ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 13, 2011

ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!


ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!

[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]

ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂಕೃಷ್ಣರಾಯುಡುವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !

ಎದುರು ಜಾವದ ಮೂರುಗಂಟೆಗೆ
ಖದರುವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!

ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು

ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!

ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!

6 comments:

  1. ಅಂತೂ ನನ್ನ ಹೆಸರು ಫಸ್ಟ್ ಪ್ಯಾರಾದಲ್ಲೇ ಬಂತು!

    ವಾರೇವ್ಹಾ! ಭಟ್ಟರೇ ಜನಾರ್ಧನ ಪುರಾಣ ಮನಮೆಚ್ಚಿಗೆ ಆಯಿತು. ಆತ ಬಿಡುಗಡೆಯಾದ ಮೇಲೆ ನಿಮಗೂ ನೋಡ್ಕೋತಾನೆ ಬಿಡಿ. ಅವನೂ ಖುಷ್!

    ನನ್ನ ಬ್ಲಾಗಿಗೂ ಬನ್ನಿ.

    ReplyDelete
  2. ನಿಮ್ಮ ಜನಾರ್ಧನ ಅಣಕ ಚೆನ್ನಾಗಿದೆ... ಛಂದಸ್ಸು ಮತ್ತು ಆದಿ ಪ್ರಾಸಗಳನ್ನು ಅಷ್ಟು ಸಮಂಜಸವಾಗಿ ಎಲ್ಲವಕ್ಕೂ ಜೋಡಿಸುವುದು ನಿಜಕ್ಕೂ ದೊಡ್ಡ ಸಾಧನೆ ...

    ReplyDelete
  3. ಭಟ್ಟರೆ;ರೆಡ್ಡಿ ಪುರಾಣ ಚೆನ್ನಾಗಿದೆ.

    ReplyDelete
  4. ಛೆ ಲೈಕ್ ಬಟನ್ನೇ ಇಲ್ವಲ್ಲ ಇಲ್ಲಿ!! :(

    ReplyDelete
  5. ಬದರೀನಾಥರೇ ಪರವಾಗಿಲ್ಲ ಬಿಡಿ, ಜೊತೆಗೆ ಪ್ರತಿಕ್ರಿಯಿಸಿದ ನಿಮ್ಮನ್ನೂ ಬಿಡೋದಿಲ್ವಂತೆ! ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನಲಕ್ಷ್ಮಿಯೊಲಿಯಲಿ, ಧನ್ಯವಾದಗಳು

    ReplyDelete
  6. Good one.
    Please visit my blog also
    suragange.blogspot.com

    ReplyDelete