ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 5, 2013

ಮೂರ್ತಿ ಕಣ್ಣೆದುರು ಪ್ರತ್ಯಕ್ಷವಾದಾಗ....................!!!




ಮೂರ್ತಿ ಕಣ್ಣೆದುರು ಪ್ರತ್ಯಕ್ಷವಾದಾಗ....................!!!
                     
ತುಸು ವಿಶಾಲವಾದ ಜಾಗವನ್ನು ಹೊಂದಿದ ಕಾಂಪೌಂಡಿನ ಒಳಗೆ ಕಳೆದ ಶತಮಾನದ ಕಟ್ಟಡ. ಮೆಟ್ಟಿಲೇರಿ ಮಹಡಿಯನ್ನು ತಲುಪಿದರೆ ಅಲ್ಲೊಂದು ಹಜಾರ ಅಥವಾ ಹಾಲ್.  ತೀರಾ ಆಡಂಬರವಲ್ಲದ ಸಾದಾ ಸೀದಾ ಆದರೂ ವಿಶೇಷವೆನಿಸುವಂಥಾ ಮೆತ್ತೆಗಳಿರುವ ಸೋಫಾಗಳು, ಒಂದೆಡೆ ಅತಿ ಉದ್ದನೆಯ ಪೆಂಡೂಲಮ್ ಹೊಂದಿರುವ [ಮೈಸೂರು ಅರಮನೆಯಲ್ಲಿ ಸಿಕ್ಕಿತೇನೋ ಎಂಬಂತಹ]ಅತಿವಿಶಿಷ್ಟ ನಿಲುಗಡಿಯಾರ, ಬಿರುಬೇಸಿಗೆಯ ಸೆಕೆ ಬಂದವರಿಗೆ ತಾಗದಿರಲೆಂದು ಅಳವಡಿಸಿರುವ ಏಸಿ, ಜೀನ್ಸ್ ಮತ್ತು ಟೀ ಶರ್ಟ್ ನಲ್ಲಿ, ಎಂದಿನಂತೇ ಮುಗುಳುನಗುತ್ತ ರತ್ನಗಂಬಳಿಯಮೇಲೆ ಎದ್ದುನಿಂತು ಸ್ವಾಗತಿಸಿದ ಮೂರ್ತಿಯ ಚಿತ್ರ ತಲೆಯಲ್ಲಿ ಸ್ಥಿರವಾಗಿ ನಿಂತಿದೆ. ಮೈಕ್ರೋಸಾಫ್ಟ್ ನಲ್ಲಿ ಪ್ರೋಗ್ರಾಮರ್ ಆಗಿದ್ದ ಈ ಮೂರ್ತಿ ಅಂತಿಂಥ ಮೂರ್ತಿಯಲ್ಲ! ಕ್ಯಾಲಿಫೋರ್ನಿಯಾದಲ್ಲಿ ಮೂರು ಕಂಪನಿಗಳಿಗೆ ಹುಟ್ಟುನೀಡಲು ಪಾಲುದಾರರಾಗಿ ಕಾರಣರಾಗಿದ್ದ ಮೂರ್ತಿ, ಸ್ಥಾಪಿಸಿದ್ದ ’ಎಲಿಗ್ರೋ ಸಿಸ್ಟಮ್ಸ್’ ಎಂಬ ಐಪಿ ಸೆಕ್ಯುರಿಟಿ ಕಂಪನಿಯ ಬೆಳವಣಿಗೆಯನ್ನು ಕಂಡು ಸಿಸ್ಕೋ ಅದನ್ನು ಕೊಂಡುಕೊಂಡಿತು. ನೆಟ್ ವರ್ಕ್ ಎಂಜಿನೀಯರ್ ಆದ ಮೂರ್ತಿ ನನ್ನ ಮೂಲ ವೃತ್ತಿ ಮಾರ್ಗದವರೇ ಎಂಬುದನ್ನು ತಿಳಿದಾಗ ಸಂತಸವಾಯ್ತು. ಎಲ್ಲಿಯ ನೆಟ್ ವರ್ಕು ಎಲ್ಲಿಯ ಬರಹಲೋಕ, ಎಲ್ಲಿಯ ಸಂಗೀತ-ಸಾಹಿತ್ಯ, ಸಂಬಂಧವೇ ಇಲ್ಲದ ಈ ಎರಡು ದಾರಿಗಳಲ್ಲಿ ಸಂಬಂಧವನ್ನು ಕಲ್ಪಿಸುವ ಜನರಿದ್ದಾರೆ ಎಂಬುದು ನಿಮ್ಮ ಮುಂದೆ ಸಾಬೀತಾಗಿರುವ ವಿಷಯ. ಮೂರ್ತಿಯ ಸಂಗೀತವನ್ನು ನೀವು ಅಲಿಸಿದ್ದೀರಿ, ನನ್ನ ಬರಹಗಳನ್ನೂ ನೀವು ಓದಿ ಆಸ್ವಾದಿಸಿದ್ದೀರಿ; ಯಾಕೆ ಹೀಗೆ ಹೇಳಿದೆನೆಂದರೆ ವ್ಯಕ್ತಿಗೆ ಮಾದುವ ವೃತ್ತಿಯಲ್ಲಿ ವೃತ್ತಿಸಂತೋಷ ಇದ್ದರೆ, ಓದು ಯಾವುದೇ ಆದರೂ ಮಡುವುದು ಬಯಸಿದ್ದನ್ನೇ!  

ನಮ್ಮ ನಡುವೆ ನಾವು ಅನೇಕರನ್ನು ನೋಡುತ್ತೇವೆ. ಇಲೆಕ್ಟ್ರಿಕಲ್, ಮೆಕಾನಿಕಲ್, ಸಿವಿಲ್ ಮೊದಲಾದ ಎಂಜಿನೀಯರಿಂಗ್ ಓದಿಕೊಂಡ ಜನ ತೊಡಗಿಕೊಳ್ಳುವುದು ತದ್ವಿರುದ್ಧವಾದ ವೃತ್ತಿಗಳಲ್ಲಿ. ಏನನ್ನೂ ಓದದ ವ್ಯಕ್ತಿ ಮಲೆನಾಡ ಕಾಡಿನ ಭಾಗಗಳಲ್ಲಿ ವಿದ್ಯುಜ್ಜನಕಗಳನ್ನು ನಿರ್ಮಿಸಿಕೊಟ್ಟು ದಾಖಲೆಮಾಡಿದ್ದಾರೆ. ಕೃಷಿಕರಿಗೆ ಉಪಯೋಗವಾಗುವ ಹಲವು ಯಂತ್ರೋಪಕರಣಗಳನ್ನು ಜಾಸ್ತಿ ಓದಿರದ ಹಳ್ಳಿಗರೇ ತಯಾರಿಸಿಕೊಡುತ್ತಿದ್ದಾರೆ. ತೀರಾ ಇತ್ತೀಚೆಗೆ ಬಂದ ಮೊಬೈಲ್ ಸಿಮ್ ಬಳಸಿ, ಆ ಮೂಲಕ ನಿಯಂತ್ರಿಸಬಲ್ಲ ಯಂತ್ರಗಳನ್ನೂ ಸಹ ಕೆಲವರು ಸಿದ್ಧಪಡಿಸಿದ್ದಾರೆ. ಎಂಜಿನೀಯರಿಂಗ್ ಕಾಲೇಜುಗಳಲ್ಲಿ ಪ್ರಾಜೆಕ್ಟ್ ಮಾಡುವ ಹುಡುಗರು ಇಂಥವರಿಂದ ಮಾಹಿತಿ ಪಡೆದರೂ ತಪ್ಪಿಲ್ಲ. ಬದುಕು ಮನುಷ್ಯನಿಗೆ ಪಾಠಕಲಿಸುತ್ತದೆ; ಬದುಕು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಹೇಳಿಕೊಡಲು ಸಾಧ್ಯವಾಗುವುದಿಲ್ಲ. ವ್ಯಕ್ತಿಯ ಮನದಲ್ಲಿ ನಿಶ್ಚಿತ ಉತ್ತಮ ಗುರಿಯೊಂದು ಹುಟ್ಟಿಬಿಟ್ಟರೆ, ಅದನ್ನು ಸಾಧಿಸಲು ಆತ ಸನ್ನದ್ಧನಾಗೇ ಇರುತ್ತಾನೆ, ಅದಕ್ಕಾಗಿಯೇ ಸತತ ಪರಿಶ್ರಮಿಸುತ್ತಾನೆ. ಚಾರ್ಟರ್ಡ್ ಅಕೌಂಟಂಟ್ ಆಗಿರುವ ಯಂಡಮೂರಿ ವೀರೇಂದ್ರನಾಥ್ ಅವರು ’ದುಡ್ಡು ದುಡ್ಡು’ ಎಂಬ ಕಾದಂಬರಿಯನ್ನು ಬರೆದು ಹೆಸರುವಾಸಿಯಾದರು. ಅವರ ಬರಹಗಳು ಇಂದಿಗೂ ಹಾಗೇ ಹಸೀ ಗೋಡೆಗೆ ಹರಳನ್ನು ಮೆತ್ತುವ ಪ್ರಾತ್ಯಕ್ಷಿಕೆಯನ್ನು ಅವರು ಬರಹಗಳ ಮೂಲಕ ಉಣಬಡಿಸುತ್ತಾರೆ. ಕನ್ನಡ ಬರುವುದಿಲ್ಲವಾದರೂ, ನನ್ನ ಬರಹಗಳನ್ನು ಬೇರೆಯವರಿಂದ ತರ್ಜುಮೆ ಮಾಡಿಸಿ ತಿಳಿದುಕೊಂಡೆ ಎಂದು ಅವರೊಮ್ಮೆ ನನಗೆ, ಶುಭಾಶಯ ತಿಳಿಸಿ ಮಿಂಚಂಚೆ ಕಳಿಸಿದ್ದಾರೆ.

ಪಂಜೆಯವರು ತಮ್ಮ ಕವನದಲ್ಲಿ

ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು

ಎಂದಿದ್ದಾರೆ. ಆ ಪ್ರಕಾರ ನಾನು ಭೇಟಿಯಾದ ಮೂರ್ತಿ, ನನಗೆ ಮಿಂಚಂಚೆ ಕಳಿಸಿದ ಯಂಡಮೂರಿ ಇವರೆಲ್ಲಾ ಬಹಳ ಎತ್ತರಕ್ಕೆ ಏರಿದರೂ, ನಿಗರ್ವಿಗಳಾಗಿ ಸರಳ ಜೀವನವನ್ನು ನಡೆಸಿದ್ದಾರೆ. ಅಂದಹಾಗೆ ಆ ಮೂರ್ತಿ ನನ್ನ-ನಿಮ್ಮೆಲ್ಲರ ಮನದಮೂರ್ತಿ; ಮನೋಮೂರ್ತಿ! ಅವರ ಮನೆಯೊಳಗೆ ಅವರೆದುರು ಕುಳಿತುಕೊಳ್ಳುತ್ತಿದ್ದಂತೆಯೇ, ಸಹಾಯಕನ ಮೂಲಕ ಕಾಫಿ ತರಿಸಿಕೊಟ್ಟರು. ಇದುವರೆಗೆ ಎಲ್ಲೂ ಭೇಟಿಯಾಗಿರದ, ನನ್ನಂತಹ ಸಾಮಾನ್ಯನನ್ನೂ ಸಹ ಅವರು ನಡೆಸಿಕೊಂಡ ರೀತಿ ನನಗೇ ಮುಜುಗರವನ್ನುಂಟುಮಾಡಿತ್ತು. ಮಾತನಾಡುತ್ತಿದ್ದರೆ ಹತ್ತಿರದ ನೆಂಟರೊಡನೆ ಹರಟಿದ ಅನುಭವ; ಮಾತಿನಲ್ಲಿ ತೀರಾ ಔಪಚಾರಿಕತೆಯಿಲ್ಲ, ಡಂಬಾಚಾರವಿಲ್ಲ, ತೂಕದ ಮಾತು, ಮಿತಮಾತು, ಶುದ್ಧ ಕನ್ನಡದಲ್ಲೇ ಮಾತು. ಸಹಜವಾಗಿ ಹೊರಹೊಮ್ಮುವ ಮುಖಭಾವಗಳು, ಆಗಾಗ ತಿಳಿನಗೆ, ಯಾವುದನ್ನೂ ಗೌಪ್ಯವಾಗಿಡದಂಥಾ ನೇರ ಮಾತುಗಾರಿಕೆ-ಇವುಗಳನ್ನೆಲ್ಲಾ ಮೂರ್ತಿಯವರಲ್ಲಿ ಕಂಡೆ.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನೀಯರಿಂಗ್ ಕಾಲೇಜಿನಲ್ಲಿ, ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದುತ್ತಿರುವಾಗಲೇ ಮನೋಮೂರ್ತಿಯವರು ಡ್ರಮ್ ಬಾರಿಸುತ್ತಿದ್ದರಂತೆ. ಕರ್ನಾಟಕ ಸಂಗೀತಕ್ಕೆ ಒತ್ತುಕೊಟ್ಟ  ಹಿನ್ನೆಲೆಯ ಮನೆತನದಲ್ಲಿ ಜನಿಸಿದ ಅವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಎಲ್ಲೇ ಸಂಗೀತ ಗೋಷ್ಠಿ, ವಾದ್ಯಗೋಷ್ಠಿಗಳು ನಡೆದರೂ ಸಾಧ್ಯವಾದಲ್ಲೆಲ್ಲಾ ಅದನ್ನು ನೋಡುವುದು ಮೂರ್ತಿಯ ಆಸಕ್ತಿಯ ವಿಷಯಗಳಲ್ಲೊಂದು. ಸಂಗೀತಕ್ಕೇ ಮನಸ್ಸು ಸೋತಿದ್ದರೂ ಮನೆಯವರು ಪದವಿ-ಗಿದವಿ ಓದಿಸದೇ ಹಾಗೇ ಬಿಟ್ಟುಬಿಡುತ್ತಾರ್ಯೇ? ಸಹಜವಾಗಿ ಮನೆಯವರೆಲ್ಲರ ಒತ್ತಾಯದಮೇರೆಗೆ, ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಹಾರಿದವರು ಮನೋಮೂರ್ತಿ-ಅಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಓದಿದರಂತೆ. ಓದು ನಡೆದೇ ಇದ್ದರೂ ಜೊತೆಜೊತೆಗೇ ಸಂಗೀತರಂಗವೂ ಕೈಬೀಸಿ ಕರೆಯುತ್ತಿತ್ತು. ಹಸಿರುಮೇವನ್ನು ಕಂಡ ಹಸಿದ ದನದಂತೇ ಸಂಗೀತದ ಹಸಿವನ್ನು ನೀಗಿಸಿಕೊಳ್ಳಲು ಮೂರ್ತಿಯ ಮನಸ್ಸು ಸದಾ ಅವಕಾಶ ಹುಡುಕುತ್ತಿತ್ತು.

ಸಂಗೀತದಲ್ಲಿ ತೊಡಗಿಕೊಂಡ ಮೂರ್ತಿ ಕನ್ನಡತಾಯ್ನೆಲದಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ’ಅಮೇರಿಕಾ ಅಮೇರಿಕಾ’ ಚಲನಚಿತ್ರಕ್ಕೆ ಸಂಗೀತವೊದಗಿಸಿದರಾದರೂ ಅವರ ಸಂಗೀತದಿಂದ ಜನರ ಹೃದಯವೀಣೆಯನ್ನು ಮೀಟಿದ್ದು ’ಮುಂಗಾರುಮಳೆ’ಯಲ್ಲಿ. ’ಅಮೇರಿಕಾ ಅಮೇರಿಕಾ’ ಚಿತ್ರದ ’ನೂರು ಜನುಮಕೂ....’ ಮತ್ತು ’ಅಮೇರಿಕಾ ಅಮೇರಿಕಾ’ ಹಾಡುಗಳೂ ಸಹ ಜನರನ್ನು ಆಕರ್ಷಿಸಿವೆ. ನಂತರ ’ನನ್ನ ಪ್ರೀತಿಯ ಹುಡುಗಿ’ ಎಂಬ ಚಿತ್ರಕ್ಕೆ ಸಂಗೀತ ನೀಡಿದಾಗ ’ಕಾರ್ ಕಾರ್ ಕಾರ್’ ಹಾಡು ಬಹಳ ಜನಪ್ರಿಯವಾಯ್ತು. ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದ ’ಪ್ರೀತಿ ಪ್ರೇಮ ಪ್ರಣಯ’ ಚಿತ್ರಕ್ಕೂ ಸಂಗೀತ ಮೂರ್ತಿಯವರೇ ನೀಡಿದ್ದಾರೆ. ಜೋಕ್ ಫಾಲ್ಸ್ ಎಂಬ ಹಾಸ್ಯಮಯ ಚಿತ್ರದಲ್ಲೂ ಮನೋಮೂರ್ತಿಗಳು ಸಂಗೀತದಿಂದ ಗಮನಸೆಳೆದಿದ್ದಾರೆ. ಎಲ್ಲೆಡೆಯಲ್ಲೂ ಮಳೆಯಾಗಿದ್ದರೂ ಮೂರ್ತಿಯವರ ಹೊಲದಲ್ಲಿ ಮಾತ್ರ ಮಳೆ ಬಿದ್ದಿದ್ದು ’ಮುಂಗಾರುಮಳೆ’ ಚಿತ್ರ ಬಿಡುಗಡೆಯಾದಮೇಲೆಯೇ. ನಿರ್ಮಾಪಕರಿಗೆ ೭೫ ಕೋಟಿ ಆದಾಯ ತಂದುಕೊಟ್ಟ ಈ ಚಿತ್ರ ಕನ್ನಡದಲ್ಲಿ ಅತ್ಯಂತ ಹಿಟ್ ಚಿತ್ರವೆನಿಸಿದ್ದು ಅದಕ್ಕೆ ಮೂರ್ತಿಯವರ ಸುಮಧುರ ಸಂಗೀತವೂ ಒಂದು ಕಾರಣವಾಗಿದೆ. ನಂತರ ೨೦೦೭ರಲ್ಲಿ ಇನ್ನೊಂದು ಯಶಸ್ವೀ ಚಿತ್ರ ’ಚೆಲುವಿನ ಚಿತ್ತಾರ’ ಬಿಡುಗಡೆಯಾಗಿ, ಇನ್ನೊಮ್ಮೆ ಮೂರ್ತಿ ಲೈಮ್ ಲೈಟ್ ನಲ್ಲಿ ಕಾಣಿಸಿಕೊಂಡರು. ನಾದಮಧುರ್ಯದ ಕೈಚಳಕ ಮತ್ತು ಇಂಪಾದ ಸ್ವರಸಮ್ಮೇಳನ ಮೂರ್ತಿಯವರಿಗೆ ಕರಗತವಾಗಿದ್ದರಿಂದ ಅನೇಕ ನಿರ್ಮಾಪಕರು ಮೂರ್ತಿಯವರನ್ನು ಮೂರ್ತಿಯವರನ್ನೇ ಸಂಗೀತಕ್ಕೆ ಆಯ್ಕೆಮಾಡಿಕೊಳ್ಳತೊಡಗಿದರು. ೨೦೦೫ರಲ್ಲಿ ಹಿಂದೀ ಚಿತ್ರವೊಂದಕ್ಕೆ ಸಂಗೀತವನ್ನೊದಗಿಸಿದ್ದರೂ ಆ ಚಿತ್ರ ಬಿಡುಗಡೆ ಕಾಣದಿದ್ದುದು ವಿಷಾದನೀಯ.

ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ:

  • ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ ?

೧೯೭೬ ರಿಂದ ನಾನು ಕಂಪ್ಯೂಟರ್ ನೆಟ್ ವರ್ಕಿಂಗ್ ನಲ್ಲಿದ್ದೆ. ೧೯೯೦ರ ಆದಿಭಾಗದಲ್ಲಿ ನನಗನ್ನಿಸಿತು. ನಾನು ಕಂಪ್ಯೂಟರ್ ಗಳ ಜೊತೆ ಮಾತನಾಡುವುದರ ಹೊರತಾಗಿ ಇನ್ನೇನನ್ನಾದರೂ ಮಾಡಬೇಕು ಎಂದು. ಸಂಗೀತ ಹೇಗೂ ನನ್ನ ಐಚ್ಛಿಕ ವಿಷಯವಾಗಿದ್ದು ಸಂಗೀತವೆಂಬುದು ಶರೀರದ ಕಣಕಣವನ್ನೂ ವ್ಯಾಪಿಸಿತ್ತು. ಯುವಿಸಿಇ ಯಲ್ಲಿ ಕಲಿಯುತ್ತಿರುವಾಗ ನನ್ನದೇ ಆದ ಪಾಪ್ ಬ್ಯಾಂಡನ್ನು ಹೊಂದಿದ್ದೆ. ಕನ್ನಡಲ್ಲಿ ಕೆಲವು ಪಾಪ್ ಹಾಡುಗಳನ್ನು ಅದಾಗಲೇ ನಾನು ತಯಾರಿಸಿದ್ದೆ. ಮತ್ತು ಸಾಕಷ್ಟು ಟ್ಯೂನ್ ಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪ್ರಥಮವಾಗಿ ೧೯೯೫-೯೬ ರಲಿ ಕನ್ನಡದಲ್ಲಿ ’ಅಮೇರಿಕಾ ಅಮೇರಿಕಾ’ ಎಂಬ ಸಿನಿಮಾಕ್ಕೆ ಸಂಗೀತನೀಡಿದೆ. ನಾನು ಸಾಮಾನ್ಯವಾಗಿ ವರ್ಷಕ್ಕೆ ೨ ಸಿನಿಮಾಗಳಿಗೆ ಸಂಗೀತವೊದಗಿಸುತ್ತಿದ್ದು ಕಳೆದ ಕೆಲವರ್ಷಗಳಿಂದ ವರ್ಷಕ್ಕೆ ಒಂದೇ ಸಿನಿಮಾಕ್ಕೆ ಸಂಗೀತ ನೀಡಲು ನಿರ್ಧರಿಸಿದ್ದೇನೆ. ಹೈಟೆಕ್ ಕೆಲಸ ಯಾಂತ್ರಿಕವಾಗಿ ಇದ್ದೇ ಇರುತ್ತದೆ ಆದರೆ ಸಂಗೀತಮಾತ್ರ ನನ್ನನ್ನು ಸದಾ ಅದರಲ್ಲಿ ತೊಡಗಿಕೊಳ್ಳುವಂತೇ ಮಾಡುತ್ತದೆ, ಸಂಗೀತಕ್ಕಾಗಿ ದಿನದ ೨೪ ಗಂಟೆ ಕೆಲಸಮಾಡಿದರೂ ಬೇಸರವೆನಿಸುವುದಿಲ್ಲ.

  • ನಿಮಗೆ ಸಂಗೀತ ಕ್ಷೇತ್ರದಲ್ಲಿ ಕೆಲಸಮಾಡಲು ಸಮಯ ಸಿಗುತ್ತದೆಯೇ?

ಏನನ್ನಾದರೂ ಸಾಧಿಸಬೇಕೆಂದರೆ ಸಂಬಂಧಿಸಿದ ರಂಗಕ್ಕಾಗಿ ಸಮಯವನ್ನು ನಾವೇ ಹೊಂಚಿಕೊಳ್ಳಬೇಕಲ್ಲವೇ? ನಾನು ಪ್ರಾಜೆಕ್ಟ್ ಗಳನ್ನು ನಡೆಸುವಾಗ ಪ್ರತಿರಾತ್ರಿ ೩-೪ ಗಂಟೆಯಷ್ಟೇ ನಿದ್ದೆಮಾಡುತ್ತೇನೆ.

  • ಯಾಕೆ ಸಂಗೀತವೇ ನಿಮ್ಮ ಆಯ್ಕೆ?

ಚಿಕ್ಕವನಿದ್ದಾಗ ಬೇಸಿಗೆಯ ರಜಾದಿನಗಳಲ್ಲಿ ಪಾಲಕರೊಟ್ಟಿಗೆ ಕರ್ನಾಟಕ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದೆ. ಅಂದಿನಿಂದಲೂ ಸಂಗೀತವೆಂದರೆ ಕಿವಿನಿಮಿರುತ್ತದೆ. ಗಣಕತಜ್ಞರಲ್ಲಿ ಅನೇಕರು ತಮ್ಮ ದಿನನಿತ್ಯದ ಯಾಂತ್ರಿಕತೆಯ ಕೆಲಸಗಳ ಒತ್ತಡಗಳನ್ನು ಪರಿಹರಿಸಿಕೊಳ್ಳಲು, ಪ್ರತಿರಾತ್ರಿ ಮನೆಗೆ ಮರಳಿದ ನಂತರ ಯಾವುದಾದರೊಂದು ಸಂಗೀತದ ಉಪಕರಣವನ್ನು ನುಡಿಸುತ್ತಾರೆ.

  • ನಿಮ್ಮಲ್ಲಿ ಸ್ಟುಡಿಯೋ ಏನಾದರೂ ಇಟ್ಟುಕೊಂಡಿದ್ದೀರೇ?

ಹೌದು, ನಾನು ಸಂಗೀತದ ಅಳವಡಿಕೆಗೆ ಬೇಕಾದ ವ್ಯವಸ್ಥೆಗಳನ್ನು ಇಟ್ಟುಕೊಂಡಿದ್ದೇನೆ. ಅಲ್ಲೇ ರೆಕಾರ್ಡಿಂಗ್ ಕೂಡ ಮಾಡುತ್ತೇನೆ. ಅಲ್ಲೇ ನಾನು ಎಲ್ಲವನ್ನೂ ಮಾಡಬಹುದಾದರೂ, ವೃತ್ತಿನಿರತ ರೆಕಾರ್ಡಿಂಗ್ ನಿಪುಣರಿಂದ ಅದನ್ನು ಸಮರ್ಪಕವಾಗಿ ನೆರವೇರಿಸುವ ದೃಷ್ಟಿಯಿಂದ ರೆಕಾರ್ಡ್ ಮಾಡಿದ್ದನ್ನು ಇಲ್ಲಿಗೆ ಹೊತ್ತುತರುತ್ತೇನೆ. ಯಾವುದೇ ಹಾಡಿಗೆ ನೇರವಾದ ವಾದ್ಯಗೋಷ್ಠಿಯ ಅಳವಡಿಕೆ ಬೇಕಾಗಿ ಕಂಡರೆ, ಆಗ ನೇರವಾಗಿ ಭಾರತದಲ್ಲಿಯೇ ವಾದ್ಯಗೋಷ್ಠಿಗಳನ್ನು ಬಳಸಿಕೊಳ್ಳುತ್ತೇನೆ. 

  • ಭಾರತದ ಸಂಗೀತ ಸ್ಟುಡಿಯೋಗಳು ಹಿತಕರವಾಗಿವೆಯೇ?

ಹೌದೌದು, ಬಹಳ ಹಿತಕರವಾಗಿವೆ. ಅಮೇರಿಕಾಗಿಂತ ನಮ್ಮ ಭಾರತದ ಸ್ಟುಡಿಯೋಗಳೇ ವಾಸಿ ಎಂದೆನಿಸುತ್ತದೆ.  ಇಲ್ಲಿನ ತಂತ್ರಜ್ಞರು ಭಾರತೀಯ ಸಂಗೀತ ಹೇಗಿರಬೇಕೆಂಬ ಅನುಭೂತಿಯನ್ನು ಹೊಂದಿರುವುದೂ ಇದಕ್ಕೆ ಒಂದು ಕಾರಣ. ಸಂಗೀತದ ಉಪಕರಣಗಳು ಅವವೇ ಆಗಿದ್ದರೂ ಅವುಗಳನ್ನು ನುಡಿಸುವವರ ಶೈಲಿಯಿಂದ ವಿಭಿನ್ನ ರಾಗಗಳೂ ಪದ್ಧತಿಗಳೂ ಹೊರಡುತ್ತವೆ.

  • ಅಪ್ಪಟ ಭಾರತೀಯ ಸಂಗೀತ  ಅಥವಾ ಪಾಶ್ಚಾತ್ಯ ಸಮ್ಮಿಶ್ರ ಸಂಗೀತ-ಇವುಗಳಲ್ಲಿ ಯಾವುದರ ಬಳಕೆ ನಿಮ್ಮ ಗುರಿ ?

ನಾನು ಇನ್ನೂ ಕಲಿಯುತ್ತಿದ್ದೇನೆ, ಕಲಿಯುವಿಕೆಗೆ ಕೊನೆಯಿಲ್ಲ. ಅನುಭವ ತಂದುಕೊಡುವ ಜ್ಞಾನ ಬೇರಾವುದಕ್ಕಿಂತಲೂ ದೊಡ್ಡದು. ಸಂಗೀತದಲ್ಲಿ ನಿಜವಾಗಿಯೂ ಬೇರೊಂದೇ ಏನನ್ನೋ ನಾನು ಬಯಸುತ್ತಿದ್ದೇನೆ. ಉದಾಹರಣೆಗೆ, ಹಿನ್ನೆಲೆ ಸಂಗೀತಕ್ಕೆ ಇಂತಿಂಥದೇ ಒಂದಷ್ಟು ಸೂತ್ರಗಳಿವೆ-ಅವುಗಳನ್ನು ಎಲ್ಲರೂ ಅನುಸರಿಸುತ್ತಾರೆ. ಅವುಗಳ ಮೇಲೆ ವಿಭಿನ್ನ ಪ್ರಯೋಗಗಳನ್ನು ಮಾಡುವ ಮನಸ್ಸಿದೆ. ಹಾಡುಗಳಲ್ಲೂ ಕೂಡ ಹಾಗೇ. ಈ ಕ್ಷಣಕ್ಕೆ ಇಂಥಾದ್ದೇ ಎಂದು ನಾನು ಎತ್ತಿ ತೋರಿಸಲು ಆಗುವುದಿಲ್ಲ, ಆದರೆ ಖಂಡಿತವಾಗಿಯೂ ನಾನು ಹೊಸತನವನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗುತ್ತೇನೆ.

  • ಕನ್ನಡ ಸಿನಿಮಾರಂಗದಲ್ಲಿನ ಬೆಳವಣಿಗೆಗಳ ಬಗ್ಗೆ ಏನು ಹೇಳ್ತೀರಿ?

ನಾನು ಸತ್ಯ ಹೇಳುತ್ತೇನೆ. ನಾನು ಕನ್ನಡದ ಸಂಗೀತವನ್ನು ಬಹಳ ಆಲಿಸುವುದಿಲ್ಲ; ಕಾರಣವಿಷ್ಟೇ: ನನಗೆ ಅಷ್ಟೊಂದು ಸಮಯ ಲಭ್ಯವಾಗುವುದಿಲ್ಲ. ಇನ್ನೊಂದೆಂದರೆ, ಯಾವಾಗ ನಾನು ಒಂದು ಆಲ್ಬಮ್ ಆಲಿಸುತ್ತೇನೆಯೋ, ಅಲ್ಲಿನ ಹಾಡುಗಳಿಗೆ ನನ್ನ ಮನ ತಂತಾನೇ ಸೋಲಬೇಕು-ಮತ್ತೆ ಮತ್ತೆ ಅವುಗಳನ್ನೇ ಆಲಿಸುವಷ್ಟು ಹಿಡಿಸಬೇಕು, ಹಾಗೆ ಅವುಗಳಲ್ಲಿ ಮಿಂದೆದ್ದು ಬಂದಾಗ ನನಗೇನಾದರೂ ಹೊಸ ಪ್ರಯೋಜನ ಸಿಗುವಂತಿರಬೇಕು. ಈಗಿರುವ ಹಾಡುಗಳನ್ನಷ್ಟೇ ಕೇಳುವುದರಲ್ಲಿ ಅರ್ಥವಿಲ್ಲ, ಈಗಿರುವ ಹಾಡುಗಳಿಗಿಂತಾ ವಿಭಿನ್ನವಾದ ಹಾಡುಗಳನ್ನು ಕೇಳುವುದೊಳಿತು. ಕನ್ನಡದ ಈಗಿರುವ ಹಾಡುಗಳನ್ನು ಬಹಳವಾಗಿ ಆಲಿಸುವುದರಿಂದ, ಮುಂದಿನ ನನ್ನ ಸಂಗೀತದಲ್ಲಿ ಅವುಗಳ ಆಯಾಮಗಳು ಪ್ರತಿಫಲಿತವಾಗಲೂ ಬಹುದು!      

  • ಕನ್ನಡದಲ್ಲಿ ಈಗಿರುವ ಹಾಡುಗಳನ್ನು ಕೇಳುವುದರಿಂದ ಅವುಗಳಲ್ಲಿನ ಧನಾತ್ಮಕ ಅಂಶಗಳನ್ನು ನೀವು ಮುಂದೆ ಅಳವಡಿಸಿಕೊಂಡು, ಆದರೆ ಅವುಗಳಿಗಿಂತ ವಿಭಿನ್ನವಾದ ಹಾಡುಗಳನ್ನು ಕೊಡುವ ಸಾಧ್ಯತೆ ಕಾಣಬಾರದೇಕೆ?

ನೀವು ಅತ್ಯಂತ ಸಮಂಜಸವಾಗಿ ಹೇಳಿದ್ದೀರಿ. ಕೆಲವೊಮ್ಮೆ ನಾವು ಉದಾಹರಣೆಗಳಿಂದ ಕಲಿಯಬೇಕಾಗುತ್ತದೆ. ಜನ ಅಪೇಕ್ಷೆ ಪಟ್ಟಾಗ, ಕೆಲವುಬಾರಿ ನಾನು ಹಾಗೆ ಕನ್ನಡ ಹಾಡುಗಳನ್ನು ಕೇಳುವುದಿದೆ, ಅವು ಹಿತಕರವಾಗಿರಲಿ, ಹಿಡಿಸದಿರಲಿ, ಹೇಗಿದ್ದರೂ ತಾಳ್ಮೆಯಿಂದ ಆಲಿಸುತ್ತೇನೆ. 

  • ಸಂಗೀತ ನಿಮ್ಮ ನೆಚ್ಚಿನ ವಿಷಯ, ನೀವೊಬ್ಬ ಸಿನಿಮಾ ನಿರ್ಮಾಪಕ ಕೂಡಾ, ನಿರ್ಮಾಪಕನಾಗಲು ಯಾವುದು ಕಾರಣವಾಯ್ತು?

ಅದೊಂದು ಕಾಕತಾಳೀಯವಷ್ಟೇ. ನಾನು ಅಂತಾರಾಷ್ಟ್ರೀಯ ನಿರ್ಮಾಪಕನೇನೂ ಅಲ್ಲ. ಯಾರಾದರೂ ಯೋಗ್ಯರು ಸಹಾಯ ಬಯಸಿದರೆ, ಅವರು ಹಿಡಿದಿರುವ ಸಿನಿಮಾದಲ್ಲಿ ನನಗೆ ಭರವಸೆ ಹುಟ್ಟಿದರೆ, ಸಹಾಯಮಾಡಲು ತೊಂದರೆಯಿಲ್ಲ.

ಸಿನಿಮಾ ಸಂಗೀತದ ಬಗ್ಗೆ ನಿಮ್ಮ ಅನಿಸಿಕೆ ಏನು?

ಒಳ್ಳೇ ಪ್ರಶ್ನೆ, ಸಿನಿಮಾ ಸಂಗೀತವೆಂಬುದು ಕೇಳುಗರ ಸಲುವಾಗಿ ತಯಾರಿಸುವಂಥದ್ದು. ಶ್ರೋತೃಗಳು/ವೀಕ್ಷಕರು ಮತ್ತು ನಿರ್ದೇಶಕರು ಏನನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ನಾನು ಅವಲಂಬಿಸುತ್ತೇನೆ. ಆದಾಗ್ಯೂ ಕಥೆಯ ಅವಲಂಬನೆ ಬಹಳವಾಗಿರುತ್ತದೆ. ಹೀಗಾಗಿ ಸಿನಿಮಾ ಸಂಗೀತದಲ್ಲಿ ಹೆಚ್ಚಿನ ನಮನೀಯತೆ-ಹೊಂದಾಣಿಕೆ ಸಾಧ್ಯವಾಗುವುದಿಲ್ಲ. 

  • ಕನ್ನಡದಲ್ಲಿ ಯಾವುದಾದರೂ ಸಿನಿಮಾ ನಿರ್ಮಾಣಮಾಡುವ ಸಾಧ್ಯತೆ ಇದೆಯೇ?

ಗೊತ್ತಿಲ್ಲ, ಉತ್ತಮವಾದ ಪ್ರಾಜೆಕ್ಟ್ ಕಂಡರೆ ಮಾಡಲೂಬಹುದು. ಹಾಗೊಮ್ಮೆ ಮಾಡಿದರೆ ಸಂಗೀತಕ್ಕೆ ಹೇಗೂ ನಾನೇ ಇರುತ್ತೇನೆ.

  • ಸಂಗೀತದಲ್ಲಿ ಯಾರಾದರೂ ಅಥವಾ ಯಾವುದಾದರೂ ಬ್ಯಾಂಡ್ ಅಥವಾ ಶೈಲಿ ನಿಮ್ಮನ್ನು ಹುರಿದುಂಬಿಸುತ್ತದೆಯೇ?

ಹೌದು, ನನಗೆ ಚಾವಡಿ ಸಂಗೀತ[ಲೌಂಜ್ ಮ್ಯೂಸಿಕ್] ಬಹಳ ಇಷ್ಟ, ಅಲ್ಲಿ ಜಗತ್ತಿನ ಎಲ್ಲಾವಿಧದ ಸಂಗೀತಗಾರರೂ ಉಪಕರಣಗಳೂ ಬಳಸಲ್ಪಡುತ್ತವೆ, ಉತ್ತಮ ಸಂಗೀತಗಾರ್ರಾದ ಪಂಡಿತ್ ಜಸ್ ರಾಜ್, ಪತೇ ಅಲಿ ಖಾನ್ ಮೊದಲಾದವರ ಕಚೇರಿಗಳನ್ನು ನಾನು ಇಷ್ಟಪಡುತ್ತೇನೆ. ನನಗೆ ಜಾಜ್ ಮ್ಯೂಸಿಕ್ ಕೂಡ ಇಷ್ಟ, ಅದನ್ನು ಭಾರತೀಯ ಸಿನಿಮಾಗಳಲ್ಲಿ ಇನ್ನೂ ಅಳವಡಿಸಿಲ್ಲ; ಕನ್ನಡ ಹಾಗಿರಲಿ, ಹಿಂದೀ ಸಿನಿಮಾರಂಗ ಕೂಡ ಅದನ್ನು ಪ್ರಯತ್ನಿಸಲಿಲ್ಲ.    

  • ನೀವು ಹಿಂದೀ ಅಥವಾ ಇತರ ಯಾವುದೇ ಭಾಷೆಯ ಹಾಡುಗಳನ್ನು ಕೇಳುತ್ತೀರೇ? ಹಿಂದೀ ಆಲ್ಬಂ ಗಳನ್ನು ಕೇಳುವಿರೇ?

ಹಾಂ ಹೌದು, ಮೊದಲೇ ಹೇಳಿದಂತೇ, ಕನ್ನಡ ಸಿನಿಮಾ ಹಾಡುಗಳನ್ನು ಕೇಳುವಂತೇ ಹಿಂದೀ ಹಾಡುಗಳನ್ನೂ ಕೇಳುತ್ತೇನೆ. ಹಿಂದೀ ಗೀತೆಗಳ ಡಿವಿಡಿಗಳನ್ನು ನನ್ನ ಹೆಂಡತಿ ಕೊಂಡು ತರುತ್ತಾಳೆ; ಮುಂಜಾನೆ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ನಾನು ಅವುಗಳನ್ನು ಆಲಿಸುತ್ತೇನೆ. ಕೆಲವು ಉತ್ತಮ ಸಂಗೀತ ನಿಯೋಜಿತವಾದ ಹಾಡುಗಳೂ ಇವೆ. ಹಿಂದೀ ನಿರ್ಮಾಪಕರು ತೆಗೆದುಕೊಳ್ಳುವ ಹೊಣೆಗಾರಿಕೆಯನ್ನು ಕನ್ನಡದ ನಿರ್ಮಾಪಕರು ತೆಗೆದುಕೊಳ್ಳಲು ತಯಾರಿಲ್ಲ. ಹೊಸತನದ ಅಳವಡಿಸುವಿಕೆಗೆ ಒಗ್ಗಿಕೊಳ್ಳಬಹುದಾದ ಶ್ರೋತೃಗಳು ಬಹಳ ಇದ್ದಾರೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೀ ಮತ್ತು ಇಂಗ್ಲೀಷಿನಲ್ಲಿ ಹಾಗಿಲ್ಲ; ಅಲ್ಲಿ ಹೊಸತನಕ್ಕೆ ಒತ್ತು ಸಿಗುತ್ತದೆ. ವಿಶಾಲವಾದ ಮಾರುಕಟ್ಟೆ ಇರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಅಲ್ಲಿನ ನಿರ್ಮಾಪಕರು ಹೆದರುವುದಿಲ್ಲ. ಅವರು ಪ್ರತಿಶತ ಒಬ್ಬರನ್ನೇ ತೃಪ್ತಗೊಳಿಸಿದರೂ ಅವರಿಗೆ ನಷ್ಟವಾಗುವುದಿಲ್ಲ.

  • ಪ್ರಸಕ್ತ ನೀವೇನು ಮಾಡುತ್ತಿದ್ದೀರಿ ?

ಕೆಲವು ಪ್ರಾಜೆಕ್ಟ್ ಗಳನ್ನು ನಡೆಸುತ್ತಿದ್ದೇನೆ, ಅವುಗಳ ಪೈಕಿ-ಹೊಸಬರು ಸೇರಿ ನಿರ್ಮಿಸುತ್ತಿರುವ ’ಅಲೆ’ ಸಿನಿಮಾಕ್ಕೆ ಸಂಗೀತ ಸಂಯೊಜನೆಯಲ್ಲಿ ತೊಡಗಿಕೊಂಡಿದ್ದೇನೆ. ಮತ್ತು ಪಬ್ಲಿಕ್ ಟಿವಿ ನಡೆಸುತ್ತಿರುವ ’ಫ್ರೆಶ್ ವೈಸ್ ಆಫ್ ಕರ್ನಾಟಕ’ ರಿಯಾಲಿಟಿ ಶೋ ನಲ್ಲಿ ಇನ್ನೊಬ್ಬ ಸಂಗೀತಗಾರ ಸಾಗರ್ ಅವರಜೊತೆ ತೀರ್ಪುಗಾರನಾಗಿ ಕುಳಿತು ನಡೆಸಿಕೊಡುತ್ತಿದ್ದೇನೆ.    

  • ನಿಮ್ಮಂಥವರಿಗೆ ಹಣವೇ ಮುಖ್ಯವಲ್ಲ ಆದರೆ ಸಂಗೀತವೆಂದರೆ ಪಂಚಪ್ರಾಣ ಮತ್ತು ಅದೇ ಮುಖ್ಯ. ನಿರ್ಮಾಪಕ/ನಿರ್ದೇಶಕರು ನಿಮ್ಮಂಥವರನ್ನು ಪ್ರೋತ್ಸಾಹಿಸುತ್ತಾರೆ ಎಂದುಕೊಂಡಿಲ್ಲವೇ? ಒಂದೊಮ್ಮೆ ಹೊಸಹೊಸ ನಿರ್ಮಾಪಕ, ನಿರ್ದೇಶಕರು ನಿಮ್ಮನ್ನು ಕರೆದರೆ ನೀವು ಕೈಜೋಡಿಸಬಹುದೇ?

ಮಾಡಬೇಕು ಎಂದುಕೊಂಡಿದ್ದೇನೆ. ಅಂತಹ ನಿರ್ಮಾಪಕ/ನಿರ್ದೇಶಕರು ಕನ್ನಡದಲ್ಲಿ ಇರಬಹುದು. ಈಗೀಗ ಉತ್ತಮ  ನಿರ್ಮಾಪಕ/ನಿರ್ದೇಶಕರು ರಂಗಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲಿನವರೆಗೆ ನಾನು ಹೊಸಬರ ಜೊತೆ ಕೆಲಸ ಮಾಡಿರಲಿಲ್ಲ. ನಾನು ಕವಿತಾ, ನಾಗತಿಹಳ್ಳಿ ಮತ್ತು ಈಗ ನಾಗೇಂದ್ರ ಅವರ ಜೊತೆ ಕೆಲಸಮಾಡಿದ್ದೇನೆ; ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ.

  • ಕನ್ನಡ ಚಿತ್ರರಂಗದ ಅಭಿವೃದ್ಧಿಯ ಬಗ್ಗೆ ನಿಮ್ಮ ಸಲಹೆಗಳೇನಾದರೂ ಸಿಗಬಹುದೇ?

ನನ್ನ ಅನಿಸಿಕೆಯನ್ನು ಹೇಳುವುದಾದರೆ, ನಾವು ಗುಣಮಟ್ಟದ ಚಿತ್ರಗಳನ್ನು ಮಾತ್ರ ನಿರ್ಮಿಸುವತ್ತ ಮುಂದಾಗಬೇಕು. ಕಥೆಯಿಂದ ಹಿಡಿದು ತಾಂತ್ರಿಕತೆಯವರೆಗೆ ಪ್ರತೀ ಹಂತದಲ್ಲೂ ಕಠಿಣಶ್ರಮ ವಹಿಸಿ ಸಾಧಿಸಬೇಕು. ಕಥೆಯೊಂದನ್ನು ತೆಗೆದುಕೊಂಡರೆ, ಕಥೆ ಉತ್ತಮವೇ ಆಗಿದ್ದರೂ ಸಿನಿಮಾ ಮಾಡುವಾಗ ಚೆನ್ನಾಗಿಯೂ ಮಾಡಬಹುದು, ಕಳಪೆಯಾಗಿಯೂ ಮಾಡಬಹುದು. ಚಿತ್ರಮಂದಿರಗಳು ಉತ್ತಮವಾಗಿಲ್ಲ ಎಂಬುದು ಜನಾಭಿಪ್ರಾಯ. ಅದಕ್ಕಾಗಿಯೂ ಹೆಚ್ಚಿನಮಂದಿ ಚಿತ್ರಮಂದಿರಗಳಿಗೆ ಹೋಗುವುದೇ ಇಲ್ಲ. ನಾನು ಕಪಾಲಿ ಮತ್ತಿತರ ಚಿತ್ರಮಂದಿರಗಳಲ್ಲಿ ಕೆಲವು ಸಿನಿಮಾಗಳನ್ನು ನೋಡಿದ್ದೇನೆ; ಅವುಗಳಲ್ಲಿನ ವ್ಯವಸ್ಥೆ ಇಂದಿನ ತಾಂತ್ರಿಕತೆಯ ಮುನ್ನಡೆಯಲ್ಲೂ ಹಾಗೆ ಹಿಂದೆಬಿದ್ದಿರುವುದು ಬೇಸರ ತರಿಸಿದೆ. ಚಿತ್ರ ನಿರ್ಮಾಣಮಾಡಿದಷ್ಟೇ ಚಿತ್ರವನ್ನು ಜನರಿಗೆ ತಲ್ಪಿಸುವುದೂ ಉತ್ತಮವಾಗಿ ನಡೆಯಬೇಕು. ಗೊತ್ತು, ಇದಕ್ಕೆಲ್ಲಾ ಹಣಬೇಕು, ಆದರೆ ಒಮ್ಮೆ ಇವುಗಳನ್ನೆಲ್ಲಾ ಉತ್ತರಿಸಿದರೆ ಜನ ಹಣತೆತ್ತು ನೋಡಲು ಮುಂದೆಬರುತ್ತಾರೆ. ಅದಿಲ್ಲದಿದ್ದರೆ ನಮ್ಮಲ್ಲಿನ ಸಿನಿಮಾಗಳನ್ನು ಉಳಿದ ಭಾಷೆಗಳ ಸಿನಿಮಾಗಳಿಗೆ ಹೋಲಿಸಿ ತುಲನೆಮಾಡುವುದರಲ್ಲಿ ಜನ ಕಾಲಕಳೆಯುತ್ತಾರೆಯೇ ವಿನಹ ಚಿತ್ರಮಂದಿರಗಳಿಗೆ ಬರುವುದಿಲ್ಲ.

  • ನಿಮ್ಮ ಮುಂದಿನ ಯೋಜನೆಗಳೇನು ?

ನಡೆಸುತ್ತಿರುವುದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಧನಾತ್ಮಕವಾದ ಅಂಶಗಳ ಅಳವಡಿಕೆಗೆ ಸತತವಾಗಿ ಶ್ರಮಿಸುತ್ತೇನೆ, ಸಂಗೀತ ಕ್ಷೇತ್ರದಲ್ಲಿ ಕಠಿಣಶ್ರಮವಹಿಸಿ ತೊಡಗಿಕೊಳ್ಳುತ್ತಾ ನನ್ನನ್ನೇ ನಾನು ಉತ್ತಮವಾದುದನ್ನು ತಿದ್ದಿಕೊಳ್ಳುತ್ತಿರುತ್ತೇನೆ.  


Saturday, March 23, 2013

ಬರೆಯುವ ಮನಕ್ಕೆ ನೂರೆಂಟು ಕನಸುಗಳು

ಚಿತ್ರಗಳ ಕೃಪೆ : ಅಂತರ್ಜಾಲ 
 ಬರೆಯುವ ಮನಕ್ಕೆ ನೂರೆಂಟು ಕನಸುಗಳು

ವಾರದ ಆರಂಭದಲ್ಲಿ ನಿಮಗೆ ತಿಳಿಸಿದ್ದೆ. ಇಬ್ಬರು ವ್ಯಕ್ತಿಗಳ ಬಗ್ಗೆ ಬರೆಯುತ್ತೇನೆ ಎಂದು. ಆ ಇಬ್ಬರಿಗಿಂತಾ ಮೊದಲು ಒಬ್ಬರನ್ನು ನೆನೆದುಕೊಳ್ಳುತ್ತೇನೆ. ಅವರೇ ಶೃಂಗೇರಿ-ಶಿವಗಂಗಾ ಪೀಠದ ೧೮ನೆಯ ಗುರುಗಳಾಗಿದ್ದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು. ತೋರಿಸಿಕೊಳ್ಳುವುದಕ್ಕೆ ಬಯಸದ, ಯಾವುದೇ ಆಡಂಬರವನ್ನೂ ರೂಢಿಸಿಕೊಳ್ಳದ ಕೆಲವೇ ಸನ್ಯಾಸಿಗಳಲ್ಲಿ ಅವರೂ ಒಬ್ಬರು. ಬೆಂಗಳೂರಿನಲ್ಲೇ ಹುಟ್ಟಿ, ಇಲ್ಲಿಯೇ ಆಡಿ-ಓದಿ ಬೆಳೆದು, ಸಂಸಾರದ ಬದುಕನ್ನು ಮರೆತ ಸೀತಾರಾಮ ಶರ್ಮ, ಸಂನ್ಯಾಸದೀಕ್ಷೆಯನ್ನು ಪಡೆದು ಶಿವಗಂಗೆಯ ಪೀಠಾಧಿಪತಿಯಾಗಿ, ಸಾತ್ವಿಕ ತಪಸ್ಸಿನ ಮೂಲಕ, ನಿರಾಡಂಬರದ ಸಂನ್ಯಾಸ ಜೀವನದ ಮೂಲಕ ಹಲ್ವು ಸಂನ್ಯಾಸಿಗಳಿಗೆ ಮಾದರಿಯೆನಿಸಿದ್ದಾರೆ.

ವೈಚಾರಿಕತೆಯ ಹಿನ್ನೆಲೆಯಲ್ಲಿ, ಇಂದು ಮಠಾಧಿಪತಿಗಳಲ್ಲಿ ಹಲವು ವೈರುಧ್ಯಗಳನ್ನೂ ವೈಮನಸ್ಯಗಳನ್ನೂ ಕಾಣುತ್ತೇವೆ; ಸರ್ವಸಂಗ ಪರಿತ್ಯಾಗಿಗಳಿಗೇ ಸರ್ವರ ಸಂಗವೂ ಬೇಕಾಗುವುದೂ, ರಾಜಕೀಯದ ನಂಟು ಬೆಳೆಯುವುದೂ ಕಾಣುತ್ತದೆ ಮಾತ್ರವಲ್ಲ, ತಾನೇ ಮೇಲು ತಾನೇ ಮೇಲು ಎಂಬ ಮೇಲಾಟದ ಅಟಾಟೋಪದ ತೆವಲು ಕುದುರಿಕೊಂಡು, ಮಠ-ಮಠಗಳ ನಡುವೆಯೇ ದ್ವೇಷಾಸೂಯೆಗಳು ಬೆಳೆದುಬಿಡುತ್ತವೆ. ನಾನು ಹಲವು ಬಾರಿ ಯೋಚಿಸಿದ್ದೇನೆ: ಶ್ರೀ ಆದಿಶಂಕರರು ಯಾಕೆ ಮಠಗಳನ್ನು ಸ್ಥಾಪಿಸಿದರು? ಸಂನ್ಯಾಸಿಗಳಿಗೆ ಮಠವೆಂಬ ಐಹಿಕಸಂಸ್ಥೆಯ ವ್ಯವಸ್ಥೆಯ ಅಗತ್ಯತೆ ಇತ್ತೇ? -ಎಂದು. ಶಂಕರರ ಕಾಲಕ್ಕೂ ಮುನ್ನ ಮಠಗಳ ಪರಿಕಲ್ಪನೆ ಇದ್ದಿರಲಿಲ್ಲ. ಸ್ವತಃ ಶ್ರೀಶಂಕರರೂ ಒಂದೇ ಮಠಕ್ಕೆ, ಒಂದೇ ಪ್ರದೇಶಕ್ಕೆ, ಒಂದೇ ವರ್ಗಕ್ಕೆ ಆತುಕೊಂಡು ಕೂತುಕೊಂಡಿರಲಿಲ್ಲ; ಶಂಕರರ ಜೀವನದ ಉತ್ಕರ್ಷದ ದಿನಗಳಲ್ಲಿ ಅವರು ದೇಶವನ್ನು ಕಾಲ್ನಡಿಗೆಯಿಂದಲೇ ಸುತ್ತಿದರು; ಆಹಾರಕ್ಕಾಗಿ ಮನೆಗಳ ಮುಂದೆ ಮಧುಕರಿ ನಡೆಸಿದರು! ಶಂಕರರ ಬದುಕು ’ಕರತಲ ಭಿಕ್ಷ ತರುತಲ ವಾಸ’ ಎಂಬಷ್ಟು ಸಂನ್ಯಾಸ ಜೀವನ ಸಹಜವಾದದ್ದಾಗಿತ್ತು. ಯೋಗಸಂನ್ಯಾಸಿಯೊಬ್ಬ ನಡೆಸಬೇಕಾದ ಜೀವನ ವಿಧಾನವನ್ನು ಅವರು ನಡೆಸಿದರೂ, ಲೋಕಹಿತವನ್ನು ಬಯಸಿ, ಅಳಿದುಹೋಗುತ್ತಿದ್ದ ಸನಾತನ ಧರ್ಮದ ಪುನರುಜ್ಜೀವನ ಬಯಸಿ ತನ್ನನ್ನು ಆ ಕೆಲಸದಲ್ಲಿ ತೊಡಗಿಸಿಕೊಂಡವರು. ಅವರ ಜೀವನಕಥೆಯ ಆಳಕ್ಕೆ ಇಳಿದಾಗ ಹಲವು ಸರ್ತಿ ನಮಗೆ ಕಣ್ಣೀರು ತಂತಾನೇ ಹರಿದರೆ ಅದಕ್ಕೆ ಕಾರಣವಿಷ್ಟೇ: ಶಂಕರರು ಎಂದೂ ಆಡಂಬರದ ಜೀವನ ನಡೆಸಲೇ ಇಲ್ಲ!! ಸರ್ವರ ಜೊತೆಗಿದ್ದೂ ಸರ್ವಸಂಗವನ್ನು ಪರಿತ್ಯಜಿಸಿದ ನಿಜವಾದ ಸಂನ್ಯಾಸಿ ಅವರಾಗಿದ್ದರು; ಇಂದು ಆ ಉದ್ದೇಶ ಕಾಣುವುದು ಅಪರೂಪ. ಶಂಕರರ ಹೆಸರಿನಲ್ಲಿ ಮಠಗಳು ನಡೆಯುತ್ತವೆ ಎಂದಾಗ ಶಂಕರರ ದಿವ್ಯ ಶಕೆಯ ಅನುಭವ ನಮಗಾಗುತ್ತದೆ. ಜೀವನಧರ್ಮವನ್ನು ಬೋಧಿಸುವ ಧರ್ಮಾಚಾರ್ಯರುಗಳಿಗೆ, ಅದಕ್ಕೆ ಸಂಬಂಧಿಸಿದ ಪರಿಕರಗಳನ್ನೆಲ್ಲಾ ಇಟ್ಟುಕೊಂಡು ಅದನ್ನು ಕಾಪಾಡಿಲಿಕ್ಕೆ ಮತ್ತು ಆಚರಿಸಲಿಕ್ಕೆ ಎಂಬರ್ಥದಲ್ಲಿ ಮಠಗಳನ್ನು ಶಂಕರರು ಸ್ಥಾಪಿಸಿದರು.

ಶಂಕರರ ನಂತರ ಬಂದ ಶಾಂಕರ ಪೀಠಗಳವರಿಗೂ ಮತ್ತು ಕವಲೊಡೆದು ತಮ್ಮದೇ ಸರಿಯೆನಿಸಿಕೊಂಡ ಮಿಕ್ಕೆರಡು ಪಂಥಗಳ ಮಠಾಧಿಪತಿಗಳಿಗೂ ಅಲ್ಲದೇ ಇನ್ನುಳಿದ ಪಂಥಗಳ ಮಠಾಧಿಪತಿಗಳಿಗೂ ತಿರುಗಾಡಲು ಮೂರ್ನಾಲ್ಕು ಐಶಾರಾಮೀ ಕಾರುಗಳು ಬೇಕು, ಸ್ವಾಮಿಗಳು ಸೆಲ್ಲಿನಲ್ಲಿ ಮಾತನಾಡುವ ತನ್ನ ಆಪ್ತವಲಯದ ಅಗತ್ಯತೆಗೆಂದು ಸೆಲ್ ಫೋನು ಇರಿಸಿಕೊಳ್ಳುತ್ತಾರೆ, ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳಲ್ಲಿ ಲೀಲಾಜಾಲವಾಗಿ ವ್ಯವಹರಿಸುತ್ತಾರೆ, ಮಾಧ್ಯಮಗಳಲ್ಲಿ ವಿಜೃಂಭಿಸುತ್ತಾರೆ. ಮಠಗಳ ಕಟ್ಟಡಗಳು ಬಲುಸೊಗಸು-ಶ್ರೀಮಂತರ ಬಂಗಲೆಗಳಿಗಿಂತಾ ಚೆನ್ನಾಗಿ ಕಾಣಿಸುತ್ತವೆ. ಮಠ-ಮಾನ್ಯಗಳಲ್ಲಿ ಕಾರುಗಳಲ್ಲಿ ಏಸಿಸೌಲಭ್ಯ ಬೇಕಾಗುತ್ತದೆ! ಸುತ್ತಲೂ ಮೆಹರ್ಬಾನು ಮಾಡುವ ಕೆಟ್ಟ ಯುವಕರು ಜಗತ್ತಿನ ಎಲ್ಲಾ ಚಟಗಳನ್ನೂ ಅಂಟಿಸಿಕೊಂಡು ದುಡ್ಡುಮಾಡಿಕೊಳ್ಳುವ ಅಡ್ಡೆಯಾಗಿ ಮಠಗಳನ್ನು ಅವಲಂಬಿಸಿಕೊಳ್ಳುತ್ತಾರೆ; ಆಳರಸರ ಸುತ್ತ ಇರುವ ಆಪ್ತ ಕಾರ್ಯದರ್ಶಿಗಳನ್ನಾದರೂ ಮಾತನಾಡಿಸಬಹುದು, ಆದರೆ ಮಠಗಳ ಸ್ವಾಮಿಗಳ ಸುತ್ತ ಇರುವ ಹತ್ತಿರದ ಸೇವಕರನ್ನು ಮಾತನಾಡಿಸಲು ಆಗುವುದೇ ಇಲ್ಲ!!

ಸ್ವಾಮಿಗಳಿಗಿಂತಾ ತಾವೇ ತೂಕ ಜಾಸ್ತಿ ಎನ್ನುವ ರೀತಿಯಲ್ಲಿ ಕೈಗೆ ಬಂಗಾರದ ಕಡಗ, ಕೊರಳಿಗೆ ಬಂಗಾರದ ಜಹಾಂಗೀರ್ ಸರ ಇತ್ಯಾದಿಗಳನ್ನು ತೊಟ್ಟಿಕೊಳ್ಳುವ ಈ ಜನರ ಕೈಗಳಲ್ಲಿ ತುಂಬಾ ದುಬಾರಿಯ ತರಾವರಿ ಮೊಬೈಲುಗಳು ಸದಾ ನಲಿಯುತ್ತವೆ. ಹತ್ತಿರ ಹೋದರೆ ಗುಟ್ಕಾ ವಾಸನೆ ಧುತ್ತೆಂದು ಮೂಗಿಗೆ ಬಡಿಯುತ್ತದೆ. ಅವರೋ ಅವರ ದಿರಿಸುಗಳೋ ಅವರ ನಡಾವಳಿ ವೈಖರಿಗಳೋ ಇಂಥವುಗಳನ್ನೆಲ್ಲಾ ಅವಲೋಕಿಸಿದರೆ ಸ್ವಾಮಿಗಳು ಇಂಥವರನ್ನೆಲ್ಲಾ ಯಾಕೆ ಹತ್ತಿರ ಇರಿಸಿಕೊಳ್ಳಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ’ಅಲ್ಪನಿಗೆ ಐಶ್ವರ್ಯ ಬಂದಾಗ ತಿಂಗಳು ಬೆಳಕಿನಲ್ಲೂ ಕೊಡೆಹಿಡಿದನಂತೆ’ ಎನ್ನುವ ರೀತಿ, ಉಂಡಾಡಿಯಾಗಿ ತಿರುಬೋಕಿಗಳಾಗಿ ಊರಕಡೆಗೆ ತಿರುಗಿಕೊಂಡಿದ್ದ ಕೆಲಸಕ್ಕೆ ಬಾರದ ಜನ, ಇಂದು ಮಠ-ಮಾನ್ಯಗಳಲ್ಲಿ ಗುರುಸೇವಕರಾಗಿ ಗುರುದರ್ಶನ ಮಾಡಿಸುವ ಅಡ್ನಾಡಿ ಬಸವಗಳಾಗಿ ತಯಾರಾಗಿದ್ದಾರೆ. ಸ್ವಾಮಿಗಳನ್ನು ಕಾಣಬೇಕೆಂದರೆ ಈ ಬಸವಪ್ಪಗಳಿಗೆ ಸಲಾಮು ಹೊಡೆಯೆಬೇಕು, ಅವರ ಮರ್ಜಿಗೆ ಕಾಯಬೇಕು. ಇಂಥಾ ಗುರುಸೇವಕರಲ್ಲಿ ಕೆಲವರಿಗೆ ತಮ್ಮದೇ ಆದ ಅದ್ಯತೆಗಳಿರುತ್ತವೆ; ಮಿಕ್ಕವರಿಗೆ ಗುರುದರ್ಶನ ದುರ್ಲಭವಾಗುತ್ತದೆ. ಹೊರಗೆ ನಡೆಯುವ ಲೌಕಿಕವಾದ ವ್ಯವಹಾರಗಳು ಒಳಗೆ ಕೂತುಕೊಳ್ಳುವ ಸ್ವಾಮಿಗಳ ಲಕ್ಷ್ಯಕ್ಕೆ ಬರುವುದಿಲ್ಲ; ಬಂದರೂ ಅವರೇನೂ ಮಾಡಲಾಗದಂತೇ ನೋಡಿಕೊಳ್ಳುವ ವರೆಗೂ ಈ ಲಜ್ಜೆಗೆಟ್ಟವರು ನಡೆದುಕೊಳ್ಳುತ್ತಾರೆ. ನಾನು ಅನೇಕಬಾರಿ ವಿವಿಧ ಮಠಗಳಿಗೆ ಹೋದಾಗ ಇಂಥಾ ಕಹಿ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಸಮಾಜದಲ್ಲಿ ಬಡವ ಎಂಬ ವ್ಯಕ್ತಿಗೆ ಸಂನ್ಯಾಸಿಗಳ ಪಾದಪೂಜೆ ಮಾಡಬೇಕೆಂಬ ಹಂಬಲ ನಿರಂತರವಾಗಿದ್ದರೆ ಅದು ಕನಸಾಗಿಯೇ ಉಳಿದುಹೋಗುತ್ತದೆ. ಆಗ ನಮ್ಮಂತಹ ಅನೇಕರಿಗೆ ಶ್ರೀಧರ ಸ್ವಾಮಿಗಳಂತಹ ಭಗವಾನರು ನೆನಪಾಗುತ್ತಾರೆ.

ಶ್ರೀಧರ ಸ್ವಾಮಿಗಳು ಬಡವನೊಬ್ಬ ಕರೆದಾಗ " ಆಯ್ತು ಬರುತ್ತೇನೆ, ಪಾದಧೂಳಿ ಬೀಳಬೇಕೆಂದು ಹೇಳಿದೆಯಲ್ಲಪ್ಪಾ ಮನೆಯಲ್ಲಿ ಧೂಳನ್ನು ಹಾಕಿಬಿಡು, ನಾನು ಬಂದು ಅಲ್ಲಿ ನಡೆದುಕೊಂಡು ಹೋಗುತ್ತೇನೆ" ಎಂದು ತಮಾಷೆಗಾಗಿ ಹೇಳಿದ್ದರೂ ಭಾವುಕಭಕ್ತನೊಬ್ಬ ಹಾಗೇ ನಡೆದುಕೊಂಡ. "ಸ್ವಾಮೀ, ಮನೆಯ ಎಲ್ಲೆಡೆಗೂ ಧೂಳು ಬೀರಿದ್ದೇನೆ ತಾವು ದಯಮಾಡಿಸಬೇಕು" ಎನ್ನುತ್ತಾ ಮರಳಿಬಂದ. ದಯಾರ್ದೃ ಹೃದಯರೂ ಮಹಾನ್ ತಪೋಧನರೂ ಆದ ಭಗವಾನ್ ಶ್ರೀಧರರು ತಾವು ಹೇಳಿದಂತೇ ಆ ಮನೆಗೆ ನಡೆದೇ ಬಿಟ್ಟರು. ಶ್ರೀಧರರು ಆ ಮನೆಯ ಎಲ್ಲಾ ಭಾಗಗಳಲ್ಲೂ ಓಡಾಡಿದರು, ಗುರುಗಳ ಹೆಜ್ಜೆಗುರುತುಗಳು ಮೂಡಿದವು. ಬಡವ ಅಲ್ಲೇ ಗುರುಗಳ ಪಾದಪೂಜೆ ನಡೆಸಿ ಕೇವಲ ತುಳಸೀದಳಗಳನ್ನು ಅರ್ಪಿಸಿದ. ಹೊರಟುನಿಂತ ಶ್ರೀಧರರು " ಮಗನೇ ಈಗಲಾದರೂ ನಿನಗೆ ಸಮಾಧಾನವಾಯಿತೇ?" ಎಂದು ಕೇಳಿದರು. ಬಡವನ ಕಣ್ಣಿಂದ ಆನಂದಬಾಷ್ಪ ಹರಿಯಿತು. ಶ್ರೀಧರರು ಹೊರಟ ಪಶ್ಚಾತ್, ಆತ ಅವರನ್ನು ಬೀಳ್ಕೊಟ್ಟು, ಹೆಂಡತಿ-ಮಕ್ಕಳೊಡನೆ ಮನೆಯನ್ನು ಮರಳಿ ಪ್ರವೇಶಿದರೆ, ಗುರುಗಳು ಹೆಜ್ಜೆಯಿಟ್ಟಲ್ಲೆಲ್ಲಾ ಬಂಗಾರದ ನಾಣ್ಯಗಳು ಕಂಡವು !! ಇದು ಶ್ರೀಧರರಂತಹ ಅವತಾರಿಗಳಿಗೆ ಮಾತ್ರ ಸಾಧ್ಯ. ಶಂಕರರಿಗೂ ಶ್ರೀಧರರಿಗೂ ಒಂದು ಸಾಮ್ಯವಿದೆ:  ಅದೆಂದರೆ ಶಂಕರರು ಹೋದೆಡೆಗೆಲ್ಲಾ ಶ್ರೀಧರರೂ ತಿರುಗಾಡಿದ್ದಾರೆ. ಶಂಕರರ ನಂತರ ಭಾರತವನ್ನು ಜನಸಾಮಾನ್ಯನಂತೇ ಸುತ್ತಿದ ಏಕೈಕ ಸಂನ್ಯಾಸಿಯೆಂದರೆ ಅವರು ಭಗವಾನ್ ಶ್ರೀಧರರು ಮಾತ್ರ! ಯೋಗಿಯಾಗಿ ಜನಿಸಿ, ಮಠಗಳ ಅಧಿಕಾರವನ್ನು ಪರಿತ್ಯಜಿಸಿ, ತನ್ನ ತಪಸ್ಸಿನ ಶಕ್ತಿಯನ್ನು ಸಾವಿರ ಸಾವಿರ ಸಂಖ್ಯೆಯ ಭಕ್ತರಿಗೆ, ಆರ್ತರಿಗೆ ಹಂಚಿದ ಮಹಾನುಭಾವರುಗಳಲ್ಲಿ ಶ್ರೀಧರರು ಅಗ್ರಗಣ್ಯರು. ಶ್ರೀಧರರು ತಾವು ಕಾಡಿನಲ್ಲಿ ತಪಸ್ಸು ನಡೆಸುವಾಗ, ಕಾಣಲೆಂದು ದೂರದಿಂದ ಬರುವ ಭಕ್ತರಿಗಾಗಿ ಆಶ್ರಮ ನಿರ್ಮಿಸುವುದಕ್ಕೆ ಒಪ್ಪಿಕೊಂಡರೇ ಹೊರತು ಅವರು ಒಂದೆಡೆಗೇ ನಿಂತುಕೊಳ್ಳುವವರಾಗಿರಲಿಲ್ಲ. ಶ್ರೀಧರರ ಪರಮಹಂಸ ಪರಿವ್ರಾಜಕಾಚಾರ್ಯತೆಯ ಪರಮೋಚ್ಚ ಸ್ಥಿತಿಯನ್ನು ಗುರುತಿಸಿದ ಶೃಂಗೇರಿಯ ಅಂದಿನ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥರು, ಶ್ರೀಧರರನ್ನು ಕಾಣಲು ಸ್ವತಃ ತಾವೇ ವರದಹಳ್ಳಿಗೆ ಧಾವಿಸಿದ್ದರು!

ಸಂನ್ಯಾಸಿಗಳು ರಾಜಸಂನ್ಯಾಸಿಗಳೇ ಆಗಿದ್ದರೂ, ಮಠಾಧಿಪತಿಗಳೇ ಆಗಿದ್ದರೂ, ಅವರ ಹೆಚ್ಚಿನ ಸಮಯ ತಪಸ್ಸಿನಲ್ಲಿ ವಿನಿಯೋಗವಾಗಬೇಕು. ನಾವಿಕನೊಬ್ಬ ನಡೆಸುವ ನಾವೆಯಲ್ಲಿ ಕುಳಿತುಕೊಳ್ಳುವ ಪಯಣಿಗರ ಜವಾಬ್ದಾರಿ ನಾವಿಕನ ಮೇಲೆ ಹೇಗಿರುತ್ತದೋ, ಚಾಲಕನೊಬ್ಬ ನಡೆಸುವ ಬಸ್ಸಿನಲ್ಲಿ ಕುಳಿತ ಪ್ರಯಾಣಿಕರ ಜವಾಬ್ದಾರಿ ಹೇಗೆ ಚಾಲಕನ ಮೇಲಿರುತ್ತದೋ, ಹಾಗೆಯೇ ಮಠಗಳನ್ನು ನಂಬಿದ ಶಿಷ್ಯ ಗಡಣಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ, ಗಮ್ಯವನ್ನು ಬೋಧಿಸುವ ನೈತಿಕ ಜವಾಬ್ದಾರಿ ಸಂನ್ಯಾಸಿಗಳಿಗೆ ಇರುತ್ತದೆ. ಹಲವರನ್ನು ಉದ್ಧರಿಸುವ ಜವಾಬ್ದಾರಿಯನ್ನು ಹೊತ್ತ ಗುರುವಿಗೆ ಹೆಚ್ಚಿನ ತಪಸ್ಸಿನ ತೇಜಸ್ಸು ಮತ್ತು ಆ ಸಾತ್ವಿಕ ಬ್ರಹ್ಮಫಲ ಬೇಕಾಗುತ್ತದೆ. ತಪಸ್ಸನ್ನು ಕಮ್ಮಿಮಾಡಿ ಲೌಕಿಕ ವ್ಯವಹಾರಗಳಲ್ಲಿ ಹೆಚ್ಚಿಗೆ ತೊಡಗಿಕೊಂಡರೆ, ಸಂನ್ಯಾಸಿಗಳ ಮೂಲ ಬಂಡವಾಳ ಕಮ್ಮಿಯಾಗಿಹೋಗುತ್ತದೆ!ಸಂನ್ಯಾಸಿಗಳು ಎಲ್ಲಾ ಸೌಕರ್ಯಗಳಿದ್ದೂ ಯಾವುದನ್ನೂ ಆತುಕೊಂಡಿರದ ಪರಿತ್ಯಜ್ಯ ಸ್ಥಿತಿಯಲ್ಲಿರಬೇಕು; ಸುತ್ತಲ ಹತ್ತು ಹತ್ತಿರದ ಕಳ್ಳ ಸೇವಕರನ್ನು ತನ್ನ ತಪಃಶ್ಶಕ್ತಿಯಿಂದಲೇ ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಮಠಗಳಲ್ಲಿ ಗುರುಕಾರುಣ್ಯ ಬಯಸಿ ಬರುವ ಬಡವರಿಗೂ ಅದು ಸಲೀಸಾಗಿ ದೊರೆಯುವ ಸೌಲಭ್ಯ ಉಂಟಾಗಬೇಕು. ಯಾರೇ ಆರ್ತ ದನಿಯಿಂದ ಕರೆದರೂ ಅದನ್ನು ಆಲೈಸುವ ಸ್ಥಿತಿ ಗುರುವಿನದ್ದಾಗಿರಬೇಕು. ಇಂಥವರು ಇಂದು ನಮಗೆ ಬೆರಳೆಣಿಕೆಯಷ್ಟು ಸಿಗುತ್ತಾರೆ.

ಇಂತಹ ಸಾತ್ವಿಕ ಶ್ರೇಷ್ಠ ಸಂನ್ಯಾಸಿಗಳಲ್ಲಿ ಒಬ್ಬರು ಬ್ರಹ್ಮೀಭೂತ ಶ್ರೀ ಶ್ರೀ ಸಚ್ಚಿದಾನಂದ ಭಾರತಿಗಳು. ಮಠಕ್ಕೆ ರಾಜರಕಾಲದಲ್ಲಿ ಮೈಸೂರು ರಾಜರುಗಳ ಆಶ್ರಯವಿತ್ತು. ರಾಜಾಶ್ರಯ ತಪ್ಪಿದ ಮೇಲೆ ಮಠಕ್ಕೆ ಹೇಳಿಕೊಳ್ಳುವ ಯಾವುದೇ ಆದಾಯವಿರಲಿಲ್ಲ. ಬಂದುಹೋಗುವ ಭಕ್ತರಲ್ಲಿ ಬಡವರೇ ಅಧಿಕವಾದುದರಿಂದ ಶಿವಗಂಗೆ ಮಠ ಬಡಮಠವಾಗಿಯೇ ಇದ್ದರೂ ತಪಶ್ಚರ್ಯೆಯಲ್ಲಿ ತನ್ನನ್ನು ದೊಡ್ಡಮಠವನ್ನಾಗಿ ಗುರುತಿಸಿಕೊಂಡಿತು. ನನಗೆ ಗೊತ್ತಿರುವ ಬೆಂಗಳೂರಿನ ಭಕ್ತರೊಬ್ಬರ ಮಗುವಿಗೆ ಚಿಕ್ಕಂದಿನಲ್ಲಿ ಮಾತು ಬರುತ್ತಿರಲಿಲ್ಲ. ಅದಾಗಲೇ ೫-೬ ವಯಸ್ಸು ಕಳೆದಿತ್ತು. ಶೃಂಗೇರಿ-ಶಿವಗಂಗೆಯ ಗುರುಗಳಲ್ಲಿ ಅದನ್ನು ಪ್ರಸ್ತಾಪಿಸಿದರು. ಇದೇ ಶ್ರೀ ಸಚ್ಚಿದಾನಂದ ಭಾರತಿಗಳು ತಮ್ಮ ಮುಕ್ತಹಸ್ತದಿಂದ ಅಶೀರ್ವದಿಸಿದರು. ಮಗುವಿಗೆ ಕೆಲವೇ ದಿನಗಳಲ್ಲಿ ತೊದಲುನುಡಿ ಬಂತು, ನಂತರ ನಿಧಾನವಾಗಿ ಮಾತು ಬಂತು; ಇಂದು ಆ ಮಗು ಒಬ್ಬ ಉದ್ಯಮಿಯಾಗಿ ಬೆಳೆದು ಮುನ್ನಡೆಯುತ್ತಿದೆ! ಶಿವಗಂಗೆಯ ಗುರುಗಳಲ್ಲಿ ಬಂದ ಧನಿಕರೊಬ್ಬರು ಮಠದ ಬಣ್ಣಮಾಸಿದ ಗೋಡೆಗಳಿಗೆ ಹೊಸಬಣ್ಣ ಬಳಿಸಿ, ಹೊಸದಾಗಿ ಕೆಲವು ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿಯೂ ಅದಕ್ಕಾಗಿ ಯಾರೂ ಬಿಡಿಗಾಸನ್ನೂ ಕೊಡುವುದು ಬೇಕಾಗಿಲ್ಲ-ತನ್ನದೇ ಎಲ್ಲವೆಂದೂ ಹೇಳಿದ್ದರಂತೆ. ಆ ಧನಿಕ ಭಕ್ತನ ಆದಾಯದ ಮೂಲವನ್ನು ಗುರುಗಳು ಕೇಳಿದರು. ಅದನ್ನು ಮಾತ್ರ ಕೇಳಬಾರದೆಂದು ಆತ ಹೇಳಿಕೊಂಡನಂತೆ. ಆ ನಂತರ ಆ ಧನಿಕನ ಹಣದಿಂದ ಯಾವುದೇ ಕಾರ್ಯಗಳು ಶಿವಗಂಗೆ ಮಠದಲ್ಲಿ ನಡೆಯದಂತೇ ನೋಡಿಕೊಂಡವರು ಶ್ರೀ ಸಚ್ಚಿದಾನಂದ ಭಾರತಿಗಳು. ಸಂನ್ಯಾಸಿಗಳಿಗೆ ಯಾರಾದರೂ ದೊಡ್ಡಮಟ್ಟದ ಕಾಣಿಕೆ ಅರ್ಪಿಸಿದರೆ, ಸ್ವೀಕರಿಸುವ ಮೊದಲು ಅದರ ಮೂಲವನ್ನು ಸಂಶೋಧಿಸಬೇಕು; ಒಂದೊಮ್ಮೆ ಹಾಗೆ ಮಾಡದೇ ಯಾವುದೋ ಪಾಪಾರ್ಜಿತ ಹಣ ಮಠಕ್ಕೆ ಬಂದರೆ ಅಂತಹ ಪಾಪಿಗಳ ಪಾಪವನ್ನು ಹೊತ್ತುಕೊಳ್ಳುವ ಜವಾಬ್ದಾರಿ ಮಠದ್ದಾಗಿರುತ್ತದೆ. ಹಣವನ್ನೇ ನಂಬಿದ ಹಲವರು ಈ ದೇಶದಲ್ಲಿ ಕುಲಗೆಟ್ಟುಹೋಗಿದ್ದಾರೆ! ಹಣ ದೊರೆಯುತ್ತದೆ ಎಂದಮಾತ್ರಕ್ಕೆ ತಮ್ಮ ಅಂತಃಸತ್ವವನ್ನೂ ಪೀಠಗಳ ತಲೆಮಾರುಗಳ ದಿವ್ಯಶಕ್ತಿಯನ್ನೂ ಅದಕ್ಕೆ ಮಾರಿಕೊಂಡರೆ ಅದು ಪೀಠಸ್ಥ ಸಂನ್ಯಾಸಿಗಳಿಗೂ ಮತ್ತು ಮಠಕ್ಕೂ ಸಲ್ಲುವ ವಿಹಿತ ಧರ್ಮವಾಗಿರುವುದಿಲ್ಲ. ಮುಕ್ತರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿಗಳನ್ನು ಮಿಕ್ಕುಳಿದ ಸಂನ್ಯಾಸಿಗಳು ಅರಿತುಕೊಳ್ಳುವಂತಾಗಲಿ ಎಮ್ದು ಹಾರೈಸುತ್ತಾ ಬ್ರಹ್ಮೀಭೂತ ಶ್ರೀಗಳಿಗೆ ನಮನ ಸಲ್ಲಿಸುತ್ತಿದ್ದೇನೆ.

-----------------


ಇನ್ನು ಎರಡನೆಯದಾಗಿ ಡಾ| ಆಂಜಿರೆಡ್ಡಿಯವರ ಬಗ್ಗೆ ಎರಡು ಮಾತು. ಭಾರತೀಯ ಆಯುರ್ವೇದಕ್ಕೆ ೫೦೦೦ ವರ್ಷಗಳ ಪೂರ್ವೇತಿಹಾಸವೂ ೩೦೦೦ ವರ್ಷಗಳ ದಾಖಲಾತಿ ಸಹಿತ ಇತಿಹಾಸವೂ ಇದೆ. ನಂತರ ಬಂದಿದ್ದು ಹೋಮಿಯೋಪಥಿ. ಅದಕ್ಕೆ ಅಜಮಾಸು ೩೫೦ ವರ್ಷಗಳ ಇತಿಹಾಸವಿದೆ. ನಂತರ ಬಂದಿದ್ದು ಅಲೋಪಥಿ-ಇದಕ್ಕೆ ಇರುವುದು ಕೇವಲ ೧೫೦ ವರ್ಷಗಳ ಇತಿಹಾಸ ಮಾತ್ರ! ಕೃತ್ರಿಮವಾಗಿ ಮಾನವ ತಯಾರಿಸಿದ ರಾಸಾಯನಿಕಗಳನ್ನು ಸಮ್ಮಿಶ್ರಣಗೊಳಿಸಿ ಔಷಧಗಳನ್ನಾಗಿ ಬಳಸುವ ಕಲೆ ಅಲೋಪಥಿಯದ್ದು; ಅಡ್ಡ ಪರಿಣಾಮಗಳಿ ಇದ್ದೇ ಇರುತ್ತವೆ ಎಂಬುದನ್ನು ತಿಳಿದಿರಬೇಕು. ರಾಜಾಶ್ರಯ ತಪ್ಪಿದ ನಂತರ ಮತ್ತು ರಾಜರ ಆಳ್ವಿಕೆಗಳ ನಡುಗಾಲದಲ್ಲಿ ನಡೆದ ಪರಕೀಯರ ದಾಳಿಗಳಿಂದ ಆಯುರ್ವೇದ ತನ್ನ ಬೆಲೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿತ್ತು. ಚರಕ-ಸುಶ್ರುತರಂಥಾ ವೈದ್ಯರು ಭಾರತದಲ್ಲಿ ೩೦೦೦ ವರ್ಷಗಳ ಹಿಂದೆಯೇ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದರು ಎಂದರೆ ನಮಗೀಗ ಆಶ್ಚರ್ಯವಾಗುತ್ತದೆ! ಆಂಗ್ಲರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಪ್ರಚುರಗೊಂಡ ಅಲೋಪಥಿ ವೈದ್ಯ ಪದ್ಧತಿಯ ಮುಖ್ಯ ಉದ್ದೇಶ ರೋಗಿಗಳಿಗೆ ತ್ವರಿತ ಉಪಶಮನ. ರೋಗಗಳ ಮೂಲ ಬೇರುಗಳನ್ನು ಕಿತ್ತೆಸೆಯುವ ಬದಲು ರೋಗಿಗಳಿಗೆ ತತ್ಕಾಲಕ್ಕೆ ಪರಿಹಾರವನ್ನೊದಗಿಸುವ ಈ ಪದ್ಧತಿ ಹಲವರಿಗೆ ಅನುಕೂಲಕರವಾಗಿ ಕಂಡಿತು. ಆಯುರ್ವೇದದ ಅನೇಕ ಔಷಧಗಳು ಅನುವಂಶೀಯವಾಗಿ ಕೊಡಲ್ಪಡುತ್ತಿದ್ದು ಪುಸ್ತಕಗಳ ರೂಪದಲ್ಲಿ ಹೇಳಲ್ಪಟ್ಟ ಮಾಹಿತಿಯಲ್ಲಿನ ಮೂಲಿಕೆಗಳ ಪರಿಚಯ ಎಲ್ಲರಿಗೂ ಆಗುತ್ತಿರಲಿಲ್ಲ; ಮತ್ತು ನುರಿತ ಹಸ್ತದ ಪ್ರಮಾಣ ಬದ್ಧತೆ ಕಮ್ಮಿಯಾಗತೊಡಗಿತ್ತು. ಹೀಗಾಗಿ ಆಯುರ್ವೇದ ಎಂದರೆ ನಿಧಾನವಾಗಿ ಪರಿಣಾಮ ಬೀರಬಹುದಾದ ಔಷಧ ಪದ್ಧತಿ ಎಂದೇ ಜನ ಪರಿಗಣಿಸಿದರು; ದೋಷ ವೈದ್ಯರಲ್ಲಿತ್ತೇ ಹೊರತು ಆಯುರ್ವೇದದಲ್ಲಿರಲಿಲ್ಲ. ಇಂದು ಆಯುರ್ವೇದೀಯ ಔಷಧಿಗಳು ಅತಿಶೀಘ್ರ ಪರಿಣಾಮವನ್ನು ಕೊಡಬಲ್ಲ ಔಷಧಿಗಳಾಗಿ, ಅಲೋಪಥಿಯ ಮಾತ್ರೆಗಳ ರೂಪದಲ್ಲಿಯೇ ಮಾತ್ರೆಗಳೂ, ಕ್ಯಾಪ್ಸೂಲ್ ಗಳೂ ಸಹ ಲಭ್ಯವಿವೆ.

ಏನೇ ಇರಲಿ, ೭೦ರ ದಶಕದಲ್ಲಿ ಆಲೋಪಥಿಯ ಔಷಧಗಳನ್ನು ಭಾರತ ಹೊರದೇಶಗಳಿಂದ ಆಮದುಮಾಡಿಕೊಳ್ಳಬೇಕಾದ ಪ್ರಮೇಯವಿತ್ತು. ಔಷಧಗಳ ಬರುವಿಕೆಗಾಗಿ ವೈದ್ಯರುಗಳು ಕಾದಿರಬೇಕಾದ ಅಗತ್ಯತೆ ಇರುತ್ತಿತ್ತು. ಆಂಗ್ಲರು ಅಲೋಪಥಿಯ ಬಗ್ಗೆ ಬಹಳ ಚೆನ್ನಾಗಿ ಬೋಧಿಸಿ ಅದನ್ನೇ ಎಲ್ಲೆಡೆಗೂ ಹಬ್ಬಿಸಿ ಬೆಳೆಸಿದ್ದರಿಂದ ಜನರಿಗೆ ಹೊಸಪದ್ಧತಿಯ ಔಷಧಗಳ ಅಡ್ಡಪರಿಣಾಮಗಳಿಗಿಂತಾ ತ್ವರಿತಗತಿಯ ಪರಿಹಾರಗಳೇ ಸಮಾಧಾನಕರವಾಗಿಯೂ ಉತ್ತಮವಾಗಿಯೂ ಕಂಡವು. ಇಂಥಾ ಕಾಲದಲ್ಲಿ, ದೇಶದಲ್ಲಿ ಇರುವ ಆಲೋಪಥಿ ಆಸ್ಪತ್ರೆಗಳಿಗೆ ಬೇಕಾಗುವ ಔಷಧಗಳಲ್ಲಿ ಹಲವನ್ನು ತಯಾರಿಸಲು ಆಲೋಚಿಸಿದವರು ಡಾ| ಆಂಜಿರೆಡ್ಡಿಯವರು. ಒಂದು ಸ್ವದೇಶೀ ಉದ್ಯಮದ ಸ್ಥಾಪನೆ ಮಾಡುವುದು ಮತ್ತು ಅದರಿಂದ ಹಲವರಿಗೆ ಉದ್ಯೋಗ ಕೊಡುತ್ತಾ ತಮ್ಮನ್ನೂ ಪೋಷಿಸಿಕೊಳ್ಳುತ್ತಾ, ದುಬಾರಿ ಬೆಲೆತೆತ್ತು ಖರೀದಿಸಬೇಕಾದ ಔಷಧಗಳನ್ನು  ಆದಷ್ಟೂ ಕಡಿಮೆ ಬೆಲೆಯಲ್ಲಿ ಉತ್ಪಾದಿಸಲು ಮುಂದಾಗಬೇಕೆಂಬುದು ಅವರ ಬಯಕೆಯಾಗಿತ್ತು. ಅದನ್ನವರು ಸಾಧ್ಯವಾಗಿಸಿದರು; ಡಾ. ರೆಡ್ಡೀಸ್ ಲ್ಯಾಬೋರೇಟರಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ ಅಲೋಪಥೀಯ ಔಷಧಗಳನ್ನು ತಯಾರಿಸಿ ದೇಶವ್ಯಾಪೀ ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಯಾವಕಾಲದಲ್ಲಿ ಯಾವುದು ಕಷ್ಟಸಾಧ್ಯವೆಂದು ಪರಿಗಣಿತವಾಗಿತ್ತೋ ಅದನ್ನೇ ಎತ್ತಿಕೊಂಡು ಸಾಧಿಸಿದವರು ಡಾ| ಆಂಜಿರೆಡ್ಡಿ. ಅವರ ಸಾಧನೆಗೊಂದು ಸಲಾಮು ಸಲ್ಲಿಸುತ್ತಾ ಕಳೆದ ಕೆಲವುದಿನಗಳ ಹಿಂದೆ ನಿಧನರಾದ ಅವರ ಆತ್ಮಕ್ಕೆ ಶಾಂತಿಯನ್ನು ಹಾರೈಸುತ್ತಿದ್ದೇನೆ.


-------------


ಆಗಮಶಾಸ್ತ್ರಗಳಲ್ಲಿ ವಿಶೇಷ ಪರಿಣತಿಯನ್ನು ಗಳಿಸಿ, ಜೀವನದುದ್ದಕ್ಕೂ ಸಾವಿರಾರು ಮಹತ್ತರ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು ಶ್ರೀಯುತ ಕಟ್ಟೆ ಪರಮೇಶ್ವರ ಭಟ್ಟರು. ನನಗೆ ಭಟ್ಟರ ಒಡನಾಟವಿತ್ತು. ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿಯೂ ಇದ್ದೆ. ದೇವಸ್ಥಾನಗಳ ಕ್ಷೇತ್ರ ಶುದ್ಧಿಯ ಬಗ್ಗೆ, ದೇವಾಸ್ಥಾನಗಳ ಪಂಚಾಂಗ ಶುದ್ಧಿಯ ಬಗ್ಗೆ, ಆಯ-ವ್ಯಯಗಳ ಬಗ್ಗೆ ಸುದೀರ್ಘವಾದ ಅವರ ಉಪನ್ಯಾಸವನ್ನು ಕೇಳಿ ಮಂತ್ರಮುಗ್ಧನಾಗಿದ್ದೆ. ಎಳವೆಯಲ್ಲೇ ನಾನೊಂದು ಪ್ರಶ್ನೆಯನ್ನು ಅವರಲ್ಲಿ ಕೇಳಿದ್ದೆ: ಸ್ನಾನ ಮಾಡಿಬಂದರೂ ಮತ್ತೆ ಆಗಾಗ ಕೈಕಾಲು ತೊಳೆದು ಶುದ್ಧೀಕರಿಸಿಕೊಂಡು ಪೂಜಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಕಾರಣವೇನು? -ಎಂದು. ಮನುಷ್ಯ ಸಹಜವಾಗಿ ಪ್ರತಿಯೊಬ್ಬರೂ ನಮಗರಿವಿಲ್ಲದಂತೇ ಯಾರಲ್ಲೋ ಹರಟುತ್ತಾ ತಲೆಕೆರೆದುಕೊಳ್ಳುವುದು, ಕಾಲು ಮುಟ್ಟಿಕೊಳ್ಳುವುದು, ಮೈ ತುರಿಸಿಕೊಳ್ಳುವುದು, ನಾಲಿಗೆಯಲ್ಲಿ ಬಂದ ಕಸವನ್ನು ತೆಗೆದುಹಾಕುವುದು, ಕಣ್ಣುಗಳನ್ನು ಉಜ್ಜಿವುದು, ಕಿವಿ-ಮೂಗುಗಳಲ್ಲಿ ನವೆಯಾದಾಗ ಬೆರಳಾಡಿಸಿಕೊಳ್ಳುವುದು --ಈ ರೀತಿಯೆಲ್ಲಾ ಮಾಡುತ್ತಿರುತ್ತೇವೆ. ಮನುಷ್ಯನ ಬಾಹ್ಯ ಶರೀರಕ್ಕಿಂತಾ ಶರೀರದೊಳಗಿನ ಕಲ್ಮಷಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಬೆವರು, ಕಣ್ಣೀರು, ಸೀನು-ಸಿಂಬಳ, ಮಲ-ಮೂತ್ರ ಇವುಗಳಲ್ಲೆಲ್ಲಾ ಇರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನೇ ನಾವು ಗಮನಿಸಿ ನಮ್ಮ ಶರೀರದೊಳಗಿನ ಕಲ್ಮಷವನ್ನು ಗ್ರಹಿಸಬಹುದಾಗಿದೆ. ಕಲ್ಮಷ ಹರಿತವಾದ ಕೈಗಳಿಂದಲೂ ಮನದಿಂದಲೂ ಪೂಜಿಸಬೇಕು ಎಂದಾದಾಗ, ಭಗವಂತನನ್ನು ನಮ್ಮ ಮಟ್ಟಕ್ಕೆ ಇಳಿಸಿಕೊಳ್ಳದೇ, ನಮ್ಮನ್ನು ಆಗಾಗ ಶುದ್ಧೀಕರಿಸಿಕೊಳ್ಳುತ್ತಾ ಪೂಜಿಸುವುದು ಧರ್ಮಶಾಸ್ತ್ರಗಳಲ್ಲಿ ಹೇಳಿದ ವಿಧಿ ಎಂದಿದ್ದರು.

ಎಲ್ಲೇ ಹೋಗಲಿ ಅವರಲ್ಲಿ ನಿತ್ಯವೂ ನಡೆಸುವ ಕೆಲವು ಅನುಷ್ಠಾನಗಳು ಇರುತ್ತಿದ್ದವು. ನಿರ್ಗುಣ ಪರಬ್ರಹ್ಮನನ್ನು ಸಗುಣಾರಾಧಕರಾಗಿ ಹಲವು ಸಾವಿರ ವಿಗ್ರಹಗಳನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದ ಅವರು, ಅನೇಕೆ ಕ್ಷೇತ್ರಗಳಲ್ಲಿ ಅಷ್ಟಬಂಧವೆಂಬ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದರು. ಪ್ರತಿನಿತ್ಯ ನಡೆಸುವ ನಿತ್ಯಗಣಹೋಮವೆಂಬ ಒಂದು ಹೋಮವನ್ನು ಕೊನೆಯವರೆಗೂ ನಡೆಸಿದ್ದರು! ದೇವರಲ್ಲಿ ಭಕ್ತರ ಪರವಾಗಿ ಸಲ್ಲಿಸುವ ಅವರ ಪ್ರಾರ್ಥನಾ ಶೈಲಿ ಅತಿ ವಿಶಿಷ್ಟವಾಗಿಯೂ ಅಮೋಘವಾಗಿಯೂ ಇರುತ್ತಿತ್ತು. ಇಂಥಾ ಕಟ್ಟೆಭಟ್ಟರು ಯಾನೇ ಕಟ್ಟೆ ಪರಮೇಶ್ವರ ಭಟ್ಟರು ಅನುಷ್ಠಾನ ತತ್ಪರರು. ಉದ್ಯಮಿಯೊಬ್ಬರ ಮನೆಗೆ ಯಾವುದೋ ಕಾರ್ಯಕ್ರಮಕ್ಕೆ ಅವರು ಬರುವುದಾಗಿ ನಿಶ್ಚಯವಾಗಿದ್ದು, ಕಾರ್ಯಕ್ರಮದ ದಿನ ಬೆಳಗಿನ ಜಾವ ಅವರು ಹಾಜರಿರಬೇಕಿತ್ತು; ಕಾರಣಾಂತರಗಳಿಂದ ಗಂಟೆ ತಡವಾಗಿ ಚಿತ್ತೈಸಿದ ಕಟ್ಟೆಭಟ್ಟರಿಗೆ ಧನಿಕ ಯಜಮಾನರು ಋತ್ವಿಜರೆಲ್ಲರ ಮತ್ತು ಸೇರಿದ ಜನರೆಲ್ಲರೆದುರು ಸ್ವಲ್ಪ ಉದ್ದಟವಾಗಿ ಮಾತನಾಡಿ ನಿಂದಿಸಿಬಿಟ್ಟರು. ಕಟ್ಟೆಭಟ್ಟರಿಗೆ ಆದ ಅಪರಾಧದ ಅರಿವಿತ್ತು, ಆದರೆ ಅಂದೇನೋ ಅನಿವಾರ್ಯವೂ ಬಂದೊದಗಿದ್ದರಿಂದ ಅವರ ಬರುವಿಕೆ ತಡವಾಗಿತ್ತು. ಭಟ್ಟರು ಮರುಮಾತಾಡಲಿಲ್ಲ. ತನ್ನ ಕರ್ತವ್ಯವನ್ನು ನಿಭಾಯಿಸಿ ಹೊರಟುಹೋದರು. ಆದಾದ ಕೆಲವೇ ದಿನಗಳಲ್ಲಿ ಆ ಉದ್ಯಮಿ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡರು! ಆವರ ಕುಟುಂಬವರ್ಗದವರು, ಕಟ್ಟೆ ಭಟ್ಟರಲ್ಲಿ ಮತ್ತೆ ವಿಷಯ ಪ್ರಸ್ತಾವಿಸಿ ನೋಯಿಸಿದ್ದಕ್ಕೆ ಕ್ಷಮಾಪಣೆ ಕೇಳಿದರು, ಕಟ್ಟೆಭಟ್ಟರು ಕ್ಷಮಿಸಿದರೂ ಕೂಡ ಆ ವ್ಯಕ್ತಿ ನೂರಕ್ಕೆ ನೂರು ಮೊದಲಿನಂತಾಗಲು ಸಾಧ್ಯವಾಗಲಿಲ್ಲ! 

ನಾವೆಲ್ಲಾ ಹುಟ್ಟುವುದಕ್ಕೂ ಮೊದಲೇ ಅವರು ಆಗಮೋಕ್ತವಾದ ಅನೇಕ ಕಾರ್ಯಗಳಲ್ಲಿ ನಿರತರಾಗಿದ್ದರು. ಆಳೆತ್ತರದ ಶಿವಲಿಂಗವನ್ನೂ, ಮುಸ್ಲಿಮರ ದಾಳಿಯಿಂದ ಹಾಳುಬಿದ್ದ ವಿಷ್ಣು ವಿಗ್ರಹವನ್ನೂ ತೆಗೆದು ಆ ಜಾಗಗಳಲ್ಲಿ ಅಂಥದ್ದೇ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದನ್ನು ನಾನು ಬಲ್ಲೆ. ಪ್ರತಿಷ್ಠಾಪನೆ ನಡೆದು ಹೊಸ ಮೂರ್ತಿಗೆ ಕಲಾವೃದ್ಧಿ ನಡೆಸಿ ಕಣ್ಣು ತೆರೆಸುವ ಕಾರ್ಯಕ್ರಮವೊಂದು ವಿಶಿಷ್ಟ ಕ್ರಮ. ಕಣ್ತೆರೆವ ದೇವರ ಎದುರಿಗೆ ನಿಲ್ಲಿಸಿದ ವಸ್ತು ಅಡ್ಡ ಬೀಳುವುದು ಶಕ್ತಿ ಸಂಚಾರವನ್ನು ಜನರಿಗೆ ತೋರಿಸಿದರೆ, ಮಹಾಮಂಗಲಾರತಿಯ ವೇಳೆ ವಿಗ್ರಹಗಳ ತಲೆಯಮೇಲಿಂದ ನಿರಂತರವಾಗಿ ಪ್ರಸಾದ ಉದುರುತ್ತಾ ಇರುವುದು ಅವರ ನೈಪುಣ್ಯತೆಗೆ ಹಿಡಿದ ಕನ್ನಡಿ.  ಧರ್ಮಶಾಸ್ತ್ರ ಪ್ರವೀಣರಾಗಿದ್ದ ಅವರು ಸಂಸ್ಕೃತದಲ್ಲೂ ಪ್ರೌಢಿಮೆ ಹೊಂದಿದ್ದ ವ್ಯಕ್ತಿ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಅಧ್ವರ್ಯುಗಳಾಗಿ ಭಾಗವಹಿಸಿದ್ದಾರೆ. ಕಟ್ಟೆಭಟ್ಟರನ್ನು ನೋಡಿದ ಜನ ಸಹಜವಾಗಿ ಅವರಿಗೆ ಕೈಮುಗಿಯುವ ಮನಸ್ಸನ್ನು ಪಡೆಯುತ್ತಿದ್ದರು ಎಂದರೆ ಅವರ ಅನುಷ್ಠಾನಿಕ ವರ್ಚಸ್ಸು ಎಂಥದ್ದಿರಬೇಕು ಎಂಬುದನ್ನು ಗಣಿಸಬಲ್ಲಿರಷ್ಟೇ? ಅವರು ಹೋದಲ್ಲೆಲ್ಲಾ ಅವರ ಸುತ್ತ ಒಂದಷ್ಟು ಜನ ಮುತ್ತಿಕೊಳ್ಳುತ್ತಿದ್ದರೆ ಅದಕ್ಕೆ ಅವರ ಸರಳ ಜೀವನ ಮತ್ತು ಅಗಾಧ ಪಾಂಡಿತ್ಯಗಳೇ ಕಾರಣಗಳಾಗಿದ್ದವು. ಕಾರ್ಯಕ್ರಮಗಳಲ್ಲಿ ಎಲ್ಲೂ ನ್ಯೂನತೆಯನ್ನುಂಟುಮಾಡದೇ, ಕೊಡುವವರಿದ್ದಾರೆ ಎಂದು ಅನಗತ್ಯವಾಗಿ ಖರ್ಚುಮಾಡದೇ, ನಡೆಸಬೇಕಾದ ವಿನಿಯೋಗ-ವಿಧಿಗಳಲ್ಲಿ ಎಲ್ಲೂ ರಾಜಿಮಾಡಿಕೊಳ್ಳದೇ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಭಕ್ತರ ಪ್ರಶ್ನೆಗಳಿಗೆ ಆಧಾರ ಸಹಿತವಾಗಿ ಉತ್ತರಿಸುತ್ತಾ, ಭಕ್ತರ ಸಂದೇಹಗಳನ್ನು ನಿವಾರಿಸುತ್ತಾ, ಎಲ್ಲೂ ಆಭಾಸವಾಗದಂತೇ ಔದಾರ್ಯದಿಂದ ಧರ್ಮಾಚರಣೆಗಳನ್ನು ನಡೆಸುವ ರೀತಿಯೇ ಅವರನ್ನು ಮೇಲ್ಮಟ್ಟಕ್ಕೆ ಏರಿಸಿತ್ತು.

ಅವರು ನಡೆಸಿದ ಒಂದು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ, ಆರಂಭದಿಂದ ಅಂತ್ಯದವರೆಗೂ ಇರುವ ಸೌಭಾಗ್ಯ ನನಗೊದಗಿತ್ತು. ಪ್ರಾರ್ಥನೆಯಿಂದಲೇ ಆರಂಭ. ಹಳೆಯ ವಿಗ್ರಹವನ್ನು ತೆಗೆದು ಹೊಸದನ್ನು ಪ್ರತಿಷ್ಠಾಪಿಸುವ ಸನ್ನಿವೇಶದಲ್ಲಿ ಹಳೆಯ ವಿಗ್ರಹವನ್ನು ರಾತ್ರಿಯ ಹೊತ್ತಿನಲ್ಲಿ ಹೊರತೆಗೆದು, ಅದಕ್ಕೆ ಶಾಸ್ತ್ರೋಕ್ತ ಅಂತ್ಯವಿಧಿಗಳನ್ನು ಪೂರೈಸಿ ಅದನ್ನು ನದಿಯಲ್ಲಿ ವಿಸರ್ಜನೆಗೆ ಕಳುಹಿಸಿದ್ದು ಇನ್ನೂ ನೆನಪಿದೆ. ಶಕುನಶಾಸ್ತ್ರದ ರೀತ್ಯಾ, ಹಲವುಕಾಲ ಪೂಜೆಗೊಂಡು ವಿಸರ್ಜಿತವಾದ ವಿಗ್ರಹವನ್ನು ಹಾಗೆ ನೀರಿನಲ್ಲಿ ಹಾಕಿಬರುವಾಗ ಎದುರಾಗಿ ಯಾರಾದರೂ ಬಂದರೆ, ಬಂದವರಿಗೆ ಅನಿಷ್ಟವಂತೆ! ಅದಕ್ಕೇ ರಾತ್ರಿಯಹೊತ್ತೇ ಆ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿಹೇಳಿದ್ದರು. ಪಾರ್ಥನೆ, ಮಹಾಸಂಕಲ್ಪ, ಋತ್ವಿಗ್ವರ್ಣನೆ, ದೇವನಾಂದಿ, ಗಣಹೋಮ, ಧ್ವಜಾರೋಹಣ, ಯಾಗಶಾಲಾ ಪ್ರವೇಶ, ಮಂಡಲದರ್ಶನ, ಸಹಸ್ರ ಕಲಶಸ್ಥಾಪನೆ, ನೂತನ ಬಿಂಬ[ಹೊಸಮೂರ್ತಿ]ಸಂಸ್ಕಾರ, ನಾನಾ ಹೋಮಗಳ ಜೊತೆಗೆ ಪ್ರತಿಷ್ಠಾ ಹೋಮ, ಕಲಾವೃದ್ಧಿ ಹೋಮ,  ಶುಭಮುಹೂರ್ತದಲ್ಲಿ ಬಿಂಬ ಪ್ರತಿಷ್ಠೆ, ಪ್ರತಿಷ್ಠಾಂಗ ತ್ರಿಕಾಲ ಸಾತ್ವಿಕ ಬಲಿಗಳು, ಪ್ರತಿಷ್ಟಾಂಗ ಅಷ್ಟಾಂಗಸೇವೆ-ಪಲ್ಲಕ್ಕಿ ಉತ್ಸವ, ಸಹಸ್ರಕಲಶಾಭಿಷೇಕ, ಹವನಗಳ ಪೂರ್ಣಾಹುತಿ, ಮಹಾಮಂಗಳಾರತಿ, ಅವಬೃತ ತೀರ್ಥಸ್ನಾನ, ಧ್ವಜಾವರೋಹಣ, ಆಶೀರ್ಗ್ರಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇತ್ಯಾದಿ [ಎಲ್ಲವನ್ನೂ ಹೆಸರಿಸಿಲ್ಲ] ಎಲ್ಲವನ್ನೂ ನೋಡುವ ಅದೃಷ್ಟ ಪಡೆದಿದ್ದೆ ಎನಿಸಿತು. ಪೂಗವೃಕ್ಷದ[ಅಡಕೆ ಮರ] ಮಹತ್ವವನ್ನು ಅವರು ವಿವರಿಸಿದ್ದು ಬಹಳ ಸಂತೋಷ ನೀಡಿತ್ತು. ಕಾರ್ಯಕ್ರಮ ಮುಕ್ತಾಯವಾಗಿ ಪ್ರಸಾದ ವಿತರಿಸುವಾಗ ಅಂಥವರ ಕೈಯ್ಯಿಂದ ಪ್ರಸಾದ ಪಡೆಯುವ ಭಾಗ್ಯಶಾಲಿಯೂ ನಾನಾಗಿದ್ದೆ. ಚಿಕ್ಕ ಹುಡುಗನೆಂದು ಅಸಡ್ಡೆ ಮಾಡದೇ ಅವರು ನಡೆಸಿಕೊಂಡ ರೀತಿ, ತೋರಿದ್ದ ಪ್ರೀತಿ ಇಂದಿಗೂ ನೆನಪಿದೆ. ನಾಲ್ಕು ವರ್ಷಗಳ ಹಿಂದೆ ಶ್ರೀಧರ ಭಗವಾನರ ವರದಹಳ್ಳಿಯ ಆಶ್ರಮದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದೆ. ಅದೇ ಕೊನೆ, ಆನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ೯೨ ವಯಸ್ಸಿನವರೆಗೂ ತುಂಬುಕುಟುಂಬದ ಸುಖವನ್ನೂ ಜನಾನುರಾಗವನ್ನೂ ಪಡೆದು ದೇವರನ್ನೇ ಮಾತನಾಡಿಸುವವರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರಿಗೆ ಲೌಕಿಕವಾಗಿ ನೂರಾರು ಪ್ರಶಸ್ತಿಗಳು ನೀಡಲ್ಪಟ್ಟಿದ್ದವು. ವಾರದ ಹಿಂದೆ ಅಗಲಿದ ಕಟ್ಟೆಭಟ್ಟರಿಗೆ ನನ್ನ ಬಾಷ್ಪಾಂಜಲಿ ಮತ್ತು ನುಡಿನಮನಗಳು. ಮನದ ಮೂಸೆಯ ಭಾವಗಳಿಗೆ ಅಕ್ಷರಗಳ ರೆಕ್ಕೆಕಟ್ಟಿ ಸುಯ್ಯನೆ ಹಾರಿಬಿಡುವಾಗ ಬಂದುನೋಡಿ ಸುಖಿಸುವ ಎಲ್ಲಾ ಓದುಗ ಮಿತ್ರರಿಗೂ ಧನ್ಯವಾದಗಳು.         


Monday, March 18, 2013

ಮಂಜು-ಮಾದೇವಿ-ಹೊಟ್ಟೆಶೂಲೆ ಮತ್ತು ಜಾಂಡೀಸು

  ಚಿತ್ರಋಣ: ಅಂತರ್ಜಾಲ 
ಮಂಜು-ಮಾದೇವಿ-ಹೊಟ್ಟೆಶೂಲೆ ಮತ್ತು ಜಾಂಡೀಸು

---------------------------------------------------------------------------------------
[ನಿವೇದನೆ: ೧. ಇದು ತುಸು ಪೀತ ಅಂಶಗಳನ್ನೊಳಗೊಂಡ ಸಾಮಾಜಿಕ ಕಥೆ. ಕಥಾ ರಸಿಕರಿಗಾಗಿ ವಿಶೇಷವಾಗಿ ಕೊಡಮಾಡಿದ ನೈಜ ಘಟನೆಗಳನ್ನಾಧರಿಸಿದ ಕಥೆ. ಕಥೆಯ ಮುಕ್ತಾಯದಲ್ಲಿ ಸಂದೇಶವಿರುವುದನ್ನೂ ಗಮನಿಸಲು ಮರೆಯಬಾರದು. ಹಿಡಿಸುವವರೂ, ಸಹಿಸದವರೂ ಬೇಸರಿಸದೇ ಓದಕೊಳ್ಳಬೇಕಾಗಿ ವಿನಂತಿ.

೨. ಕಳೆದವಾರ ರೆಡ್ಡಿ ಲ್ಯಾಬೋರೇಟರೀಸ್  ಲಿಮಿಟೆಡ್ ಸ್ಥಾಪಕರಾದ ಡಾ| ಆಂಜಿ ರೆಡ್ಡಿಯವರು ಮತ್ತು ಬ್ರಹ್ಮಶ್ರೀ ಕಟ್ಟೆ ಪರಮೇಶ್ವರ ಭಟ್ಟರು ನಿಧನರಾಗಿದ್ದಾರೆ. ಇಬ್ಬರೂ ಅವರವರ ರಂಗಗಳಲ್ಲಿ ಮೇರುಸದೃಶ ವ್ಯಕ್ತಿಗಳು. ಅವರ ಆತ್ಮಗಳು ಚಿರಶಾಂತಿಯನ್ನನುಭವಿಸಲಿ ಎಂಬುದರ ಜೊತೆಗೆ ಕೆಲವೇ ದಿನಗಳಲ್ಲಿ ಇಬ್ಬರ ಕುರಿತೂ ಬರೆಯುತ್ತೇನೆ ಎಂದು ಮುಂಗಡ ತಿಳಿಸಿಬಿಡುತ್ತಿದ್ದೇನೆ.

ಇಷ್ಟಪಟ್ಟು ಓದುವವರಿಗೆ ಇಂದು ’ಕಥೆ’ಯೊಂದನ್ನು ಹೇಳಲಿದ್ದೇನೆ, ಹೀಗೆ ದಯಮಾಡಿಸಿ:  ]

___________________________________________________________________________________________


ಸರಕ್ಕನೆ ಏನೋ ಹಾವುಗಳು ಸರಿದಾಡಿದಂತೇ ಸದ್ದಾಗಿದ್ದಕ್ಕೆ ರಾಘು ಕಂಗಾಲಾಗಿಬಿಟ್ಟ. ಡವಗುಟ್ಟುವ ಎದೆಯಮೇಲೆ ಕೈಯಿಟ್ಟುಕೊಂಡು, ದನದ ಕೊಟ್ಟಿಗೆಯ ಹಿಂದೆ ಜಮಾಯಿಸಿದ್ದ ಹಸಿರು ಸೊಪ್ಪಿನ ಹೊರೆಗಳ ನಡುವೆ ಮತ್ತೊಮ್ಮೆ ದೂರದಿಂದ ಕಣ್ಣು ಹಾಯಿಸುವ ಹೊತ್ತಿಗೆ ಯಾವುದೋ ಒಂದು ವ್ಯಕ್ತಿ ಎದ್ದು ಓಡಿತ್ತು! ಆದರೂ ಸೊಪ್ಪಿನ ಹೊರೆಗಳ ನಡುವೆ ಕಿಂಕಿಣಿ ಕಿಣಿಕಿಣಿ ಬಳೆಗಳ ಸದ್ದು ಕೇಳಿಸುತ್ತಿತ್ತು; ಧೈರ್ಯಮಾಡಿ ಕೆಟ್ಟ ಕುತೂಹಲದಿಂದ ಹೋಗಿ ನೋಡುತ್ತಾನೆ, ಮಾದೇವಿ ಎತ್ತಿದ್ದ ಸೀರೆಯನ್ನು ಕೆಳಜಾರಿಸಿಕೊಳ್ಳುತ್ತಿದ್ದಳು. ರಾಘುವನ್ನು ಕಂಡೊಡನೆಯೇ "ಹೊಟ್ಟೆ ಶೂಲೆ, ಅಮ್ಮಾ ....." ಎಂದು ಹೊಟ್ಟೆಯಮೇಲೆ ಕೈಯಿಟ್ಟುಕೊಂಡು ಮಲಗಿದಲ್ಲೇ ಮುಲುಗಿದಳು. ರಾಘುಗೆ ಅರ್ಥವಾಗಲಿಲ್ಲ. ಹೊಟ್ಟೆನೋವು ಹೌದೇನೋ ಅಂದುಕೊಂಡ. "ಏನಾಯ್ತು?" ಎಂದ. "ಹೊಟ್ಟೆ ನೋವು ಬಂದದೆ ಆಗಾಗ ಹೀಂಗೇವ, ಡಾಟ್ರತ್ರ ಮದ್ದು ತಂದಿದ್ದೆ ಆದ್ರೂ ಗುಣಾ ಆಗ್ಲಿಲ್ಲ. ಇವತ್ತು ಮತ್ತಾಂಗೇ ಬರ್ಬೇಕಾ ಸಾಯ್ಲಿ" ಎಂದುತ್ತರಿಸಿದಳು. "ಮಜ್ಗಿನೀರಿಗೆ ಇಂಗು ಹಾಕಿ ಕುಡಿ. ಆರಾಮಾಯ್ತದೆ" ಎಂದ ರಾಘು ಏನೋ ಪಾಪ ಎಂದುಕೊಂಡನಾದರೂ ಯಾರೋ ಓಡಿಹೋದದ್ದು ತಲೆಯಲ್ಲಿ ಹಲ್ಲಿರೋಗ ಹುಟ್ಟುಕೊಳ್ಳುವುದಕ್ಕೆ ಕಾರಣವಾಯ್ತು!

ಮಾದೇವಿ ಎಂಬಾಕೆ ಕಪ್ಪು ಸುಂದರಿ. ೨೮ರ ಪ್ರಾಯ. ಗಂಡ ಕುಡುಕ. ಮೂವರು ಮಕ್ಕಳು; ಒಂದು ಹೆಣ್ಣು, ಎರಡು ಗಂಡು. ಗಂಡನಿಗೆ ಸುಮಾರಾಗಿ ಜಮೀನಿದ್ದರೂ ದುಡಿಯುವ ಮನಸ್ಸಿಲ್ಲ. ವ್ಯಸನಕ್ಕೆ ಬಿದ್ದಿದ್ದರಿಂದ ಅಲ್ಲಿ ಇಲ್ಲಿ ಕಾಲ ಹೋಗುತ್ತಿತ್ತು. ಮದುವೆಗೂ ಮೊದಲೇ ವ್ಯಸನಕ್ಕೆ ಬಿದ್ದಿದ್ದ ಅವನಿಗೆ ಮಾದೇವಿಯನ್ನು ಮದುವೆಮಾಡಿಕೊಟ್ಟವರು ಆಕೆಯನ್ನು ಹೆತ್ತ ಜನ. ಮಾದೇವಿ ಸಂಭಾವಿತೆ ಎಂದುಕೊಳ್ಳುವುದೇನೂ ಬೇಡ; ಮದುವೆಗೆ ಮೊದಲೇ ತವರೂರು ಗುಂಡಬಾಳದೆಡೆಗೆ ಅದ್ಯಾರದೋ ಮನೆಗೆ ಹೋಗಿತ್ತಿದ್ದಳಂತೆ. ವಯಸ್ಸಿನ ತುಡಿತಕ್ಕೆ, ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಸುಬ್ರಾಯನ ದೋಸ್ತಿ ಮಾಡಿದ್ದಳಂತೆ. ಸುಬ್ರಾಯ-ಮಾದೇವಿಯರ ದೋಸ್ತಿ ಎಷ್ಟು ಗಟ್ಟಾನುಗಟ್ಟಿ ಇತ್ತೆಂದರೆ, ಮದುವೆಯಾದ ನಂತರವೂ ಆಕೆ ತವರುಮನೆಕಡೆಗೆ ಹೋಗಿ ಸುಬ್ರಾಯನನ್ನು ಭೇಟಿಯಾಗುತ್ತಿದ್ದಳು!  ಮದುವೆಯಾದ ಹೊಸದರಲ್ಲಿ ಕುಡುಕಗಂಡನಿಂದ ಹೆಣ್ಣು ಮಗುವೊಂದನ್ನು ಪಡೆದರೂ ಆಕೆಯ ಮನಸ್ಸು ಸುಬ್ರಾಯನ ದೋಸ್ತಿಗಾಗಿ ಹಾತೊರೆಯುತ್ತಿತ್ತು. ನಂತರದ ಮೂರು ವರ್ಷಗಳಲ್ಲೇ ಎರಡು ಗಂಡುಮಕ್ಕಳು ಜನಿಸಿದವು. ಈಗ ಹುಟ್ಟಿದ ಮಕ್ಕಳು ಮಾತ್ರ ಅಪ್ಪ-ಅಮ್ಮನ ರೀತಿ ಕಪ್ಪಗಿರಲಿಲ್ಲ; ಬೆಳ್ಳಬೆಳ್ಳಗೆ ಇದ್ದದ್ದರಿಂದಲೂ ಮುಖದಲ್ಲಿ ಸುಬ್ರಾಯನ ಲಕ್ಷಣ ಕಾಣುತ್ತಿದ್ದುದರಿಂದಲೂ, ಸಮಾಜದ ಜನಕ್ಕೆ ರಹಸ್ಯದ ಹಿನ್ನೆಲೆ ಅರ್ಥವಾಗಿಹೋಗಿತ್ತು! ಆದರೂ ಎದುರಾ ಎದುರೇ ಹಾಗೆ ಮಾದೇವಿಯಲ್ಲಿ ಯಾರಾದರೂ ಕೇಳಲು ಸಾಧ್ಯವೇ? ಕೇಳುವುದು ಸರಿಯೇ?

ಹಾಗಂತ ಗಂಡನೆದುರು, ಬೀಗ ಹಾಕಿಕೊಂಡ ಮಹಾಪತಿವ್ರತೆಯಂತೇ ಗೌರಮ್ಮನ ವೇಷದಲ್ಲಿರುವ ಮಾದೇವಿಗೆ, ತೆಳುನಡುವಿನ ಹೊಕ್ಕುಳ ಕೆಳಗೆ ಸೀರೆಯುಟ್ಟು ಬಳುಕುತ್ತಾ ನಡೆಯುವುದು ಗೊತ್ತಿಲ್ಲದ್ದೇನಲ್ಲ! ಸ್ನೋ, ಪೌಡರ್, ಕಾಡಿಗೆ ಅಂತ ಕನ್ನಡಿಮುಂದೆ ಕೂರದೇ ಹೊರಗಡೆ ಹೋಗುವ ಆಸಾಮಿಯಲ್ಲ! ಸರ್ವಾಭರಣ ಸುಂದರಿಯಾಗಿ ಹೊರಟರೆ, ಆಕೆಯ ಕಾಮನಬಿಲ್ಲಿನಂಥಾ ಹುಬ್ಬಿನ ಕೆಳಗಣ ಕಣ್ಣನೋಟಕ್ಕೆ ಹರೆಯದ ಗಂಡಸರೇ ತಲೆಬಾಗಿಸಿಕೊಂಡು ಕಂಡೆನೋ ಇಲ್ಲವೋ ಎಂಬಂತೇ ನಾಚಿ ನಡೆಯುವಂತಾಗುತ್ತಿತ್ತು. ಹಲವು ಗಂಡಸರ ಶೀಲವನ್ನಳಿಯುವ ಸಾಮರ್ಥ್ಯ ಆ ನೋಟಕ್ಕಿತ್ತು ಎಂಬುದನ್ನು ಬೇರೇ ಹೇಳಬೇಕಿಲ್ಲ. ಇಂಥಾ ಮಾದೇವಿಗೆ ಪರರ ಮನೆಯ ಕೆಲಸವಾದರೂ ಯಾಕೆ ಬೇಕು ಎಂದರೆ ಅದರ ಗುಟ್ಟೇ ಬೇರೆ! ಅದು ನಿಮಿತ್ತಕ್ಕೆ ಮಾತ್ರ; ಒಂದರ್ಥದಲ್ಲಿ ಅದು ಅವಳ ಮಾರ್ಕೆಟಿಂಗ್ ವೈಖರಿ! ಕೆಲಸಕ್ಕೆ ಬರುವ ಮಾದೇವಿಗೆ ಹಾದಿಯಲ್ಲಿ ಅಲ್ಲಲ್ಲಿ ಅಡ್ಡನಿಂತು ಕೆಕ್ಕರುಗಣ್ಣಿನಿಂದ ನೋಡುವ, ಕರೆಯುವ ಮಂದಿಯೂ ಇದ್ದರು. ಆದರೆ ಕಾಸಿಲ್ಲದ ಜನರಿಗೆ ಅದು ಕನಸಿನ ಗಂಟಾಗಿತ್ತು. ಬಲೆಗೆ ಬೀಳಿಸಿಕೊಳ್ಳುವ ಮಿಕವನ್ನು ನೋಡಿ, ಅದನ್ನು ಗುರಿಮಾಡಿಕೊಂಡು ನಡೆದರೆ ತಿಂಗಳೆರಡುತಿಂಗಳಲ್ಲೇ ಮಾದೇವಿಗೆ ಅದು ಕೈಗೂ ಬಾಯಿಗೂ ಬರುವ ತುತ್ತಾಗಿ ತಯಾರಾಗಿಬಿಡುತ್ತಿತ್ತು. ಮೈಗೂ ಮನಕ್ಕೂ ಸುಖನೀಡುವ ಸಿರಿವಂತ ಕುಳಗಳನ್ನೇ ಆಕೆ ಹುಡುಕುತ್ತಿದ್ದಳು. ಆದರೂ ಬಾಲ್ಯಕಾಲಸಖ ಸುಬ್ರಾಯ ಮತ್ತು ಶರೀರದಲ್ಲಿ ಕಟ್ಟುಮಸ್ತಾಗಿದ್ದ ಮಂಜು ಇಂಥವರನ್ನೆಲ್ಲಾ ಆಕೆ ವಿಶೇಷ ’ಸ್ನೇಹಿತರ’ನ್ನಾಗಿ ಆಯ್ಕೆಮಾಡಿಕೊಂಡವಳು. ಊರ ಸಾಧ್ವಿಯರಲ್ಲಿ ಯಾರಲ್ಲಿಯೂ ಇರದಷ್ಟು ಬಂಗಾರದ ಆಭರಣಗಳು ಮಾದೇವಿಯಲ್ಲಿದ್ದವು! ೭೦ರ ದಶಕದಲ್ಲೇ ಅವಳ ಮನೆಯಲ್ಲಿ ತೂಗು ಗೋಲಕದ ಗೋಡೆಗಡಿಯಾರ ಡಣ್ ಡಣ್ ಬಾರಿಸುತ್ತಿತ್ತು; ಊರಲ್ಲಿ ಮರ್ಯಾದಸ್ಥ-ಅನುಕೂಲಸ್ಥರ ಮನೆಗಳಲ್ಲೂ ಅಬ್ಬಬ್ಬಾ ಅಂದರೆ ಚಿಕ್ಕ ಟೈಂ ಪೀಸ್ ಇದ್ದ ಕಾಲದಲ್ಲೇ ಮಾದೇವಿ ಹೀಗಿದ್ದಳಪ್ಪ.  

ರಾಘುವಿಗೆ ಈ ಕಥೆಯೆಲ್ಲ ತಿಳಿದಿರಲಿಲ್ಲ. ಆತನೋ ಸಾದಾ ಸೀದಾ ಹದಿಹರೆಯದ ಹುಡುಗ. ಅವನಾಯ್ತೋ ಅವನ ಕೆಲಸವಾಯ್ತೋ ಇದ್ದುಬಿಡುವ. ತೋಟತುಡಿಕೆ-ಹೊಲ-ಗದ್ದೆಗಳಲ್ಲಿ ಕೃಷಿ ಕೆಲಸವನ್ನು ಮಾಡಿಕೊಳ್ಳುತ್ತಾ ಆ ಕಾಲದ ಮೆಟ್ರಿಕ್ ಮುಗಿಸಿದ್ದ. ಹೊತ್ತಲ್ಲೇ ಎದ್ದು, ಬೆಳಗಿನ ಶೌಚವಿಧಿಗಳನ್ನು ತೀರಿಸಿಕೊಂಡು, ಗಂಟೆ ಅಲ್ಲಾಡಿಸಿ-ದೇವರಿಗೆ ನೀರುಹಾಕಿ ೭ ಗಂಟೆಯಹೊತ್ತಿಗೆ ಆರತಿ ಬೆಳಗಿಬಿಟ್ಟರೆ, ಆಮೇಲೆ ಒಂದಷ್ಟು ತಿಂಡಿತಿಂದು, ಕವಳ[ಎಲೆಯಡಿಕೆ]ಹಾಕಿಕೊಂಡು ತೋಟದ ಕಡೆಗೆ ಹೋಗಿಬಿಡುತ್ತಿದ್ದ. ಕತ್ತೆ ಗೆಯ್ದಹಾಗೇ ಗೆಯ್ಯುತ್ತಿದ್ದ ರಾಘುವಿಗೆ ಸದಾ ಹರೆಯದ ಕುದುರೆಯ ಹುಮ್ಮಸ್ಸು. ಜೇನು ಸಾಕುತ್ತಿದ್ದ, ದನ-ಕರುಗಳನ್ನು ಸಾಕಿಕೊಂಡಿದ್ದ, ಹಿತ್ತಲಲ್ಲಿ ತರಕಾರೀ ಬೆಳೆಯಿಸುತ್ತಿದ್ದ, ಅಂಗಳದ ಸುತ್ತ ತರಾವರಿ ಹೂ ಗಿಡಗಳಿದ್ದವು, ತೋಟದಲ್ಲಿ ಹಲಸು-ಮಾವು-ಜಂಬುನೇರಳೆ-ಬಾಳೆ-ಚಿಕ್ಕು-ಅನಾನಸು ಇತ್ಯೇತ್ಯಾದಿ ಅಂಗೋಡಂಗ ಫಲಗಳನ್ನು ನೀಡುವ ಗಿಡಮರಗಳನ್ನೂ ಬೆಳೆಯಿಸಿದ್ದ. ಜೀವನದಲ್ಲಿ ಅದೆಂದೂ ಜಾರದ ರಾಘುವಿಗೆ, ಹರೆಯದ ಕನಸುಗಳು ಅಷ್ಟಕ್ಕಷ್ಟೇ ಆದರೂ ಈಗೀಗ ಕೆಲವೊಮ್ಮೆ ಅದ್ಯಾಕೋ ಕೆಲವು ವ್ಯಕ್ತಿಗಳನ್ನು ಗಮನಿಸುವಾಗ ಕುತೂಹಲ ಹುಟ್ಟಿಕೊಳ್ಳುತ್ತಿತ್ತು. ತನ್ನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಸಿಗದ ಉತ್ತರಗಳ ಬೆನ್ನು ಹತ್ತಿಯೇ ಇದ್ದ ರಾಘುವಿಗೆ ಕೆಲವು ಘಟನೆಗಳು ವಿಷಯಗಳನ್ನು ಇನ್ನೂ ಕಗ್ಗಂಟಾದಂತೇ ಗೂಢವಾಗಿಸಿಬಿಡುತ್ತಿದ್ದವು.

ಹಿಂಬದಿ ಮನೆಯಲ್ಲಿ ಯೋಗಸನ್ಯಾಸಿಯೊಬ್ಬರ ಆಗಮನವಾಗಿ, ಊರ ಜನರೆಲ್ಲಾ ಅಲ್ಲಿ ಪಾದಪೂಜೆ-ಭಿಕ್ಷೆಗೆ ನೆರೆದಿದ್ದರು. ಅತೀವ ಪುಣ್ಯಕಾರ್ಯವೆನಿಸಿದ ಅಲ್ಲಿ ಯಾವುದೋ ಹವನವೂ ನಡೆದಿತ್ತು. ಏನನ್ನೋ ತರಬೇಕಾಗಿ ಬಂದು, ರಾಘು ಆ ಮಧ್ಯಾಹ್ನದ ಸಮಯಕ್ಕೆ ಪಕ್ಕದ ಮನೆಯ ಒಳಗಡೆ ಧಾವಿಸಿದ; ಊರಲ್ಲಿ ಅಕ್ಕ-ಪಕ್ಕದ ಮನೆಯ ಸಲುಗೆಯ ರಿವಾಜು ಅದು. "ಹೋಯ್ ಯಾರಿದ್ದೀರ್ರೋ ಮನೇಲಿ?" ಉತ್ತರ ಬರಲಿಲ್ಲ. ಜಗುಲಿಯಲ್ಲಿ ನೆಲ ಒರೆಸುವ ಬಟ್ಟೆ ಬಿದ್ದಿತ್ತು, ಅಗಲದ ಪಾತ್ರೆಯಲ್ಲಿ ನೀರಿತ್ತು. ಆದರೆ ಯಾರೂ ಇದ್ದಹಾಗೇ ತೋರಲಿಲ್ಲ. ಮನೆಯ ಬಾಗಿಲು ಹಾಕದೇ ಎಲ್ಲಾ ಹಿಂಬದಿಯ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾರೆಯೇ? ಎಂದುಕೊಂಡ. ಒಂದು ನಿಮಿಷ ಮೌನವಾಗಿ ನಿಂತ. ಒಳಕೋಣೆಯಲ್ಲೆಲ್ಲೋ ಕಿಂಕಿಣಿ ಕಿಣಿಕಿಣಿ ಬಳೆಗಳ ಸದ್ದಾದ ಹಾಗಾಯ್ತು! "ಯಾರಿದ್ದೀರ್ರೋ ಮನೇಲಿ?"-ಮತ್ತೆ ಕೇಳುತ್ತಾ ಒಳಕೋಣೆಗೆ ಸಮೀಪಿಸಿದ. ಮಾದೇವಿ ದಡಕ್ಕನೆ ಹೊರಬಂದುಬಿಟ್ಟಳು. ಹೊರನಡೆದವಳೇ ಅಂಗಳದೆಡೆಗೆ ಹೋಗಿ ಪಾತ್ರೆ-ಬಟ್ಟೆಯನ್ನು ಅಲ್ಲೇ ಬಿಟ್ಟು ಕ್ಷಣಾರ್ಧದಲ್ಲಿ ಇನ್ನೆಲ್ಲೋ ಕಾಣದಾದಳು. ಕುತೂಹಲ ಜಾಸ್ತಿಯಾಗಿ ರಾಘು ಆ ಮನೆಯ ಒಳಕೋಣೆಯ ದೀಪವನ್ನು ಹತ್ತಿಸಲು ಗುಂಡಿ ಅದುಮಿದ. ಮೂಲೆಯಲ್ಲಿ ನೆಟ್ಟಗೆ ನಿಲ್ಲಿಸಿದ ತಿಝೋರಿಯ ಸಂದಿನಲ್ಲಿ ಯಾರೋ ಅಡಗಿ ನಿಂತಿರುವ ಹಾಗಿತ್ತು. ಯಾರೂ ಮಾತನಾಡಲಿಲ್ಲ. ರಾಘುವೂ ಕಂಡೂ ಕಾಣದಂತೇ ಸುಮ್ಮನಿದ್ದ. ಅಲ್ಲಿ ಹಾಗೆ ನಿಂತುಕೊಂಡಿದ್ದು ಮೂರ್ತಿ ಎಂಬುದು ಗೊತ್ತಾಯ್ತು. ಅವನೇನು ಮಾಡುತ್ತಿದ್ದ? ಓ ಮಾದೇವಿಗೆ ಮತ್ತೆ ಹೊಟ್ಟೆನೋವು ಜೋರಾಗಿ ಬಂದಿರಬೇಕು. ಪಾಪ ಹೊಟ್ಟೆ ನೀವಿಕೊಡುತ್ತಿದ್ದನೋ ಏನೋ. ತಾನು ಕರೆದಿದ್ದರಿಂದ ಅವಮಾನವಾದಂತಾಗಿ ಇಬ್ಬರೂ ಹೀಗೆ ತಮ್ಮ ತಮ್ಮ ಪಾಡಿಗೆ ಸುಮ್ಮನಾಗಿರಬೇಕು ಎಂದುಕೊಂಡ.

ಮುಂಜು ಮತ್ತು ಮೂರ್ತಿ ಅಣ್ಣ-ತಮ್ಮ. ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಹಾಯಾಗಿದ್ದವರು. ಇಬ್ಬರೂ ಚಟಸಾಮ್ರಾಟರು; ತೋರಿಕೆಗೆ ಪೂಜೆ-ಪುನಸ್ಕಾರ-ದೇವಸ್ಥಾನದಲ್ಲಿ ಉತ್ಸವಗಳನ್ನು ನಡೆಸುವುದಕ್ಕೆ ವರ್ಗಿಣಿ ವಗೈರೆಗೆ ಮುಂದಾಳ್ತನ, ರಾಜಕೀಯ ಪುಢಾರಿಗಳು, ಮರಿಪುಢಾರಿಗಳು ಎಲ್ಲರ ಜೊತೆಗೂ ಒಂದಷ್ಟು ಓಡಾಟ, ಊರಲ್ಲಿ ನಡೆಯುವ ನಾಟಕ, ಕೀರ್ತನೆ ಇತ್ಯಾದಿಗಳಲ್ಲಿ ಸಭೆಯಲ್ಲಿ ಎದ್ದುಕಾಣುವಂತೇ ಓಡಾಟ-ಇವೆಲ್ಲಾ ಇದ್ದಿದ್ದೇ. ತಮ್ಮ ಎದುರಿಗೆ ಬರುವ ಸುಂದರ ಸ್ತ್ರೀಯರನ್ನು ಅಕ್ಕ-ತಂಗಿ-ತಾಯಿಯರಂತೇ ಕಾಣುವುದು ಅವರಿಂದ ಸಾಧ್ಯವೇ ಇರಲಿಲ್ಲ; ಆದಷ್ಟೂ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಉಂಡುಮುಗಿಸುವ ಮಹಾನ್ ಚಪಲಚೆನ್ನಿಗರು ಮಂಜು-ಮೂರ್ತಿ ಎಂಬ ಅಣ್ಣ-ತಮ್ಮ. ವಯಸ್ಸು ಸಣ್ಣದಿದ್ದದ್ದರಿಂದ, ರಾಘುವಿಗೆ ಇದನ್ನೆಲ್ಲಾ ಮನೆಯ ಹಿರಿಯರು ಯಾರೂ ಬಿಡಿಸಿ ಹೇಳಲಾರದವರಾಗಿದ್ದರು. ಹೀಗಾಗಿ ರಾಘುವಿನ ದೃಷ್ಟಿಯಲ್ಲಿ ಅವರೂ ಒಳ್ಳೆಯವರೇ, ಮಾದೇವಿಯೂ ಕೂಡ. ಮಾದೇವಿಯೂ ಅವಳ ಗಂಡನೂ ಕರ್ರಗಿದ್ದರೂ, ಇಬ್ಬರು ಗಂಡುಮಕ್ಕಳು ಬೆಳ್ಳಗಾದರು ಹೇಗೆ?- ಎಂಬ ವಿಜ್ಞಾನಿಕ ಸಮಸ್ಯೆ ರಾಘುವನ್ನು ಹಲವುದಿನಗಳತನಕ ಬಾಧಿಸುತ್ತಲೇ ಬಂದಿತ್ತು ಬಿಡಿ.  ಉತ್ತರ ಸಿಗದ ಪ್ರಶ್ನೆಗಳನ್ನು ಹಿರಿಯರಲ್ಲಿ ಕೇಳಲೂ ಹೇಳಲೂ ರಾಘುವಿಗೆ ಮಾತ್ರ ಸಾಧ್ಯವಾಗಲಿಲ್ಲ. ತೀರಾ ಅಂಥಾ ವಿಷಯಗಳನ್ನು ಅರಿತ ಸ್ನೇಹಿತರೂ ಇರಲಿಲ್ಲ.  

ಊರಲ್ಲಿ ನಡೆಯುವ ಮದುವೆ ಮನೆಯೊಂದರ ಕಾಳು-ಕಡಿ ಕೇರಿ, ಹಸನುಮಾಡಿಕೊಡಲು ಬಂದವಳೇ ಮಾದೇವಿಯ ಮಗಳು-ಶ್ರೀದೇವಿ. ಒಳ್ಳೇ ಒಯ್ಯಾರಿ! ಕಪ್ಪಗಿದ್ದರೂ ಆಕೆಯೂ ತಾಯಿಯ ಹಾಗೇ ಲಕ್ಷಣವಾಗಿದ್ದಳು. ಅವಳಿಗೂ ಹೆಚ್ಚು-ಕಮ್ಮಿ ೧೬ರ ಹರೆಯ. ಶೋಡಷಿಯಾದ ಅವಳನ್ನು ಮಾದೇವಿ ಆಗಾಗ ಅಲ್ಲಲ್ಲಿಗೆ ಅದೂ ಇದೂ ಕೆಲಸಕ್ಕೆ ಕಳುಹಿಸುತ್ತಿದ್ದಳು. ಕೆಲಸಕ್ಕೆ ಕಳುಹಿಸಬೇಕಾದ ದರ್ದೇನೂ ಇರಲಿಲ್ಲ. ಆದರೂ ’ಜನರ ಪರಿಚಯವಾಗಲಿ’ ಎಂದು ಹಾಗೆ ಮಾಡುತ್ತಿದ್ದಳೋ ಏನೋ. ಮದುವೆ ಮನೆಯ ಕೆಲಸಕ್ಕೆ ಬಂದ ಶ್ರೀದೇವಿ ಕುಳಿತಲ್ಲೇ ಆಗಾಗ ನಿದ್ದೆ ಮಾಡಿಬಿಡುತ್ತಿದ್ದಳು. ಧಸೋ ಭುಸೋ ಶ್ವಾಸ ತೆಗೆಯುತ್ತಿದ್ದಳು. ಒಂದು ದಿನ ಹೀಗಾದರೆ ಸರಿ, ಆದರೆ ಹಾಗಾಗಲಿಲ್ಲ. ನಾಲ್ಕೈದು ದಿನ ಕಳೆದರೂ ಆಕೆಯ ನಡಾವಳಿ ಅದೇ ರೀತಿ ಇತ್ತು. ಬಹಳ ಆಯಾಸಗೊಂಡಂತೇ ತೋರುತ್ತಿದ್ದಳು. ಆ ಮನೆಯ ಹೆಂಗಸರು ಅನುಮಾನಪಟ್ಟರು. ಆಕೆಯ ಹೊಟ್ಟೆಯ ಕಡೆಗೆ ಗಮನಕೊಟ್ಟರು! ಹಾಂ.. ಆಕೆಗೆ ಹೊಟ್ಟೆಬಂದಿತ್ತು. ಆಕೆ ಸುಮಾರು ಮೂರು ತಿಂಗಳು ಬಸುರಿ ಎಂಬುದು ಪಕ್ಕಾ ಆದಮೇಲೆ ವಿಷಯವನ್ನು ಸೂಕ್ಷ್ಮವಾಗಿ ಮನೆಯ ಗಂಡಸರ ಕಿವಿಗೆ ಹಾಕಿದರು. ಯಾರಿಗೂ ಗೊತ್ತಾಗದ ಹಾಗೇ ಮಾದೇವಿಯನ್ನು ಕರೆಸಿ "ವಿಷಯ ಸ್ವಲ್ಪ ಗಂಭೀರದೆ, ಹೊಡ್ದು ಬಡ್ದು ಮಾಡ್ಬೇಡ, ಹಾಂಗೇನಾರು ಮಾಡೀರೆ ಮಗಳು ಸತ್ತೋಯ್ತದೆ" ಎಂದು ತಿಳಿಸಿ, "ಮಾಡ್ದೋರು ಯಾರು ಎಂದು ಪ್ರೀತಿಯಿಂದ್ಲೇ ಕೇಳು?" ಎಂದೂ ಹೇಳಿಕಳಿಸಿದರು. 

ಮಾದೇವಿ ಯಾವಾಗ ಹೇಗೆ ಕೇಳಿದಳೋ ತಿಳೀದು, ಅಂತೂ ವಿಷಯಕ್ಕೆ ಕಾರಣೀಭೂತರಾದವರು ಯಾರು ಎಂಬುದನ್ನು ಆಕೆ ತಿಳಿದುಕೊಂಡಳು. ಹರೆಯದ ಹುಡುಗರು ಹಲವರಿರುವುದರಿಂದ ಆಪಾದನೆ ಯಾರಮೇಲೂ ಬರುವ ಸಾಧ್ಯತೆಯಿತ್ತು. ಇಷ್ಟರಲ್ಲೇ ಇಂಥಾ ವಿಷಯಗಳನ್ನು ಕೆಲವು ಪರ್ಸಂಟೇಜು ರಾಘು ತಿಳಿದುಕೊಂಡಿದ್ದ. ವಾರದೊಳಗೆ ಇತ್ಯರ್ಥಮಾಡದಿದ್ದರೆ ಪಾಪದವರೂ ಅಪರಾಧವನ್ನು ಹೊತ್ತುಕೊಳ್ಳಬೇಕಾದ ಸಮಸ್ಯೆ ಎದುರಾಗುತ್ತಿತ್ತು. ಊರಲ್ಲಿ ತನ್ನತನವನ್ನು ಕಳೆದುಕೊಳ್ಳದ ಆಚಾರವಂತ ಹಿರಿಯರೊಬ್ಬರಿದ್ದರು. ಅವರ ಮುಂದಾಳತ್ವದಲ್ಲಿ ಒಂದು ನಿಗೂಢ ಜಾಗಕ್ಕೆ ಅಮ್ಮಣ್ಣನಿಗೆ ಬರಹೇಳಲಾಯ್ತು! ಅಮ್ಮಣ್ಣ ರಾಘುವಿನ ಹಿಂಬದಿ ಮನೆಯ ವ್ಯಕ್ತಿ, ಅಜಮಾಸು ೩೫ ವಯಸ್ಸು. ಅಲ್ಲಲ್ಲಿ ತಿರುಗಾಡಿಕೊಂಡಿದ್ದ ಶ್ರೀದೇವಿಯನ್ನು ಅದ್ಯಾವಾಗ ಕಂಡನೋ ತಿಳೀದು. ಮಂಜು-ಮೂರ್ತಿಗಿಂತಾ ಒಂದು ಕೈ ಮೇಲೆಂಬಂತಿದ್ದ ಅಮ್ಮಣ್ಣ ಹೇಗೋಮಾಡಿ ಶ್ರೀದೇವಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ’ತಾಯಂತೇ ಕರು ನಾಯಂತೇ ಬಾಲ’ ಎಂಬೋ ಗಾದೆಯಂತೇ, ಷೋಡಶಿಯಾದ ಶ್ರೀದೇವಿಗೆ ಜಗವೆಲ್ಲಾ ಸುಂದರವಾಗಿ ಕಂಡಿತ್ತು. ಅಮ್ಮಣ್ಣನ ಒಲವಿನ ಕರೆಗೆ ಆಕೆ ತುಂಟ ನಗು ಬೀರಿದಳು. ಊರಹೊರಗಿನ ಬೆಟ್ಟದಲ್ಲಿ ಮುಸ್ಸಂಜೆಯ ಹೊತ್ತಲ್ಲಿ ಪರಸ್ಪರ ಭೇಟಿಯಾಗುವಂತೇ ಅಮ್ಮಣ್ಣ-ಶ್ರೀದೇವಿ ಮಾತನಾಡಿಕೊಂಡಿದ್ದರು. ಮೊದಲದಿನವೇ ಒಂದಾಗಿ ಸುಖಿಸಿದ ಆ ಕ್ಷಣಗಳು ಶ್ರೀದೇವಿಗೆ ಅಮಿತಾನಂದವನ್ನುಂಟುಮಾಡಿ ಅಮ್ಮಣ್ಣ-ಶ್ರೀದೇವಿಯರ ಕಾಮಕೇಳಿ ತಿಂಗಳುಗಟ್ಟಲೆ ಹಾಗೇ ಮುನ್ನಡೆದಿತ್ತು. ಅಮ್ಮಣ್ಣನ ’ವರಪ್ರಸಾದ’ದಿಂದ ಶ್ರೀದೇವಿ ಗರ್ಭಧರಿಸಿದ್ದಳು.

ಅಮ್ಮಣ್ಣನಿಗೆ ಛೀಮಾರಿ ಹಾಕಿಬಿಟ್ಟರೆ ಆತ ಕೈಕೊಸರಿ ಓಡಿಹೋಗಿ ಊರುಬಿಟ್ಟಾನು ಎಂಬುದು ಆಚಾರವಂತ ಹಿರಿಯರ ಅನಿಸಿಕೆಯಾಗಿತ್ತು. ಅವರು ವಿಷಯವನ್ನು ಬೆಣ್ಣೆಯಮೇಲಿನ ಕೂದಲೆಳೆ ಎತ್ತಿದಂತೇ ಬಹಳ ಮುತ್ಸದ್ಧಿತನದಿಂದ ನಿರ್ವಹಿಸಿದರು. ಶ್ರೀದೇವಿಗೆ ಇನ್ನೂ ಮದುವೆಯಿಲ್ಲದ್ದರಿಂದ ಆಕೆಗೆ ಮಗುವಾಗುವುದು ಬೇಡವಾಗಿತ್ತು. ಅಮ್ಮಣ್ಣನಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದರಿಂದ, ಶ್ರೀದೇವಿಯನ್ನೂ ಮದುವೆಯಾಗೆಂದರೆ ಆತನ ಸಂಸಾರ ಒಡೆದುಹೋಗುವ ಸಂಭವನೀಯತೆ ಇತ್ತು. ತಪ್ಪು ಮೊದಲಾಗಿ ಅಮ್ಮಣ್ಣನದು, ತಾಳಕ್ಕೆ ತಾಳ ತಟ್ಟಿದ ತಪ್ಪು ಶ್ರೀದೇವಿಯದು. ಒಂದಷ್ಟು ಹಣ ಕೊಟ್ಟು ಅವಳ ಹೊಟ್ಟೆಯೊಳಗಿನ ಬೇಡದ ಕೂಸನ್ನು ತೆಗೆಸಿಬಿಡಬೇಕೆಂದು ಮಾದೇವಿ ಒತ್ತಾಯಿಸಿದಳು. ಗತ್ಯಂತರವಿಲ್ಲದೇ ಹಿರಿಯರು ಅದನ್ನೇ ನಿರ್ಣಯಿಸಿ ಅಮ್ಮಣ್ಣನಿಂದ ಎಂಟ್ಹತ್ತು ಸಾವಿರ ಹಣ ಕೊಡಿಸಿದರು. ರಾಘುವಿನ ಮನೆಯ ಹಿರಿಯರೇ ಪಂಚಾಯ್ತಿ ನಡೆಸಿದ್ದರಿಂದ ರಾಘುವಿಗೆ ವಿಷಯ ಗುಟ್ಟಾಗಿ ತಿಳಿದುಹೋಯ್ತು. ವಾರದ ನಂತರ ರಾಘುವಿಗೆ ಯಾರೋ ಹೇಳಿದ್ದು: ಶ್ರೀದೇವಿಯನ್ನು ಭಟ್ಕಳದ ಆಸ್ಪತ್ರೆಗೆ ಕರ್ಕೊಂಡು ಹೋಗಿ ಜಾಂಡೀಸಿಗೆ ಚಿಕಿತ್ಸೆ ನೀಡಿಸಿದರಂತೆ ಎಂದು! ರಾಘು ಒಳಗೊಳಗೇ ನಕ್ಕ. ಆಸ್ಪತ್ರೆಗೆ ಹೋಗಿಬಂದಮೇಲೆ ತಿಂಗಳುಗಟ್ಟಲೆ ಸಮಯ ಕಳೆದರೂ ಜಾಂಡೀಸು ಪೂರ್ತಿ ವಾಸಿಯಾಗಿಲ್ಲವೆಂಬ ಸುದ್ದಿಯನ್ನು ಹಬ್ಬಿಸಿದ್ದರು. ಜಾಂಡೀಸು ವಾಸಿಯಾಗಿ ತಿರುಗಾಡಲು ಆರಂಭಿಸಿದ ಶ್ರೀದೇವಿಯ ಮುಖದಲ್ಲಿ ಮೊದಲಿನ ಕಳೆ ಇರಲಿಲ್ಲ; ಹಿಂಡಿದ ಕಬ್ಬಿನ ಜಲ್ಲೆಯಂತೇ ಕಾಣುತ್ತಿದ್ದಳು ಪಾಪ. ಭಟ್ಕಳ ಆಸ್ಪತ್ರೆಯೊಂದರ ಸಮೀಪದಲ್ಲೇ ಹಲವು ಭ್ರೂಣಗಳು ಪತ್ತೆಯಾಗಿವೆ ಎಂಬುದು ಪತ್ರಿಕೆಗಳಿಗೆ ತಲುಪಿ ವರದಿಯಾಗಲು ವಾರದ ಕಾಲ ತಗಲಿತು; ಆಸ್ಪತ್ರೆಗೂ ಆ ಭ್ರೂಣಗಳಿಗೂ ಸಂಬಂಧವಿಲ್ಲವೆಂದು ಆಸ್ಪತ್ರೆಯವರು ಹೇಳಿಕೆ ನೀಡಿಬಿಟ್ಟಿದ್ದರು!  ಅಮ್ಮಣ್ಣ-ಶ್ರೀದೇವಿ ಮತ್ತೆಂದೂ ಎದುರಾದ ಸುದ್ದಿ ಯಾರಿಗೂ ತಿಳಿಯಲಿಲ್ಲ; ಬಹುಶಃ ಆಗಲಿಲ್ಲ! ಎದುರಾದರೂ ಹಾವು-ಮುಂಗಿಸಿಯಂತೇ ಆದರೆ ತಪ್ಪಿಲ್ಲ.  

ಇಷ್ಟಾದರೂ ಮಾದೇವಿಗೆ ’ಹೊಟ್ಟೆಶೂಲೆ’ ಬರುವುದು ನಿಲ್ಲಲೇ ಇಲ್ಲ! ರಾಘುವಿನ ಮನೆಯ ಬಚ್ಚಲುಮನೆ ವಾಸದಮನೆಯ ಹೊರವಲಯದಲ್ಲಿ ಅನತಿ ದೂರದಲ್ಲಿತ್ತು; ಆಗೆಲ್ಲಾ ಮಡಿಯ ಸಂಪ್ರದಾಯದ ಕಾಲವಪ್ಪ ಆದಕ್ಕೇ ಹಾಗೆ. ತೋಟದ ಕಡೆಯಿಂದ ಹಾದುಬರುತ್ತಿದ್ದ ರಾಘುವಿಗೆ ಬೀಗವಿಲ್ಲದ ಬಚ್ಚಲುಮನೆಯಲ್ಲಿ ಒಂದು ಮಧ್ಯಾಹ್ನ ಏನೋ ಸದ್ದು ಕೇಳಿಸಿತು. ಕಿಡಕಿಯಲ್ಲಿ ಹಣಿಕಿ ನೋಡಿದಾಗ ನಾಲ್ಕು ಕಾಲುಗಳು ಪರಸ್ಪರ ಹಾವುಗಳಂತೇ ಉಜ್ಜಿಕೊಳ್ಳುತ್ತಿದ್ದವು. ಅರ್ಧಗಂಟೆಯಕಾಲ ಮರೆಯಲ್ಲೇ ನಿಂತು ಯಾರು ಹೊರಬರುತ್ತಾರೆಂದು ನಿರೀಕ್ಷಿಸಿದ ರಾಘುವಿನ ತಲೆಯಲ್ಲಿ, ಹಿಂದೆಂದೋ ಹುಟ್ಟಿದ್ದ ಹಲ್ಲಿರೋಗಕ್ಕೆ ಈಗ ಔಷಧ ದೊರೆತಿತ್ತು: ಮಂಜು-ಮಾದೇವಿಯರು ನಗುತ್ತಾ ಹೊರಬಂದು ಏನೂ ಅರಿಯದವರಂತೇ ತಂತಮ್ಮ ದಾರಿ ಹಿಡಿದುಬಿಟ್ಟರು! ಬಂಗಾರದ ಬಳೆಗಳು ಮಣ್ಣ ಬಳೆಗಳ ಜೊತೆಗೆ ಸೇರಿ ಹೊರಡಿಸುವ ’ಕಿಂಕಿಣಿ ಕಿಣಿ ಕಿಣಿ’ಸದ್ದು ಮಾದೇವಿ ನಡೆಯುವಾಗ ಕೇಳಿಸುತ್ತಲೇ ಇತ್ತು.  

ರಾಘು ಈಗಲೂ ಇದ್ದಾನೆ. ಊರೊಟ್ಟಿನ ಕಥೆ ಕೇಳುತ್ತಾ ಗಪ್ಪಹೊಡೆಯಬೇಕು ಅಂದ್ರೆ ರಾಘುವೊಬ್ಬ ಕಥಾಸರಿತ್ಸಾಗರವಾಗುತ್ತಾನೆ; ಅವನ ಮನದಲ್ಲಿ ಆ ದಿನಗಳ ಘಟನೆಗಳು ನಿನ್ನೆ-ಮೊನ್ನೆ ನಡೆದಂತೇ ಹಸಿಹಸಿಯಾಗಿವೆಯಂತೆ. ಮಂಜು, ಇಡೀ ಮೈಕೈ ತುರಿಕಜ್ಜಿಯನ್ನು ತುರಿಸಿಕೊಳ್ಳುತ್ತಾ ಹುಣಿಸೇ ಮುಪ್ಪಾದರೂ ಹುಳಿಮುಪ್ಪೇ ಅನ್ನೋ ಸ್ಥಿತಿಯಲ್ಲಿದ್ದಾನಂತೆ. ಮೂರ್ತಿಗೆ ಯಾವ್ಯಾವುದೋ ಕಾಯಿಲೆ ಬಂದು ಶಸ್ತ್ರಚಿಕಿತ್ಸೆಗಳಾಗಿವೆ. ಹೇರಳವಾಗಿ ಕಾಂಚಾಣ-ಆಭರಣ ಗಳಿಸಿದ್ದ ಮಾದೇವಿಗೆ ಮುಖ ಸುಕ್ಕುಗಟ್ಟಿದೆಯಂತೆ, ಜೊತೆಗೆ ಬಿಳಿತೊನ್ನು ಬಂದಿದ್ದರಿಂದ ಆಕೆಯನ್ನು, ಒಂದುಕಾಲಕ್ಕೆ ಎಲ್ಲಿದ್ದರೂ ಹುಡುಕಿ ಬೆನ್ನಟ್ಟಿ ತೆವಲು ತೀರಿಸಿಕೊಳ್ಳುತ್ತಿದ್ದ ಮಂಜು-ಸುಬ್ರಾಯ ಮೊದಲಾದ ಯಾವ ಗಂಡುಗೂಳಿಗಳೂ ತಿರುಗಿಕೂಡ ನೋಡುತ್ತಿಲ್ಲವಂತೆ! ಹರನಮೂಲೆ ಜಟ್ಗನ ವಾರ್ಷಿಕ ಪೂಜೆಯ ದಿನ, ಬಂಗಾರಿವೈದ್ಯನ ಮೈಮೇಲೆ ಬಂದ ಜಟ್ಗನಲ್ಲಿ, "ಕಾಯಿಲೆ ಜಲ್ದಿ ಗುಣಾಮಾಡ್ಕೊಡಪ್ಪಾ ನನ್ನೊಡ್ಯನೇ, ಸೀಂಯಾಳ-ಬಾಳೇಕೊನೆ ಒಪ್ಪಿಸ್ತೇನೆ, ಬೆಳ್ಳಿಯ ಮುಖವಾಡ ಹಾಕಿಕೊಡ್ತೇನೆ" ಎಂದು ಕುಲದಬುಡದಲ್ಲಿ ಹರಕೆ ಹೇಳ್ಕೊಂಡು ಪ್ರಾರ್ಥಿಸಲು ಬಂದಿದ್ದಳಂತೆ ಮಾದೇವಿ. "ಅಂದಹಾಗೇ, ಎರಡ್ವರ್ಷ ಆಯ್ತು-ಅವರೀಗ ಈ ಊರಲ್ಲಿಲ್ಲ. ಇಲ್ಲಿದ್ದ ಆಸ್ತಿ-ಮೆನೆನೆಲ್ಲಾ ಅವರ ದಾಯಾದ್ರಿಗೆ ಮಾರಿಬುಟ್ರು. ಈಗ ಅಲ್ಲೆಲ್ಲೋ ಉತ್ತರಕೊಪ್ಪದ ಕಡೆ ಜಮೀನುಮಾಡಿದ್ದಾರಂತೆ, ಗಂಡುಮಕ್ಕಳು ಓದಿಕೊಂಡಿದ್ರಪ್ಪ, ಈಗ ಅವಳಿಗೆ ಅವರೇ ಅನ್ನಹಾಕುತ್ತಿರಬೇಕು. ಶ್ರೀದೇವಿಯ ವಿಷಯ ತಿಳೀದು. ಆಕೆಯನ್ನು ಅದಾರಿಗೋ ಮದುವೆಮಾಡಿ ಕೊಟ್ಟಿದ್ದಷ್ಟೇ ಗೊತ್ತು" ಎಂದ ರಾಘು. ಊರಹೊರಗಿನ ಬೇಲಿಗುಂಟ ಅರ್ಧ ಫರ್ಲಾಂಗು ನಡೆದು, ತೊಪ್ಪಲಕೇರಿಯಲ್ಲಿ ಪಾಗಾರದ  ದಣಪೆದಾಟಿ ಮುಂದೆ ನಡೆದರೆ, ಅಗೋ ನೋಡಿ-ಅಲ್ಲಿ ಆ ಬಾಗಿನಿಂತ ಕರೆಂಟ್ ಕಂಬದ ಹತ್ತಿರ ಕಾಣ್ತದಲ್ಲಾ-ಅದೇ ಮೂರನೇ ಮನೆಯಲ್ಲೇ ರಾಘು ಇರುವುದು. ನೀವೂ ಬೇಕಾದರೆ ಹೋಗಿ ಕಥೆ ಕೇಳಿ, ಆಗದೇ?