ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 6, 2011

|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


’ಅಮ್ಮ’ ಎಂಬ ಶಬ್ದದ ಬಗ್ಗೆ ವರ್ಣನೆ ಮಾಡುವುದು ಬೇಕಾಗುವುದಿಲ್ಲ ಯಾಕೆಂದರೆ ಅದರ ತಾಕತ್ತೇ ಅಂಥದ್ದಿದೆ. ಹುಟ್ಟಿದ ಪ್ರತಿಯೊಂದೂ ಜೀವಿಗೂ ಅಮ್ಮ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜನ್ಮವೀಯುತ್ತಾಳೆ. ಬಹುತೇಕ ಸಸ್ತನಿಗಳಲ್ಲಿ ನೇರವಾದ ಜನ್ಮವಾದರೆ ಕೆಲವು ಸರೀಸೃಪಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಮೊಟ್ಟೆಯ ರೂಪದಲ್ಲಿ ಅಮ್ಮ ಜನ್ಮವೀಯುತ್ತಾಳೆ. ಅಂತಹ ಸಾವಿರಕೋಟಿ ಅಮ್ಮಂದಿರ ಹುಟ್ಟಿಗೂ ಕಾರಣವಾದ ಒಬ್ಬ ಅಮ್ಮ ಇರಬೇಕಲ್ಲ ? ಆ ರೂಪವನ್ನೇ ’ಆದಿಶಕ್ತಿ’ ಎಂದೂ ಜಗನ್ಮಾತೆ ಎಂದೂ ಋಷಿಗಳು ಹೆಸರಿಸಿದರು. ದೇವನೊಬ್ಬನೇ ಆದರೂ ಆತನ ಬಹುರೂಪಗಳನ್ನು ಕಂಡ ಅದೇ ಮಹನೀಯರು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಅಲ್ಲಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳಲ್ಲಿ ನವದುರ್ಗೆಯರು, ಸಪ್ತಮಾತೃಕೆಯರು, ತ್ರಿಮೂರ್ತಿಗಳ ಹೆಂಡಂದಿರು ಮತ್ತು ಆ ಮೂರು ರೂಪಗಳ ಸಮ್ಮಿಲನದ ಶ್ರೀರಾಜರಾಜೇಶ್ವರೀ ರೂಪವನ್ನೂ ಅವರು ಗುಣಗಾನಮಾಡಿದರು.

ಆರಾಧನೆಯ ಕಾಲದಲ್ಲಿ ವರ್ಷದ ಕೆಲವು ಭಾಗಗಳನ್ನು ಹೀಗೀಗೆ ಅಂತ ತಿಳಿಸಿಕೊಟ್ಟು ಅವುಗಳ ಸಂದರ್ಭದ ಮಹತ್ವವನ್ನೂ ಔಚಿತ್ಯವನ್ನೂ ತಿಳಿಸಿಕೊಟ್ಟರು. ವೇದಗಳಲ್ಲಿ ಅಡಕವಾಗಿರುವ ರೀತಿಯಲ್ಲಿ ಹೇಳಬಹುದಾದರೆ ಶ್ರೀಸೂಕ್ತ, ಸರಸ್ವತೀ ಸೂಕ್ತ, ದುರ್ಗಾಸೂಕ್ತಗಳೇ ಮೊದಲಾದ ಕೆಲವು ಸೂಕ್ತಗಳಿಂದ ಅಮ್ಮನನ್ನು ಅರ್ಚಿಸಿದರು. ಇದನ್ನೇ ಪ್ರತಿಪಾದಿಸಿದ ನಮ್ಮ ಯುಗದ ಪ್ರಮುಖ ಅದ್ವರ್ಯುವಾದ ಭಗವತ್ಪಾದ ಶ್ರೀ ಆದಿಶಂಕರರು ಅಮ್ಮನನ್ನು ಆಜನ್ಮ ಪರ್ಯಂತ ಹಲವು ರೂಪಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಕಂಡರು, ಹಲವು ಕಾರಣಿಕ ಸನ್ನಿಧಾನಗಳನ್ನು ಸೃಜಿಸಿ ಅಲ್ಲೆಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು ಎಂಬುದನ್ನು ನಾವೆಲ್ಲಾ ಓದುತ್ತಾ ತಿಳಿದಿದ್ದೇವೆ, ತಿರುಗುತ್ತಾ ಅವರು ಸ್ಥಾಪಿಸಿದ ಮೂರ್ತಿಗಳಲ್ಲಿ ಅಮ್ಮನನ್ನು ದರ್ಶನಮಾಡಿದ್ದೇವೆ. ಆಚಾರ್ಯ ಶಂಕರರಷ್ಟು ಅಮ್ಮನನ್ನು ಭಜಿಸಿದ ಸನ್ಯಾಸಿಗಳು, ಸಂತರು ಭೂಮಿಯಲ್ಲಿ ಈಗ ಸಿಗುವುದು ವಿರಳ. ಅವರು ರಚಿಸಿದ ಸ್ತೋತ್ರಗಳು, ಸ್ತುತಿಗೀತೆಗಳು ಗೇಯವೂ ಮನೋಹರವೂ ಆಗಿವೆ ಎಂಬುದಕ್ಕೆ ನಿತ್ಯವೂ ನಾವು ರೇಡಿಯೋ, ಮಾಧ್ಯಮಗಳಲ್ಲಿ ಕೇಳುವ ಅವರ ಹಲವು ಕೃತಿಗಳೇ ಸಾಕ್ಷಿಯಾಗಿವೆ. ಪ್ರಾಸಬದ್ಧವಾಗಿ ಅನೇಕ ಸ್ತೋತ್ರಗಳನ್ನು ಅವರು ರಚಿಸುವಾಗ ಅವುಗಳಲ್ಲಿ ಜಗತ್ತಿನ ಭಾಷೆಗಳಿಗೆ ಮಾತೃಭಾಷೆಯಾದ ಸಂಸ್ಕೃತಭಾಷೆಯ ಉತ್ಕೃಷ್ಟ ಪದಗಳನ್ನು ಪೋಣಿಸಿದ ಶೈಲಿಯನ್ನು ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ.

ಅಂತಹ ಕೃತಿಗಳನ್ನು ಅರ್ಥವಿಸಿಕೊಂಡು ಆಸ್ವಾದಿಸಿದರೆ ಮಾತ್ರ ಶಂಕರರು ಯಾಕೆ ಹೀಗೆ ಹೇಳಿದರು ಎಂಬುದು ತಿಳಿಯುತ್ತದೆಯೇ ವಿನಃ ಬರಿದೇ ಕಿವಿಗೆ ಮುದನೀಡುತ್ತದೆ ಎಂಬ ಕಾರಣಕ್ಕೆ ಸಿನಿಮಾ ಹಾಡುಗಳಂತೇ ಕೇಳಿಬಿಟ್ಟರೆ ಅವುಗಳ ಮೂಲ ರಸಾಭಿಜ್ಞತೆ ನಮಗೆ ನಿಲುಕುವುದಿಲ್ಲ. ಭಗವಾನ್ ಶ್ರೀಧರ ಸ್ವಾಮಿಗಳು ಒಮ್ಮೆ ಊರೊಂದಕ್ಕೆ ಭೇಟಿ ನೀಡಿ ಗುಡ್ಡದಲ್ಲಿ ನೆಲೆಸಿರುವ ಅಮ್ಮನನ್ನು ದರ್ಶಿಸುತ್ತಾರೆ. ಅಲ್ಲಿನ ಬಡ ಬ್ರಾಹ್ಮಣ ಅರ್ಚಕರಿಗೆ ಯಾವುದೇ ಸೌಲತ್ತು ಇಲ್ಲವಾಗಿ ಅಲ್ಲಿ ಪೂಜೋಪಕರಣಗಳ ಕೊರತೆ ಇದ್ದುದು ಶ್ರೀಧರರಿಗೆ ಕಾಣುತ್ತದೆ. [ತಾವು ಮೊದಲು ಉಪಯೋಗಿಸುತ್ತಿದ್ದ ಮರದ ಪಂಚಪಾತ್ರೆ-ಉದ್ದರಣೆಗಳನ್ನೇ ಇಟ್ಟುಕೊಂಡು]ತಮಗೆ ಯಾರೋ ಶ್ರೀಮಂತ ಭಕ್ತರು ಅರ್ಪಿಸಿದ್ದ ಬೆಳ್ಳಿಯ ಪೂಜೋಪಕರಣಗಳನ್ನು ಅಲ್ಲಿನ ಅರ್ಚಕರಿಗೆ ಬಳಸಲು ನೀಡಿ ಅಮ್ಮನಿಗೆ ಹೊಸ ಸೀರೆಯೊಂದನ್ನು ತರಿಸಿಕೊಟ್ಟು ಅಲಂಕರಿಸಿ ಪೂಜಿಸಿದ್ದನ್ನು ತಾವು ನೋಡುವಾಗ ವಿಗ್ರಹದ ಕಣ್ಣಲ್ಲಿ ಧಾರಾಕಾರವಾಗಿ ನೀರುಹರಿಯಿತಂತೆ! ಇದಕ್ಕೆ ದಾಖಲೆಗಳಿವೆ ಎಂದರಾದರೂ ನೀವು ನಂಬುತ್ತೀರೇನೋ.

ಇಂಥಾ ಅಮ್ಮನನ್ನು ಶರತ್ ಕಾಲದಲ್ಲಿ ನವದಿನಗಳಲ್ಲಿ ನವದುರ್ಗೆಯರೂಪದಲ್ಲಿ, ಲಕ್ಷ್ಮೀ ಪಾರ್ವತೀ ಸರಸ್ವತೀ ರೂಪದಲ್ಲಿ ಆರಾಧಿಸುವುದನ್ನು ಭಾರತವಾಸಿಗಳು ಸಹಸ್ರಮಾನಗಳಿಂದ ಆಚರಿಸುತ್ತಿದ್ದಾರೆ. || ನವೋ ನವೋ ಭವತಿ ಜಾಯಮಾನಃ || ಜಾಯಮಾನ ಕಾಲಮಾನ ಬದಲಾದರೂ ಅಮ್ಮನನ್ನು ಮರೆಯಲು ಸಾಧ್ಯವಾಗುವುದಿಲ್ಲ ಮತ್ತು ಅದು ವಿಹಿತವೂ ಅಲ್ಲ. ನವರಾತ್ರಿ ಪ್ರತೀ ಸಂವತ್ಸರದಲ್ಲೂ ಮೂರು ಬಾರಿ ಬರುತ್ತದೆ, ಆದರೆ ಬರುವ ಮೂರು ನವರಾತ್ರಿಗಳಲ್ಲಿ ಎರಡು ಬಹಳ ವಿಶೇಷ, ಮೊದಲನೆಯದು ವಸಂತ ನವರಾತ್ರಿ ಮತ್ತು ಇನ್ನೊಂದು ಈ ಶರನ್ನವರಾತ್ರಿ. ಇಂತಹ ಪರ್ವಕಾಲದಲ್ಲೇ ಶ್ರೀರಾಮ ರಾವಣನನ್ನು ವಿಜಯದಶಮಿಯ ದಿನ ವಧಿಸಿದನಂತೆ, ಪಾಂಡವರು ಅಜ್ಞಾತವಾಸಕ್ಕೆ ಹೊರಡುವಾಗ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಮೂಟೆ ಕಟ್ಟಿ ಬನ್ನಿ ಮರಕ್ಕೆ ಎತ್ತರದಲ್ಲಿ ಬಿಗಿದಿಟ್ಟು ಹೋಗಿದ್ದು ವಿಜಯದಶಮಿಯ ದಿನ ತಮ್ಮ ಆಯುಧಗಳಿಗೆ ಆಶ್ರಯನೀಡಿ ಕಾಪಾಡಿದ ಬನ್ನಿ ಮರವನ್ನು ಪೂಜಿಸಿ ಆಯುಧಗಳನ್ನು ಮರಳಿ ಎತ್ತಿಕೊಂಡರಂತೆ. ಹೀಗೇ ಹಲವು ಕಾರ್ಯಗಳು ನಡೆದು ಸಾತ್ವಿಕ ಶಕ್ತಿ ವಿಜೃಂಭಿಸಿ ವಿಜಯ ಲಭಿಸಿದ ದಿನವನ್ನು ಇವತ್ತಿಗೂ ವಿಜಯದಶಮಿ ಎಂಬುದಾಗಿ ನಾವು ಕರೆಯುತ್ತೇವೆ, ಆಚರಿಸುತ್ತೇವೆ.

ವೈದಿಕರೊಬ್ಬರ ಕೂಡ ನನ್ನ ಮಾತುಕತೆನಡೆದಿತ್ತು. ಕೆಲವು ವೈದಿಕರು ವೇದಪಾಠವನ್ನು ಗಿಣಿಪಾಠದಂತೇ ಕಂಠಪಾಠ ಮಾಡಿಕೊಂಡಿರುತ್ತಾರೆ, ಎಲ್ಲರಿಗೂ ವೇದಪಾಠಗಳ ಹುರುಳು ಕರಗತವಾಗಿರುವುದಿಲ್ಲ. ವೇದಪಾಠಗಳನ್ನು ಸಮರ್ಪಕವಾಗಿ ಅರ್ಥವಿಸಿಕೊಳ್ಳಲು ಶ್ರದ್ಧೆ ಮತ್ತು ಆಸಕ್ತಿ ಇವುಗಳ ಜೊತೆಗೆ ಸಂಸ್ಕೃತದ ಪ್ರೌಢಿಮೆಯ ಅಗತ್ಯತೆ ಇದೆ. ನಾನು ಮಾತನಾಡುತ್ತಿದ್ದುದು ಸ್ವಲ್ಪ ಗಂಧಗಾಳಿ ಇರುವ ವೈದಿಕರಲ್ಲಿ ಎಂಬುದನ್ನು ಮರೆಯುವಂತಿಲ್ಲ. ಮಾತುಕತೆಯ ಮಧ್ಯೆ ನಾನೊಂದು ಪ್ರಾಯೋಗಿಕ ಕಲ್ಪನೆಯನ್ನು ಪ್ರತಿಪಾದಿಸಿದ್ದೇನೆ. ಕೃಷ್ಣಯಜುರ್ವೇದದಲ್ಲಿ ದುರ್ಗಾ ಸೂಕ್ತ ಹೇಳಲ್ಪಟ್ಟಿದೆ. ಈ ದುರ್ಗಾ ಸೂಕ್ತದಲ್ಲಿ ಅಗ್ನಿಯನ್ನು ಧರಿಸಿದ ದೇವಿಯ ಬಗ್ಗೆ ತಿಳಿಸಿದ್ದಾರೆ. ಅಂಥಾ ಅಗ್ನಿಯನ್ನೇ ಉದರದಲ್ಲೂ ಕೈಯ್ಯಲ್ಲೂ ಜ್ವಲಿಸಿದ ಮಹತಾಯಿಯ ಈ ಸ್ತುತಿಯನ್ನು ಇಂದಿನ ನಮ್ಮ ವಾಹನಗಳನ್ನು ಚಲಾಯಿಸುವ ಪೂರ್ವ ಭಕ್ತಿಯಿಂದ ಪಠಿಸಿದರೆ/ ಅಥವಾ ಪುರೋಹಿತರ ದ್ವಾರಾ ಪಠಿಸುವಂತೇ ಕೇಳಿಕೊಂಡು ಪೂಜೆನಡೆಸಿದರೆ ಸಂಭವಿಸಬಹುದಾದ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತದೆ, ಮತ್ತು ಹಾಗೊಮ್ಮೆ ಸಂಭವಿಸಿದರೂ ಪ್ರಯಾಣಿಕರಿಗೆ, ಚಾಲಕರಿಗೆ ಯಾವುದೇ ಹಾನಿ ಸಂಭವಿಸಿದ ರೀತಿಯಲ್ಲಿ ಬಗೆಹರಿಯುತ್ತದೆ. ಇದು ಹಲವು ದಿನಗಳ ಅವಲೋಕನದಿಂದ ತಿಳಿದು ಬಂದಿದ್ದು ಈ ಬಗ್ಗೆ ಯಾರಾದರೂ ಸಂಶೋಧನೆ ಮಾಡುವವರಿದ್ದರೆ ಅವರಿಗೆ ಸ್ವಾಗತ ಬಯಸುತ್ತೇನೆ !

ಇದೇ ಕಾರಣಕ್ಕೂ ಇರಬಹುದು ಮಹಾನವಮಿಯ ದಿನ ಎಲ್ಲೆಡೆ ಯಂತ್ರಗಳ, ಆಯುಧಗಳ ಪೂಜೆ ನಡೆಯುತ್ತದೆ. ಪಂಚಭೂತಗಳನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಅವುಗಳ ಮೂಲವನ್ನು ಹುಡುಕುವುದೂ ನಮ್ಮಿಂದ ಆಗದ ಮಾತು. ಬಾವಿಯೊಂದನ್ನು ತೋಡಿದಾಗ ಕಾಣುವ ನೀರಿನ ಸೆಲೆಯೇ ಅಲ್ಲಿನ ಜಲಮೂಲ ಎಂದುಕೊಳ್ಳುತ್ತೇವೆಯೇ ಹೊರತು ಆ ನೀರಿನ ಸೆಲೆಯ ಆದಿ ಎಲ್ಲಿ ಎಂಬುದನ್ನು ಅಳೆಯಲು ನಾವು ಹೋಗುವುದೂ ಇಲ್ಲ, ಹೋದರೆ ಅದು ಮುಗಿಯುವ ಕೆಲಸವೂ ಅಲ್ಲ. ಕಣ್ಣಿಗೆ ಕಾಣುವ ನಾವು ನಿತ್ಯ ಉಪಯೋಗಿಸುವ ವಸ್ತು, ಪರಿಕರಗಳಲ್ಲಿ ಹೆಚ್ಚೇಕೆ ನಮ್ಮ ಈ ಭೌತಿಕ ಶರೀರದಲ್ಲೇ ಪಂಚಭೂತಗಳಿವೆ. ಆದರೆ ಆ ಶಕ್ತಿಗಳನ್ನು ನಾವು ಪರಿಗಣಿಸುವುದಿಲ್ಲ. ಶರೀರಕ್ಕೊಂದು ಕಾವು ಇರುತ್ತದೆ. ಆ ಶಾಖದಲ್ಲಿ ಏರಿಳಿತ ಇರುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆಯಾದರೂ ಆ ಶಾಖದ ಮೂಲ ಎಲ್ಲಿದೆ ಎಂಬುದು ನಮಗೆ ಅರ್ಥವಾಗಿದೆಯೇ ? ಇಲ್ಲ. ಆಹಾರ ಜೀರ್ಣಿಸುವ ಸಲುವಾಗಿ ಜಠರದಲ್ಲಿ ಸೃವಿಸುವ ದುರ್ಬಲ ಗಂಧಕಾಮ್ಲ ಅಗ್ನಿಯ ರೂಪವೇ ಆಗಿರುತ್ತದೆ; ತಿಂದ ಅನ್ನವನ್ನು ಕರಗಿಸುತ್ತದೆ. ವಿನಾಕಾರಣ ಅದೇ ದುರ್ಬಲ ಗಂಧಕಾಮ್ಲ ತೀಕ್ಷ್ಣವಾಗತೊಡಗಿ ಕೆಲವರಲ್ಲಿ ಹೊಟ್ಟೆ ಹುಣ್ಣಿಗೆ /ಕರುಳು ಹುಣ್ಣಿಗೆ ಕಾರಣವಾಗುತ್ತದೆ ! ಅಗ್ನಿಯಿಲ್ಲದೇ ನಮ್ಮ ಬದುಕು ಸಾಧ್ಯವಿಲ್ಲ. ನಿತ್ಯದ ಸೂರ್ಯನ ಬೆಳಕಿನಲ್ಲೂ ಅಗ್ನಿಯೇ ಅಡಗಿದೆ. ಹೀಗಿರುವಾಗ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಅಗ್ನಿಯೇ ಪ್ರಪಂಚದ ಅಳಿವು ಉಳಿವಿನಲ್ಲಿ ಪಾಲ್ಗೊಳ್ಳುತ್ತದೆ ಎಂಬುದು ತೋರಿಬರುವ ಸತ್ಯ. ಯಂತ್ರವೊಂದು ಚಾಲನೆಗೊಂಡಾಗ ಅಲ್ಲಿ ಶಾಖೋತ್ಫತ್ತಿಯಾಗುತ್ತದೆ. ಶಾಖೋತ್ಫತ್ತಿ ಜಾಸ್ತಿ ಇದ್ದಾಗ ಅಲ್ಲಿ ಅಗ್ನಿಯ ಆವಾಸ ಇದ್ದೇ ಇರುತ್ತದೆ--ಹೀಗೆ ಅರ್ಥವಿಸೋಣ ಪ್ರತಿಯೊಂದೂ ವಸ್ತುವಿನಲ್ಲೂ ಸುಪ್ತರೂಪದಲ್ಲಿ ಅಗ್ನಿ ಅಡಗಿದೆ! ಕರೆದರೆ ಜ್ವಲಿಸುತ್ತದೆ, ಇಲ್ಲವಾದರೆ ತಣ್ಣಗೆ ಕಾಣದಂತಿರುತ್ತದೆ. ಹೀಗಾಗಿ ಇರುವ ಎಲ್ಲಾ ಉಪಕರಣಗಳಿಗೆ ವಸ್ತುಗಳಿಗೆ ಪೂಜೆ ಸಲ್ಲುವುದು ಸಮರ್ಪಕವಾಗಿದೆ. ಅಗ್ನಿಯನ್ನೇ ಧರಿಸಿದ ಅಮ್ಮ ಅಲ್ಲೆಲ್ಲಾ ಇರುತ್ತಾಳೆ ಎಂಬ ಆಳವಾದ ಪರಿಕಲ್ಪನೆಯಿಂದ ಪೂರ್ವಜರು ಹಾಗೆ ಆರಂಭಿಸಿದರು; ಎಷ್ಟು ವೈಜ್ಞಾನಿಕವಲ್ಲವೇ ?

ವರ್ಷಪೂರ್ತಿ ಅಮ್ಮ ನಮ್ಮ ಸೇವೆಗೆ ನಿಂತಿರುತ್ತಾಳೆ, ವರ್ಷದಲ್ಲಿ ಒಮ್ಮೆ ಅಮ್ಮನಿಗೆ ನಾವು ಗೌರವ ಸಲ್ಲಿಸಿ ಕೃತಜ್ಞರಾಗೋಣ ಎಂಬ ಗೌರವ ಸೂಚಕ ಪ್ರಕ್ರಿಯೆಯೇ ಆಯುಧಪೂಜೆ/ಮಹಾನವಮಿ ಪೂಜೆ. ಈಗೀಗ ನವರಾತ್ರಿಯಲ್ಲಿ ಆರಂಭದಲ್ಲೇ ಕಾರ್ಖಾನೆಗಳಲ್ಲಿ ಸ್ವಚ್ಛಗೊಳಿಸಿ, ಬಣ್ಣ-ಸುಣ್ಣ ಬಳಿದು, ಅಲಂಕರಿಸಿ, ಒಂದಷ್ಟು ಹೂವು ಹಣ್ಣು ಇಟ್ಟು ಪೂಜೆಮಾಡಿ, ಪಟಾಖಿ ಹಚ್ಚಿ, ಕುಂಬಳಕಾಯಿ ಒಡೆದು, ಸಿಹಿತಿಂದು ರಜಾ ಎಂದುಬಿಟ್ಟರೆ ವಾರದ ತನಕ ಯಾರೂ ಬರುವುದಿಲ್ಲ. ಆದರೆ ಈ ಪೊಜೆಯ ಮಹತ್ವದ ಅರಿವಿರುವ ಕೆಲವೇ ಜನ ಮಾತ್ರ ಮಹಾನವಮಿಯ ಆ ದಿನದಂದೇ ಯಂತ್ರಗಳನ್ನು ಪೂಜಿಸುತ್ತಾರೆ. ಯಾವಾಗಲೋ ಮಾಡುವುದನ್ನು ಯಾವಾಗ ಬೇಕಾದರೂ ಮಾಡುವ ಚಾಳಿಗೆ ಏನೂ ಹೇಳಲಾಗುವುದಿಲ್ಲ. ಆದರೆ ರೀತಿಯಲ್ಲಿ ಆಯುಧಪೂಜೆ ಮಾಡಬೇಕಾಗಿರುವುದು ಮಹಾನವಮಿಯಂದೇ. ಬಿಡಿ ಅಷ್ಟಾದರೂ ಮಾಡುತ್ತಾರಲ್ಲ, ಸುಮ್ಮನಾಗೋಣ.

ಕೋಲ್ಕತಾದಲ್ಲಿ ಕಾಳಿಯಾಗಿ, ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯಾಗಿ, ಮೈಸೂರಿನಲ್ಲಿ ಚಾಮುಂಡಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಶೃಂಗೇರಿಯಲ್ಲಿ ಶಾರದೆಯಾಗಿ ನೆಲೆಸಿದ ಅಮ್ಮ ಎಲ್ಲರನ್ನೂ ಹರಸಲಿ, ಜಗದ ಎಲ್ಲಾ ಮಕ್ಕಳಿಗೂ ಅವರ ಸದುದ್ದೇಶಪೂರಿತ ವಾಂಛಿತಗಳನ್ನು ದಯಪಾಲಿಸಿ ಕಷ್ಟದಲ್ಲಿರುವ ತನ್ನ ಮಕ್ಕಳನ್ನು ಪಾರುಮಾಡುವ ಕೃಪೆಮಾಡಲಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಶುಭ ಶರನ್ನವರಾತ್ರಿಯ, ವಿಜಯದಶಮಿಯ ಹಾರ್ದಿಕ ಶುಭಕಾಮನೆಗಳನ್ನು ತಮಗೆಲ್ಲಾ ಘೋಷಿಸುತ್ತಿದ್ದೇನೆ, ಶುಭಾಶಯಗಳು.

ಅಯಿ ಸುಮನಃ ಸುಮನಃ ಸುಮನಃ
ಸುಮನಃ ಸುಮನೋಹರ ಕಾಂತಿಯುತೇ |
ಶ್ರಿತರಜನೀ ರಜನೀ ರಜನೀ
ರಜನೀ ರಜನೀಕರ ವಕ್ತ್ರವೃತೇ |
ಸುನಯನವಿಭ್ರಮರ ಭ್ರಮರ ಭ್ರಮರ
ಭ್ರಮರ ಭ್ರಮರಾಧಿಪತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣಿ ನಮೋಸ್ತುತೇ ||

ಯಾ ದೇವಿ ಸರ್ವ ಭೂತೇಷು ಯಂತ್ರರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಚಂಡೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ವಿದ್ಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ನಾನಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

|| ಓಂ ಸ್ವಸ್ತಿ ||

6 comments:

  1. ದಸರಾ ಹಬ್ಬದ ವಿಶೇಷ ಕೊಡುಗೆ ಭಟ್ ಸರ್, ಮಾಹಿತಿಯುಕ್ತ ಆಪ್ತವಾಗುವ ಲೇಖನ.
    ಅಭಿನ೦ದನೆಗಳು ಹಾಗೂ ವಿಜಯದಶಮಿಯ ಶುಭಾಶಯಗಳು.

    ಅನ೦ತ್

    ReplyDelete
  2. ದೇವಿಯೇ ಶಕ್ತಿ. ಅವಳ ವಿವಿಧ ರೂಪಗಳ ಪೂಜೆಯಿಂದ ವಿವಿಧ ಫಲಗಳು ಲಭಿಸುವದರಲ್ಲಿ ಸಂದೇಹವಿಲ್ಲ. ಮಾಹಿತಿಪೂರ್ಣ ಲೇಖನಕ್ಕಾಗಿ ಧನ್ಯವಾದಗಳು.

    ReplyDelete
  3. ಸಕಾಲಿಕವಾಗಿತ್ತು. ತುಂಬ ಸುಂದರ ಲೇಖನ. ದಸರೆಯ ಶುಭಾಶಯಗಳು :)

    ReplyDelete
  4. ಭಟ್ ಸಾರ್
    ಅಮ್ಮ ಶಬ್ದಕ್ಕೆ ವರ್ಣನೆ ಬೇಕಾಗಿಲ್ಲದಿದ್ದರೂ... ಒಂದು ಚಿಕ್ಕ ಸಂದರ್ಭ ಸಿಕ್ಕರೂ ವರ್ಣಿಸದೇ ಇರಲು ಸಾಧ್ಯವಾಗುವುದೇ ಇಲ್ಲ. ಅದೆಷ್ಟು ಸಾರಿ, ಅದೆಷ್ಟು ರೀತಿ ವರ್ಣಿಸಿದರೂ ಅಮ್ಮ ಎಂಬ ಶಬ್ದಕ್ಕೆ ಮತ್ತೊಂದು ಮಗದೊಂದು ಹೊಸಾ ವಿಶ್ಲೇಷಣೆ ಸಿಕ್ಕುತ್ತಲೇ ಇರುತ್ತದೆ. ತಾಯಿಯ ಅಕ್ಕರೆಗೆ, ಮಮತೆಯ ಮಹಾಪೂರಕ್ಕೆ ಮಿತಿಯೇ ಇಲ್ಲ. ನವರಾತ್ರಿಯಲ್ಲಿ ದೇವಿಯ ವಿವಿಧ ರೂಪದ ವರ್ಣನೆ ಚೆನ್ನಾಗಿದೆ ಸಾರ್. ನಿಮಗೂ ಹಬ್ಬದ ಶುಭಾಶಯಗಳು...

    ಶ್ಯಾಮಲ

    ReplyDelete