ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 18, 2010

ಸೂರ್ಯ ನಿಷ್ಠೆ


ಸೂರ್ಯ ನಿಷ್ಠೆ

ಸಪ್ತಾಶ್ವದ ರಥವನೇರಿ
ಸೂರ್ಯನುದಿಸಿ ಬರುವ ವೇಳೆ
ಹಾಡೊಂದಕೆ ದೇಹರಚಿಸಿ
ಭಾವತುಂಬಿ ಜೀವಬಂತು
ನವನವೀನ ಕಲ್ಪನೆ ನೂರು ವಿಧದ ಯೋಚನೆ

ಸಕಲ ಜೀವರಾಶಿಗಳಿಗೆ
ಬದುಕನೀವ ಬೆಳಕನಿತ್ತು
ವ್ಯಥಿತ ಮನದ ವ್ಯಾಕುಲಗಳ
ಕಳೆವನಾತ ಮೌನದಲ್ಲಿ
ಚಕಿತರಾಗಿ ನೋಡಿರಿ ನಿಷ್ಠೆ ನೆನೆದು ನಲಿಯಿರಿ

ಕಾಯಿಸಲೋ ಬೇಯಿಸಲೋ
ಕೆಲಸ ಕಾರ್ಯ ನಡೆಯಿಸಲೋ
ಆತ ಬಾರದಿದ್ದರೊಮ್ಮೆ
ಬೆಳೆಯುತಿತ್ತೇ ಬದುಕುಬಳ್ಳಿ ?
ರವಿಯು ಇರದ ಜಾಗವು ರೋಗಗಳಿಗೆ ಹಾರವು

ರಜೆಯ ಹಾಕಲಿಲ್ಲ ಗೆಳೆಯ
ವಿಜಯನಗೆಯ ಬೀರಲಿಲ್ಲ !
ಸುಜನ ಕುಜನ ಭೇದ ಭಾವ
ಅಳವಡಿಸುತ ನಡೆಯಲಿಲ್ಲ
ಸರ್ವರಿಗೂ ಸರಿಸಮಾನ ತತ್ವದಲ್ಲಿ ಇರಿಸಿ ಗಮನ

ಬಾಡಿಗೆಯ ಕೊಡುವೆವೇನು ?
ಬಾಳತುಂಬ ಬೆಳಗುವುದಕೆ
ಹಾಳುಮನದ ನಮಗೆ ಒಮ್ಮೆ
ಸ್ಮರಿಸದಂಥ ನಂಜುನಮದು
ನಾಳೆಗಳನು ನಡೆಸಲು ನೆನೆಯಿರಿಂದು ಮನದೊಳು

7 comments:

  1. ಭಟ್ರೆ ಇದು ಪ್ರಯತ್ನ ಅಲ್ಲ ಇದು ಅದ್ಭುತ ಬೆರಗು ಗೊಳಿಸೋ ಸಾಲುಗಳು.

    ReplyDelete
  2. ಭಟ್ ಸರ್ ;ಸೂರ್ಯ ಕರ್ಮ ಸಿದ್ಧಾಂತಕ್ಕೆ 'ಜ್ವಲಂತ'ಉದಾಹರಣೆ ಎಂಬುದನ್ನು ಕವಿತೆಯಲ್ಲಿ ಸೊಗಸಾಗಿ ಮೂಡಿಸಿದ್ದೀರಿ.ಅಭಿನಂದನೆಗಳು.

    ReplyDelete
  3. ಭಟ್ಟರೆ,
    ಸೂರ್ಯನ ಪರ್ಯಾಯನಾಮವಾದ ‘ಮಿತ್ರ’ವನ್ನು ನೀವು ‘ಗೆಳೆಯ’ ಎಂದು ಬಳಸಿಕೊಂಡಿರುವದು ತುಂಬ ಅರ್ಥಪೂರ್ಣವಾಗಿದೆ. ಇದು ಕವನಕ್ಕೆ ಒಳ್ಳೆಯ ಮೆರಗನ್ನು ನೀಡಿದೆ.

    ReplyDelete
  4. ಓದುತ್ತಿದ್ದಂತೆ ಒಂದು ಘಟನೆ ನೆನಪಾಯ್ತು. ಪ್ರಖ್ಯಾತ ದೇವಾಲಯ ಒಂದರಲ್ಲಿ ಅದೇ ದೇವಾಲಯದ ಒಂದು ಫೋಟೋ ನೇತುಹಾಕಲಾಗಿದೆ. ಫೋಟೋ ದಲ್ಲಿ ದಪ್ಪಕ್ಷರದಲ್ಲಿ "ಕೊಡುಗೆ: ಶ್ರೀ ಮಹದೇವಪ್ಪನವರ ಸ್ಮರಣಾರ್ಥ ಅವರ ಮಕ್ಕಳು ಮೊಮ್ಮಕ್ಕಳಿಂದ" ಎಂದು ಬರೆಯಲಾಗಿದೆ.ನೋಡಿದವರಿಗೆ ದೇವಾಲಯ ಕಟ್ಟಿಸಿದವರೇ ಇವರೆನ್ನುವಂತಿದೆ. ಆದರೆ ಆಫೋಟೋವನ್ನು ಕೊಡುಗೆಯಾಗಿ ಕೊಟ್ಟವರು ಇವರು. ದೇವಾಲಯವನ್ನು ಕಟ್ಟಿಸಿದ ಪುಣ್ಯಾತ್ಮ ತನ್ನ ಹೆಸರನ್ನು ದೇವಾಲಯದ ಮೇಲೆ ಕೆತ್ತಿಸಿಕೊಳ್ಳಲೇ ಇಲ್ಲ.ಸೂರ್ಯನಾದರೋ ಯಾವ ಭೇದ ಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಬೆಳಕು ಕೊಟ್ಟ. ಅವನ ನೆನೆಯದೆ ಜೀವನ ಸಾಗುವಂತೆಯೇ ಇಲ್ಲ.ಅವನನ್ನು ನಿತ್ಯವೂ ನೋಡುವ ನಾವು ನಮ್ಮ ಅಹಂಕಾರವನ್ನು ಮಾತ್ರ ಬಿಡಲೇ ಇಲ್ಲ.
    ಚೆಂದದ ಕವನಕ್ಕಾಗಿ ಧನ್ಯವಾದಗಳು.

    ReplyDelete
  5. ಎಲ್ಲರಿಗೂ ಅಭಿನಂದನೆಗಳು, ಅಭಿವಂದನೆಗಳು

    ReplyDelete
  6. ಹೊಸದಾಗಿ ಲಿಂಕಿಸಿಕೊಂಡ ಶಿವಪ್ರಸಾದ ಅವರಿಗೆ ಸ್ವಾಗತ ಹಾಗೂ ನಮನ

    ReplyDelete