ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 15, 2010

ಬಾಲ್ಯಸಖಿ

ಚಿತ್ರ ಋಣ : ಅಂತರ್ಜಾಲ

ಬಾಲ್ಯಸಖಿ

ತಣ್ಣೆಳಲು ಬಯಸುತ್ತ ತೆರಳಿ ಆಲದ ಅಡಿಗೆ
ಕಣ್ಣೆವೆಯ ಮುಚ್ಚಿ ಮಲಗಿರಲು ಸಿಹಿಗನಸು
ಬಣ್ಣಿಸಲು ಶಬ್ದ ಸೋಲುವ ಮುನ್ನ ನಾ ಬರೆದೆ
ನುಣ್ಣನೆಯ ಈ ಹಾಡು ಗುನಿಗುನಿಸುವುದಕೆ

ಹುಣ್ಣಿಮೆಯ ರಾತ್ರಿಯಲಿ ಬಂದು ಕುಳಿತಿರೆ ಇಲ್ಲಿ
ಹೆಣ್ಣು ಹರಿಣದ ಮುಖವ ಹೊತ್ತ ಆ ಮುಗುದೆ
ಬಣ್ಣ ಹಾಲಿನ ಬಿಳುಪು ಸುರಲೋಕ ಸುಂದರಿಯು
ಗಿಣ್ಣದಂತಹ ಕೆನ್ನೆ ಮೃದುಮನಸಿನವಳು

ಅಣ್ಣಕೇಳ್ ನಾ ಬಂದೆ ಸರಿರಾತ್ರಿಯಲಿ ಭರದಿ
ಸಣ್ಣ ನಡುವನು ಬಳಸಿ ಮುದ್ದಾಡಲಾಗ
ಹಣ್ಣು-ಹಂಪಲು ಹಿಡಿದು ತೋರಿದೆನು ಪ್ರೀತಿಯನು
ಬೆಣ್ಣೆ ಮುದ್ದೆಯ ಮೈಯ ಸೋಕಿಸಿದಳವಳು

ಚಿಣ್ಣರಂತಾಗಿದ್ದ ನಮ್ಮ ಮನಗಳು ಸೇರಿ
ಮಣ್ಣಾಟವಾಡಿದ ದಿನಗಳನು ನೆನೆದೂ
ತಣ್ಣನೆಯ ಸುಳಿಗಾಳಿ ಸುಂಯ್ಯೆಂದು ಬೀಸಿಬರೆ
ಸುಣ್ಣಹಚ್ಚಿದ ತಾಂಬೂಲವನು ಮೆದ್ದೂ

ಬಣ್ಣಬಣ್ಣದ ಕಾಗದಗಳನು ಅಂಟಿಸುತ
ಕಣ್ಣಳತೆ ಮೀರಿ ಹೋಗುವ ದೂರದೆಡೆಗೆ
ಮಣ್ಣಾದ ಕೈಗಳಲಿ ಹಾರಿಸುತ ಗಾಳಿಪಟ
ಹುಣ್ಣಾಗುವಷ್ಟು ನಕ್ಕುದ ನೆನೆದು ಕಡೆಗೆ

ಹೆಣ್ಣವಳು ಬಾಲ್ಯಸಖಿ ಬಾಳಬೆಳಗಿದ ಗೆಳತಿ
ಗೆಣ್ಣು ಮುರಿದಿಹ ಕಾಯಿ ನೆಲವಪ್ಪಿದಂತೇ
ಹಣ್ಣೆಲೆಯು ಕೋಲೊಂದು ಉದುರಿ ಚೀಲದಮೇಲೆ
ಟಣ್ಣೆಂದು ಬಿದ್ದ ಸದ್ದಿಗೆ ಎದ್ದು ಕುಳಿತೆ !

9 comments:

  1. ಭಾವಪೂರ್ಣ ನಿರೂಪಣೆ, ಒ೦ದೊ೦ದೂ ಪದದ ಅರ್ಥಪೂರ್ಣ ಬಳಕೆ, ಮನಮುಟ್ಟಿತು ಭಟ್ ಸರ್.

    ಶುಭಾಶಯಗಳು
    ಅನ೦ತ್

    ReplyDelete
  2. ತುಂಬಾ ಸುಂದರ ಕವನ. ಮನ ಪ್ರಫುಲ್ಲಾವಾಯಿತು. ಓದುತ್ತಿರುವಂತೆ ಬಾಲ್ಯಸಖಿ ಕಣ್ಣಲ್ಲಿ ತೇಲಾಡಿದಳು.

    ReplyDelete
  3. bhat sar;bhaavapoorna sundara kavana.blaagige bheti needi.

    ReplyDelete
  4. ಭಟ್ಟರೇ, ಬಾಲ್ಯಸಖಿಯನ್ನು , ಬಾಲ್ಯಕಾಲದಲ್ಲಿ ಆಡಿದ ಆಟಗಳನ್ನು ನೆನಪಿಸುತ್ತಾ ಒ೦ದು ರಮ್ಯ ಕವನ ರಚಿಸಿದ್ದೀರಿ. ಪದಬಳಕೆ ಚೆನ್ನಾಗಿದೆ.

    ReplyDelete
  5. sundaravaada kavana sir. :) thank u :)

    ReplyDelete
  6. Hi Bhatre..

    idu aadi prasada parakaste.. pyarada astu salinalli alla idi padyada astu salinalli aadi prasa ಣ .. wov very nice.. shabda jodisida pari super.. balya sakheegeetha ultimate.. chendada kavanakke dhanyavaadagaLu

    Pravi

    ReplyDelete
  7. ಓ ಬಾಲ್ಯದ ಮರೆತುಹೋದ ಗೆಳತಿ
    ಎಲ್ಲ ಮರೆತರೂ ,ಸ್ನೇಹ ಪ್ರೀತಿ
    ನೀ ಮರೆಯಲಾರೆ ಏಕೆ?

    ಇದ್ದೆ ನೀ ಅಂದು ಎರಡರಲ್ಲೂ
    ದು:ಖಕೆ,ಸಂತಸಕೆ!!!!

    ReplyDelete
  8. ಭಟ್ ಸರ್,

    ಬಾಲ್ಯಸಖಿಯಲ್ಲಿನ ಬಾಲ್ಯದ ಆಟಗಳು ಅವುಗಳ ಬಗೆಗೆ ಪದಗಳ ಜೋಡಣೆ ಖುಷಿಕೊಟ್ಟಿತು.

    ReplyDelete
  9. ಎಲ್ಲರಿಗೂ ವಂದನೆಗಳು

    ReplyDelete