ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, April 6, 2011

ಯುಗಾದಿಯ ಹಿಂದಿನ ಅರ್ಥಪೂರ್ಣ ಅನಿಸಿಕೆ


ಯುಗಾದಿಯ ಹಿಂದಿನ ಅರ್ಥಪೂರ್ಣ ಅನಿಸಿಕೆ

ಆತ್ಮೀಯ ಮಿತ್ರರೇ, ತಮಗೆಲ್ಲಾ ವಸಂತೋತ್ಸವದ, ಯುಗಾದಿಯ ಹಾಗೂ ಖರ ಸಂವತ್ಸರದ ಹಾರ್ದಿಕ ಶುಭಾಶಯಗಳು. ನಮ್ಮ ಹಬ್ಬಗಳಲ್ಲಿ ನಮ್ಮ ಆಚರಣೆಗಳಲ್ಲಿ ವಿಜ್ಞಾನ ಅಡಗಿದೆ ಎಂಬುದನ್ನು ನಾವನೇಕರು ಅರಿಯದೇ ಅವುಗಳನ್ನು ಕೇವಲ ಸಾಂಪ್ರದಾಯಿಕ ಹಬ್ಬಗಳೆಂದು ಕರೆದೆವು ಮತ್ತು ಅವುಗಳ ಮಹತ್ವವನ್ನು ಅರಿಯದಾದೆವು. ಪ್ರಾಜ್ಞರಾಗಿದ್ದ ನಮ್ಮ ಋಷಿಮುನಿಗಳು ಅಂದಿನ ಆ ಕಾಲದಲ್ಲಿ ತಮ್ಮ ತಪಸ್ಸಿನ ಕೆಲಭಾಗವನ್ನು ನಿಸರ್ಗದ ಅರಿಯುವಿಕೆಗೂ ಮೀಸಲಿಡುತ್ತಿದ್ದರು. ಆ ಕಾಲಕ್ಕೆ ಗಡಿಯಾರಗಳ ಆವಿಷ್ಕಾರ ಆಗಿತ್ತೋ ಇಲ್ಲವೋ ಅದು ತಿಳಿದಿಲ್ಲ, ’ಘಳಿಗೆ ಬಟ್ಟಲು’ ಎಂಬ ಸಮಯವನ್ನು ತಿಳಿಯುವ ಸಾಧನವನ್ನು ನಮ್ಮ ನಿಕಟಪೂರ್ವ ಶತಮಾನಗ ಹಿರಿಯರು ಹೊಂದಿದ್ದರು ಎಂಬುದು ಎಲ್ಲರಿಗೂ ವಿದಿತವಾದ ವಿಷಯ. ಒಂದು ಘಳಿಗೆ ಎಂದರೆ ಇಂದಿನ ೨೪ ನಿಮಿಷಗಳು. ಅಂತಹ ಹಲವಾರು ಘಳಿಗೆಗಳು ಸೇರಿ ದಿನದಲ್ಲಿನ ಸಮಯದ ಲೆಕ್ಕ ಸಾಗುತ್ತಿತ್ತು. ಘಳಿಗೆ-ಲಿಪ್ತಿ ಇವತ್ತಿಗೂ ನಮ್ಮ ಆರ್ಷೇಯ ಪಂಚಾಂಗದಲ್ಲಿ ಚಾಲ್ತಿಯಲ್ಲಿರುವ ವಿಚಾರ. ನಮ್ಮಲ್ಲಿ ಬಹುತೇಕರಿಗೆ ಅದರ ಮೇಲೆ ಅಸಡ್ಡೆ ಇದ್ದರೂ ಸಮಯದ ಲೆಕ್ಕಹಾಕುವಲ್ಲಿ ಆ ಅಳತೆ ಕೂಡ ಅತ್ಯಂತ ಸಮಂಜಸ. ಧಾರವಾಡದ ಜಿಲ್ಲೆಯೊಂದರಲ್ಲಿ ಘಳಿಗೆ ಬಟ್ಟಲು ಯಾರದೋ ಮನೆಯಲ್ಲಿ ಈಗಲೂ ಬಳಕೆಯಿಲ್ಲದೇ ಬಿದ್ದಿದ್ದನ್ನು ಸಂಶೋಧಕ ಚಿದಾನಂದ ಮೂರ್ತಿಯವರು ಮೊನ್ನೆ ಮೊನ್ನೆ ಸಂಗ್ರಹಿಸಿದ್ದಾರೆ.

ನಾವು ಪಂಚಭೂತಗಳನ್ನು ಪರಿಗಣಿಸುವುದೆಷ್ಟು? ಭೂಮಿಯೊಂದನ್ನು ಬಿಟ್ಟು ನಮಗೆ ಮಿಕ್ಕುಳಿದವು ತೀರಾ ಅಗತ್ಯವಿಲ್ಲದವು ಅಂದುಕೊಳ್ಳುತ್ತೇವೆ. ಭೂಮಿಯ ಬೆಲೆ ಮಾತ್ರ ದಿನವೂ ನಮಗೆ ಗೋಚರವಾಗುತ್ತದೆ! ಇದಕ್ಕೆ ಕಾರಣ ಆಳುವ ದೊರೆಗಳ ಹಾಗೂ ಮಾಜೀ ದೊರೆಗಳ ಭೂಮಿ ನುಂಗುವ ಕಸರತ್ತೂ ಇರಬಹುದು. ನೀರು ಉಕ್ಕೇರಿ ಬಂದರೆ ಅಥವಾ ಕುಡಿಯಲು ನೀರು ಸಿಗದೇ ಹೋದರೆ ಆಗಮಾತ್ರ ನಾವು ನೀರನ್ನು ಹುಡುಕುತ್ತೇವೆ. [ನೀರಿನ ಬೆಲೆಯನ್ನು ಕಳಪೆ ಬಾಟಲುಗಳಲ್ಲಿ ತುಂಬಿ ಐ.ಎಸ್. ಐ. ಮುದ್ರಿತ ನಕಲೀ ಪತ್ರವನ್ನು ಅದಕ್ಕೆ ಅಂಟಿಸಿ ಮಾರುವವರು ಮಾತ್ರ ಚೆನ್ನಾಗಿ ಅರಿತಿದ್ದಾರೆ!] ಎಲ್ಲಾದರೂ ಬೆಂಕಿಯಿಂದ ಅಪಘಾತ ಸಂಭವಿಸಿದರೆ ಆಗ ನಮ್ಮ ಮನಸ್ಸು ಜಾಗ್ರತಗೊಳ್ಳುತ್ತದೆ. ಆಕಾಶದ ತುಂಬಾ ಮೋಡ ತುಂಬಿದರೆ ಮಾತ್ರ ಎಲ್ಲೋ ಒಮ್ಮೆ ನೋಡುತ್ತೇವೆಯೇ ಹೊರತು ಅಲ್ಲಿ ನಮಗೇನು ಕೆಲಸ? ಗಾಳಿ ಹೇಗೂ ಬೀಸುತ್ತದೆ, ಸ್ವಲ್ಪ ಜೋರಾಗಿ ಅಬ್ಬರಿಸಿದರೆ ಮಾತ್ರ ಆಗ ತಲೆಕೆಡಿಸಿಕೊಳ್ಳುವ ಜಾಯಮಾನ! ಒಟ್ಟಾರೆ ನಿತ್ಯವೂ ಪಂಚಮಹಾಭೂತಗಳ ಪ್ರಸ್ತುತಿ ನಮಗೆ ಅನಿವಾರ್ಯವಾದರೂ ನಮ್ಮ ಗಡಿಬಿಡಿಯಲ್ಲಿ ಅನ್ನಬೇಯಿಸಿಕೊಂಡು ತಿಂದರೆ ಸಾಕು ಎಂಬ ಮನೋಭಾವದವರು ನಾವು-ಹೀಗಾಗಿ ನೋಡುವ, ತಿಳಿಯುವ ಗೋಜಿಗೇ ಹೋಗುವುದಿಲ್ಲ.

ಹಾಗಂತ ಆಯಾಯ ಸಮಯಕ್ಕೆ ಸಿಗುವ ಹಣ್ಣು-ಹಂಪಲುಗಳನ್ನು ಮೆಲ್ಲುತ್ತೇವೆ, ಹೂವುಗಳನ್ನು ಬಳಸುತ್ತೇವೆ -ಇದಕ್ಕೆಲ್ಲಾ ಅಡ್ಡಿಯಿಲ್ಲ. ನಾವು ಗುರುತಿಸಲಿ ಗುರುತಿಸದೇ ಇರಲಿ ಪ್ರಕೃತಿ ತನ್ನ ಕರ್ತವ್ಯವನ್ನು ಸದಾ ಪಾಲಿಸುತ್ತಲೇ ಇರುತ್ತದೆ. ಆ ನಿಯಮದಂತೇ ಸಮಯವನ್ನವಲಂಬಿಸಿ ಪ್ರಕೃತಿಯಲ್ಲಿ ಮಾರ್ಪಾಡುಗಳು ನಡೆಯುತ್ತಲೇ ಇರುತ್ತವೆ. ಬರೇ ಬಿಸಿಲು, ಬರೇ ಮಳೆ, ಬರೇ ಚಳಿ ಯಾರಿಗೂ ವಿಹಿತವಲ್ಲ. ಆಗಾಗ ಈ ಕ್ರಿಯೆಗಳಲ್ಲಿ ಮಾರ್ಪಾಡು ನಡೆದಾಗ ಮಾತ್ರ ನಮಗೆ ಜೀವನದ ಗತಿಯಲ್ಲಿ ಹೊಸ ಹುರುಪು-ಆಸಕ್ತಿ ಬರುತ್ತದೆ. ಈಗೀಗ ನಮ್ಮ ಸ್ವಯಂಕೃತ ದಾಳಿ ಪ್ರಕೃತಿಯಮೇಲೆ ಆಗಿರುವುದರಿಂದ ಕಾಲಗಳೂ ಸಮ್ಮಿಶ್ರಸರಕಾರಗಳಂತೇ ದಿನಕ್ಕೊಂದು ವರಾತ ತೆಗೆಯುವುದು ಸಾಮಾನ್ಯವಾಗಿದೆ! ಇಲ್ಲದಿದ್ದರೆ ಭೌಗೋಳಿಕವಾಗಿ ಭಾರತದಲ್ಲಿ ೩ ಕಾಲಗಳೂ ಸಮರ್ಪಕವಾಗಿ ಘಟಿಸುತ್ತವೆ.

ಆ ಕಾಲಕ್ಕೇ ನಮಗಿಂತಾ ಅಧಿಕ ತಿಳುವಳಿಕೆ ಹೊಂದಿದ್ದ ಋಷಿಗಳು ವಿಮಾನವನ್ನೂ ಸೃಜಿಸಿದ್ದರು, ಹಲವು ಉಪಕರಣಗಳನ್ನು ತಯಾರಿಸಿದ್ದರು. ಆದರೆ ಯಾವುದೂ ಪ್ರಕೃತಿಯ ವಿರುದ್ಧ ನಡೆಯುವ ಸಂಚಾಗಿರಲಿಲ್ಲ. ಪಕೃತಿಯನ್ನು ಹಾಳುಗೆಡಹುವ ಕೆಲಸಗಳು ನಡೆಯುತ್ತಿರಲಿಲ್ಲ. ಗಣಿಗಳನ್ನು ನಿರ್ಮಿಸಿ ನುಂಗುವ ಭಕಾಸುರರಿರಲಿಲ್ಲ! ತ್ಯಾಜ್ಯಗಳನ್ನು ಹರಿಯುವ ನೀರಿಗೂ ಬೀಸುವ ಗಾಳಿಗೂ ಚೆಲ್ಲಿ ಕೈತೊಳೆದುಕೊಳ್ಳುವ ಮೂಕಾಸುರರಿರಲಿಲ್ಲ. ಅರಣ್ಯದ ಗಿಡಮರಗಳನ್ನು ಹಣಕ್ಕಾಗಿ ಕಡಿದು ಮಾರಿಕೊಳ್ಳುವ ಮಾಗಧರಿರಲಿಲ್ಲ. ಹೆಚ್ಚೇಕೆ ’ಹಣವೇ ಎಲ್ಲವೂ’ ಎಂಬ ಮನೋವೈಕಲ್ಯ ಅಂದಿಗಿರಲಿಲ್ಲ. ಅಂದಿನ ಜನ ಪ್ರತಿಯೊಂದರಲ್ಲೂ ಪರಮಾತ್ಮನನ್ನು ಕಂಡರು. ಅಣುರೇಣು ತೃಣಕಾಷ್ಠಗಳಲ್ಲಿಯೂ ಆ ದಿವ್ಯಶಕ್ತಿಯೊಂದು ಆವಿರ್ಭವಿಸುವುದನ್ನು ತಿಳಿದರು. ಅದಕ್ಕೇ ಅವುಗಳನ್ನೆಲ್ಲಾ ಪೂಜಿಸಿದರು. ಬಳಸುವ ಪ್ರತಿಯೊಂದನ್ನೂ ಪೂಜನೀಯ ವಾಗಿಸಿದರು. ಉದಾಹರಣೆಗೆ -ತಿನ್ನುವ ಅನ್ನಕ್ಕೂ " ಕೇವಲ ನನ್ನ ಭೌತಿಕ ಅಸ್ಥಿತ್ವಮಾತ್ರಕ್ಕಾಗಿ ನಿನ್ನನ್ನು ಸ್ವಾಹಾಕಾರ ಮಾಡುತ್ತಿದ್ದೇನೆ, ಕ್ಷಮಿಸು " ಎಂಬರ್ಥದಲ್ಲಿ ಕೈಮುಗಿದು ಪ್ರಾರ್ಥಿಸುವ ಕಳಕಳಿ ಇತ್ತು. ಅವರು ತಿನ್ನುವುದಕ್ಕಾಗಿ ಬದುಕುವ ಬದಲು ಬದುಕುವುದಕ್ಕಾಗಿ ತಿನ್ನುತ್ತಿದ್ದರು! ಸಾರ್ವಜನಿಕರು ಬಳಸಬಹುದಾದ ನದಿ/ತೊರೆಗಳನ್ನು ತಮ್ಮ ತ್ಯಾಜ್ಯಗಳಿಂದ ಮಲಿನಗೊಳಿಸುತ್ತಿರಲಿಲ್ಲ. ಹವೆಯನ್ನು ದೂಷಿತಗೊಳಿಸುತ್ತಿರಲಿಲ್ಲ. ಹೀಗೇ ಎಲ್ಲದರಲ್ಲೂ ಹದವರಿತು ನಡೆಯುವ ನಡತೆ ಅವರದಾಗಿತ್ತು.

ಅಂತಹ ಮನುಜಶ್ರೇಷ್ಠರು ತಮ್ಮ ಸುತ್ತಲ ಜಗತ್ತಿನ ಆಗೊಹೋಗುಗಳನ್ನು ಅವಲೋಕಿಸಿ ತಮ್ಮ ಬದುಕಿಗೂ ಮುಂದಿನ ತಮ್ಮ ಜನಾಂಗಕ್ಕೂ ಬೇಕಾಗಿ ನೈಸರ್ಗಿಕವಾಗಿರುವ ಹಲವು ಸೂತ್ರಗಳನ್ನು ಸಂಶೋಧಿಸಿದರು, ಅಭ್ಯಸಿಸಿದರು. ಅದನ್ನೇ ತಮ್ಮ ಹೊತ್ತಗೆಗಳಲ್ಲಿ ದಾಖಲಿಸಿದರು, ಮಂತ್ರಗಳೋಪಾದಿಯಲ್ಲಿ ಬಾಯಿಂದ ಬಾಯಿಗೆ ಅದು ತೆರಳಿ ಎಲ್ಲರಿಗೂ ಸಿಗುವಂತೇ ಅನುವುಮಾಡಿಕೊಟ್ಟರು. ಪರಿಸರದಲ್ಲಿ ಪಂಚಮಹಭೂತಗಳನ್ನೂ ಪರಿವೀಕ್ಷಿಸಿ, ತುಲನೆಮಾಡಿ ಕಾಲಗಣನೆಗೆ ’ಪಂಚಾಂಗ’ವೆಂಬ ಗಣಿತವನ್ನು ಜಾರಿಯಲ್ಲಿ ತಂದರು. ಐತಿಹಾಸಿಕವಾಗಿ ನೋಡುವುದಾದರೆ ಆರ್ಯಭಟ, ವರಾಹಮಿಹಿರ ಇವರೆಲ್ಲರ ಕೊಡುಗೆ ಅಪಾರವಾಗಿದೆ. ಯಾವುದೇ ದೂರದರ್ಶಕ ಯಂತ್ರಗಳ ಪ್ರಲೋಭನೆಯಿಲ್ಲದೇ ಗ್ರಹಗಳನ್ನೂ ನಕ್ಷತ್ರಗಳನ್ನೂ ಆಕಾಶ ಕಾಯಗಳನ್ನೂ ಗುರುತಿಸಿ, ಹೆಸರಿಸಿ ಅವುಗಳ ಚಲನವಲನೇತ್ಯಾದಿ ರೂಢಪ್ರಕ್ರಿಯೆಗಳನ್ನು ತಮ್ಮ ನಿರಂತರ ತೊಡಗುವಿಕೆಯಿಂದ ಅರಿತುಕೊಂಡರು. ಎಲ್ಲದಕ್ಕೂ ಪ್ರಮಾಣೀಕೃತವಾಗಿ ಕರಾರುವಾಕ್ಕಾಗಿ ಲೆಕ್ಕಮಾಡುವ ಸಲುವಾಗಿ ಅದು ಹೇಗೆ ಆ ಗಣಿತವನ್ನು ಬರೆದರೋ ತಿಳಿಯಹೊರಟರೆ ಆಶ್ಚರ್ಯವಾಗುತ್ತದೆ--ಆದರೂ ಸತ್ಯವನ್ನು ಒಪ್ಪಲೇಬೇಕಾಗುತ್ತದೆ. ಇವತ್ತಿಗೂ ಪಂಚಾಂಗಗಳು ಇದೇ ಗಣಿತಪದ್ಧತಿಯನ್ನಾಧರಿಸಿ ಸಿದ್ಧಗೊಳ್ಳುತ್ತವೆ ಮತ್ತು ಎಲ್ಲರಿಗೂ ಗೋಚರಿಸಬಹುದಾದ ಪ್ರಾದೇಶಿಕ ಗ್ರಹಣೇತ್ಯಾದಿಗಳನ್ನೂ ಅವುಗಳ ಸಮಯವನ್ನೂ ಸೂಚಿಸಿ ತಿಳಿಸುತ್ತಾರೆ.

ಪ್ರಕೃತಿಯಲ್ಲಿ ನಡೆಯುವ ಕಾಲಾನುಸಂಧಾನಕ್ಕೆ ವರ್ಷಂಪ್ರತಿ ಮರುಕಳಿಸುವ ಘಟನೆಗಳನ್ನವಲಂಬಿಸಿ ಇಡೀ ವರ್ಷದಲ್ಲಿ ಇಂತಿಂತಹ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಎಷ್ಟುದಿನ ವಿಹರಿಸುತ್ತವೆ ಎಂಬುದನ್ನೂ ಗುಣಿಸಿದರು. ವರ್ಷಕ್ಕೆ ಹನ್ನೆರಡು ಮಾಸಗಳು[ತಿಂಗಳುಗಳು] ೨೪ ಪಕ್ಷಗಳು,ದ್ವಾದಶ ರಾಶಿಗಳು, ದಿನದ ಗುರುತಿಗೆ ತಿಥಿ-ನಕ್ಷತ್ರಗಳು, ೬ ಋತುಗಳನ್ನೂ ಹೆಸರಿಸಿದರು. ಅಂತಹ ಆರು ಋತುಗಳ ಪೈಕಿ ಮೊದಲ ಋತುವಾಗಿ ವಸಂತ ಆಗಮಿಸುತ್ತದೆ. ಋತುಗಳನ್ನು ವ್ಯಕ್ತಿಗಳಂತೇ ಹೇಳಿಕೊಳ್ಳುವುದು ಒಂದು ಸಂಭ್ರಮ. ಆ ಕಾರಣಕ್ಕಾಗಿ ವಸಂತವನ್ನು ವಸಂತನೆಂದೂ ವಸಂತರಾಜನೆಂದೂ ಹೇಳಿದ ಕವಿಗಳು ವಸಂತನ ವೈಭವವನ್ನು ಹಾಡಿಹೊಗಳಿದರು.

ಬಿರುಬೇಸಿಗೆಯಲ್ಲೂ ಬಹುತೇಕ ಎಲ್ಲಾ ಗಿಡಮರಗಳು ಹಳೆಯ ಎಲೆಗಳನ್ನು ಉದುರಿಸಿ ಬೋಳಾಗಿ ಮತ್ತೆ ಚಿಗುರುವ, ಚಿಗುರಿದ ಅವುಗಳಲ್ಲಿ ಬಣ್ಣಬಣ್ಣದ ಹೂಗಳರಳುವ ಅರಳಿದ ಹೂಗಳು ಜೊತೆಗೇ ಮಿಡಿಕಚ್ಚಿ ಕಾಯಿಗಳಾಗಿ ಹಣ್ಣುಗಳಾಗಿ ಎಲ್ಲಾ ಗಿಡ-ಮರಗಳು ವಿಜೃಂಭಿಸುವ ಕಾಲ ವಸಂತಕಾಲ. ಮಾವು, ಹಲಸು, ದಾಳಿಂಬೆ, ಕರಬೂಜ, ಅನಾನಸು, ಕಿತ್ತಳೆ, ನೇರಳೆ, ಸೀಬೆ, ಚಕ್ಕೋತ....ಯಾವುದನ್ನು ಹೇಳಲಿ ಯಾವುದನ್ನು ಬಿಡಲಿ ಎಲ್ಲಾವಿಧದ ಹಣ್ಣುಗಳೂ ಮರಗಳಲ್ಲಿ ಕಾಣಸಿಗುವ ಏಕೈಕ ಋತು ವಸಂತ. ಅರಳಿದ ಹೂಗಳ ಮಕರಂದವನ್ನು ಹೀರಿ ಹೊಟ್ಟೆತುಂಬಿಸಿಕೊಳ್ಳುವ ದುಂಬಿಗಳು ಪರೋಕ್ಷ ಪರಾಗಸ್ಪರ್ಶಕ್ಕೆ ಕಾರಣವಾಗಿ ಮರಗಳು ಫಲಭರಿತವಾಗುವ ಈ ನಿಸರ್ಗದ ವಿಸ್ಮಯ ಸಂತಸಕ್ಕೆ ಕಾರಣವಾಗುತ್ತದೆ. ಬೆಳೆವ ಭೂಮಿಯೊಂದೇ ಆದರೆ ಬೆಳೆಯುವ ಗಿಡ-ಮರಗಳಲ್ಲಿ ವೈಖರಿ, ಹೂವುಗಳಲ್ಲಿ- ಅವುಗಳ ಪರಿಮಳಗಳಲ್ಲಿ ಭಿನ್ನತೆ, ಕಾಯಿಗಳಲ್ಲಿ-ಹಣ್ಣುಗಳಲ್ಲಿನ ವೈವಿಧ್ಯ ಇದನ್ನೆಲ್ಲಾ ನೋಡುವಾಗ ನಮಗನಿಸುವುದು ಮೂಲವಾಅಗಿ ಇವೆಲ್ಲಾ ಹೇಗೆ ಜನಿಸಿದವು. ಈ ವಾದ ’ವೃಕ್ಷಮೊದಲೋ ಬೀಜಮೊದಲೋ’ ಎಂಬ ಕುತೂಹಲಕ್ಕೆ ನಾಂದಿಹಾಡುತ್ತದೆಯಾದರೂ ಇಂದಿಗೂ ಅದರ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ! ಋತುಮಾನದ ಈ ಬದಲಾವಣೆಯನ್ನು ಕಂಡಾಗ ಮೈಮನಸ್ಸು ಮುದಗೊಳ್ಳುತ್ತದೆಯಲ್ಲವೇ-- ಅದಕ್ಕೇ ಈ ವಸಂತೋತ್ಸವ.

ಕಾಲಚಕ್ರಕ್ಕೆ ಅದರ ಬುನಾದಿಯ ಹೆಜ್ಜೆಗುರುತನ್ನು ಋಷಿಗಳು ಗುರುತಿಸಿದರು. ಬೃಹತ್ ಕಾಲಖಂಡವನ್ನು ಯುಗವೆಂದು ಕರೆದರು. ನಾಲ್ಕು ಯುಗಗಳು ಪರಿಭ್ರಮಣಗೊಳ್ಳುತ್ತವೆ ಎಂಬುದನ್ನು ತಿಳಿಸಿದರು. ಅಂತಹ ಯುಗಗಳಲ್ಲಿ ನಾಲ್ಕನೇಯುಗವಾದ ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ. ಮುಂದೆ ಇನ್ನೂ ಮೂರು ಪಾದಗಳು ಬಾಕಿ ಇರುವುದರಿಂದಲೂ ಮೊದಲನೇ ಪಾದವೇ ಇನ್ನೂ ಬಹಳ ಕಾಲ ಇರುವುದರಿಂದಲೂ ಕ್ರಿಸ್ತ ಶಕ ೨೦೧೨ಕ್ಕೆ ಜಗತ್ ಪ್ರಳಯ ಸಂಭವಿಸುತ್ತದೆ ಎಂಬ ಅಮೇರಿಕಾ ಮೂಲದ ವದಂತಿಗಳಿಗೆ ಕಿವಿಗೊಡುವುದು ಹಾಸ್ಯಾಸ್ಪದವಾಗಿದೆ. ಇದನ್ನೇ ಮಾಧ್ಯಮಗಳಲ್ಲಿ ಮತ್ತೆ ಉಗುಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಢೋಂಗಿ ’ಗುರೂಜಿ’ ಗಳು ಹೆಚ್ಚಾಗಿರುವುದೂ ಮತ್ತು ಅವರನ್ನು ಮಾಧ್ಯಮಗಳವರು ಪ್ರೋತ್ಸಾಹಿಸುತ್ತಿರುವುದು ನಮ್ಮ ಮೌಢ್ಯಕ್ಕೆ ಹಿಡಿದ ಕನ್ನಡಿಯಾಗಿದೆ!

ಯುಗದ ಆದಿ ಯಾವತ್ತು ಆಯಿತೋ ಆ ದಿನಕ್ಕೆ ಯುಗಾದಿ ಎಂಬ ಹೆಸರುಬಂತು. ಇದು ಯುಗದ ಜಯಂತಿ ಎಂದರೂ ತಪ್ಪಲ್ಲ. ವರ್ಷಂಪ್ರತಿ ಹುಟ್ಟುಹಬ್ಬಗಳು ಬರುವಂತೇ ಯುಗಕ್ಕೂ ಹುಟ್ಟಿದದಿನವಿದೆ ಎಂದು ಜ್ಞಾನಿಗಳು-ತಪೋಧನರು ಗುರುತಿಸಿದರು. ವರುಷಕ್ಕೊಮ್ಮೆ ಬರುವ ಈ ಯುಗಾದಿ ವಸಂತನನ್ನೂ ಕರೆತರುತ್ತದೆ. ಚಂದ್ರನನ್ನು ಪ್ರಧಾನವಾಗಿ ಹಿಡಿದು ಗುಣಿಸುವ ಈ ಪದ್ಧತಿ ಚಾಂದ್ರಮಾನವೆನಿಸಿಕೊಳ್ಳುತ್ತದೆ. ಸೂರ್ಯನನ್ನು ಪ್ರಧಾನವಾಗಿಟ್ಟು ಲೆಕ್ಕಿಸುವ ಪದ್ಧತಿ ಸೌರಮಾನವೆನಿಸುತ್ತದೆ. ವಾಡಿಕೆಯಲ್ಲಿ ಚಾಂದ್ರಮಾನ ಪದ್ಧತಿಗೂ ಋತುಮಾನಗಳ ಪರಿವರ್ತನೆಗೂ ಇರುವ ಸಾಮ್ಯ ಸೌರಮಾನದಲ್ಲಿ ವ್ಯತ್ಯಸ್ತವಾಗಿ ಕಾಣುವುದರಿಂದ ಚಾಂದ್ರಮಾನ ಪದ್ಧತಿ ಹೆಚ್ಚಾಗಿ ಬಳಕೆಯಲ್ಲಿದೆ. ಮಕರ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಮೆದ್ದ ನಾವು ಯುಗಾದಿಯಲ್ಲಿ ಬೇವು-ಬೆಲ್ಲವನ್ನು ಮೇಯುತ್ತೇವೆ. ಜೀವನದಲ್ಲಿ ಕಷ್ಟ-ಸುಖಗಳು ಸಹಜವೇ. ಬರೇ ಕಷ್ಟವಾಗಲೀ ಸುಖವಾಗಲೀ ಯಾರಿಗೂ ಇರುವುದಿಲ್ಲ. ಹುಟ್ಟಿದ ಪ್ರತೀ ಜೀವಿಗೂ ಕಷ್ಟ-ಸುಖದ ಮಜಲುಗಳು ಇದ್ದೇ ಇರುತ್ತವೆ. ಮುಂಬರುವ ನಮ್ಮ ಈ ಸಂವತ್ಸರದಲ್ಲಿ ಕಷ್ಟಗಳನ್ನು ಸಹಿಸುವ ಸುಖವನ್ನು ಅನುಭವಿಸುವ ಶಕ್ತಿ-ಅನುಕೂಲ ನಮಗಿರಲಿ ಎಂಬ ಸಾಂಕೇತಿಕ ಪ್ರಾರ್ಥನೆಯನ್ನು ಜಗನ್ನಿಯಾಮಕ ಶಕ್ತಿಗೆ ಬೇವು-ಬೆಲ್ಲ ಸಮರ್ಪಿಸಿವುದರ ಮೂಲಕ ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತೇವೆ.

ಆಡುತಲಾಡುತ ಬಂದ ವಸಂತ
ನಾಡಿನ ಕಾಡಿನ ಗಿಡಗಳಲೀ
ನೀಡಿದ ಬಹುವಿಧ ಸುಫಲಪುಷ್ಪಗಳ
ಆಡಿಸಿ ಮನ ಮುದ ಗೊಳಿಸುತಲೀ

ಯುಗಗಳು ಕಳೆದರೂ ಆತ ನಿರಂತರ
ನಗುಮೊಗ ತೋರುವ ಮೆಚ್ಚುತಲೀ
ಬಗೆಬಗೆ ಗಿಡಗಂಟಿಗಳಾ ಚಿಗುರಿಸಿ
ಅಗರು ಬಣ್ಣಗಳ ಹಚ್ಚುತಲೀ

ಮಾವಿನ ಚಿಗುರಿಗೆ ಕೋಗಿಲೆ ಕೂಗಿಗೆ
ಆವನು ಕಾರಣವೀ ಜಗದಿ ?
ಕಾವನ ಕಾಂಬೆನು ಬಿರುಬೇಸಿಗೆಯಲು
ಆ ವನರಾಶಿಗಳಾ ಜಲಧಿ !

ಸಾಕೆನಿಸುವ ಬೇಸರ ಬೇಗುದಿಗಳ
ತಾಕಾಣುತ ನಿವಾರಿಸುತಾ
ನಾಕವ ಸೃಜಿಸುವ ನಮ್ಮೀ ನೆಲದಲಿ
ಬೇಕಾದ್ದೆಲ್ಲವ ತೋರಿಸುತಾ

ಯುಗದಾದಿಯ ಈ ದಿನದಲಿ ಹಬ್ಬವು
ಜಗೆಯುತಾ ಬೇವು-ಬೆಲ್ಲಗಳಾ
ಮೊಗೆಯುತ ನೀಡಲಿ ಸುಖ-ಸಮೃದ್ಧಿಗಳ
ಮಗುದನೇಕ ಯುಗಾದಿಗಳಾ

ಇದು ಸಾಂಕೇತಿಕವಾಗಿ ಹಿಂದೂ ಹಬ್ಬವೆನಿಸಿದರೂ ನಿಸರ್ಗದ ಹಬ್ಬ. ನಿಸರ್ಗ ನೋಂಪಿಯ ಪರ್ವ. ಈ ಹಬ್ಬ ಎಲ್ಲರದಾಗಲಿ, ಸರ್ವಜನಾಂಗಕೂ ಶುಭತರಲಿ, ಎಲ್ಲರ ಜೀವನವೂ ಆಯುಷ್ಯ-ಆರೋಗ್ಯ-ಐಶ್ವರ್ಯ-ಸುಖ-ಸಮೃದ್ಧಿಗಳಿಂದ ತುಂಬಿರಲಿ ಎಂದು ಮನದುಂಬಿ ಹಾರೈಸುತ್ತಾ ಸದ್ಯಕ್ಕೆ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ,

|| ಸರ್ವೇ ಜನಾಃ ಸುಖಿನೋ ಭವಂತು || || ಸಮಸ್ತ ಸನ್ಮಂಗಳಾನಿ ಭವಂತು ||

6 comments:

  1. ಭಟ್ಟರೆ,
    ಯುಗಾದಿಯ ಬಗೆಗೆ ಚೆನ್ನಾಗಿ ತಿಳಿಸಿದ್ದೀರಿ. ಯುಗಾದಿ, ದೀಪಾವಳಿ, ಸೀಗೆ ಹುಣ್ಣಿವೆ ಮೊದಲಾದ ಹಬ್ಬಗಳು ನಿಸರ್ಗದ ಹಬ್ಬಗಳೇ ಆಗಿವೆ. ಇವು ಕೇವಲ ಹಿಂದು ಹಬ್ಬಗಳು ಎನ್ನುವದು ಸರಿಯಲ್ಲ. ಭಾರತ ದೇಶದಲ್ಲಿಯ ಎಲ್ಲ ಧರ್ಮದವರೂ ಈ ಹಬ್ಬಗಳನ್ನು
    ಆಚರಿಸುವದು ಉಚಿತವೇ ಆಗಿದೆ.
    ನಿಮ್ಮ ವಿವರಣೆ ಹಾಗು ಕವನ ಸೊಗಸಾಗಿವೆ.

    ReplyDelete
  2. Bhat sir,

    Sundara kavana haagu vararane jotege yugaadiya kurita baraha manasiige muda needitu...

    ReplyDelete
  3. ಯುಗಾದಿಯ ಲೇಖನ ಮತ್ತು ಕವನದ ಒಗ್ಗರಣೆ ತುಂಬಾ ಚನ್ನಾಗಿ ಮೂಡಿದೆ ವಿ.ಆರ್.ಬಿ ಸರ್ ಲೇಖನ...ಯುಗಾದಿಯ ಶುಭಾಶಯಗಳು...ಮತ್ತೊಮ್ಮೆ

    ReplyDelete
  4. ಉಗಾದಿಯ ಬಗ್ಗೆ ಎಷ್ಟೊಂದು ಮಾಹಿತಿ ಕೊಟ್ಟಿದ್ದಿರ,
    ಧನ್ಯವಾದಗಳು ಸರ್

    ReplyDelete
  5. Mahiti neediddeeri..
    Dhanyavadagalu..
    Shubhashayagalu..

    ReplyDelete
  6. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ReplyDelete