---------------------------------------------------------------------------------------
[ನಿವೇದನೆ: ೧. ಇದು ತುಸು ಪೀತ ಅಂಶಗಳನ್ನೊಳಗೊಂಡ ಸಾಮಾಜಿಕ ಕಥೆ. ಕಥಾ ರಸಿಕರಿಗಾಗಿ ವಿಶೇಷವಾಗಿ ಕೊಡಮಾಡಿದ ನೈಜ ಘಟನೆಗಳನ್ನಾಧರಿಸಿದ ಕಥೆ. ಕಥೆಯ ಮುಕ್ತಾಯದಲ್ಲಿ ಸಂದೇಶವಿರುವುದನ್ನೂ ಗಮನಿಸಲು ಮರೆಯಬಾರದು. ಹಿಡಿಸುವವರೂ, ಸಹಿಸದವರೂ ಬೇಸರಿಸದೇ ಓದಕೊಳ್ಳಬೇಕಾಗಿ ವಿನಂತಿ.
೨. ಕಳೆದವಾರ ರೆಡ್ಡಿ ಲ್ಯಾಬೋರೇಟರೀಸ್ ಲಿಮಿಟೆಡ್ ಸ್ಥಾಪಕರಾದ ಡಾ| ಆಂಜಿ ರೆಡ್ಡಿಯವರು ಮತ್ತು ಬ್ರಹ್ಮಶ್ರೀ ಕಟ್ಟೆ ಪರಮೇಶ್ವರ ಭಟ್ಟರು ನಿಧನರಾಗಿದ್ದಾರೆ. ಇಬ್ಬರೂ ಅವರವರ ರಂಗಗಳಲ್ಲಿ ಮೇರುಸದೃಶ ವ್ಯಕ್ತಿಗಳು. ಅವರ ಆತ್ಮಗಳು ಚಿರಶಾಂತಿಯನ್ನನುಭವಿಸಲಿ ಎಂಬುದರ ಜೊತೆಗೆ ಕೆಲವೇ ದಿನಗಳಲ್ಲಿ ಇಬ್ಬರ ಕುರಿತೂ ಬರೆಯುತ್ತೇನೆ ಎಂದು ಮುಂಗಡ ತಿಳಿಸಿಬಿಡುತ್ತಿದ್ದೇನೆ.
ಇಷ್ಟಪಟ್ಟು ಓದುವವರಿಗೆ ಇಂದು ’ಕಥೆ’ಯೊಂದನ್ನು ಹೇಳಲಿದ್ದೇನೆ, ಹೀಗೆ ದಯಮಾಡಿಸಿ: ]
___________________________________________________________________________________________
ಸರಕ್ಕನೆ ಏನೋ ಹಾವುಗಳು ಸರಿದಾಡಿದಂತೇ ಸದ್ದಾಗಿದ್ದಕ್ಕೆ ರಾಘು ಕಂಗಾಲಾಗಿಬಿಟ್ಟ. ಡವಗುಟ್ಟುವ ಎದೆಯಮೇಲೆ ಕೈಯಿಟ್ಟುಕೊಂಡು, ದನದ ಕೊಟ್ಟಿಗೆಯ ಹಿಂದೆ ಜಮಾಯಿಸಿದ್ದ ಹಸಿರು ಸೊಪ್ಪಿನ ಹೊರೆಗಳ ನಡುವೆ ಮತ್ತೊಮ್ಮೆ ದೂರದಿಂದ ಕಣ್ಣು ಹಾಯಿಸುವ ಹೊತ್ತಿಗೆ ಯಾವುದೋ ಒಂದು ವ್ಯಕ್ತಿ ಎದ್ದು ಓಡಿತ್ತು! ಆದರೂ ಸೊಪ್ಪಿನ ಹೊರೆಗಳ ನಡುವೆ ಕಿಂಕಿಣಿ ಕಿಣಿಕಿಣಿ ಬಳೆಗಳ ಸದ್ದು ಕೇಳಿಸುತ್ತಿತ್ತು; ಧೈರ್ಯಮಾಡಿ ಕೆಟ್ಟ ಕುತೂಹಲದಿಂದ ಹೋಗಿ ನೋಡುತ್ತಾನೆ, ಮಾದೇವಿ ಎತ್ತಿದ್ದ ಸೀರೆಯನ್ನು ಕೆಳಜಾರಿಸಿಕೊಳ್ಳುತ್ತಿದ್ದಳು. ರಾಘುವನ್ನು ಕಂಡೊಡನೆಯೇ "ಹೊಟ್ಟೆ ಶೂಲೆ, ಅಮ್ಮಾ ....." ಎಂದು ಹೊಟ್ಟೆಯಮೇಲೆ ಕೈಯಿಟ್ಟುಕೊಂಡು ಮಲಗಿದಲ್ಲೇ ಮುಲುಗಿದಳು. ರಾಘುಗೆ ಅರ್ಥವಾಗಲಿಲ್ಲ. ಹೊಟ್ಟೆನೋವು ಹೌದೇನೋ ಅಂದುಕೊಂಡ. "ಏನಾಯ್ತು?" ಎಂದ. "ಹೊಟ್ಟೆ ನೋವು ಬಂದದೆ ಆಗಾಗ ಹೀಂಗೇವ, ಡಾಟ್ರತ್ರ ಮದ್ದು ತಂದಿದ್ದೆ ಆದ್ರೂ ಗುಣಾ ಆಗ್ಲಿಲ್ಲ. ಇವತ್ತು ಮತ್ತಾಂಗೇ ಬರ್ಬೇಕಾ ಸಾಯ್ಲಿ" ಎಂದುತ್ತರಿಸಿದಳು. "ಮಜ್ಗಿನೀರಿಗೆ ಇಂಗು ಹಾಕಿ ಕುಡಿ. ಆರಾಮಾಯ್ತದೆ" ಎಂದ ರಾಘು ಏನೋ ಪಾಪ ಎಂದುಕೊಂಡನಾದರೂ ಯಾರೋ ಓಡಿಹೋದದ್ದು ತಲೆಯಲ್ಲಿ ಹಲ್ಲಿರೋಗ ಹುಟ್ಟುಕೊಳ್ಳುವುದಕ್ಕೆ ಕಾರಣವಾಯ್ತು!
ಮಾದೇವಿ ಎಂಬಾಕೆ ಕಪ್ಪು ಸುಂದರಿ. ೨೮ರ ಪ್ರಾಯ. ಗಂಡ ಕುಡುಕ. ಮೂವರು ಮಕ್ಕಳು; ಒಂದು ಹೆಣ್ಣು, ಎರಡು ಗಂಡು. ಗಂಡನಿಗೆ ಸುಮಾರಾಗಿ ಜಮೀನಿದ್ದರೂ ದುಡಿಯುವ ಮನಸ್ಸಿಲ್ಲ. ವ್ಯಸನಕ್ಕೆ ಬಿದ್ದಿದ್ದರಿಂದ ಅಲ್ಲಿ ಇಲ್ಲಿ ಕಾಲ ಹೋಗುತ್ತಿತ್ತು. ಮದುವೆಗೂ ಮೊದಲೇ ವ್ಯಸನಕ್ಕೆ ಬಿದ್ದಿದ್ದ ಅವನಿಗೆ ಮಾದೇವಿಯನ್ನು ಮದುವೆಮಾಡಿಕೊಟ್ಟವರು ಆಕೆಯನ್ನು ಹೆತ್ತ ಜನ. ಮಾದೇವಿ ಸಂಭಾವಿತೆ ಎಂದುಕೊಳ್ಳುವುದೇನೂ ಬೇಡ; ಮದುವೆಗೆ ಮೊದಲೇ ತವರೂರು ಗುಂಡಬಾಳದೆಡೆಗೆ ಅದ್ಯಾರದೋ ಮನೆಗೆ ಹೋಗಿತ್ತಿದ್ದಳಂತೆ. ವಯಸ್ಸಿನ ತುಡಿತಕ್ಕೆ, ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಸುಬ್ರಾಯನ ದೋಸ್ತಿ ಮಾಡಿದ್ದಳಂತೆ. ಸುಬ್ರಾಯ-ಮಾದೇವಿಯರ ದೋಸ್ತಿ ಎಷ್ಟು ಗಟ್ಟಾನುಗಟ್ಟಿ ಇತ್ತೆಂದರೆ, ಮದುವೆಯಾದ ನಂತರವೂ ಆಕೆ ತವರುಮನೆಕಡೆಗೆ ಹೋಗಿ ಸುಬ್ರಾಯನನ್ನು ಭೇಟಿಯಾಗುತ್ತಿದ್ದಳು! ಮದುವೆಯಾದ ಹೊಸದರಲ್ಲಿ ಕುಡುಕಗಂಡನಿಂದ ಹೆಣ್ಣು ಮಗುವೊಂದನ್ನು ಪಡೆದರೂ ಆಕೆಯ ಮನಸ್ಸು ಸುಬ್ರಾಯನ ದೋಸ್ತಿಗಾಗಿ ಹಾತೊರೆಯುತ್ತಿತ್ತು. ನಂತರದ ಮೂರು ವರ್ಷಗಳಲ್ಲೇ ಎರಡು ಗಂಡುಮಕ್ಕಳು ಜನಿಸಿದವು. ಈಗ ಹುಟ್ಟಿದ ಮಕ್ಕಳು ಮಾತ್ರ ಅಪ್ಪ-ಅಮ್ಮನ ರೀತಿ ಕಪ್ಪಗಿರಲಿಲ್ಲ; ಬೆಳ್ಳಬೆಳ್ಳಗೆ ಇದ್ದದ್ದರಿಂದಲೂ ಮುಖದಲ್ಲಿ ಸುಬ್ರಾಯನ ಲಕ್ಷಣ ಕಾಣುತ್ತಿದ್ದುದರಿಂದಲೂ, ಸಮಾಜದ ಜನಕ್ಕೆ ರಹಸ್ಯದ ಹಿನ್ನೆಲೆ ಅರ್ಥವಾಗಿಹೋಗಿತ್ತು! ಆದರೂ ಎದುರಾ ಎದುರೇ ಹಾಗೆ ಮಾದೇವಿಯಲ್ಲಿ ಯಾರಾದರೂ ಕೇಳಲು ಸಾಧ್ಯವೇ? ಕೇಳುವುದು ಸರಿಯೇ?
ಹಾಗಂತ ಗಂಡನೆದುರು, ಬೀಗ ಹಾಕಿಕೊಂಡ ಮಹಾಪತಿವ್ರತೆಯಂತೇ ಗೌರಮ್ಮನ ವೇಷದಲ್ಲಿರುವ ಮಾದೇವಿಗೆ, ತೆಳುನಡುವಿನ ಹೊಕ್ಕುಳ ಕೆಳಗೆ ಸೀರೆಯುಟ್ಟು ಬಳುಕುತ್ತಾ ನಡೆಯುವುದು ಗೊತ್ತಿಲ್ಲದ್ದೇನಲ್ಲ! ಸ್ನೋ, ಪೌಡರ್, ಕಾಡಿಗೆ ಅಂತ ಕನ್ನಡಿಮುಂದೆ ಕೂರದೇ ಹೊರಗಡೆ ಹೋಗುವ ಆಸಾಮಿಯಲ್ಲ! ಸರ್ವಾಭರಣ ಸುಂದರಿಯಾಗಿ ಹೊರಟರೆ, ಆಕೆಯ ಕಾಮನಬಿಲ್ಲಿನಂಥಾ ಹುಬ್ಬಿನ ಕೆಳಗಣ ಕಣ್ಣನೋಟಕ್ಕೆ ಹರೆಯದ ಗಂಡಸರೇ ತಲೆಬಾಗಿಸಿಕೊಂಡು ಕಂಡೆನೋ ಇಲ್ಲವೋ ಎಂಬಂತೇ ನಾಚಿ ನಡೆಯುವಂತಾಗುತ್ತಿತ್ತು. ಹಲವು ಗಂಡಸರ ಶೀಲವನ್ನಳಿಯುವ ಸಾಮರ್ಥ್ಯ ಆ ನೋಟಕ್ಕಿತ್ತು ಎಂಬುದನ್ನು ಬೇರೇ ಹೇಳಬೇಕಿಲ್ಲ. ಇಂಥಾ ಮಾದೇವಿಗೆ ಪರರ ಮನೆಯ ಕೆಲಸವಾದರೂ ಯಾಕೆ ಬೇಕು ಎಂದರೆ ಅದರ ಗುಟ್ಟೇ ಬೇರೆ! ಅದು ನಿಮಿತ್ತಕ್ಕೆ ಮಾತ್ರ; ಒಂದರ್ಥದಲ್ಲಿ ಅದು ಅವಳ ಮಾರ್ಕೆಟಿಂಗ್ ವೈಖರಿ! ಕೆಲಸಕ್ಕೆ ಬರುವ ಮಾದೇವಿಗೆ ಹಾದಿಯಲ್ಲಿ ಅಲ್ಲಲ್ಲಿ ಅಡ್ಡನಿಂತು ಕೆಕ್ಕರುಗಣ್ಣಿನಿಂದ ನೋಡುವ, ಕರೆಯುವ ಮಂದಿಯೂ ಇದ್ದರು. ಆದರೆ ಕಾಸಿಲ್ಲದ ಜನರಿಗೆ ಅದು ಕನಸಿನ ಗಂಟಾಗಿತ್ತು. ಬಲೆಗೆ ಬೀಳಿಸಿಕೊಳ್ಳುವ ಮಿಕವನ್ನು ನೋಡಿ, ಅದನ್ನು ಗುರಿಮಾಡಿಕೊಂಡು ನಡೆದರೆ ತಿಂಗಳೆರಡುತಿಂಗಳಲ್ಲೇ ಮಾದೇವಿಗೆ ಅದು ಕೈಗೂ ಬಾಯಿಗೂ ಬರುವ ತುತ್ತಾಗಿ ತಯಾರಾಗಿಬಿಡುತ್ತಿತ್ತು. ಮೈಗೂ ಮನಕ್ಕೂ ಸುಖನೀಡುವ ಸಿರಿವಂತ ಕುಳಗಳನ್ನೇ ಆಕೆ ಹುಡುಕುತ್ತಿದ್ದಳು. ಆದರೂ ಬಾಲ್ಯಕಾಲಸಖ ಸುಬ್ರಾಯ ಮತ್ತು ಶರೀರದಲ್ಲಿ ಕಟ್ಟುಮಸ್ತಾಗಿದ್ದ ಮಂಜು ಇಂಥವರನ್ನೆಲ್ಲಾ ಆಕೆ ವಿಶೇಷ ’ಸ್ನೇಹಿತರ’ನ್ನಾಗಿ ಆಯ್ಕೆಮಾಡಿಕೊಂಡವಳು. ಊರ ಸಾಧ್ವಿಯರಲ್ಲಿ ಯಾರಲ್ಲಿಯೂ ಇರದಷ್ಟು ಬಂಗಾರದ ಆಭರಣಗಳು ಮಾದೇವಿಯಲ್ಲಿದ್ದವು! ೭೦ರ ದಶಕದಲ್ಲೇ ಅವಳ ಮನೆಯಲ್ಲಿ ತೂಗು ಗೋಲಕದ ಗೋಡೆಗಡಿಯಾರ ಡಣ್ ಡಣ್ ಬಾರಿಸುತ್ತಿತ್ತು; ಊರಲ್ಲಿ ಮರ್ಯಾದಸ್ಥ-ಅನುಕೂಲಸ್ಥರ ಮನೆಗಳಲ್ಲೂ ಅಬ್ಬಬ್ಬಾ ಅಂದರೆ ಚಿಕ್ಕ ಟೈಂ ಪೀಸ್ ಇದ್ದ ಕಾಲದಲ್ಲೇ ಮಾದೇವಿ ಹೀಗಿದ್ದಳಪ್ಪ.
ರಾಘುವಿಗೆ ಈ ಕಥೆಯೆಲ್ಲ ತಿಳಿದಿರಲಿಲ್ಲ. ಆತನೋ ಸಾದಾ ಸೀದಾ ಹದಿಹರೆಯದ ಹುಡುಗ. ಅವನಾಯ್ತೋ ಅವನ ಕೆಲಸವಾಯ್ತೋ ಇದ್ದುಬಿಡುವ. ತೋಟತುಡಿಕೆ-ಹೊಲ-ಗದ್ದೆಗಳಲ್ಲಿ ಕೃಷಿ ಕೆಲಸವನ್ನು ಮಾಡಿಕೊಳ್ಳುತ್ತಾ ಆ ಕಾಲದ ಮೆಟ್ರಿಕ್ ಮುಗಿಸಿದ್ದ. ಹೊತ್ತಲ್ಲೇ ಎದ್ದು, ಬೆಳಗಿನ ಶೌಚವಿಧಿಗಳನ್ನು ತೀರಿಸಿಕೊಂಡು, ಗಂಟೆ ಅಲ್ಲಾಡಿಸಿ-ದೇವರಿಗೆ ನೀರುಹಾಕಿ ೭ ಗಂಟೆಯಹೊತ್ತಿಗೆ ಆರತಿ ಬೆಳಗಿಬಿಟ್ಟರೆ, ಆಮೇಲೆ ಒಂದಷ್ಟು ತಿಂಡಿತಿಂದು, ಕವಳ[ಎಲೆಯಡಿಕೆ]ಹಾಕಿಕೊಂಡು ತೋಟದ ಕಡೆಗೆ ಹೋಗಿಬಿಡುತ್ತಿದ್ದ. ಕತ್ತೆ ಗೆಯ್ದಹಾಗೇ ಗೆಯ್ಯುತ್ತಿದ್ದ ರಾಘುವಿಗೆ ಸದಾ ಹರೆಯದ ಕುದುರೆಯ ಹುಮ್ಮಸ್ಸು. ಜೇನು ಸಾಕುತ್ತಿದ್ದ, ದನ-ಕರುಗಳನ್ನು ಸಾಕಿಕೊಂಡಿದ್ದ, ಹಿತ್ತಲಲ್ಲಿ ತರಕಾರೀ ಬೆಳೆಯಿಸುತ್ತಿದ್ದ, ಅಂಗಳದ ಸುತ್ತ ತರಾವರಿ ಹೂ ಗಿಡಗಳಿದ್ದವು, ತೋಟದಲ್ಲಿ ಹಲಸು-ಮಾವು-ಜಂಬುನೇರಳೆ-ಬಾಳೆ-ಚಿಕ್ಕು-ಅನಾನಸು ಇತ್ಯೇತ್ಯಾದಿ ಅಂಗೋಡಂಗ ಫಲಗಳನ್ನು ನೀಡುವ ಗಿಡಮರಗಳನ್ನೂ ಬೆಳೆಯಿಸಿದ್ದ. ಜೀವನದಲ್ಲಿ ಅದೆಂದೂ ಜಾರದ ರಾಘುವಿಗೆ, ಹರೆಯದ ಕನಸುಗಳು ಅಷ್ಟಕ್ಕಷ್ಟೇ ಆದರೂ ಈಗೀಗ ಕೆಲವೊಮ್ಮೆ ಅದ್ಯಾಕೋ ಕೆಲವು ವ್ಯಕ್ತಿಗಳನ್ನು ಗಮನಿಸುವಾಗ ಕುತೂಹಲ ಹುಟ್ಟಿಕೊಳ್ಳುತ್ತಿತ್ತು. ತನ್ನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಸಿಗದ ಉತ್ತರಗಳ ಬೆನ್ನು ಹತ್ತಿಯೇ ಇದ್ದ ರಾಘುವಿಗೆ ಕೆಲವು ಘಟನೆಗಳು ವಿಷಯಗಳನ್ನು ಇನ್ನೂ ಕಗ್ಗಂಟಾದಂತೇ ಗೂಢವಾಗಿಸಿಬಿಡುತ್ತಿದ್ದವು.
ಹಿಂಬದಿ ಮನೆಯಲ್ಲಿ ಯೋಗಸನ್ಯಾಸಿಯೊಬ್ಬರ ಆಗಮನವಾಗಿ, ಊರ ಜನರೆಲ್ಲಾ ಅಲ್ಲಿ ಪಾದಪೂಜೆ-ಭಿಕ್ಷೆಗೆ ನೆರೆದಿದ್ದರು. ಅತೀವ ಪುಣ್ಯಕಾರ್ಯವೆನಿಸಿದ ಅಲ್ಲಿ ಯಾವುದೋ ಹವನವೂ ನಡೆದಿತ್ತು. ಏನನ್ನೋ ತರಬೇಕಾಗಿ ಬಂದು, ರಾಘು ಆ ಮಧ್ಯಾಹ್ನದ ಸಮಯಕ್ಕೆ ಪಕ್ಕದ ಮನೆಯ ಒಳಗಡೆ ಧಾವಿಸಿದ; ಊರಲ್ಲಿ ಅಕ್ಕ-ಪಕ್ಕದ ಮನೆಯ ಸಲುಗೆಯ ರಿವಾಜು ಅದು. "ಹೋಯ್ ಯಾರಿದ್ದೀರ್ರೋ ಮನೇಲಿ?" ಉತ್ತರ ಬರಲಿಲ್ಲ. ಜಗುಲಿಯಲ್ಲಿ ನೆಲ ಒರೆಸುವ ಬಟ್ಟೆ ಬಿದ್ದಿತ್ತು, ಅಗಲದ ಪಾತ್ರೆಯಲ್ಲಿ ನೀರಿತ್ತು. ಆದರೆ ಯಾರೂ ಇದ್ದಹಾಗೇ ತೋರಲಿಲ್ಲ. ಮನೆಯ ಬಾಗಿಲು ಹಾಕದೇ ಎಲ್ಲಾ ಹಿಂಬದಿಯ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾರೆಯೇ? ಎಂದುಕೊಂಡ. ಒಂದು ನಿಮಿಷ ಮೌನವಾಗಿ ನಿಂತ. ಒಳಕೋಣೆಯಲ್ಲೆಲ್ಲೋ ಕಿಂಕಿಣಿ ಕಿಣಿಕಿಣಿ ಬಳೆಗಳ ಸದ್ದಾದ ಹಾಗಾಯ್ತು! "ಯಾರಿದ್ದೀರ್ರೋ ಮನೇಲಿ?"-ಮತ್ತೆ ಕೇಳುತ್ತಾ ಒಳಕೋಣೆಗೆ ಸಮೀಪಿಸಿದ. ಮಾದೇವಿ ದಡಕ್ಕನೆ ಹೊರಬಂದುಬಿಟ್ಟಳು. ಹೊರನಡೆದವಳೇ ಅಂಗಳದೆಡೆಗೆ ಹೋಗಿ ಪಾತ್ರೆ-ಬಟ್ಟೆಯನ್ನು ಅಲ್ಲೇ ಬಿಟ್ಟು ಕ್ಷಣಾರ್ಧದಲ್ಲಿ ಇನ್ನೆಲ್ಲೋ ಕಾಣದಾದಳು. ಕುತೂಹಲ ಜಾಸ್ತಿಯಾಗಿ ರಾಘು ಆ ಮನೆಯ ಒಳಕೋಣೆಯ ದೀಪವನ್ನು ಹತ್ತಿಸಲು ಗುಂಡಿ ಅದುಮಿದ. ಮೂಲೆಯಲ್ಲಿ ನೆಟ್ಟಗೆ ನಿಲ್ಲಿಸಿದ ತಿಝೋರಿಯ ಸಂದಿನಲ್ಲಿ ಯಾರೋ ಅಡಗಿ ನಿಂತಿರುವ ಹಾಗಿತ್ತು. ಯಾರೂ ಮಾತನಾಡಲಿಲ್ಲ. ರಾಘುವೂ ಕಂಡೂ ಕಾಣದಂತೇ ಸುಮ್ಮನಿದ್ದ. ಅಲ್ಲಿ ಹಾಗೆ ನಿಂತುಕೊಂಡಿದ್ದು ಮೂರ್ತಿ ಎಂಬುದು ಗೊತ್ತಾಯ್ತು. ಅವನೇನು ಮಾಡುತ್ತಿದ್ದ? ಓ ಮಾದೇವಿಗೆ ಮತ್ತೆ ಹೊಟ್ಟೆನೋವು ಜೋರಾಗಿ ಬಂದಿರಬೇಕು. ಪಾಪ ಹೊಟ್ಟೆ ನೀವಿಕೊಡುತ್ತಿದ್ದನೋ ಏನೋ. ತಾನು ಕರೆದಿದ್ದರಿಂದ ಅವಮಾನವಾದಂತಾಗಿ ಇಬ್ಬರೂ ಹೀಗೆ ತಮ್ಮ ತಮ್ಮ ಪಾಡಿಗೆ ಸುಮ್ಮನಾಗಿರಬೇಕು ಎಂದುಕೊಂಡ.
ಮುಂಜು ಮತ್ತು ಮೂರ್ತಿ ಅಣ್ಣ-ತಮ್ಮ. ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಹಾಯಾಗಿದ್ದವರು. ಇಬ್ಬರೂ ಚಟಸಾಮ್ರಾಟರು; ತೋರಿಕೆಗೆ ಪೂಜೆ-ಪುನಸ್ಕಾರ-ದೇವಸ್ಥಾನದಲ್ಲಿ ಉತ್ಸವಗಳನ್ನು ನಡೆಸುವುದಕ್ಕೆ ವರ್ಗಿಣಿ ವಗೈರೆಗೆ ಮುಂದಾಳ್ತನ, ರಾಜಕೀಯ ಪುಢಾರಿಗಳು, ಮರಿಪುಢಾರಿಗಳು ಎಲ್ಲರ ಜೊತೆಗೂ ಒಂದಷ್ಟು ಓಡಾಟ, ಊರಲ್ಲಿ ನಡೆಯುವ ನಾಟಕ, ಕೀರ್ತನೆ ಇತ್ಯಾದಿಗಳಲ್ಲಿ ಸಭೆಯಲ್ಲಿ ಎದ್ದುಕಾಣುವಂತೇ ಓಡಾಟ-ಇವೆಲ್ಲಾ ಇದ್ದಿದ್ದೇ. ತಮ್ಮ ಎದುರಿಗೆ ಬರುವ ಸುಂದರ ಸ್ತ್ರೀಯರನ್ನು ಅಕ್ಕ-ತಂಗಿ-ತಾಯಿಯರಂತೇ ಕಾಣುವುದು ಅವರಿಂದ ಸಾಧ್ಯವೇ ಇರಲಿಲ್ಲ; ಆದಷ್ಟೂ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಉಂಡುಮುಗಿಸುವ ಮಹಾನ್ ಚಪಲಚೆನ್ನಿಗರು ಮಂಜು-ಮೂರ್ತಿ ಎಂಬ ಅಣ್ಣ-ತಮ್ಮ. ವಯಸ್ಸು ಸಣ್ಣದಿದ್ದದ್ದರಿಂದ, ರಾಘುವಿಗೆ ಇದನ್ನೆಲ್ಲಾ ಮನೆಯ ಹಿರಿಯರು ಯಾರೂ ಬಿಡಿಸಿ ಹೇಳಲಾರದವರಾಗಿದ್ದರು. ಹೀಗಾಗಿ ರಾಘುವಿನ ದೃಷ್ಟಿಯಲ್ಲಿ ಅವರೂ ಒಳ್ಳೆಯವರೇ, ಮಾದೇವಿಯೂ ಕೂಡ. ಮಾದೇವಿಯೂ ಅವಳ ಗಂಡನೂ ಕರ್ರಗಿದ್ದರೂ, ಇಬ್ಬರು ಗಂಡುಮಕ್ಕಳು ಬೆಳ್ಳಗಾದರು ಹೇಗೆ?- ಎಂಬ ವಿಜ್ಞಾನಿಕ ಸಮಸ್ಯೆ ರಾಘುವನ್ನು ಹಲವುದಿನಗಳತನಕ ಬಾಧಿಸುತ್ತಲೇ ಬಂದಿತ್ತು ಬಿಡಿ. ಉತ್ತರ ಸಿಗದ ಪ್ರಶ್ನೆಗಳನ್ನು ಹಿರಿಯರಲ್ಲಿ ಕೇಳಲೂ ಹೇಳಲೂ ರಾಘುವಿಗೆ ಮಾತ್ರ ಸಾಧ್ಯವಾಗಲಿಲ್ಲ. ತೀರಾ ಅಂಥಾ ವಿಷಯಗಳನ್ನು ಅರಿತ ಸ್ನೇಹಿತರೂ ಇರಲಿಲ್ಲ.
ಊರಲ್ಲಿ ನಡೆಯುವ ಮದುವೆ ಮನೆಯೊಂದರ ಕಾಳು-ಕಡಿ ಕೇರಿ, ಹಸನುಮಾಡಿಕೊಡಲು ಬಂದವಳೇ ಮಾದೇವಿಯ ಮಗಳು-ಶ್ರೀದೇವಿ. ಒಳ್ಳೇ ಒಯ್ಯಾರಿ! ಕಪ್ಪಗಿದ್ದರೂ ಆಕೆಯೂ ತಾಯಿಯ ಹಾಗೇ ಲಕ್ಷಣವಾಗಿದ್ದಳು. ಅವಳಿಗೂ ಹೆಚ್ಚು-ಕಮ್ಮಿ ೧೬ರ ಹರೆಯ. ಶೋಡಷಿಯಾದ ಅವಳನ್ನು ಮಾದೇವಿ ಆಗಾಗ ಅಲ್ಲಲ್ಲಿಗೆ ಅದೂ ಇದೂ ಕೆಲಸಕ್ಕೆ ಕಳುಹಿಸುತ್ತಿದ್ದಳು. ಕೆಲಸಕ್ಕೆ ಕಳುಹಿಸಬೇಕಾದ ದರ್ದೇನೂ ಇರಲಿಲ್ಲ. ಆದರೂ ’ಜನರ ಪರಿಚಯವಾಗಲಿ’ ಎಂದು ಹಾಗೆ ಮಾಡುತ್ತಿದ್ದಳೋ ಏನೋ. ಮದುವೆ ಮನೆಯ ಕೆಲಸಕ್ಕೆ ಬಂದ ಶ್ರೀದೇವಿ ಕುಳಿತಲ್ಲೇ ಆಗಾಗ ನಿದ್ದೆ ಮಾಡಿಬಿಡುತ್ತಿದ್ದಳು. ಧಸೋ ಭುಸೋ ಶ್ವಾಸ ತೆಗೆಯುತ್ತಿದ್ದಳು. ಒಂದು ದಿನ ಹೀಗಾದರೆ ಸರಿ, ಆದರೆ ಹಾಗಾಗಲಿಲ್ಲ. ನಾಲ್ಕೈದು ದಿನ ಕಳೆದರೂ ಆಕೆಯ ನಡಾವಳಿ ಅದೇ ರೀತಿ ಇತ್ತು. ಬಹಳ ಆಯಾಸಗೊಂಡಂತೇ ತೋರುತ್ತಿದ್ದಳು. ಆ ಮನೆಯ ಹೆಂಗಸರು ಅನುಮಾನಪಟ್ಟರು. ಆಕೆಯ ಹೊಟ್ಟೆಯ ಕಡೆಗೆ ಗಮನಕೊಟ್ಟರು! ಹಾಂ.. ಆಕೆಗೆ ಹೊಟ್ಟೆಬಂದಿತ್ತು. ಆಕೆ ಸುಮಾರು ಮೂರು ತಿಂಗಳು ಬಸುರಿ ಎಂಬುದು ಪಕ್ಕಾ ಆದಮೇಲೆ ವಿಷಯವನ್ನು ಸೂಕ್ಷ್ಮವಾಗಿ ಮನೆಯ ಗಂಡಸರ ಕಿವಿಗೆ ಹಾಕಿದರು. ಯಾರಿಗೂ ಗೊತ್ತಾಗದ ಹಾಗೇ ಮಾದೇವಿಯನ್ನು ಕರೆಸಿ "ವಿಷಯ ಸ್ವಲ್ಪ ಗಂಭೀರದೆ, ಹೊಡ್ದು ಬಡ್ದು ಮಾಡ್ಬೇಡ, ಹಾಂಗೇನಾರು ಮಾಡೀರೆ ಮಗಳು ಸತ್ತೋಯ್ತದೆ" ಎಂದು ತಿಳಿಸಿ, "ಮಾಡ್ದೋರು ಯಾರು ಎಂದು ಪ್ರೀತಿಯಿಂದ್ಲೇ ಕೇಳು?" ಎಂದೂ ಹೇಳಿಕಳಿಸಿದರು.
ಮಾದೇವಿ ಯಾವಾಗ ಹೇಗೆ ಕೇಳಿದಳೋ ತಿಳೀದು, ಅಂತೂ ವಿಷಯಕ್ಕೆ ಕಾರಣೀಭೂತರಾದವರು ಯಾರು ಎಂಬುದನ್ನು ಆಕೆ ತಿಳಿದುಕೊಂಡಳು. ಹರೆಯದ ಹುಡುಗರು ಹಲವರಿರುವುದರಿಂದ ಆಪಾದನೆ ಯಾರಮೇಲೂ ಬರುವ ಸಾಧ್ಯತೆಯಿತ್ತು. ಇಷ್ಟರಲ್ಲೇ ಇಂಥಾ ವಿಷಯಗಳನ್ನು ಕೆಲವು ಪರ್ಸಂಟೇಜು ರಾಘು ತಿಳಿದುಕೊಂಡಿದ್ದ. ವಾರದೊಳಗೆ ಇತ್ಯರ್ಥಮಾಡದಿದ್ದರೆ ಪಾಪದವರೂ ಅಪರಾಧವನ್ನು ಹೊತ್ತುಕೊಳ್ಳಬೇಕಾದ ಸಮಸ್ಯೆ ಎದುರಾಗುತ್ತಿತ್ತು. ಊರಲ್ಲಿ ತನ್ನತನವನ್ನು ಕಳೆದುಕೊಳ್ಳದ ಆಚಾರವಂತ ಹಿರಿಯರೊಬ್ಬರಿದ್ದರು. ಅವರ ಮುಂದಾಳತ್ವದಲ್ಲಿ ಒಂದು ನಿಗೂಢ ಜಾಗಕ್ಕೆ ಅಮ್ಮಣ್ಣನಿಗೆ ಬರಹೇಳಲಾಯ್ತು! ಅಮ್ಮಣ್ಣ ರಾಘುವಿನ ಹಿಂಬದಿ ಮನೆಯ ವ್ಯಕ್ತಿ, ಅಜಮಾಸು ೩೫ ವಯಸ್ಸು. ಅಲ್ಲಲ್ಲಿ ತಿರುಗಾಡಿಕೊಂಡಿದ್ದ ಶ್ರೀದೇವಿಯನ್ನು ಅದ್ಯಾವಾಗ ಕಂಡನೋ ತಿಳೀದು. ಮಂಜು-ಮೂರ್ತಿಗಿಂತಾ ಒಂದು ಕೈ ಮೇಲೆಂಬಂತಿದ್ದ ಅಮ್ಮಣ್ಣ ಹೇಗೋಮಾಡಿ ಶ್ರೀದೇವಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ’ತಾಯಂತೇ ಕರು ನಾಯಂತೇ ಬಾಲ’ ಎಂಬೋ ಗಾದೆಯಂತೇ, ಷೋಡಶಿಯಾದ ಶ್ರೀದೇವಿಗೆ ಜಗವೆಲ್ಲಾ ಸುಂದರವಾಗಿ ಕಂಡಿತ್ತು. ಅಮ್ಮಣ್ಣನ ಒಲವಿನ ಕರೆಗೆ ಆಕೆ ತುಂಟ ನಗು ಬೀರಿದಳು. ಊರಹೊರಗಿನ ಬೆಟ್ಟದಲ್ಲಿ ಮುಸ್ಸಂಜೆಯ ಹೊತ್ತಲ್ಲಿ ಪರಸ್ಪರ ಭೇಟಿಯಾಗುವಂತೇ ಅಮ್ಮಣ್ಣ-ಶ್ರೀದೇವಿ ಮಾತನಾಡಿಕೊಂಡಿದ್ದರು. ಮೊದಲದಿನವೇ ಒಂದಾಗಿ ಸುಖಿಸಿದ ಆ ಕ್ಷಣಗಳು ಶ್ರೀದೇವಿಗೆ ಅಮಿತಾನಂದವನ್ನುಂಟುಮಾಡಿ ಅಮ್ಮಣ್ಣ-ಶ್ರೀದೇವಿಯರ ಕಾಮಕೇಳಿ ತಿಂಗಳುಗಟ್ಟಲೆ ಹಾಗೇ ಮುನ್ನಡೆದಿತ್ತು. ಅಮ್ಮಣ್ಣನ ’ವರಪ್ರಸಾದ’ದಿಂದ ಶ್ರೀದೇವಿ ಗರ್ಭಧರಿಸಿದ್ದಳು.
ಅಮ್ಮಣ್ಣನಿಗೆ ಛೀಮಾರಿ ಹಾಕಿಬಿಟ್ಟರೆ ಆತ ಕೈಕೊಸರಿ ಓಡಿಹೋಗಿ ಊರುಬಿಟ್ಟಾನು ಎಂಬುದು ಆಚಾರವಂತ ಹಿರಿಯರ ಅನಿಸಿಕೆಯಾಗಿತ್ತು. ಅವರು ವಿಷಯವನ್ನು ಬೆಣ್ಣೆಯಮೇಲಿನ ಕೂದಲೆಳೆ ಎತ್ತಿದಂತೇ ಬಹಳ ಮುತ್ಸದ್ಧಿತನದಿಂದ ನಿರ್ವಹಿಸಿದರು. ಶ್ರೀದೇವಿಗೆ ಇನ್ನೂ ಮದುವೆಯಿಲ್ಲದ್ದರಿಂದ ಆಕೆಗೆ ಮಗುವಾಗುವುದು ಬೇಡವಾಗಿತ್ತು. ಅಮ್ಮಣ್ಣನಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದರಿಂದ, ಶ್ರೀದೇವಿಯನ್ನೂ ಮದುವೆಯಾಗೆಂದರೆ ಆತನ ಸಂಸಾರ ಒಡೆದುಹೋಗುವ ಸಂಭವನೀಯತೆ ಇತ್ತು. ತಪ್ಪು ಮೊದಲಾಗಿ ಅಮ್ಮಣ್ಣನದು, ತಾಳಕ್ಕೆ ತಾಳ ತಟ್ಟಿದ ತಪ್ಪು ಶ್ರೀದೇವಿಯದು. ಒಂದಷ್ಟು ಹಣ ಕೊಟ್ಟು ಅವಳ ಹೊಟ್ಟೆಯೊಳಗಿನ ಬೇಡದ ಕೂಸನ್ನು ತೆಗೆಸಿಬಿಡಬೇಕೆಂದು ಮಾದೇವಿ ಒತ್ತಾಯಿಸಿದಳು. ಗತ್ಯಂತರವಿಲ್ಲದೇ ಹಿರಿಯರು ಅದನ್ನೇ ನಿರ್ಣಯಿಸಿ ಅಮ್ಮಣ್ಣನಿಂದ ಎಂಟ್ಹತ್ತು ಸಾವಿರ ಹಣ ಕೊಡಿಸಿದರು. ರಾಘುವಿನ ಮನೆಯ ಹಿರಿಯರೇ ಪಂಚಾಯ್ತಿ ನಡೆಸಿದ್ದರಿಂದ ರಾಘುವಿಗೆ ವಿಷಯ ಗುಟ್ಟಾಗಿ ತಿಳಿದುಹೋಯ್ತು. ವಾರದ ನಂತರ ರಾಘುವಿಗೆ ಯಾರೋ ಹೇಳಿದ್ದು: ಶ್ರೀದೇವಿಯನ್ನು ಭಟ್ಕಳದ ಆಸ್ಪತ್ರೆಗೆ ಕರ್ಕೊಂಡು ಹೋಗಿ ಜಾಂಡೀಸಿಗೆ ಚಿಕಿತ್ಸೆ ನೀಡಿಸಿದರಂತೆ ಎಂದು! ರಾಘು ಒಳಗೊಳಗೇ ನಕ್ಕ. ಆಸ್ಪತ್ರೆಗೆ ಹೋಗಿಬಂದಮೇಲೆ ತಿಂಗಳುಗಟ್ಟಲೆ ಸಮಯ ಕಳೆದರೂ ಜಾಂಡೀಸು ಪೂರ್ತಿ ವಾಸಿಯಾಗಿಲ್ಲವೆಂಬ ಸುದ್ದಿಯನ್ನು ಹಬ್ಬಿಸಿದ್ದರು. ಜಾಂಡೀಸು ವಾಸಿಯಾಗಿ ತಿರುಗಾಡಲು ಆರಂಭಿಸಿದ ಶ್ರೀದೇವಿಯ ಮುಖದಲ್ಲಿ ಮೊದಲಿನ ಕಳೆ ಇರಲಿಲ್ಲ; ಹಿಂಡಿದ ಕಬ್ಬಿನ ಜಲ್ಲೆಯಂತೇ ಕಾಣುತ್ತಿದ್ದಳು ಪಾಪ. ಭಟ್ಕಳ ಆಸ್ಪತ್ರೆಯೊಂದರ ಸಮೀಪದಲ್ಲೇ ಹಲವು ಭ್ರೂಣಗಳು ಪತ್ತೆಯಾಗಿವೆ ಎಂಬುದು ಪತ್ರಿಕೆಗಳಿಗೆ ತಲುಪಿ ವರದಿಯಾಗಲು ವಾರದ ಕಾಲ ತಗಲಿತು; ಆಸ್ಪತ್ರೆಗೂ ಆ ಭ್ರೂಣಗಳಿಗೂ ಸಂಬಂಧವಿಲ್ಲವೆಂದು ಆಸ್ಪತ್ರೆಯವರು ಹೇಳಿಕೆ ನೀಡಿಬಿಟ್ಟಿದ್ದರು! ಅಮ್ಮಣ್ಣ-ಶ್ರೀದೇವಿ ಮತ್ತೆಂದೂ ಎದುರಾದ ಸುದ್ದಿ ಯಾರಿಗೂ ತಿಳಿಯಲಿಲ್ಲ; ಬಹುಶಃ ಆಗಲಿಲ್ಲ! ಎದುರಾದರೂ ಹಾವು-ಮುಂಗಿಸಿಯಂತೇ ಆದರೆ ತಪ್ಪಿಲ್ಲ.
ಇಷ್ಟಾದರೂ ಮಾದೇವಿಗೆ ’ಹೊಟ್ಟೆಶೂಲೆ’ ಬರುವುದು ನಿಲ್ಲಲೇ ಇಲ್ಲ! ರಾಘುವಿನ ಮನೆಯ ಬಚ್ಚಲುಮನೆ ವಾಸದಮನೆಯ ಹೊರವಲಯದಲ್ಲಿ ಅನತಿ ದೂರದಲ್ಲಿತ್ತು; ಆಗೆಲ್ಲಾ ಮಡಿಯ ಸಂಪ್ರದಾಯದ ಕಾಲವಪ್ಪ ಆದಕ್ಕೇ ಹಾಗೆ. ತೋಟದ ಕಡೆಯಿಂದ ಹಾದುಬರುತ್ತಿದ್ದ ರಾಘುವಿಗೆ ಬೀಗವಿಲ್ಲದ ಬಚ್ಚಲುಮನೆಯಲ್ಲಿ ಒಂದು ಮಧ್ಯಾಹ್ನ ಏನೋ ಸದ್ದು ಕೇಳಿಸಿತು. ಕಿಡಕಿಯಲ್ಲಿ ಹಣಿಕಿ ನೋಡಿದಾಗ ನಾಲ್ಕು ಕಾಲುಗಳು ಪರಸ್ಪರ ಹಾವುಗಳಂತೇ ಉಜ್ಜಿಕೊಳ್ಳುತ್ತಿದ್ದವು. ಅರ್ಧಗಂಟೆಯಕಾಲ ಮರೆಯಲ್ಲೇ ನಿಂತು ಯಾರು ಹೊರಬರುತ್ತಾರೆಂದು ನಿರೀಕ್ಷಿಸಿದ ರಾಘುವಿನ ತಲೆಯಲ್ಲಿ, ಹಿಂದೆಂದೋ ಹುಟ್ಟಿದ್ದ ಹಲ್ಲಿರೋಗಕ್ಕೆ ಈಗ ಔಷಧ ದೊರೆತಿತ್ತು: ಮಂಜು-ಮಾದೇವಿಯರು ನಗುತ್ತಾ ಹೊರಬಂದು ಏನೂ ಅರಿಯದವರಂತೇ ತಂತಮ್ಮ ದಾರಿ ಹಿಡಿದುಬಿಟ್ಟರು! ಬಂಗಾರದ ಬಳೆಗಳು ಮಣ್ಣ ಬಳೆಗಳ ಜೊತೆಗೆ ಸೇರಿ ಹೊರಡಿಸುವ ’ಕಿಂಕಿಣಿ ಕಿಣಿ ಕಿಣಿ’ಸದ್ದು ಮಾದೇವಿ ನಡೆಯುವಾಗ ಕೇಳಿಸುತ್ತಲೇ ಇತ್ತು.
ರಾಘು ಈಗಲೂ ಇದ್ದಾನೆ. ಊರೊಟ್ಟಿನ ಕಥೆ ಕೇಳುತ್ತಾ ಗಪ್ಪಹೊಡೆಯಬೇಕು ಅಂದ್ರೆ ರಾಘುವೊಬ್ಬ ಕಥಾಸರಿತ್ಸಾಗರವಾಗುತ್ತಾನೆ; ಅವನ ಮನದಲ್ಲಿ ಆ ದಿನಗಳ ಘಟನೆಗಳು ನಿನ್ನೆ-ಮೊನ್ನೆ ನಡೆದಂತೇ ಹಸಿಹಸಿಯಾಗಿವೆಯಂತೆ. ಮಂಜು, ಇಡೀ ಮೈಕೈ ತುರಿಕಜ್ಜಿಯನ್ನು ತುರಿಸಿಕೊಳ್ಳುತ್ತಾ ಹುಣಿಸೇ ಮುಪ್ಪಾದರೂ ಹುಳಿಮುಪ್ಪೇ ಅನ್ನೋ ಸ್ಥಿತಿಯಲ್ಲಿದ್ದಾನಂತೆ. ಮೂರ್ತಿಗೆ ಯಾವ್ಯಾವುದೋ ಕಾಯಿಲೆ ಬಂದು ಶಸ್ತ್ರಚಿಕಿತ್ಸೆಗಳಾಗಿವೆ. ಹೇರಳವಾಗಿ ಕಾಂಚಾಣ-ಆಭರಣ ಗಳಿಸಿದ್ದ ಮಾದೇವಿಗೆ ಮುಖ ಸುಕ್ಕುಗಟ್ಟಿದೆಯಂತೆ, ಜೊತೆಗೆ ಬಿಳಿತೊನ್ನು ಬಂದಿದ್ದರಿಂದ ಆಕೆಯನ್ನು, ಒಂದುಕಾಲಕ್ಕೆ ಎಲ್ಲಿದ್ದರೂ ಹುಡುಕಿ ಬೆನ್ನಟ್ಟಿ ತೆವಲು ತೀರಿಸಿಕೊಳ್ಳುತ್ತಿದ್ದ ಮಂಜು-ಸುಬ್ರಾಯ ಮೊದಲಾದ ಯಾವ ಗಂಡುಗೂಳಿಗಳೂ ತಿರುಗಿಕೂಡ ನೋಡುತ್ತಿಲ್ಲವಂತೆ! ಹರನಮೂಲೆ ಜಟ್ಗನ ವಾರ್ಷಿಕ ಪೂಜೆಯ ದಿನ, ಬಂಗಾರಿವೈದ್ಯನ ಮೈಮೇಲೆ ಬಂದ ಜಟ್ಗನಲ್ಲಿ, "ಕಾಯಿಲೆ ಜಲ್ದಿ ಗುಣಾಮಾಡ್ಕೊಡಪ್ಪಾ ನನ್ನೊಡ್ಯನೇ, ಸೀಂಯಾಳ-ಬಾಳೇಕೊನೆ ಒಪ್ಪಿಸ್ತೇನೆ, ಬೆಳ್ಳಿಯ ಮುಖವಾಡ ಹಾಕಿಕೊಡ್ತೇನೆ" ಎಂದು ಕುಲದಬುಡದಲ್ಲಿ ಹರಕೆ ಹೇಳ್ಕೊಂಡು ಪ್ರಾರ್ಥಿಸಲು ಬಂದಿದ್ದಳಂತೆ ಮಾದೇವಿ. "ಅಂದಹಾಗೇ, ಎರಡ್ವರ್ಷ ಆಯ್ತು-ಅವರೀಗ ಈ ಊರಲ್ಲಿಲ್ಲ. ಇಲ್ಲಿದ್ದ ಆಸ್ತಿ-ಮೆನೆನೆಲ್ಲಾ ಅವರ ದಾಯಾದ್ರಿಗೆ ಮಾರಿಬುಟ್ರು. ಈಗ ಅಲ್ಲೆಲ್ಲೋ ಉತ್ತರಕೊಪ್ಪದ ಕಡೆ ಜಮೀನುಮಾಡಿದ್ದಾರಂತೆ, ಗಂಡುಮಕ್ಕಳು ಓದಿಕೊಂಡಿದ್ರಪ್ಪ, ಈಗ ಅವಳಿಗೆ ಅವರೇ ಅನ್ನಹಾಕುತ್ತಿರಬೇಕು. ಶ್ರೀದೇವಿಯ ವಿಷಯ ತಿಳೀದು. ಆಕೆಯನ್ನು ಅದಾರಿಗೋ ಮದುವೆಮಾಡಿ ಕೊಟ್ಟಿದ್ದಷ್ಟೇ ಗೊತ್ತು" ಎಂದ ರಾಘು. ಊರಹೊರಗಿನ ಬೇಲಿಗುಂಟ ಅರ್ಧ ಫರ್ಲಾಂಗು ನಡೆದು, ತೊಪ್ಪಲಕೇರಿಯಲ್ಲಿ ಪಾಗಾರದ ದಣಪೆದಾಟಿ ಮುಂದೆ ನಡೆದರೆ, ಅಗೋ ನೋಡಿ-ಅಲ್ಲಿ ಆ ಬಾಗಿನಿಂತ ಕರೆಂಟ್ ಕಂಬದ ಹತ್ತಿರ ಕಾಣ್ತದಲ್ಲಾ-ಅದೇ ಮೂರನೇ ಮನೆಯಲ್ಲೇ ರಾಘು ಇರುವುದು. ನೀವೂ ಬೇಕಾದರೆ ಹೋಗಿ ಕಥೆ ಕೇಳಿ, ಆಗದೇ?
No comments:
Post a Comment