ಚಂದಿರೆಯ ನೋಟದಲಿ !
ಬೆಳಕಿನುತ್ಸವದಲ್ಲಿ ಗೆಳತಿಯರ ಹಿಂಡಿನಲಿ
ಥಳುಕುಬಳುಕಿನ ನೀಳ ಚಂದಿರೆಯ ಕಂಡೆ
ಪುಳಕಗೊಂಡಾ ಮನಸು ನನ್ನೊಳಗೇ ನಾಚುತ್ತಾ
ಸೆಳೆತದಲಿ ನನ್ನನ್ನೇ ನಾ ಕಳೆದುಕೊಂಡೆ!
ನಳಿನ ಮುಖಿ ನಗುವಾಗ ದಾಳಿಂಬೆ ಬೀಜಗಳು
ಚಳಿಯನೆಬ್ಬಿಸುವಂಥಾ ನಳಿದೋಳುಗಳನು
ಗುಳಿಯಿರುವ ಕೆನ್ನೆಗಳು ಕಪ್ಪುನೇರಳೆ ಕಣ್ಣು
ಬಿಳಿಯ ಬಟ್ಟೆಯನುಟ್ಟು ತೊನೆದಾಡುವಳನು
ಇಳೆಯೊಳಗೆ ಹದಬೆಳೆದ ಬಾಳೆಯಾ ದಿಂಡುಗಳ
ಎಳೆದು ನಿಲ್ಲಿಸಿದಂಥ ದುಂಡುತೊಡೆಗಳವು
ಬಳೆಗಳೆರಡಾಡುವಾ ಕೈಗಳಲಿ ಕಿಂಕಿಣಿರು
ಕೊಳೆಯಿರದ ನುಣುಪಾದ ಪಾದ ತೋರಿದಳು
ಎಳೆಯಮಗುವಿನ ಮುಗ್ಧ ಸ್ನಿಗ್ಧ ಸೌಂದರ್ಯವತಿ
ಎಳೆಗರುವಿನಾ ತೆರದಿ ಜಿಗಿಜಿಗಿದು ಓಡಿ
ಎಳೆದೊಯ್ದಳೆನ್ನ ಮನ ಅವಳೊಡನೆ ಎಲ್ಲೆಲ್ಲೋ
ಎಳೆನಡುವ ಕುಲುಕಿಸುತ ಬೆಂಬಿಡದೆ ಕಾಡಿ
ಹಳೆಯದೇಗುಲದಲ್ಲಿ ಹೊಸವಿಗ್ರಹದ ರೀತಿ
ಹೊಳೆಯುತ್ತ ನಿಂತವಳ ಕದ್ದು ನೋಡುವೊಲು
ಕಳೆಯಂಥದದು ಮೊಗದಿ ರತಿದೇವಿ ಭೂಮಿಯಲಿ!
ಅಳೆಯುತಿಹಳಲ್ಲಲ್ಲೇ ಓರೆನೋಟದಲಿ !
ಕಳಕಳಿಯು ನನ್ನದಿದೆ ಓದೇವ ನಿನ್ನಲ್ಲಿ
ಸೆಳೆತಂದು ಕೊಡಮಾಡು ಬಾಳರಥದಲ್ಲಿ
ಕಳೆಕಟ್ಟಲೆನ್ನ ಜೀವನದಾಕೆ ನಡೆಬರಲಿ
ಬೆಳಗುವೆನು ಸಾವಿರದ ಹಣತೆ ನಿತ್ಯದಲಿ !
ಭಟ್ ಸಾರ್..
ReplyDeleteತುಂಬಾ ಚೆನ್ನಾಗಿದೆ...
ಶ್ಯಾಮಲ
ಭಟ್ಟರೆ,
ReplyDeleteದೇವರು ನಿಮ್ಮ ಅಪೇಕ್ಷೆಯನ್ನು ಪೂರೈಸಲಿ!
ಶೃ೦ಗಾರ ರಸಕಾವ್ಯ ಭಟ್ಟರೊಳು ಉದಿಸಿ
ReplyDeleteಹರಳುಗಟ್ಟಿದೆ ಇಲ್ಲಿ ಕವನವದು ಸ್ಫುರಿಸಿ
ಭಟ್ಟರೇ, ಚೆನ್ನಾಗಿದೆ, ಸಾಕಾರವಾಗಲಿ ನಿಮ್ಮ ಆಶಯ
ಕೆಲವೊಮ್ಮೆ ಬರೆಯುವಾಗ ಪರಕಾಯಪ್ರವೇಶದ ಅಗತ್ಯ ಬೀಳುತ್ತದೆ! ಬರೆಯುವಾತನಿಗೆ ಇದು ಅನಿವಾರ್ಯ ಸಹಜ. ಕಲಾವಿದ ತನ್ನ ಕುಂಚದಲ್ಲಿ, ಶಿಲ್ಪಿ ತನ್ನ ಉಳಿಯಲ್ಲಿ, ಸಂಗೀತಗಾರ ತನ್ನ ರಾಗಾಲಾಪದಲ್ಲಿ ತಾದಾತ್ಮ್ಯತೆಯಿಂದ ಏನನ್ನೋ ಚೆನ್ನಾಗಿ ಕಟ್ಟಿಕೊಡುವಂತೇ ಕವಿ-ಕಾವ್ಯ ಭಾವದಲ್ಲಿ ಎಲ್ಲವೂ ನಮ್ಮ ವೈಯ್ಯಕ್ತಿಕ ಆಶಯಗಳಲ್ಲ. ಆದರೂ ಜಗದ ಭಾವಜೀವಿಗಳಿಗೆ ಅವರ ಭಾವಗಳನ್ನು ನಮ್ಮದಾಗಿಸಿಕೊಂಡು ಸೃಷ್ಟಿಸುವ ಕೃತಿಗಳೂ ಹಲವಿರುತ್ತವೆ. ಅಂತಹ ಸನ್ನಿವೇಶದಲ್ಲಿ ಹರೆಯದ ಹುಡುಗನೊಬ್ಬ ದೇಗುಲವೊಂದರಲ್ಲಿ ಸುಂದರ ತರುಣಿಯನ್ನು ಕಂಡಾಗ ಆತನ ಮನೋಕಾಮನೆ ಯಾವರೀತಿ ಇದ್ದಿರಬಹುದೆಂಬ ಅನಿಸಿಕೆಯನ್ನು ನನ್ನದಾಗಿಸಿಕೊಂಡು ಬರೆಯಲು ಪ್ರಯತ್ನಿಸಿದ್ದೇನೆ. ಓದಿದ, ಸ್ಫಂದಿಸಿದ ಎಲ್ಲರಿಗೂ ನನ್ನ ನಮನಗಳು.
ReplyDeleteBhatre,
ReplyDeleteSundara kavana, nimmaashaya sakaaravaagali...
Happy ugadi to all of you.
ReplyDeletethanks & we all wish you the same
ReplyDelete