ಚಿತ್ರಋಣ : ಅಂತರ್ಜಾಲ
ಸಾಫ್ಟ್ ವೇರ್ ಬೆಳದಿಂಗಳಮನೆಗೆ ಬಿಸಿಲು ಪ್ರವೇಶಿಸುತ್ತಿದೆ!
ಏರುಜವ್ವನೆಯಲ್ಲಿ ಆದ ದಿಡೀರ್ ಬದಲಾವಣೆಯಂತೇ ತೊಂಬತ್ತರ ದಶಕದಲ್ಲಿ ಇಡೀ ಜಗತ್ತಿಗೇ ಸರಕ್ಕನೆ ಚುರುಕುಮುಟ್ಟಿಸಿದ್ದು ಗಣಕಯಂತ್ರರಂಗ. ತಂತ್ರಜ್ಞಾನದಲ್ಲಿ ಪ್ರತಿದಿನ ನಡೆಯುತ್ತಿದ್ದ ಪರಿಶೀಲನೆ ಮತ್ತು ಪರಿಶೋಧನೆಗಳಿಂದ ನವನವೀನ ಮಾದರಿಯ ಹಾರ್ಡ್ ವೇರ್ ಗ್ಯಾಜೆಟ್ ಗಳೂ ಮತ್ತು ಅವುಗಳನ್ನು ಬಳಸಿಕೊಳ್ಳಲು ವಿವಿಧ ತೆರನಾದ ತಂತ್ರಾಂಶಗಳೂ ಸಿದ್ಧಗೊಳ್ಳುತ್ತಲೇ ನಡೆದವು. ಜನಸಾಮಾನ್ಯರಿಗೆ ಈ ಬೆಳವಣಿಗೆ ತೀರಾ ಅತಿರೇಕ ಎಂಬಷ್ಟು ವೇಗೋತ್ಕರ್ಷ ಪಡೆದುಕೊಂಡು, ನಿನ್ನೆ ಇದ್ದದ್ದು ಇಂದಿಲ್ಲ, ಇಂದಿದ್ದು ನಾಳೆ ಇಲ್ಲ ಎಂಬ ಮಟ್ಟಕ್ಕೆ ವ್ಯತ್ಯಾಸಗಳು ಜರುಗುತ್ತಿದ್ದವು. ಜಗತ್ತು ಹೊಸತನ್ನು ಸ್ವಾಗತಿಸಿತು, ಆದರೆ ಭಾರತದಂತಹ ಮಧ್ಯಮವರ್ಗ ಜಾಸ್ತಿ ಇರುವ ದೇಶಗಳಲ್ಲಿ, ಬದಲಾವಣೆಗೆ ಒಗ್ಗಿಕೊಳ್ಳುವ ಹಂತದಲ್ಲಿ, ಆ ದಿಸೆಯಲ್ಲಿ ತೆರಬೇಕಾದ ಹಣವನ್ನು ನೆನೆಸಿಕೊಂಡು ಅಲ್ಲಲ್ಲಿ ಕೆಲವರು ಕೆಮ್ಮಿದರೆ, ತಾವು ಜೀವಮಾನದಲ್ಲೇ ಎಣಿಸಿರದ ಐದಂಕಿಯ ಸಂಬಳವನ್ನು ತಮ್ಮ ಮಕ್ಕಳು 25ನೇ ವಯಸ್ಸಿನಲ್ಲೇ ಪಡೆದುಕೊಳ್ಳುತ್ತಿರುವುದನ್ನು ಕಂಡು ಹಲವರು ಹೆಮ್ಮೆಪಟ್ಟುಕೊಂಡರು. ತಂತ್ರಾಂಶ ತಯಾರಿಕೆಯಲ್ಲಿ ಇಡೀ ಜಗತ್ತಿಗೇ ಭಾರತ ಗುರುವೆನಿಸಿತು, ಅಗ್ರಮಾನ್ಯವೆನಿಸಿತು. ಪಿ.ಯೂ.ಸಿ ಮುಗಿಸಿದ ಮಕ್ಕಳನ್ನು ಹೇಗಾದರೂ ಮಾಡಿ ಕಂಪ್ಯೂಟರ್ ಸೈನ್ಸ್ ಓದಿಸಿಬಿಟ್ಟರೆ ಒಳ್ಳೆಯ ಆದಾಯದಿಂದ ಉತ್ತಮ ಜೀವನ ನಡೆಸಬಹುದು ಎಂಬ ಧೋರಣೆ ಜನಮಾನಸದಲ್ಲಿ ನಿಂತು, ಯಾರನ್ನೇ ಕೇಳಿದರೂ "ಕಂಪ್ಯೂಟರ್ ಸೈನ್ಸ್" ಎನ್ನುತ್ತಿದ್ದರು!
ನೂತನ ತಂತ್ರಜ್ಞಾನಗಳ ಆವಿಷ್ಕಾರದಿಂದ ಮತ್ತು ಅಳವಡಿಕೆಯಿಂದ ಪ್ರತಿಯೊಂದು ರಂಗವೂ ಹೊಸ ಮಾರ್ಪಾಡುಗಳನ್ನು ಕಂಡಿತು. ಭಾರತದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೆಲವು ಸಾಫ್ಟ್ ವೇರ್ ಕಂಪನಿಗಳು ಹುಟ್ಟಿ, ಬಹುಬೇಗ ಅಂಬೆಹರೆದು, ಎದ್ದುನಿಂತು ಅಮೆರಿಕಾದಂತಹ ರಾಷ್ಟ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ತಂತ್ರಾಂಶ ತಯಾರಿಸಿಕೊಡುವ ಹಂತಕ್ಕೆ ಉದ್ಯಮ ಬೆಳೆದುನಿಂತಿತು! ಸಾಫ್ಟ್ ವೇರ್ ಎಂದರೇನೆಂಬುದನ್ನು ಅರ್ಥವಿಸಿಕೊಳ್ಳಲಾಗದೇ ಅದೊಂದು ಪ್ರಾಡಕ್ಟ್ ಕೂಡ ಆಗಬಲ್ಲದು ಎಂಬುದನ್ನು ಒಪ್ಪಿಕೊಳ್ಳದ ಬ್ಯಾಂಕಿಂಗ್ ಸಿಬ್ಬಂದಿ, ಚಿಗುರುತ್ತಿದ್ದ ಹೊಸ ಸಾಫ್ಟ್ ವೇರ್ ಕಂಪನಿಗಳಿಗೆ ಸಾಲನೀಡಲು ಹಿಂಜರಿಯುತ್ತಿದ್ದವರು, 3-4ವರ್ಷಗಳಲ್ಲಿ ಆ ಕುರಿತು ಹಲವು ಕಮ್ಮಟಗಳಲ್ಲಿ ಭಾಗವಹಿಸಿ, ಬ್ಯಾಂಕಿಂಗ್ ಕ್ಷೇತ್ರಕ್ಕೇ ಸಾಫ್ಟ್ ವೇರ್ ಬಳಸಿಕೊಂಡು ಹೇರಳ ಸಾಲ ಸೌಲತ್ತನ್ನು ಧಾರಾಳವಾಗಿ ನೀಡಿದರು. ಸಿವಿಲ್, ಮೆಕಾನಿಕಲ್, ಇಲೆಕ್ಟ್ರಿಕಲ್, ಬ್ಯಾಂಕಿಂಗ್, ಮ್ಯಾನ್ಯುಫ್ಯಾಕ್ಚರಿಂಗ್, ಟ್ರೈನಿಂಗ್, ಡಿಸೈನಿಂಗ್ ಹೀಗೇ ಯಾವುದೇ ಕ್ಷೇತ್ರಗಳನ್ನು ತೆಗೆದುಕೊಂಡರೂ ಆ ಎಲ್ಲಾ ರಂಗಗಳಲ್ಲೂ ಕಂಪ್ಯೂಟರ್ ಅಳವಡಿಕೆ ಪ್ರಾಶಸ್ತ್ಯ ಪಡೆದುಕೊಂಡು, ಜಡ್ಡುಹಿಡಿದಿದ್ದ ಹಳೆಯ ಜಾಯಮಾನಕ್ಕೆ ಸಡ್ಡುಹೊಡೆದು ಪ್ರತಿಯೊಂದು ರಂಗವೂ ಮೈಕೊಡವಿ ನಿಂತಿತು. ಬೆಂಗಳೂರಿನಂಥಾ ನಗರಗಳಲ್ಲಿ ಎಲ್ಲಿ ನೋಡಿದರೂ ಸಾಫ್ಟ್ ವೇರ್ ಕಂಪನಿಗಳ ಬಸ್ಸುಗಳು ಓಡಾಡುವುದು ಕಂಡಿತು. ನವನವೀನ ವಿನ್ಯಾಸಗಳ, ಅಂಬರ ಚುಂಬಿತ ಕಟ್ಟಡಗಳು ಎದ್ದುನಿಂತವು.
ಸಾಫ್ಟ್ ವೇರ್ ರಫ್ತು ವ್ಯವಹಾರದಿಂದ ದೇಶಕ್ಕೂ ರಾಜ್ಯಕ್ಕೂ ಆದಾಯ ಹೆಚ್ಚಿತು. ಅಂತೂ ಜಗತ್ತು ಶತಶತಮಾನಗಳಲ್ಲಿ ಕಂಡರಿಯದ ಭವ್ಯ ಬದಲಾವಣೆ ಕೇವಲ ದಶಕವೊಂದರಲ್ಲೇ ಘಟಿಸಿಬಿಟ್ಟಿತು! ಬೆಳೆದ ತಂತ್ರಜ್ಞಾನಕ್ಕೆ ತಕ್ಕಂತೇ, ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಾ ಎಂಜಿನೀಯರಿಗಳು ಮತ್ತು ಅವರೆಲ್ಲರ ಕೆಲಸಕ್ಕೆ ಪೂರಕ ಸಹಾಯಕರಾಗಿ ಇನ್ನಿತರ ಕೆಲಸಗಳನ್ನು ನಡೆಸಿಕೊಡುವ ಸಿಬ್ಬಂದಿಗಳು, ದೇಶದ ಹಲವೆಡೆಗಳಿಂದ ಬೆಂಗಳೂರಿನತ್ತ ಮುಖಮಾಡಿದರು. ಅಷ್ಟೇ ಏಕೆ, ವಿದೇಶೀ ಯುವಜನತೆ ಕೆಲಸ ಹುಡುಕುತ್ತ ಭಾರತಕ್ಕೆ-ಬೆಂಗಳೂರಿಗೆ ಬಂದಿತು. ಅಹೋರಾತ್ರಿ ಕೆಲಸಗಳು ನಡೆಯಹತ್ತಿದವು. ಕೆಲಸದ ಹೊರೆಯನ್ನು ಬಿಟ್ಟರೆ ಸಿಗುವ ಅಧಿಕ ಸಂಬಳವನ್ನು ನೆನೆದೇ ಖುಷಿಗೊಳ್ಳುತ್ತಿದ್ದ ಎಂಜಿನೀಯರುಗಳು ಸ್ವಂತಕ್ಕೆ ಕಾರು-ಬಂಗಲೆ ಇತ್ಯಾದಿ ವ್ಯವಸ್ಥೆಗಳನ್ನು ಖರೀದಿಸಲು ಮನಮಾಡಿದರು. ಅಗತ್ಯಕ್ಕೆ ತಕ್ಕಂತೇ ಅಥವಾ ತುಸು ಅಧಿಕವಾಗಿಯೇ ಕ್ರೆಡಿಟ್ ಕಾರ್ಡುಗಳೂ, ಎ.ಟಿ.ಎಂ ಸೌಲಭ್ಯಗಳೂ ಸಹ ಆವಿರ್ಭವಿಸಿದವು. "ವಾರ ಪೂರ್ತಿ ದುಡಿಯುತ್ತೇವೆ, ವಾರಾಂತ್ಯದಲ್ಲಿ ಮೋಜು-ಮಜಾ ಇರಲಿ" ಎಂಬ ಅಮೆರಿಕನ್ ಸ್ಟೈಲ್ ಬೆಂಗಳೂರಿನಲ್ಲೂ ಕಂಡುಬಂತು; ದುಂದುಗಾರಿಕೆ ವಿಪರೀತವಾಯ್ತು.
ಸಾಫ್ಟ್ ವೇರ್ ಜನರೆಂದರೆ ಬೇರೇ ಯಾವುದೋ ಪ್ಲಾನೆಟ್ ನಿಂದ ಕೆಳಗಿಳಿದವರು ಎಂಬ ರೀತಿಯಲ್ಲಿ ಎಂಜಿನೀಯರುಗಳು ನಡೆದುಕೊಳ್ಳುತ್ತಿದ್ದರು; ಜನಸಾಮಾನ್ಯರೊಟ್ಟಿಗೆ ಎಂದೂ ಯಾವ ಸಭೆ-ಸಮಾರಂಭಗಳಲ್ಲೂ ಬೆರೆಯುತ್ತಿರಲಿಲ್ಲ. ಸ್ವತಃ ಅದೇ ವೃತ್ತಿಯಲ್ಲಿ ಇದ್ದರೂ ಇಂಥಾ ದರ್ಪ-ದುರಹಂಕಾರವನ್ನು ದೂರದಿಂದ ನೋಡುತ್ತಲೇ ಇದ್ದವನು ನಾನು. ಐಶಾರಾಮೀ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಆ ಜನರಲ್ಲಿ ಇಲ್ಲದ್ದೇ ಇಲ್ಲ! ತರಾವರಿ ಬಟ್ಟೆಗಳು, ಫಾರಿನ್ ಸೆಂಟುಗಳು, ದುಬಾರಿ ಬೆಲೆಯ ಕ್ಯಾಮೆರಾಗಳು-ಸೆಲ್ ಫೋನ್ ಗಳು ಹೀಗೇ ಕೊಳ್ಳುಬಾಕತನ ಕೂಡ ಹೆಚ್ಚುತ್ತಲೇ ಇತ್ತು. ಕೆಲವರ ಅಕೌಂಟಿನಲ್ಲಿ ಸಾಲದ ಲೆಕ್ಕ ಹೆಚ್ಚುತ್ತಲೇ ಇದ್ದರೂ ಹೊರಜಗತ್ತಿಗೆ ಅವರು ಶ್ರೀಮಂತರಾಗೇ ಕಾಣುತ್ತಿದ್ದರು. ರಸ್ತೆಬದಿಯಲ್ಲಿ ಎಳನೀರು ಮಾರುತ್ತಿದ್ದ ವ್ಯಕ್ತಿಗೆ ನೂರರ ನೋಟುಕೊಟ್ಟು, ಎರಡು ಎಳನೀರನ್ನು ಆತ ಕಾರಿಗೆ ಏರಿಸಿಕೊಟ್ಟಮೇಲೆ, ಚಿಲ್ಲರೆ ಕೇಳದೇ ಸರ್ರನೆ ಗ್ಲಾಸು ಏರಿಸಿಕೊಂಡು ಬುರ್ರನೆ ಹೊರಟು ಮಾಯವಾಗುವ ಮಂದಿ ಅಕ್ಷರಶಃ ಶೋಕಿಲಾಲಾಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಹಣ್ಣು-ತರಕಾರಿ ಅಂಗಡಿಗಳವರು ಮಿಕ್ಕಿದ ಗಿರಾಕಿಗಳನ್ನು ಅಲಕ್ಷ್ಯಿಸಿ, ಸಾಫ್ಟ್ ವೇರ್ ಎಂಜಿನೀಯರುಗಳನ್ನು ಅತಿ ದೂರದಿಂದಲೇ ಗುರುತಿಸಿ, ಅವರ ಕಾರು ಬಂದು ನಿಲ್ಲುತ್ತದೆ ಎನ್ನುವಾಗಲೇ ಸೆಲ್ಯೂಟ್ ಹೊಡೆದು ಸ್ವಾಗತಿಸುತ್ತಿದ್ದರು! ವ್ಯಾಪಾರಿಗಳಿಗೆ ಅಂಥಾ ಎಂಜಿನೀಯರುಗಳು ದೇವಮಾನವರಂತೇ ಕಾಣುತ್ತಿದ್ದರೋ ಏನೋ.
’ಏ’ ಸೈಡ್ ಮುಗಿಯಿತು, ಈಗ ’ಬಿ’ ಸೈಡ್ ನೋಡೋಣ: ಯಾವ ರಂಗ ಅತೀಶೀಘ್ರವಾಗಿ ಉತ್ತುಂಗ್ಗಕ್ಕೆ ಏರುತ್ತದೋ ಆ ರಂಗ ಅಷ್ಟೇ ಶೀಘ್ರವಾಗಿ ದೊಪ್ಪೆಂದು ನೆಲಕ್ಕೆ ಕುಸಿಯುತ್ತದೆ ಎಂಬುದು ಕೆಲವು ಅನುಭವಿಕರ ಮಾತು; ’ಅನುಭವ ಇರುವಲ್ಲಿ ಅಮೃತತ್ವ ಇದೆ’ ಎಂಬ ನಾಣ್ನುಡಿಯನ್ನು ಎಲ್ಲೋ ನೋಡಿದ ನೆನಪು, ಆದಕಾರಣ ಅನುಭವಿಗಳ, ಅನುಭಾವಿಗಳ ಅನುಭವಕ್ಕೆ ನಾವು ತಲೆಬಾಗಲೇ ಬೇಕು. ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ’ಸಾಫ್ಟ್ ವೇರ್ ಕಿಚನ್ ಅಫ್ ದಿ ವರ್ಲ್ಡ್’ಎಂಬ ಕಿರೀಟವನ್ನು ತಂದುಕೊಟ್ಟ ಸಾಫ್ಟ್ ವೇರ್ ಕಂಪನಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇದಕ್ಕೆ ಕಾರಣಗಳು ಪ್ರಮುಖವಾಗಿ ಎರಡು: ಮೊದಲನೆಯದು, ಜಾಗತಿಕ ಮಟ್ಟದಲ್ಲಿ ಸಾಫ್ಟ್ ವೇರ್ ಪ್ರಾಜೆಕ್ಟುಗಳು ಮಾಡುವುದಕ್ಕೆ ಉಳಿದಿರುವುದು ಕಮ್ಮಿ. ಎರಡನೆಯದು, ತಂತ್ರಾಂಶ ತಯಾರಿಕಾ ಸಂಸ್ಥೆಗಳ ನಡುವಣ ಪೈಪೋಟಿ ತೀರಾ ಹೆಚ್ಚಿದೆ. ಡಿಮಾಂಡ್ ವರ್ಸಸ್ ಸಪ್ಲೈ ನಲ್ಲಿ ಸಪ್ಲೈ ಜಾಸ್ತಿಯಾದಾಗ ಡಿಮಾಂಡ್ ಕಮ್ಮಿಯಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಈಗ ಡಿಮಾಂಡ್ ಕಮ್ಮಿಯಾಗಿದೆ, ಸಪ್ಲೈ ಹೇಗಿದೆ ಎಂದರೆ ಇನ್ನೆರಡು ವರ್ಷಗಳು ಸಂದರೆ ಸಾಫ್ಟ್ ವೇರುಗಳನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರಬೇಕಾದ ಸ್ಥಿತಿ ಇದೆ!!
ಜಾಗತಿಕ ಮಾರುಕಟ್ಟೆಯಲ್ಲಿ ಏನಾಗುತ್ತಿದೆ ಎಂಬ ಕುತೂಹಲವಿಲ್ಲದ ಜನ ಇನ್ನೂ ಮಕ್ಕಳನ್ನು ಸಾಫ್ಟ್ ವೇರ್ ಎಂಜಿನೀಯರುಗಳನ್ನಾಗಿ ಮಾಡುತ್ತಲೇ ಇದ್ದಾರೆ; ಸಾಫ್ಟ್ ವೇರ್ ಎಂಬುದು ನೋಟು ಮುದ್ರಿಸುವ ಯಂತ್ರ ಇದ್ದಹಾಗೇ ಎಂಬ ಲೆಕ್ಕಾಚಾರದಲ್ಲೇ ಅವರಿದ್ದರೆ, ತಮ್ಮ ’ರಂಗದ ಹಿರಿಯಣ್ಣ’ಗಳು ದಶಕದಿಂದ ಅನುಭವಿಸುತ್ತಿದ್ದ ಸೌಲತ್ತು, ಸೌಲಭ್ಯ ಮತ್ತು ಹಣದಮೇಲೆ ಕಣ್ಣಿಟ್ಟು, ಅಂಥದ್ದನ್ನೇ ಪಡೆಯುವ ಕನಸು ಕಾಣುತ್ತಿರುವ ಎಳೆವಯಸ್ಸಿಗರನ್ನು ಕಂಡರೆ ಒಳಗೊಳಗೇ ಖೇದವಾಗುತ್ತದೆ! ಅಳಿಯನಾಗುವವ ಸಾಫ್ಟ್ ವೇರ್ ಎಂಜಿನೀಯರಾಗಿರಬೇಕೆಂಬ ಆಸೆ ವಧುಗಳ ಪಾಲಕರಿಗಿದ್ದರೆ, ಗಂಡನಾಗುವವ ಸಾಫ್ಟ್ ವೇರ್ ಎಂಜಿನೀಯರ್ ಆಗಿರದಿದ್ದರೆ ಬದುಕೇ ಬರಡು ಎಂಬಂಥಾ ಮನೋಗತ ವಧುಗಳದಾಗಿದೆ! ಆದರೆ ಸಾಫ್ಟ್ ವೇರ್ ಕಂಪನಿಗಳಿಗೆ ಜಾಗತಿಕ ಹಿನ್ನಡೆಯ ಬಿಸಿ ಆಗಲೇ ತಟ್ಟಿದೆ. ಅದರ ಪರಿಣಾಮವಾಗಿ, ಅಧಿಕ ಸಂಬಳ ತೆಗೆದುಕೊಳ್ಳುವ ನುರಿತ ಹಿರಿಯ ಎಂಜಿನೀಯರುಗಳನ್ನು ಉಪಾಯವಾಗಿ ಮನೆಗೆ ಕಳಿಸುತ್ತಿದ್ದಾರೆ, ಅವರ ಜಾಗಕ್ಕೆ ಅವರ ಕೆಳದರ್ಜೆಯವರನ್ನು ಕೂರಿಸಿ, ಖಾಲಿ ಬೀಳುವ ಜಾಗಕ್ಕೆ ಹೊರಗಿನಿಂದ ಹೊಸಬರನ್ನು ’ಸದ್ಯಕ್ಕೆ ತರಬೇತಿ’ ಎಂಬ ಕಾರಣವೊಡ್ಡಿ ಬಿಟ್ಟಿಯಾಗಿಯೋ ಅಥವಾ ಕಮ್ಮಿ ಸಂಬಳಕ್ಕೋ ಭರ್ತಿಮಾಡಿಕೊಳ್ಳುತ್ತಿದ್ದಾರೆ-ಆದರೆ ಅಪಾಯಿಂಟ್ ಮೆಂಟ್ ಆರ್ಡರ್ ಇರುವುದಿಲ್ಲ! ’ಅಪಾಯಿಂಟ್ ಮೆಂಟ್ ಆರ್ಡರ್’ ಸಿಗದ ದೊಡ್ಡ ಕಂಪನಿಗಳ ಕೆಲಸ ಯಾವತ್ತಾದರೊಂದು ದಿನ ಹೊರದಬ್ಬುವ ಅಪಾಯದಿಂದ ತಪ್ಪಿದ್ದಲ್ಲ ಎಂಬುದು ಎಷ್ಟೋ ನವ ಎಂಜಿನೀಯರುಗಳಿಗೆ ಗೊತ್ತಿಲ್ಲ.
2001ರಲ್ಲಿ ಒಮ್ಮೆ ಅತೀವ ಹಿನ್ನಡೆಯಾಗಿತ್ತು ಆದಕ್ಕೆ ಹೊಸ ಪ್ರಾಜೆಕ್ಟ್ ಗಳಿಲ್ಲದ್ದು ಕಾರಣವಾಗಿರಲಿಲ್ಲ, 2008-09ರಲ್ಲಿ ಇನ್ನೊಮ್ಮೆ ಹಿನ್ನಡೆ ಜರುಗಿತು, ಅದೂ ಕೂಡ ಅಮೆರಿಕಾದ-ಜಗತ್ತಿನ ಆರ್ಥಿಕತೆಯ ಕುಸಿತದಿಂದ ಹೀಗಾಗಿದೆ ಎಂದು ಅಂದಾಜಿಸಲಾಯ್ತು. ಆಗೆಲ್ಲಾ ನಡೆದಿದ್ದು ಅಲ್ಪಪ್ರಮಾಣದ ಸಾಫ್ಟ್ ವೇರ್ ಪ್ರಳಯ, ಆದರೆ ಎದುರಾಗುತ್ತಿರುವುದು ಪೂರ್ಣಪ್ರಮಾಣದ ಪ್ರಳಯ; ಈ ಪ್ರಳಯದಲ್ಲಿ ಬಹುತೇಕ ಸಾಫ್ಟ್ ವೇರ್ ಕಂಪನಿಗಳು ಬಾಗಿಲು ಹಾಕುತ್ತವೆ ಎಂಬುದು ತಜ್ಞರ ಮುಂಧೋರಣೆ. ಆ ಸಂಭವನೀಯತೆಯನ್ನು ಎದುರಿಸಲು ನಮ್ಮ ಸಾಫ್ಟ್ ವೇರ್ ಎಂಜಿನೀಯರುಗಳು ಮಾನಸಿಕ ಸಿದ್ಧತೆ ನಡೆಸಿದ್ದಾರೆಯೇ? ಗೊತ್ತಿಲ್ಲ. ಯಾಕೆಂದರೆ ಅವರಿನ್ನೂ ’ಮಾನವ’ರಾಗುವುದರಲ್ಲೇ ಇದ್ದಾರೆ; ಆಗಿಲ್ಲ. ಸಾಫ್ಟ್ ವೇರ್ ರಂಗದಿಂದ ಆಚೆ ಬಂದರೆ ಜಗತ್ತಿನಲ್ಲಿ ಇನ್ನೇನು ಮಾಡಬಲ್ಲೆವೆಂಬುದೂ ಅವರಿಗೆ ತಿಳಿದಿಲ್ಲ. ತಮ್ಮ ರಂಗದ ಕೆಲವು ಜನರನ್ನು ಬಿಟ್ಟರೆ ಪರ್ಯಾಯ ಜೀವ-ಜಗತ್ತಿನ ಪರಿಚಯ ಅವರಿಗಿದ್ದಂತಿಲ್ಲ. ಕಂಪನಿಗಳನ್ನು ನಡೆಸುವವರು ಹೇಗೋ ಸುಧಾರಿಸಿಕೊಳ್ಳುತ್ತಾರೆ ಅದು ಬೇರೇ ಪ್ರಶ್ನೆ. ಆದರೆ ಎಂಜಿನೀಯರುಗಳು ಎಲ್ಲಿಗೆ ಹೋಗುತ್ತಾರೆ? ಯಾವ ಕೆಲಸವನ್ನು ಮಾಡುತ್ತಾರೆ? ಕಡಿಮೆ ಸಂಬಳವನ್ನು ಒಪ್ಪಿಕೊಳ್ಳುತ್ತಾರೆಯೇ? ಕಡಿಮೆ ಸಂಬಳ ತೆಗೆದುಕೊಂಡರೆ ಅವರು ಅದಾಗಲೇ ಮಾಡಿಕೊಂಡ ಸಾಲ-ಬಡ್ಡಿ-ಚಕ್ರಬಡ್ಡಿಗಳನ್ನು ತೀರಿಸಲು ಸಾಧ್ಯವೇ? ಇದಕ್ಕೆಲ್ಲಾ ಚಿಂತಕ ಸಮಾಜ ಉತ್ತರ ಕಂಡುಕೊಳ್ಳಬೇಕಾಗಿದೆ; ಯಾಕೆಂದರೆ ಸಾಫ್ಟ್ ವೇರಿನವರಿಗೆ ಸದ್ಯ ನಾವ್ಯಾರೂ ಏನೂ ಅಲ್ಲದಿದ್ದರೂ ಅವರೆಲ್ಲಾ ನಮ್ಮ ಸಮಾಜದ ಭಾಗವೆಂಬ ಭಾವನೆ ನಮ್ಮಲ್ಲಿ ಇನ್ನೂ ಇದೆಯಲ್ಲಾ?
ಇನ್ನು ದೇಶದ ಆರ್ಥಿಕತೆ ಇಂದು ಪ್ರಮುಖವಾಗಿ ಸಾಫ್ಟ್ ವೇರ್ ರಫ್ತು ವಹಿವಾಟುಗಳನ್ನೇ ಅವಲಂಬಿಸಿದೆ. ಸಾಫ್ಟ್ ವೇರ್ ಬಿಟ್ಟರೇನೇ ಮಿಕ್ಕುಳಿದ ರಂಗಗಳು ಎಂಬಷ್ಟು ಆದ್ಯತೆಯನ್ನು ನೀಡಲಾಗಿರುವುದರಿಂದ ಸಾಫ್ಟ್ ವೇರ್ ರಫ್ತು ವ್ಯವಹಾರ ಕ್ಷೀಣಿಸಿದಾಗ ಅಥವಾ ನಿಂತಾಗ ದೇಶದ ಆರ್ಥಿಕತೆಯ ಮೇಲೂ ಕೂಡ ಸಾಕಷ್ಟು ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿದರೂ ಕೂಡ, ಮತ್ತೆ ಸಾಫ್ಟ್ ವೇರಿಗೆ ಮೊದಲಿನ ಡಿಮಾಂಡ್ ಬರುವುದಿಲ್ಲ. ಮ್ಯಾಂಟೆನನ್ಸ್ ಕೆಲಸಕ್ಕೆ ಸೀಮಿತ ಸಿಬ್ಬಂದಿ ಸಾಲುವುದರಿಂದ ಕಂಪನಿಗಳು ಮತ್ತೆ ಹೊಸತನವನ್ನು ಕಂಡುಕೊಳ್ಳುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ತಾಂತ್ರಿಕತೆ ಬೆಳವಣಿಗೆ ಹೆಚ್ಚಿ ಕೊನೆ ಮಟ್ಟವನ್ನು ತಲ್ಪಿದ್ದಾಗಿದೆ. 25ವರ್ಷಗಳ ಹಿಂದೆ ಸಿವಿಲ್ ಎಂಜಿನೀಯರಿಂಗ್ ಇದೇ ಅನಾಹುತವನ್ನು ಅನುಭವಿಸಿತ್ತು. ಅದು ಸಿವಿಲ್ ಆಗಿರುವುದರಿಂದ ಬದುಕಿನ ಅನಿವಾರ್ಯ ಭಾಗವಾಗಿ ಮತ್ತೆ ಹಾಗೇ ನಿಂತಿತು, ನಶಿಸಲಿಲ್ಲ. ಆದರೆ ಜೀವನದ ಅನಿವಾರ್ಯತೆಗಳ ಆದ್ಯತೆಯಲ್ಲಿ ಸಾಫ್ಟ್ ವೇರ್ ಸೇರುವುದಿಲ್ಲ, ಸಾಫ್ಟ್ ವೇರ್ ಇಲ್ಲದೆಯೂ ಜನತೆ ಬದುಕಬಲ್ಲದು ಅಲ್ಲವೇ? ಈ ಎಲ್ಲಾ ದೃಷ್ಟಿಕೋನದಿಂದ, ’ಸಾಫ್ಟ್ ವೇರ್ ವಹಿವಾಟು ರಹಿತ ದೇಶ’ವನ್ನು ಕಲ್ಪಿಸಿಕೊಳ್ಳಲು ದೇಶದ ಆರ್ಥಿಕ ತಜ್ಞರು ತಯಾರಾಗುವ ಕಾಲ ಸನ್ನಿಹಿತವಾಗಿದೆ. ಬೆಳದಿಂಗಳ ಅರಮನೆಯಾಗಿದ್ದ ಸಾಫ್ಟ್ ವೇರ್ ರಂಗಕ್ಕೆ ಬಿಸಿಲು ಸೋಕಿದ ಪರಿ ಇದಾಗಿದೆ.