯವೂ ಅದೂ ಇದೂ ಅಂತ ಏನಾದರೊಂದನ್ನು ತಂದು ಜೋಡಿಸುತ್ತಲೇ ಇರುತ್ತೇವೆ. ಅಕ್ಕ ಫಾರಿನ್ ನಿಂದ ತಂದ ಸೆಂಟು, ಗೆಳೆಯ ದಿಲ್ಲಿಯಿಂದ ತಂದ ಜರ್ಕಿನ್ನು, ಇನ್ನೊಬ್ಬ ಗೆಳೆಯ ದುಬೈಯಿಂದ ತಂದ ಶರ್ಟ್ ಫೀಸು, ಅಂಚಿಮನೆ ಸುಬ್ರಾಯ ಕಾಶಿಯಿಂದ ತಂದ ಗಂಗೆಯ ಸಣ್ಣ ಕರಂಡಕ, ಶೋಲೆ ಸಿನಿಮಾ ಸೀಡಿ ಹೀಗೇ ಅತಿ ಚಿಕ್ಕ ವಸ್ತುಗಳಿಂದ ಹಿಡಿದು ವಾಶಿಂಗ್ ಮಶಿನ್ನು, ಫ್ರಿಜ್ಜು, ದಿವಾನ್ ಕಾಟು ಹೀಗೆ ಪಟ್ಟಿ ಬಹಳ ದೊಡ್ಡ! ಇಲ್ಲಿರುವ ಪ್ರತಿಯೊಂದೂ ವಸ್ತುಗಳ/ಪರಿಕರಗಳ ಹಿಂದೆ ನಮ್ಮ ಶ್ರಮ ಅಡಗಿರುತ್ತದೆ. ಅವುಗಳಲ್ಲಿ ಕೆಲವು ಸಿಂಪ್ಲೀ ನಥಿಂಗ್ ಅಂತ ಅನಿಸಿದರೂ ಅವುಗಳನ್ನು ಬಿಡಲು ನಮ್ಮ ಮನಸ್ಸು ತಯಾರಾಗುವುದೇ ಇಲ್ಲ. ಎಲ್ಲವೂ ಇರಲಿ ಇರಲಿ ಆಮೇಲೇ ಏನೋ ಕೆಲಸಕ್ಕೆ ಬರಬಹುದು; ಮುಂದೆಲ್ಲೋ ಯಾವುದಕ್ಕೋ ಉಪಕಾರವಾಗಬಹುದು ಎಂಬ ಒತ್ತಾಸೆಯಿಂದ ರಟ್ಟಿನ ಹಳೆಯ ಪೆಟ್ಟಿಗೆಗಳು, ಬಳಸದೇ ಬಿಟ್ಟ ಬಾಚಣಿಗೆಗಳು, ಹಳೆಯ ಕರ್ಲಾನ್ ದಿಂಬುಗಳು, ಅಲ್ಲಿಲ್ಲಿ ಕಿತ್ತುಹೋದ ಬೆತ್ತದ ಖುರ್ಚಿಗಳು, ಓಬೀರಾಯನ ಕಾಲದ ಎಕ್ಸ್-‍ಟೆನ್ಶನ್ ಬಾಕ್ಸುಗಳು, ಫೂಟ್ಪಾತ್ನಲ್ಲಿ ತಂದ ಹಳೆಯ ಇಂಗ್ಲೀಷ್ ಕಾದಂಬರಿಗಳು, ಬಿವಿ ಕಾರಂತರ ಬಗ್ಗೆ ಯಾರೋ ಬರೆದ ಲೇಖನಗಳಿರುವ ಹಳೆಯ ಪುಟಗಳು, ೧೯೯೮ರಲ್ಲಿ ಯಾಕೋ ಬೇಕು ಎನಿಸಿ ಎತ್ತಿಟ್ಟಿದ್ದ ನಾಲ್ಕುತಿಂಗಳಸುಧಾಪತ್ರಿಕೆ, ಏನೂ ಅಲ್ಲದ ನಮಗೆ ನೀವೂ ಗಣ್ಯರೆಂದು ಅರ್ಪಿಸಿದ್ದ ಪರಿಮಳ ರಹಿತಗಂಧದ ಹಾರಗಳು ಎಲ್ಲವೂ ಬೇಕು ಎಲ್ಲವೂ ಬೇಕು! ಅವುಗಳನ್ನು ಬಳಸದೇ ನೋಡದೇ ವರ್ಷಗಳೇ ಸಂದರೂ ಪರವಾಗಿಲ್ಲ ಅಂತೂ ಅವು ಬೇಕು. ಇವೆಲ್ಲವುಗಳ ಜೊತೆಗೆ ಇರುವ ಸಂಬಂಧವೇ ಅಂಥದ್ದು!

ಮೊನ್ನೆ ನನ್ನ ಮನೆಯನ್ನು ಬದಲಾಯಿಸುತ್ತಿದ್ದೆ. ಹಾಗೆ ಬದಲಾಯಿಸುವಾಗ ಹೊಸ ಬಾಡಿಗೆ ಮನೆ ಈಗಿರುವ ಮನೆಗಿಂತ ತುಸು ದೂರವೇ ಇದ್ದರೂ ತಲೆಯಲ್ಲಿ ಹೊತ್ತೋ ಕೈಯ್ಯಲ್ಲಿ ಎತ್ತೋ ಸಾಗಿಸಿ ಮುಗಿಸಲಾಗದಷ್ಟು ಸಾಮಾನುಗಳಿರುವುದರಿಂದಪ್ಯಾಕರ್ಸ್ ಆಂಡ್ ಮೂವರ್ಸ್ತಿಳಿದುಕೊಳ್ಳಲು ಜಸ್ಟ್ ಡಯಲ್ಗೆ ಕರೆಮಾಡಿದೆ. ಅವರು ಕಳುಹಿಸಿದ ಸಂದೇಶದಲ್ಲಿ - ಕಂಪನಿಗಳ ಹೆಸರುಗಳಿದ್ದವು. ಜಸ್ಟ್ ಡಯಲ್ನಲ್ಲಿ ಹೆಸರು ನೋಂದಾಯಿಸಿದ ಕೆಲವುಪ್ಯಾಕರ್ಸ್ ಆಂಡ್ ಮೂವರ್ಸ್ಗಳಿಗೆ ಸಂದೇಶಗಳು ಕಳುಹಿಸಲ್ಪಟ್ಟು ಅವರು ನೇರವಾಗಿ ನನ್ನ ಜಂಗಮವಾಣಿಗೆ ಕರೆಮಾಡಲು ಆರಂಭಿಸಿದರು. ಅವರಲ್ಲಿ ಒಂದೆರಡು ಕಂಪನಿಗಳು ತುಂಬಾ ಆಸಕ್ತಿ ತೋರಿಸಿದವು. ಅವುಗಳ ಪೈಕಿ ಒಂದುಕಂಪನಿ ಮಾರ್ಕೆಟಿಂಗ್ ಪ್ರತಿನಿಧಿ ನಮ್ಮನೆಗೆ ಬಂದು ಇರುವ ಒಟ್ಟೂ ಸಾಮಾನುಗಳಿಗೆ ಕಣ್ಣು ಹೊಡೆದು ಆಮೇಲೆ ನನ್ನೊಡನೆ ಮಾತನಾಡಿ ಒಂದುರೀಸನೇಬಲ್ರಕಮಿಗೆ ಬಾಯಲ್ಲಿ ಒಪ್ಪಂದ ಮಾಡಿಕೊಂಡ. ವಿಸಿಟಿಂಗ್ ಕಾರ್ಡ್ ಕೇಳಿದಾಗ ತಾನು ಎಲ್ಲೋ ಇದ್ದೆ, ನಿಮಗೆ ಬೇಕಿ ಅಂತ ಕರೆಬಂದ ಕೂಡಲೇ ಬಂದುಬಿಟ್ಟೆ, ಅದಕ್ಕಾಗಿ ಕಾರ್ಡ್ ತನ್ನ ಜೇಬಲ್ಲಿಲ್ಲ, ಆಮೇಲೆ ಕಳಿಸುತ್ತೇನೆ ಎಂದ ಮತ್ತು ನೀವು ಮನೆ ಬದಲಾಯಿಸುವ ಮುನ್ನಾದಿನ ಕರೆನೀಡುವುದಾಗಿ ಹೇಳಿದ. ನಾನು ಎಷ್ಟು ಕಾಳಜಿಯಿಂದ ಮಾಡುತ್ತಾರಪ್ಪಾ ಎಂದು ಖುಷಿಯಿಂದಿದ್ದೆ. ವಿಸಿಟಿಂಗ್ ಕಾರ್ಡ್ ಕಳಿಸಲಿಲ್ಲ. ಮನೆ ಬದಲಾಯಿಸುವ ದಿನ ಬಂದೇ ಹೋಯ್ತು. ಮುನ್ನಾದಿನ ರಾತ್ರಿ ಆತ ಹೇಳಿದಹಾಗೇ ಕರೆಬರಲಿಲ್ಲ; ಕೊನೆಗೆ ನಾನೇ ಅವರು ಬರುತ್ತಾರಾ ಇಲ್ಲವಾ ತಿಳಿದುಕೊಳ್ಳುವಾ ಅಂತ ಆತ ನೀಡಿದ್ದ ಜಂಗಮವಾಣಿಗೆ ಕರೆಮಾಡಿದೆ. ಕರೆಯನ್ನು ಸ್ವೀಕರಿಸಲಿಲ್ಲ. ಜಸ್ಟ್ ಡಯಲ್ನವರು ನೀಡಿದ್ದ ಅವರ ಪ್ರಥಮ ಮೊಬೈಲ್ ನಂಬರಿಗೆ ಕರೆಮಾಡಿದಾಗ ಅಲ್ಲಿರುವ ವ್ಯಕ್ತಿರೋಹಿತ್ಎಂಬ ವ್ಯಕ್ತಿ ಬಂದಮೇಲೆ ತಾನು ತಿಳಿಸುವುದಾಗಿ ಹೇಳಿದ. ಆಮೇಲೆ ಅರ್ಧಘಂಟೆ ಬಿಟ್ಟು ನನಗೊಮ್ಮೆ ನನ್ನನ್ನು ಮೊದಲು ಸಂಪರ್ಕಿಸಿದ್ದರೋಹಿತ್ಕರೆಮಾಡಿದ, " ಬೆಳಿಗ್ಗೆ :೩೦ಕ್ಕೆ ನಿಮ್ಮನೆ ಮುಂದೆ ನಮ್ಗಾಡಿ ಬರುತ್ತೆ " ಎಂದ.

ಮನೆ ಬದಲಾಯಿಸುವಾಗ ಸಹಜವಾಗಿ ಇರುವ ಪ್ಯಾಕಿಂಗ್ ತಲೆನೋವು ನಮ್ಮನ್ನು ರಾತ್ರಿ ಯೋಚನೆಗೀಡುಮಾಡಿತ್ತು. ತೀರಾ ವೈಯ್ಯಕ್ತಿಕ ಎನ್ನುವ ಕೆಲವು ಒಡವೆ-ಒಸ್ತುಗಳನ್ನು ನಾವೇ ಪ್ಯಾಕ್ ಮಾಡಿಕೊಂಡು ಗುರುತಿಸಿಕೊಂಡೆವು. ರಾತ್ರಿ ಕಳೆದು ಬೆಳಗಿನ :೩೦ ಗಂಟೆ ಸಮೀಪಿಸಿತು. ಅವರ ಗಾಡಿ ಬರಲಿಲ್ಲ. ಇನ್ನೇನು ನಾನು ವಿಚಾರಿಸಬೇಕು ಎನ್ನುವ ಸಮಯದಲ್ಲಿ :೦೦ ಘಂಟೆಗೆ ಒಬ್ಬಾತ ಕರೆಮಾಡಿ " ನಾವು ಇಲ್ಲಿದೀವಿ ದಾರಿ ತಿಳಿಸಿ" ಎಂದ. ದಾರಿ ಹೇಳಿದ ಕಾಲುಘಂಟೆಗೆ ಗುಜರಿಗೆ ಹಾಕುವ ಥರದ ಮೆಟಡಾರ್ ಒಂದು ಬಂದುನಿಂತಿತು. ಅದರಿಂದ ನಾಲ್ವರು ಹುಡುಗರು ದಬದಬ ಇಳಿದು ನಮ್ಮನೆಗೆ ಬಂದರು. ’ರೋಹಿತ್ಕಳ್ಸಿದಾರೆ ಎನ್ನುತ್ತಾ ಕೈಯ್ಯಲ್ಲಿ ಒಂದೆರಡು ರಟ್ಟಿನ ಬಾಕ್ಸ್ ಗಳನ್ನೂ ಒಂದು ಬಾಂಬ್ ಟೇಪನ್ನೂ ಹಿಡಿದು ಬಂದರು. ನಾನು ಕೆಲಸಗಾರರ ಮುಖ್ಯಸ್ಥನೆನಿಸುವ " ಮೇಸ್ತ್ರಿ ಯಾರು? " ಎಂದು ಕೇಳಿದೆ. ಅವರಿಗೆ ಅದು ಗೊತ್ತೇ ಇರಲಿಲ್ಲ. "ಟೂಲ್ ಬಾಕ್ಸ್ ಇದ್ಯಾ ?" ಎಂದೆ, " ಇದೆ ಸರ್ ಏನ್ ಬೇಕ್ ಹೇಳಿ ? " ಉತ್ತರಬಂತೇ ವಿನಹ ಅದು ಕಾಣಿಸಲಿಲ್ಲ! ಬಂದವರೇ "ನಮಗೆ ಇವತ್ತು ಆಮೇಲೆ ಇನ್ನೊಂದು ಕಡೆ ಶಿಪ್ಟಿಂಗ್ ಇದೆ ಸಾರ್ ಜಲ್ದಿ ಮುಗಿಸಿ ಹೋಗ್ಬೇಕು " ಎನ್ನುತ್ತಾ ಬಡಬಡ ಸಾಮಾನುಗಳನ್ನು ತಂದಿರುವ ನಾಲ್ಕಾರೇ ಬಾಕ್ಸ್ಗಳಲ್ಲಿ ತುಂಬಿಸತೊಡಗಿದರು. ನಾನು " ಯಾಕೆ ಹಳೇ ಗುಜರೀಗಾಡಿ ಕಳ್ಸಿದಾರಲ್ಲಾ ಕ್ಲೋಸ್ಡ್ ಕಂಟೇನರ್ ಇಲ್ವಾ ? " ಎಂದು ಕೇಳಿದೆ. " ನಮ್ಗಾಡಿ ಕೆಟ್ಟೋಗಿದೆ ಸಾರ್ ನಿಮ್ಗೆ ತೊಂದ್ರೆ ಆಗ್ಬಾರ್ದು ಅದ್ರ ಬದ್ಲೀ ಗಾಡಿ ಕಳ್ಸವರೆ " ಬಂತು ಉತ್ತರ. ಬಂದವರೆಲ್ಲಾ ಅಹೋರಾತ್ರಿ ಎಣ್ಣೆಯ ಉಪಾಸಕರು ! ಮೈತುಂಬಾ ವಾಸನೆ ಹೊಡೆಯುತ್ತಿದ್ದರು. ಅವರು ಬಂದ ಕ್ಷಣದಲ್ಲೇ ನಮ್ಮನೆಎಣ್ಣೆಯ ಬಾರ್ಆದಂತೇ ಭಾಸವಾಗುತ್ತಿತ್ತು. ಯಾವುದೇ ಬಬಲ್ ರೋಲ್, ಪಕ್ಕಾ ಪ್ಯಾಕಿಂಗ್ ಮಟೀರಿಯಲ್, ಟೂಲ್ ಬಾಕ್ಸ್, ಹಗ್ಗ ಯಾವುದೂ ಇರಲಿಲ್ಲ!

ನಮಗೆ ಅನಿವಾರ್ಯತೆ ಇತ್ತು. ನಾವು ದಿನ ಕಚೇರಿಗೆ ರಜವಿರುವುದರಿಂದ ಶಿಫ್ಟ್ ಕೆಲಸ ಮುಗಿಸಲೇ ಬೇಕಿತ್ತು. ಯಾಕೋ ಬಂದ ಗಾಡಿಯನ್ನೇ ದುರ್ಬಲ ಮನಸ್ಸು "ಆಯ್ತು ಹೋಗಲಿ" ಎಂದು ಒಪ್ಪಿಬಿಟ್ಟಿತ್ತು. ಬಾಕ್ಸ್ ಗಳು ಸಾಲದಾಗ ನಮ್ಮಲ್ಲೇ ಇರುವ ಕೆಲವು ಬಾಕ್ಸ್ ಗಳಿಗೆ ತುಂಬಿಸಿದರು. ಟೇಪ್ ಕಾಲಿಯಾದಾಗ ಬಾಕ್ಸ್ ಗಳು ಮುಚ್ಚದೇ ಹಾಗೇ ತೆರೆಯಲ್ಪಟ್ಟಿದ್ದವು. ಅಂತೂ ಧಾವಂತದಲ್ಲಿ ಗಾಡಿಗೆ ಏರಿಸಲು ಆರಂಬಿಸಿಯೇ ಬಿಟ್ಟರು. ಕೇವಲ ನಾಲ್ಕಾರು ಮುಖ್ಯರಸ್ತೆಗಳ ಕಡೆಗೆ ಇನ್ನೊಂದು ಮನೆಗೆ ನಾವು ಹೋಗುತ್ತಿರುವುದರಿಂದ ನಂಗೂ ತೀರಾ ಅದೆಲ್ಲಾ ಅವಶ್ಯಕವೇನೋ ಅನಿಸಲಿಲ್ಲ. ನನ್ನ ಔದಾರ್ಯಬಂದವರಿಗೆ ಬಹಳ ಅನುಕೂಲಕರವಾಗಿತ್ತು. ಗಾಡಿಯಲ್ಲಿ ಮುಂದೆ ನನ್ನನ್ನು ಕೂರಿಸಿಕೊಂಡು ಹಿಂದೆ ಹುಡುಗರು ಹತ್ತಿಕೊಂಡು ಹೊರಟರು, ಸೇರಬೇಕಾದ ಮನೆ ತಲುಪಿ ಎಲ್ಲವನ್ನೂ ಮತ್ತೆ ಅವಸರದಿಂದ ಇಳಿಸತೊಡಗಿದರು. ಬಾಕ್ಸ್ ‍ಗಳಿಗೆ ಹೆಸರು, ಸಂಖ್ಯೆ ಏನೊಂದೂ ಇರಲಿಲ್ಲ. ಕೆಲವು ವಸ್ತುಗಳನ್ನು ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ಗಳಲ್ಲೇ ಹಾಗೇ ತುಂಬಿಸಿ ತಂದಿದ್ದರು. ಒಟ್ಟೂ ಟ್ರಿಪ್ ಮಾಡಿದರು. ಅಲ್ಮೆರಾ ಇಳಿಸುವಾಗ ಅಸಹ್ಯಕರವಾಗಿ ಕಾಣುವಸ್ಟು ಅದನ್ನು ಸಂಪೂರ್ಣ ಡ್ಯಾಮೇಜು ಮಾಡಿದರು. ಒಂದು ಬೆಲ್ಜಿಯಮ್ ಗ್ಲಾಸಿನ ಕನ್ನಡಿ ಒಡೆದು ಹಾಕಿದರು. ನಾಲ್ಕಾರು ಹೂವಿನಕುಂಡಗಳ ಕಥೆ ಮುಗಿದುಹೋಗಿತ್ತು. ಟಿವಿ ವಾಲ್ ಕ್ಯಾಬಿನೆಟ್ ಅಲ್ಲಲ್ಲಿ ಕಣ್ಣೀರಿಡುತ್ತಿತ್ತು! ಫ್ರಿಜ್ ಮತ್ತು ವಾಶಿಂಗ್ ಮಶಿನ್ ಮಾತ್ರ ನನ್ನ ಅತೀ ಕಾಳಜಿ ಇದ್ದಿದ್ದರಿಂದ ತೀರಾ ಏನೂ ಡ್ಯಾಮೇಜಾಗದಂತೇ ತಂದರು. ಮಂಚಗಳು ಮೈಕೈ ತರಚಿಕೊಂಡಿದ್ದವು. ಅಂತೂ ನಾಜೂಕಿನ ಹಲವು ವಸ್ತುಗಳು ಅನಾಯಾಸವಾಗಿ ತಮ್ಮ ಮೂಲರೂಪವನ್ನು ಕಳೆದುಕೊಂಡವು!

ಶಿಫ್ಟಿಂಗ್ ಮುಗಿಸಿದಾಗ ಮಧ್ಯಾಹ್ನ ಘಂಟೆಯಾಗಿತ್ತು, ನಮಗೆ ಬೆಳಿಗ್ಗೆಯಿಂದಲೇ ತಿಂಡಿ ಸಹಾ ಮಾಡಲಾಗಿರಲಿಲ್ಲ. ಹೊಟ್ಟೆಯಲ್ಲಿರೋ ಹುಳಗಳೆಲ್ಲಾ ಸತ್ತು ಮಲಗಿದ್ದವು! ಹಸಿವು ತಾಂಡವವಾಡಲು ತೊಡಗಿತ್ತು. ಸಾಮಾನುಗಳನ್ನು ಪುನಃ ಜೋಡಿಸಿಕೊಡುವ ಮಾತಿತ್ತು. ಹಾಗೆ ಅದನ್ನು ಕೇಳಿದಾಗ ತೀರಾ ಕುಡಿದಿರದ ಒಬ್ಬ ಹುಡುಗನನ್ನುನಮ್ಮ ಸಹಾಯಕ್ಕೆಅಂತ ನೇಮಿಸಿ ಮಿಕ್ಕವರು ತಾವು ತಿಂಡಿ ತಿಂದು ಬರುತ್ತೇವೆ ಎಂದು ಹೊರಟುಹೋದರು. ನಮ್ಜೊತೆ ಇರುವ ಹುಡುಗ ಅದೂ ಇದೂ ಮಾಡುತ್ತಾ ಅವರೇ ತಂದಿದ್ದ ಕೆಲವೇ ಬಾಕ್ಸ್ ಗಳು ತುರ್ತಾಗಿ ಬೇಕಾಗುತ್ತವೆ ಎನ್ನುತ್ತಾ ಅವುಗಳನ್ನು ಮೊದಲು ಖಾಲೀ ಮಾಡಹತ್ತಿದ. ಹೊಟ್ಟೆಗೆ ಒಂದಷ್ಟು ನೀರು ತುಂಬಿಸಿಕೊಂಡು ನಾವೇ ಎಲ್ಲವನ್ನೂ ಅಲ್ಲಿಲ್ಲಿ ಎತ್ತಿಟ್ಟುಕೊಳ್ಳುತ್ತಿದ್ದೆವು. ತಿಂಡಿತಿಂದು ಮರಳಿ ಬಂದ ಹುಡುಗರಲ್ಲಿ ಡ್ರೈವರ್ ಆಗಿರುವಾತ " ಸಾರ್ ಎಲ್ಲಾ ಮುಗಿತ್ಲೂವೆ ಇವನತ್ರ ಕಾಸು ಕೊಟ್ಬಿಡಿ ಅಂತೇಳವ್ರೆ " ಅಂದ. ನಾನು ಒಡೆದುಹೋದ ನಜ್ಜುಗುಜ್ಜಾದ ವಸ್ತುಗಳ-ಪರಿಕರಗಳ ಬಗ್ಗೆ ಕೇಳಿದಾಗ " ನೋಡೀ ಸಾರ್ ನಾವೂ ಕಷ್ಟಪಟ್ಟು ನಿಯತ್ತಿನಿಂದ ಎಲ್ಲಾ ಸಾಗ್ಸಿದೀವಿ ನೀವೆಲ್ಲಾನಾ ಕೇಳ್ಕೊಳಿ ಹಾಗೆ ಒಂದ್ಸ್ವಲ್ಪ ಆಗೇ ಆಗುತ್ತೆ ಸಾರ್ " ಅಂದ. ಜಗಳಮಾಡಿ ಗೊತ್ತಿರದ ನಾವು ಸುಮಾರಾಗಿ ಎಲ್ಲಾ ಸಾಮಾನುಗಳು ಬಂದಿವೆ ಎಂಬುದನ್ನು ಮನದಟ್ಟುಮಾಡಿಕೊಂಡು ಕಾಸುಕೊಟ್ಟು ಅವರನ್ನು ಕಳಿಸಿಬಿಟ್ಟೆವು. ಹೋಗುವಾಗ ನಿಯತ್ತಿನ ಜನ " ನೋಡ್ಕೊಳಿ ಸಾರ್ ಗಾಡಿಯಲ್ಲಿ ಏನೂ ಇಲ್ಲಾ " ಎಂದು ಕರೆದು ತೋರಿಸಿ ತಮ್ಮನಿಯತ್ತನ್ನು ಪ್ರದರ್ಶಿಸಿದರು! ಇನ್ನಿಲ್ಲದ ತಲೆನೋವಿಗೂ ವಾಕರಿಗೆಗೂ ಕಾರಣವಾದಎಣ್ಣೆಯ ಉಪಾಸಕರುಹೋದರೆ ಸಾಕಾಗಿತ್ತು.

ಸುಮಾರು ಸಂಜೆ :೩೦ ರವರೆಗೆ ಎಲ್ಲವನ್ನೂ ಜೋಡಿಸಿ ಮೊದಲೇ ಕರೆದಿದ್ದ ಹತ್ತಿರದ ಬಂಧುವೊಬ್ಬರ ಮನೆಗೆ ಊಟಕ್ಕೆ ಹೋದೆವು. ಊಟ ಮುಗಿಸಿ ೩೦ ನಿಮಿಷಗಳಲ್ಲಿ ಮರಳಿದೆವು. ಮತ್ತೆ ಜೋಡಿಸುವ ಕೆಲಸ. ನಡುವೆ ನಮ್ಮ ಹೊಸಮನೆಯ ಪಕ್ಕದ ಮನೆಯವರ ಪರಿಚಯವಾಯಿತು. ಅವರು ಮಾತನಾಡುತ್ತಾ "ನಿಮ್ಮ ಸಾಮಾನುಗಳನ್ನು ಶಿಫ್ಟ್ ಮಾಡುವ ಜನ ಮೇಲಿನಿಂದ ಏನನ್ನೋ ಒಂದೆರಡು ಕವರ್‍‍ಗಳನ್ನು ನಮ್ಮನೆ ಹಾಗೂ ಮನೆ ನಡುವೆ ಇರುವ ಖಾಲೀ ಸೈಟಿನಲ್ಲಿ ಹಾಕಿದ್ದರು. ಆಮೇಲೆ ಬಂದು ಎತ್ತಿಕೊಂಡು ಹೋದರು. ನಮಗೆ ನಿಮ್ಮ ಪರಿಚಯವಿರಲಿಲ್ಲ. ಆದರೂ ಈಗ ಪರಿಚಯವಾಯ್ತಲ್ಲಾ ಅದಕ್ಕೇ ಹೇಳೋಣಾಂತ ಬಂದೆ" ಎಂದರು. ನಂಗಂತೂ ಸಾಕಾಗಿ ಹೋಗಿತ್ತು. ಜೋಡಿಸುತ್ತಾ ಹೋದ ಹಾಗೇ ಹಲವಾರು ವಸ್ತುಗಳು-ಪರಿಕರಗಳು ನಾಪಾತ್ತೆಯಾಗಿರುವುದು ಕಂಡುಬಂತು. ಅಜಮಾಸು - ಸಾವಿರ ಬೆಲೆಯ ವಸ್ತುಗಳನ್ನು ಕದ್ದುಹೋಗಿದ್ದರು. ಸಂಜೆ ಮರಳಿಕಂಪನಿ ಮೊಬೈಲ್ಗಳಿಗೆ ಕರೆಮಾಡಲು ಆರಂಭಿಸಿದರೆ ಜಸ್ಟ್ ಡಯಲ್ ಕೊಟ್ಟ ಮೊದಲನೇ ಅವರ ನಂಬರು ಕರೆ ಸ್ವೀಕರಿಸಲಿಲ್ಲ. ಎರಡನೇದನ್ನು ಪ್ರಯತ್ನಿಸಲಾಗಿ ಅದೂ ಕೂಡ ಅಷ್ಟೇ. ರಾತ್ರಿ ನಾನು ಆತಂಕದ ನಡುವೆತೀರಾ ಕೋಪಬಂದಿದೆ, ಟಿವಿ೯ ಗೆ ತಿಳಿಸುತ್ತೇನೆಎಂದಿದ್ದೇ ತಡ ರಾತ್ರಿಯಿಂದಲೇರೋಹಿತ್ಎಂಬಾತನ ಮೊಬೈಲು ಮಲಗಿಬಿಟ್ಟಿತ್ತು! ಮಾರನೇದಿನ ೧೨ ಗಂಟೆಯಾದರೂ ಅದಕ್ಕೆ ಎಚ್ಚರವಾಗಲೇ ಇಲ್ಲ. ೫೦-೬೦ ಸರ್ತಿ ಕರೆಮಾಡಿಸಿಕೊಂಡ ಮೊದಲ ನಂಬರು ಒಮ್ಮೆ " ಹಲೋ" ಎಂದಿತು. ಸಮಸ್ಯೆಗಳನ್ನು ಕೇಳಿದ ಆತ ತಾನು ಒಂದು ಘಂಟೆಯಲ್ಲಿ ನೋಡಬರುವುದಾಗಿ ತಿಳಿಸಿದ. ಬಂದೂಬಿಟ್ಟ: ’ತುಂಬಾ ನಿಯತ್ತು’ !

"ರೋಹಿತ್ ಎಲ್ಲಪ್ಪಾ? " ಎಂದಿದ್ದಕ್ಕೆ

" ಅವರ ಬ್ರದರ್ ಆಕ್ಸಿಡೆಂಟ್ ಆಗ್ಬುಟ್ಟು ತೀರ್ಕೊಂಡವ್ರೆ ಸರ್ ಅದ್ಕೇ ಉಡುಪಿಗೆ ಹೋಗವ್ರೆ."

" ಯಾವಾಗ ಬತ್ತಾರಪ್ಪಾ ? ನಾನು ಮಾತಾಡ್ಬೇಕು "

" ಯಾವಾಗ ಬತ್ತಾರೋ ಗೊತ್ತಿಲ್ಲ ಸಾರ್ ಬನ್ನಂತ್ರ ಹೇಳ್ತೀವಿ " -’ಕಂಪನಿಯಿಂದ ಬಂದಡ್ಯಾಮೇಜು ಸರ್ವೇಮಾಡುವವನ ಉತ್ತರ.

ದಿನ ನನಗೆ ಕೂತುಕೊಳ್ಳಲಾಗಲಿಲ್ಲ. ಆಫೀಸಿನ ಕೆಲಸಕ್ಕೆ ಹೋಗಲಾಗಲಿಲ್ಲ. ಬದಲಾಗಿ ಮಧ್ಯಾಹ್ನ ನಾನುನಿಯತ್ತಿನ ಪ್ಯಾಕರ್ಸ್ ಕಂಪನಿಯನ್ನು ಹುಡುಕಿ ಹೊರಟಿದ್ದೆ. ಜಸ್ಟ್ ಡಯಲ್ ಕೊಟ್ಟಿದ್ದ ಅವರ ವಿಳಾಸಕ್ಕೆ ಹೋಗಿ ನೋಡಿದರೆ ಅಲ್ಲಿ ಯಾವ ಕಂಪನಿಯೂ ಇರಲಿಲ್ಲ. ಮತ್ತೆ ಮೊದಲ ಮೊಬೈಲಿಗೆ ಕರೆಮಾಡಿದಾಗ ವ್ಯಕ್ತಿ

" ಯಶವಂತಪುರ ಲಾರಿ ಟರ್ಮಿನಲ್ ಹತ್ತಿರ ಬನ್ನಿ ಸಾರ್ ಅಲ್ಲೈತೆ ತೋರುಸ್ತೀವಿ " ಅಂದ.

ಜೋರಾಗಿ ಮಳೆ ಸುರಿಯುತ್ತಿತ್ತು. ಆದರೂ ಬಿಡಲಿಲ್ಲ. ಹೊರಟುಹೋದೆ. ಅಂತೂ ಅವರಕಂಪನಿ ಆಫೀಸು ನೋಡಿದೆ. ಅದು ಯಾವುದೋ ಬೇರೇ ಒಬ್ಬರ ಲಾಜಿಸ್ಟಿಕ್ ಹೆಸರಿನ ಅಂಗಡಿ. ಅಳತೆ ಅಡಿ ಅಗಲ ಮೂರು ಅಡಿ ಉದ್ದ! ಅದರೊಳಗೆ "ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ"! ಒಳಗೆ ಒಂದು ಮೇಜು ಅದರ ಹಿಂದೆ ಒಂದು ಖುರ್ಚಿ, ಎದುರುಗಡೆ ಬಂದವರಿಗೋ ಇನ್ಯಾರಿಗೋ ಕೂರಲು ಕಿತ್ತುಹೋಗಿರುವ ಎರಡು ಪ್ಲಾಸ್ಟಿಕ್ ಖುರ್ಚಿಗಳು. ಪಕ್ಕದಲ್ಲಿ ನಿನ್ನೆ ನಮ್ಮನೆಗೆ ತಂದಿದ್ದ ಅರ್ಜೆಂಟಾಗಿ ಮರಳಿ ಕೊಂಡೊಯ್ದ ಖಾಲೀ ಬಾಕ್ಸ್ಗಳು! ಮೇಜಿನ ಕಡೆ ಇರುವ ಖುರ್ಚಿಯಲ್ಲಿಕಂಪನಿ ಯಜಮಾನ ರೋಹಿತ್ ಕುಳಿತಿದ್ದ. ನನ್ನನ್ನು ಕಂಡ ಕೂಡಲೇ ಮುಖಸುಟ್ಟುಕೊಂಡ ಬೆಕ್ಕಿನಂತಾದ! ಬಂದು ಅರ್ಧ ಘಂಟೆ ಆಯ್ತು ಅಂದ. ಬಹುಶಃ ಉಡುಪಿಯಿಂದ ಪ್ರತ್ಯೇಕ ಹೆಲಿಕಾಪ್ಟರ್ನಲ್ಲಿ ಬಂದಿರಬೇಕು. ಕೂತೆ, ನನಗಾಗಿರುವ ತೊಂದರೆ ಹೇಳಿ ಸರಿಪಡಿಸುವಂತೇ ಹೇಳಿದೆ.

" ಇಲ್ಲಾ ಸಾರ್ ನಮ್ ಕಂಪ್ನಿ ಗಾಡಿ ಕೆಟ್ಟೋಗಿತ್ತು ಅದ್ಕೇ ಮಾರ್ಕೆಟ್ ಗಾಡಿ ಅಡ್ಜೆಸ್ಟ್ ಮಾಡಿ ಕಳ್ಸಿರೋದು.. ಅವರಿಗೈತೆ ಬಿಡಿ ಇವತ್ತು ಸರಿಯಾಗಿ ಕ್ಲಾಸ್ ತಗೋತೀನಿ ಒಟ್ನಲ್ಲಿ ನಾಳೆ ಅರ್ಲಿ ಮಾರ್ನಿಂಗ್ :೩೦ ರೊಳಗೆ ನಿಮ್ಗೆ ಸೆಟ್ಲ್ ಮಾಡಸ್ತೀನಿ" ಅಂದ. " ಬೇಡಾ" ಎಂದರೂ ಬಲವಂತಮಾಡಿ ಅರ್ಧ ಗ್ಲಾಸು ಕೆಟ್ಟ ಚಾ ಕುಡಿಸಿದ. ಹೊರಟುಬಂದೆ. ಮಾರನೇ ದಿನ ಬೆಳಿಗ್ಗೆ : ೫೦ರ ತನಕ ಸುಮ್ಮನೇ ಇದ್ದೆ. ಯಾವ ಕರೆಯೂ ಬರಲಿಲ್ಲ. ಮರಳಿ ನಾನೇ ಕರೆಮಾಡಲು ಆರಂಭಿಸಿದೆ. ಮೊದಲ ಮೊಬೈಲು ಹತ್ತುಸಲ ಕರೆಮಾಡಿದ ನಂತರ ಒಮ್ಮೆ ಆತನೇ ವಾಪಸ್ಸು ಕರೆಮಾಡುವದೊಡ್ಡವ್ಯಕ್ತಿಯಾಗಿ " ರೋಹಿತ್ ಸಾರ್ ಇನ್ನೂ ಬಂದಿಲ್ಲ ೧೦:೩೦ ಆಗ್ಬೌದು " ಎಂದ. ಅದೂ ಮುಗಿದು ೧೨ ಬಾರಿಸಿತು. [ಈಗ ಬಾರಿಸುವುದಿಲ್ಲ ಬಿಡಿ ಹಾಗೆ ಹೇಳುವುದು ವಾಡಿಕೆ ಅಷ್ಟೇ] ನಾನು ಮತ್ತೆ ಮೊದಲ ನಂಬರಿಗೆ ಕರೆಮಾಡಿದಾಗ " ನಂಗೂ ಅದ್ಕೂ ಸಂಬಂಧವಿಲ್ಲಾ ನೀವು ರೋಹಿತ್ ಹತ್ರ ನೋಡ್ಕೊಳಿ" ಎಂದ. ನಾನು ಜಸ್ಟ್ ಡಯಲ್ಗೆ ಕರೆಮಾಡಿ

" ಇಂಥಾ ಬೋಗಸ್ ಕಂಪನಿಯನ್ನು ನನಗೆ ಪರಿಚಯಿಸಿ ಉಪಕರಿಸಿದ್ದೀರಿ ಇನ್ನುಮುಂದಾದರೂ ಇಂಥವನ್ನೆಲ್ಲಾ ಫಿಲ್ಟರ್ ಮಾಡಿ" ಎಂದು ಹೇಳಿದಾಗ ಅವರು ಲೈನ್ ನಲ್ಲೇ ಇರಿ ಎಂದರು. ಕಡೆ ಅವರುಕಂಪನಿ ಮೊದಲ ನಂಬರಿಗೆ ಕರೆಮಾಡಿ ಆಲ್ಲಿರುವಾತನ ಹತ್ತಿರ ಮಾತನಾಡಿ ಟೆಲಿ ಕಾನ್ಫರೆನ್ಸಿಂಗ್ ನಡೆಸಿದರು. ಅವರ ಕೋರಿಕೆಯ ಮೇರೆಗೆ ಒಂದು ವಾರದ ಸಮಯಾವಕಾಶ ನೀಡಿದ್ದೇನೆ. ಮುಂದಿನವಾರ ಅವರು ಡ್ಯಾಮೇಜು ತುಂಬಿಸಿಕೊಡದಿದ್ದಲ್ಲಿ ಮಾಧ್ಯಮಗಳಲ್ಲಿ ಬರುವ ಸಾಧ್ಯತೆ ಖಂಡಿತಾ ಇದೆ. ಇದು ಪ್ರಚಾರಕ್ಕಾಗಿ ಅಲ್ಲ; ಮತ್ತೆ ಯಾರಿಗೂ ಇಂಥಾ ಬೋಗಸ್ ಕಂಪನಿಗಳಹಲಾಲ್ ಕಟ್ನಡೆಯುವ ಮೊದಲು ಅವರ ನಜರಿಗೆ, ಗಮನಕ್ಕೆ ವಿಷಯ ತಂದುಬಿಟ್ಟರೆ ಹಲವು ಜನರಿಗೆ ಅದು ಉಪಕಾರವಾಗಬಹುದು.

Friday, June 3, 2011

೨೦೧೨ರ ಪ್ರಳಯಕಾಲದ ಒಳಗೆ ಎಲ್ಲವೂದಕ್ಕೂ ಇ-ಮೇಲ್ ಐಡಿ ಕಡ್ಡಾಯ !


೨೦೧೨ರ ಪ್ರಳಯಕಾಲದ ಒಳಗೆ ಎಲ್ಲವೂದಕ್ಕೂ ಇ-ಮೇಲ್ ಐಡಿ ಕಡ್ಡಾಯ !

ವೀಕ್ಷಕರೇ ತಮಗೆಲ್ಲಾ ಮತ್ತೊಮ್ಮೆ ಕಳಪೆ ಟಿವಿ ೨೪ ಬಾರ್ ೭ ’ನ್ಯೂಸ್ ರೈಲ್’ಗೆ ಸ್ವಾಗತ. ನಾನು ಅಸಹ್ಯಾ.

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಅಪ್ಪಟ ನ್ಯಾಯವನ್ನು ಅನುಸರಿಸುತ್ತಿರುವ ಘನಸರಕಾರ ೨೦೧೨ರೊಳಗೆ ಅಣುರೇಣುತೃಣಕಾಷ್ಠ ಸಹಿತ ಸಕಲಕ್ಕೂ ಇ-ಮೇಲ್ ಐಡಿಯನ್ನು ಕಡ್ಡಾಯಮಾಡುತ್ತದೆ! ನಾವೆಲ್ಲರೂ ಇದರ ಫಲಾಭನುವಿಗಳಾಗುತ್ತಿದ್ದೇವೆ ಎಂದು ಮಾಧ್ಯಮದೊಂದಿಗೆ ಮಾತನಾಡಿದ್ದು ಸೊಳ್ಳೆ ಸಕಲಾಪುರ. ಯಾವಾಗಲೂ ಗುಂಯ್ ಗುಡುತ್ತಾ ತಮಗೆ ಅವಕಾಶ ಸಿಗಲಿಲ್ಲಾ ಎಂದು ಗೊಣಗುತ್ತಿದ್ದ ಅವರು ಇಂದು ಯಾಕೋ ತುಂಬಾ ಉತ್ತಮ ಮೂಡ್‍ನಲ್ಲಿದ್ದರು. ತಡರಾತ್ರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರ ಮುಖದಲ್ಲಿ ಹರೆಯದ ಕಳೆ ಉಕ್ಕಿ ಹರಿಯುತ್ತಿತ್ತು! ಸೂಕ್ಷ್ಮ ಸಂವೇದನಾಶೀಲರಾದ ಸೊಳ್ಳೆ ಸಮೂಹದವರಿಗೆ ಸಿಗಬೇಕಾದ ಮಾನ್ಯತೆ ಇಂದು ಸಿಕ್ಕಿರುವ ಖುಷಿ ಅವರ ಸಂತಸಕ್ಕೆ ಕಾರಣವಿದ್ದಿರಬೇಕು.

ಏತನ್ಮಧ್ಯೆ ಆಗಾಗ ನಡೆಯುತ್ತಿರುವ ವಿರೋಧಿಗಳ ಮತ್ತು ಭಿನ್ನಮತೀಯ ಬಣಗಳವರ ಬಾಯಿ ಮುಚ್ಚಿಸಲು ಈ ಲೋಕದ ಅಣುರೇಣುತೃಣಕಾಷ್ಠ ಸಹಿತ ಎಲ್ಲರಿಗೂ/ಎಲ್ಲವುದಕ್ಕೂ ಇ-ಮೇಲ್ ಐಡಿಯನ್ನು ಕೊಡಮಾಡುವುದಾಗಿ ಘೋಷಿಸಿದೆ. ಯಾವುದೇ ಕ್ಷಣದಲ್ಲೂ ಇದನ್ನು ಜಾರಿಗೆತರುವ ನಿರೀಕ್ಷೆ ಇದ್ದು ಎಲ್ಲರೂ/ಎಲ್ಲವೂ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಇದನ್ನು ಅಧಿಕಾರದ ದುರ್ಬಳಕೆ ಎಂದು ಬಣ್ಣಿಸಿ ಅಧಿವೇಶನದಲ್ಲಿ ಸಭಾತ್ಯಾಗಮಾಡಿದ್ದಾರೆ. ಯಾರು ಏನೇ ಹೇಳಿದರೂ ತಮಗೆ ಅದೇನೂ ನಾಟುವುದಿಲ್ಲ ಎಂದು ಮುಖ್ಯಮಂತ್ರಿಗಳು ಸಾರಿದ್ದಾರೆ.

ಅದಾಗಲೇ ತೀವ್ರಗೊಂಡ ಬೆಳವಣಿಗೆಯಲ್ಲಿ ಪರಂಪರಾಗತ ಮೂಲಸ್ಥಾನಗಳನ್ನು ಗಣನೆಗೆ ತೆಗೆದುಕೊಂಡು ಎಲ್ಲರಿಗೂ/ಎಲ್ಲವುದಕ್ಕೂ ಇ-ಮೇಲ್ ಐಡಿಯನ್ನು ಕೊಡಬೇಕೆಂಬ ಸರಕಾರದ ಆದೇಶದಂತೇ ಈ ಕೆಳಗಿನ ಇ-ಮೇಲ್ ಐಡಿಗಳ ಯಾದಿಯನ್ನು ತಯಾರುಮಾಡಲಾಗಿದೆ:

1. cute_solle@charandigabbu.com
2. dum_beddy@bedsidegroups
3. smelly_jirale@sandigondi.co.in
4. sondili_heggana@bila.org
5. kaala_sarpa@hutta.net.in
6. naayanna@boubouchamber.com
.
.
.
.
.
.
99999. vandragappe@kesaruhonda.com
.
.
.
.
.

ಇದನ್ನೆಲ್ಲಾ ಗಮನಿಸಿದ ಸಚಿವರ ಪರಮಾಪ್ತ ಸಲಹೆಯಂತೇ [ಇತ್ತೀಚೆಗೆ ಸರಕಾರ ನೀಡುವ ಪ್ರಶಸ್ತಿಗಳನ್ನು ’ಪಡೆಯುವವರ’ ಪಟ್ಟಿ ಆಂಜನೇಯ ಬಾಲ ಬೆಳೆದಂತೇ ಬೆಳೆಯುತ್ತದಾದ್ದರಿಂದ] ಸಜೀವಿಗಳನ್ನೂ ಮೀರಿ ನಿರ್ಜೀವಿಗಳಿಗೂ ಗುರ್ತಿಸುವ ಸಲುವಾಗಿ ಇ-ಮೇಲ್ ಐಡಿಗಳನ್ನು ಕೊಡಮಾಡುವ ಪ್ರಕ್ರಿಯೆಯಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕಾರ್ಯತಪ್ತರಾಗಿದ್ದಾರೆ. ಈ ಯಾದಿಯಲ್ಲಿ :


1. benne@mosarukudike.com
2. tuppa@boguni.net
3. uppu@baaTali.com
4. gani@dhani.org
5. kappuhana@swissbank.hid
.
.
.
.

ಈ ಯಾದಿಗಳನ್ನು ಆಮೂಲಾಗ್ರ ಪರಿಶೀಲಿಸಿದ ಇಂಧನ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸದ್ಯ ಈ ಯಾದಿಗಳಲ್ಲಿ ಯಾವುದೂ ಸುಳ್ಳು ಹೆಸರುಗಳು ಕಂಡುಬರುತ್ತಿಲ್ಲ, ಯಾವುದೇ ಬೇನಾಮೀ ಅಡಿಗೆ ಅನಿಲ ವಗೈರೆ ದುರ್ಬಳಕೆಯಾಗುವುದೂ ಕಾಣುತ್ತಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಪ್ರಳಯಕಾಲದಲ್ಲಿ ಮನೆಯಲ್ಲಿ ಬದುಕಿರುವಷ್ಟು ಹೊತ್ತೂ ಟಿವಿ ಮುಂದೆ ಕುಳಿತು ಬ್ರೇಕಿಂಗ್ ನ್ಯೂಸ್ ನೋಡುತ್ತಾ ಲ್ಯಾಪ್ ಟಾಪ್ ಮೂಲಕ ಮೇಲ್ ಸಂಪರ್ಕಹೊಂದಿ " ಕಾಪಾಡೀ...ಕಾಪಾಡೀ " ಎಂದು ಕೂಗಿಕೊಳ್ಳಲಾದರೂ ಇರಲಿ ಎಂಬ ಮಾನವೀಯ ಮೌಲ್ಯಕ್ಕೆ ಮಹತ್ವಕೊಟ್ಟು ಜಾರಿಗೊಳಿಸಿದ ಈ ಯೋಜನೆಯ ಅನುಷ್ಠಾನಕ್ಕೆ ಸರಕಾರ ೧೨೦೦ ಕೋಟಿಗಳನ್ನು ತೆಗೆದಿರಿಸಿದೆ! ಪ್ರಳಯದಂತಹ ಆಪತ್ಕಾಲದಲ್ಲಿ ಎಲ್ಲಿಂದ ಎಲ್ಲಿಗಾದರೂ ತಪ್ಪಿಸಿಕೊಂಡು ಓಡಿಹೋಗಲು ಬೇಡದ ಪ್ರದೇಶಗಳಲ್ಲೂ ಶತಮಾನಗಳ ಹಿಂದಿನ ಮರಗಳನ್ನು ಕಡಿದು ಚತುಷ್ಪಥ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದಕ್ಕೆ ಪ್ರತ್ಯೇಕ ಹಣವನ್ನು ತೆಗೆದಿರಿಸಲಾಗಿದೆ!

ಕನ್ನಡ ನೆಲ-ಜಲ ಸಂರಕ್ಷಣೆಗೆ ಸದಾ ಕಟಿಬದ್ಧವಾಗಿರುವ ಸರಕಾರ ಒಪ್ಪೊತ್ತು ಊಟವನ್ನಾದರೂ ಘೋಷಿಸಿ ೨೫ ಕೋಟಿ ರೂ.ವೆಚ್ಚದಲ್ಲಿ ಭುವನೇಶ್ವರಿ ವಿಗ್ರಹದ ಸ್ಥಾಪನೆ ನಡೆಸುತ್ತದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆಯಲ್ಲದೇ ಕಮ್ಮಿ ಬಿದ್ದಲ್ಲಿ ಇನ್ನೂ ೨೫ ಕೋಟಿ ವ್ಯಯಿಸಿ ಕೆಲಸ ಪೂರ್ತಿ ಮಾಡಲಾಗುವುದು ಎಂದು ತಿಳಿಸಿದೆ. ಯಾರೇ ರಾಜಕಾರಣಿ ಸತ್ತರೂ ಪಕ್ಷಾತೀತವಾಗಿ ಅವರ ಜೀವಿತ ಕಾಲದಲ್ಲಿ ನಡೆಸಿದ ಕಾನೂನು ಬಾಹಿರ ಅಕ್ರಮ ದಂಧೆಗಳು,’ಘನಕಾರ್ಯ’ಗಳು ಮತ್ತು ಬ್ರಷ್ಟಾಚಾರವನ್ನು ನೆನೆದು ಸಕಲ ಸರಕಾರೀ ಗೌರವಗಳೊಂದಿಗೆ ನೇರವಾಗಿ ಸ್ವರ್ಗಕ್ಕೆ ಕಳಿಸುವ ಏರ್ಪಾಟುಮಾಡಲಾಗುವುದು ಎಂದು ಅಧಿವೇಶನದಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಎಲ್ಲಾ ಪಕ್ಷಗಳವರೂ ಸ್ವಾಗತಿಸಿದ್ದಾರೆ! ಮಳೆಗಾಲದ ಆರಂಭದಲ್ಲಿ ನಾಡಿನ ಬೆನ್ನೆಲುಬಾದ ರೈತರಿಗೆ ಬೀಜದ ಕೊರತೆ ಬಾಧಿಸದಂತೇ ನೋಡಿಕೊಳ್ಳುವಂತೇ ಆ ಯಾ ತಾಲೂಕುಗಳ ತಹಶೀಲ್ದಾರರಿಗೆ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ; ಆದಾಗ್ಯೂ ಒಂದೊಮ್ಮೆ ಬೀಜದ ಕೊರತೆ ಅತಿಯಾಗಿ ಕಂಡುಬಂದಲ್ಲಿ ಬಂದೂಕು, ಕಾಡತೂಸು, ರೈಫಲ್ ಮತ್ತು ಗುಂಡಿನ ಕಾರ್ಟ್ರಿಜ್‍ಗಳನ್ನು ತಯಾರಿ ಇಟ್ಟುಕೊಳ್ಳಲು ಆದೇಶಿಸಲಾಗಿದೆ.

ಇಷ್ಟೆಲ್ಲಾ ಔದಾರ್ಯವನ್ನು ಮೆರೆದಿದ್ದರೂ ತಾವೇ ಬೇರೆ ತಮ್ಮ ಖದರ್ರೇ ಬೇರೆ ಎಂಬ ಪ್ರತಿಪಕ್ಷಗಳವರು ಗುಡುಗಿದ್ದರೆ ಪಕ್ಷಗಳ ಪ್ರಚಾರ, ಸದಸ್ಯರ ನೇಮಕಾತಿ, ಮುಳುಗುತ್ತಿರುವ ಮಣ್ಣಿನ ಮಕ್ಕಳ ಪಕ್ಷದ ಸಭೆಗಳಿಗೆ ಜನರನ್ನು ಕರೆತರುವ ಸಗಟು ವ್ಯವಹಾರ-ವೈಖರಿಗಳಿಗೆ ಯಾವುದೇ ಇ-ಮೇಲ್ ಐಡಿಗಳನ್ನು ಸರಕಾರೀ ಖರ್ಚಿನಲ್ಲಿ ಪಡೆಯಲಾಗದಿದ್ದುದಕ್ಕೆ ಮುದ್ದೆಗಳೆಲ್ಲಾ ಎದ್ದು ತಂತಮ್ಮಲ್ಲೇ ಗುದ್ದಾಡಿದ್ದು ಕಂಡುಬಂತು! ಜನರಿಂದ ಟಾ ಟಾ ಬೈ ಬೈ ಮಾಡಿಸಿಕೊಳ್ಳುತ್ತಿರುವ ’ಕೈ’ಗಳೂ ಹೆಗಲುಮೇಲೆ ಟವೆಲ್ ಹಾಕಿಕೊಂಡು ’ಸಿದ್ಧ’ರಾಗಿ ಅಲ್ಲೆಲ್ಲೋ ಅಡ್ಡ ನಿಂತು ಉದ್ದುದ್ದ ಕೂಗುತ್ತಾ ಮಣ್ಣಿನಮಕ್ಕಳ ಪಂಚೆ ಹಿಡಿದು ಜೈಕಾರ ಹಾಕುತ್ತಿದ್ದು ತಮಗೂ ’ಸಮಪಾಲು’, ’ಸಮಬಾಳು’ ಬರಲಿ ಎಂದು ಪರೋಕ್ಷ ಘಂಟಾಘೋಷವಾಗಿ ಕೂಗಿ ಜನರೆಲ್ಲರ ಲಕ್ಷ್ಯ ಸೆಳೆಯುವಲ್ಲಿ ನಿರತರಾಗಿದ್ದಾರೆ. ಏನಾದರೇನಾಯ್ತು ನಾವು ಸದ್ಯ ಹಾಯಾಗಿದ್ದೇವೆ ಎಂಬ ಕುರುಡು ನಂಬಿಕೆಯಲ್ಲಿ ಮತದಾರ ಕುರಿಗಳು ನಾಳೆ ಎರಗಬಹುದಾದ ಕತ್ತಿಯನ್ನು ಕನಸಲ್ಲೂ ಕಂಡಿಲ್ಲ; ಕಾಣುತ್ತಿಲ್ಲ. ಅಂದಹಾಗೇ ಈ ಎಲ್ಲದರ ನಡುವೆ ಮಾಂತ್ರಿಕರ ಮತ್ತು ಜ್ಯೋತಿಷಿಗಳ ಐಡಿಗಳನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸಬಾರದು ಹಾಗೆ ಮಾಡಿದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಎಸಗುವ ದ್ರೋಹ ಎಂದು ’ರೇವೂಸ್’ ಮಂಗಳೂರಿನಲ್ಲಿ ಮಾತನಾಡುತ್ತಾ ಹೇಳಿದರು. ’ನಂದಿನಿ ಹಾಲ’ನ್ನು ಕುಡಿಯಲಿ ಬಿಡಲಿ ಲಿಂಬೆ ಹಣ್ಣಿನ ಸತತ ಸ್ನೇಹ ತಮಗೆ ಅತ್ಯಂತ ಮುದನೀಡುವ ವಿಚಾರವೆಂತಲೂ ೧೦ನೇ ತರಗತಿ ಪಾಸಗದಿದ್ದರೂ ಏನಾಯ್ತು ರಾಜ್ಯವನ್ನಾಳಲು ಅದು ಬೇಕಾಗಿಲ್ಲ ಎಂಬುದನ್ನು ಅವರು ಮೇಜುಗುದ್ದುವುದರ ಮೂಲಕ ಒತ್ತಿಹೇಳಿ ತಮ್ಮ ಕೈಗೆ ಮೂವ್ ಸವರಿಕೊಂಡಿದ್ದಾರೆ!

ಆಗ್ನಿ ಪರೀಕ್ಷೆಯಲ್ಲಿ ಹಲವರು ಬಾರಿ ಗೆದ್ದುಬಂದಿರುವ ಆಳುವ ಪಕ್ಷದವರಿಗೆ ವಾಯು ಪರೀಕ್ಷೆ ಮತ್ತು ಮಲಪರೀಕ್ಷೆ ಜಲಪರೀಕ್ಷೆಗಳಾದಿಯಾಗಿ ಇನ್ನೇನೆಲ್ಲಾ ಪರೀಕ್ಷೆಗಳನ್ನು ಸಮಯೋಚಿತವಾಗಿ ಯಾವ್ಯಾವಾಗ ನೀಡಬಹುದು ಎಂದು ಮುದ್ದೆಗಳ ಪಡೆಯಲ್ಲಿ ಚಿಂತನ-ಮಂಥನ ನಡೆದಿದೆ. ಅಹರ್ನಿಶಿ ತಲೆ-ಮೈ ಪರಚಿಕೊಂಡಿದ್ದೇ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಂದಲೂ ಹಾಲೀ ಸರಕಾರವನ್ನು ಪತನಗೊಳಿಸಲು ಸಾಧ್ಯವಾಗದ್ದಕ್ಕೆ ಹುಲಿಯ ಹುಣ್ಣಿನ ಥರ ಹುಣ್ಣುಗಳಾಗಿವೆ ಎಂಬುದು ಅನೇಕರ ಅನಿಸಿಕೆಯಾಗಿದೆ. ಹುಳಿಸೇ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ ಎನ್ನುವ ಮಣ್ಣಿನ ಮಕ್ಕಳು ’ಶಾಕಿಂಗ್ ನ್ಯೂಸ್’ ಕೊಡಲು ಏರ್ಪಾಟುಮಾಡಿಕೊಂಡು ಮೊನ್ನೆ ದೆಹಲಿಗೆ ದೌಢಾಯಿಸಿ ’ಮರಳಿ ಯತ್ನವಂ’ ಮಾಡಿ " ಬಂದ ದಾರಿಗೆ ಸುಂಕವಿಲ್ಲ " ಎನ್ನಿಸಿಕೊಂಡು ತಾನೇ ಶಾಕ್ ಪಡೆದು ಬೆಂಗಳೂರಿಗೆ ವಾಪಸ್ಸಾದಮೇಲೆ ತನಗೆ ಮುತ್ತಿಕೊಂಡ ಮಾಧ್ಯಮದವರನ್ನು ಗರ್ಜಿಸಿ ಹಿಮ್ಮೆಟ್ಟಿಸಿದ್ದಾರೆ ಎನ್ನಲಾಗಿದೆ.

ಮುದ್ದೆಗಳ ಹಳಸಲು ವಾಸನೆಯನ್ನು ಅದಾಗಲೇ ರುಚಿನೋಡಿದ ಹಲವಾರು ಜನ ಮುದ್ದೆಗಳ ಗೋಜೇ ಬೇಡಾ ಎನ್ನುವ ಮನದಿಂಗಿತವನ್ನು ಆಗಾಗ ಅಲ್ಲಲ್ಲಿ ಮಾಧ್ಯಮಗಳವರೆದುರು ಗೌಪ್ಯವಾಗಿ ಬಹಿರಂಗಗೊಳಿಸಿದ್ದಾರೆ! ಆದರೂ ಹಳೆಯ ಪ್ರೀತಿಯ ’ಮನಿಪ್ಲಾಂಟ್’ ಬಳ್ಳಿ ಒಮ್ಮೊಮ್ಮೆ ಕಾಲಿಗೆ ಅಡರಿಕೊಂಡು ಮತ್ತೆ ಹಳಸಿದ್ದನ್ನೂ ಒಪ್ಪುವ ಮನಸ್ಸು ಕೆಲವರದ್ದಾಗಿದೆ! ಒಂದುಕಾಲದಲ್ಲಿ ಎಲ್ಲರನ್ನೂ ಹೊರಟ್ಟಿದವರು ಈಗ " ಒಳೀಕ್ ಬನ್ನಿ ಒಳೀಕ್ ಬನ್ನಿ" ಅಂತಾ ರತ್ನಗಂಬಳಿ ಹಾಸುತ್ತಿರುವುದು ಪಕ್ಷದ ಅಧೋಗತಿಯನ್ನು ಎತ್ತಿತೋರಿಸುತ್ತದೆ. ಅನಂತಮೂರ್ತಿಯಾದರೂ ಬರಲಿ ರಾಧಾಕೃಷ್ಣರಾದರೂ ಬರಲಿ ’ಬರುವವರಿಗೆಲ್ಲಾ ಸ್ವಾಗತ’ ಎಂದು ತಾತ್ಕಾಲಿಕ ಬೋರ್ಡನ್ನು ಹಾಕಿ ರಾಷ್ಟ್ರಾಧ್ಯಕ್ಸರೂ ರಾಜ್ಯಾಧ್ಯಕ್ಸರೂ ಒಂದೇ ಆಫೀಸಿನಲ್ಲಿ ಕೂತು ತಲೆಮೇಲೆ ಬಹಳಹೊತ್ತು ’ಕೈ’ಹೊತ್ತು ಈಗ ಗಡ್ಡಕ್ಕೆ ಕೈಕೊಟ್ಟು ಕೂತಿದ್ದಾರೆ! ಯಡ್ಯೂರಣ್ಣನಿಗೆ ಉಂಡೆನಾಮ ಎಳೆಯಲು ಹೊರಟಿದ್ದ ಸರ್ಕಸ್ ಕಂಪನಿಯಲ್ಲಿ ಅಧಿಕಾರವಿಲ್ಲದೇ 'ಶೋ' ನಡೆಸಲು ಸಾಧ್ಯವಾಗದೇ ಇರುವಾಗ ’ಬಂಡೆ’,’ಉಂಡೆ’, ’ಬಸ್ಸು’ ಮುಂತಾದ ಬಿಳಿಯ ಆನೆಗಳನ್ನು ಸಾಕುವುದು ’ಕುದುರೆ ವ್ಯಾಪಾರ’ಕ್ಕಿಂತಾ ದುಬಾರಿ ಎಂಬುದು ಮುದ್ದೆಗಳ ಲೆಕ್ಕಾಚಾರ; ಅದೊಂದೇ ಮುದ್ದೆಗಳು ಕಂಡ ಹದಿನಾರಾಣೆ ಸತ್ಯ-ಬಿಡಿ. ಯಾವುದೇ ಕಠಿಣ ಪರೀಕ್ಷೆಗಳನ್ನು ತಂದೊಡ್ಡಿದ್ದರೂ ತಾವು ಪಾಸು ಮಾಡುವುದಾಗಿ ತಿರುಗಾಟದಲ್ಲಿರುವ ಈಸ್ವರಣ್ಣ ಶಿವಮೊಗ್ಗದಲ್ಲಿ ಸಾರಿದ್ದಾರೆ. ಸರಿಯಾಗಿ ಉಡಲು ಬಾರದ ಉದ್ದ ಪಂಚೆಯನ್ನು ಹೇಗಾದರೂ ಸುತ್ತಿಕೊಂಡು ಅವರು ಬಹಳ ಉದ್ವೇಗದಿಂದ ಮಾತನಾಡುತ್ತಿದ್ದರು.

ಖಡುಗಂದುಬಣ್ಣದ ಮುದ್ದೆಗಳೂ ಅವುಗಳ ಎಣ್ಣೆಯಂತಹ ಹೊಳಪುಳ್ಳ ಮೈಕಾಂತಿಯ ನಡುವೆ ಕರಿಮುದ್ದೆಯ ಬೀಜವೊಂದು ಬಿದ್ದು ಬಿಳಿ ಮುದ್ದೆಯೊಂದು ಹೊರಬಂದಿರುವುದನ್ನು ಸಹಿಸದ ದೊಡ್ಡಮುದ್ದೆ ನಿಜಕ್ಕೂ ಹೈರಾಣಾಗಿದೆ. ಏಕಾದಶಿಯಮನೆಗೆ ಶಿವರಾತ್ರಿಯೂ ಬಂದರೆ ಹೇಗಾಗಬಹುದೋ ಹಾಗೇ ಪತ್ರಿಕೆಗಳಲ್ಲಿ ಇದನ್ನು ಚಿತ್ರಸಮೇತ ಕಂಡಾಗಲೆಲ್ಲಾ ಆನೆ ಸಿಂಹದ ಕನಸುಕಂಡಂತೇ ಹೆದರಿ ಬೀಳುವ ಸ್ಥಿತಿ ಉಂಟಾಗಿದೆ. ಗಾಂಧೀನಗರದಲ್ಲಿ ಹಲವು ಗಂಡುಗಳ ’ಪೌರುಷ’ವನ್ನು ಉಂಡ ಬಿಳಿಯ ಗೋಧೀನಾಗವೊಂದು ’ಲಾಡಿ’ನ ಸ್ನೇಹದಿಂದಾಗಿ ದೊರೆಯಿತು ಎನ್ನುವ ಕೆಲವರು ರಾಜ್ಯಾಧ್ಯಕ್ಸರ ರಸಿಕತೆಯನ್ನು ನಿಬ್ಬೆರಗಾಗಿ ನೋಡುತ್ತಿದ್ದಾರೆ! ಹೆಣ್ಣು ಸಂತಾನವಿಲ್ಲದೇ ಪಟ್ಟದಕ್ಕುವುದಿಲ್ಲವೆಂತಲೂ ಹಾಗೆ ಪಡೆಯಲು ಧರ್ಮಪತ್ನಿ ವಯೋವೃದ್ಧೆಯೆಂತಲೂ ಸಬೂಬು ಹೇಳಿದ ಕುಮಾರ ತೆವಲನ್ನು ತೀರಿಸಲು ಬಳಸಿಕೊಂಡ ಬಿಳಿನಾಗಕ್ಕೆ ಪೂರಕ ಆಸ್ತಿಯನ್ನೂ ಕೊಡಬೇಕಾಗಿ ಬಂದಿದೆ, ಅದನ್ನು ಗಟ್ಟಿಮಾಡಿಕೊಳ್ಳುವ ಸಲುವಾಗಿಯೇ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಈ ಸಂಬಂಧದ ಕುರಿತು ಸಾಕ್ಷ್ಯಾಧಾರವಾಗಿ ಕೆಲವು ಛಾಯಾಚಿತ್ರಗಳನ್ನು ಪ್ರಕಟಿಸಲಾಗಿತ್ತು.

ಮಳೆಗಾಲ ಆರಂಭವಾಗುತ್ತಿದ್ದ ಹಾಗೇ ಅರಣ್ಯ ಇಲಾಖೆಯವರು ತಾವು ಗಿಡಗಳನ್ನು ನೆಡಲು ತೊಡಗಿದ್ದರೆ ವಿದ್ಯುಚ್ಛಕ್ತಿ ನಿಗಮದವರು ತಾವು ಬೇಕುಬೇಕಾದಹಾಗೇ ಕಡಿದು ಕರ್ತವ್ಯ ಪಾಲಿಸುವುದಾಗಿ ಹೇಳಿದ್ದಾರೆ. ಪಿ.ಡಬ್ಲ್ಯೂ.ಡಿ ಯವರು ಕಂತ್ರಾಟುದಾರರ ಮೂಲಕ ರಸ್ತೆಗಳನ್ನು ನಿರ್ಮಿಸುತ್ತಿದ್ದರೆ ನೀರು ಸರಬರಾಜು ಮತ್ತು ಒಳಚರಂಡಿಯವರು ತಮಗೆ ಬೇಕಾದ ರೀತಿಯಲ್ಲಿ ರಸ್ತೆಗಳಲ್ಲಿ ಗುಂಡಿತೆಗೆದು ಕರ್ತವ್ಯ ಪಾಲಿಸುವುದು ಕಂಡುಬಂದಿದೆ! ಸದಾ ಕರ್ತವ್ಯ ನಿರತ ಅಭಿಯಂತರರುಗಳು ತಂತಮ್ಮ ಕರ್ತವ್ಯಗಳಲ್ಲಿ ತನ್ಮಗ್ನರಾಗಿರುವುದಕ್ಕೆ ಇದಕ್ಕಿಂತಾ ಉತ್ತಮ ಉದಾಹರಣೆ ಬೇಕೆ ? ಇದು ಸರಕಾರೀ ಇಲಾಖೆಗಳ ನಡುವೆ ಇರುವ ಪರಸ್ಪರ ಅನ್ಯೋನ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮನಗಂಡ ನಗರ ನಾಗರಿಕ ವೇದಿಕೆ ಆಯಾ ಇಲಾಖೆಗಳ ಸೇವಾ ಆಯುಕ್ತರು, ಅಭಿಯಂತರರುಗಳಿಗೆ ಸನ್ಮಾನಮಾಡುವ ಹಂಬಲ ಇದೆ ಎಂಬುದನ್ನು ಗೂಢವಾಗಿ ಹೇಳಿದೆ !

ಕಲಬೆರಕೆ ಆಹಾರ, ದೂಷಿತಹವೆ, ಕಲುಷಿತ ನೀರು ಇತ್ಯಾದಿಗಳಿಂದ ಎಲುವಿನ ಹಂದರವಾದ ನಾಗರಿಕರು ಅಲೋಪಥಿ ಔಷಧಿಗಳನ್ನು ಹೊತ್ತು ಹೊತ್ತಿಗೆ ಬೊಗಸೆತುಂಬಾ ಮೊಗೆದು ನುಂಗುವುದರಿಂದ ಅವರ ಶಾಂತಿಗಾಗಿ ದಿನಸಿ ಅಂಗಡಿಗಳಲ್ಲೂ ಬ್ರಾಂಡೆಡ್ ಮದ್ಯ ಬಾಟಲಿಗಳ ಮಾರಾಟವನ್ನು ವಿತರಿಸಲು ಅಬಕಾರೀ ಇಲಾಖೆ ಆಯೋಜನೆ ರೂಪಿಸುತ್ತಿದೆ. ನರ್ಸ್‍ಗಳ ಪ್ರೀತಿಗೆ ಪಾತ್ರವಾದ ಈ ಇಲಾಖೆ ಇದೀಗಾಗಲೇ ಮಹಿಳಾ ವೇಟರ್ ಗಳನ್ನು ಬಾರ್ ಗಳಲ್ಲಿ ನೇಮಕಾತಿ ಮಾಡಿಸುವುದರ ಮೂಲಕ ಹೊಸ ಸಾಧನೆಗೈದಿದೆ. ತಮ್ಮ ಇಲಾಖೆಯ ಗಿರಾಕಿಗಳೆಲ್ಲಾ ’ಬಾಟಲೀಪುತ್ರ’ರೇ ಆಗಿರುವುದರಿಂದ ಇದರ ಸಚಿವರು ನರ್ತನಕ್ಕೆ ಹೆಸರುವಾಸಿಯಾಗಿ ಹಗಲಿರುಳೂ ತುಸುವೂ ತೆರಪಿಲ್ಲದೇ ನರ್ತನಮಾಡುತ್ತಿದ್ದಾರೆ! ಸಮಾಜದಲ್ಲಿ ಎಲ್ಲರೂ ’ಬಾಟಲೀಪುತ್ರ’ರಾಗಿಬಿಟ್ಟರೆ ಆಗ ’ಮಾನವಕುಲ ತಾನೊಂದೆವಲಮ್’ ಆದಹಾಗೇ ಆಗಿಬಿಡುತ್ತದೆ. ಚುನಾವಣೆಗಳು ಬಂದಾಗ ಇನ್ನೂ ಅನುಕೂಲಕರವಾಗುತ್ತದೆ ಎಂಬ ದು[ದೂ]ರಾಲೋಚನೆಯಿಂದ ಇಂತಹ ಹಲವು ಯೋಜನೆಗಳು ಈ ಇಲಾಖೆಯ ಮುಂದಿವೆ. ಸಿಡಿದೆದ್ದರೆ ರಿಸಾರ್ಟು ಯಾತ್ರೆ ’ಒಡನಾಡಿದರೆ’ ಪಾದಯಾತ್ರೆ ಎಂಬ ಮಂತ್ರವನ್ನು ಎಲ್ಲರಿಗೂ ಬೋಧಿಸಿದ ಸನ್ಮಾನ್ಯರಿಗೆ ಯಾವಾಗ ಎಲ್ಲಿ ಯಾವ ಜ್ಞಾನೋದಯವಾಗುತ್ತದೆ ಎಂಬುದು ತಿಳಿಯುವುದಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ. ಕೆಲವರು ’ಯಡ್ಯೂರಣ್ಣ ಹೊತ್ತುಬಂದಾಗ ಕತ್ತೆಕಾಲನ್ನೂ ಹಿಡಿಯುತ್ತಾರೆ’ ಎಂಬ ಕಟುಸತ್ಯವನ್ನು ಹಾಡಹಗಲೇ ಹೇಳಿ ಲೇವಡಿಮಾಡಿದ್ದಾರೆ!

ಕನ್ನಡ ನಾಡನ್ನು ಹಿಂದಿನಿಂದ ಸ್ವಾತಂತ್ರ್ಯ ಪೂರ್ವದವರೆಗೆ ಹಲವಾರು ಅರಸರು/ರಾಣಿಯರು ಆಳಿದ್ದಾರೆ. ಆದರೆ ಇತ್ತೀಚೆಗೆ ಯಾಕೋ ’ನಾಡಪ್ರಭು ಕೆಂಪೇಗೌಡ’ ಎಂಬ ಹೆಸರು ಪದೇ ಪದೇ ಕೇಳಿಬರುತ್ತಿದೆ. ಕೆಂಪೇಗೌಡರು ಮಾಗಡಿಯ ಸಾಮಂತರಾಗಿ ಬೆಂಗಳೂರನ್ನು ನಿರ್ಮಿಸಿದ್ದು ನಿಜ. ಅವರು ನಿರ್ಮಿಸಿದ ಹಳೆಯ ಬೆಂಗಳೂರಿಗೆ ಹೊಸರೂಪ ಕೊಡುವಲ್ಲಿ ಮೈಸೂರು ಅರಸರೂ ದುಡಿದಿದ್ದಾರೆ. ಹಾಗಾದರೆ ಮೈಸೂರು ಮಹಾರಾಜರುಗಳು ನಾಡಪ್ರಭುಗಳಾಗಿರಲಿಲ್ಲವೇ ? ಹೊಯ್ಸಳರು, ಕದಂಬರು, ವಿಜಯನಗರದವರು ಆಗಿರಲಿಲ್ಲವೇ ? ಅವರೆಲ್ಲರ ಕೊಡುಗೆ ಬಹು ಹೆಚ್ಚಿನದು. ಒಂದರ್ಥದಲ್ಲಿ ’ನಾಡಪ್ರಭು’, ’ರಾಷ್ಟ್ರಕವಿ’ ಈ ಶಬ್ದಗಳ ಪ್ರಯೋಗ ಸರಿಯಲ್ಲ. ಅದರಿಂದ ಕೆಲವರಿಗಷ್ಟೇ ಗೌರವ ಸಿಕ್ಕಂತಾಗುತ್ತದೆಯೇ ಹೊರತು ಸಮಕಾಲೀನರಾದ ಹಲವರಿಗೆ ಅದು ಬೇಸರತರುವ ವಿಷಯವಾಗಬಹುದು--ಎಂದು ಹಿರಿಯ ಸಾಹಿತಿಗಳಾದ ಗುಮ್ಮಣ್ಣ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ತಾವು ಕೆಂಪೇಗೌಡರ ಅಪ್ಪಟ ಅಭಿಮಾನಿಯಾಗಿದ್ದು ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಯಾರೂ ವಿಚಲಿತರಾಗಬೇಕಿಲ್ಲಾ ಎಂದೂ ಅವರು ಹೇಳಿಕೆ ನೀಡಿದ್ದಾರೆ. ಅವರು ಇಂದು ಬೆಂಗಳೂರಿನ ಕೆಂಪೇಗೌಡ ಸರ್ಕಲ್‍ನಲ್ಲಿ ನಿಂತು ಮಾತನಾಡುತ್ತಿದ್ದರು. ಗಡಿಬಿಡಿಯಲ್ಲಿ ಮಾತನಾಡಿದ ಅವರು ಅಗತ್ಯ ಕೆಲಸದ ನಿಮಿತ್ತ ಪುಸ್ತಕ ಮಳಿಗೆಯೊಂದರ ಎರಡನೇ ಮಹಡಿಗೆ ಧಾವಿಸಿದರು.

ಒಂದೇ ವಿಷಯದಮೇಲೆ ಘಳಿಗೆಗೊಂದು ಬಾರಿ ಬೇರೆ ಬೇರೆ ಅಭಿಪ್ರಾಯವನ್ನು ಕೊಡುವವರಿಗೆ ' ತರಲೆ ಭಾರದ್ವಾಜ ಪ್ರಶಸ್ತಿ ' ಯನ್ನು ಕೊಡಲಾಗುವುದು ಎಂದು ಚಿಂತಕ ಜಿ.ಕೆ.ಮುಕುಂದರಾವ್ ಹೇಳಿದ್ದಾರೆ. ಅವರು ಚಿಂತಕರ ಚಾವಡಿಯ ಮೂರನೇ ಮೆಟ್ಟಿಲ ಮೇಲೆ ನಿಂತು ಮಾತನಾಡುತ್ತಿದ್ದರು. ಪ್ರಶಸ್ತಿ ಅಸಂಬದ್ಧ ಶಿಫಾರಸ್ಸು ಪತ್ರಗಳನ್ನಷ್ಟೇ ಒಳಗೊಂಡಿರುತ್ತದೆ ಎಂಬುದು ಇಲ್ಲಿನ ವಿಶೇಷ. ಕನ್ನಡ ಸಂಗಟನೆಗಳ ಹೆಸರಿನಲ್ಲಿ ಕೆಲವರು ರೋಲ್ ಕಾಲ್ ಮಾಡುತ್ತಿರುವುದು ಕನ್ನಡಾಭಿಮಾನಿಗಳ ದುರಾದೃಷ್ಟ ಎಂದೂ ಹೇಳುತ್ತಿದ್ದರು. ಮಾತನ್ನು ಮುಂದುವರಿಸಿದ ಅವರು ಮುಂದಿನ ಸರ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ಶಾಸಕ ಮತ್ತು ಸಂಸದರಿಗೆ ಕಬ್ಬಿಣದ ಕೊಡಲಿ, ಮಚ್ಚು. ಲಾಂಗು ಇಂಥವನ್ನೆಲ್ಲಾ ಮೊದಲೇ ಕೊಟ್ಟು ನಾಗರಿಕ ಸನ್ಮಾನ ಮಾಡಿ ಆಮೇಲೆ ಅವರವರ ಕರ್ತವ್ಯಕ್ಕೆ ಕಲಿಸಲಾಗುವುದು ಎಂದರು.

ಅತ್ಯುತ್ತಮ ಸುದ್ದಿಗಳನ್ನು ಸಕಾಲದಲ್ಲಿ ಶೀಘ್ರಗತಿಯಲ್ಲಿ ವಿಲೇವಾರಿ ಮಾಡಿದ್ದಕ್ಕಾಗಿ ಕಳಪೆ ಟಿವಿಗೆ ’ಮಾಧ್ಯಮದ ಮಿಂಚು’ ಪ್ರಶಸ್ತಿ ಲಭ್ಯವಾಗಿದೆ. ಗೊತ್ತಿಲ್ಲದ ಸಂಘವೊಂದು ಕೊಡಮಾಡುವ ಈ ಪ್ರಶಸ್ತಿಗೆ ದೇಶದಲ್ಲೇ ಕಳಪೆ ಟಿವಿ ಪ್ರಪ್ರಥಮವಾಗಿ ಆಯ್ಕೆಗೊಂಡಿರುವುದು ನಮಗೆಲ್ಲಾ ಸಂತೋಷದ ವಿಷಯ. ಈ ಸಮಯದಲ್ಲಿ ನಮ್ಮ ಕಳಪೆ ಟಿವಿಯ ಮುಖ್ಯಸ್ಥರಾದ ಕಡ್ಡಿ ರಂಗಣ್ಣನವರು ವೀಕ್ಷಕರಿಗೆ ಕೃತಜ್ಞತೆ ತಿಳಿಸಿದ್ದಾರೆ. ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಕಳಪೆ ಟಿವಿ ಬಳಗ ಹಾರೈಸುತ್ತದೆ.

ಒಟ್ಟಾರೆ ಗಣಕಯಂತ್ರದಿಂದಾದ ಸುಧಾರಣೆಗಳನ್ನು ಅಣುರೇಣುತೃಣಕಾಷ್ಠಾದಿಗಳೂ ಒಪ್ಪಲೇಬೇಕಾಗಿದೆ. ಇದು ನಿಜಕ್ಕೂ ನಾವು ಕಂಡ ಮಹತ್ತರ ಸಾಧನೆ ಎಂದು ವಿಜ್ಞಾನಿಗಳೂ ಗಣಕಶಾಸ್ತ್ರಿಗಳೂ ಒಳಗೊಳಗೇ ಬ್ರಷ್ಟಾಚಾರಕ್ಕೆ ಕರ್ತರಿ ಮತ್ತು ಕರ್ಮಣಿ ಪ್ರಯೋಗ ಮಾಡಲು ಮುನ್ನುಗ್ಗುತ್ತಿದ್ದಾರೆ. ಅತ್ಯಂತ ಕುತೂಹಲಕಾರಿ ಐಡಿಯೊಂದು ನಮ್ಮ ಗಮನವನ್ನು ತನ್ನತ್ತ ಸೆಳೆಯಿತು. ಅದೆಂದರೆ :

cute_raadhika@kswamy.net

ಇದೀಗ ತಾನೇ ಬಂದ ಸುದ್ದಿ :
ಕಾಯ್ದೆಬಾಹಿರ ವೆಬ್‍ಸೈಟ್‍ಗಳನ್ನು ಖಡಾಖಂಡಿತ ರದ್ದುಗೊಳಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ತಡವಾಗಿ ಹೇಳಿಕೆ ನೀಡಿದೆ.

ಇದು ಈ ಹೊತ್ತಿನ ನ್ಯೂಸ್, ಕ್ಷಣ ಕ್ಷಣದ ಸುದ್ದಿಗಾಗಿ ಆತಂಕದಿಂದ ನೋಡುತ್ತಾ ಇರಿ: ಕಳಪೆ ಟಿವಿ ೨೪ ಬಾರ್ ೭, ನಮಸ್ಕಾರ.