ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 5, 2013

ಮೊಟ್ಟೆಯೊಡೆದಷ್ಟುದಿನ


ಮೊಟ್ಟೆಯೊಡೆದಷ್ಟುದಿನ
ರಥವಿಳಿದು ನಡೆತಂದು ಭಕ್ತಿಯೊ
ಳತಿಶಯದಿ ನಮಿಸುತಲಿ ಪದತಲ
ನುತಿಪೆ ಭಾರತ ಕವಿಜನಂಗಳ ಸತತವಾದಿಯಲಿ |
ಅತುಳಭುಜಬಲ ಕಾಳಿದಾಸನ
ಚತುರಮತಿಯಾ ನಾರಣಪ್ಪನ
ಪಥಿಕ ನಾನೆನೆಸುತ್ತ ಬೇಡುವೆ ಮತಿಯ ವೇದಿಯಲಿ || 

[ಸ್ವರಚಿತ ಭಾಮಿನಿಯೊಂದಿಗೆ ಭಾರತದ ಕವಿಪರಂಪರೆಯನ್ನು ನೆನೆಸಿಕೊಳ್ಳುತ್ತಿದ್ದೇನೆ. ಸಾಂಪ್ರದಾಯಿಕ ಕಾವ್ಯರಥವನ್ನೇರಿಯೇ ಇರುವ ನಾನು, ಆಗಾಗ ಆ ರಥವಿಳಿದು ಬಂದು, ಅಲ್ಲಿಂದ ನಾನೆಸೆವ ಕಾವ್ಯಬಾಣಗಳು ಕಾವ್ಯಾಸಕ್ತರಿಗೆ ನಾಟಿ-ಮುದವೀಯಲಿ ಎಂಬ ಪ್ರಾರ್ಥನೆಯನ್ನು ಆದಿಕವಿಗಳಿಂದ ಹಿಡಿದು ಇಂದಿನ ಸಾಂಪ್ರದಾಯಿಕ ಹಿರಿಯ ಕವಿಗಳ ಪದತಲದಲ್ಲಿ ಅರ್ಪಿಸಿ, ಕಾವ್ಯ ರಚನೆಗೆ ಸು-ಮತಿಯನ್ನು ಬೇಡುತ್ತಿದ್ದೇನೆ ಎಂಬುದು ಮೇಲಿನ ಪದ್ಯದ ಅರ್ಥ. 

ಕಾವಿಕಾವ್ಯ ಪರಂಪರೆಯಲ್ಲಿ, ತನ್ನ ಅಮೋಘವಾದ ಪರಿಕಲ್ಪನೆಗಳಲ್ಲಿ, ೨೪ಕ್ಕೂ ಅಧಿಕ ಛಂದಸ್ಸುಗಳನ್ನು ಬಳಸಿ, ಉಪಮೆ-ಪ್ರತಿಮೆ ಮತ್ತು ಪ್ರತಿಕೃತಿಗಳಿಂದ ಜನಮನಸೂರೆಗೊಂಡ ಮಹಾಕವಿ ಕಾಳಿದಾಸನಿಗೆ ಅನಂತ ನಮನಗಳು. ಇಂದಿನ ಕಾವ್ಯವಿನೋದಿಗಳಿಗೆ ಛಂದಸ್ಸು-ವ್ಯಾಕರಣ-ಪ್ರಾಸ ಇವೆಲ್ಲ ರುಚಿಸದ ಅಡುಗೆ. ನವ್ಯ, ನವ್ಯೋತ್ತರ ಮತ್ತು ನವೋದಯ ಕಾವ್ಯಗಳ ಭಯಂಕರ ಚಂಡಮಾರುತ ಬೀಸಿದರೂ ಕನ್ನಡಮ್ಮ ತನ್ನತನವನ್ನು ಉಳಿಸಿಕೊಳ್ಳಲು ಅಲ್ಲಲ್ಲಿ ತನ್ನ ಸ್ವಸ್ವರೂಪದ ಅಭಿಮಾನಿಗಳನ್ನು ಉಳಿಸಿಕೊಂಡೇ ಇರುತ್ತಾಳೆ. ಅಂತಹ ಅಪ್ಪಟ ಕನ್ನಡಾಭಿಮಾನಿ ಬಳಗವನ್ನು ನಾನು ಆಗಾಗ ನೆನೆದುಕೊಳ್ಳುವುದಿದೆ. ಶತಾವಧಾನಿ ಡಾ|ರಾ.ಗಣೇಶರ ಮಾರ್ಗದರ್ಶನದಲ್ಲಿ ’ಪದ್ಯಪಾನ’ದಲ್ಲಿ [http://padyapaana.com] ಪದ್ಯ)ಪಾನಮತ್ತರನೇಕರು ವಿಜೃಂಭಿಸುತ್ತಲೇ ಇರುವುದು ಖುಷಿಕೊಟ್ಟ ವಿಚಾರ. ಅವಧಾನಿ ಗಣೇಶರಿಗೆ ಸಾಷ್ಟಾಂಗ ನಮಸ್ಕಾರಗಳು ಮತ್ತು ಹೊಸಪೀಳಿಗೆಯ ಸಾಂಪ್ರದಾಯಿಕ ಕವಿಗಳೆಲ್ಲರಿಗೂ ನನ್ನ ಅಭಿನಂದನೆಗಳು.  

ಪ್ರಾಸಬದ್ಧ ಕವನಗಳನ್ನು ಬರೆಯುವ ಮನಕ್ಕೆ ಎಟಕುವ ವಿಷಯವಸ್ತುಗಳು ಹಲವು; ಅಂಥವುಗಳಲ್ಲಿ ಒಂದೊಂದು ವಿಷಯ ಒಂದೊಂದು ವಿಧದ ಭಾವದಿಂದ ಕೂಡಿರುತ್ತದೆ. ಹಡೆದಮ್ಮನಿಗೆ ತನ್ನ ಮಗುವನ್ನು ರಕ್ಷಿಸುವುದು ದೇವರೊಪ್ಪಿಸಿದ ಜವಾಬ್ದಾರಿ! ಹಲವು ಸಂಕಷ್ಟ ಮತ್ತು ಸಂದಿಗ್ಧಗಳ ನಡುವೆಯೂ ಪ್ರತಿಯೊಂದೂ ಜೀವಪ್ರಭೇದಕ್ಕೂ ಸಂತಾನದ ಪಾಲನೆ ಪೋಷಣೆಯ ವ್ಯಾಮೋಹ ಸಹಜ. ಹಸಿದ ತನ್ನ ಮರಿಗಳಿಗೆ ಹದ್ದು-ಗಿಡುಗಗಳು ಸಣ್ಣ ಹಕ್ಕಿಯ ಮೊಟ್ಟೆ-ಮರಿ, ಇಲಿ ಇವೇ ಮೊದಲಾದವುಗಳನ್ನು ಆಹಾರವಾಗಿ ಕೊಡುತ್ತವೆ. ಸಣ್ಣ ಹಕ್ಕಿಗಳು ತಮ್ಮ ಮರಿಗಳಿಗೆ ಹುಳ-ಹುಪ್ಪಟೆ-ಜಿರಲೆ ಇತ್ಯಾದಿಗಳನ್ನು ಆಹಾರವಾಗಿ ನೀಡುತ್ತವೆ. ಹುಳ-ಹುಪ್ಪಟ-ಜಿರಲೆಗಳಿಗೆ ಇನ್ನೂ ಸಣ್ಣಗಿನ ಕೆಲವು ಜೀವ ಪ್ರಭೇದಗಳು ಆಹಾರವಾಗಿರುತ್ತವೆ. ಇಲ್ಲಿ ಪ್ರತಿಯೊಂದೂ ವರ್ಗದ ಅಮ್ಮನಿಗೆ ತನ್ನ ಕಂದಮ್ಮಗಳ ಹಸಿವು ಮಾತ್ರ ಗೊತ್ತು, ಬೇರೆ ಯಾವುದೇ ಜೀವವರ್ಗ ಬದುಕಲಿ ಅಥವಾ ಸಾಯಲಿ ಆ ಬಗೆಗೆ ಅವು ಚಿಂತಿಸುವುದಿಲ್ಲ! ಸಣ್ಣ ಹಕ್ಕಿಯ ಮರಿಯನ್ನು ತಿಂದರೆ ಅದರ ಅಮ್ಮನಿಗೆ ಆಗುವ ನೋವು ಹದ್ದು-ಗಿಡುಗಗಳಿಗೆ ತಿಳಿಯದು! ಒಂದೊಮ್ಮೆ ತಿಳಿದರೂ, ಕ್ರೌರ್ಯವೇ ಅವುಗಳ ಜೀವನ. ನವ್ಯ-ನವೋದಯ-ನವ್ಯೋತ್ತರಗಳೆಂಬ ಕಾವ್ಯರಣಹದ್ದುಗಳು ಸಾಂಪ್ರದಾಯಿಕ ಕಾವ್ಯಹಕ್ಕಿಯ ಮರಿಗಳನ್ನು ಕುಕ್ಕುತ್ತಲೇ ಇದ್ದರೂ ಕಾವ್ಯಹಕ್ಕಿಗಳ ವಂಶಕ್ಕೆ ಅಳಿವೇನೂ ಇಲ್ಲವೆಂಬುದು ಇಲ್ಲಿನ ಹೋಲಿಕೆ. ಇಂಥಾದ್ದೊಂದು ಚಿತ್ರಣ ಮನದಲ್ಲಿ ಮೂಡಿದಾಗ ನನ್ನೊಳಗಿನ ಕವಿ ಬರೆದ ಕವನ ಇಲ್ಲಿದೆ, ದಯಮಾಡಿ ಒಪ್ಪಿಸಿಕೊಳ್ಳಿ:]

ಮೊಟ್ಟೆಯೊಡೆದಷ್ಟುದಿನ ಮರಿಯೆಂಬ ಕರುಣೆಯಲಿ
ಹೊಟ್ಟೆ ತುಂಬಿಸಿ ಹೊತ್ತು ಹೊತ್ತಿನಲ್ಲಿ
ರಟ್ಟೆ ಬಲಿಯುವೊಲಿನಿತು ಬಲುಕಷ್ಟದಲಿ ಬೆಳೆಸಿ
ಜಟ್ಟಿ ಹದ್ದುಗಳಟ್ಟಿ ಕುತ್ತಿನಲ್ಲಿ

ಅಟ್ಟಹಾಸದಿ ಹಾಯ್ವ ಗಿಡುಗ ಗೂಬೆಗಳನ್ನು
ಮಟ್ಟಸದಿ ಬೆವರಿಳಿಸಿ ಎವೆಯಿಕ್ಕದೇ
ಬೆಟ್ಟದಲಿ ಬಣಿವೆಯಲಿ ಥಟ್ಟನಿಳಿದೇಳುತ್ತ
ಪುಟ್ಟನಿಗೆ ಗುಟುಕಿಡುತ ಕಹಿಕಕ್ಕದೇ

ಸಟ್ಟನೇ ಹಾವೊಂದು ಸದ್ದುಮಾಡದೆ ಬರಲು
ಕುಟ್ಟಿ ಕೊಕ್ಕಿನೊಳದರ ಒದ್ದೋಡಿಸಿ
ದಟ್ಟಮಳೆ ಸುರಿವಂದು ರೆಕ್ಕೆಮಾಡನು ಹಿಡಿದು
ಗಟ್ಟಿಗಾಳಿಯ ಭಯದ ಸದ್ದಡಗಿಸಿ ! 

ಕಟ್ಟೆ ಕೆರೆಗಳು ತುಂಬಿ ಭೋರ್ಗರೆವ ನೀರುಕ್ಕಿ
ನಟ್ಟಿರುಳು ನಿಡುಸುಯ್ದು ದಿನವಗಳೆದು
ಹುಟ್ಟಿಸಿದ ಪರಮಾತ್ಮ ಭುವಿಯ ಬಂಧನವಿಕ್ಕಿ
ಪುಟ್ಟ ಅಮ್ಮನ ಋಣದ ಗೆರೆಯನೆಳೆದು  


No comments:

Post a Comment