ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 13, 2011

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!

[ಅಂತರ್ಜಾಲದ ಕೃಪೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗೆ -ಇದು ನಾನು ಹೇಳಹೊರಟ ಜಾಗಕ್ಕೆ ಸಂಬಂಧಿಸಿದ್ದಲ್ಲ, ದಯಮಾಡಿ ಕ್ಷಮೆಯಿರಲಿ ]

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!


ಹವಿಗನ್ನಡದಲ್ಲಿ ಇಂದಿನ ನೈಜ ಸ್ಥಿತಿಯನ್ನು ವರ್ಷದ ಹಿಂದೆ ಶಿರಸಿಯ ಹೆಗಡೆ ಎನ್ನುವವರೊಬ್ಬರು ರಚಿಸಿ ಹಾಡಿದ್ದನ್ನು ಯಾರೋ ಯೂಟ್ಯೂಬಿಗೆ ಅಪ್ಲೋಡ್ ಮಾಡಿದ್ದು ಒಳ್ಳೇದಾಯ್ತು. ಎರಡು ಕಂತುಗಳಲ್ಲಿರುವ ಈ ಲೇಖನದ ಆರಂಭ ಮತ್ತು ಅಂತ್ಯದ ಸಮಯಗಳಲ್ಲಿ ಈ ಹಾಡನ್ನು ಕೇಳಲು ತಮ್ಮಲ್ಲಿ ವಿನಂತಿಸುತ್ತೇನೆ.



ಚನ್ನಕೇಶವನ ಪಾದಾರವಿಂದಗಳಿಗೆ ಸಾಷ್ಟಾಂಗವೆರಗುತ್ತ ಜಗನ್ನಿಯಾಮಕನಾದ ಆತನ ಸುಂದರ ಬಿಂಬವೊಂದರ ಪೂಜೆಗೆ ಸಂಬಂಧಿಸಿದ ಕಥಾನಕವನ್ನು ನಿಮ್ಮೊಂದಿಗೆ ನೂಲುಹುಣ್ಣಿಮೆಯ ಈ ಸಂದರ್ಭದಲ್ಲಿ ಹಂಚಿಕೊಳ್ಳಲು ದಾಂಗುಡಿ ಇಡ್ತಾ ಇದ್ದೇನೆ. ಅದೊಂದು ಅತ್ಯಂತ ರಮ್ಯ ಭಯಾನಕ ಕ್ಷೇತ್ರ. ಭಯಾನಕ ಯಾಕೆಂದು ನಿಮ್ಗೆ ಮುಂದೆ ಓದ್ತಾ ತಿಳೀತದೆ ಬಿಡಿ. ಸುತ್ತಲೂ ಕಗ್ಗಾಡು ಮನೆಯೆಂಬುದನ್ನು ಕಾಣಬೇಕೆಂದರೆ ಕನಿಷ್ಠ ಮೂರು ಕಿ.ಮೀ ನಡೆಯಲೇಬೇಕಾಗಿತ್ತು. ಹಚ್ಚ ಹಸಿರಿನ ದಟ್ಟ ಅಡವಿಯ ಗುಡ್ಡಗಳ ನಡುವಿನ ಅಗಲ ಕಣಿವೆ[ವ್ಯಾಲಿ]ಯಾಕಾರದ ಪ್ರದೇಶದಲ್ಲಿ ಒಂದೇ ಒಂದು ಜಾಗೃತ ದೇವಸ್ಥಾನ !! ತಿರುಪತಿ, ಉಡುಪಿ ಇಂಥಾ ಕೆಲವನ್ನು ಬಿಟ್ರೆ ಬಹುಶಃ ಶ್ರೀಹರಿಯ ಜಾಗೃತ ದೇವಸ್ಥಾನಗಳು ಹಳ್ಳಿಗಳಲ್ಲಿ ಇರುವುದು ಸ್ವಲ್ಪ ಕಮ್ಮಿಯೇ. ಆದರೂ ಹೊನ್ನಾವರ ತಾಲೂಕಿನ ದಿಬ್ಬಣಗಲ್ ಎಂಬ ಪ್ರದೇಶದಿಂದ ಸರಿಸುಮಾರು ನಾಲ್ಕು ಕಿ.ಮೀ. ಅಳತೆಯಲ್ಲಿದೆ ಈ ಜಾಗ ಕಾನುಗೋಡು. ನಾನು ಹೇಳುತ್ತಿರುವುದು ಉತ್ಪ್ರೇಕ್ಷೆ ಅಂದುಕೊಳ್ಳಬೇಡಿ ಅಲ್ಲಿರುವ ಈಗಿನ ಕಟ್ಟಡಬಿಟ್ಟಡ ಎಲ್ಲಾ ಮರೆತುಬಿಡೋಣ, ಗರ್ಭಗುಡಿಯಲ್ಲಿ ನಿಂತ ಏಕಶಿಲಾ ವಿಗ್ರಹ ಅದ್ಯಾವ ಅನಾದಿ ಕಾಲದ್ದೋ ಯಾವ ಪುಣ್ಯಾತ್ಮ ಮಹರ್ಷಿ ಅಲ್ಲಿ ಹಾಗೆ ಪ್ರತಿಷ್ಠಾಪಿಸಿದ್ದೋ ಕಾಲಗರ್ಭ ಇತಿಹಾಸವನ್ನು ಅಳಿಸಿಹಾಕಿಬಿಟ್ಟಿದೆಯಾದರೂ ಅಂತಹ ಅತ್ಯಂತ ಸುಂದರ ವಿಗ್ರಹ ಈ ಜಗದಲ್ಲೇ ನಿಮಗೆ ಇನ್ನೊಂದು ಸಿಗುವುದಿಲ್ಲ, ಅದು ಬೇಲೂರು ಹಳೇಬೀಡು ಅಥವಾ ಹಂಪೆ ಬಾದಾಮಿಗಳಲ್ಲೂ ಇರುವಂತಹದಲ್ಲ, ಬರೇ ೫ ಅಡಿ ಎತ್ತರ ಪಾಣಿಪೀಠವೂ ಸೇರಿ !! ಮೂರ್ತಿಯ ಪ್ರಭಾವಳಿಯ ಕುಸುರಿ ಕೆತ್ತನೆ ನೋಡಲು ಹೊಸ ಚಸ್ಮಾಹಾಕಿಕೊಂಡು ಹೋಗ್ಬೇಕಾಗ್ತದೆ!! ನಾಮಧೇಯ : ಶ್ರೀಚನ್ನಕೇಶವ !! ನಿಜಕ್ಕೂ ಅನ್ವಯಿಸಿದ ಅನ್ವರ್ಥನಾಮ.

ಜಿಂಕೆಗಳು ಅಲ್ಲಲ್ಲಿ ಮೇಯ್ತಾ ಇದ್ವು. ಕಡವೆಗಳು ಗಡಾನೆದ್ದು ಓಡ್ತಾ ಇದ್ವು. ವಿವಿಧ ಹಕ್ಕಿಪಕ್ಕಿಗಳು ಹಲವು ರಾಗಗಳಲ್ಲಿ ಮಧುರಾಲಾಪಗೈತಾ ಇದ್ವು. ಕಾಡುಕೋಳಿಗಳ ಸರಸರ ಓಡಾಟ ಅಲಲ್ಲಿ ಕಾಣಸ್ತಾ ಇತ್ತು. ನವಿಲುಗಳು ತಮ್ಮ ಸ್ವಂತದ ಠಾವಿನಲ್ಲಿ ಕುಣಿಯುತ್ಲೋ ಕೂಗುತ್ಲೋ ಆಗಾಗ ಆಗಾಗ ಮನೋರಂಜಕವಾಗಿದ್ವು. ನಡೆವ ಕಾಲುದಾರಿಯ ಇಕ್ಕೆಲಗಳಲ್ಲಿ ಸಾಗವಾನಿ, ಗಂಧ, ಮತ್ತಿ, ಬೀಟೆ, ಭರಣಿಗೆ, ದೇವದಾರು, ನಂದಿ, ಹೆಬ್ಬಲಸು, ಖೈರ, ರಕ್ತಚಂದನ, ಧೂಪ ಹೀಗೇ ಒಂದೇ ಎರಡೇ ನಂಗೇ ಹೆಸರು ಗೊತ್ತಿಲ್ಲದ ಹಲವಾರು ಮರಗಳು ಮಹಾಮಹಾ ಎತ್ತರದ ಮರಗಳು ನಿಂತು ಸ್ವಾಗತ ಕೋರ್ತಿದ್ವು, ಅಜ್ಜಿಯ ಕಥೆಯಲ್ಲಿ ಕೇಳಿದ ಕೆಲವು ರಾಮಾಯಣದ ಚಿತ್ರಕೂಟದಂತಹ ಸನ್ನಿವೇಶಗಳು ಕೂಡಾ ಗೋಚರಿಸುತ್ತಿದ್ವು. ಮುಗ್ಧಮಕ್ಕಳಾದ ನಾವೆಲ್ಲಾ ಹಿರಿಯ ಜೊತೆ ಹೆಜ್ಜೆಹಾಕುತ್ತಾ ಅಷ್ಟಷ್ಟು ದೂರ ಹೋದಾಗ ಸ್ವಲ್ಪ ಕೂತು ಮತ್ತೆ ಮುಂದೆ ಸಾಗುತ್ತಿದ್ದೆವು. ಮಧ್ಯೆ ಒಂದೆರಡು ನೀರಿರುವ ಜಾಗಗಳಲ್ಲಿ ನೀರು ಕುಡಿದು ನಮ್ಮ ಬಾಯಾರಿಕೆ ನೀಗಿಸಿಕೊಳ್ತಿದ್ವು. ನನ್ನ ತಾಯಿಯ ತವರೂರ ದಾಯಾದೀ-ಹತ್ತುಸಮಸ್ತರು ಪಾಳಿಯಲ್ಲಿ ಪಾಲಿಗೆ ಬರುವ ದಿನಗಳಲ್ಲಿ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸ್ತಾ ಇದ್ರು. ಕೆಲವರಿಗೆ ವರ್ಷದಲ್ಲಿ ೨ ತಿಂಗ್ಳು ಪೂಜೆ ಜವಾಬ್ದಾರಿ ಇದ್ರೆ ಇನ್ನು ಕೆಲವರಿಗೆ ಒಂತಿಂಗ್ಳು, ಇನ್ನೂ ಕೆಲವರಿಗೆ ಒಂದ್ವಾರ, ಕೆಲವರಿಗಂತೂ ಮೂರೇ ದಿವಸಗಳ ಭಾಗ್ಯ! ಅದು ನಿಜಕ್ಕೂ ಪರಮ ಭಾಗ್ಯವೇ ಬಿಡಿ.

ಚನ್ನಕೇಶವನನ್ನು ಮೊದಲಾಗಿ ಈ ವಂಶದ ಹಿರಿಯರು ಯಾರೋ ಕಾಡಿಗೆ ಹೋದಾಗ ಕಂಡಿರ್ಬೇಕು. ಹಚ್ಚಹಸಿರಿನ ನಡುವೆ ಕಂಡ ಶಿಶುವಿನ ಮಂದಹಾಸಬೀರಿದ ಮುಖದ ಆ ಸ್ಫುರದ್ರೂಪಿಯನ್ನು ಬಿಟ್ಟಿರಲು ಇವರಿಂದ ಆಗದಾಯ್ತೇನೋ. ದೂರಬೇರೆ, ಹಿಂಸ್ರ ಪಶುಗಳೂ ಓಡಾಡುವ ಜಾಗ ಬೇರೆ. ಹೀಗಾಗಿ ಕೇಶವನಿಗೆ ಏಕ ಪೂಜೆ. ನಿತ್ಯವೂ ಮಧ್ಯಾಹ್ನ ಮಾತ್ರ. ತಲೆಹೊರೆಯಲ್ಲಿ ಬಾಳೆಹಣ್ಣು-ತೆಂಗಿನಕಾಯಿ-ಕರ್ಪೂರ-ಬತ್ತಿ-ದೀಪಕ್ಕೆ,ಅಡಿಗೆಗೆ ಒಂದಷ್ಟು ಕೊಬ್ಬರಿ ಎಣ್ಣೆ, ನೈವೇದ್ಯಕ್ಕೆ ಅನ್ನಮಾಡಲು ಸಾಕಷ್ಟು ಅಕ್ಕಿ, ಮಧ್ಯಾಹ್ನದ ಭೋಜನಕ್ಕೆ ಗೊಜ್ಜು-ಪಜ್ಜು ಮಾಡಿಕೊಳ್ಳಲು ಸ್ವಲ್ಪ ಹಿತ್ಲಕಾಯಿ, ಪಾತ್ರೆ ಸರಂಜಾಮು ಬುಟ್ಟಿಗಳಲ್ಲಿಟ್ಟು ಹೊತ್ತು ಬೆಳಿಗ್ಗೆ ೯ಕ್ಕೆ ಹೊರಟರೆ ದಿಬ್ಬಣಗಲ್ ತಲ್ಪುವಾಗಲೇ ೯:೩೦, ಅಲ್ಲಿಂದ ಮುಂದೆ ಮೂರೂವರೆ ಕಿ.ಮೀ ಒಳಗಡೆಗೆ ತೆರಳಬೇಕಿತ್ತು. ಹವ್ಯಕರಿಗೆ ಪೂಜೆಯೇನೂ ಹೊಸದಲ್ಲವಲ್ಲ ಆದ್ರೂ ಹಾಗೆಲ್ಲಾ ವ್ರತಾಚರಣೆಯಿಲ್ಲದೇ ಶರೀರಶುದ್ಧಿಯಿಲ್ಲದೇ ಕೇಶವನನ್ನು ಪೂಜಿಸುವ ಹಾಗಿರಲಿಲ್ಲ. ಹಗಲಲ್ಲಿ ಹಿರಿಯರಿಗೆ ಕಂಡ ಕೇಶವ ಕಾಲಕಾಲಕ್ಕೆ ಇರುಳಲ್ಲಿ ಕಿರಿಯರ ಕನಸಲ್ಲಿ ಕಂಡು ತನ್ಗೆ ಇದುಬೇಕು- ಅದು ಬೇಡ ಹೀಗೆ ಮಾಡು ಎಂದೆಲ್ಲಾ ತಿಳಿಸಿ ಪೂಜೆಮಾಡಿಸಿಕೊಳ್ಳುವ ವೈಖರಿ ಮಾತ್ರ ಅಚ್ಚರಿ ಮೂಡಸ್ತಾ ಇತ್ತು.

ಹವ್ಯಾಗ್ನಿ[ಜೀವಿತದ ಕಾಲದಲ್ಲಿ ಹೋಮ-ಹವನಕ್ಕೆ ಬಳಸುವ ಅಗ್ನಿ] ಮತ್ತು ಕವ್ಯಾಗ್ನಿ[ಸತ್ತಾಗ ಅಂತ್ಯೇಷ್ಟಿಗಳಲ್ಲಿ ಅಲ್ಲದೇ ಅಲ್ಲಿ ನಡೆಸುವ ಶಾಂತಿ/ಅಪರಹೋಮಗಳಲ್ಲಿ ಬಳಸುವ ಅಗ್ನಿ] ಎರಡರಲ್ಲೂ ಪ್ರಬುದ್ಧ ಹಿಡಿತವುಳ್ಳ ಬ್ರಾಹ್ಮಣರನ್ನು ತನ್ನ ರಾಜ್ಯಕ್ಕೆ ಮೊಟ್ಟಮೊದಲ ಕನ್ನಡ ದೊರೆ ಬನವಾಸಿಯ ಮಯೂರವರ್ಮ ಉತ್ತರದ ಸಿಂಧೂನದಿಯ ದಡದ ಅಹಿಕ್ಷೇತ್ರದಿಂದ ಬನವಾಸೀ ರಾಜ್ಯಾಂತರ್ಗತ ಬಹುಭಾಗಗಳ ದೇವಳಗಳ ಪೂಜೆಗಾಗಿ ಕರೆತಂದನೆಂದು ಇತಿಹಾಸ ಹೇಳುತ್ತದೆ. ಕಾಲಾನಂತರದಲ್ಲಿ ರಾಜಾಶ್ರಯ ತಪ್ಪಿದ ಘಳಿಗೆಯಲ್ಲಿ ಹಲವಾರು ಸಾಮಾಜಿಕ ಮಾರ್ಪಾಡುಗಳ ನಡುವೆ ಉಪಜೀವನಕ್ಕೆ ಆಶ್ರಯದಾತರು ಇಲ್ಲದಾದಾಗ ಹವ್ಯಕರು ಪೂಜೆಯ ಜೊತೆಗೇ ಭೂಮಿತಾಯಿಯ ಉಳುಮೆಯನ್ನೂ/ಕೃಷಿಯನ್ನೂ ಅವಲಂಬಿಸಿ ಸ್ವಾವಲಂಬನೆಯ ಸಾಮಾಜಿಕ ಮಂತ್ರವನ್ನೂ ಪಠಿಸಿದರು! ಅಖಂಡ ಭಾರತದಲ್ಲಿ ಸ್ವತಃ ಕೃಷಿಯಲ್ಲಿ ತೊಡಗಿದ ಬ್ರಾಹ್ಮಣ ವರ್ಗವೊಂದಿದ್ದರೆ ಅದು ಹವ್ಯಕರೇ; ಈಗ ಮತ್ತಿತರ ವರ್ಗಗಳೂ ಮಾಡುತ್ತಿವೆ ಅದು ಬೇರೇ ವಿಷಯ. ರಾಜಾ ಮಯೂರವರ್ಮನ ಉಂಬಳಿಯಲ್ಲಿ ಸಿಕ್ಕಿದ ಅಗ್ರಹಾರವೆಂಬ ಹಳ್ಳಿಗಳಲ್ಲಿ ತಮ್ಮ ಹೊಲಮನೆ ಗುಡಿಗುಂಡಾರಗಳನ್ನು ನಿರ್ಮಿಸಿಕೊಂಡು ಅನ್ನದಾತ ಪ್ರಭುವನ್ನು ಇನ್ನೂ ಮರೆಯದ ಈ ಜನಾಂಗದ ಇಂದಿನ ಕುಡಿಗಳು ಕೃಷಿಯನ್ನು ಮರೆಯುವತ್ತ ಮನಮಾಡಿದ ಅನಿವಾರ್ಯ ದಾರುಣ ಕಥೆ ’ಅಪ್ಪಯ್ಯ ಯೆಂಗೆ ಬೇಕು ಚಂದಾಗಿದ್ದಂವ ’ !!

ಹವ್ಯಕರಲ್ಲಿ ಕನಿಷ್ಠ ೮ವರ್ಷ ವಯಸ್ಸು ತುಂಬಿದವರಿಗೆ ಮಾತ್ರ ಮುಂಜಿ ಈಗ ಬಿಡಿ ೧೨, ೧೩, ೧೫ರವರೆಗೂ ಮಾಡ್ತಾರೆ. ಶಾಸ್ತ್ರರೀತ್ಯಾ ಗರ್ಭಾಷ್ಟಮ, ಗರ್ಭದಿಂದಲೇ ಲೆಕ್ಕಹಾಕಿ ೭ ಮುಗಿದು ಎಂಟು ಆರಂಭವಾಗ್ತಿರೋ ಕಾಲ್ದಲ್ಲಿ ಆತ ’ದ್ವಿಜ’ನಾಗಬೇಕು. [ದ್ವಿ-ಜ[ನ್ಮ]ಉಳ್ಳವನಿಗೆ ಅಂದರೆ ಪಾಲಕರು ಒಮ್ಮೆ ಜನ್ಮಕೊಟ್ಟ ಬಳಿಕ ಮಾತೆ ಗಾಯತ್ರಿ ಶರೀರ ಪ್ರವೇಶಿಸಿ ಇನ್ನೊಂದು ಜನ್ಮವನ್ನು ನೀಡುತ್ತಾಳೆ ಎಂಬುದು ಸೂಚ್ಯರ್ಥ]ಮುಂಜಿಯಾದ ಕಿರಿಯ ದ್ವಿಜರಿಗೂ ಹಾಗೆಲ್ಲಾ ಗರ್ಭಗೃಹ ಪ್ರವೇಶವಿರುವುದಿಲ್ಲ. ಹೇಗೆ ಪೋಲೀಸ್ ಪೇದೆಗಳಿಗೋ ಅರಣ್ಯಾಧಿಕಾರಿಗಳಿಗೋ ಟ್ರೇನಿಂಗ್ ಕೊಡ್ತಾರೋ ಹಾಗೇ ಪೂಜಾ ಪ್ರಾತ್ಯಕ್ಷಿಕೆ ಪ್ರಾಯೋಗಿಕವಾಗಿ ಆದಮೇಲೆ ಅವರನ್ನು ಪರೀಕ್ಷಿಸಿ ನಂತರ ಸುಮಾರು ೧೫-೧೬ ವಯಸ್ಸಿನ ಬಳಿಕವಷ್ಟೇ ಅಂತಂಥಾ ದೇವಸ್ಥಾನದ ದೇವರನ್ನು ಪೂಜೆಮಾಡಲು ಅನುಮತಿ ದೊರೀತಾ ಇತ್ತು; ಅಷ್ಟರೊಳಗೆ ಅವರಿಗೆ ಕಾಲೋಚಿತ ವೇದಪಾಠ ಕೂಡ ಕಲಿತಾಗಿಬಿಡಬೇಕಿತ್ತು.

ಯಾವ ಶಿಲ್ಪಿ ಕಡೆದನೋ ಯಾವ ದಿನದಲ್ಲಿ ಅದ್ಯಾವ ರಾಜಾಶ್ರಯದಲ್ಲಿ ಕೂತು ಕಡೆದನೋ, ಯಾವುದೋ ಮುನಿ ತನ್ನ ಘೋರ ತಪದ ಫಲದಿಂದ ನೀರು ಪ್ರೋಕ್ಷಿಸಿ ಸೃಷ್ಟಿಸಿದ್ನೋ ಅಂತೂ ಆ ವಿಗ್ರಹ ಮಾತ್ರ ಅಂತಹ ರೂಪುರಂಗಿನದು. ಅಚ್ಚಕಪ್ಪು ಬಣ್ಣದ ಶಿಲೆಯಲ್ಲಿ ಮಿರಿಮಿರಿ ಮಿಂಚುವ ನಯವಾದ ಮೂರ್ತಿ ಯಾರೇ ನೋಡಿದರೂ ಅವರನ್ನೇ ನೋಡ್ತಾ ಅವರೆಡೆಗೇ ಮಂದಹಾಸ ಬೀರ್ತಾ ಇರೋ ಥರಾ ಇರುತ್ತೆ ! ನಾನು ನೋಡಿದ ದಿನಗಳಲ್ಲಿನ ಕಥೆ ನಾ ಹೇಳ್ತಾ ಇದ್ದೇನೆಯೇ ಹೊರ್ತು ಅದಕ್ಕಿಂತಾ ಅದೆಷ್ಟೋ ಶತಮಾನಗಳ ಹಿಂದಿನಿಂದ ಅದು ಅಲ್ಲಿ ನೆಲೆನಿಂತಿದೆ.

ಕಾಲುದಾರಿಯಲ್ಲಿ ಸಾಗಿ ಗಮ್ಯಸ್ಥಾನ ತಲ್ಪಿದ್ರೆ ಅಲ್ಲೊಂದು ಚಿಕ್ಕ ಕಟ್ಟಡ. ಕಟ್ಟಡದ ಪ್ರವೇಶದ್ವಾರಕ್ಕೂ ಮುನ್ನ ಎರಡೂ ಬದಿಗೆ ಎರಡೆರಡು ಹೆಮ್ಮರಗಳು. ಅವುಗಳ ಬುಡದಲ್ಲಿ ಬಾಗಿಲು ಜಟ್ಗ [ಜಯ-ವಿಜಯ]ಗಳು. ಹಾಗೆ ಹಿರಿಯರು ಮೊದಲಾಗಿ ತೋರಿಸಿದಾಗ ಜಟ್ಗ ಎಂದ ಜಾಗದಲ್ಲಿ ಊದ್ದುದ್ದ ಒಂದೊಂದು ಶಿಲೆಯ ಕಲ್ಲುಗಳನ್ನು ನೆಟ್ಟಿದ್ದರು. ಜಟ್ಗ ಕಾಣಿಸಲಿಲ್ಲವಲ್ಲಾ ಎಂದು ಕೇಳಿದರೆ ಅದು ಶಕ್ತಿ ಅಡಗಿರ್ತದೆ, ಮೈಲಿಗೆಯಾದ್ರೆ ಹಿಡ್ಕೊಂಡ್ ಬಿಡ್ತದೆ ಅಂದಿದ್ರು. ಜಾಸ್ತಿ ಏನೂ ಬೇಡ ಏನಾದ್ರೂ ಆದ್ರೆ ಕಷ್ಟ ಎಂಬ ಭಯದಿಂದ ಮುಂದೆ ಹಳೇದಾದ ಆ ಕಟ್ಟಡವನ್ನು ಹೊಕ್ಕರೆ ಅಲ್ಲಿ ವನ್ಯಮೃಗಗಳ ಕೊಂಬುಗಳಿಂದ ಮಾಡಿದ ಅಲಂಕಾರಿಕ ಸಾಮಾನುಗಳನ್ನು ದೇವರ ಪ್ರೀತ್ಯರ್ಥವಾಗಿ ಹಾಕಿದ್ರು. || ಅಲಂಕಾರ ಪ್ರಿಯೋ ವಿಷ್ಣುಃ || ಅಂತಾರಲ್ಲ ಅದ್ಕೇ ಸುತ್ತಲ ದೂರದ ಹಳ್ಳೀಜನ ಆಗಾಗ ಬರುವಾಗ ದಾರಿಯಲ್ಲಿ ಸತ್ತುಹೋಗಿ ಕೊಂಬುಮಾತ್ರ ಉಳಿದ ಮಿಕಗಳಿಂದ ಅವುಗಳನ್ನು ತಂದು ಒಪ್ಪಿಸುತ್ತಿದ್ದರಂತೆ. ಇನ್ಯಾವುದೋ ಭಕ್ತ ಆಚಾರಿ ಅದನ್ನು ಒಣ್ಗಿದ ಮರದತುಂಡು ತಂದುಕೊಂಡು ಮೃಗಗಳ ಮುಖದಂತೇ ಕೆತ್ತಿ ಅಲಂಕರಿಸಿದ್ದ!! ಅಬ್ಬಬ್ಬಾ ಶಿವನೇ ಕೇಶವನೇ ಎಂತೆಂಥಾ ಸೇವೆ ನಿನಗಪ್ಪಾ! ಹಾಗೆ ನೋಡಲೇ ಬಹಳ ಸಮಯ ಹಿಡೀತಿತ್ತು. ಅದ್ಕೇ ಪೂಜೆಗೆ ತೊಡಗುವ ಹಿರಿಯರು ಹೋದವ್ರೇ ಸಾಮಾನು ಸರಂಜಾಮು ಅಲ್ಲೇ ಇರುವ ಚಿಕ್ಕ ಪಡಸಾಲೆಯಲ್ಲಿ ಇಳಿಸಿ ಸೀದಾ ಬಾವಿಕಟ್ಟೆಗೆ ಸ್ನಾನಕ್ಕೆ ಹೋಗಿಬಿಡ್ತಾ ಇದ್ರು.

ಬಾವಿ ಎಂದ್ರೆ ಬಹಳ ಆಳದ್ದು ಅಂತ ತಿಳೀಬೇಡಿ. ಮಳೆಗಾಲ್ದಲ್ಲಿ ಮೊಗೆದು ತೆಗೆಯುವ ನೀರು, ಬೇಸಿಗೆಯ ಕಟ್ಟಕಡೆಗೆ ೪ ಅಡಿ ಆಳಕ್ಕೇ ನೀರು! ಎಳೆನೀರು ಎಳೆನೀರು--ಅಂಥಾ ಸ್ಫಟಿಕ ಸದೃಶ ನೀರು ಕಣ್ರೀ. ಕಾಡಿನ ವನಸ್ಪತೀ ಬೇರುಗಳ ಮೂಲಕ ನಿಧಾನಕ್ಕೆ ಹರಿದ ಗಂಗೆ ಅಲ್ಲಿಗೆ ಬಂದಿರೋದ್ರಿಂದ ನೈಸರ್ಗಿಕ ಖನಿಜಯುಕ್ತ ಸಿಹಿಸಿಹಿ ನೀರು; ರೋಗನಿವಾರಕ ಶಕ್ತಿಯುಳ್ಳ ಕೇಶವನ ತೀರ್ಥದ ರೀತಿಯ ನೀರು. ಹೇಗೂ ಮನೇಲೊಮ್ಮೆ ಸ್ನಾನ ಆಗಿರ್ತಿತ್ತು. ಅಲ್ಲಿ ಮತ್ತೆ ನಡೀವಾಗ ಧೂಳು-ಎಂಜಲು ಇತ್ಯಾದಿ ಮೈಗೆ ಸೋಕಿರ್ತದಲ್ಲ ಅಂತ ಗಡಗಡನೆ ಎರಡು ಕೊಡಪಾನ ನೀರೆತ್ತಿ ತಲೆಮೇಲೆ ಮಗುಚಿಕೊಂಡವರೇ ಗಣಪತೀ ಉಪನಿಷತ್ತು ಪಠಿಸುತ್ತಾ ಮಾಯ್ನಕುರಿ ಕೈಮಗ್ಗದ ಬಿಳೀ ಪಂಚೆಯನ್ನೇ ಒದ್ದೆಮಾಡಿ ನೀರು ಹಿಂಡಿ ಮತ್ತದನ್ನೇ ಉಟ್ಟು ಹೆಗಲಿಗೊಂದು ಒದ್ದೆ ಟವೆಲ್ಲು ಹಾಕ್ಕೊಂಡು ದೇವರಕೊಡದಲ್ಲಿ ಮಡಿನೀರು ತರುತ್ತಿದ್ದರು.

ಗರ್ಭಗುಡಿಗೂ ಮುಖಮಂಟಪಕ್ಕೂ ನಡುವೆ ಸಾಮಾನ್ಯವಾಗಿ ಚಿಕ್ಕದೊಂದು ಮೈಸುತ್ತುವ ಜಾಗ ಇರ್ತದೆ. ಅಲ್ಲಿ ಪೂಜಾ ಸಾಮಾನುಗಳನ್ನು ಇಟ್ಕೊಳ್ಳೋದು, ಗಂಧ ತೇಯ್ಕೊಳ್ಳೋದು, ಆರ್ತಿ ಬೀರ್ತಿ ಇಡೋದು, ಅರ್ಚಕರು ವೈಯ್ಯಕ್ತಿಕ ಧ್ಯಾನ ಮಾಡ್ಕೊಳ್ಳೋದು ಇತ್ಯಾದಿ ಹಲ್ವಾರು ಕೆಲ್ಸಗಳಿಗೆ ಆ ಜಾಗ ಅಗತ್ಯವೂ ಹೌದು ಉಪಯುಕ್ತವೂ ಹೌದು. ಅಲ್ಲಿಗೆ ಹೋಗುವ ಅವರು ಮಂತ್ರಪಠಿಸುತ್ತಲೇ ಶ್ರೀಗಂಧ, ರಕ್ತಚಂದನಾದಿಗಳನ್ನು ತೇಯ್ದುಕೊಳ್ತಾ ಇದ್ರು. ಗಂಧತೇಯುವಾಗಲೇ ಆ ಘಮಘಮ ಹೊರವಲಯದ ವರೆಗೂ ಬರ್ತಿತ್ತು. ಮನೆಯಿಂದ ಬರುವಾಗ ತಂದ ಥರಥರದ ಹೂಗಳು, ತುಳಸಿ ಎಲ್ಲವನ್ನೂ ಜೋಡಿಸಿ ಇಟ್ಟುಕೊಂಡು ಕವಾಟು ತೆರೀತಾ ಇದ್ರು! ಕವಾಟು ಎಂದ್ರೆ ಅಲ್ಲಿನ ಗರ್ಭಗುಡಿಯ ಬಾಗಿಲು. ಕವಾಟು ತೆಗೆದಮೇಲೆ ದೇವರಿಗೆ ಪೂಜೆಯಾಗ್ಲೇ ಬೇಕಂತೆ. ಕವಾಟು ತೆಗೆದು ಪೂಜೆ ಮಾಡಿದ ನಂತ್ರ ಮಧ್ಯಾಹ್ನ ೩ ಗಂಟೆಗೆ ಮತ್ತೆ ಕವಾಟು ಬಂದೋಬಸ್ತ್ ಮಾಡ್ಬಿಟ್ರೆ ಮತ್ತೆ ನಾಳೇನೇ ತೆಗ್ಯೋದು!

.........ಮತ್ತೆ ನೋಡೊಣ ಮುಂದಿನ ಭಾಗದಲ್ಲಿ , ನಮಸ್ಕಾರ

4 comments:

  1. Bhatre,

    kutoohala kereliside ee lekhana....mundina bhagakkagi waitinguuuu...

    ReplyDelete
  2. ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ ಭಟ್ ಸಾರ್...


    ಶ್ಯಾಮಲ

    ReplyDelete
  3. ಕೆಲವರಷ್ಟೇ ಓದಲು ಸಾಧ್ಯವಾಯ್ತು ಯಾಕೆಂದರೆ ಸಮಯದ ಕೊರತೆ!! ಓದಿದ ನಿರೀಕ್ಷಣೆಯಲ್ಲಿರುವ ಎಲ್ಲರಿಗೂ ಧನ್ಯವಾದಗಳು, ಮುಂದಿನ ಭಾಗ ಮಂಗಳವಾರ ಬೆಳಗಿನ ಹೊತ್ತಿಗೆ ಪ್ರಕಟವಾಗುತ್ತದೆ.

    ReplyDelete