ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 20, 2010

ಕನ್ನಡಮ್ಮ ಅತ್ತಾಗ !!



ಹೀಗೂ ನಡೆಯುತ್ತಾ ? ಅಂದರೆ "ಹೌದು ಹೀಗೂ ನಡೆಯುತ್ತದೆ " ಅಂತ ನಮ್ಮ ೭೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನವನ್ನು ನೋಡಹೋದವರು ಹೇಳುತ್ತಾರೆ. ಕೇವಲ ಅಪಹಾಸ್ಯಕ್ಕಾಗಿ ಥರದ ಸಮ್ಮೇಳನವನ್ನು ಮಾಡಬೇಕೆ ? -ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ೭೫ ಕೋಟಿ ರೂಪಾಯನ್ನು ೫೦೦ ವರ್ಷಗಳ ಹಿಂದೆ ಆಳಿದ್ದ ಕೃಷ್ಣದೇವರಾಯನ ನೆನಪಿಗೆ ಖರ್ಚುಮಾಡುವಾಗ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆನಪು ನಮಗಾಗುವುದಿಲ್ಲ! ಸತತವಾಗಿ ಉನ್ನತಮಟ್ಟದಲ್ಲಿ ನಡೆಯಬೇಕಾದ ಸಂಸ್ಕೃತಿ-ಸಂಸ್ಕಾರಗಳ ಕಮ್ಮಟ, ನಮ್ಮ ತಾಯಿಯ ಜಾತ್ರೆ, ನಮ್ಮತನದ ಪ್ರದರ್ಶನ, ನಮ್ಮ ಅಭಿಮಾನದ ಕನ್ನಡಮ್ಮನಿಗೆ ನಮ್ಮಿಂದ ಸಲ್ಲಬೇಕಾದ ಗೌರವ--ಇದಕ್ಕೆ, ಇದರ ಖರ್ಚಿಗೆ ಹೊರಟಾಗ ನಮಗೆ ನೆನಪಾಗುವುದು 'ಉತ್ತರಕರ್ನಾಟಕದ ನೆರೆ ಪೀಡಿತ ಪ್ರದೇಶ' . ಏನ್ರೀ ಇದು ರಾಜಕೀಯದ ಡೊಂಬರಾಟ ! ಮಾಡುವ ಕೆಲಸಕ್ಕೊಂದು ಮರ್ಯಾದೆ ಬೇಡವೇ? ಯಾವನೋ ರೌಡಿ ಇಂದು ಮಂತ್ರಿ ,ಶಾಸಕ, ಪುಡಾರಿ-ಇವರ ಹೇಳಿಕೆಯ ಆದ್ಯತೆಯ ಮೇರೆಗೆ ಕೆಲಸ ಕಾರ್ಯ!












ಹುಚ್ಚು
ಅಂದರೆ ಇದು ! ಕನ್ನಡವನ್ನು ಸ್ಪಷ್ಟವಾಗಿಮಾತನಾಡಲಾಗದೇ ಅನೇಕ ಶಬ್ಧಗಳನ್ನು ತೊದಲುವ ಶ್ರೀರಾಮುಲು ಇದಕ್ಕೆ ಉಸ್ತುವಾರಿ-ಉದ್ಘಾಟನಾ ರಾಯಭಾರಿ ! ನಿನ್ನೆ ಅಂದರೆ ೨೦.೦೨.೨೦೧೦ ಸಭೆಯಲ್ಲಿ ಆಕಳಿಸುತ್ತಾ-ತೂಕಡಿಸುತ್ತಾ ಶ್ರೀಮಾನ್ ಶ್ರೀರಾಮುಲು ಅವರು ಸಭೆಗೆಕಳೆಕಟ್ಟಿದರು-ಕಲಶಪ್ರಾಯರಾದರು ! ಜನ ಮರುಳೋ ಜಾತ್ರೆಮರುಳೋ ಎಂಬುದು ಗಾದೆ ತಾನೇ ? ಇಲ್ಲಿ ನಮ್ಮ ಜನವೂಮರುಳೆನ್ನುವವ ನಾನು. ಯಾಕೆ ಅಂದರೆ ನಮ್ಮ ಜನರಿಗೆ ನಾಡಿಮಿಡಿತವೇ ಹೋಗಿಬಿಟ್ಟಿದೆ, ಇಲ್ಲದಿದ್ದರೆ ಸರಕಾರದ ಪೂರ್ವತಯಾರಿಯನ್ನು ಸರಿಯಾಗಿ ಪರಿವೀಕ್ಷಿಸಬೇಕಿತ್ತು ! ಒಮ್ಮೊಮ್ಮೆಅನಿಸುತ್ತಿದೆ ರಾಜಕೀಯ ಬರೀ ಗೂಂಡಾ ಸಂತೆ ! ಅದಕ್ಕೇ ಮರ್ಯಾದಸ್ತ ನಮ್ಮ ಜನ ಬೇಸತ್ತು ಯಾವುದರಲ್ಲೂ ಆಸಕ್ತಿ ತೋರುತ್ತಿಲ್ಲ. ಯಾವ ರೀತಿಯಲ್ಲಿ ಚಿಂತಿಸಿದರೂ ಸಮಾಧಾನ ಅನ್ನೋದು ಸಿಗುತ್ತಲೇ ಇಲ್ಲ ! ಯಾವ
! ದೃಷ್ಟಿಕೋನದಿಂದ ನೋಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲ, ರಾಜಕೀಯ ಮೇಲಾಟಕ್ಕೆ ದುಡ್ಡಿನ ಕೊರತೆ ಇಲ್ಲ ; ಸುಸಂಸ್ಕೃತರು ಸೇರುವ ಈ ಸಂಸ್ಕೃತಿ ಜಾತ್ರೆಗೆ ಮಾತ್ರ ದುಡ್ಡಿಲ್ಲ ಎಂಬ ಹೇಳಿಕೆ!

ಇನ್ನೊಬ್ಬ ಅಮ್ಮ ಬಂದರು, ಅವರಿಂದ ಒಂದಷ್ಟು ಕೊಡು-ಕೊಳ್ಳುವ ವ್ಯವಹಾರವೇ ? ಕೇರಳದಿಂದ ಬಂದು ನಮ್ಮ ಮುಖ್ಯಮಂತ್ರಿಗಳಿಗೆ ಕೀಲಿಕೈ ಗಳನ್ನು ಕೊಡಲು ಬಂದರು, ಅದಕ್ಕೊಂದು ಸಮಾರಂಭ ರಸ್ತೆ ಮೋರಿ ಉದ್ಘಾಟನೆಗೊಂದು, ಹೊಸದಾಗಿ ಡಾಂಬರೆಂಬ ಬಣ್ಣ ಬಳಿದ ರಸ್ತೆಗೊಂದು, ಅಂಡರ್ ಪಾಸ್ ಗೊಂದು, ಫ್ಲೈ ಓವರ್ ಗೊಂದು ಹೀಗೇ ನಾ ನಾ ಥರದ ಇಂತಹ ಕ್ಷುಲ್ಲಕ ಸಭೆಗಳಿಗೆ, ಹಾರ-ತುರಾಯಿಗಳಿಗೆ, ಪಕ್ಷದ ಬಾವುಟ-ಬ್ಯಾನರ್ ಗಳಿಗೆ, ರಸ್ತೆಯುದ್ದದ ಕಟ್ ಔಟ್ ಗಳಿಗೆ ಇದಕ್ಕೆಲ್ಲ ಖರ್ಚಿಗೆ ದುಡ್ಡಿದೆ ! ಇಲ್ಲಿ ಬಂದ ಕೇರಳದ ಅಮ್ಮಗೆ ೧೫ ಎಕರೆ ಭೂಮಿ, ೫ ಕೋಟಿ ಹಣ ಕೊಡುವ ಮಾತು, ಯಾಕ್ರೀ ಅಂತಹ ಸಂತರಿಗೆ ಜಾಗ ? ಅವರಿಗೆ ಕೊಡುವ ಆ ದುಡ್ಡು + ಅಳಿದ ಅರಸನ ವ್ಯಸನಕ್ಕೆ ಖರ್ಚಾಯಿಸಿದ ಆ ದುಡ್ಡು + ಸಮಾವೇಶಗಳಿಗೆ ಖರ್ಚುಮಾಡುವ ದುಡ್ಡು + ಆಪರೇಶನ್ ಕಮಲವೋ ವಿಮಲವೋ ಅದಕ್ಕೆ ಸುರಿವ ಕಳ್ಳ ದುಡ್ಡು ಎಲ್ಲಾ ಸೇರಿಸಿ ಅದರಲ್ಲಿ ನಾಲ್ಕು ಭಾಗ ಮಾಡಿ ಕೇವಲ ಕೇವಲ ಕೇವಲ ಒಂದು ಭಾಗವನ್ನು ನಮ್ಮ ಉತ್ತರ ಕರ್ನಾಟಕದ ಜನತೆಯ ಉದ್ಧಾರಕ್ಕೆ ಉಪಯೊಗಿಸಿದ್ದರೆ ಇವತ್ತಿನ ಈ ಹಾ ಹಾ ಕಾರವಿರುತ್ತಿರಲಿಲ್ಲ ಅಂದರೆ ನಂಬುತ್ತೀರಾ? ನೀವೇ ಕಾಲಿ ಇರುವಾಗ ಕುಳಿತು ಲೆಕ್ಕಹಾಕಿ!

ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರು ಅಂದರೆ ಅದೊಂದು ಸ್ಥಾನಕ್ಕೆ ಕೊಡುವ ಗೌರವ ಸ್ವಾಮೀ, ಹೇಗೆ ರಾಷ್ಟ್ರಪತಿ ಎನ್ನುತ್ತೇವೋ , ಹೇಗೆ ರಾಜ್ಯಪಾಲರು ಎನ್ನುತ್ತೇವೋ ಹಾಗೇ. ಅಲ್ಲಿ ಸರ್ತಿ ಒಬ್ಬರು ಮತ್ತೆ ಮುಂದೆ ಇನ್ನೊಬ್ಬರು ಬರುತ್ತಿರುತ್ತಾರರಲ್ಲವೇ ? ಸಾಹಿತ್ಯಿಕ ಕೃತಿಗಳಿಂದಲೂ, ವಯಸ್ಸಿನಿಂದಲೂ ಹಿರಿಯರಾಗಿ ತೋರ್ಪಡುವ ಮುತ್ಸದ್ಧಿ ವ್ಯಕ್ತಿಯೋರ್ವರನ್ನು ಸ್ಥಾನದಲ್ಲಿ ಗೌರವಯುತವಾಗಿ ಕೂರಿಸುವುದು ಕನ್ನಡಮ್ಮನಿಗೆ ಒಂದು ಸಾಂಕೇತಿಕ ಸೇವೆ ಅಷ್ಟೇ ! ಅದು ಆ ವ್ಯಕ್ತಿಗೆ ಜೀವಮಾನದಲ್ಲಿ ಒಮ್ಮೆ ಮಾತ್ರ ದೊರೆಯುವ ಸ್ಥಾನ - ಇದರಿಂದಾಗಿ ಇದೇ ಒಂದು ಹೆಮ್ಮೆಯ ಸಮ್ಮಾನ ! ಕೊನೇಪಕ್ಷ ಒಂದು ಸಣ್ಣ ಸುಂದರ ರಥ, ಕೆಲವಾದರೂ ಭಾಜಾ ಭಜಂತ್ರಿಗಳು, ಕೆಲವು ಜನಪದ ನೃತ್ಯಗಳು, ಛದ್ಮ ವೇಷಗಳು ಇವಕ್ಕೆಲ್ಲ ಖರ್ಚಿಗೆ ಎಷ್ಟು ಬರುತ್ತದೆ ಅಂತೀರಾ ? ಇಷ್ಟನ್ನೂ ಮಾಡದ ಯಾವನ್ರೀ ಅವನು ಸಂಸ್ಕಾರರಹಿತ ಮಂತ್ರಿ ! ಇಂತಹ ಕೆಟ್ಟ ರಾಜಕಾರಣಿಗಳಿಗೆ ನಮ್ಮ ಧಿಕ್ಕಾರವಿರಲಿ !! ನಮ್ಮ ಧಿಕ್ಕಾರವಿರಲಿ !!

ಹಳೆಯ ಮುರುಕಲು ಜೀಪಿಗೆ ಬಣ್ಣ ಹೊಡೆದು, ನಾಲ್ಕು ಹೂವಿಟ್ಟು, ಮೇಲೆ ಅಸಹ್ಯಕರವಾಗಿ ಗಲಗಲನೆ ಅಲುಗಾಡುವ ಕೊಡೆಯೊಂದನ್ನು ಸಿಗಿಸಿ ಅದರಲ್ಲಿ ನಮ್ಮ ಕನ್ನಡದ ಹಿರಿಯಕ್ಕ ಶ್ರೀಮತಿ ಗೀತಾ ನಾಗಭೂಷಣ ರನ್ನು ಕರೆತಂದರಲ್ಲ, ಎಷ್ಟುಸೌಜನ್ಯವಿರಬೇಕ್ರೀ ಸಾಹಿತ್ಯಕ್ಕನಿಗೆ ? ಅಂತಹದುರಲ್ಲಿ ಕುಳಿತು ಬಂದರಲ್ಲ ಮಹಾತಾಯಿ ! ನನ್ನ ಮಗನ ಹುಟ್ಟು ಹಬ್ಬಕ್ಕೆನಾನು ಖರ್ಚುಮಾಡುವ ದುಡ್ಡು ಕೊಡುತ್ತಿದ್ದೆನಲ್ಲರೀ ರಾಜಕೀಯ ಧನಪಿಶಾಚಿಗಳಿಗೆ; ಅದು ಸಾಕಾಗಿತ್ತು ಒಂದು ರಥವನ್ನುಕಟ್ಟಲಿಕ್ಕೆ !!

ಈ ರಥ ಕಥೆಯನ್ನು ಹೇಳುತ್ತಿರುವಾಗ ಅಷ್ಟನ್ನೂ ಕೇಳುತ್ತಿದ್ದವನಂತೆ ತಲೆದೂಗುತ್ತಿದ್ದ ಒಬ್ಬ ವ್ಯಕ್ತಿಯ ಹತ್ತಿರ ಅರ್ಥವಾಯ್ತಾ ಅಂತ ಕೇಳಿದೆ ಸ್ವಾಮೀ , ಬಂತು ಮಾರುತ್ತರ

" ನೀ ಎನ್ನ ಪೇಸರಂಗ ಎನಕೆ ತೆರಿಯಾದು ? " !

ಅಯ್ಯೋ ಎನ್ನಿಸುತ್ತದಲ್ಲವೇ ? ಸತ್ಯ ಕಹಿಯಾಗಿದ್ದರೂ ಸ್ವೀಕರಿಸಲೇ ಬೇಕಲ್ಲವೇ?

ಕನ್ನಡದ ಯುವಕರೇ ಎದ್ದೇಳಿ , ಇನ್ನಾದರೂ ಇಂತಹ ಅಪಚಾರವನ್ನು ತಪ್ಪಿಸಿ, ಇದೋ ನಿಮ್ಮಮ್ಮ ಕನ್ನಡಮ್ಮ ನಿಮ್ಮನ್ನ ಕೈಬೀಸಿಕರೆಯುತ್ತಿದ್ದಾಳೆ, ಕೈಮುಗಿದು ಹೊರಡಲು ಅಣಿಯಾಗಿದ್ದಾಳೆ, ಅವಳ ಬಗ್ಗೆ ಅವಳ ಬೇಕು-ಬೇಡ, ಆರೋಗ್ಯದ ಬಗ್ಗೆ ನಿಮ್ಮಗಮನವಿರಲಿ,


ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಸಿರಿಗನ್ನಡಂ ಗಲ್ಲಿಗಲ್ಲಿಗೆ

|| ಜೈ ಭುವನೇಶ್ವರಿ ||




[ಸಮ್ಮೇಳನದ ಎರಡು ಚಿತ್ರಕೃಪೆ : ಸಂಜು ವಡೆಯರ್]

' ಕನ್ನಡಮ್ಮ ಅತ್ತಾಗ '

ಹೊಳೆವ ಬಿಸಿಲಿನ ರಸ್ತೆಯೊಳಗೆ ಹಳೆಯ ಜೀಪನು ತಂದು ನಿಲ್ಲಿಸಿ
ತೊಳೆದು ನಾಲ್ಕು ಹೂವ ಹಚ್ಚಲು ರಥವು ನಮಗದು ಸಿದ್ಧವು !

ಮೊಳೆಗೆ ಸಿಗಿಸುತ ಒಂದು ಕೊಡೆಯನು ಗಲಗಲನೆ ಅಲುಗಾಡಿಸುತಲಿರೆ
ಕಳೆಯೆ ಇಲ್ಲದ ಮೆರವಣಿಗೆಯದು ನಮ್ಮ ತಾಯಿಯ ಜಾತ್ರೆಯು !

ಆರ ಬಳಿಯಲಿ ಹೇಳಲಿ ಮಗೂ ಆರ ಜೊತೆಯಲಿ ಕಳೆಯಲಿ ಮಗೂ
ಆರು ದುಡ್ಡನು ನುಂಗದವರು ಆರು ನನಗೆ ಹಿತವರು ?

ಅಮ್ಮಗಳಿರಾ ಅಕ್ಕಗಳಿರಾ ನನ್ನ ತಾಯೊಡ ಹುಟ್ಟುಗಳಿರಾ
' ಕನ್ನಡಮ್ಮನು ನಿಮ್ಮ ಅಮ್ಮನು 'ಎನುತ ಮನವದು ಕೂಗಲು

ಒಂದು ಬಿನ್ನಹ ಜನರೇ ಕೇಳಿ ಅಮ್ಮನಿರುವಳು ಸಂಕಟದಲಿ !
ಒಂದು ನಿಮಿಷದಿ ಕಿವಿಯಕೊಟ್ಟು ಆಲಿಸಿರಿ ಅವಳಳಲನು

ಕನ್ನಡಮ್ಮನು ಬಿಟ್ಟುಬಂದು ಊರು ತೊರೆದು ದೇಶ ತೊರೆಯುತ
ಒಮ್ಮೆ ಹಾದಿಯೊಳಡ್ಡನಿಂತು ನಮ್ಮ ಕಡೆ ಕೈ ಮುಗಿದಳು

ಸತ್ಯವೇ ಕನ್ನಡವು ಎಂಬಾ ನಮ್ಮ ತಾಯಿಯ ಕಥೆಯಿದು !

9 comments:

  1. ಯಪ್ಪಾ! ಎಬ್ರಿ ಸಾವಕಾರ್ ಇದು . .ಒಂಥರಾ ಕ್ರಾಂತಿ ಮಾಡ್ಳಿಕ್ಕೆ ಹೋಂಟಂಘ ಆಗೇದ ..ಒಳ್ಳೆಯ ವಿಚಾರ ..! ಅದೆಷ್ಟು ಕೋಟಿ ಹಣ ಸುರಿದಿದ್ದಾರೋ ಗೊತ್ತಿಲ್ಲ , ನಿವಂದಿದ್ದು ನಿಜ ೪ ನೇ ಒಂದು ಭಾಗ ಒಳ್ಳೇಯ ಕೇಲ್ಸಸಕ್ಕೇ Use ಮಾಡೀದ್ರೆ ಎಲ್ಲೋ ಒಂದು ಕಡೆ ಒಳ್ಳೆಯ ಆಯಿತು ಅಂತ ಸಂತೋಷ ಪಡಬಹುದು . .

    ಯುವಕರಿಗೆ ಕೊಟ್ಟ ಕರಯ ಮಾತು ಚೆನ್ನಾಗಿವೆ . .ದ್ಏವರ ಕೃಪೆಯಿಂದ ಇನ್ನು ಮುಂದೆ ಆದರೂ ಸರಕಾರ ಇದರ ಬಗ್ಗೆ ಯೊಚ್ನೇ ಮಾಡುವ ಹಾಗೆ ಆಗಲಿ . .

    ReplyDelete
  2. ನಿಮ್ಮ ಕನ್ನಡದ ಬಗ್ಗೆ ಇದ್ದ ಕಳಕಳಿ ಯನ್ನು ನೋಡಿ ಸಂತೋಷವಾಯಿತು.ಆದರೆ ಎಲ್ಲರೂ ಎಚ್ಚೆತ್ತುಕೊಂಡರೆ ಕನ್ನಡಮ್ಮನ ಆರೋಗ್ಯದ ಬಗ್ಗೆ ಗಮನವಿದಬಹುದೇನೋ ಅಲ್ವ?
    ಕವನ ಚೆನ್ನಾಗಿತ್ತು...

    ReplyDelete
  3. ನಿಜವಾದ ಮಾತು.
    ನಿಜವಾಗಲಿ ಹಾರೈಕೆ..

    ReplyDelete
  4. ಕಡ್ಡಿ ಒಂದೇ ಇದ್ದರೆ ಅದನ್ನು ಬಗ್ಗಿಸಿ ಮುರಿಯಬಹುದು ಅದನ್ನೇ ಹಲವಾರು ಕಡ್ಡಿಗಳನ್ನು ಒಟ್ಟಿಗೆ ಬಗ್ಗಿಸುವುದು ಬಹು ಕಷ್ಟಸಾಧ್ಯ, ಕೆಲವೊಮ್ಮೆ ಸಾಧ್ಯವೇ ಆಗದೆ ಇರಬಹುದು, ಅಂದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳುತ್ತಿದ್ದೇನೆ, ಇದರ ಬಗ್ಗೆ ನಾವು ಚಿಕ್ಕವರಿರುವಾಗ ಹುಲಿ/ಸಿಂಹ ಮತ್ತು ಕಾಡೆಮ್ಮೆ/ದನಗಳ ಕಥೆಯನ್ನು ಓದಿದ್ದೇವಲ್ಲವೇ, ಸಮೂಹಶಕ್ತಿಗೆ ಸಾಧ್ಯವಿಲ್ಲದ್ದು ಯಾವುದು, ಹೀಗೇ ನಾವೆಲ್ಲಾ ಕನ್ನಡಿಗರು ಒಟ್ಟಾಗಿ ಪ್ರಯತ್ನಿಸಿದರೆ ನಾನು ಮೇಲೆ ಹೇಳಿದ ಕೆಲಸ ಸಾಧ್ಯವಷ್ಟೇ ? ಪ್ರತಿಕ್ರಿಯಿಸಿದ,ಸ್ಪಂದಿಸಿದ --- ಸಂಜು, ಶಶಿಕಲಾ, ವೆಂಕಟಕೃಷ್ಣ ಇವರಿಗೆ ಅಭಿನಂದನೆಗಳು. ಅನೇಕರು ಕೆಲವೊಮ್ಮೆ ರಾಜಕೀಯದವರ ಸುದ್ದಿ ಇದ್ದಾಗ ಭಯದಿಂದ ಪ್ರತಿಕ್ರಿಯಿಸುವುದಿಲ್ಲ, ಅಂತಹ ' ಗುಪ್ತಗಾಮಿನಿ ಶಕ್ತಿ ' ಗಳಿಗೂ ನನ್ನ ವಂದನೆಗಳು. ಇನ್ನೂ ಮುಂದೆ ಓದಲಿರುವವರಿಗೂ,ಪ್ರತಿಕ್ರಿಯಿಸುವವರಿಗೂ ಸಹಿತ ನಮಿಸಿ ಸಮಸ್ತಕನ್ನಡಿಗರಿಗೂ ಕನ್ನಡ ತಾಯಿಯ ಕೃಪೆ ಇರಲೆಂದು ಹಾರೈಸುತ್ತೇನೆ.

    ReplyDelete
  5. ಶ್ರೀರಾಮುಲು ಸಾಹೇಬರನ್ನು ಗೀತಕ್ಕ ಹೊಗಳಿಬಿಟ್ಟರಂತೆ!. ಕೊನೆಗೆ ಅಕ್ಕ ಸಮಜಾಯಿಜಿ ಕೊಟ್ಟದ್ದೂ ಆಯಿತು. ಇದೇಕಾಯ್ತೋ ನಂಗೊತ್ತಿಲ್ಲ. ರಾಜಕೀಯ ಎಲ್ಲೆಲ್ಲಿಗೆ ಬರ‍್ತಾ ಇದೆ ಅಂತ ಊಹಿಸೋದು ಹೇಗೆ ಹೇಳಿ ?!. ಸಾಹಿತಿಗಳೇ ನೀವು ಯಾರ ಪರ ಎಂದು ಕೇಳಿದ್ದಕ್ಕೆ ಅಲ್ಲಿ ಸೊಲ್ಲೇ ಇರಲಿಲ್ಲವಂತೆ. ಶಿಕ್ಷಕರು ood ಗೆ ಮುಗಿಬಿದ್ದಿದ್ರಂತೆ. ಊಟ ಚೆನ್ನಾಗಿತ್ತಂತೆ. ಗೋಷ್ಟಿ ಸುಮಾರಾಗಿತ್ತಂತೆ. ಇಷ್ಟಾದರೂ ಯಥಾಪ್ರಕಾರ ಸಾಹಿತ್ಯಸಮ್ಮೇಳನ ಹಿಂದೆಂದಿಗಿಂತಲೂ ಯಶಸ್ವಿಯಾಯ್ತಂತೆ..ನಂಗಂತೂ ಗೊತ್ತಾಗ್ತಿಲ್ಲಪ್ಪ. ನಿಮ್ಗೇನಾದ್ರು ಗೋತ್ತಾದ್ರೆ ಹೇಳ್ತೀರಾ ???...ಜೈ ಕನ್ನಡಮ್ಮ.

    ReplyDelete
  6. ವಿಆರ್.ಬಿ. ನಿಮ್ಮ ಮಾತು ಲೇಖನ ಮತ್ತು ಮೂರ್ಖನಿಗೆ ದೊಣ್ಣೆ ಪೆಟ್ಟು - ಜಾನನಿಗೆ ಮಾತಿನೆ ಪೆಟ್ಟು ..ಎನ್ನುವಂತಿದೆ...ಆದರೆ ಜಾಣರು ನಿದ್ದೆ ಮಾಡುತ್ತಿದ್ದರೆ ಪರವಾಯಿಲ್ಲ ಎಚ್ಚರಿಸುವ ತಣ್ಣೀರಿನ ಸಿಂಪರಣೆಯಿದು...ಆದರೆ ಸೋಗು ಹಾಕ್ತಾರಲ್ಲ ನಿದ್ದೆ ಮಾಡುವ ಹಾಗೆ..ಇದೇ ಯಾರಿಂದಲೂ ಸರಿಪಡಿಸಲಾಗದ ರೋಗ...ಹೌದು..೫೦೦ರ ವಿಜಯನಗರ ವಿಜಯೋತ್ಸವಕ್ಕೆ ಕೋಟಿಸುರಿದವರಿಗೆ ..ಒಂದು ಒಳ್ಳೆಯ ವ್ಯವಸ್ಥೆ ಕ.ಸಾ.ಸ. ಕ್ಕೆ ...ಮಾಡಲಾಗುತ್ತಿಲ್ಲ ಎಂದರೆ...ಇದು ಒಂಥರ ಸಾಮೂಹಿಕ ಮದುವೆ ಕಾರ್ಯಕ್ರಮ ಆಗಿದೆಯೇ..? ಎನ್ನುವ ಸಂದೇಹ ಬರುತ್ತೆ..

    ReplyDelete
  7. ಚಿಂತನಾಶೀಲರಿಗೆ ಈ ಕಾಲಘಟ್ಟದ ಒಂದು ಸ್ಥಿತಿಯನ್ನು ಹೇಳಲು ಪ್ರಯತ್ನಿಸಿದ್ದೇನೆ, ಬಹಳ ವಿಶಿಷ್ಟವಾಗಿ ಪ್ರತಿಕ್ರಿಯಿಸಿದ ಮತ್ತು ಕನ್ನಡದ ಕಳಕಳಿಯಲ್ಲಿ ನನ್ನೊಡನೆ ದನಿಗೂಡಿಸಿದ ತಮಗೆಲ್ಲಾ ಇನ್ನೊಮ್ಮೆಧನ್ಯವಾದಗಳು

    ReplyDelete
  8. ತು೦ಬಾ ಪ್ರಸ್ತುತ ಲೇಖನ. ಜಾಗೃತಿ ಬೇಕಾಗಿದೆ ಕನ್ನಡಿಗರಲ್ಲಿ. ರಾಜಕೀಯ ಕೆಟ್ಟು ಮಲೆತು, ಗಬ್ಬು ನಾರುತ್ತಿದೆ. ಆ ಗಬ್ಬು- ಸಾ೦ಸ್ಕೃತಿಕ, ಸಾಹಿತ್ಯ, ಭಾಷಾ,ಧಾರ್ಮಿಕ ಮತ್ತು ಸಾಮಾಜಿಕ ಸಮಾರ೦ಭಗಳಲ್ಲೂ ಬೆರೆಯಿತ್ತಿರುವದಕ್ಕೆ ಮನ ನೋಯುತ್ತಿದೆ. ತಮ್ಮ ಲೇಖನ ಕನ್ನಡಿಗರ ಮನದಾಳದ ಮಾತನ್ನು ಹೊರ ಹಾಕಿವೆ. ಅದರೆ ಈ ಗಬ್ಬನ್ನು ಸ್ವಚ್ಛ ಮಾಡುವದು ಹೇಗೆ?

    ReplyDelete
  9. ಸೀತಾರಾಮ್, ಅದನ್ನು ಸಮಸ್ಯೆ ಅಂತ ಹಾಗೇ ಬಿಟ್ಟರೆ ಅದು ಸಮಸ್ಯೆಯೇ! ಸ್ವಚ್ಛಗೊಳಿಸಲು ಪ್ರಜೆಗಳೇ ಮುಂದಾಗಬೇಕು, ಅದಕ್ಕೆ ನಮ್ಮ-ನಿಮ್ಮಂಥ ಅನೇಕರು ಪ್ರಜೆಗಳಿಗೆ ಅರ್ಥಮಾಡಿಸುವಲ್ಲಿ ಕೆಲಸಮಾಡಬೇಕು,ಧನ್ಯವಾದಗಳು

    ReplyDelete