ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೆ ನೈವ ಜಾನೇ ನ ಜಾನೇ ||
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೆ ನೈವ ಜಾನೇ ನ ಜಾನೇ ||
ಪುಣ್ಯಪುರುಷರನ್ನು ಕಳೆದುಕೊಳ್ಳಲು ಮನಸ್ಸು ತಯಾರಾಗುವುದಿಲ್ಲ. ಅವರು ನಮ್ಮೊಟ್ಟಿಗೆ ಶಾಶ್ವತವಾಗಿ ಇದ್ದುಬಿಡಲಿ ಎಂಬ ಬಯಕೆ ನಮ್ಮದು. ಆದರೆ ಕಾಲನಿಗೆ ಹಾಗಲ್ಲ. ಕಾಲಚಕ್ರ ತಿರುಗುವ ಗತಿಯಲ್ಲಿ ಅದು ದಿವ್ಯ ಪುರುಷರನ್ನೂ ಇಲ್ಲಿ ಬಹಳ ಸಮಯ ಇರಗೊಡುವುದಿಲ್ಲ. ಮಹಾತ್ಮರ ನಿರ್ಯಾಣಗಳನ್ನು ಅವಲೋಕಿಸುವಾಗ ಹೃದಯವಂತರಿಗೆ ಕಣ್ಣಕೊನೆಯಲ್ಲಿ ಹನಿಗಳೆರಡು ಬಾರದೇ ಇರವು. ಭರತಖಂಡ ಕಂಡ ಅಂತಹ ಮಹಾಮಹಿಮನ ಅವತಾರ ಮುಕ್ತಾಯವನ್ನು ಅನಿವಾರ್ಯವಾದರೂ ನಾವು ಒಪ್ಪಿಕೊಳ್ಳಬೇಕಷ್ಟೇ. ಪರಮಾತ್ಮ ಮಾಹವಿಷ್ಣುವಿನ ಪೂರ್ಣಾವತಾರಗಳಲ್ಲಿ ಕೋಸಲಾಧಿಪ ಸೂರ್ಯ ವಂಶಜ ಶ್ರೀರಾಮಚಂದ್ರನ ರೂಪ ಕೂಡ ಒಂದು. ಅವತಾರಗಳಲ್ಲೇ ಶ್ರೇಷ್ಠ, ಎಂದಿಗೂ ನೆನಪಿಡಬಹುದಾದ ಅವತಾರಗಳಾದ ರಾಮಾವತಾರ ಮತ್ತು ಕೃಷ್ಣಾವತಾರಗಳು ಅತೀ ಪ್ರಾಮುಖ್ಯತೆ ಪಡೆದವುಗಳು. ಇವುಗಳಲ್ಲಿ ರೂಪ ಭೇದಗಳಿದ್ದರೂ ಯಾವುದೂ ಮೇಲೆ ಅಥವಾ ಕೆಳಗೆ ಎಂಬ ಯೋಚನೆ ಸಲ್ಲ. ಮಾನವ ಬದುಕಿಗೆ ಯಥಾ ಯೋಗ್ಯವಾದ ದಾರ್ಶನಿಕರಾಗಿ, ತಮ್ಮ ಜೀವಿತವನ್ನೇ ನಮಗಾಗಿ ಧಾರೆ ಎರೆದುಕೊಟ್ಟು ಹೋದ ಮಹಾನ್ ವ್ಯಕ್ತಿಗಳು ಶ್ರೀರಾಮ ಮತ್ತು ಶ್ರೀಕೃಷ್ಣ. ಈ ವ್ಯಕ್ತಿಗಳ ನೆನಪು ಬಂದಾಗ ಮನಸ್ಸು ಏನನ್ನೋ ಕಳಕೊಂಡಂತೆ ಒಳಗೊಳಗೇ ವಿಲವಿಲನೆ ಒದ್ದಾಡುತ್ತದೆ,ಚಡಪಡಿಸುತ್ತದೆ, ಕಾಣದ ಆ ಇಬ್ಬರನ್ನು ಎಲ್ಲೋ ಹುಡುಕಲು ತೊಡಗುತ್ತದೆ. ಅವರು ದೇವರು ಎನ್ನುವುದಕ್ಕಿಂತ ದಾರ್ಶನಿಕರು ಎಂದು ನೆನೆದು ನಮ್ಮಂತೆ ಮನುಷ್ಯರಾಗಿ ಪರೋಪಕಾರಿಯಾಗಿ ಅವರು ಪಟ್ಟ ಪಾಡನ್ನು ನೆನೆಸಿಕೊಂಡರೆ ನಮಗೆ ಅವರ ಒಂದಂಶವೂ ಸಾಧ್ಯವಿಲ್ಲವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಅವರನ್ನು ಕೊನೇಪಕ್ಷ ನೆನೆಸಿ ಕೊಳ್ಳುವುದು ನಮ್ಮ ಕರ್ತವ್ಯವಷ್ಟೇ ?
ಶ್ರೀರಾಮನವಮಿಯ ಸುತ್ತ ಹೆಣೆದ ವಿಷಯ ಸಂಚಾಲಿತ ಈ ಕಂತಿನಲ್ಲಿ ರಾಮ ನಿರ್ಯಾಣವನ್ನು ಬರೆಯುವಾಗ ಮನಸ್ಸು ಅದುರಿತು, ಚದುರಿತು, ಬರೆಯದೇ ಆಚೆ ಓಡಿ ಹೋಗುವ ಸ್ಥಿತಿಗೆ ಬರುತ್ತಿತ್ತು. ಯಾಕೆಂದರೆ ರಾಮ ಎಲ್ಲೂ ಹೋಗಿಲ್ಲ, ರಾಮ ಗುಡಿಗಳಲ್ಲಿಲ್ಲ, ರಾಮ ನಮ್ಮಲ್ಲೇ ನೆಲೆಸಿದ್ದಾನೆ, ಅಂತಹ ರಾಮನ ಅವಸಾನವಾಯ್ತು ಎಂದು ಬರೆಯಲು ಮನಸ್ಸು ತಯಾರಾಗುತ್ತಲೇ ಇರಲಿಲ್ಲ. ಕಣ್ಣ ಹನಿಗಳೊಂದಿಗೆ ಕೊನೆಗೂ ಮನಸ್ಸನ್ನು ಕಟ್ಟಿಹಾಕಿ ಬರೆದ ಕಥನ-ಕಾವ್ಯ ಈ ಶ್ರೀರಾಮ ನಿರ್ಯಾಣ.
ಸತ್ಪ್ರಜೆಗಳಿಂದ ತುಂಬಿ, ರಾಮರಾಜ್ಯವೆಂದೇ ಹೆಸರು ಪಡೆದ ಅಯೋಧ್ಯೆ ಎಂದಿನಂತೆ ರಾಮನ ರಾಜ್ಯಭಾರದಲ್ಲಿ ಕಂಗೊಳಿಸುತ್ತಿತ್ತು. ಶ್ರೀರಾಮ ರಾಜಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತಿರಲು ಕಾಲನ ಆಗಮನವಾಗಿ ಆತ ನಡೆಸಿದ ಮಾತುಕತೆಯ ಫಲಶ್ರುತಿಗೆ ಮೊದಲನೆಯ ಆಹುತಿಯಾಗಿ ಶ್ರೀ ಲಕ್ಷ್ಮಣನ ದೇಹಾಂತ್ಯವಾಗುತ್ತದೆ. ಸರಯೂ ನದಿಯಲ್ಲಿ ಮುಳುಗಿ ಸರ್ಪದಂತೆ ಹೊರಳಿ ಹೊರಳಿ ತನ್ನ ದೆಹಾರ್ಪಣೆಗೈದ ಲಕ್ಷ್ಮಣ ವೈಕುಂಠದಲ್ಲಿ ಮಹಾವಿಷ್ಣುವಿನ ಹಾಸಿಗೆಯಾಗಿರುವ ವಾಸುಕಿಯೇ ಆತನ ರೂಪದಲ್ಲಿ ಭುವಿಗೆ ಬಂದಿದ್ದ ನೆಂಬ ಸಂದೇಶ ನಮಗೆ ಸಿಗುತ್ತದೆ. ಅಂತೆಯೇ ಸೀತಾಮಾತೆ ಕೂಡ ಶೀ ಮಹಾಲಕ್ಷ್ಮಿಯ ಭುವಿಯ ಅವತಾರ ! ಸಾಕ್ಷಾತ್ ಮಹಾವಿಷ್ಣು ರಾಮನಾಗಿ ಭೂಮಿಗೆ ಬಂದಾಗ ಅವರೆಲ್ಲ ಅವನ ಸಂಗಡಿಗರಾಗಿ ಬಂದರು. ಇದನ್ನೇ ಕಾಲ ಹೇಳಲು ಬಂದಿದ್ದ.
" ಶ್ರೀರಾಮ ಬಂದು ಬಹಳ ಕಾಲ ಸಂದುಹೋಯಿತು, ಇಲ್ಲೇ ಈ ಭೂಮಿಯಲ್ಲಿ ಇದ್ದುಬಿಟ್ಟೆಯಲ್ಲ, ನೀನು ವೈಕುಂಠದ ಶ್ರೀ ಮಹಾವಿಷ್ಣು ಎಂಬುದನ್ನು ನಿನಗೇ ನೆನಪಿಸಲೂ, ನಿನ್ನನ್ನು ಅಲ್ಲಿಗೆ ಪುನಃ ಆಹ್ವಾನಿಸಲೂ ಬಂದಿದ್ದೇನೆ, ಇನ್ನು ಇಲ್ಲಿಯ ರಾಜ್ಯಭಾರ ಸಾಕು, ತಿಳಿದು ಸಮಯನೋಡಿ ಶೀಘ್ರ ನಿನ್ನ ಅವತಾರ ಸಮಾಪ್ತಿಗೊಳಿಸು" --ಕಾಲಪುರುಷ ಆದೇಶಿಸಿದ್ದಾನೆ, ಎಚ್ಚರಿಸಿದ್ದಾನೆ.
ರಾಮ ಎಲ್ಲವನ್ನೂ ಅವಲೋಕಿಸಿದ್ದಾನೆ. ಪ್ರಜೆಗಳ ಹಿತಕ್ಕಾಗಿಯೇ ತನ್ನೆಲ್ಲ ಜೀವಿತವನ್ನು ಕಳೆದಿದ್ದಾನೆ. ರಾಮನಿಗೆ ದಿನವಹಿ ಪ್ರಜೆಗಳಬಗ್ಗೇ ತುಡಿತ ಬಿಟ್ಟರೆ ತನ್ನ ವೈಯಕ್ತಿಕ ಬೇಕು-ಬೇಡಗಳನ್ನು ಎಂದೂ ಆತ ಲಕ್ಷ್ಯಿಸಲಿಲ್ಲ. ಅಗ್ನಿದೇವನ ಅನುಗ್ರಹದಿಂದ ಪಾಯಸದ ಪಾಲನ್ನು ಉಂಡ ತನ್ನ ತಾಯಿ ಕೌಸಲ್ಯೆಯ ಉದರದಲ್ಲಿ ಜನಿಸಿದ ಕೌಸಲ್ಯಾರಾಮ. ಋಷಿಗಳು ನಿರ್ಧರಿಸಿ ತನಗೆ ಈ ಹೆಸರು ಕೊಟ್ಟರು. ಬಾಲ್ಯದಲ್ಲಿ ವಿದ್ಯಾಭ್ಯಾಸದ ಹಂತ ಬಂತು. ಮಹರ್ಷಿ ವಿಶ್ವಾಮಿತ್ರರು ಗುರುವಾಗಿ ಆಸ್ಥಾನಕ್ಕೆ ಬಂದು ತನ್ನನ್ನೂ ತಮ್ಮ ಲಕ್ಷ್ಮಣನನ್ನೂ ಕಾಡಿಗೆ ಕರೆದೊಯ್ದರು. ಅಲ್ಲಿ ನಮಗೆ ಬಿಲ್ಲು ವಿದ್ಯೆ ಹೇಳಿಕೊಟ್ಟರು, ಅದಕ್ಕೆ ಪೂರಕ ಮಂತ್ರೋಪದೇಶ ನೀಡಿದರು. ತಂದೆ ದಶರಥ ಚಿಕ್ಕವರೆಂಬ ಕಾರಣದಿಂದ ಕಾಡಿಗೆ ಕಳಿಸಲು ಹಿಂದೆ ಮುಂದೆ ನೋಡಿದಾಗ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತು ಕಾಡಿಗೆ ಕರೆದೊಯ್ದು ಬದುಕಿನ ಮಜಲುಗಳನ್ನು ತೋರಿಸುತ್ತ ನಡೆದರು.ಪೂಜ್ಯರಾದ ವಿಶ್ವಾಮಿತ್ರರು ಬರದೇ ಇದ್ದರೆ ಅಂದು ತಮಗೆ ಇಷ್ಟೊಂದು ಮನೋ ದಾರ್ಷ್ಟ್ಯತೆ ಬರುತ್ತಿರಲಿಲ್ಲ. ತಾಟಕೆಯನ್ನು ವಧಿಸಿ,ಸುಭಾಹು-ಮಾರೀಚರನ್ನು ಓಡಿಸಿ ಯಜ್ಞಪೂರ್ತಿಗೆ ಕಾವಲುನಿಂತು ಹಲವನ್ನು ಗುರುಮುಖದಿಂದ ಕಲಿತೆವು. ಪ್ರಾಯ ಪ್ರಭುದ್ಧರಾದಾಗ ಮತ್ತೆ ಋಷಿಗಳು ಹೇಳಿದ ಪ್ರಕಾರ ಶಿವಧನುಸ್ಸನ್ನು ಮುರಿದಿದ್ದಾಯ್ತು, ಸೀತೆಯನ್ನು ಮಡದಿಯಾಗಿ ಪಡೆದಿದ್ದಾಯ್ತು.
ರಾಜ್ಯಭಾರ ನಡೆಸಲು ಯುವರಾಜ ಪಟ್ಟಕ್ಕೆ ಮಂಥರೆಯ ಕುಹಕ ಉಪದೇಶದಿಂದ ಚಿಕ್ಕಮ್ಮ ಕೈಕೇಯಿ ಜಗಳಕ್ಕೆ ನಿಂತಾಗ ತಾಯಿ-ತಂದೆಯ ಮೂಕ ಆಜ್ಞೆಗೆ ಕಟ್ಟುಬಿದ್ದು ಪುನಃ ೧೪ ವರುಷ ವನವಾಸಕ್ಕೆ ತೆರಳಿದ್ದಾಯ್ತು ಆ ದಾಶರಥಿರಾಮ. ಕಾಡಿನಲ್ಲೂ ತಮಗೆ ತಮ್ಮಪಾಡಿಗೆ ಇರಲು ರಾಕ್ಷಸೀ ಪ್ರವೃತ್ತಿಯವರು ಬಿಡಲಿಲ್ಲ. ತಮ್ಮ ಭರತ ತಮ್ಮನ್ನು ಹುಡುಕುತ್ತ ಪಿತೃವಿಯೋಗದ ಸುದ್ದಿ ತಂದ,ಏನು ಮಾಡೋಣ, ವಿಧಿ ಕೊನೆಯ ಕ್ಷಣದಲ್ಲೂ ತಂದೆಯನ್ನು ನೋಡಲು ಅವಕಾಶಕೊಡಲಿಲ್ಲ. ಅತ್ತ ಕಾಡಲ್ಲಿ ಅಲ್ಲೊಬ್ಬಳು ಶೂರ್ಪನಖಿ ಅಡ್ಡ ಬಂದಳು, ಅವಳನ್ನು ಮಟ್ಟಹಾಕಲು ಹೋಗಿ ಗೊತ್ತಿಲ್ಲದ ರಾವಣನನ್ನು ಎದುರುಹಾಕಿಕೊಳ್ಳುವ ಪ್ರಮೇಯ ಬಂತು! ಬಂಗಾರದ ಜಿಂಕೆಯ ಆಮಿಷ ತೋರಿಸಿ ತನ್ನ ಸೆಳೆದು, ತನ್ನ ಅನಿವಾರ್ಯತೆಯಲ್ಲಿ ಸೀತೆಯನ್ನು ರಾವಣ ಕದ್ದೊಯ್ದ. ಸೀತೆಗಾಗಿ ಹುಡುಕಿ ಅಲೆದು ಬಳಲಿದೆ.ಮುಂದೆ ಸಾಗುತ್ತ ಜಟಾಯುವಿನ ಮೂಲಕ ವಿಷಯ ತಿಳಿದು ಹಾಗೇ ಹುಡುಕುವಾಗ ವಾನರ ವೀರರ ಪರಿಚಯವಾಯ್ತು. ವಾಲಿ-ಸುಗ್ರೀವ-ಹನುಮ-ಅಂಗದ ಮೊದಲಾದ ಹಲವರು ಸಿಕ್ಕರು. ನಿಸ್ಪೃಹ ಸೇವಕ ದಾಸಶ್ರೇಷ್ಠ ಹನುಮ ಜೊತೆಗೂಡಿದ, ಆತನ ಸಾಹಚರ್ಯದಿಂದಲೇ ಲಂಕೆಯ ಪತ್ತೆ, ಅಲ್ಲಿಗೆ ಗಮನ ಮತ್ತು ರಾವಣ ವಧೆ ಇವೆಲ್ಲ ನಡೆಯಿತು. ಅಂತೂ ಸೀತೆಯನ್ನು ಮರಳಿ ಪಡೆದು ರಾಜ್ಯಕ್ಕೆ ಮರಳುವಷ್ಟರಲ್ಲಿ ಎಲ್ಲಾ ಸೇರಿ ರಾಜ್ಯದ ಪಟ್ಟ ಕಟ್ಟಿ ಪಟ್ಟಾಭಿರಾಮನನ್ನಾಗಿಸಿದರು. ಮತ್ತೆ ಅಗಸನ ಮಾತಿಗೂ ಬೆಲೆಕೊಟ್ಟು ಸೀತೆಯನ್ನೇ ಕಾಡಿಗೆ ಕಳಿಸಬೇಕಾದ ಪ್ರಸಂಗ ಬಂತು. ಕಾಡಲ್ಲಿ ಬಸುರಿ ಹೆಂಗಸನ್ನು ಬಿಟ್ಟುಬರುವ ಅನಿವಾರ್ಯತೆ ಬಂತು, ನಂತರ ಪುರದ ಪುಣ್ಯವೋ ತನ್ನ ಭಾಗ್ಯವೋ ಮಹರ್ಷಿ ವಾಲ್ಮೀಕಿಯ ಆಶ್ರಯ ತಮ್ಮ ಸೀತೆಗೆ ಸಿಕ್ಕು ಸುಪುತ್ರರಾದ ಲವ-ಕುಶರಿಗೆ ಒಳ್ಳೆಯ ಮುಹೂರ್ತದಲ್ಲಿ ಜನ್ಮನೀಡಿದಳು ಎಂಬುದು ವರ್ಷಗಳ ತರುವಾಯ ತಿಳಿದುಬಂತು. ಮರಳಿ ಕರೆತರಲು ಹೋದಾಗ ದುಃಖಿತ ಸೀತೆ ಜನನಿ ಭೂಮಿಯನ್ನು ಧ್ಯಾನಿಸಿ ಬಾಯ್ದೆರೆದ ಭೂಮಿಯಲ್ಲಿ ಹೊಕ್ಕು ನಮ್ಮನ್ನೆಲ್ಲ ತೊರೆದಳು.ಮಡದಿಯನ್ನು ಕಳೆದುಕೊಂಡ ರಾಮ ಯಾಕಾಗಿ ಬದುಕಬೇಕು, ಯಾವ ಮಡದಿಗಾಗಿ,ಅವಳ ರಕ್ಷಣೆಗಾಗಿ ಘನಘೋರ ಯುದ್ಧ ನಡೆಯಿತೋ ಅಂತಹ ಮಡದಿಯನ್ನೇ ಕಳೆದುಕೊಂಡು ಸೀತಾರಾಮ ಸೀತೆಯಿರದ ರಾಮನಾಗಿ ಬದುಕಿ ಏನು ಪ್ರಯೋಜನ,ಆದರೆ ಕರ್ತವ್ಯದ ಕೆರೆಯಿತ್ತು, ರಾಮ ತನಗಾಗಲ್ಲ, ಆತನೊಬ್ಬ ರಾಜ. ರಾಜಕಾರ್ಯದ ನಿಮಿತ್ತ ಆತ ಜೀವಿಸಬೇಕಾಗಿತ್ತು. ಇಂತಹ ವಿಷಮ ಸ್ಥಿತಿಗಳಲ್ಲೂ ಪರಿಸ್ಥಿಯನ್ನು ನಿಭಾಯಿಸುವ ಪಾಠಕಲಿತ-ಕಲಿಸಿದ ರಾಮ ಇಂದು ಹೊರಟು ನಿಂತಿದ್ದ! ಕಾಲನ ಅನುಜ್ಞೆಯಂತೆ ಮರಳಿ ವೈಕುಂಠಕ್ಕೆ!
ಪ್ರೀತಿ ಪಾತ್ರರಾದ ಪ್ರಜೆಗಳ ಕಣ್ಣಲ್ಲಿ ನೀರು ಕಂಡವನಲ್ಲ ರಾಮ. ಅದನ್ನು ಕಾಣಬಯಸುವ ವ್ಯಕ್ತಿಯೂ ಅಲ್ಲ. ರಾಮನೇ ಸರ್ವಸ್ವವೆಂದು ತಿಳಿದು ಬದುಕಿದ್ದ ಪ್ರಜೆಗಳಿಗಾಗಿ ಬದುಕಿದ್ದ ರಾಜಾರಾಮ,ಆದರೂ ಇಂದು ಕರೆಯನ್ನು ಹಿಮ್ಮೆಟ್ಟಿಸುವಂತಿರಲಿಲ್ಲ.ತನ್ನ ಸ್ವಾರ್ಥಕ್ಕಾಗಿ ತಾನು ಬದುಕಿಲ್ಲ, ಸಿಂಹಾಸನಕ್ಕೆ ಅಂಟಿಕೊಂಡಿಲ್ಲ, ಬದಲು ಆಪ್ತತೆ ತುಂಬಿದ, ಮುಗ್ಧ ಪ್ರಜೆಗಳ ಪ್ರೀತಿಗಾಗಿ, ಅವರ ರಕ್ಷಣೆಗಾಗಿ, ಅವರ ಪೋಷಣೆಗಾಗಿ, ಅವರ ರಂಜನೆಗಾಗಿ, ಅವರ ಮುಖದ ಮುಗ್ಧ ನಗುವಿಗಾಗಿ, ಅವರ ಇಷ್ಟಾರ್ಥ ಸಿದ್ಧಿಗಾಗಿ, ಅವರ ಸಮಸ್ಯೆಗಳನ್ನು ಆಲೈಸಿ ಪರಿಹರಿಸಲಾಗಿ, ಅವರಿಗೊಂದು ಚಂದದ ಬಾಳ್ವೆ ಕಟ್ಟಿಕೊಡಲಾಗಿ, ಅವರ ನೆಂಟನಾಗಿ-ಭಂಟನಾಗಿ ರಾಮ ಪ್ರಜೆಗಳಿಗೆ ಮನಸೋತಿದ್ದ, ವೈಕುಂಠವನ್ನೇ ಮರೆತುಬಿಟ್ಟಿದ್ದ. ಪ್ರಜೆಗಳೂ ಅಷ್ಟೇ-- ಕಡ್ಡಿ ಅಲ್ಲಾಡಿದರೂ ರಾಮ, ಗಾಳಿಗೆ ಕಸ ತೂರಿಬಂದರೂ ರಾಮ, ನಿಂತರೂ ರಾಮ ಕುಂತರೂ ರಾಮ, ರಾಮಾವಲಂಬಿತ ಜೀವನ ಅವರದಾಗಿತ್ತು. ಏನಾದರೂ ರಾಮ ಮಾತ್ರ ತಮ್ಮನ್ನು ಬಿಟ್ಟುಕೊಡಲಾರ, ಎಂತಹ ಕ್ಷಣದಲ್ಲೂ ರಾಮನಿದ್ದಾನೆ ಎಂದೇ ಅವರು ಧೈರ್ಯದಿಂದ, ಪ್ರೀತಿಯಿಂದ,ಭಕ್ತಿಯಿಂದ ಜೀವಿಸಿದ್ದರು. ಪರಸ್ಪರ ನಿರಾತಂಕವಾಗಿ, ಸುಲಿಗೆ-ದರೋಡೆ-ಕಳ್ಳತನ-ಮೋಸ-ವಂಚನೆ ಇಲ್ಲದೇ ಪ್ರಾಮಾಣಿಕವಾಗಿ ಬದುಕು ನಡೆಸಿದ್ದರು. ಇಂತಹ ಸತ್ಪ್ರಜೆಗಳನ್ನು ಬಿಟ್ಟು ಹೊರಡಲು ರಾಮನ ಮನಸ್ಸು ಇಷ್ಟಪಟ್ಟಿರಲಿಲ್ಲ. ಆದರೂ ಇಂದು ಹೊರಟುನಿಂತಿದ್ದಾನೆ ಶ್ರೀರಾಮ. ಸ್ಥಿತಪ್ರಜ್ಞ ಋಷಿಸದೃಶ ರಾಮ ಅಳಲಾರ, ಅಳಲು ತೋಡಿಕೊಳ್ಳಲಾರ, ಹೇಳಲಾರ, ಹೇಳದೆ ಇರಲಾರ, ಆಡಲಾರ, ಅನುಭವಿಸಲಾರ. ಆತನ ಮನದಲ್ಲಿ ಉದ್ಭವಿಸಿದ ಆ ಮೂಕ ರೋದನ ಅದು ಅಸಾಧ್ಯ ವೇದನೆ. ತಣ್ಣೀರನ್ನೂ ತಣಿಸಿ ಕುಡಿ ಎಂಬ ಗಾದೆಯಂತೆ ನಿಧಾನವಾಗಿ ಪ್ರಜೆಗಳನ್ನು ಕರೆದು ತನ್ನ ನಿರ್ಯಾಣದ ನಿರ್ಧಾರವನ್ನು ಚಿಕ್ಕ ಮಕ್ಕಳಿಗೆ ಅಮ್ಮ " ಮನೆಯಲ್ಲೇ ಇರು ಇಲ್ಲೇ ವೈದ್ಯರಹತ್ತಿರ ಹೋಗಿಬರುತ್ತೇನೆ" ಎಂದು ಹೇಳಿ ಹೋಗುವಂತೆ ಹೇಳಿದ್ದಾನೆ, ನಿಧಾನ ನಿಧಾನ ನಿಧಾನ ಮಾಡುತ್ತಾ ಪುನಃ ಈ ರಾಮ ಬರುವುದಿಲ್ಲವೆಂತಲೂ ಸಾರಿಬಿಟ್ಟಿದ್ದಾನೆ. ಸಹಿಸಲು ಸಾಧ್ಯವೇ ಇಲ್ಲದ ಪ್ರಜೆಗಳು ಭೋರ್ಗರೆದು ಧುಮ್ಮಿಕ್ಕುವ ಜಲಲ ಧಾರೆಯಂತೆ ಕಣ್ಣೀರು ಹರಿಸಿದ್ದಾರೆ. ಇಂದು ಮಾತ್ರ ಆ ಕಣ್ಣೀರು ಒರೆಸುವ ಕೈ ಕೆಲಸಮಾಡುವ ಮಿತಿಯನ್ನು ಮೀರಿತ್ತು. ಆ ಸಂದರ್ಭ ರಾಮ ತನ್ನ ಬದುಕಿನ ಸಿಂಹಾವಲೋಕನ ಮಾಡಿದ್ದಾನೆ ---
ಶ್ರೀರಾಮ ನಿರ್ಯಾಣ
ಬದುಕು ಬಳ್ಳಿಯ ಹರಿವ ಕ್ಷಣವು ಬಂದಿಹುದೆನಗೆ
ಇದಕೆ ಸಂಕಟವಾಯ್ತು ಈ ಜಿಹ್ವೆಯೊಳಗೆ
ತದಕಾಡಿದರು ಸಿಗದ ಸತ್ಪ್ರಜೆಗಳಿಹ ರಾಜ್ಯ
ಅದಕಾಯ್ತು ವೇದನೆಯು ಮನದಗುಡಿಯೊಳಗೆ
ಉಂಡುಟ್ಟು ಸುಖವಾಗಿ ನಲಿವ ಪ್ರಜೆಗಳ ದಂಡು
ಕಂಡಷ್ಟೂ ಖುಷಿಯೆನಗೆ ದಿನವೂ ರಾಜ್ಯದಲಿ
ಒಂದಷ್ಟು ನಗೆಯ ಅಲೆಗಳು ಅವರ ವದನದಲಿ
ಬಂದಷ್ಟು ನಡೆವುದದು ರಾಜ್ಯ ತುಷ್ಟಿಯಲಿ
ಪುಣ್ಯ ನದಿ ಸರಯೂ ಹರಿದಿಹ ನಾಡು ಕೋಸಲೆಯು
ಗಣ್ಯ ಮನಗಳ ಇಹದ ಸ್ವರ್ಗಸಮ ಬೀಡು
ನಾಣ್ಯನಗದಾ ಚಿಂತೆ ಕಾಡದಿಹ ಸಿರಿತನವು
ವನ್ಯಸಂಪದ ತುಳುಕಿ ಹರಿದ ನಲುನಾಡು
ಮುನಿವರೇಣ್ಯರು ಹರಸಿ ನಡೆತಂದ ರಾಜ್ಯವಿದು
ಘನತೆವೆತ್ತಿಹ ದಶರಥನ ಸಂಸ್ಥಾನ
ಧನಕನಕ ಮುತ್ತು ರತ್ನವು ಹವಳ ವಜ್ರಗಳು
ಮನೆಮನೆಯ ತುಂಬಿಸಿದ ಪ್ರಜೆಗಳಾಸ್ಥಾನ
ಸೂರ್ಯವಂಶದ ಸಾಹಸಿಗಳಾಳಿದೀ ಭೂಮಿ
ಕಾರ್ಯಭಾರವು ಬೆಸೆದು ಮನದ ಮೂಸೆಯಲಿ
ಆರ್ಯ ಸಂಸ್ಕೃತಿಯಲ್ಲಿ ಮೇರುತೆರದಲಿ ಮೆರೆವ
ವೀರ್ಯವಂತರು ಬದುಕಿದೀ ದೇಶದಲ್ಲಿ
ಚಿನ್ನದಂತಹ ಮಡದಿ ಸೀತೆಗತಿಸಲು ಕೂಡ
ನನ್ನ ನೋವನು ಮರೆತೆ ರಾಜ್ಯಭಾರದಲಿ
ರನ್ನದಂತಹ ತಮ್ಮ ಲಕ್ಷ್ಮಣನ ಕಳಕೊಂಡೆ
ಇನ್ನಾಯ್ತು ವಿಧಿಯೆನಗೆ ಕಾಲರೂಪದಲಿ
ವಿ. ಆರ್. ಭಟ್ ಅವರೆ..
ReplyDeleteಬಹಳ ಚೆನ್ನಾಗಿ ವಿವರಿಸಿದ್ದೀರಿ...
ಬಹಳ ಇಷ್ಟವಾಯಿತು...
ನಾನು ದಿ. ಶಂಭು ಹೆಗಡೆಯವರ "ನಿರ್ಯಾಣದ" ರಾಮನನ್ನು ನೋಡಿದ್ದೆ...
ಅವರ ಮಾತು.. ಅವರ ಕಂಠ...
ಅವರ ಅಭಿನಯ..
ಅವರು ರಾಮನ ಪಾತ್ರವನ್ನು ಪೋಷಿಸಿದ ರೀತಿ...
ತುಂಬಾ ಚೆನ್ನಾಗಿತ್ತು...
ರಾಮ ನಿರ್ಯಾಣದ ಕಥೆ ಹೇಳುತ್ತ..
ಪೂರ್ತಿ ರಾಮಾಯಣದ ಅವಲೋಕನ ಮಾಡಿದ್ದೀರಿ...
ಎಲ್ಲವೂ ತುಂಬಾ ಚೆನ್ನಾಗಿದೆ..
ತಮ್ಮ ಸಾವಿನ ಅರಿವಿದ್ದ ಇನ್ನೂ ಕೆಲವು ಪುರಾಣದ ಪಾತ್ರಗಳಿವೆ..
ಅವುಗಳನ್ನೂ ವಿವರಿಸುವಿರಾ ?
(ಇದು ನನ್ನ ವಿನಂತಿ)
ಮಾಗಧ..
ಭೀಷ್ಮ ಇಚ್ಛಾ ಮರಣಿಯಾಗಿದ್ದ...
ಇಂಥಹ ಪಾತ್ರಗಳ ವಿಶ್ಲೇಷಣೆ ಚೆನ್ನಾಗಿರುತ್ತದೆ..
ಧನ್ಯವಾದಗಳು...
ಖಂಡಿತವಾಗಿಯೂ ಅವಕಾಶ ಸಿಕ್ಕಾಗ ಅದನ್ನು ಪೂರೈಸುತ್ತೇನೆ, ಪ್ರಕಾಶರೇ,ಬೇಗನೇ ಬಂದು ಆಸ್ವಾದಿಸಿದ ತಮಗೆ ರಾಮನ ಹಲವು ನೆನಕೆಗಳು ಹಾಗೂ ಧನ್ಯವಾದಗಳು
ReplyDeleteಕೊನೆಯ ಚರಣ ಹ್ರದಯ ಸ್ಪರ್ಶಿಯಾಗಿದೆ.
ReplyDeleteಅಹಾ !. ತುಂಬ ಚೊಕ್ಕವಾಗಿ ರಾಮಾಯಣವನ್ನೇ ತೆರೆದಿಟ್ಟಿದ್ದೀರಿ. ಇಂತಹ ಸ್ವಾರಸ್ಯಕರ ವಿಷಯಗಳನ್ನು ದಯಮಾಡಿ ತಿಳಿಸಿಕೊಡಿ. ( ಕೃಷ್ಣಾವತಾರದ ಅಂತ್ಯವೂ ಸ್ವಾರಸ್ಯವಾಗಿದೆ ಎಂದು ಕೇಳಿದ್ದೇನೆ.). ಧನ್ಯವಾದಗಳು.
ReplyDeleteನಿಮ್ಮ ಬ್ಲಾಗಿನಲ್ಲಿ ನಮಗೆ ತಿಳಿಯದ ಅನೇಕ ವಿಷಯಗಳನ್ನು ತಿಳಿಸುತ್ತೀರಿ .ನಿಮ್ಮ ಬ್ಲಾಗ್ ನಿಜಕ್ಕೂ ಒಂದು ಜ್ಞಾನ ಭಂಡಾರವೇ ಸರಿ!ಧನ್ಯವಾದಗಳು ಸರ್ .
ReplyDeleteವಿ ಅರ ಭಟ್ ಅವರೇ,
ReplyDeleteಶ್ರೀರಾಮ ನ ಪಾತ್ರವೇ ಅಂಥಾದ್ದು
ರಾಮ ಎಲ್ಲರಿಗೂ ಮಾದರಿ
ಇಂದು ಅಧಿಕ್ಕರಕ್ಕಾಗಿ ಆಸೆ ಪಡುತ್ತೇವೆ, ಅಂಥಹುದರಲ್ಲಿ ೧೪ ವರ್ಷ ವನವಾಸ ಮಾಡಿದ ಎಂಬ ಕಥೆಯೇ
ಮನಸ್ಸಿಗೆ ರೋಮಾಂಚನ ನೀಡುತ್ತದೆ
ಆತನ ಸತ್ಯ ಪರತೆ ಎಲ್ಲರಿಗೂ ಮಾರ್ಗದರ್ಶಿ
ಪ್ರಕಾಶಣ್ಣ ಅಂದಂತೆ ಭೀಷ್ಮ ನ ಪರಿಚಯ ಮಾಡಿಕೊಡಿ
ನಿಮ್ಮ ಬರವಣಿಗೆಯಲ್ಲಿನ ಹಿಡಿತ ಬಹಳ ಇಷ್ಟವಾಗುತ್ತದೆ
ರಾಮಾಯಣದ ಅವಲೋಕನವನ್ನೇ ಮಾಡಿದ್ದೀರಿ ಸಾರ್. ಕೊನೆಯ ಚರಣ...ಚಿನ್ನದಂತಹ ಮಡದಿ ಸೀತೆ...... ರನ್ನದಂತಹ ತಮ್ಮ ಲಕ್ಷ್ಮಣ.... ಓದುವಾಗ ಅನಾಯಾಸವಾಗಿ ಕಣ್ಣು ಒದ್ದೆಯಾಗತ್ತೆ... ತುಂಬಾ ಚೆನ್ನಾಗಿದೆ.... ರಾಮಾಯಣದಲ್ಲಿ ಬೇರೆಲ್ಲಾ ಹಿಂದೆ ಸರಿದರೂ ರಾಮನ ಪಾತ್ರ, ರೂಪ ಮಾತ್ರ ಭದ್ರವಾಗಿ ಚಿಕ್ಕವಯಸ್ಸಿನಲ್ಲಿ, ಮೊದಲ್ನೇ ಬಾರಿಗೆ ಕಥೆ ಕೇಳಿದಾಗಲೇ ಉಳಿದುಬಿಟ್ಟಿರತ್ತೆ. ನಮ್ಮ ಉಸಿರಲ್ಲಿ ಉಸಿರಾಗಿ ಶ್ರೀರಾಮ ಮತ್ತು ಶ್ರೀಕೃಷ್ಣನ ಪಾತ್ರಗಳು, ಅವತಾರಗಳು ಬೆರೆತುಹೋಗಿವೆ. ಧನ್ಯವಾದಗಳು ಸಾರ್...
ReplyDeleteವಿದ್ಯುತ್ ವ್ಯತ್ಯಯದಿಂದ ಬಹಳಹೊತ್ತು ಕೆಲಸಮಾಡಲು ಆಗುತ್ತಿಲ್ಲ,ದಯಮಾಡಿ ಕ್ಷಮಿಸಿ,ನಿಮ್ಮೆಲ್ಲರಪ್ರತಿಕ್ರಿಯೆಗೆ ತುಂಬಾ ಆಭಾರಿ,ಎಲ್ಲರಿಗೂ ಧನ್ಯವಾದಗಳು
ReplyDeleteಶ್ರೀರಾಮನ ಜೀವನ ಚರಿತೆಯನ್ನು ಸೊಗಸಾಗಿ ಚಿಕ್ಕ-ಚೊಕ್ಕದರಲ್ಲಿ ವಿವರಿಸಿ ಅವನ ನಿರ್ಯಾಣದ ಕವನವನ್ನೂ ಸೊಗಸಾಗಿ ಹೆಣೆದು ನೀಡಿದ್ದಿರಾ... ಧನ್ಯವಾದಗಳು.
ReplyDeleteಸೀತಾರಾಮ್ ತಮಗೆ ಧನ್ಯವಾದಗಳು
ReplyDelete