ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 23, 2010

ಭಾವನೆಯ ಕೊಳದಲ್ಲಿ


ಭಾವನೆಯ ಕೊಳದಲ್ಲಿ

ಕಾಡ ಮಧ್ಯದಲಿರುವ ತಣ್ಣೀರ ತಿಳಿಗೊಳದಿ
ಹಾಡಿನಾ ಸೊಗಡು ಕಲ್ಲುದುರಿ ಅಲೆಯೇಳೆ !
ನೋಡುವಾ ಕೇಳುವಾ ಆಸೆಗಳ ಪುದುವೊಟ್ಟು
ಮಾಡಿ ಮನೋರಥದಿ ಮೆರೆಸುವಾ ವೇಳೆ

ಒಡನಾಡಿಗಳ ಮರೆತು ನೀರವದಿ ಅರೆಘಳಿಗೆ
ಗಡಿದಾಟಿ ಜನರ ಜಂಜಡಗಳನು ಕಳೆದು
ಅಡಿಗಡಿಗೆ ಗುಡಿಯು ಮಂದಿರ ಮಸೀದಿಗಳೆಂಬ
ಬಡಬಡಿಕೆಯಿರದಂಥ ಭಾವವದು ಬೆಳೆದು

ಭಾವಗಳು ನೂರ್ಮಡಿಸಿ ಮಗುಚಿರಲು ಮನದೊಳಗೆ
ಜೀವಕಳೆ ಚೇತನವ ಪಡೆದು ಪುಟಿಯುತಲಿ
ದೇವಸೃಷ್ಟಿಯ ಲೋಕ ಸೆಳೆಯುತ್ತ ತನ್ನೆಡೆಗೆ
ಯಾವಲೆಕ್ಕಕು ಸಿಗದ ಹರುಷವನು ನೀಡುತಲಿ

ಯಾವುದೋ ರಾಜನೊಂದಾನೊಂದು ಕಾಲದಲಿ
ಕಾವೇರಿ ಬೇಟೆಯನು ಬೆನ್ನಟ್ಟಿ ಬಂದು
ದಾವಾರಿಸಿಕೊಳಲು ಇಳಿದೊಮ್ಮೆ ನೀರ್ಕುಡಿದು
ಸಾವಿರದ ಬದುಕ ನೆನೆಯುತ್ತೊಮ್ಮೆ ನಿಂದು

ಆನೆ ಹುಲಿ ಸಿಂಹ ಮಿಕ ಮುಂತಾದ ಮೃಗಗಳವು
ಜೇನು ತಿಂದಾ ಕರಡಿಯೂ ಜತೆಗೆ ಸೇರಿ
ಬಾನಾಡಿಗಳು ಹಾರಿ ಬಸವಳಿದು ಕೆಳಗಿಳಿದು
ಗಾನಮಾಡುತ ಅಮೃತಬಿಂದುವನು ಹೀರಿ

ಕೆಂದಾವರೆಗಳವು ಅರಳಿ ದೂರದಲಿ ಒಂದೆಡೆಗೆ
ಅಂದವನು ಬಿಚ್ಚಿಡುತ ಸೂರ್ಯನರಸಿರಲು
ಬಂದವರ ಮನಸೂರೆಗೊಳ್ಳುತ್ತ ಕೊಳವಲ್ಲಿ
ಸಂದಕಾಲದ ಪರಿವೆಯಿಲ್ಲದಂತಿರಲು

7 comments:

  1. ನಮಸ್ಕಾರ ಭಟ್ ಸರ್;'ನಿಷ್ಕಲ್ಮಶ ಸಂತೋಷವೇ ನಿಜವಾದ ಧರ್ಮ'ಎಂಬ ಸತ್ಯವನ್ನು ಸಾರುವ ಸುಂದರ ಕವಿತೆ. ಅಭಿನಂದನೆಗಳು.

    ReplyDelete
  2. tumba chennagide sir kavana, kavanada aashaya istavaayitu

    ReplyDelete
  3. ಇದು ನಿಜವಾಗಿಯೂ ನಿರ್ಮಲವಾದ ಮಾನಸ ಸರೋವರ!

    ReplyDelete
  4. ಭಾವನೆಗಳ ತೋಟವನ್ನ ಅದ್ಭುತವಾಗಿ ಕವನಿಸಿದ್ದಿರಾ,,,,

    ReplyDelete
  5. ಸರ್,
    ಕವನ ತುಂಬಾ ಸುಂದರವಾಗಿದೆ.
    "ಕಾಡ ಮಧ್ಯದಲಿರುವ ತಣ್ಣೀರ ತಿಳಿಗೊಳದಿ
    ಹಾಡಿನಾ ಸೊಗಡು ಕಲ್ಲುದುರಿ ಅಲೆಯೇಳೆ" ಆಹಾ, ಬ್ಯೂಟಿಫುಲ್
    ಶುರುವಿನಲ್ಲಿಯೇ ಮನಸಿಗೆ ಹತ್ತಿರವಾಗುತ್ತೆ ಕವನ. ಸಾಲುಗಳಲ್ಲಿ ಹಲವು ವಿಷಯಗಳಿವೆ, ಎಲ್ಲವೂ ಚೆಂದವಾಗಿ ಮೂಡಿಬಂದಿದೆ.
    ಕೆಂದಾವರೆಗಳು ಹಾಗೆ ಇರಲಿ, ನಮ್ಮ ಮನಸೂರೆಗೊಳ್ಳುತ್ತಲೇ ಇರಲಿ.

    ReplyDelete
  6. ಎಲ್ಲರಿಗೂ ವಂದನೆಗಳು

    ReplyDelete