ವೇದ ದೀವಿಗೆ
ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ
ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ
ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ
ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ
ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ
ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ
ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ | ಜಗದಮಿತ್ರ
ಜಗದ ಮಿತ್ರ ಮತ್ತೆ ತನ್ನ ಹಿತನುಡಿಗಳೊಡನೆ ಬಂದಿರುವದು ನನಗೆ ಖುಶಿ ತಂದಿದೆ.
ReplyDeleteಭಟ್ ಸರ್;ಜಗದ ಮಿತ್ರನ ಬುದ್ಧಿ ಮಾತು ಇಷ್ಟವಾಯಿತು.
ReplyDeleteಸೇರು ಸಜ್ಜನರನ್ನು ದೂರಗಳ ಮಿತಿಯಿರದೇ... ಜಗದ ಮಿತ್ರ.
ReplyDeleteಇದು ಬ್ಲಾಗ್ ಮಿತ್ರರಿಗೆ ಸೂಕ್ತ ಸಾಲು. ನಿಮ್ಮ ಆಶಯ ಚೆನ್ನಾಗಿದೆ ಸಾರ್.
ಜಗದ ಮಿತ್ರ ಕವನ ಇಷ್ಟವಾಯಿತು.
ReplyDeleteಗುಬ್ಬಚ್ಚಿ ಸತೀಶ್ ಹೇಳಿದ ಸಾಲು ನಾನು ಹೇಳಲು ಇಷ್ಟಪಡುತ್ತೇನೆ. ಬ್ಲಾಗ್ ಮಿತ್ರರೆಲ್ಲರೂ ದೂರದ ಮಿತಿಯಿರದೇ ಒಬ್ಬರಿಗೊಬ್ಬರು ತಲುಪುತ್ತಿರುವುದು ಖುಷಿಯ ವಿಚಾರ...
ಜಗದಮಿತ್ರ ಭಟ್ಟರಿಗೆ ನಮೋನ್ನಮಃ ನಿಮ್ಮ ಚೌಪದಿಗಳು ಬಹಳ ಅರ್ಥಪೂರ್ಣವಾಗಿವೆ. ಮು೦ದುವರಿಸಿ, ಪುಸ್ತಕರೂಪದಲ್ಲಿ ಬೇಗ ಹೊರಬರುವ೦ತಾಗಲಿ.
ReplyDeleteಭಟ್ ಸಾರ್...
ReplyDeleteತುಂಬಾ ಚೆನ್ನಾಗಿದೆ. "ದಾರಿ ಹೋಕರು ನಾವು... ತಿಳಿಮೊದಲು" ಅನ್ನೋ ಸಾಲು ತುಂಬಾ ಅರ್ಥಪೂರ್ಣ.. ಎಷ್ಟೆಷ್ಟೋ ಜನ್ಮಗಳನ್ನು ಎತ್ತಿ ನಾವು ನಡೆಯುತ್ತಲೇ ಬಂದಿದ್ದೇವೆ.. ಇನ್ನೆಷ್ಟು ನಡೆಯಬೇಕೋ ತಿಳಿಯದಾಗಿದೆ. ನಾವು ಬರಿಯ ದಾರಿಹೋಕರು, ಗಮ್ಯ ತಲುಪುವುದಷ್ಟೇ ನಮ್ಮ ಗುರಿ ಎನ್ನುವುದು ಅರ್ಥವಾದರೆ ಈ ಜನ್ಮದ ಸಾರ್ಥಕತೆಯಾದಂತೆ ಅಲ್ಲವೇ ಸಾರ್..? ಧನ್ಯವಾದಗಳು ಸಾರ್..
ಶ್ಯಾಮಲ
ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳು
ReplyDeletesaagu saaru agide eradane saalalli.
ReplyDeletetumbaa chendada kavana
ಸಾರು ಎಂದರೆ ಕೇವಲ ತಿನ್ನುವ ರಸಪದಾರ್ಥ ಎಂಬರ್ಥವಲ್ಲ, ಸಾರುವುದು ಎಂದು ಬಳಸುತ್ತಾರಲ್ಲವೇ? ಪ್ರಾಸಕ್ಕೆ ಅನುಗುಣವಾಗಿ ಸಾರು ಎಂದೇ ಬಳಸಿದ್ದೇನೆ, ತಮ್ಮ ಕಾಳಜಿಗೆ ಶರಣು.
ReplyDelete