ಚಿತ್ರದಲ್ಲಿ ಎಡಗಡೆಯಲ್ಲಿ ಕೂತಿರುವವರು ಗೌರೀಶ್ ಕಾಯ್ಕಿಣಿ ಮತ್ತು ಬಲಗಡೆ ಇರುವವರು ಗಿರೀಶ್ ಕಾರ್ನಾಡ್
[ಚಿತ್ರಗಳ ಕೃಪೆ: ಅಂತರ್ಜಾಲ ]
ಕಾಯ್ಕಿಣಿ ಮಾಸ್ತರು ಜಯಂತಣ್ಣ ಮತ್ತು ಗೋಕರ್ಣದ ಕಡಲು
[ ಆಗಿಹೋದ ಮತ್ತು ಈಗಲೂ ಇರುವ ಕವಿ-ಸಾಹಿತಿಗಳ ಕುರಿತ ಕಥಾಹಂದರದ ೮ನೇ ಕಥೆಗೆ ಸ್ವಾಗತ ]
"ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದಿದ್ದಾನೆ ಪಂಪ! ಕರ್ನಾಟಕದ ಅಷ್ಟೇ ಏಕೆ ದೇಶದ ಕಾವ್ಯ-ಸಾಹಿತ್ಯದಲ್ಲೇ ಇಷ್ಟೊಂದು ತಾಯ್ನೆಲದ ಪ್ರೇಮವನ್ನು ಇಟ್ಟುಕೊಂಡ ಕವಿ ಇನ್ನೊಬ್ಬನಿರಲಿಕ್ಕಿಲ್ಲ. ಪಂಪನ ಜನನ ಉತ್ತರಕರ್ನಾಟಕದ ಭಾಗದಲ್ಲೇ ಆಯ್ತೆನ್ನಲಾದರೂ ಆತ ಉಳಿದಿದ್ದು ಬೆಳೆದಿದ್ದು ಕದಂಬರ ರಾಜಧಾನಿ ಬನವಾಸಿಯಲ್ಲಿ. ಒಂದೆರಡಲ್ಲ ಆರಂಕುಶವಿಟ್ಟರೂ ನಾನು ಅಂಜಿ ಬನವಾಸಿಯನ್ನು ಮರೆಯಲು ಸಾಧ್ಯವಿಲ್ಲ...ಕೋಗಿಲೆಯಾಗಿಯಾದರೂ ಪರವಾಗಿಲ್ಲ, ಮರಿದುಂಬಿಯಾದರೂ ಅಡ್ಡಿಯಿಲ್ಲ ಒಟ್ನಲ್ಲಿ ಬನವಾಸಿಯಲ್ಲೇ ಜನನವಾಗಬೇಕು ಎಂಬುದು ಪಂಪನ ಅಪೇಕ್ಷೆಯಾಗಿತ್ತು. ಹಚ್ಚಹಸಿರಿನ ನಿಸರ್ಗವನ್ನೂ ಸಂಪದ್ಭರಿತ ಸಮೃದ್ಧ ಕಾಡನ್ನೂ ಹೊಂದಿದ್ದ ನಾಡು ಕವಿಗಳಿಗೆ ಇಷ್ಟವಷ್ಟೇ? ಬನವಾಸಿಗೆ ಹೋದಾಗಲೆಲ್ಲಾ ಪಂಪನ ಕುರುಹುಗಳನ್ನು ಹುಡುಕುವ ಮನಸ್ಸಾಗುತ್ತದೆ; ಹುಡುಕುತ್ತೇನೆ. ಬನವಾಸಿಯ ಏಕಮಾತ್ರ ಉಳಿಕೆಯಾದ ಮಧುಕೇಶ್ವರ ದೇವಸ್ಥಾನದಲ್ಲಿ ಪಂಪ ಎಲ್ಲಾದರೂ ಕೂತಿದ್ದ ಜಾಗ ಸಿಗಬಹುದೇ ಎಂದು ತಡಕಾಡುತ್ತೇನೆ. ಪಂಪನ ಕೃತಿಗಳು ಮಾತ್ರ ಲಭ್ಯವೇ ಹೊರತು ಪಂಪನದ್ದಾದ ಇನ್ನೇನೂ ಉಳಿದಿಲ್ಲ.
ಇಂತಹ ಪಂಪನನ್ನು ಬೆಳೆಸಿದ ಉತ್ತರಕನ್ನಡ ಕರ್ನಾಟಕಕ್ಕೆ ದೇಶಕ್ಕೆ ಅನೇಕ ಗಣ್ಯರನ್ನು ಹೆತ್ತುಕೊಟ್ಟಿದೆ. ಹಲವು ರಂಗಗಳಲ್ಲಿ ಅನಾದಿಯಿಂದಲೂ ಅನೇಕ ಪ್ರತಿಭೆಗಳು ಅರಳಿ ಮರಳಿವೆ. ಒಬ್ಬೊಬ್ಬರದೂ ಮರೆಯಲಾಗದ ಮಹಾನುಭಾವ ಪಾತ್ರ! ಯಾರನ್ನೆಲ್ಲಾ ಸಮಾಜ ಗುರುತಿಸಿ ಯಾದಿಯಲ್ಲಿ ಕಾಣಿಸಿಕೊಂಡರೋ ಅವರೂ ಸೇರಿದಂತೇ ಇನ್ನೂ ಅನೇಕ ಎಲಮರೆಯ ಕಾಯಿಗಳು ಆಗಿಹೋಗಿದ್ದಾರೆ. ಜಿಲ್ಲೆಯುದ್ದಕ್ಕೂ ಆಗಿಹೋದ ಅಜ್ಞಾತ ಪ್ರತಿಭೆಗಳಿಗೆ ಲೆಕ್ಕವೇ ಇಲ್ಲ. ಅಂತಹ ಅಜ್ಞಾತ ಕವಿಗಳಲ್ಲಿ ದಿ| ವಿ.ಜಿ.ಭಟ್ಟರೂ ಒಬ್ಬರು. ಇವತ್ತಿನ ರೀತಿಯಲ್ಲಿ ಅಂತರ್ಜಾಲ ವಗೈರೆ ಇಲ್ಲದ ಆ ಕಾಲದಲ್ಲಿ ಬರೆದರೂ ಪ್ರಕಟಿಸದೇ ಹಾಗೇ ಬಿಟ್ಟು ಬರಹಗಳು ನಶಿಸಿಹೋದ ಘಟನೆಗಳೇ ಅನೇಕ. ಜಿಲ್ಲೆಯ ಜನಜೀವನದಲ್ಲಿ ಹೇಳಿಕೊಳ್ಳುವ ಸಿರಿವಂತಿಕೆಯಿರಲಿಲ್ಲ. ಏನೋ ತಕ್ಕಮಟ್ಟಿಗೆ ಹೊಟ್ಟೆ-ಬಟ್ಟೆಗೆ, ಹಾಸು-ಹೊದಕಲಿಗೆ ತೊಂದರೆಯಾಗದ ರೀತಿಯಲ್ಲಿ ಇದ್ದ ಕಾಲಮಾನ. ಆರ್ಥಿಕ ಬಡತನದಲ್ಲೇ ಜನರಿದ್ದರೂ ಸಾಂಸ್ಕೃತಿಕವಾಗಿ ನಮಗೇನೂ ಕಮ್ಮಿ ಇರಲಿಲ್ಲ. ಕರ್ನಾಟಕದಲ್ಲೇ ಅತ್ಯಂತ ಸುಸಂಸ್ಕೃತ ಜನರನ್ನುಳ್ಳ ಜಿಲ್ಲೆ ನಮ್ಮ ಉತ್ತರಕನ್ನಡ ಎಂದು ಎದೆತಟ್ಟಿಕೊಳ್ಳಲು ನನಗೆ ಬಹಳ ಹೆಮ್ಮೆ. ಜನ ಇಂದಿಗೂ ಮಾನ-ಮರ್ಯಾದೆಗೆ ಅಂಜುವವರು, ದೇವರು-ದಿಂಡರಲ್ಲಿ ಭಯ-ಭಕ್ತಿ ಇರುವವರು, ಹೆಚ್ಚಿನ ಜನ ಮುಗ್ಧರು, ಸರಳಜೀವಿಗಳು; ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನಿಂದ ಪಡೆದ ಬೆಳೆಸಾಲವನ್ನು ಸಮಯಕ್ಕೆ ತೀರಿಸುವುದರಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿರುವವರು! ತೀರಾ ಆಡಂಬರ ಡೊಂಬರಾಟ ಇಲ್ಲದ ಸಾದಾ ಸೀದಾ ಜನ ಮತ್ತು ಸಾದಾ ಸೀದಾ ಜೀವನ.
ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ಎಂದು ದೈವವನ್ನು ನೆನೆದ ನರಸಿಂಹಸ್ವಾಮಿಯವರ ಕವನದಂತೇ ಜಿಲ್ಲೆಯಲ್ಲಿ ಇಲ್ಲದ್ದೇ ಇಲ್ಲ. ಬೆಟ್ಟ-ಬೇಣ-ಬಯಲು-ಆಲಯ-ಕಾಡು-ಮೇಡು-ಭತ್ತದ ಗದ್ದೆ, ಬತ್ತದ ಬಾವಿ, ಭೋರ್ಗರೆವ ಕಡಲು, ನವಿಲು-ಗಿಳಿ-ಗೊರವಂಕ-ಕೋಗಿಲೆ-ಮಂಗಟ್ಟೆ ಎಲ್ಲಾ ವಿಧದ ಪಕ್ಷಿಗಳು ಹೀಗೆ ನಮ್ಮ ಉತ್ತರಕನ್ನಡ ಎಲ್ಲದರಲ್ಲೂ ತನ್ನತನವನ್ನೇ ಇಟ್ಟುಕೊಂಡಿದೆ.
ಅಡಕೆ ತೆಂಗು ಅಪ್ಪೆಮಿಡಿ ಗೊಜ್ಜು ತಂಬುಳಿ ಚಪ್ಪೆ
ಗಂಜಿ ಬಂಗಡೆ ತೂರೆ ಶಬ್ದ ಸೋಲುವ ಮೇರೆ
ಶಬ್ದ ಸೋಲುವ ಮೇರೆ ....
ಇದು ನಮ್ಮಲ್ಲಿನ ಕವಿಯೋರ್ವರ ಹಾಡಿನ ಒಂದು ಭಾಗ. ಕಥೆಗಾರ ಯಶವಂತ ಚಿತ್ತಾಲ ನಿಮಗೆ ಗೊತ್ತು, ಯಕ್ಷಗಾನಕ್ಕೆ ಪದ್ಮಶ್ರೀ ತಂದುಕೊಟ್ಟ ಚಿಟ್ಟಾಣಿ ಗೊತ್ತು, ಕೆರೆಮನೆ ಶಂಭುಹೆಗಡೆ-ಮಹಾಬಲ ಹೆಗಡೆ ಗೊತ್ತು, ಹಾಸಣಗಿ ಗಣಪತಿ ಭಟ್ಟರ ಸಂಗೀತ ಗೊತ್ತು, ಹಾಲಕ್ಕಿ ಹಾಡಿನ ಸುಕ್ರಿ ಬೊಮ್ಮ ಗೌಡ ಗೊತ್ತು, ಆಂಜನೇಯನ ಪಾತ್ರಕ್ಕೆ ಹೆಸರಾಗಿದ್ದ ಕುಮಟಾ ಗೋವಿಂದ ನಾಯ್ಕ ಗೊತ್ತು, ಮಾಜಿಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಗೊತ್ತು, ನಂದನ್ ನೀಲೇಕಣಿ ಗೊತ್ತು, ಅನಂತ್ ನಾಗ್-ಶಂಕರ್ ನಾಗ್ ಗೊತ್ತು ಇವರೆಲ್ಲಾ ಇಂದಿನ ಮತ್ತು ಇತ್ತೀಚಿನ ತಲೆಮಾರು. ಇದಕ್ಕೂ ಹಿಂದಿನ ತಲೆಮಾರಿನ ವಿಸ್ತಾರ ಬಹಳ ದೊಡ್ಡದು! ಇಂದಿನವರಿಗೆ ಹಿಂದಿನ ಕಥೆ ಹಿಡಿಸುವುದಿಲ್ಲಾ ಎಂಬ ಕಾರಣಕ್ಕಾಗಿ ತೀರಾ ಹಿಂದಿನ ಇತಿಹಾಸ ಕೆದಕಿಲ್ಲ. ಈ ಸಾಲಿನಲ್ಲಿ ನಿಮಗೆ ಗೊತ್ತಿರುವ ಇನ್ನೂ ಇಬ್ಬರೆಂದರೆ ಗೌರೀಶ ಕಾಯ್ಕಿಣಿ ಮತ್ತು ಅವರ ಮಗ ಜಯಂತ್ ಕಾಯ್ಕಿಣಿ. ’ಮುಂಗಾರು ಮಳೆ’ ಬಂದಿದ್ದೇ ಬಂದಿದ್ದು ಅಪ್ಪನನ್ನೂ ಮಗ ಮೀರಿಸುವ ಜನಪ್ರಿಯತೆ ಪಡೆದಿದ್ದಾಗಿದೆ!
ಉತ್ತರಕನ್ನಡದ ಸೊಗಡು ಕೇಳಿ : ಇಲ್ಲಿ ಎಲೆಯಡಿಕೆ ಹಾಕಿ ಪುರ್ರನೆ ಉಗುಳುವ ಜನ ಇದ್ದಾರೆ, ಗುಮ್ಟೆಪಾಂಗು ಬಡಿದು ಹಾಡುವವರಿದ್ದಾರೆ, ಸುಗ್ಗಿ ಕುಣಿವ ಮಂದಿ ಇದ್ದಾರೆ, ಖಾನಾವಳಿ ನಡೆಸುವ ಜನ ಇದ್ದಾರೆ, ಹೋಟೆಲ್ ಕಾಮತರಿದ್ದಾರೆ, ಕಿರಾಣಿ ಅಂಗಡಿ ಪೈಮಾಮ ’ತಾಜಾ ಉಪ್ಪಿನಕಾಯಿ ಹಪ್ಪಳ ಬಂದದೆ’ ಎಂದು ಬೋರ್ಡುಹಾಕಿರುತ್ತಾರೆ, ಮೀನು ಬುಟ್ಟಿ ಹೊತ್ತು ವಾಸನೆ ಹೊಮ್ಮಿಸುವ ಮೀನುಗಾರರಿದ್ದಾರೆ, ಕೊಂಕಣಿ, ಕೊಂಕಣ-ಮರಾಠಿ, ಮರಾಠಿ, ಕನ್ನಡ, ಹಿಂದಿ, ಉರ್ದು, ಹವಿಗನ್ನಡ ಭಾಷೆ ಬಳಸುವ ಜನ ಇದ್ದಾರೆ. ಅಡಕೆ ಮುಖ್ಯ ಬೆಳೆ, ತೆಂಗು, ಭತ್ತ, ಶೇಂಗಾ, ಕಬ್ಬು, ವೀಳ್ಯದೆಲೆ, ಬಾಳೆ ಇತ್ಯೇತ್ಯಾದಿ ನಾವು ಬೆಳೆಯದ ಬೆಳೆಗಳೇ ಇಲ್ಲ. ಕೆಲಮಟ್ಟಿಗೆ ಧಾನ್ಯಗಳನ್ನೂ ತರಕಾರಿಗಳನ್ನೂ ಬೆಳೆಯುತ್ತೇವೆ. ಜೇನು ಕೃಷಿ ಇದೆ, ಹೈನುಗಾರಿಕೆ ಇದೆ, ಬುಟ್ಟಿನೇಯುವುದು, ಮರದ ಕೆಲಸ ಹೀಗೇ ಪಟ್ಟಿ ಬರೆದರೆ ಹನುಮಂತನ ಬಾಲ! ಗುಡಿಗಾರರು ನಮ್ಮಲ್ಲಿ ಜಾಸ್ತಿ ಇದ್ದು ಸ್ವಲ್ಪ ಭಾಗ ಮಲೆನಾಡಿನ ಸಾಗರ-ಶಿವಮೊಗ್ಗಾ ಕಡೆಗಳಲ್ಲಿದ್ದಾರೆ. ನಮ್ಮಲ್ಲಿನ ವೀಳ್ಯೆದೆಲೆ, ಜಾಯಿಕಾಯಿ, ಕಾಳುಮೆಣಸು [ಅನಾದಿಯಿಂದಲೂ] ದೂರದ ವಿದೇಶಗಳಿಗೂ ಹೋಗುತ್ತವೆ! ಹಬ್ಬ ಬಂತೆಂದರೆ ಮನೆಮಂದಿ ಸೇರಿದಂತೇ ಇಡೀ ಜಿಲ್ಲೆಯ ತುಂಬಾ ಸಡಗರ ಉಕ್ಕಿ ಹರಿಯುತ್ತದೆ. ಹೊರಜಗತ್ತಿನ ಪರಿವೆಯೇ ಇಲ್ಲದ ರೀತಿಯಲ್ಲಿ ತಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡು ಇದ್ದುಬಿಡುವಂಥಾ ಸಂಭಾವಿತ ಜನ ನಮ್ಮವರು. ಇಂಥಾ ನಮ್ಮ ಉತ್ತರಕನ್ನಡದಲ್ಲಿ ರಾಮಾಯಣ ಕಾಲದ ಪ್ರದೇಶ ಗೋಕರ್ಣ! ಭೂಕೈಲಾಸವೆಂದೂ ದಕ್ಷಿಣಕಾಶಿಯೆಂದೂ ರಾವಣನಿಂದ ಆತ್ಮಲಿಂಗ ತರಲ್ಪಟ್ಟು ಗಣೇಶನ ಉಪಕಾರದಿಂದ ನೆಲದಲ್ಲೇ ಅದು ಇಳಿದುನಿಂತ ಜಾಗವೆಂದೂ ಪ್ರಸಿದ್ಧವಾಗಿದೆ; ತೀರ್ಥಕ್ಷೇತ್ರವಾಗಿದೆ. ಕರ್ನಾಟಕವೂ ಸೇರಿದಂತೇ ದಕ್ಷಿಣ ಭಾರತದ ಅನೇಕ ಜನರ ಪಿತೃಗಳ ಪಿಂಡಪ್ರದಾನ/ಅಸ್ತಿವಿಸರ್ಜನೆ ನಡೆಯುವ ಕ್ಷೇತ್ರವೂ ಹೌದು.
ಗೋಕರ್ಣದ ಕಡಲತಡಿಯಲ್ಲೇ ನಮ್ಮಲ್ಲಿನ ಅಚ್ಚ ಗಾಂವ್ಟಿ ಪರಿಸರದಲ್ಲಿ ಒಡಮೂಡಿದ ಮಾಸ್ತರು ದಿ|ಗೌರೀಶ್ ಕಾಯ್ಕಿಣಿಯವರು. ಇತ್ತೀಚೆಗೆ ಅವರ ಜನ್ಮಶತಾಬ್ದಿಯ ಉದ್ಘಾಟನೆ ನಡೆಯಿತು. ಕವಿ ಚನ್ನವೀರ ಕಣವಿ, ಸಾಹಿತಿಗಳಾದ ಗಿರಡ್ದಿ ಗೋವಿಂದರಾಜ, ವಿ.ಜಿ.ನಾಯ್ಕ, ಎಂ.ಡಿ. ವೇದೇಶ್ವರ ಮತ್ತು ಗೌರೀಶ್ ಕಾಯ್ಕಿಣಿಯವರ ಪತ್ನಿ ಶಾಂತಾ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಕೇಳ್ಪಟ್ಟೆ, ಖುದ್ದಾಗಿ ಪಾಲ್ಗೊಳ್ಳಲಾಗಲಿಲ್ಲ. ’ಅವಮಾನವತಾವಾದ’, ’ನಾಸ್ತಿಕ ಮತ್ತು ದೇವರು’,ಮನೋವಿಜ್ಞಾನದ ರೂಪುರೇಷೆಗಳು’, ’ಸತ್ಯಾರ್ಥಿ’ ಇವು ಅವರ ಪ್ರಮುಖ ಕೃತಿಗಳು. ೨೦೦೨ ನವೇಂಬರ್ ೧೩ ರಂದು ಅವರು ಮಡಿದಾಗ ೬೨ ಕೃತಿಗಳು ಮಾತ್ರ ಪ್ರಕಟಗೊಂಡಿದ್ದವು. ಪ್ರಕಟಗೊಳ್ಳದೇ ಬಾಕಿ ಉಳಿದ ಕೃತಿಗಳನ್ನೂ ಸೇರಿಸಿ ಅವರ ಸಮಗ್ರ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ, ’ಕಟಾಂಜನ’ ಎಂಬ ಸಂಸ್ಮರಣ ಗ್ರಂಥವನ್ನು ಪ್ರಕಟಿಸಿ, ಗೋಕರ್ಣದ ಮುಖ್ಯ ಬೀದಿಯಲ್ಲಿ ಆ ದಿನ ಮೆರವಣಿಗೆ ಮಾಡಲಾಯ್ತು ಎಂಬುದು ತಿಳಿದುಬಂತು; ಅತ್ಯಂತ ಸಂತಸದ ಸಂಗತಿ. ಈ ನೆನಪಿನಲ್ಲಿ ಒಮ್ಮೆ ನೆನಪಿಸಿಕೊಳ್ಳಲೇಬೇಕಾದ ನಮ್ಮ ಹೆಮ್ಮೆಯ ಬರಹಗಾರರು ಕಾಯ್ಕಿಣಿ ಮಾಸ್ತರು. ಅಕ್ಟೋಬರ್ ೧೨, ೧೯೧೨ ರಂದು ಗೋಕರ್ಣದಲ್ಲೇ ಜನಿಸಿ, ಧಾರವಾಡದಲ್ಲಿ ಕಾಲೇಜು ಓದಿ, ಬಂಕಿಕೊಡ್ಲ ಮತ್ತು ಗೋಕರ್ಣದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ೧೯೩೭ ರಿಂದ ೧೯೭೬ರ ವರೆಗೆ ವೃತ್ತಿಬದುಕು ನಡೆಸಿದವರು ಕಾಯ್ಕಿಣಿ ಮಾಸ್ತರು.[ನೆನಪಿರಲಿ: ಮಾಸ್ತರು ಎಂದರೇ ನಮ್ಮಲ್ಲಿ ಮಾಸ್ತರರು ಎಂದಹಾಗೇ, ಅದು ಏಕವಚನವಲ್ಲ, ನಮ್ಮಲ್ಲಿನ ವಾಡಿಕೆ] ನಮ್ಕಡೆಗೆಲ್ಲಾ ಅವರಿಗೆ ಗೌರೀಶ್ ಮಾಸ್ತರು ಅನ್ನೋದಕ್ಕಿಂತಾ ಹೆಚ್ಚಾಗಿ ಕಾಯ್ಕಿಣಿ ಮಾಸ್ತರು ಎಂದರೇ ಗೊತ್ತಾಗಿಬಿಡ್ತದೆ. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಅತ್ಯುತ್ತಮ ಬರಹಗಾರರು ಅವರು. ಯಾವುದೇ ವಿಷಯ ಹೇಳಿ, ಅವರೊಂದು ಸಾಂಬಾರ್ ಬಟ್ಲು ಇದ್ದಹಾಗೇ; ತಲೆಯೊಳಗೆ ಇಲ್ದಿದ್ದೇ ಇಲ್ಲ. ಕಣ್ಣಿಗೆ ಕಂಡಿದ್ದನ್ನು ಬರಹಕ್ಕೆ ಇಳಿಸದೇ ಬಿಟ್ಟವರೇ ಅಲ್ಲ! ಹಾಗಾಗೇ ಅವರು ಆ ಕಾಲದಲ್ಲೇ ಅಷ್ಟು ಹಳ್ಳಿಮೂಲೆಯಲ್ಲಿದ್ದರೂ ಪತ್ರಿಕೆಗೆ ಅಂಕಣಕಾರರಾಗಿದ್ದರು. ಸಾಂಪ್ರದಾಯಿಕ ಬರಹಶೈಲಿಗೆ ಅಧುನಿಕತೆಯ ಗರಂ ಮಸಾಲೆಯ ಒಗ್ಗರಣೆ ಹಾಕಿ ಹಚ್ಚಗೆ ಬೆಚ್ಚಗೆ ಕೂತು ಉಣ್ಣುವಂತೇ ಬಡಿಸುವ ಶೈಲಿ ಅವರಿಗೆ ಕರತಲಾಮಲಕವಾಗಿತ್ತು. ಬಡತನದಲ್ಲಿ ತಟ್ಟಿಬಿಡಾರದಲ್ಲೇ ಸಂಸಾರ ನಿಭಾಯಿಸಿದರೂ ಮನಸಾ ಅವರು ಬಹಳ ಧನಿಕರು! ಅವರಲ್ಲಿಗೆ ಬರದೇ ಹೋದ ಕವಿ-ಸಾಹಿತಿಗಳೇ ಇರಲಿಲ್ಲ ಎನ್ನಬಹುದು. ಬಂದ ಅಷ್ಟೂ ಮಂದಿಗೆ ಉಪಚಾರವೂ ಹಾಗೇ ನಡೆಯುತ್ತಿತ್ತು.
ಕಳೆದವಾರ ಪತ್ರಿಕೆಯೊಂದನ್ನು ತಿರುವುತ್ತಿದ್ದೆ. ಅದರಲ್ಲಿ ಕಾಯ್ಕಿಣಿ ಮಾಸ್ತರು ’ಕರ್ನಾಟಕ ಸಂಗೀತ’ದ ಬಗ್ಗೆ ಬರೆದ ಲೇಖನವೊಂದು ಓದಲು ಸಿಕ್ಕಿತ್ತು. ಸಾಮಾನ್ಯವಾಗಿ ಸ್ವರಮೇಳದ ಬಗ್ಗೆ ಆಳವಾದ ಅಧ್ಯಯನವಿಲ್ಲದ ಯಾವೊಬ್ಬನೂ ಅದನ್ನು ಬರೆಯಲು ಸಾಧ್ಯವಿಲ್ಲ. ಹಸೀ ಗೋಡೆಗೆ ಹರಳಿಟ್ಟಹಾಗೇ ಹೇಳುವ ಅವರ ವಾಗ್ಝರಿ ಅಚ್ಚರಿ ಹುಟ್ಟಿಸುವಂಥದು. ಹೇಳುವುದನ್ನು ಹೇಳಿಯೇ ಬಿಡಬೇಕು; ಛೇ ಛೇ.. ಯಾರದೋ ಮರ್ಜಿಗೋ ಮುಲಾಜಿಗೋ ಡೊಗ್ಗು ಸಲಾಮು ಹೊಡೆದ, ಹೇಳದೇ ಹಾಗೇ ಬಚ್ಚಿಟ್ಟುಕೊಂಡ ಜನವೇ ಅಲ್ಲ ಅದು. ಕಾಲವೂ ಹಾಗೇ ಇತ್ತುಬಿಡಿ, ಪತ್ರಿಕಾಕರ್ತರಿಗೂ ಮರ್ಯಾದೆ ಇತ್ತು, ಪತ್ರಿಕೆಗಳಿಗೂ ಘನತೆ ಗೌರವ ಇತ್ತು. ಪತ್ರಿಕೆಯಲ್ಲಿ ರೋಲ್ ಕಾಲ್ ಮಾಡಲು ಕಲಿಸಿದ್ದು ದಿ| ಲಂಕೇಶರು. ಅಲ್ಲೀವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅಂಥಾ ಗೀಳು ಇರಲಿಲ್ಲ. ಯಾವಾಗ ಜಾಹೀರಾತುಗಳಿರುವುದಿಲ್ಲವೋ ಆಗ ಪತ್ರಿಕೆ ನಡೆಸುವುದು ಕಷ್ಟ. ಜಾಹೀರಾತು ಹಾಕುವುದಿಲ್ಲಾ ಎನ್ನುವವರು ಪತ್ರಿಕೆ ಉಳಿಸಿಕೊಳ್ಳಲು ರೋಲ್ ಕಾಲ್ ಮಾಡಲು ಆರಂಭಿಸಿಬಿಡುತ್ತಾರೆ. ಈಗಲೂ ಅಂತಹ ಒಂದೆರಡು ವಾರಪತ್ರಿಕೆಗಳನ್ನು ನೀವು ನಾವೆಲ್ಲಾ ನೋಡುತ್ತೇವಲ್ಲಾ ? ಕಾಯ್ಕಿಣಿ ಮಾಸ್ತರರ ಕಾಲಕ್ಕೆ ಹಾಗೆಲ್ಲಾ ಇರಲಿಲ್ಲ; ಇದ್ದರೆ ಅವರು ಅಂತಹ ಪತ್ರಿಕೆಗಳ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಸಂಪಾದಕರ ಜನ್ಮ ಜಾಲಾಡಿಬಿಡುತ್ತಿದ್ದರು! ಏನ್ತಿಳ್ಕೊಂಡಿದೀರಿ ನೀವು ? ಕಾಯ್ಕಿಣಿ ಮಾಸ್ತರರು ಅಂದ್ರೆ ಅಷ್ಟು ನಿಷ್ಠಾವಂತರು, ನಿಷ್ಪಕ್ಷಪಾತಿಗಳು, ನಿಷ್ಠುರವಾದಿಗಳು. ಗೋಕರ್ಣ ಕ್ಷೇತ್ರಕ್ಕೆ ಬಂದ ಕೆಲವರು ಅವರನ್ನು ಕಾಣಲು ಬಯಸಿದರೂ "ಕಾಯ್ಕಿಣಿ ಮಾಸ್ತರು ಏನಾದ್ರೂ ಹೇಳಿಬಿಟ್ರೆ ಕಷ್ಟ" ಅಂದ್ಕೊಂಡು ಹಾಗೇ ಮರಳುವುದೂ ಇತ್ತು!
ಕಥೆ, ಕವನ, ಕಾದಂಬರಿ, ಪ್ರಬಂಧ ಇಂತಹ ಅನೇಕ ಪ್ರಾಕಾರಗಳಲ್ಲಿ ಬೆಳೆತೆಗೆದ ಮಾಸ್ತರು ಒಟ್ಟೂ ೬೭ ಕೃತಿಗಳನ್ನು ಬರೆದಿದ್ದಾರೆ. ಇನ್ನೂ ಕೆಲವನ್ನು ಬರೆದಿದ್ದಿರಬಹುದು, ಪ್ರಕಟಗೊಂಡಿದ್ದು ಇಷ್ಟು. ಇಂಥಾ ಮೇಷ್ಟ್ರಿಗೆ ಮಗನಾಗಿ ಜನಿಸಿದವರು ನಮ್ಮ ಜಯಂತ್ ಕಾಯ್ಕಿಣಿ. ನಾವೆಲ್ಲಾ ಪ್ರೀತಿಯಿಂದ ಜಯಂತಣ್ಣ ಎಂದೇ ಕರೆಯುತ್ತೇವೆ. ಬಹುಶಃ ಹತ್ತಿರದ ಬಳಕೆ ಇದ್ದರೆ ನೀವೂ ಹಾಗೇ ಕರೀತೀರಿ ಯಾಕೆಂದ್ರೆ ಅವರ ಸರಳ ಸೌಜನ್ಯ ನಡೆಯೇ ಹಾಗೆ. ಬಡ ಮಾಸ್ತರರ ತಟ್ಟಿಗುಡಿಸಲಿನಲ್ಲಿ ೧೯೫೫ ರಲ್ಲಿ ಜನಿಸಿದ ಜಯಂತ್ ಬಾಲ್ಯದಲ್ಲಿ ಬಡತನವನ್ನೇ ಅನುಭವಿಸಿದರೂ ಓದಿ ಬ್ಯಾಂಕ್ ಅಧಿಕಾರಿಯಾಗಿ ಮುಂಬೈಯಲ್ಲಿ ಕೆಲಸಮಾಡಿದರು. ಹೀಗಾಗಿ ಆರ್ಥಿಕವಾಗಿ ತಂದೆಯಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರಲಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಬರೆದರೆ ಸ್ಥಳೀಯ ಜನ ಬಹಳ ಮೆಚ್ಚುತ್ತಾರೆ ಎಂಬುದನ್ನು ಬೇಂದ್ರೆ ಹೇಳುತ್ತಿದ್ದರು. ಬೇಂದ್ರೆಯವರ ಭಾಷಾ ಶೈಲಿ ಅಪ್ಪಟ ಧಾರವಾಡದ್ದೇ ಆಗಿತ್ತು. ಬೇಂದ್ರೆಯವರ ಭಾಷಾನೀತಿಯನ್ನೇ ಅನುಸರಿಸಿದ ಜಯಂತಣ್ಣ ನಮ್ಮಲ್ಲಿನ ಭಾಷೆಯನ್ನು ಮಿಳಿಸಿ ಮಾತನಾಡುತ್ತಾರೆ-ಹೀಗಾಗಿ ನಿಮ್ಮೊಡನೆ ನಮ್ಮೊಡನೆ ಅವರು ಮಾತನಾಡುವಾಗ ಯಾರೋ ಮನೆಯಣ್ಣನೇ ಮಾತನಾಡಿದ ಹಾಗೇ ಇರುತ್ತದೆ!
ಸಾಹಿತಿಯೆಂಬ ಹಿರಿಮೆಯನ್ನು ಇಟ್ಟುಕೊಳ್ಳದೇ ನಡೆದರೆ ಸಾಹಿತಿ ಬಹುದೂರ ನಡೆದಾನು, ಆಗಮಾತ್ರ ಓದುಗರು ಅವನನ್ನು ಹಚ್ಚಿಕೊಂಡಾರು ಎಂಬುದು ಅನುಭವ ಜನ್ಯ ಅಂಶ. ಸಾಹಿತ್ಯ ಸಹಜಧಾರೆಯಾಗಿ ಹೊರಹರಿಯಬೇಕೇ ಹೊರತು ಅಲ್ಲಿ ಕೃತ್ರಿಮತೆ ಇದ್ದರೆ ಅದು ಬಹುಸಂಖ್ಯಾಕ ಸಾಹಿತ್ಯಾಸಕ್ತರಿಗೆ ಇಷ್ಟವಾಗುವುದಿಲ್ಲ. ಕವಿಯೋ ಸಾಹಿತಿಯೋ ಮಾತನಾಡಿದರೆ ಮಾತನಾಡಿ ತೆರಳಿದ ಹಲವು ಗಂಟೆ/ದಿನ/ವಾರ/ತಿಂಗಳು/ವರ್ಷ ಆ ಮಾತಿನ ಪಸೆ ಹಾಗೇ ಇರಬೇಕು. ತೈಲಧಾರೆಯ ನಂತರ ಎಣ್ಣೆಯ ಪಸೆ ಉಳಿಯುತ್ತದೆ ಆದರೆ ಜಲಧಾರೆಯ ನಂತರ ಅಂತಹ ಯಾವುದೇ ಪಸೆ ಕಾಣಿಸುವುದಿಲ್ಲವಲ್ಲಾ? ಜನಮಾನಸದಲ್ಲಿ ಹೊಕ್ಕಿಕೂತು ಕಾಡುವ ಕವಿಯಾಗಿ ಸಾಹಿತಿಯಾಗಿ ಇನ್ನಷ್ಟು ಬೇಕು ಎನಿಸಿಕೊಳ್ಳುವುದು ಸುಲಭದ ಮಾತಲ್ಲ, ಆ ಹಂತಕ್ಕೆ ಜಯಂತಣ್ಣ ತಲ್ಪಿದ್ದರೆ ಅಲ್ಲಿ ಅವರಪ್ಪ ಕಾಯ್ಕಿಣಿ ಮಾಸ್ತರರ ಗರಡಿಯ ತಾಲೀಮು ಕೂಡ ತುಸು ಕೆಲಸಮಾಡಿರಬಹುದು. ಋಷ್ಯಾಶ್ರಮದಲ್ಲಿ ಇರುವ ಋಷಿಕುಮಾರರು ಸಹಜವಾಗಿ ದುರ್ಲಭ ಜ್ಞಾನವನ್ನಾಂತು ಸಾಧನೆ ನಡೆಸುವವರು, ಗುರುಮುಖೇನ ಸಿಗುವ ಜ್ಞಾನಧಾರೆ ಅವರಿಗೆ ಸಾಕು ಮುಂದೆ ಅವರು ಸ್ವಾನುಭವದಿಂದಲೇ ಬೆಳಗುವವರು ಹೇಗೋ ಹಾಗೇ, ವಿದ್ಯಾರ್ಜನೆ-ವೃತ್ತಿ ಈ ಸಲುವಾಗಿ ಬಹುಕಾಲ ಹೊರಗೇ ಇದ್ದರೂ ಎಳವೆಯಲ್ಲಿ ತಂದೆಯ ಪರ್ಣಕುಟಿ ನೀಡಿದ ನೆರಳು-ಅಲ್ಲಿ ಬಂದುಹೋಗುತ್ತಿದ್ದ ಸಾಹಿತ್ಯಾಸಕ್ತರೊಡನೆ ಆಗಾಗ ಪರಿಸಮಾಲೋಚಿಸುತ್ತಿದ್ದ, ಲೋಕಾಭಿರಾಮವಾಗಿ ಹರಟುತ್ತಿದ್ದ ಅಪ್ಪನ ಗಂಧಗಾಳಿ ಖಂಡಿತ ಪರಿಣಾಮ ಬೀರಿದೆ. ಆಮೇಲೆ ಬಿಡಿ ಕಕ್ಷೆ ಸೇರಿದ ಕ್ಷಿಪಣಿ ಮಾಹಿತಿ ಕಲೆಹಾಕಿ ಕೇಂದ್ರಕ್ಕೇ ಕಳುಹಿಸುವಂತೇ ತಾನೇ ತಾನಾಗಿ ಬೆಳೆಯುತ್ತಾ ಸಾಹಿತ್ಯದಲ್ಲಿ ತೊಡಗಿಕೊಂಡಾತ ಜಯಂತಣ್ಣ ಅರ್ಥಾತ್ ಜಯಂತ್ ಕಾಯ್ಕಿಣಿ.
ಜಯಂತಣ್ಣ ಕಥೆಗಳ ಜೊತೆಗೆ ನವ್ಯಕಾವ್ಯ ಬರೆದರು, ಸಿನಿಮಾ ಹಾಡುಗಳನ್ನೂ ಬರೆದರು. ಅವರು ’ಮುಂಗಾರುಮಳೆ’ಗೆ ಬರೆದ ಹಾಡುಗಳು ಬಹಳ ಜನಪ್ರಿಯವಾದವು. ಅಲ್ಲಿಂದಾಚೆಗೆ ಜಯಂತಣ್ಣ ಸಿನಿಮಾ ಸಾಹಿತ್ಯ ರಂಗದಲ್ಲೂ ಸ್ವಲ್ಪ ಬಣ್ಣ ಪಡೆದರು! ಈ ಅಪ್ಪ-ಮಗ ಇಬ್ಬರೂ ಮಹಾನ್ ಸಾಹಸಿಗಳು. ಓದುವ ಗೀಳು ಸದಾ ಇದ್ದೇ ಇದೆ. ಬರೆಯುವ ಅನೇಕ ಯುವಜನ ಕಾಯ್ಕಿಣಿ ಮಾಸ್ತರರ ಮನೆಗೆ ಬಂದು ಸಲಹೆ ಕೇಳುತ್ತಿದ್ದರಂತೆ. ಕೆಲಸಕ್ಕೆ ಬಾರದ ಬರಹಗಳು ಎಂದು ಬೇರೇ ಓದುಗರಿಗೆ ಅನಿಸಿದರೂ ಕಾಯ್ಕಿಣಿ ಮಾಸ್ತರರು ಹಾಗೆ ಅಸಡ್ಡೆಮಾಡುತ್ತಿರಲಿಲ್ಲವಂತೆ. ಯಾಕೆಗೊತ್ತೇ? "ಬರೆಯುವಾತ ಬರೆಯುವಷ್ಟುಕಾಲ ಈ ಲೋಕಕ್ಕೆ ಕೆಟ್ಟದ್ದು ಮಾಡುವುದರಬಗ್ಗೆ ಯೋಚಿಸಲಾರ, ಹಾಗೆ ಅಷ್ಟಾದರೂ ಕಾಲ ಆತನಿಂದ ಈ ಲೋಕಕ್ಕೆ ಒಳಿತಾದರೆ ಅದೊಂದು ಉಪಕಾರವಾದಂತೇ. ಬರೆಯಲಿ ಬಿಡು" ಎನ್ನುತ್ತಿದ್ದರಂತೆ! "ಬರವಣಿಗೆ ಎಂಬುದು ಬಹೊದೊಡ್ಡ ಸಾಗರ, ಇಲ್ಲಿ ಗಾಳಹಾಕುತ್ತಾ ಕೂರಬೇಕು, ಮೀನು ಸಿಕ್ಕರೆ ಪುಣ್ಯ, ಕೆಲವೊಮ್ಮೆ ದಿನಗಟ್ಟಲೆ ಕೂತರೂ ಏನೂ ಸಿಗದೇ ಹೋಗಬಹುದು" ಎಂಬುದು ಜಯಂತಣ್ಣನ ಹೇಳಿಕೆ. ಹೌದಲ್ಲವೇ? ಕಾಲಘಟ್ಟವೊಂದರಲ್ಲಿ ಕವಿ ಕುವೆಂಪು ಅಂಥವರಿಗೆ ಕವಿಸಮಯ ಎಂದೇ ಬೇರೇ ಇತ್ತು. ಅಲ್ಲಿ ಮೂಡ್ ಬಂದಾಗ ಅವರು ಬರೆಯುತ್ತಿದ್ದರು. ಇವತ್ತು ನನ್ನಂತಹ ಒಬ್ಬ ಬರಹಗಾರನಿಗೆ ಸಮಯ ಸಿಗುವುದೇ ಕಷ್ಟ. ಸಿಕ್ಕ ಸಮಯದ ನಡುವೆಯೂ ಹತ್ತು ಜಂಗಮವಾಣಿ ಕರೆ, ಇಪ್ಪತ್ತೊಂದು ಎಸ್ಸೆಮ್ಮೆಸ್ಸು, ಮದುವೆಗೋ ಗೃಹಪ್ರವೇಶಕ್ಕೋ ಕರೆಯಲು ಬಂದ ನೆಂಟರು, ನಾಳಿನ ಕೆಲಸದ ಪೂರ್ವತಯಾರಿ ಆಗಿಲ್ಲವೆಂದ ಸಹೋದ್ಯೋಗಿಗಳು, ಮನೆಯಲ್ಲಿ ಸಾಮಾನು ಖಾಲಿ ಅಗಿದೆ ಎನ್ನುವ ಹೆಂಡತಿ, ಟಿವಿ ಜಾಹೀರಾತಿನಲ್ಲಿ ಕಂಡ ಚಾಕೋಲೇಟ್ ಕೊಡಿಸುವಂತೇ ಹಠಕ್ಕೆ ಬಿದ್ದ ಮಗ ....ಹೀಗೇ ಅಡ್ಡಬರುವ ಕಾರಣಗಳು ಹಲವಾರು. ಇವೆಲ್ಲವುಗಳ ನಡುವೆಯೂ ಲೋಕಾಂತದಲ್ಲೇ ಏಕಾಂತ ಕಲ್ಪಿಸಿಕೊಂಡು, ಬರೆಯಬೇಕಾದುದನ್ನು ಬರೆಯುವುದಿದೆಯಲ್ಲಾ ಅದು ನಿಜವಾದ ಸವಾಲು !
ಕಾಯ್ಕಿಣಿ ಮಾಸ್ತರರಿಗೆ ಬಂದ ಪ್ರಶಸ್ತಿಗಳು ಇಂತಿವೆ: ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೊತ್ಸವ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಡೈಮಂಡ್ ಜ್ಯುಬಿಲಿ ಅವಾರ್ಡ್, ವರ್ಧಮಾನ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಡಾ|ಶಂ.ಬಾ. ವೇದಿಕೆ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿ(ಮೀನಾಕ್ಷಿ ಎಂಬ ಕೃತಿಗೆ). ಕಾಯ್ಕಿಣಿ ಮಾಸ್ತರರು ಕನ್ನಡದಲ್ಲಿ ಬರೆದ ಹಾಗೇ ಕೊಂಕಣಿಯಲ್ಲೂ ಬರೆಯುತ್ತಿದ್ದರು ಎಂದು ಹೇಳಲು ಮರೆತುಬಿಟ್ಟಿದ್ದೆ.
ಅಪ್ಪನಂತೇ ಮಗನಿಗೂ[ಜಯಂತ್ ಕಾಯ್ಕಿಣಿ] ಅದಾಗಲೇ ಪ್ರಶಸ್ತಿಗಳು ಲಭಿಸಿವೆ: ಹಲವುಬಾರಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಸರಕಾರದ ’ಕುಸುಮಾಗ್ರಜ’ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ರಾಷ್ಟ್ರೀಯ ಕಥಾ ಪ್ರಶಸ್ತಿ, ಋಜುವಾತು ಟ್ರಸ್ಟ್ ನಲ್ಲಿ ಫೆಲೋಶಿಪ್ ಗೌರವ, ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್.
ಅಂದಹಾಗೇ ಕಾಯ್ಕಿಣಿ ಮಾಸ್ತರರ ಮನೆ ಮೊದಲು ಪರ್ಣಕುಟಿಯೇ ಆಗಿತ್ತು. ಮಗ ನೌಕರಿ ಹಿಡಿದು ಒಂದಷ್ಟು ದುಡಿದಮೇಲೆ ಈಗ ಮುಪ್ಪಿನ ತಾಯಿಗಾಗಿ, ಅಪ್ಪನ ನೆನಪಿಗಾಗಿ ಗೋಕರ್ಣದಲ್ಲಿ ಮೂಲಮನೆ ಇದ್ದ ಜಾಗದಲ್ಲೇ ಹೊಸದೊಂದು ಮನೆಯನ್ನು ನಿರ್ಮಿಸಿದ್ದಾರೆ; ಹೆಸರು ’ಪರ್ಣಕುಟಿ’! ಪರ್ಣಕುಟಿಯಲ್ಲಿ ಕೂತು ಸಮುದ್ರದೆಡೆಗೆ ದೃಷ್ಟಿ ಹರಿಸಬಹುದು. ಚಿಕ್ಕಮಕ್ಕಳಿದ್ದಾಗ ನಾವು ಅಪರೂಪಕ್ಕೆ ಸಮುದ್ರದ ಕಿನಾರೆಗೆ ಹೋಗಿ ಅಲ್ಲಿ ಶಂಖ, ಹವಳ, ಮುತ್ತು ಇವೆಲ್ಲಾ ಸಿಗುವುದೋ ಎಂದು ಹುಡುಕುತ್ತಿದ್ದೆವು. ನಕ್ಷತ್ರಮೀನು, ಸಮುದ್ರನಾಲಿಗೆ, ಇನ್ನೇನೇನೋ ವಸ್ತುಗಳು ಕೈಗೆ ಸಿಕ್ಕಾಗ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅನುಭವಿಸಿದ ಆನಂದಕ್ಕಿಂತಾ ಹೆಚ್ಚಿನ ಆನಂದ ನಮ್ಮದಾಗುತ್ತಿತ್ತು; ಯಾರೋ ಹಿರಿಯರು "ಹೋಗ್ರೊ ಅದೆಲ್ಲಾ ತೀರಾ ಕೆಲ್ಸಕ್ಕೆ ಬಾರದ ವಸ್ತು" ಎಂದು ಹೇಳಿದಾಗ ಹವೆತೆಗೆದ ಪುಗ್ಗಿ[ಬಲೂನಿ]ಯಂತೇ ಆಗಿಬಿಡುತ್ತಿದ್ದೆವು. ಇಲ್ಲೀಗ ವಿದೇಶೀಯರೂ ಸೇರಿದಂತೇ ನೂರಾರು ಜನ ಸದಾ ಬರುತ್ತಲೇ ಹೋಗುತ್ತಲೇ ಇರುತ್ತಾರೆ. ಹಲವರು ತಳ್ಳುಗಾಡಿಯಲ್ಲಿ ಐಸ್ ಕ್ರೀಮ್ ಮತ್ತು ಚಾಟ್ಸ್ ಅಂಗಡಿ ಇಟ್ಟುಕೊಳ್ಳುತ್ತಾರೆ. ತಾಜಾ ಎಳೆನೀರು ಸಿಗುತ್ತದೆ. ಸಮುದ್ರಸ್ನಾನದ ಸಂಕಲ್ಪ ಮಾಡಿಕೊಂಡು ಸಮುದ್ರ ಸ್ನಾನ ಮಾಡುವ ಯಾತ್ರಾರ್ಥಿಗಳು ಕೆಲವರಾದರೆ ಮೋಜಿನ ಈಜಿಗೆಂದೇ ಬಂದ ಹಲವರೂ ಇರುತ್ತಾರೆ. ಗೋಕರ್ಣಕ್ಕೆ ಬಂದರೆ ನಮಗೆ ಅಪ್ಪ ಮಹಾಬಲ ಆತನ ಮಗ ಗಣಪ ಇಬ್ಬರೂ ಸಿಗುತ್ತಾರೆ, ಅದೇರೀತಿ ಮಹಾಬಲೇಶ್ವರನ ಕೃಪೆಯಲ್ಲಿ ಅಪ್ಪ-ಮಗ ಬರೆದು ಶ್ರೀಮಂತಗೊಳಿಸಿದ ಈ ನೆಲದಲ್ಲಿ ಈ ಕವಿ-ಸಾಹಿತಿಗಳ ಸಂತತಿ ಮುನ್ನಡೆಯಲಿ. ಆತ್ಮಲಿಂಗದ ಸಾನ್ನಿಧ್ಯವಿರುವ ಈ ಕ್ಷೇತ್ರದ ಆ ’ಸಾಹಿತ್ಯ ಪರ್ಣಕುಟಿ’ಯಲ್ಲಿ ಸಾರಸ್ವತಲೋಕಕ್ಕೆ ಬೇಕಾಗುವ ಅನೇಕ ಸಾರಸ್ವತರು ಹುಟ್ಟಿಬರಲಿ, ಕವಿ-ಸಾಹಿತಿಗಳ ನೆಲೆವೀಡು ಕಾರಣಿಕ ಸನ್ನಿಧಾನದಂತೇ ಸದಾ ಶೋಭಿಸಲಿ ಎಂದು ಆತ್ಮೀಯವಾಗಿ ಹಾರೈಸಿ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ, ನಮಸ್ಕಾರ. [ವಿ.ಸೂ.: ಹೊರಡುವ ಮುನ್ನ ತೈಲಧಾರೆಯ ಪಸೆಯನ್ನು ಉಳಿಸುವ ಕವಿ ಜಯಂತಣ್ಣನ ಈ ಹಾಡನ್ನು ಇನ್ನೊಮ್ಮೆ ಕೇಳಿಬಿಡಿ: ಪ್ರೇಮಿಗಳ ನಡುವಿನ ಈ ಹಾಡನ್ನು ರಾಧಾ-ಕೃಷ್ಣರ ಪ್ರೇಮಕ್ಕೆ ಹೋಲಿಸಿ....ನೀವೆಲ್ಲೋ ಇನ್ನೊಂದು ಲೋಕದಲ್ಲಿ ವಿಹರಿಸಿದ ಅನುಭವ ನಿಮಗಾಗಬಹುದು! ]
ಸಖತ್ ಇಶ್ಟ ಆಯ್ತು ಸರ್.....ನಮ್ಮಲ್ಲಿನ ಸಾಹಿತಿಗಳ ಬಗ್ಗೆ ಓದಲು ಖುಷಿ ಆಗ್ತದೆ....ಬರಿತಾ ಇರಿ...ಒದ್ತಾ ಇರ್ತಿ..
ReplyDelete