ದಾಂಪತ್ಯದಲ್ಲಿ ಗಂಡ-ಹೆಂಡತಿಯರ ಜಗವೇ ಮಧುರವಾಗಿರುತ್ತದೆ, ಅನ್ಯೋನ್ಯವಾಗಿರುತ್ತದೆ. ಅಲ್ಲಿ ಪ್ರತಿಯೊಂದು ಅತಿ ಚಿಕ್ಕ ಭಾವಕ್ಕೂ ಬೆಲೆಯಿದೆ, ಭಾವ ಜೀವದಲ್ಲಿ ಕರಗಿ ಕಣ್ಣಲ್ಲೇ ಅಭಿವ್ಯಕ್ತವಾಗುತ್ತದೆ. ಮಾತು ಕಡಿಮೆಯಾಗಿ ಮೌನದಲ್ಲೇ ಹಲವೊಮ್ಮೆ ಆಡಬೇಕಾಗಿದ್ದ ಎಷ್ಟೋ ಮಾತುಗಳು ಕೇವಲ ಮುಖದಚರ್ಯೆಯಲ್ಲೇ ವ್ಯಕ್ತವಾಗಿ ಹೆಂಡತಿ ಗಂಡನನ್ನೂ ಗಂಡ ಹೆಂಡತಿಯನ್ನೂ ಪರಸ್ಪರ ಅರಿತುಕೊಳ್ಳುವಂತಾಗುತ್ತದೆ. ಏನಿರಲಿ ಇಲ್ಲದಿರಲಿ ಎಲ್ಲವನ್ನೂ ಸಹಿಸಿಬಾಳುವ, ಪರಸ್ಪರರ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಸಹಿಸಿ ಬದುಕುವ ಪ್ರತೀ ನಿಮಿಷವೂ ನಿಜವಾದ ಪ್ರೀತಿಯ ಅನುಬಂಧವಾಗಿರುತ್ತದೆ. ತಾಪತ್ರಯಗಳೆಷ್ಟೇ ಇದ್ದರೂ ಎಲ್ಲವನ್ನೂ ಸಹಿಸಿಕೊಂಡು ಜತೆಯಾಗಿ ಹೆಜ್ಜೆಯಿಡುವುದು ಋಣಾನುಬಂಧವಾಗಿರುತ್ತದೆ. ಹೆಚ್ಚಿನ ಸಿರಿವಂತಿಕೆಯ ಸುಖವನ್ನು ಕೊಡಲಾಗದ ಗಂಡನಿಗೆ ಹೆಂಡತಿಗೆ ತಾನೇನೂ ಕೊಡಲಿಲ್ಲವಲ್ಲವೆಂಬ ಕೊರಗೊಂದು ಸದಾಕಾಡಿದರೆ ಪಡೆಯಲಾಗದ ಶ್ರೀಮಂತಿಕೆಗೆ ಮರುಗುವುದಕ್ಕಿಂತ ಗಂಡನೇ ತನಗೆ ಶ್ರೀಮಂತಿಕೆಯ ವೈಭೋಗಕ್ಕಿಂತ ಹೆಚ್ಚು ಎಂದುಕೊಳ್ಳುವುದು ಹೆಂಡತಿಯ ಅನಿಸಿಕೆಯಾಗುತ್ತದೆ. ಅಂತಹ ಸನ್ನಿವೇಶ ಸೃಷ್ಟಿಸಿದ ಕಾವ್ಯಕನ್ನಿಕೆ ಈ ಕೆಳಗೆ ನಿಂತಿದ್ದಾಳೆ :
ಅನ್ಯೋನ್ಯ
ನಾನೇನೂ ಕೊಡದಾದೆ ನನ್ನವಳಿಗೆ
ಆನೋವು ಕಾಡುತಿದೆ ಘಳಿಗೆಘಳಿಗೆ |
ಬಾನೆತ್ತರಕೆ ಬೆಳೆವ ಕನಸುಗಳ ಕಟ್ಟಿಹಗೆ
ಕಾನನದ ಮೌನ ಧರಿಸಿರುವವಳಿಗೆ ||
ಮಾನಾಪಮಾನ ಎಲ್ಲವ ಸಹಿಸಿ ಮುನ್ನಡೆದು
ಯಾನದಲಿ ಜತೆಯಾಗಿ ಬಂದವಳಿಗೆ |
ಏನಾದರೂ ಕೊಡುವ ಬಯಕೆಯದು ಮನದೊಳಗೆ
ತಾನಾಗಿ ಆವರಿಸಿ ನಿಂತಘಳಿಗೆ !
ತಾನಾಯ್ತು ತನ್ನ ಕೆಲಸವದಾಯ್ತು ಎಂಬಂತೆ
ಗಾನದಲಿ ತನ್ನನ್ನೇ ಮರೆವವಳಿಗೆ |
ಮಾನಿನಿಯ ಮನೆವಾರ್ತೆ ನಿತ್ಯ ಪೂರೈಸುತ್ತ
ಧ್ಯಾನದಲಿ ಸಿರಿವಂತೆಯಾದವಳಿಗೆ ||
ಆನೆಗಾತ್ರದ ಚಿಂತೆ ಮನದಿ ಘೀಳಿಡುವಾಗ
ಹಾನಿಯಾಗದ ರೀತಿ ತಡೆದವಳಿಗೆ |
ನಾನೂರು ವಚನಗಳ ನಾಕೊಟ್ಟು ಹುಸಿಯಾಗೆ
ದೀನ ಮುಗುಳ್ನಗೆ ಬೀರಿ ಅರಿತವಳಿಗೆ ||
ಈ ಹಾಡನ್ನು ನಾನು ನನ್ನದೇ ರಾಗದಲ್ಲಿ ಹಾಡಿದ್ದೇನೆ ಕೇಳಿ -- [ಸಹಿಸುವುದು ಕಷ್ಟವಾದರೆ ನಿಲ್ಲಿಸಿಬಿಡಿ!]
ಪರಸ್ಪರ ಅನ್ಯೋನ್ಯತೆಯ ವಿನಹ ಬೇರೇನು ಬೇಕು ಭಟ್ಟರೇ ದಾ೦ಪತ್ಯದಲ್ಲಿ,ಅದುವೇ ಮಧುರ ಸುಮಧುರ.ಅರಿತವಳಿಗೆ ನಮ್ಮ ಮನಸಿಗಿ೦ತ ಬೇರೇನು ಕೊಟ್ಟರೂ ಕಡಿಮೆಯೇ...
ReplyDeleteಕವನ ಅರ್ಥ ಪೂರ್ಣವಾಗಿದೆ ,ಮನಸಿಗೆ ಮುದನೀಡಿ. ವಾಸ್ತವ ಬದುಕಿಗೆ ಕನ್ನಡಿಯಾಗಿದೆ.
ReplyDeleteಭಟ್ ಸಾರ್...
ReplyDeleteಸುಮ್ಮನೆ ಸಾಹಿತ್ಯ ಒಮ್ಮೆ ಓದಿ... ನಿಮ್ಮ ಕಂಠ ಸಿರಿಯಲ್ಲಿ ಕೇಳುತ್ತಾ ಮತ್ತೊಮ್ಮೆ ಓದಿದೆ. ಭಾವಪೂರ್ಣವಾಗಿದೆ, ಇಷ್ಟವಾಯಿತು.... ನೀವು ಹಾಡಿರುವುದೂ ಚೆನ್ನಾಗಿದೆ... :-)
ಶ್ಯಾಮಲ
ಭಟ್ಟರೆ,
ReplyDeleteನಿಮ್ಮ ಕಂಠಸಿರಿಯಲ್ಲಿ ಹಾಡಿನ ಅರ್ಥ ಇನ್ನಷ್ಟು ಮೆರುಗುಪಡೆದಿದೆ. ಭಾವನೆಗಳು ಚೆನ್ನಾಗಿ ವ್ಯಕ್ತವಾಗಿದೆ. ಮನತಣಿಸಿದ್ದಕ್ಕೆ ಧನ್ಯವಾದಗಳು ನಿಮಗೆ.
ಚೆನ್ನಾಗಿದೆ ಸ್ವಾಮಿ,ಓದಿದೆ, ಕೇಳಿದೆ, ನಿಮ್ಮ ಹಾಡುಗಾರಿಕೆ ಅಡ್ಡಿಲ್ಲೆ, ಮು೦ದುವರಿಸಿ.
ReplyDeletewow..... entaha saalugaLu sir... tumba istavaaytu... neevu haaDuvada kalitiddeera..? sir nimma voice chennagide...
ReplyDeleteಅದ್ಭುತವಾಗಿದೆ ಭಟ್ಟರೇ, ನಿಮ್ಮ ಮೇಲೆ ಹೊಟ್ಟೆಕಿಚ್ಚು ಬೇರೆ ಶುರುವಾಯ್ತಲ್ಲಾ! ಮನಸ್ಸು ಮಾಡಿದರೆ ಹೆಚ್ಚು ಕಮ್ಮಿ ನಿಮ್ಮಂತೆ ಬರೆಯಬಲ್ಲೆ, ಆದರೆ ಹಾಡೆಲಾರೆನಲ್ಲಾ!!! ಹೀಗೇ ನಿತ್ಯವೂ ಕೇಳಿಸುತ್ತಿರಿ.ಮುಂದಿನ ವರ್ಷದ ನಿಮ್ಮ ಬ್ಲಾಗ್ ವಾರ್ಷಿಕೋತ್ಸವದಲ್ಲಿ ಮಾತು ಬೇಡ, ದಿನಪೂರ್ತಿ ನಿಮ್ಮ ರಚನೆಗಳನ್ನೇ ಹಾಡಿ ತಣಿಸಿಬಿಡಿ.
ReplyDeletechennaagi baredu haadiddiri. ella gandandira manadaalada matige akshara neediddir.
ReplyDeleteಭಟ್ಟರೆ,
ReplyDeleteತುಂಬ ಸೊಗಸಾಗಿ ಬರೆದ ಕವನವನ್ನು ಸೊಗಸಾಗಿ ಹಾಡಿದ್ದೀರಿ. ನಿಮ್ಮ ದನಿಯನ್ನು ಕೇಳಿ ಸಂತೋಷವಾಯಿತು.
ಅರ್ಧಾಂಗಿನಿಗೆ ಏನೂ ಕೊಡಲಾಗಲಿಲ್ಲವಲ್ಲ ಎನ್ನುವ ಕೊರಗು ಬಹುತೇಕ ಗಂಡಂದಿರಿಗೆ ಇರುವದೇ!ಅವಳೂ ಸಹ ಪ್ರೀತಿಯೊಂದನ್ನು ಬಿಟ್ಟು ಬೇರೇನೂ ಕೇಳುವದಿಲ್ಲ!!
ದಾ೦ಪತ್ಯ ಗೀತೆ ಭಾವಪೂರ್ಣವಾಗಿದೆ. ರಾಗ ಕೂಡಿಸಿ ಸೊಗಸಾಗಿ ಹಾಡಿಯೂ ಬಿಟ್ಟಿದ್ದೀರಿ. ಶುಭಾಶಯಗಳು ಭಟ್ ಸರ್.
ReplyDeleteಅನ೦ತ್
ಎಲ್ಲರ ಪ್ರೀತಿಯ ಪ್ರತಿಕ್ರಿಯೆ ನೋಡಿ ಮತ್ತೆ ಮನದುಂಬಿಬರುತ್ತಿದೆ. ಸಂಗೀತವನ್ನು ಅಭ್ಯಸಿಸಿದ ವ್ಯಕ್ತಿ ನಾನಲ್ಲ, ಆದರೆ ಸಂಗೀತವನ್ನು ಬಿಟ್ಟು ಒಂದು ದಿನವೂ ಉಳಿಯದಷ್ಟು ಸಂಗೀತಪ್ರೇಮಿ. ಹಾಡಬೇಕು ಎಂಬ ಆಸೆಯಾಗುತ್ತದೆಂದು ಮೊನ್ನೆ ಒಂದು ಲೇಖನದಲ್ಲಿ ಹೇಳಿದ್ದೆನೋಡಿ, ಅದರಂತೆ ಒಮ್ಮೆ ಹಾಡಿಯೂ ಬಿಟ್ಟಿದ್ದೇನೆ ಇಲ್ಲಿ. ರಾಗಪ್ರಸ್ತಾರಗಳ ವಿಶ್ಲೇಷಣೆ ಮಾಡಲು ಬರದಿದ್ದರೂ ಹಲವು ರಾಗಗಳನ್ನು ಆಸ್ವಾದಿಸುವ, ಆನಂದಿಸುವ ಮತ್ತು ಕೆಲವನ್ನು ಗುರುತುಹಿಡಿಯುವ ಸ್ವಭಾವ. ಇನ್ನು ಮೇಲಾದರೂ ಸಂಗೀತ ತರಬೇತಿ ಪಡೆಯಲು ಪ್ರಯತ್ನಿಸುತ್ತೇನೆ, ಕಲಿಕೆಗೆ ವಯಸ್ಸಿನ ಬಂಧ ಇದೆಯೇ ? ಕಲಿಯುವ ಮನಸ್ಸಿರಬೇಕು ಅಷ್ಟೇ! ಭಾವಗೀತೆಗೆ ತಕ್ಕಂತೆ ಭಾವಪೂರ್ಣವಾಗಿ ಪ್ರತಿಕ್ರಿಯಿಸಿದ್ದೀರಿ, ಎಲ್ಲಿಗೂ ಅನಂತ ನಮಸ್ಕಾರಗಳು, ನಿಮ್ಮ ಪ್ರೀತಿಗೆ ಸತತ ಆಭಾರಿ.
ReplyDelete