ಸರ್ಪಸುತ್ತು
===========
ಸರ್ಪಸುತ್ತು
ನಿಮಗೆ ಗೊತ್ತು
ಸಹಿಸಲಾರದ ಬೇನೆ
ಸರ್ಪ ಸುತ್ತಿದ್ದರೂ
ನಸುನಗುತ್ತಿರುವ
ಗಣಪನಿಗೆ ವಂದನೆ !
-ಬಂದಿದ್ದು ಉದಯವಾಣಿಯಲ್ಲಿ ವರ್ಷದ ಹಿಂದಿನ ಗಣೇಶ ಚತುರ್ಥಿಯ ಸಮಯದಲ್ಲಿ! ನಕ್ಕು ಕೆಮ್ಮು ಬಂದು ಸುಧಾರಿಸಿಕೊಳ್ಳುವ ಮೊದಲೇ ಮತ್ತೊಂದು ಪಟಾಕಿ ಸಿಡಿಯಿತು :
ರಾಗಿ ಪದ
===========
ಇದ್ದಿದ್ದರೆ ಇಂದು ಕನಕದಾಸರು
ಮತ್ತೊಮ್ಮೆ ರಾಗಿಪದ
ಹಾಡುತ್ತಿದ್ದರು
ಭಾರೀ ಶ್ರೀಮಂತರಾಗಿ
ಮಾಜಿ ಸಚಿವರಾಗಿ
ರಾಗಿ ತಿಂದೀರಾ ?
ಜೈಲಲಿ ರಾಗಿ ತಿಂದೀರಾ ?
ಗಣಪತಿಗೆ ಬಹಳ ಇಷ್ಟದ ಖಾದ್ಯಗಳಲ್ಲಿ ಒಂದು ಪಂಚಕಜ್ಜಾಯ, ಆದರೆ ಈ ಡುಂಡಿರಾಜ ಗಣಪತಿಗೆ ಇಷ್ಟದ ನೈವೇದ್ಯ PUNCHಕಜ್ಜಾಯ. ಹನಿಗವನಗಳು-ಅಣಕವಾಡುಗಳು-ಭಾವಗೀತೆಗಳು-ವಿನೋದ ಗೀತೆಗಳು-ಚುಟುಕಗಳು ಇವೆಲ್ಲಾ ಸೇರಿದ್ದೇ ಈ ಪಂಚಕಜ್ಜಾಯದ ವಿಶೇಷ. ನಮ್ಮೂರಕಡೆಗೆ ಸಮಾನ್ಯವಾಗಿ, ದೊಡ್ಡ ದೊಡ್ಡ ಹಬ್ಬಗಳ ಸಂದಿನಲ್ಲೇ ಎಲ್ಲಾದರೂ ಮನೋರಂಜಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುವುದು ವಾಡಿಕೆ. ಹೆಚ್ಚಾಗಿ ಯಕ್ಷಗಾನ ತಾಳಮದ್ದಲೆ ಅಥವಾ ಆಟಗಳನ್ನೋ ಅಥವಾ ಸುಗಮಸಂಗೀತ ರಸಧಾರೆಯನ್ನೋ ಇಟ್ಟುಕೊಳ್ಳುತ್ತಾರೆ. ಅಲ್ಲಲ್ಲಿ ಭಜನೆಗಳೂ, ಭರತನಾಟ್ಯ ಮುಂತಾದ ಕಾರ್ಯಕ್ರಮಗಳೂ ಸೇರಿರುತ್ತವೆ. ಮಹಾಚೌತಿಗೆ ಊರಿಗೆ ಹೋಗಲಿಲ್ಲ-ದಾಯಾದರಲ್ಲಿನ ಯಾವುದೋ ಸೂತಕದಿಂದ ಹಬ್ಬ ದಸರಾಕ್ಕೆ ಮುಂದೂಡಲ್ಪಟ್ಟಿದೆ; ಹಬ್ಬ ಆ ಯಾ ಸಂದರ್ಭದಲ್ಲಿ ನಡೆದರೆ ಮಾತ್ರ ಚಂದ. ಊರೆಲ್ಲೆಲ್ಲಾ ಆಚರಿಸಿ ಮುಗಿದಮೇಲೆ ಕೇವಲ ಒಂದಷ್ಟು ಕುಟುಂಬಗಳವರು ಜಾಗಟೆ ಹೊಡೆದು ಹಬ್ಬಮಾಡುವಾಗ ಎಂದಿನ ಖುಷಿ ಇರುವುದಿಲ್ಲ. ಈ ಭಾವನೆಯಲ್ಲಿ ನಾನಿದ್ದಾಗಲೇ ಪಂಚಕಜ್ಜಾಯ ಕೊಡ್ತೇನೆ ಬನ್ನಿ ಎಂದು ಸಾರ್ವತ್ರಿಕವಾಗಿ ಆಮಂತ್ರಣ ಹಿಡಿದು ಬಂದಿದ್ದು ನಮ್ಮ ಡುಂಡಿ-ಫೇಸ್ ಬುಕ್ಕಿನಲ್ಲಿ. ಹಬ್ಬ ತಪ್ಪಿದರೂ ಹೋಳಿಗೆ ತಪ್ಪಬಾರದು ಎಂದೇ ಬಯಸುವ ನಾನು ಮತ್ತು ನನ್ನಂಥಾ ಜನ ನಡೆದಿದ್ದು ಡುಂಡಿರಾಜ[ಗಣಪತಿ] ಕೊಡುವ PUNCHಕಜ್ಜಾಯ ಪಡೆಯಲಿಕ್ಕೆ!
ಒಂದಿಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎನ್ನಬಹುದು. ’ಜಾಲಿಬಾರಿನಲ್ಲಿ ಕೂತು ಪೋಲಿಗೆಳೆಯರು’ ಹಾಡು ಬರೆದು ತುಂಟತನ ಕವಿತ್ವಕ್ಕೆ ಹೆಸರಾದ ಕವಿ ಬಿ.ಆರ್.ಲಕ್ಷ್ಮಣರಾಯರು ಕನ್ನಡ ಸಾಹಿತ್ಯ ಪ್ರಾಕಾರಕ್ಕೆ ಹೊಸದೊಂದು ಜೋಡಣೆ ಕಲ್ಪಿಸಿದರು-ಅದು ಹನಿಗವನ. ಅಧುನಿಕ ಧಾವಂತದ ಜೀವನದಗತಿಗೆ ದರ್ಶಿನಿ ಹೋಟೆಲ್ ಗಳಿದ್ದಂತೇ ತುರ್ತಾಗಿ, ತ್ವರಿತವಾಗಿ,ಚಿಕ್ಕದಾಗಿ ಏನನ್ನಾದರೂ ನೆನೆದುಕೊಂಡು ನಗಲಿಕ್ಕೆ ಜನ ಆಸಕ್ತರಾಗಿದ್ದ ಕಾಲ. ಐದೇ ನಿಮಿಷದ ಮ್ಯಾಗಿ, ಸ್ಥಳದಲ್ಲೇ ಕಟ್ ಓಪನ್ ಕುರ್ ಕುರ್ರೆ, ಲೇಸ್ ತಮಗೆ ಲೇಸೆಂದು ಬಗೆಯುವ ಅನಿವಾರ್ಯತೆಯಲ್ಲಿದ್ದ ಜನರಿಗೆ ಸೀಮೆ ಎಣ್ಣೆ/ಗ್ಯಾಸ್/ರೇಷನ್ ಖರೀದಿಗೆ ಕ್ಯೂ ನಿಂತಾಗ, ಬ್ಯಾಂಕಿನಲ್ಲಿ ಹಣಕಟ್ಟಲೋ ಪಡೆಯಲೋ ಸರದಿ ನಿಂತಾಗ, ಬಸ್ಸಿಗಾಗಿ ಕಾದು ಬೇಸತ್ತು ನಿಂತಾಗ, ದಿನಗೆಲಸದ ಮಧ್ಯೆ ಮಧ್ಯಾಹ್ನದ ಲಂಚ್ ತೆಗೆದುಕೊಂಡು ಒಂದೈದು ನಿಮಿಷ ಕುಳಿತಲ್ಲೇ ತೂಕಡಿಸುವಾಗ ಇಂಥಾ PUNCHಮಾತ್ರೆಗಳು ಸಿಕ್ಕರೆ ಮಹದಾನಂದವಾಗುತ್ತದೆ. ಕೆಲಸದ ರಾಶಿಯ ನಡುವೆ ಕಳೆದು ಹೋದ ಜೀವಗಳ ಸೆಟೆದುಕೊಂಡ ನರಗಳು ಸಹಜ ಸ್ಥಿತಿಗೆ ಬರುವುದಕ್ಕೆ ಅವು ಸಹಕಾರಿ!
ನಾವೆಲ್ಲಾ ಚಿಕ್ಕವರಿದ್ದಾಗಿನಿಂದಲೇ ವ್ಯಂಗ್ಯ ಪ್ರಿಯರು. ಹಿಂದೊಮ್ಮೆ ನಾನು ಹೇಳಿದ್ದೆ: ರಸ್ತೆಗಳ ಮೈಲಿಗಲ್ಲುಗಳ ಮೇಲೆ ಕಪ್ಪು ಅಕ್ಷರಗಳಲ್ಲಿ ಬರೆದ ಊರುಗಳ ಹೆಸರನ್ನು ಯಾರೋ ತಿದ್ದಿ ’ಆರೊಳ್ಳಿ’ ಇರುವುದನ್ನು ’ಆಠೊಳ್ಳಿ’ ಮಾಡಿದ್ದನ್ನೂ, ’ಬೆಂಗಳೂರು’ ಇದ್ದುದನ್ನು ’ಬೆಂದಳೂರು’ ಮಾಡಿಟ್ಟಿದ್ದನ್ನೂ ನೋಡಿ ನಗುತ್ತಿದ್ದೆವು. ಇನ್ನು ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳ ನಾಮಫಲಕವನ್ನು ಓದುವುದೇ ಬಹಳ ಮೋಜಿನದಾಗಿರುತ್ತಿತ್ತು. ಅಕ್ಷರಗಳ ನಡುವೆ ಜಾಗ ಬಿಟ್ಟೂ ಬಿಟ್ಟೂ ಬರೆಯುವ ಪದ್ಧತಿಯಲ್ಲಿ ಕೆಲವೊಮ್ಮೆ ಅಕ್ಷರಗಳ ಗುರುತು ತಪ್ಪಾಗಿಬಿಡುವುದೂ ಇತ್ತು. ಹೊನ್ನಾವರ ಎಂದು ಅವರು ಬರೆದಿದ್ದರೆ ಓಡುತ್ತಿರುವ ಬಸ್ಸನ್ನು ದೂರದಿಂದ ನೋಡುತ್ತಿದ್ದವರಿಗೆ ಅದು ಕಾಣುತ್ತಿದ್ದುದು ’ಪೊನ್ನಾದರ’ ಎಂದು! ಹೊನ್ನಾವರಕ್ಕೂ ಕುಂದಾಪುರಕ್ಕೂ ಭೌಗೋಳಿಕವಾಗಿ ತೀರಾ ಹತ್ತಿರದ ಎಂಬ ಅಂತರವಲ್ಲದಿದ್ದರೂ ಡುಂಡಿಗೂ ನನಗೂ ಮತ್ತು ನಮ್ಮೊಳಗಿನ ಆ ಒಂದು ಭಾವಕ್ಕೂ ಬಹುಶಃ ಆ ಅಂತರ ಕಮ್ಮಿ ಇದೆ. ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಅವರನ್ನೂ ಅವರ ಬರಹಗಳಿಗೆ ಸ್ಪಂದಿಸುತ್ತಾ ಡ್ಯಾಮೇಜರ್ ಆಗಿರುವ ನನ್ನನ್ನೂ ಹತ್ತಿರ ತಂದಿದ್ದೇ ಅವರ ಹನಿಗವನಗಳು.
ಡಿ ಮೋಹ
=========
ಸಿಎಂ ಆಗುವ ಮುನ್ನ ಯಡ್ಡಿ
ಸೇರಿಸಿಕೊಂಡಿದ್ದರು ಇನ್ನೊಂದು ಡಿ
ತಮ್ಮ ನೇಮಿಗೆ
ಸಿಎಂ ಆದಮೇಲೂ ಯಡ್ಡಿ
ಎಲ್ಲ ನಿಯಮ ಗಾಳಿಗೊಡ್ಡಿ
ಸೇರಿಸುತ್ತಲೇ ಹೋದರು ಡಿ
ನೋಟಿಫೈ ಆದ ಭೂಮಿಗೆ !
ಹತ್ತಿದ ಲಿಫ್ಟು ಗಕ್ಕನೆ ಮೇಲಕ್ಕೆ ಎತ್ತಿ ಫಕ್ಕನೆ ಕೆಳಕ್ಕೆ ಇಳಿಸಿ ಮಾಡುವಾಗಿನ ಗುರುತ್ವಾಕರ್ಷಣ ಶಕ್ತಿಯ ವಿಚಲಿತ ಅನುಭವ ಇಂತಹ ಹನಿಗಳದ್ದು. ನೋಡ್ತಾ ನೋಡ್ತಾ ಇದ್ದಹಾಗೇ ೩೬ ಕ್ಕೂ ಅಧಿಕ ಕೃತಿಗಳನ್ನು ಬರೆದು ಹಂಚಿದ ಡುಂಡಿಗೆ, ಕಾಶಿಗೆ ಹೋಗಿಬಂದ ಹೆತ್ತವರು ಅಲ್ಲಿ ಕಂಡ ಡುಂಡಿರಾಜ ಎಂಬ ಗಣಪತಿಯ ನೆನಪಿನಲ್ಲಿ ಇಟ್ಟ ಹೆಸರೇ ಡುಂಡಿ. ಸಂಸ್ಕೃತ ಬಲ್ಲವರನ್ನುಳಿದು ಕೆಲವರಿಗೆ ಮೊದಲು ಇದೆಂಥಾ ಹೆಸರಪ್ಪಾ ಎನ್ನಿಸಿದ್ದೂ ಉಂಟು, ಹೇಳೋದಕ್ಕೆ ಬರದೇ ದುಂಡಿರಾಜ ಎಂದವರೂ ಉಂಟು. ಹೆಸರಿನಲ್ಲೇ ಈ ಹಾಸ್ಯಪ್ರಸಂಗವನ್ನೂ ಅಡಗಿಸಿಕೊಂಡ ಡುಂಡಿಗೆ, ಈ ಸಲುವಾಗಿ ಕೇಳಿದವರಿಗೆ ಉತ್ತರ ಹೇಳಿಯೇ ಕೂದಲುಗಳು ಜಾಸ್ತಿ ಉದುರಿ ಹೋಗಿರಬೇಕು ಎಂಬುದು ನನ್ನ someಶೋಧನೆ ! ಈ someಶೋಧನೆಗೆ ಅಡ್ಡಬಂದವರೇ ಚಂಪಾ !
ಅಭಿನಂದನೆ
============
ಪಂಪ ಪ್ರಶಸ್ತಿಗೆ
ಆಯ್ಕೆಯಾದ ನಿಮಗೆ
ಅಭಿನಂದನೆ ಚಂಪಾ
ತಡವಾಯಿತೆಂದು
ಮಾಡದಿರಿ ರಂಪ
ನಿಮಗುಂಟು ನಮ್ಮ
ಅನುಕಂಪ !
ಹೋಗಲಿ ಬಿಡಿ someಶೋಧನೆ ಈಗ ಸದ್ಯಕ್ಕೆ ಅಸಾಧ್ಯವೆಂದು ಕೈಚೆಲ್ಲಿ ಕೂತರೆ,
ನಮ್ ಕುಂದಾಪ್ರದಲ್ಲಿ ಹಟ್ಟಿಕುದ್ರು
ಎಂಬ ಹಳ್ಳಿ ಇತ್ತ್ ಕಾಣಿ.
ಮೊನ್ನೆ ಮೊನ್ನೆ ಅಲ್ಲಿ ಹುಟ್ಟಿತ್ತ್
ಮಾರ್ರೆ ಈ ಮಾಣಿ
ಎಂಥಾ ಅಂತ್ರಿ ಬಿಟ್ಟಿದ್ದೇ
ಬಿಟ್ಟಿದ್ದು ಹಾಯಿಲ್ಲದ ದೋಣಿ
ಬರ್ದಿದ್ದೆಲ್ಲಾ ಓದದ್ರೆ ಅರ್ಥಾಯ್ತಿತ್ತ್ ನಿಮ್ಗೆ
ಕಾಂಬುಕ್ ಮಾಣಿ ಉಂಬುಕ್ ಗೋಣಿ !
[ಈ ಚುಟುಕ ಡುಂಡಿಯ ಮೇಲಿನ ಸಲುಗೆಯಿಂದಲೂ ಪ್ರೀತಿಯಿಂದಲೂ ಡುಂಡಿಯ ಓದಿನ ವಿಸ್ತಾರವನ್ನು ಬಣ್ಣಿಸುವ ಹವಣಿಕೆಯಿಂದಲೂ ನಾನು ಬರೆದಿದ್ದು, ಆಭಾಸಬೇಡ, ನಮ್ಮೆಡೆಗೆ ’ಮಾಣಿ’ ಎಂಬ ಪದವನ್ನು ಗಂಡುಮಗುವಿಗೂ ’ಕೂಸು’ ಎಂಬ ಪದವನ್ನು ಹೆಣ್ಣುಮಗುವಿಗೂ ಬಳಸುತ್ತೇವೆ]
ಅಂದಹಾಗೇ ೧೮.೦೮.೧೯೫೬ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿನಲ್ಲಿ ಜನಿಸಿದ ಡುಂಡಿರಾಜರು ಋಜುಮಾರ್ಗದವರು. ಕೃಷಿವಿಜ್ಞಾನದಲ್ಲಿ ಅತ್ಯಧಿಕ ಅಂಕಗಳೊಡನೆ ಎಂ.ಎಸ್ಸಿ ಪದವಿಯನ್ನು ಪಡೆಯುವಾಗ ರಾಜ್ಯಪಾಲರಿಂದ ಚಿನ್ನದ ಪದಕವನ್ನು ಪಡೆದವರು. ಉದರಂಭರಣೆಗಾಗಿ ಆಯ್ದುಕೊಂಡ ದಂಧೆ ಬ್ಯಾಂಕ್ ನೌಕರಿ. ಕಾರ್ಪೋರೇಷನ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಅವರಿಗೆ ವರ್ಗಾವರ್ಗಿ ಎಂಬುದು ವೃತ್ತಿ ಸಹಜವಾಗಿ ಸಿಕ್ಕ ಅನಿವಾರ್ಯತೆ. ಮಕ್ಕಳನ್ನು ಓದಿಗೆ ಹಚ್ಚಿದ್ದರಿಂದ ಹೆಂಡತಿ ಮಕ್ಕಳನ್ನು ಬೆಂಗಳೂರಲ್ಲೇ ಬಿಟ್ಟು ತಾನು ಮಂಗಳೂರಿನ ಶಾಖೆಯಲ್ಲಿ ಕೆಲಸಮಾಡುವಾಗಿನ ದಿನಗಳನ್ನು ಅವರು ತಮ್ಮ ಅಣಕವಾಡಿನಲ್ಲಿ ಹೇಳಿದ್ದು ಹೀಗೆ:
ಒಂದಿರುಳು ಫೋನಿನಲಿ ನನ್ನವಳ ಕೇಳಿದೆನು
ಚೆಂದನಿನಗಾವುದೆಂದು
ನಮ್ಮೂರು ಮಂಗ್ಳೂರೊ, ನಿಮ್ಮೂರು ಬೆಂಗ್ಳೂರೊ
ಚೆಂದನಿನಗಾವುದೆಂದು
ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಎಂದೆನ್ನ ಕೇಳಲೇಕೆ ?
ಬೆಂಗ್ಳೂರಿನಲ್ಲೀಗ ವಿಪರೀತ ಚಳಿ ಉಂಟು
ವಿಸ್ತರಿಸಿ ಹೇಳಬೇಕೆ ?
ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಫೋನಲ್ಲಿ ಚರ್ಚೆ ಏಕೆ?
ರಜೆಹಾಕಿ ಬಂದುಬಿಡಿ ಎಂದಳಾಕೆ !
ಬೆಂಗ್ಳೂರು ರಸ್ತೆಯಲಿ ಬಸ್ಸುಗಳು ಕಾರುಗಳು
ಲಾರಿಗಳು ಸಾಲು ಸಾಲು
ಬಸ್ಸು ಲಾರಿಗೆ ಬಡಿದು ಮುಸುಡಿ ಸೀಟಿಗೆ ಹೊಡೆದು
ಉದುರಿ ಹೋಗುವುದು ಹಲ್ಲು
ಶಿರಾಡಿ ಘಾಟಿಯಲಿ ಎಷ್ಟೊಂದು ಹೊಂಡಗಳು
ಗಬ್ಬೆದ್ದು ಹೋಗಿ ರೋಡು
ಉದ್ದಕ್ಕೂ ಕುಲುಕಾಟ ಬೆನ್ನುಮೂಳೆಗೆ ಏಟು
ಯಾರಿಗೂ ಬೇಡ ಪಾಡು
ಬೆಂಗ್ಳೂರಿನಲ್ಲೀಗ ವಿಪರೀತ ಟ್ರಾಫಿಕ್ಕು
ಓಡಾಟ ದೊಡ್ಡಗೋಳು
ಬೆಂಗ್ಳೂರಿಗಿಂತಲೂ ಮಂಗ್ಳೂರೆ ಸುಖವೆಂದು
ಅನ್ನಿಸದೆ ಸತ್ಯ ಹೇಳು
ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಸುಮ್ಮನೆ ವಾದವೇಕೆ?
ಸಾಕುಬಿಡಿ ಫೋನು ಇಡಿ ಎಂದಳಾಕೆ
ದಿ|ಕೆ.ಎಸ್.ನ. ಅವರ ’ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು.....’ ಹಾಡಿನ ಧಾಟಿಯಲ್ಲಿರುವ ಈ ಅಣಕವಾಡನ್ನು ಮತ್ತೆ ವಿಸ್ತರಿಸಿ ಹೇಳೆಬೇಕೇ? ಗೊತ್ತಾಯ್ತಾ....ಸುಮ್ಮನಿರಿ ನಗದೆ ಜೋಕೆ !!
ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ’ಅಂಕಿತ ಪುಸ್ತಕ’ ಪ್ರಕಾಶನ ಹೊರತಂದ ’ಹನಿಗಾರಿಕೆ’ ಮತ್ತು ’ಬನ್ನಿ ನಮ್ಮ ಹಾಡಿಗೆ’ ಎಂಬ ಎರಡು ಪುಸ್ತಕಗಳನ್ನು ವಿಧಿಯುಕ್ತವಾಗಿ ಬಿಡುಗಡೆಗೊಳಿಸಿದ್ದು ನೆಚ್ಚಿನ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು. ವೇದಿಕೆಯಲ್ಲಿ ಹಾಜರಿದ್ದವರು ಬಿ.ಅರ್. ಲಕ್ಷ್ಮಣರಾವ್, ಚಿಂತಾಮಣಿ ಕೊಡ್ಲೆಕೆರೆ, ಜರಗನಹಳ್ಳಿ ಶಿವಶಂಕರ್, ಯಶವಂತ ಹಳಿಬಂಡಿ ಜೊತೆಗೆ ನಮ್ಮ ಡುಂಡಿ. ವೇದಿಕೆಯ ಕೆಳಗೆ ಇದ್ದವರಲ್ಲಿ ಕೆಲವರು: ಇನ್ನೊಬ್ಬ ನೆಚ್ಚಿನ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ, ಟಿ.ಎನ್ ಸೀತಾರಾಮ್, ಶ್ರೀನಿವಾಸ್ ಕಪ್ಪಣ್ಣ, ಎಂ.ಎನ್.ವ್ಯಾಸರಾವ್, ಗ್ಯಾಜೆಟ್ ಲೋಕವನ್ನು ತೆರೆದಿಡುವ ಪವನಜ, ಜೋಗಿ, ಉದಯವಾಣಿಯ ರವಿ ಹೆಗಡೆ ಇತ್ಯಾದಿ.....ನಾನು ಕಂಡಂತೆ ನನಗೆ ಸಿಕ್ಕಷ್ಟು!
ನಿರೂಪಣೆ ’ಅಂಕಿತ’ದ ಪ್ರಕಾಶ್ ಖುದ್ದಾಗಿ ಮಾಡಿದರೆ, ಒಂದೆರಡು ಮಾತು ಮೂರ್ನಾಕು ಹಾಡು ಹಾಡಿ ರಂಜಿಸಿದವರು ಹಳಿಬಂಡಿ. ಎನ್.ಎಸ್.ಎಲ್ ಪುಸ್ತಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದಮೇಲೆ ಚುಟುಕು ಚುಟುಕು ಮಾತುಗಳನ್ನಾಡಿದವರು ಬಿ.ಆರ್.ಎಲ್. ಕಾರ್ಯಕ್ರಮದ ಮೊದಲಭಾಗದ ನಂತರ ವೇದಿಕೆಯಲ್ಲಿರುವ ಪಂಚಕವಿಗಳಿಂದ PUNCHಕವಿಗೋಷ್ಠಿ ನಡೆಯಿತು. ಎಲ್ಲರೂ ತಮ್ಮತಮ್ಮ ಹನಿಗಳನ್ನು ಒಬ್ಬೊಬ್ಬರಾಗಿ ಹೇಳಿ ರಂಜಿಸಿದರು. ಮಧ್ಯೆ ಮಧ್ಯೆ ಡುಂಡಿಯ ನಿರೂಪಣಾ ಡುಂಡಿಮವೂ ಇತ್ತು- ಈ ಎರಡನೇ ಭಾಗದಲ್ಲಿ.ಅಂತೂ ಎದುರು ಕೂತವರಿಗೆ ಇವತ್ತು ಪಂಚಕಜ್ಜಾಯ ಮೆದ್ದ ಅನುಭವ:
ಅನುಭವ
=========
ಕವಿಗಳು ಹೇಳುತ್ತಾರೆ
ಕವಿತೆಗೆ ಅರ್ಥಬೇಕಿಲ್ಲ
ಭಾವ ಬೇಕಿಲ್ಲ
ಅದೊಂದು ಅನುಭವ
ಹಾಗೆಂದರೇನು?
ಓದಿದ ನಂತರ ಅನುಭವಿಸುವ
ತಲೆನೋವಾ ?
ಎಂದು ’ಹನಿಗಾರಿಕೆ’ಯಲ್ಲೇ ಡುಂಡಿ ಕೇಳಿದ್ದಾರೆ.
ಬನ್ನಿ ನಮ್ಮ ಹಾಡಿಗೆ [ ’ಟೈಟಲ್ ಸಾಂಗು’ ]
============
ಎಲ್ಲೂ ತಾವಿಲ್ಲವೆಂದು
ಚಡಪಡಿಸುವ ಜೋಡಿಗಳೆ
ಬೆದರಿ ರೆಕ್ಕೆ ಮುದುರಿಕೊಂಡು
ಕೂತ ಬಾನಾಡಿಗಳೆ
ಬನ್ನಿ ನಮ್ಮ ಹಾಡಿಗೆ
ನಿರಾತಂಕವಾಗಿ ಪ್ರೀತಿ
ಮಾಡಿ ನಿಮ್ಮ ಪಾಡಿಗೆ
ಹಾಡಿಗಿಲ್ಲ ಬಾಡಿಗೆ.
’ಹಾಡಿ’ ಎಂದರೆ ನಮ್ಮೂರಕಡೆಗೆ ಅಡಕೆ ತೋಟಕ್ಕೆ ಪೂರಕವಾಗಿ ಪೂರ್ವಜರು ನಮಗೆ ಬಿಟ್ಟ ಸೊಪ್ಪಿನಬೆಟ್ಟ ಎಂದೂ ಆಗುತ್ತದೆ. ಬನ್ನಿ ನಮ್ಮ ಹಾಡಿಗೆ ಎಂದು ಕರೆದಿದ್ದಾರಲ್ಲಾ ಅವರು ಕರೆದಿದ್ದು ಹಾಡನ್ನು ಓದಬನ್ನಿ ಎಂದಾದರೂ ಒಂದರೆಕ್ಷಣ ಹೀಗೂ ಆಗಬಹುದಲ್ಲಾ ಎಂದುಕೊಂಡವನು ನಾನು. ಅದು ಹಾಗಲ್ಲಾ ಹೀಗೆ ಎಂದು ’ಅನುಭವ’ ಎಂಬ ಚುಟುಕವನ್ನು ಓದಿ ತಿಳಿದುಕೊಂಡವನು ನಾನು. ಅಪರೂಪದ ನೆಂಟರಮನೆಗೆ ಹೋದ ವಾತಾವರಣವಿತ್ತು. ನನಗೆ ಬೇಕಾದ ಎಲ್ಲರನ್ನೂ ಕಂಡ ತೃಪ್ತಿಯೂ ಇತ್ತು. ಲಕ್ಷ್ಮೀನಾರಾಯಣ ಭಟ್ಟರಿಗೆ ಕಾಲ್ಮುಟ್ಟಿ ನಮಸ್ಕರಿಸಲು ಮುಂದಾದಾಗ "ಉಹೂಂ ಉಹೂಂ ಬೇಡ ಬೇಡ" ಎನ್ನುತ್ತಾ ಅವರೂ ಪ್ರತಿಯಾಗಿ ಅದೇರೀತಿ ನಮಸ್ಕರಿಸಲು ಹೊರಟಿದ್ದು ನನ್ನನ್ನು ಪೇಚಿಗೆ ಸಿಲುಕಿಸಿತ್ತು; ಅವರ ಆಂತರ್ಯ ಅದೆಷ್ಟು ದೊಡ್ಡದು!
ನನ್ನ ಇನಿಯನ ನೆಲೆಯ ಬಲ್ಲೆಯೇನೆ ?
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ಇರುವೆ ಸರಿಯುವ ಸದ್ದು ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ?
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ?
ಇಂಥಾ ಸೂಕ್ಷ್ಮ ಕುಸುರಿ ಕೆಲಸಗಳನ್ನು ಭಟ್ಟರ ಹಾಡುಗಳಲ್ಲಿ ಮಾತ್ರ ಕಾಣಲು ಸಾಧ್ಯ! ಆ ಹಾಡು ಬರೆದ ಸನ್ನಿವೇಶವನ್ನು ಸಭೆಗೂ ಮುನ್ನ ನನ್ನೊಡನೆ ಅವರು ಚರ್ಚಿಸುತ್ತಿದ್ದಾಗಲೇ ಸಭೆಗೆ ಬರಬೇಕೆಂದು ಸೂಚನೆ ಬಂತು, ನಾವು ಸಭಾಂಗಣಕ್ಕೆ ಹೋದೆವು. ಇನ್ನೊಮ್ಮೆ ಅಂತಹ ಹಲವಾರು ಸಂಗತಿಗಳನ್ನು ಹೊತ್ತು ಅಲಾಯ್ದ ಸಿಗುತ್ತೇನೆ ಬಿಡಿ. ಯಾಕೆಂದರೆ ಇಂದು ಎಲ್ಲವೂ ಹನಿಗೆ ಮೀಸಲು. ಅಂದಹಾಗೇ ಸದ್ಯಕ್ಕೆ ಸಾರಸ್ವತ ಲೋಕದಲ್ಲಿ ಮೀಸಲಾತಿ ವಗೈರೆ ಜಾರಿಯಲ್ಲಿಲ್ಲ; ಅನಧಿಕೃತವಾಗಿ ಇದ್ದರೆ ನನಗೆ ತಿಳಿದಿಲ್ಲ. ಅಲ್ಲಿ ಎಲ್ಲವೂ ಜ್ಞಾನಮಯ, ಮನದ ಯಾವ್ಯಾವುದೋ ಸ್ತರಗಳಲ್ಲಿ ನರ್ತಿಸುವ ಸರಸ್ವತಿಯ ಹೆಜ್ಜೆಗುರುತುಗಳನ್ನು ಅಕ್ಷರಗಳ ರಂಗೋಲಿಯಲ್ಲಿ ಬಿಡಿಸಿ ತೋರಿಸುವುದು ಕವಿ-ಸಾಹಿತಿಯ ಜಾಣ್ಮೆ-ಅದು ಸರಸ್ವತಿಯ ಅಶೀರ್ವಾದ ಕೂಡ.
ಮಾನಸ ಸಂಚರರೇ
ಬ್ರಹ್ಮಣಿ ಮಾನಸ ಸಂಚರರೇ .... ಎಂಬ, ಸಂತ ತ್ಯಾಗರಾಜ ವಿರಚಿತ ಸಂಸ್ಕೃತದ ಹಾಡು ಕರ್ನಾಟಕ ಸಂಗೀತದ ಪ್ರಕಾರದಲ್ಲಿ ವಿಶಿಷ್ಟವಾಗಿದೆ, ನನಗೆ ಬಹಳ ಆಮೋದ ನೀಡುವ ಹಾಡುಗಳಲ್ಲಿ ಅದೂ ಒಂದು.
[ಚಿಕ್ಕ ತಿದ್ದುಪಡಿ, ಮಾನಸ ಸಂಚರರೇ ಎಂಬ ಹಾಡಿನ ಕರ್ತೃ ಶ್ರೀ ಸದಾಶಿವ ಬ್ರಹ್ಮೇಂದ್ರರು, ತಪ್ಪು ಗ್ರಹಿಕೆಯಿಂದ ತ್ಯಾಗರಾಜರು ಎಂದು ಬರೆದಿದ್ದೆ, ತಿದ್ದಿಕೊಂಡು ಓದುವುದೇ ಈಗಿರುವ ಪಂಚ್ ! ಯಾರ ಕಣ್ಣಿಗೂ ಇದು ಬೀಳಲಿಲ್ಲವಲ್ಲ ಎಂಬುದೇ ಆಶ್ಚರ್ಯಕರ ಪಂಚ್ !! ]
[ಚಿಕ್ಕ ತಿದ್ದುಪಡಿ, ಮಾನಸ ಸಂಚರರೇ ಎಂಬ ಹಾಡಿನ ಕರ್ತೃ ಶ್ರೀ ಸದಾಶಿವ ಬ್ರಹ್ಮೇಂದ್ರರು, ತಪ್ಪು ಗ್ರಹಿಕೆಯಿಂದ ತ್ಯಾಗರಾಜರು ಎಂದು ಬರೆದಿದ್ದೆ, ತಿದ್ದಿಕೊಂಡು ಓದುವುದೇ ಈಗಿರುವ ಪಂಚ್ ! ಯಾರ ಕಣ್ಣಿಗೂ ಇದು ಬೀಳಲಿಲ್ಲವಲ್ಲ ಎಂಬುದೇ ಆಶ್ಚರ್ಯಕರ ಪಂಚ್ !! ]
ಡುಂಡಿಯ ಇನ್ನೊಂದೆರಡು-ಮೂರು ಹನಿಗಳೊಂದಿಗೆ ನಿಮ್ಮ ಬೀಳ್ಕೊಡುಗೆಯ ತಯಾರಿ ನಡೆಸಿದ್ದೇನೆ:
ಕರೀನಾ
=========
ಗಣೇಶೋತ್ಸವದಲ್ಲಿ
ವಿಶೇಷ ಆಕರ್ಷಣೆ
ಹಿಂದಿ ನಟಿ ಕರೀನಾ
ಬ್ರಹ್ಮಚಾರಿಯ ಮುಂದೆ
ಸೆಕ್ಸಿ ತಾರೆ
ಡಾನ್ಸ್ ಮಾಡೋದು ಸರೀನಾ ?
ಆಮೇಲೆ
=======
ಪೂಜೆ ಪುನಸ್ಕಾರ
ಷೋಡಶೋಪಚಾರ
ಹೆಚ್ಚೆಂದರೆ ಒಂದು ವಾರ
ಆಮೇಲೆ ಅಯ್ಯೋ
ಕೆರೆಗೆ ಹಾರ !
ಕ್ರಾಂತಿ
=======
ಸಂಕ್ರಾಂತಿ ಹಬ್ಬ ಆಚರಿಸಿದಳು ತಾಯಿ
ರೇಷ್ಮೆ ಸೀರೆಯುಟ್ಟು
ಹೂ ಮುಡಿದು ಎಳ್ಳು ಬೀರಿ
ಮಗಳು ಕ್ರಾಂತಿಕಾರಿ
ಜೀನ್ಸ್ ಪ್ಯಾಂಟ್ ಟೀ ಶರ್ಟ್ ತೊಟ್ಟು
ಟಾಕೀಸಿಗೆ ಹೋದಳು
ಬಾಯ್ ಫ್ರೆಂಡ್ಸ್ ಜತೆ
ಗಂಡು ಬೀರಿ !
ಇಷ್ಟೆಲ್ಲಾ ಹೊತ್ತು ಓದುತ್ತಾ ಕುಳಿತ ನೀವು ಹದಿಹರೆಯದ ಮಗಳ ಅಪ್ಪನೋ ಅಮ್ಮನೋ ಆಗಿದ್ದರೆ,
ಬೇಗ ಇಲ್ಲಿಂದ ಕಾಲ್ಕೀಳಿ ಹಾರಿ
ಯಾಕೆಂದರೆ ನಿಮ್ಮ ಮಗಳೂ
ಬಹಳ ಹೊತ್ತು ಒಬ್ಬಳನ್ನೇ ಬಿಟ್ಟರೆ
ಆಗಿಬಿಟ್ಟಾಳು ಕ್ರಾಂತಿಕಾರಿ !!
ಡುಂಡಿಗೆ ಅಭಿನಂದನೆಗಳು, PUNCHಕಜ್ಜಾಯ ತಿಂದಿದ್ದಕ್ಕೆ ನಿಮಗೆಲ್ಲಾ ಧನ್ಯವಾದಗಳು, ನಮಸ್ಕಾರ.
ಚೆನಾಗಿದೆ ಸರ್...
ReplyDeleteಚುಟಕಗಳೊಂದಿಗೆ ಡುಂಡಿರಾಜರ ಪರಿಚಯ ಚೆನ್ನಾಗಿದೆ . Punch ಕಜ್ಜಾಯ ಚೆನ್ನಾಗಿತ್ತು .ಅಭಿನಂ
ReplyDeleteಚುಟಕಗಳೊಂದಿಗೆ ಡುಂಡಿರಾಜರ ಪರಿಚಯ ಚೆನ್ನಾಗಿದೆ . Punch ಕಜ್ಜಾಯ ಚೆನ್ನಾಗಿತ್ತು .ಅಭಿನಂದನೆಗಳು .
ReplyDeleteಭಟ್ಟರೆ,
ReplyDeleteಸೊಗಸಾದ punಚ ಕಜ್ಜಾಯ ಉಣಬದಿಸಿದ್ದಕ್ಕಾಗಿ ಸಂತುಷ್ಟ ಧನ್ಯವಾದಗಳು.
ಚೆಲೋ ಆಜ್ರ,ಮತ್ತೆಂಥ.
ReplyDeleteishtavaaytu nimma punch kajjaya .
ReplyDeleteಹಹ ,ಭಟ್ಟಣ್ಣ, ಲಘು ಬರಹ ಚೊಲೋ ಆಯ್ದು ಬರ್ದಿದ್ದು,ಆರೊಳ್ಳಿನಾ "ಆಠೊಳ್ಳಿ" ಮಾಡಿದ್ದು ನಾನೂ ನೋಡಿದ್ದೆ ,ಹಾಹಾ ,ಸುಂದರ ವಾದ ಬರಹ :)
ReplyDeletechennagide :)
ReplyDeleteಲೇಖನ ಚೆನ್ನಾಗಿದೆ. ಹನಿಗಳ ತುಂತುರು ಹಿತಕರವಾಗಿದೆ. ಡುಂಡಿರಾಜ್ ನನಗೆ ವೈಯಕ್ತಿಕವಾಗಿ ಪರಿಚಿತರು, ಸ್ನೇಹಿತರು, ಮತ್ತು ಆತ್ಮೀಯ ಹಿತೈಷಿ. ನಿಮ್ಮ ಲೇಖನದಲ್ಲಿ ಒಂದುಕಡೆ "ಕನ್ನಡ ಸಾಹಿತ್ಯ ಪ್ರಾಕಾರಕ್ಕೆ ಹೊಸದೊಂದು ಜೋಡಣೆ ಕಲ್ಪಿಸಿದರು-ಅದು ಹನಿಗವನ." ಎಂದು ಬರೆದಿದ್ದೀರಿ. ಅದು "ಕನ್ನಡ ಸಾಹಿತ್ಯ ಪ್ರಕಾರಕ್ಕೆ ಹೊಸದೊಂದು ಜೋಡಣೆ ಕಲ್ಪಿಸಿದರು-ಅದು ಹನಿಗವನ." ’ಪ್ರಾಕಾರ’ ಎಂದರೆ ಗೋಡೆ, ಆವರಣ, compound ಎಂದು ಅರ್ಥ. ’ಪ್ರಕಾರ’ ಎಂದರೆ ವಿಧ, ಬಗೆ ಎಂಬ ಅರ್ಥ.
ReplyDeleteಜೋಶಿಯವರೆ, ಪ್ರತಿಕ್ರಿಯಿಸಿದ್ದಕ್ಕೆ ನಿಮಗೆ ಪ್ರತ್ಯೇಕ ಧನ್ಯವಾದಗಳು.
Deleteಪ್ರಕಾರ ಎಂಬ ಪದದ ವ್ಯುತ್ಪತ್ತಿ ಪ್ರಾಕಾರ ಎಂಬುದು ನನ್ನ ಅನಿಸಿಕೆ. ಬಹಳಕಡೆ ಹಾಗೆ ಬಳಸುವುದನ್ನು ನೋಡಿದ್ದೇನೆ. its just like nested braces or enclosures ಎಂದುಕೊಂಡಿದ್ದೇನೆ. ಪ್ರಾಕಾರ ಇದ್ದದ್ದನ್ನು ಪ್ರಕಾರ ಅಂತ ತಿದ್ದಲು ಅಡ್ಡಿಯೇನಿಲ್ಲ. ಭಾಷೆಯಲ್ಲಿ ಸಾಹಿತ್ಯವೇ ಒಂದು ಪ್ರಕಾರ. ಅದರ ಅವಯವಗಳನ್ನು ಇದು ಹೀಗೆ ಅದು ಹಾಗೆ ಎಂದು ವಿಂಗಡಿಸುವುದು ಪ್ರಾಕಾರ ಎಂಬುದೇ ನನಗನಿಸಿದ್ದು. ಹೇಗೆ ಸಾಹಿತ್ಯದಲ್ಲಿ ಗದ್ಯಸಾಹಿತ್ಯ ಮತ್ತು ಪದ್ಯಸಾಹಿತ್ಯ ಎಂಬ ಮುಖ್ಯ ವಿಭಾಗಗಳಿವೆಯೋ ಹಾಗೇ ಇನ್ನುಳಿದ ಪ್ರಕಾರಗಳನ್ನು ಪ್ರಾಕಾರ ಎಂದು ಹೇಳಿದರೆ ತಪ್ಪೆಂದು ನನಗೇನೂ ಅನಿಸಿದ್ದಿಲ್ಲ. ವಾದಕ್ಕಾಗಿ ಹೇಳುತ್ತಿಲ್ಲ, ಸಮರ್ಥಿಸಿಕೊಳ್ಳುತ್ತಲೂ ಇಲ್ಲ, ಇದು ನನ್ನ ಪ್ರಾಮಾಣಿಕ ಅನಿಸಿಕೆ. ಪ್ರಾಕಾರ ಎಂಬುದನ್ನು ಬರೇ ಗೋಡೆ, ಪಾಗಾರ ಇಂಥಾದ್ದಕ್ಕೇ ಉಪಯೋಗಿಸಬೇಕೇ ಎಂಬುದು ನನ್ನ ಪ್ರಶ್ನೆ. ಇದು ಇಗೋ ಕನ್ನಡದ ವೈಖರಿ! ಭೇದವನ್ನು ತೋರಿಸಲಿಕ್ಕೆ ಹಾಕಿಕೊಂಡ ಗೋಡೆ/ಪಾಗಾರ ಎಂದೇ ಇಟ್ಟುಕೊಂಡರೆ ಆಗದೇ?
------------
ಓದಿದ, ಓದಿ ಪ್ರತಿಕ್ರಿಯಿಸಿದ, ಓದಿ ಪ್ರತಿಕ್ರಿಯಿಸಬಹುದಾದ ಎಲ್ಲರಿಗೂ ನನ್ನ ವಂದನೆಗಳು.
ಚೊಲೋ ಇದ್ದು ನಿಮ್ಮ ಬ್ಲಾಗ್ ಪೋಸ್ಟ್. ದುಂಡಿರಾಜ್ ಸಕತ್ ಚುಟುಕು ಕವಿ. ದೂಸರಾ ಮಾತಿಲ್ಲ. 'ರಾಗಿ ತಂದೀರಾ' ಬರೆದಿದ್ದು ಪುರಂದರ ದಾಸರು. ಕನಕದಾಸರಲ್ಲ.
ReplyDeleteಧನ್ಯವಾದ ಹೆಗಡೆಯವರೇ, ಅದು ನನ್ನ ಹನಿಗವನವಲ್ಲ, ಡುಂಡಿಯವರದ್ದು, ಅವರ ಬರಹವನ್ನು ತಿದ್ದದೇ ಹಾಗೇ ಹಾಕಿದ್ದೇನೆ, ನೀವು ಹೇಳಿದ್ದು ಸತ್ಯ. ಹನಿಗವನದ ಮಟ್ಟಿಗೆ ಅಲ್ಲಿ ದಾಸರು ಯಾರೇ ಆದರೂ ತೊಂದರೆಯಿಲ್ಲ ಹೀಗಾಗಿ ಹಾಗೇ ಬಿಟ್ಟಿದ್ದೇನೆ.
Deleteಒಂದೈದು ನಿಮಿಷ ನೋವೆಲ್ಲ ಮರೆತು ಹಾಯಾಗಿ ನಕ್ಕು ಬಿಟ್ಟೆ...ಧನ್ಯವಾದ
ReplyDelete