ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 11, 2012

ಯಾರಾದ್ರೆ ನಂಗೇನು ?

ಚಿತ್ರ ಕೃಪೆ : ಚಿತ್ರಲೋಕ.ಕಾಂ --ದ್ವಾರಾ : ಅಂತರ್ಜಾಲ

ಯಾರಾದ್ರೆ ನಂಗೇನು ?

ಹಾಂ...ಹಾಂ....ಹಾಂ ಹೌದಮ್ಮಾ ಯಾರಾದ್ರೆ ನಿಂಗೇನು ? ಆದ್ರೆ ಮಿಕ್ಕಿದ ನಾವುಗಳು ಇದ್ದೇವಲ್ಲಾ ನಮಗೆಲ್ಲಾ ಯಾರಾದ್ರೂ ಆಗೋ ಹಾಗಿಲ್ಲ ಹೀಗಾಗಿ ಆ ಒಕ್ಕಣೆ ಬೇಡ ಎಂಬುದು ನಮ್ಮ ವಾದ! ಒಂದು ಕಡೆ ಯೋಗಿಗಳೂ ಸನ್ಯಾಸಿಗಳೂ ಕೆಡುತ್ತಿರುವ ಸಮಾಜವನ್ನು ಸುಧಾರಿಸಲು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ; ಗೀತೆಯ ಸೂತ್ರಗಳನ್ನು ಬಳಸಲು ಹೇಳುತ್ತಿದ್ದಾರೆ. ಇನ್ನೊಂದುಕಡೆ ಅಧೋಗತಿಗೆ ಎಳೆಯುವ ಸಿನಿಮಾಗಳು ಹುಚ್ಚುಚ್ಚಾಗಿ ಈ ಥರದ ದುರ್ಬೋಧನೆಗೂ ಇಳಿದುಬಿಡುತ್ತಿವೆ.

|| ಗೋಕರ್ಣಸ್ಸಮಃ ಕಾಶೀ ವಿಶ್ವನಾಥೋ ಮಹಾಬಲ || ಎಂಬ ಉಕ್ತಿಯೊಂದಿತ್ತು. ಗೋಕರ್ಣದಲ್ಲಿರುವ ತಾಮ್ರಗೌರಿ [ಪಾರ್ವತಿ] ತಕ್ಕಡಿಯಲ್ಲಿ ಕಾಶೀ ಮತ್ತು ಗೋಕರ್ಣಗಳೆರಡನ್ನೂ ತೂಗಿದಳಂತೆ. ತೂಕದಲ್ಲಿ ಎರಡೂ ಸಮಕ್ಕೆ ಸಮ ಆಗಿ ತೋರಿದ್ದರಿಂದ ಕಾಶಿಗೆ ಹೋಗಲಾಗದವರು ಗೋಕರ್ಣಕ್ಕೆ ಹೋದರೂ ಪರವಾಗಿಲ್ಲ ಎಂಬ ಭಕ್ತಿಭಾವ ಹಿಂದಿನವರಲ್ಲಿತ್ತು. ಅಂತೆಯೇ ಕಾಶಿ, ಗೋಕರ್ಣ ಮುಂತಾದ ಕ್ಷೇತ್ರಗಳ ಹೆಸರುಗಳನ್ನು ಸಿನಿಮಾಕ್ಕೆ ಬಳಸುತ್ತಿರಲಿಲ್ಲ. ಡಾ| ರಾಜಕುಮಾರ್ ಕಲದ ’ಶಂಕರ್ ಗುರು’ ಎಂಬಲ್ಲಿಂದ ಯಾಕೋ ಸಿನಿಮಾ ಮಂದಿಗೆ ಜನರನ್ನು ಪಶೆಬೀಳಿಸುವ ನೆಶೆ ಹೆಚ್ಚಾಯಿತು. ’ಶಂಕರ್ ಗುರು’ವನ್ನು ಶಂಕರಾಚಾರ್ಯರ ಕುರಿತಾದ ಸಿನಿಮಾ ಎಂದು ನೋಡಿದವರಲ್ಲಿ ನನೂ ಒಬ್ಬ ಪಡ್ಡೆ ಇದ್ದೆ! ಇವತ್ತು ಗತಿ ಹೇಗಾಗಿದೆ ಎಂದರೆ ಹೊರಗಿನ ಹೆಸರನ್ನು ನೋಡಿಕೊಂಡು ಯಾವ ಸಿನಿಮಾವನ್ನೂ ನೋಡುವಹಾಗಿಲ್ಲ, ಹೊರಕವಚದ ಮೇಲೆ ತೋರಿಸಿದಷ್ಟು ಗೋಡಂಬಿ ಬೀಜ ಬಿಸ್ಕತ್ತಿನಲ್ಲಿ ನಮಗೆಂದೂ ದಕ್ಕುವುದಿಲ್ಲ! ಪರವಾಗಿಲ್ಲ. ಅದು ಬೇರೇ ಪ್ರಶ್ನೆ. ಆದ್ರೆ ಅದಕ್ಕಿಂತಾ ಭಿನ್ನವಾಗಿ ಇರುವ ಸಮಸ್ಯೆ ಸಿನಿಮಾಗಳದ್ದು.

ಇಬ್ಬರು ಸ್ನೇಹಿತರು ಮಾತಾಡಿಕೊಂಡಿದ್ರು. ಆಗ ಹಾದಿಹೋಕ ಮುದುಕನೊಬ್ಬ ದಪ್ಪಗಾಜಿನ ಕನ್ನಡಕವನ್ನು ಸರಿಸಿಕೊಳ್ಳುತ್ತಾ ಊರುಗೋಲು ಮುಂದೆ ಹಾಕುತ್ತಾ ನಡೆಯುತ್ತಾ ಹತ್ತಿರ ಬರುತ್ತಿದ್ದ.

" ಹೋಗ್ಲಿಲ್ವಾ ಕಾಶಿಗೆ ? "

" ಹೋಗ್ಲಿಲ್ಲ ಕಣೋ ಹೋಗ್ಬೇಕಾಗಿತ್ತು. "

ಹತ್ತಿರ ಬಂದ ಮುದುಕನ ಕಿವಿ ಬಹಳ ಸೂಕ್ಷ್ಮವಾಗಿತ್ತು; ಎಲ್ಲವನ್ನೂ ಕೇಳಿಸಿಕೊಳ್ಳುತ್ತಿತ್ತು.

" ಪರವಾಗಿಲ್ಲ ನಿಮ್ಗೇನು ಇನ್ನೂ ಪ್ರಾಯದವ್ರು ಕಾಶಿಗೆ ಯಾವಾಗ ಬೇಕಾದ್ರೂ ಹೋಗ್ಬಹುದು " --ಎಂದು ತನ್ನ ಮಾತನ್ನೂ ಸೇರಿಸಿದ ಮುದುಕ. ಎದುರಿದ್ದ ಯುವಕರು ತಮ್ಮೊಳಗೇ ನಕ್ಕವು, ಅರ್ಥವಾಗದ ಮುದುಕನ ಹಲ್ಲಿಲ್ಲದ ಬಾಯಿ ಸಣ್ಣಗೆ ನಗುಸೂಸಿತು ಪಾಪ! ಯುವಕರು ಹೋಗಲಿಕ್ಕಾಗಲಿಲ್ಲ ಎಂದುಕೊಂಡಿದ್ದು ’ ಕಾಶಿ ಬಾರ್ ಅಂಡ್ ರೆಸ್ಟಾರೆಂಟ್’ಗೆ !!

ಇನ್ನೊಂದು ಪ್ರಸಂಗ ಹೀಗಿದೆ ಮಲೆನಾಡಿನ ಅಜ್ಜಿಯೊಬ್ಬರು ತಮ್ಮ ಸ್ನೇಹಿತೆಯಾದ ಇನ್ನೊಬ್ಬ ಅಜ್ಜಿಯಲ್ಲಿ ಕಷ್ಟ-ಸುಖ ಮಾತಾಡಿಕೊಳ್ಳುತ್ತಿದ್ದರು. ಒಬ್ಬ ಅಜ್ಜಿ ಇನ್ನೊಬ್ಬರ ಕೂಡ ಹೀಗೆ ಹೇಳಿದ್ರು" ’ಗೋಕರ್ಣ’ ಸಿನಿಮಾ ಬಂದಿದ್ಯಂತಲ್ಲಾ ಗೋಕರ್ಣಕ್ಕಂತೂ ಹೋಗಕ್ಕಾಗ್ಲಿಲ್ಲ ಅದ್ಕೇ ಆ ಸಿನಿಮಾದಲ್ಲಾದ್ರೂ ಗೋಕರ್ಣ ನೋಡೋಣ ಎಂಬಾಸೆ "! ಉಪೇಂದ್ರ ’ಗೋಕರ್ಣ’ ಎಂಬ ಸಿನಿಮಾ ತಯಾರಿಸಿದ. ಆದರೆ ಯಾಕೆ ಆ ಹೆಸರು ಬೇಕಾಗಿತ್ತು ಎಂಬುದು ನನ್ನಂತಹ ಕೆಲ ಜನರ ಪ್ರಶ್ನೆ. ಅದಕ್ಕೆ ಯಾರಲ್ಲೂ ಉತ್ತರವಿಲ್ಲ.

ಹಣಮಾಡುವ ಒಂದೇ ಉದ್ದೇಶದಿಂದ ಸಿನಿಮಾ ಮಾಡುವುದು ಯಾವ ನ್ಯಾಯ? ಒಬ್ಬ ನಿರ್ದೇಶಕರು ತಮ್ಮ ಸಿನಿಮಾ ಟೈಟಲ್ ಸಮರ್ಥಿಸಿಕೊಳ್ಳುತ್ತಾ " ನಾವು ಎಸ್ಟಂದ್ರೂ ಎಂಟರ್ಟೈನ್‍ಮೆಂಟ್ ಕೊಡೋರು ನಮಗೆ ಅದು ಮಾತ್ರ ಮುಖ್ಯ. ನಿಜಜೀವನದಲ್ಲಿ ನಡೆಯದ ಘಟನೆಗಳನ್ನೇ ಸಿನಿಮಾ ತೋರಿಸುತ್ತದೆ." ಹೌದು ಸ್ವಾಮೀ ಸಿನಿಮಾ ಮತ್ತು ಧಾರಾವಾಹಿಗಳನೇಕವು ಬಂದಮೇಲೇ ಹಲವು ಮನೆಗಳು ಮನಗಳು ಮುರಿದುಹೋಗಿವೆ! ಮನೋರಂಜಕ ಸಿನಿಮಾ ಮನೆಹಾಳು ಕೆಲಸವನ್ನು ನಡೆಸುವ ಉಪದ್ವ್ಯಾಪ ನಿಮಗೇನು ಗೊತ್ತು. ನೀವು ಸಿನಿಮಾ ತೋರಿಸಿ ಕಾಸೆಣಿಸಿಕೊಳ್ಳುತ್ತೀರಿ, ಸಮಾಜದಲ್ಲಿ ಅದರ ಅರ್ಥವನ್ನು ಸರಿಯಾಗಿ ಗ್ರಹಿಸದವರು ಅದನ್ನೇ ಅನುಕರಿಸುತ್ತಾರೆ; ಹದಿಹರೆಯದವರು ಅಂಥದ್ದನ್ನೇ ಆದರ್ಶವೆಂದು ಭಾವಿಸುತ್ತಾರೆ!

ಹುಡುಗ-ಹುಡುಗಿಯ ಹದಿಹರೆಯದ ಜೀವನದ ಕೆಲವು ವರ್ಷಗಳು ಬದುಕನ್ನು ನಿರೂಪಿಸುವ ಹಂತವಾಗಿರುತ್ತವೆ. ಅದೇ ಹೊತ್ತಲ್ಲಿ ಉತ್ತಮ ವಿದ್ಯಾಭ್ಯಾಸ ನಡೆಯಬೇಕು, ಅದೇ ಸಮಯದಲ್ಲಿ ಪ್ರಾಯ ಉಕ್ಕೇರಿ ಸೌಂದರ್ಯ ವರ್ಧಿಸಿ ಪರಸ್ಪರ ದೈಹಿಕ ಆಕರ್ಷಣೆ ’ಪ್ರೀತಿ-ಪ್ರೇಮ’ ಎಂಬ ಹಚ್ಚಡವನ್ನು ಹೊದ್ದು ಬರುತ್ತದೆ. " ನಿನ್ನನ್ನು ಬಿಟ್ಟರೆ ನಂಗೆ ಬದುಕೇ ಇಲ್ಲಾ " ಎಂಬ ಮನೋಭಾವ ಪ್ರೇಮಿಸುತ್ತೇವೆ ಎಂದುಕೊಳ್ಳುವ ಹುಡುಗ ಯಾ ಹುಡುಗಿಯಲ್ಲಿ ಹುಟ್ಟಿಕೊಳ್ಳುತ್ತದೆ. ತಮ್ಮ ಮಗು/ಮಕ್ಕಳು ಓದಲಿ, ತಮ್ಮ ಕಷ್ಟ ಕಳೆಯಲಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲಿ, ಚೆನ್ನಾಗಿ ದುಡಿದು ಬಾಳಲಿ ಎಂಬ ಪಾಲಕರ ಬಯಕೆ ಇನ್ನೊಂದೆಡೆ. ಅದೇ ವೇಳೆಗೆ ಹರೆಯದ ಹುಚ್ಚು ಪ್ರೇಮಿಗಳ ಕುರಿತು ಉಪೇಂದ್ರನಂತಹ ಕಮಂಗಿಗಳ ಆಸಿಡ್ ಪ್ರೇಮದ ಸಿನಿಮಾ ಬರುತ್ತದೆ. ಆಸಿಡ್ ಪ್ರಯೋಗ ಕೇಳಿಯೂ ಗೊತ್ತಿರದ ಹುಡುಗ ಅಂಥಾ ಕೆಟ್ಟ ಸಿನಿಮಾ ನೋಡಿ ಅಂಥದ್ದಕ್ಕೆ ಸಿದ್ಧವಾಗುತ್ತಾನೆ. ಉಪೇಂದ್ರನ ಆಸಿಡ್ ಸಿನಿಮಾ ಬಂದಮೇಲೆ ಬೆಂಗಳೂರಿನಲ್ಲೇ ಹಲವು ಆಸಿಡ್-ಪ್ರೇಮ ಘಟನೆಗಳು ಜರುಗಿ ಸುಂದರವಾಗಿದ್ದ ಹೆಣ್ಣುಮಕ್ಕಳು ಕುರೂಪಿಗಳಾಗಿದ್ದಾರೆ, ಕಿವಿ-ಕಣ್ಣು ಕಳೆದುಕೊಂಡಿದ್ದಾರೆ. ಅಂಥಾ ಕೆಟ್ಟ ಸಿನಿಮಾಗಳನ್ನು ನಿರ್ಬಂಧಿಸುವವರು ಯಾರಾದರೂ ಇದ್ದಾರ್ಯೇ ? ಇಲ್ಲ. ಹೋಗಲಿ ಅದರಲ್ಲಿರುವ ಅಂತಹ ಘಟನೆಗಳನ್ನು ತೆಗೆದು ಬೇರೇ ರೀತಿ ಮಾರ್ಪಡಿಸಿ ಎನ್ನುವ ನಿರ್ಣಾಯಕ ನಿರ್ದೇಶನ ನೀಡಬೇಕಾದ ಸೆನ್ಸಾರ್ ಮಂಡಳಿ ಇದೆಯೇ? ಇಲ್ಲ. ಸೆನ್ಸಾರ್ ಮಂಡಳಿಯೂ ಹಣ ಪೀಕುವ ಅನುಮಾನ ನನಗಂತೂ ಇದೆ! ಅಲ್ಲಿ ಕೂತವರು ತೀರಾ ನೀಲಿ ಚಿತ್ರವೊಂದನ್ನು ಬಿಟ್ಟು ಮಿಕ್ಕೆಲ್ಲಕ್ಕೂ ಸರ್ಟಿಫಿಕೇಟ್ ನೀಡಿಬಿಡುತ್ತಾರೆ!

ಪುಟ್ಟಣ್ಣ ಕಣಗಾಲ್‍ರಂತಹ ನಿರ್ದೇಶಕರು ಇರುವವರೆಗೆ ಪ್ರೀತಿ-ಪ್ರೇಮ ಕಥೆಗಳಿಗೆ ಒಂದು ಮಿತಿಮೀರದ ಔಪಚಾರಿಕ ಲೆಪ್ಪ ಇರುತ್ತಿತ್ತು. ಬೆತ್ತಲೆ/ಅರೆಬೆತ್ತಲೆ ತೋರಿಸಬೇಕಾದ ದೃಶ್ಯಗಳನ್ನೂ ಕೂಡ ಆದಷ್ಟು ತಡೆಹಿಡಿಯುತ್ತಿದ್ದರು, ತೋರಿಸಲು ಮುಂದಾಗುತ್ತಿರಲಿಲ್ಲ. ತುಟಿಗೆ-ತುಟಿ ಸೇರುವುದನ್ನು ಸಾಂಕೇತಿಕವಾಗಿ ಹೂ-ದುಂಬಿಗಳ ಚಿತ್ರ ತೋರಿಸಿ ಕಲ್ಪಿಸಲಗುತ್ತಿತ್ತು. ಆ ಕಾಲ ಹೋಗೇ ಬಿಡ್ತುಬಿಡಿ. ಈಗೇನಿದ್ದರೂ ಎಷ್ಟೋ ಮನೆಗಳಲ್ಲೇ ಕದ್ದು-ಮುಚ್ಚಿ ನೀಲಿ ಚಿತ್ರಗಳನ್ನು ನೋಡುವ ಕಾಲ. ವಿದ್ಯೆ ಹೆಚ್ಚಾದ ಅಪ್ಪ-ಮಕ್ಕಳು ಮನೆಯ ರೂಫ್-ಟಾಪ್ ಗಾರ್ಡನ್‍ನಲ್ಲಿ ಒಟ್ಟಾಗಿ ಕೂತು ಕುಡಿಯುವ ಕಾಲ ಬಂದಿದೆ. ಇವತ್ತು ಒಟ್ಟಾಗಿ ಕುಡಿಯುವವರು ನಾಳಿನ ಜನಾಂಗದಲ್ಲಿ ಒಟ್ಟಾಗಿ ಇನ್ನೇನೇನು ಮಾಡುತ್ತಾರೋ ತಿಳಿಯುವುದಿಲ್ಲ.

ಪ್ರಸಕ್ತ ನಾವು ಇಲ್ಲೊಂದು ಚಿಕ್ಕ ಹೆಸರನ್ನು ಗಮನಿಸೋಣ. ’ಯಾರಾದ್ರೆ ನಂಗೇನು ? ’ ಹುಡುಗಿಯೊಬ್ಬಳು ಬೆತ್ತಲೆ ನಿಂತಿರುವ ದೃಶ್ಯದ ಕೆಳಗೆ ’ಯಾರಾದ್ರೆ ನಂಗೇನು ?’ ಎಂಬ ಘೋಷವಾಕ್ಯ ಬರೆದರೆ ಅದರ ಅರ್ಥವಾದರೂ ಸಾಮಾನ್ಯವಾಗಿ ಏನಿರಬಹುದು? ಸಿನಿಮಾ ಕಥೆಯಲ್ಲಿ ಅಂತಹ ದೃಶ್ಯ ಇದ್ದೀತೋ ಇಲ್ಲವೋ ಬೇರೇ ಪ್ರಶ್ನೆ ಆದರೆ ತಕ್ಷಣದ ನೋಡುಗನಿಗೆ ಅಂತಹ ಗೋಡೆಚಿತ್ರಗಳನ್ನು ನೋಡಿದಾಗ ಏನನ್ನಿಸುತ್ತದೆ? ಹಣವೊಂದು ದೊರೆತರೆ ಸಾಕು ಯಾರಾದ್ರೆ ನಂಗೇನು ನಾನು ಎಲ್ಲಾರ್ಜೊತೆ ರೆಡಿ ಎಂಬ ಅರ್ಥ ಬರುವುದಿಲ್ಲವೇ? ಇದು ಬೀದಿನಾಯಿಗಳ ’ಆ ಚಟುವಟಿಕೆಗಳಿ’ಗಿಂತಲೂ ಭಿನ್ನ ಅಲ್ಲ ಹೇಗೆ ? ಸಿನಮಾದಲ್ಲಿ ಉತ್ತಮ ಸಂದೇಶವಿದೆಯಂತೆ. [ಎಲ್ಲರೂ ಆರಂಭದಲ್ಲಿ ಹೇಳೋದೇ ಇದನ್ನು! ಸಂದೇಶ ಯಾವುದೇ ಇರಲಿ, ಸದ್ಯಕ್ಕೆ ಆ ಗೋಡೆಚಿತ್ರ ಹಬ್ಬಿಸುವ ಸಂದೇಶವೇನು ?

ಸಿನಿಮಾ ಮತ್ತು ಮಾಧ್ಯಮ ವಾಹಿನಿಗಳು ನಾಗರಿಕರಿಗೆ ಸಂದೇಶಗಳನ್ನು ಕೊಡುವಾಗಾಗಲೀ ಅಥವಾ ಮನರಂಜನೆ ಒದಗಿಸುವಾಗಾಗಲೀ ತಾವು ಬಳಸುವ ಶಬ್ದಗಳನ್ನೂ ಮತ್ತು ಉಪಯೋಗಿಸುವ ದೃಶ್ಯಗಳನ್ನೂ ನೆನಪಿಟ್ಟುಕೊಂಡು ನಡೆಸುವುದು ಮುಖ್ಯವಾಗಿರುತ್ತದೆ. ಸಮಾಜ ಹೇಗೆ ಸಾಗಿದೆ ಎಂದರೆ ನಮಗೆ ಕೆಲವೊಮ್ಮೆ ಅಲೋಪಥಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಅವು ಮೈಗೊಂಡುಹೋಗುತ್ತವೆ. ಅವುಗಳಲ್ಲಿನ ರೋಗವಾಸಿಮಾಡುವ ತಾಕತ್ತು ನಮಗೆ ಸಾಕಾಗುವುದಿಲ್ಲ. ಅದೇ ರೀತಿ ಪ್ರತಿನಿತ್ಯ ಮಾಧ್ಯಮಗಳಲ್ಲಿ ಕ್ರೌರ್ಯಗಳನ್ನೂ ಬೆತ್ತಲೆ ದೃಶ್ಯಗಳನ್ನೂ ನೋಡ್ತಾ ನೋಡ್ತಾ ಈಗೀಗ ನೋಡುಗ ಮತ್ತೇನನ್ನೋ ಬಯಸುವಷ್ಟು ಕೆಟ್ಟ ಹಂತಕ್ಕೆ ತಲ್ಪಿದ್ದಾನೆ; ಕ್ರೌರ್ಯವನ್ನು ವೈಭವೀಕರಿಸಿ ಉಣಬಡಿಸಿದ ಕುಖ್ಯಾತಿ ಮಾಧ್ಯಮವಾಹಿನಿಗಳಿಗೆ ಸಲ್ಲುತ್ತದೆ! ಕೆಲವು ಮನೆಗಳಲ್ಲಿ ಮಧ್ಯ ವಯಸ್ಕರಿಗೆ ಪ್ರತೀ ರಾತ್ರಿ ಟಿವಿಗಳಲ್ಲಿ ಒಂದೆರಡು ಹೆಣ ಬಿದ್ದಿದ್ದು ನೋಡಿದ ಹೊರತು ನಿದ್ದೆ ಬರುವುದಿಲ್ಲವಂತೆ ! ಯಾರೋ ರೌಡಿ ಇನ್ನೊಬ್ಬನನ್ನು ಹತ್ಯೆಗೈದಿದ್ದು-ಯಾವನೋ ಪಾಪಿ ವರದಕ್ಷಿಣೆಗೆ ಹೆಂಡತಿಯನ್ನು ಕೊಂದಿದ್ದು, ಯಾವುದೋ ಹುಡುಗ ಹುಡುಗಿ ತನಗೆ ಸಿಗಲಿಲ್ಲಾ ಎಂಬ ಕಾರಣಕ್ಕೆ ಆಕೆ ಪ್ರೀತಿಸುತ್ತಾಳೆ ಎನ್ನಲಾದ ಇನ್ನೊಬ್ಬ ಹುಡುಗನನ್ನು ಬಲಿಹಾಕುವುದು, ವಿಕೃತಕಾಮಿಯೊಬ್ಬ ಹೆಂಗಸಿನ್ನು ಬಲಾತ್ಕರಿಸುವುದು ಇದೆಲ್ಲಾ ನಮಗ್ಯಾಕೆ ಬೇಕ್ರೀ ?

ಒಂದು ಕಾಲಕ್ಕೆ ಪೋಲೀಸ್ ನ್ಯೂಸ್ ಎಂಬ ಪೇಪರ್ ಬರುವುದನ್ನೇ ಕಾಯುವ ವರ್ಗವೊಂದಿತ್ತು. ಆಮೇಲೆ ರವಿಬೆಳಗೆರೆ ಕುಚ್ ಕಟ್ಟಾ ಕುಚ್ ಮೀಟಾ ಅನ್ನೋ ಥರ ಹೊಸ ಶೈಲಿಯಲ್ಲಿ ಅಂತಹ ಕಥೆಗಳನ್ನು ತನ್ನ ಪತ್ರಿಕೆಯಲ್ಲೂ ಮಾಧ್ಯಮವೊಂದರಲ್ಲೂ ತೋರಿಸಿದರು. ರೋಲ್ ಕಾಲ್ ಮಾಡಿ ನಡೆಸುತ್ತಿದ್ದ ಪತ್ರಿಕೆಗಳು ಇಂತಹ ಕಥೆಗಳನ್ನು ಬರೆಯಲು ತೊಡಗಿದ ಮೇಲೆ ಸಮಾಜದ ’ಆ ವರ್ಗ’ ಇಂತಹ ಪತ್ರಿಕೆಗಳನ್ನು ಬಿಸಿ ಬಿಸಿ ದೋಸೆಯಂತೇ ಕೊಂಡುಕೊಂಡವು, ಪತ್ರಿಕೆಗಳು ಹಣಮಾಡಿದವು! ಸಮಾಜದ ’ಆ ವರ್ಗ’ ಮಿಕ್ಕುಳಿದ ವರ್ಗಕ್ಕೂ ಅಂತಹ ಕಥೆಗಳನ್ನು ಓದಲು/ನೋಡಲು ಪ್ರೇರೇಪಿಸಿತು. ಸುದ್ದಿಗಳಿಲ್ಲದೇ ಒದ್ದಾಡುತ್ತಿದ್ದ ಮಾಧ್ಯಮವಾಹಿನಿಗಳಿಗೆ ’ಆ ಕಥೆಗಳು’ ಟೈಂ ಪಾಸ್ ಮಾಡಲು ಅನುಕೂಲವಾದವು. ಊಟದ ನಂತರ ರಾತ್ರಿ ಕೂತು ವಿರಮಿಸುವ ವೇಳೆ ಎಲ್ಲಾ ವಾಹಿನಿಗಳಲ್ಲೂ ಅಂಥದ್ದೇ ಕಥೆಗಳು, ಕೆಲವೊಮ್ಮೆ ಒಂದೇ ಅದೇ ಕಥೆ! ವೀಕ್ಷಕರು ಭಿಕ್ಷುಕರಂತಾದರು-ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್ ಎಂಬಂತೇ ವೀಕ್ಷಕರಿಗೆ ಬೇರೇ ಆಯ್ಕೆ ಇರಲಿಲ್ಲವಾಗಿ ಅನಿವಾರ್ಯವಾಗಿ ಕೆಲವರು ಅಂಥದ್ದನ್ನೇ ನೋಡಿದರು! ಇನ್ನು ಕೆಲವರು ಟಿವಿ ಸ್ವಿಚ್ ಆಫ್ ಮಾಡಿದರು. ಮಾಧ್ಯಮ ವಾಹಿನಿಗಳ ವೀಕ್ಷಕರಲ್ಲೂ ನನ್ನದೊಂದು ವಿನಂತಿ: ಕ್ರೌರ್ಯವನ್ನು ತೋರಿಸುವ ಕಥೆಗಳು ಇನ್ನೆಷ್ಟು ದಿನ ಹೀಗೇ ಬೇಕು ? ಅವುಗಳ ಬದಲಿಗೆ ಉತ್ತಮ ಸಂಸ್ಕೃತಿ-ಸಂಸ್ಕಾರಗಳ ಕುರಿತಾದ ಸಂವಾದಗಳನ್ನೋ ಮತ್ತೇನನ್ನೋ ತೋರಿಸಲಿ ಅಲ್ಲವೇ?

ಸಿನಿಮಾ ಮಂದಿ ಮತ್ತು ಮಾಧ್ಯಮಗಳವರು ಇನ್ನಾದರೂ ಅರಿತುಕೊಳ್ಳಲಿ. ಕೇವಲ ಒಳಗೆ ಅಂಥಾ ಸಂದೇಶ ಇದೆ ಇಂಥಾ ಸಂದೇಶ ಇದೆ ಎಂದು ರೈಲು ಬಿಡುವುದಕ್ಕಿಂತ ಅಂಥಾ ಸಂದೇಶ ಇದೆ ಎಂಬುದನ್ನು ಸಮಾಜ ಹೇಳಬೇಕು ಹಾಗೆ ನಿರೂಪಿಸಿ ತೋರಿಸಿ. ಕೇವಲ ಏನನ್ನೋ ಮನಸ್ಸಿಗೆ ಬಂದಿದ್ದನ್ನು ತೋರಿಸಿ ದುಡ್ಡು ಬಾಚಿಕೊಂಡು ಜಾಗ ಖಾಲಿ ಮಾಡಲಿಕ್ಕೆ ಇದೇನು ಡೊಂಬರಾಟವೋ ಮಂಗನಾಟವೋ ? ಅದಾದ್ರೆ ಸರಿ ಪಾಪ ಹೊಟ್ಟೆಪಾಡಿಗೆ ಕಸರತ್ತು ಮಾಡುವಾಗ ಏನನ್ನೋ ತೋಚಿದ್ದನ್ನು ತೋರಿಸುತ್ತಾರೆ ಎನ್ನಬಹುದು, ಆದರೆ ಸಿನಿಮಾ ಯಾ ಮಾಧ್ಯಮಗಳವರು ತಾವುಗಳು ಓದಿಕೊಂಡ ಮಹನೀಯರು, ತಾವುಗಳು ಸೆರೆಹಿಡಿದು ತೋರಿಸುವ ದೃಶ್ಯಾವಳಿಗಳು ಒಂದರ್ಥ ಡಾಕ್ಯುಮೆಂಟರಿಗಳು! ಅವು ಯಾವಕಾಲಕ್ಕೂ ಪುನರ್ಲಭ್ಯವಾಗುವಂಥವು ಮಾತ್ರವಲ್ಲ ಸಮಾಜದ ಎಲ್ಲಾ ಸ್ತರಗಳಿಗೂ ಬಹುವೇಗದಲ್ಲಿ ತಲ್ಪುವಂಥವು. ಅವುಗಳಲ್ಲಿನ ಕಥೆ-ಆಖ್ಯಾಯಿಕೆಗಳು ಜನರ ಮನಃಪಟಲದಲ್ಲಿ ನಿಲ್ಲುತ್ತವೆ. ಅದರಲ್ಲಂತೂ ಹದಿಹರೆಯದ ಮಕ್ಕಳು ನಿಮ್ಮ ಕೆಟ್ಟ ಸಂದೇಶಗಳನ್ನೇ‍ ಪ್ರೀತಿಯಿಂದ ಸ್ವೀಕರಿಸಿ ಅಪ್ಪ-ಅಮ್ಮ ಕೊಡುವ ಉತ್ತಮ ಸಂದೇಶಗಳನ್ನೂ ಪಾಲಿಸದಂತಾಗುತ್ತಾರೆ. ಮಕ್ಕಳು ಮನೆಯಲ್ಲಿ ಅಪ್ಪ-ಅಮ್ಮನನ್ನೇ ದ್ವೇಷಿಸತೊಡಗುತ್ತಾರೆ. ಹೀಗಾಗಿ ಸ್ವೇಚ್ಛಾಚಾರವನ್ನು ವೈಭವೀಕರಿಸುವ ನಿಮ್ಮ ಸಂದೇಶಗಳನ್ನು ಹದ್ದುಬಸ್ತಿನಲ್ಲಿಡಿಸಿ ಸಮಾಜ [ಈಗಲೇ ಕೆಲಭಾಗ ಕೆಟ್ಟಿದೆ]ಕೆಟ್ಟುಹೋಗದಂತೇ ನೋಡಿಕೊಳ್ಳಬೇಕಾದ ಸಾಮಾಜಿಕ ಜವಾಬ್ದಾರಿ ಕೂಡ ನಿಮ್ಮದಿರುತ್ತದೆ, ಅಂದಾಗ ಮಾತ್ರ ನಿಮ್ಮ ಮನೋರಂಜನೆಗೊಂದು ಮೌಲ್ಯವಿರುತ್ತದೆ. ಅದು ಬಿಟ್ಟು ಸಿಕ್ಕ ಸಿಕ್ಕ ಹಾಗೆಲ್ಲಾ ಹೇಳಿಕೆ ಕೊಡೋದು, ಸಂದೇಶ ಕೊಡ್ತೀವಿ ಅಂತ ಕೆಟ್ಟ ಸಿನಿಮಾ ತೆಗೆಯೋದು ಮಾಡ್ಬೇಡಿ.

ನನ್ನ ಈ ಅನಿಸಿಕೆಗೆ ಸಮಾಜದಲ್ಲಿ ಕೆಲವರ ಸ್ಪಂದನೆಯಾದರೂ ಇರಬಹುದು. ದುರ್ಗಮ ಪ್ರದೇಶವನ್ನು ಕ್ರಮಿಸುವಾಗ ಅತ್ಯಂತ ಜಾಗರೂಕತೆ ಬೇಕಂತೆ, ಶಿಖರವನ್ನೇರುವಾಗ ಸಹಾಯಕ್ಕೆ ಹಗ್ಗ ಮೊದಲಾದವು ಬೇಕಂತೆ, ಸಮಾಜ ಅಜ್ಞಾನವನ್ನು ತೊಡೆದುಹಾಕುವಾಗ ಭಗವದ್ಗೀತೆಯಂತಹ ಕೈಗನ್ನಡಿ ಬೇಕಂತೆ. ಸಹಸ್ರ ವರ್ಷಗಳ ಹಿಂದೆ ಯುದ್ಧಭೂಮಿಯಲ್ಲಿ ಪ್ರವಚಿಸಿದ್ದೆನ್ನಲಾದ ಗೀತೆ ಎಂಬ ಮಾನವ ಜೀವನ ಧರ್ಮ ಸೂತ್ರಗಳು ಇವತ್ತಿಗೂ ಎಷ್ಟು ಪ್ರಸ್ತುತ ಎಂಬುದು ಆಗೀಗ ನಮಗೆ ತಿಳಿಯುತ್ತಲೇ ಇರುತ್ತದೆ. ನೀತಿಬಾಹಿರ ಕೆಲಸಗಳನ್ನು ನಿರ್ಬಂಧಿಸುವ ಮಾನವ ಕಲ್ಯಾಣವನ್ನು ಎತ್ತಿಹಿಡಿದ ಗೀತಾಚಾರ್ಯ ಶ್ರೀಕೃಷ್ಣನನ್ನು ಅದಕ್ಕೇ ಜಗದ್ಗುರು ಎನ್ನುತ್ತಾರಲ್ಲವೇ? ನಮಗೆ ಗೀತೆಯನ್ನೋದಲು ಸಮಯವಿಲ್ಲ, ಗೀತೆಯ ಉಪನ್ಯಾಸಗಳನ್ನು ಕೇಳಲು ಅನುಕೂಲವಿಲ್ಲ. ಗೀತೆ ಹಿಂದೂ ಧರ್ಮ ಪ್ರಚಾರವೆಂಬ ವಿಷಬೀಜವನ್ನು ನಾವು ಯಾರದೋ ಬಾಯಿಂದ ಕೇಳಿ ಮತ್ತಷ್ಟು ಜನರಿಗೆ ಹಬ್ಬಿಸುತ್ತೇವೆ! ಆದರೆ ಹಗಲೂ-ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಬರುವ ಕ್ರೌರ್ಯಗಳನ್ನೂ ಕಾಮತೀಟೆಗಳ ಎಪಿಸೋಡ್‍ಗಳನ್ನು ನೋಡಲು ನಮಗೆ ಸಮಯವಿದೆ, ಅನುಕೂಲವೂ ಇದೆ, ಮನಸ್ಸೂ ಇದೆ. ಅಂದಮೇಲೆ ನಮ್ಮ ಮನಸ್ಸು ಅಂಧಕಾರದೆಡೆಗೆ ಹೆಜ್ಜೆಹಾಕುತ್ತಿದೆ; ಬೆಕ್ಕು ಕದ್ದು ಹಾಲು ಕುಡಿಯಲು ಬಯಸುತ್ತದೆ! ಈಗಲೇ ನಿರ್ಧರಿಸಿ, ಈ ಕ್ಷಣ ಅದನ್ನು ನಿಯಂತ್ರಿಸಿ, ಅಸತ್ಯದಿಂದ ಸತ್ಯದೆಡೆಗೆ-ಕತ್ತಲೆಯಿಂದ ಬೆಳಕಿನೆಡೆಗೆ-ಮೃತ್ಯುವಿನಿಂದ ಅಮೃತತ್ವದೆಡೆಗೆ ನಡೆಯೋಣ; ಗೀತೆಯನ್ನು ಸಮರ್ಪಕವಾಗಿ ಅರಿತು ನಮ್ಮ ಜೀವನಧರ್ಮವಾಗಿ ಅದನ್ನು ಅನುಸಂಧಾನಗೊಳಿಸೋಣ, ಧನ್ಯವಾದ.

5 comments:

  1. ಫೇಸ್ ಬುಕ್ ನಲ್ಲಿ ನಿಮ್ಮ ಕಮೆಂಟ್ ಓದಿ ಅಲ್ಲಿ ತೋರಿಸಿದ್ದ ಲಿಂಕನ್ನು ಕ್ಲಿಕ್ಕಿಸಿ ಈ ನಿಮ್ಮ ಲೇಖನ ಓದುವಂತಾಯ್ತು. ಓದಿದ ಮೇಲೆ ಅಂದುಕೊಂಡೆ, “ಹತ್ತೇರಿಕೆ, ನನ್ನ ಅಮೂಲ್ಯ ೮ ನಿಮಿಷ ಹಾಳು ಮಾಡಿಕೊಂಡೆನಲ್ಲಾ“. ಮತ್ತೆ ಅನ್ನಿಸಿತು, ಈ ಹಾಳಾದ ೮ ನಿಮಿಷಕ್ಕೆ ಇನ್ನೆರಡು ನಿಮಿಷ ಸೇರಿಸಿ ನಿಮಗೊಂದು ಕಮೆಂಟ್ ಕಳಿಸೋಣ ಅಂತ. ಅಲ್ಲ ಸ್ವಾಮಿ, ನೀವು ಏನು ಬರೀತೀರಾ ಅಂತ ನಿಮ್ಗೆ ಗೊತ್ತಾ ? ಸಿನೆಮಾಗಳಿಗೆ “ಪುಣ್ಯಕ್ಷೇತ್ರ“ಗಳ, “ಪುಣ್ಯಪುರುಷ“ರ ಹೆಸರನ್ನು ಕೊಡಬಾರದು ಅನ್ನುವ ನಿಮ್ಮ ಮಾತಿಗೆ ಅರ್ಥ ಇದೆಯಾ ಅಂತ ನಿಮ್ಮನ್ನು ನೀವು ಕೇಳಿಕೊಂಡಿದ್ದೀರಾ ? ಭಗವದ್ಗೀತೆ ಓದ್ರೀ, ಅದ್ರಲ್ಲಿ ಎಲ್ಲಾ ಒಳ್ಳೇದೇ ಇದೆ ಅಂತ ಬೋಧಿಸ್ತೀರಲ್ಲಾ, ಭಗವದ್ಗೀತೆಯನ್ನು ಆಧರಿಸಿ ಸಿನೆಮಾ ಮಾಡಿದ್ರೆ ಅದೊಂದು ರಕ್ತಸಿಕ್ತ ಸಿನೆಮಾ ಆಗ್ತದೆ ಅನ್ನೋ ಅರಿವು ನಿಮ್ಗೇನಾದ್ರೂ ಇದ್ಯಾ ? ಭಗವದ್ಗೀತೆಯ ಆರಂಭ ಆಗೋದೇ “ಧರ್ಮಕ್ಷೇತ್ರ-ಕುರುಕ್ಷೇತ್ರ“ ದ್ವಂದ್ವದಿಂದ ಅನ್ನೋದು ನಿಮ್ಗೆ ತಿಳಿದಿರ್ಲಿ. “ಧರ್ಮ“ ವನ್ನು ಸ್ಥಾಪಿಸುವ ಉದ್ದೇಶದಿಂದ ದೇವರೇ ಏನೆಲ್ಲಾ ಕಪಟವೇಷ ಹಾಕಿ ಎಷ್ಟೆಲ್ಲಾ ಕೊಳಕು ರಾಜಕೀಯದಿಂದ ಕೌರವರ ರಕ್ತ ಸುರಿಸಿದ ಕತೆ ಉಪೇಂದ್ರನ ಸಿನೆಮಾಗಳಿಗಿಂತ ಯಾವ ರೀತಿ ಭಿನ್ನ. ಸ್ವಲ್ಪ ಯೋಚ್ನೆ ಮಾಡಿ ಸ್ವಾಮಿ...

    ReplyDelete
  2. ಸಿನಿಮಾಗಳು ಹಾಗು ಕಿರುತೆರೆಯ ಸರಣಿಗಳು ನಮ್ಮ ಸಮಾಜದಲ್ಲಿ, ವಿಶೇಷತಃ ಯುವಪೀಳಿಗೆಯಲ್ಲಿ ಕೀಳು ಅಭಿರುಚಿಯನ್ನು ಪ್ರಚೋದಿಸುತ್ತಿವೆ ಎನ್ನುವದು ಸತ್ಯ. ಇದನ್ನೇ ಪ್ರಗತಿ, ಆಧುನಿಕತೆ ಎಂದು ತಿಳಿದವರಿಗೆ ಏನು ಹೇಳೋಣ?

    ReplyDelete
  3. ಎಲ್ಲಾ ಮಾರ್ಕೆಟಿಂಗ್ ಟೆಕ್ನಿಕ್ಕುಗಳೇ ಆಗೋಯ್ತು. ಯಾತಕ್ಕೆಂದರೆ ದುಡ್ಡು ದುಡ್ಡು ದುಡ್ಡು. ಇದರ ನಡುವೆ ಮಾನವೀಯ ಮೌಲ್ಯಗಳೆಗೆ ಬೆಲೆಯೆಲ್ಲಿ?
    ನೀವಂದಂತೆ, ಬೆಳೆಯುತ್ತಿರುವ ಯುವ ಪೀಳಿಗೆ ಅನುಕರಿಸುತ್ತಿರುವುದು, ಇಂತಹ ನಮ್ಮ ಮಾಧ್ಯಮ, ಸಿನೇಮಾ ಹೀರೋಗಳನ್ನೇ.
    ಶರವೇಗದಲ್ಲಿ ಕಾಲ ಬದಲಾಗುತ್ತಿದೆ!

    ReplyDelete
  4. ಸನ್ಮಾನ್ಯ ಅನಾನಿಮಸ್ಸರೇ, ನೀವು ನೇರವಾಗಿ ನಿಮ್ಮ ಹೆಸರನ್ನು ನಮೂದಿಸಿ ಪ್ರತಿಕ್ರಿಯೆ ನೀಡಬಹುದಿತ್ತು. ಇರಲಿ ಪರವಾಗಿಲ್ಲ. ಪುಣ್ಯಕ್ಷೇತ್ರಗಳಿಗೆ ಅವುಗಳದ್ದೇ ಆದ ಘನತೆ-ಗೌರವಗಳಿವೆ;ಎಷ್ಟೆಂದರೂ ಅವು ಪುಣ್ಯಕ್ಷೇತ್ರಗಳು, ಅವುಗಳ ಹೆಸರನ್ನು ಸಿನಿಮಾಗಳಿಗೆ ಇಡುವ/ಇಟ್ಟು ಅವುಗಳ ಮಾನ್ಯತೆಗೆ ಧಕ್ಕೆ ತರುವ ಕೆಲಸ ಸರಿಯಲ್ಲ ಎಂಬುದು ನಮ್ಮಂತಹ ಭಾವುಕರ ಭಾವನೆ. ಇನ್ನು ಯುದ್ಧಭೂಮಿಯಲ್ಲಿ ಪ್ರಚೋದಕೆ ಹೇಳಿಕೆಯಿಂದಲೇ ಗೀತೆ ಆರಂಭ ಎಂಬ ನಿಮ್ಮ ಮಾತು ಗೀತೆ ನಿಮಗೆ ಅರ್ಥವಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ, ಅದರ ಅರ್ಥವಿವರಣೆಯನ್ನು ಪಂಡಿತರಲ್ಲಿ ಕೇಳಿ ತಿಳಿಯಿರಿ-ಆಗ ನಿಮಗೆ ಜ್ಞಾನ-ಅಜ್ಞಾನಗಳ ಅರ್ಥವೂ ತಿಳಿಯುತ್ತದೆ, ಇಷ್ಟು ಸಾಕು.
    ---------

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು.

    ReplyDelete
    Replies
    1. ಶ್ರೀಯುತ ಭಟ್ ರವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಅನೋನಿಮಸ್ ಆಗಿ ಬರೆಯಲು ಕಾರಣ ಇಲ್ಲದೇ ಇಲ್ಲ. ಹೇಳಬೇಕಾದ ಒಂದು ಮಾತು. ವಿಳಾಸ ಕೊಟ್ಟು ಅಂಥ ಕಾಮೆಂಟ್ ಬರೆಯಲು ನಾನು ಮೂರ್ಖನಲ್ಲ. ಯಾಕೆಂದರೆ, ಧಾರ್ಮಿಕ ಮೂಲಭೂತವಾದವನ್ನೇ ತಿರುಳಾಗಿಸಿಕೊಂಡ ನಿಮ್ಮ ಬ್ಲಾಗನ್ನು ಓದುವ ಬಹುತೇಕರು ಮೂಲಭೂತವಾದಿಗಳೇ ಆಗಿರುತ್ತಾರೆ ಎಂಬುದು ನನ್ನ ಸಾಮಾನ್ಯ ತಿಳುವಳಿಕೆ. ಇರಲಿ, ಈಗ ವಿಷಯಕ್ಕೆ ಬರುವೆ - ಪ್ರಚೋದಕ ಹೇಳಿಕೆಯಿಂದೆ ಗೀತೆ ಆರಂಭವಾಗ್ತದೆ ಎನ್ನುವ ವಾಖ್ಯವನ್ನು ನನ್ನ ಕಾಮೆಂಟ್ ನಲ್ಲಿ ಎಲ್ಲಿ ಕಂಡಿರಿ ಎಂಬುದೇ ಸೋಜಿಗದ ಪ್ರಶ್ನೆ. "ಗೀತೆ ನಿನಗೆ ಅರ್ಥವಾಗುತ್ತಿಲ್ಲ, ಪಂಡಿತರಿಂದ ತಿಳಿ" ಅನ್ನುವ ನಿಮ್ಮ ವಾದ ನನಗೆ ಹೆಚ್ಚು ಅಚ್ಚರಿ ಮೂಡಿಸೋದಿಲ್ಲ. ಇಸ್ಕಾನ್ ನ ಶ್ರೀ ಪ್ರಭುಪಾದರು ತಮ್ಮ "ಭಗವದ್ಗೀತೆ ಯಥಾರೂಪ"ದ ಪೀಠಿಕೆಯಲ್ಲಿ ಇದನ್ನೇ ತಾನೇ ಹೇಳಿದ್ದು: "ಗೀತೆಯ ವಯಕ್ತಿಕ ವ್ಯಾಖ್ಯಾನ ಸಲ್ಲ, ಅದನ್ನು ಚೆನ್ನಾಗಿ ಅಭ್ಯಾಸ ಮಾಡಿರುವ ಪಂಡಿತನೋರ್ವನ ಮೂಲಕವೇ ಗೀತೆಯ ಅರ್ಥವನ್ನು ತಿಳಿಯ ತಕ್ಕದ್ದು..." ಹಾಗೆ ಹೇಳುವ ಮೂಲಕ ದೈವೀಪ್ರಕಟಣೆಯ ಮೇಲೆ ಏಕಸ್ವಾಮ್ಯತೆಯನ್ನು ಸಾಧಿಸುವ ಹುನ್ನಾರ. ದೇವರು ಯಾರೊಬ್ಬ ಪಂಡಿತನ ಸ್ವತ್ತಲ್ಲ ಸ್ವಾಮಿ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನಾನುಭವದ ನೆಲೆಯಲ್ಲಿ ದೇವರನ್ನು, ದೇವರ ಪ್ರಕಟಣೆಯನ್ನು ಅರ್ಥವಿಸಬಲ್ಲ. ನೇಗಿಲ ಹೊತ್ತ ರೈತನಿಗೂ ಕೃಷ್ಣ ಪರಮಾತ್ಮನನ್ನು ಕಾಣುವ, ಗೀತೆಯಲ್ಲಿ ಪ್ರಕಟವಾದ ಆತನ ಮಹಿಮೆಯನ್ನು ಅನುಭವಿಸುವ ಹಕ್ಕು ಇದೆ. ಒಬ್ಬ ವ್ಯಕ್ತಿಯ ಅರ್ಥವಿವರಣೆ ತನ್ನ ವ್ಯಾಖ್ಯಾನಕ್ಕಿಂತ ಭಿನ್ನ ಎಂದ ಮಾತ್ರಕ್ಕೆ ಆ ಅರ್ಥವಿವರಣೆಯೇ ತಪ್ಪು ಎಂಬ ವಾದ ನಿಮ್ಮ ಕೂಪಮಂಡೂಕತೆಯನ್ನು ಸಾರುತ್ತದೆ. ಬಾವಿಯಿಂದ ಹೊರಬನ್ನಿ ಗುರುವರ್ಯ. ನಿಮಗೆ ನಮಸ್ಕಾರ!

      Delete