ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 12, 2011

ಕಥೆಯಾದರಿವರು ನಮ್ಮ-ನಿಮ್ಮ ನಡುವೆ


ಕಥೆಯಾದರಿವರು ನಮ್ಮ-ನಿಮ್ಮ ನಡುವೆ

ಬಾಲ್ಯದ ಹಲವು ದಿನಗಳನ್ನೂ ಜನರನ್ನೂ ನೆನೆದಾಗ ಕೆಲವು ವ್ಯಕ್ತಿಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹಾಗಂತ ಅವರು ನನಗೇನೋ ಸಹಾಯ ಮಾಡಿದವರಲ್ಲ. ಬದಲಾಗಿ ಅವರ ವಿಧಿಲಿಖಿತವೇ ವಿಚಿತ್ರವಾಗಿದ್ದು ಅವರ ಬದುಕಿನ ದಿಕ್ಕೇ ಬದಲಾಗಿ ಅವರೇ ಬದಲಾಗಿ ಹೋದ ವ್ಯಕ್ತಿಗಳು. ಇಂತಹ ಜನರಲ್ಲಿ ಕೆಲವರನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳುವ ಪ್ರಯತ್ನ ಹೀಗಿದೆ--


ಮಳ್ಳ ಗಣಪ

ಗಣಪ ಎಂಬಾತ ಒಳ್ಳೆಯ ವ್ಯಕ್ತಿ, ಜಾತಿಯಿಂದ ಒಕ್ಕಲಿಗ. ಸಪೂರ ಶರೀರದ ಮೃದು ಮನಸ್ಸಿನ ಸಜ್ಜನ. ಅವನಾಯಿತು, ಅವನ ಕೆಲಸವಾಯಿತು. ಹೆಂಡತಿ-ಮಕ್ಕಳು ಎಲ್ಲರೊಟ್ಟಿಗೆ ಸರಳ ಜೀವನವನ್ನು ನಡೆಸುತ್ತಿದ್ದ ಆತನಿಗೆ ಅದೇಕೋ ಏನೋ ಮನೆಯೇ ಬೇಡವಾಯಿತು. ನಿಂತಲ್ಲಿ ನಿಲ್ಲಾಲಾರ, ಒಂದೆಡೆಗೇ ಬಹಳ ಹೊತ್ತು ಕೂರಲಾರ. ಕೆಲವೊಮ್ಮೆ ಮಾತ್ರ ಒಂಡೆಡೆಗೇ ಬಹಳ ಹೊತ್ತು ಕೂತುಬಿಡುತ್ತಿದ್ದ. ಊಟ ಸಿಕ್ಕಿದರೆ ಮೂರುದಿನಕ್ಕಾಗುವಷ್ಟನ್ನು ಒಮ್ಮೆಲೇ ತಿನ್ನುವ ಪರಿಪಾಠ! ಆಮೇಲೆ ಕೆಲವೊಮ್ಮೆ ದಿನಗಟ್ಟಲೇ ಉಪವಾಸ! ಆಗಾಗ ನಮ್ಮನೆಯ ಅಂಗಳದಲ್ಲಿ ಕಟ್ಟೆಯಮೇಲೆ ಠಿಕಾಣಿ. " ಗಣಪಾ, ಸ್ವಲ್ಪ ಆ ಕೆಲಸ ಇತ್ತಲ " ಎಂದು ಹಿರಿಯರು ಹೇಳಿದರೆ ಸಾಕು-ಆಸಾಮಿ ನಾಪತ್ತೆ! ಬಹಳ ಮಾರ್ಯಾದೆಯ ಮನುಷ್ಯ ಬೇರೆ. ಸಂಕೋಚವೂ ಕೂಡ ಇತ್ತು. ಆದರೂ ತಾಳಲಾರದ ಹಸಿವೆ ಮಾತ್ರ ಆತನನ್ನು ಹಲವರ ಮನೆಗಳಿಗೆ ಆಗಾಗ ಭೇಟಿಕೊಡುವ ಹಾಗೇ ಮಾಡುತ್ತಿತ್ತು. ಪಂಚೆ ಉಟ್ಟು ಅಂಗಿ ಧರಿಸಿ ಹೊರಟ ಗಣಪನಿಗೆ ಎಲ್ಲಿ ಸ್ನಾನವೋ, ಎಲ್ಲಿ ನಿದ್ದೆಯೋ ಒಂದೂ ಗೊತ್ತಿಲ್ಲ. ಮನೆಯಲ್ಲಿ ಹೆಂಡತಿ-ಮಕ್ಕಳು ನೋಡುವಷ್ಟು ನೋಡಿ ಹೇಳಿ-ಕೇಳಿ ಮಾಡಿ ಸಾಕಾಗಿ ಕೈತೊಳೆದುಕೊಂಡಿದ್ದರು.


ಚೀನ್ಕೋಡ ಆಚಾರಿ

ಅಡಿಕೆ ಹಾಳೆ ಮತ್ತು ಕತ್ತಿಯೊಂದಿಗೆ ಬರುತ್ತಿದ್ದ ಈ ಆಸಾಮಿ ಒಂದುಕಾಲದಲ್ಲಿ ಒಳ್ಳೆಯ ಬಡಿಗ-ಆಚಾರಿ[ಮರಗೆಲಸದವ] ಯಾವ ಘಳಿಗೆಯ ತಪ್ಪೋ ಇದ್ದಕ್ಕಿದ್ದಲ್ಲೇ ಚೀನ್ಕೋಡ್ ಆಚಾರಿ ನಗಲು ಆರಂಭಿಸಿದ. ಆತ ಯಾರನ್ನು ಕಂಡರೂ ಏನನ್ನು ಕಂಡರೂ ನಗುತ್ತಲೇ ಉಳಿದ. ಒಂದು ಕೈಲಿ ಅಡಿಕೆ ಹಾಳೆ ಇನ್ನೊಂದರಲ್ಲಿ ಕತ್ತಿ ! ಆಗಾಗ ಬರುತ್ತಿದ್ದ ಈತನನ್ನು ಕಂಡು ನಾವೆಲ್ಲಾ ಮಕ್ಕಳು ಹೆದರಿಕೊಳ್ಳುತ್ತಿದ್ದೆವು. ಆದರೆ ಆತ ನಿರುಪದ್ರವಿಯಾಗಿದ್ದ.


ಮಕ್ ಶೀತಸ ?

ಈತನ ಹೆಸರು ಗೊತ್ತೇಇಲ್ಲ. ಆದರೆ ಕೊಂಕಣಿ ಭಾಷೆಯಲ್ಲಿ ಮಾತನಾಡುತ್ತಿದ್ದ ಈತನಿಗೆ ಆತ ಪದೇ ಪದೇ ಬಳಸುತ್ತಿದ್ದ " ಮಕ್ ಶೀತಸ " ಎಂತಲೇ ಕರೆಯುತ್ತಿದ್ದರು. ಮಕ್ ಶೀತಸ " ನಂಗೆ ಅನ್ನ ಉಂಟಾ ? " ಎಂದರ್ಥವಂತೆ. ನಾವೆಲ್ಲಾ ತೀರಾ ಚಿಕ್ಕವರಾಗಿದ್ದು ಏನಾದರೂ ತರಲೆಮಾಡಿದರೆ ಅಮ್ಮ " ನಿನ್ನ ಮಕ್ ಶೀತಸಂಗೆ ಕೊಟ್ಟು ಬಿಡ್ತೇನೆ ನೋಡು " ಎನ್ನುತ್ತಿದ್ದರು. ಚಡ್ಡಿ-ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಆತ ಸತ್ಯನಾರಾಯಣ ಪೂಜೆ ಹಾಡು ಹೇಳು ಎಂದರೆ " ಸತ್ಯನಾರಾಯಣ ಕಾಜಾಯತಮ್ " ಎನ್ನುತ್ತಾ ಒಂದು ವಿಧದ ನರ್ತನ ಮಾಡುತ್ತಿದ್ದ. " ಅಣ್ಣಪ್ಪ ಗಾಡಸ ? " ಎನ್ನುವುದು ಆತನಾಡುತ್ತಿದ್ದ ಇನ್ನೊಂದು ಮಾತು. ಆತ ಎತ್ತಿನಗಾಡಿಯೊಂದನ್ನು ನಡೆಸುತ್ತಿದ್ದು ಅದನ್ನು ಯಾರೋ ಅಣ್ಣಪ್ಪ ತೆಗೆದುಕೊಂಡು ಹೋದನೆಂತಲೂ ಅದನ್ನು ಈತ ಸತತ ಹಾಗೆ ಹೇಳುತ್ತಿದ್ದನೆಂತಲೂ ಜನ ಅಂದುಕೊಳ್ಳುತ್ತಿದ್ದರು.


ಪೈ ಮಾಮ್

ವಿದ್ಯಾವಂತ ಮತ್ತು ಬುದ್ಧಿವಂತನಾದ ಪೈ ಎನ್ನುವ ವ್ಯಕ್ತಿ ಹರುಕು ಪ್ಯಾಂಟ್ ಮತ್ತು ಶರ್ಟ್ ಧರಿಸಿ ಬರುತ್ತಿದ್ದ. ಆತನಿಗೆ ಗೊತ್ತಿಲ್ಲದ ಕೃಷಿಕೆಲಸಗಳಿರಲಿಲ್ಲ. ಮನೆಯಲ್ಲಿ ಅಣ್ಣ-ತಮ್ಮಂದಿರ ನಡುವೆ ಯಾವುದೋ ಜಗಳವಾಗಿತ್ತೋ ಏನೋ! ಪಾಪ ಒಳ್ಳೆಯ ಮನುಷ್ಯನಾಗಿದ್ದ. ಬಂದರೆ ತುಸುಹೊತ್ತು ನಿಲ್ಲುವುದು ಏನಾದ್ರೂ ಕೊಟ್ಟರೆ ತಿನ್ನುವುದು ಮಾಡುತ್ತಿದ್ದ. ಆತನ ಎದುರು ಯಾರಾದರೂ ಕೆಲಸಮಾಡುತ್ತಿದ್ದರೆ ಆ ಕೆಲಸವನ್ನು ಹೇಗೆ ಚೆನ್ನಾಗಿ ಮಾಡಬಹುದು, ಹೇಗೆ ಬೇಗಮಾಡಬಹುದು ಎಂಬುದೆಲ್ಲವನ್ನೂ ಹೇಳಬಲ್ಲ ಬುದ್ಧಿವಂತ. ಆದರೆ ಮನಸ್ಸು ಯಾಕೋ ಮನೆಯ ವಾತಾವರಣದಿಂದ ವಿರಕ್ತವಾಗಿ ಈ ಸ್ಥಿತಿಯಾಗಿತ್ತು.


ಕುಲ್ಲೇಗದ್ದೆ ಮೊನ್ನ

ಕುಲ್ಲೇಗದ್ದೆ ಎಂಬುದೊಂದು ಚಿಕ್ಕ ಮಜರೆ. ಅಲ್ಲಿನ ಹವ್ಯಕ ಬ್ರಾಹ್ಮಣ ಆ ಮೊನ್ನ[ಮೂಕ]. ಆತನಿಗೆ ಮಾತು ಬರುತ್ತಿತ್ತು, ಆದರೂ ಮಾತನಾಡದ ಸ್ಥಿತಿ ತಲುಪಿದ್ದ! ಹತ್ತಾರು ಎಕರೆ ತೋಟವಿದ್ದ ಆತ ತೆಂಗಿನಕಾಯಿ ಕೀಳುವಾಗ ತೋಟದ ಬದುವಿನಲ್ಲಿ ಮೇಯುತ್ತಿದ್ದ ಆಕಳ ತಲೆಯಮೇಲೆ ಕಾಯಿ ಉದುರಿಬಿದ್ದ ಏಟಿನಿಂದ ಆಕಳು ಸ್ಥಳದಲ್ಲೇ ಸತ್ತುಹೋಯಿತಂತೆ. ಅಂದಿನಿಂದ ಆತ ಮನೆಯನ್ನು ಬಿಟ್ಟ. ಊರಿಂದೂರಿಗೆ ಪಯಣ. ದಾರಿಯಲ್ಲಿ ಯಾರಾದರೂ ತಿಂಡಿ ಏನಾದರೂ ಕೊಟ್ಟರೆ ಅವುಗಳನ್ನೆಲ್ಲಾ ಪಂಚೆಯಲ್ಲಿ ಕಟ್ಟುತ್ತಾ ಸಾಯಂಕಾಲವಾಗುವ ಹೊತ್ತಿಗೆ ಎಲ್ಲಾದರೂ ಸಿಗುವ ಒಂದು ಆಕಳಿಗೆ ಆ ಗಂಟನ್ನು ಬಿಚ್ಚಿ ತಿನ್ನಲು ಕೊಟ್ಟು ಕೈಮುಗಿಯುವುದು ಅಭ್ಯಾಸವಾಯಿತಂತೆ. ಚಿಕ್ಕ ಪಂಚೆ ಉಟ್ಟು ಬರುತ್ತಿದ್ದ. ಮೈಗೊಂದು ಕಸೆ ಅಂಗಿ ಕೆಲವೊಮ್ಮೆ ಇದ್ದರೂ ಹಲವೊಮ್ಮೆ ಇರುತ್ತಿರಲಿಲ್ಲ. ದನವನ್ನು ತನ್ನ ಕೈಯ್ಯಾರೆ ಸಾಯಿಸಿಬಿಟ್ಟೆನಲ್ಲಾ ಎಂಬ ಪಶ್ಚಾತಾಪದಿಂದ ನಂತರದ ಇಡೀ ಜೀವನವನ್ನು ಹೀಗೆಯೇ ಕಳೆದ. ನಮಗೆಲ್ಲಾ ನೋಡಿ ಪರಿಚಯವಾಗಿದ್ದರಿಂದ ಸಣ್ಣಗೆ ನಗುತ್ತಿದ್ದ. ನಮಗೆ ಅರ್ಥವಾಗದಿದ್ದರೆ ಸನ್ನೆ ಮಾಡುತ್ತಾ ಚಿಕ್ಕದಾಗಿ "ಆಕಳಿಗೆ ಏನಾದರೂ ಕೊಡು" ಎನ್ನುತ್ತಿದ್ದ. ಹಾಗಂತ ಯಾರಲ್ಲಿಯೂ ತಿಂಡಿ-ಊಟಕ್ಕೆ ನಿಲ್ಲುತ್ತಿರಲಿಲ್ಲ.

ಹೀಗೇ ಜೀವನವೇ ಒಂದು ವಿಚಿತ್ರ. ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ! ಬದುಕಿನ ಯಾವುದೋ ಘಟನೆ, ಯಾವುದೋ ಘಳಿಗೆ ಜೀವನವನ್ನೇ ಬದಲಾಯಿಸಿಬಿಡಬಹುದು. ಹೇಗೋ ಇದ್ದವರು ಇನ್ನ್ಹೇಗೋ ಆಗಿಬಿಡುವುದು ಇಲ್ಲಿನ ವಿಲಕ್ಷಣ ಸಂಗತಿ. ಇಂತಹ ಕೆಲವು ವ್ಯಕ್ತಿಗಳನ್ನು ಅವರ ಮನೆಯ ಜನರೆಲ್ಲಾ ಸೇರಿ ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವರು ಮಾತ್ರ ಬದಲಾಗುವುದೇ ಇಲ್ಲ. ಯಾವುದೋ ಶಕ್ತಿ ಅವರನ್ನು ಅವಿರತವಾಗಿ ತನ್ನ ಐಹಿಕಮೂಲವನ್ನೇ ಮರೆತು ಅಲೆದಾಡುವ, ಕೇಳಿಪಡೆಯುವ, ಯಾರೋ ಕೊಟ್ಟರೆ ತಿನ್ನುವ ಅಥವಾ ಉಪವಾಸವಿರುವ ಇಂತಹ ಮಾರ್ಗಕ್ಕೆ ಹಚ್ಚುವುದನ್ನು ಕಂಡಾಗ ಅಂತಹ ಜನರು ಪಡೆದುಬಂದ ಭ್ಯಾಗಯ ಅದೇಯೇನೋ ಎಂಬ ಅನಿಸಿಕೆ ಬರುತ್ತದೆ. ಇದನ್ನೆಲ್ಲಾ ಕಾಣುವಾಗ ಅತಿ ಸಹಜವಾಗಿ ನಮಗೂ ಮೀರಿದ ಶಕ್ತಿಯೊಂದು ಇದೆ ಅನಿಸುವುದಿಲ್ಲವೇ?

ಸಮಾಜದಲ್ಲಿ ಸಿರಿವಂತರೆಂದು ಹಮ್ಮುಬಿಮ್ಮಿನಿಂದ ಮೆರೆಯುವ ಅನೇಕರ ಮನೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು, ಮೂರ್ಛಾರೋಗ ಪೀಡಿತಮಕ್ಕಳು ಹುಟ್ಟುತ್ತಾರೆ ಅಥವಾ ಅನೇಕಕಡೆ ಹುಟ್ಟಿದಾಗ ಸರಿಯಿದ್ದು ಆಮೇಲೆ ಕಾರಣಾಂತರಗಳಿಂದ ಮೂಕರಾಗುವುದು, ಕಿವುಡರಾಗುವುದು, ಕುರುಡರಾಗುವುದು, ಪಾರ್ಕಿನ್ಸನ್ ನಿಂದ ಬಳಲುವುದು ಮುಂತಾದ ಹಲವು ಸಂಗತಿಗಳನ್ನು ಕಾಣಬಹುದಲ್ಲ ಇವೆಲ್ಲಾ ಕೇವಲ ಮನುಷ್ಯನ ಕೈಮೀರಿ ನಡೆಯುವಂತಹ ಕ್ರಿಯೆಗಳಲ್ಲವೇ ? ಆಗಾಗ ಬರಿದೇ ಚಿಂತಿಸಿದಾಗ ಮತ್ತೆ ಮತ್ತೆ ಅನಿಸುವುದು ಇದಕ್ಕೆಲ್ಲಾ ಕಾರಣಗಳೇ ಬೇಕಿಲ್ಲ. ನಿಸರ್ಗವೇ ಎಲ್ಲವನ್ನೂ ನಿಯಂತ್ರಿಸುವುದಾದರೆ ನಮ್ಮ ಕಾಡುಗಳ್ಳರನ್ನೂ ಗಣಿಧಣಿಗಳ ಅಟಾಟೋಪವನ್ನೂ ತಹಬಂದಿಗೆ ತರಲು ಇನ್ನೆಷ್ಟು ಸಮಯ ಕಾಯಬೇಕೋ ಗೊತ್ತಿಲ್ಲ. ಪ್ರಾಯಶಃ ಅವರ ಹಿಂದಿನ ಜನ್ಮದ ’ಬ್ಯಾಂಕ್ ಬ್ಯಾಲೆನ್ಸ್’ ನಲ್ಲಿ ಪುಣ್ಯದ ಅವಶೇಷ ಜಾಸ್ತಿ ಇದ್ದಿರಬೇಕು-ಅದು ಖಾಲಿಯಾಗುವವರೆಗೂ ಅವರು ಮೆರೆಯುತ್ತಲೇ ಇರುತ್ತಾರೆ.

6 comments:

  1. ಭಟ್ ಸರ್,

    ಹಿಂದಿನ ಜನ್ಮದ ಬ್ಯಾಂಕ್ ಬ್ಯಾಲೆನ್ಸ್ ತೀರಿಸಲೋಸುವ ಅನೇಕ ವಿಭಿನ್ನ ವ್ಯಕ್ತಿಗಳ ಅನುಭವವನ್ನು ಹೇಳಿದ್ದೀರಿ..ನಮ್ಮ ರಾಜಕಾರಣಿಗಳ ಬ್ಯಾಂಕ್ ಬ್ಯಾಲೆನ್ಸ್ ಈ ಜನ್ಮದಲ್ಲೇ ಆಗಲಿ ಅನ್ನುವುದು ನನ್ನ ಅಸೆ.

    ReplyDelete
  2. [ಪ್ರಾಯಶಃ ಅವರ ಹಿಂದಿನ ಜನ್ಮದ ’ಬ್ಯಾಂಕ್ ಬ್ಯಾಲೆನ್ಸ್’ ನಲ್ಲಿ ಪುಣ್ಯದ ಅವಶೇಷ ಜಾಸ್ತಿ ಇದ್ದಿರಬೇಕು-ಅದು ಖಾಲಿಯಾಗುವವರೆಗೂ ಅವರು ಮೆರೆಯುತ್ತಲೇ ಇರುತ್ತಾರೆ]
    ಈ ಜನ್ಮದಲ್ಲಿ ಒಂದಿಷ್ಟು ಪುಣ್ಯದ ಡಿಪಾಸಿಟ್ ಮಾಡಲು ಜೀವನ ನಡೆಸಬೇಕಲ್ಲವೇ? ಭಟ್ಟರೇ,ಅದಕ್ಕೂ ಆ ಭಗವಂತನೇ ದಾರಿ ತೋರಿಸಬೇಕು.

    ReplyDelete
  3. ಹಳೆಯ ನೆನಪುಗಳ ಗಣಿಯಿ೦ದ ಅಗೆದು, ಮೊಗೆದು, ಕೆಲ ಅಪರೂಪದ ವ್ಯಕ್ತಿಗಳ ಚಿತ್ರಣ ನಮ್ಮ ಮು೦ದಿಟ್ಟು, ಬದುಕಿನ ವೈಚಿತ್ರ್ಯಗಳ, ಪಾಪಪುಣ್ಯಗಳ ಬ್ಯಾಲೆನ್ಸ್ ಶೀಟಿನ ವಿಚಾರ ಬರೆದಿದ್ದೀರಿ. ಹೌದು ನಮ್ಮ ಮು೦ದೆ ಅಟ್ಟಹಾಸಗೈಯ್ಯುತ್ತಿರುವ ಅನೇಕರ ಪುಣ್ಯಶೇಷ ಇನ್ನೂ ಇದೆ ಎ೦ದಾಯಿತು. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ. ಹಾರಾಡಿದವರು ಹೆಚ್ಚು ದಿನ ಉಳಿಯುವುದಿಲ್ಲ. ಚಿ೦ತನಶೀಲವಾಗಿದೆ ಲೇಖನ

    ReplyDelete
  4. ಓದಿದ,ಪ್ರತಿಕ್ರಿಯಿಸಿದ ಎಲ್ಲರಿಗೂ ಅನೇಕಾವರ್ತಿ ಧನ್ಯವಾದಗಳು.

    ಬ್ಲಾಗಿಗೆ ಹೊಸದಾಗಿ ಲಿಂಕಿಸಿಕೊಂಡ ಗಣಪತ್ ರಾಜ್ ರವರಿಗೆ ಸ್ವಾಗತ ಹಾಗೂ ನಮನ.

    ReplyDelete
  5. tamma baalyada vichitra vyakti lakshanagalanna bichchittu parichayisiddiraa... baduka pari vichitra allave..

    ReplyDelete