ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 30, 2010

ಕಾಡುತಿದೆ ನಿನ್ನ ನನೆಹೂ

ರಾಜಾರವಿವರ್ಮ ಕೃತ ಚಿತ್ರ ಕೃಪೆ :ಅಂತರ್ಜಾಲ
ಕಾಡುತಿದೆ ನಿನ್ನ ನೆನಹೂ
[ನವ್ಯ ಪ್ರಿಯರಿಗಾಗಿ ಈ ಕವನ]
ಕಾಡುತಿದೆ ನಿನ್ನ ನೆನಹೂ
ಅನುದಿನವೂ ಅನುಕ್ಷಣವೂ
ಬೆಂಬತ್ತು ಬೇಸರಿಸಿ
ನೆನೆಯುತಿದೆ ನನ್ನ ಮನವೂ

ರಾಮಕೇಳಿದ ರೀತಿ
ಪಶುಪಕ್ಷಿ ತರುಲತೆಗಳನು ಕಂಡು
ಬಳಿಸಾರಿ ಪ್ರಾರ್ಥಿಸಲೇ ತೋರಿರೆಂದೂ ?

ಭೀಮ ದ್ರೌಪದಿಗಾಗಿ
ಸೌಗಂಧಿಕಾ ಪುಷ್ಪವಿರುವ ತಾಣವನರಸಿ
ಅನುಜ ಹನುಮಗೆ ನಮಿಸಿ ಮಾರ್ಗತಿಳಿದಂತೇ !

ಆಗಾಗ ಅಲೆದಾಡಿ
ಗುಂಯ್ಯೆಂದು ಹಾರುತ್ತ ಹೂ ಬನದಿ ಮಕರಂದ
ಹುಡುಕಿ ಹೀರುವ ಭೃಂಗರಾಜನ ಕೇಳಲೇ ?

ರಾಗ ಹಿಂದೋಳದಲಿ
ಸ್ವರಹಿಡಿದು ಆಲಾಪಿಸುತಲಲ್ಲಿ ತನ್ಮಗ್ನ
ತಲ್ಲೀನನಾಗುತ್ತ ತನ್ನ ತಾನೇಮರೆವನಲಿ ಮೊರೆಯಿಡಲೇ ?

ದಿನವು ಸೂರ್ಯನು ಉದಿಸಿ
ಬರುವ ಬಾನೆತ್ತರಕೆ ಕತ್ತೆತ್ತಿ ಕಾಲುಪ್ಪರಿಸಿ
ಮತ್ತೆ ಅಲ್ಲೆಲ್ಲೋ ಹೊಸ ಕುರುಹಿಗಾಗಿ ಹಂಬಲಿಸಲೇ ?

ಬಳಸಿ ಬೇಸರವಾಗಿ
ತೆಗೆದಿಟ್ಟ ಬಳೆಗಳನು ಕಿಣಿಕಿಣಿಸುತಾಧ್ವನಿಯ
ಮಾರ್ದವದಲ್ಲಿ ಆ ದಿನದ ಸೊಬಗನು ನೆನೆದೆನೂ !

ಮರೆಯಲಾರೆನು ಮುಡಿದ
ಮಲ್ಲಿಗೆಯ ಒಣಗಿರುವ ಪಕಳೆಗಳ ಮೆತ್ತನಾ
ದಿಂಬಿಗಂಟಿದ ತಲೆಯ ಪರಿಮಳವ ಹೃದಯದಲಿ ಕಾಪಿಡುವೆನೂ!
ಇಂದಿಗೂ ಅಗಲೆನೂ
ಎಂದಿಗೂ ತೊರೆಯೆನೂ !

7 comments:

  1. ಸುಂದರ ಕವನ ಭಟ್ ಸರ್.ನಿಮ್ಮ ಕಾವ್ಯ ಧಾರೆ ನಿರಂತರ ಹರಿಯುತ್ತಲಿರಲಿ.

    ReplyDelete
  2. ಭಟ್ರೇ, ಬಹಳ ಚೆನ್ನಾಗಿದೆ, ಇದನ್ನು ನೀವು ಸ್ವಾನುಭವದಿ೦ದ ಬರೆದ ಕಾರಣ (ಶ್ರೀಮತಿಯವರು ಊರಿಗೆ ಹೋಗಿದ್ದಾರಲ್ವ) ಬಹಳ ಚೆನ್ನಾಗಿ ಮೂಡಿ ಬ೦ದಿದೆ. ನೀವು ಬಳಸಿದ ಪದ "ನನೆಹೂ" ಯಾಕೋ ನನಗೆ ಸರಿ ಕಾಣುತ್ತಿಲ್ಲ, ಅದು "ನೆನಹೂ" ಆದರೆ ಹೆಚ್ಚು ಸೂಕ್ತ ಅಂತ ನನ್ನ ಅನಿಸಿಕೆ. ಅಭಿಪ್ರಾಯಿಸಿ.

    ReplyDelete
  3. ಭಟ್ಟರೆ,
    ರಾಜಾ ರವಿವರ್ಮನ ಚಿತ್ರಗಳಿಗೆ ಕಾವ್ಯವನ್ನು ಸೃಷ್ಟಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಹಾರ್ದಿಕ ಶ್ಲಾಘನೆ. ’ಕುಂಚ-ಲೇಖನಿ’ ಕಾರ್ಯಕ್ರಮವನ್ನು ಇದು ನೆನಪಿಸುತ್ತಿದೆ.
    ಹೊಸ ವರ್ಷದ ಶುಭಾಶಯಗಳು.

    ReplyDelete
  4. ಸುಂದರ ಕವನ ...

    ಹೊಸ ವರ್ಷದ ಶುಭಾಶಯಗಳು.

    ReplyDelete
  5. ಹೊಸ ವರ್ಷಕ್ಕೆ ಮೊದಲು ಸೊಗಸಾದ ಕವನವನ್ನು ಕೊಟ್ಟಿದ್ದೀರಿ..ನಿಮಗೆ ಹೊಸ ವರ್ಷದ ಶುಭಾಶಯಗಳು.

    ReplyDelete
  6. ಪರಾಂಜಪೆಸಾಹೇಬರೆ, ನಾವು ಈ ಗೂಗಲ್ ಟ್ರಾನ್ಸ್ ಲಿಟರೇಷನ್ ಬಳಸಿದಾಗ ಕೆಲವೊಮ್ಮೆ ಅದೇ ಕೆಲವು ಶಬ್ದಗಳನ್ನು ಹಾಕಿಬಿಡುತ್ತದೆ, ಸಮಯದ ಅಭಾವದಿಂದ ಸರಿಯಾಗಿ ನೋಡದೇ ನಾವು ಮುನ್ನಡೆಯುತ್ತೇವೆ, ತಮ್ಮ ಹೇಳಿಕೆ ಸರಿಯಾಗಿದೆ, ಅದನ್ನು ಸರಿಪಡಿಸಿದ್ದೇನೆ[ಮೂಲ ಕವನದಲ್ಲಿ ಅದು ನೀವು ಹೇಳಿದಹಾಗೇ ಇದೆ],ಧನ್ಯವಾದಗಳು

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಹಾರ್ದಿಕ ಶುಭಾಶಯಗಳು.

    ReplyDelete