ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, November 1, 2013

ಚೂರ್ಣಾವತಾರ-’ದಶಾವತಾರಿಷ್ಟ’ದ ಮೇಲೊಂದು ಬೆಳಕು!

ಚಿತ್ರಗಳ ಋಣ: ಅಂತರ್ಜಾಲ 
ಚೂರ್ಣಾವತಾರ-’ದಶಾವತಾರಿಷ್ಟ’ದ ಮೇಲೊಂದು ಬೆಳಕು!
                                             
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಗಂಡುಮೆಟ್ಟಿನ ಕಲೆಯಾಗಿ ’ಯಕ್ಷಗಾನ’ವೆಂದು ನಾಮಾಂತರಗೊಂಡ ಕಲೆಯೊಂದರ ಬಗೆಗೆ ಡಾ| ಶಿವರಾಮ ಕಾರಂತರ ಸಂಶೋಧನೆ ಸಮಗ್ರವಾಗಿಲ್ಲ ಅಥವಾ ಸಮೃದ್ಧವಾಗಿಲ್ಲ ಎನ್ನುವ ಮಾತು ಸ್ಥಳೀಯ ಕಲಾಚಿಂತಕರಲ್ಲಿ ಆಗಾಗ ಕೇಳಿಬರುತ್ತಲೇ ಇರುವುದು ಹೊಸದೇನಲ್ಲ; ಕಾರಂತರು ನಡೆಸಿದ್ದು some-ಶೋಧನೆಯೇ ಹೊರತು ಸಂಶೋಧನೆ ಎನಿಸುವುದಿಲ್ಲ ಯಾಕೆ ಎಂಬುದನ್ನು ಸಮರ್ಥವಾಗಿ ಬಿಂಬಿಸಿದವರು ‘’ದಶಾತಾರಿಷ್ಟ’’ವನ್ನು ತಯಾರಿಸಿದ ’’ನಾಶಾ’’ ಹೊನ್ನಾವರ.[ನಾಜಗಾರ ಗಂಗಾಧರ ಶಾಸ್ತ್ರಿ, ಹೊನ್ನಾವರ]’ದಶಾವತಾರ ಆಟ’ದ ಕುರಿತು 2013ರಲ್ಲಿ ಪ್ರಕಟಗೊಂಡ, ನಾಶಾ ಅವರ ಸಂಶೋಧನಾ ಪ್ರಬಂಧಗಳ ಸಂಕಲನವೇ ’ದಶಾವತಾರಿಷ್ಟ’! ಸಾಹಿತ್ಯಾಸಕ್ತ ನ್ಯಾಯವಾದಿಯೆಂದು ಉತ್ತರಕನ್ನಡದಲ್ಲಿ ಗುರುತಿಸಲ್ಪಟ್ಟ, ಹೊನ್ನಾವರದ ಜಿ.ವಿ.ಭಟ್ಟರ ಮೂಲಕ ಇಂಥಾದ್ದೊಂದು ಪುಸ್ತಕ ಕೈಗೆ ಬಂದಾಗ, ವಿಲಕ್ಷಣ ಹೆಸರನ್ನು ಹೊತ್ತ ಹೊತ್ತಗೆಯ ಪುಟಗಳ ಹಿಂದೆ ಅಡಗಿರಬಹುದಾದ ಚಮತ್ಕಾರ-ಚಕ್ಷುಗಳನ್ನು ಮತ್ತು ಹರಿತವಾದ ಲೇಖನಿಯನ್ನು ಹುಡುಕುತ್ತಾ ಪುಟಗಳನ್ನು ತೆರೆದರೆ, ಸಮಯದ ಪರಿವೆಯನ್ನು ಹರಿದೊಗೆದು ಓದಿಯೇ ಮುಗಿಸಬೇಕೆಂಬ ಅನಿಸಿಕೆ ಕಾಡಿದ್ದರಿಂದ ಆ ಕೆಲಸ ಗಂಟೆಯೆರಡರಲ್ಲೇ ಸಂಪನ್ನವಾಯ್ತು. 

ದಶಾವತಾರ ಆಟದ ಅತ್ಯದ್ಭುತ ಕಲಾವಿದ ದಿ|  ಮೂಡ್ಕಣಿ ನಾರಾಯಣ ಹೆಗಡೆ
ಚಿತ್ರಕೃಪೆ: ಕೀರ್ತಿಕುಮಾರ ಶಾಸ್ತ್ರಿ,ಹೊನ್ನಾವರ

ಪುಟಗಳ ನಡುವಿನ ಪುಟವೊಂದರಲ್ಲಿ ನಾಶಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಸಕ್ರಿಯವಾಗಿ ಆಗದಿದ್ದರೂ, ’ದಶಾವತಾರ ಆಟ’ವೆಂಬ ರಂಗಪ್ರಕಾರದಿಂದ ರಂಜಿಸಿದ ಹಿರಿಯ ಕಲಾವಿದರ ಋಣದಲ್ಲಿ ನಾವೆಲ್ಲಾ ಇದ್ದೇವೆಂಬ ಅನಿಸಿಕೆಯಿಂದ, ಹಿರಿಯಕಲಾವಿದರು ಬಡತನದಲ್ಲಿದ್ದರೂ ಅದನ್ನು ಕಾರಣವಾಗಿಸಿಕೊಳ್ಳದೇ ಕಲೆಯ ಸಾಂಪ್ರದಾಯಿಕ ಮೌಲ್ಯಗಳ ಉಳಿವಿಗಾಗಿ ದುಡಿದರು ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಆರಂಭದಲ್ಲೇ ಕೊಟ್ಟುಬಿಡುವುದು ಔಚಿತ್ಯವಾಗುತ್ತದೆ: ತನ್ನ ಹೆಂಡತಿ-ಮಕ್ಕಳ ಉಪವಾಸ ಪರಿಸ್ಥಿತಿಗೆ ನೊಂದು ಎರಡು ಸಲ ಆತ್ಮಹತ್ಯೆಗೆ ಯತ್ನಿಸಿ ವಿಫಲರಾದ ದಿ. ಮಲ್ಲಗದ್ದೆ ಗಣೇಶ ಹೆಗಡೆಯವರು ಮರುದಿನದ ‘ಆಟ’ದಲ್ಲಿ ಮಾಯಾ ಹಿಡಂಬಿಯಾಗಿ, ರಾಣಿಯಾಗಿ ಪ್ರೇಕ್ಷಕರನ್ನು ದಂಗುಬಡಿಸಿದ್ದನ್ನು ಉತ್ತರಕನ್ನಡದ ಹಿರಿಯ ಜನತೆ ಬಲ್ಲರು. ಶರಾವತಿ ನದಿಯನ್ನು ದಾಟಲು ಒಂದೂವರೆ ಆಣೆ[9ಪೈಸೆ]ದುಡ್ಡಿಲ್ಲದೇ, ಸಾಬರ ಅಂಗಡಿಯಲ್ಲಿ ಒಂದು ಕಟ್ಟು ಬೀಡಿ ಕಟ್ಟಿಕೊಟ್ಟು-ಬಂದ ಹಣದಲ್ಲಿ ಮನೆತಲ್ಪಿದ ದಿ. ಕೆರೆಮನೆ ಶಿವರಾಮ ಹೆಗಡೆ ‘’ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ’’ ಎಂಬ ಪದ್ಯದ ಸನ್ನಿವೇಶದಲ್ಲಿ ಗಧಾಯುದ್ಧದ ಕೌರವನಾಗಿ ರಂಗವನ್ನೇ ಸಾಕ್ಷಾತ್ ಕುರುಕ್ಷೇತ್ರದ ರಣರಂಗವಾಗಿಸಿ ತೋರಿಸಿದ್ದನ್ನು ಅದೇ ಜನ ಬಲ್ಲರು. ತಮಗಿದ್ದ ಹದಿನಾರು ಗುಂಟೆ ಅಡಕೆತೋಟದ ಗೇಣಿ ತೀರಿಸಲಾರದೇ ಮನೆ ಜಪ್ತಿಯಾದಾಗ ಒಂದು ತಿಂಗಳಕಾಲ ಬರೇ ಹಾಲು ಕುಡಿದು ಬಾಲ್ಯವನ್ನು ಕಳೆದು, ಹಗಲು ತೋಟದಲ್ಲಿ ಗೆಯ್ದು-ರಾತ್ರಿ ಆಟದಲ್ಲಿ ದುಡಿದು ಕಲೆಗೊಂದು ಮಾನ್ಯತೆಯೊದಗಿಸಿಕೊಟ್ಟ ದಿ. ಡಾ| ಕೆರೆಮನೆ ಮಹಾಬಲ ಹೆಗಡೆಯವರನ್ನು ಆ ಜನ ಮರೆಯಲಾರರು. ಇಂತಹ ಮಹನೀಯರನೇಕರ ನಿಸ್ವಾರ್ಥ ಸೇವೆಯಿಂದ, ಹೈಗನಾಡಿನ ರಂಗಕಲೆಯೊಂದು ತನ್ನ ಛಾಪನ್ನು ಹಾಗೇ ಉಳಿಸಿಕೊಂಡಿತು ಎಂಬುದಾದರೆ ಈ ಕಲೆಯ ಐತಿಹಾಸಿಕ ಹುಟ್ಟು- ಬೆಳವಣಿಗೆಗಳ ಬಗ್ಗೆ, ಕಲೆಯ ಅಶ್ರಯದಾತರ ಬಗ್ಗೆ, ಕಲೆಯ ಪ್ರಾದೇಶಿಕ ವ್ಯಾಪ್ತಿಯ ಬಗ್ಗೆ, ಕಾಲಾನಂತರದಲ್ಲಿ ಕಲೆಯಮೇಲಾದ ದಾಳಿ/ಅತಿಕ್ರಮಣಗಳ ಬಗ್ಗೆ ಆಮೂಲಾಗ್ರ ತಿಳಿದುಕೊಳ್ಳುವ ಬಯಕೆ ಕೆಲವರಲ್ಲಾದರೂ ಉದ್ಭವವಾಗುತ್ತದೆ. ಸಂಭಾವ್ಯ ಸಂದೇಹಗಳಿಗೆ ಸಂಶಯಾತೀತ ಉದಾಹರಣೆಗಳೊಂದಿಗೆ, ಐತಿಹಾಸಿಕ ಕಾಲಘಟ್ಟವನ್ನು ಸಾಕ್ಷ್ಯಾಧಾರಗಳ ಸಹಿತ ತಿಳಿಸಿಕೊಡುವುದರತ್ತ ನಾಶಾ ಪರಿಶ್ರಮಿಸಿದ್ದಾರೆ.

ಶಾಸ್ತ್ರಿಗಳು ಹೇಳುವುದಿಷ್ಟೇ: ಯಕ್ಷಗಾನ ಬೇರೆ ಮತ್ತು ದಶಾವತಾರ ಆಟವೇ ಬೇರೆ. ಎರಡನೇ ಶತಮಾನದಲ್ಲಿ ಸಂಸ್ಕೃತದ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು, ಆ ಕಾಲಘಟ್ಟದಲ್ಲೇ ರಚಿತವಾದ ಭರತಮುನಿಯ ನಾಟ್ಯ ಶಾಸ್ತ್ರವನ್ನು ಸಮಗ್ರವಾಗಿ ಆಧರಿಸಿ, ಬಳಸಿಕೊಂಡು 13-14ನೇ ಶತಮಾನದಲ್ಲಿ ಹೈಗನಾಡಿನಲ್ಲೇ ಹುಟ್ಟಿ ಬೆಳೆದ ಸಮೃದ್ಧ ರಂಗ ಕಲೆ-‘’ದಶಾವತಾರ ಆಟ’’ ಎಂಬ ರಂಗಪ್ರಾಕಾರವೊಂದು ರಂಗ ನಾಟಕ. ತನ್ನದೇ ಆದ ಆಂಗಿಕ, ಆಹಾರ್ಯಕ, ವಾಚಿಕ ಯಾ ಶಾಬ್ದಿಕ, ಸಾತ್ವಿಕ ಆಯಾಮಗಳನ್ನೊಳಗೊಂಡು, ನವರಸಗಳನ್ನುಳ ರಂಜನಾಮಯ ಕಥಾಕೌತುಕಗಳನ್ನು ಉಣಬಡಿಸುವಲ್ಲಿ ಋಣವಿಲ್ಲದ ಅಥವಾ ಇನ್ನಾವುದೇ ರಂಗಕಲೆಗೆ ಋಣಿಯಾಗಿರಬೇಕಾದ ಅಗತ್ಯತೆಯಿರದ ಸಮಗ್ರ ಕಲೆ ’ದಶಾವತಾರ ಆಟ.’ ಕೇವಲ ರಾಮಾಯಣ, ಮಹಾಭಾರತ ಮತ್ತು ಇನ್ನಿತರ ಪೌರಾಣಿಕ ಕಥಾಭಾಗಗಳನ್ನು ಪದ್ಯಗಳ ರೂಪದಲ್ಲಿ ಬರೆದು ಅದನ್ನು ’ಪ್ರಸಂಗ’ವೆಂದರು; ಅದು ಪ್ರಸಂಗದ ಪಠ್ಯವಾಯ್ತು. ಅಂತಹ ಪಠ್ಯವನ್ನಾಧರಿಸಿ ಅದನ್ನು ಕಂಠಸ್ಥಗೊಳಿಸಿಕೊಂಡ ’ಆಡುಗಾರ’ ಭಾಗವತ, ಸಾಂದರ್ಭಿಕವಾಗಿ ಲಯ ಮತ್ತು ರಾಗಗಳಿಗೆ ಒತ್ತುಕೊಡುತ್ತಾ, ಮಿಕ್ಕುಳಿದ ಸಮಯದಲ್ಲಿ ವಾಚಿಕದ ಸಂಭಾಷಣೆಗೆ ಅನುಕೂಲ ಕಲ್ಪಿಸುತ್ತಾ, ಪಾತ್ರಧಾರಿಗಳು ಪಾತ್ರವನ್ನು ಸಮರ್ಥವಾಗಿ ಅಭಿನಯಿಸುವ ಮೂಲಕವೇ ಕಥಾಹಂದರ ಬಿತ್ತರಗೊಳ್ಳುವಂತೇ ಮಾಡುವ ಕಲೆ ದಶಾವತಾರ ಆಟ.  
 
ಐದಾರು ಶತಮಾನಗಳ ಕಾಲ ಹೆಸರಿನಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ, ಸಂಪ್ರದಾಯಕ್ಕೆ ಕೊರತೆಯಿಲ್ಲದೇ ಮುನ್ನಡೆದುಬಂದಿದ್ದ ದಶಾವತಾರ ಆಟ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಕಾಲಘಟ್ಟದಲ್ಲಿ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದು ಶಾಸ್ತ್ರಿಯವರ ಅಭಿಪ್ರಾಯ. ಜೈನಧರ್ಮೀಯಳೂ ಪರಮತ ಸಹಿಷ್ಣುವೂ ಮತ್ತು ಶೂರಳೂ ದಕ್ಷಳೂ ಆಗಿದ್ದ ರಾಣಿ ಚೆನ್ನಭೈರಾದೇವಿ ’ದಶಾವತಾರ ಆಟ’ಕ್ಕೆ ಮೂಲದಲ್ಲಿ ಆಶ್ರಯದಾತಳು ಎಂದು ಹೇಳುವುದರ ಜೊತೆಗೆ ಹೈಗನಾಡಿನ ದಶಾವತಾರ ಆಟ ಬಡೋದೆ, ಸಾಂಗ್ಲಿ, ರಾಮದುರ್ಗ, ಮೈಸೂರು ಮೊದಲಾದ ಅನ್ಯಪ್ರದೇಶಗಳಿಗೆ ತೆರಳಿ ಪ್ರದರ್ಶನ ನಡೆಸಿ ಅಂದಿನ ರಾಜಮಹಾರಾಜರುಗಳಿಂದ ಮನ್ನಣೆ ಗಳಿಸಿತು ಎಂಬುದನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಬ್ರಿಟಿಷ ಗೆಜೆಟಿಯರ್ ನಂತೇ ಹೈಗನಾಡೆಂದು ಕರೆಸಿಕೊಂಡ ಗೇರುಸೊಪ್ಪೆ ರಾಣಿಯ ಸಾಮ್ರಾಜ್ಯ ಇಂದಿನ ದಕ್ಷಿಣಕನ್ನಡದ ಬ್ರಹ್ಮಾವರ ಹೊಳೆಯೀಚಿನ ಕುಂದಾಪುರವನ್ನೊಳಗೊಂಡು ಗಂಗಾವಳಿ ನದಿತಟದ ಅಂಕೋಲಾವರೆಗೆ ವ್ಯಾಪಿಸಿತ್ತು. ಇದನ್ನು ಇತಿಹಾಸ ತಜ್ಞ ಮಂಜೇಶ್ವರ ಗೋವಿಂದ ಪೈಯವರ ಬರಹಗಳಲ್ಲಿ ಮತ್ತು ಸಹ್ಯಾದ್ರಿ ಉತ್ತರ ಕಾಂಡದಲ್ಲಿ ಓದಿ ತಿಳಿದುಕೊಳ್ಳಬಹುದಾಗಿದೆ.
ದಿ|ಮೂಡ್ಕಣಿ ನಾರಾಯಣ ಹೆಗಡೆ-ಚುಕ್ಕಿಚಿತ್ರ ಕಲಾವಿದ ಕೀರ್ತಿಕುಮಾರ್ ಶಾಸ್ತ್ರಿ ಅವರ ರಚನೆಯಲ್ಲಿ

ದಶಾವತಾರ ಆಟವೆಂಬುದು ಕೇವಲ ಗಾನ ಪ್ರಧಾನವಾದದ್ದಲ್ಲ, ಮೊದಲೇ ಹೇಳಿದಂತೇ ಆಂಗಿಕ, ಆಹಾರ್ಯಕ, ವಾಚಿಕ ಯಾ ಶಾಬ್ದಿಕ ಮತ್ತು ಸಾತ್ವಿಕ ಅಭಿನಯಗಳ ಮಜಲುಗಳನ್ನು ಮೇಳೈಸಿಕೊಂಡ ಕಲೆ.  ಸ್ಥೂಲವಾಗಿ ಹೇಳುವುದಾದರೆ ಅರವತ್ತರ ಮುದುಕ ಅಭಿಮನ್ಯುವಿನ ಪಾತ್ರವನ್ನು ಮಾಡಬಾರದು, ಕೃಶದೇಹಿ ಭೀಮನ ಪಾತ್ರವನ್ನು ಪೋಷಿಸಲಾಗದು, ಸ್ತ್ರೀಯರು ಪುರುಷವೇಷ ತೊಡುವುದರಿಂದ ಗಂಡಿನ ದನಿಯ ಅನುಕರಣೆ ಮಾಡಲು ಸಾಧ್ಯವಾಗದು-ಎಂಬೀರೀತಿಯ ‘’ಫಿಸಿಕಲ್ ಎಲಿಜಿಬಲಿಟಿ ಟು ಅಂಡರ್ ಟೇಕ್ ಅ ಕ್ಯಾರೆಕ್ಟರ್’’ ಎಂಬಂತಹ ನಿಯಮಗಳನ್ನು ತಿಳಿಸುವುದು ಆಂಗಿಕದ ಒಂದು ಭಾಗವಾಗುತ್ತದೆ. ಪಾತ್ರಕ್ಕೆ ತಕ್ಕ ವೇಷಭೂಷಣಗಳನ್ನು ಆಹಾರ್ಯಕ ವೆನ್ನುತ್ತೇವೆ; ಉದಾಹರಣೆಗೆ: ಕಲಾವಿದರು ಕಸೆವಸ್ತ್ರವೆಂಬ ಲುಂಗಿಯಂತಯ ಬಟ್ಟೆಯನ್ನು ಶರೀರದ ಕೆಳಭಾಗದಲ್ಲಿ ಧರಿಸುತ್ತಾರೆ-ಇದು ದೇವ, ದಾನವ, ಮಾನವರಿಗೆ  ಅಲ್ಲದೇ ರಾಜ, ಮಂತ್ರಿ, ಸೇವಕ ಮೊದಲಾದ ಪಾತ್ರಗಳಿಗೆ ತಕ್ಕಂತೇ ಭಿನ್ನಭಿನ್ನವಾಗಿರಬೇಕೆಂಬುದು ಸಂಪ್ರದಾಯ; ಆದರೆ ಇಂದು ಅದನ್ನು ಸಮವಸ್ತ್ರದಂತೇ ಎಲ್ಲಾ ಪಾತ್ರಧಾರಿಗಳೂ ಒಂದೇ ರೂಪದ ಕಸೆವಸ್ತ್ರವನ್ನು ಧರಿಸುತ್ತಿದ್ದಾರೆ. ವಾಚಿಕದಲ್ಲಿ ಮೂರು ಭಾಗಗಳು: ಒಂದು ಗೀತ ಅಥವಾ ಭಾಗವತಿಕೆ ಎರಡನೆಯದು ಕರಣ, ಮುದ್ರೆ ಮೊದಲಾದವುಗಳಿಂದ ಪದ್ಯದ ಹೇಳಿಕೆಯನ್ನು ಅಭಿವ್ಯಕ್ತಗೊಳಿಸುವುದು, ಮೂರನೆಯದು ಮಾತು ಅಥವಾ ಸಂಭಾಷಣೆ. ಸಾತ್ವಿಕವೆಂದರೆ ಶಬ್ದಶಹ ಸಾತ್ವಿಕ ಸ್ವಭಾವವೆಂದರ್ಥವಲ್ಲ, ಸಾತ್ವಿಕ ಎಂಬುದು ಪಾತ್ರದ ಸತ್ವ ಎಂಬುದನ್ನು ಬಿಂಬಿಸುತ್ತದೆ. ರಾವಣನಾಗಿ ಅಭಿನಯಿಸುವಾಗ ರಾವಣ ಕಠೋರ ಸ್ಥಾಯೀಭಾವ ಪಾತ್ರಧಾರಿಯಲ್ಲಿರಬೇಕು, ಅಕ್ರೂರನಾಗಿ ಕೃಷ್ಣನಲ್ಲಿಗೆ ಸಂದೇಶಹೊತ್ತು ಬಂದಾಗ ಅಕ್ರೂರನ ಭಕ್ತ/ವಿನೀತ ಭಾವ ಪಾತ್ರಧಾರಿಯಲ್ಲಿರಬೇಕು.

ಕಾರಂತರ ಸಂಶೋಧನೆಯಲ್ಲಿ ಅವರು ಕಂಡುಕೊಂಡ ಮೂಲ ಹೈಗನಾಡಿನ ದಶಾವತಾರ ಆಟವನ್ನು ‘’ಸುಂದರ ಸಂಪ್ರದಾಯ’’ ಎಂದು ಬಣ್ಣಿಸಿದ್ದರಂತೆ. ರಷ್ಯಾದೇಶದ ಬ್ಯಾಲೆ ನರ್ತನವನ್ನು ಸಮೀಕರಿಸಿ ಮೂಕಬ್ಯಾಲೆಯನ್ನು ಜೋಡಿಸಿ ದಶಾವತಾರ ಆಟವನ್ನು ಭಿನ್ನವಾಗಿ ರೂಪಿಸಲು ಯತ್ನಿಸಿದವರು ಕಾರಂತರು. ಅದೇ ಕಾಲಘಟ್ಟದಲ್ಲಿ ಅಂದರೆ ಸರಿಸುಮಾರು 1950-60ರ ದಶಕಗಳಲ್ಲಿ ’ದಶಾವತಾರ ಆಟ’ದ ಮೇಲೆ ಸಂಪ್ರದಾಯೇತರ ಹುಚ್ಚುಕುಣಿತಗಳು, ಉಪನ್ಯಾಸಗಳಂತಹ ಉದ್ದದ ಮಾತುಗಾರಿಕೆ ಇವೆಲ್ಲಾ ಸೇರಿಕೊಳ್ಳುವುದರ ಜೊತೆಗೆ ‘’ಯಕ್ಷಗಾನ’’ವೆಂದು ಹೆಸರಿಸಿ ಕಲೆಯನ್ನು ಕುಲಗೆಡಿಸಿಬಿಟ್ಟರು ಎಂಬುದು ಶಾಸ್ತ್ರಿಯವರ ಅಳಲು. ಇದಕ್ಕೆ ಪೂರಕವಾದ ಉದಾಹರಣೆಗಳನ್ನು ಅವರು ತಮ್ಮ ಲೇಖನಗಳಲ್ಲಿ ಹೇಳಿದ್ದಾರೆ. ’’ಯಕ್ಷಗಾನ’’ ಎಂಬುದು ದೇಶವ್ಯಾಪಿ ಬಳಕೆಯಲ್ಲಿರುವ ಸಂಸ್ಕೃತ ಮೂಲದ ಹೆಸರು. ’ಯಕ್ಷ’ ಎಂಬ ಪದಕ್ಕೆ ಪೂಜಿಸುವವ, ಆರಾಧಿಸುವವ ಎಂಬೆಲ್ಲಾ ಅರ್ಥಗಳಿರುವುದರಿಂದ, ಪೂಜಾಂಗವಾಗಿ ಹಾಡುವವರನ್ನು ಯಕ್ಷಗಾನದವರು ಎನ್ನಲಾಗುತ್ತದೆ. ಇದಕ್ಕೆ ದಾಸಪಂಥವೂ ಹೊರತಲ್ಲ. ಕಲೆಗೊಂದು ಸ್ಥಾನ ಕಲ್ಪಿಸುವ ಭರದಲ್ಲಿ ಮೂಡಲಪಾಯ, ತೆಂಕುತಿಟ್ಟು, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ, ದಶಾವತಾರ ಆಟ ಎಲ್ಲವನ್ನೂ ಸೇರಿಸಿ ’ಯಕ್ಷಗಾನ’ವೆಂದು ಕರೆದುಬಿಟ್ಟರು, ಆದರೆ ದಶಾವತಾರ ಆಟವೆಂಬುದು ಯಕ್ಷಗಾನವಲ್ಲ, ಅದಕ್ಕೆ ತನ್ನದೇ ಆದ ಶಾಸ್ತ್ರೀಯತೆ ಇದೆ. ಹೇಗೆ ಹೇಗೋ ಕುಣಿದರೆ, ಗಾನಮಾಡಿದರೆ ಅದು ದಶಾವತಾರ ಆಟವಾಗುವುದಿಲ್ಲ.

ಬ್ರಹ್ಮಾವರದ ಹೊಳೆಯಿಂದಾಚೆಗೆ ಕೇರಳದವರೆಗಿನ ನಾಡು ತುಳುನಾಡೆಂದು ಗುರುತಿಸಲ್ಪಟ್ಟು ಗೇರುಸೊಪ್ಪೆ ನಗರದ ರಾಣಿಯ ಮಾಂಡಲಿಕರು ಬಾರಕೂರನ್ನು ರಾಜಧಾನಿಯನ್ನಾಗಿಸಿಕೊಂಡು ಅಲ್ಲಿ ಆಳುತ್ತಿದ್ದರು ಎಂಬುದು ಇತಿಹಾಸ. ಕೇರಳದ ಕಥಕ್ಕಳಿಯ ವೇಷಗಳನ್ನೇ ಹೋಲುವ ವೇಷಭೂಷಣಗಳನ್ನು ತೆಂಕುತಿಟ್ಟಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕ ಈ ನಾಲ್ಕೂ ಮಜಲುಗಳಲ್ಲಿ ಅತಿ ಭಿನ್ನವಾಗಿರುವ ತೆಂಕುತಿಟ್ಟು ಮತ್ತು ದಶಾವತಾರಗಳ ನಡುವಿನ ಸಾಮ್ಯ ಸಂಬಂಧವೆಂದರೆ ಕೇವಲ ಪ್ರಸಂಗ ಪಠ್ಯವೊಂದೇ! ತೆಂಕಿನಲ್ಲಿ ಬಳಸುವ ಜಾಗಟೆ ನುಡಿಸಲು ಬರುವಂಥದ್ದಲ್ಲ, ಮದ್ದಳೆಯ  ತಾತ್ಕಾರಕ್ಕೆ ಅಲ್ಲಿ ಮನ್ನಣೆಯೇ ಇಲ್ಲ, ಚಂಡೆಯ ಅಬ್ಬರ ಕೇರಳಿಗರ ಚಂಡೆಯ ದನಿಯನ್ನೇ ಹೋಲುವುದರಿಂದ ಇನ್ನಿತರ ವಾದ್ಯಗಳಿಗೆ ಪೂರಕವಾಗಿ ವಿಲಂಬಿತವಾಗಿ ಧೇನಿಸಬೇಕಿದ್ದ ಚಂಡೆಯ ಅಬರಾಟವೇ ಹೆಚ್ಚಿನದಾಗಿದೆ ಎಂಬುದನ್ನು ಗಮನಿಸಬೇಕು. ದಕ್ಷಿಣಕನ್ನಡ ಪ್ರಾಂತದ ವಿದ್ವಾಂಸರು ಅಭಿನಯಿಸಿ ತೋರಿಸಿಲಾರದ ತಮ್ಮ ನ್ಯೂನತೆಯನ್ನು ಉಪನ್ಯಾಸಗಳಂತಹ ವಾಗ್ಝರಿಗಳಿಂದ ತುಂಬಿಸಿಕೊಳ್ಳಲು ಯತ್ನಿಸಿದ್ದರೆ ಅದನ್ನೇ ಅನುಕರಿಸಿದ ದಶಾವತಾರ ಆಟದ ಕೆಲವು ಪಾತ್ರಧಾರಿಗಳು ಈ ನಮ್ಮ ರಂಗಕಲೆಯನ್ನು ಹಾಳುಗರೆಯುವುದಕ್ಕೆ ತಮ್ಮ ಕೊಡುಗೆ ನೀಡಿದರು ಎಂಬುದು ನಾಶಾರ ಅಂಬೋಣ.

ಮಂಟಪ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನ ಪ್ರಸಂಗಗಳನ್ನು ದಶಾವತಾರ ಆಟದ ತಿಟ್ಟು ಎನ್ನುವುದು ತೀರಾ ಅಸಂಗತವೆಂದು ಹೇಳುವ ನಾಶಾ, “ಒಬ್ಬರೇ ನಗುವುದು ಮಾತನಾಡಿಕೊಳ್ಳುವುದು ಇದಕ್ಕೆಲ್ಲಾ ಏನೆನ್ನಬೇಕೆಂದುಕೊಳ್ಳುತ್ತಿದ್ದೆ, ಮಾರನೇದಿನ ಮುರುಕು ಬಸ್ ಸ್ಟ್ಯಾಂಡಿನಲ್ಲಿ ಹುಚ್ಚನೊಬ್ಬ ಒಬ್ಬನೇ ಮಾತನಾಡಿಕೊಂಡು ನಗುವುದನ್ನು ಮಾಡುತ್ತಿದ್ದುದನ್ನು ಕಂಡಾಗ ಉತ್ತರ ದೊರೆಯಿತು” ಎನ್ನುತ್ತಾರೆ-ಆಕ್ರೋಶದಿಂದ. ನಾಲ್ಕು ಆಯಾಮಗಳ ಸಮಗ್ರ ಸಮಷ್ಟಿಯ ಪಾರಮ್ಯದಿಂದ ವೈಭವೋಪೇತವಾಗಿ ಮೂಡಬೇಕಾದ ರಂಗನಾಟಕವನ್ನು ಕೇವಲ ನೃತ್ಯಕ್ಕೆ, ಕೇವಲ ಗಾನಕ್ಕೆ, ಕೇವಲ ಅಭಿನಯಕ್ಕೆ ಅಥವಾ ಕೇವಲ ಮಾತುಗಾರಿಕೆಗೆ ಮೀಸಲಾಗಿಸುವುದನ್ನು ಶಾಸ್ತ್ರಿಯವರು ಒಪ್ಪುವುದಿಲ್ಲ. ಇದರ ಆಳಗಲ ವಿಸ್ತಾರಗಳನ್ನು ಅರಿಯದೇ ಏಕವ್ಯಕ್ತಿ ‘’ಪ್ರಹಸನ’’ಕ್ಕೆ ಶತಾವಧಾನಿ ಡಾ| ರಾ. ಗಣೇಶರು ಪಠ್ಯಬರೆದುಕೊಟ್ಟರು ಎಂಬುದಕ್ಕಾಗಿ ನಾಶಾ ವಿಷಾದಿಸುತ್ತಾರೆ. ನಾಲ್ಕು ಆಯಾಮಗಳ ಭಾಗವೇ ಆಗಿ, ಕಲಾವಿದರೊಂದಿಗೆ ಪ್ರಸಂಗದಾದ್ಯಂತ ಸಾತತ್ಯವಹಿಸುವ ’’ಆಡುಗಾರ’’ ಕೇವಲ ರಾಗಗಳ ಹಾಡುಗಾರನಲ್ಲಾ-ಬದಲಾಗಿ ಆತನೊಬ್ಬ ಕಥಾನಕವನ್ನು ಆಡಿಸುವ ’ಆಡುಗಾರ’ ಎನ್ನುವ ನಾಶಾ, ಮೂಡ್ಕಣಿ ನಾರಾಯಣ ಹೆಗಡೆಯಂತಹ ಮಹಾನ್ ಕಲಾವಿದರ ಕಾಲಘಟ್ಟದ ಘಟನೆಗಳನ್ನು ಓದುಗರ ಮುಂದೆ ಹರಡಿಕೊಂಡು ಕುಳಿತುಬಿಡುತ್ತಾರೆ! ಬೆಳ್ಳಿ-ಕಂಚು ಮಿಶ್ರಲೋಹಗಳ ಎರಕದಿಂದ ತಯಾರಿಸಿದ ದಶಾವತಾರದ ತಾಳಕ್ಕೆ ಲಯ-ಗಚ್ಚು ಮುಖ್ಯ, ಮೃದಂಗಕ್ಕೆ ತಾತ್ಕಾರ[ಬೋಲ್] ಮುಖ್ಯವೆಂಬುದನ್ನು ಹೇಳುವ ಗಂಗಾಧರರು, ರಂಗರೂಪಕದ ಭಾಗವೇ ಆದ ಭಾಗವತ, ಶೃತಿಯಾತ, ಮದ್ದಳೆಗಾರ ಮತ್ತು ಚಂಡೆವಾದಕ ಎಲ್ಲರೂ ಧರಿಸಬೇಕಾದ ಸಾಂಪ್ರದಾಯಿಕ ದಿರಿಸುಗಳ ಬಗೆಗೂ ಹೇಳುತ್ತಾರೆ.         

ಸಂವಹನ ಪ್ರಕ್ರಿಯೆಯಲ್ಲಿ ಭಾಷಾಬೆಳವಣಿಗೆಯ ನಂತರವೇ ಅದಕ್ಕೊಂದು ಅಂಗ-ಆಕಾರ ಕಲ್ಪಿತಗೊಂಡು, ವ್ಯಾಕರಣ-ಛಂದಸ್ಸು ಮೊದಲಾದವುಗಳು ರೂಪಿತವಾಗುತ್ತವೆ; ಅದರಂತೆಯೇ ಕಲೆ-ಸಾಹಿತ್ಯ-ಸಂಗೀತಗಳೂ ಕೂಡ ಇದಕ್ಕೆ ಹೊರತಲ್ಲ. ಬೆಳವಣಿಗೆಯ ಒಂದು ಹಂತದ ನಂತರ ಅವುಗಳಿಗೆ ಅವುಗಳದ್ದೇ ಆದ ಸಂವಿಧಾನಗಳು ಸ್ಥಾಪಿತವಾಗುತ್ತವೆ. ಕಾಲಘಟ್ಟಗಳಲ್ಲಿ ಹೊಸ ಹೊಸ ಮಾರ್ಪಾಡುಗಳು ಆಗುತ್ತಲೇ ಇರುವುದು ಹೊಸತನ ಬಯಸುವ ಪ್ರೇಕ್ಷಕರ/ವೀಕ್ಷಕರ/ಸಭಾಸದರ/ಶ್ರೋತ್ರಗಳ/ಓದುಗರ ನಡವಳಿಕೆಯನ್ನೂ ಅವಲಂಬಿಸಿರುತ್ತದೆ. ಭಾಷೆಯಾಗಿ ಸಂಸ್ಕೃತ ಇಂದಿಗೂ ತನ್ನತನವನ್ನು ಕಳೆದುಕೊಳ್ಳದೇ  ಸುಂದರವಾಗಿಯೂ ಸಮೃದ್ಧವಾಗಿಯೂ ಉಳಿದುಕೊಂಡಿದೆ. ಅದೇರೀತಿ, ಶಿಷ್ಟಕಲೆಯಾದ ’ದಶಾವತಾರ ಆಟ’ಕ್ಕೆ ಕೆಲವು ಅಲಿಖಿತ ಮತ್ತು ಅನುಕರಿಸಲ್ಪಟ್ಟ/ಅನುಸರಿಸಲ್ಪಟ್ಟ ನಿಯಮಗಳಿವೆ. ಪರಿವರ್ತನೆ ಜಗದ ಸಹಜ ನಿಯಮ. ಆದರೆ ತನ್ನತನವನ್ನು ಇಟ್ಟುಕೊಂಡೂ ನವಯುಗಕ್ಕೆ ಸ್ಪಂದಿಸುವ ಕಲೆಯಾಗಿ ’ದಶಾವತಾರ ಆಟ’ ಬೆಳೆಯಬೇಕು. ಹೊರಗಿನ ಹೊಸ ಹೊಸ ಉತ್ತಮ ರಂಗಪ್ರಯೋಗಗಳನ್ನು ಪೂರ್ವರಂಗಕ್ಕೆ/ಮೂಲರಂಗಚರ್ಯೆಗೆ ಭಂಗಬರದಂತೇ ಬಳಸಿಕೊಳ್ಳಬಹುದು; ಹಾಗೆ ಬಳಸಿಕೊಳ್ಳುವಾಗ ನಾಲ್ಕು ಆಯಾಮಗಳ ಸಮಷ್ಟಿಯ ನಿಯಮಗಳನ್ನು ಮೀರಿ ಜೋಡಣೆಯಾಗಬಾರದು. ಪಾತ್ರಧಾರಿ ಉಪನ್ಯಾಸ ಕೊರೆಯುವ ಬದಲು ಅಧ್ಯಯನಶೀಲನಾಗಿದ್ದು ನೂರು ಮಾತುಗಳಲ್ಲಿ ಹೇಳುವುದನ್ನು ಹಿತಮಿತವಾಗಿ ಮೂರೇ ಮಾತಿಗೆ ಇಳಿಸುವಷ್ಟು ಪ್ರೌಢಿಮೆ ಹೊಂದಿರಬೇಕು. ಕೊಡುವ ಗಂಟಿನಮೇಲೆ ಕಣ್ಣಿಟ್ಟು ನಡೆಯದೇ, ಹಿರಿಯರು ಬಳುವಳಿಯಾಗಿತ್ತ ’ಇಡಗಂಟ’ನ್ನು ಕಳೆಯದೇ, ಅಭಿಜಾತ ಕಲಾವಿದನಾಗಿ ಕಲೆಯನ್ನು ಪೋಷಿಸುವ ಮನೋಧರ್ಮ  ದಶಾವತಾರ ಕಲಾವಿದನಲ್ಲಿರಬೇಕು; ಅದು ನಾವು ನಮ್ಮ ಪೂರ್ವಜರಿಗೆ ಸಲ್ಲಿಸುವ ಕೃತಜ್ಞತೆ ಮತ್ತು ಕರ್ತವ್ಯ ಕೂಡ.         

ಹೈಗನಾಡಿನ ’’ದಶಾವತಾರ ಆಟ’’ ತನ್ನ ಅಂತಃಸತ್ವವನ್ನು ಹಾಗೇ ಉಳಿಸಿಕೊಳ್ಳಬೇಕಾದರೆ ಈ ಪ್ರಾಂತದ ನಿಜವಾದ ರಂಗಚಿಂತಕರು ಕಾರ್ಯಪ್ರವೃತ್ತರಾಗಿ ಅದಕ್ಕೊಂದು ಲಿಖಿತರೂಪದ ಸಂವಿಧಾನದ ನೆಲೆಗಟ್ಟು  ಕಲ್ಪಿಸಬೇಕೆಂಬುದು ಶಾಸ್ತ್ರಿಯವರ ಅಪೇಕ್ಷೆ. ಅಂದಿನ ಕಲಾತಪಸ್ವಿಗಳಾದ ಮೂಡ್ಕಣಿ ನಾರಾಯಣ ಹೆಗಡೆ, ಹೆಗಡೆಯ ಗಣಪ ಹೆಗಡೆ, ಮಾಳ್ಕೋಡ್ ಗಣಪ ಹೆಗಡೆ, ವಾಸು ಆಚಾರಿ, ಕೊಕ್ಕರ್ಣಿ ನರಸಿಂಹ ಕಮ್ತಿ, ಗಣಪತಿ ಪ್ರಭು, ಕಿಟ್ಟಪ್ಪ, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಲ್ಲಗದ್ದೆ ಗಣೇಶ ಹೆಗಡೆ ಮೊದಲಾದ ರಂಗಕರ್ಮಿಗಳು ವಿದ್ಯುದ್ದೀಪ, ಮೈಕುಗಳ ಆಡಂಬರವಿಲ್ಲದ ಆ ಕಾಲಘಟ್ಟದಲ್ಲಿ, ವಿಶಾಲ ಕತ್ತಲ ಬಯಲಲ್ಲಿ ನಾಲ್ಕು ಅಡಕೆ ಕಂಬಗಳನ್ನು ನೆಟ್ಟು ನಿರ್ಮಿಸಿದ ರಂಗಸ್ಥಳದಲ್ಲಿ ಹೇಗೆ ಈ ಕಲೆಯನ್ನು ಪೋಷಿಸಿದರು ಎಂಬುದನ್ನು ಅವಲೋಕಿಸುತ್ತಾ, ಅನ್ಯ ಮಾಧ್ಯಮಗಳ ಹಾವಳಿಯಿದ್ದರೂ, ತನ್ನತನದಿಂದ ಇನ್ನೂ ಬದುಕಿರುವ ಈ ಸಮಗ್ರ ಕಲೆಗೆ ’’ದಶಾವತಾರ ಆಟ’’ ಎಂದೇ ಮರುನಾಮಕರಣವಾಗಬೇಕು ಎಂಬುದು ಶಾಸ್ತ್ರಿಯವರ ಬಯಕೆ; ’’ದಶಾವತಾರಿಷ್ಟ’’ದ ನಾಶಾರ ಹೇಳಿಕೆಗಳಲ್ಲಿ ಸತ್ಯವಿದೆ ಎಂಬುದನ್ನು ದಶಾವತಾರ ಆಟದ ಮೂಲ ಅಭಿರುಚಿಯನ್ನು ಹೊಂದಿದ ಹೈಗನಾಡಿಗರು ಬಲ್ಲರು.   

"ಎಂದೋ ಆಗಬೇಕಾಗಿದ್ದ ಕಾರ್ಯ ಇಂದು ಆಯಿತಲ್ಲ"ವೆಂದು ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಉದ್ಗರಿಸಿದ್ದರೆ, ದಕ್ಷಿಣೋತ್ತರ ಕನ್ನಡ ಜಿಲ್ಲೆಯಾದ್ಯಂತ ನೆಲೆಸಿರುವ ಬಹುಶ್ರುತ ವಿದ್ವಾಂಸರು ಶಾಸ್ತ್ರಿಗಳ ಚಿಂತನೆಯನ್ನು ಮಾನ್ಯಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಾರಂತರ ನಿರ್ಲಕ್ಷ್ಯದಿಂದಾಗಿ ಅಸಡ್ಡೆಗೆ ಒಳಗಾಗಿ, ಜಾನಪದ ಕಲೆಯೆಂದೇ ಬೋರ್ಡು ಹಾಕಿಕೊಂಡ ’ಅಶಾವತಾರ ಆಟ’ದ ಈ ಚಿಂತನ ಗ್ರಂಥದಲ್ಲಿ ’ಆಡುಗಾರ’, ’ರಾಗವತ’ ಮೊದಲಾದ ನವಪದಗಳನ್ನು ರಂಜನೀಯವಾಗಿ ಸೃಜಿಸಿದ ಶಾಸ್ತ್ರಿಗಳ ವಿಡಂಬನಾ ಮನೋಭಾವ ಗಂಭೀರ ಓದಿನ ನಡುವೆ ಕಿರುನಗೆಗೆ ಕಾರಣವಾಗುತ್ತದೆ. ದಶಾವತಾರ ಹಿಂದೆ ಹೇಗಿತ್ತು, ನಡುವೆ ಹೇಗಿತ್ತು, ಇಂದು ಹೇಗಿದೆ ಮತ್ತು ಮುಂದೆ ಏನಾಗಬೇಕು ಎಂಬೆಲ್ಲ ಅಂಶಗಳು ಚರ್ವಿತಚರ್ವಣವೆನಿಸಿದ ರೀತಿಯಲ್ಲಿ ಹೇಳಲ್ಪಟ್ಟಿವೆ. ಒಟ್ಟಾರೆ, ’ದಶಾವತಾರಿಷ್ಟ’ ಆಯುರ್ವೇದೀಯ ಔಷಧಿಯಂತೇ, ದಶಾವತಾರಕ್ಕೆ ಅಂಟಿಕೊಂಡ ’ಯಕ್ಷಗಾನ’ವೆಂಬ ರೋಗವನ್ನು ಕಾಲಕ್ರಮದಲ್ಲಿ ಬೇರುಸಹಿತ ನಿವಾಳಿಸಬಲ್ಲ ಲಕ್ಷಣಗಳು ಕಾಣುತ್ತವೆ.

Thursday, October 31, 2013

ಮಂಗಳಮಯ ದೀಪವನ್ನು ಬೆಳಗುವ ಕಥೆ

ಮಂಗಳಮಯ ದೀಪವನ್ನು ಬೆಳಗುವ ಕಥೆ

ದೀಪಮೂಲೇ ತತೋ ಬ್ರಹ್ಮಾ ದೀಪಮಧ್ಯೆ ತತೋ ಹರಿಃ |
ದೀಪಾಗ್ರೇ ಶಂಕರಂ ಪ್ರೋಕ್ತ ದೀಪರಾಜಾಯತೇ ನಮಃ ||

ದೀಪವನ್ನು ಬೆಳಗುವುದು ಸನಾತನ ಜೀವನಧರ್ಮದಲ್ಲಿ ಎಲ್ಲಾ ಧಾರ್ಮಿಕ ವಿಧಿಗಳಲ್ಲೂ ನಡೆಯಬೇಕಾದ ಪ್ರಥಮ ಕಾರ್ಯ. ಕತ್ತಲೆಯ ವೈರಿ ಬೆಳಕು. ಬೆಳಕನ್ನು ದೃಷ್ಟಿಸುವುದರಿಂದ ನಮ್ಮ ಮನಸ್ಸು ಅರಳುತ್ತದೆ, ಪ್ರಪುಲ್ಲವಾಗುತ್ತದೆ. ಕತ್ತಲೆಗೆ ತಮಸ್ಸು ಎಂತಲೂ ಹೆಸರು. ದೀಪವೊಂದು ಉರಿಯುತ್ತಿದ್ದರೆ ಉರಿವ ದೀಪದ ಮೂಲದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ಮತ್ತು ತುದಿಯಲ್ಲಿ ಶಿವನೂ ಸನ್ನಿಹಿತರಾಗಿತ್ತಾರೆ ಎಂಬುದು ಶ್ಲೋಕದ ಹೇಳಿಕೆ. ಒಟ್ಟಂದದಲ್ಲಿ ದೇವರೆಲ್ಲಾ ಒಬ್ಬನೇ ಆದರೂ ನಾವು ಬಯಸುವ ರೂಪಗಳಲ್ಲಿ ನಮಗೆ ತೋರ್ಪಡಿಸಿಕೊಳ್ಳುವುದು ಅಥವಾ ನಾವು ಆತನನ್ನು ಆರಾಧಿಸುವುದು ನಡೆಯುತ್ತದೆ.

ಮಂಗಳಚಿಹ್ನೆಗಳಲ್ಲಿ ಪ್ರಥಮವಾಗಿ ಮಂಗಳದೀಪವನ್ನೇ ಹೇಳಲಾಗುತ್ತದೆ. ನಂತರ ಇತರ ಎಲ್ಲವೂ ಬರುತ್ತವೆ. ದೇವತೆಗಳ ಪೂಜೆಗೆ ಅವರನ್ನು ಆಹ್ವಾನಿಸುವಾಗ ಏನೆಲ್ಲಾ ಮಾಡಬೇಕೆಂಬುದೇ ಸಾಮಾನ್ಯವಾಗಿ ಇಲ್ಲಿ ಅರಿಯಬೇಕಾದ ಅಂಶ. ಯಾಕೆ ವಿವಿಧ ಪರಿಕರಗಳು ಉಪಯೋಗಿಸಲ್ಪಡುತ್ತವೆ, ಅವುಗಳ ಬಳಕೆಯ ಮಹತ್ವವನ್ನೂ ಸ್ಥೂಲವಾಗಿ ಅರಿಯಬಹುದಾಗಿದೆ. ಹಿಂದಕ್ಕೆ ನಮ್ಮ ಪೂರ್ವರ್ಜರೆಲ್ಲ ಗೋಮಯದಿಂದ ನೆಲವನ್ನು ಸಾರಿಸುತ್ತಿದ್ದರು. ಗೋಮಯವನ್ನು ಆಯ್ದುಕೊಳ್ಳುವಾಗ ಸಹ ವಿಶಿಷ್ಟ ನಿಯಮಗಳಿದ್ದವು. ಕರುಹಾಕಿರುವ ಹಸುವಿನ ತಾಜಾ ಸಗಣಿಯೇ ಗೋಮಯವಾಗುತ್ತಿತ್ತು; ಸೂರ್ಯನ ಕಿರಣದಡಿಯಲ್ಲಿ ಗೋಮಾಳಗಳಲ್ಲಿ ಮೇದುಬರುವ ದೇಸೀ ದನದಗಳ ತಾಜಾ ಸಗಣಿಯಲ್ಲಿ ಕ್ರಿಮಿನಾಶಕ ಅಂಶಗಳಿವೆ ಎಂಬುದು ವೈಜ್ಞಾನಿಕ. ನಮ್ಮ ಕಾರ್ಯಗಳಿಗೆ ಅಡಚಣೆ ಉಂಟುಮಾಡದಂತೇ ಉಪದ್ರವಕಾರೀ ಕೀಟಾಣುಗಳನ್ನು ದೂರವಿಡುವುದು ಅನಿವಾರ್ಯ; ಅವುಗಳ ಹನನವೇ ನಮ್ಮ ಉದ್ದೇಶವಲ್ಲ, ಆದರೆ ನಮಗರಿವಿಲ್ಲದೇ ಅವು ಹತವಾದರೆ ಅದಕ್ಕಾಗಿ ಸೃಷ್ಟಿಕರ್ತನನ್ನೇ ಸ್ಮರಿಸುವುದು ಸಂಪ್ರದಾಯ.

ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಇಡುವುದು ಮಂಗಳದ ಇನ್ನೊಂದು ಚಿಹ್ನೆ. ನಿತ್ಯವೂ ನಾವು ವಾಸಿಸುವ ಸ್ಥಳಗಳ ಎದುರುಭಾಗದಲ್ಲಿ, ಸೂರ್ಯೋದಯಕ್ಕೂ ಮುಂಚೆ ನೀರು-ಗೋಮಯ ಹಾಕಿ ಸಾರಿಸಿ, ರಂಗೋಲಿ ಇಡುವುದು ನಡೆಯಬೇಕಾದ ಕೆಲಸ. ವಿಶೇಷ ದಿನಗಳಲ್ಲಿ ಮಾವಿನ ಎಲೆಗಳಿಂದ ಮತ್ತು ಬಾಳೆಯ ಗಿಡಗಳಿಂದ ಬಾಗಿಲನ್ನು ಅಲಂಕರಿಸಿ ದೇವತೆಗಳ ಆಹ್ವಾನಕ್ಕೆ ತಯಾರಿ ನಡೆಸಿಕೊಳ್ಳುವುದು ಮಂಗಳದ ಚಿಹ್ನೆ. ಮಂಗಳದ ಚಿಹ್ನೆಗಳನ್ನು ಅಪರ ಕಾರ್ಯಕ್ರಮಗಳಲ್ಲಿ ಬಳಸುವುದಿಲ್ಲ. ಪರ ಅಂದರೆ ದೇವಲೋಕವೆಂದರ್ಥ, ಅಪರ ಎಂದರೆ ಐಹಿಕ, ಲೌಕಿಕ ಎಂದರ್ಥ. ಸಾಮಾನ್ಯವಾಗಿ ಯಾರಾದರೂ ಮರಣಿಸಿದರೆ, ಅಥವಾ ಹಳೆಯಜನರ ಪುಣ್ಯತಿಥಿಯ ಆಚರಣೆಯಿದ್ದರೆ ಅಂತಹ ದಿನಗಳಲ್ಲಿ ಆ ಕಾರ್ಯಕ್ರಮಗಳಲ್ಲಿ ದೀಪವನ್ನುಳಿದು ಉಳಿದ ಮಂಗಳಚಿಹ್ನೆಗಳನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ದೀಪವನ್ನೂ ಸಹ ದೇವರೆದುರು ಮಾತ್ರ ಹಚ್ಚಿ ಇಡಲಾಗುತ್ತದೆಯೇ ವಿನಃ ಶ್ರಾದ್ಧಾದಿಗಳು ನಡೆಯುವಲ್ಲಿ ದೀಪದ ಅಗತ್ಯತೆ ಇರುವುದಿಲ್ಲ ಅಥವಾ ನಿಷೇಧ.

 ಶಿವಂ/ಶುಭಂ  ಕರೋತಿ ಕಲ್ಯಾಣ ಆರೋಗ್ಯಂ ಧನಸಂಪದಂ |
ಮಮಶತ್ರು ಹತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

ಸಂಜೆಯಾಯ್ತೆಂದರೆ ಭಾರತೀಯ ನಾರಿಯರು ಹಿಂದೆಲ್ಲ ಮನೆಯೊಳಗಡೆ ದೀಪವನ್ನು ಮುಡಿಸಿ ಈ ಶ್ಲೋಕವನ್ನು ಹೇಳುತ್ತಿದ್ದರು. ಈ ಶ್ಲೋಕದಲ್ಲಿ ’ಮಮ ಶತ್ರು ಹತಾರ್ಥಾಯ’ ಎಂದರೆ ನಮ್ಮ ಶತ್ರು ಕತ್ತಲೆ ಎಂದರ್ಥ. ಈ ಜನ್ಮದಲ್ಲಿ ವ್ಯಾವಹಾರಿಕವಾಗಿ ನಮಗೆ ಆಗದ ಜನರನ್ನು ಶತ್ರುಗಳೆಂದು ಭಾವಿಸಬಾರದು, ಹಾಗೆ ಭಾವಿಸುವುದು ನಮ್ಮ ದುಷ್ಟತನವೆನಿಸಿಕೊಳ್ಳುತ್ತದೆ. ನಮಗೂ ಅವರಿಗೂ ಯಾವುದೋ ಕಾರ್ಯಕಾರಣದಿಂದ ಉಂಟಾದ ರಾಗದ್ವೇಷ ಆ ಕಾರಣಕ್ಕಾಗಿ ಮಾತ್ರ ಮೀಸಲಾಗಿರಲಿ; ಅಲ್ಲಿಂದಾಚೆಗೆ ಎಲ್ಲಾ ವಿಷಯಗಳಲ್ಲೂ ಅವರು ನಮ್ಮ ದ್ವೇಷಿಗಳೆಂದು ಭಾವಿಸದಿರುವುದು ಸನಾತನ ನೀತಿ. ಮಹಾಭಾರತದಲ್ಲಿ ರಣರಂಗದಲ್ಲಿ ತೊಡೆಮುರಿದು ಬಿದ್ದ ಧುರ್ಯೋಧನನನ್ನು ಭೀಮ ಕೃಷ್ಣನ ಅನುಜ್ಞೆಯ ಮೇರೆಗೆ ಕೊಂದುಹಾಕಿದ. ಸತ್ತ ಸುಯೋಧನನ ಶಿರವನ್ನು ಭೀಮ ಕಾಲಿನಿಂದ ತುಳಿದ. ಆಕ ಕೃಷ್ಣ ಒಂದು ಮಾತನ್ನು ಹೇಳಿದ್ದಾನೆ: "ಜೀವಿಗೆ ಶಿರದ ಭಾಗವೇ ಪ್ರಮುಖ. ಅದನ್ನು ತುಳಿದು ಅಪಮಾನಿಸಬಾರದು. ಜೀವವಿರಲಿ, ಇಲ್ಲದಿರಲಿ ಪ್ರತ್ಯಕ್ಷವಾಗಿ ಜೀವಿಯ ಭೌತಿಕ ಶರೀರ ಎದುರು ಕಂಡಾಗ, ಕಾಲಿನಿಂದ ತಲೆಯನ್ನು ತುಳಿಯಬಾರದು. ಹಿಂದೊಂದು ಜಾವದಲ್ಲಿ ಜೀವದಲ್ಲಿದ್ದ ಆ ಜೀವಿಗೆ ತಲೆಯೇ ಕೇಂದ್ರ ಸ್ಥಾನವಾಗಿತ್ತು. ತಲೆಯಿಲ್ಲದಿದ್ದರೆ ಜೀವಿ ಅಪೂರ್ಣ. ತಲೆಯಲ್ಲಿರುವ ಮೆದುಳಿನಿಂದ ಮನಸ್ಸಿನ ಚಟುವಟಿಕೆಗಳು ನಡೆಸಲ್ಪಡುತ್ತವೆ. ಹೀಗಾಗಿ ಭೀಮ ನೀನು ಸುಯೋಧನನ ಪಾರ್ಥಿವ ಶರೀರದ ಶಿರವನ್ನು ತಾಲಿನಿಂದ ತುಳಿದದ್ದು ತಪ್ಪು." ಇದು ಕೃಷ್ಣನ ಧರ್ಮಪಾಲನೆಯನ್ನು ತಿಳಿಸುತ್ತದೆ.

ಇಂದು ಎಣ್ಣೆಯ ದೀಪಗಳ ಹಂಗಿಲ್ಲ, ದೇವರಿಗೂ ದೀಪವನ್ನು ಹಚ್ಚುವ ಪರಿಪಾಟ ಅನೇಕ ಮನೆಗಳಲ್ಲಿ ಇಲ್ಲ! ಹೀಗಾಗಿ ದೀಪಗಳ ಮಹತ್ವದ ಅರಿವಿಲ್ಲ. ದೀಪಗಳನ್ನು ಉರಿಸುವಾಗ ಅವುಗಳಿಂದ ಉತ್ಪತ್ತಿಯಾದ ಹೊಗೆ ವಾಯುವನ್ನು ಸೇರುತ್ತದೆ. ಹೀಗಾಗಿ ವಾಯುವನ್ನು ಮಲಿನಗೊಳಿಸುವ ಹೊಗೆ ಆದಷ್ಟೂ ಆಗದರೀತಿಯಲ್ಲಿ ದೀಪಗಳನ್ನು ಉರಿಸುತ್ತಿದ್ದರು. ಉದಾಹರಣೆಗೆ ಎಳ್ಳೆಣ್ಣೆಯ ದೀಪವನ್ನು ಉರಿಸುವುದರಿಂದ ಅದರ ಹೊಗೆ ಸುತ್ತಲಿನ ವಾತಾರಣವನ್ನು ಸೇರಿ-ಉಸಿರಾಟದ ಮೂಲಕ ನಮ್ಮೊಳಗೆ ಸೇರಿ, ಮನದ ಕ್ಲೇಶನಾಶಕ್ಕೆ ಕಾರಣವಾಗುತ್ತದೆ. ತುಪ್ಪದ ದೀಪ ಕೂಡ ಹಾಗೇ. ಸೀಮೆ ಎಣ್ಣೆ ದೀಪವನ್ನು ದೇವರಮುಂದೆ ಬೆಳಗುವುದಿಲ್ಲ ಏಕೆಂದರೆ ಕಲ್ಲೆಣ್ಣೆಯ ಹೊಗೆ ಆರೋಗ್ಯಕ್ಕೆ ಹಾನಿಕರ. ಮನುಷ್ಯ ಪರಿಶ್ರಮದಿಂದ ತಯಾರಿಸಿಕೊಂಡ ಕಡಲೆಕಾಯಿ ಎಣ್ಣೆ[ಶೇಂಗಾ ಎಣ್ಣೆ], ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಇಂತಹ ಎಣ್ಣೆಗಳನ್ನು ಮಾತ್ರ ದೀಪಗಳಿಗೆ ಬಳಸಲಾಗುತ್ತದೆ.

ಕಾಲೇಜೊಂದರ ಉಪನ್ಯಾಸಕರೊಬ್ಬರಿಗೆ ವೇದಿಕೆಯ ಕಾರ್ಯಕ್ರಮಗಳಲ್ಲಿ ದೀಪವನ್ನು ಬೆಳಗುವುದು ಬಹಳ ಕೋಪವನ್ನು ತರಿಸುತ್ತಿತ್ತಂತೆ. ಸದರೀ ಉಪನ್ಯಾಸಕರು ತಮ್ಮ ಉಪನ್ಯಾಸಗಳಲ್ಲಿ ದೀಪಗಳನ್ನು ಬೆಳಗುವವರ ಕುರಿತು ವೈದಿಕ ಧರ್ಮದವರು, ಮೂಢನಂಬಿಕೆಯುಳ್ಳವರು ಎಂದೆಲ್ಲಾ ಗಂಟೆಗಟ್ಟಲೆ ಉಪನ್ಯಾಸ ಬಿಗಿಯುತ್ತಿದ್ದರಂತೆ. ಒಂದು ದಿನ ವಿಶೇಷ ಸಮಾರಂಭವೊಂದಕ್ಕೆ ವಿದೇಶೀ ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಬ್ಬರು ಅತಿಥಿಗಳಾಗಿ ಬರುವವರಿದ್ದರು. ಆ ದಿನದ ಕಾರ್ಯಕ್ರಮದ ವೇದಿಕೆ-ವ್ಯವಸ್ಥೆಯನ್ನು ಕಾಲೇಜಿನ ಪ್ರಾಚಹಾರ್ಯರು ತಾವೇ ಸ್ವತಃ ನಿಂತು ಮಾಡಿಸಿದ್ದರಂತೆ. ದೀಪಬೆಳಗುವ ಕಾರ್ಯಕ್ರಮದಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ ದೀಪ ಬೆಳಗುತ್ತಿರುವಾಗ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಭಕ್ತಿಗೀತೆಯೊಂದನ್ನು ಹಾಡಿದರಂತೆ. ತಾವೇ ಹಚ್ಚಿದ ದೀಪವನ್ನು ಮತ್ತೆ ಮತ್ತೆ ನಿಂತು ನೋಡಿದ ವಿದೇಶೀ ಗಣ್ಯರು ಅದರ ಫೋಟೊಗಳನ್ನು ತೆಗೆದು ಕೊಡುವಂತೇ ಎದುರಿದ್ದ ಛಾಯಾಗ್ರಾಹಕನಲ್ಲಿ ವಿನಂತಿಸಿದರಂತೆ, ಜೊತೆಗೆ ತಮ್ಮ ಉಪನ್ಯಾಸದಲ್ಲಿ ದೀಪದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ How Beautiful..! ಎಂದು ಕೊನೆಯವರೆಗೂ ಉದ್ಗರಿಸುತ್ತಲೇ ಇದ್ದರಂತೆ. ದೀಪದಲ್ಲಿರುವ ದೈವತ್ವದ ಅರಿವು ಅವರಿಗಾಯ್ತೋ ಇಲ್ಲವೋ ಗೊತ್ತಿಲ್ಲ ಆದರೆ ದೀಪವೆಷ್ಟು ಸುಂದರ, ಮನಮೋಹಕ ಮತ್ತು ಎಷ್ಟು ಸಂತೋಷದಾಯಕ ಎಂಬುದನ್ನು ಅವರು ಅರಿತಿದ್ದರು. ಸಭಾಂಗಣದಲ್ಲಿ ಕುಳಿತು ಅವರ ಉಪನ್ಯಾಸವನ್ನು ಕೇಳುತ್ತಿದ್ದ ದೀಪ ವಿರೋಧಿ-ಉಪನ್ಯಾಸಕರಿಗೆ ತನ್ನ ಬಗೆಗೇ ಕೀಳರಿಮೆ ಹುಟ್ಟಲು ಆರಂಭವಾಯ್ತಂತೆ; ಮಾರನೇ ದಿನದಿಂದ ದೀಪ ಹಚ್ಚುವುದು ಮೂಢನಂಬಿಕೆ ಎಂದು ಭಾಷಣಬಿಗಿಯುವುದನ್ನು ನಿಲ್ಲಿಸಿದರಂತೆ.

ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬರಾಕ್ ಓಬಾಮಾ ತಮ್ಮ ಕಚೇರಿಯಲ್ಲಿ ಭಾರತೀಯ ಪುರೋಹಿತರಿಂದ ದೀಪವನ್ನು ಹಚ್ಚಿಸಿ "ಅಗ್ನಿ ಮೀಳೇ ಪುರೋಹಿತಂ....." ಎಂಬ ವೇದಮಂತ್ರವನ್ನು ಹೇಳಿಸಿ, ಕೇಳಿ ಖುಷಿಪಟ್ಟ ವಿಚಾರ ಜಗತ್ತಿನಾದ್ಯಂತ ಅನೇಕರಿಗೆ ತಿಳಿದಿದೆ. ಎಂದಾಗ ದೀಪದ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಬೇಕು.   

ದೀಪಗಳಲ್ಲಿ ವೈವಿಧ್ಯವಿದೆ, ಜ್ಯೋತಿಗೆ ನಿಗದಿತ ಆಕರವಿಲ್ಲದಿದ್ದರೂ ದೀಪವನ್ನು ಹಚ್ಚುವ ಹಣತೆಗಳಲ್ಲಿ, ದೀಪದ ಕಾಲು-ಕಂಬಗಳಲ್ಲಿ ವೈವಿಧ್ಯಗಳನ್ನು ಕಾಣಬಹುದು. ದೀಪದ ಕಾಲು-ಕಂಬದಮೇಲೆ ಮರದ ಟೊಂಗೆಗಳಂತೇ ಟಿಸಿಲಾಗುವ ಅಕಾರಗಳಿದ್ದು ಹತ್ತಾರು ಹಣತೆಗಳು ಅಲ್ಲಿರಬಹುದು. ರಥದ ಆಕಾರದಲ್ಲಿ ಸುತ್ತಮುತ್ತ ಹಣತೆಗಳಿರುವ ದೀಪದಕಂಬವಿರಬಹುದು. ಸಾಲಾಗಿ ಹಚ್ಚುವ ದೀಪಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದಕ್ಕೆಂತಲೇ ’ದೀಪಾವಳಿ’ ಎಂದೇ ಒಂದು ಹಬ್ಬವನ್ನು ಹೆಸರಿಸಿದರು.

ಮಿಥಿಲೆಯ ಜನಕನನ್ನು ಒಮ್ಮೆ ಒಂದು ಸಂದೇಹ ಬಲವಾಗಿ ಕಾಡಿತು. ರಾಜಗುರುಗಳಾದ ಯಾಜ್ಞವಲ್ಕ್ಯರನ್ನು ಕರೆಸಿದ ಆತ ಅವರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಪುರುಷನಿಗೆ ನಿಜವಾದ ಜ್ಯೋತಿ ಯಾವುದು ಎಂಬುದೇ ಆತನ ಸಮಸ್ಯೆ. ಯಾಜ್ಞವಲ್ಕ್ಯರು ಉತ್ತರಿಸುತ್ತಲೇ ಹೋದರು: ಮೊದಲು ಆದಿತ್ಯನೆಂದರು, ಜನಕ ಕೇಳಿದ: ಹಗಲಲ್ಲಿ ಸೂರ್ಯನಿರುತ್ತಾನೆ, ರಾತ್ರಿಯಲ್ಲಿ? ಜನಕರು ಹೇಳಿದರು: "ಚಂದ್ರ."  "ಇಬ್ಬರೂ ಇಲ್ಲದಾಗ ಗುರುಗಳೇ?" -ಅರಸ ಮತ್ತೆ ಕೇಳಿದ. "ಅಗ್ನಿಯೇ ಜ್ಯೋತಿ" ಎಂದರು ಗುರು ಯಾಜ್ಞವಲ್ಕ್ಯರು. "ಗ್ನಿಯೂ ಶಾಂತವಾದಾಗ ಯಾವುದು?" ಎಂಬ ಜನಕನ ಪ್ರಶ್ನೆಗೆ "ವಾಕ್, ಕತ್ತಲೆಯಲ್ಲಿ ಯಾವ ದಿಕ್ಕಿನಿಂದ ಪರಿಚಿತ ಧ್ವನಿ ಕೇಳಿಬರುವುದೋ ಆ ಕಡೆಗೆ ಮನುಷ್ಯ ಗಮನಕೊಡುತ್ತಾನಲ್ಲಾ, ಆಗ ಅದೇ ಜ್ಯೋತಿ."  ಅಷ್ಟಕ್ಕೇ ಜನಕನಿಗೆ ಸಮಾಧಾನವಾಗಲಿಲ್ಲ, ಆತ ಮತ್ತೆ ಕೇಳಿದ: "ಒಂದೊಮ್ಮೆ ಸೂರ್ಯ, ಚಂದ್ರ, ಅಗ್ನಿ, ವಾಕ್ ಯಾವುದೂ ಇಲ್ಲವಾದರೆ, ಪುರುಷ ಮಲಗಿ ನಿದ್ರಿಸುತ್ತಿದ್ದರೆ ಅಥವಾ ಕನಸು ಕಾಣುತ್ತಿದ್ದರೆ ಆಗ ಯಾವುದು ಜ್ಯೋತಿ?" ಯಾಜ್ಞವಲ್ಕ್ಯರು ಉತ್ತರಿಸಿದರು: "ಆಗ ಪುರುಷನಿಗೆ ಒಳಗಿನ ಆತ್ಮವೇ ಜ್ಯೋತಿ."  ಜನಕ ಸುಮ್ಮನಿರುವನೇ ಆತ್ಮನ ಬಗ್ಗೆ ಕೇಳಿತಿಳಿದುಕೊಳ್ಳಲು ಆರಂಭಿಸಿದ: "ಆತ್ಮನಾದರೂ ಯಾರು? ಆತ ಹೇಗಿದ್ದಾನೆ?"

ಆತ್ಮನ ಸ್ವರೂಪವನ್ನು ಪದಗಳಲ್ಲಿ ವರ್ಣಿಸುವುದು ಬಹಳ ಕಷ್ಟ; ಅದು ಅನುಭವಕ್ಕೆ ನಿಲುಕುವ ವಿಷಯವೇ ಹೊರತು ಹೇಳಲು ಬರುವಂಥದ್ದಲ್ಲ. ಆದರೂ ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಸ್ವಲ್ಪದರಲ್ಲಿ ಹೋಲಿಕೆಯ ಮೂಲಕ ಯಾಜ್ಞವಲ್ಕ್ಯರು ತಿಳಿಸಿಕೊಟ್ಟರು. ಹೊರಗಿನ ವ್ಯವಹಾರಗಳಿಗೇ ಆಗಲಿ ಅಥವಾ ಮಾನಸಿಕ ಕ್ರಿಯೆಗಳಿಗಾಗಲೀ ಬೆಳಕೆಂಬುದು ಬೇಕೇ ಬೇಕು. ಬೆಳಕು ಸ್ವಯಂಪ್ರಕಾಶಗೊಳ್ಳುವಂಥದ್ದಿರಬೇಕು. ಅಂತಹ ಬೆಳಕೇ ಪರಬ್ರಹ್ಮ, ಆತನೇ ಪರಂಜ್ಯೋತಿ. ಸೂರ್ಯ, ಚಂದ್ರ, ನಕ್ಷತ್ರ, ಬೆಂಕಿ, ವಿದ್ಯುತ್[ಮಿಂಚು], ದೀಪ ಇವುಗಳೆಲ್ಲಾ ಪ್ರಾಕೃತಿಕವಾಗಿರುವ ಜ್ಯೋತಿಗಳು. ನಾವು ಮನೆಗಳಲ್ಲಿ ಹಚ್ಚುವ ದೀಪಗಳು ಆ ಪರಂಜ್ಯೋತಿಯ ಪ್ರತೀಕಗಳು. ಅವುಗಳನ್ನು ಪೂಜಿಸುವುದು, ಗೌರವಿಸುವುದು ಪರಂಜ್ಯೋತಿಗೆ ನಾವು ಸಲ್ಲಿಸ ಬಹುದಾದ ಪ್ರಾಥಮಿಕ ಪೂಜೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಸ್ವಸ್ತಿಕ ಬರೆಯುವುದರಿಂದ ಭೂತತ್ತ್ವವೂ ಮತ್ತು ಕಲಶ ಸ್ಥಾಪನೆಯಿಂದ ಜಲತತ್ತ್ವವೂ ಅರ್ಚಿಸಲ್ಪಡುತ್ತದೆ. ನಂದಾದೀಪಗಳ ಬೆಳಗುವಿಕೆಯಿಂದ ಜ್ಯೋತಿ ತತ್ತ್ವವು ಪೂಜೆಗೊಳ್ಳುತ್ತದೆ.

ಸಾಜ್ಯಂ  ತ್ರಿವರ್ತಿ ಸಂಯುಕ್ತಂ ವಹ್ನಿನಾಯೋಜಿತಂ ಮಯಾ |
ದೀಪಂ ಗ್ರಹಾಣ ದೇವೇಶ ತ್ರೈಲೋಕ ತ್ರಿಮಿರಾಪಃ ||

ತುಪ್ಪದೊಂದಿಗೆ ಮೂರು ಬತ್ತಿಗಳನ್ನಿಟ್ಟು, ಅಗ್ನಿಯಿಂದ ಅದನ್ನು ಹಚ್ಚಿ, ನಿನಗಾಗಿ ದೀಪವೊಂದನ್ನು ಕೊಡುತ್ತಿದ್ದೇನೆ ದೇವಾ, ಮೂರುಲೋಕವನ್ನೂ ಬೆಳಗುವ ನಿನಗಿದೋ ಅರ್ಪಣೆ ಎಂಬರ್ಥದಲ್ಲಿ ನಾವು ಆರತಿಯನ್ನು ಆರಂಭಿಸುತ್ತೇವೆ. ದೀಪಗಳ ಪೈಕಿ ಮಂಗಲಾರತಿಯೂ ಸಹ ಒಂದು. ಮಂಗಲಾರತಿ ನಡೆಯುವುದನ್ನು ನೋಡಿ ಕಣ್ದುಂಬಿಕೊಂಡು ನಮಸ್ಕರಿಸಿದರೆ ಸ್ವತಃ ಪೂಜೆಮಾಡಿದಷ್ಟೇ ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಪ್ರಾಜ್ಞರ ಅಭಿಮತ. ದೇವರಿಗೆ ಗುಡಿಯೊಂದನ್ನು ಕಟ್ಟಿಕೊಡುತ್ತೇನೆ, ದೀಪವನ್ನು ಹಚ್ಚಿ ಬೆಳಕು ತೋರಿಸುತ್ತೇನೆ, ಹಸಿವು ನಿವಾರಿಸಿಕೊಳ್ಳಲು ನೈವೇದ್ಯ ನೀಡುತ್ತೇನೆ, ತೃಷೆಗಾಗಿ ಮಧುರ ರಸಭರಿತ ಪಾನೀಯಗಳನ್ನು ನೀಡುತ್ತೇನೆ ಎಂಬುದೆಲ್ಲಾ ಕೇವಲ ನಮ್ಮ ವಿನಮ್ರ ಭಾವನೆಯಷ್ಟೆ. ಧನಿಕನೊಬ್ಬನಿಗೆ ಏನನ್ನೋ ಉಡುಗೊರೆಕೊಟ್ಟಂತೆ, ಬ್ರಹ್ಮಾಂಡಕ್ಕೇ ನಾಯಕನಾದವನಿಗೆ ಆ ಧನಿಕನಿಗೆ ಅವುಗಳನ್ನೆಲ್ಲಾ ನಾವು ಕೊಟ್ಟು ಪೂರೈಸಲಾದೀತೇ? ಅಷ್ಟಕ್ಕೂ ಅವೆಲ್ಲಾ ಅವನ ಕೊಡುಗೆಗಳೇ. ಇಲ್ಲಿ ಮತ್ತೆ ’ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ತತ್ತ್ವ ಅಡಗಿರುವುದನ್ನು ನಾವು ಗಮನಿಸಬೇಕು. ಭಗವಂತನಿಗೆ ನಮ್ಮಿಂದ ಏನೂ ಬೇಕಾಗಿಲ್ಲ, ಆದರೆ ನಾವು ಭಕ್ತಿ, ಶ್ರದ್ಧೆ ಮತ್ತು ಶರಣಾಗತಿಯಿಂದ ಕೊಡುವ ಅಲ್ಪವನ್ನೂ ಸಹ ಆತ ಗಮನಿಸಬಲ್ಲ! ಅಲ್ಪವನ್ನೇ ಬೃಹತ್ ಎಂದು ಪರಿಗಣಿಸುವುದು ಆತನ ಔದಾರ್ಯ ಮತ್ತು ಸೌಜನ್ಯ. ನಮ್ಮಿಂದ ಸಲ್ಲಿಸಲ್ಪಟ್ಟ ಗೌರವಕ್ಕೆ ಆತ ನಮ್ಮ ಮೇಲೆ ಅನುಕಂಪಿತನಾಗುತ್ತಾನೆ. "ಪರವಾಗಿಲ್ಲಪ್ಪಾ, ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾನೆ" ಎಂದುಕೊಳ್ಳುತ್ತಾನೆ! ಹಾಗೆ ಚಿಕ್ಕದೀಪವನ್ನಾದರೂ ಹಚ್ಚಿ ಪರಂಜ್ಯೋತಿಗೆ ಅದನ್ನು ಅರ್ಪಿಸುವುದರ ಮೂಲಕ ಆತನ ಅನುಗ್ರಹಕ್ಕೆ ಪಾತ್ರರಾಗುವುದು ಸಾಧ್ಯ; ಹಾಗೆ ಮಾಡುವುದು ಸುಸಂಸ್ಕೃತರ ಕರ್ತವ್ಯ. ’ತಮಸೋಮಾ ಜ್ಯೋತಿರ್ಗಮಯ’-ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದು ಇಂದು ನಿನ್ನೆಯ ಪ್ರಾರ್ಥನೆಯಲ್ಲ, ಸಹಸ್ರಾರು ವರ್ಷಗಳಿಂದ ಸಾಗಿಬಂದ ಪ್ರಾರ್ಥನೆ. ಇಷ್ಟನ್ನು ಶೋಧಿಸಿದ ಮಹನೀಯ ಮಹರ್ಷಿಗಳ ಮಹತ್ಕಾರ್ಯ ನಿಜಕ್ಕೂ ನಿತ್ಯ ಸ್ಮರಣೀಯ, ನಿತ್ಯ ಮನನೀಯ, ನಿತ್ಯ ರಮಣೀಯವೂ ಕೂಡಾ.    ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. 
 

Saturday, October 19, 2013

ಸಂಸ್ಕೃತಿ ಮತ್ತು ನಾಗರಿಕತೆಗಳ ವ್ಯತ್ಯಾಸ

ಚಿತ್ರಋಣ: ಅಂತರ್ಜಾಲ

ಸಂಸ್ಕೃತಿ ಮತ್ತು ನಾಗರಿಕತೆಗಳ ವ್ಯತ್ಯಾಸ

ಸಂಸ್ಕೃತಿ ಎಂದರೇನು? ಎಂದು ಹುಡುಕುತ್ತಾ ಹೋದರೆ ಸಂಸ್ಕಾರಗಳನ್ನು ಹೊಂದಿ ಬದುಕುವ ಪ್ರಕ್ರಿಯೆ ಎಂದು ಸರಳವಾಗಿ ಹೇಳಬಹುದಷ್ಟೆ. ನಮ್ಮ ಸ್ವಭಾವ-ನಡವಳಿಕೆಗಳನ್ನೇ ಪರ್ಯಾಯವಾಗಿ ಸಂಸ್ಕೃತಿ ಎನ್ನಬಹುದು. ಹೇಗಿದ್ದರೆ ಸರಿ, ಹೇದಿದ್ದರೆ ತಪ್ಪು, ಹೇಗೆ ನಡೆದುಕೊಳ್ಳುವುದು ಉತ್ತಮ, ಹೇಗೆ ಪರರಿಗೆ ತೊಂದರೆಯಾಗದಂತೇ ಬದುಕಬೇಕು ಎಂಬಂತಹ ಅಂಶಗಳನ್ನು ಸಂಸ್ಕೃತಿ ಬೋಧಿಸುತ್ತದೆ. ಶುಭ್ರವಾದ ಬಟ್ಟೆಯನ್ನು ಧರಿಸಿದ ಮಾತ್ರಕ್ಕೆ ಉತ್ತಮ ಸಂಸ್ಕೃತಿ ಎನ್ನಬಹುದೇ? ಅದು ಉತ್ತಮ ಸಂಸ್ಕೃತಿಯ ಒಂದು ಭಾಗವಷ್ಟೆ. ಶುಭ್ರವಾದ ಬಟ್ಟೆಯನ್ನು ತೊಟ್ಟ ವ್ಯಕ್ತಿಯ ಹೃದಯವೂ ಸಹ ಶುದ್ಧವಾಗಿರಬೇಕು. ಹೆಂಡತಿಯನ್ನು ಬಿಟ್ಟು ಮಿಕ್ಕುಳಿದ ಮಹಿಳೆಯರನ್ನೆಲ್ಲಾ ತಾಯಿಯಂತೇ ನೋಡುವುದು ನಮ್ಮ ಸನಾತನ ಸಂಸ್ಕೃತಿ. ತಾಯಿ ಎಂಬ ಕ್ರಿಯೆಯಲ್ಲಿ ಎರಡು ಪ್ರಕ್ರಿಯೆಗಳು ಅಡಕವಾಗಿವೆ: ವ್ಯಕ್ತಿ ಹೆಣ್ಣೆಂಬುದು ಭೌತಿಕವಾದ ಸತ್ಯ. ಆಕೆ ತಾಯಿ ಎಂಬುದು ಭಾವನಾತ್ಮಕ ಸತ್ಯ. ಶಿಲೆಯೆಂಬುದು ಭೌತಿಕ ಸತ್ಯ, ಗರ್ಭಗುಡಿಯಲ್ಲಿರುವ ಶಿಲೆಯ ವಿಗ್ರಹ ದೇವರೆಂಬುದು ಭಾವನಾತ್ಮಕ ಸತ್ಯ. ನಾಗರಿಕತೆಯೆಂಬುದು ಭಾವನೆಗಳ ಬಗೆಗೆ ವ್ಯಾಪಕವಾಗಿ ಹೇಳುವುದಿಲ್ಲ, ಅದು ಕೇವಲ ಶಿಷ್ಟಾಚಾರದವರೆಗೆ ಮಾತ್ರ ಬಂದು ನಿಲ್ಲುತ್ತದೆ. ಸಂಸ್ಕೃತಿ ಹಾಗಲ್ಲ, ಅದು ತನ್ನೊಳಗೆ ನಾಗರಿಕತೆಯನ್ನು ಅಡಗಿಸಿಕೊಂಡೇ ಹೆಚ್ಚುವರಿಯಾಗಿ ಭಾವನಾತ್ಮಕ ನಡೆಗಳನ್ನು ತಿಳಿಸುತ್ತದೆ.

ಅಪ್ಪ-ಅಮ್ಮಂದಿರಿಗೆ ಮತ್ತು ಹಿರಿಯರಿಗೆ ಕಾಲುಮುಟ್ಟಿ ನಮಸ್ಕಾರಮಾಡುವುದು ನಮ್ಮ ಸಂಸ್ಕೃತಿ. ಬಾಯಲ್ಲಿ ಥ್ಯಾಂಕ್ಸ್ ಎನ್ನುವುದು ವಿದೇಶೀಯರ ಸಂಸ್ಕೃತಿ. ಸಂಸ್ಕೃತಿ ಸಂಸ್ಕಾರ ವಾಚಕವಾಗಿರುತ್ತದೆ. ನಾಗರಿಕತೆ ಶಿಷ್ಟಾಚಾರ ವಾಚಕವಾಗಿರುತ್ತದೆ. ಕೆಲವೊಮ್ಮೆ ಸಂಸ್ಕೃತಿ ಮತ್ತು ನಾಗರಿಕತೆಗಳ ನಡುವೆ ಕೂದಲ ಎಳೆಯಷ್ಟು ಅಂತರವಿರುತ್ತದೆ; ಆದರೂ ಸಂಸ್ಕೃತಿ ನಾಗರಿಕತೆಗಿಂತ ಭಿನ್ನವೆಂಬುದು ಸ್ಪಷ್ಟವಾಗುತ್ತದೆ. ಸಂಸ್ಕೃತಿಯೆಂಬ ಪದ ತಡವಾಗಿ ಬಳಕೆಗೆ ಬಂದಿದ್ದರೂ ನಾಗರಿಕತೆಯೆಂಬ ಪದವೂ ಬಳಕೆಯಿಲ್ಲದ ಕಾಲದಲ್ಲಿ ಸಂಸ್ಕೃತಿ ಇತ್ತು ಎಂಬುದು ರಾಮಾಯಣ-ಮಹಾಭಾರತಗಳಿಂದ ನಮಗೆ ಗೊತ್ತಾಗುತ್ತದೆ. ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ಕೆಲವು ನಿದರ್ಶನಗಳ ಮೂಲಕ ನೋಡುತ್ತ ಹೋಗೋಣ.

ನಾಗರಿಕತೆಯ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಅದರಲ್ಲಂತೂ ಭಾರತೀಯ ಇತಿಹಾಸದಲ್ಲಿ ಹರಪ್ಪ-ಮೊಹೆಂಜೊದಾರೋ ಮೊದಲಾದೆಡೆಗಳಲ್ಲಿ ಉತ್ಖನನ ಮಾಡಿದಾಗ ಸಾವಿರಾರು ವರ್ಷಗಳ ಹಿಂದಿನ ಜೀವನಕ್ರಮಗಳ ಕುರಿತಾದ ಮಾಹಿತಿಯನ್ನು ಸಾರುವ ಬಳಕೆಯ ಪರಿಕರಗಳ ಪಳೆಯುಳಿಕೆಗಳು ಸಿಕ್ಕಿವೆ. ಸಂಸ್ಕೃತಿಗೆ ಪ್ರತ್ಯೇಕ ಆಧಾರ ಬೇಕಾಗಿಲ್ಲ. ಬಳಸಿದ ವಸ್ತುಗಳನ್ನೇ ಆಧರಿಸಿ ಸಾಮಾನ್ಯವಾಗಿ ಆ ಜನ ಹೇಗೆ ಬದುಕುತ್ತಿದ್ದರು, ಯಾವುದನ್ನೆಲ್ಲಾ ಬಳಸುತ್ತಿದ್ದರು, ಯಾವ ಉದ್ದೇಶದಿಂದ ಬಳಸಿರಬಹುದು ಇವುಗಳನ್ನೆಲ್ಲಾ ಊಹಿಸುವಾಗ ಅವರ ಸಂಸ್ಕೃತಿಯ ಬಗ್ಗೆ ಸ್ಥೂಲವಾದ ಮಾಹಿತಿ ಸಿಗುತ್ತದೆ. ಈ ಭೂಮಿಯಮೇಲೆ ಕೆಲವೊಂದು ಪ್ರದೇಶಗಳಲ್ಲಿ ನಿಗದಿತ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡು ಬದುಕುವುದು ನಾಗರಿಕತೆ ಎನ್ನಿಸಿದೆ. ಹಾಗೆ ಬದುಕುವಾಗ ಸಹಜೀವಿಗಳಿಗೆ, ಪ್ರಕೃತಿಗೆ ತೊಂದರೆಯಾಗದಂತೇ ಹೇಗೆ ಬದುಕಬೇಕು ಎಂಬ ನಿಗದಿತ ವ್ಯವಸ್ಥೆಗಳನ್ನು ಪರಿಕಲ್ಪಿಸುವುದು ಸಂಸ್ಕೃತಿಯೆನಿಸುತ್ತದೆ.

ರಾಮಾಯಣದಲ್ಲಿ ದಶರಥ ಮಹಾರಾಜ ಮಡದಿ ಕೈಕೇಯಿಗೆ ವರವನ್ನು ಕೊಟ್ಟಿದ್ದ. ಸಮಯಬಂದಾಗ ಪಡೆದ ವರಗಳನ್ನು ಬಳಸಿಕೊಳ್ಳುವುದಾಗಿ ಆಕೆ ಹೇಳಿದ್ದಳು. ಅಶ್ವಮೇಧಯಾಗದ ಜೊತೆ ಪುತ್ರಕಾಮೇಷ್ಠಿಯಾಗವನ್ನು ಪೂರೈಸಿ ತನ್ಮೂಲಕ ಪ್ರಾಪ್ತವಾದ ಪಾಯಸವನ್ನು ಮೂರು ರಾಣಿಯರಿಗೂ ಹಂಚಿ, ರಾಣಿಯರಿಂದ ನಾಲ್ಕು ಮಕ್ಕಳನ್ನು ಪಡೆದ. ನಾಲ್ಕೂ ಮಕ್ಕಳು ಶುಕ್ಲಪಕ್ಷದ ಬಿದಿಗೆಯ ಚಂದ್ರಮನಂತೇ ಬೆಳೆದರು. ಪ್ರಾಪ್ತವಯಸ್ಕರಾಗಿ ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸಿ, ಎಲ್ಲರ ವಿವಾಹವೂ ನೆರವೇರಿತು. ನಂತರ ಯುವರಾಜನನ್ನು ಆರಿಸಿ ಪಟ್ಟಾಧಿಕಾರ ಕೊಡುವ ಹಂತಕ್ಕೆ ದಶರಥ ನಡೆದಾಗ, ಮಂಥರೆ ಎಂಬ ಸೇವಕಿ ಕೈಕೇಯಿಗೆ ಕಿವಿಯೂದಿದಳು-ಅದು ಮಂಥರೆಯ ವಿಕೃತಿ. ಅದರಿಂದ ವಿವೇಚನೆ ಕಳೆದುಕೊಂಡು  ಸ್ವಾರ್ಥಪರಳಾದ ಕೈಕೇಯಿ, ಗಂಡ ಕೊಟ್ಟಿದ್ದ ವರಗಳನ್ನು ಆಗ ಕೇಳಿದಳು. ವರಗಳ ಬಳಕೆಯಲ್ಲಿ ರಾಮ ಹದಿನಾಲ್ಕುವರ್ಷ ವನವಾಸಕ್ಕೆ ತೆರಳಬೇಕೆಂಬುದು ಒಂದು ಬೇಡಿಕೆ. ರಾಣಿಯ ಬೇಡಿಕೆ ಕೇಳಿ ದಶರಥ ಕಂಗೆಟ್ಟ, ದಿಗ್ಮೂಢನಾದ. ಮಗ ಶ್ರೀರಾಮನಲ್ಲಿ ವಿಷಯವನ್ನಾತ ಪ್ರಸ್ತಾಪಿಸಲಾರದೇ ಹೋದ. ಆದರೆ ತಂದೆಯ ಮೂಕ ಆಜ್ಞೆಯನ್ನು ಮಗ ತಂದೆಯ ಬಾಯಿಂದ ಕೇಳದೇ ಅರಿತು ನಡೆಸಲು ಉದ್ಯುಕ್ತನಾದ. ಇಲ್ಲಿ ಮೂರು ಸಂಗತಿಗಳನ್ನು ಗಮನಿಸಬೇಕು. ಮುಪ್ಪಿನ ರಾಜ ಯುವರಾಜನನ್ನು ಆಯ್ಕೆಮಾಡಿ ಪಟ್ಟಾಭಿಷೇಕ ಮಾಡುವುದು ನಾಗರಿಕತೆ. ಯಾರನ್ನು ಆಯ್ಕೆಮಾಡಬೇಕು ಎಂಬುದು ಸಂಸ್ಕೃತಿ. ರಾಣಿಗೆ ಕೊಟ್ಟ ವರಗಳನ್ನು ಆಕೆ ತನ್ನ ಹಕ್ಕಿನಿಂದ ಉಪಯೋಗಿಸಿದ್ದು ನಾಗರಿಕತೆ, ಆಯಕಟ್ಟಿನ ಸಂದರ್ಭದಲ್ಲಿ ದಶರಥನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಅವಳ ವಿಕೃತಿ. ಕೊಟ್ಟ ವರಗಳನ್ನು ಇಲ್ಲವೆಂದು ತಿರಸ್ಕರಿಸದೇ ಮಗ ಶ್ರೀರಾಮನಲ್ಲಿ ನಡೆದುದನ್ನು ಹೇಳಲೂ ಆರದೇ ಇದ್ದ ದಶರಥನ ಸ್ಥಿತಿ-ಅವನ ಸಂಸ್ಕೃತಿ. ಅಪ್ಪ ಹೇಳದಿದ್ದರೂ ಅಪ್ಪನ ಮನವನ್ನರಿತು ಅದನ್ನೇ ಆಜ್ಞೆಯೆಂದು ಸ್ವೀಕರಿಸಿ ರಾಮ ಕಾಡಿಗೆ ಹೋದದ್ದು ಸಂಸ್ಕೃತಿ. ಸಂಸ್ಕೃತಿ-ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಆಗಿರಬಹುದು.

ದೇಶದ ರಾಜಕೀಯದಲ್ಲಿರುವ ಜನ ದಾಖಲೆಗಳಲ್ಲಿ ಲಂಚವನ್ನು ಸ್ವೀಕರಿಸದೇ ಉತ್ತಮರಾಗಿ ಕಾಣುವುದು  ನಾಗರಿಕತೆಯನ್ನು ಹೇಳುತ್ತದೆ; ಕದ್ದುಮುಚ್ಚಿ ಲಂಚವನ್ನು ಸ್ವೀಕರಿಸುವುದು ಅವರ ಸಂಸ್ಕೃತಿಯನ್ನು ಹೇಳುತ್ತದೆ.

ಯುದ್ಧಭೂಮಿಯ ಈ ಉದಾಹರಣೆ ನೋಡಿ :

ಯುದ್ಧಭೂಮಿಯಲ್ಲಿ ಎರಡೂ ಕಡೆಯ ಸೈನ್ಯಗಳ ನಡುವೆ ಘನಘೋರ ಕಾಳಗ ನಡೆಯುತ್ತಿತ್ತು. ಸೈನಿಕನೊಬ್ಬ ತನ್ನ ಸಹೋದ್ಯೋಗಿ-ಸ್ನೇಹಿತ ದೂರದಲ್ಲಿ ಕಂದಕದಲ್ಲಿ ಕೆಳಗೆ ಬೀಳುತ್ತಿರುವುದನ್ನು ನೋಡಿದ. ಕಂದಕದಲ್ಲಿ ಬಿದ್ದ ಸೈನಿಕನ ಮೇಲೆ ಶತ್ರುಗಳು ಗುಂಡಿನ ಸುರಿಮಳೆಗರೆಯುತ್ತಲೇ ಇದ್ದರು.

ನೋಡುತ್ತಿದ್ದ ಈ ಸೈನಿಕ ತನ್ನ ಲೆಪ್ಟಿನಂಟ್ ರಲ್ಲಿ "ಎರಡು ಕಂದಕಗಳ ನಡುವೆ ಜನರಿಲ್ಲದ ಜಾಗದಲ್ಲಿಳಿದು  ಹೋಗಿ ನನ್ನ ಸ್ನೇಹಿತನನ್ನು ಕರೆತರಬಹುದೇ?" ಎಂದು ಕೇಳಿದ.

"ಆಗಬಹುದು, ಆದರೆ ಹಾಗೆ ಮಾಡುವುದು ಫಲಕಾರಿ ಎಂದು ನನಗೇನೂ ಅನಿಸುವುದಿಲ್ಲ, ನಿನ್ನ ಸ್ನೇಹಿತ ಶತ್ರುಗಳ ಗುಂಡೇಟಿನಿಂದ ಈಗಾಗಲೇ ಮಡಿದಿರಬಹುದು. ನೀನು ಅಲ್ಲಿಯೇ ಜೀವ ತೆರುವ ಪ್ರಸಂಗ ಕೂಡ ಬರಬಹುದು."

ಲೆಪ್ಟಿನೆಂಟ್ ಒಪ್ಪಿಗೆ ಕೊಟ್ಟಿದ್ದನ್ನು ಕೇಳಿದ್ದು ಬಿಟ್ಟರೆ, ಮತ್ತಿನ್ನೇನೋ ಹೇಳಿದ್ದು ಈ ಸೈನಿಕನಿಗೆ ಕೇಳಲೇ ಇಲ್ಲ ಎನ್ನುವ ರೀತಿಯಲ್ಲಿ ಈ ಸೈನಿಕ ಕಂದಕದಲ್ಲಿ ಬಿದ್ದ ತನ್ನ ಸ್ನೇಹಿತನತ್ತ ನಡೆದೇಬಿಟ್ಟ. ಪವಾಡದ ರೀತಿಯಲ್ಲಿ ಸ್ನೇಹಿತನಿದ್ದೆಡೆ ತಲ್ಪುವಲ್ಲಿ ಈತ ಯಶಸ್ವಿಯೂ ಆದ! ಕೆಳಗೆ ಬಿದ್ದಿದ್ದ ಸ್ನೇಹಿತನನ್ನೆತ್ತಿ ಹೆಗಲಮೇಲೆ ಹಾಕಿಕೊಂಡು ಮರಳಿ ಅತಿ ವೇಗದಲ್ಲಿ ತಾವಿರುವ ಕಂದಕದೆಡೆಗೆ ಧಾವಿಸಿದ. ಅವರಿಬ್ಬರೂ ತಮ್ಮ ಕಂದಕದ ತಳಭಾಗದ ವರೆಗೆ ಪರಸ್ಪರ ಉರುಳುತ್ತ ಹೋದರು. ಅಲ್ಲಿದ್ದ ಅಧಿಕಾರಿ [ಲೆಪ್ಟಿನಂಟ್] ಗಾಯಾಳುವಾಗಿದ್ದ ಸೈನಿಕನೆಡೆಗೆ ಸರಿಯಾಗಿ ನೋಡಿದ.

"ನಾನು ಹೇಳಿದ್ದೆನಲ್ಲ...ಏನೂ ಪ್ರಯೋಜನವಿಲ್ಲ ಎಂದು, ನಿನ್ನ ಸ್ನೇಹಿತ ಸತ್ತಿದ್ದಾನೆ, ನೀನು ಮಾರಣಾಂತಿಕ ಗಾಯಗಳಿಂದ ಬಳಲುತ್ತಿದ್ದೀಯ."

"ಆದರೂ ಪ್ರಯೋಜನವಿತ್ತು ಸರ್."

"ಪ್ರಯೋಜನ ಎಂದರೇನರ್ಥ? ನಿನ್ನ ಸ್ನೇಹಿತ ಸತ್ತಿದ್ದಾನಲ್ಲ."

"ಹೌದು ಸರ್, ಆದರೂ ಅದು ಪ್ರಯೋಜನಕ್ಕೆ ಬಂತು ಯಾಕೆಂದರೆ ನಾನು ಅಲ್ಲಿಗೆ ಹೋದಾಗ ನನ್ನ ಸ್ನೇಹಿತ ಇನ್ನೂ ಜೀವದಿಂದಿದ್ದ. ಕೊನೆಯದಾಗಿ ಆತ "ಜಿಮ್, ನೀನು ಬರುತ್ತೀಯ ಎಂಬುದು ನನಗೆ ಗೊತ್ತಿತ್ತು" ಎಂದು ಹೇಳಿದ್ದನ್ನು  ಕೇಳಿದ ಸಂತೃಪ್ತಿ ನನಗಿದೆ."

ಎಷ್ಟೋ ಸಲ ಜೀವನದಲ್ಲಿ, ಮಾಡುವ ಕೆಲಸಗಳು ತಪ್ಪೋ ಸರಿಯೋ, ಅದನ್ನು ನೋಡುವ ದೃಷ್ಟಿಯಲ್ಲಿ ಅದು ನಿರ್ಧಾರವಾಗುತ್ತದೆ. ನಿಮ್ಮಲ್ಲಿರುವ ಉತ್ಸಾಹದ ರೆಕ್ಕೆಗಳನ್ನು ಅಗಲಿಸಿಕೊಂಡು ನಿಮ್ಮ ಹೃದಯ ಮಾಡು ಎಂದು ಹೇಳುವ ಕೆಲಸವನ್ನು ಮಾಡಲು ಮುಂದಾಗಿ, ಹಾಗೆ ಮಾಡಿದರೆ, ಹೃದಯ ಚೀರಿದರೂ ನಾನದನ್ನು ಮಾಡಲಿಲ್ಲವಲ್ಲ ಎಂಬ ಪಶ್ಚಾತ್ತಾಪ ಇರುವುದಿಲ್ಲ. ಜಗತ್ತೆಲ್ಲಾ ನಿಮ್ಮನ್ನಗಲಿ ದೂರವಿಡುವಾಗ ನಿಮ್ಮ ಜೊತೆಗಾರನಾಗಿ ನಿಲ್ಲುವವನೇ ನಿಜವಾದ ಗೆಳೆಯ. ಯುದ್ಧ ಯಾರು ಉತ್ತಮರೆಂಬುದನ್ನು ನಿರ್ಧರಿಸುವುದಿಲ್ಲ, ಯಾರು ಉಳಿದುಕೊಂಡರು ಎಂಬುದನ್ನಷ್ಟೇ ತೋರಿಸುತ್ತದೆ. ಯಾರು ಉತ್ತಮರು ಎಂದು ತೋರಿಸುವುದು ಸಂಸ್ಕೃತಿ, ಯಾರು ಗೆದ್ದರು ಎಂದು ತೋರಿಸುವುದು ನಾಗರಿಕತೆ.

ಜೋಗ್ ಫಾಲ್ಸ್ ಸಹಜವಾಗಿ ಇದ್ದಿದ್ದು ಪ್ರಕೃತಿ. ವಿಶ್ವೇಶ್ವರಯ್ಯನವರು ಜೋಗ್ ಫಾಲ್ಸ್ ಕಂಡಾಗ ಎಲ್ಲರಂತೇ ಮೂಕವಿಸ್ಮಿತರಾಗದೇ ವಿಭಿನ್ನ ರೀತಿಯಿಂದ ಅದನ್ನು ಬಳಸಿಕೊಳ್ಳಲು ಚಿಂತಿಸಿರುವುದು ಶ್ರೇಷ್ಠ ಸಂಸ್ಕೃತಿ. ಅಣೆಕಟ್ಟೆ ಕಟ್ಟಿ ನದಿಯ ನೀರನ್ನು ಬಳಸಿಕೊಳ್ಳುವುದು ನಾಗರಿಕತೆ.

ಸಂಸ್ಕೃತಿ ಎಂಬುದು ಕೇವಲ ಔಪಚಾರಿಕ ಆಚರಣೆಯಲ್ಲ. ಅದು ಕೇವಲ ಮನಸ್ಸಿಗೆ ಸಂಬಂಧಿಸಿದ ವ್ಯವಹಾರವಲ್ಲ, ಕೇವಲ ದೇಹಕ್ಕೆ ಸಂಬಂಧಿಸಿದ ವ್ಯವಹಾರವೂ ಅಲ್ಲ. ಹಾಗಾದರೆ ದೇಹ-ಮನಸ್ಸುಗಳ ಸಂಗಮದ ವ್ಯವಹಾರವೇ ಎಂದರೆ ಅಷ್ಟಕ್ಕೇ ಸೀಮಿತವೂ ಅಲ್ಲ. ಮನಸ್ಸು-ಬುದ್ಧಿ-ಚಿತ್ತ-ಅಹಂಕಾರ ಎಂಬ ನಾಲ್ಕುಸ್ತರಗಳ ಮನೋಭೂಮಿಕೆಯ ಜೊತೆಗೆ ದೈಹಿಕವಾಗಿಯೂ ಒಪ್ಪಿ ಆಚರಿಸುವ ಜೀವಾತ್ಮನ ನಡೆಗಳು ಸಂಸ್ಕೃತಿಯೆನಿಸುವುದು. ಸಂಸ್ಕೃತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರಬಹುದು, ಆದರೆ ಸನಾತನ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಸ್ವಹಿತದೊಡನೆ ಪರಹಿತವನ್ನೂ ಲೋಕಹಿತವನ್ನೂ ಬಯಸಿ, ಅದಕ್ಕೆ ಒಪ್ಪಿತವಾಗಿ ನಡೆದು ಜೀವನ ನಡೆಸುವುದು-ಇದು ಜಗತ್ತಿನ ಇನ್ನಾವ ದೇಶದಲ್ಲೂ ಕಾಣದ ವಿಶೇಷ. 

ತಾನು ಬರೆದದ್ದನ್ನೇ ಸತ್ಯ ಮತ್ತು ಅಂತಿಮವೆಂದು ಓದಲು ಹೇಳುವುದು ಇಂದಿನ ಕೆಲವು ಬರಹಗಾರರ ವಿಕೃತಿ. ಕುಮಾರವ್ಯಾಸನಂತಹ ಮಹಾಕವಿಗಳು ಹೇಗೆ ನಡೆದುಕೊಂಡರು ಎಂದೊಮ್ಮೆ ನೋಡೋಣ:

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮರೆವುದು ಲೇಸ ಸಂಚಿಪುದು |
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರ ನಾರಾಯಣನ ಕಿಂಕರಗೆ ||

ಈ ಮಹಾಕವಿ ಅದೆಷ್ಟು ವಿನಯ ಗುಣ ಸಂಪನ್ನ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಕೃತಿಯನ್ನೋದಿದ ಪಂಡಿತರು, ಪದ ನಿಷ್ಣಾತರು, ಕವಿ-ಕಾವ್ಯ ಕೋವಿದರು, ಸೂಕ್ತಿಕಾರರು, ಭಾವುಕರು ಏನಾದರೂ ತಪ್ಪು ಕಂಡರೆ ತಿದ್ದಿ, ಕ್ಷಮಿಸಿ, ಈ ವೀರನಾರಾಯಣನ ಕಿಂಕರನಿಗೆ ಬುದ್ಧಿಹೇಳಿ ಎಂಬ ಕೋರಿಕೆಯಲ್ಲಿ ಅನನ್ಯಭಾವ ಕಾಣುತ್ತದೆ. ಬರೆಯುವುದು ನಾಗರಿಕತೆ. ಬರಹಗಳಲ್ಲಿ ಮೌಲಿಕವಾದುದನ್ನು ಬರೆಯುವುದು ಸಂಸ್ಕೃತಿ. ಸಂಸ್ಕೃತದ ವ್ಯಾಸಮಹಾಭಾರತವನ್ನೇ ಆಧರಿಸಿ ಕನ್ನಡದಲ್ಲಿ ಅದನ್ನು ಬರೆಯಹೊರಟ ಕುಮಾರವ್ಯಾಸನಿಗೆ ಪದಗಳ ಕೊರತೆಯಿರಲಿಲ್ಲ. ಭಾಮಿನಿ ಷಟ್ಪದಿಯೆಂಬ ಹೊಸದೊಂದು ಶೈಲಿಯನ್ನು ಆತನೇ ಹುಟ್ಟುಹಾಕಿದನೆನ್ನಬೇಕು. ಪ್ರಾಸಬದ್ಧವಾಗಿ, ಸರ್ವಾಂಗಶುದ್ಧವಾಗಿ ಬರೆದಿದ್ದರೂ, ಅಹಂಕಾರ ರಹಿತನಾಗಿ, ತನ್ನ ಕಾವ್ಯದಲ್ಲಿ ತಪ್ಪುಗಳಿದ್ದರೆ ಅರಿತವರು, ಕಾವ್ಯಾಸಕ್ತ ಬುಧಜನರು ಅದನ್ನು ತಿದ್ದಬಹುದು ಎಂಬ ಸ್ವಾತಂತ್ರ್ಯವನ್ನು ಕೊಡುತ್ತಾನೆ!-ಇದು ಕುಮಾರವ್ಯಾಸನ ಉತ್ಕೃಷ್ಟ ಸಂಸ್ಕೃತಿಯಾಗಿದೆ.

ಮಹಾತ್ಮ-ಕವಿ ಡಿವಿಜಿ ತಮ್ಮ ಕೃತಿಗಳುದ್ದಕ್ಕೂ ಸಂಸ್ಕೃತಿಯ ಬಗ್ಗೆ ಅಪಾರವಾಗಿ ಹೇಳುತ್ತಾರೆ. ಡಿವಿಜಿಯವರು ಬದುಕಿದ ರೀತಿ ಒಂದು ಅತ್ಯುಕೃಷ್ಟ ಸಂಸ್ಕೃತಿ. ಅವರು ತಮ್ಮ ಸಾಹಿತ್ಯದಿಂದ ಸಮಾಜಸೇವೆ ಮಾಡಿದರು. ಬಹುಮೌಲ್ಯಯುತವಾದ ಮತ್ತು ಸಾರ್ವಕಾಲಿಕವಾದ ಅವರ ಬರಹಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ತಮ್ಮ ಜೀವನದ ಕಡು ಬಡತನದ ಅನಿವಾರ್ಯತೆಗಳಲ್ಲೂ ಅವರು ಸಾಹಿತ್ಯವನ್ನು ಮಾರಲಿಲ್ಲ. ಮೈಸೂರು ಸರಕಾರಕ್ಕೆ ಕೊಡುತ್ತಿದ್ದ ತಮ್ಮ ಸಲಹೆಗಳಿಗೆ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರು ಕೊಡಿಸಿದ ಚೆಕ್ಗಳನ್ನೂ ಸಹ ಅವರು ನಗದಾಗಿ ಪರಿವರ್ತಿಸಿಕೊಳ್ಳಲಿಲ್ಲ! ರಾಜ್ಯದ/ರಾಷ್ಟ್ರದ ಹಿತ ಕಾಪಾಡುವುವ ಸಲುವಾಗಿ ಆಳರಸರಿಗೆ ನೀಡಿದ ಸಲಹೆಗೆ ಪ್ರತಿಫಲ ಬೇಡವೆಂಬುದೇ ಅವರ ಅಭಿಪ್ರಾಯವಾಗಿತ್ತು. ಅವರ ಜೀವನಚರಿತ್ರೆ ನಿಜಕ್ಕೂ ಎಲ್ಲರಿಗೊಂದು ಸಂಸ್ಕೃತಿ ಬೋಧಕ ಪಾಠವಾಗಿದೆ. ನಡೆಯಲ್ಲೂ ನುಡಿಯಲ್ಲೂ ಏಕರೀತಿಯನ್ನು ತೋರಿದ ಅವರು ನುಡಿದಂತೆಯೇ ನಡೆದುಕೊಳ್ಳುವ ಸ್ವಭಾವದರಾಗಿದ್ದರು. ಬಡತನವೆಂಬ ಕಾರಣಕ್ಕೆ ಯಾರೋ ಹಣಕೊಟ್ಟರೆ, ಬಂಗಾರಕೊಟ್ಟರೆ ಸ್ವೀಕರಿಸುವ ಮನೋಭಾವ ಅವರಲ್ಲಿ ಇರಲೇ ಇಲ್ಲ; ಬದಲಾಗಿ ತನ್ನಲ್ಲಿರುವುದನ್ನು ಅರ್ಹರೊಡನೆ ಹಂಚಿಕೊಂಡು ಬದುಕಿದ ಜೀವ ಅದು. ಡಿವಿಜಿಯವರು ತಮ್ಮ ಕೃತಿಗಳಲ್ಲಿ ಸಾರುತ್ತಾರೆ:

"ಕಾಡಿನಲ್ಲಿರುವ ಸಂಪಿಗೆ, ಕೇದಿಗೆ, ಮಲ್ಲಿಗೆ, ಪಾದರಿ, ಸುರಗಿ, ಹೊನ್ನೆ ಮುಂತಾದ ನೂರಾರು ಜಾತಿಯ ವನಪುಷ್ಪಗಳ ಸೌರಭಗಳನ್ನು ಗಾಳಿಯು ಒಂದಾಗಿ ಬೆರೆಸಿ , ದೂರದಲ್ಲಿರುವವನಿಗೆ  ಹೆಸರಿಸಲಾಗದ ಒಂದು ವಿಜಾತೀಯ ಪರಿಮಳಭಾರವನ್ನು ಬೀರುತ್ತದೆ. ಕಾಡುಬೆಟ್ಟಗಳಲ್ಲಿರುವ ಹಲವು ಹದಿನಾರು ಮೂಲಿಕೆಗಳ ಸಾರವನ್ನು ವೈದ್ಯನು ಪುಟಪಾಕದಲ್ಲಿರಿಸಿ ಒಂದೇ ಹೊಸ ಸಂಜೀವಿನಿ ರಸವನ್ನಾಗಿ ಇಳಿಸುತ್ತಾನೆ. ಸಂಸ್ಕೃತಿ ಎಂಬುದು ಹಾಗೆಯೇ. ಸಂಗೀತ ಸಾಹಿತ್ಯಾದಿ ನಾನಾ ಕಲಾನುಭವಗಳ ಮತ್ತು ನಾನಾ ಶಾಸ್ತ್ರ ಶಿಕ್ಷಣಗಳ ಫಲಿತಾಂಶಗಳ ಸಾರ ಸಮ್ಮೇಳನ ಅದು.

ಸಂಸ್ಕೃತಿಯು ಒಂದು ಪುರಾತನಕಾಲದ ಆಲದ ಮರದಂತೆ. ಆಮರದ ಪಾದವು ಒಂದೆರಡು ಗಜ ಅಗಲದಷ್ಟು ನೆಲದಲ್ಲಿ ನಿಂತು ಆ ಒಂದೇ ಕಡೆ ಸ್ಥಿರವಾಗಿಬಿಡುತ್ತದೆ. ಅದರ ತಲೆಯ ಕಡೆಯಾದರೋ, ನೂರಾರು ಶಾಖೋಪಶಾಖೆಗಳು  ಅಂತರಿಕ್ಷದ ಎಂಟುದಿಕ್ಕುಗಳಿಗೂ ವಿಸ್ತಾರವಾಗಿ ಚಾಚಿಕೊಂಡು ನೂರಾರು ಪ್ರದೇಶಗಳ ಗಾಳಿಯಿಂದ ಸಾರವನ್ನು ಹೀರಿಕೊಳ್ಳುತ್ತ  ಸಾವಿರಾರು ತರದ ಪಕ್ಷಿಗಳಿಗೆ ಆಶ್ರಯವಾಗಿರುತ್ತದೆ. ಮೂಲದಲ್ಲಿ ಅದು ನಿಯತ, ಶಿರೋಭಾಗದಲ್ಲಿ ಅದು ಯಥೇಷ್ಟ. ಸಂಸ್ಕೃತಿಯೂ ಅದರಂತೆಯೇ, ಮೂಲದಲ್ಲಿ ಅದು ಏಕವರ್ಗದ್ದು, ಏಕ ಸಮಾಜದ್ದು, ಏಕ ದೇಶದ್ದು. ಆದರೆ ಫಲಪರಿಣಾಮದಲ್ಲಿ ಅದು ಬಹುವರ್ಗ ಸಂಸರ್ಗದ್ದು, ನಾನಾ ಸಮಾಜ ಸಂಘಟಿತವಾದದ್ದು, ವಿಶ್ವವಿಸ್ತಾರವಾದದ್ದು. ಅದು ವ್ಯಷ್ಟಿ[ವ್ಯಕ್ತಿ]ಯನ್ನು ಸಮಷ್ಟಿ[ಸಮಾಜ]ದೊಡನೆ ಕೂಡಿಸುತ್ತದೆ. ಅದರ ಒಂದು ಕೊನೆ ವ್ಯಕ್ತಿ ಇನ್ನೊಂದು ಕೊನೆ ವಿಶ್ವ-ಪ್ರಪಂಚ..." 

ಯಾವುದು ಸನಾತನ ಜೀವನ ಧರ್ಮವೆಂದು ತಿಳಿಯುತ್ತೇವೋ ಅದು ಸಂಸ್ಕೃತಿಯ ಒಂದು ಅಂಶ; ಭಾರತದಲ್ಲಿ ಅದು ಪೂರ್ಣಪ್ರಮಾಣದ ಧರ್ಮ ಎನಿಸಿಕೊಂಡರೆ ಅನ್ಯ ರಾಷ್ಟ್ರಗಳಲ್ಲಿ ಅದು ನಮ್ಮ ಸಂಸ್ಕೃತಿಯಾಗಿ ಗೋಚರಿಸುತ್ತದೆ. ನಮ್ಮಲ್ಲಿ ಕಲೆ-ಸಾಹಿತ್ಯ-ಸಂಗೀತ-ಶಿಲ್ಪ-ವಿಜ್ಞಾನ ಮುಂತಾದ ಇತರ ಸಂಸ್ಕೃತಿಕ ಅಂಶಗಳು ಧರ್ಮಕ್ಕೆ ಅಧೀನವಾಗಿವೆ. ಧರ್ಮದ ಮೂಲಗುರಿಯನ್ನು ಸೇರಲು ಸಾಧನಗಳಾಗಿವೆ. ಧರ್ಮದ ಮೂಲ ಆದರ್ಶಗಳನ್ನು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಅಭಿವ್ಯಕ್ತಗೊಳಿಸುವ ಮಾರ್ಗಗಳಾಗಿವೆ. ಇಲ್ಲಿ ಧರ್ಮವೇ ಪ್ರಧಾನ, ಧರ್ಮವೇ ಗುರು, ಉಳಿದವು ಪರಿವಾರ. ಆದರಿಂದಲೇ ಸನಾತನ ಸಂಸ್ಕೃತಿಯನ್ನು ಧರ್ಮ ಪ್ರಧಾನವೆಂದು ಪರಿಗಣಿಸಲಾಗುತ್ತದೆ.

ನಾಗರಿಕತೆ ಎಂಬ ಪದದ ಮೂಲವನ್ನು ಹುಡುಕಿದರೆ, ಮೊದಲೇ ಹೇಳಿದ ಹಾಗೇ ಅದು ನಗರವಾಸಿಗಳು ಬದುಕುವ  ಬಗೆ. ಸಿಟಿ ಎಂದರೆ ನಗರ, ಸಿಟಿಝೆನ್ ಎಂದರೆ ನಾಗರಿಕ, ಸಿವಿಲೈಸೇಶನ್ ಎಂದರೆ ನಾಗರಿಕತೆ-ಇದು ಮನುಷ್ಯ ಮಾಡಿಕೊಂಡ ಕಲ್ಪನೆಗಳು. ನಗರಗಳನ್ನು ಬಿಟ್ಟು ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ನಾಗರಿಕತೆಯಿಲ್ಲವೇ? ಖಂಡಿತಕ್ಕೂ ಉಂಟು. ಆದರೆ ಹಿಂದೆ ಹಳ್ಳಿಗಳ ವಾಸವನ್ನು ಅನಾಗರಿಕವೆಂದು ಆಂಗ್ಲ ಜನ ಪರಿಗಣಿಸಿದ್ದರ ಪರಿಣಾಮವಾಗಿ ’ನಾಗರಿಕತೆ’ ಅಥವಾ ಸಿವಿಲೈಸೇಶನ್ ಎಂಬ ಪದ ಹುಟ್ಟಿಕೊಂಡಿತು ಎನ್ನಬಹುದು.

ಸಂಸ್ಕೃತಿಯೆಂಬುದು ಪ್ರತೀ ವ್ಯಕ್ತಿಯ ಅಂತರಂಗದ ಶೀಲ ಅಥವಾ ಸಂಪತ್ತು ನಾಗರಿಕತೆಯೆಂಬುದು ಸಮಾಜದ ಶೀಲ ಅಥವಾ ಬಾಹ್ಯ ಸಂಪತ್ತು. ಹಣ್ಣೊಂದರ ಒಳಭಾಗವನ್ನು ಸಿಪ್ಪೆರಕ್ಷಿಸುತ್ತಿರುತ್ತದೆ; ಒಳಭಾಗ ಸಂಸ್ಕೃತಿ ಮತ್ತು ಸಿಪ್ಪೆಯೆನಿಸಿದ ಭಾಗ ನಾಗರಿಕತೆ. ಸಂಸ್ಕೃತಿ ಮತ್ತು ನಾಗರಿಕತೆಗಳು ಗಿಡ ಮತ್ತು ಬಳ್ಳಿಗಳಂತೇ ಒಂದನ್ನು ಇನ್ನೊಂದು ಆಶ್ರಯಿಸಿದೆ. ಮಾವಿನ ಮರವೊಂದರಲ್ಲಿ ಹಣ್ಣುಗಳು ಸಿಗಬೇಕಾದರೆ, ತೆಂಗಿನಮರವೊಂದರಲ್ಲಿ ಕಾಯಿ ಸಿಗಬೇಕಾದರೆ ಅದನ್ನು ಅನೇಕವರ್ಷಗಳಕಾಲ ನೀರು, ಗೊಬ್ಬರ ಮೊದಲಾದವುಗಳನ್ನಿತ್ತು ರಕ್ಷಣೆಮಾಡಿ ಕಾಲಕಾಲಕ್ಕೆ ಮಾಡಬೇಕಾದ ಕೃಷಿಕೆಲಸಗಳನ್ನು ನಡೆಸಬೇಕಾಗುತ್ತದೆ. ಅದರ ಫಲವನ್ನು ಅನೇಕ ವರ್ಷಗಳ ನಂತರ ನಾವು ಕಾಣುತ್ತೇವೆ. ಸಂಸ್ಕೃತಿ ಮತ್ತು ನಾಗರಿಕತೆಗಳೂ ಸಹ ಯಾವುದೋ ಕಾಲಘಟ್ಟದಲ್ಲಿ ವ್ಯಕ್ತಿಯೊಬ್ಬ ಮಾಡಿದ ನೀತಿಗಳಲ್ಲ; ಬಹಳವರ್ಷಗಳಲ್ಲಿ ಅನೇಕಜನರು ಬದುಕಿದ ರೀತಿಗಳನ್ನು ಆಧಾರವಾಗಿ ಸ್ವೀಕರಿಸಿ, ಪರಿಷ್ಕರಿಸಿ, ಅನುಭವಗಳನ್ನು ಶೇಖರಿಸಿ, ಅವುಗಳಲ್ಲಿ ಉತ್ತಮವಾದ ಅಂಶಗಳನ್ನು ಆಯ್ದುಕೊಂಡು ಅನುಸರಿಸುವುದು ಸಂಸ್ಕೃತಿಯಾಗುತ್ತದೆ. ಸಂಸ್ಕೃತಿಯನ್ನು ರಕ್ಷಿಸುವುದು ನಾಗರಿಕತೆಯಾಗುತ್ತದೆ.

ಒಳ್ಳೆಯೆ ದರ್ಜಿ, ಮೋಚಿ ಮತ್ತು ನಾಪಿತ ಮೂರು ಜನರಿದ್ದರೆ ಹೊರಗಿನಿಂದ ಎಂಥವರನ್ನಾದರೂ ಚೆನ್ನಾಗಿ ಕಾಣುವಂತೇ ಮಾಡಬಹುದೆಂದು ಕವಿ ಕುವೆಂಪು ಹೇಳುತ್ತಾರೆ. ದರ್ಜಿ ಒಳ್ಳೆಯ ಬಟ್ಟೆಗಳನ್ನು ಹೊಲಿದುಕೊಡುತ್ತಾನೆ, ಮೋಚಿ ಸುಂದರ ಚಪ್ಪಲಿಗಳನ್ನು ತಯಾರಿಸಿಕೊಡುತ್ತಾನೆ, ನಾಪಿತ ನೆರೆತ ಕೂದಲನ್ನು ಕತ್ತರಿಸಿ ಹಿತಮಿತವಾಗಿ ಕಾಣುವಂತೇ ಮಾಡುತ್ತಾನೆ. ಇದರಿಂದ ವ್ಯಕ್ತಿ ಹೊರಗಿನಿಂದ ನಾಗರಿಕನೆನಿಸಿಕೊಳ್ಳುತ್ತಾನೆ. ಆದರೆ ಆತ ನುಡಿದಂತೇ ನಡೆದುಕೊಳ್ಳುವನೋ ಅಥವಾ ಸುಳ್ಳುಗಳನ್ನು ಹೇಳುತ್ತಾ ಮೋಸಮಾಡುವನೋ ಎಂಬುದು ಹೊರಗಿನಿಂದ ನೇರವಾಗಿ ಅನುಭವಕ್ಕೆ ಬರುವುದಿಲ್ಲ. ಆತ ನುಡಿದಂತೇ ನಡೆದರೆ ಆತನನ್ನು ಸುಸಂಸ್ಕೃತನೆಂದೇ ಹೇಳಬೇಕಾಗುತ್ತದೆ. ರಾಮಾಯಣದ ಲಂಕೆಯೆಂಬುದು ಬಹಳ ಸಂಪದ್ಭರಿತವಾಗಿತ್ತು ಮತ್ತು   ಉಚ್ಚ ನಾಗರಿಕತೆಯಿಂದ ಕೂಡಿತ್ತು ಎಂಬುದು ತಿಳಿದುಬರುತ್ತದೆ; ಆದರೆ ರಾವಣನಿಗೆ ಸಂಸ್ಕೃತಿಯಿರಲಿಲ್ಲ-ಆತ ವಿಕೃತನಾಗಿದ್ದ. ಬಹುಕಾಲ ರಾಮನ ಬರುವಿಕೆಯನ್ನು ಕಾದು ಆತನ ಪಾದವನ್ನು ತೊಳೆದು ನದಿ ದಾಟಿಸಿದ ಗುಹ ಸಂಸ್ಕೃತಿಗೆ ಪ್ರತೀಕ. ರಾಮನಿಗೆ ಮಧುರರಸ ಭರಿತ ಹಣ್ಣುಗಳನ್ನು ಮಾತ್ರ ಕೊಡಬೇಕೆಂದು ಅವುಗಳನ್ನು ಸ್ವಲ್ಪಮಾತ್ರ ಕಚ್ಚಿ ನೋಡಿ ರಾಮನಿಗಾಗಿ ಬಹುಭಕ್ತಿ-ಪ್ರೀತಿ-ಶ್ರದ್ಧೆಯಿಂದ ಆಯ್ದುಕೊಟ್ಟಿದ್ದು ಶಬರಿಯ ಸಂಸ್ಕೃತಿ. ನಾಗರಿಕತೆಯ ದೃಷ್ಟಿಯಿಂದ, ಗುಹ ಮತ್ತು ಶಬರಿ ಈರ್ವರೂ ಸಹ ಅಕ್ಷರಸ್ಥರಲ್ಲ; ಆದರೆ ಉತ್ತಮ ಸಂಸ್ಕಾರಗಳನ್ನು ಹೊಂದಿದವರು.

ಅನ್ನವನ್ನು[ತಿನ್ನುವ ವಸ್ತುಗಳನ್ನು]ವಿಕ್ರಯಿಸುವುದನ್ನು ಸನಾತನ ಮೂಲ ಸಂಸ್ಕೃತಿ ಒಪ್ಪುವುದಿಲ್ಲ. ಆದರೆ ಇಂದು ರೆಸ್ಟಾರೆಂಟುಗಳದ್ದೇ ದೊಡ್ಡ ಉದ್ಯಮ. ಧಾವಂತದ ಜೀವನದಲ್ಲಿ ಹಲವು ಆದರ್ಶಗಳನ್ನು ಜನ ಲೆಕ್ಕಿಸುತ್ತಿಲ್ಲ. ತೋಟವೊಂದರ ಮಾಲೀಕನಾದವ ತಾನು ಬೆಳೆದು ಹಣ್ಣುಗಳನ್ನು ತಾನೊಬ್ಬನೇ ತಿನ್ನುವುದು ನಾಗರಿಕತೆ, ಒಂದಷ್ಟು ಜನರಿಗೆ ಹಂಚಿಕೊಂಡು ತಿನ್ನುವುದು ಸಂಸ್ಕೃತಿ, ಸಾಧ್ಯವಾದಷ್ಟೂ ಜನರಬಾಯಲ್ಲಿ ಹಣ್ಣಿನ ಹೋಳುಗಳು ಬೀಳಲಿ ಎಂಬ ಮಹತ್ವಾಕಾಂಕ್ಷೆಯಿಂದ ಬೆಳೆದರೆ ಅದು ಸುಸಂಸ್ಕೃತಿ-ಅದು ಅತ್ಯಂತ ಆದರ್ಶಮಯ ಕಾರ್ಯ. ಪ್ರಯಾಣ ಸಮಯದಲ್ಲಿ ಯಾರದೋ ಚಿಕ್ಕಮಕ್ಕಳ ಎದುರು ತಿನಿಸುಗಳನ್ನು ಅವರಿಗೆ ಕಾಣುವಂತೇ ತಿನ್ನುತ್ತಾ ಅವರಿಗೆ ಕೊಡದಿರುವುದು ಅಧುನಿಕ ನಾಗರಿಕತೆ; ಎಷ್ಟೇ ಅನಾನುಕೂಲವಿದ್ದರೂ ಸ್ವಲ್ಪವನ್ನಾದರೂ ಆ ಮಕ್ಕಳಿಗೆ ಕೊಟ್ಟು ಆಮೇಲೆ ತಾವು ತಿನ್ನುವುದು ಸಂಸ್ಕೃತಿ. ಹಡೆದಮ್ಮ ಹಾಲೂಡುವುದು ಹೆಚ್ಚೆಂದರೆ ಎರಡುವರ್ಷಗಳ ಕಾಲ, ಗೋವು ಹಾಲೂಡುವುದು ನಮ್ಮ ಉಸಿರಿರುವಷ್ಟುಕಾಲ-ಅಂತಹ ಗೋವನ್ನು, ಗೋ-ಕುಲವನ್ನು ಪೂಜಿಸಿ ಪೊರೆಯುವುದು ನಮ್ಮ ಸಂಸ್ಕೃತಿ, ಹಾಲುಣಿಸಿದ ಗೋವನ್ನೇ ಮಾಂಸಕ್ಕಾಗಿ ವಧಿಸುವುದು ವಿಕೃತಿ. ಉತ್ತಮವಾದ ಶಿಲೆಯನ್ನು ಕಂಡ ಶಿಲ್ಪಿ ಅದರಲ್ಲಿ ಮೂರ್ತಿಯನ್ನು ಕಲ್ಪಿಸಿಕೊಳ್ಳುವುದು ಸಂಸ್ಕೃತಿ. ಮೂರ್ತಿಯನ್ನು ಕಡೆಯುವುದು  ಸಂಸ್ಕೃತಿಯ ಮುಂದರಿಕೆ. ಶಿಲ್ಪಿ ಕೆತ್ತಿದ ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ-ಅದರಲ್ಲಿ ದೇವರನ್ನೇ ಕಾಣುವುದು ಇನ್ನೂ ಮುಂದುವರಿದ ಸಂಸ್ಕೃತಿ. ವಿಗ್ರಹದಲ್ಲಿ ದೇವರಿಲ್ಲ ಎಂದು ವಿಗ್ರಹವನ್ನೇ ಧ್ವಂಸಮಾಡುವುದು ವಿಕೃತಿ.

ಇಂದು ನಾವು ಹಡಗು, ವಿಮಾನ, ರೈಲು, ಬಸ್ಸು ಮೊದಲಾದವುಗಳನ್ನು ಸಂಚಾರಕ್ಕೆ ಬಳಸುತ್ತೇವೆ. ಚರದೂರವಾಣಿ-ಸ್ಥಿರದೂರವಾಣಿಗಳನ್ನೂ ಮಿಂಚಂಚೆಗಳನ್ನೂ ಸಂಪರ್ಕಕ್ಕೆ ಬಳಸುತ್ತೇವೆ. ರೇಡಿಯೋ, ಟಿವಿ, ಪತ್ರಿಕೆಗಳನ್ನೆಲ್ಲ ಸುದ್ದಿ ಮಾಧ್ಯಮಗಳನ್ನಾಗಿ ಬಳಸುತ್ತೇವೆ.  ಆದರೆ ರಾಮಾಯಣ ಕಾಲದಲ್ಲಿ ಇವೆಲ್ಲವೂ ಇರದಿದ್ದರೂ ಅವರು ಅತ್ಯುತ್ತಮ ಸಂಸ್ಕೃತಿಯನ್ನು ಹೊಂದಿದ್ದರು. ಇಂದು ಇವೆಲ್ಲವುಗಳನ್ನು ಬಳಸಿಕೊಂಡು ಭಯೋತ್ಪಾದನೆಯಂತಹ ವಿಕೃತಿಗಳಲ್ಲಿ ತೊಡಗಿಕೊಂಡವರನ್ನು ಕಾಣುತ್ತೇವೆ! ಹಣ್ಣು-ಕಾಯಿಗಳಲ್ಲಿ ಸಿಪ್ಪೆಯೇ ಪ್ರಮುಖವಲ್ಲ. ಒಳಗಿನ ತಿರುಳನ್ನು ನಾವು ಗಣಿಸಬೇಕಾಗುತ್ತದೆ. ನಾಗರಿಕತೆ ಬೆಳೆದಂತೇ ಸಂಸ್ಕೃತಿಯೂ ಬೆಳೆಯಬೇಕು. ಹೇಗೆ ನಡೆದುಕೊಂಡರೆ ಉತ್ತಮ ಎಂಬುದನ್ನು ಜನತೆ ಅರಿತುಕೊಳ್ಳಬೇಕು. ಇದೇ ಸನಾತನತೆಯ ಆದರ್ಶ. 

Tuesday, September 17, 2013

ಕಕ್ಷೆ ಸೇರುವ ವರೆಗೆ ಕಾಂತ ಸೆಳೆಯುತ್ತಲೇ ಇರುತ್ತದೆ!

ಚಿತ್ರಋಣ : ಅಂತರ್ಜಾಲ 
ಕಕ್ಷೆ ಸೇರುವ ವರೆಗೆ ಕಾಂತ ಸೆಳೆಯುತ್ತಲೇ ಇರುತ್ತದೆ!

ಭೂಮಿಯಿಂದ ಮೇಲಕ್ಕೆ ಅಥವಾ ನಿಂತಲ್ಲಿಂದ ಮೇಲ್ದಿಕ್ಕಿಗೆ ಏನನ್ನೇ ಎಸೆದರೂ ಕೆಲವೇ ಸೆಕೆಂಡುಗಳಲ್ಲಿ ಅದು ಮರಳಿ ಭೂಮಿಗೆ ಬರುವುದು ಯಾರಿಗೂ ಯಾರೂ ಹೊಸದಾಗಿ ತಿಳಿಸಿಕೊಡದ, ತಾನಾಗಿಯೇ ಅನುಭವಕ್ಕೆ ಬರುವ ಸಹಜ ವಿಷಯ. ಹಾಗೇಕಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರು ಮತ್ತು ಅದನ್ನು ವಿಶಿಷ್ಟವೆಂದು ಗ್ರಹಿಸಿದವರು ಕೆಲವೇ ಮಂದಿ. ಹಾಗಾಗುವುದಕ್ಕೆ ಕಾರಣ ಹುಡುಕಿದವರು ವಿಜ್ಞಾನಿಗಳು. ಆದರೆ ಭಾರತೀಯ ಬ್ರಹ್ಮಜ್ಞಾನಿಗಳಿಗೆ ಅದರ ಪರಿವೆ ಮೊದಲೇ ಇದ್ದಿತ್ತು; ಮಡಿಯೆಂದೂ ಮೂಢನಂಬಿಕೆಯೆಂದೂ ಹೀಯಾಳಿಸಲು ಮಾತ್ರ ಕಲಿತ ನಾವು ಅದನ್ನು ಗ್ರಹಿಸಲೇ ಇಲ್ಲ! ವಸ್ತು ಮೇಲಕ್ಕೆಸೆಯಲ್ಪಟ್ಟಾಗ ಭೂಮಿಯ ಗುರುತ್ವಾಕರ್ಷಣಾ ಬಲ ಅದರಮೇಲೆ ಪ್ರಯೋಗವಾಗುತ್ತದೆ; ನಮ್ಮ ಬಲವನ್ನುಪಯೋಗಿಸಿ ಮೇಲಕ್ಕೆ ತಳ್ಳಿದ ವಸ್ತುವಿನ ಬಲದ ಪರಿಮಾಣದಲ್ಲಿ ಕುಸಿತ ಕಂಡಾಗ ಭೂಮಿಯ ಆಕರ್ಷಕ ಬಲದ ಕೈ ಮೇಲಾಗುತ್ತದೆ. ಆಗ ಆ ವಸ್ತು ಕೆಳಕ್ಕೆ ಅಂದರೆ ಭೂಮಿಗೇ ಮರಳಿ ಬರುತ್ತದೆ.

ವಿಜ್ಞಾನಿಯೊಬ್ಬನಿಗೆ ತಲೆಯಮೇಲೆ ಹಣ್ಣುಬಿದ್ದಾಗ ಸೂತ್ರವೊಂದರ ಅರಿವು ಮೂಡಿತ್ತಂತೆ; ಅದೇ ಸೂತ್ರವನ್ನು ಅದಕ್ಕೂ ವಿಶಿಷ್ಟವಾಗಿ ನಮ್ಮ ಆರ್ಷೇಯ ಮುನಿಜನರಲ್ಲಿ ಒಬ್ಬರು ಹೇಳಿದ್ದರೆ ಅದನ್ನು ನಾವು ಗ್ರಹಿಸಿರಲೇ ಇಲ್ಲ! ಹಾಗಾಗಿ ಹೊಸಸೂತ್ರವನ್ನು ಕಂಡುಹಿಡಿದ ಕ್ರೆಡಿಟ್ಟು ಫಾರಿನ್ ವಿಜ್ಞಾನಿಗೆ ಕೊಡಲ್ಪಟ್ಟಿತು. ಭಾರತೀಯ ವೇದ, ಆಯುರ್ವೇದ, ಯೋಗ ಎಲ್ಲವೂ ಅನುಭವಗಳ ಗಂಟುಗಳು ಎಂಬುದನ್ನು ನಾವು ಮೊದಮೊದಲು ಒಪ್ಪಲೇ ಸಿದ್ಧರಿರಲಿಲ್ಲ; ಯಾಕೆಂದರೆ ಮಧ್ಯಯುಗದಲ್ಲಿ ಅವುಗಳ ಮಧ್ಯೆ ನುಸುಳಿದ ಮೌಢ್ಯಗಳು ಸೃಷ್ಟಿಸಿದ ಅವಾಂತರಗಳೇ ಅದಕ್ಕೆ ಕಾರಣಗಳು ಎನ್ನಬಹುದು. ಭೂಮಿಗೊಂದು ಕಾಂತವಿದೆ, ಆ ಕಾಂತದ ಅಧಿನಿಯಮದಂತೇ ಉತ್ತರಕ್ಕೆ ತಕೆಹಾಕಿ ಮಲಗುವುದರಿಂದ ಮೆಮರಿ ಲಾಸ್ ಆಗುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಪುರಾಣಿಕರು ಗಜಾನನಾವತಾರದ ಕಥೆ ಹೇಳಿದರು; ಉತ್ತರಕ್ಕೆ ತಲೆಹಾಕಿ ಮಲಗಿದ್ದುದರಿಂದ ಆನೆಯ ತಲೆಯೇ ಕಡಿಯಲ್ಪಟ್ಟು ಗಜಮುಖನ ಮುಂಡಕ್ಕೆ ಜೋಡಿಸಲ್ಪಟ್ಟಿತು ಎಂದು ಹೇಳಿದರು; ಕಥೆಯ ಹಿಂದಿನ ತತ್ವವನ್ನಾಗಲೀ, ತಥ್ಯವನ್ನಾಗಲೀ, ವಿಜ್ಞಾನವನ್ನಾಗಲೀ ನಾವು ಅವಲೋಕಿಸುವುದಿಲ್ಲ! 

ಸುಜ್ಞಾನವೆನಿಸಿದ ವೇದೋಪನಿಷತ್ತುಗಳು ಪ್ರಸಕ್ತ ಸಂಸ್ಕೃತದಲ್ಲಿರುವುದರಿಂದಲೂ, ಬ್ರಾಹ್ಮಣರು ಪೂಜಾದಿಗಳನ್ನು ನಡೆಸಲು ಬಳಸುವ ಮಂತ್ರಗಳು ಅವುಗಳಲ್ಲಿ ಹೇಳಲ್ಪಟ್ಟಿರುವುದರಿಂದಲೂ ಬ್ರಾಹ್ಮಣರಮೇಲಿನ ಕೋಪದಿಂದ, ದ್ವೇಷದಿಂದ ’ವೇದಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಕುಹಕವನ್ನು ಹೊಸೆಯುತ್ತೇವೆಯೇ ಹೊರತು ಒಳಿತಿನ ಬಗ್ಗೆ ನಮ್ಮ ಗಮನವಿರುವುದಿಲ್ಲ. ಬ್ರಾಹ್ಮಣರೇ ಜಾತಿಗಳನ್ನು ಸೃಷ್ಟಿಸಿದರೆಂದೂ ಬ್ರಾಹ್ಮಣರೇ ಮಂತ್ರಗಳನ್ನು ಬರೆದುಕೊಂಡರೆಂದೂ, ಬ್ರಾಹ್ಮಣರೇ ಮಿಕ್ಕೆಲ್ಲರನ್ನೂ ಹತ್ತಿಕ್ಕಿ ತಾವು ಲಾಭ ಪಡೆದರೆಂದೂ ಆಡಿಕೊಳ್ಳುವ ವರ್ಗ ಬ್ರಹ್ಮಜ್ಞಾನವನ್ನು ಪಡೆದು ಅದನ್ನು ಆಚರಿಸಿದವರು ಬ್ರಾಹ್ಮಣರಾಗುತ್ತಾರೆ ಎಂಬ ಸತ್ಯವನ್ನೇ ಮರೆತುಬಿಟ್ಟಿತು. ಸಹಸ್ರಮಾನಗಳ ಕಾಲ ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ಆಚರಿಸಿಕೊಂಡುಬಂದ, ಅನುಸರಿಸಿಕೊಂಡು ಬಂದ, ಕಾಪಿಟ್ಟುಕೊಂಡುಬಂದ ಅನುಭವಗಳ ಗಂಟು ಬ್ರಾಹ್ಮಣರಲ್ಲಿದೆ ಮತ್ತು ಅದರಿಂದ ಲೋಕಕ್ಷೇಮಕರ ಸೂತ್ರಗಳನ್ನು ಹೆಣೆಯಬಹುದಾಗಿದೆ ಎಂಬುದು ಅರಸೊತ್ತಿಗೆಯವರಿಗೆ ಗೊತ್ತಿತ್ತು.

ಬ್ರಾಹ್ಮಣ್ಯವನ್ನೇ ಆಚರಿಸಿಕೊಂಡಿರುವವರಿಗೆ ಹೊಲಕ್ಕೆ ತೆರಳಿ ಕೃಷಿಮಾಡಲಾಗಲೀ, ಅನ್ಯವೃತ್ತಿಗಳನ್ನು ಮಾಡಲಾಗಲೀ ಸಮಯವಿರುವುದಿಲ್ಲವಾದ್ದರಿಂದ ಅವರ ಉಪಜೀವನ ಕಷ್ಟಕರವೆಂಬುದೂ ಆಳರಸರಿಗೆ ಗೊತ್ತಿತ್ತು. ’ರಾಜಾ ಪ್ರತ್ಯಕ್ಷ ದೇವತಾ’ ಎಂಬಂತೆಯೇ ಅನಾದಿಯಿಂದ ಹಿಡಿದು ನಮ್ಮ ಮೈಸೂರು ಅರಸರ ಆಡಳ್ತೆಯ ಕಾಲ ಮುಗಿಯುವವರೆಗೂ ಭಾರತದಾದ್ಯಂತ ಬ್ರಾಹ್ಮಣರಿಗೆ ರಾಜಾಶ್ರಯವಿತ್ತು. ಹಾಗಂತ ಬ್ರಾಹ್ಮಣರು ಶ್ರೀಮಂತರೇನೂ ಆಗಿರಲಿಲ್ಲ, ಆಗಬಯಸಲಿಲ್ಲ. ನಾವು ಮಕ್ಕಳಿಗೆ ಹೇಳುವ ಕಥೆಗಳಲ್ಲಿ "ಒಂದಾನೊಂದು ಕಾಲದಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದನಂತೆ" ಎಂತಲೇ ಸಹಜವಾಗಿ ಹೇಳುತ್ತೇವಲ್ಲಾ? ಬ್ರಾಹ್ಮಣ ಶ್ರೀಮಂತನಾಗಿದ್ದರೆ ಕಥೆಯಲ್ಲೂ ಅದರ ಚಹರೆ ಸಿಗಬೇಕಿತ್ತು-ಸಿಗುತ್ತಿಲ್ಲ. ಬೆರಳೆಣಿಕೆಯ ಜನ ಆಡಳಿತದಲ್ಲಿ ಮಂತ್ರಿಯೋ ದಿವಾನರೋ ಆಗಿ ತಕ್ಕಮಟ್ಟಿಗೆ ಲೌಕಿಕವಾಗಿ ಆಡಂಬರದ ಜೀವನವನ್ನು ನಡೆಸಿರಬಹುದು-ಅದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಬಹುತೇಕ ಬ್ರಾಹ್ಮಣರು ಬಡವರಾಗಿಯೇ ಬದುಕಿದರು. ತಮಗೆ ಬಡತನವೆಂದು ಅವರೆಂದೂ ಕರುಬಲಿಲ್ಲ, ಹಳಹಳಿಸಲಿಲ್ಲ. ದೇವರು ಇಟ್ಟಹಾಗೆ ಇರುವುದು ಎಂಬುದನ್ನು ಅವರು ಪಾಲಿಸಿಕೊಂಡು ಜೀವನ ಸಾಗಿಸಿದರು. ಬ್ರಾಹ್ಮಣರು ಶ್ರೀಮಂತರಾಗಿದ್ದರೆ ಬ್ರಾಹ್ಮಣ್ಯವನ್ನು ಆಚರಿಸುವುದನ್ನು ಬಿಟ್ಟು ರಾಜಸ ಮನೋವೃತ್ತಿಯನ್ನು ಧರಿಸುತ್ತಿದ್ದರು. ತಾವು ವಂಶಪಾರಂಪರಿಕವಾಗಿ ನಂಬಿಬಂದ ಅನುಭವಗಳ ಗಂಟುಗಳ ಸರ್ಪಗಾವಲಿಗಾಗಿ, ಅದರಿಂದ ಮುಂದಿನ ಜನಾಂಗಗಳಿಗೆ ಒಳಿತನ್ನುಂಟುಮಾಡುವ ಉದ್ದೇಶದಿಂದ ಬ್ರಾಹ್ಮಣರು ಸಾತ್ವಿಕ ಮನೋವೃತ್ತಿಯನ್ನೇರ್ ಆತುಕೊಂಡರು. ಎಲ್ಲರೊಡನೆ ಹೊರಗೆ ಬಹಳಷ್ಟು ಬೆರೆತರೆ, ಅವರೊಡನೆ ಜೀವನ ಹಂಚಿಕೊಂಡರೆ ಮೂಲ ವಿಷಯಗಳ ಮೌಲ್ಯ ಕಳೆದುಹೋಗುತ್ತಿತ್ತು; ಅದಕ್ಕೇ ತಮ್ಮದು ’ಮಡಿ’ಯೆಂದರು, ಉಳಿದವರಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡರು. ಎಲ್ಲರೊಡನೆ ಬೆರೆತರೆ ಏನಾಗುತ್ತದೆ ಎಂಬುದು ಜಾತಿಯಿಂದ ಬ್ರಾಹ್ಮಣರಲ್ಲಿ ಜನಿಸಿ ನಾನ್-ವೆಜ್ ತಿನ್ನುತ್ತಾ ’ಬ್ರಾಹ್ಮಣ’ರೆಂದು ಬೋರ್ಡುಹಾಕಿಕೊಳ್ಳುವ ಕೆಲವರಿಂದ ಇಂದು ಗೊತ್ತಾಗುತ್ತದೆ!! ತ್ಯಜಿಸಬೇಕಾದ ವಸ್ತುಗಳು, ತಿನಿಸುಗಳು, ಸುಖೋಪಭೋಗಗಳು, ಅದನ್ನು ಉಪಭೋಗಿಸುತ್ತಿರುವವರ ಅತಿಯಾದ ಸಂಗದಿಂದ, ಸಹ-ವಾಸದಿಂದ, ಸಂಸರ್ಗದಿಂದ ತಮ್ಮನ್ನೂ ಅತ್ತ ಸೆಳೆಯುತ್ತವೆ ಎಂಬುದು ಅವರಿಗೆ ಗೊತ್ತಿತ್ತು. ಅದು ಬ್ರಾಹ್ಮಣ್ಯಕ್ಕೆ ಧಕ್ಕೆ ತರುತ್ತದೆ ಎಂಬುದೂ ಕೂಡ ಗೊತ್ತಿತ್ತು. ಅದೊಂದೇ ಕಾರಣದಿಂದ ಪ್ರತ್ಯೇಕತೆಯೇ ವಿನಃ ತಮ್ಮ ಪಂಕ್ತಿಗೆ ಮೃಷ್ಟಾನ್ನವಿರಲಿ ಉಳಿದವರ ಪಂಕ್ತಿಗೆ ಏನೋ ಒಂದಷ್ಟು ಕೂಳಿರಲಿ ಎಂದು ಊಟದಲ್ಲಿ ಪ್ರತ್ಯೇಕತೆಯಾಗಿರಲಿಲ್ಲ-ಇದನ್ನು ಅಂದಿನ ಅರಸರು ಅರಿತಿದ್ದರು. [ವಿಮಾನವನ್ನು ಚಲಾಯಿಸುವ ಪೈಲಟ್ಗೆ ಕೆಲವು ಹಕ್ಕುಬಾಧ್ಯತೆಗಳಿವೆ-ನೀತಿಸಂಹಿತೆಗಳಿವೆ, ಆತ ಎಲ್ಲರೊಟ್ಟಿಗೆ ಬೆರೆಯುವಂತಿಲ್ಲ, ಕೋರ್ಟಿನಲ್ಲಿ ನ್ಯಾಯಾಧೀಶರೂ ಸಹ ಎಲ್ಲರೊಟ್ಟಿಗೆ ಬೆರೆಯುವಂತಿಲ್ಲ-ಬೆರೆತರೆ ನ್ಯಾಯರಕ್ಷಣೆ ಸಾಧ್ಯವಿಲ್ಲ; ಇಂದು ನಡೆಯುವ ಉಪದ್ವ್ಯಾಪಗಳನ್ನು ಬಿಡಿ, ಅದಕ್ಕೆ ಪ್ರಜೆಗಳೇ ಜವಾಬ್ದಾರರು.]            

ಹೂಳಿನಿಂದ ತುಂಬಿದ ಹೊಲಸು ರಾಜಕೀಯ ಪ್ರವೃತ್ತಿಯಿಂದ ಹೊಲಗೇಡಾದ ಸಾಮಾಜಿಕರ ಮನದ ಕಡಲಲ್ಲಿ ಬ್ರಾಹ್ಮಣರೇ ಎಲ್ಲವನ್ನೂ ಕಬಳಿಸಿದರು ಎಂಬ ಹುನ್ನಾರದ ಹಡಗನ್ನು ತೇಲಿಬಿಟ್ಟವರು ಇಂದಿನ ಕೆಟ್ಟ ಆಳರಸರು. ಇವತ್ತಿನ ಸಾಮ್ರಾಜ್ಯಗಳಲ್ಲಿ ಅಥವಾ ರಾಜ್ಯಗಳಲ್ಲಿ-ದೇಶದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ ತುಂಬಲು ಕಾರಣ ಅಲ್ಲಿ ಬ್ರಾಹ್ಮಣ್ಯದ ಮಾರ್ಗದರ್ಶನವಿಲ್ಲ! ಯಾವುದು ನೀತಿ ಯಾವುದು ಅನೀತಿ ಎಂಬುದನ್ನು ತಿಳಿಹೇಳುವ ಪ್ರಬುದ್ಧ ವ್ಯಕ್ತಿಗಳಿಲ್ಲ. ಸ್ವಾರ್ಥಿಗಳ ಸಾಮ್ರಾಜ್ಯದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೆಲಸಮಾಡುವ ರಾಜಕಾರಣಿಗಳು ಬೆರಳೆಣಿಕೆಯಷ್ಟು-ಅಲ್ಲಿ ಅಂಥವರ ಮಾತಿಗೆ ಬೆಲೆಯೇ ಇಲ್ಲ! ಇದು ಇಂದಿನ ಯುಗಧರ್ಮ. ಮೌಲ್ಯಗಳ, ಅನುಭವಗಳ ಗಂಟುಗಳನ್ನು ಮಡಿಯೆಂಬ ಪಾರಂಪರಿಕ ದೃಷ್ಟಿಯಿಂದ ಕಾಪಿಟ್ಟುಕೊಂಡು ಬಂದಿದ್ದ ಬ್ರಾಹ್ಮಣರಿಗೆ ಮರ್ಯಾದೆಯ ಜೀವನ ನಡೆಸುವುದಕ್ಕೆ ಆಳರಸರು ಬಿಡುತ್ತಿಲ್ಲ. ಬ್ರಾಹ್ಮಣರಿಗೆ ರಾಜಾಶ್ರಯವಂತೂ ಇಲ್ಲ, ಆದರೆ ಅವರಪಾಡಿಗೆ ಅವರಿದ್ದರೂ ಸಹ ಅವರ ವಿರುದ್ಧದ ಕೂಗು ಮಾತ್ರ ನಿಲ್ಲಲೇರ್ ಇಲ್ಲ.

ಹೋಮ-ಹವನಗಳನ್ನು ಆಚರಿಸಿವುದು ವೇಸ್ಟು ಎಂಬವರೆಷ್ಟು, ಮೈಬಗ್ಗಿಸಿ ಕೆಲಸಮಾಡಲಾಗದೇ ದಾನ ಕೇಳುತ್ತಾರೆ ಎಂಬವರೆಷ್ಟು, ಪೂಜೆ-ಆರತಿಮಾಡಿ ದಕ್ಷಿಣೆಗೆ ಕೈಯ್ಯೊಡ್ಡುತ್ತಾರೆ ಎಂದು ದೂರುವವರೆಷ್ಟು ಅಲ್ಲವೇ? ಎಲ್ಲಾ ವೃತ್ತಿಗಳಂತೇ ಮೌಲ್ಯಗಳನ್ನು ಕಾಪಾಡಿ ಪುರಕ್ಕೆ ಹಿತವಾದ ಕೆಲಸ-ಕಾರ್ಯಗಳನ್ನು ನಡೆಸಿಕೊಡಲು ಪುರೋಹಿತರಾಗಿರುವವರಿಗೆ ಉಪಜೀವನವಿದೆ, ಸಂಸಾರವಿದೆ, ಹೆಂಡತಿ-ಮಕ್ಕಳು ಇದ್ದಾರೆ ಎಂದು ಸಮಾಜಯಾಕೆ ಗಣಿಸುವುದಿಲ್ಲ? ರಾಜಾಶ್ರಯ ತಪ್ಪಿದ ನಂತರ ಉಪಜೀವನ ಕಷ್ಟವೆಂದು ಬಗೆದು ಬ್ರಾಹ್ಮಣ್ಯವನ್ನೇ ತೊರೆದು ಅನ್ಯವೃತ್ತಿಗಳಲ್ಲಿ ತೊಡಗಿಕೊಂಡ ಅದೆಷ್ಟು ಬ್ರಾಹ್ಮಣಜಾತಿಯವರು ಇಂದಿಲ್ಲ? ಒಂದೊಮ್ಮೆ ಅಖಂಡ ಬ್ರಾಹ್ಮಣ ಸಮುದಾಯ ಬ್ರಾಹ್ಮಣ್ಯವನ್ನೇ ತೊರೆದರೆ ಭಾರತೀಯರು ಶಾಂತಿಯನ್ನರಸಿ, ಸುಭಿಕ್ಷ-ಸಮೃದ್ಧಿಗಳನ್ನರಸಿ ಬೇರಾವ ದೇಶಗಳತ್ತಲೋ ಮುಖಮಾಡಿ ಹುಡುಕಬೇಕಾದೀತು.[ಸದ್ಯಕ್ಕೆ ಹಾಗಾಗಿಲ್ಲ ಎಂದು ಇರುವುದರಲ್ಲೇ ಸಮಾಧಾನ ಪಟ್ಟುಕೊಳ್ಳೋಣ]ಇಡೀ ಬ್ರಹ್ಮಾಂಡದಲ್ಲಿ ಅತ್ಯಂತ ಶಾಂತದೇಶವೆಂದರೆ ಭಾರತಮಾತ್ರ ಎಂಬುದನ್ನು ಒಪ್ಪುತ್ತೀರೇ? ಹೌದಲ್ಲವೇ? ಹಾಗಿದ್ದರೆ ಭಾರತಮಾತ್ರವೇ ಅತ್ಯಂತ ಶಾಂತ, ಸಮೃದ್ಧ ದೇಶವಗಲು ಕಾರಣವನ್ನು ಯಾರಾದರೂ ಹುಡುಕಿದಿರೇ? ಇಲ್ಲ. ಭಾರತಕ್ಕೆ ನಮ್ಮ ಮನುಕುಲದ ಮತ್ತು ಅದಕ್ಕೂ ಮುನ್ನ ಆವಿರ್ಭವಿಸಿದ್ದ ಋಷಿಮುನಿಗಳ ಅನುಭವಗಳ ಬೆಂಬಲವಿದೆ, ಅವರು ನಡೆಸಿದ್ದ ಘೋರ ತಪಸ್ಸಿನ ಪರಿಶ್ರಮದಲ್ಲಿ ಭಾರತೀಯರು ಕಾಲಕಾಲಕ್ಕೂ ಸುಭಿಕ್ಷದಿಂದಿರಬೇಕೆಂಬ ಸಂಕಲ್ಪವಿದೆ, ಹಂಬಲವಿದೆ. ಅವರ ಸಂತತಿಗಳ ಮಾರ್ಗದರ್ಶನವೇ ಆನಾದಿಯಿಂದ ರಾಜರುಗಳ ಆಳ್ವಿಕೆಯನ್ನು ಸರಿದಾರಿಯಲ್ಲಿ ನಡೆಸುತ್ತಿತ್ತು. ಇಂದು ಅದಿಲ್ಲ, ಹೀಗಾಗಿ ಭ್ರಷ್ಟರು ಎಲ್ಲೆಡೆಯೂ ತುಂಬಿದ್ದಾರೆ.

ಯಾವುದೇ ರಂಗದಲ್ಲೂ ಔನ್ನತ್ಯವನ್ನು ಸಾಧಿಸುವವರೆಗೆ ಸಮಾಜ ಕಾಲೆಳೆಯುತ್ತಲೇ ಇರುತ್ತದೆ. ಔನ್ನತ್ಯವನ್ನು ಸಾಧಿಸಿದಮೇಲೆ ಕಾಳೆಳೆಯುವವರು ಸುಸ್ತಾಗಿ ತಂತಾನೇ ಕೈಬಿಡುತ್ತಾರೆ. ಉಪಗ್ರಹವನ್ನು ಕಕ್ಷೆಗೆ ಸೇರಿಸುವವರೆಗೆ ತಯಾರಿಸಿದ ವಿಜ್ಞಾನಿಗಳ ಪಡುವ ಪಾಡು ದೇವರಿಗೇ ಗೊತ್ತು. ಉಪಗ್ರಹ ನಡುದಾರಿಯಲ್ಲಿ ಕೆಟ್ಟರೆ, ಹಿಂದುರಿಗಿದರೆ, ಬಿದ್ದುಹೋದರೆ ಸಮಾಜದ ನಿಂದನೆಯನ್ನು ಮುಂದಾದ ಆ ಜನ ಸಹಿಸಿಕೊಳ್ಳಬೇಕು; ಆದರೂ ಅವರು ಉಪಗ್ರಹಗಳನ್ನು ತಯಾರಿಸುವುದು ಮತ್ತು ಕಕ್ಷೆಗೆ ಹಾರಿಬಿಡುವುದು ಸಮಾಜದ ಒಳಿತಿಗಾಗಿ, ಅನುಕೂಲಕ್ಕಾಗಿ. ಮೊಬೈಲಿನಿಂದ ಹಿಂದಿದು ವಿಮಾನಯಾನ, ಗಗನಯಾನದವರೆಗೆ ಇಂದು ನಾವು ಪಡೆದ ಸಕಲ ಸೌಲತ್ತುಗಳ ಹಿಂದೆ ಲಕ್ಷಾಂತರ ವಿಜ್ಞಾನಿಗಳ ಲೌಕಿಕ ಪರಿಶ್ರಮವಿದೆ; ಅದಕ್ಕೆ ಮುನ್ನವೇ ಮೂಲಬ್ರಹ್ಮಾಂಡದಲ್ಲಿ ಸಾವಿರಾರು ಋಷಿಗಳ ಜಪ-ತಪ-ಉಪವಾಸಾದಿಗಳಿಂದ ಕೂಡಿದ ಅಲೌಕಿಕ ಪರಿಶ್ರಮವಿದೆ. ಋಷಿಗಳು ಹೇಳಿದ್ದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳದಿದ್ದರೂ ಅವುಗಳಲ್ಲಿ ಹಲವನ್ನು ವಿಜ್ಞಾನಿಗಳು ಅರಗಿಸಿಕೊಂಡಿದ್ದಾರೆ. ತಮ್ಮ ಸಂತತಿಗೆಂದೂ ಸುಳ್ಳನ್ನು ಹೇಳುವ ಇರಾದೆ ಒಳ್ಳೆಯ ಪಾಲಕರಿಗೆ ಇರಲಿಕ್ಕಿಲ್ಲವಲ್ಲಾ? ಅದರಂತೆಯೇ ಮುನಿಜನರಿಗೆ ತಮ್ಮ ಮುಂದಿನ ಪೀಳಿಗೆಗೆ ಸುಳ್ಳುಕಂತೆಗಳನ್ನು ಸೃಷ್ಟಿಸಿ-ಕಟ್ಟಿಕೊಟ್ಟು ಹೋಗುವ ಅಗತ್ಯತೆ ಇರಲಿಲ್ಲ; ಅಂತಹ ಋಷಿಗಳು ಕಂಡಿದ್ದೆಲ್ಲವೂ ಸತ್ಯ, ಅದನ್ನು ನಾವು ಕಾಣಲಾಗದ್ದೂ ಸತ್ಯ. ಎವರೆಸ್ಟ್ ಏರಲಾಗದ ಮಂದಿ ಊರ ಪಕ್ಕದ ಬೆಟ್ಟವನ್ನೇರಿ "ಓಹೊ ಇಷ್ಟೇ ಬಿಡು, ಇದಕ್ಕಿಂತಾ ಬೇರೆ ಇನ್ನೇನಿರಲು ಸಾಧ್ಯ?" ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡಂತೇ ಬಲಹೀನರಾದ ನಾವು ನಮ್ಮ ಪೂರ್ವಜರನ್ನು ನಮ್ಮ ಮಟ್ಟಕ್ಕೇ ಅಳೆದುಬಿಟ್ಟೆವು. ಅಷ್ಟಕ್ಕೇ ಮುಗಿಯಲಿಲ್ಲ, ಅವರು ಹೇಳಿದ್ದರಲ್ಲಿ ತಪ್ಪುಗಳನ್ನು ಹುಡುಕಲು ಮುಂದಾಗಿ ’ಬುದ್ಧಿಜೀವಿ’ಗಳಾಗಿಬಿಟ್ಟೆವು.[’ಬುದ್ಧಿಜೀವಿ’ ಪದಕ್ಕೆ ಪರ್ಯಾಯವಾಗಿ ’ಅನಂತಮೂರ್ತಿ’ಗಳಾಗಿಬಿಟ್ಟೆವು ಎಂದುಕೊಂಡರೂ ಸರಿಯೇ] ಹಾರುವ ಮೊಲಕ್ಕಿರುವುದು ನಾಲ್ಕುಕಾಲು, ಆದರೆ ಅನಂತಮೂರ್ತಿಗಳಂಥವರಿಗೆ ಲೆಕ್ಕಕ್ಕೆ ಸಿಗುವುದು ಮೂರೇಕಾಲು! ನಾಲ್ಕನೇ ಕಾಲನ್ನು ಕಾಣದವರು ಸುಳ್ಳನ್ನೇ ಸತ್ಯವೆಂದು ಬೋಧಿಸುವ ಮೂಲಕ ಪರೋಕ್ಷವಾಗಿ ಸಮಾಜಘಾತುಕತನದ ಕೆಲಸವನ್ನು ಪ್ರಚೋದಿಸುತ್ತಾರೆ.    

ಮೋಕ್ಷವನ್ನು ಬಯಸುವವರೂ ಕೂಡ ಭುವಿಯ ಕಕ್ಷೆಯಿಂದ ತಪ್ಪಿಸಿಕೊಳ್ಳಬೇಕೆಂದು ಋಷಿಜನ ಸಾರಿದರು. ಮೋಹ ಕ್ಷಯಗೊಳ್ಳುವುದೇ ಮೋಕ್ಷ. ನಾನು ಎಂಬ ನನ್ನದೇಹದ ಮೇಲಿನ ಮೋಹ, ನನ್ನ ಹೆಂಡತಿ, ನನ್ನ ಪ್ರೇಯಸಿ, ನನ್ನ ರೂಪಸಿ, ನನ್ನ ಮಗ, ನನ್ನ ಮಕ್ಕಳು, ನನ್ನ ಕಾರು, ನನ್ನ ಬಂಗಲೆ ಎಂಬೀ ಮೊದಲಾದ ಮೋಹ ನಮ್ಮನ್ನು ಸೆಳೆಯುತ್ತಲೇ ಇರುತ್ತದೆ. ನಿಮ್ಮಲ್ಲಿ ಒಂದೇ ಬಿಎಂಡಬ್ಲ್ಯೂ ಕಾರಿದ್ದರೆ ನನಗೆ ಕೊಡುತ್ತೀರೋ? ನಿಮಗೆ ಯಥೇಚ್ಛವಾಗಿ ಬಳಕೆಮಾಡುವಷ್ಟು ಸಂಖ್ಯೆಯಲ್ಲಿ ಇದ್ದರೆ ನನಗೆ ಹಳತೊಂದನ್ನು ಕರುಣಿಸಲು ನೀವು ರೆಡಿಯಾಗಬಹುದಷ್ಟೆ. ನೀವು ಕೋಟ್ಯಂತರ ಹಣ ವ್ಯಯಿಸಿ ಬಂಗಲೆ ಕಟ್ಟಿದ್ದೀರಿ, ಏನೂ ತೆಗೆದುಕೊಳ್ಳದೇ ಅದರ ಮಾಲೀಕತ್ವವನ್ನು ನನಗೆ ಕೊಟ್ಟುಬಿಡಿ? ಸುತರಾಂ ಸಾಧ್ಯವಿಲ್ಲ ಅಲ್ಲವೇ? ಹೆಜ್ಜೆಹೆಜ್ಜೆಯಲ್ಲೂ ಮೋಹವನ್ನೇ ಆತುಕೊಂಡಿರುವ ನಾವು ಮೋಹದ ಪರಿಧಿಯನ್ನು ವಿಸ್ತರಿಸುತ್ತಾ ಸ್ವಜನ-ಸ್ವಜಾತಿ, ಮತ, ಧರ್ಮ ಹೀಗೇ ಕವರೇಜ್ ಮಾಡಿಕೊಳ್ಳುತ್ತೇವೆ. ಆರ್ಥಿಕ ಅನುಕೂಲಕ್ಕಾಗಿ, ಸಾಮಾಜಿಕ ಸ್ಥಾನಮಾನ ಭದ್ರತೆಗಾಗಿ ರಾಜಕೀಯವಾಗಿ ಸ್ವಾಮಿಯೊಬ್ಬನನ್ನು ಪೀಠಕೊಟ್ಟು ಕೂರಿಸುತ್ತೇವೆ. ಸ್ವಾಮಿಯಾಗುವವನಿಗೆ ಅವನ ಪೂರ್ವಾಪರಗಳೇ ಸರಿಯಾಗಿ ಗೊತ್ತಿರುವುದಿಲ್ಲ, ಏನು ಮಾಡಬೇಕೆಂಬುದೂ ಗೊತ್ತಿಲ್ಲ, ವೇದ-ಶಾಸ್ತ್ರಗಳಾಗಲೀ ಅದಕ್ಕಿಂತಾ ಹೆಚ್ಚಾಗಿ ಸಂನ್ಯಾಸಧರ್ಮದ ಸಂಹಿತೆಗಳಾಗಲೀ ಗೊತ್ತಿರುವುದಿಲ್ಲ. ಪೀಠದಲ್ಲಿ ಕೂತ ಸ್ವಾಮಿ ಪಕ್ಕಕ್ಕೆ ಬಂದುನಿಂತ ಪ್ರಾಯದ ಹುಡುಗಿಗೆ ಕಣ್ಣುಹೊಡೆಯುತ್ತಾನೆ, ಕತ್ತಲರಾತ್ರಿಯಲ್ಲಿ ಸಂಸಾರಿಗಳಿಗಿಂತ ಅಧಿಕವಾಗಿ ಹಲವಾರು ಹೆಣ್ಣುಗಳನ್ನು ಕಾಮಕ್ಕೆ ಕಬಳಿಸುತ್ತಾನೆ! ಹಗಲುವೇಷಧಾರಿಗಳು ಪಾತ್ರನಿರ್ವಹಿಸಿದಂತೇ ಬೆಳಗಾದೊಡನೆಯೇ ಪೀಠ-ಕಾವಿಬಟ್ಟೆ-ಜಾತಿಜನ-ಜೈಕಾರ-ವಿಧಾನಸೌಧಕ್ಕೆ ಮುತ್ತಿಗೆ ಈ ಥರದ ಚಲಾವಣೆಗಳು ನಡೆಯುತ್ತವೆ. ಹಾಗಾದರೆ ಸ್ವಾಮಿಯಾದವನು ಮೀಸಲಾತಿ ಕಾಯುವ ಕೆಲಸದವನೇ? ಹೌದೆನ್ನುತ್ತದೆ ಕಳೆದ ದಶಕದ ಇತಿಹಾಸ! ಲೌಕಿಕ ವ್ಯಾಮೋಹವನ್ನು ಕಳಚಿಕೊಂಡು/ಕ್ಷಯಿಸಿಕೊಂಡು ಭೂಕಕ್ಷೆಯಿಂದ ಅಲೌಕಿಕವಾಗಿ ಉಡಾವಣೆಗೊಂಡರೆ ಮಾತ್ರ ನಾವು ಮೋಕ್ಷ ಪಡೆಯಲು ಸಾಧ್ಯ. ಅಲ್ಲಿಯವರೆಗೂ ಮೋಹವೆಂಬ ಕಾಂತ ನಮ್ಮನ್ನು ಇಲ್ಲಿಗೆ ಸೆಳೆಯುತ್ತಲೇ ಇರುತ್ತದೆ.

ಉಪಗ್ರಹ ಕಕ್ಷೆಗೆ ಸೇರಿದಮೇಲೆ ಜನ ಚಪ್ಪಾಳೆ ತಟ್ಟುತ್ತಾರೆ. ಒಂದಷ್ಟು ಜನ ಸಂಬಂಧಿತ ವಿಜ್ಞಾನಿಗಳಿಗೆ, ಸಂಸ್ಥೆಗಳ ಮುಖ್ಯಸ್ಥರಿಗೆ ಹಾರ-ತುರಾಯಿ ಹಾಕುತ್ತಾರೆ ಹೇಗೋ ಹಾಗೆಯೇ ಉನ್ನತಿಗೇರಿದಾಗ ಸಮಾಜದ ಬಹುತೇಕರು ಉನ್ನತನಾದ ವ್ಯಕ್ತಿಗೆ ಜಯಕಾರ ಹಾಕುತ್ತಾರೆ. ಉನ್ನತಿಗೇರಲು ಸಾಧ್ಯವಾಗದಾಗ ಉನ್ನತಿಯ ಸ್ಥಾನಮಾನವನ್ನು ಖರೀದಿಸಬಹುದೆಂದು ಕೆಲವು ಬುದ್ಧಿಜೀವಿಗಳು ತೋರಿಸಿಕೊಟ್ಟಿದ್ದಾರೆ! ಆದರೆ ಉನ್ನತಿಯ ಸ್ಥಾನಮಾನದ ಖರೀದಿಸಿದ ಕ್ಷಣದಿಂದ ಆತ್ಮಬಲ ಕುಗ್ಗುತ್ತದೆ; ಆತ್ಮ ಜರಿಯತೊಡಗುತ್ತದೆ "ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?"--ಈ ದ್ವಂದ್ವಗಳು ಕೊನೆಯುಸಿರಿನ ತನಕ ಸಾಯುವುದಿಲ್ಲ! ಭಂಡತನದಿಂದ ಅದನ್ನು ಬಡಿದು ಮಲಗಿಸಿದರೂ ಮತ್ತೆ ಕನಸಿನಲ್ಲಿ ಆತ್ಮ ಮೇಲೆದ್ದು ಕೇಳುತ್ತದೆ:"ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?" ಲೌಕಿಕವಾಗಿ ಹೊರಗೆ ಅಂಧಾಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ, ಸ್ವಾರ್ಥಿಗಳು ಹಾರ-ತುರಾಯಿಗಳನ್ನು ಹಾಕುತ್ತಾರೆ, ಸಮಾಜದಲ್ಲಿ ಅಲ್ಲಲ್ಲಿ ಸಭೆ-ಸಮಾರಂಭಗಳ ವೇದಿಕೆಯಲ್ಲಿ ಸೀಟು ಸಿಗುತ್ತದೆ, ಭ್ರಷ್ಟ ಆಳರಸರು ರಾಜಕೀಯವಾಗಿ ಗೌರವಿಸುತ್ತಾರೆ-ಎಲ್ಲವೂ ಹೌದು, ಆದರೆ ಪ್ರತೀನಿತ್ಯ ಒಳಗಿರುವಾತ ಮತ್ತೆ ಮತ್ತೆ ಕೇಳುತ್ತಾನೆ: "ಯಾಕಯ್ಯಾ? ಅರ್ಹವಲ್ಲದ ಸ್ಥಾನಮಾನವನ್ನು ಖರೀದಿಯಿಂದ ಪಡೆದುಕೊಂಡೆಯಲ್ಲಾ ನಿಜಕ್ಕೂ ನೀನದಕ್ಕೆ ಅರ್ಹನೇ?" ಹೀಗಾಗಿ ಖರೀದಿಸಿದ ಗೌರವ ಆತ್ಮ ಘಾತುಕವಾಗಿ ಮೋಹವನ್ನು ಹೆಚ್ಚಿಸುತ್ತದೆ, ಲೌಕಿಕವಾಗಿ ಇಲ್ಲಿನ ಕಕ್ಷೆಗೇ ಬಂಧಿಸುತ್ತದೆ.

ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಯಾವುದನ್ನು ಮಾಡುವುದರಿಂದ ತನಗೂ ಮತ್ತು ಲೋಕಕ್ಕೂ  ಒಳಿತು ಎಂಬುದನ್ನು ನಮ್ಮ ಋಷಿಗಳು ಹೇಳಿಹೋದರು. ’ಲೋಕಹಿತಂ ಮಮಕರಣೀಯಂ’-ನನ್ನ ಕರಣಗಳಿಂದ, ನನ್ನ ಆಚರಣೆಗಳಿಂದ, ನನ್ನ ಜೀವನ ಧಾರಣೆಯಿಂದ ಲೋಕಕ್ಕೆ ಹಿತವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುತ್ತದೆ ಸನಾತನ ಜೀವನಧರ್ಮ. ಯಾರನ್ನೋ ಪರಿವರ್ತಿಸು, ಪರಿವರ್ತಿತರಾಗದ ಕಾಫಿರ್ ರನ್ನು ಬಾಂಬುಗಳನ್ನು ಹಾಕುವ ಮೂಲಕ ಬೆದರಿಸು ಪರಿವರ್ತಿಸು, ಕೊಲೆ-ಸುಲಿಗೆ-ಅತ್ಯಾಚಾರ-ಜಿಹಾದ್-ಅಪಚಾರಗಳ ಮೂಲಕ ಹಿಮ್ಮೆಟ್ಟಿಸಿ ಘಾಸಿಗೊಳಿಸಿ ಪರಿವರ್ತಿಸು-ಎಂದು ಸನಾತನ ಜೀವನಧರ್ಮ ಹೇಳುವುದಿಲ್ಲ. ಅಂಥಾದ್ದಕ್ಕೆ ಆಸ್ಪದವನ್ನೂ ಕೊಡುವುದಿಲ್ಲ. ತಾನು ಬದುಕುವುದರ ಜೊತೆಗೆ ಇತರರಿಗೆ ಏನೂ ತೊಂದರೆಯಾಗದಂತೇ ತಾನು ಬದುಕುವ ನೀತಿಗಳನ್ನು ಸನಾತನತೆ ಹೇಳಿಕೊಡುತ್ತದೆ. ಸನಾತನ ಮೌಲ್ಯಗಳನ್ನು ಅರಿಯಲಾಗದ ದುರ್ಬಲ ಮನಸ್ಕರು ಜಾತೀಯತೆಯ ಗಾಳಿಯಲ್ಲಿ ತೇಲುತ್ತಿರುತ್ತಾರೆ. ಕೆಲವರು ಅನ್ಯಮತಗಳಲ್ಲಿನ ಮಾನೆಟರಿ ಬೆನಿಫಿಟ್ ಕಂಡು ಬಿಸಿಲ್ಗುದುರೆಯ ಬೆನ್ನೇರಿ ಅದಕ್ಕೆ ಪರಿವರ್ತಿತರಾಗುತ್ತಾರೆ. ಭಾರತೀಯ ಮೌಲ್ಯಗಳನ್ನು ಸರಿಯಾಗಿ ಅರಿತರೆ ಜೀವನ ದುರ್ಭರವೆನಿಸಲು ಸಾಧ್ಯವೇ ಇಲ್ಲ. ಮೌಲ್ಯಗಳನ್ನೇ ಮೈಲಿಗೆಮಾಡಲು ಮುಂದಾದ ರಾಜಕಾರಣಿಗಳ ಉದ್ಘೋಷಗಳಲ್ಲಿ ಮೂಲ ಜೀವನಕ್ರಮದ ರಹದಾರಿ ತಪ್ಪಿಹೋಗಿದೆ.    

ಸನಾತನತೆ ಕರೆಕೊಡುತ್ತದೆ:"ಮನುಜ, ನಿನಲ್ಲಿಯೇ ಇರುವ ವಿಶಿಷ್ಟವಾದ ಪ್ರತಿಭೆಯಿಂದ ನಿನ್ನ ಕಕ್ಷೆಗೆ ನೀನು ಸೇರಲು ಪ್ರಯತ್ನಿಸು. ಕಕ್ಷೆಗೆ ಸೇರುವ ದಾರಿಯಲ್ಲಿ ಅಡ್ಡಲಾಗಿ ಬರುವ ತೊಂದರೆಗಳನ್ನು ಗಮನಿಸಿ, ಅದನ್ನು ಕೆಲವೊಮ್ಮೆ ಸಹಿಸಿ, ಕೆಲವೊಮ್ಮೆ ನಿವಾರಿಸಿ ಜೀರ್ಣಿಸಿಕೊಂಡು ಸಾಧನೆಮಾಡು. ಸಾಧನೆಯಿಂದಲಷ್ಟೇ ಕಕ್ಷೆಯನ್ನು ತಲ್ಪಲು ಸಾಧ್ಯ, ಗಮ್ಯವನ್ನು ತಲ್ಪಲು ಸಾಧ್ಯ. ಸಾಧಿಸುವವರೆಗೂ ಸಮಾಜದ ಕೀಳುಜನ ನಿನ್ನ ಕಾಲೆಳೆಯುತ್ತಲೇ ಇರುತ್ತಾರೆ. ನಿನ್ನಲ್ಲಿನ ಬಲ ವೃದ್ಧಿಸಿದಾಗ, ನಿನ್ನಲ್ಲಿನ ತೇಜಃಪುಂಜ ಪ್ರಕಾಶಮಾನವಾದಾಗ, ಅವರ ಕಾಲೆಳೆತಗಳಿಂದ ತಪ್ಪಿಸಿಕೊಂಡು ಕಕ್ಷೆಗೆ ನೀರು ಸೇರುತ್ತೀಯೆ, ನಿನ್ನ ಗುರಿಯನ್ನು ನೀನು ತಲ್ಪುತ್ತೀಯೆ."

ರಾಮನ ಗುರಿ ರಾವಣನ ವಧೆ ಮಾಡುವುದಾಗಿರಲಿಲ್ಲ; ಅನ್ಯಾಯವನ್ನು ಅಧರ್ಮವನ್ನು ವಧೆಮಾಡುವುದಾಗಿತ್ತು. ಕೃಷ್ಣನ ಗುರಿ ಕೌರವನ ವಧೆಯಾಗಿರಲಿಲ್ಲ, ಧರ್ಮಸಂಸ್ಥಾಪನೆಯಾಗಿತ್ತು. ಇಂದಿನ ಕಲುಷಿತ ಸಮಾಜದಲ್ಲಿ ನಮ್ಮ ಮಧ್ಯೆ ರಾವಣನನ್ನೂ ಕೌರವನನ್ನೂ ಹೊಗಳುವ ಜನ ಇದ್ದಾರೆ! ಅಂತಹ ಹೆಸರುಗಳನ್ನೇ ಇಟ್ಟುಕೊಂಡು ವಿಜೃಂಭಿಸುವವರಿದ್ದಾರೆ. ಭೀಷ್ಮ-ಕರ್ಣರಂತಹ ಪಾತ್ರಗಳನ್ನು ತೋರಿಸಿ ಭಾರತಕಥೆಯಲ್ಲಿ ವ್ಯಾಸರು ತಪ್ಪುಮಾಡಿದರೆಂದು ದೂಷಿಸುವ ದುಶ್ಶಾಸನರಿದ್ದಾರೆ; "ವ್ಯಾಸರು ಬ್ರಾಹ್ಮಣರಾಗಿದ್ದರು-ಅದಕ್ಕೇ ಹಾಗೆ ಬರೆದರು" ಎಂದು ವದಂತಿ ಹಬ್ಬಿಸುವ ಧೂರ್ತರಿದ್ದಾರೆ! ಪಾತ್ರಗಳ ಔಚಿತ್ಯ ಮತ್ತು ಪಾತ್ರಗಳ ಹುಟ್ಟಿಗೆ ಕಾರಣಗಳು ಲಭ್ಯವಿದ್ದರೂ ಪೂರ್ಣಕಥೆಯನ್ನು ತಿಳಿದುಕೊಳ್ಳಲು ಅನೇಕರಿಗೆ ಸಮಯವಿಲ್ಲ. ರಾಮ ಮತ್ತು ಕೃಷ್ಣರು ಕಕ್ಷೆಗೆ ಸೇರಲು ಅವರಲ್ಲಿನ ಪ್ರತಿಭೆಯೇ ಕಾರಣವಾಗಿತ್ತು; ಅವರು ಅನುಸರಿಸಿದ ನ್ಯಾಯಸಮ್ಮತ ಮಾರ್ಗ ಕಾರಣವಾಗಿತ್ತು. ಕಾಲೆಳೆಯುವ ಜನ ಅಂದೂ ಇದ್ದರು, ಆದರೆ ಜೀವನಮೌಲ್ಯಗಳನ್ನು ಅರಿತ ಮಹನೀಯರು ಹೆಚ್ಚಿನಸಂಖ್ಯೆಯಲ್ಲಿದ್ದರು. ನಾವಿಂದು ತಿಳಿದುಕೊಳ್ಳಬೇಕು: ನಮ್ಮಲ್ಲಿಯೇ ರಾಮನಿದ್ದಾನೆ, ನಮ್ಮಲ್ಲಿಯೇ ಕೃಷ್ಣನೂ ಇದ್ದಾನೆ, ಅಂತಹ ಮಹನೀಯರು ತುಳಿದ ಹಾದಿಯಲ್ಲಿ ಅವರ ಆದರ್ಶಗಳನ್ನೇ ಅನುಸರಿಸಿ ಬಲವನ್ನು ಗಳಿಸಬೇಕು, ಪ್ರಾಬಲ್ಯ ಗಳಿಸಬೇಕು, ಆಗ ಕಕ್ಷೆ ಲಭಿಸುತ್ತದೆ! ಹಾರ-ತುರಾಯಿ ಯಾವುದೂ ಬೇಡ, ಅಲೌಕಿಕವಾದ ಆನಂದ, ತೃಪ್ತಿ ಮತ್ತು ಅನನ್ಯಭಾವ ನಮ್ಮದಾದರೆ ಅಂತಹ ದೊಡ್ಡ ಗೌರವ ಇನ್ನಾವುದಿರಲು ಸಾಧ್ಯ? ಕಾಲೆಳೆತಕ್ಕೆ ಹೆದರಬೇಡಿ; ಕಕ್ಷೆಯ ಕಡೆಗೆ ತೆರಳದೇ ಇರಬೇಡಿ, ಎಲ್ಲರಿಗೂ ಗೆಲುವಿನ ಕಕ್ಷೆ ಸಿಗಲಿ, ದೇಶದಲ್ಲಿ ಸುಭಿಕ್ಷವಾಗಲಿ, ಲೋಕಕ್ಕೆ ಹಿತವಾಗಲಿ. ಶುಭದಿನ.   
      

Wednesday, September 11, 2013

ಪ್ರಣವಾರಾಧನೆ-ಗಣಪನ ಹಬ್ಬದ ವಿಶ್ಲೇಷಣೆ.

ಪ್ರಣವಾರಾಧನೆ-ಗಣಪನ ಹಬ್ಬದ ವಿಶ್ಲೇಷಣೆ.
                                                  
ಶುಭದ ಭಾದ್ರಪದ ಮಾಸ ಬಂದಿತೆಂದರೆ ಎಲ್ಲರಿಗೂ ಸಂಭ್ರಮವೇ. ಅದಕ್ಕೆ ಕಾರಣಗಳು ಹಲವಾರು. ಮುಂಗಾರು ಮಳೆಯನ್ನುಂಡು ಸಮೃದ್ಧಗೊಂಡ ಇಳೆ, ಹೊಳೆಹೊಳೆವ ಹಸಿರನ್ನುಟ್ಟು ಎಲ್ಲರ ಕಣ್ಣನ್ನು ತಂಪುಮಾಡುತ್ತಾಳೆ. ರೈತರು ಭೂಮಿಯನ್ನು ಉತ್ತು, ಬಿತ್ತಿದ ಹಣ್ಣು-ಕಾಯಿಗಳಲ್ಲಿ ಬಹುವಿಧ ಫಲಗಳು ಈ ಸಮಯದಲ್ಲಿ ಉಪಭೋಗಕ್ಕೆ ಒದಗುವುದರಿಂದ ಬೆಳೆದ ರೈತಾಪಿ ವರ್ಗ ಮತ್ತು ಕೊಂಡುಕೊಳ್ಳುವ ಗ್ರಾಹಕ ವರ್ಗ ಎಲ್ಲರೂ ಸಂಭ್ರಮಿಸುವ ’ಫಲಾವಳಿ’ಯ ಕಾಲ ಇದಾಗಿದೆ. ತಡಬೇಸಿಗೆಯಲ್ಲಿ ಬೆಳೆದ ಮಾವು-ಹಲಸುಗಳಿಂದ ಹಿಡಿದು ಸೇಬು, ಅನಾನಸು, ದಾಳಿಂಬೆ, ಮೂಸಂಬಿ, ಚಿಕ್ಕು, ಕಿತ್ತಳೆ, ಚಕ್ಕೋತ ಮೊದಲಾದ ಹಣ್ಣುಗಳು ಪ್ರಕೃತಿಯಲ್ಲಿದ್ದರೆ ಸೌತೇ-ಹೀರೆ-ಬೆಂಡೆ-ಬದನೆ-ಪಡುವಲವೇ ಮೊದಲಾದ ತರಕಾರಿಗಳು ನಾಟಿ ರೂಪದಲ್ಲಿ ರುಚಿಯಾಗಿ ಲಭಿಸುವ ಕಾಲವಿದು. ಶ್ರಾವಣದಲ್ಲಿ ವಿವಿಧ ದೇವಾನುದೇವತೆಗಳನ್ನು ಜನರು ಪೂಜಿಸಿದರೆ ಭಾದ್ರಪದ ಗೌರೀ-ಗಣೇಶರಿಗೆ ಬಹು ಪ್ರಿಯವಾದ ಮಾಸ. ಪ್ರಮಥ ಗಣಗಳಿಗೆ ನಾಯಕನಾದ ಗಣಪತಿ ಶಿವ-ಶಿವೆಯರ ಕಂದನಾಗಿ, ಅಯೋನಿಜನಾಗಿ ಅವರತರಿಸಿದ ಪರ್ವದಿನ ಗಣೇಶ ಚೌತಿ. ಕೃಷ್ಣನಿಗೋ ರಾಮನಿಗೋ ಜಯಂತಿಯಿದ್ದಂತೇ ಗಜಮುಖನಿಗೆ ಇದು ಹುಟ್ಟುಹಬ್ಬ.

ಗಣಪತಿ ಹಬ್ಬವನ್ನು ಹೇಗೆ ಆಚರಿಸಬೇಕು? ಅದಕ್ಕೊಂದು ರೀತಿನೀತಿಗಳಿಲ್ಲವೇ? ಇಂದು ನಡೆಯುತ್ತಿರುವ ಕ್ರಮಗಳೆಲ್ಲಾ ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾದರೆ, ಒಂದೊಂದೇ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ಗಜಮುಖ ಎಂಬುದು ಪರಬ್ರಹ್ಮನ ಒಂದು ರೂಪ ಎಂದು ಆರ್ಷೇಯ ಮುನಿಜನ ಅನುಭವದಿಂದ ಸಾರಿದ್ದಾರೆ. ನಿರಾಕಾರನೂ ನಿರ್ಗುಣನೂ ಆದ ದೇವರಿಗೆ ಆಕಾರ ಹೇಗೆ ಬಂತು ಎಂಬುದನ್ನು ಅವಲೋಕಿಸಿದರೆ, ಮೂಲದಲ್ಲಿ ಪರಬ್ರಹ್ಮ ಎರಡು ರೀತಿಯಲ್ಲಿ ವ್ಯವಸ್ಥಿತನಾಗಿದ್ದಾನೆ. ಒಂದು ನಿರ್ಗುಣ, ನಿರಾಕಾರ, ನಿರ್ವಿಕಾರದ ರೂಪರಹಿತ ಸ್ಥಿತಿ, ಇದನ್ನು ’ಇನಾಕ್ಟಿವ್ ಸ್ಟೇಟಸ್’ ಎನ್ನಬಹುದು, ಇನ್ನೊಂದು ಸಾಕಾರ, ಸಗುಣ, ರೂಪಸಹಿತವಾದ ’ಆಕ್ಟಿವ್ ಸ್ಟೇಟಸ್.’ ಎರಡೂ ಮುಖಗಳಿದ್ದರೆ ಮಾತ್ರ ಒಂದು ನಾಣ್ಯಕ್ಕೆ ಹೇಗೆ ಬೆಲೆ ದೊರೆಯುತ್ತದೋ, ಹಾಗೆಯೇ ಶಕ್ತಿಪುಂಜಕ್ಕೆ ಎರಡು ಮುಖಗಳು ಎಂಬುದನ್ನು ಗಮನಿಸಬೇಕು. ಇದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಮಿಕ್ಕ ವಿವರಣೆ ಅರ್ಥಹೀನವಾಗುತ್ತದೆ. ಅಥವಾ ಪರಬ್ರಹ್ಮ ಸಕ್ರಿಯನೋ ನಿಷ್ಕ್ರಿಯನೋ ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಓಂಕಾರ ಬಿಂದು ಸಂಯುಕ್ತಂ ನಿತ್ಯ ಧ್ಯಾಯಂತಿ ಯೋಗಿನಾಂ |
ಕಾಮದಂ ಮೋಕ್ಷದಂ ಚೈವ ಓಂ ಕಾರಾಯತೇ ನಮಃ ||

ಸನಾತನ ಧರ್ಮದಲ್ಲಿ ಎಲ್ಲಾ ಪೂಜೆಗಳಿಗೂ ಆದಿಯಲ್ಲಿ, ಎಲ್ಲಾ ಮಂತ್ರಗಳಿಗೂ ಆದಿಯಲ್ಲಿ ’ಓಂ’ಕಾರವನ್ನು ಬಳಸುತ್ತೇವೆ. ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳೆಂಬ ಮೂರು ಕ್ರಿಯೆಗಳಿಗೆ ಹೋಲಿಕೆಯಾಗಿ ಅ, ಉ, ಮ ಎಂಬ ಮೂರು ಸ್ವರಬೀಜಗಳ ಸಂಗಮವಾದ ’ಓಂ’ ಕಾರವನ್ನು ನಮ್ಮ ಋಷಿಗಳು ಕಂಡುಕೊಂಡರು. ಜಗದ ಎಲ್ಲಾ ಕಾರ್ಯಗಳೂ ಯಾರ ನಿಯಂತ್ರಣದಲ್ಲೂ ಇಲ್ಲ ಎಂದು ನಾವಂದುಕೊಳ್ಳುವುದಾದರೆ ಸೂರ್ಯ ಪೂರ್ವದಲ್ಲೇ ಮೂಡುವುದು-ಪಶ್ಚಿಮದಲ್ಲೇ ಮುಳುಗುವುದು, ಸೂರ್ಯನ ಸುತ್ತ ಸೌರಮಂಡಲದಲ್ಲಿ ಇರುವ ಆಕಾಶ ಕಾಯಗಳು, ಗ್ರಹಗಳು, ನಕ್ಷತ್ರಗಳು ಒಂದು ನಿರ್ದಿಷ್ಟ ವ್ಯವಸ್ಥೆಗೆ ಒಳಪಟ್ಟಿರುವುದು ನಮಗೆ ಕಂಡುಬರುತ್ತದೆ. ಹಾಗಾದರೆ ಇವನ್ನೆಲ್ಲಾ ಯಾರು ಮಾಡಿದರು? ಗೊತ್ತಿಲ್ಲ! ವೈಜ್ಞಾನಿಕರ ಪ್ರಯೋಗಶಾಲೆಯಲ್ಲಿ ಎಚ್ಟೂಓ ಎಂದು ಅಣುಗಳನ್ನು ಸೇರಿಸುತ್ತಾ ಕುಳಿತರೆ ಪ್ರಾಯಶಃ ಹತ್ತಾರು ಜನರಿಗೂ ಕುಡಿಯಲೂ ಸಹ ನೀರು ಸಿಗುವುದು ಕಷ್ಟವಾಗುತ್ತಿತ್ತು. ಕಣ್ಣಿಗೆ ಕಾಣದ ಆದರೆ ತನ್ನ ಅಸ್ಥಿತ್ವವನ್ನು ತೋರ್ಪಡಿಸುವ ಗಾಳಿಯಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ -ಇವುಗಳನ್ನು ಪಂಚಭೂತಗಳೆಂದು ನಮ್ಮ ಋಷಿಗಳು ಗುರುತಿಸಿದರು. ನಾವು ಈಗಿರುವ ಬ್ರಹ್ಮಾಂಡದ ತೆರನಾದ ಲಕ್ಷಾಂತರ ಬ್ರಹ್ಮಾಂಡಗಳು ಇವೆಯೆಂದೂ ಅವು ನಮಗೆ ಗೋಚರವಲ್ಲವೆಂದೂ ಹೇಳಿದರು. ವಿಜ್ಞಾನ ಒಂದೊಂದೇ ಮೆಟ್ಟಿಲೇರುತ್ತಾ, ಇದೀಗ ನಮ್ಮ ಗೆಲಾಕ್ಸಿಯ ಹೊರಗೆ ಎರಡನೇ ಗೆಲಾಕ್ಸಿಯನ್ನು ಕಂಡಿದೆ ಎಂಬುದು ಶ್ರುತಪಟ್ಟಿದೆ! ಅಂದರೆ ವಿಜ್ಞಾನ ಕಾಣಬೇಕಾದ ಸತ್ಯಗಳು ಇನ್ನೂ ಎಷ್ಟೆಷ್ಟೋ ಬಾಕಿ ಇವೆ.

ಪ್ರಪಂಚದ ಸೃಷ್ಟಿಯಾದಾಗಿನಿಂದ  ಈ ಬ್ರಹ್ಮಾಂಡದಲ್ಲಿ ’ಓಂ’ ಎಂಬ ಸತತವಾಗಿ ಹಿನ್ನೆಲೆಯಲ್ಲಿ ಇದ್ದೇ ಇದೆಯೆಂಬುದು ಅವರ ಹೇಳಿಕೆಯಾಗಿದೆ. ಆ ’ಓಂ’ಕಾರ ಯಾವುದರ ಸದ್ದು ಎಂಬುದನ್ನು ತಿಳಿಯಲು ಮುಂದಾದರೆ ಅದು ಬ್ರಹ್ಮ ವಸ್ತುವೇ ಆಗಿದೆ. ರೆಸಾನನ್ಸ್ ಎಂದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು, ಮರುಕಂಪನ ಎಂದು ಅದನ್ನು ಕನ್ನಡದಲ್ಲಿ ಹೇಳಬಹುದು. ’ಓಂ’ಕಾರ ರೆಸಾನನ್ಸ್ ಆಗಿ ಕೇಳುತ್ತಲೇ ಇರುತ್ತದೆ ಎಂದು ಋಷಿಗಳು ತಿಳಿಸಿದರು. ಹಾಗಾದರೆ ನಮಗೆಲ್ಲಾ ಆ ಸದ್ದು ಕೇಳಿಸುವುದಿಲ್ಲವೇಕೆ ಎಂದರೆ ನಾವು ಆದರೆಡೆಗೆ ಲಕ್ಷ್ಯ ಕೊಡುವುದೇ ಇಲ್ಲ! ಶರೀರದೊಳಗಿನ ಹೃದಯಕ್ಕೆ ಬಡಿತವಿದೆ, ಅಲ್ಲೊಂದು ಕ್ರಮಬದ್ಧ ಮಿಡಿತವಿದೆ ಎಂಬುದು ನಮಗೆಗೊತ್ತು. ಹೃದಯದ ಸದ್ದನ್ನು ಬಹಳ ಹತ್ತಿರದಿಂದ ಕಿವಿಗೊಟ್ಟು ಆಲಿಸಿದರೆ ಮಾತ್ರ ಕೇಳುತ್ತದೆ. ಅದೇರೀತಿ, ’ಓಂ’ಕಾರ ವನ್ನು ಆಲಿಸಬೇಕೆಂದರೆ ಅದಕ್ಕೆ ಕೆಲವು ರಿವಾಜುಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಓಂಕಾರದ ಸದ್ದನ್ನು ನಾವು ಆಲಿಸಬಹುದಾಗಿರುತ್ತದೆ. 

ಯೋಗಿಗಳು ತಮ್ಮ ಹೃದಯದಲ್ಲಿಯೂ ಮತ್ತು ಹೊರಗಡೆಗೂ ಓಂಕಾರವನ್ನೇ ಕೇಳುತ್ತಾರೆ, ಧ್ಯಾನಿಸುತ್ತಾರೆ ಎಂಬುದು ತಾಪಸರ ಅಭಿಪ್ರಾಯ. ’ಓಂ’ಕಾರ ವನ್ನೇ ಆಲೈಸಿ ಓಲೈಸುವುದಾದರೆ ನಾವು ವಿರಕ್ತರಾಗಬೇಕಾಗುತ್ತದೆ. ಸಂಸಾರಿಗಳಾದರೆ ನಮಗೆ ತಗಲುವ ಜಂಜಡಗಳ ಗೋಜಲಿನಲ್ಲಿ ಓಂಕಾರ ಕೇಳಿಸಲು ಸಾಧ್ಯವಿಲ್ಲ; ಓಂಕಾರ ಕೇಳಲು ತೊಡಗಿದರೆ ನಾವು ಸಂಸಾರದಲ್ಲಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಯೋಗಿಗಳು, ತ್ಯಾಗಿಗಳು, ತಾಪಸರು ಅದನ್ನೇ ದಿನವೂ ಕ್ಷಣವೂ ಧೇನಿಸುತ್ತಿರುತ್ತಾರೆ, ಧ್ಯಾನಿಸುತ್ತಿರುತ್ತಾರೆ. ಓಂಕಾರದೆಡೆಗೆ ಏಕಾಂತದಲ್ಲಿ ಏಕಮುಖರಾಗದೇ ಲೋಕಾಂತದಲ್ಲಿ ಬಹಿರ್ಮುಖರಾಗಿರುವ ಸಂಸಾರಿಗಳು ಸತತವಾಗಿ ಅದನ್ನು ಧ್ಯಾನಿಸಿದರೆ ಲೌಕಿಕವ್ಯವಹಾರ ನಡೆಯಲು ಸಾಧ್ಯವಿಲ್ಲ. ಅದರಿಂದಾಗಿ ಓಂಕಾರ ಜಪವನ್ನು ವಿರಕ್ತರಿಗೆ ಮಾತ್ರ ಹೇಳಿದ್ದಾರೆ. ಸಂಸಾರಿಗಳು ಓಂಕಾರವನ್ನು ಹಿತಮಿತವಾಗಿ ಜಪಿಸಬಹುದು, ಬಳಸಬಹುದೇ ಹೊರತು ’ಫುಲ್ ಟೈಮ್ ಜಾಬ್’ ರೀತಿಯಲ್ಲಿ ಜಪಿಸಬಾರದು ಎಂದೇ ಋಷಿಗಳು ಅಪ್ಪಣೆಕೊಡಿಸಿದ್ದಾರೆ.  

ಓಂಕಾರವೇ ಬ್ರಹ್ಮನ್ ಅಥವಾ ಪರಬ್ರಹ್ಮ ಎಂಬುದನ್ನು ಋಷಿಗಳು ವಿಶದಪಡಿಸಿದ್ದಾರೆ. ನಿರ್ದಿಷ್ಟ ಆಕಾರವಿಲ್ಲದ ಓಂಕಾರವನ್ನು ವಿವಿಧ ಲಿಪಿಗಳಲ್ಲಿ ವಿವಿಧ ಬಗೆಗಳಲ್ಲಿ ನಾವು ಕಂಡರೂ ಉಚ್ಚರಿಸಿದಾಗ ಭಾಷಾತೀತವಾದ ಅದರ ಅನುರಣನ ನಮ್ಮ ಅನುಭೂತಿಗೆ ನಿಲುಕುತ್ತದೆ. ಓಂಕಾರವನ್ನೇ ’ಪ್ರಣವ’ ಎಂತಲೂ ಹೇಳಿರುವುದರಿಂದ ಪ್ರಣವ ಸ್ವರೂಪನೆಂದು ಪರಬ್ರಹ್ಮನನ್ನು ನಾವು ಕರೆಯುತ್ತೇವೆ. ಅಂತಹ ಓಂಕಾರ-ಪ್ರಣವಸ್ವರೂಪನೆನಿಸಿದ ನಿರಾಕಾರದ, ನಿರ್ಗುಣದ ಸಗುಣರೂಪವೇ ಗಣಪತಿ. ಜನಗಣ, ಪಶುಗಣ, ವೃಕ್ಷಗಣ, ಹೀಗೇ ಈ ಬ್ರಹ್ಮಾಂಡದಲ್ಲಿ ಅಸಂಖ್ಯ ವಿಷಯಗಳ ಗಣಗಳಿವೆ. ನಮಗೆ ಅಸಂಖ್ಯವೆನಿಸುವ ಗಣಗಳೆಲ್ಲದರ ಪಕ್ಕಾ ಲೆಕ್ಕಾಚಾರ ಜಗನ್ನಿಯಾಮಕ ಶಕ್ತಿಗಿದೆ! ಗಣಗಳೆಲ್ಲದರ ನಾಯಕ/ಪತಿ ಗಣ-ನಾಯಕ/ಪತಿ ಎಂಬುದನ್ನು ನಾವು ತಿಳಿಯಬೇಕು. ಇಂತಹ ಗಣಪತಿ ತನ್ನದೇ ಉಪಪತ್ತಿಯಾದ ಶಿವ-ಶಿವೆಯರಿಗೆ ಮಗನಾಗಿ ಲಭಿಸಿದ ದಿನವೇ ಭಾದ್ರಪದ ಶುದ್ಧ ಚತುರ್ಥಿ ಎಂಬುದು ತಿಳಿದುಬರುತ್ತದೆ.   

ಭಾದ್ರಪದ ಶುದ್ಧ ಚೌತಿಯ ಮುನ್ನಾದಿನ,ಗಣಪತಿಯನ್ನು ಸ್ಥಾಪಿಸುವ ಜಾಗದಲ್ಲಿ ಸ್ವಚ್ಛತಾ ಕೆಲಸ ನಡೆದಮೇಲೆ,ಪೂರ್ವ ತಯಾರಿಯಾಗಿ ಪ್ರಕೃತಿಯಲ್ಲಿ ಸಿಗುವ ನಾನಾವಿಧದ ಹಣ್ಣು-ಕಾಯಿಗಳನ್ನು ಸಂಗ್ರಹಿಸಿ ಅವುಗಳನ್ನು ಗೊತ್ತಾದ ಆಕಾರದಲ್ಲಿ ನೇತುಬಿಟ್ಟು ’ಫಲಾವಳಿ’ಯನ್ನು ನಿರ್ಮಿಸಬೇಕು. ಗಜಮುಖನಾದ ಗಣಪನಿಗೆ ಹಣ್ಣು-ಕಾಯಿಗಳು ಬಹಳ ಇಷ್ಟವಾದುದರಿಂದ ಅಲಂಕಾರಕ್ಕಾಗಿಯೂ ಮತ್ತು ಅರ್ಪಣೆಯಾಗಿಯೂ ಅವುಗಳನ್ನು ಹಾಗೆ ಕಟ್ಟುವುದು ಒಪ್ಪಿತ ವಿಷಯ. ಕಬ್ಬು-ಬಾಳೆಕಂಬಗಳಿಂದಲೂ ಮತ್ತು ಮಾವಿನ ತುಂಕೆ[ಎಲೆಗಳ ಗುಚ್ಛ]ಗಳಿಂದಲೂ ಹೂವಿನ ಹಾರಗಳಿಂದಲೂ[ಮರದ ಮಂಟಪವೇನಾದರೂ ಇದ್ದರೆ ಬಳಸಿಕೊಂಡು]     ಮಂಟಪವನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಮಂಟಪದ ಮುಂದೆ ರಂಗೋಲಿ ಇಟ್ಟು, ಅದಕ್ಕೆ ಅರಿಶಿನ-ಕುಂಕುಗಳನ್ನು ಹಾಕಿ ಅತಿಥಿಗಳ ಆಹ್ವಾನಕ್ಕೆ ಸಿದ್ಧವಾದ ಹಾಗೇ ತಯಾರಿ ನಡೆಸಿಕೊಳ್ಳಬೇಕು. ಹೊತ್ತಾರೆ ಆ ದಿನ, ಶೌಚ-ಸ್ನಾನಾದಿಗಳನ್ನು ತೀರಿಸಿಕೊಂಡು, ಹುತ್ತದ ಅಥವಾ ಗದ್ದೆಯ ಮಣ್ಣಿನಿಂದ ಗಜಮುಖದ ಆಕಾರವನ್ನು ನಿರ್ಮಿಸಿಕೊಂಡು, ಅದನ್ನು ದೇವರಮುಂದೆ ಮಣೆಯಮೇಲೆ ಪ್ರತಿಷ್ಠಾಪಿಸಿ, ಗಂಧ-ಪುಷ್ಪ-ಧೂಪ-ದೀಪ-ನೈವೇದ್ಯ ವೆಂಬ ಪಂಚೋಪಚಾರದಿಂದಾಗಲೀ ಅಥವಾ

ಅಬ್ಯುತ್ಥಾನಂ ಸು-ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾ ಚ ಮೌಚ |
ಸ್ನಾನಂ ವಾಸೋ ಭೂಷಣಾಂ ಗಂಧಮಾಲ್ಯೇ
ಧೂಪೋದೀಪಃ ಸೋಪಹಾರಃ ಪ್ರಣಾಮ ||

ಧ್ಯಾನ-ಆವಾಹನ-ಆಸನ-ಅರ್ಘ್ಯ-ಪಾದ್ಯ-ಮಧುಪರ್ಕ-ಸ್ನಾನ-ಗಂಧ-ವಸ್ತ್ರ-ಹೂಮಾಲೆ-ಧೂಪ-ದೀಪ-ನೈವೇದ್ಯ-ಕಾಣಿಕೆ-ಪ್ರದಕ್ಷಿಣಾಪೂರ್ವಕ ಪ್ರಾರ್ಥನೆ-ಪ್ರಣಾಮ ಮೊದಲಾದ ಕೈಂಕರ್ಯಗಳಿಂದ ಷೋಡಶೋಪಚಾರ ಪೂಜೆಯನ್ನು ನಡೆಸಬೇಕು. ವೃತ್ತಿನಿರತ ಪುರೋಹಿತರು/ವೈದಿಕರು ಸಿಕ್ಕಿದರೆ ಅವರ ಮಾರ್ಗದರ್ಶನದಲ್ಲಿ ಪೂಜೆಯನ್ನು ನಡೆಸಿ, ಅವರಿಗೊಂದಷ್ಟು ದಕ್ಷಿಣೆ ಕೊಟ್ಟು-ಹಣ್ಣು ಇತ್ಯಾದಿಗಳನ್ನು ಕೊಟ್ಟು, ಅವರಿಂದ ಪ್ರಸಾದ ಸ್ವೀಕರಿಸುವುದು ಅತ್ಯುತ್ತಮ ಪೂಜಾ ವಿಧಾನ. ಪುರೋಹಿತರು ಮಂತ್ರೋಕ್ತವಾಗಿ ಗಣಪನನ್ನು ಬೀಳ್ಕೊಟ್ಟಮೇಲೆ, ಆ ವಿಗ್ರಹವನ್ನು ಹರಿವ ತೊರೆ/ಹಳ್ಳ/ನದಿ/ಕೆರೆ/ಸಮುದ್ರಗಳ ಶುದ್ಧನೀರಿನಲ್ಲಿ ವಿಸರ್ಜಿಸಬೇಕು-ಇದು ನಿಜವಾದ ಪೂಜಾ ನಿಯಮ. 

ಚತುರ್ಥಿಯ ಗಣಪನಿಗೆ ಒಂದೇ ಪೂಜೆ. ಆದರೆ ಜನಪ್ರಿಯನಾದ ಅವನಿಗೆ ಜನ ಕಾಲಕ್ರಮದಲ್ಲಿ ಬೇಕುಬೇಕಾದ ಹಾಗೇ ಪೂಜೆಸಲ್ಲಿಸಲು ತೊಡಗಿದರು. ವಿಗ್ರಹಗಳನ್ನೂ ಕಲಾತ್ಮಕವಾಗಿ ಮಾಡುವ ಕೌಶಲವನ್ನು ಬೆಳೆಸಿಕೊಂಡರು, ಬಣ್ಣ-ಬೇಡಗೆ ಹಚ್ಚಿ ನೋಡುವ ಕಣ್ಣಿಗೂ ಮತ್ತಷ್ಟು ಹಬ್ಬವಾಗಿ ಕಾಣುವಂತೇ ಮಾಡಿಕೊಂಡರು. ಬರುಬರುತ್ತಾ ನೈಸರ್ಗಿಕ ಬಣ್ಣಗಳ ಬದಲಿಗೆ ರಾಸಾಯನಿಕ ಬಣ್ಣಗಳನ್ನೂ, ಮಣ್ಣಿನ ವಿಗ್ರಹಗಳ ಬದಲಿಗೆ ’ಪ್ಲಾಸ್ಟರ್ ಆಫ್ ಪ್ಯಾರಿಸ್’ ವಿಗ್ರಹಗಳನ್ನೂ ತಯಾರಿಸಹತ್ತಿದರು. ಗಾಂಧಿ, ನೇತಾಜಿ, ಸೈನಿಕ, ಸಾಯಿಬಾಬಾ, ಕ್ರಿಕೆಟ್ ಆಟಗಾರ ಇಂತಹ ಛದ್ಮವೇಷಗಳಲ್ಲಿ ಗಣಪನನ್ನು ಕಾಣಲು ಬಯಸಿದರು-ತಯಾರಿಸಿದರು. ಆದರೆ ಇವು ಯಾವುದನ್ನೂ ಧರ್ಮಶಾಸ್ತ್ರ ಒಪ್ಪುವುದಿಲ್ಲ. ನಗರಗಳಲ್ಲಿ ಅನುಕೂಲವಾದಾಗಲೆಲ್ಲಾ ಗಲ್ಲಿಗಳಲ್ಲಿ ಗಣಪತಿಯ ವಿಗ್ರಹಗಳನ್ನಿಟ್ಟು, ಒಂದಷ್ಟು ಹೂವು-ಹಣ್ಣು ತಂದು ಪೂಜೆಯ ಶಾಸ್ತ್ರ ಮಾಡುತ್ತಿದ್ದಾರೆ. ಮೈಕಿನಲ್ಲಿ ಇಡೀದಿನ ಅಪದ್ಧವೆನಿಸುವ ಸಿನಿಮಾ ಹಾಡುಗಳನ್ನೆಲ್ಲಾ ಹಾಕಿ, ಸಿನಿಮಾ ಹಾಡುಗಳೂ ನೃತ್ಯಗಳೂ ಸೇರಿದ ಆರ್ಕೆಷ್ಟ್ರಾ ಮಾಡಿಸಿ ಹಡಾಲೆಬ್ಬಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವವೆನ್ನುತ್ತ ಸಂಗ್ರಹಿಸಿದ ಹಣದಲ್ಲಿ ಒಂದಷ್ಟನ್ನು ಉಳಿಸಿಕೊಂಡು ಮೋಜು-ಮಜಾ ಮಾಡಲು ಬಳಸಿಕೊಳ್ಳುತ್ತಾರೆ! ಇದಾವುದನ್ನೂ ಕೂಡ ಸನಾತನ ಧರ್ಮದ ಚೌಕಟ್ಟು ಒಪ್ಪುವುದಿಲ್ಲ. ಪೂಜೆ ವಿಧಿವತ್ತಾಗಿ ಯಾವಾಗ-ಹೇಗೆ-ಎಲ್ಲಿ-ಯಾವರೀತಿಯಲ್ಲಿ ನಡೆಯಬೇಕೋ ಹಾಗೆ ನಡೆದರೆ ಮಾತ್ರ ಅದಕ್ಕೊಂದು ಫಲವಿದೆಯೇ ಹೊರತು ಇಲ್ಲದಿದ್ದರೆ ಅದು ವಿಕೃತಿಯೆನಿಸುತ್ತದೆ-ನಿಷ್ಫಲವಾಗುತ್ತದೆ.           



Sunday, September 1, 2013

ಶಾರ್ಪ್ ದಿ ಪೆನ್ಸಿಲ್ ಫಾರ್ ಶಾರ್ಪ್ ಇಮೇಜಸ್

 ಚಿತ್ರಋಣ : ಅಂತರ್ಜಾಲ
ಶಾರ್ಪ್ ದಿ ಪೆನ್ಸಿಲ್ ಫಾರ್ ಶಾರ್ಪ್ ಇಮೇಜಸ್

ಅದೊಂದು ಗೊಂಡಾರಣ್ಯ. ಹಳೆಹಳೆಯ ಎತ್ತರದ ನಿತ್ಯಹರಿದ್ವರ್ಣ ಮರಗಳು, ಹೆಬ್ಬಲಸು-ನೇರಳೆ-ಆಲ ಇತ್ಯಾದಿ ಮತ್ತಿನ್ನಾವುದೋ ಕಾಡುಮರಗಳು ಒತ್ತೊತ್ತಾಗಿ ಬೆಳೆದು ಪರಸ್ಪರ ಸ್ನೇಹಸಂಪಾದಿಸಿ ಸುಖಿಸುತ್ತಿದ್ದ ಆ ಕಾಡಿನ ಕೆಲವೆಡೆಗಳಲ್ಲಿ ಹೆಜ್ಜೆಹಾಕಿದ ಕೆಲವರಿಗೆ ಏನೋ ಕಂಡಂತಾಯ್ತು. ಪೊದೆಗಳನ್ನು ಸವರಿ ಮುಂದಕ್ಕೆ ನಡೆದರೆ ಕಟ್ಟೆಯಂತಹ ಯಾವುದೋ ಕಲ್ಲು ಕಾಣತೊಡಗಿತ್ತು. ಮತ್ತಷ್ಟು ಕಣ್ಣರಳಿಸಿ ಮುಂದೆ ಸಾಗಿದರೆ ಹೆಮ್ಮರಗಳ ಮಧ್ಯದಿಂದ ಸೂರ್ಯನ ಬೆಳಕು ಸಾಕಷ್ಟು ಕೆಳಗೆ ತಲ್ಪದ ಜಾಗದ ಮಬ್ಬಿನಲ್ಲಿ ಮತ್ತಷ್ಟು ಅಸ್ಪಷ್ಟ ಆಕಾರಗಳು ಗೋಚರವಾದಂತಿದ್ದವು. ಕಾಡೊಳಗೆ ಚಾರಣಕ್ಕೆ ತೆರಳಿದ ಜನ ಮತ್ತಷ್ಟು ಪ್ರಯತ್ನಿಸಿ ಅಗೆದಗೆದು, ಕಡಿಕಡಿದು ಜಾಗ ಬಿಡಿಸಿದರೆ ಅಲ್ಲೊಂದು ದೇಗುಲದ ಪ್ರಾಕಾರದ ಗೋಡೆಯಾಕಾರ ಕಾಣತೊಡಗಿತ್ತು. 

ಶೋಧನೆ ಮುಂದುವರಿದಾಗ ಪಾಣಿಪೀಠ ಅಡ್ಡಬಿದ್ದಿರುವುದು ಕಾಣಿಸಿತು, ಬೃಹದಾಕಾರದ ಲಿಂಗವೊಂದು ಅಡ್ಡಡ್ಡ ಮಲಗಿತ್ತು, ಪಕ್ಕದಲ್ಲೇ ಅತಿಸುಂದರವಾದ ಅಮ್ಮನವರ ವಿಗ್ರಹವೊಂದು ಅನತಿ ದೂರದಲ್ಲಿ ಕಾಣುತ್ತಿತ್ತು! ಬೆತ್ತದ ಬಳ್ಳಿಗಳು ಬಲೆನೇಯ್ದು ಹುತ್ತಬೆಳೆದು ಹತ್ತಿರಹೋಗಲು ಹೆದರಿಕೆಯಾಗುತ್ತಿದ್ದ ಜಾಗವದು. ಹಿಂದೆ ಯಾವುದೋ ಶತಮಾನದಲ್ಲೋ ಸಹಸ್ರಮಾನದಲ್ಲೋ ಅಲ್ಲಿ ದೇವಸ್ಥಾನವೆಂಬುದು ಇತ್ತೆಂಬುದಕ್ಕೆ ಅದು ಸಾಕ್ಷಿ. ಅಲ್ಲಿ ಅಮೋಘವಾದ ಪೂಜೆಗಳೂ ವೇದಘೋಷಗಳೂ ನಡೆದಿರುವ ಸಾಧ್ಯತೆಗಳು ದಟ್ಟವಾಗತೊಡಗಿತ್ತು. ಹರಿದುಬಿದ್ದ ಪ್ರಾಕಾರದ ಕಲ್ಲುಗಳೆಲ್ಲಾ ಒಂದೊಂದು ವಿಶಿಷ್ಟ ಆಕಾರವನ್ನು ಹೊಂದಿದ್ದವು, ಸುಂದರವಾಗಿದ್ದವು, ಗತಕಾಲದಲ್ಲೊಂದು ವೈಭವದ ದಿನಗಳನ್ನು ಅನುಭವಿಸಿದ ಕಥೆಯನ್ನು ಹೇಳುತ್ತದ್ದವು! ಅಲ್ಲಲ್ಲಿ ಶಿಲೆಯ ಹಣತೆಯಾಕಾರಗಳೂ ನಂದಿಯ ವಿಗ್ರಹವೂ ಸಹಿತ ದೊರಕಿದವು. ಚಾರಣಿಗರು ಅದನ್ನು ಅಷ್ಟಕ್ಕೇರ್ ಬಿಡಲಿಲ್ಲ, ಯಾರೋ ಜ್ಯೋತಿಷ್ಕರನ್ನು ಕೇಳಿದರು. ಅಲ್ಲೊಂದು ಪ್ರಸಿದ್ಧ ದೇವಸ್ಥಾನವಿದ್ದಿತ್ತೆಂದೂ ತ್ರಿಕಾಲ ಪೂಜೆ ನಡೆಯುತ್ತಿತ್ತೆಂದೂ ಅದನ್ನು ಮರಳಿ ನಿರ್ಮಿಸಿ ದೇವರ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಿ ಪೂಜೆ-ಪುನಸ್ಕಾರಗಳನ್ನು ಸಾಂಗವಾಗಿ ನಡೆಸಹತ್ತಿದರೆ ನಿಮಗೆಲ್ಲಾ ಶ್ರೇಯಸ್ಸು ಲಭಿಸುವುದೆಂದೂ ಆತ ಹೇಳಿದ.  

ಚಾರಣಿಗರು ಏಳೆಂಟು ಕಿ.ಮೀ ದೂರದ ತಮ್ಮ ಊರಿಗೆ ಮರಳಿದರು, ಹಾಳುಬಿದ್ದ ದೇವಸ್ಥಾನವನ್ನು ಪುನಾರಚಿಸುವ ಶುಭಸಂಕಲ್ಪವನ್ನು ಕೈಗೊಂಡರು. ಕಾಡದಾರಿಯಲ್ಲಿ ವಾಹನ ಹೋಗುವಂತಿರಲಿಲ್ಲ, ಕಲ್ಲು,ಮರಳು, ಸಿಮೆಂಟು ವಗೈರೆ ಸಾಗಾಟಕ್ಕೆ ಆ ಗುಡ್ಡದ ದುರ್ಗಮಹಾದಿ ಸಮಸ್ಯೆಗಳ ಸವಾಲನ್ನು ಮುಂದಿಟ್ಟಿತ್ತು. ತಕ್ಕಮಟ್ಟಿಗಾದರೂ ದೇವಸ್ಥಾನವನ್ನು ಕಟ್ಟದೇ ಮತ್ತೆ ಪೂಜೆ ಆರಂಭಿಸುವುದು ಅಲ್ಲಿನ ವಿಗ್ರಹಗಳನ್ನು ನೋಡಿದ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಅತ್ತಕಡೆ ನೋಡಿದರೆ, ಪರಿಸರದಲ್ಲಿ ಸಾಮಗ್ರಿಗಳ ಸಾಗಾಟಕ್ಕೆ ಕಷ್ಟ, ಅಗತ್ಯ ಬೇಕಾದ ನೀರಿಗೆ ಬಾವಿಯ ವ್ಯವಸ್ಥೆಯಾಗಬೇಕಿತ್ತು, ಎಲ್ಲದಕ್ಕೂ ಮುಖ್ಯವಾಗಿ ಖರ್ಚಿಗೆ ಹಣದ ಅಗತ್ಯ ತೀವ್ರವಾಗಿತ್ತು. ಚಾರಣಿಗರು ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಅನಾದಿಯಲ್ಲಿದ್ದ ದೇವಸ್ಥಾನದ ಸುದ್ದಿ ತಿಳಿಸಿ ಅದರ ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡುವಂತೇ ಕೋರಿದರು. ಬಹಳ ಜನ ಕೊಟ್ಟರು, ಕೆಲವರು ತಗಾದೆ ತೆಗೆದರು, ಕೆಲವರು ಬೈದು ಕಳಿಸಿದರು --ಹೀಗೇ ಎಲ್ಲವನ್ನೂ ದೇವರ ಹೆಸರಿನಲ್ಲಿ ಚಾರಣಿಗರು ಸ್ವೀಕರಿಸಿದರು.

ಸ್ವತಃ ಭಕ್ತಿಯಿಂದ ಅನೇಕ ಸಾಮಗ್ರಿಗಳನ್ನು ಹೊತ್ತು ನಡೆದರು, ಒಂದಷ್ಟು ಜನರನ್ನು ಸಂಬಳಕ್ಕೆ ನೇಮಿಸಿ ಬಾವಿ ತೋಡಿಸಲು ಮುಂದಾದಾಗ, ಸುಮಾರು ಇಂಥದ್ದೇ ಜಾಗ ಆಗಬಹುದೆಂದು ನಿರ್ಣಯಿಸಿ ಅಗೆದರೆ ಮತ್ತೊಂದು ಆಶ್ಚರ್ಯ ಕಾದಿತ್ತು! ಅಲ್ಲೊಂದು ಪುಷ್ಕರಿಣಿಯ ಪಾವಟಿಗೆಗಳು ಕಾಣತೊಡಗಿದ್ದವು! ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ದೇವಸ್ಥಾನ, ಪುಷ್ಕರಿಣಿ ಎಲ್ಲದರ ಕೆಲಸವೂ ಸಾಂಗವಾಯ್ತು. ಘನಪಾಠಿಗಳೂ ತಂತ್ರಿಗಳೂ, ಆಗಮಿಕರೂ ಬಂದು ಪ್ರಶಸ್ತವದ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪರಿಷ್ಠಾಪನಾಂಗ ನಾನಾ ತೆರನಾದ ಹೋಮ-ಹವನಾದಿಗಳನ್ನು ನಡೆಸಿದರು. ಗರ್ಭಗುಡಿಯಲ್ಲಿ ಎಣ್ಣೆಯ ದೀಪಗಳ ಮುಂದೆ ದೇವರ ವಿಗ್ರಹಗಳು ಕಂಗೊಳಿಸುತ್ತಿರುವುದನ್ನು ಕಂಡಾಗ ಚಾರಣಿಗರ ತಾವು ಅನುಭವಿಸಿದ ಕಷ್ಟಗಳೆಲ್ಲಾ ಮರೆತುಹೋದವು. ಮರಗಳನ್ನೂ ಕಡಿಯದೇ ಅಧುನಿಕ ಕಟ್ಟಡ ತಂತ್ರಗಾರಿಕೆಯಿಂದ ಮರಗಳನ್ನು ಉಳಿಸಿಕೊಂಡೇ ದೇವಸ್ಥಾನವನ್ನು ಕಟ್ಟಿದ ಹೆಮ್ಮೆ ಅವರದ್ದಾಗಿತ್ತು. ಕೆಲವು ಬೆತ್ತದ ಬಳ್ಳಿಗಳನ್ನು ಮಾತ್ರ ಭಾಗಶಃ ಕಡಿದಿದ್ದರಷ್ಟೆ. ಈಗದೊಂದು ಸುಂದರ ದೇವಸ್ಥಾನ ಸಹಿತ ಚಾರಣತಾಣವಾಗಿತ್ತು. ಸಾವಿರಾರು ಜನ ಬಂದು ಹೋಗುವುದಕ್ಕೆ ಆರಂಭಿಸಿದರು.

ದೂರದ ಊರುಗಳಿಂದ ಅಲ್ಲಿಗೆ ಬರುವ ಚಾರಣಿಗರು ಕಟ್ಟಡ ಕಟ್ಟಿಸಿದ ಮೂಲ ಚಾರಣಿಗರ ಊರಿನ ಮೂಲಕವೇ ಅಲ್ಲಿಗೆ ಹೋಗಬೇಕಿತ್ತು. ಪಟ್ಟಣಗಳ ಜನ, ನಗರಗಳ ಜನ ಅಲ್ಲಿಗೆ ಬಂದಾಗ ದೇವಸ್ಥಾನ ಕಟ್ಟಿಸಿದವರ ಪರಿಚಯವಾಗಿ, ಅವರಲ್ಲಿರುವ ಗಿಡಮೂಲಿಕೆಯ ಔಷಧಗಳನ್ನು ಕೊಂಡೊಯ್ಯತೊಡಗಿದರು. ಕಾಲಕ್ರಮದಲ್ಲಿ ಮೂಲ ದೇವಸ್ಥಾನ ಕಟ್ಟಿಸಿದ ಊರ ಚಾರಣಿಗರಿಗೆ ನಾಟಿ ವೈದ್ಯವೃತ್ತಿಯೇ ಹೆಸರನ್ನೂ ಸಂಪತ್ತನ್ನೂ ಗಳಿಸಿಕೊಟ್ಟಿತು.

ನಮ್ಮ ನಡುವೆ ಅದೆಷ್ಟೋ ಪ್ರತಿಭೆಗಳು ಹುದುಗಿಯೇ ಇರುತ್ತವೆ. ಸಮಾಜವೆಂಬ ಕಾಡಿನಲ್ಲಿ, ನಾಗರಿಕತೆಯ ಹೆಮ್ಮರಗಳ ನಡುವೆ, ಸ್ವಾರ್ಥದ ಬೀಳಲುಗಳೂ ಬೆತ್ತಗಳೂ ಬಲೆ ಹೆಣೆದುಕೊಂಡು, ಅವ್ಯವಸ್ಥೆಗಳ ಪೊದೆಗಳೊಳಗೆ, ಅವಕಾಶ ರಹಿತ ಹುತ್ತಗಳಲ್ಲಿ ಪ್ರತಿಭೆಗಳ ದೇವವಿಗ್ರಹಗಳು ಹುದುಗಿರುತ್ತವೆ. ಹಿಂದೆ ಯಾವುದೋ ಜನ್ಮದಲ್ಲಿ ಇದೇ ಲೋಕದಲ್ಲಿ ವಿಜೃಂಭಿಸಿದ್ದ ಆ ಪ್ರತಿಭೆಗಳು ಕಾಲಾನಂತರದಲ್ಲಿ ಈ ಲೋಕ ಬಿಟ್ಟುಹೋಗಿ ಮತ್ತೆ ಈ ಲೋಕದಲ್ಲಿ ಇನ್ನೊಂದು ಜನವೆತ್ತಿಬಂದಿರುತ್ತವೆ. ಅಂತಹ ಪ್ರತಿಭೆಗಳ ವಿಗ್ರಹಗಳನ್ನು ಹುಡುಕುವ ಕೆಲಸ ಸಂಸ್ಕಾರವಂತ ಚಾರಣಿಗರಿಂದ ಮಾತ್ರ ಸಾಧ್ಯ. ಪ್ರತಿಭೆಗಳ ವಿಗ್ರಹಗಳಿದ್ದಲ್ಲಿಗೆ ಹೋಗಬೇಕಾದರೆ ಅನೇಕ ಅಡೆತಡೆಗಳನ್ನು ಎದುರಿಸಿಕೊಂಡೇ ಹೋಗಬೇಕಾಗುತ್ತದೆ. ಸ್ವಾರ್ಥದ ಬೀಳಲುಗಳನ್ನೂ ಬೆತ್ತಗಳನ್ನೂ ಭಾಗಶಃ ಕಡಿದು, ನಾಗರಿಕತೆಯ ಹೆಮ್ಮರಗಳನ್ನು ಹಾಗೇ ಉಳಿಸಿಕೊಂಡು, ಪ್ರತಿಭೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅವುಗಳಿಗೆ ಸಂಸ್ಕಾರದ ದೇವಸ್ಥಾನವನ್ನು ಕಟ್ಟಬೇಕು. ಸಂಸ್ಕಾರದ ದೇವಸ್ಥಾನ ಕಟ್ಟುವುದಕ್ಕೆ ಉತ್ಕೃಷ್ಟ ಜೀವನಧರ್ಮ, ಸಂಸ್ಕೃತಿ, ಸದಾಶಯ, ನ್ಯಾಯ, ನೀತಿ ಮೊದಲಾದ ಸಾಮಗ್ರಿಗಳು ಬೇಕು. ಸಾಮಗ್ರಿಗಳಿಗೂ ಮೊದಲು ತಾಳ್ಮೆಯುಕ್ತ ಸಮಯದ ಹಣಬೇಕು. ಪ್ರತಿಭಾವಿಗ್ರಹಗಳು ಪ್ರತಿಷ್ಠಾಪಿಸಲ್ಪಟ್ಟಮೇಲೆ ಅಲ್ಲಿಗೆ ನಿತ್ಯವೂ ದೂರದ ಚಾರಣಿಗರು ಬಂದು ದರ್ಶಿಸಿ ಸಂತೋಷಪಡುತ್ತಾರೆ. ಚಾರಣಿಗರು ಬಂದುಹೋಗುವಾಗ ಸಂಸ್ಕಾರವಂತ ಚಾರಣಿಗರಿಂದ ಪ್ರತಿಭಾವಿಗ್ರಹಗಳು ಪ್ರತಿಷ್ಠಾಪಿತವಾದ ಬಗ್ಗೆ ತಿಳಿದುಕೊಳ್ಳುತ್ತಾರೆ, ಸಮಾಜೋದ್ಧಾರದ ಹಣಕೊಟ್ಟು ಸಂಸ್ಕಾರದ ಗಿಡಮೂಲಿಕೆಯನ್ನು ಅವರು ಕೊಂಡೊಯ್ಯುತ್ತಾರೆ. ಸಂಸ್ಕಾರವಂತ ಚಾರಣಿಗರು ಸಮಾಜೋದ್ಧಾರದ ವೃತ್ತಿಯನ್ನೇ ಆಯ್ದುಕೊಳ್ಳಬಹುದು. ಅದರಿಂದ ಅವರಿಗೆ  ಗೌರವದ ಸಂಪತ್ತು ಸಿಗುತ್ತದೆ.

ಇವತ್ತಿನ ಸಮಾಜದಲ್ಲಿ, ಅದೂ ಮಹಾನಗರಗಳಲ್ಲಿ ೮೮ ಪರ್ಸೆಂಟು ಮಾರ್ಕ್ಸ್ ತೆಗೆದ ವಿದ್ಯಾರ್ಥಿಗಳನ್ನು ತಮ್ಮ ಸ್ಕೂಲಿಗೆ ಸೇರಿಸಿಕೊಂಡು ೯೮ ಪರ್ಸೆಂಟು ಮಾರ್ಕ್ಸ್ ತೆಗೆಯುವಂತೇ ಮಾಡುವ ಅನೇಕ ಶಿಕ್ಷಣಸಂಸ್ಥೆಗಳಿವೆ.  ೩೩ ಪರ್ಸೆಂಟು ಮಾರ್ಕ್ಸ್ ತೆಗೆದುಕೊಂಡವರನ್ನು ಮೂಸಿಯೂ ನೋಡದ ಅವರಿಗೆ ಪ್ರತೀವರ್ಷ ತಮ್ಮ ಮಕ್ಕಳ ಫಲಿತಾಂಶ ಪ್ರಗತಿಯನ್ನು ಹೇಳಿಕೊಳ್ಳುವುದೊಂದು ಹೆಮ್ಮೆ; ಜೊತೆಗೆ ಅದರಿಂದ ಹೊಸ ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗಿ ಹೆಚ್ಚಿಗೆ ಡೊನೇಶನ್ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ೯೮ ಪರ್ಸೆಂಟು ಮಾರ್ಕ್ಸ್ ತೆಗೆದ ವಿದ್ಯಾರ್ಥಿ ಜೀವನಪಥದಲ್ಲೂ ಸಕ್ರಿಯವಾಗಿ ಅಷ್ಟನ್ನೇ ಗಳಿಸುತ್ತಾನೆನ್ನಲು ಸಾಧ್ಯವಿಲ್ಲ. ವಾಣಿಜ್ಯಕವಾಗಿ ಸ್ವಾರ್ಥಕ್ಕಾಗಿ ನಡೆಸುವ ಶಿಕ್ಷಣ ಸಂಸ್ಥೆಗಳಿಂದ ಪಠ್ಯಕ್ರಮದಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಅಲಕ್ಷ್ಯಕ್ಕೊಳಗಾಗುತ್ತಾರೆ. ಹೆಚ್ಚಿನ ಅಂಕಗಳನ್ನು ಪಡೆದವರಷ್ಟೇ ಯೋಗ್ಯತಾವಂತರೆಂದು ಹೇಳುವುದು ಸಾಧ್ಯವಿಲ್ಲ. ನಾಗರಿಕತೆಯಲ್ಲಿ ಪಠ್ಯಕ್ರಮವೆಂಬುದು ಜನಸಾಮಾನ್ಯರು ಕಲಿತುಕೊಳ್ಳಬೇಕಾದ ಒಂದು ಕ್ರಮ; ಅದರ ಹೊರತಾಗಿಯೂ ಅನೇಕ ವಿದ್ಯೆಗಳಿವೆ ಎಂಬುದನ್ನು ನಾವು ಮರೆಯಬಾರದು. ಯಾವ ವ್ಯಕ್ತಿಯಲ್ಲಿ ಯಾವ ಪ್ರತಿಭೆ ಅಡಗಿದೆಯೆಂದು ಗುರುತಿಸಬೇಕಾದ್ದು ಸಮಾಜದ ಕರ್ತವ್ಯ. ಒಂದೊಮ್ಮೆ ಕೆಲವು ಪ್ರತಿಭೆಗಳಿಗೆ ಅವಕಾಶ ಸಿಗದೇ ಇದ್ದರೆ ಅವರ ಪ್ರತಿಭೆಯಿಂದ ಸಮಾಜಕ್ಕೆ ಸಿಗಬೇಕಾದ ಫಲ ಸಿಗದೇ ಹೋಗಬಹುದು.

ನಾಗರಿಕತೆಗೂ ಸಂಸ್ಕಾರವಂತಿಕೆಗೂ ವ್ಯತ್ಯಾಸವಿದೆ. ಹಳ್ಳಿಗನೊಬ್ಬ ಆಲೆಮನೆಯಲ್ಲಿ ಗಾಣದ ನೊಗವನ್ನೆಳೆಯಲು ಕೋಣವನ್ನು ಕಟ್ಟಿದ್ದ. ಕೋಣದ ಕೊರಳಿಗೆ ಗಂಟೆಯನ್ನೂ ಕಟ್ಟಿದ್ದ. ಕೋಣ ಸುತ್ತಾ ಸುತ್ತುತ್ತಿರುವಾಗ ಗಾಣ ತಿರುಗಿ ಕಬ್ಬು ಹಿಂಡಲ್ಪಡುತ್ತಿತ್ತು. ಪಕ್ಕದಲ್ಲಿ ಬೆಲ್ಲ ಕಾಯಿಸುವುದನ್ನೋ ಇನ್ನೇನನ್ನೋ ಮಾಡಿಕೊಳ್ಳುತ್ತಾ ರೈತ ದೂರದಿಂದಲೇ ಆಗಾಗ "ಹೇಯ್" ಎಂದರೆ ಸಾಕು, ಕೋಣ ಸುತ್ತುತ್ತಿತ್ತು. ಕೊರಳಗಂಟೆ ಸದ್ದುಮಾಡುತ್ತಿದ್ದರೆ ಅದು ತಿರುಗುತ್ತಿದೆಯೆಂದೇ ಅರ್ಥ. ನಗರಿಗನೊಬ್ಬ ಅಲ್ಲಿಗೆ ಬಂದಾಗ ಕೇಳಿದ "ಅಲ್ಲಾ, ನೀವು ಕೋಣದ ಕೊರಳಿಗೆ ಗಂಟೆಕಟ್ಟಿದ್ದೀರಿ. ಕೇಳಿದರೆ ಗಂಟೆಯ ಸದ್ದಿನಿಂದ ಕೋಣ ಸುತ್ತುತ್ತಿದೆಯೋ ನಿಂತಿದೆಯೋ ಗೊತ್ತಾಗುತ್ತದೆ ಎನ್ನುತ್ತೀರಿ. ಒಂದೊಮ್ಮೆ ಕೋಣ ನಿಂತಲ್ಲೇ ಕತ್ತನ್ನು ಅಲ್ಲಾಡಿಸಿ ಗಂಟೆ ಸದ್ದನ್ನು ಹೊರಡಿಸುತ್ತಿದ್ದರೆ ಆಗ ನಿಮಗೆ ಗೊತ್ತಾಗುವುದೇ ಇಲ್ಲವಲ್ಲಾ?" ಎಂದಾಗ ರೈತ ಹೇಳಿದ "ನೋಡಿ ಸ್ವಾಮೀ, ಅದು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕೋಣ. ಹಾಗಾಗಿ ಅದಕ್ಕೆ ಕಳ್ಳತನ ಮೈಗಳ್ಳತನವೆಲ್ಲಾ ತಿಳೀದು." ನಿಂತಲ್ಲೇ ಕತ್ತು ಅಲ್ಲಾಡಿಸಿ ಗಂಟೆ ಸದ್ದುಬರುವಂತೇ ಮಾಡುವುದು ನಾಗರಿಕತೆಯ ಶಿಷ್ಟಾಚಾರವೆನಿಸಬಹುದು-ಸಂಸ್ಕಾರವೆನಿಸುವುದಿಲ್ಲ. ಅನ್ನಕೊಟ್ಟ ಒಡೆಯನ ಊಳಿಗವನ್ನು ಮಾಡುವ ಸಲುವಾಗಿ ಗಾಣವನ್ನು ತಿರುಗಿಸುವ ಹೃದಯವಂತಿಕೆ ಕೋಣಕ್ಕಿರುವ ಸಂಸ್ಕಾರ.  

ಇನ್ನೊಂದು ಮಾತನ್ನು ನಾವು ನೆನಪಿಡಬೇಕು: ವಿದ್ಯೆ ಇರುವವರೆಲ್ಲಾ ಸಂಸ್ಕಾರವಂತರೆಂದು ಅಂದುಕೊಳ್ಳಬೇಕಿಲ್ಲ. ಪಠ್ಯಕ್ರಮದಂತೇ ಕೆಲವು ವಿಷಯಗಳಿಗಷ್ಟೇ ಬದ್ಧರಾಗಿ, ಅವುಗಳನ್ನಷ್ಟೇ ಓದಿಕೊಂಡ ಜನ ಅವುಗಳಾಚೆಗಿನ ಜಗತ್ತಿನಲ್ಲಿರುವ ಉನ್ನತ ಮತ್ತು ಉದಾತ್ತ ಅಂಶಗಳನ್ನು ತಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಳ್ಳದೇ ಇರಬಹುದು. ಓಡಾಡುವಾಗ ಕಾಣುವ ಅನಕ್ಷರಸ್ಥ ಹಳ್ಳಿಗರಿಗೆ ಪಠ್ಯಕ್ರಮದ ವಿದ್ಯೆ ದೊರೆಯದಿರಬಹುದು, ಆದರೆ ಬದುಕುವ ವಿದ್ಯೆಯಲ್ಲಿ ಅವರು ಪರಿಣತರು. ನವನಾಗರಿಕತೆಯ ಪಠ್ಯಕ್ರಮಗಳಲ್ಲಿ ಓದಿಕೊಂಡು ವೃತ್ತಿನಿರತರಾದ ಜನರ ವ್ಯಾಪಾರೀ ಬುದ್ಧಿಗಿಂತ ಹಳ್ಳಿಗರ ಮುಗ್ಧ ಮನಸ್ಸನ್ನು ನಾನು ಮೆಚ್ಚುತ್ತೇನೆ. ಶಿಷ್ಟಾಚಾರದ ಉಪಚಾರಕ್ಕಿಂತ ಹೃದಯವಂತಿಕೆಯಿಂದ ಸಹಜವಾಗಿ ನೀಡುವ ಉಪಚಾರ ಬಹಳ ದೊಡ್ಡದು. ಎಷ್ಟೋ ಸಲ ಹಳ್ಳಿಗರ ಹೃದಯವಂತಿಕೆ, ಅವರ ಸಂಸ್ಕಾರಗಳೆದುರು ನಗರಿಗರು ತಲೆತಗ್ಗಿಸಬೇಕಾದ ಹಂತ ಎದುರಾಗುತ್ತದೆ. ನವೆಲ್ಲಾ ಚೆನ್ನಾಗಿ ಓದಿಕೊಂಡಿರಬಹುದು, ಶಿಷ್ಟಾಚಾರಗಳನ್ನೂ ಕಲಿತಿರಬಹುದು, ಆದರೆ ಹಳ್ಳಿಗರಲ್ಲಿರುವ ಕಲ್ಮಷ ರಹಿತ ಸಂಸ್ಕಾರ ನಮ್ಮಲ್ಲಿದೆಯೇ ಎಂಬುದನ್ನು, ಆಗಾಗ ನಮ್ಮನ್ನೇ ನಾವು ಪರೀಕ್ಷೆಗೆ ಒಡ್ಡಿಕೊಂಡು ಪ್ರಶ್ನಿಸಬೇಕು.  ನಮ್ಮೊಳಗಿನ ಬುದ್ಧಿಯೆಂಬ ಮೊಂಡು ಪೆನ್ಸಿಲ್ಲನ್ನು ಉತ್ತಮ ಸಂಸ್ಕಾರಗಳಿಂದ ಶಾರ್ಪ್ ಮಾಡಿಕೊಳ್ಳಬೇಕು. ಚೂಪಾಗಿರುವ ಪೆನ್ಸಿಲ್ಲಿನಿಂದ ಮಾತ್ರ ತೆಳುವಾದ ರೇಖೆಯುಳ್ಳ ಸುಂದರ ಚಿತ್ರ ಮೂಡಲು ಸಾಧ್ಯ. ಮೊಂಡಾಗಿದ್ದರೂ ಚಿತ್ರವೇನೋ ಮೂಡುತ್ತದೆ, ಆದರೆ ಅಕ್ಕಪಕ್ಕದಲ್ಲಿಟ್ಟಾಗ ಚಿತ್ರಗಳಲ್ಲಿ ವ್ಯತ್ಯಾಸವನ್ನು ಗಮನಿಸಬಹುದಾಗಿರುತ್ತದೆ.       


Monday, August 5, 2013

ಪ್ರತೀ ಸರ್ತಿ ಎದುರಾದಾಗಲೂ ಹೊಸದಾಗಿ ಪರಿಚಿತರಾದ ತಾಜಾತನವಿದ್ದರೆ ವಿಶ್ವಾಸವಿದೆಯೆಂದೇ ಅರ್ಥ!

ಚಿತ್ರಋಣ: ಅಂತರ್ಜಾಲ 

ಪ್ರತೀ ಸರ್ತಿ ಎದುರಾದಾಗಲೂ ಹೊಸದಾಗಿ ಪರಿಚಿತರಾದ ತಾಜಾತನವಿದ್ದರೆ ವಿಶ್ವಾಸವಿದೆಯೆಂದೇ ಅರ್ಥ!

ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು
ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ
ಪರಿಪರಿಯ ಭಾವಗಳ ಗೂಢಸ್ವಭಾವಗಳ
ಪರಮೇಷ್ಠಿ ಟೀಕುಕಲೆ-ಮಂಕುತಿಮ್ಮ

ಮುಂಗಾರಿನ ಹಂಗಾಮು ಹಿಂಗಾರಿನವರೆಗೂ ಹಮ್ಮಿಕೊಂಡಂತೇ, ಸುರಿಯುತ್ತಿರುವ ಮಳೆಯಲ್ಲೂ ಜನ ಜಾಗವಿಲ್ಲದೇ ನಿಂತು ನೋಡುವಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು!  ಬೆಂಗಳೂರು-ಮಲ್ಲೇಶ್ವರದ ಸೇವಾಸದನದಲ್ಲಿ ಮೊನ್ನೆ ಶನಿವಾರ 03.08.2013ರಂದು ಸಾಯಂಕಾಲ ಆರರಿಂದ ಒಂಬತ್ತರ ವರೆಗೆ ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟವರು ಶತಾವಧಾನಿ ಗಣೇಶ್. ಹಾಡುಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದವರು ವಿದುಷಿ ರಂಜನಿ ವಾಸುಕಿ. ಎಪ್ಪತ್ತೆರಡು ಮೇಳಕರ್ತ ರಾಗಗಳ ಹುಟ್ಟಿನ ಬಗೆಗೆ ವರ್ಣಿಸುತ್ತಾ, ಜೀವನದಲ್ಲಿ ಹುಟ್ಟು, ಶೈಶವ, ಯೌವ್ವನ, ಮುಪ್ಪು, ಮರಣಗಳ ವರೆಗೆ ಎಲ್ಲೆಲ್ಲಿ ಯಾವಯಾವ ರಾಗಗಳ ಬಳಕೆ ಆಗುತ್ತಿದೆ ಎಂಬುದನ್ನು ನಿರೂಪಿಸಿದ ಶೈಲಿ ಬಹಳ ವಿಭಿನ್ನವಾಗಿತ್ತು. ಆಯುರ್ವೇದ ವೈದ್ಯರು ವಾತ-ಪಿತ್ತ-ಕಫ ಈ ಮೂರು ದೇಹ ಪ್ರಕೃತಿಯವರು ಇರುತ್ತಾರೆ ಎಂದರೆ ನಮ್ಮಬಗ್ಗೆ ನಾವು ಅಳೆಯತೊಡಗಿದಾಗ ನಾವು ಯಾವ ಗುಂಪಿಗೆ ಸೇರಿದವರು ಎಂದು ಹೇಳುವುದು ಕಷ್ಟ! ಯಾಕೆಂದರೆ ವಾತ-ಪಿತ್ತ-ಕಫಗಳಲ್ಲಿ ಯಾವುದಾದರೂ ಒಂದು ಅಂಶ ಅತಿಯಾಗಿದ್ದು ಮಿಕ್ಕುಳಿದವು ಕಮ್ಮಿಮಟ್ಟದಲ್ಲಿ ಇದ್ದೇ ಇರುತ್ತವೆ. ಅದೇ ರೀತಿಯಲ್ಲಿ ಮೂಲ ಸ್ವರ-ರಾಗಗಳ ಗೃಹಬದಲಾಣೆಯಿಂದ ಮತ್ತು ಹೊಸಹೊಸ ಮಟ್ಟುಗಳನ್ನು ಸೇರಿಸುವುದರಿಂದ ಹೇಗೆ ಹೊಸಹೊಸ ರಾಗಗಳು ಹುಟ್ಟಿಕೊಂಡವು ಎಂಬುದು ಸಂಗೀತ ವಿದ್ವಾಂಸರಿಗೆ ಮಾತ್ರ ಗೊತ್ತೇ ಹೊರತು ಅವುಗಳ ವಿಭಜನೆ ಮತ್ತು ಮೂಲ ಚಹರೆಯನ್ನು ಪತ್ತೆಹಚ್ಚುವ ಕೆಲಸ ಮಿಕ್ಕವರಿಂದ ಸಾಧ್ಯವಿಲ್ಲ. ಸ್ವತಃ ಸಂಗೀತವನ್ನು ಬಲ್ಲ ಗಣೇಶರು ಅವುಗಳನ್ನು ಎಳೆಯೆಳೆಯಾಗಿ ವಿಭಜಿಸಿ ತೋರಿಸಬಲ್ಲರು! ಕಾರ್ಯಕ್ರಮ ಬಹಳ ಚೆನ್ನಾಗಿ ಸಂಪನ್ನವಾಯ್ತು.     

ಅತ್ಯಂತದುತ್ಕಟದ ಸನ್ನಿವೇರ್ಶಗಳ ಭರ
ಪ್ರತ್ಯಕ್ಷದರ್ಶನದಿನಲ್ಲದೆಂತಹುದು?
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ
ವಿಸ್ತಾರದದ್ಭುತವ?-ಮಂಕುತಿಮ್ಮ

ಕಾರ್ಯಕ್ರಮದ ತರುವಾಯ ನನ್ನಲ್ಲಿ ಶತಾವಧಾನಿಗಳು ಹೇಳಿದ[ಈ ಲೇಖನದ ಶೀರ್ಷಿಕೆಯಾಗಿ ಬಳಕೆಯಾದ]ಮಾತು ಅನುಭವದ ಮೂಸೆಯಿಂದ ಹುಟ್ಟಿದ್ದಲ್ಲವೇ ಎನಿಸಿತು. ಡಾ|ರಾ.ಗಣೇಶರ-ನನ್ನ ನೇರ ಪರಿಚಯವಾಗಿದ್ದು ೧೯೯೭ರಲ್ಲಿ. ಅಲ್ಲಿಂದೀಚೆಗೆ ಅದೆಷ್ಟೋ ಸರ್ತಿ ನಾನು ಅವರನ್ನು ಭೇಟಿಯಾಗುತ್ತಲೇ ಇದ್ದೇನೆ. ವೈಯ್ಯಕ್ತಿಕ ಜೀವನದ ತಮ್ಮ ಕಷ್ಟಗಳೇನೇ ಇದ್ದರೂ ಮನೆಯ ಹಿರಿಯಣ್ಣನಿಗಿಂತ ತುಸು ಗಾಢವಾದ ಆಪ್ತ ಮಾತುಗಳು ಹೊರಬರುತ್ತಲೇ ಇರುತ್ತವೆ. ಕೇವಲ ಕಾಟಾಚಾರಕ್ಕಾಗಿ ಕೇಳದೇ, ಕರುಳಿನಾಳದಿಂದ "ಎಲ್ಲಾ ಕ್ಷೇಮವೇ?" ಎಂದು ಅವರು ಪ್ರತೀ ಸರ್ತಿ [ನಾನು ಅವರಲ್ಲಿ ಕೇಳದಿದ್ದರೂ] ನನ್ನಲ್ಲಿ ಕೇಳುತ್ತಾರೆ! ಗಣೇಶರ ಸಂಪರ್ಕದಲ್ಲಿರುವ ಹಲವು ಸಾವಿರ ಜನರಿಗೆ ಎಲ್ಲರಲ್ಲೂ ಗಣೇಶರ ಬಗ್ಗೆ ಇದೇ ಅನಿಸಿಕೆ ಇರುವುದು ವಿಶೇರ್ಷ ಮತ್ತು ವಿಶಿಷ್ಟ. ಹದಿನೇಳು ವರ್ಷಗಳಿಂದ ನಾವು ಅನೇಕಾವರ್ತಿ ಭೇಟಿಯಾಗುತ್ತಿದ್ದರೂ ಇದಕ್ಕೆ ಚ್ಯುತಿಯಿಲ್ಲ; ಜೊತೆಗೆ ಪ್ರತೀ ಸಲದ ಮಾತುಕತೆಯಲ್ಲಿ ಯಾವುದೋ ಹೊಸ ಅಂಶವನ್ನು ಅವರಿಂದ ಕಲಿತುಕೊಳ್ಳಬಹುದಾಗಿದೆ. ಪರಿಚಿತರಾದಮೇಲೆ ಬಹುಕಾಲ ಅದೇ ತಾಜಾತನ ಇರುವುದು ಕಷ್ಟ-ಜಗತ್ತಿನ ಸಾಮಾನ್ಯ ನಿಯಮ ಅದು.

ತರಣಿದರ್ಶನಕಿಂತ ಕಿರಣಾನುಭವ ಸುಲಭ
ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ
ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ?
ದೊರೆತಂದು ನೀಂ ಧನ್ಯ-ಮಂಕುತಿಮ್ಮ

ಖ್ಯಾತನಾಮರೊಡನೆ ಸಂಭಾಷಿಸುವುದು, ಪರಿಚಯ ಬೆಳೆಸಿಕೊಳ್ಳುವುದು, ಅವರ-ನಮ್ಮ ನಡುವೆ ಬಹಳ ಸ್ನೇಹವಿದೆ ಎಂದು ಇತರರಲ್ಲಿ ಹೇಳಿಕೊಳ್ಳುವುದು ಜನಸಾಮಾನ್ಯರಾದ ನಮಗೆ ಸಹಜವೇ; ಅಂಥವರ ಸ್ನೇಹಿಗಳು ಎಂದು ತೋರಿಸುವುದರ ಮೂಲಕ ನಮ್ಮ ’ತೂಕ’ ಜಾಸ್ತಿ ಮಾಡಿಕೊಳ್ಳಲು ಪ್ರಯತ್ನಿಸುವುದು ಅಡಕವಾಗಿರುವ ಅಂಶ. ಎಲ್ಲರೂ ಇದೇ ದೃಷ್ಟಿಕೋನದಲ್ಲೇ ಪ್ರಸಿದ್ಧರ ಹೆಸರನ್ನು ಹೇಳಿಕೊಳ್ಳುತ್ತಾರೆ ಎಂಬುದು ಮಾತ್ರ ಸುಳ್ಳು; ಕೆಲವರಲ್ಲಿ ಸಹಜವಾಗಿ ಉಕ್ಕಿ ಹರಿವ ಪ್ರೀತಿಯೂ ಸಹ ಹಾಗೆ ಹೇಳಿಕೊಳ್ಳಲು ಕಾರಣವಾಗಬಹುದು. ಪ್ರಸಿದ್ಧರೆಲ್ಲರೂ ಎಲ್ಲರಿಗೂ ಲಭ್ಯರೋ ಸ್ನೇಹಿತರೋ ಆಗಿರಬೇಕಾದ ನಿಯಮವೇನಿಲ್ಲ. ಪ್ರಸಿದ್ಧರು ತಮ್ಮ ಅಭಿಮಾನೀ ಬಳಗವನ್ನು ಕಟ್ಟಿಕೊಳ್ಳುವ ಸಲುವಾಗಿ ಹಾಗೊಮ್ಮೆ ಕೆಲವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿರಲೂ ಸಾಕು. ಆದರೆ ಸಂಸ್ಕೃತಿಯ ಹರಿಕಾರರಿಗೆ ಈ ಲೌಕಿಕ ಕಾರಣಗಳು ಬೇಕಾಗಿಲ್ಲ. ಗಣೇಶರ ಪರಿಚಯಕ್ಕೂ ಮುನ್ನ ಗಣೇಶರ ಪ್ರೌಢಿಮೆಯ ಬಗ್ಗೆ ನಾನು ನಂಬಿರಲೂ ಇಲ್ಲ, ಒಪ್ಪಿರಲೂ ಇಲ್ಲ! ಅವರೊಡನೆ ಸಂಭಾಷಿಸಿದ ಮೇಲೆ, ಅವರ ಕಾರ್ಯವ್ಯಾಪ್ತಿಯನ್ನು ಅರಿತುಕೊಂಡಮೇಲೆ, ಅವರ ಅಧ್ಯಯನ ಸಾಗರದ ಆಳಗಲ ಅಳೆಯದಾದಮೇಲೆ, ಅವರ ನೆನಪಿನ ಅಗಾಧತೆಯ ಸುಳಿಗೆ ಸಿಲುಕಿದ ಮೇಲೆ ನನಗೆ ಅನಿಸಿದ್ದಿಷ್ಟೇ: ಸಂಸ್ಕೃತಿಯ ಪುನಾರಚನೆಗಾಗಿ, ಸಂಸ್ಕೃತಿಯ ಉಳಿವಿಗಾಗಿ ಅದರ ಹರಿಕಾರರಾಗಿ, ಹಳೆಬೇರು-ಹೊಸಚಿಗುರು ಎಂಬುದನ್ನು ಸಿದ್ಧಮಾಡಿ ತೋರಿಸಲಿಕ್ಕಾಗಿ ಗಣೇಶರಂತಹ ದಾರ್ಶನಿಕರ ಅವತಾರವಾಗುತ್ತದೆ-ನನ್ನ ಅನುಭವದ ಪ್ರಕಾರ ಇದು ಅಕ್ಷರಶಃ ಸತ್ಯ. ಅಂತರಂಗದಲ್ಲಿ ಹುಟ್ಟಿದ ಅಪರಿಮಿತ ಪ್ರೀತಿಯಿಂದ ಸಹಜವಾಗಿ ಹೊರಹೊಮ್ಮಿದ ಭಾವಗಳಿಗೆ ಅಕ್ಷರರೂಪ ಕೊಟ್ಟು ಈ ಲೇಖನ ಬರೆಯಲ್ಪಟ್ಟಿತೇ ಹೊರತು ಇದರ ಹಿಂದೆ ಯಾವುದೇ ಪ್ರಲೋಭನೆಯ ಸ್ವಾರ್ಥವಿಲ್ಲ.

ಧನ್ಯತಮವಾಘಳಿಗೆ ಪುಣ್ಯತಮವಾಘಳಿಗೆ
ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು
ಛಿನ್ನವಾದಂದೆ ಸೊಗ-ಮಂಕುತಿಮ್ಮ

ಪೂರ್ವಜರು ಉಪಜೀವನ ಎಂದು ನಮ್ಮ ಖಾಸಗೀ ಜೀವನವನ್ನು ಹೆಸರಿಸಿದ್ದಾರೆ. ದುಡಿಯುವುದು, ಗಳಿಸುವುದು, ಉಣ್ಣುವುದು, ನಿದ್ರಿಸುವುದು, ಬಟ್ಟೆತೊಟ್ಟುಕೊಂಡು ಹಾಯಾಗಿ ಓಡಾಡುವುದು ಇವೆಲ್ಲಾ ಎಲ್ಲರೂ ಮಾಡುವ ಕೆಲಸಗಳೇ. ಅದನ್ನಷ್ಟೇ ಮಾಡುವುದು ಮನುಷ್ಯ ಜೀವನದ ಗುರಿಯಲ್ಲ. ಹಾಗಾದರೆ ಮುಖ್ಯ ಜೀವನಯಾವುದು? ಅಥವಾ ಮನುಷ್ಯನ ಗುರಿಯಾವುದು? ಎಂದರೆ ನಿಜ-ಜ್ಞಾನದ ದರ್ಶನವೇ ಮುಖ್ಯ ಜೀವನ. ನಿಜ ಜ್ಞಾನವನ್ನು ಗಳಿಸುವುದು ತಿಳಿದಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಪೂರಕವಾದ ವೇರ್ದಿಕೆ, ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವುದು ಪ್ರಥಮ ಹಂತದಲ್ಲಾಗಬೇಕಾದ ಕೆಲಸ. ನಂತರ ಅದಕ್ಕೆ ಬೇಕಾಗಬಹುದಾದ ಮನಸ್ಸನ್ನು ಹದಮಾಡಿಕೊಳ್ಳುವುದು ಮುಂದಿನ ಕೆಲಸ. ಮನಸ್ಸನ್ನು ಹದಮಾಡಿಕೊಳ್ಳುವುದಕ್ಕೆ ಪೂರಕವಾಗಿ ಬರುವುದು ನಮ್ಮ ಸನಾತನ ಸಂಸ್ಕೃತಿ-ಇದು ಅನನ್ಯ! ಸಂಸ್ಕೃತಿ ಎಂದರೇನು ಎಂಬ ಪ್ರಶ್ನೆಗೆ ಪ್ರತ್ಯೇಕ ಲೇಖನದಲ್ಲಿ ಉತ್ತರಿಸುತ್ತೇನೆ. ಆದರೆ ಸಂಸ್ಕೃತಿಯಿಲ್ಲದೇ ಹೇಗಾದರೂ ಪ್ರಾಣಿಗಳು ಬದುಕುವಂತೇ ಬದುಕುವುದು ಮಾನವನ ಮುಖ್ಯಜೀವನವಲ್ಲ ಎಂಬುದನ್ನು ಅನುಭವದಿಂದ ಮನಗಂಡ ಪೂರ್ವಜರು ವೈಯ್ಯಕ್ತಿಕ ಜೀವನಕ್ಕೆ "ಉಪಜೀವಿತ" ಎಂದು ಹೆಸರು ಕೊಟ್ಟಿದ್ದಾರೆ. ಗಳಿಕೆಯೇ ತಮ್ಮ ಜೀವಿತದ ಪರಮೋದ್ದೇಶ ಎಂಬುದನ್ನು ತ್ಯಜಿಸಿ,  ಅತ್ಯಂತ ಸರಳವಾದ ಜೀವನಕ್ರಮವನ್ನು ಅನುಸರಿಸುತ್ತಾ ಸಾಧ್ಯವಾದ ಕಡೆಗಳಲ್ಲಿ ಸಂಸ್ಕೃತಿಯನ್ನು ಎತ್ತಿಹಿಡಿಯುವುದು ಬೆರಳೆಣಿಕೆಯ ತ್ಯಾಗಿಗಳಲ್ಲಿ ಇರುವ ಉದ್ದೇಶ.  

ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ
ಆವ ಧೂಳಿನೊಳಾವ ಚೈತನ್ಯಕಣವೋ!
ಜೀವವಿಂತಜ್ಞಾನ ಸೂತ್ರದಾಟದ ಬೊಂಬೆ
ಭಾವಿಸಾ ಸೂತ್ರಗಳ-ಮಂಕುತಿಮ್ಮ

ರಾಮಾಯಣದಲ್ಲಿ ಬರುವ ತ್ರಿಜಟಾ ಎಂಬ ಬ್ರಾಹ್ಮಣನ ಕಥೆ ಇಲ್ಲಿ ಪ್ರಸ್ತುತ ಎಂದುಕೊಳ್ಳುತ್ತೇನೆ. ತ್ರಿಜಟಾ ಒಬ್ಬ ಬಡ ಬ್ರಾಹ್ಮಣ. ಅವನಿಗೆ ಹನ್ನೊಂದು-ಹನ್ನೆರಡು ಮಕ್ಕಳು. ಸಂಸಾರದ ಭಾರ ಹೆಂಡತಿಯಮೇಲಿತ್ತು. ತ್ರಿಜಟಾ ಸೋಮಾರಿಯೋ ಎಂದುಕೊಂಡರೆ ಅಲ್ಲ, ಆದರೆ ಸಂಸಾರದಲ್ಲಿ ಅತಿಯಾದ ಆಸೆಯನ್ನು ಇಟ್ಟುಕೊಂಡವನಲ್ಲ. ಇದ್ದರೆ ಉಣ್ಣುವ ಇರದಿದ್ದರೆ ಹಸಿವನ್ನೇ ಆನಂದಿಸುವ ಅವಧೂತರಂತಹ ವ್ಯಕ್ತಿತ್ವ! ಹುಟ್ಟಿದ್ದ ಆ ಪುಟ್ಟ ಮಕ್ಕಳಕನ್ನೆಲ್ಲಾ ಸಲಹುವ ಜವಾಬ್ದಾರಿಯನ್ನು ಹೊತ್ತ ಆತನ ಹೆಂಡತಿಯ ಕಥೆ ಏನಾಗಬೇಡ! ಚಿಕ್ಕಮ್ಮ ಕೈಕೇಯಿಗೆ ತಂದೆ ದಶರಥನಿತ್ತ ವರ ಮೂಕ ಆಜ್ಞೆಯಾಗಿ ಪರಿಣಮಿಸಿ ಶ್ರೀರಾಮ ವನವಾಸಕ್ಕೆ ಹೊರಟುನಿಂತಿದ್ದ. ರಾಮ ತನ್ನ ಮೈಮೇಲಿದ್ದ ಆಭರಣಗಳು ಮತ್ತು ತನಗೆ ಸಂಬಂಧಿಸಿದ ಹಲವನ್ನು ದಾನವಾಗಿ ಕೊಟ್ಟು ಆತ ಕಾಡಿಗೆ ಹೋಗುವುದೆಂದು ನಿರ್ಧರಿಸಿದ್ದಾನೆ ಎಂಬ ಸುದ್ದಿ ತ್ರಿಜಟನ ಹೆಂಡತಿಗೆ ಹೇಗೋ ತಿಳಿಯಿತು; ಗಂಡನಿಗೆ ಹೇಳಿ"ನೋಡಿ, ಬಡತನದಲ್ಲಿ ಈ ಮಕ್ಕಳನ್ನು ಸಾಕುವುದು ಬಹಳ ಕಷ್ಟ. ಶ್ರೀರಾಮ ತನ್ನ ವಡವೆ-ವಡ್ಯಾಣ ಮೊದಲಾದ ವಸ್ತುಗಳನ್ನೆಲ್ಲಾ ದಾನಮಾಡುತ್ತಾನಂತೆ. ನೀವೂ ಹೋಗಿ ಏನಾದರೂ ಪಡೆದುಬನ್ನಿ" ಎಂದಳು.

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ
ಜಗವ ಸುಡುಗಾಡೆನುವ ಕಟುತಪಸು ಬೇಡ
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ
ಮಿಗೆಚಿಂತೆ ತಲೆಹರಟೆ-ಮಂಕುತಿಮ್ಮ

ಹೆಂಡತಿಯ ಒತ್ತಾಯಕ್ಕೆ ತ್ರಿಜಟಾ ಅಯೋಧ್ಯಾ ನಗರವನ್ನು ತಲ್ಪಿದ. ಹಾಗೆ ತಲ್ಪುವ ಮೊದಲೇ ಶ್ರೀರಾಮ ಎಲ್ಲವನ್ನೂ ದಾನಮಾಡಿ ಮುಗಿಸಿಯಾಗಿತ್ತು. "ಅಯ್ಯಾ, ಶ್ರೀರಾಮ, ದಾನಕೊಡುವ ಸುದ್ದಿ ತಿಳಿದು ಏನಾದರೂ ಸಿಗಬಹುದೇ ಎಂದುಕೊಂಡು ಬಂದೆ" ಎಂದಿದ್ದಕ್ಕೆ ಉತ್ತರವಾಗಿ ಶ್ರೀರಾಮನೆಂದ:"ವಿಪ್ರೋತ್ತಮರೇ, ಬಹಳ ತಡವಾಗಿ ಬಂದಿದ್ದೀರಿ, ಎಲ್ಲವನ್ನೂ ದಾನವಾಗಿ ಕೊಟ್ಟು ಮುಗಿಸಿದ್ದೇನೆ. ಆದರೊಂದುಮಾತು, ಅಗೋ ನೋಡಿ ಅಲ್ಲಿ ಕಾಣುವ ಗೋವುಗಳ ಮೆಂದೆಯನ್ನು, ಕೋಲೊಂದನ್ನು ಬೀಸಿ ಎಸೆಯಿರಿ, ಆ ಕೋಲು ಹೋಗಿಬಿದ್ದ ಜಾಗದವರೆಗಿನ ಹಸುಗಳನ್ನು ತಮ್ಮದೆಂದು ತಮಗೆ ದಾನವಾಗಿ ನೀಡುತ್ತೇನೆ." ತ್ರಿಜಟಾ ತನ್ನಿಂದಾಗುವಷ್ಟೂ ದೂರಕ್ಕೆ ಕೋಲೊಂದನ್ನು ಬೀಸಿ ಎಸೆದ. ಸಾಕಷ್ಟು ಹಸುಗಳು ಕೋಲುಬಿದ್ದ ಜಾಗದೊಳಭಾಗದಲ್ಲೇ ಇದ್ದವು. "ಪರವಾಗಿಲ್ಲ ವಿಪ್ರೋತ್ತಮರೇ, ತಮಗೆ ಶಕ್ತಿಯೇ ಇಲ್ಲವೆಂದುಕೊಂಡಿದ್ದೆ" ಎಂದ ಶ್ರೀರಾಮ "ತಮ್ಮಂಥಾ ವಿಪ್ರರನ್ನು ಹಾಸ್ಯಮಾಡಿದ್ದಕ್ಕೆ ಕ್ಷಮೆಯಿರಲಿ" ಎಂದು ಕೇಳಿಕೊಂಡು, ಮೆಂದೆಯಲ್ಲಿ ಇರುವ ಎಲ್ಲಾ ಗೋವುಗಳನ್ನೂ ತ್ರಿಜಟನಿಗೆ ದಾನವಾಗಿ ನೀಡಿ ಕಾಡಿ, ಗೋವುಗಳನ್ನು ಸಲಹುವ ಗೋವಳನನ್ನು ಕರೆದು"ನೋಡಪ್ಪಾ, ಇಂದಿನಿಂದ ಈ ಎಲ್ಲಾ ಹಸುಗಳು ಈ ವಿಪ್ರೋತ್ತಮರಿಗೆ ಸೇರಿದ್ದು. ಇಲ್ಲಿ ಅವುಗಳನ್ನು ನೋಡಿಕೊಳ್ಳುತ್ತಿದ್ದಂತೆಯೇ ಅವರ ಜೊತೆಗೂ ಇದ್ದು ಗೋವುಗಳನ್ನು ಪಾಲನೆಮಾಡಿಕೊಂಡಿರು" ಎಂದು ಆಜ್ಞಾಪಿಸಿ ಕಾಡಿಗೆ ಹೊರಟುಹೋದ.

ಸುತ್ತಿ ಸುತ್ತುವ ಖಗವ ಗೂಢ ನೆನಪೆಳೆಯುವುದು
ಗೊತ್ತು ನೂಲ್ ಪಿಡಿದಿಹುದು ದನವ ಬಯಲಿನಲಿ
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು?
ಕಿತ್ತ ಗಾಳಿಯ ಪಟವೊ-ಮಂಕುತಿಮ್ಮ

ತ್ರಿಜಟಾ ಗೋವುಗಳನ್ನು ಸ್ವೀಕರಿಸಿದ. ಆತನ ಹೆಂಡತಿ ಅವುಗಳ ಹಾಲು-ಹೈನಗಳಿಂದ ದೊರೆತ ಆದಾಯದಿಂದ ಮಕ್ಕಳನ್ನೂ ಕುಟುಂಬವನ್ನೂ ಪೊರೆದಳು. ಮಕ್ಕಳೆಲ್ಲಾ ಬೆಳೆದು ದೊಡ್ಡವರಾದರು. ಶ್ರೀರಾಮ ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ ಮರಳುವ ಹೊತ್ತಿಗೆ ತ್ರಿಜಟಾ ಪೋಷಿಸಿದ ಗೋವುಗಳ ಸಂಖ್ಯೆಯಲ್ಲಿ ಮೂರುಪಟ್ಟು ಜಾಸ್ತಿಯಾಗಿತ್ತು. ರಾಮ ಕಾಡಿನಿಂದ ಮರಳಿ ನಂದಿಗ್ರಾಮದೆಡೆಗೆ ಬರುತ್ತಿರುವ ಸುದ್ದಿ ತ್ರಿಜಟಾನ ಹೆಂಡತಿಗೆ ತಿಳಿದುಬಂತು. ಆ ವೇಳೆಗೆ ಬೆಳೆದೋರ್ವ ಮಗನೊಟ್ಟಿಗೆ ತ್ರಿಜಟಾ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ. ಇನ್ನೊಬ್ಬ ಮಗನ ಮೂಲಕ ಸಂದೇಶ ರವಾನಿಸಿ ಮನೆಗೆ ಕರೆಸಿಕೊಂಡ ಹೆಂಡತಿ, "ಇಷ್ಟೊಂದು ಹಸುಗಳು ನಮಗೇಕೆ? ಶ್ರೀರಾಮ ಮೊದಲು ಕೊಟ್ಟಿದ್ದ ಸಂಖ್ಯೆಯ ಗೋವುಗಳನ್ನು ಇಟ್ಟುಕೊಂಡು ಮಿಕ್ಕಿದ್ದನ್ನು ಅವನಿಗೇ ಮರಳಿಸಬಾರದೇ?" ಎಂದಳು ತ್ರಿಜಟಾನ ಹೆಂಡತಿ. "ಗೋವುಗಳನ್ನು ನಾವೇ ಇಟ್ಟುಕೊಳ್ಳಬೇಕೆಂದೇಕೆ ಬಯಸುತ್ತೀಯೆ? ಅವುಗಳನ್ನೆಲ್ಲಾ ಶ್ರೀರಾಮನಿಗೇ ಮರಳಿಸಿ, ಬೆಳೆದ ಮಕ್ಕಳಿಗೆ ಜೀವನೋಪಾಯಕ್ಕೆ ಏನಾದರೂ ಕೆಲಸಕೊಡಿ ಸಾಕೆಂದು ಮಹಾರಾಜ ಶ್ರೀರಾಮನಲ್ಲಿ ಪ್ರಾರ್ಥಿಸೋಣ, ನಾನೂ ನೀನೂ ಕಾಡಿಗೆತೆರಳಿ ಮುಂದಿನ ಬದುಕನ್ನು ತಪಸ್ಸಿನಲ್ಲಿ ಕಳೆಯೋಣ"-ಎಂದುಬಿಟ್ಟ ತ್ರಿಜಟಾ.

ಎಷ್ಟು ನೀನುಂಡರೇಂ? ಪುಷ್ಟಿಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿಪಿಷ್ಟವು ತಾನೆ?-ಮಂಕುತಿಮ್ಮ

ರಾಮಾಯಣದ ಈ ಕಥೆ ಇದ್ದುದರಲ್ಲಿಯೇ ತೃಪ್ತಿಪಡಬೇಕೆಂಬ ಸಂದೇಶದ ಜೊತೆಗೆ ಗೋವುಗಳಿಂದ ಉಪಜೀವನಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಸಂಪತ್ತು-ಭೋಗಭಾಗ್ಯ ಹೆಚ್ಚಿದ್ದಷ್ಟೂ ಸಂಸಾರದ ನಂಟು ಹೆಚ್ಚುತ್ತದೆ; ಸಂಸಾರದ ವ್ಯಾಮೋಹ ಅತಿಯಾದಷ್ಟೂ "ಇನ್ನೂ ಬೇಕು ಇನ್ನೂ ಬೇಕು" ಎಂಬುದು ಹೆಚ್ಚುತ್ತದೆ. "ಇನ್ನೂ ಬೇಕು ಇನ್ನೂ ಬೇಕು" ಎಂಬ ಇಂಗದ ಮನದ ದಾಹ ಅಸಂತೃಪ್ತಿಗೆ, ಅಸಂತೋಷಕ್ಕೆ ಕಾರಣವಾಗುತ್ತದೆ. "ದೈವಾನುಗ್ರಹ ನಮ್ಮಮೇಲಿಷ್ಟಿದೆ" ಎಂದುಕೊಂಡು ಇದ್ದುದರಲ್ಲಿ ಸಂತೃಪ್ತಗೊಂಡರೆ ಚಕ್ರಾಧಿಪತಿಲ್ಲೂ ಇರದ ಸಂತೋಷ ಲಭಿಸುತ್ತದೆ! ಆಚಾರದಲ್ಲಿ-ಬದುಕಿನಲ್ಲಿ ಬಹಳಷ್ಟು ತ್ಯಾಗಮಯಿಯಾಗಿ ಬದುಕುತ್ತಿರುವವರು ಅವಧಾನಿ ಗಣೇಶರು; ಇದ್ದರೂ ಸಂತೋಷ, ಇರದಿದ್ದರೂ ಸಂತೋಷ. ಸಂನ್ಯಾಸಿಯ ವೇಷತೊಡುವವರು ಅನೇಕರು, ವೇಷಧರಿಸದೇ ಇರುವಲ್ಲಿಯೇ ಸಂನ್ಯಾಸಿಗಳಂತೇ ಬದುಕುವವರು ಕೆಲವರು. ಯೋಗಿಯಂತೇ ತ್ಯಾಗಿಯಾಗಿ ಬದುಕುತ್ತಿರುವ ಗಣೇಶರು ಒಬ್ಬ ಶ್ರೇಷ್ಠ ಸಂತನೆಂದು ಹೇಳಲು ಏನೂ ತೊಂದರೆಯಿಲ್ಲ. 

ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ
ಚರಿಸುತಿರೆ ನರನದರ ಗುರುತನರಿಯದೆಯೆ
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ
ತೊರೆಯುವನು ದೊರೆತುದನು-ಮಂಕುತಿಮ್ಮ       

"ನಳಿಕೆ ಹಾಕಿದರೆ ನಾಯಿಯ ಬಾಲ ನೆಟ್ಟಗಾಗುವುದಿಲ್ಲ ಕಣೋ ಯಾಕೆ ಮತ್ತೆ ಮತ್ತೆ ಪ್ರಯತ್ನಿಸ್ತಾ ಇದೀಯಾ?" ಎಂದು ಬಾಲಕ ಗಣೇಶರಿಗೆ ಅವರಮ್ಮ ಹೇಳಿದ್ದರೆ, "ನಾಯಿಯ ಬಾಲ ನೆಟ್ಟಗೆ ಮಾಡುತ್ತಿಲ್ಲಮ್ಮಾ, ಬಾಲಕ್ಕೆ ಪೈಪು ಸಿಕ್ಕಿಸಿ ಬೆಂಡ್ ಮಾಡ್ಕೋತಾ ಇದೀನಿ" ಎಂಬ ಉತ್ತರ ಅಮ್ಮನಿಗೆ ಮಗನಿಂದ ದೊರೆತಿತ್ತಂತೆ!! ಗಣೇಶರು ಮೆಕ್ಯಾನಿಕಲ್ ಎಂಜಿನೀಯರಿಂಗ್ ಓದುವಾಗ ಸಹ ಪಂಚೆಉಟ್ಟುಕೊಂಡೇ ಕಾಲೇಜಿಗೆ ಹೋಗುತ್ತಿದ್ದರಂತೆ-ಇಂತಹ ಸಂಗ್ತಿಗಳನೇಕವು ನಮ್ಮನ್ನು ಅವರತ್ತ ಗಮನಹರಿಸುವಂತೇ ಮಾಡುತ್ತವೆ. ಅವರ ಆಯ್ಕೆಯ ವಿಷಯ ಯಾವುದು ಎಂದು ತಿಳಿಯಹೊರಟರೆ ಗಣೇಶರಿಗೆ ತಿಳಿಯದ ವಿಷಯ ಯಾವುದು ಎಂದು ಆಲೋಚಿಸಬೇಕಾಗುತ್ತದೆ. ಕಂಪ್ಯೂಟರ್ ತಜ್ಞರಿಗೇ ಕಂಪ್ಯೂಟರ್ ಪಾಠಮಾಡಬಲ್ಲ ತಾಕತ್ತು ಗಣೇಶರದ್ದು! ರಾಜಕೀಯ ವಿದ್ಯಮಾನ ಸಾಮಾಜಿಕ ಪರಿಸ್ಥಿತಿ-ವಿಜ್ಞಾನ-ತಂತ್ರಜ್ಞಾನ-ಸಾಹಿತ್ಯ-ಕಲೆ-ಸಂಗೀತ-ವೈದ್ಯಕೀಯ-ವೇದ-ವೇದಾಂತ-ಆಧ್ಯಾತ್ಮ-ಶಾಸ್ತ್ರ-ಸಂಪ್ರದಾಯ-ಗಣಿತ-ಇತಿಹಾಸ-ತತ್ತ್ವಜ್ಞಾನ-ಬಹುಭಾಷೆಗಳು ಹೀಗೇ ಎಲ್ಲವನ್ನೂ ಬಲ್ಲವರು ಅವರಾಗಿದ್ದಾರೆ; ’ಸರ್ವಜ್ಞ’ ಎಂಬ ಪದವಿಯನ್ನು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೇ, ಯಾವುದೇ ಪೂರ್ವಾಗ್ರಹವಿಲ್ಲದೇ, ಯಾವುದೇ ಪಟ್ಟಭದ್ರಹಿತಾಸಕ್ತಿಗಳ ಪ್ರಲೋಭನೆಯಿಲ್ಲದೇ ನೀಡುವುದಾದರೆ ಅಖಂಡ ಭಾರದಲ್ಲೇ ಅದು ನಿರ್ವಿವಾದವಾಗಿ ಸಲ್ಲಬೇಕಾದ್ದು ಶತಾವಧಾನಿ ಗಣೇಶರಿಗೆ. ಅಳಿದುಹೋಗಿದ್ದ ಅವಧಾನ ಕಲೆಯನ್ನು ಕನ್ನಡದಲ್ಲಿ ಮತ್ತೆ ತೋರಿಸಿ, ಹೊಸ ಪ್ರಯೋಗವಾಗಿ ಶತಾವಧಾನಗಳನ್ನೂ ನಡೆಸಿದ ಅವರು ಸಹಸ್ರಾವಧಾನವನ್ನೂ ನಡೆಸಬಲ್ಲರು ಎಂಬುದರಲ್ಲಿ ಸಂಶಯವಿಲ್ಲ-ಇಂತಹ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಗೌರವಿಸಿ ಅವರ ಉಪಜೀವಿತಕ್ಕೆ ವ್ಯವಸ್ಥೆಗಳನ್ನು ರೂಪಿಸುವ ಹೊಣೆಯನ್ನು ಹಿಂದೆ ರಾಜರುಗಳು ಸ್ವತಃ ತಾವೇ ವಹಿಸಿಕೊಳ್ಳುತ್ತಿದ್ದರು. ಇಂದು ರಾಜಕೀಯವೇ ಸ್ಥಾನಪಲ್ಲಟಗೊಂಡು ಪ್ರಜಾ ಸತ್ತೆ ಸಿಂಹಾಸನವನ್ನೇರಿ ಕುಳಿತಿರುವುದರಿಂದ ಮಂತ್ರಿಗಳೆಲ್ಲಾ ಮಾಗಧರಾಗಿದ್ದಾರೆ!

ರಾಮನುಂ ಭರತನುಂ ತಬ್ಬಿಕೊಂಡತ್ತಂದು
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು
ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ
ಕ್ಷೇಮವದು ಜೀವಕ್ಕೆ-ಮಂಕುತಿಮ್ಮ

ತಾಜಾ ಆಗಿಯೇ ಇರುವ ಸ್ನೇಹ-ಸಂಬಂಧಗಳಿಗೆ ಶ್ರೀಕೃಷ್ಣ-ಕುಚೇಲರ ಉದಾಹರಣೆ ಉತ್ತಮವಾದುದು. ದ್ವಾರಕಾಧೀಶ ಕೃಷ್ಣನನ್ನು, ಹೆಂಡತಿಯ ಒತ್ತಾಯದ ಮೇರೆಗೆ ಭೇಟಿಮಾಡಲು ಬಂದ ಸುಧಾಮನಿಗೆ ದ್ವಾರಕೆಯ ಸಿರಿವೈಭೋಗಗಳನ್ನು ಕಂಡು ಆಶ್ಚರ್ಯವಾಯ್ತು. ಸಾಂದೀಪನಿ ಗುರುಕುಲದಲ್ಲಿ ತನ್ನ ಸಹಪಾಠಿಯಾಗಿದ್ದ ಶ್ರೀಕೃಷ್ಣನ ಸಾಧನೆಯನ್ನು ಕಂಡು ಸಂತೋಷವೂ ಆಯ್ತು. ಅಭ್ಯಾಗತನಾಗಿ ಸ್ನೇಹಿತ ಕೃಷ್ಣನ ಅರಮನೆಯ ಉನ್ನತಾಸನದಲ್ಲಿ ಕುಳಿತು ಪಾದಪೂಜೆ ಸ್ವೀಕರಿಸಿದ ಸುಧಾಮನಿಗೆ, ಬರಿಗೈಲಿ ಬಂದೆನಲ್ಲಾ ಎಂಬ ಕಾರಣದಿಂದ ನಾಚಿಕೆಯಾಗಿ ತಾನು ಬಂದ ಕಾರಣವೇ ಮರೆತೇಹೋಯ್ತು! ಗೆಳೆಯನ ಸ್ವಭಾವವನ್ನರಿತಿದ್ದ ರುಕ್ಮಿಣೀಪತಿಗೆ ತನಗಾಗಿ ತನ್ನಾತ್ಮ ಮಿತ್ರ ಏನನ್ನಾದರೂ ತಂದೇ ಇರುತ್ತಾನೆ ಎಂಬುದರಲ್ಲಿ ಸಂದೇಹವಿರಲಿಲ್ಲ. ತೀರಾ ಒತ್ತಾಯಿಸಿದ ಮೇಲೆ ಅಂಜುತ್ತಾ, ಅಳುಕುತ್ತಾ, ತನ್ನ ಹರುಕು ಪಂಚೆಯ ತುದಿಯಲ್ಲಿ ಕಟ್ಟಿದ್ದ ಹಿಡಿಯವಲಕ್ಕಿಯನ್ನು ಬಿಡಿಸಿಕೊಟ್ಟರೆ, ಅವಲಕ್ಕಿಯನ್ನೇ ಮೆದ್ದು- ಮೃಷ್ಟಾನವನ್ನೇ ಮೆಲುತ್ತಿರುವ ಸುಖದಿಂದ ಸಖ ಕೃಷ್ಣ ಆನಂದತುಂದಿಲನಾದನಂತೆ! ದಿನವೊಪ್ಪತ್ತು ಅಲ್ಲಿಯೇ ನಿಂತು ಆತಿಥ್ಯ ಸ್ವೀಕರಿಸಿದ ಕುಚೇಲ ಮನದಿಂಗಿತವನ್ನು ಹೇಳಲಾರದೇ ಹೊರಟುನಿಂತು ಶ್ರೀಕೃಷ್ಣನಿಂದ ಬೀಳ್ಕೊಂಡ; ಊರಿಗೆ ತಲ್ಪುತ್ತಾ ನೋಡುತ್ತಾನೆ-ಮನೆ ಸ್ವರ್ಣಮಹಲಾಗಿದೆ, ಮಡದಿ-ಮಕ್ಕಳು ಬಂಗಾರದ ಆಭರಣಗಳನ್ನೂ, ಉತ್ತಮ ಪೋಷಾಕುಗಳನ್ನೂ ಧರಿಸಿ ಓಡಾಡುತ್ತಿದ್ದಾರೆ!! 

ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು-ಮಂಕುತಿಮ್ಮ

ಇಂದು ನಮಗೆ ಧನಿಕ ಸಹಪಾಠಿಗಳೋ ಸಹೋದ್ಯೋಗಿಗಳೋ ಇದ್ದರೆ, ಒಂದೊಮ್ಮೆ ನಾವು ಅವರಲ್ಲಿ ಹೋದರೆ, ಅವರ ಸಿರಿವಂತಿಕೆಯ ನಡಾವಳಿ ನಮಗೆ ಬಹಳ ಇರುಸುಮುರುಸು ಉಂಟುಮಾಡಿ, ಯಾಕಾದರೂ ಹೋದೆವೋ ಅನಿಸುವಂತೇ ಮಾಡಿಬಿಡುತ್ತದೆ! ಹಿಂದೊಮ್ಮೆ ಸಹಪಾಠಿಗಳಾಗಿದ್ದ ಧನಿಕರೂ ಆರ್ಥಿಕ ಬಡತನವಿದ್ದರೆ ಇಂದು ನಮ್ಮನ್ನು ಮಾತನಾಡಿಸಲು ಮನಸ್ಸು ಮಾಡುವುದಿಲ್ಲ; ಎಲ್ಲಾದರೂ ಸಹಾಯ ಕೇಳಿಬಿಟ್ಟರೆ ಎಂಬ ಅನುಮಾನವೇ ಅದಕ್ಕೆ ಕಾರಣವಾಗಿರಲೂ ಬಹುದು. ಕುಚೇಲನಷ್ಟು ಮರ್ಯಾದಿತರೂ ಇಂದು ಇರುವುದು ಕಷ್ಟ. ತನ್ನ ಸ್ವಂತ ಆಸೆಯಿಂದ ಬಡತನ ನಿವಾರಿಸಿಕೊಳ್ಳಲು ಆತ ಕೃಷ್ಣನಲ್ಲಿ ಹೋಗಲಿಲ್ಲ; ಇಂದು ಅವಕಾಶ ಸಿಕ್ಕರೆ ಮಾಗಧಮಂತ್ರಿಗಳ ಸ್ನೇಹ ಸಿಕ್ಕರೆ ಮರ್ಯಾದೆ ಎಂಬ ಪದದ ಗಂಧಗಾಳಿಯೂ ಇಲ್ಲದಂತೇ ಸಿಕ್ಕಲ್ಲೆಲ್ಲಾ ಮುಕ್ಕಿ ಕೊಬ್ಬಿ ಧನಾಢ್ಯರಾಗುವ ಜನರನ್ನು ನಾವು ನೋಡುತ್ತೇವೆ. ಉಪಜೀವಿತಕ್ಕಾಗಿ ಧರ್ಮದ ಮಿತಿಯನ್ನು ಮೀರದೇ ಬದುಕುವ ಸ್ನೇಹ ಜಗದಲ್ಲಿ ಶ್ರೇಷ್ಠವಾದದ್ದು. ಅಂತಲ್ಲಿ ಯಾವ ವ್ಯಾವಹಾರಿಕ ನಿರೀಕ್ಷೆಗಳೂ ಇರುವುದಿಲ್ಲ. ಇವತ್ತಿನ ಪರಿಸರದಲ್ಲಿ, ಪರಿಚಿತರಾಗುವ, ಸ್ನೇಹಿತರಾಗುವ ಅದೆಷ್ಟೋ ಮಂದಿಗಳ ನಡುವೆ ವ್ಯವಹಾರಿಕ ನಿರೀಕ್ಷೆಗಳು ಹುಸಿಯಾದಾಗ,  ಸ್ನೇಹ ಸೌಹಾರ್ದ ಹಳಸಿಹೋಗುತ್ತಿರುತ್ತದೆ. ಕಂಡರೂ ಕಾಣದಂತೇ ಕೇಳಿಸಿದರೂ ಕೇಳಿರದಂತೇ ವರ್ತಿಸುವ ’ಜಾಣಕುರುಡು’, ’ಜಾಣಕಿವುಡು’ ಎಂಬ ಹಂತವನ್ನು ಜನ ತಲ್ಪುವುದು ಹೀಗೇ. ಪ್ರತೀ ಸರ್ತಿ ಭೆಟ್ಟಿಯಾದಾಗ, ಮುಖಾಮುಖಿಯಾದಾಗ ಪ್ರಥಮಸಲದ ತಾಜಾತನವನ್ನೇ ನಾವು ಕಂಡರೆ ಆ ಸ್ನೇಹ ವಿಶಿಷ್ಟವಾಗಿರುತ್ತದೆ. ಗಂಡ-ಹೆಂಡಿರ ಸ್ನೇಹದಾಂಪತ್ಯದಲ್ಲೂ ಇದೇತೆರನಾದ ತಾಜಾತನವಿದ್ದರೆ ಸ್ನೇಹವೆಂಬುದು ಪರಿಶುದ್ಧವಾಗಿರುತ್ತದೆ, ನಿತ್ಯನೂತನವೆನಿಸುತ್ತದೆ; ಕೌಟುಂಬಿಕ ಕಲಹಗಳಿಗೆ ಆಸ್ಪದವಿರುವುದಿಲ್ಲ. ಮುಗಿಸುವ ಮುನ್ನ ಅವಧಾನಿ ಗಣೇಶರ ಮಾತನ್ನು ನೆನಪಿಸಿಕೊಳ್ಳುತ್ತೇನೆ:"ಪ್ರತೀ ಸರ್ತಿ ಎದುರಾದಾಗಲೂ ಹೊಸದಾಗಿ ಪರಿಚಿತರಾದ ತಾಜಾತನವಿದ್ದರೆ ವಿಶ್ವಾಸವಿದೆಯೆಂದೇ ಅರ್ಥ!"  ನಮಸ್ಕಾರ.       
  

Sunday, July 21, 2013

ಗಾಯತಿ ವನಮಾಲೀ ಮಧುರಂ....

ಚಿತ್ರಗಳ ಋಣ : ಅಂತರ್ಜಾಲ 
ಗಾಯತಿ ವನಮಾಲೀ ಮಧುರಂ....
                                             
ನಗ್ನಬೈರಾಗಿಯೊಬ್ಬ ಆ ಪ್ರದೇಶದಲ್ಲಿ ಕಾಣಿಸಿಕೊಂಡು ಮುಸ್ಲಿಂ ನವಾಬನ ಅಂತಃಪುರಕ್ಕೆ ನುಗ್ಗಿಬಿಟ್ಟ. ಅಂತಃಪುರದ ಕಾವಲುಗಾರರು ನೋಡನೋಡುತ್ತಿರುವಂತೆಯೇ ಆತ ಅಂತಃಪುರದಲ್ಲೆಲ್ಲಾ ಸುತ್ತುತ್ತಲೇ ಇದ್ದ. ಸುದ್ದಿ ತಿಳಿದ ನವಾಬ, ತನ್ನ ಕಾವಲುಗಾರರಿಗೆ ಆತನನ್ನು ತಡೆದು ನಿಲ್ಲಿಸಿ ಶಿಕ್ಷಿಸಲು ಹೇಳಿದ. ನವಾಬನ  ಕಾವಲುಪಡೆಯವರು ನಗ್ನಸಂನ್ಯಾಸಿಯನ್ನು ಬೆನ್ನಟ್ಟಿ ಕೈಗಳನ್ನು ಕತ್ತರಿಸಿಹಾಕಿದರು. ಅಷ್ಟಾದರೂ ತಟ್ಟಿಸಿಕೊಳ್ಳದ ನಗ್ನ ಸಂನ್ಯಾಸಿ ಜನಾನಾದಲ್ಲಿ ಈಕಡೆಯಿಂದ ಆಕಡೆಗೂ ಆ ಕಡೆಯಿಂದ ಈ ಕಡೆಗೂ ಸುತ್ತುತ್ತಿರುವಾಗ ನವಾಬನಿಗೆ ಬಹಳ ವಿಚಿತ್ರವಾಗಿ ಕಂಡಿತು. ತುಂಡಾಗಿ ಕೆಳಗೆ ಬಿದ್ದಿದ್ದ ಕೈಗಳನ್ನು ಸ್ವತಃ ನವಾಬನೇ ಎತ್ತಿತಂದು ಸಂನ್ಯಾಸಿಯ ಮುಂದೆ ಹಿಡಿದು ತೆಗೆದುಕೊಳ್ಳುವಂತೇ ವಿನಂತಿಸಿದ. ನಗ್ನಸಂನ್ಯಾಸಿ ಕೈಗಳನ್ನು ತೆಗೆದುಕೊಂಡು ಅವುಗಳ ಜಾಗಗಳಲ್ಲಿ ಇಟ್ಟುಕೊಳ್ಳುತ್ತಿರುವಂತೆಯೇ ಅವು ಮೊದಲಿನಂತಾದವು! ಮಾತಿಲ್ಲ ಕತೆಯಿಲ್ಲ-ಸಂನ್ಯಾಸಿ ಹೊರಟೇ ಹೋದ!!

ಬ್ರಹ್ಮಜ್ಞಾನಿಯಾದಾತನಿಗೆ ಎಲ್ಲವೂ ಬ್ರಹ್ಮಮಯವೇ ಹೊರತು ಅಲ್ಲಿ ಜಾತಿ-ಮತ-ಪಂಥ-ಪ್ರಾಣಿ-ಪಕ್ಷಿ-ಕಲ್ಲು-ನೆಲ್ಲುಗಳೆಂಬ ಭೇದವೇ ಇರುವುದಿಲ್ಲ! ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರನ್ನು ಕೆಲವುಕಾಲಾನಂತರ ಜನ ಮರೆತುಬಿಟ್ಟರು ಎಂದುಕೊಳ್ಳುವಾಗಲೇ ಮೇಲಿನ ಘಟನೆ ನಡೆಯಿತಂತೆ!! ಶೀರ್ಷಿಕೆಗೂ-ಬ್ರಹ್ಮಜ್ಞಾನಿಗೂ-ನಗ್ನ ಸಂನ್ಯಾಸಿಗೂ-ನೀವೀಗ ಓದುತ್ತಿರುವ ಕಥೆಗೂ ಏನು ಸಂಬಂಧವೆಂದು ತಿಳಿದುಕೊಳ್ಳಬೇಕಾದರೆ ಲೇಖನದ ಕೊನೆಯಸಾಲಿನವರೆಗೂ ಪೂರ್ವಾಗ್ರಹವಿಲ್ಲದ ನಗ್ನಮನಸ್ಸಿನಿಂದ ನೀವು ನಡೆದು ಬರುತ್ತೀರಿ!  

ಶುದ್ಧಸಾವೇರಿ ರಾಗದಲ್ಲಿ ಗಾಯಕಿ ವಾರಿಜಶ್ರೀಯವರು ಹಾಡಿದ ಹಾಡನ್ನು ಕೇಳಲು ಆರಂಭಿಸಿದಾಗ ಆಗಿನ್ನೂ ಬೆಳಗಿನ ಪೂಜೆಯನ್ನು ಮುಗಿಸಿದ್ದ ನಾನು ಧನ್ಯಾಲೋಕದಲ್ಲಿ ವಿಹರಿಸತೊಡಗಿದ್ದೆ! ಭಕ್ತಿರಸ ಉಕ್ಕಿ ಹರಿಯುವ ಕೆಲವು ರಾಗಗಳು ಮತ್ತು ಅವುಗಳನ್ನು ತಮ್ಮ ಧ್ವನಿಯಲ್ಲಿ ಧೇನಿಸುವ ಕೆಲವು ಸಿರಿಕಂಠಗಳಿಗೆ  ಪರಮಹಂಸರಾಗಿಯೇ ಜನಿಸಿದ ಜನ ಸಾಹಿತ್ಯವನ್ನೊದಗಿಸಿದರೆ ಅದು ನಿಜಕ್ಕೂ ಪಾಯಸಕ್ಕೆ ಕಲ್ಲುಸಕ್ಕರೆ ಹಾಕಿ ತಿನ್ನುವ ರಸದೌತಣ; ಸನ್ನಿವೇಶ ಹೇಗಿದೆಯೆಂದರೆ ರಾಗವನ್ನು ಹೊಗಳಬೇಕೋ, ರಾಗದ ಭೋಗವನ್ನುಣಿಸುವ ಸಂಗೀತಗಾರರ ಕಂಠವನ್ನು ಶ್ಲಾಘಿಸಬೇಕೋ ಅಥವಾ ಶ್ರೇಷ್ಠ ಸಾಹಿತ್ಯವನ್ನೊದಗಿಸಿದ ಮಹಾಪುರುಷರನ್ನು ಸ್ಮರಿಸಿ ನಮಸ್ಕರಿಸಬೇಕೋ ತಿಳಿಯದ ಅತ್ಯಾನಂದದ ಸಮಯ. ಹಾಡುಗಳದೆಷ್ಟು ಕೋಟಿಗಳಿವೆಯೋ ಲೆಕ್ಕಕ್ಕಿಲ್ಲ. ಆದರೆ ಇರುವ ಹಾಡುಗಳ ಸಾಹಿತ್ಯಕ-ಸಾಂಸ್ಕೃತಿಕ-ಸಾಂಸಾರಿಕ-ಸಾಂಗತ್ಯಕ-ಸಾರಸ್ವತಿಕ-ಸಾತ್ವಿಕ ಗುಣಮಟ್ಟಗಳಲ್ಲಿ ವ್ಯತ್ಯಾಸವಿದೆ. ಅದ್ಭುತ ಪದಪುಂಜಗಳನ್ನೊಳಗೊಂಡ ಹಾಡುಗಳು ಸಾಹಿತ್ಯಕವಾಗಿ ಎಷ್ಟೇ ಚೆನ್ನಾಗಿದ್ದರೂ ಸಾಂಸ್ಕೃತಿಕವಾಗಿ ಉತ್ತಮವಾಗಿವೆ ಎನ್ನಲು ಸಾಧ್ಯವಾಗುವುದಿಲ್ಲ. ಉನ್ನತ ಮನಸ್ಕರ ಉತ್ತಮ ಮನೋಜವದಲ್ಲಿ ಹುಟ್ಟಿದ ಸಾಹಿತ್ಯಕ್ಕೊಂದು ವಿಶಿಷ್ಟ ಶಕ್ತಿ ಇರುತ್ತದೆ. ಅಂತಹ ಹಾಡುಗಳನ್ನು ಸಂಸ್ಕೃತಭಾಷೆಯಲ್ಲಿ ನಮಗೆ ಕರುಣಿಸಿದವರು ಅವಧೂತ ಶ್ರೀ ಸದಾಶಿವ ಬ್ರಹ್ಮೇಂದ್ರರು.

ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಕೆಲವರು ಇನ್ನೂ ಬದುಕಿದ್ದ 17-18ನೇ ಶತಮಾನದಲ್ಲೇ ತಮಿಳುನಾಡಿನ ತಿರುವಿಸೈನಲ್ಲೂರಿನಲ್ಲಿ, ಮೋಕ್ಷಸೋಮಸುಂದರ ಅವಧಾನಿ-ಪಾರ್ವತಿ ದಂಪತಿಯ ಮಗನಾಗಿ ಜನಿಸಿ, ಶಿವರಾಮಕೃಷ್ಣನೆಂಬ ಜನ್ಮನಾಮವನ್ನು ಪಡೆದುಕೊಂಡಿದ್ದ ಸದಾಶಿವ ಬ್ರಹ್ಮೇಂದ್ರರಿಗೆ ಎಳವೆಯಲ್ಲೇ ಬ್ರಹ್ಮಾನಂದದೆಡೆಗೆ-ಪಾರಮಾರ್ಥದೆಡೆಗೆ ಒಲವು. ಸಂಪ್ರದಾಯ ಶರಣ ಕುಟುಂಬದ ಅಂದಿನಕಾಲಘಟ್ಟದ ಆಚಾರದಂತೇ 17ನೇ ವಯಸ್ಸಿಗೇ ಮದುವೆಯಾಗಿ, ಮುಂದಿನ ತನ್ನ ಬದುಕನ್ನು ಕೊಂಭಕೋಣಂನಲ್ಲಿ ಕಳೆಯತೊಡಗಿದ ಅವರಿಗೆ ಐಹಿಕ ಸುಖೋಪಭೋಗಗಳಲ್ಲಿ ಆಸಕ್ತಿಯೇ ಇರಲಿಲ್ಲ. ಸಂಸಾರವನ್ನಿಷ್ಟಪಡದೇ ಮನೆಯನ್ನು ತೊರೆದ ಅವರು ಕಾಂಚೀಪುರವನ್ನು ಸೇರಿ ಅಲ್ಲಿದ್ದ ಉಪನಿಷತ್ ಬ್ರಹ್ಮ ಮಠದ ಶ್ರೀ ಪರಮಶಿವ ಬ್ರಹ್ಮೇಂದ್ರ ಸರಸ್ವತೀ ಸ್ವಾಮಿಗಳ ಶಿಷ್ಯರಾದರು. ಅವರಲ್ಲೇ ಸಂನ್ಯಾಸದೀಕ್ಷೆ ಸ್ವೀಕರಿಸಿದ ಶಿವರಾಮಕೃಷ್ಣ ಸದಾಶಿವ ಬ್ರಹ್ಮೇಂದ್ರರೆಂಬ ದೀಕ್ಷಾನಾಮವನ್ನು ಪಡೆದರು. ಕಾಲಾನಂತರ ನಗ್ನವಾಗಿ ಅಥವಾ ಅರೆನಗ್ನವಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಾ, ಧ್ಯಾನದಲ್ಲಿ ಲೀನವಾಗುತ್ತಾ ತುರ್ಯಾವಸ್ಥೆಯ ಮನದಲ್ಲೇ ಇರುತ್ತಿದ್ದರು. ಅವರ ಜೀವಿತದಲ್ಲಿ ಅನೇಕ ಪವಾಡಗಳು ತಂತಾನೇ ಘಟಿಸಿದವು.

ಅದ್ವೈತ ತತ್ತ್ವಜ್ಞಾನ ಮೂರ್ತಿವೆತ್ತಂತಿದ್ದ ಸದಾಶಿವ ಬ್ರಹ್ಮೇಂದ್ರರು ಕರ್ನಾಟಕ ಸಂಗೀತಕ್ಕೆ ಅನೇಕ ಕೃತಿಗಳನ್ನು ಕೊಟ್ಟಿದ್ದು, ಒಂದೊಂದೂ ಸ್ವಾತಿಮುತ್ತಿನಂತೇ, ಅಪ್ಪಟ ವಜ್ರದಂದೇ ಇಂದಿಗೂ ನಳನಳಿಸುತ್ತಿವೆ. ಸಾಮಾನ್ಯವಾಗಿ ಕರ್ನಾಟಕ ಸಂಗೀತ ಕಚೇರಿಗಳು ನಡೆದಾಗ ಅವರ ಒಂದಾದರೂ ಹಾಡು ಅಲ್ಲಿ ಕೇಳಿಬರುತ್ತದೆ. ಹಾಡುಗಳು ರಚಿತವಾದ ರಾಗ, ಅವುಗಳಲ್ಲಿನ ಸಾಹಿತ್ಯ ಕೇಳುಗರಮನವನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ! ಮೋಹನರಾಗದ ’ಭಜ ರಘುವಿರಾಮಂ’, ಹಿಂದೋಳರಾಗದ ’ಭಜರೇ ಗೋಪಾಲಂ’, ಸಾಮರಾಗದ ’ಮಾನಸ ಸಂಚರರೇ’, ಅಹಿರ ಭೈರವೀರಾಗದ ’ಪಿಬರೇ ರಾಮರಸಂ’ ಮೊದಲಾದ ಹಾಡುಗಳು ಜನಮಾನಸದಲ್ಲಿ ನಲಿದಾಡುತ್ತಾ, ಸಹಜಗತಿಯಲ್ಲಿ ಜನರ ಮನಸ್ಸಿಗೆ ಉನ್ನತ ಸಂಸ್ಕಾರಗಳನ್ನು ಕೊಡುತ್ತಾ ಆಪ್ಯಾಯಮಾನವಾಗಿವೆ. ’ಗಾಯತಿ ವನಮಾಲೀ ಮಧುರಂ’ ಎಂಬ ಹಾಡಿನ ದಿವ್ಯಾನುಭೂತಿಯನ್ನು [ಕನ್ನಡಾನುವಾದದೊಂದಿಗೆ] ಅದರ ಪಲ್ಲವಿ ಮತ್ತು ಚರಣಗಳಲ್ಲಿ ಗಮನಿಸೋಣ:

ಗಾಯತಿ ವನಮಾಲೀ- ಮಧುರಂ - ಗಾಯತಿ ವನಮಾಲೀ || ಪ ||

[ಹಾಡುವ ವನಮಾಲೀ ಮಧುರ ಹಾಡುವ ವನಮಾಲೀ]

ಪುಷ್ಪ ಸುಗಂಧ ಸುಮಲಯ ಸಮೀರೇ
ಮುನಿ ಜನ ಸೇವಿತ ಯಮು
ನಾ ತೀರೇ || ೧ ||

[ಪುಷ್ಪ ಸುಗಂಧವ ಮಾರುತ ಬೀರೇ  
 ಮುನಿಜನ ಸೇವಿಪ ಯಮುನಾ ತಟದಿ ]

ಕೂಜಿತ ಶುಕ ಪಿಕ ಮುಖ ಖಗ ಕುಂಜೇ
ಕುಟಿಲಾಲಕ ಬಹು ನೀರದ ಪುಂಜೇ || ೨ || 

[ಕೂಗುವ ಶುಕ ಪಿಕ ಮುಖ ಖಗ ಮರದೊಳ್
 ರಾಜಿಪ ಭಾರದ ಮೇಘ ಮುಂಗುರುಳೊಳ್ ] 

ತುಲಸಿ ದಾಮ ವಿಭೂಷಿತ ಹಾರೀ
ಜಲಜ ಭವ ಸ್ತುತ ಸದ್ಗುಣ ಶೌರೀ || ೩ ||

[ತುಳಸೀ ಹಾರದಿ ಭೂಷಿತನಾಗೀ
 ಕಮಲಜ ಭಜಿಸಿದ ಸದ್ಗುಣ ಬೀಗೀ ]

ಪರಮಹಂಸ ಹೃದಯೋತ್ಸವ ಕಾರೀ
ಪರಿಪೂರಿತ ಮುರಲೀರವ ಧಾರೀ || ೪ ||

[ಪರಮಹಂಸ ಹೃದಯೋತ್ಸವ ಕಾರೀ
ಪರಿಪೂರಿತ ಮುರಲೀರವ ಧಾರೀ ] 

ಕೊನೆಯ ಚರಣ ಕನ್ನಡದ್ದೋ ಸಂಸ್ಕೃತದ್ದೋ ಎಂಬಷ್ಟು ಸಂಸ್ಕೃತ-ಕನ್ನಡಗಳು ಅಮ್ಮ-ಮಗುವಿನ ಬಾಂಧವ್ಯವನ್ನು ಹೊಂದಿವೆ, ಹೀಗಾಗಿ ಅನುವಾದ ಬೇಕಾಗಿಯೇ ಇಲ್ಲ!  ಸುಗಂಧಭರಿತವಾದ ತಂಗಾಳಿ ತೀಡುತ್ತಿರುವ ಯಮುನೆಯ ತಟದಲ್ಲಿ, ಸುತ್ತ ನೆರೆದ ಮುನಿಜನರ ಸೇವೆಗಳನ್ನು ಸ್ವೀಕರಿಸುತ್ತಾ ವನಮಾಲಿ ಸುಶ್ರಾವ್ಯವಾಗಿ ಹಾಡುತ್ತಿದ್ದಾನೆ. ಕೋಗಿಲೆ, ಗಿಳಿ, ನವಿಲಾದಿಯಾಗಿ ಹಲವು ಪಕ್ಷಿಗಳು ಕೂಗುತ್ತಾ ನಲಿದಾಡುತ್ತಿರುವ ಆ ಪ್ರದೇಶದಲ್ಲಿ ನಿಂತ ಅವನ ಮುಂಗುರುಳು ಭಾರದ ಮೋಡಗಳನ್ನು ಹೊತ್ತಂತೇ ಭಾಸವಾಗುತ್ತಿದೆ. ತುಳಸೀಹಾರವನ್ನು ಧರಿಸಿಕೊಂಡು ಬ್ರಹ್ಮನಿಂದ ಹೊಗಳಿಕೆಯ ನುಡಿಗಳನ್ನು ಸ್ವೀಕರಿಸಿ, ಎಲ್ಲದರಿಂದ ಮುದಗೊಂಡು ಶೂರತನದಿಂದ ಬೀಗುತ್ತಾ ವನಮಾಲಿ ಹಾಡುತ್ತಾನೆ. ಮುನಿಜನರ ಹೃದಯದಲ್ಲಿ ಸಂತಸಕ್ಕೆ ಕಾರಣನಾಗಿದ್ದಾನೆ, ಕರ್ಣಾನಂದಕರವಾದ ವೇಣುಗಾನದಿಂದ ಜಗದ ಜನರನ್ನೆಲ್ಲಾ ರಂಜಿಸುತ್ತಾನೆ.

ಇಂತಹ ಅನೇಕ ಭಾವನಾತ್ಮಕ ಹಾಡುಗಳನ್ನು ಸದ್ಗುರು ಸದಾಶಿವ ಬ್ರಹ್ಮೇಂದ್ರರು ಭಾರತೀಯರಿಗೆ ಅನುಗ್ರಹಿಸಿದ್ದಾರೆ. ಬರೇ ಹಾಡುಗಳಷ್ಟೇ ಅಲ್ಲಾ, ’ಆತ್ಮವಿದ್ಯಾವಿಲಾಸ’, ’ಬ್ರಹ್ಮಸೂತ್ರ ವೃತ್ತಿ’, ’ಯೋಗ ಸುಧಾಕರ’, ’ಕೈವಲ್ಯ ಅಮೃತ ಬಿಂದು’ [ಉಪನಿಷತ್ತುಗಳನ್ನಾಧರಿಸಿ], ’ಸಿದ್ಧಾಂತ ಕಲ್ಪವಲ್ಲಿ’[ ಅಪ್ಪಯ್ಯ ದೀಕ್ಷಿತರ ಕೃತಿಗಳ ಮೇಲೆ ಕವಿತ್ವದ ಹೇಳಿಕೆಗಳು], ’ಅದ್ವೈತ ರಸಮಂಜರಿ’, ’ಬ್ರಹ್ಮ ತತ್ತ್ವ ಪ್ರಕಾಶಿಕಾ’, ’ಮನೋ_ನಿಯಮನ’, ’ನವಮಣಿ_ಮಾಲಾ’, ’ಗುರುರತ್ನ ಮಾಲಿಕಾ’, ’ದಕ್ಷಿಣಾಮೂರ್ತಿ ಧ್ಯಾನ’-ಎಂಬೆಲ್ಲಾ ಪುಸ್ತಕಗಳನ್ನು ಸದಾಶಿವ ಬ್ರಹ್ಮೇಂದ್ರರು ಬರೆದಿದ್ದಾರೆ.  ಅವರ ಜೀವಿತ ಕಾಲದಲ್ಲಿ ನಡೆದ ಕೆಲವು ಘಟನೆಗಳನ್ನು ಅವಲೋಕಿಸೋಣ:

1. ಮಹದಾನಪುರದಲ್ಲಿ ಕಾವೇರೀನದೀ ತೀರದಲ್ಲಿ ಅವರು ವಿಹರಿಸುತ್ತಿದ್ದಾಗ, ಕೆಲವು ಮಕ್ಕಳು ತಮ್ಮನ್ನು ನೂರು ಕಿ.ಮೀಗೂ ಹೆಚ್ಚು ದೂರವಿರುವ ಮಧುರೈಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ಕರೆದೊಯ್ಯಲು ಹೇಳಿದರು. ಸದಾಶಿವ ಬ್ರಹ್ಮೇಂದ್ರರು ಮಕ್ಕಳಿಗೆ ಕಣ್ಮುಚ್ಚಿಕೊಳ್ಳುವಂತೇ ಹೇಳಿದರು. ಒಂದೆರಡು ಸೇಕಂದುಗಳ ನಂತರ ಕಣ್ತೆರೆಯಲು ಹೇಳಿದಾಗ ಮಕ್ಕಳಿಗೆ ಆಶ್ಚರ್ಯ ಕಾದಿತ್ತು! ಮಕ್ಕಳೆಲ್ಲಾ ಅದಾಗಲೇ ಮಧುರೈಯಲ್ಲಿ ನಿಂತಿದ್ದರು! ಇದನ್ನು ಕೇಳಿದ ಯುವಕನೊಬ್ಬ ಮಾರನೇದಿನ ತನ್ನನ್ನೂ ಮಧುರೈಗೆ ಹಾಗೆ ತಲ್ಪಿಸಬೇಕು ಎಂದು ಪರೀಕ್ಷಾರ್ಥವಾಗಿ ಕೇಳಿದ. ಒಪ್ಪಿದ ಸದಾಶಿವ ಬ್ರಹ್ಮೇಂದ್ರರು ಅವನನ್ನು ಅರೆಕ್ಷಣದಲ್ಲಿ ಮಧುರೈಗೆ ಬಿಟ್ಟರು. ಹಿಂದಿರುಗುವಾಗ ಮಾತ್ರ ಆ ಯುವಕನಿಗೆ ಅಲ್ಲೆಲ್ಲೂ ಸದಾಶಿವ ಬ್ರಹ್ಮೇಂದ್ರರು ಕಾಣಿಸಲೇ ಇಲ್ಲ! ಆತ ತಾನೇ ನಡೆಯುತ್ತಾ ಮರಳಿ ಊರು ಸೇರಿಕೊಳ್ಳಬೇಕಾಯ್ತು.

2.ಬೆಳೆದುನಿಂತು ಫಸಲುತುಂಬಿದ ಹೊಲದ ಬುಡದಲ್ಲಿ ಒಮ್ಮೆ ಸದಾಶಿವ ಬ್ರಹ್ಮೇಂದ್ರರು ಧ್ಯಾನಮಗ್ನರಾಗಿಬಿಟ್ಟರು; ಅಲ್ಲಿಗೆ ಬಂದ ಹೊಲದ ರೈತ-ಮಾಲೀಕ ಅವರನ್ನು ಕಳ್ಳನೆಂದೇ ಭಾವಿಸಿ ಜಗಳವಾಡಿದ. ಹೊಡೆಯಲು ದೊಣ್ಣೆ ಎತ್ತಿದ್ದ ರೈತ-ಮಾಲೀಕ ನಿಂತಲ್ಲೇ ವಿಗ್ರಹವಾಗಿ ನಿಂತುಹೋದ! ಮಾರನೇ ಬೆಳಿಗ್ಗೆ ಸದಾಶಿವ ಬ್ರಹ್ಮೇಂದ್ರರು ಧ್ಯಾನದಿಂದ ವಿಮುಖರಾಗಿ ವಿಗ್ರಹದತ್ತ ನೋಡಿ ಮುಗುಳ್ನಗುವವರೆಗೆ ಆತ ವಿಗ್ರಹವಾಗೇ ನಿಂತಿದ್ದ! ಮಾಮೂಲಿ ಸ್ಥಿತಿಗೆ ಮರಳಿಸಿದ ಸದಾಶಿವ ಬ್ರಹ್ಮೇಂದ್ರರ ಶಕ್ತಿಯನ್ನರಿತ ರೈತ-ಮಾಲೀಕ ಅವರಲ್ಲಿ ಕ್ಷಮೆಯಾಚಿಸಿದ.

3.ಇನ್ನೊಮ್ಮೆ ತಪಸ್ಸಿಗೆ ಕುಳಿತಾಗ, ಕಾವೇರಿ ನದಿಯ ಪ್ರವಾಹ ಅವರನ್ನು ಕೊಚ್ಚಿಕೊಂಡು ಹೋಗಿಬಿಟ್ಟಿತ್ತು. ಯಾವುದೋ ಹಳ್ಳಿಯ ಮಣ್ಣುದಿಣ್ಣೆಯನ್ನು ಅಲ್ಲಿನ ರೈತರು ಅಗೆಯುತ್ತಿರುವಾಗ ಆಯುಧಗಳು ಶರೀರಕ್ಕೆ ಸೋಕಿ ಎಚ್ಚೆತ್ತ ಸದಾಶಿವ ಬ್ರಹ್ಮೇಂದ್ರರು ಅಲ್ಲಿಂದ ಎದ್ದುನಡೆದರು.   

ಪೊದುಕೊಟ್ಟೈನ ರಾಜಾ ತೊಂಡೈಮನ್ ಎಂಬಾತನಿಗೆ ದಕ್ಷಿಣಾಮೂರ್ತಿ ಮಂತ್ರವನ್ನು ಮರಳಿನಲ್ಲಿ ಬರೆದು ಉಪದೇಶಿದರು. ಆ ಕುಟುಂಬದವರು ಇಂದಿಗೂ ಆ ಮರಳನ್ನು ಪೂಜಿಸುತ್ತಾ ಹಾಗೇ ಇಟ್ಟುಕೊಂಡಿದ್ದಾರೆ.

4.ತಂಜಾವೂರಿನ ಸಮೀಪದ ಪುನ್ನೈನಲ್ಲೂರಿನಲ್ಲಿ ಮಾರಿಯಮ್ಮನನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದು ಇದೇ ಸದಾಶಿವ ಬ್ರಹ್ಮೇಂದ್ರರು. ನಂತರ ದೇವದಾನಪಟ್ಟಿ ಎಂಬಲ್ಲಿ ಕಾಮಾಕ್ಷಿದೇವಿಯನ್ನು ಸ್ಥಾಪಿಸುವಂತೇ ಜನರಿಗೆ ತಿಳಿಸಿದವರೂ ಅವರೇ. ಕಾಲಾನಂತರದಲ್ಲಿ ಮೂರು ಪ್ರಾಂತಗಳ ಮೂರು ಜಾಗಗಳಲ್ಲಿ ಸದಾಶಿವ ಬ್ರಹ್ಮೇಂದ್ರರು ಸಜೀವಸಮಾಧಿಯನ್ನು ಏಕಕಾಲಕ್ಕೆ ಪಡೆದು ದಾಖಲೆಮಾಡಿದ್ದಾರೆ! ತಿರುಚಿರಾಪಲ್ಲಿಗೆ ನೂರು ಕಿ.ಮಿ.ದೂರದಲ್ಲಿ, ನೆರೂರಿನಲ್ಲಿ[ತಮಿಳುನಾಡು], ಮಧುರೈಯಿಂದ ಅರ್ವತ್ತು ಕಿ.ಮಿ. ದೂರದಲ್ಲಿರುವ ಮನಮಧುರೈಯ್ಯಲ್ಲಿ ಇವೆ. ಮನಮಧುರೈ ಸೋಮನಾಥ ದೇವಸ್ಥಾನ ಸಮುಚ್ಚಯದಲ್ಲಿ ಅವರ ಸಮಾಧಿ ಇರುವುದನ್ನು ಪತ್ತೆಹಚ್ಚಿದವರು ಕಂಚಿ ಪರಮಾಚಾರ್ಯರು. 


ಅವಧೂತ-ಬ್ರಹ್ಮಜ್ಞಾನಿಗಳನೇಕರ ಭೌತಿಕ ಅವತರಣಿಕೆಯನ್ನು ಗಮನಿಸಿದರೆ ಅಲ್ಲೆಲ್ಲವೂ ವಿಚಿತ್ರಗಳೇ! ತಮ್ಮ ಬಗ್ಗೆ ಅವರು ಏನನ್ನೂ ಹೇಳಿಕೊಳ್ಳುವುದಿಲ್ಲ, ಏನೇ ಅನಾನುಕೂಲವಾದರೂ ವಿಷಾದಿಸುವುದಿಲ್ಲ, ಜನಪ್ರಿಯತೆಯನ್ನು ಎಂದಿಗೂ ಬಯಸುವವರಲ್ಲ, ರಾಜಕಾರಣದಲ್ಲಿ ತೊಡಗುವುದಿಲ್ಲ, ಧನ-ಕನಕಗಳ ಆಸೆಯಿಲ್ಲ, ಭೋಗಭಾಗ್ಯಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ, ಹೀಗೇ ಇರಬೇಕು ಎಂಬ ನಿಯಮಗಳೂ ಕೂಡ ಇರುವುದಿಲ್ಲ. ಬಟ್ಟೆಯಿದ್ದರೂ ಸರಿಯೇ ನಗ್ನವಾಗಿದ್ದರೂ ಸರಿಯೇ, ಉಂಡರೂ ಸರಿಯೇ ಉಪವಾಸವೇ ಇದ್ದರೂ ಸರಿಯೇ, ಅಳು-ನಗುಗಳಲ್ಲಿ ಅಂತರ ಕಾಣದ ಸ್ವಂತಿಕೆ ಅವರದಾದರೂ ಈ ಲೋಕದ ಜಂಜಡಗಳಲ್ಲಿ ಜೀವನದ ಮಜಲುಗಳನ್ನು ಹಮ್ಮಿಕೊಂಡು ಹೆಣಗಾಡುತ್ತಿರುವ ಜನಸಾಮಾನ್ಯರಿಗಾಗಿ ಅಂತಹ ಮಹಾತ್ಮರು ಬರುತ್ತಾರೆ-ಬರುತ್ತಲೇ ಇರುತ್ತಾರೆ-ತಮ್ಮ ಕೆಲಸ ಮುಗಿದ ತಕ್ಷಣ ಬಂದಷ್ಟೇ ವೇಗದಲ್ಲಿ ಸಾಗಿಹೋಗುತ್ತಾರೆ. ನಮ್ಮ ಲೋಕವನ್ನೇನೋ ಅವರು ಬಲ್ಲರು! -ಇಲ್ಲಿನ ಆಗುಹೋಗುಗಳನ್ನು ಅವರು ತಿಳಿವರು, ನಮಗೆ ಮಾತ್ರ ಅವರ ಮೂಲನೆಲೆಯ ರೇಖು-ಆ ಶಕ್ತಿಯ ಉಗಮಗೊಳ್ಳುವ ಚಿಲುಮೆ-ಅನಂತದ ನೆಂಟಸ್ತಿಕೆಯ ಕುರುಹು ದೊರೆವುದೇ ಇಲ್ಲ. ಆದರೆ ಅಂಥಾ ಮಹನೀಯರ, ಮಹಾತ್ಮರ, ಸಾಧಕರ ಜೀವನಗಾಥೆಯನ್ನು ತನ್ಮೂಲಕ ಅವರು ಕೊಟ್ಟುಹೋದ ಬಳುವಳಿಗಳನ್ನು ಮರೆಯುವ ಹಾಗಿಲ್ಲ, ಅಂಥಾ ಅವಧೂತ ಪರಂಪರೆಗೆ ಚಾತುರ್ಮಾಸ್ಯ ಸಮಯದಲ್ಲಿ ಸಾಷ್ಟಾಂಗ ನಮಸ್ಕಾರಗಳು.