ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 31, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

ಚಳಿಗಾಲದ ಸಂಜೆಯ ಚುಮು ಚುಮು ಚಳಿಯಲ್ಲಿ ಅಜ್ಜ ಕೇರಿಯ ಯಾರೊಟ್ಟಿಗೋ ಮಾತು-ಕಥೆಯಾಡುತ್ತಿರುವಾಗ ಎಡತಡಸುವ ಚಿಕ್ಕ ಹುಡುಗ ನಾನಾಗಿದ್ದೆ. ಅಡ್ಡ ಬರುವುದಕ್ಕೆ ಸಿಟ್ಟುಬಂದರೂ ಮೊಮ್ಮಗನ ಮೇಲಿನ ವ್ಯಾಮೋಹಕ್ಕೇನೂ ಕೊರತೆಯಿರಲಿಲ್ಲ; ಹಾಗೆ ಕರೆದು ತನ್ನ ಕಾಲ ಸಂದಿಯಲ್ಲಿ ಕೂರಿಸಿಕೊಂಡಾಗ ಅಜ್ಜ ಹೊದ್ದ ಪಂಚೆಯೋ ಶಾಲೋ ನನ್ನನ್ನೂ ಮುಚ್ಚುತ್ತಿತ್ತು. ಅಜ್ಜನ ಮೈಯ್ಯ ಶಾಖ ಆ ಬಟ್ಟೆಯೊಳಗೇ ಇದ್ದು ಹೊರಗಿನ ಚಳಿ ತಾಗದೇ ಒಂಥರಾ ಹಾಯೆನಿಸುವ ಖುಷಿ ಬೇರೆ. ರೈತರ ಮನೆಯಾಗಿದ್ದರಿಂದ ರೈತಾಪಿ ವರ್ಗದ ಅನೇಕ ಕಷ್ಟಸುಖಗಳ ಕಥಾನಕಗಳು ಮಾತುಕಥೆಗಳಲ್ಲಿ ಅಡಕವಾಗೇ ಇರುತ್ತಿದ್ದವು. ಬೆಳೆದ ಫಸಲಿಗೆ ಸಿಗಬಹುದಾದ ಧಾರಣೆಯಿಂದ ಹಿಡಿದು ಬೆಳೆಗಳಿಗೆ ತಗಲುವ ಬಾಧೆಗಳು, ಗಂಟಿ[ದನ]ಕರುಗಳ ರೋಗ-ರುಜಿನಗಳು, ಆಹಾರ-ಧಾನ್ಯಗಳು, ಮದುವೆ-ಮುಂಜಿ ಕಾರ್ಯಕಟ್ಲೆ ಸುದ್ದಿಗಳು ಹೀಗೇ ವೈವಿಧ್ಯಮಯ ವಿಚಾರಗಳು ಜಗಲಿಯಲ್ಲಿ ಮಂಡಿಸಲ್ಪಡುತ್ತಿದ್ದವು. ಅಜ್ಜ ಹಾಗೆ ಸಿಗುವುದು ತೀರಾ ಅಪರೂಪ; ಇದು ನಿತ್ಯದ ವೈಖರಿಯಲ್ಲ, ಅಪರೂಪಕ್ಕೆ ೧೫ ದಿನಕ್ಕೋ ೨೨ ದಿನಕ್ಕೋ ಸಿಗುವ ಅವಕಾಶ. ಒಮ್ಮೊಮ್ಮೆ ಈ ಕೂಟ ಚಾ ಕುಡಿಯುವುದರೊಂದಿಗೆ ಮುಗಿಯುತ್ತಿತ್ತು. ಚಾ ಕುಡಿದರೆ ಆಗುವ ಅಡ್ಡ-ಉದ್ದ ಪರಿಣಾಮಗಳ ಬಗ್ಗೆ ನಮಗೆ ಅರಿವಿರದ್ದರಿಂದ ’ಬರಿದೇ ಮಕ್ಕಳು ಚಾ ಕುಡಿಯಬಾರದೆಂದು ಹೇಳ್ತಾರೆ ತಾವು ಮಾತ್ರ ಕುಡೀತಾರೆ’ ಎಂಬ ಗೊಣಗಿಕೊಳ್ಳುವಿಕೆಯಿಂದ ಸುಮ್ಮನಾಗುತ್ತಿದ್ದೆವು.

ಅಜ್ಜ ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೭ರಲ್ಲಿ ಜನಿಸಿದ್ದ. ತಕ್ಕಮಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮಗಳ ಗಾಳಿ ಅಜ್ಜನಿಗೆ ತಟ್ಟಿದ್ದರೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾವತ್ತೂ ಅಜ್ಜ ಹೇಳಿಕೊಳ್ಳಲಿಲ್ಲ. ಮನೆಯಲ್ಲಿ ಅಜ್ಜನ ತಂದೆಯವರಿಗೆ ಮೂರ್ನಾಲ್ಕು ಮಕ್ಕಳು. ಸಹಜವಾಗಿ ಕಿತ್ತು ತಿನ್ನುವ ಬಡತನ. ಆ ಕಾಲಕ್ಕೆ ಏನೂ ಇರಲಿಲ್ಲವಂತೆ. ಬಡತನ ಎಷ್ಟಿತ್ತೆಂದರೆ ಆನಬಾಳೇಕಾಯಿ[ದಪ್ಪ ಬಾಳೇಕಾಯಿ]ಪಲ್ಯವನ್ನು ಬೆಳಿಗ್ಗೆಯ ತಿಂಡಿಯಾಗಿ ತಿನ್ನುತ್ತಿದ್ದರಂತೆ. ಅಂದು ಇಂದಿನಂತೇ ಅಂಗಡಿಮುಂಗಟ್ಟುಗಳು ತಾಲೂಕು ಬಿಟ್ಟು ಹಳ್ಳಿಗಳಲ್ಲಿ ಇರಲಿಲ್ಲ. ಹಿಟ್ಟಿನ, ಅವಲಕ್ಕಿಯ ಗಿರಣಿಗಳು ಇರಲಿಲ್ಲ. ಎಲ್ಲವೂ ಮನೆಯಲ್ಲೇ ಇರುವ ಬೀಸುವ ಒಳಕಲ್ಲು, ಗೋಧಿ ಕಲ್ಲು, ಅವಲಕ್ಕಿ ಕುಟ್ಟುವ ಕಲ್ಲು ಇವುಗಳಲ್ಲೇ ಆಗಬೇಕು! ಅವಲಕ್ಕಿ ಮತ್ತು ಅಕ್ಕಿಗಳನ್ನು ಒನಕೆಯಿಂದ ಕುಟ್ಟಿಯೇ ತಯಾರಿಸುತ್ತಿದ್ದರಂತೆ. ಚಿಟಗನಕ್ಕಿ ಭತ್ತದ ಅವಲಕ್ಕಿ ತಿನ್ನಲು ತುಂಬಾ ರುಚಿಯಿರುತ್ತಿತ್ತು. [ಆ ತಳಿಯ ಭತ್ತದ ಅವಲಕ್ಕಿ ನಾನು ಚಿಕ್ಕವನಿರುವಾಗ ಕೂಡ ನನಗೆ ಸಿಕ್ಕಿತ್ತು!] ಆದರೆ ಪ್ರತಿದಿನ ಮಾಡಿಕೊಳ್ಳುವಷ್ಟು ಅಜ್ಜ ಸಿರಿವಂತನಾಗಿರಲಿಲ್ಲ. ಆ ಕಾಲಕ್ಕೆ ದೋಸೆ ಎಂಬುದು ಒಂದು ವಿಶೇಷ ಕಜ್ಜಾಯವಾಗಿತ್ತು ಎಂದು ಅಜ್ಜ ಹೇಳುತ್ತಿದ್ದುದು ನೆನಪಿದೆ! ಅಜ್ಜ ೧೬ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ; ಕುಟುಂಬದ ಭಾರ ಹೆಗಲಿಗೆ ಬಿತ್ತು. ಆಗಲೇ ಅಣ್ಣ-ತಮ್ಮಂದಿರಿಗೆ ಮದುವೆ ಬೇರೆ. ಅಣ್ಣ-ತಮ್ಮಂದಿರು ಇರುವ ಭೂಮಿ ಹಿಸ್ಸೆಮಾಡಿಕೊಂಡು ಬೇರೇ ಬೇರೆಯಾಗಿದ್ದರು.

ಅಜ್ಜನಿಗೆ ಮುಂದೆ ನಾಕು ಗಂಡು ಎರಡು ಹೆಣ್ಣು ಒಟ್ಟಿಗೆ ಆರು ಮಕ್ಕಳು ಜನಿಸಿದರು. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಅಜ್ಜ-ಅಜ್ಜಿ ಇಬ್ಬರೂ ಇರುವ ಅಡಕೆಯ ತೋಟದಲ್ಲಿ ಸ್ವತಃ ಗೇಯುತ್ತಿದ್ದರು. ಅಜ್ಜಿ ಕೊಟ್ಟಿಗೆಯಿಂದ ಆಕಳ ಗೊಬ್ಬರವನ್ನು ಹೆಡಗೆಗಳಲ್ಲಿ ಹೊತ್ತು ತಾನೂ ಸಹಕರಿಸುತ್ತಿದ್ದಳಂತೆ. ಒಮ್ಮೆ ಚಿಕ್ಕ ಮಗುವಾಗಿದ್ದ ಚಿಕ್ಕಪ್ಪನನ್ನು ತೋಟದ ಅಡಕೆಮರದ ಮರದ ಬೊಪ್ಪೆಯ[ಬುಡದ]ಮೇಲೆ ಮಲಗಿಸಿಟ್ಟು ತುಸುದೂರದಲ್ಲಿ ಕೆಲಸಮಾಡುತ್ತಿರುವಾಗ ಮಗು ಹೊರಳಿ ಅಂಬೆ ಹರೆದು ನೀರಿಲ್ಲದ ಚಿಕ್ಕ ೭-೮ ಅಡಿಯ ಬಾವಿಗೆ ಬಿದ್ದುಬಿಟ್ಟಿತಂತೆ! ದೇವರು ದೊಡ್ಡವನು-ಮಗು ಸಾಯಲಿಲ್ಲ, ಚಿಕ್ಕಪುಟ್ಟ ಪೆಟ್ಟುಗಳಾಗಿದ್ದವಂತೆ. ಆಗೆಲ್ಲಾ ಕತ್ತಲ ಕಾಲ; ವಿದ್ಯುದ್ದೀಪ ಇನ್ನೂ ಬಂದಿರಲಿಲ್ಲ. ರಾತ್ರಿ ಚಿಮಣಿ ಬುಡ್ಡಿ ದೀಪವೇ ಎಲ್ಲದಕ್ಕೂ. ಒಮ್ಮೆ ಬುಡ್ಡಿಯನ್ನು ದೂರದಲ್ಲಿಟ್ಟು ಆಗ ಮಗುವಾಗಿದ್ದ ಇನ್ನೊಬ್ಬ ಚಿಕ್ಕಪ್ಪನನ್ನು ಮಲಗಿಸಿ ಹೋಗಿದ್ದರೆ ಆ ಪುಣ್ಯಾತ್ಮ ಸೂರ್ಯನನ್ನು ಹಣ್ಣೆಂದು ಭಾವಿಸಿದ ಹನುಮನಂತೇ ಬೆಂಕಿಯ ಜೊತೆ ಸರಸವಾಡಲು ಬುಡ್ಡಿಯನ್ನೇ ಬರಸೆಳೆದು ಅಜ್ಜಿ ಓಡಿಬರುವಷ್ಟರಲ್ಲಿ ಹೊಟ್ಟೆಯ ಕೆಲಭಾಗ ಸುಟ್ಟುಹೋಗಿತ್ತು! ಇಲ್ಲೂ ಅಷ್ಟೇ ಭಗವಂತ ದೊಡ್ಡವನು; ತೀರಾ ಸಾಯುವಷ್ಟು ಸುಟ್ಟಿರಲಿಲ್ಲ, ಆದರೂ ಕಲೆ ಈಗಲೂ ಇದೆ.

ಸಂಸಾರದ ಭಾರವನ್ನು ಹೊತ್ತ ಅಜ್ಜನಿಗೆ ಇರುವ ತೋಟದ ಗಳಿಕೆ ವರ್ಷದ ಮೂರುತಿಂಗಳೂ ಸಾಲುವಷ್ಟಿರಲಿಲ್ಲವಂತೆ. ಆಗ ಮರ್ಯಾದೆಗೆ ಬಹುದೊಡ್ಡ ಮೌಲ್ಯವಿದ್ದಕಾಲ. ಯಾರಾದರೂ ನೆಂಟರು-ಇಷ್ಟರು ಬಂದರೆ ಸತ್ಕರಿಸಬೇಕು. ಊರೂರು ಅಲೆಯುವ ಸಂಭಾವನೆ ಬೇಡುವವರು, ಯಾವುದೋ ವಂತಿಗೆ-ವರಾಡಿಯವರು, ಭಿಕ್ಷುಕರು ಅವರು ಇವರು ಅಂತ ಯಾರ್ಯಾರೋ ಬರುತ್ತಿದ್ದರಂತೆ. ಊಟದ ಹೊತ್ತಿಗೆ ಬಂದ ಯಾರನ್ನೂ ಹಾಗೇ ಕಳಿಸುವ ವೈವಾಟು ನಮ್ಮಲ್ಲಿರಲಿಲ್ಲ. ಕಷ್ಟದ ದಿನಗಳಲ್ಲಿ ಅಜ್ಜ ಕೈಚೆಲ್ಲಿ ಕೂತಿರಲಿಲ್ಲ. ಬೇರೆಯವರ ಮನೆ ಕೂಲಿ ಕೆಲಸಮಾಡಿ ದುಡಿಯುತ್ತಿದ್ದರು. ನಮ್ಮಲ್ಲಿನ ರೈತಾಪಿ ಕೆಲಸಗಳಾದ ಕೊಟ್ಟೆಕಟ್ಟುವುದು[ ಅದು ಈಗ ಬರೇ ಇತಿಹಾಸದ ಪುಟದಲ್ಲಿ ಮಾತ್ರ ಕೇಳಸಿಗುತ್ತದೆ] ಕೊನೆಕೊಯ್ಯುವುದೇ ಮೊದಲಾಗಿ ಮರಗೆಲಸ[ಮರದಮೇಲಿನ ಕೆಲಸ]ಗಳನ್ನೂ ಮಾಡಿ ಮಕ್ಕಳನ್ನೂ ಹೆಂಡತಿಯನ್ನೂ ಸಲಹಿದ್ದು ಕೇಳಿದ್ದೇನೆ. ಇಂತಹ ಅಜ್ಜ ಕಲಿತಿದ್ದು ಕನ್ನಡ ಪ್ರಾಥಮಿಕದ ಮೂರನೇ ತರಗತಿಯನ್ನು. ಆದರೂ ಆತನ ವ್ಯವಹಾರದ ಶಿಸ್ತು ಸಿಪಾಯಿಯ ಶಿಸ್ತಿನಂತಿತ್ತು. ಹಲವರ ಒಡನಾಟದಿಂದ ಅಜ್ಜ ಅನೇಕ ಆಂಗ್ಲ ಮತ್ತು ಹಿಂದೀ ಪದಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ, ಅಂಥವರ ಜೊತೆ ಅಂತಂಥದೇ ಶಬ್ದಗಳನ್ನು ಬಳಸುವುದನ್ನು ನೋಡಿದ ನನಗೇ ಆಶ್ಚರ್ಯವಾಗುತ್ತಿತ್ತು.

ಸರಿಯಾಗಿ ಉಳಿದುಕೊಳ್ಳಲು ಮನೆಯೂ ಇಲ್ಲದ ಗುಡಿಸಲಿನ ವಾತಾವರಣವಿದ್ದ ಕಾಲದಲ್ಲಿ ಅಜ್ಜನಿಗೆ ಹೇಗಾದರೂ ಮಾಡಿ ಚಿಕ್ಕ ಮನೆ ಕಟ್ಟುವ ಅಸೆಯಾಯ್ತು. ದುಡಿಯುವ ದುಡ್ಡಿನಲ್ಲಿ ಬಿಡಿಗಾಸೂ ಉಳಿಯುತ್ತಿರಲಿಲ್ಲ. ಅದಕ್ಕಾಗಿ ಅಜ್ಜ ಅಡಕೆ ವ್ಯಾಪಾರಕ್ಕೆ ತೊಡಗಿದ. ವ್ಯಾಪಾರ ಅಜ್ಜನ ಕೈಹಿಡಿಯಿತು ಎಂದು ಅವರ ಜೀವನದ ಗತಿಯೇ ಹೇಳುತ್ತದೆ. ಇದೇ ಸಮಯದಲ್ಲಿ ಮಹಾತ್ಮರಾದ ಭಗವಾನ್ ಶ್ರೀಧರರು ನಮ್ಮಲ್ಲಿಗೆ ಬಿಜಯಂಗೈದಿದ್ದರು. ಅಜ್ಜ ಭಕ್ತಿಯಿಂದ ಪಾದಪೂಜೆ ನಡೆಸಿದ್ದನಂತೆ. " ತಮ್ಮಾ ಕರಿಕಾನಮ್ಮನ ದೇವಸ್ಥಾನ ಕಟ್ಟುವುದಕ್ಕೆ ನನ್ನ ಜೊತೆಗೆ ಬಂದವರಿಗೆ ಏನಾದರೂ ಕೊಡು ಅದು ನಿನಗೆ ಮೂರುಪಟ್ಟಾಗುವುದು" ಎಂದಿದ್ದರಂತೆ. [ಆಗ ಜಾಗ್ರತ ಸ್ಥಳವಾದ ಹೊನ್ನಾವರ ತಾಲೂಕಿನ ಶ್ರೀಕರಿಕಾನ್ ಪರಮೇಶ್ವರೀ ದೇಗುಲವನ್ನು ಕಟ್ಟಲು ಅನೇಕ ಜನ ಸೇರಿ ಸಂಕಲ್ಪಿಸಿದ್ದರೂ ಅದು ದೈವೀಶಕ್ತಿಯಿರುವ ಜನರಿಂದ ಮಾತ್ರ ಸಾಧ್ಯ ಎಂಬ ಕಾರಣಕ್ಕೆ ನಿಂತುಹೋಗಿದ್ದು ಶ್ರೀಧರರು ಅದನ್ನು ತಿಳಿದು ತಾವೇ ಆ ಕೆಲಸ ಮುಗಿಸಿಕೊಡಲು ಮುಂದೆ ನಿಂತಿದ್ದರು.] ಸರ್ವಸಂಗ ಪರಿತ್ಯಾಗಿಯಾದ ಪರಮಹಂಸ ಸನ್ಯಾಸಿಯೊಬ್ಬರು ನಿಸ್ಪೃಹರಾಗಿ ಸ್ವತಃ ತನ್ನಲ್ಲಿ ಏನಾದರೂ ಕಟ್ಟಡಕ್ಕೆ ಕೊಡು ಎಂದಿದ್ದನ್ನು ಕೇಳಿ ಅಜ್ಜನಿಗೆ ಮನಸ್ಸು ಬಹಳ ಆರ್ದ್ರವಾಯ್ತು. ಅಂದಿನ ಕಾಲಕ್ಕೆ ವ್ಯಾಪಾರದಲ್ಲಿ ಬಳಸುತ್ತಿದ್ದ ಒಂದು ಸಾವಿರವನ್ನು ಅಜ್ಜ ಗುರುಗಳ ಜೊತೆಗಾರರಿಗೆ ನೀಡಿದನಂತೆ. ಕೈಲಿದ್ದ ನಗದನ್ನೆಲ್ಲ ಅಜ್ಜ ದೇವರಿಗೆ ನೀಡಿದ್ದ, ಮುಂದಿನ ಖರ್ಚಿಗೆ ದುಡ್ಡು ಬೇಕೆಂದರೆ ಇದ್ದ ಅಡಕೆ ಮಾರಬೇಕು. ಖರೀದಿಸಿದ ಅಡಕೆ ಮನೆಯಲ್ಲಿ ರಾಶಿ ಬಿದ್ದಿತ್ತು. ಅದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಒಯ್ದಾಗ ಅಜ್ಜನಿಗೆ ಅದಕ್ಕೆ ತಗುಲಿದ ವೆಚ್ಚಕ್ಕೆ ಮೂರುಪಟ್ಟು ಹಣ ಬಂತು ! ಸದ್ಗುರುಗಳ ಸಂಕಲ್ಪವನ್ನು ಅಜ್ಜ ಕೊನೆಯವರೆಗೂ ನೆನೆಯುತ್ತಿದ್ದ.

ಹೀಗೇ ಮುಂದೆ ವ್ಯಾಪಾರದಲ್ಲಿ ಅಷ್ಟಿಷ್ಟು ಹಣಗಳಿಸಿ ಮನೆಯೊಂದನ್ನು ಅಜ್ಜ ಕಟ್ಟಿದ. ಅದೂ ಆ ಕಾಲಕ್ಕೆ ಮಹಡಿ ಮನೆ. ಕೈಲಾಗುತ್ತಿಲ್ಲ; ಮನಸ್ಸು ಕೇಳುತ್ತಿಲ್ಲ. ಖರ್ಚಿಗೆ ಪೂರ್ತಿ ಹಣವಿಲ್ಲ. ಯಾರೋ ಉದ್ರಿಯಲ್ಲಿ ಬಿಜಗರ, ಮೊಳೆ, ಕಬ್ಬಿಣ-ಹಿತ್ತಾಳೆ ಸಾಮಗ್ರಿಗಳನ್ನು ಕೊಟ್ಟರು. ಇನ್ಯಾರೋ ಗೋಡೆಕಟ್ಟಲು ಕಲ್ಲು[ನಮ್ಮಲ್ಲಿನ ಲ್ಯಾಟರೈಟ್] ತರಿಸಿಕೊಟ್ಟರು. ಅದ್ಯಾರೋ ಮರದ ತೊಲೆಗಳನ್ನೂ ದಿಮ್ಮಿಗಳನ್ನೂ ಕೊಟ್ಟರು, ಮತ್ತಿನ್ಯಾರೋ ಗಿಲಾಯಿಮಾಡಿ ಬಣ್ಣ-ಸುಣ್ಣ ಬಳಿಯಲು ಅನುಕೂಲ ಮಾಡಿಕೊಟ್ಟರು! ಇದೆಲ್ಲಾ ನಡೆದುದು ಗುರು ಶ್ರೀಧರರ ಕೃಪೆಯಿಂದ ಎಂಬುದು ಅಜ್ಜನ ಅನಿಸಿಕೆಯಾಗಿತ್ತು; ಅದು ಸತ್ಯವೂ ಕೂಡ. ಎಲ್ಲೆಲ್ಲೂ ಅಜ್ಜನಿಗೆ ತುಂಬಾ ವ್ಯಕ್ತಿಮೌಲ್ಯ[ಕ್ರೆಡಿಬಲಿಟಿ] ದೊರೆತಿತ್ತು. ಹೇಗೋ ತಮಗೆ ಹಣ ಮರಳಿಸುವನೆಂಬ ನಂಬಿಕೆ ಎಲ್ಲರದಾಗಿತ್ತು. ಅಜ್ಜನ ಸ್ನೇಹ ಬಯಸಿ ಅನೇಕ ಜನ ಒಡನಾಡುತ್ತಿದ್ದರು. ಯಾರೋ ಆರ್ತರು, ಯಾರೋ ಅನಾಥರು, ಯಾರೋ ಬಡವರು ದೇಹಿ ಎಂದರೆ ಅಜ್ಜ ಕೂಡ ಹಾಗೇ ಕೈ ತಿರುಗಿಸುತ್ತಿರಲಿಲ್ಲ. ಅನೇಕ ಜನರಿಗೆ ಅಜ್ಜ ದಾರಿ ಕಲ್ಪಿಸಿದ್ದನ್ನು ನಾನು ಕೇಳಿಬಲ್ಲೆ. ಇಂತಹ ಅಜ್ಜನ ಮೊಮ್ಮಗನಾಗಿ ನಾನು ಜನಿಸಿದ್ದು ನನ್ನ ಪುಣ್ಯ ಎಂದು ಏಷ್ಟೋ ಸರ್ತಿ ನಾನಂದುಕೊಂಡಿದ್ದೇನೆ.


ಅಜ್ಜ ಊರಲ್ಲಿ ಜಮೀನು ಖರೀದಿಸಿದ. ಹಲವು ದೋಸ್ತರ ಬಳಗದೊಂದಿಗೆ ಕುಮಟಾದಲ್ಲಿ ಅಡಕೆ ಮಂಡಿ ಆರಂಭಿಸಿದ. ಆರಂಭಿಸಿದ ವರ್ಷವೊಂದರಲ್ಲೇ ಊರಕಡೆಯ ಆ ದೋಸ್ತರೆಲ್ಲಾ ತಮಗೆ ಬೇಕಾದವರಿಗೆ ಸಾಲ ಕೊಡು ಎಂದು ಚೀಟಿಕೊಟ್ಟು [ಇಂದಿನ ಎಮ್ಮೆಲ್ಲೆ ಶಿಫಾರಸ್ಸಿನ ಹಾಗೇ!] ಕುಮಟಾದಲ್ಲಿರುತ್ತಿದ್ದ ಅಜ್ಜನ ಹತ್ತಿರ ಕಳಿಸುತ್ತಿದ್ದರು. ದುಡಿವ ಬಂಡವಾಳ ಖಾಲಿಯಾಗುತ್ತಾ ನಡೆದಾಗ ವ್ಯವಹಾರ ನಿಭಾಯಿಸುವುದು ಕಷ್ಟವಾಗಿ ಅದನ್ನು ಗಮನಿಸಿದ ಅಜ್ಜ ಸಾಲ ಕೊಡುವುದಕ್ಕೆ ಮೂಲ ಬಂಡವಾಳ ಜಾಸ್ತಿ ಕ್ರೋಡೀಕರಿಸಬೇಕೆಂದು ಕೇಳಿದ್ದಕ್ಕೆ ಎಲ್ಲಾ ದೋಸ್ತರ ಕಣ್ಣೂ ಕೆಂಪಗಾಗಿದೆ; ತೊಡಗಿಸಿದ ಬಂಡವಾಳದ ಭಾಗವನ್ನು ಮರಳಿ ಕೊಡುವಂತೇ ಹಿಂದೆಬಿದ್ದಿದ್ದಾರೆ. ಗುರುವನ್ನು ಸ್ಮರಿಸಿ ಇಡೀ ಮಂಡಿಯ ವ್ಯವಹಾರವನ್ನು ಒಬ್ಬನೇ ವಹಿಸಿಕೊಂಡು ಕೇವಲ ಅತಿ ಸಣ್ಣ ಸಮಯಾವಧಿಯಲ್ಲಿ ಎಲ್ಲರ ಹಣವನ್ನೂ ಮರಳಿಸಿದ ಛಾತಿ ಅಜ್ಜನದು. ಮಾತ್ರವಲ್ಲ ಅಲ್ಲೇ ದುಡಿದು ಅದೇ ಜಾಗವನ್ನು ಖರೀದಿಸಿದ್ದೂ ಆಯ್ತು! ಅದೇ ಸಮಯಕ್ಕೆ ಸ್ವಲ್ಪ ಕಾಸು ಹೊಂದಿಸಿ ಮಕ್ಕಳ ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮ್ಮೂರಿಂದ ೧೦ ಕಿ.ಮೀ ದೂರದಲ್ಲಿ ಜಮೀನನ್ನೂ ಖರೀದಿಸಿದ.

ಅಜ್ಜ ಖರೀದಿಸಿದ ದೂರದ ಆ ಜಮೀನು ಕಾಡ ಮಧ್ಯೆ ಇತ್ತು. ಒಂದು ಕಡೆ ತೊರೆಯೊಂದು ಚಿಕ್ಕ ನದಿಯಾಗಿ ಹರಿಯುತ್ತಿತ್ತು. ಇನ್ನೊಂದೆಡೆ ದಟ್ಟ ಕಾಡು. ಜಮೀನಿಗೆ ೩ ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ನಡೆಯುವಾಗ ಆ ಕಾಲು ಹಾದಿ ಕಾಡ ಮಧ್ಯೆಯೇ ಹಾದುಹೋಗುತ್ತಿತ್ತು. ಹಾದಿಯ ಕೆಲವೆಡೆ ಚಿಕ್ಕ ಪುಟ್ಟ ತೊರೆಗಳು ಹರಿಯುವುದನ್ನು ನೋಡಬಹುದಿತ್ತು. ಎಲ್ಲೆಲ್ಲೂ ಹಸಿರು ತುಂಬಿದ ಮರಗಳು. ಮರಗಳ ಮೇಲೆ ಹಲವುವಿಧದ ವನಚರಗಳು, ಪಕ್ಷಿಗಳು. ಝೀಂಕರಿಸುವ ಜೀರುಂಡೆಗಳು, ಬಿಸಿಲ ಹೊತ್ತಿಗೆ ಗುಟುರ್ ಗುಟುರ್ ಎಂದು ವಿಶಿಷ್ಟವಾಗಿ ಧ್ವನಿಹೊಮ್ಮಿಸುವ ಹಕ್ಕಿಗಳು. ಕೇಶಳಿಲು-ಕೆಂಬೂತಗಳು. ನವಿಲು-ಗಿಳಿಗಳು. ಸಿಳ್ಳೆ ಕ್ಯಾತ-ಮಸಿಮಂಗ[ಕೋಡ] ಮತ್ತು ಬಿಳಿಮಂಗಗಳು....ಹೀಗೇ ಹತ್ತಾರು ಜೀವವೈವಿಧ್ಯವನ್ನು ನಾವು ಚಿಕ್ಕಮಕ್ಕಳು ಅಲ್ಲಿ ಕಂಡಿದ್ದೇವೆ. ಶಾಲೆಗೆ ರಜಾ ಬರುವುದನ್ನೇ ಕಾಯುತ್ತಿದ್ದ ನಾವು ಅಲ್ಲಿಗೆ ತೆರಳಲು ತುದಿಗಾಲಿನಲ್ಲಿರುತ್ತಿದ್ದೆವು. ಜಮೀನು ನೋಡಿಕೊಳ್ಳಲು ಅಜ್ಜ ಮಗಳು-ಅಳಿಯನನ್ನು ಅಲ್ಲಿ ಬಿಟ್ಟಿದ್ದ; ವಿಷಯವಿಷ್ಟೇ ಒಬ್ಬ ಮಗಳು-ಅಳಿಯನಿಗೆ ಮನೆಯಲ್ಲಿ ತೀರಾ ಏನೂ ಇರಲಿಲ್ಲ. ಅವರನ್ನೂ ಅಜ್ಜನೇ ನೋಡಬೇಕಾದ ಸ್ಥಿತಿ ಇತ್ತು. ಕೊಂಡ ಜಮೀನಿನಲ್ಲಿ ಅರ್ಧವನ್ನು ಕೊಡುವ ಮನಸ್ಸಿನಲ್ಲಿ ಅವರನ್ನೇ ಆ ಜಮೀನಿನ ಉಸ್ತುವಾರಿಗೆ ಬಿಟ್ಟಿದ್ದ. ಆಗಾಗ ಖರ್ಚಿಗೆ [ಇನ್ನೂ ಹೊಸ ಜಮೀನಾಗಿದ್ದುದರಿಂದ ಅಲ್ಲಿ ಏನೂ ಇರಲಿಲ್ಲ]ಹಣ, ಧವಸ-ಧಾನ್ಯಗಳನ್ನು ಕಳುಹಿಸಿಕೊಡುತ್ತಿದ್ದ. ನಾವು ಮಕ್ಕಳು ಅತ್ತೆಮನೆಗೆ ಹೋಗುತ್ತೇವೆ ಎಂಬ ನೆವದಿಂದ ಜಮೀನಿಗೆ ತೆರಳಲು ಅವಕಾಶ ಹುಡುಕುತ್ತಿದ್ದೆವು!

ಹೊಸದಾಗಿ ಖರೀದಿಸಿದ ಜಮೀನಿನ ಕೆಲವು ಭಾಗದಲ್ಲಿ ಗದ್ದೆಗಳು ಇದ್ದವು. ಹಸಿರು ತುಂಬಿದ ಗದ್ದೆಗಳ ಮಧ್ಯೆ ರಾತ್ರಿಯ ಹೊತ್ತಿನ ಕಾವಲಿಗಾಗಿ ಒಂದೆರಡು ಮಾಳಗಳನ್ನು ನಿರ್ಮಿಸಲಾಗಿತ್ತು. ಮಾಳಗಳಲ್ಲಿ ಆಳುಗಳಾಗಲೀ ನಮ್ಮ ಮಾವನಾಗಲೀ [ಅತ್ತೆಯ ಯಜಮಾನ್ರು]ಇರುತ್ತಿದ್ದು ಆಗಾಗ ಎದ್ದು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸಿದಂತೇ ಏನಾದರೂ ಸದ್ದುಮಾಡುವುದು, ಹಳೆಯ [ಎಣ್ಣೆತುಂಬಲು ಬಳಸುವ ದೊಡ್ಡ ಸೈಜಿನ ] ಡಬ್ಬಿಕಡಿ ಬಡಿಯುವುದು ಇತ್ಯಾದಿ ನಡೆಸಿ ಆ ಶಬ್ದಕ್ಕೆ ಪ್ರಾಣಿಗಳು ಹೆದರಿ ಜಮೀನಿಗೆ ಕಾಲಿಡದಂತೇ ರಕ್ಷಿಸುತ್ತಿದ್ದರು. ಪ್ರಾಣಿಗಳಿಗೂ ಕಾಡಿನಲ್ಲೇ ಸಾಕಷ್ಟು ತಿಂಡಿ-ತೀರ್ಥ ಲಭ್ಯವಿತ್ತಾದ್ದರಿಂದ ಅವೂ ಹೊಟ್ಟೆಗಾಗಿ ಅನಿವಾರ್ಯವಾಗಿ ಮಾನವ ನಿರ್ಮಿತ ಪ್ರದೇಶಗಳಿಗೋ ಗದ್ದೆ-ತೋಟಗಳಿಗೋ ನುಗ್ಗುತ್ತಿರಲಿಲ್ಲ. ಎಲ್ಲೋ ಆಹಾರಕ್ಕಾಗಿ ಅಲೆಯುವಾಗ ಅಪ್ಪಿತಪ್ಪಿ ಬಂದರೆಮಾತ್ರ ಬೆಳಗಿನ ಜಾವದವರೆಗೂ ಕೈಲಾಗುವಷ್ಟನ್ನು ತಿಂದು ಮುಗಿಸಿಯೇ ಹೋಗುವುದು ಅವುಗಳ ಅಭ್ಯಾಸವಾಗಿತ್ತು. ಒಂದೆರಡು ಬಾರಿ ಇದನ್ನು ನೋಡಿದ ಜಮೀನಿನ ಉಸ್ತುವಾರೀ ಅಧಿಕಾರಿ ಮಾವ ಅದಕ್ಕೆ ಪರಿಹಾರವಾಗಿ ಮಾಳಹಾಕಿ ಕಾವಲುಕಾಯುವ ರೂಢಿ ಬೆಳೆಸಿದ್ದರು; ಅದು ಇಂದಿಗೂ ಕಾಡ ಪಕ್ಕದ ಹಳ್ಳಿಗಳಲ್ಲಿ ಅಲ್ಲಲ್ಲಿ ತೋರಿಬರುವ ನಡಪತ್ತು.

ಜಮೀನಿರುವ ಆ ಪ್ರದೇಶಕ್ಕೆ ಕೊಟ್ಗೆಮಕ್ಕಿ ಎಂಬ ಹೆಸರು. ಕೊಟ್ಗೆಮಕ್ಕಿಗೆ ನಾವು ಹೋದಾಗ ನಮಗೆ ಹಗಲಿರುಳೂ ಕಥೆಗಳಲ್ಲಿ ಕೇಳಿದ್ದ ಕಾಡುಪ್ರಾಣಿಗಳನ್ನೂ ಪಕ್ಷಿಗಳನ್ನೂ ಕಾಂಬ ಆಸೆ. ಒಮ್ಮೆ ಜಮೀನಿಗೆ ಹರಿದು ಬರುವ ನೀರು ನಿಂತುಹೋಗಿತ್ತು. ಕಾನ ದಾರಿಯಲ್ಲಿ ದೂರದ ಕೆಂಬಾಲ್ ಕಡೆಗೆ ಕಿಲೋಮೀಟರುಗಟ್ಟಲೆ ನಡೆದು ಅದರ ಮೂಲದೆಡೆಗೆ ಹೋಗಿ ಎಲ್ಲಿ ಏನಾಗಿದೆ ಎಂಬುದನ್ನು ಹುಡುಕಬೇಕಿತ್ತು. ಮಾವನ ಮಕ್ಕಳು ಮತ್ತು ನಾವು ಹಾಗೊಮ್ಮೆ ಕಾಡ ಹಾದಿಯಲ್ಲಿ ಸಾಗಿಬರುವ ಆ ನೀರ ಅವಳೆಯ ಪಕ್ಕದಲ್ಲೇ ನಡೆಯುತ್ತಾ ಸಾಗುತ್ತಿದ್ದೆವು. ಮಾವನ ಮಕ್ಕಳಿಗೆ ಅದಾಗಲೇ ಕಾಡುಜೀವನ ಕರಗತವಾಗಿತ್ತು. " ಅಗೋ ಅಲ್ಲಿನೋಡು ಆನೆ ಹೆಜ್ಜೆ ಇಲ್ಲಿ ನೋಡು ಹಂದಿ ಅಗೆದಿದ್ದು " ಎನ್ನುತ್ತಾ ಅವರು ಮುಂದೆಸಾಗಿದರೂ ನಾವು ಅದರ ಹತ್ತಿರವೇ ನಿಂತು ಆನೆ ಎಷ್ಟು ಹೊತ್ತಿಗೆ ಬಂದು ಹೋಗಿರಬಹುದು? ಹೇಗಿತ್ತೋ ಏನೋ? ಹಂದಿ ಯಾವ ರೀತಿ ಅಗೆಯುತ್ತದೆ?-ಎಂಬುದನ್ನೆಲ್ಲಾ ಮನಸ್ಸಲ್ಲೇ ಊಹಿಸಿಕೊಳ್ಳುತ್ತಾ ತೆರಳುತ್ತಿದ್ದೆವು. ಇದನ್ನೆಲ್ಲಾ ನೋಡಿದ ಮಾವನ ಮಕ್ಕಳು ನಮ್ಮನ್ನು ಛೇಡಿಸುವುದಿತ್ತು. ಹಾದಿಯಲ್ಲಿ ಕೆಲವೊಮ್ಮೆ ಆನೆಯ ಲದ್ದಿಗಳನ್ನೂ ನೋಡಿದ್ದಿದೆ. ಎಲ್ಲಾದರೂ ಜಿಂಕೆ, ಕಡವೆ , ಸಾರಂಗಗಳು ನಮಗೆ ಕಾಣಸಿಗಬಹುದೇ ಎಂಬ ಬಾಲ್ಯ ಸಹಜ ಕುತೂಹಲದಿಂದ ಕಣ್ಣರಳಿಸಿ ಹುಡುಕುತ್ತಿದ್ದೆವು. ಯಾವುದೋ ಸರಸರ ಸಪ್ಪಳ ಕೇಳಿದರೆ ಕಾಡುಕೋಳಿ ಓಡಿಹೋಗಿರಬೇಕು ನೋಡಲಾಗುತ್ತಿತ್ತಲ್ಲಾ ಅಯ್ಯೋ ದೇವರೇ ಎಂದು ವಿಷಾದಪಡುವುದೂ ಇತ್ತು! ನೀರಿನ ಅವಳೆಗೆ ಮರದ ಬೊಡ್ಡೆಯೊಂದು ಅಡ್ಡ ಬಿದ್ದು ನೀರು ಬೇರೆಡೆಗೆ ಹರಿದುಹೋಗುತ್ತಿತ್ತಾದ್ದರಿಂದ ನೀರು ಕೆಳಪ್ರಾಂತದಲ್ಲಿರುವ ನಮ್ಮ ಜಮೀನಿಗೆ ಬರುವುದು ನಿಂತಿತ್ತು, ಇದು ಗಾಳಿ-ಮಳೆಯ, ಪ್ರಾಣಿಗಳ ಓಡಾಟದ ಪರಿಣಾಮವಾಗಿ ಆಗಾಗ ಮರುಕಳಿಸುವ ನೈಸರ್ಗಿಕ ಪ್ರಕ್ರಿಯೆಯಾಗಿತ್ತು.

ಜಮೀನಿನಲ್ಲಿ ಹಾಕಿರುವ ಮಾಳಗಳಲ್ಲಿ ಸಾಯಂಕಾಲದ ಹೊತ್ತಿಗೆ ಹೋಗಿ ಕೂತುಬಿಟ್ಟರೆ ಮಾವನ ಮಕ್ಕಳ ಜೊತೆಗೆ ಹುಲಿ, ಕರಡಿ, ಕತ್ತೆಕಿರುಬ ಮೊದಲಾದ ಪ್ರಾಣಿಗಳ ಸುದ್ದಿ. ಅವರುಗಳೂ ಆಗಾಗ " ಹುಲಿ ನಾಕು ದಿನದ ಕೆಳಗೆ ಅಲ್ಲಿ ಬಂದಿತ್ತು ಇಲ್ಲಿ ಬಂದಿತ್ತು " ಎಂಬ ಘಟನೆಗಳನ್ನು ಮೆಲುಕುಹಾಕುತ್ತಿದ್ದರು. ಜಮೀನಿನಲ್ಲಿ ಮಾವ ಸಾಕಿದ ಹಸುಕರು-ಹೋರಿಗಳು ನಿತ್ಯ ಕಾಡಿಗೆ ಹಸಿರು ಮೇವರಸಿ ಹೋಗುತ್ತಿದ್ದವು. ಸಾಯಂಕಾಲ ೫ ಗಂಟೆಗೆಲ್ಲಾ ಅವುಗಳನ್ನು ಹುಡುಕಿ ಮರಳಿಸಿಕೊಂಡು ಬರುತ್ತಿದ್ದರು. ಒಮ್ಮೆ ಒಂದು ಹೋರಿ ಗುಂಪಿನಿಂದ ಬೇರೆಯಾಗಿಬಿಟ್ಟಿತ್ತು. ಆ ದಿನ ಮಾವನವರಿಗೆ ಅದು ಹೇಗೂ ಹುಲಿಯ ಬಾಯಿಗೆ ಬಿತ್ತು ಎಂದೇ ಅನಿಸಿತ್ತಂತೆ. ಆ ರಾತ್ರಿ ಮಾವ ಮತ್ತು ಮನೆಯವರೆಲ್ಲಾ ಬಹಳ ಹೊತ್ತು ಚಿಂತೆಗೀಡಾಗಿದ್ದರು. ಮಾವ ಇನ್ನೇನು ಸರಿಯಾಗಿ ಊಟವನ್ನೂ ಮಾಡದೇ "ದೇವರು ಇಟ್ಟಹಾಗಾಗಲಿ” ಎಂದುಕೊಂಡು ಕೋವಿ ಹೆಗಲಿಗೇರಿಸಿಕೊಂಡು ಗದ್ದೆಯ ಮಾಳಕ್ಕೆ ಹೊರಟಿದ್ದಾಗ ಕೊಟ್ಟಿಗೆಯ ಹತ್ತಿರ ಬೆದರಿದ ಧ್ವನಿಯಲ್ಲಿ "ಅಂಬಾ ಅಂಬಾ " ಎಂದು ಒಂದೇ ಸಮನೆ ಕೂಗುತ್ತಿದ್ದ ಹೋರಿ ಕಂಡುಬಂದಿತ್ತು. ನಿಜ ಅದನ್ನು ಹುಲಿ ಅಟ್ಟಿಸಿಕೊಂಡು ಮೈಮೇಲೆ ಹಾರಿ ತನ್ನ ಪಂಜಾಗಳಿಂದ ಸಾಕಷ್ಟು ಹೊಡೆದಿತ್ತು. ಇಡೀ ಮೈಯ್ಯೆಲ್ಲಾ ರಕ್ತಸಿಕ್ತವಾಗಿತ್ತು. ಆದರೂ ಆ ಹೋರಿ ತಪ್ಪಿಸಿಕೊಂಡು ಬದುಕುಳಿದು ಬಂದಿತ್ತು! ಆ ಹೋರಿಯನ್ನು ನಾನೂ ಕಣ್ಣಾರೆ ಕಂಡಿದ್ದೇನೆ. ಅದರ ಮೈಮೇಲೆ ಕೆಲವೆಡೆ ಮಾಸಿದ ಗಾಯದ ಕಲೆಗಳಿದ್ದವು. [ಇದಾದ ಕೆಲವು ವರ್ಷಗಳನಂತರ ’ಗಾಂವ್ ಕಾ ಶೇರ್’ ಹಿಂದೀ ಪಾಠವನ್ನು ನಾನೋದಿದ್ದೆ. ಅದರಲ್ಲಿರುವ ಹೋರಿಗೂ ನಾನು ಹೇಳಿದ ಹೋರಿಗೂ ವ್ಯತ್ಯಾಸ ಕಾಣಲಿಲ್ಲ.] ಇಂತಹ ರೋಮಾಂಚಕ ಕಾನನದ ಕಥೆಗಳು ಮಕ್ಕಳಾದ ನಮ್ಮನ್ನು ಬಹಳವಾಗಿ ತಟ್ಟುತ್ತಿದ್ದವು.

ಹುಲಿ ಹೇಗಿರಬಹುದು? ಅದು ಪೊದೆಯೊಳಗೆ ಅಡಗಿ ಕೂತು ಹೇಗೆ ಕದ್ದು ನೋಡಬಹುದು? ಹುಲಿಗೂ ಚಿರತೆಗೂ ಎದುರಾ ಬದುರಾ ಸಿಕ್ಕಿ ಜಗಳವಾದರೆ ಯಾವುದು ಗೆಲ್ಲಬಹುದು? ಚಿರತೆಯ ಕೂಗು ಹುಲಿಯ ಕೂಗಿಗಿಂತ ಭಿನ್ನ ಹೇಗೆ ? ಅಷ್ಟೆತ್ತರದ ಆನೆ ಮನಸ್ಸು ಮಾಡಿ ಕಾಲಿನಿಂದ ಝಾಡಿಸಿ ಒದ್ದರೆ ಹುಲಿಯೆಲ್ಲಾ ಯಾವ ಮಹಾ ಅಲ್ಲವೇ? ---ಎಂಬೀಥರದ ನೂರಾರು ಪ್ರಶ್ನೆ-ಮರುಪ್ರಶ್ನೆಗಳು ಉದ್ಭವಿಸಿ ಹುಲಿಯ ಬರುವಿಕೆಯನ್ನು ನಿರೀಕ್ಷಿಸುತ್ತಾ ಮಾಳದಲ್ಲೇ ಕಾಯುತ್ತಿದ್ದೆವು! [ಅಂದಿಗೆ ನಮಗೆ ನ್ಯಾಷನಲ್ ಜಿಯಾಗ್ರಫಿಕ್ ಮುಂತಾದ ವಾಹಿನಿಗಳಾಗಲೀ, ಟಿವಿ ಮಾಧ್ಯಮವಾಗಲೀ ಇರಲಿಲ್ಲವಲ್ಲಾ...ಅಸಲಿಗೆ ಬಹಳ ಹೊತ್ತು ವಿದ್ಯುತ್ ಸೌಲಭ್ಯ ಇರುವುದೇ ದೊಡ್ಡ ಉಪಕಾರವಾಗುತ್ತಿತ್ತು, ಹಾಗಂತ ಜಮೀನಿನಲ್ಲಿ ನಾವು ಪ್ರಾಥಮಿಕ ಶಾಲೆ ಮುಗಿಸುವವರೆಗೂ ವಿದ್ಯುತ್ ಸೌಲಭ್ಯ ಇರಲಿಲ್ಲ.] ಕತ್ತಲಾದಮೇಲೆ ಬ್ಯಾಟರಿ ಡೌನ್ ಆದ ವಾಹನದಂತೇ ನಮ್ಮ ಗತಿ ! ಒಳಗೊಳಗೇ ಪುಕುಪುಕು ಆರಂಭವಾಗಿ ಕಕ್ಕಸು ಬಂದೇ ಬಿಡುತ್ತದೇನೋ ಎಂದು ಭಾಸವಾಗಿ ನಿಧಾನಕ್ಕೆ ಎತ್ತರದ ಮಾಳದಿಂದ ಕೆಳಗಿಳಿದು ನಾವು ಮಾಳಕ್ಕೆ ಹೋಗಿದ್ದೇ ಸುಳ್ಳು ಎನ್ನುವ ರೀತಿಯಲ್ಲಿ ಮನೆ ಸೇರಿಕೊಳ್ಳುತ್ತಿದ್ದೆವು! [ಯಾರಿಗೋ ಹೇಳಬೇಡಿ,
ಇದು ನಮ್ನಿಮ್ಮಲ್ಲೇ ಆದ್ರಿಂದ ಹೇಳ್ತಾ ಇದೇನೆ; ಹುಲಿ ವಿಷಯ ನೋಡಿ! ಸಾಮಾನ್ಯದ್ದಾದ್ರೆ ತೊಂದ್ರೆ ಇಲ್ಲ, ಹಾಗೆಲ್ಲಾ ಹೆದರೋ ಮರಿಗಳಲ್ಲ ನಾವು ...... ಸುಮ್ನೆ ಯಾಕೆ ಅಂತ ಅಷ್ಟೇ!]


[ ಬಹಳ ವಿಸ್ತೃತವಾದುದರಿಂದ ಮುಂದಿನ ಭಾಗದಲ್ಲಿ ಓದೋಣ ಆಗದೇ... ?]

4 comments:

  1. ಗುರುಗಳೇ,
    ಬಾಲ್ಯದ ನಿಮ್ಮ ಅನುಭವಗಳನ್ನು ಓದಿ ರೋಮಾಂಚನವಾಯ್ತು! ಅಂದಿನ ಮಲೆನಾಡಿನ ಹಳ್ಳಿಯೊಂದರ ಸಂಪೂರ್ಣ ಪರಿಚಯವೇ ಇಲ್ಲಿದೆ. ಪ್ರಕೃತಿಯ ವೈವಿಧ್ಯ, ಜೀವ ಜಂತುಗಳು ಬಾಲ್ಯದಲ್ಲಿ ನಮ್ಮನ್ನು ಕಾಡುತ್ತಿದ್ದ ಆ ಕುತೂಹಲಗಳು....... ಇಂದಿನ ಮಕ್ಕಳಿಗೆ ಇತಿಹಾಸವಷ್ಟೇ!

    ನಮ್ಮೂರಲ್ಲಿ ಇಂದಿಗೂ ಆಗೊಮ್ಮೆ ಈಗೊಮ್ಮೆ ಹುಲಿಯ ಆರ್ಭಟ ಕಂಡುಬರುತ್ತದೆ!

    ಆದಷ್ಟು ಬೇಗ ಮುಂದಿನ ಭಾಗ ಬರಲಿ.
    ಧನ್ಯವಾದಗಳು.

    ReplyDelete
  2. ನಿಮ್ಮ ಬ್ಲಾಗ್ ಚೆನ್ನಾಗಿ ಮೂಡಿ ಬರುತ್ತಿದೆ.
    ನಿಮ್ಮ ಬಾಲ್ಯದ ಚಿತ್ರಣ ಓದಿ ರೋಮಾಂಚನವಾಯ್ತು.
    ಧನ್ಯವಾದಗಳು.

    ReplyDelete
  3. ಭಟ್ಟರೆ,
    ತುಂಬ ಸ್ವಾರಸ್ಯಪೂರ್ಣವಾದ ಬಾಲ್ಯದ ಅನುಭವವನ್ನು ಸ್ವಾರಸ್ಯಪೂರ್ಣವಾಗಿಯೇ ಹೇಳಿದ್ದೀರಿ. ಮುಂದಿನ ಭಾಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇನೆ.

    ReplyDelete
  4. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಸ್ವಾರಸ್ಯಪೂರ್ಣ ನಮನಗಳು.

    ReplyDelete