[ರಹಸ್ಯವನ್ನು ತೆರೆದಿರಿಸುವ ಲೇಖನದ ಕೊನೆಯ ಭಾಗ ]
ಪ್ರಣೋ ದೇವೀ ಸರಸ್ವತೀ ವಾಜೇಭಿರ್ವಾಜಿನೀವತಿ| ಧೀನಾಮವಿತ್ರ್ಯವತು| ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್| ಹವಂ ದೇವೀ ಜುಜುಷಾಣಾ ಘೃತಾಚೀ ಶಗ್ಮಾಂ ನೋ ವಾಚಮುಶತೀ ಶೃಣೋತು| ವಾಗ್ದೇವ್ಯೈ ನಮಃ ||
ವಿಜ್ಞಾಪನೆ:
ಸನ್ಮಿತ್ರರೇ, ಸಹೃದಯಿಗಳೇ, ಕನ್ನಡ ಸಾಹಿತ್ಯದ ಒಂದು ಅದ್ಭುತ ಅಂಗ ಅವಧಾನ. ಜಟ್ಟಿಕಾಳಗದಲ್ಲಿ ಮೀಸೆ ತಿರುವುವ ಮಲ್ಲರು ಸೆಣಸಾಡುತ್ತಾರೆ, ಅದು ಕೇವಲ ಭೌತಿಕ ಪಟ್ಟು. ಈ ಮೊದಲೊಮ್ಮೆ ಹೇಳಿದಂತೇ ಮಲ್ಲಗಂಬವನ್ನೇರಿ ನಡೆಸುವ ಕಸರತ್ತು ಮಲ್ಲನ ತಾಕತ್ತು ! ಅದರಲ್ಲೂ ಮೊದಲೇ ನುಣುಪಾದ ಮಲ್ಲಗಂಬಕ್ಕೆ ಎಣ್ಣೆಸವರಿದಮೇಲೆ ಅದನ್ನೇರಿ ಮಧ್ಯೆ ಇನ್ಯಾರೋ ಎರಚುವ ನೀರನ್ನು ಸಹಿಸಿಕೊಂಡು ಜಾರದೇ, ಬೀಳದೇ ಕಂಬದಮೇಲೆ ನಿಲ್ಲುವುದು, ಕಂಬವನ್ನಾತು ಕಸರತ್ತು ನಡೆಸುವುದು ಪೈಲ್ವಾನನ ಯಾ ಜಟ್ಟಿಯ ಸಾಧನೆ. ಮಾನಸವಾಗಿ ನಿರ್ಮಿತಗೊಳ್ಳುವ ಅಂತಹ ಎಣ್ಣೆಗಂಬವನ್ನೇರಿ ಅಲ್ಲಿ ತನ್ನ ಸಾಧನೆಯನ್ನು ಸಾದರಪಡಿಸುವುದು ಅವಧಾನಿಯ ಕಸರತ್ತು. ಪುಣ್ಯವಶಾತ್, ಸುದೈವವಶಾತ್, ಸೌಭಾಗ್ಯವಶಾತ್ ನಮ್ಮ ಕನ್ನಡನಾಡು ಅಂತಹ ಒಬ್ಬ ಶತಾವಧಾನಿಯನ್ನು ಪಡೆದಿದೆ. ಅಳಿದುಹೋಗುತ್ತಿದ್ದ ಕಲೆಯನ್ನು ಎತ್ತಿಹಿಡಿದು ಹಲವರಿಗೆ ಅದರ ಭಾವ ಲಾಲಿತ್ಯವನ್ನೂ, ಕಾವ್ಯ ವಿನೋದವನ್ನೂ, ಛಂದದ ಚಂದವನ್ನೂ, ಪ್ರಾಸದ ಹಾಸವನ್ನೂ, ಪದಪುಂಜಗಳ ಯುಗಳಯುಗ್ಮ ವಿಶೇಷಗಳನ್ನೂ, ಸಂಧಿ-ಸಮಾಸಗಳ ಸಾನ್ನಿಧ್ಯವನ್ನೂ ಹಿತಮಿತವಾಗಿ ಹಾಕಿಮಾಡುವ ಪಾಯಸಕ್ಕೆ ಕನ್ನಡದ ಆದಿ-ನವ್ಯ ಕವಿಗಳ ಕವನಗಳ ಸಕ್ಕರೆ ಸೇರಿಸಿ, ಅಪ್ರಸ್ತುತ ಪ್ರಸ್ತುತಿಯೆಂಬ ಲಘುಹಾಸ್ಯವನ್ನು ವ್ಯಂಜನವಾಗಿ ನೆಂಜಿಕೊಳ್ಳಲು ಇರಿಸಿ, ಸಂಖ್ಯಾಬಂಧದೊಂದಿಗೆ ಎಲ್ಲರ ಮನಸ್ಸಿಗೂ ಉಣಬಡಿಸುವ ಸಾಹಿತ್ಯಕ ಕ್ರೀಡೆ ಸುಲಭದ ಕಾರ್ಯವಲ್ಲ. ಇಂಥದ್ದೊಂದಿತ್ತು ಎಂಬುದನ್ನು ಅಂದಾಜು ಕಟ್ಟಲೂ ಸಾಧ್ಯವಿಲ್ಲದ ದಿನಗಳಲ್ಲಿ ೨೨ ವರ್ಷಗಳ ಅಂತಹ ಶತಾವಧಾನವೊಂದು ನಡೆದಿತ್ತು; ಭಾರತದ ಬಹುತೇಕ ಭಾಷೆಗಳೂ ಸೇರಿದಂತೇ ಹಲವು ಭಾಷಾಕೋವಿದರಾದ ಶ್ರೀಯುತ ರಾ, ಗಣೇಶರು ಇದೀಗ ಕನ್ನಡದ ಮೇಲಿನ ಅಭಿಮಾನದಿಂದ, ಅತ್ಯಂತ ಪ್ರೀತಿಯಿಂದ ಅಪ್ಪಟ ಕನ್ನಡವನ್ನೇ ಬಳಸಿ ಶತಾವಧಾನವನ್ನು ನಡೆಸಿಕೊಡುತ್ತಾರೆ. ಚಲಿಸುವ ವಿಶ್ವಕೋಶವಾದ ಅವರನ್ನು ಯಾರೂ ಈ ಜನ್ಮದಲ್ಲಿ ಓದಿ ಮುಗಿಸಲು ಸಾಧ್ಯವಿಲ್ಲ! ದೈವೀದತ್ತ ನೆನಪಿನ ಕೋಶಗಳಲ್ಲಿ ಅಪಾರ ಪರಿಶ್ರಮದಿಂದ ಹುದುಗಿಸಿದ ಪಾಂಡಿತ್ಯ ಅನನ್ಯವಾಗಿದೆ; ನಿಜಕ್ಕೂ ಅವರೊಬ್ಬ ಸವ್ಯಸಾಚಿಯೇ, ಗಾಂಡೀವಿಯೇ, ಸರ್ವಜ್ಞನೇ. ನೈಷ್ಠಿಕ ಬ್ರಹ್ಮಚರ್ಯವನ್ನು ಪಾಲಿಸಿ ನಡೆದುಬಂದ ಅವರು ಯಾವ ಋಷಿಗೂ ಕಮ್ಮಿಯಿಲ್ಲ.
ಕನ್ನಡ ಪಂಡಿತರೆನಿಸಿ ವಿಶ್ವವಿದ್ಯಾಲಯಗಳಲ್ಲಿ ಪಾಠಮಾಡುವ ಉಪನ್ಯಾಸಕರೂ ಕೂಡ ಇವತ್ತು ಕನ್ನಡದ ಬಗ್ಗೆ ಅಷ್ಟಾಗಿ ಪರಿಣತರಲ್ಲ!![ಅಲ್ಲೇನಿದ್ದರೂ ಹಣ ಮತ್ತು ಹುದ್ದೆಗಾಗಿ ನಡೆಯುವುದು ರಾಜಕೀಯದ ಆಟವಷ್ಟೇ] ಹಲವು ವಿದ್ವನ್ಮಣಿಗಳು ಭಾಗವಹಿಸುವ ಶತಾವಧಾನ ಕಾರ್ಯಕ್ರಮ ನಾಡಿದ್ದು ೩೦ ನವೆಂಬರ್ ಮತ್ತು ೧, ೨ ಡಿಸೆಂಬರ್ ದಿನಾಂಕಗಳಂದು ಬೆಂಗಳೂರಿನ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪದಲ್ಲಿ ಜರುಗಲಿದೆ. ಸರಳಜೀವಿಗಳಾದ ಶತಾವಧಾನಿ ಗಣೇಶರನ್ನು ಮೆರವಣಿಗೆಯಲ್ಲಿ ಕರೆತರುವ ಬಗ್ಗೆ ಪ್ರಸ್ತಾಪಿಸಲಾಗಿ ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಬರೆದ ಕೆಲವು ಪುಸ್ತಕಗಳು ಮತ್ತು ಅವಧಾನದ ಕುರಿತ ಹಲವು ಪುಸ್ತಕಗಳ ಜೊತೆಗೆ ಸರಸ್ವತಿಯ ವಿಗ್ರಹದ ಮೆರವಣಿಗೆಯನ್ನು ಶತಾವಧಾನದ ಆಯೋಜಕ ’ಪದ್ಯಪಾನ’ ಸಂಸ್ಥೆ ಹಮ್ಮಿಕೊಂಡಿದೆ. ಇಂಥದ್ದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಹಿತ್ಯಾಸಕ್ತರಿಗೆ ಜ್ಞಾನಯಜ್ಞದಲ್ಲಿ ಭಾಗವಹಿಸಲೂ, ತಿಳಿದುಕೊಳ್ಳಲೂ, ಅವಕಾಶ ಮಾಡಿಕೊಟ್ಟ ಪದ್ಯಪಾನ ಸಂಸ್ಥೆಗೂ ಮತ್ತು ಅವಧಾನಿ ಗಣೇಶರಿಗೂ ಮೊದಲಾಗಿ ಕೃತಜ್ಞನಾಗಿದ್ದೇನೆ. ಕಾರ್ಯಕ್ರಮದ ಮೊದಲ ದಿನ ಅಂದರೆ ನವೆಂಬರ್ ೩೦ರಂದು ಅಪರಾಹ್ನ ೩ ಘಂಟೆಗೆ, ವೇದಘೋಷ ಮತ್ತು ಪೂರ್ಣಕುಂಭಗಳೊಡನೆ ಬಹುಶಾಸ್ತ್ರೀಯವಾಗಿ ನಡೆಯುವ ಈ ಮೆರಣಿಗೆ ಮಂಗಳಮಂಟಪದಿಂದ ತುಸು ದೂರದಲ್ಲಿರುವ ಗಣಪತಿ ದೇವಸ್ಥಾನದಿಂದ ಆರಂಭವಾಗುತ್ತದೆ. ಇದೊಂದು ಸಾಹಿತ್ಯಕ ಐತಿಹಾಸಿಕ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಅತ್ಮೀಯವಾಗಿ, ಹೃತ್ಪೂರ್ವಕವಾಗಿ ಸ್ವಾಗತವನ್ನು ಕೋರುತ್ತಿದ್ದೇನೆ. ಇನ್ನಷ್ಟು ಮಾಹಿತಿ ಇಲ್ಲಿದೆ: http://shathaavadhaani.com/
---------------
ಈಗ ಪುರುಷೋತ್ತಮ ಪುರಿಯ ಕಥೆಯನ್ನು ಮುಂದುವರಿಸೋಣ ಅಲ್ಲವೇ?
ಸಹಸ್ರಾರು ವರ್ಷಗಳ ಹಿಂದೆ ಅವಂತೀ ದೇಶವನ್ನು ಇಂದ್ರದ್ಯುಮ್ನನೆಂಬ ಧರ್ಮಾತ್ಮನಾದ ರಾಜ ಆಳುತ್ತಿದ್ದ. ಸಾಧು ಸಂತರ ಆರಾಧಕನಾಗಿದ್ದ ಆತನಿಗೆ ತೀರ್ಥಯಾತ್ರಿಗಳ ಮುಖೇನ ಪುರುಷೋತ್ತಮ ಕ್ಷೇತ್ರದಲ್ಲಿ ಸಾಕ್ಷಾತ್ ತ್ರಿಲೋಕೀನಾಥನ ದರ್ಶನವಾಗುವುದೆಂಬ ವಿಷಯ ತಿಳಿದುಬಂದಿತ್ತು. ಪುರುಷೋತ್ತಮ ಕ್ಷೇತ್ರದ ಬಗ್ಗೆ ಎಲ್ಲರೂ ಹೇಳುತ್ತಾರೆ ಆದರೆ ಅದು ಎಲ್ಲಿದೆಯೆಂಬ ಬಗ್ಗೆ ಯಾರೂ ಹೇಳುವವರೇ ಇಲ್ಲವಾಗಿದ್ದರು. ಹೀಗಾಗಿ ಪುರುಷೋತ್ತಮ ಕ್ಷೇತ್ರ ಒಂದು ದಂತಕಥೆಯಾಗಿತ್ತು. ರಾಜನಿಗೆ ಆ ಕ್ಷೇತ್ರವನ್ನು ಸಂಪೂರ್ಣವಾಗಿ ಅರಿಯುವ ಮನಸ್ಸಾಯ್ತು. ರಾಜಗುರುವನ್ನು ಕರೆದು ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯುವಂತೇ ವಿನಂತಿಸಿದ. ಇದಕ್ಕೆ ತನ್ನ ತಮ್ಮ ವಿದ್ಯಾಪತಿಯೇ ಯೋಗ್ಯವ್ಯಕ್ತಿಯೆಂದು ಭಾವಿಸಿದ ರಾಜಗುರು ಅವನಿಗೆ ಆ ಕಾರ್ಯವನ್ನು ಒಪ್ಪಿಸಿದ.
ಶುಭಮುಹೂರ್ತವೊಂದರಲ್ಲಿ ವಿದ್ಯಾಪತಿ ಪುರುಷೋತ್ತಮ ಕ್ಷೇತ್ರವನ್ನು ಅರಸುತ್ತ ಹೊರಟ. ನೂರಾರು ತೀರ್ಥಸ್ನಾನಗಳನ್ನು ಸಂದರ್ಶಿಸಿದ ಬಳಿಕ ವಿದ್ಯಾಪತಿ ಭುವನೇಶ್ವರಕ್ಕೆ ತಲುಪಿದ. ಅಲ್ಲಿಯ ನೀಲಾದ್ರಿ ಪರ್ವತದಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿದ್ದಾನೆಂದು ಅವನಿಗೆ ಯಾರೋ ತಿಳಿಸಿದರು. ವಿದ್ಯಾಪತಿ ಅಲ್ಲಿನ ದುರ್ಗಮ ಅರಣ್ಯವನ್ನು ದಾಟಿ ಅಲ್ಲಿಗೆ ತಲ್ಪಿದಾಗ, ಅಲ್ಲಿನ ಪ್ರಾಚೀನ ಮೂಲನಿವಾಸಿ ಸಬರ್ ರಾಜನಿಗೆ ತ್ರಿಲೋಕೀನಾಥನ ಸ್ಥಾನದ ಅರಿವಿದೆಯೆಂಬ ವಿಚಾರ ಗೊತ್ತಾಯ್ತು. ಒಮ್ಮೆ ಸಬರ್ ರಾಜ ಸಮುದ್ರದಲ್ಲಿ ತನ್ನ ನೌಕೆಗಳೊಂದಿಗೆ ಸಾಗುತ್ತಿದ್ದಾಗ, ಅಕಸ್ಮಾತ್ ಸಮುದ್ರದಲ್ಲಿ ಜ್ಯೋತಿಯ ದರ್ಶನವಾಯ್ತು. ಚಂಚಲ ಅಲೆಗಳ ನಡುವೆಯೂ ಆ ಜ್ಯೋತಿ ಸ್ಥಿರವಾಗಿ ಪ್ರಜ್ವಲಿಸುತ್ತಿತ್ತು. ಜ್ಯೋತಿಯಿದ್ದೆಡೆಗೆ ನಡೆದ ಸಬರ್ ರಾಜ ಭಾವಾವಿಷ್ಟನಾಗಿ ಜ್ಯೋತಿಯೆದುರು ನಿಂತುಬಿಟ್ಟ. ತನ್ನ ಆಂಗಾಂಗಗಳಲ್ಲಿ ಸಾಕ್ಷಾತ್ ಈಶ್ವರನೇ ತುಂಬಿಕೊಂಡಹಾಗಾಯ್ತು ಆತನಿಗೆ. ನಿತ್ಯವೂ ರಾಜ ಸಮುದ್ರದೆಡೆಗೆ ತೆರಳುತ್ತಿದ್ದ, ಜ್ಯೋತಿ ನಿತ್ಯವೂ ಕಾಣಿಸುತ್ತಿತ್ತು. ಆ ದಿವ್ಯ ಜ್ಯೋತಿಯನ್ನು ಊರಿನಲ್ಲೇ ಸ್ಥಾಪಿಸಿಬಿಡಿ ಎಂದು ಮಂತ್ರಿಗಳು ಸಲಹೆ ಇತ್ತರು. ಸಲಹೆಯೇನೋ ಒಳ್ಳೆಯದೇ ಆದರೆ ಸಾಕ್ಷಾತ್ ಈಶ್ವರನ ಪರಂಜ್ಯೋತಿಯನ್ನು ಎಲ್ಲರೆದುರೂ ಪ್ರದರ್ಶಿಸುವುದು ಸರಿಯೇ? ಎಂಬ ಸಂದೇಹ ಉಂಟಾಯ್ತು. ಜ್ಯೋತಿಯನ್ನು ಗುಟ್ಟಾಗಿ ಸ್ಥಾಪಿಸಬೇಕೆಂದೂ ಅದರ ಮಾಹಿತಿಯನ್ನು ಗೌಪ್ಯವಾಗಿಟ್ಟು ಸ್ವತಃ ರಾಜ ಮಾತ್ರ ಅದನ್ನು ಪೂಜಿಸಬೇಕೆಂದೂ ನಿರ್ಧರಿಸಲಾಯ್ತು.
ಕಟ್ಟಕಡೆಗೆ ದಟ್ಟ ಅಡವಿಗಳ ಮಧ್ಯದ ದುರ್ಗಮ ಪ್ರದೇಶವೊಂದರ ಗುಹೆಯೊಂದರಲ್ಲಿ ರಾಜ ಜ್ಯೋತಿಯನ್ನು ಸ್ಥಾಪಿಸಿದ; ದಿನಾಲೂ ಗುಟ್ಟಾಗಿ ಅಲ್ಲಿಗೆ ಪೂಜೆಗೆ ತೆರಳುತ್ತಿದ್ದ. ಜ್ಯೋತಿ ತಲ್ಪಿದ ಕೆಲವೇ ದಿನಗಳಲ್ಲಿ ಸಬರ್ ದೇಶದ ಸ್ಥಿತಿ ಪೂರ್ತಿ ಬದಲಾಯ್ತು. ಎಲ್ಲೆಡೆಯಲ್ಲೂ ಸುಖ ಸಂಪತ್ತು ನಲಿಯತೊಡಗಿತು. ಇದೆಲ್ಲವೂ ಆ ಜ್ಯೋತಿಯ ಮಹಿಮೆಯೆಂದು ಅಲ್ಲಿನ ಜನ ಹೇಳತೊಡಗಿದರು. ಜ್ಯೋತಿ ಇರುವ ಜಾಗದ ರಹಸ್ಯ ಬಹಿರಂಗಗೊಳ್ಳಬಾರದೆಂದು ಸ್ವತಃ ತಾವೂ ಆ ಜಾಗವನ್ನು ನೋಡದಿರಲು ನಿರ್ಧರಿಸಿದರು. ಪುರುಷೋತ್ತಮ ಕ್ಷೇತ್ರಕ್ಕೆ ತಾನು ಬಂದಿರುವುದು ವಿದ್ಯಾಪತಿಗೆ ಖಚಿತವಾಯ್ತು. ದಿವ್ಯಜ್ಯೋತಿಯ ದರ್ಶನ ಪಡೆಯುವುದು ಮಾತ್ರ ಬಾಕಿ ಉಳಿಯಿತು. ಆತ ಈ ಕುರಿತು ಸಬರ್ ರಾಜನೊಡನೆ ಹಲವು ಬಾರಿ ವಿನಂತಿಸಿದ. ಆದರೆ ರಾಜ ಪ್ರತೀ ಸಲವೂ ನುಣುಚಿಕೊಳ್ಳುತ್ತಿದ್ದ. ವಿದ್ಯಾಪತಿ ಸಬರ್ ರಾಜನ ಅತಿಥಿ ಗೃಹದಲ್ಲೇ ತಂಗಿದ್ದ. ಒಂದು ವರ್ಷ ಪರ್ಯಂತ ರಾಜನಲ್ಲಿ ಬಿಟ್ಟೂ ಬಿಡದೇ, ಜ್ಯೋತಿಯನ್ನು ತೋರಿಸುವಂತೇ ವಿನಂತಿಸುತ್ತಿದ್ದರೂ, ಏನಾದರೂ ನೆಪವೊಡ್ಡಿ ರಾಜ ತಪ್ಪಿಸಿಕೊಳ್ಳುತ್ತಿದ್ದ.
ಸಬರ್ ರಾಜನಿಗೆ ಲಲಿತೆಯೆಂಬ ಒಬ್ಬ ಮಗಳಿದ್ದಳು. ಅತಿಥಿ ಬ್ರಾಹ್ಮಣನ ಸತ್ಕಾರದಲ್ಲಿ ಯಾವುದೇ ಕೊರತೆ ಉಂಟಾಗಬಾರದೆಂದು ರಾಜ ಮಗಳಿಗೆ ಮೊದಲೇ ಹೇಳಿದ್ದ. ಲಲಿತೆ ಆ ಪ್ರಕಾರ, ಅತಿಥಿಯ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದಳು. ದೈನಿಕ ಜಪ-ತಪಗಳ ನಂತರ ವಿದ್ಯಾಪತಿ ನಗರಕ್ಕೆ ಸಂಚಾರ ಹೊರಡುತ್ತಿದ್ದ. ಅವನು ಕುಶಲಶಿಲ್ಪಿಯಾಗಿದ್ದು, ಮೂರ್ತಿ ಮಾಡಲುಬೇಕಾದ ಎಲ್ಲಾ ಸಾಮಗ್ರಿಗಳನ್ನು ತರಿಸಿಕೊಂಡು ಅತಿಥಿಗೃಹದಲ್ಲೇ ಕಲ್ಲಿನ ಮೂರ್ತಿಯೊಂದನ್ನು ನಿರ್ಮಿಸತೊಡಗಿದ. ಒಂದು ದಿನ ಲಲಿತೆಯನ್ನು ಅಲ್ಲಿಗೆ ಬರಹೇಳಿ, ಮೂರ್ತಿಯಮೇಲಿನ ಪರದೆಯನ್ನು ಏರಿಸುವಂತೇ ಸೂಚಿಸಿದ. ಪರದೆ ಸರಿಯುತ್ತಲೇ, ಎದುರಿಗೆ ಕೈಯ್ಯಲ್ಲಿ ಲೆಕ್ಕಣಿಕೆ ಹಿಡಿದು ಕಾಗದ ಬರೆಯುತ್ತಿರುವ ತನ್ನದೇ ಮೂರ್ತಿಯನ್ನು ಕಂಡು ದಂಗಾದಳು! "ನಾನು ಪತ್ರಬರೆಯುವುದನ್ನು ಯಾವಾಗ ನೋಡಿದಿರಿ? ಈ ಮೂರ್ತಿಯನ್ನು ಯಾವಾಗ ತಯಾರಿಸಿದಿರಿ ? ನೀವು ಗುಟ್ಟಾಗಿ ನನ್ನ ಕೋಣೆಗೆ ಬರುತ್ತಿದ್ದಿರಾ?" ಎಂದು ಕೇಳಿದಳು. ಅದು ತನ್ನ ಕಲ್ಪನೆಯ ಪರಿಣಾಮವೆಂದೂ, ನೋಡಿದಂದಿನಿಂದ ತನ್ನಲ್ಲಿ ಲಲಿತೆಯೇ ತುಂಬಿಕೊಂಡು ಎಲ್ಲೆಲ್ಲೂ ಅವಳೇ ಕಾಣುತ್ತಾಳೆಂದೂ, ತಾನು ಲಲಿತೆಯನ್ನು ಹಾರ್ದಿಕವಾಗಿ ಪ್ರೀತಿಸುತ್ತೇನೆಂದೂ ತಿಳಿಸಿದ. ವಿದ್ಯಾಪತಿ ಅವಳಿಗೆ ಪ್ರೀತಿಯ ಆಮಿಷವೊಡ್ಡಿ ಜ್ಯೋತಿಯ ದರ್ಶನ ಪಡೆಯುವ ಮಸಲತ್ತು ನಡೆಸಿದ್ದ; ವಾಸ್ತವವಾಗಿ ಅವನಿಗೆ ಅವಳಮೇಲೆ ಪ್ರೀತಿಯೇನೋ ಇರಲಿಲ್ಲ. ಆದರೆ ಲಲಿತೆ ವಿದ್ಯಾಪತಿಯನ್ನು ಬಹಳವಾಗಿ ಮೆಚ್ಚಿದ್ದಳು; ಪ್ರೀತಿಸುತ್ತಿದ್ದಳು. ವಿದ್ಯಾಪತಿಗೆ ಬರೆದ ಪ್ರೇಮಪತ್ರವನ್ನು ನಾಚಿಕೆಯಿಂದ ಕೊಟ್ಟಿರಲಿಲ್ಲ; ಈಗ ಆ ಪತ್ರವನ್ನು ಅವಳು ವಿದ್ಯಾಪತಿಗೆ ಕೊಟ್ಟಳು. ಪತ್ರದ ಪ್ರತೀ ಪದವೂ ಪ್ರೀತಿಯ ಮೇರುವನ್ನು ತೋರುತ್ತಿತ್ತು, ಆದರೆ ವಿದ್ಯಾಪತಿಗೆ ದಿವ್ಯ ಜ್ಯೋತಿಯ ದರ್ಶನ ಪಡೆಯುವ ಉಪಾಯಗಳ ಬಗ್ಗೆ ಮಾತ್ರ ಮನಸ್ಸು ಮುಂದಾಗಿತ್ತು. ಪ್ರೀತಿಯ ಬಲೆಯಲ್ಲಿ ತನ್ನ ಕೆಲಸ ಪೂರ್ಣವಾಗುವುದೆಂದು ಆತ ನಂಬಿದ.
ವಿದ್ಯಾಪತಿಯ ಸೂಚನೆಯಂತೇ, ಅವನಿಗೆ ಜ್ಯೋತಿಯ ದರ್ಶನ ಮಾಡಿಸಬೇಕೆಂದು ಲಲಿತೆ ದಿನಾಲೂ ತಂದೆಯನ್ನು ಒತ್ತಾಯಿಸತೊಡಗಿದಳು. ಆದರೆ ರಾಜ ತನ್ನ ನಿರ್ಧಾರದಿಂದ ಕದಲಲಿಲ್ಲ. ವಿದ್ಯಾಪತಿಯ ಒತ್ತಾಯವೂ ಹೆಚ್ಚುತ್ತ ಹೋಯ್ತು. ಕಟ್ಟಕಡೆಗೆ ಲಲಿತೆ ಸಿಟ್ಟಿನಿಂದ "ನಾಳೆ ನೀವು ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸದೇ ಹೋದ ಪಕ್ಷದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ" ಎಂದಳು. ಸಬರ್ ರಾಜನಿಗೆ ಬೇರಾವುದೇ ದಾರಿ ಉಳಿಯಲಿಲ್ಲ; ಮಗಳೆಂದರೆ ಅವನಿಗೆ ಸರ್ವಸ್ವ. ಹೆಂಡತಿ ಸತ್ತ ಬಳಿಕ ಮಗಳಿಗಾಗಿಯೇ ಆತ ಬದುಕಿದ್ದ. ಅವಳ ಬಾಯಿಂದ ಇಂಥಾ ಕಠೋರ ವಚನವನ್ನು ಕೇಳಿ ರಾಜ ನಿರುಪಾಯನಾಗಿ, ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸಲು ಒಪ್ಪಿಕೊಂಡ. ಆದರೆ ಜ್ಯೋತಿಯಿರುವ ಜಾಗದವರೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋಗಬೇಕೆಂದು ಷರತ್ತುವೊಡ್ಡಿದ. ವಿದ್ಯಾಪತಿಗೆ ಈ ವಿಷಯ ಹೇಳಿ ಲಲಿತೆ ಮುಗುಳುನಕ್ಕು ಅವನ ಕೈಲಿ ಒಂದು ಮುಷ್ಠಿ ಸಾಸಿವೆ ಬೀಜಗಳನ್ನಿಡುತ್ತಾ ದಾರಿಯುದ್ದಕ್ಕೂ ಅವುಗಳನ್ನು ಚೆಲ್ಲುತ್ತಾ ಹೋಗಲು ತಿಳಿಸಿದಳು. ಗುಹೆಗೆ ತಲುಪುತ್ತಲೇ ಸಬರ್ ರಾಜ ವಿದ್ಯಾಪತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಡಿಸಿದ. ಪರಬ್ರಹ್ಮ ಪರಮೇಶ್ವರ ಸ್ವರೂಪಿಯಾದ ಆ ಜ್ಯೋತಿಯನ್ನು ಕಂಡು ವಿದ್ಯಾಪತಿ ಭಾವಾವಿಷ್ಟನಾದ. ರಾಜನಿಗೆ ಶಾಸ್ತ್ರಗಳ ಜ್ಞಾನವಿರಲಿಲ್ಲ; ಆದರೆ ವಿದ್ಯಾಪತಿಗೆ ಅವು ತಿಳಿದಿದ್ದವು. ದಿವ್ಯದೇಹಧಾರಿಯಾದ ಪರಮಪಿತ ಪರಮೇಶ್ವರ ಸಾಕ್ಷಾತ್ ಎದುರುನಿಂತ ಹಾಗನ್ನಿಸಿತು-ವಿದ್ಯಾಪತಿಗೆ; ಒಂದಷ್ಟೂ ಅಲುಗಾಡದೇ ಭಗವಂತನನ್ನು ಆತ ಸ್ತುತಿಸತೊಡಗಿದ. ಎಷ್ಟೋ ತಾಸುಗಳ ಬಳಿಕ ಸಬರ್ ರಾಜ ವಿದ್ಯಾಪತಿಯನ್ನು ಅಲ್ಲಾಡಿಸಿದ. ನಂತರ ಇಬ್ಬರೂ ಅರಮನೆಗೆ ಮರಳಿದರು. ಈ ವಿಷಯವನ್ನು ಬೇರ್ರಾರಿಗೂ ಹೇಳುವುದಿಲ್ಲವೆಂದು ಪ್ರತಿಜ್ಞೆಮಾಡುವಂತೇ ಸಬರ್ ರಾಜ ವಿದ್ಯಾಪತಿಯನ್ನು ಒತ್ತಾಯಿಸುತ್ತಿದ್ದ. ಆದರೆ ವಿದ್ಯಾಪತಿ ವಿಷಯಾಂತರ ಮಾಡುತ್ತಾ ನುಣುಚಿಕೊಂಡ. ಅವನ ಉದ್ದೇಶ ಈಡೇರಿತ್ತು. ತಾನಿನ್ನು ಊರಿಗೆ ಹೊರಡುವೆನೆಂದ. ತಡೆಯಲು ಲಲಿತೆ ಅದೆಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳಿಗೆ ಸುಳ್ಳು ಭರವಸೆ ಇತ್ತು ಆತ ಹೊರಟೇಹೋದ.
ಇಂದ್ರದ್ಯುಮ್ನ ರಾಜನಿಗೆ ಪುರುಷೋತ್ತಮ ಕ್ಷೇತ್ರದ ದಿವ್ಯಜ್ಯೋತಿಯ ಕತೆ ಹೇಳಿದಾಗ ಅವನ ಕಂಗಳಿಂದ ಶ್ರದ್ಧೆಯ ಕಣ್ಣೀರು ಉಕ್ಕಿಬಂತು. ತನ್ನ ಸೈನ್ಯದೊಂದಿಗೆ ಆ ಸ್ಥಾನಕ್ಕೆ ಆತ ಹೊರಟುನಿಂತೇಬಿಟ್ಟ! ನೀಲಾದ್ರಿ ಪರ್ವತ ಅತಿ ಫಲವತ್ತಾದ ಪ್ರದೇಶ. ಅಲ್ಲಲ್ಲಿ ಹಣ್ಣಿನ ಮರಗಳು ಕಾಣಿಸುತ್ತಿದ್ದವು. ಬೇಸಾಯ ಪ್ರಾಕೃತಿಕ ರೂಪದಲ್ಲೇ ನಡೆಯುತ್ತಿತ್ತು. ವಿದ್ಯಾಪತಿ ಚೆಲ್ಲಿದ್ದ ಸಾಸಿವೆ ಬೀಜಗಳಿಂದ ಗಿಡಗಳು ಹುಟ್ಟಿಬಂದಿದ್ದವು. ದಾರಿ ಸುಲಭವಾಗಿ ತಿಳಿಯುತ್ತಿತ್ತು. ರಾಜ ಇಂದ್ರದ್ಯುಮ್ನ ಅಲೌಕಿಕ ಪರಮಜ್ಯೋತಿಯ ದಿವ್ಯದರ್ಶನ ಪಡೆಯಲು ಕಾತುರನಾಗಿದ್ದ. ಅತ್ಯುತ್ಸಾಹದಲ್ಲಿ ಧಾವಿಸುವ ಭರದಲ್ಲಿ ಸಬರ್ ರಾಜನಿಗೆ ಸಂದೇಶ ಕಳಿಸುವ ಪರಂಪರೆಯನ್ನೂ ಆತ ಮರೆತುಬಿಟ್ಟಿದ್ದ. ರಾಜ ವಿದ್ಯಾಪತಿಯೊಂದಿಗೆ ವೇಗವಾಗಿ ಮುಂದೆಸಾಗಿದ. ಎಲ್ಲವೂ ಮೊದಲಿನಂತೆಯೇ ಇದ್ದವು. ಅಕ್ಕಪಕ್ಕದ ಕಲ್ಲುಗಳೂ ವಿದ್ಯಾಪತಿ ಕೆಲದಿನಗಳ ಹಿಂದೆ ಕುಳಿತು ಧ್ಯಾನಿಸಿದ್ದ ಜಾಗವೂ ಹಾಗೆಯೇ ಇದ್ದವು. ಆತ ಆಚಮನಕ್ಕಾಗಿ ಬಳಸಿ ಮತ್ತೆ ತೊಳೆದಿರಿಸಿದ ತಾಮ್ರದ ಪುಟ್ಟಪಾತ್ರೆಯೂ ಹಾಗೇ ಅಲ್ಲೇ ಇತ್ತು. ಆದರೆ ಅಲ್ಲಿ ಆ ದಿವ್ಯಜ್ಯೋತಿಮಾತ್ರ ಇರಲಿಲ್ಲ!! ಅದು ಅಲ್ಲಿಂದ ಅಂತರ್ಧಾನವಾಗಿತ್ತು. ಇಂದ್ರದ್ಯುಮ್ನ ನಿರಾಶನಾದ. ವಿದ್ಯಾಪತಿ ಚಿಂತಾಮಗ್ನನಾದ, ಅವನು ಲಲಿತೆಯನ್ನು ವಂಚಿಸಿದ್ದೂ ಅಲ್ಲದೇ ಸಬರ್ ರಾಜನಿಗೂ ವಿಶ್ವಾಸಘಾತಕ ಕೃತ್ಯ ಅಮಾಡಿದ್ದ; ಯಾವುದೇ ಸ್ವಾರ್ಥವಿಲ್ಲದೇ ಕೇವಲ ತನ್ನ ರಾಜ್ಯದ ರಾಜನ ಸಲುವಾಗಿಯೇ ಹಾಗೆ ಮಾಡಿದ್ದರೂ ಜನ್ಮಾಂತರಗಳಲ್ಲಾದರೂ ಅದರ ಪಾಪವನ್ನು ಅನುಭವಿಸಬೇಕಾಗುತ್ತದೆ ಎಂಬುದು ಆತನಿಗೆ ಸ್ಪಷ್ಟವಾಗಿತ್ತು; ಆತ ಪದ್ಮಾಸನದಲ್ಲಿ ಕುಳಿತು ಈಶ್ವರನ ಕ್ಷಮೆಯಾಚಿಸಿದ. ಕಾಣದ ಆ ದಿವ್ಯ ಜ್ಯೋತಿಯನ್ನು ರಾಜಾ ಇಂದ್ರದ್ಯುಮ್ನ ಕನಸಿನ ರೂಪದಲ್ಲಿ ಕಂಡ. ಕನಸಿನಲ್ಲಿ ಜಗನ್ನಾಥಸ್ವಾಮಿ ಕಾಣಿಸಿಕೊಂಡು ಸೂಚಿಸಿದಂತೇ ರಾಜಾ ಇಂದ್ರದ್ಯುಮ್ನ ಮುಂದೆ, ಪುರಿಯಲ್ಲಿ ಜಗನ್ನಾಥ ಮಂದಿರವನ್ನು ನಿರ್ಮಿಸಿ ಅದರಲ್ಲಿ ಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ.
ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪೇ ಚೇತಸಾ
ಸೇವ್ಯೇ ಸೇವ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ |
ಯಂ ಕಂಚಿತ್ಪುರುಷಾಧಮಂ ಕತಿಪಯಾಗ್ರಾಮೇಶಮಲ್ಪಾರ್ಥದಂ
ಸೇವಾಯೈ ಮೃಗಯಾಮಹೇ ನರಮಹೋ ಮೂಕಾ ವರಾಕಾ ವಯಮ್ ||
ಕೃಷ್ಣೋ ರಕ್ಷತು ನೋ ಜಗತ್ರಯಗುರುಃ ಕೃಷ್ಣಂ ನಮಸ್ಯಾಮ್ಯಹಂ
ಕೃಷ್ಣೇನಾಮರ-ಶತ್ರವೋ ವಿನಿಹತಾಃ ಕೃಷ್ಣಾಯ ತಸ್ಮೈ ನಮಃ |
ಕೃಷ್ಣಾದೇವ ಸಮುತ್ಥಿತಂ ಜಗದಿದಂ ಕೃಷ್ಣಸ್ಯ ದಾಸೋಸ್ಮ್ಯಹಂ
ಕೃಷ್ಣೇ ತಿಷ್ಠತಿ ಸರ್ವಮೇತದಖಿಲಂ ಹೇ ಕೃಷ್ಣ ರಕ್ಷಸ್ವ ಮಾಮ್ ||
--ಮುಕುಂದಮಾಲಾ
ಪುರಿ ಜಗನ್ನಾಥ ಕ್ಷೇತ್ರದ ಸುತ್ತ ಇಂತಹ ಹಲವಾರು ಕಥೆಗಳೇ ಇವೆ! ಒಂದೊಂದು ಕಥೆಯೂ ವಿಭಿನ್ನ ಮೂಲದಿಂದ ಆರಂಭಗೊಳ್ಳುತ್ತದೆ. ನಿರ್ಗುಣದಿಂದ ಸಗುಣರೂಪವನ್ನು ಉಪದದಾನ ಮಾಡುವ ಪರಬ್ರಹ್ಮ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎರಡನ್ನೂ ಒಪ್ಪಿಕೊಳ್ಳುತ್ತಾನೆ. ಪುರಿಯ ವಿಗ್ರಹಗಳು ಪೂರ್ಣವಲ್ಲ; ಅವು ಅಪೂರ್ಣ ಆಕೃತಿಗಳು; ನೋಡಲು ವಿಚಿತ್ರವಾಗಿವೆ, ಮರದ ವಿಗ್ರಹಗಳಾದರೂ ಗರ್ಭಗುಡಿಯಲ್ಲೂ ನೆಲೆನಿಂತು, ವರ್ಷಂಪ್ರತಿ ಜಾತ್ರೆಯಲ್ಲಿ ರಥಾರೂಢವೂ ಆಗಿ ಚಲಾಚಲ ಮೂರ್ತಿಗಳೆನಿಸಿವೆ. ಬ್ರಹ್ಮದೇವರು ಮೂರ್ತಿಯನ್ನು ಪೂರ್ಣಗೊಳಿಸುವ ಮುನ್ನವೇ, ಭವನದ ಬಾಗಿಲು ತೆರೆದಿದ್ದರಿಂದ ಮೂರ್ತಿಯ ತಯಾರಿ ಅಷ್ಟಕ್ಕೇ ನಿಂತು ಅದೇ ರೂಪದಲ್ಲಿ ಮೂರ್ತಿಗಳು ಪೂಜೆಗೊಳ್ಳುತ್ತಿವೆ ಎಂದೂ ಜನಪದ ಕಥೆ ತಿಳಿಸುತ್ತದೆ. ಇವತ್ತಿಗೂ ಪುರಿಯಲ್ಲಿ ನಾವು ಬಲಭದ್ರ, ಸುಭದ್ರ ಮತ್ತು ಜಗನ್ನಾಥರೆಂಬ ಮುಖವಾಡಗಳ ರೀತಿಯ ಮೂರು ವಿಗ್ರಹಗಳನ್ನು ಕಾಣುತ್ತೇವೆ. ರಾಜಬೀದಿಯಲ್ಲಿ ರಥವೇರಿ ಅವು ಬರುವಾಗ ರಾಜವಂಶಸ್ಥರು ಬೀದಿ ಗುಡಿಸಿ ಸ್ವಚ್ಛಗೊಳಿಸುವ ಶಾಸ್ತ್ರ ನಡೆಸುತ್ತಾರೆ. ವರ್ಷವರ್ಷವೂ ಹೊಸ ಹೊಸದಾಗಿ ಸಿದ್ಧಪಡಿಸಿದ ರಥಗಳನ್ನು ಲಕ್ಷೋಪಲಕ್ಷಜನ ಎಳೆದು ಸಂತಸಪಡುತ್ತಾರೆ. ಇಂತಹ ಪರಬ್ರಹ್ಮನನ್ನು ಸ್ವರೂಪಸಂಧಾನಾಷ್ಟಕ ಆಚಾರ್ಯರು ಹೀಗೆ ವರ್ಣಿಸಿದ್ದಾರೆ:
ಅನಂತಂ ವಿಭುಂ ಸರ್ವಯೋನಿರ್ನಿರೀಹಂ
ಶಿವಂ ಸಂಗಹೀನಂ ಯದೋಂಕಾರಗಮ್ಯಂ |
ನಿರಾಕಾರಮತ್ಯುಜ್ಜ್ವಲಂ ಮೃತ್ಯುಹೀನಂ
ಪರಬ್ರಹ್ಮ ನಿತ್ಯಂ ತದೇವಾಹಮಸ್ಮಿ ||
ಗೀತಗೋವಿಂದವನ್ನು ಬರೆದ ಕವಿ ಜಯದೇವ ತನ್ನ ಅಷ್ಟಪದೀ ಎಂಬ ಸ್ತೋತ್ರದಲ್ಲಿ ಹೀಗೆ ಹೇಳುತ್ತಾನೆ:
ವೇದಾನುದ್ಧರತೇ ಜಗನ್ನಿವಹತೇ ಭೂಗೋಲಮುದ್ಬಿಭ್ರತೇ
ದೈತ್ಯಾನ್ ದಾರಯತೇ ಬಲಿಂ ಛಲಯತೇ ಕ್ಷತ್ರಕ್ಷಯಂ ಕುರ್ವತೇ |
ಪೌಲಸ್ತ್ಯಂ ಜಯತೇ ಹಲಂಕಲಯತೇ ಕಾರುಣ್ಯಮಾತನ್ವತೇ
ಮ್ಲೇಚ್ಛಾನ್ ಮೂರ್ಛಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||
ಅಂತೂ ಪುರುಷೋತ್ತಮ ಪುರಿಯ ರಹಸ್ಯವನ್ನು ತಿಳಿದುಕೊಂಡಿದ್ದೀರಿ. ರಹಸ್ಯ ನಿಮಗೆಲ್ಲಾ ತಿಳಿದರೂ ಅದು ಹಾಗೇ ಗೌಪ್ಯವಾಗಿರಲಿ! ಇಲ್ಲದಿದ್ದರೆ ಸಬರ್ ರಾಜ ಕೋಪಿಸಿಕೊಂಡಾನು, ವಿದ್ಯಾಪತಿ ಮಾಡಿದ ತಪ್ಪಿಗೆ ಅನವರತ ನೊಂದುಕೊಂಡಾನು! ಲಲಿತೆ ಮಾತ್ರ ಸಂತತ ತನ್ನ ಪ್ರಿಯಕರನ ಹಾದಿಕಾಯುತ್ತಿರುವಳೋ ಏನೋ, ಪಾಪ! ಇಂತಹ ಕಥೆಗಳನ್ನು ಕಾರ್ತಿಕ-ಮಾರ್ಗಶೀರ್ಷ ಮಾಸಗಳಲ್ಲಿ ಕೇಳಬೇಕು. ಅಚ್ಚರಿಯೆನಿಸಿದರೂ, ನಂಬಲಸಾಧ್ಯವೆನಿಸಿದರೂ ಘಟಿಸಿದ ಘಟನೆಗಳನ್ನೇ ಆಧರಿಸಿ ಪೂರ್ವಜರು ಕಥೆಗಳನ್ನು ಬರೆಯುತ್ತಿದ್ದರು. ಹುಟ್ಟಿದ ಪ್ರತಿಯೊಂದು ಜೀವಿಗೂ ತನ್ನದ್ದೇ ಆದ ಒಂದು ಕಥೆ ಇದೆ ಅಲ್ಲವೇ? ಹಾಗೊಮ್ಮೆ ನೋಡಿದಾಗ ಹಲವು ಇಂದ್ರದ್ಯುಮ್ನರು ತತ್ಸಮಾನ ವಿದ್ಯಾಪತಿಗಳೂ ಲಲಿತೆಯರೂ ಈ ಜಗದಲ್ಲಿ ಜನ್ಮಾಂತರಗಳಲ್ಲಿ ಹಲವುಬಾರಿ ಬಂದುಹೋಗಿರಬಹುದು, ಈಗಲೂ ಇನ್ನಾವುದೋ ರೂಪದಲ್ಲಿರಲೂ ಬಹುದು; ವಿಚಾರ ಮಥಿಸಿದರೆ ಈ ಜಗ ಸೋಜಿಗ, ಜಗಕ್ಕೊಬ್ಬನೇ ಬಹುದೊಡ್ಡ ಬಾಣಸಿಗ-ಅವನೇ ಪರಬ್ರಹ್ಮ. ಅಂತಹ ಪರಬ್ರಹ್ಮನ ನೆನಕೆಗೆ ಕಾಲ-ದೇಶಗಳ ಗಡುವೇ ಎನ್ನಬೇಡಿ, ಆತ ಗೀತೆಯಲ್ಲಿ ಹೇಳಿದ ಪ್ರಕಾರ ಕಾಲದ/ವರ್ಷದ/ಋತುಗಳ ಕೆಲವೊಂದು ಭಾಗಗಳು ಇಂತಿಂಥಾ ಕೆಲಸಕ್ಕೇ ಮೀಸಲಾಗಿವೆ; ಸಂವತ್ಸರದ ಈ ಕಾಲ ಪುಣ್ಯಕಥೆಗಳನ್ನು ಶ್ರವಣ ಮಾಡುವ ಕಾಲ, ತೀರ್ಥಯಾತ್ರೆಗೂ ಹೋಗುವ ಕಾಲ. ಕಥಾಶ್ರವಣ ಮಾಡಿದ ನಿಮಗೆಲ್ಲಾ ಭಗವಂತ, ಪುರಿಯ ಪುರುಷೋತ್ತಮ ಸುಫಲವನ್ನೀಯಲಿ, ನಮಸ್ಕಾರ.
No comments:
Post a Comment