ಚಿತ್ರಋಣ: ಅಂತರ್ಜಾಲ
ನೋವು ಎಲ್ಲರಿಗೂ ಒಂದೇ
ನೋವು ಎಲ್ಲರಿಗೂ ಒಂದೇ
ಅದೊಂದು ಊರು. ಒಂದು ಕಾಲಕ್ಕೆ ಡಾಂಬರು ಕಾಣದ ಮಣ್ಣು ರಸ್ತೆಯ ಊರು. ಸುಮಾರು ೪೫ ವರ್ಷಗಳ ಹಿಂದೆ ಅಲ್ಲಿಗೆ ಡಾಂಬರು ರಸ್ತೆ ಬಂತು. ರಸ್ತೆ ರಾಜ್ಯ ಹೆದ್ದಾರಿಯಾಗಿ ಮಾರ್ಪಟ್ಟಿತು. ಬರುಬರುತ್ತಾ ತಿರುಗುವ ಜನರ ಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಜಾಸ್ತಿ ಆದುದರಿಂದ ಅದೀಗ ರಾಷ್ಟ್ರೀಯ ಹೆದ್ದಾರಿಯಾಗಿದೆ. ರಸ್ತೆ ಅಗಲೀಕರಣವಾಗಿದೆ. ಈ ಕಾರ್ಯದ ನಂತರ ಜನ-ಜಾನುವಾರುಗಳು ನಿರಂತರ ಸಾವಿಗೀಡಾಗುತ್ತಲೇ ಇದ್ದಾರೆ! ರಸ್ತೆಯಲ್ಲಿ ಯಾವ ಕೊಳ್ಳಿ ದೆವ್ವವೂ ಇಲ್ಲ!! ಆದರೆ ವಾಹನ ಚಾಲಕರ ದರ್ಪದ ವೇಗ ಮತ್ತು ರಸ್ತೆಗಳಲ್ಲಿನ ಹೊಂಡಗಳನ್ನು ತಪ್ಪಿಸಿ ಗಾಡಿ ಚಲಾಯಿಸುವ ವಿಧಾನ ಇದಕ್ಕೆ ಕಾರಣವಾಗಿದೆ. ೮-೧೦ ದಿನಗಳ ಹಿಂದೆ ನಡೆದ ಒಂದು ಘಟನೆಯಿಂದ ಮನಸ್ಸಿಗೆ ಇನ್ನಿಲ್ಲದ ನೋವುಂಟಾಯ್ತು. ಭಿಕ್ಷುಕ ದಂಪತಿ ಮಗನೊಂದಿಗೆ ರಸ್ತೆ ದಾಟುತ್ತಿದ್ದರು. ಭಿಕ್ಷುಕಿಯ ಬಗಲಲ್ಲಿ ಚಿಕ್ಕದೊಂದು ಮಗುವಿತ್ತು. ಇನ್ನೊಂದು ಕೈಯ್ಯಲ್ಲಿ ಮಗನ ಕೈಹಿಡಿದು ದಾಟುತ್ತಿದ್ದರೆ ಆಕೆಯ ಗಂಡ ಜೋಳಿಗೆ ವಗೈರೆ ಸಾಮಾನುಗಳನ್ನು ಹೊತ್ತಿದ್ದ. ಒಂದು ನಿಮಿಷ ಕಳೆದರೆ ಅವರು ರಸ್ತೆ ದಾಟಿ ಸಾಗಿಹೋಗುತ್ತಿದ್ದರು, ಆದರೆ.....ಆದರೆ ಕೊನೆಯ ನಿಮಿಷದಲ್ಲಿ ಹಠಾತ್ತನೇ ಬಡಿದ ಲಕ್ಸುರಿ ಬಸ್ಸಿನ ಚಕ್ರ ಮೈಮೇಲೆ ಹಾದುಹೋಗಿ ಬಾಲಕ ಸ್ಥಳದಲ್ಲೇ ಅಪ್ಪಚ್ಚಿಯಾಗಿಹೋದ. ಹಸಿದ ಹೊಟ್ಟೆಯಲ್ಲಿದ್ದನೋ, ನಿತ್ರಾಣನಾಗಿ ಹೆಜ್ಜೆ ಹಾಕುತ್ತಿದ್ದನೋ ದೇವರೇಬಲ್ಲ. ಅಮ್ಮ ಕರೆದೊಯ್ಯುವೆಡೆಗೆ ಹೆಜ್ಜೆ ಹಾಕುತ್ತಿದ್ದ. ವೇಗದ ಆವೇಗದಲ್ಲಿ ರಸ್ತೆಯಲ್ಲಿರುವ ಹೊಂಡವನ್ನು ತಪ್ಪಿಸಲು ಹೋಗಿ ಚಾಲಕ ಪಾದಚಾರಿಗಳೆಡೆಗೆ ಹಾಯಿಸಿದ್ದಾನೆ. ವೇಗ ಮಿತಿಯಲ್ಲಿರುತ್ತಿದ್ದರೆ ನಿಧಾನವಾಗಿ ದಾಟಬಹುದಾದ ಹೊಂಡದ ರಸ್ತೆಯದು, ಮಿತಿಮೀರಿದ ವೇಗ ಭಿಕ್ಷುಕ ಬಾಲಕನ ಸಾವಿಗೆ ಕಾರಣವಾಯ್ತು. ಚಾಲಕ ಓಡಿ ತಪ್ಪಿಸಿಕೊಂಡ, ಹೇಳಿಕೇಳಿ ಭಿಕ್ಷುಕರು-ಅವರ ಆರ್ತನಾದ ಕೇಳುವವರಾರು ? ಬಂಧು-ಬಾಂಧವರು ಎಂದು ಯಾರಾದರೂ ಅಷ್ಟಾಗಿ ಇರುತ್ತಾರೆಯೇ? ಇದ್ದರೂ ನಾಕುಜನರ ಮುಂದೆ ಮಾತನಾಡುವ ಧೈರ್ಯ ಅವರಿಗೆ ಬರುತ್ತದೆಯೇ?
ಭಿಕ್ಷುಕರಿಗೆ ಎಲ್ಲಿಯ ವ್ಯವಸ್ಥೆ? ಅವರೂ ಕೆಲಭಾಗ ಸನ್ಯಾಸಿಗಳ ಹಾಗೆಯೇ. ಸನ್ಯಾಸಿಗಳು ತ್ಯಾಗ ಮನೋಭಾವದಿಂದ ವ್ಯವಸ್ಥೆಗಳನ್ನು ತ್ಯಜಿಸಿದ್ದರೆ ಭಿಕ್ಷುಕರು ಇಲ್ಲದೇಯೇ ಬದುಕುವ ಅನಿವಾರ್ಯತೆ ಉಳ್ಳವರು. ಭಿಕ್ಷುಕರಾಗುವುದು ಯಾರಿಗೂ ಬಹುಶಃ ಇಷ್ಟದ ಕೆಲಸವಾಗಿರಲಿಕ್ಕಿಲ್ಲ. ಆದರೆ ಭಿಕ್ಷುಕರಿಗೆ ಮಕ್ಕಳಾಗಿ ಜನಿಸಿದವರ ಪಾಡು ಹಾಗೇ ಮುಂದುವರಿಯುವಂತೇ ಪ್ರೇರೇಪಿಸುತ್ತದೆ. ಅವರಿಗೆ ಅನ್ನ-ಬಟ್ಟೆಗಳ ಪೂರೈಕೆಗೆ ನಿಗದಿತ ವ್ಯವಸ್ಥೆ ಇಲ್ಲ, ಕೆಲಸಮಾಡಲು ಬರುವುದಿಲ್ಲ, ವಿದ್ಯೆ-ಉದ್ಯೋಗದ ಆಕಾಂಕ್ಷೆಯಂತೂ ಬಹುದೂರ. ಪ್ರಾಣಿಗಳಾಗಾದರೂ ಹುಟ್ಟಬಹುದು ಭಿಕ್ಷುಕರಾಗಬಾರದು ಎಂಬುದು ಒಂದು ಹೇಳಿಕೆ.
|| ವಿನಾ ದೈನ್ಯೇನ ಜೀವನಂ || ---ಎಂದಿದ್ದಾರೆ ಹಿರಿಯರು. ಉದರಂಭರಣೆಗಾಗಿ ದೇಹಿ ಎನ್ನಬಾರದಂತಹ ಸ್ಥಿತಿಯಲ್ಲಿ ಇಡಿಸು ಎಂಬುದೇ ಅದರ ಅರ್ಥ. ಮನುಷ್ಯನಾಗಿ ಹುಟ್ಟಿದಮೇಲೆ ಉದರ ಪೋಷಣೆಗಾಗಿ ದೇಹಿ ಎನ್ನದೇ ಕರ್ತವ್ಯಪರನಾಗಿರಬೇಕು ಎನ್ನುತ್ತದೆ ಆ ಉಲ್ಲೇಖ. ಹಾಗೆ ಮಾಡಲು ಕೆಲವರಿಗೆ ಅವರ ಮನೋಧರ್ಮ ಒಪ್ಪುವುದಿಲ್ಲ, ಇನ್ನು ಕೆಲವರು ಆರ್ಥಿಕವಾಗಿ ಸೋತು ಎಲ್ಲವನ್ನೂ ಕಳೆದುಕೊಂಡು ಅನಿವಾರ್ಯತೆಯಲ್ಲಿ ಭಿಕ್ಷುಕರಾಗಿಬಿಡುತ್ತಾರೆ. ಭಿಕ್ಷುಕರಲ್ಲೇ ಸುಧಾರಿಸಿ ಸರಕಾರೀ ನೌಕರಿ ಹಿಡಿದು ಕುಟುಂಬವನ್ನೇ ಉದ್ಧರಿಸಿದ ಜನರನ್ನೂ ಕೂಡ ನೋಡಿದ್ದೇನೆ. ಭಿಕ್ಷುಕರಾದವರು ಮೇಲೇಳಲು ಅವರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೈಯ್ಯಲ್ಲಿ ಬಿಡಿಗಾಸೂ ಇಲ್ಲದೇ ಈ ಕಾಲದಲ್ಲಿ ಏನಾದರೂ ಮಾಡಲು ಸಾಧ್ಯವೇ? ಇನ್ನೊಂದು ರೀತಿ ಹೇಳುವುದಾದರೆ ಅವರು ಅದಕ್ಕೇ ಹೊಂದಿಕೊಂಡುಬಿಡುತ್ತಾರೆ. ಬೇಡುವುದರಲ್ಲಿ ಮಾನಾಪಮಾನದ ಪ್ರಶ್ನೆ ಅವರಿಗೆ ಕಾಡುವುದಿಲ್ಲ. ಕೊಟ್ಟರೂ ಸರಿ ಕೊಡದಿದ್ದರೂ ಸರಿ ಕೇಳುತ್ತಾರೆ; ಉಟ್ಟರೂ ಸರಿ ಉಡದಿದ್ದರೂ ಸರಿ ಯಾವುದೋ ಸಿಕ್ಕ ಬಟ್ಟೆಗೇ ಸೀಮಿತಗೊಳಿಸಿಕೊಳ್ಳುತ್ತಾರೆ. ಅದಕ್ಕೇ ಅಲ್ಲವೇ ’ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್’ ಎಂಬ ಆಂಗ್ಲ ಗಾದೆ ಹುಟ್ಟಿಕೊಂಡಿದ್ದು? ಇಂದಿನದು ಇಂದಿಗೆ ನಾಳೆಯದು ನಾಳೆಗೆ. ಕಟ್ಟಿದ ಮನೆಯಿಲ್ಲ, ಹುಟ್ಟಿದ ಊರೆಂಬ ಹಂಗೂ ಇಲ್ಲ, ಇಟ್ಹಾಂಗೆ ಇರುವೆನೋ ಶಿವನೇ ಎನ್ನುವಂತೇ ಊರಿಂದ ಊರಿಗೆ ಊರಿಂದ ಊರಿಗೆ ಸಾಗುತ್ತಾ, ಜಾಗ ಸಿಕ್ಕಲ್ಲಿ ತಂಬು ಹೂಡುತ್ತಾ, ಜೋಳಿಗೆ ಇಳಿಸಿ-ವಾರಗಳ ಕಾಲ ಇದ್ದು ಮತ್ತೆ ಮುಂದಿನ ಊರಿಗೆ ಪಯಣ.
ಬಗಲಿಗೆ ಜೋಳಿಗೆಯಲ್ಲಿ ಜೋತುಬಿದ್ದ ಪಾಪದ ಕಂದಮ್ಮಗಳನ್ನು ಹೊತ್ತು ಬೇಡುವ ಹೆಂಗಸರನ್ನು ಕಂಡಾಗ ಆ ಕಂದಮ್ಮಗಳ ಹೊಟ್ಟೆಗೆ ಕೊಡುತ್ತಾರೋ ಇಲ್ಲವೋ ಎನಿಸುತ್ತದೆ. ಬೆಳಿಗ್ಗೆ ಎದ್ದರೆ ತಿಂಡಿ ಸಿಗುವುದೆಂದು ಖಂಡಿತಾ ನಂಬಲಾಗದು. ಸ್ನಾನ-ಶೌಚ-ಅನುಪಾನ ಊಹುಂ ಆದರೂ ಬಿಟ್ಟರೂ ಒಂದೇ. ಹಬ್ಬ-ಹರಿದಿನಗಳಲ್ಲಿ ನಮ್ಮೆಲ್ಲರ ಮನೆಗಳಲ್ಲಿ ಕಷ್ಟವೋ ಸುಖವೋ ಇದ್ದುದರಲ್ಲಿ ನಾವು ಏನನ್ನೋ ಮಾಡಿಕೊಳ್ಳುತ್ತೇವೆ, ಭಿಕ್ಷುಕರಿಗೆ ಹಬ್ಬವೇ ಹರಿದಿನವೇ? ನೂರೆಂಟು ರೀತಿಯ ಶುದ್ಧೀಕರಣ ಯಂತ್ರಗಳಲ್ಲಿ ಶುದ್ಧಗೊಂಡರೂ ಕುಡಿಯುವ ಮೊದಲು ಮತ್ತಷ್ಟು ಯೋಚಿಸಿ ನೀರು ಕುಡಿಯುವ ಜನ ನಾವು. ಸಿಕ್ಕಿದಲ್ಲಿ ಸಿಕ್ಕರೀತಿಯಲ್ಲೇ ಯಾವ ನೀರನ್ನಾದರೂ ಕುಡಿಯುವ ಜನ ಭಿಕ್ಷುಕರು. ಬಿಸಿಲು, ಮಳೆ, ಚಳಿ ನಮ್ಮಂತೇ ಅವರನ್ನೂ ಬಾಧಿಸುತ್ತವೆ. ನಮಗೆಲ್ಲಾ ಬೆಳಕು ನೀಡುವ ಸೂರ್ಯ-ಚಂದ್ರರೇ ಅವರುಗಳಿಗೂ ಬೆಳಕು ನೀಡುತ್ತಾರೆ. ಕಾಯಿಲೆ-ಕಸಾಲೆ ನಮಗೆಲ್ಲಾ ಇರುವಂತೇ ಅವರಿಗೂ ಬರುವುದಿಲ್ಲವೇ? ಬರುತ್ತದೆ, ಅವರ ಸಾವು-ನೋವನ್ನು ಕೇಳಲು ನಾಗರಿಕ ಸಮಾಜ ಸಿದ್ಧವಿದೆಯೇ? ಹೀಗಾಗಿ ಅವರಲ್ಲಿನ ಸಾವು-ನೋವುಗಳ ಸುದ್ದಿ ಎಲ್ಲೂ ದೊಡ್ಡ ಸುದ್ದಿಯಾಗುವುದಿಲ್ಲ. ನಾಗರಿಕ ಸಮಾಜದಲ್ಲಿ ಸಾಕಿದ ನಾಯಿ ಸತ್ತರೂ ಟಿವಿಯಲ್ಲಿ ಸುದ್ದಿ ಬರುತ್ತದೆ, ಬರಬಹುದು. ಆದರೆ ಭಿಕ್ಷುಕರಾಗಿ ಸತ್ತರೆ, ನೊಂದರೆ ಅದು ಲೆಕ್ಕಕ್ಕೆ ಬರುವ ವಿಷಯವಲ್ಲ. ಜನ್ಮಾಂತರಗಳ ಕರ್ಮಬಂಧನದಿಂದ ಭಿಕ್ಷುಕರಾಗಿ ಜನಿಸುತ್ತಾರೆ- ಹಾಗೇ ಜೀವನ ಸಾಗಿಸುತ್ತಾರೆ.
ಮನುಷ್ಯ ಯಾವುದೇ ವೃತ್ತಿಯನ್ನು ಮಾಡಲಿ, ಇನ್ನೊಂದು ಜೀವಕ್ಕೆ ತನ್ನಿಂದ ಘಾಸಿಯಾಗದಂತೇ, ಹಾನಿಯಾಗದಂತೇ ಬದುಕಬೇಕೆಂಬುದು ಹಿಂದೂ ಜೀವನದ ನೀತಿ. ಸೊಳ್ಳೆ-ತಿಗಣೆ ಇತ್ಯಾದಿಗಳ ಕಡಿತಕ್ಕೆ ಒಳಗಾಗಿ ಅವುಗಳನ್ನು ಸಾಯಿಸುತ್ತೇವೆ. ಇಲಿ,ಇರುವೆ-ಜಿರಲೆಗಳನ್ನೂ ಕೆಲವೊಮ್ಮೆಅನಿವಾರ್ಯವಾಗಿ ಸಾಯಿಸುತ್ತೇವೆ. ಹಾಗಾದರೆ ಅವುಗಳೂ ಜೀವಗಳಲ್ಲವೇ? ಹೌದು. ಅವುಗಳಿಂದ ನಮಗೆ ಉಂಟಾಗುವ ಬಾಧೆ ಅಧಿಭೌತಿಕ ತಾಪ--ತಾಪತ್ರಯಗಳಲ್ಲಿ ಒಂದು. ಹೀಗಿದ್ದೂ ಅವುಗಳನ್ನೂ ಆದಷ್ಟರ ಮಟ್ಟಿಗೆ ಘಾಸಿಗೊಳಿಸಬಾರದು. ಅರಿತೋ ಅರಿವಿಲ್ಲದೆಯೋ ಪ್ರತಿನಿತ್ಯ ನಮ್ಮ ಜೀವನದಿಂದ ಅನೇಕ ಸಾವುನೋವುಗಳು ಸಂಭವಿಸುತ್ತವೆ. ದಾರಿಯಲ್ಲಿ ಹರೆಯುತ್ತಿದ್ದ ಹಾವನ್ನು ವಿನಾಕಾರಣ ಹೆದರಿಕೊಂಡು ಬಡಿದು ಸಾಯಿಸುತ್ತೇವೆ. ಬೆಳೆಗಳನ್ನು ತಿಂದು ಹಾಕುತ್ತಿದ್ದ ಮಂಗಗಳನ್ನೋ ಹಂದಿ-ನರಿಗಳನ್ನೋ ಯಾವುದೋ ರೀತಿಯಲ್ಲಿ ನಾಶಪಡಿಸುತ್ತೇವೆ. ವಾಹನಗಳಲ್ಲಿ ಓಡಾಡುವಾಗ ಅಡ್ಡಬರುವ ಬೆಕ್ಕು-ನಾಯಿ-ಹಸು ಇತ್ಯಾದಿ ಅನೇಕ ಜೀವಿಗಳನ್ನು ಸಾಯಿಸುತ್ತೇವೆ. ನಡೆದಾಡುವಾಗ ಕಾಲ್ತುಳಿತದಿಂದ ಇರುವೆ,ಗೆದ್ದಲು ಮೊದಲಾದವುಗಳು ಸಾಯಲೂ ಬಹುದು. ಇಷ್ಟೇ ಏಕೆ ನಾವು ತಿನ್ನುವ ಮೊಸರಿನಲ್ಲಿ, ಇನ್ನನೇಕ ಪದಾರ್ಥಗಳಲ್ಲಿ ಕಣ್ಣಿಗೆ ಕಾಣಿಸದ ಬ್ಯಾಕ್ಟೀರಿಯಾಗಳು ಇರುತ್ತವೆ, ಅವುಗಳನ್ನು ದೂರದರ್ಶಕದಲ್ಲಿ ನೋಡಿದರೆ ಕೆಲವರು ಮೊಸರನ್ನು ಬಳಸದೇ ಇದ್ದಾರು! ಇಂತಹ ಅದೆಷ್ಟೋ ಹಿಂಸೆಗಳಿಗೆ ಪ್ರತ್ಯಕ್ಷವೋ ಪರೋಕ್ಷವೋ ನಾವು ಕಾರಣೀಭೂತರಾಗುತ್ತೇವೆ.
ಸಾಯಮಧೀಯಾನೋ ದಿವಸ ಕೃತಂ ಪಾಪಂ ನಾಶಯತಿ |
ಪ್ರಾತರಧೀಯಾನೋ ರಾತ್ರಿಕೃತಂ ಪಾಪಂ ನಾಶಯತಿ |
ಗಣಪತಿ ಉಪನಿಷತ್ತಿನ ಫಲಶ್ರುತಿಯಲ್ಲಿ ಈ ಪ್ರಾರ್ಥನೆ ಬರುತ್ತದೆ. ಗಣಪತಿ ಉಪನಿಷತ್ ಮಂತ್ರಗಳನ್ನು ಸಾಯಂಕಾಲ ಉಚ್ಚರಿಸುವುದರಿಂದ ದಿನವಿಡೀ ಮಾಡಿದ ಪಾಪ ನಾಶವಾಗುತ್ತದೆ, ಮುಂಜಾವಿನಲ್ಲಿ ಮಾಡುವುದರಿಂದ ರಾತ್ರಿಯಲ್ಲಿ ನಡೆಸಿರಬಹುದಾದ ಪಾಪಗಳು ನಶಿಸುತ್ತವೆ ಎಂಬ ಹೇಳಿಕೆಗಳಿವು. ವಾಸ್ತವವಾಗಿ ಗಣಪತಿಯನ್ನು ಈಶ್ವರನ ಮಗ ಎಂಬುದಾಗಿ ಮಾತ್ರ ಭಾವಿಸುತ್ತೇವೆ. ಆದರೆ ವಿಷಯ ಹಾಗಿಲ್ಲ. ಗಣಗಳಿಗೆ ಅಧಿಪತಿಯಾದವನೇ ಗಣಪತಿ. ಯಾವ ಗಣ? ಪ್ರಮಥಗಣ. ಪ್ರಮಥಗಣ ಎಂದರೆ ಯಾವುದು ಎಂಬೆಲ್ಲದರ ಬಗ್ಗೆ ಇನ್ನೊಮ್ಮೆ ತಿಳಿಯೋಣ. ಆದರೆ ಈ ಬ್ರಹ್ಮಾಂಡದ ಸಮಸ್ತ ಜೀವ-ನಿರ್ಜೀವ ಅಥವಾ ಜಡ-ಚೇತನಗಳ ಕುಲಕೋಟಿಗಳ ಗಣಗಳಿಗೆ ಅಧಿನಾಯಕನಾದವನೇ ಗಣಪತಿ-ಬ್ರಹ್ಮಾಂಡನಾಯಕ, ಪರಬ್ರಹ್ಮ. ತಪ್ಪು-ಒಪ್ಪಿನ ಲೆಕ್ಕಾಚಾರವನ್ನು ಆತನಲ್ಲೇ ನಿವೇದಿಸಬೇಕಲ್ಲದೇ ಇನ್ನಾರಲ್ಲಿ ಹೇಳಿಕೊಳ್ಳಲು ಸಾಧ್ಯ? ನಮ್ಮಷ್ಟಕ್ಕೇ ನಮ್ಮ ತೃಪ್ತಿಗೆ ನಾವು ಯಾವುದೋ ರೂಪದಲ್ಲಿ ಉದಾಹರಣೆಗೆ ಕೃಷ್ಣನಲ್ಲೋ ರಾಮನಲ್ಲೋ ನಾರಾಯಣನಲ್ಲೋ ಶಂಭುಲಿಂಗೇಶ್ವರನಲ್ಲೋ ಹೇಳಿಕೊಳ್ಳಬಹುದು, ಆದರೆ ಅದೆಲ್ಲಾ ತಲ್ಪುವುದು ಒಂದೇ ಮೂಲಕ್ಕೆ.
ಆಚಾರ್ಯ ಶಂಕರರು ಏನೂ ಇಲ್ಲದೇ ಇರುವಲ್ಲೇ, ಇದ್ದ ಸ್ಥಿತಿಯಲ್ಲೇ ಪರಬ್ರಹ್ಮನ ಆರಾಧನೆಗೆ ಶಿವಮಾನಸ ಸ್ತೋತ್ರವನ್ನು ಕರುಣಿಸಿದರು. ಆ ಸ್ತೋತ್ರದಲ್ಲಿ ಏನುಂಟು ಏನಿಲ್ಲ? ಪೂಜೆಗೆ ಕುಳಿತ ನಾವು ಮನಸಾ ಕುಬೇರರೇ ಆಗಿರುತ್ತೇವೆ! ಅದನ್ನು ಹಿಂದೊಮ್ಮೆ ಸವಿಸ್ತಾರ ಹೇಳಿದ್ದೇನೆ, ಹೀಗಾಗಿ ಮತ್ತೆ ವಿವರಿಸುವ ಅಗತ್ಯತೆ ಕಾಣುವುದಿಲ್ಲ. ಆದರೆ ಆ ಸ್ತೋತ್ರದ ಕೊನೆಯ ಭಾಗದಲ್ಲಿ ಭಗವಂತನಿಗೆ ಎಲ್ಲವನ್ನೂ ಅರ್ಪಿಸಿ ಪೂಜೆ ಮುಗಿದ ನಂತರ ಅವನ ಮುಂದೆ ಸಾಷ್ಟಾಂಗ ನಮಸ್ಕರಿಸಿ ಪ್ರಾರ್ಥಿಸುವ ಹಂತದ ಸ್ತುತಿಯೊಂದಿದೆ.
ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||
ಕರಚರಣಗಳಿಂದಾಗಲೀ, ದೇಹದಿಂದಾಗಲೀ, ಮಾತು-ನಡವಳಿಕೆಗಳಿಂದಾಗಲೀ, ಮಾಡುವ ಕೆಲಸಗಳಿಂದಾಗಲೀ, ಕೇಳುವುದರಿಂದಾಗಲೀ, ನೋಡುವುದರಿಂದಾಗಲೀ, ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದರಿಂದಾಗಲೀ, ವಿಹಿತವೋ ಅವಿಹಿತವೋ ಎಂಬ ಅರಿವಿಲ್ಲದೇ ಜರುಗಿರಬಹುದಾದ ಎಲ್ಲ ಅಪರಾಧಗಳನ್ನೂ ಕ್ಷಮಿಸು ಎಂದು ಭಗವಂತನಲ್ಲಿ ಪ್ರಾರ್ಥಿಸುವುದು ಇದಾಗಿದೆ. ಬೋಧಿಸುವುದು ಸಸಾರ, ಆಚರಿಸುವುದು ಕಷ್ಟವೆನಿಸಿದ ಈ ಕಾಲದಲ್ಲಿಯೂ ಅನೇಕರು ಅಕ್ಷರಶಃ ಇಂತಹ ರಿವಾಜುಗಳನ್ನು ಇಟ್ಟುಕೊಂಡಿದ್ದಾರೆ. ಹಾಗೆ ನೋಡಿದರೆ ಹುಟ್ಟುವುದು ಸಂಭ್ರಮವಲ್ಲ, ಸಾಯುವುದು ದುಃಖಕರವೂ ಅಲ್ಲ. ಆದರೆ ಜೀವಾತ್ಮನಾಗಿ ಅನುಭವಿಸುವ ಯಮಯಾತನೆ ಇದೆಯಲ್ಲಾ ಅದನ್ನು ಮಾತ್ರ ಸಾಮಾನ್ಯವಾಗಿ ಯಾರೂ ತಪ್ಪಿಸಿಕೊಳ್ಳಲಿಕ್ಕೆ ಆಗುವುದಿಲ್ಲ.
ಬುದ್ಧ ಜಾತಕ ಕಥೆಗಳಂತೇ ಹಲವು ಕಥೆಗಳು ಮಾರ್ಮಿಕವಾಗಿ ಈ ಹುಟ್ಟು-ಸಾವುಗಳ ಚಕ್ರದ ಗತಿಯ ಬಗ್ಗೆ ತಿಳಿಸುತ್ತವೆ. ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು, ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಿದ್ದರು. ವರ್ಷಗಳ ನಂತರ ಕಾಯಿಲೆಯಾಗಿ ಹೆಂಡತಿ ತೀರಿಹೋದಳು. ಅದೇ ದುಃಖದಲ್ಲಿ ಕೆಲವು ವರ್ಷಗಳು ಕಳೆದುಹೋದವು. ಒಮ್ಮೆ ತೋಟದಲ್ಲಿ ಕೆಲಸಮಾಡುತ್ತಿದ್ದ [ಗಂಡನಿಗೆ]ಯಜಮಾನನಿಗೆ ಹೆಣ್ಣುಹಂದಿಯೊಂದು ನಾಕಾರು ಮರಿಗಳೊಂದಿಗೆ ಮೇಯುತ್ತಿರುವುದು ಕಾಣಿಸಿತು. ಹತ್ತಿರ ಹೋದ ಯಜಮಾನನನ್ನು ಕಂಡು ಹೆಣ್ಣು ಹಂದಿ ಕಣ್ಣೀರು ಸುರಿಸಿತು. ಹೆಂಡತಿಯಾಗಿ ತಾನು ಬಹಳಕಾಲ ಜೊತೆಗಿರಲಾರದೇ ಇದ್ದುದಕ್ಕೆ ವಿಷಾದ ವ್ಯಕ್ತಪಡಿಸಿತು. "ಹಾಗಾದರೆ ಮರಳಿ ನಿನ್ನನ್ನು ಪಡೆದುಕೊಳ್ಳುತ್ತೇನೆ ಈಗಲೇ ನಿನ್ನನ್ನು ಈ ಜನ್ಮದಿಂದ ಬಿಡುಗಡೆಗೊಳಿಸಲು ಗುಂಡಿಕ್ಕಿಬಿಡುತ್ತೇನೆ." ಎಂದ ಯಜಮಾನನಲ್ಲಿ ತನ್ನ ಮರಿಗಳ ಮುಂದಿನ ಗತಿಯ ಬಗ್ಗೆ ಹೇಳಿಕೊಂಡು ಮತ್ತಷ್ಟು ಅತ್ತಿತು, ತನ್ನನ್ನು ಹಾಗೇ ಇರಗೊಡೆಂದು ಪ್ರಾರ್ಥಿಸಿತು. ’ಹಂದಿಗೆ ಅದೇ ಸುಖ ಇಂದಿಗೆ ಇದೇ ಸುಖ’ ಎಂಬ ಗಾದೆ ಆ ಮೂಲಕ ಉದ್ಭವವಾಯ್ತು! ಆಫ್ರಿಕಾದಲ್ಲಿ ಮೊಸಳೆಯೊಂದು ಯಜಮಾನನಿಗಾಗಿ ಓಡಿಬರುವ ಕಣ್ಣೀರು ಸುರಿಸುವ ಕಥೆ ಕೇಳಿದ್ದೇನೆ. ಇದೇ ರೀತಿ ಈ ಜಗದ ನೀತಿ-ನಿಯಮಗಳೆಲ್ಲವೂ ನಾವು ಮಾಡಿಕೊಂಡಷ್ಟೇ ಅಲ್ಲವೆಂಬುದಂತೂ ಸತ್ಯ.
ವಿಜ್ಞಾನದಲ್ಲಿ ಗಣನೀಯ ಸಾಧನೆಗಳನ್ನು ಸಾಧಿಸಿದ್ದೇವೆ. ಆದರೂ ಬೀಸುವ ಪ್ರಚಂಡ ಮಾರುತವನ್ನು ತಡೆಯಲು ಸಾಧ್ಯವಿಲ್ಲ, ಉಕ್ಕೇರಿ ಬರುವ ಸುನಾಮಿಯನ್ನು ತಹಬಂದಿಗೆ ತರಲು ಸಾಧ್ಯವಿಲ್ಲ, ನಡುಗುವ ಭೂಮಿಯನ್ನು ನಡುಗದಂತೇ ನಿರ್ದೇಶಿಸಲು ಆಗುವುದಿಲ್ಲ. ಸೂರ್ಯನನ್ನೋ ಚಂದ್ರನನ್ನೋ ನಮ್ಮಿಚ್ಛೆಗನುಸಾರವಾಗಿ ಬದಲಾಯಿಸಿದ ದಿಕ್ಕುಗಳಲ್ಲಿ ಬರಿಸಲಾಗಲೀ ಅವರ ಚಟುವಟಿಕೆಗಳನ್ನು ನಿಲ್ಲಿಸಲಾಗಲೀ ಸಾಧ್ಯವಾಗುವುದಿಲ್ಲ. ಜಗತ್ತಿನ ವಿಶಾಲ ಭೂಪ್ರದೇಶಕ್ಕೆ ಬೇಕಾಗುವ ಮಳೆಯಾಗುವಂತೇ ಸೂರ್ಯ ಸಮುದ್ರದ ನೀರನ್ನು ಹೀರಿ ಮೋಡಕಟ್ಟಬೇಕು. ಕಟ್ಟಿದಮೋಡವನ್ನು ಹಲವೆಡೆ ಸಾಗಿಸಿ ಮಳೆಸುರಿಸಲು ತಂಗಾಳಿ ಬೇಕು. ಬಿತ್ತಿದ ಬೆಳೆ ಸಫಲಭರಿತವಾಗಲು ಹೆತ್ತ ಭೂಮಿ ಸಹಕರಿಸಲೇಬೇಕು. ಇಂತಹ ಪಂಚಭೂತಗಳ ನಡುವೆ ನಮ್ಮ ಹುಟ್ಟು-ಸಾವುಗಳ ಚಕ್ರ ನಿರಂತರ. ಹಂದಿಗೆ ಮರಿಗಳ ಮುಂದಿನ ಜೀವನವೇ ದೊಡ್ಡದೆನಿಸಿದಂತೇ ಬದುಕಿನ ಬಂಧುರಕ್ಕೆ ಮಾನವಸಹಜ ಭಾವಗಳು ನಿತ್ಯ-ನಿರಂತರ. ತಿರುಗುವ ಈ ಚಕ್ರದ ಹಲ್ಲುಗಳಿಂದ ನುಣುಚಿಕೊಳ್ಳಲು ಮಾಡಬೇಕಾದ ಸಾಧನೆ ಅಪಾರ. ಅಲ್ಲಿಯವರೆಗೂ ನಾವರಿತು ನಡೆಯಬೇಕಾದ ದಾರಿ ಬಲುದೂರ, ಬದುಕೋಣ, ಬದುಕಲು ಬಿಡೋಣ, ಜೀವಹಾನಿಯನ್ನು ತಡೆಗಟ್ಟೋಣ ಎಂಬ ವಿನಮ್ರ ಅನಿಸಿಕೆಯನ್ನು ನಿಮಗೆಲ್ಲಾ ನಿವೇದಿಸುತ್ತಾ ಸರ್ವಭೂತಾತ್ಮನಾದ ಪರಬ್ರಹ್ಮನಲ್ಲಿ ನೋವು ಕೊಡಬೇಡವೆಂದು ಪ್ರಾರ್ಥಿಸುತ್ತಾ ಶ್ರೀನಂದನ ಸಂವತ್ಸರದ ದೀಪಾವಳಿಯ ಪ್ರಥಮ ಹಣತೆಯನ್ನು ನಿಮ್ಮೆಲ್ಲರ ಪರವಾಗಿ ಹಚ್ಚುತ್ತಿದ್ದೇನೆ, ನಿಮ್ಮೆಲ್ಲರಲ್ಲೂ ಸನ್ನಿಹಿತನಾಗಿರುವ ಭಗವಂತನಿಗೆ ನಮಸ್ಕಾರ, ನಿಮಗೆಲ್ಲಾ ಅಡ್ವಾನ್ಸ್ಡ್ ಶುಭಾಶಯಗಳು.
ಭಟ್ಟರೆ,
ReplyDeleteನಿಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು!