ಧರ್ಮಸಂಸ್ಥಾಪನೆಯ ವಿಷಯದಲ್ಲಿ ಕೃಷ್ಣ ತಳೆದ ಭಾವ ಮತ್ತು ಪರಿಕಲ್ಪನೆ ಎಲ್ಲರಿಗೂ ಹಿಡಿಸದೇ ಇರಬಹುದು. ರಾಮಾಯಣದಂತಹ, ಮಹಾಭಾರತದಂತಹ ಕಾವ್ಯ-ಕಥಾನಕಗಳು ಇಂದಿನ ಜನಜೀವನಕ್ಕೆ ದಾರಿತೋರಿಸುವ ಸಲುವಾಗಿ ಅಂದೇ ಬರೆಯಲ್ಪಟ್ಟವು. ತ್ರೇತಾಯುಗದಲ್ಲಿ, ದ್ವಾಪರಾಯುಗದಲ್ಲಿ ಬರೆದ ಈ ಕೃತಿಗಳು ಇಂದಿಗೂ ಸಲ್ಲುತ್ತವೆ ಎಂದರೆ ಅವುಗಳಲ್ಲಿ ಕೃತಿಕಾರರು ತಮ್ಮ ಅಲೌಕಿಕ ದಿವ್ಯಾನುಭೂತಿಯಿಂದ ಬಳಸಿದ, ತಿಳಿಸಿದ ವಸ್ತುವಿಷಯಗಳೇ ಕಾರಣ ಎನ್ನಬೇಕಾಗುತ್ತದೆ. ಆ ಎರಡು ಮಹಾಕಾವ್ಯಗಳ ನಂತರ ಅದೆಷ್ಟೋ ಕೃತಿಗಳು ಈ ದೇಶದ ನಾ ನಾ ಭಾಷೆಗಳಲ್ಲಿ ಬರೆಯಲ್ಪಟ್ಟವಾದರೂ ಅವುಗಳಿಗೆ ಇರುವ ಸಾರ್ವಕಾಲಿಕತೆ ಮಿಕ್ಕಿದವುಗಳಿಗೆ ದಕ್ಕುವುದಿಲ್ಲ! ಧರ್ಮ ಅಂದರೆ ಯಾವುದು ಹಿಂದೂ ಧರ್ಮವೇ? ಅದು ಹಾಗಲ್ಲ. ಸೃಷ್ಟಿಕ್ರಿಯೆಯಲ್ಲಿ ಜನಿಸಲ್ಪಟ್ಟ ಜೀವಿಗಳಲ್ಲಿ ಮಾನವ ಅತ್ಯಂತ ಬುದ್ಧಿಜೀವಿ ಎಂದು ಗುರುತಿಸಲ್ಪಟ್ಟ. ಬುದ್ಧಿ ಹೆಚ್ಚಾದ ಮಾನವರು ಸ್ವೇಚ್ಛೆಯಿಂದ ಹೇಗೆ ಬೇಕಾದರೂ ಬದುಕತೊಡಗಿದಾಗ ಬದುಕಿಗೊಂದು ಮಾರ್ಗ ಹೀಗಿದೆ ಎಂಬುದನ್ನು ತಿಳಿಸುವುದು ಮತ್ತು ನಿಸರ್ಗಕ್ಕೆ ವಿರುದ್ಧವಾಗದೇ ಸಹಜವಾಗಿ ಬದುಕುವ ಕಲೆಯನ್ನು ತಿಳಿಸುವುದೇ ಧರ್ಮ. ಸನಾತನ ಧರ್ಮ ಅದನ್ನೇ ಎತ್ತಿಹಿಡಿದಿದ್ದರಿಂದ ಜಗತ್ತಿನಲ್ಲಿಯೇ ಅತಿಶ್ರೇಷ್ಠ ಧರ್ಮವೆಂದು ಪರಿಗಣಿತವಾಗಿದೆ.
ಈ ಭೂಮಿಯಲ್ಲಿ ಯಾರ್ಯಾರೋ ಆಗಿಹೋದರು ಸರಿ, ಗೆದ್ದ ಶ್ರೀರಾಮ, ಗೆದ್ದ ಪಾಂಡವರು ರಾಜ್ಯಭಾರ ಮಾಡಿದರು ಎಂಬುದೂ ಸರಿ, ಈ ಭೂಮಿ ಆಗಲೂ ಹೀಗೇ ಇತ್ತು-ಈಗಲೂ ಹೀಗೇ ಇದೆ ಎಂದು ನಾವಂದುಕೊಂಡರೂ ಪುನರಪಿ ಪುನರಪಿ ನಾವೇ ಅದೆಷ್ಟು ಸಲ ಹುಟ್ಟಿ ಸತ್ತೆವು ಎಂಬುದಕ್ಕೆ ಲೆಕ್ಕವಿಲ್ಲ. ಆ ಲೆಕ್ಕ ಹಾಗೆಲ್ಲಾ ಕಾಣಬರುವುದೂ ಇಲ್ಲ. ಹುಟ್ಟಿದ ಮಗುವೊಂದು ಒಲೆಯಲ್ಲಿ ಬಿದ್ದು ಸುಟ್ಟು ಬೆರಳುಗಳೆಲ್ಲವನ್ನೂ ಕಳೆದುಕೊಂಡಾಗ ಆ ಮಗುವಿನ ತಂದೆ-ತಾಯಿ-ಬಂಧುಗಳಿಗೆ, ಮಗುವೊಂದು ಬೆಳೆದು ವಿಚಿತ್ರ ಕಾಯಿಲೆಗೆ ಒಳಗಾದಾಗ ಮಗುವಿನ ಪಾಲಕರಿಗೆ-ಪೋಷಕರಿಗೆ, ಯಾವ ಪಾಪವನ್ನೂ ಮಾಡದ ಮನುಷ್ಯನೊಬ್ಬ ಜೀವಿತದಲ್ಲಿ ಇನ್ನಿಲ್ಲದ ಕಷ್ಟ-ಕೋಟಲೆಗಳನ್ನು ಅನುಭವಿಸುವಾಗ ಸುತ್ತಲ ಪರಿವಾರಕ್ಕೆ, ಸಮಾಜಕ್ಕೆ ಧರ್ಮ ಮತ್ತು ನೀತಿಯ ಹಂಬಲವಾಗುತ್ತದೆ. ಸುನಾಮಿ ಬಂದು ಕೊಚ್ಚಿಹೋಗುವಾಗ, ಚಂಡಮಾರುತ ಉದುರಿಸಿ ಹೋಗುವಾಗ, ಅತಿವೃಷ್ಟಿ ಜೀವನವನ್ನು ಬಲಿತೆಗೆದುಕೊಳ್ಳುವಾಗ ತನಗಿಂತಾ ಮಿಗಿಲಾದ ಶಕ್ತಿಯ ನೆನಪು ಆಗಲೂ ಬಹುದು; ರಾವಣ ಹೃದಯಿಗಳಿಗೆ ಆಗಲೂ ಆಗದೇ ಇರಬಹುದು.
ಈ ಸೃಷ್ಟಿಯ ಆದಿಯಲ್ಲಿ ಪೂರ್ಣವೊಂದಿತ್ತು, ಮೊಟ್ಟೆಯೊಡೆದು ಹಕ್ಕಿ ಹೊರಬರುವಂತೇ ಆ ಪೂರ್ಣದಲ್ಲಿರುವ ಶಕ್ತಿಗೆ ಹಾಗೇ ಇರಲು ಬೇಸರವಾಗಿ ತನ್ನನ್ನೇ ತಾನು ಹೊಸಹೊಸ ರೂಪಗಳಲ್ಲಿ ಸೃಜಿಸಿಕೊಂಡಿತು; ಶ್ರೀಮನ್ನಾರಾಯಣನಾಗಿ ತೋರಿತು, ನಾಭಿಕಮಲದಲ್ಲಿ ಬ್ರಹ್ಮನನ್ನು ಸೃಷ್ಟಿಸಿತು, ಬ್ರಹ್ಮನಿಗೆ ಶಕ್ತಿ ನೀಡಿ ಮತ್ತೆ ಆತನಿಂದ ಸೃಷ್ಟಿ ಕ್ರಿಯೆಯ ಮುಂದುವರಿಕೆ ನಡೆಯಿತು. ಇರುವೆಯಿಂದ ಹಿಡಿದು ೮೦ ಕೋಟಿ ಜೀವರಾಶಿ ಪ್ರಭೇದಗಳು ಸೃಷ್ಟಿಸಲ್ಪಟ್ಟವು. ಜಗನ್ನಾಟಕ ಆರಂಭವಾಯ್ತು. ನಾಟಕ ಯಾಕೆ ಬೇಕಾಗಿತ್ತು ಎಂದು ಕೇಳಲು ನಾವು ಶಕ್ತರಲ್ಲ, ಹಾಗೆ ಕೇಳುವ ಹಂತಕ್ಕೆ ನಾವು ಬೆಳೆದಾಗ ಅದೇ ಆ ಪೂರ್ಣದಲ್ಲಿ ಮತ್ತೆ ಲೀನವಾಗಿಬಿಡುತ್ತೇವಲ್ಲ!
ಪೂರ್ಣಮದ ಪೂರ್ಣಮಿದಂ ಪೂರ್ಣಾತ್ಪೂರ್ಣ ಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾ ವಶಿಷ್ಯತೇ ||
ಮೂಲದಲ್ಲಿ ಇರುವ ಮಣ್ಣು ಕುಂಬಾರನ ಕೈಗೆ ಸಿಕ್ಕು ವಿವಿಧರೀತಿಯ ಪಾತ್ರೆಗಳಾಯ್ತು. ಪಾತ್ರೆಗಳು ಬಳಸಲ್ಪಟ್ಟು, ಹಳತಾಗಿ, ಒಡೆದನಂತರ ಮತ್ತೆ ಮಣ್ಣಾಯ್ತು. ಮತ್ತೆ ಅದೇ ಮಣ್ಣು ಭೂಮಿಯಲ್ಲಿ ಲೀನವಾಗಿ ಹೊಸತನ ಪಡೆಯಿತು, ಹೊಸದಾದ ಆ ಮಣ್ಣು ಮತ್ತೆ ಕುಂಬಾರನ ಕೈಗೆ ಸಿಕ್ಕು ಮತ್ತೆ ಪಾತ್ರೆಗಳಾಯ್ತು! ಸಮುದ್ರದ ನೀರನ್ನು ಲೋಟ ಪಾತ್ರೆ, ಬಿಂದಿಗೆಗಳಲ್ಲಿ ಎತ್ತಿಕೊಂಡಾಗ ನೀರಿಗೆ ಅದದೇ ಆಕಾರ ಬಂತು, ಆದರೆ ಸಮುದ್ರ ಹಾಗೇ ಇತ್ತು, ಪಾತ್ರೆಗಳಲ್ಲಿರುವ ನೀರು ಮತ್ತೆ ಮರಳಿ ಸುರುವಲ್ಪಟ್ಟು ಸಮುದ್ರ ಸೇರಿದಾಗ ನೀರು ಆಕಾರ ರಹಿತವಾಯ್ತು, ಸಮುದ್ರದಲ್ಲೇ ಸೇರಿಹೋಯ್ತು-ಸಮುದ್ರ ಹಾಗೇ ಇತ್ತು! ಇಂತಹ ಪೂರ್ಣತೆಯನ್ನು ಕೆಲವು ಮುನಿಜನರು ಮಾತ್ರ ಅರಿತರು. ಲೋಕೋಪಕಾರಕ್ಕಾಗಿ ಅದನ್ನೇ ತತ್ವಗಳಾಗಿಸಿ ಕಾವ್ಯಮಯವಾಗಿಸಿದರು. ಜೀವನನಾಟಕದಲ್ಲಿ ಪುನರಪಿ ಬಂದು ಬಳಲುವ ಬದಲಿಗೆ ಬಾರದೇ ಇರುವ ಸಂಕಲ್ಪ ಮಾಡಿದರು, ಪೂರ್ಣತೆಯ ಪ್ರಾಪ್ತಿಗಾಗಿ ವಿವಿಧ ರೂಪಗಳಲ್ಲಿ ಆರಾಧನೆ ಆರಂಭಿಸಿ ಆಮೇಲೆ ನಿರ್ಗುಣ ಪರಬ್ರಹ್ಮನನ್ನು ಕಂಡರು; ಅದು ಆಕಾರವಿಲ್ಲದ, ಬಣ್ಣವಿಲ್ಲದ, ರೂಪವಿಲ್ಲದ ಒಂದು ದಿವ್ಯ ಶಕ್ತಿ! ಋಷಿಗಳು ಒಗಟಾಗಿ ಹೇಳಿದ್ದನ್ನು ಸುಲಭ ಸಂಸ್ಕೃತದಲ್ಲಿ ಬಿಡಿಸಿ ಹೇಳಿದವರು ಆದಿ ಶಂಕರರು.
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾ ಪಾರೇ ಪಾಹಿ ಮುರಾರೇ
ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಬಂದು ಮಲಗುವುದು, ಮತ್ತೆ ಈ ಲೋಕದ ಜಂಜಾಟವನ್ನು ಅನುಭವಿಸುವುದು- ಈ ಗೋಳೇ ಬೇಡಪ್ಪಾ ಪರಬ್ರಹ್ಮನೇ, ಹರಿಯೇ ಇದರಿಂದ ನಮ್ಮನ್ನು ಪಾರುಮಾಡು ಎಂದು ಪ್ರಾರ್ಥಿಸಿದರು; ಪ್ರಾರ್ಥಿಸಲು ಹೇಳಿದರು. ಪೂರ್ಣತೆಯಿಂದ ಹೊರಬಂದು ಜರಾಮರಣ ಚಕ್ರದಲ್ಲಿ ಸಿಲುಕಿದ ಆತ್ಮ ಜೀವಾತ್ಮವಾಗಿ ಅನುಭವಿಸಬೇಕಾದ ನೋವುಕಾವುಗಳನ್ನು ಅವರು ಮನಗಂಡಿದ್ದರು. ಖನಿಜದಲ್ಲಿ ಬಂಗಾರವನ್ನು ಬೇರ್ಪಡಿಸುವಾಗ ಸಿಂಹಪಾಲು ಮಣ್ಣೇ ಹೇಗಿರುತ್ತದೋ ಈ ಜೀವನದಲ್ಲಿ ದುಃಖವೂ ಕೂಡ ಹಾಗೇ, ಅದರದ್ದು ಸಿಂಹಪಾಲು. ನೆಮ್ಮದಿ, ಸುಖ ಎನ್ನುವುದು ಸ್ವಲ್ಪಮಾತ್ರ. ಹೀಗಿದ್ದೂ ಈ ಜೀವನ ಹೇಗಿದೆಯೆಂದರೆ ಬಂದು-ಹೋಗುವ ನಡುವೆ ಹಲವು ಧೋರಣೆಗಳನ್ನು ಜೀವಾತ್ಮ ತಳೆಯುತ್ತಾನೆ, ಕರ್ಮಬಂಧನದಿಂದ ಆ ಯಾ ಕ್ಷೇತ್ರಗಳಲ್ಲಿ ಜನಿಸಲ್ಪಟ್ಟು, ಹೊಣೆಗಾರಿಕೆಯಿಂದ ಬಂಧಿಸಲ್ಪಟ್ಟು ಮಿಸುಕಾಡುವ ಸ್ಥಿತಿ ಹೇಳಲಹುದೇ ?
ಮರುಳುಮಾಧವಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ-
ಯರು ಸುಯೋಧನರೆನಗೆ ಬೆಸಗೈವಲ್ಲಿ ಮನವಿಲ್ಲ |
ಪೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ||
ಕರ್ಣನ ಹೇಳಿಕೆಯನ್ನು ಕವಿ ಬಹಳ ಚೆನ್ನಾಗಿ ಭಾಮಿನಿಯಲ್ಲಿ ವರ್ಣಿಸಿದ್ದಾನೆ ಅಲ್ಲವೇ? ಸ್ವತಃ ಭಗವಂತ ಶ್ರೀಕೃಷ್ಣನೇ ಕರೆಯಲು ಬಂದಾಗ ಕರ್ಣ ಆತನ ಮನವೊಲಿಕೆಗೆ ಬಗ್ಗಲಿಲ್ಲ, ಜಗ್ಗಲಿಲ್ಲ; ಯಾಕೆಂದರೆ ಶಿಶುವಾಗಿದ್ದಾಗ ಕುಂತಿ ಮದುವೆಗೂ ಮುನ್ನ ಗುಟ್ಟಾಗಿ ಹುಟ್ಟಿತ್ತೆಂದು ಪೆಟ್ಟಿಗೆಯಲ್ಲಿ ತುಂಬಿ ನದಿಯಲ್ಲಿ ತೇಲಿಬಿಟ್ಟಿದ್ದನ್ನು ಸೂತನೊಬ್ಬ ಹಿಡಿದೆತ್ತಿ ಸಲಹಿದ್ದ, ದೊರೆ ಸುಯೋಧನನ ಆಸ್ಥಾನಕ್ಕೆ ಬಂದ ಕರ್ಣನಿಗೆ ದುರ್ಯೋಧನ ಆಶ್ರಯ ನೀಡಿದ್ದ, ಒಡೆಯನ ಉಪ್ಪನ್ನ ಉಂಡ ಋಣಕ್ಕಾಗಿ ತಾನು ನಿನ್ನೊಡನೆ ಬರಲಾರೆ ಎಂದು ಕರ್ಣ ಸಾರುತ್ತಾನೆ. ಯುದ್ಧದಲ್ಲಿ ಒಡಹುಟ್ಟಿದ ಸಹೋದರರನ್ನೇ ಕೊಲ್ಲಬೇಕಾಗುತ್ತದೆ ಎಂಬುದನ್ನು ಅರಿತೂ ಏನೂಮಾಡಲಾರದಾಗುತ್ತಾನೆ; ಇದೇ ಕರ್ಮಬಂಧನ!
ಮಹಾಬಲಿ ಬಲಿಚಕ್ರವರ್ತಿ ೯೯ ಯಾಗಗಳನ್ನು ಪೂರೈಸಿಬಿಟ್ಟಿದ್ದ. ೧೦೦ನೇ ಯಾಗದ ಪೂರ್ಣಾಹುತಿ ಸಮಯದಲ್ಲಿ ವಾಮನ ತ್ರಿವಿಕ್ರಮ ಬಂದೇ ಬಂದ! ಬಂದ ವಟುವನ್ನು ಸಹಜವಾಗಿ ನೋಡಿದ ಬಲಿ, ಕೇಳಿದ ಮೂರು ಹೆಜ್ಜೆ ಜಾಗಕ್ಕೆ "ಅಸ್ತು" ಎಂದುಬಿಟ್ಟ. ಗುರು ಶುಕ್ರಾಚಾರ್ಯರು ಪಕ್ಕಕ್ಕೆ ಕರೆದು ಕಿವಿಯಲ್ಲಿ ಉಸುರಿದರು"ದೊರೆಯೇ ಬಂದವನು ಮಹಾವಿಷ್ಣು, ದಾನಕೊಡಲು ಒಪ್ಪಬೇಡ! " ದೊರೆ ಗುರುವಾಣಿಗೆ ಕಿವಿಯೊಡ್ಡಲಿಲ್ಲ. ಕೇಳಿದ್ದನ್ನು ಗಾಳಿಯಲ್ಲಿ ತೂರಿಬಿಟ್ಟ. ದಾನದ ಸಮಯದಲ್ಲಿ ಹೊನ್ನ ಕಲಶದ ಗಿಂಡಿಯಿಂದ ನೀರು ಹೊರಹರಿವ ಕೊಂಬಿನಲ್ಲಿ ಚಿಕ್ಕರೂಪದಿಂದ ಒಳಸೇರಿ ನೀರು ಹೊರಗೆ ಬರದ ಹಾಗೇ ತಡೆಯಲು ಶುಕ್ರಾಚಾರ್ಯ ಪ್ರಯತ್ನಿಸಿದ. ವಾಮನ ದರ್ಭೆಯಿಂದ ಚುಚ್ಚಿದಾಗ ಕಣ್ಣೊಂದನ್ನು ಕಳೆದುಕೊಂಡು ಒಕ್ಕಣ್ಣ ಶುಕ್ರಾಚಾರ್ಯನಾದ. ವಾಮನ ಬೆಳೆದು ಎರಡು ಹೆಜ್ಜೆಗಳು ಇಡೀ ಭೂಮಿ, ಸ್ವರ್ಗಗಳನ್ನು ವ್ಯಾಪಿಸಿ ಮೂರನೇ ಹೆಜ್ಜೆಯಿಡುವ ಪ್ರಸಂಗಬಂತು. ಜಾಗವಿಲ್ಲದೇ ಬಲಿಯನ್ನು "ವಚನಬ್ರಷ್ಟ"ಎಂದು ನಿಂದಿಸಿದ. "ಹಾಗೊಂದು ಹೇಳಬೇಡ ವಟುವೇ ನಿನ್ನ ಮೂರನೇ ಹೆಜ್ಜೆಯನ್ನು ನನ್ನ ತಲೆಯಮೇಲೇ ಇಡು" ಎಂದು ಬಲಿ ಪಾರ್ಥಿಸಿದ. ಹೆಜ್ಜೆಯಿಟ್ಟ ಭಗವಂತ ಆತನನ್ನು ಪಾತಾಳಕ್ಕೆ ನೂಕಿಬಿಟ್ಟ! ಹಾಗೆ ನೂಕಲ್ಪಟ್ಟವ ಪ್ರಹ್ಲಾದನ ಮೊಮ್ಮಗ!! ಅಮೇಲೆ ದರ್ಶನವನ್ನೂ ವರಗಳನ್ನೂ ಪಡೆದು ಶ್ರೇಷ್ಠನಾದ ಅದು ಬೇರೇ ಪ್ರಶ್ನೆ-ಇದು ಕರ್ಮಬಂಧನ!
ಸಂಸಾರ ರಥವನ್ನು ನಡೆಸಲಾಗದ ಕಿಚ್ಚಿಗೆ ರೈತನೊಬ್ಬ, ನೇಕಾರನೊಬ್ಬ ಸಾಲಮಾಡುತ್ತಾನೆ, ಸಾಲದ ಮರುಪಾವತಿಗೆ ಒತ್ತಡಬಂದಾಗ ಹೆದರಿ ಕುಟುಂಬವೇ ಆತ್ಮಹತ್ಯೆಗೆ ಶರಣಾಗುತ್ತದೆ-ಇದು ಕರ್ಮಬಂಧನ!
ಸರ್ವಜ್ಞ ಹೇಳುತ್ತಾನೆ :
ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ
ಕರ್ಮಬಂಧನಕ್ಕೆ ಶೂರ ಅಭಿಮನ್ಯು ಇನ್ನೊಂದು ಉದಾಹರಣೆ. ಇವುಗಳನ್ನೆಲ್ಲಾ ಕಂಡಾಗ ನಮಗೆ ಕರ್ಮಬಂಧನ ಜಾಡು ಸ್ವಲ್ಪ ಅರಿವಾಗುತ್ತಾದರೂ ಅದರ ಜಾಲ, ಜಾಲಂದ್ರಗಳು ತಿಳಿದುಬರುವುದಿಲ್ಲ. ನಮ್ಮೊಳಗೇ ಅವಿತಿರುವ , ನಮ್ಮ ಹೊರಗೂ ಇರುವ ಆ ದಿವ್ಯ ಶಕ್ತಿಯ ಲೆಕ್ಕಾಚಾರ ಮಾತ್ರ ತಪ್ಪುವುದೇ ಇಲ್ಲ!
ಸರ್ವಜ್ಞ ಹೇಳುತ್ತಾನೆ :
ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ
ಕರ್ಮಬಂಧನಕ್ಕೆ ಶೂರ ಅಭಿಮನ್ಯು ಇನ್ನೊಂದು ಉದಾಹರಣೆ. ಇವುಗಳನ್ನೆಲ್ಲಾ ಕಂಡಾಗ ನಮಗೆ ಕರ್ಮಬಂಧನ ಜಾಡು ಸ್ವಲ್ಪ ಅರಿವಾಗುತ್ತಾದರೂ ಅದರ ಜಾಲ, ಜಾಲಂದ್ರಗಳು ತಿಳಿದುಬರುವುದಿಲ್ಲ. ನಮ್ಮೊಳಗೇ ಅವಿತಿರುವ , ನಮ್ಮ ಹೊರಗೂ ಇರುವ ಆ ದಿವ್ಯ ಶಕ್ತಿಯ ಲೆಕ್ಕಾಚಾರ ಮಾತ್ರ ತಪ್ಪುವುದೇ ಇಲ್ಲ!
ಭೂಮಿಯೂ ಕೂಡ ಹಾಗೇ ಇರುವುದಿಲ್ಲ. ಕಾಡುಗಳು ನಾಶವಾಗುತ್ತವೆ, ನೀರಿನ ಮೂಲಗಳು ಆರಿಹೋಗುತ್ತವೆ, ಖನಿಜಗಳು ಬರಿದಾಗುತ್ತವೆ, ಭೂಮಿಯಮೇಲಿನ ಹವಾಮಾನ ದೂಷಿತವಾಗುತ್ತದೆ, ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ, ನೈತಿಕತೆಯ ಮಾಲಿನ್ಯ ಇನ್ನೇನೇನೋ ಮಾಲಿನ್ಯ ಘಟಿಸುತ್ತದೆ ಅಲ್ಲವೇ? ಹಿಂದೆ ನಾವು ಕೇಳಿದ ಕಥೆಗಳೆಲ್ಲಾ ಕಟ್ಟುಕಥೆಗಳೇ ಎಂಬ ನಿರ್ಧಾರಕ್ಕೆ ಬರೋಣವೆಂದರೆ ನಾನೇ ಹುಟ್ಟಿದಾಗ ಇದ್ದ ಹಸಿರು ಕಾಡುಗಳು ಇವತ್ತಿಗೆ ಇಲ್ಲ! ಮರಗಳ ಮಾರಣಹೋಮ ನಡೆಯುತ್ತಲೇ ಇದೆ. ದಾರಿ-ಹೆದ್ದಾರಿಗಳು ಬದಲಾಗಿವೆ. ಹಲವು ಮಾರ್ಪಾಡುಗಳಾಗಿವೆ. ಎಂದಾಗ ಯುಗಯುಗಗಳ ಅಂತರದಲ್ಲಿ ಈ ಭೂಮಿ ಅದೆಷ್ಟು ಮಾರ್ಪಾಡುಗಳಿಗೆ ಒಳಪಟ್ಟಿರಬಹುದು ಅಲ್ಲವೇ? ಆದರೆ ಒಂದು ಮಾತ್ರ ಹಾಗೇ ಇರುತ್ತದೆ-ಅದು ಧರ್ಮ, ಮಾನವ ಸಹಜ ಧರ್ಮ, ಬದುಕುವ ನೀತಿ. ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಧರ್ಮ ನಮಗಾಗಿ ಹೊಂದಿಕೊಳ್ಳುವುದಿಲ್ಲ, ಧರ್ಮಕ್ಕಾಗಿ ನಾವು ಹೊಂದಿಕೊಳ್ಳಬೇಕು. ನಮ್ಮಲ್ಲಿನ ನ್ಯೂನತೆಗಳಿಗೆ ಧರ್ಮವೇ ಹೊಣೆ ಎನ್ನಬಾರದು. ಧರ್ಮಕ್ಕೆ ಅಪಚಾರಮಾಡಬಾರದು. ||ಧರ್ಮೋ ರಕ್ಷತಿ ರಕ್ಷಿತಃ || ಪರಹಿತವನ್ನು ಅವಲೋಕಿಸಿ ಧರ್ಮದ ನಡೆಯಲ್ಲಿ ನಡೆದವನನ್ನು ಧರ್ಮವೇ ರಕ್ಷಿಸುತ್ತದೆ. ಯಾವುದು ಧರ್ಮ, ಯಾವುದು ನೀತಿ ಎಂದು ಗ್ರಹಿಸುವ ತಾಕತ್ತು ಇರಬೇಕು.
ಯಾವುದು ನಿಜವೋ ಯಾವುದು ಗುಣವೋ
ಅದಾಗಲಿ ನನ್ನ ಗುರು
ಯಾವುದು ಮಾನವ ಲೋಕದ ಋಣವೋ
ಅದಾಗಲಿ ನನ್ನುಸಿರು
ಎಂದು ಕವಿಯೊಬ್ಬರು ಹೇಳಿದ್ದಾರೆ. ಧರ್ಮದ ನೆಲೆಯನ್ನೂ, ನೈತಿಕ ಹಿನ್ನೆಲೆಯನ್ನೂ ಆತುಕೊಳ್ಳಬೇಕು. ಯಾವುದೇ ಪೂರ್ವಾಗ್ರಹಗಳು-ಅಳುಕುಮನಸ್ಸು-ಗೆಳೆಯರಿಗೆ ಬೇಸರವಾಗಿಬಿಡಬಹುದೆಂಬ ಭಾವನೆ-ಸ್ವಾರ್ಥಕ್ಕೆ ಕಲ್ಲು ಬಿದ್ದೀತೆಂಬ ಅನಿಸಿಕೆ-ಕಟ್ಟಿದ ಬಳಗ ಏನೆಂದುಕೊಂಡಾರು ಎಂಬ ಧೋರಣೆ, ’ಬುದ್ಧಿಜೀವಿ’ ಪಟ್ಟ ಜಾರಿಹೋಗಬಹುದು ಎಂಬ ತಳಮಳ ಇವುಗಳನ್ನೆಲ್ಲಾ ಮುಂದುಟ್ಟುಕೊಳ್ಳದೇ ಧರ್ಮಮಾರ್ಗ ಯಾವುದೋ ಅದನ್ನು ಹಿಡಿದು ನಡೆಯಬೇಕು ಎಂಬುದು ತಿಳಿದು ಬರುತ್ತದೆ. ಆತ್ಮೋದ್ಧಾರದ ದಾರಿಕಾಣುವವರೆಗೂ ಇದೂ ಹೀಗೇ ಇರುತ್ತದೆ--ಯಾವುದೆಂದರೆ ಅದು ಜನ್ಮಬಂಧನ, ಅದೂ ಹೀಗೇ ಇರುತ್ತದೆ-ಈ ಭೂಮಿ ಆಕಾಶದ ಅವಕಾಶದಲ್ಲಿ ತೇಲುತ್ತಿರುತ್ತದೆ, ನಾವು ಮಾತ್ರ ಹುಟ್ಟುತ್ತಲೇ, ಸಾಯುತ್ತಲೇ, ಅನುಭವಿಸುತ್ತಲೇ ಇರುತ್ತೇವೆ.
http://vokkaligavaani.blogspot.in/search/label/ADVT%20BOREGOWDA
ReplyDelete
ReplyDeleteಶ್ರೀ ಕೃಷ್ಣನ ಮನ ಆ ಕಡೇ ಕ್ಷಣ
ಆ ಕಾಲ ದೇವನ ಕರೆಯಿನ್ನೇಕೆ ಬಾರದು ಎನ್ನ ದೇಹಕಿನ್ನು !
ಜರಾನ ಬಾಣದಿಂದಲೀ ಜೀವ ಬಿಡಲು ಪರಿತಾಪಿಸುವ ನಾನು
ನಮ್ಮ ಯಾದವರ ಕುಲವನ್ನೇ ರಕ್ಷಿಸಲಾಗದವನಾದ ನಾನು
ನಿಮ್ಮಗಳ ರಕ್ಷಿಸುವನೆಂದು ನಿಮಗೆ ಬರವಸೆಯಿದೆಯೇನು ?
ನಿತ್ಯವು ಹೇಸಿತ್ತು ಕಾವಲರಿಗೆ ನನ್ನ ದುಷ್ಟ ಮಾವನ ಕೃತ್ಯದಿ
ಅನುಕಂಪವಿಟ್ಟು ಸೆರೆಯ ಬೀಗವ ತೆರೆದರು ರಾತ್ರಿ ಕೆಲಕಾಲದಿ
ನನ್ನ ಮಾತಾಪಿತೃಗಳಿಗೆ ಅದು ದೊಡ್ಡ ಸುದೈವ ಅವಕಾಶವದೀ
ಬಿಟ್ಟರೆ ಸಿಗದು ಮತ್ತೊಮ್ಮೇ ಮಗನ ರಕ್ಷಿಸಲವಕಾಶ ಮುಂದಿನದಿ.
ರಕ್ಕಸಿ ಪುತನಿಯೊಬ್ಬಳು ಊರಿಗೆ ಬಂದು ನನ್ನೊಡನೆ ಆಡಿಪಾಡಿ
ತನ್ನೆರಡು ಸ್ಥನಗಳಿಗೂ ಕಡು ವಿಷವಂ ತೀಡಿ ಹಾಲುಣಿಸೆ ನೋಡಿ
ಸಂಚು ಮಾಡಿದಳು ಸ್ತನ್ಯಪಾನಕ್ಕೆ ಎನ್ನನ್ನು ಕಾಡಿ ಬೇಡಿ...ಬೇಡಿ
ಒಪ್ಪದ ಬಳಿಕ ಆ ವಿಷ ದೇಹದಲಿ ರಕ್ತದಲಿಸೇರಿ ಸತ್ತಳು ಕೂಡಿ.
ಬಂಡಿಯಲಿ ಶಟಕಾಸುರನೆಂಬ ಚತುರಬಂದ ಎನ್ನ ಕೊಲೆಗೈಯ್ಯಲು
ಕಂಸನಾ ಕಾರ್ಯದಿ ಗೋಕುಲಕೆ ಬರುವುದು ಗೊತ್ತಾಗಿ ಹಟ್ಟಿದರು
ಗೆಳೆಯರ ಜೋರು ಗದ್ದಲಕ್ಕೆ ಎತ್ತುಬಂಡಿ ದಿಕ್ಕೆಟ್ಟು ಓಡಲುತ್ತಿರಲು
ಅಸುರನೋ ಕಮರಿನಲಿ ಬಿದ್ದು ಸತ್ತಿಹನು ಕಲ್ಲು ತಲೆಗೆ ಬಡಿದಿರಲು.
ಚೂಣ-ಮುಷ್ಠಕರೆಂಬ ಮಲ್ಲರು ತನ್ನ ಮೇಲೆ ಯುದ್ಧಕೆ ಬಂದಿರಲು
ಮಾತಿನಲಿ ಕೊಂದೆವು ಅವರ ದೈರ್ಯವ ಆತ್ಮ ವಿಸ್ವಾಸಗಳನಂದೂ
ಮಲ್ಲರಿಬ್ಬರು ಶರಣು ಬಂದರು ವಿಧಿಯಿಲ್ಲದೆಯೇ ನಮ್ಮಲ್ಲಿಗೆ ಬಂದು
ಅವರಿಂದಲೇ ಕೊಂದೆವು ಕಂಸಾಸುರ ಮಾವನ ಏಕಾಂತ ಗೃಹದಲಂದು.
ಕಾಳಂದೀ ಮಡುವಿನಲಿ ದೊಡ್ಡ ಕಡು ಕಾಳಿಂಗ ಸರ್ಪವೊಂದಿರಲು
ಪತ್ತೆ ಹಚ್ಚಿದ ನಾವು ಯುವಕರೆಲ್ಲರು ಯುಕ್ತಿಯಲಿಯೇ ಹೊಡೆದಿರಲು
ತಲೆಜಜ್ಜಿದ ಮೇಲೆ ನಾ ತುಳಿದು ನಿಂತಿರುವುದ ಜನರು ಕಂಡಿರಲು
ಮೂಢಜನ-ಜನರಲಿ ಎನ್ನ ಮೇಲೆ ಭಯ ಭಕ್ತಿ ನಂಬಿಕೆ ಮೂಡಿತ್ತು.
ಗಾಂಧಾರದ ಮಾವ ಶಕುನಿಯಾ ತಂತ್ರದಿ ಕೌರವರೆಲ್ಲಾ ಬಾಗಿರಲು
ಪಂಚ ಪಾಂಡವರ ಕಡೆ ಎನ್ನ ಪಾರ್ಥನೆಡೆ ಮನವದು ಒಲಿದಿರಲು
ಲಾಭವನು ಬಳಿಸಿ ಕೊಳ್ಳದೆಯಿರುವನೇ ಅವನ ಭಾವನಾದ ನಾನು
ಬಿಡುವನೇ ಮೋಸದ ತಂತ್ರ ಕುತಂತ್ರದ ಕಲೆ ಎನ್ನ ಕರಗತವಾಗಿರಲು.
ಮನವೆಲ್ಲಾ ಈಗ ತುಂಬಿರುವುದು ಆ ಕಾಲನ ಭಯದಿಂದಿಂದು
ಸುಲಭದಿ ಹೋಗದಿರದೀ ಕೊಳೆವ ಕಾಲಬೇನೆ ದೇಹವತೊರೆದು
ಹಿತವಪ್ಪುವುದೀ ಸಾವು... ಸಾವು... ಬಹು ಬೇಗನೇ ಬರಲಿಂದು
ಕಾಲನಾ ಕರೆ ಕಾಲ ಬಾರದೆ ನಾ ಹೋಗೇ ಈ ಜಗವ ತೊರೆದು.
ನ ಹಿ ಪ್ರಕೃತಿ ರಕ್ಷತಿ ರಕ್ಷತಃ
ReplyDeleteಸತ್ಯಸ್ಯ ವಚನಂ ಶ್ರೇಯಃ | ನ ಹಿ ಪ್ರಕೃತಿ ರಕ್ಷತಿ ರಕ್ಷತಃ |
ನ ಹಿ ಧರ್ಮೋ ದೇವೋ ರಕ್ಷಂತಿ | ಸ್ವಧರ್ಮೋ ದೇವೋ ಮನುರುಧ್ಯಂತೆ |
ಏಕ ಏವ ಪರೋಹ್ಯಾತ್ಮ ಸರ್ವೇಷಮಪಿ ದೇಹಿನಾಮ್ |
ಸತ್ಯವನ್ನು ಹೇಳುವುದು ಶ್ರೇಯಸ್ಸು.
ಪ್ರಕೃತಿಯನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ದೇವರು ಧರ್ಮವು ಯಾರನ್ನು ರಕ್ಷಿಸುವುದಿಲ್ಲ.
ಅಭಿಮಾನಿಗಳು ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾರೆ.
ಎಲ್ಲಾ ಪ್ರಾಣಿಗಳಿಗೂ ಒಂದೇ ಒಂದು ಆತ್ಮವು ( ಜೀವವು ) .
ಪ್ರಕೃತಿ ದೇವೋ ವಂದೇ ವಂದ್ಯ
ವಂದೇ ವಂದ್ಯ ಙ್ಞಾತ ಅಙ್ಞಾತ ದೇವೋ ವಂದೇ ವಂದ್ಯ
ವಂದೇ ವಂದ್ಯ ಪ್ರಕೃತಿ ದೇವೋ ವಂದೇ ವಂದ್ಯಾ ವಿಸ್ಮಯ || ಪ್ರಕೃತಿ ದೇವೋ ||
ಸರ್ವಥಾ ಸೂಕ್ಷ್ಮ ಸ್ಥೂಲಕಾಯ ಪ್ರಭೇಧ ಪ್ರಮದೆ ಪ್ರಸೂತೆ
ಸರ್ವ ಗ್ರಹಿತ ಸರ್ವ ವಿಧಿ ನಿಗ್ರಹಿತ ಸರ್ವ ಜನಾ ಪೂಜಿತೇ
ಸರ್ವಸ್ವ ಜೀವಿಗಳ ಸಮಾನತೆ ಸಂಮಯದಿ ಪರಿಪಾಲಿತೇ
ಸರ್ವ ಸಹಸ್ರ ಸಹಸ್ರ ಜೀವಕೋಟಿ ಸಂಸಾರ ಸಂಯೋಜಿತೇ || ಪ್ರಕೃತಿ ದೇವೋ ||
ಇರೆಂಬತ್ತು ಲಕ್ಷಕೋಟಿ ಕೋಟಿಜೀವರಾಶಿಗಳ ಸೃಷ್ಟಿಯ ತಂದೆ
ಚರಾ-ಚರಿಗಳಲಿ ಅಡಗಿಹ ಜೀವಾತ್ಮಗಳ ಚೈತನ್ಯವೀವ ತಂದೆ
ಪರಮಾತ್ಮನೆಂಬ ಅಗೋಚರ ಶಕ್ತಿಯೇ "ಪ್ರಕೃತಿ" ಸತ್ಯದ ತಂದೆ
ಆರಿ ಆತನೊಬ್ಬನೇ ಜಗವ ಸಾಕಿಸಲಹುವತಂದೆ ಒಡೆಯನೆಂದೇ || ಪ್ರಕೃತಿ ದೇವೋ ||
ಸೃಷ್ಟಿಯ ಸ್ಪಷ್ಟ ಪರಿಕಲ್ಪನೆ ಅರಿಯಲು ಕ್ಲಿಷ್ಟ ಸಂಶ್ಲಿಷ್ಟವಿರುವಂತೆ
ಶಶಿ ಸೂಯೋದಯ ಅಸ್ತಮ ಮಿಥ್ಯಯ ಜಗವೇ ನಂಬುವಂತೆ
ಸೃಷ್ಟಿಯ ಬರಹಗಳಲಿ ಮಿಥ್ಯವೇ ಸನಾತನದಿ ಸಹಜತೆಯಂತೆ
ವಿಶ್ವಾತ್ಮದಾ ಪ್ರಕೃತಿ ಕೊಡಿಗೆಯಲಿ ಲೀನವಾಗು ಯಾತ್ರಿಕ ನೀನಿಂದೆ || ಪ್ರಕೃತಿ ದೇವೋ ||