ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 16, 2011

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.....


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.....

ಬೆಂಗಳೂರಿಗೆ ನಾನು ಬಂದಿದ್ದು ಅಜ್ಜಿಗೆ ಬಹಳ ಬೇಸರವಾಗಿತ್ತು. ನನ್ನನ್ನು ಅತಿಪ್ರೀತಿಯಿಂದ ತಾಯಿಯಂತೇ ಸಲಹಿದ ಅಜ್ಜಿಗೆ ಮಕ್ಕಳಲ್ಲೇ ನಾನು ಅಚ್ಚುಮೆಚ್ಚು. ಊರಿಗೆ ಬಹುದೂರದ ಬೆಂಗಳೂರಿಗೆ ಹೊರಟಮೇಲೆ ಇನ್ನು ತನಗೆ ಅಷ್ಟಾಗಿ ಹತ್ತಿರ ಸಿಗಲೊಲ್ಲ ಎಂಬ ಕಾರಣಕ್ಕೆ ಅಜ್ಜಿ ಬೇಸರಪಟ್ಟಿದ್ದು. ಹಾಗಂತ ಎಲ್ಲರಮನೆ ಮಕ್ಕಳಂತೇ ಏನೋ ಸಾಧನೆ ಮಾಡಲಿ ಎಂಬ ಎರಡನೇ ಮನಸ್ಸೂ ಇತ್ತು ! ಆದರೂ ಪ್ರೀತಿಯ ಮೊದಲನೇ ಮನಸ್ಸು ಬೇಡಿಕೆಯ ಎರಡನೇ ಮನಸ್ಸನ್ನು ಹಿಂದಕ್ಕೆ ಹಾಕಿಬಿಟ್ಟಿತ್ತು. ೯೩ರಲ್ಲಿ ಬೆಂಗಳೂರಿಗೆ ಹೊರಟು ನಿಂತಾಗ ಕಣ್ಣು ತುಂಬಾ ನೀರು ತುಂಬಿಕೊಂಡು ಬೀಳ್ಕೊಟ್ಟ ಅಜ್ಜಿಗೆ ಮೊಮ್ಮಗ ಊರಿಗೆ ಬರುವುದನ್ನೇ ನೆನೆವ ಅಪೇಕ್ಷೆ. ಅಲ್ಲಲ್ಲೇ ಮನದಲ್ಲೇ ಲೆಕ್ಕ: ಈಗ ಹೇಗಿರಬಹುದು? ಮೊಮ್ಮಗ ಒಳ್ಳೇ ಪೌಲ್ದಾರನ ಹಾಗೇ ಡ್ರೆಸ್ಸು ಹಾಕಿಕೊಂಡು ಯಾವುದೋ ಆಫೀಸಿಗೆ ಹೋಗುತ್ತಿರಬೇಕೇನೋ, ಸರ್ಕಾರೀ ಕೆಲಸ ಸಿಕ್ಕಿರಬಹುದೇ? ನಮ್ಮಂತೇ ಕಷ್ಟಪಡುವುದು ಬೇಡ, ಮೊಮ್ಮಗ ಕೈತುಂಬಾ ಹಣಸಂಪಾದಿಸಿ ಸುಖವಾಗಿ ಬಾಳಲಿ ---ಹೀಗೆಲ್ಲಾ ಯಾವ್ಯಾವುದೋ ಗಣಿತ, ಗುಣಿತ, ಭಾಗಾಕಾರ, ಸಂಕಲನ!

ಹಬ್ಬಹರಿದಿನಗಳು ಬಂದರೆ ಸಾಕು ಅಜ್ಜಿಗೆ ಇನ್ನೇನು ಮೊಮ್ಮಗ ಊರಿಗೆ ಬಂದೇ ಬಿಡುತ್ತಾನೆ ಎಂಬ ಸಂತಸ. ಎಲ್ಲರಲ್ಲೂ ಹೇಳಿಕೊಳ್ಳುವ ಹುಮ್ಮಸ್ಸು. ವಯಸ್ಸನ್ನು ಮರೆತು ಮಕ್ಕಳೊಂದಿಗೆ ಮಗುವಾಗಿ ಕುಣಿದು, ನಲಿದು ಕುಪ್ಪಳಿಸುವಾಸೆ. ಇಲ್ಲಿ ನಮ್ಮ ಕಥೆ ನಮಗೇ ಗೂತ್ತು. ಸಿಗುವ ಸಂಬಳ ನಮ್ಮ ಖರ್ಚಿಗೇ ಸಾಕಾಗದ ಪರಿಸ್ಥಿತಿಯಲ್ಲಿ ಊರಿಗೆ ಎಲ್ಲಾ ಹಬ್ಬಗಳಿಗೂ ಹೋಗಲು ಸಾಧ್ಯವೇ? ಆದರೂ ಮೊಮ್ಮಗನನ್ನು ಕಾಣುವ ಆಸೆಯಿಂದ ಮೊಮ್ಮಗ ಬಂದೇ ಬರುತ್ತಾನೆ ಎಂಬ ನಂಬಿಕೆಯಿಂದ ರವೆಉಂಡೆ, ಕೊಬ್ಬರಿಮಿಠಾಯಿ ಮಾಡಿ ಹಿತ್ತಾಳೆಯ ಡಬ್ಬದಲ್ಲಿ ತುಂಬಿಸಿಡುತ್ತಿದ್ದಳು. ಊರಿಗೆ ಪ್ರವೇಶಿಸುತ್ತಿದ್ದಂತೆಯೇ ಒಂದೋಂದೇ ಡಬ್ಬ ಈಚೆ ಬರುತ್ತಿತ್ತು. ನಾಕಾರು ಬಗೆಯ ತಿಂಡಿಗಳನ್ನು ಕೊಡುತ್ತಾ ಮೊಮ್ಮಗ ತಿಂದು ಸುಖಿಸುವುದನ್ನು ಕಂಡು ತಾನು ಸುಖಪಡುವ ಮಹಾತಾಯಿ ಅವಳಾಗಿದ್ದಳು.

೬ನೇ ವಯಸ್ಸಿನಷ್ಟು ಚಿಕ್ಕವನಿದ್ದಾಗ ಮನೆಯಲ್ಲಿ ಬಾಳೆಗೊನೆ ಕೊಯ್ದು ಹಣ್ಣಿಗೆ ಹಾಕಿದ್ದರು. ಯಾವುದೋ ಕಾರ್ಯದ ನಿಮಿತ್ತ ನಾವು ಮಕ್ಕಳು ಮತ್ತು ನಮ್ಮ ತಾಯಿ ಅಜ್ಜನಮನೆಗೆ ಹೋಗಬೇಕಾಗಿತ್ತು. ಅಜ್ಜನಮನೆಗೆ ಹೋಗುವ ದಿನದವರೆಗೊ ಬಾಳೇಕಾಯಿ ಹಣ್ಣಾಗಿರಲಿಲ್ಲ. ಅಜ್ಜನಮನೆಗೆ ಹೋದ ನಾವು ವಾರಕ್ಕೂ ಅಧಿಕ ದಿನ ಅಲ್ಲೇ ಇರಬೇಕಾಗಿತ್ತು. ಅಜ್ಜಿಗೆ ನಾವೆಲ್ಲಾ ಕರೆಯುತ್ತಿದ್ದುದು " ಅಮ್ಮ" ಎಂದೇ. ಅಮ್ಮನನ್ನು " ಆಯಿ" ಎಂದು ಸಂಬೋಧಿಸುವ ಪದ್ಧತಿಯಿತ್ತು, ಬಹುಶಃ ಅದು ಮಹಾರಾಷ್ಟ್ರದ ಗಾಳಿ ಮುಂಬೈ, ಪುಣೆ, ಬೆಳಗಾಂವ್, ಧಾರವಾಡ, ಹುಬ್ಬಳ್ಳಿ ಮಾರ್ಗವಾಗಿ ಶಿರಸಿ ಘಟ್ಟ ಇಳಿದು ನಮ್ಮಲ್ಲಿಗೆ ಬಂದಿರಬೇಕು! ಹೀಗಾಗಿ ಚಿಕ್ಕವರಿದ್ದಾಗ ನಮಗೆಲ್ಲಾ ’ಅಮ್ಮ’ ಎಂದರೆ ಅಜ್ಜಿ. " ಅಮ್ಮಾ, ಬಾಳೇಕಾಯಿ ಹಣ್ಣಾಯ್ದೇ ಇಲ್ಯಲೇ, ನಾನು ಅಜ್ಜನಮನೆಗೆ ಹೋಗಿ ಬಪ್ಪಲ್ಲಿಯವರೆಗೆ ಹಾಂಗೇ ಇರ್ತು ಅಲ್ದಾ ? " ಎಂದು ಹವಿಗನ್ನಡದಲ್ಲಿ ನಾನು ಕೇಳಿದ್ದೆನಂತೆ. ಅಜ್ಜನಮನೆಗೆ ಹೋದವನನ್ನು ಒಮ್ಮೆ ಯಾರದೋ ಜೊತೆಗೆ ಮನೆಗೆ ಕರೆಸಿಕೊಂಡಿದ್ದರಂತೆ. ನನಗೋ ಅಜ್ಜಿ ಬೇಕು ಆಯಿಯನ್ನು ಬಿಡಲಾಗದು! ಇಬ್ಬರೂ ಇದ್ದರೆ ನಮ್ಮಷ್ಟಕ್ಕೇ ನಾವು ಹಾಯಾಗಿ ಆಡಿಕೊಂಡಿರುತ್ತಿದ್ದೆವು. ಅದ್ಯಾವ ಪರಿ ಎಂದು ಕೇಳಿದಿರೇ ? [ಅದು ಹಾಗೇಯಪ್ಪ ಒಂಥರಾ ಸರ್ಕಾರಿ ಸಂಬಳ-ಹತ್ತಮಂದಿ ಕೈ ಗಿಂಬಳ ಎರಡನ್ನೂ ಪಡೆದು ಬೀಗುವ ಸರ್ಕಾರಿ ಅಧಿಕಾರಿಗಳ ಹಾಗೇ ಇತ್ತು !] ಮನೆಗೆ ಬಂದವ ಒಂದೆರಡು ಗಂಟೆ ಕಳೆದಮೇಲೆ " ಆಯಿ ಬೇಕು ಬೋಂಂಂಂ " ಎಂದು ಅತ್ತೆನಂತೆ. ಅದಕ್ಕೇ ಮತ್ಯಾರನ್ನೋ ಜೊತೆಮಾಡಿ ವಾಪಸು ಅಜ್ಜನಮನೆಗೆ ಕಳಿಸಿದರಂತೆ.

ವಾರ ಕಳೆದರೂ ಮನೆಗೆ ಬಂದಿರಲಿಲ್ಲ. ಬಾಳೆಕೊನೆ ಹಣ್ಣಾಗಿಬಿಟ್ಟಿತ್ತು. ಅಮ್ಮನಿಗೆ [ಅಜ್ಜಿಗೆ] ಮನಸ್ಸು ತಡೆಯಲಿಲ್ಲ. ಒಂದು ದಿನ ಬೆಳಿಗ್ಗೆ ಬೇಗನೇ ಮನೆವಾರ್ತೆ ಕೆಲಸಮುಗಿಸಿ, ಸ್ನಾನಾದಿಗಳನ್ನು ತೀರಿಸಿಕೊಂಡು, ಮನೆಯಲ್ಲಿ ಹೊರಗೆ ಕೆಲಸಕ್ಕೆ ಬಂದಿದ್ದ ಹೆಣ್ಣಾಳನ್ನು ಜೊತೆಗಿರಿಸಿಕೊಂಡು ಭಾರವಾದ ಬಾಳೇಹಣ್ಣುಗೊನೆ ಹೊತ್ತು ಅಜ್ಜನಮನೆಗೇ ಬಂದಿದ್ದಳು ನಮ್ಮಮ್ಮ! ಹಲಸಿನಕಾಯಿ ಹಪ್ಪಳ, ಬಾಳೆಗೊನೆ ಕಟ್ಟಿಕೊಂಡು ಬಂದ ಅಜ್ಜಿಯನ್ನು [ ಅಮ್ಮನನ್ನು] ನೋಡಿ ನಮಗೆ ಆಶ್ಚರ್ಯ. ಮೂಕವಿಸ್ಮಿತ ಎಂದು ಈಗ ಹೇಳಬಹುದು, ಆಗ ಆ ಶಬ್ದಗಳೆಲ್ಲಾ ಗೊತ್ತಿರಲಿಲ್ಲ ಹೀಗಾಗಿ!! ಅಜ್ಜನಮನೆಗೆ ಬಂದ ಅಮ್ಮ ಅಲ್ಲಿನವರಿಗೆ ಬೀಗಿತ್ತಿ. ಅಪರೂಪಕ್ಕೆ ಬಂದ ಬೀಗಿತ್ತಿಗೆ ಔತಣ ಏರ್ಪಡಿಸಬೇಕೆಂದರೂ ಹಠಮಾಡಿ ಸಾದಾ ಊಟ ಮುಗಿಸಿಕೊಂಡು ಊರಿಗೆ ಮರಳಿದ್ದರು ನಮ್ಮಮ್ಮ. ಅವಿಭಕ್ತ ಕುಟುಂಬವಾಗಿದ್ದ ನಮ್ಮನೆಯಲ್ಲಿ ಬಾಕಿ ಉಳಿದಂತೇ ಚಿಕ್ಕಪ್ಪಂದಿರು, ಅಜ್ಜ ಎಲ್ಲಾ ಇದ್ದರಲ್ಲ....ಯಾರಿಗೂ ಬಾಳೇಹಣ್ಣು ತಿನ್ನುವ ಯೋಗವಿರಲಿಲ್ಲ. ಯಾರಿಗೇ ಇರಲಿ ಬಿಡಲಿ ಮೊಮ್ಮಗ ಕೇಳಿದ್ದಾನೆ-ಕೊಡಬೇಕು----ಇದಿಷ್ಟೇ ನಮ್ಮಮ್ಮನ ಅನಿಸಿಕೆಯಾಗಿತ್ತು; ಅದನ್ನು ಪೂರೈಸಿದ್ದಳು.

ಪಂಜರಗಡ್ಡೆ[ ಸುವರ್ಣಗಡ್ಡೆ] ಪಲ್ಯ, ಹಾಗಲಕಾಯಿ ಹಸಿ, ಬದನೇಕಾಯಿ ಎಣ್ ಬಜ್ಜಿ, ಹೀರೇಕಾಯಿ ಗೊಜ್ಜು ಅಥವಾ ಸಿಹಿ ತಂಬ್ಳಿ...ಹೀಗೇ ಅಜ್ಜಿಯ ಅಡುಗೆಯ ಪಟ್ಟಿ ಬಹಳ ವಿಸ್ತಾರ. ಮಾಡುವ ಪ್ರತೀ ಅಡುಗೆಗೂ ಪ್ರತೀ ಪದಾರ್ಥಕ್ಕೂ ಅದರದ್ದೇ ಆದ ವಿಶಿಷ್ಟ ರುಚಿ. ಕಾಡಿನಿಂದ ಸೊಪ್ಪು ತರುವವರು ಆಗಾಗ ಮಡಾಗಲಕಾಯಿ ತರುತ್ತಿದ್ದರು. ಬಾಳೇದಿಂಡು ಸದಾ ಇರುತ್ತಿತ್ತು. ಕನ್ನೆಕುಡಿ, ತಗಟೆ [ಚಗಟೆ]ಸೊಪ್ಪು, ಬಸಲೆ, ಕೆಂಪು ಹರಿಗೆ ಹೀಗೇ ತರಾವರಿ ಸೊಪ್ಪುಗಳೂ ಬಳಸಲ್ಪಡುತ್ತಿದ್ದವು. ಮಳೆಗಾಲದ ಆದಿಯಲ್ಲಿ ಕಳಲೆ [ಬಿದಿರಿನ ಮೊಳಕೆ] ಕೂಡ ಬಳಸುತ್ತಿದ್ದರು. ಕಳಲೆ ಬಳಸುವುದರಿಂದ ಬೆನ್ನಲ್ಲಿ ಆಗಬಹುದಾದ ನಾರುಹುಣ್ಣು ಎಂಬ ಸಮಸ್ಯೆ ತಲೆಹಾಕುವುದಿಲ್ಲವಂತೆ. ಬಳಸುವ ಪ್ರತಿಯೊಂದೂ ಸಾಮಗ್ರಿ ಆದಷ್ಟೂ ಕ್ರಿಮಿನಾಶಕ ರಹಿತವಾಗಿರುತ್ತಿತ್ತು; ಆರೋಗ್ಯ ವರ್ಧಕವಾಗಿರುತ್ತಿತ್ತು.

ನಾವು ಚಿಕ್ಕವರಿದ್ದಾಗ ತಾಮ್ರ, ಕಂಚು ಮತ್ತು ಹಿತ್ತಾಳೆಯ ಪಾತ್ರೆಗಳು ಬಳಕೆಯಲ್ಲಿದ್ದವು. ಹಿತ್ತಾಳೆಯ ಲೋಟಗಳಲ್ಲೇ ಚಹಾ ಅಥವಾ ಕಷಾಯ [ನಮ್ಮೂರ ಕಡೆ ನಾವು ದಿನ ನಿತ್ಯ ಕುಡಿಯುವ ಭಾರತೀಯ ಮೂಲದ ಆರೋಗ್ಯಕರ ಪೇಯ] ಇತ್ಯಾದಿಗಳನ್ನು ಕುಡಿಯುತ್ತಿದ್ದರು. ಮಣ್ಣಿನ ಪಾತ್ರೆಗಳು ಬಹಳ ಬಳಸಲ್ಪಡುತ್ತಿದವು. ಊರಿಗೊಂದೋ ಮೂರು ನಾಕು ಗ್ರಾಮಗಳಿಗೊಂದೋ ಜಾತ್ರೆ ನಡೆಯುತ್ತಿತ್ತು. ಜಾತ್ರೆಗಳಲ್ಲಿ ಹೆಂಗಸರಿಗೆ ಬೇಕಾದ ಬಳೆ, ಪಿನ್ನು, ಬಾಚಣಿಗೆ, ಕ್ಲಿಪ್ಪು, ಸ್ನೋ, ಪೌಡರ್, ಪಾತ್ರೆಗಳು, ಮಕ್ಕಳ ಆಟಿಕೆಗಳು ಮಾರಾಟಕ್ಕೆ ಬರುತ್ತಿದ್ದವು. ಅಲ್ಲಲ್ಲಿ ಚಿಕ್ಕಪುಟ್ಟ ಸರ್ಕಸ್, ಡೊಂಬರಾಟ, ಬಾವಿಯಲ್ಲಿ ಸೈಕಲ್ ಓಡಿಸುವುದು, ಎರಡು ಕುತ್ತಿಗೆ ಮನುಷ್ಯ ಪ್ರದರ್ಶನ ಹೀಗೇ ಕೆಲವು ಅಪರೂಪದ ಸಂಗತಿಗಳು, ಆಟಗಳು ಹೆಂಗಸರು-ಮಕ್ಕಳಿಗೆ ಮುದನೀಡುತ್ತಿದ್ದವು. ಗಂಡಸರು ತಮಗೆಲ್ಲಾ ಏನೂ ಇದು ಹೊಸದಲ್ಲಾ ಎನ್ನುವ ರೀತಿ ಪೋಸುಕೊಟ್ಟು ಓರೆ‍ಗಣ್ಣಿನಲ್ಲೇ ಕುತೂಹಲಿಗಳಾಗಿ ನೋಡುತ್ತಾ ಸಾಗುತ್ತಿದ್ದರು. ಜಾತ್ರೆ ನಡೆದು ತಿಂಗಳುಗಳ ಕಾಲ ಎಲ್ಲರ ಬಾಯಲ್ಲೂ ಜಾತ್ರೆ, ಈ ಬಾರಿಯ ಜಾತ್ರೆಯ ವಿಶೇಷ ವೈಖರಿ, ಖರೀದಿಸಿದ ವಸ್ತುಗಳ ಬಗೆಗೆ, ಅಲ್ಲಿ ನೋಡಿದ ಸರ್ಕಸ್ಸು, ಏರಿದ ತೊಟ್ಟಿಲು ಇಂಥವುಗಳ ಬಗ್ಗೆ ಸುದ್ದಿ ಮುಗಿಯುತ್ತಲೇ ಇರಲಿಲ್ಲ. ನಮ್ಮೂರು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದೇ ಅವರ ಅಂಬೋಣ! ಜಾತ್ರೆಯ ಒಂದು ಮೂಲೆಯಲ್ಲೆಲ್ಲೋ ಮಣ್ಣಿನ ಪಾತ್ರೆಗಳೂ ಮಾರಾಟಕ್ಕೆ ಬರುತ್ತಿದ್ದವು. ಉದ್ದನೆಯದು, ಉರುಟುಗಟ್ಟಿನದು, ಅಗಲ ಬಾಯಿಂದು, ಬುಡ ಅಗಲ-ಕಂಠ ಚಿಕ್ಕದಾಗಿದ್ದು, ಗುಡಾಣ, ಮಡಿಕೆ-ಕುಡಿಕೆ, ಬೋಗುಣಿ, ಮೊಗೆ, ಹಣತೆಗಳು ಹೀಗೇ ಹಲವು ಆಕಾರ ವೈವಿಧ್ಯದ ಮಣ್ಣಿನ ಗೃಹೋಪಯೋಗೀ ಸಾಮಾನುಗಳು ದೊರೆಯುತ್ತಿದ್ದವು.

ಜಾತ್ರೆಗೆ ಸಾಗುವಾಗ ಕೆಲವರು ಎತ್ತಿನಗಾಡಿಗಳಲ್ಲಿ ಹೋಗುತ್ತಿದ್ದರು. ಚೆನ್ನಾಗಿ ಉಂಡು-ತಿಂಡು ಕಸುವುಳ್ಳ ಎತ್ತುಗಳು ಗಾಡಿಯನ್ನು ಖುಷಿಯಿಂದಲೇ ಎಳೆಯುತ್ತಿದ್ದವು. ಊರ ಹೊರಗಿನ ಸಮತಟ್ಟಾದ ಹಾದಿಯಲ್ಲಿ ಅವು ಸಾಗುವಾಗ ಅವುಗಳ ಕೊರಳ ಗಂಟೆಗಳ ನಿನಾದ ಬಹಳ ಮುದ ನೀಡುತ್ತಿತ್ತು. ಇಕ್ಕೆಲಗಳ ಹಸಿರು ಗಿಡಮರಗಳ ನಡುವಿನ ಹಾದಿಯಲ್ಲಿ ಅವು ನಡೆಯುವ ರಭಸಕ್ಕೆ ಮೇಲೆದ್ದ ಧೂಳಿ ಸುಂದರ ಸನ್ನಿವೇಶವನ್ನು ಸೃಷ್ಟಿಸುತ್ತಿತ್ತು. ಗಾಡಿಕಾರ ಅವುಗಳ ಹೆಸರು ಹಿಡಿದು " ಚುಚುಚುಚುಚು ಏ ಕರಿಯಾ, ಏ ನಂದಿ ಹೋಗ್ರಪ್ಪ ಬೇಗಾ " ಎಂದು ಬಾರುಕೋಲು ಎಳೆಯುವಷ್ಟರಲ್ಲಿ ಋತುಪರ್ಣನ ರಥದ ಕುದುರೆಗಳಿಗೆ ಇದ್ದ ವೇಗದಂತಹ ವೇಗದಲ್ಲಿ ಎತ್ತುಗಳು ಓಡುತ್ತಿದ್ದವು! [ಈಗಲೂ ನೆನೆಸಿಕೊಂಡರೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.... ಎಂಬ ನರಸಿಂಹಸ್ವಾಮಿಯವರ ಪದ್ಯದ ನೆನಪಾಗುತ್ತದೆ] ನಮ್ಮಂತಹ ಮಕ್ಕಳು ಎತ್ತುಗಳಿಗೆ ಭಾರ ಹೆಚ್ಚಾದೀತೆಂಬ ಅರಿವಿಲ್ಲದೇ ಗಾಡಿ ಹತ್ತಲು ಹಾತೊರೆಯುತ್ತಿದ್ದೆವು. ಕೊನೇಪಕ್ಷ ಹತ್ತುಮಾರಾದರೂ ಸರಿ ಗಾಡಿಪ್ರಯಾಣ ಏನೋ ಆಹ್ಲಾದಕರವಾಗಿರುತ್ತಿತ್ತು. ಜಾತ್ರೆಗೆ ಸಾಗಿ ದೇವರಿಗೆ ಹಣ್ಣು-ಕಾಯಿ ಸಮರ್ಪಿಸಿ ಸಂಜೆಯ ಇಳಿಬಿಸಿಲಿನಲ್ಲಿ ಹೊಳೆವ ರಥದ ಕಳಸನೋಡಿ ಮೈಮರೆಯುತ್ತಿದ್ದೆವು. ಕಿತ್ತಳೇ ಹಣ್ಣಿನ ಸುಗಂಧ ಇಡೀ ಜಾತ್ರೆಯ ಎಲ್ಲೆಲ್ಲೂ ಆವರಿಸಿರುತ್ತಿತ್ತು! ಪುಗ್ಗಿ, ಪೀಪಿ, ಪ್ಲಾಸ್ಟಿಕ್ ಹಾವು, ತಿರುಗಿಸಿ ನೋಡುವ ಚಿತ್ರಗಳ ಡಬ್ಬ, ಬಣ್ಣಬಣ್ಣದ ಬೊಂಬೆಗಳು ಅಲ್ಲಿರುತ್ತಿದ್ದವು; ಅನುಕೂಲವಿದ್ದರೆ ಖರೀದಿಸುವುದು, ಇರದಿದ್ದರೆ ಅಪ್ಪಂದೋ ಅಮ್ಮಂದೋ ಕೈ ಹಿಡಿದುಕೊಂಡು ಹಿಂತಿರುಗಿ ಆಸೆಗಣ್ಣಿನಲ್ಲಿ ಅವುಗಳನ್ನು ಇಟ್ಟಿರುವ ಅಂಗಡಿಗಳನ್ನು ನೋಡುತ್ತಾ ಸಾಗುತ್ತಿದ್ದೆವು. ಜಾತ್ರೆ ಮುಗಿದು ಅಂಗಡಿಗಳನ್ನು ಮುಚ್ಚುವ ದಿನಗಳಲ್ಲಿ ಅಂಗಡಿ ಹಾಕಿದವರು ಕಮ್ಮಿ ಬೆಲೆಗೆ ವಸ್ತುಗಳನ್ನು ಮಾರುತ್ತಾರೆ ಎಂದು ಇನ್ನೊಮ್ಮೆ ಹೋಗುವುದೂ ಇತ್ತು!

ಇಂತಹ ಜಾತ್ರೆಗಳಲ್ಲಿ ಖರೀದಿಸಿ ತಂದ ಮಣ್ಣಿನ ಪಾತ್ರೆಗಳು ನಮ್ಮಲ್ಲಿ ಬಹಳಕಾಲ ಇದ್ದವು. ರೀಯಲ್ ವಂಡರ್ಫುಲ್ ಅರ್ದನ್ ಪಾಟ್ಸ್ ! ಕಾಲ ಬದಲಾದ ಹಾಗೇ ಜರ್ಮನ್ ಬೆಳ್ಳಿ, ಅಲ್ಯೂಮೀನಿಯಂ ಮತ್ತು ಸ್ಟೀಲ್ ಪಾತ್ರೆಗಳು ಕಾಲಿಟ್ಟವು. ಆಚೀಚೆಯ ಮನೆಗಳಲ್ಲಿ ಸ್ಟೀಲ್ ಪಾತ್ರೆಗಳನ್ನೂ ಲೋಟಗಳನ್ನೂ ಬಳಸಲು ತೊಡಗಿದಾಗ ನಮ್ಮನೆಯಲ್ಲಿ ಮಾತ್ರ ಹಳೇ ಪಾತ್ರೆಗಳಿದ್ದರೆ ಮಾರ್ಯದೆಗೆ ಕಮ್ಮಿ ಎಂದು ಚಿಕ್ಕಪ್ಪಂದಿರು ಎಲ್ಲಿಂದಲೋ ಸ್ಟೀಲ್ ಪಾತ್ರೆಗಳನ್ನು ಖರೀದಿಸಿ ತಂದರು. ಹೊಸದಾಗಿ ಹೊಳೆಯುತ್ತಿದ್ದ ಲೋಟಗಳಲ್ಲಿ ಏನನ್ನಾದರೂ ಹಾಕಿಸಿಕೊಂಡು ಕುಡಿಯುವುದೇ ನಮ್ಮಂಥಾ ಮಕ್ಕಳಿಗೆ ಒಂದು ಗತ್ತು ! [ಅದು ಅಂದಿನ ದೊಡ್ಡವರಿಗೂ ಸಹ!] ಹೊಳೆಯುವ ಪಾತ್ರೆಗಳ ನಕಲೀ ವೈಖರಿಯ ಮುಂದೆ ಶುಭ್ರವಾದ, ಆರೋಗ್ಯಕರವಾದ ಮಣ್ಣಿನ ಮಡಕೆಗಳು ಒಂದೊಂದಾಗಿ ಹೀಗಳೆಯಲ್ಪಟ್ಟು ಅಟ್ಟಸೇರಿದವು. ಕೆಲವು ಹೆಂಗಸರು ಬಹಳಕಾಲದ ತಮ್ಮ ಕೋಪವನ್ನು ಅವುಗಳ ಮೇಲೆ ತೀರಿಸಿಕೊಂಡರೋ ಗೊತ್ತಿಲ್ಲ, ಕೆಲವು ಮಡಕೆಗಳು ಒಡೆದು ತೋಟದ ಮರದಬುಡದಲ್ಲಿ ಹೋಗಿ ಬಿದ್ದವು! ಅಟ್ಟವೇರಿದ ಮಡಕೆಗಳು-ಕುಡಿಕೆಗಳು ಧೂಳುಹಿಡಿದ ದಯನೀಯ ಸ್ಥಿತಿಯಲ್ಲಿ ನಮ್ಮನ್ನು ಆಗಾಗ ನೋಡುತ್ತಿದ್ದವು!

ಅಜ್ಜ ಕೊಟ್ಟ ಹಣದಲ್ಲಿ ಕೊತ್ತಂಬರಿ ಕರಡಿಗೆಯಲ್ಲಿ ಬಿಸ್ಕಿಟ್ ಪೊಟ್ಟಣದ ಜೊತೆ ಇಟ್ಟಿದ್ದ ಮೂರು ರೂಪಾಯಿಗಳನ್ನು ಒಯ್ದು ಅಜ್ಜಿ ಜಾತ್ರೆಯಲ್ಲಿ ಬಹಳಹೊತ್ತು ಕೂತು ಆಸ್ಥೆಯಿಂದ ಸೋರದ ಮತ್ತು ಆಕಾರಬದ್ಧವಾಗಿರುವ ಮಣ್ಣಿನ ಪಾತ್ರೆಗಳನ್ನು ತಂದಿದ್ದಳು. ಬಹಳ ಪ್ರೀತಿಯಿಂದ ಅವು ಒಡೆಯದ ಹಾಗೇ ಚೂಳಿಯಲ್ಲಿ ಹುಲ್ಲಿನಮೇಲೆ ಜೋಡಿಸಿಕೊಂಡು ಆಳಿನಕೈಲಿ ಹೊರಿಸಿಕೊಂಡು ಬಂದಿದ್ದಳು. ಹುಳಿಗೆ ಇಂಥದ್ದು, ಸಾರಿಗೆ ಓ ಇದು, ಸಾಸಿವೆ ಮಾಡುವಾಗ ಇದು, ಗೊಜ್ಜು ಹಾಕಿಡುವುದು ಇದರಲ್ಲಿ, ಇದರಲ್ಲಿ ತಂಬ್ಳಿಮಾಡಿದರೆ ನಮ್ಮನೆಯಲ್ಲಿ ಎಲ್ಲರಿಗೂ ಸಾಲುತ್ತದೆ, ಮತ್ತೆ ಓ ಈ ಚಿಕ್ಕದಿದೆಯಲ್ಲಾ ಅದು ಹತ್ತನಗೊಜ್ಜಿಗೆ ...ಹೀಗೇ ಆರಿಸಿ ಆರಿಸಿ ಪಾತ್ರೆಗಳು ನಿರ್ವಹಿಸಿಬೇಕಾದ ಪಾತ್ರಗಳನ್ನು ಮೊದಲೇ ಹಂಚಿಬಿಟ್ಟಿದ್ದಳು. ಪ್ರತಿಯೊಂದೂ ಪಾತ್ರೆ ಅವಳ ಪ್ರೀತಿಯ ಕರಗಳಲ್ಲಿ ಸಿಕ್ಕಾಗ ಮುದ್ದಿನ ಮಗುವಿನಂತೇ ಆಡುತ್ತಿತ್ತು; ಜೀವವಿಲ್ಲದ ಪಾತ್ರೆಗಳು ಸಜೀವಿಗಳ ರೀತಿ ಅಮ್ಮನ ಜೀವನದ ಭಾಗವಾಗಿದ್ದವು, ಅವಳೊಂದಿಗೆ ಮಾತನಾಡುತ್ತಿದ್ದವು, ಅವಳ ಸ್ಪರ್ಶದಿಂದ ಪುಳಕಗೊಳ್ಳುತ್ತಿದ್ದವು, ಅವಳ ಕೈಲೇ ನಿತ್ಯ ಸ್ನಾನಮಾಡಿಸಿ, ಕೂದಲು ಬಾಚಿಸಿಕೊಳ್ಳುತ್ತಿದ್ದವು! ಕಪ್ಪಿನದು, ಕಡುಗಪ್ಪಿನದು, ಮಣ್ಣಿನ ಬಣ್ಣದ್ದು, ನಸುಗೆಂಪಿನದು, ನಸುಗೆಂಪಿನ ಮೈಗೆ ಒಂದು ಭಾಗದಲ್ಲಿ ಕಪ್ಪು ಬಣ್ಣ ಹೊಂದಿರುವುದು ಹೀಗೇ ಅವುಗಳ ಬಣ್ಣಗಳು. ಒಂದೊಂದು ಪಾತ್ರೆಯೂ ನಿಧಾನಕ್ಕೆ ತಟ್ಟಿದರೆ ಒಂದೊಂದು ಸ್ವರ ಹೊರಡಿಸುತ್ತಿತ್ತು.

ನಾನು ಕಲಿತು ಬೆಂಗಳೂರಿಗೆ ಸೇರುವ ಹೊತ್ತಿನಲ್ಲಿ ಅಮ್ಮ ಮುದುಕಾಗಿದ್ದಳು. ಅಜಮಾಸು ೬೮-೬೯ ವರ್ಷ. ಅಡಿಗೆಮಾಡಲು ಆಗುತ್ತಿರಲಿಲ್ಲ; ಮಾಡುವುದು ಬೇಕಾಗೂ ಇರಲಿಲ್ಲ. ಆ ಸಮಯ ನಮ್ಮ ಅಡುಗೆ ಮನೆಯಲ್ಲಿ ಮಣ್ಣಪಾತ್ರೆಗಳು ಇರಲೇ ಇಲ್ಲ. ಅಟ್ಟದಮೇಲೆ ಕೆಲವು ಮಾತ್ರ ಇದ್ದವು. ಅಮ್ಮ ಅಪರೂಪಕ್ಕೆ ಹಠಮಾಡಿ ಅವುಗಳನ್ನು ಕೆಳತರಿಸಿಕೊಂಡು ಅವುಗಳಲ್ಲಿ ಏನನ್ನಾದರೂ ಮಾಡುತ್ತಿದ್ದಳು. ಬೆಂಗಳೂರಿಂದ ಮನೆಗೆ ಬರುವ ಪೌಲ್ದಾರನಂಥಾ ಮೊಮ್ಮಗನಿಗೆ ಬರುವ ಸುದ್ದಿ ಕೇಳೇ ಮಣ್ಣಿನ ಪಾತ್ರೆಗಳಲ್ಲಿ ಏನದರೂ ಪದಾರ್ಥಗಳನ್ನು ಪ್ರೀತಿಯಿಂದ ತಾನೇ ಮಾಡುತ್ತಿದ್ದಳು. " ಬೋಗುಣಿಯಲ್ಲಿ ಸೌತೇಕಾಯಿ ಸಾಸಿವೆ, ಕೆಸುವಿನ ಸೊಪ್ಪಿನ ಕರ್ಗ್ಲಿ ಮಾಡಿದ್ದೇನೆ ಮಗಾ ಎಷ್ಟು ರುಚಿಯಾಗಿದೆ ನೋಡು" ಎಂದು ಅವರು ಕರೆದರೆ ಕಿವಿ ನಿಮಿರುತ್ತಿತ್ತು; ಯಾಕೆಂದರೆ ಒಳಕಲ್ಲಿನಲ್ಲಿ ರುಬ್ಬಿ ಹಾಕಿದ ಪದಾರ್ಥವನ್ನು ಮಣ್ಣಿನ ಪಾತ್ರೆಗಳಲ್ಲಿ ಹದಗೊಳಿಸಿದಾಗ ಸಿಗುವ ಸ್ವಾದ ಇಂದಿನ ಟಪ್ಪರವೇರ್ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಸಿಗುವುದಿಲ್ಲ, ಯಾವುದೇ ಸ್ಟೀಲ್ ಪಾತ್ರೆಗಳಲ್ಲೂ ಸಿಗುವುದಿಲ್ಲ. ಮಣ್ಣಿನ ಮಡಿಕೆ-ಕುಡಿಕೆಗಳಲ್ಲಿ ಬೆಂದ ಆಹಾರದ ರುಚಿಗಟ್ಟು ಕುಕ್ಕರ್ ಒಳಗೇ ಬೆಂದ ಆಹಾರಕ್ಕೆ ದಕ್ಕುವುದಿಲ್ಲ!

೧೯೯೪ ರಲ್ಲಿ ಅಂದರೆ ಬೆಂಗಳೂರಿಗೆ ನಾನು ಬಂದ ಒಂದೇ ವರ್ಷದಲ್ಲಿ ಅಜ್ಜಿ ತೀರಿಕೊಂಡಳು. ಗತಿಸಿದ ಅಮ್ಮನೊಡನೆ ಮಡಿಕೆಗಳೂ ಕಾಲಗರ್ಭದ ಇತಿಹಾಸದ ಪುಟಗಳಾದವು. ಕಾಲ ಬದಲಾಗಿ ಹೋಯ್ತು. ಗ್ರಾಮೀಣ ಭಾಗಕ್ಕೂ ಕುಕ್ಕರ್ ಗಳು ಬಂದವು, ಗಿಡಮರಗಳೆಲ್ಲ ಸಂಖ್ಯಾಬಲದಲ್ಲಿ ಮೈನಾರಿಟಿಗೆ ಸೇರಿದವು ! ಹಿಂದಕ್ಕೆ ಹಿಂದಕ್ಕೆ ಹೊರಳಿ ನೋಡಿದಾಗ ಅಂದಿನ ನಮ್ಮ ದಿನಗಳಲ್ಲಿ ಇದ್ದ ಗಣಪತಜ್ಜ, ಮಂಜ್ನಾಥ ಮಾವ, ಪಟೇಲಜ್ಜ, ಗೌಡ್ರಕೇರಿ ಚಂದ್ರು, ಹರಿಜನ ಸಂಕ್ರು, ದೇವಪ್ಪ ಶೆಟ್ಟರು, ಮಿಡಿ ಆಚಾರಿ ಎಲ್ಲರೂ ಸಿಕ್ಕು ಮಾತಾಡುತ್ತಿರುತ್ತಾರೆ! ಹಾಗೇ ಆ ಎಳವೆಯ ದಿನಗಳಲ್ಲಿ ಎಲ್ಲವೂ ಸುಂದರ, ಎಲ್ಲರೂ ಹತ್ತಿರ! ಜೀಮೇಲೂ ಇಲ್ಲ, ಈಮೇಲೂ ಇಲ್ಲ; ಇದ್ದವರೆಲ್ಲಾ ಮೇಲು ಮತ್ತು ಫೀಮೇಲುಗಳು ಮಾತ್ರ. ಇದ್ದವರಲ್ಲಿ ಜೀವಂತಿಕೆಯಿತ್ತು, ಪರಸ್ಪರ ಸೌಹಾರ್ದವಿತ್ತು. ಜೀವನದಲ್ಲಿ ಅತಿಯಾದ ಆಸೆಯಿರಲಿಲ್ಲ, ಅತಿರೇಕದ ಸಿರಿವಂತಿಕೆಯ ಸೋಗಿರಲಿಲ್ಲ, ಆಕಾಶಕ್ಕೆ ಏಣಿಹಾಕುವ ಹುಚ್ಚು ಹಂಬಲವಿರಲಿಲ್ಲ.

ಆಧುನಿಕತೆ ಕಾಲಿಟ್ಟಂತೇ ಮಾನವೀಯ ಮೌಲ್ಯಗಳು ಮರೆತುಹೋದವು, ದುಡ್ಡೇ ದೊಡ್ಡಪ್ಪನಾಗಿ ಸದ್ಗುಣಿಗಳು ಮರೆಯಾಗತೊಡಗಿದರು. ಊರಜನರ ವ್ಯಾವಹಾರಿಕ ಚಾತುರ್ಯ ಕುಹಕವನ್ನೂ ಅಳವಡಿಸಿಕೊಂಡಿತು. ಮರಗಿಡಗಳು ಕಮ್ಮಿಯಾದವು, ಮನೆಗಳು ಜಾಸ್ತಿಯಾಗಿ ಹತ್ತಿರ ಹತ್ತಿರವಾದವು ಆದರೆ ಮನಗಳು ಮಾತ್ರ ದೂರ ದೂರ ಸರಿದವು. ಶಂಕ್ರಣ್ಣ ಪೇಟೆಗೆ ಹೋದರೆ ಅಕ್ಕ-ಪಕ್ಕದ ಮನೆಗಳಿಗೆ ಬೇಕಾದ್ದೂ ಬರುತ್ತಿತ್ತು, ಮತ್ತೊಂದಿನ ಮಾದೇವಣ್ಣನ ಪಾಳಿ! ಇಂದು ಹಾಗಿಲ್ಲ, ಚಿಕ್ಕ ಸಾಮಾನು ಹಳ್ಳಿಗಳಲ್ಲಿ ಸಿಗದ ಔಷಧಿಮಾತ್ರೆಗಳು ಎಲ್ಲಕ್ಕೂ ಅವರವರ ಮನೆಯವರೇ ಹೋಗಬೇಕು. ಯಾರೂ ಯಾರಿಗೂ ಆಪ್ತರಲ್ಲ; ಒಟ್ಟಾರೆ ಇರಬೇಕು, ಇದ್ದಾರೆ! ಗಣಪತಜ್ಜ ಅಪರೂಪಕ್ಕೆ ಅನ್ನದ ಕೇಸ್ರೀಬಾತು ಮಾಡಿಸಿದ್ದರೆ ಒಂದೊಂದೇ ಚಮಚೆಯಷ್ಟು ಬಂದರೂ ಸರಿ ನಮ್ಮಂತಹ ಪೋರಗಳನ್ನೂ ಕರೆದು ಹಂಚುವ ವೈವಾಟಿತ್ತು. ಹಲವರ ಬಾಯಲ್ಲಿ ನಲಿದ ಕೇಸ್ರೀಬಾತನ್ನು ನೋಡಿದಾಗ ಗಣಪತಜ್ಜನ ಬಾಯಲ್ಲಿ ಕೇಸ್ರೀಬಾತು ಇನ್ನೂ ರುಚಿಸುತ್ತಿತ್ತು. ಮದುವೆ-ಮುಂಜಿಗಳಲ್ಲಿ ಪರಸ್ಪರ ಅಡುಗೆಮಾಡುವುದು, ಬಡಿಸುವುದು ಇತ್ಯಾದಿ ಕೆಲಸಗಳಲ್ಲಿ ಅನುವಾಗುತ್ತಿದ್ದ ಜನ ಈಗ ಅಡುಗೆ ಭಟ್ಟರುಗಳನ್ನು ಆಶ್ರಯಿಸಿದ್ದಾರೆ; ಕರೆದರೂ ಊಟದ ಹೊತ್ತಿಗೆ ಬಂದು ಹೋಗಲು ತುಟ್ಟಿ! ಗತಿಸಿದ ಆ ಕಾಲಘಟ್ಟವನ್ನು ಆಗಾಗ ನೆನೆದಾಗ ನನ್ನ ಮನ ನೆನೆಯುವ ನೆನೆದು ಮುದಗೊಳ್ಳುವ ಹಾಡು


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ........ ನಮಸ್ಕಾರ.


14 comments:

  1. ಭಟ್ಟರೆ..

    ಬೆಳಿಗ್ಗೆ ಬೆಳಿಗ್ಗೆ ಹಳ್ಳಿಗೆ ಕರೆದುಕೊಂಡು ಹೋಗಿಬಿಟ್ಟಿದ್ದಿರಲ್ಲ..

    ಲೇಖನ ಓದಿ ನಮ್ಮಜ್ಜಿಯ ನೆನಪಾಯ್ತು..
    Thank u very much !!

    ReplyDelete
  2. ತುಂಬ ಆಪ್ತವಾದ ಬರಹ. ಇಷ್ಟವಾಯಿತು.

    ReplyDelete
  3. ಲೇಖನವನ್ನು ಸುಮ್ಮನೆ ತೆಗೆದವನು ಎಕ್ಸಾಮಿಗೆ ಬಿಟ್ಟು ಇದನ್ನು ಓದುತ್ತಾ ಕುಳಿತೆ... ಎನೋ ಮೊದಲೇ ಅಬ್ಬೆಗೆ(ಅಜ್ಜಿ, ಅಪ್ಪಾಜಿ ಅವರನ್ನು ಹಾಗೆ ಕರೆಯುವುದರಿಂದ ನಾನು ಹಾಗೇ ಕರೆಯುತ್ತೇನೆ) ಹುಷಾರಿಲ್ಲ ಎಂದು ತಿಳಿದರೂ ಏನೂ ಅನ್ನಿಸಲೇ ಇಲ್ಲ... ನಾನು ಹಾಗೆಲ್ಲಾ ಸುಮ್ಮನೆ ತಲೆ ಕೆಡಿಸಿಕೊಳ್ಳುವವನೂ ಅಲ್ಲ..
    ಆದರೆ ಈ ಲೇಖನ ಓದುತ್ತಿದ್ದಂತೆ ಅವಳು ನೆನಪಾದಳು.. ಅವಳ ಶೀಯಾ ಗೊಜ್ಜು( ಸಿಹಿ ಗೊಜ್ಜು) ನೆನಪಾಯಿತು..ಯಾರೇ ಬರಲಿ ಖಾಯಂ ಆದ ಶಿರಾ ನೆನಪಾಯಿತು..ಅಪ್ಪಾ- ಅಮ್ಮ " ಅದ್ನೆಲ್ಲಾ ತಿಂಬಲಾಗ,ಯಾವ್ ನೀರಾ ಎನ ಬೇಡಾ "ಎಂದಾಗ ,ಐಸ್ ಕ್ಯಾಂಡಿ ತಿನ್ನಲು ಅಜ್ಜಿ ಕೊಟ್ಟ ೫೦ ಪೈಸೆಯ ಎರಡು ನಾಣ್ಯ ನೆನಪಾಯಿತು..ಇಂಜಿನೀರಿಂಗ್ ಕಲಿಯಲು ಚಿಕ್ಕಮಗಳೂರಿಗೆ ಹೋಗಬೇಕು ಎಂದಾಗ " ಶಿರಸಿಲಿ ಅದ್ ಇಲ್ಯಾ?? ಚೆ.. ಎಲ್ಲದು ಮಾಡ್ತ, ಆ ಕಾಲೇಜ್ ನೂ ಮಾಡ್ಲಾಗಿತ್ತು" ಎಂಬ ಹಂಬಲ ಕಿವಿಯಲ್ಲಿ ಗುಯ್ ಅಂತು... ಯಾವಾಗಲೂ ನಾ ಮನೆಯಿಂದ ಹೊರಡುವಾಗ ಅಬ್ಬೆಗೂ,ದೇವರಿಗೂ ಕೈ ಮುಗಿಯುವುದು ವಾಡಿಕೆ.. "ತಮ್ಮಾ, ತಡಿ ದೇವರ ಮುಂದೆ ದೀಪ ಇಲ್ದೇ ಕೈ ಮುಗ್ಯಲಾಗಾ.." ಎಂದು ಮಬ್ಬು ಗಣ್ಣಿನಲ್ಲೇ ದೀಪ ಹಚ್ಚುವ ಪರಿ ನೆನಪಾಯಿತು........ಇದೀಗ publish ಎಂದು ಕೊಟ್ಟು ಕಣ್ಣು ಮುಚ್ಚಿದರೆ , ಬೆನ್ನು ಬಾಗಿ ಮಾಳಿಗೆಯಿಂದ ಬರುವ ಅಬ್ಬೆ " ತಮಾ ಬಂದ್ಯ..ಕುತ್ಕ...ಆಸ್ರೀಗ್ ಕೊಡ್ತಿ " ಅನ್ನುತ್ತಾಳೇನೋ...!!!!!


    ಕಣ್ಣೀರಿನ ಹನಿಯ ಸಾಕ್ಶಿಯೊಂದಿಗೆ,
    ಧನ್ಯವಾದಗಳು.

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್
    http://chinmaysbhat.blogspot.com/

    ReplyDelete
  4. ನನ್ನ ಹಳ್ಳಿ ಗತವನ್ನು ನೆನಪಿಸಿಕೊಟ್ರಿ ಸಾರ್.

    "ಇದು ಈ ತಿಂಗಳ ಅತ್ಯುತ್ತಮ ಬರಹ."

    ReplyDelete
  5. ಮ್.. ನಿಮ್ಮ ಬಾಲ್ಯದ ದಿನಗಳನ್ನು ಮೆಲುಕಾಡಿದ್ದೀರಿ. ಅದರಿಂದ ನಮ್ಮ ದಿನಗಳೂ ನೆನಪಿಗೆ ಬಂತು...

    ReplyDelete
  6. ತುಂಬಾ ಚೆನ್ನಾಗಿದೆ. ನನಗೆ ನನ್ನಜ್ಜನ ಮನೆ, ನನ್ನ ಅಜ್ಜಿ ಅಂದ್ರೆ ’ಅವ್ವಾ’, ಆ ಬಾಲ್ಯಕಾಲದ ಸಾಹಸಗಳೆಲ್ಲಾ ನೆನಪಿಗೆ ಬಂದವು. ಇಂದಿಗೂ ಆ ನನ್ನಜ್ಜನ ಮನೆಯ ನೆನಪುಗಳ ಬಗ್ಗೆ ದೆಹಲಿಯಲ್ಲಿರುವ ನನ್ನಣ್ಣ ಪುರುಷೋತ್ತಮ ಬಿಳಿಮಲೆ ನಾವು ಆಗಾಗ ಮಾತಾಡಿಕಳ್ಳುತ್ತೇವೆ. ನಮ್ಮಜ್ಜಿ ಚೆರಶಾಂತಿಯಲ್ಲಿ ಮಲಗಿದ ಜಾಗವನ್ನು ಜಾಗವನ್ನೊಮ್ಮೆ ನೋಡಬೇಕು ಅಂದುಕೊಳ್ಳುತ್ತೇವೆಯೇ ಹೊರತು ಹೋಗಲು ಇದುವರೆಗೂ ಸಾಧ್ಯವಾಗಿಲ್ಲ. ಈ ನಮ್ಮ ಮನಸ್ಥಿತಿಯನ್ನು ಏನೆಂದು ಕರೆಯಬೇಕೋ ನನಗರ್ಥವಾಗುತ್ತಿಲ್ಲ!

    ReplyDelete
  7. ಎಲ್ಲಿ ಹೋದವೊ ಗೆಳೆಯಾ,ಆ ಕಾಲ?

    ReplyDelete
  8. ನಿಮ್ಮ ನೆನಪುಗಳ ಮೆರವಣಿಗೆಯಲ್ಲಿ ನಾನೂ ಭಾಗವಹಿಸಿದ್ದೆ ಸರ್, ಧನ್ಯವಾದಗಳು.

    ReplyDelete
  9. ಭಟ್ ಸರ್;ಚಂದದ ಬರಹ.ಬಾಲ್ಯ,ನಮ್ಮ ಹಳ್ಳಿ,ಆಗಿನ ಅಲ್ಲಿಯ ಜನ,ಅವರ ಪ್ರೀತಿ, ಎಲ್ಲಾ ನೆನಪಾಯಿತು.ಧನ್ಯವಾದಗಳು.ನಮಸ್ಕಾರ.

    ReplyDelete
  10. ವಿ,ಆರ್.ಬಿ ಸರ್..ನನಗೂ ಹಳ್ಳಿಯಲ್ಲಿ ಕಳೆದ ಬಾಲ್ಯಕ್ಕೆ ಹೋದ ಅನುಭವ. ರೇಷ್ಮೆ ಕೃಷಿ ಹೆಚ್ಚು ನಮ್ಮಲ್ಲಿ. ಸೊಪ್ಪಿನ ಮೂಟೆಗಳನ್ನು ಹೊತ್ತು ಎತ್ತಿನ ಗಾಡಿಯಲ್ಲಿ ಸಂಜೆ ವಾಪಸ್ಸಾಗುತ್ತಿದ್ದ ದಿನಗಳು...
    ಚನ್ನಾಗಿದೆ..ನೆನಪು ಹಸಿರಾಗಿಸುವ ಲೇಖನ

    ReplyDelete
  11. ಹಳ್ಳಿಯ ಅನುಭವವಿಲ್ಲದ ನನಗೆ ’ಈ ಪರಿಯ ಸೊಬಗ” ಓದುವುದೇ ಮಹದಾನ೦ದ.
    ಅಭಿನ೦ದನೆಗಳು.

    ಅನ೦ತ್

    ReplyDelete
  12. ಪ್ರೀತಿಯ ಸ್ನೇಹಿತರೇ, ನನ್ನ ಬಾಲ್ಯದ ದಿನಗಳನ್ನು ಹಲವು ಎಪಿಸೋಡ್ ಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಲೇ ಬಂದಿದ್ದೇನೆ, ಕೆಲವು ಲಲಿತ ಪ್ರಬಂಧಗಳಾದರೆ ಇನ್ನೂ ಕೆಲವು ಪ್ರಬಂಧಗಳಾಗಿವೆ. ಎಲ್ಲವನ್ನೂ ನೀವು ಆತ್ಮೀಯವಾಗಿ ಸ್ವಾಗತಿಸಿ ಓದಿ, ಆಸ್ವಾದಿಸಿದ್ದೀರಿ. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಪ್ರತ್ಯೇಕವಾಗಿ ಉತ್ತರಸುವ ಸಮಯವನ್ನು ಮತ್ತೆಲ್ಲೋ ನನ್ನ ಬರಹಗಳ ಬಗ್ಗೆ ಬಳಸಬಹುದು ಎಂಬ ಹಂಬಲದಿಂದ ನಿಮ್ಮೆಲ್ಲರಿಗೂ ಸಾಮೂಹಿಕವಾಗಿ ಸಲಾಮು ಸಲ್ಲಿಸುತ್ತಿದ್ದೇನೆ, ನಿಮ್ಮ ಓದಿಗೆ-ಪ್ರತಿಕ್ರಿಯೆಗೆ ಈ ರೀತಿಯಲ್ಲಿ ಅಭಾರಿಯಾಗಿದ್ದೇನೆ, ಸಹಕರಿಸಿ, ನಮಸ್ಕಾರ.

    ReplyDelete
  13. ಬಾಲ್ಯದ ನೆನಹನ್ನೂ ಹರಹಿ ನಿಮ್ಮ ಮನ ಹಗುರ ಮಾಡಿಕೊಂಡದ್ದಲ್ಲದೆ...ನಮಗೂ ನೀಡಿ ನಮ್ಮ ಬಾಲ್ಯದ ನೆನಪಿ ಕೆಣಕಿ ನಮ್ಮ ಮನಗಳನ್ನು ಮುದವನ್ನಾಗಿಸಿದ್ದ್ದಿರಿ ಭಟ್ಟರೇ,,, ಧನ್ಯವಾದಗಳು

    ReplyDelete
  14. ಓದುತ್ತಿದ್ದರೆ ಹಾಗೆ ಮನದಲ್ಲಿ ನೆನಪುಗಳ ಸುರಿಮಳೆಯಗುತ್ತಿತ್ತು.. ಬಹಳ ಚೆನ್ನಾಗಿ ಬರೆದಿದ್ದೀರಿ ಸಾರ್...

    ReplyDelete