ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 8, 2010

ಹಾರಿಹೋದೆಯ ಗಿಣಿಯೆ ?

ಹಿಂದೂ ಮುಂದೂ ಗೊತ್ತಿಲ್ಲದ ಅನಿವಾರ್ಯ ಕಥನ --ಈ ಜೀವನ ! ಒಬ್ಬೊಬ್ಬರ ಜೀವನವೂ ಒಂದೊಂದು ಕಥೆ! ಕಥೆಗಾರರಿಗೆ ಕಥೆ ಬರೆಯಲು ವಿಷಯವಸ್ತು ಬೇರೆ ಬೇಕೇ ? ಇಂತಹ ಅನಿವಾರ್ಯ ಕಥನದ ಒಬ್ಬ ಅನಿರೀಕ್ಷಿತ ಸ್ನೇಹಿತನಲ್ಲದ ಸ್ನೇಹಿತನೊಬ್ಬನನ್ನು ಕಳೆದುಕೊಂಡೆ, ಆತನ ಮನೆ-ಕುಟುಂಬ-ಹೆಂಡತಿ-ಮಗು ಇದೆಲ್ಲ ನೆನಪಾಗಿ ಯಾಕೋ ಮನಸ್ಸು ಚಡಪಡಿಸಿತು. ಜೀವನದಲ್ಲಿ ಯಾರೂ ಯಾರಿಗೂ ಎಷ್ಟರ ಮಟ್ಟಿಗೆ ಸಹಾಯಮಾಡುತ್ತೇವೆ ಎಂದುಕೊಳ್ಳಲು ಆಗುವುದಿಲ್ಲ. ಆದರೆ ಕೆಲವು ವ್ಯಕ್ತಿಗಳು ಅವರ ಚಟಗಳಿಂದ ಅವರ ಅಹಮ್ಮಿನಿಂದ ಎಳವೆಯಲ್ಲೇ ಇಹವನ್ನು ತ್ಯಜಿಸಬೇಕಾಗಿ ಬರುತ್ತದೆ. ಅಂಥವರು ಯಾರ ಮಾತನ್ನೂ ಹಿತವಚನವನ್ನೂ ಕೇಳುವುದಿಲ್ಲ. ಮೇಲಾಗಿ ಅಂಥವರು 'ಅಂಥವರೆಂದು' ಗೊತ್ತಾಗುವುದೇ ನಮಗೆ ಬಹಳ ತಡವಾಗಿ ! ಆ 'ಅಂಥವರು' 'ಅಂಥ' ಸ್ಥಿತಿಯನ್ನೂ ಮೀರಿ ಮೇರೆದಾಟಿದಾಗ Out ಆಗಿಬಿಡುತ್ತಾರೆ ! ಅದು ಅವರ ದುಶ್ಚಟಗಳ ಪರಿಣಾಮ ! ವಾಮಮಾರ್ಗದಲ್ಲಿ ಹೋಗುವ ಕೆಲವರು ಹೇಗೆ ಅಲ್ಲಿನ ಕ್ಷುದ್ರ ದೇವತೆಗಳಿಗೆ ಕೊನೆಗೊಮ್ಮೆ ಅವರೇ ಬಲಿಯಾಗುತ್ತಾರೋ ಹಾಗೇ ದುಶ್ಚಟಗಳು ಚಟಸಾಮ್ರಾಟರನ್ನು ಬಲಿಹಾಕುತ್ತವೆ !

ನಮ್ಮ ಒಳಗಿನ ನ್ಯಾಯಾಂಗ [ ಮನಸ್ಸು] ಕಾರ್ಯಾಂಗ [ ಅವಯವಗಳು] ಶಾಸಕಾಂಗ [ಅನ್ನಾಂಗಗಳು] ತಮ್ಮದೇ ಆದ ರೀತಿ-ರಿವಾಜು ಇಟ್ಟುಕೊಂಡಿವೆ ! ಈ ರೀತಿ ತಪ್ಪಿದರೆ ಮೊದಲು ಶಾಸಕಾಂಗ ನಂತರ ಕಾರ್ಯಾಂಗ ನಂತರ ನ್ಯಾಯಾಂಗ ಒಂದೊಂದಾಗಿ ಕೆಲಸ ನಿಲ್ಲಿಸಿಬಿಡುತ್ತವೆ. ಹಳಿ ತಪ್ಪಿದ ರೈಲಿನಂತೆ ಯಾವಾಗ ಈ ಸ್ಥಿತಿ ಒಂದಕ್ಕೊಂದು ತಾಳ-ಮೇಳ ಇಲ್ಲದಂತಾಗುತ್ತದೋ ಆಗ ಸಾವು ಕೈಬೀಸಿ ಸೆಳೆದುಕೊಂಡುಬಿಡುತ್ತದೆ. ಯಾರೂ ಶಾಶ್ವತವಲ್ಲವಾದರೂ ಇರುವಷ್ಟು ದಿನ ನಮ್ಮ ಪ್ರತೀ ಜೀವನದಲ್ಲೂ ಲೌಕಿಕವಾಗಿ ಸಾಧನೆ ಮಾಡಲೇಬೇಕು.

ಇನ್ನೊಬ್ಬರಿಗೆ ಆದಷ್ಟೂ ಹೊರೆಯಾಗದ ಬದುಕನ್ನು ಬದುಕಲು ಸದಾ ಪ್ರಯತ್ನಿಸಬೇಕು. ಅದರಲ್ಲಂತೂ ಗೊತ್ತಿದ್ದೂ ಗೊತ್ತಿದ್ದೂ ದುಶ್ಚಟಗಳನ್ನು ಜಾಸ್ತಿಮಾಡುತ್ತಾ ಅದಕ್ಕೇ ತಮ್ಮನ್ನು ಮಾರಿಕೊಂಡು ಅವಲಂಬಿತರನ್ನು ಅರ್ಧದಲ್ಲಿ ಬಿಟ್ಟುಹೋಗುವ ಸ್ಥಿತಿ ಸರ್ವದಾ ಸಲ್ಲ. ಹೀಗೊಮ್ಮೆ ಅಕಸ್ಮಾತ್ ಅಂಥವರು ಮಧ್ಯೆ ಬಿಟ್ಟುಹೋದರೆ ಅಲ್ಲಿ ಹೆಂಡತಿ-ಮಕ್ಕಳ ಕಥೆ ಅದು ಹೇಳಲಾರದ ವ್ಯಥೆ. ಬದುಕಲಾರದ-ಬದುಕಿರಲಾರದ, ಬದುಕೇ ಅಸಹ್ಯವೆನಿಸಿಬಿಡುವ ಆ ದಿನಗಳನ್ನು ಹೆಂಡತಿ ಎಂಬ ಆ ಜೀವ ಅನುಭವಿಸುವುದನ್ನು ಯಾರಲ್ಲಿಯೂ ಹೇಳಿಕೊಳ್ಳಲಾರಳು. ತುಂಬಾ ಎಳೆಯ ಮಕ್ಕಳಾದರೆ ಅವುಗಳಿಗೆ ಇನ್ನೂ ಅರ್ಥವಾಗದ ಪರಿಸ್ಥಿತಿ, ಅವರ " ಅಪ್ಪ ಬೇಕು " ಎನುವ ಆಕ್ರಂದನಕ್ಕೆ ಆ ತಾಯಿ ಏನು ಮಾಡಿಯಾಳು ? ದುಡ್ಡುಕೊಟ್ಟು ಕೊಳ್ಳುವ ಬದುಕೇ ? ಚೈನೀಸ್ ಟಾಯ್ ಆಗಿದ್ರೆ ಹತ್ತಲ್ಲ ಹಲವು ಕೊಡಿಸಬಹುದು, ಆದರೆ ಹೋದ ವ್ಯಕ್ತಿಯನ್ನು ಮರಳಿ ತರಲು ಸಾಧ್ಯವೇ ? ಯಾರೂ ಬಯಸದ, ಯಾರಿಗೂ ಬೇಡದ ಈ ಸ್ಥಿತಿಯನ್ನು ಅನೇಕ ಸಂದರ್ಭಗಳಲ್ಲಿ ಕೈಯ್ಯಾರೆ ತಂದುಕೊಳ್ಳುವುದು ನಮ್ಮ ದುಶ್ಚಟಗಳಿಂದ ಅಲ್ಲವೇ ? ಗುಟ್ಕಾ, ಸಿಗರೇಟ್, ವೈನ್ ಹೀಗೆ ಯಾವುದೋ ಒಂದನ್ನೋ ಅಥವಾ ಎಲ್ಲವನ್ನೂ ನಮ್ಮ ಜೀವನದಲ್ಲಿ ಬಳಸಿ, ಬಿಡಲಾರದಷ್ಟು ಅವುಗಳ ನಂಟು ಬೆಳೆಸಿ ಕೊನೆಗೊಮ್ಮೆ ಹಲವರ ದುಃಖಕ್ಕೆ ಕಾರಣೀಭೂತರಾಗುತ್ತೇವೆ ! ಹೀಗಾಗದಿರಲಿ ಎಂಬ ಸದಾಶಯದೊಂದಿಗೆ ಗತಿಸಿದ ಗೆಳೆಯನ ಸ್ಮರಣೆಯ ಹಿನ್ನೆಲೆಯಲ್ಲಿ ಬರೆದ ಈ ಹಾಡನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. [ಈ ಹಾಡಿನ ಪಲ್ಲವಿಯನ್ನು ಹಿಂದೊಮ್ಮೆ ನನ್ನ ಸಣ್ಣ ಕಥೆಯಲ್ಲಿ ಬರೆದಿದ್ದೆ, ಅದು ಅಲ್ಲಿ ಆ ಕಥೆಗಾಗಿ ಬರೆದಿದ್ದು ಈ ರೀತಿ ಪೂರ್ಣವಾಗುತ್ತದೆ ಎಂಬ ಅನಿಸಿಕೆ ಇರಲಿಲ್ಲ,ವಿಧಿ ಹೀಗೆ ಬರೆಸಿತು !]
ಹಾರಿಹೋದೆಯ ಗಿಣಿಯೆ ?


ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ .......
ಆರಿಹೋಯಿತು ದೀಪ ಆರದೀ ಹಿಡಿಶಾಪ ?
ದಾರಿಯಲಿ ಅಗಲುತ್ತ ಕಾಣದೆಡೆಗೆ

ಮೇರು ಪರ್ವತದಂತೆ ಬೆಳೆವ ಕನಸನು ಕಂಡ
ಏರು ದಿಣ್ಣೆಗಳನ್ನು ಹತ್ತಿ ಇಳಿದು
ಜಾರುತೇಳುತ ಸಾಗುವೀನಮ್ಮ ಜೀವನದಿ
ದಾರಿ ಹಲವನು ನೆನೆಸಿ ಕನಸು ಸುಳಿದು

ನಾಳೆ ನಾಳೆಗಳೆಂಬ ಭಾರೀ ನಾಳೆಗಳಲ್ಲಿ
ವೇಳೆ ಸರಿದೂ ದೂರ ಬಹಳ ಕ್ರಮಿಸಿ
ಹೇಳಲೇನುಂಟೀಗ ಮುಗಿದು ಹೋಗಿಹ ಪಾಠ ?
ಕೇಳಿ ಮಾಡುವುದೇನು ಬರಿದೇ ಹರಸಿ ?

ಅಪ್ಪ ಎಲ್ಲಿ ಎಂದು ಎಳೆಮಗುವು ಕೇಳುತಿದೆ
ಅಪ್ಪಿ ಪ್ರೀತಿಯ ತೋರ್ವ ನಿನ್ನ ನೆನೆದೂ
ಬೆಪ್ಪರಾದಂತೆ ಕುಳಿತಿಹ ನಮ್ಮ ಹಿರಿಜನರ
ಸಪ್ಪೆ ಮುಖದಲಿ ಕಣ್ಣ ನೀರು ಹರಿದೂ

ನೆಮ್ಮದಿಯ ಸಂಸಾರ ನಮ್ಮದಾಗಲಿ ಎಂದು
ಹೆಮ್ಮೆಯಲಿ ಹರಸಿದರು ಹಲವು ಮಂದಿ
ಒಮ್ಮೆಯಾದರು ಮಗುವ ಮಾತು ಕೇಳಿದರಿಲ್ಲಿ
ಸುಮ್ಮನಿರುತಿದ್ದನಾ ಯಮನು ಕಳೆಗುಂದಿ

ಎಲ್ಲಿ ಕುಳಿತರು ಮನಕೆ ತನ್ನ ತನವೇ ಇಲ್ಲ
ಕಲ್ಲಾಗಿಹುದು ಹೃದಯ ಮಗುವ ನೆನೆಸಿ
ಬಲ್ಲವರು ಸಂತೈಸಿ ಬಳಲಿದರು ತಾವೆಲ್ಲ
ಇಲ್ಲವಾಗಿಹ ನಿನ್ನ ಆ ಇರವ ಸ್ಮರಿಸಿ
--------

[ ಓದಿ ಬೇಸರಗೊಂಡ ನಿಮ್ಮ ಮನಕ್ಕೆ ಸೈಡ್ ವಿಂಗ್ ನಲ್ಲಿ ' ಬೆಣ್ಣೆ ಮುರುಕು ' ಇಟ್ಟಿದ್ದೇನೆ, ತಿಂದು ಸಮಾಧಾನಿಸಿಕೊಳ್ಳಿ ]6 comments:

 1. ಮನುಷ್ಯ ಮೊದಲು ಚಟಗಳನ್ನು ಬೆಳಸಿಕೊಳ್ಳುತ್ತಾನೆ ಬರ ಬರುತ್ತಾ ಚಟಗಳೇ ಅವನನ್ನು ಬಳಸಿಕೊಳ್ಳುತ್ತವೆ.!

  ReplyDelete
 2. ಬದುಕು ಸುಳ್ಳಲ್ಲ ಕಲ್ಲು ಮುಳ್ಳಿನಹಾದಿ
  ನಡುನಡುವೆ ಅಲ್ಲಲ್ಲಿ ಹಣ್ಣು ಹೂವು|
  ಮುಳ್ಳುತುಳಿವರೆ ಎಲ್ಲಾ
  ಕೆಲವರಿಗೇ ಹಣ್ಣು
  ಇದು ವಿಧಿ ಲಿಖಿತ
  ಕೇಳು ಮನುಜ||

  ReplyDelete
 3. hi,

  Nimma Kavitegalu Sulbha vagi artha garbhithavagi ive. Dhanyavada galu.

  ReplyDelete
 4. ' ಹಾರಿ ಹೋದೆಯ' ಅನ್ನುವುದನ್ನು ಓದುತ್ತಿದ್ದಂತೆ ಬಹಳಮಂದಿ ವಾಪಸ್ ಹೊರಟುಬಿಡುತ್ತಾರೆ, ಯಾಕೆಂದರೆ ಆ ಚಿತ್ರ ಮತ್ತು ಒಕ್ಕಣಿಕೆ ಮನದಲ್ಲಿ ಮೂಡಿ ಓಹೋ ಇದೊಂದು ಸ್ಯಾಡ್ ಸಾಂಗ್ ಅಂತ ಮನಸ್ಸು ನಿರ್ಧರಿಸುತ್ತದೆ, ಅದ್ದರೆ ಇಂದು ಬಹಳ ಮಂದಿ ನೇಪಥ್ಯದಲ್ಲಿ ಓದಿದ್ದಾರೆ, ಅವರು ಪ್ರತಿಕ್ರಿಯಿಸುವುದಿಲ್ಲ, ಅವರ ಭಾವನೆ ಮೂಕ ! ಆದರೆ ನನ್ನ ಕಳಕಳಿ ಇಷ್ಟೇ, ಯಾರೇ ಚಟಗಾರರಿರಲಿ ಅವರ ಬಗ್ಗೆ ಎಚ್ಚರವಿರಲಿ, ಅವರ ಮನ್ ಓಲೈಸಿ ಪರ್ವರ್ತಿಸಲು ಪ್ರಯತ್ನೋಸೋಣ, ಎಳವೆಯಲ್ಲೇ ಅವರು ಲೋಕ ತ್ಯಜಿಸುವುದು ಬೇಡ. ಇದನ್ನು ಮೊನ್ನೆ ಬೇರೆ ರೂಪದಲ್ಲಿ ಬರೆದಿದ್ದೆ, ಆದರೆ ಇಂದು ಇದು ದುಃಖಪೂರಿತ ಹಾಡು. ಹೆಂಡತಿ ತನ್ನ ಗಂಡನಿಗಾಗಿ ಹೇಳಿದ ರೀತಿಯಲ್ಲಿ ಬರೆದ ಹಾಡು.

  ಪ್ರತಿಕ್ರಿಯಿಸಿದ ಸರ್ವಶ್ರೀ ಡಾ| ಕೃಷ್ಣಮೂರ್ತಿ, ಹರಿಹರಪುರ ಶ್ರೀಧರ್, ಹಾಗೂ ngh ಇವರೆಲ್ಲರಿಗೂ, ಎಂದಿನಂತೆ ಓದಿದ,ಓದುವ-ಓದದ ಮಿತ್ರರೆಲ್ಲರಿಗೂ ಧನ್ಯವಾದಗಳು

  ReplyDelete
 5. ಚಟ ಜೀವನವನ್ನು ತಿ೦ದು, ನ೦ಬಿದವರನ್ನು ಬೀದಿಗೆತ್ತೆಸೆಯುವ ಹಲವಾರು ಉದಾಹರಣೆ ನಾನೂ ಕ೦ಡಿದ್ದೆನೆ. ಎಲ್ಲ ತಲೆಯಲ್ಲಿ ಸುತ್ತಿದ೦ತಾಯಿತು. ಈ ಲೇಖನದಿ೦ದಲಾದರೂ ಅ೦ತ ಮ೦ದಿ ಕಲಿತಾರೇ?
  ಚೆ೦ದದ ಲೇಖನ.

  ReplyDelete
 6. ಸೀತಾರಾಮ್ ತಮಗೆ ಧನ್ಯವಾದಗಳು

  ReplyDelete