ನಾಟ್ಯಮಯೂರಿಯ ಬಯಸಿ
ಇದೊಂದು ಹೊಸಪ್ರಯೋಗ, ಮೂಲ ಭಾವನೆಗಳಿಗೆ ಧಕ್ಕೆಬಾರದ ರೀತಿಯಲ್ಲಿ ಒಂದೇ ಕವನದ ಆದಿ-ಅಂತ್ಯ ಪ್ರಾಸಗಳ ಜುಗಲ್ ಬಂದಿ, ತಮ್ಮೆಲ್ಲರ ಓದಿಗೆ ಅರ್ಪಿಸುತ್ತಿದ್ದೇನೆ:
-೧-
ರಂಗದೆದುರಿದ್ದೆನ್ನ ನೋಡಿ ನಕ್ಕಾ ಗಿಣಿಯೇ
ರಂಗು ಹಚ್ಚಿದೆಯಲ್ಲ ನನ್ನ ಎದೆಗೆ !
ಮಂಗಳದ ನರ್ತನದಿ ಹಲವು ಮನಗಳ ಕದ್ದು
ಭಂಗತಂದಿಡುತ ಓಡಿದೆಯಲ್ಲ ಒಳಗೆ !
/
ನೀ ನಕ್ಕು ನಲಿನಲಿದು ಕುಣಿದಾಗ ಆ ರಂಗ
ಹಚ್ಚಿಬಿಟ್ಟಿತು ಎದೆಗೆ ಹೊಸದೊಂದು ರಂಗ
ಹಲವು ಮನಗಳ ಕದ್ದೆ ನರ್ತಿಸುತ ಬಹಿರಂಗ
ಓಡಿ ಪರದೆಯ ಹಿಂದೆ ತಂದಿಟ್ಟೆ ಭಂಗ
-೨-
ಚಂಗನೇ ಜಿಗಿಯುತ್ತ ಜಿಂಕೆ ಸಾರಂಗಗಳ
ಅಂಗಾಂಗ ಹಾವಭಾವದಲಿ ತೋರಿಸುತಾ
ಮಂಗನಂತಾಗಿರುವ ನನ್ನಂಥ ಕೆಲವರೆಡೆ
ಭಂಗಿಯಲಿ ನಕ್ಕಪರಿ ಎಲ್ಲೋ ಸೆಳೆಯುತಾ
/
ಚಂಗನೇ ಜಿಗಿಯುತ್ತ ಜಿಂಕೆಗಳು ಸಾರಂಗ
ತೋರುತ್ತ ಹಾವಭಾವದಲವುಗಳಂಗ
ನನಂಥ ಕೆಲವರು ಮೈಮರೆತು ಬರಿ ಮಂಗ
ಸೆಳೆಯಿತೆಲ್ಲೋ ನಿನ್ನ ನಗೆ ಭಂಗಿ ಸಂಗ
-೩-
ಮುಂಗಾಲ ನೀವುವಾ ಮುದುಕರನು ಹರೆಯದೆಡೆ
ಬೆಂಗಾವಲಲಿ ತಂತು ತುಂಟ ನರ್ತನವು
ಸಂಗಾತಿಯಾದರೆ ಸಾವಿರದ ಹೊನ್ಕೊಡುವೆ
ಮುಂಗಡವೇ ಇಸಿದುಕೋ ಇಗೋ ಹೃದಯದೊಡವೆ !
/
ಮುಂಗಾಲ ನೀವುವಾ ಮುದುಕರಾದರು ರಂಗ
ನಿನ್ನ ಮೋಡಿಯು ನರ್ತಿಸುತಲಂತರಂಗ !
ಸಾವಿರದ ಹೊನ್ಕೊಡುವೆ ಸೇರು ನನ್ನಯ ಸಂಗ
ಹೃದಯದೊಡವೆಯು ಮುನ್ನ ಪ್ರೀತಿಯತರಂಗ
-೪-
ಕಂಗು ಮಾವಿನ ತಳಿರು ಚಪ್ಪರವ ಹಾಕಿಸುವೆ
ಬಂಗಾರ ಬಣ್ಣದಾ ಕಾಗದವ ಹಚ್ಚಿ
ತಿಂಗಳೊಪ್ಪತ್ತಿನಲಿ ನಾನೂ ನೀನೊಂದಾಗೆ
ಬಂಗಾಳಕೊಲ್ಲಿಯಲಿ ಸಂಗಮಿಸಿದಂತೆ
/
ಚಪ್ಪರವ ಹಾಕಿಸುವೆ ತಳಿರು ಮಾವು-ಕಂಗ
ಹಚ್ಚಿ ಬಂಗಾರದಾ ಚಿತ್ರ ಚದುರಂಗ
ತಿಂಗಳೊಪ್ಪತ್ತಿನಲಿ ನಾವಾಗೆ ಅರ್ಧಾಂಗ
ಬಂಗಾಳಕೊಲ್ಲಿಯಲಿ ನದಿ-ಶರಧಿ ಸಂಗ !
ಇಷ್ಟವಾಯಿತು
ReplyDeleteಕವನರಚನೆಯಲ್ಲಿ ಒಂದು ಪ್ರಾಸವೇ ಕಠಿಣವೆನಿಸುವಾಗ, ನೀವು ಆದಿ ಹಾಗು ಅಂತ್ಯಪ್ರಾಸ ಎರಡನ್ನೂ ಸಾಧಿಸಿದ್ದು ಅದ್ಭುತ ವಿಷಯ.
ReplyDeleteಓದಿದ ಮತ್ತು ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು
ReplyDeleteVinUtana Prayatna.. chennagide.
ReplyDeleteಧನ್ಯವಾದಗಳು-ತೇಜಸ್ವಿನಿಯವರಿಗೆ.
ReplyDelete