'ಪಿಕೆ' ಮತ್ತು 'ಸೋನಿಯಾ ಕೇಬಲ್'ಗಳು ಸೃಜನಶೀಲತೆಯನ್ನು ತೋರಿಸುತ್ತವೆ
ಸಿನಿಮಾ ನೋಡುವುದು ನನ್ನ ದೊಡ್ಡ ಹವ್ಯಾಸವೇನಲ್ಲ; ನೋಡುವುದಿಲ್ಲ ಎಂದೇನೂ ಇಲ್ಲ. ಆಗೀಗ ಅನುಕೂಲವಾದಾಗ ಸಿನಿಮಾ ನೋಡುವುದುಂಟು; ಬಿಡುಗಡೆಗೊಳ್ಳುವ ಸಾವಿರಾರು ಪುಸ್ತಕಗಳಲ್ಲಿ ಯಾವುದು ಉತ್ತಮವೆಂದು ಆಯ್ದುಕೊಳ್ಳುವುದೆಷ್ಟು ಕಷ್ಟವೋ ಬಿಡುಗಡೆಗೊಳ್ಳುವ ಸಿನಿಮಾಗಳ ಆಯ್ಕೆಯೂ ಅಷ್ಟೇ ಕಷ್ಟ. ಸಂಗೀತ, ಸಾಹಿತ್ಯ ಮತ್ತು ಕಲೆಗಳಲ್ಲಿ ಯಾವುದನ್ನಾದರೂ ಆಗಾಗ ಆಸ್ವಾದಿಸುವುದು ಸಂಸಾರಿಗಳಿಗೆ ಒಳಿತೇ; ಜೀವನದ ಜಂಜಡಗಳಿಂದುಂಟಾದ ಮಾನಸಿಕ ಕ್ಲೇಶಗಳನ್ನು ಕಳೆಯಲು ಅವು ಸಹಕಾರಿ. ಕಾಲಮಾನ ಮಾತ್ರ ವಿಚಿತ್ರವಾಗಿದೆಯಲ್ಲ; ಕೆಲವೊಮ್ಮೆ ತಲೆನೋವಿಗೆ ತೆಗೆದುಕೊಂಡ ಮಾತ್ರೆಯ ಸೈಡ್ ಇಫೆಕ್ಟ್ ಜಾಸ್ತಿಯಿದ್ದು ಇನ್ನಾವುದೋ ತೊಂದರೆ ಕಾಣಿಸಿಕೊಳ್ಳಬಹುದು; ಅಂತೆಯೇ ಮನರಂಜನೆಗಾಗಿ ನೋಡುವ ಸಿನಿಮಾಗಳಿಂದ ಮನೋವ್ಯಾಕುಲ, ಮನೋವ್ಯಾಧಿ ಉಂಟಾಗಲೂ ಬಹುದು! ಯಾಕೆಂದರೆ ಇವತ್ತಿನ ಕೆಲಸಗಳೆಲ್ಲವೂ ಹಣಗಳಿಕೆಯ ಒಂದೇ ಉದ್ದೇಶದಿಂದ ನಡೆಯುವಂತವು; ಅಲ್ಲಲ್ಲಿ ಕೆಲವು ಮಾತ್ರ ಭಿನ್ನವಾಗಿ ನಿಲ್ಲುತ್ತವೆ.
ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು: ಎಲ್ಲರಿಗೆ ಎಲ್ಲವೂ ಹಿಡಿಸುವುದು ಸಾಧ್ಯವಿಲ್ಲ, ವ್ಯಕ್ತಿ ಬೆಳೆದುಬಂದ ಪರಿಸರಕ್ಕೆ, ಸಂಸ್ಕೃತಿಗೆ, ಜಾಯಮಾನಕ್ಕೆ ಅವನದ್ದೇ ಆದ ಆಯ್ಕೆಗಳಿರುತ್ತವೆ. ಬಹುತೇಕರು ಮೆಚ್ಚುವ ಉತ್ತಮ ಸಾಮಾನ್ಯ ಅಂಶಗಳನ್ನೊಳಗೊಂಡ ಕೃತಿಗಳನ್ನು ನಾವೆಲ್ಲರೂ ಅರಿವಿಲ್ಲದೆಯೇ ಮೆಚ್ಚುತ್ತೇವೆ; ಇದಕ್ಕೊಂದು ಉದಾಹರಣೆ ಕೊಡುವುದಾದರೆ ಮೈಕ್ರೋಸಾಫ್ಟ್ ಆಫೀಸ್; ಮೈಕ್ರೋಸಾಫ್ಟ್ ಆಫೀಸ್ನಲ್ಲಿ ಜನಸಾಮಾನ್ಯರ ದಿನನಿತ್ಯದ ಲಿಖಿತ ಸಂವಹನಕ್ಕೆ ಬೇಕಾದ ಬಹುತೇಕ ಆಯ್ಕೆಗಳನ್ನು ಕೊಡಲಾಗಿದೆ-ಇದು ಗಣಕಯಂತ್ರ ಬಳಸುವವರಿಗೆಲ್ಲ ಗೊತ್ತಿರುವ ಸಂಗತಿ. ಅದೇ ವಿಧದಲ್ಲಿ ಇಂದು ತಯಾರಾಗುವ ಅನೇಕ ದಿನಬಳಕೆ ವಸ್ತುಗಳಲ್ಲಿ, ದಿರಿಸುಗಳಲ್ಲಿ ಅಂಥದ್ದೇ ಸಾಮಾನ್ಯ ಅಂಶಗಳು ಅಡಕವಾಗಿರುತ್ತವೆ; ಎಲ್ಲಿಯೋ ಸಿದ್ಧಗೊಳ್ಳುವ ಉಡುಪು ನನ್ನನ್ನೂ ಮೆಚ್ಚಿಸುವುದರ ಜೊತೆಗೆ ನನ್ನಂತಹ ಅನೇಕರನ್ನು ಮೆಚ್ಚಿಸಬಹುದು; ಇನ್ನೆಲ್ಲಿಯೋ ತಯಾರಾದ ತಿನಿಸೊಂದು ಹಲವರಿಗೆ ಇಷ್ಟದ ಖಾದ್ಯವಾಗಬಹುದು. ಕೆಲವೊಮ್ಮೆ ಇಂತಹ ಆಯ್ಕೆಗಳು ಮನದಲ್ಲಿ ಅಚ್ಚೊತ್ತಿದಾಗ ಅದದೇ ತಯಾರಿಕಾ ಸಂಸ್ಥೆಗಳನ್ನು ನಾವು ಆಧರಿಸುವಷ್ಟರ ಮಟ್ಟಿಗೆ ನಮ್ಮ ಮನಸ್ಸು ಹೊಂದಿಕೊಂಡುಬಿಡುತ್ತದೆ. ಅದೇ ಕಾರಣಕ್ಕಾಗಿ ಬೀಗವೆಂದರೆ ಗಾಡ್ರೆಜ್ ಮತ್ತು ಟೂತ್ ಪೇಸ್ಟ್ ಎಂದರೆ ಕಾಲ್ಗೇಟ್ ನಮಗೆ ನೆನಪಾಗಿಬಿಡುತ್ತದೆ!
ಕನ್ನಡದ ಕಾದಂಬರಿಗಳ ಸರದಿಗೆ ಬಂದರೆ ಭೈರಪ್ಪನವರು ಆದ್ಯತೆಯಲ್ಲಿ ಇರುತ್ತಾರೆ; ಇದರರ್ಥ ಮಿಕ್ಕುಳಿದವರ ಕಾದಂಬರಿಗಳು ತಿರಸ್ಕೃತವೆಂದಲ್ಲ-ಅವುಗಳಲ್ಲೂ ಅನೇಕರ ಕೃತಿಗಳು ಉತ್ತಮವಾಗಿರಬಹುದು. ಕಾಲು ಶತಮಾನದ ಹಿಂದಿನ ಕಾದಂಬರಿಗಳಲ್ಲಿರುವ ಗುಣಮಟ್ಟ ಅಧುನಿಕ ಯುವ ಬರಹಗಾರರ ಕಾದಂಬರಿಗಳಲ್ಲಿ ಕಾಣಿಸುವುದಿಲ್ಲ. ಬರವಣಿಗೆ ಸಹಜವಾದ ಶೈಲಿಯಲ್ಲಿ ಜನಜೀವನದ ಹಲವು ಮಜಲುಗಳನ್ನು ಅಡಕಮಾಡಿಕೊಂಡು ಮೂಡಿದರೆ ಆಗ ಅದು ಜನರಿಗೆ ಇಷ್ಟವಾಗುತ್ತದೆ. ತುಂಬಾ ಸ್ಟ್ರಿಕ್ಟ್ ಆದ ಸಂಗೀತ ಲಯಗಳಿಗೆ ಹೊಂದಿಸಿಕೊಂಡು ಹಾಡುವಾಗ ಅರ್ಥಕೆಡದಂತೆ, ರಸಭಾವಗಳಿಗೆ ಕೊರತೆಯಾಗದಂತೆ ಹಾಡಿದರೆ ಮಾತ್ರ ಇಷ್ಟವಾಗುತ್ತದೆ; ರಾಗದ ತಿಟ್ಟು-ತಿಲ್ಲಾನಗಳನ್ನು ಮಾತ್ರ ಗಮನಿಸುತ್ತ ಕೇ-ಶವನ ಎಂದು ಪದವನ್ನು ಒಡೆದುಬಿಟ್ಟರೆ ಆಗ ಅರ್ಥಗೆಡುತ್ತದೆ; ಎಷ್ಟೋ ಸಮಯ ಸಂಗೀತ ಅಭ್ಯಸಿಸಿದವರಲ್ಲಿ ಈ ವಿಧದ ವ್ಯತ್ಯಯಗಳು ಕಾಣುವುದುಂಟು; ಅದಕ್ಕಾಗಿಯೇ ಔಪಚಾರಿಕ ಸಂಗೀತದ ತರಬೇತಿಯಿಲ್ಲದಿದ್ದರೂ ಮನೆಯೆದುರು ನಿಂತು ತಂಬೂರಿ ಮೀಟಿ ಹಾಡುವ ಅನಾಮಿಕ ಭಿಕ್ಷುಕನ ಹಾಡೂ ಸಹ ಕೆಲವೊಮ್ಮೆ ಇಷ್ಟವಾಗುತ್ತದೆ, ಪುಟ್ಟ ಚಾ ದುಖಾನಿನಲ್ಲಿ ಅಭ್ಯಾಸ ಬಲದಿಂದ ಗಿರ್ರನೆ ಹೊಯ್ದೆತ್ತಿ ಕೊಡುವ ಬಿಸಿಬಿಸಿ ಮಸಾಲೆದೋಸೆಯೂ ಇಷ್ಟವಾಗುತ್ತದೆ. ಕೆಲಸಮಾಡುವ ವ್ಯಕ್ತಿಗೆ ಮಾಡುವ ಕೆಲಸದಲ್ಲಿ ಸಂತೃಪ್ತಿ ಮತ್ತು ತಾದಾತ್ಮ್ಯತೆ ಇರಬೇಕಷ್ಟೆ.
ಹುಟ್ಟಿದ ಜೀವಿಗೆ ಅನುಗಾಲವೂ ಒಂದಲ್ಲೊಂದು ಚಿಂತೆ ಇದ್ದಿದ್ದೇ, ಮನುಷ್ಯರ ಚಿಂತೆಯನ್ನಷ್ಟೇ ನಾವರ್ಥಮಾಡಿಕೊಂಡಿರಬಹುದು ಯಾಕೆಂದರೆ ಮಿಕ್ಕ ಜೀವ ಪ್ರಭೇದಗಳ ಬೌದ್ಧಿಕದ ಬಗೆಗೆ ನಮಗೆ ಸ್ಪಷ್ಟತೆಯಿಲ್ಲ.
ಒಮ್ಮೆ ಹೂದೋಟದಲಿ ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ-ಮಂಕುತಿಮ್ಮ
ಮಹಾತ್ಮ ಡಿವಿಜಿ ಹೇಳಿದಂತೆ ಬದುಕಿನ ಏಕತಾನತೆಯನ್ನು ಕಳೆದುಕೊಳ್ಳಲು ಉದ್ಯಾನ ವಿಹಾರವೂ ಬೇಕು, ಗೆಳೆಯರೊಡನೆ ಹರಟೆಯೂ ಬೇಕು, ಸಂಗೀತ-ಶಾಸ್ತ್ರಗಳೂ ಬೇಕು, ಸಂಸಾರದ ಕೆಲಸವೂ ಬೇಕು, ಮೌನವೂ ಬೇಕು. ಸಪ್ತಸ್ವರಗಳು ಸೇರಿದಾಗಲೇ ಸಂಗೀತ ಸುಲಲಿತವಾಗಿ ಕೇಳಲು ಹಿತವಾಗಿರುತ್ತದೆ; ಕೇವಲ ಒಂದೇ ಸ್ವರವನ್ನು ದೀರ್ಘಕಾಲ ಅನುಭವಿಸಿನೋಡಿ-ಗೊತ್ತಾಗುತ್ತದೆ. ಬೆಳ್ಳನ ಬೆಳಕಿನಲ್ಲಿ ಸಪ್ತ ವರ್ಣಗಳಿವೆಯೆಂಬುದು ನಮಗೀಗ ಗೊತ್ತಿದೆ, ಪ್ರಾಯಶಃ ಸೂರ್ಯನಿಗೆ ಅದೇ ಕಾರಣದಿಂದ ಸಪ್ತಾಶ್ವ ಎಂದಿರಲಿಕ್ಕೂ ಸಾಕು. ಇಂತಹ ಏಳಂಕಿಯ ಏಳರಾಟಗಳು ವ್ಯಕ್ತಿ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿರುವುದರಿಂದ ಇರುವುದರಲ್ಲೇ ನೆಮ್ಮದಿಯನ್ನು ಗಳಿಸಿಕೊಳ್ಳಲು ಮನಸ್ಸನ್ನು ಕೆಲಹೊತ್ತು ಅನ್ಯಾನ್ಯ ವಿಷಯಗಳೆಡೆಗೆ ತೊಡಗಿಸುವುದು ಅನಿವಾರ್ಯ; ಇದನ್ನೆಲ್ಲ ಬಿಟ್ಟು ಮನಸ್ಸನ್ನು ಸ್ವನಿಯಂತ್ರಣಕ್ಕೆ ತೆಗೆದುಕೊಂಡು, ಜಿತೇಂದ್ರಿಯನಾಗಿ, ಧ್ಯಾನಾಸಕ್ತನಾಗಿ ಜೀವನ್ಮುಕ್ತನಾಗುವವನೇ ಯೋಗಿ.
ಯುಗಧರ್ಮದಂತೆ ಕಲಿಯುಗದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯಗಳನ್ನು ನಮ್ಮಲ್ಲಿ ಕೆಲವರು ಮಾತ್ರ ಮನಗಾಣುತ್ತಾರೆ. ದೇವರು-ಧರ್ಮಗಳ ಹೆಸರಿನಲ್ಲಿ ಕೆಲವರು ಹೇಗೆ ಮೋಸಮಾಡುತ್ತಾರೆ ಎಂಬ ಕಥಾವಸ್ತುವನ್ನು ಹಾಸ್ಯಮಯವಾಗಿ ತೋರಿಸಿದ್ದು ‘ಪಿಕೆ’ ಸಿನಿಮಾ. ಅಮೀರ್ ಖಾನ್ ನಟಿಸಿರುವ ‘ಪಿಕೆ’ ಸಿನೆಮಾವನ್ನು ಜಾಣ ಸಿನೆಮಾ ಎಂದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಧರ್ಮ ಎಂಬ ಗಂಭೀರ ವಿಷಯವನ್ನು ಸೂಕ್ಷವಾಗಿ ಮತ್ತು ನಾಜೂಕಾಗಿ ಹಾಸ್ಯಮಯವಾಗಿ ಚಲನಚಿತ್ರದಲ್ಲಿ ನಿಭಾಯಿಸಿರುವುದಕ್ಕೆ ರಾಜಕುಮಾರ್ ಹಿರಾನಿಯೊಬ್ಬ "ಧೈರ್ಯವಂತ ನಿರ್ದೇಶಕ" ಎಂದು ಹೇಳಿದ್ದು ನಿಜವೆನ್ನಿಸಿತು. ಅಲ್ಲಲ್ಲಿ ಕೆಲವರು "ಹಿಂದೂ ಸಂಪ್ರದಾಯಗಳನ್ನು ಗೇಲಿ ಮಾಡಲಾಗಿದೆ" ಎಂದು ದೂಷಿಸುತ್ತಿರುವುದನ್ನು ಕಂಡಾಗ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ದಗಲ್ಬಾಜಿ ವಹಿವಾಟುಗಳನ್ನು ಪ್ರಶ್ನಿಸಲೇ ಬಾರದೇ ಎಂದೆನಿಸುತ್ತದೆ; ಯಾಕೆಂದರೆ ಇಂದು, ನೂರು ಕುರಿಗಳಲ್ಲಿ ಒಂದು ಕುರಿ ಹೋದರೆ ತಲೆಕೆಡಿಸಿಕೊಳ್ಳಬೇಕಿಲ್ಲ-ಮಿಕ್ಕಿದ ತೊಂಬತ್ತೊಂಬತ್ತು ಕುರಿಗಳು ನಮ್ಮೆಡೆಯಲ್ಲೇ ಇವೆ ಎಂದು ಲೆಕ್ಕಹಾಕುವ ಮತ್ತು ಅಂತಹ ಅಂಧಶ್ರದ್ಧಾಳುಗಳ ಮುಂದೆ ದರ್ಬಾರ್ ನಡೆಸುವ ಸ್ವಾಮಿಗಳು, ಬಾಬಾಗಳು ಹಲವರು ಕಾಣಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಅಂಥದ್ದೊಂದು ಬಾಬಾನ ‘ದರ್ಬಾರ್’ಗೆ ಹೋಗಬೇಕೆಂದರೆ ೨,೫೦೦ ರೂಪಾಯಿಗಳನ್ನು ಮೊದಲೇ ರವಾನಿಸಿ ರಸೀದಿ ಇರಿಸಿಕೊಳ್ಳಬೇಕಾಗುತ್ತದೆ. ದರ್ಬಾರ್ ನಲ್ಲಿ ಬಾಬಾ ತನ್ನನ್ನು ನಂಬಿಬಂದವರು ಹೇಳುವ ಸಮಸ್ಯೆಗಳನ್ನೂ ಮತ್ತು ಅಂಥವರಿಗೆ ಬಾಬಾ ನೀಡುವ ಸಲಹೆಗಳನ್ನು ಗಮನಿಸಿದರೆ ಎಂಥಾ ಬಕರಾಗಳೂ ಇಲ್ಲಿದ್ದಾರಲ್ಲಾ ಎನಿಸುತ್ತದೆ. ಸಮೂಹಸನ್ನಿಯಂತೆ ಮೈಕ್ ಹಿಡಿದು ಬಾಬಾನನ್ನು ಹೊಗಳುವ ಜನ ಹಿಂದಿನ ಭೇಟಿಗಳಲ್ಲಿ ಬಾಬಾ ಹೇಳಿದ ಸಲಹೆಗಳಿಂದ ಪರಿಹಾರ ಸಿಗದಿದ್ದರೂ, ಯಾವುದೋ ಪ್ರಲೋಭನೆಯಿಂದ ಬಾಬಾನನ್ನು ಹೊಗಳೇ ಹೊಗಳುತ್ತಾರೆ!!
ಧರ್ಮದ ಆಚರಣೆಗಳು ಆದರ್ಶಮಯವಾಗಿರಬೇಕೇ ಹೊರತು ಅಂಧಾನುಕರಣೆಗಳಾಗಬಾರದು. ಇಂದು ಧರ್ಮಾಚರಣೆಗಳಲ್ಲಿ ಸೇರಿಕೊಂಡಿರುವ ಅಥವಾ ಅಧುನಿಕ ‘ಬಾಬಾ’ಗಳು, ‘ಸಂನ್ಯಾಸಿ’ಗಳು ಸೃಷ್ಟಿಸಿರುವ ಕೆಲವು ಆಚರಣೆಗಳು ಅರ್ಥಹೀನವಾಗಿವೆ ಎಂಬುದನ್ನು ಜನ ಮನಗಾಣಬೇಕು. ಕಲಿಯುಗದಲ್ಲಿ ಕೆಲವರಿಗೆ ದುಡ್ಡುಮಾಡಲು ಸುಲಭದ ದಾರಿಯೆಂದರೆ ‘ಬಾಬಾ’ಗಳಾಗುವುದು. ಧರ್ಮದ ಹೆಸರಿನಲ್ಲಿ ಹಣಮಾಡುವ ಬಾಬಾವರ್ಗ ಮತ್ತವರ ಬೆಂಬಲಿಗರು ಇಂತಹ ಸಿನಿಮಾಗಳ ಬಗ್ಗೆ ಅಪಸ್ವರ ಎತ್ತುತ್ತಾರೆ.
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಈ ಸಿನೆಮಾವನ್ನು ಮುಕ್ತಕಂಠದಿಂದ ಪ್ರಶಂಸಿಸಿರುವುದನ್ನು ಗಮನಿಸಿದಾಗ ಅವರಿಗೆ ನಿಜವಾಗಿಯೂ ಈ ಸಿನಿಮಾದ ಕಥೆ ಅರ್ಥವಾಗಿದೆ ಎನ್ನಿಸಿತು. “ ನಿರ್ಭೀತಿಯಿಂದ ತಯಾರಿಸಿದ ಅದ್ಭುತವಾದ ಸಿನಿಮಾ ಇದು. ಎಲ್ಲರೂ ನೋಡಲೇಬೇಕು. ಇಂತಹ ವಿಶಾಲವಾದ ವೈವಿಧ್ಯಮಯ ದೇಶವಾದ ಭಾರತದಲ್ಲಿ ಜನ್ಮ ನೀಡಿರುವುದು ನಮ್ಮ ಪುಣ್ಯ. ಜಾತಿಯಾಗಲೀ, ಜನಾಂಗವಾಗಲೀ, ಭಾಷೆಯಾಗಲೀ, ಪ್ರಾದೇಶಿಕತೆಯಾಗಲೀ ಮತ್ತು ಧರ್ಮವಾಗಲೀ ನಮ್ಮ ದೇಶದ ಐಕ್ಯತೆಯನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ಎಲ್ಲ ರಾಷ್ಟ್ರಭಕ್ತರ ಕರ್ತವ್ಯ" ಎಂದಿದ್ದಾರೆ ಅವರು.
ಸಿನಿಮಾದಲ್ಲಿ ಧರ್ಮದ ಅಥವಾ ದೇವರ ಅವಹೇಳನವೇನೂ ಇಲ್ಲ; ಮೌಢ್ಯವನ್ನು ಸಂಕೇತಿಸುವ ಹಲವು ದೃಶ್ಯಗಳನ್ನು ಕಾಣಬಹುದಾಗಿದೆ. ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಮತ್ತು ಅಮೀರ್ ಖಾನ್ ಇವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಷ್ಟು ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು ಎನ್ನಬಹುದು. ಮಾನವೀಯತೆ ಮತ್ತು ವಾಸ್ತವಿಕ ಅಂಶಗಳು ಈ ಸಿನಿಮಾದಲ್ಲಿವೆ. ಆದ್ದರಿಂದಲೇ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಮತ್ತು ಗಲ್ಲಿಗಲ್ಲಿಗಳಲ್ಲೂ ಈ ಮಟ್ಟದ ಗುಲ್ಲೆಬ್ಬಿಸುವಲ್ಲಿ ಯಶಸ್ವಿಯಾಗಿದೆ.
‘ಸೋನಾಲಿ ಕೇಬಲ್’ ಎಂಬ ಇನ್ನೊಂದು ಸಿನಿಮಾದಲ್ಲಿರುವ ಪ್ರಮುಖ ಕಲಾವಿದರು ಹೊಸಬರು. ವಾಸ್ತವವಾಗಿ ಹೊಸಬರ ಸಿನಿಮಾಗಳನ್ನು ನೋಡುವಾಗ ಎರಡನೇ ಧೋರಣೆಯೇ ಹೆಚ್ಚಿಗೆ ಇರುತ್ತದೆ. ಸಿನಿಮಾ ಸಾಗುವ ಜಾಡು ಹಿಡಿದು ಕೆಲನಿಮಿಷದಲ್ಲೇ ಅದರ ನಾಡಿಮಿಡಿತವನ್ನು ಅರಿಯಬಲ್ಲ ಜನ ಇದ್ದಾರೆ. ಜಾಗತೀಕರಣದಿಂದ ದೇಶದ ಚಿಕ್ಕ-ಪುಟ್ಟ ಉದ್ಯಮಿಗಳಿಗೆ, ವ್ಯಾಪಾರ-ವಹಿವಾಟುದಾರರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ ಎಂಬುದು ಈ ಸಿನಿಮಾ ಕಥೆಯ ಥೀಮ್ ಆಗಿದೆ. ಬೃಹತ್ ಮಟ್ಟದ ಟಿವಿಕೇಬಲ್ ಮತ್ತು ಇಂಟರ್ನೆಟ್ ಸರ್ವಿಸ್ ಪ್ರೊವೈಡಿಂಗ್ ಕಂಪನಿ ಬಾಗಿಲು ತೆರೆದು, ಸಣ್ಣ ಮತ್ತು ಪ್ರಾದೇಶಿಕ ಕೇಬಲ್ ಉದ್ಯಮಗಳನ್ನು ತನ್ನ ಕಬಂಧ ಬಾಹುಗಳಲ್ಲಿ ಹಿಡಿದು ಹೇಗೆ ಆಪೋಶನ ತೆಗೆದುಕೊಳ್ಳುತ್ತದೆ ಎಂಬುದು ಕಥೆಯ ಮುಖ್ಯಪಾಠ. ಭಾರತದಂಥ ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಭೂಭಾಗ ಕಮ್ಮಿ ಇರುವಲ್ಲಿ, ಬಡತನ ಹೆಚ್ಚಿದ್ದು ಧನಿಕರು ಕಮ್ಮಿ ಇದ್ದಾರೆ. ಅಖಂಡ ಭಾರತದಲ್ಲಿ ಮಧ್ಯಮವರ್ಗದವರೇ ಹೆಚ್ಚಿಗೆ ಇದ್ದಾರೆ. ತಮ್ಮ ನಿತ್ಯದ ಅಗತ್ಯಕ್ಕೆ ಅನುಕೂಲವಾಗುವ ಹಲವಾರು ಸೇವೆಗಳನ್ನು ಇಲ್ಲಿನ ಜನ ಬಯಸುತ್ತಾರೆ. ಅದರಲ್ಲಂತೂ ಕನ್ಸ್ಯೂಮರ್ ಡ್ಯೂರೇಬಲ್ಸ್ ವಸ್ತುಗಳ ಖರೀದಿಸಿ ನಂತರದಲ್ಲಿ ಮಾರಾಟದ ನಂತರ ಬೇಕಾಗುವ ಸರ್ವಿಸ್ [ಸೇವೆ]ಯನ್ನು ಬಯಸುವ ಮಂದಿಯೇ ಇಲ್ಲಿ ಹೆಚ್ಚಿಗೆ ಇದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿನ ಜನರಷ್ಟು ಸಮಯವಾಗಲೀ, ಆರ್ಥಿಕ ಅನುಕೂಲವಾಗಲೀ ಇಲ್ಲದ ಜನರಿಗೆ ಸೇವೆಗಾಗಿ ಕಾಲ್ ಸೆಂಟರ್ಗೆ ಕಾಲ್ ಮಾಡಿಕೊಂಡು, “ ಕ್ಕಾ॒ಗಿ ಒಂದನ್ನು ಒತ್ತಿ, ॒॒ಕ್ಕಾ॒ಗಿ ಎರಡನ್ನು ಒತ್ತಿ, ಅದಕ್ಕಾಗಿ ಮೂರನ್ನು ಒತ್ತಿ” ಎಂಬುದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದು ಸಾಧ್ಯವಿಲ್ಲ.
ಕಾರಿರುಳೊಳಾಗಸದಿ ತಾರೆ ನೂರಿದ್ದೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ ಮಾನುಷಸಖನ
ಕೋರುವುದು ಬಡಜೀವ-ಮಂಕುತಿಮ್ಮ
ರಾತ್ರಿಯ ಕತ್ತಲ ಹಾದಿಯಲ್ಲಿ ಕೇವಲ ತಾರೆಗಳ ಬೆಳಕು ನಮಗೆ ಮಹತ್ತರ ಗುರುತಾಗಲು ಸಾಧ್ಯವಿಲ್ಲ. ದೂರದ ದೇವರು ಸಹಾಯ ಮಾಡುತ್ತಾನೆಂದುಕೊಂಡರೂ, ಆ ಕ್ಷಣದಲ್ಲಿ ಅತ್ಯಂತ ತ್ವರಿತವಾಗಿ ನಮ್ಮ ಕಣ್ಣಿಗೆ ಮನೆಯಲ್ಲಿ ಬೆಳಗುವ ಬೆಳಕೊಂದು ಬಿದ್ದಾಗಲೇ ಸಮಾಧಾನ. ಅದೇ ವಿಧವಾಗಿ ಬಹುದೊಡ್ಡ ತಾಜ್ಮಹಲ್ ಹೋಟೆಲ್ನಂಥ ಸ್ಟಾರ್ಹೋಟೆಲ್ ಒದಗಿಸುವ ಹೈ ಟೀ ಆತಿಥ್ಯವನ್ನು ಅನುಭವಿಸುವ ಆರ್ಥಿಕ ಮಟ್ಟ ಎಲ್ಲರದ್ದಲ್ಲ, ಕಾಕಾ ಅಂಗಡಿಯ ಅರ್ಧ ಕಪ್ ಚಾ ಕುಡಿದು ತೃಪ್ತಗೊಳ್ಳುವ ಮಧ್ಯಮ, ಕೆಳಮಧ್ಯಮ, ಬಡಜನರೇ ಹೆಚ್ಚಾಗಿರುವ ಈ ಭಾರತದಲ್ಲಿ ಕಾಲ್ ಸೆಂಟರ್ ವ್ಯವಸ್ಥೆ ಬಂದಾಗಿನಿಂದ ಪ್ರಾದೇಶಿಕ ಸರ್ವಿಸ್ ಉದ್ಯಮಿಗಳ ಮತ್ತು ಗ್ರಾಹಕರ ನಡುವಿರುತ್ತಿದ್ದ ಆತ್ಮೀಯ ವಾತಾವರಣ ಹೊರಟುಹೋಗಿದೆ; ಸರ್ವಿಸ್ ಪಡೆದುಕೊಳ್ಳಲು ಜನತೆ, ಅದರಲ್ಲೂ ವಯೋವೃದ್ಧ ಗ್ರಾಹಕರು ಪರದಾಡಬೇಕಾಗಿದೆ ಎಂಬ ಸಂದೇಶವನ್ನು ಈ ಸಿನಿಮಾ ರವಾನಿಸುತ್ತದೆ. ತರುಣಿಯೋರ್ವಳ ಸ್ವಂತ ಉದ್ಯಮ, ಸಾಹಸ, ಉತ್ಸಾಹ ಅಥವಾ ಜೋಶ್, ಎಳವೆಯಿಂದ ಅಮ್ಮನಿಲ್ಲದೆ ಕುಡುಕ ಅಪ್ಪನ ಗರಡಿಯಲ್ಲಿ ಬೆಳೆದ ಅವಳ ಬದುಕು, ಅವಳ ಪ್ರೇಮ, ಉದ್ಯಮದ ಸೋಲು, ಹತಾಶೆ, ಮತ್ತೆ ಉದ್ಯಮದಲ್ಲಿ ಗೆಲ್ಲುವ ವೈಖರಿ ಎಲ್ಲವನ್ನೂ ಸಹಜವಾಗಿ ಕ್ರೋಡೀಕರಿಸಲಾಗಿದೆ. ಪ್ರತಿಯೊಂದು ಪಾತ್ರವೂ ಸಿನಿಮಾದ ಪಾತ್ರವಾಗಿರದೇ ಎದುರು ಘಟಿಸುವ ಘಟನೆಯಷ್ಟು ನೈಜ ಅನುಭವವನ್ನು ನೀಡುತ್ತದೆ. ಪಾತ್ರಗಳ ಜೀವಂತಿಕೆ, ಯುವ ಜೀವಗಳ ಲವಲವಿಕೆ ಇಡೀ ಸಿನಿಮಾವನ್ನು ಮತ್ತೊಮ್ಮೆ ನೋಡುವಂತೆ ಮಾಡುತ್ತದೆ.
ಮಚ್ಚು-ಲಾಂಗು ಸಾಂಗು ಎನ್ನುವ ಕನ್ನಡದ ಸಿನಿಮಾ ಮಂದಿಗೆ ಇಂತಹ ಚಿತ್ರಕಥೆಗಳು ಹೊಳೆಯುವುದೇ ಇಲ್ಲ ಎಂಬುದು ವಿಪರ್ಯಾಸ. ಬೇಡದ ಹಲವು ಸಿನಿಮಾಗಳ ಮಧ್ಯೆ ಉತ್ತಮ ಸಂದೇಶಗಳಿರುವ ಇಂತಹ ಸಿನಿಮಾಗಳು ರಂಜಿಸುತ್ತಲೇ ಭಿನ್ನವೆಂದು ಎತ್ತರದ ಸ್ತರದಲ್ಲಿ ನಿಲ್ಲುತ್ತವೆ. ನೀವೂ ಒಮ್ಮೆ ನೋಡುವ ಮನಸ್ಸು ಮಾಡಿ; ನೋಡುತ್ತ ಮನಸ್ಸನ್ನು ನಿರುಮ್ಮಳ ಮಾಡಿ.