ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 14, 2010

ಗಣೇಶ ಬಂದ!!


ಗಣೇಶ ಬಂದ!!

ಸಮಯ ಎಲ್ಲವನ್ನೂ ಕೂಡುತ್ತದೆ, ಕಳೆಯುತ್ತದೆ ಮತ್ತು ಭಾಗಿಸುತ್ತದೆ, ಒಂದರ್ಥದಲ್ಲಿ ಸಮಯವೇ ಎಲ್ಲಕ್ಕೂ ಕಾರಣ ಎಂದರೆ ತಪ್ಪಾಗಲಾರದು ಅಂತ ನನಗಂತೂ ಅನಿಸುತ್ತಿದೆಯಪ್ಪ. ಗಣೇಶನ ಹಬ್ಬಕ್ಕೆ ಊರಿಗೆ ಹೋಗಿದ್ದೆನಲ್ಲ, ಇದ್ದ ಮೂರೇ ದಿನದಲ್ಲಿ ಎರಡು ದಿನ ಹಬ್ಬದ ಆಚರಣೆ-ಪೂಜೆ-ಪುನಸ್ಕಾರ,ಅತಿಥಿಸತ್ಕಾರ, ಮನೆಜನರೊಟ್ಟಿಗೆ ಹರಟುವಿಕೆ ಇದ್ರಲ್ಲೇ ಕಳೆದುಹೋಯಿತು. ಇನ್ನುಳಿದ ಒಂದೇ ದಿನ ಹತ್ತೆಂಟು ಕಡೆ ಸುತ್ತಾಡಿದೆವು. ಬಾಲ್ಯದಲ್ಲಿ ನೋಡಿದ ಹಲವು ಸ್ಥಳಗಳ ಮತ್ತು ಜನರ ಸ್ಥಿತಿಗತಿಯಲ್ಲಿ ಬದಲಾವಣೆಯಾಗಿಬಿಟ್ಟಿದೆ ! ಕೆಲವು ಸ್ನೆಹಿತರು ಮುದುಕರಂತೇ ಕಂಡರೆ ಇನ್ನು ಕೆಲವರು ತಲೆಯಮೇಲೆ ಬಹಳ ಪ್ರತಿಷ್ಠೆಯ ಭಾರ ಹೊತ್ತಿದ್ದಾರೆ. ಕೆಲವರು ಮದುವೆಯಾಗಿದ್ದರೆ ಇನ್ನೂ ಕೆಲವರಿಗೆ ಮದುವೆ-ಮನಕಾಲ ಏನೂ ಇಲ್ಲ. ಮದುವೆ ಆದ ಕೆಲವರಿಗೆ ಮಕ್ಕಳ ಭಾಗ್ಯವಿಲ್ಲ! ಮದುವೆ ಆಗದ ಕೆಲವರಿಗೆ ಇನ್ನು ನೇರ ವಾನಪ್ರಸ್ಥಾಶ್ರಮವೇ ಗತಿ!

ಹಿರಿಯ ಸಾಹಿತಿ ಮಿತ್ರರಾದ ಶ್ರೀ ಜಯಂತ್ ಕಾಯ್ಕಿಣಿಯವರ ಮನೆಕಡೆ ಹೊಗಿದ್ದೆ ಅಂದರೆ ಗೋಕರ್ಣಕ್ಕೆ ಅಂತ! ಅಲ್ಲಿ ಅವರ ಕುಟುಂಬದ ಪೈಕಿ ಯಾರಿದ್ದಾರೋ ಗೊತ್ತಿಲ್ಲ, ಆರಾಧ್ಯ ಶ್ರೀ ಇಡಗುಂಜಿ ಮಹಾಗಣಪತಿಯ ದರ್ಶನ ಮಾಡಿದೆ. ಮೂರ್ನಾಲ್ಕು ಸನ್ಯಾಸಿಗಳನ್ನು ಭೇಟಿ ಮಾಡಿದೆ: ಅವರೆಲ್ಲಾ ಸದ್ಯ ಚಾತುರ್ಮಾಸ್ಯ ನಡೆಸುತ್ತಿದ್ದಾರಲ್ಲ, ಈ ಕಾಲಘಟ್ಟದಲ್ಲಿ ಅವರ ಸೇವೆ, ದರ್ಶನ ಬಹಳ ಪುಣ್ಯಪ್ರದವೆಂಬುದು ಹಲವರ ಅಂಬೋಣ. ನಾಸ್ತಿಕರಿಗೆ,ವಿತಂಡವಾದಿಗಳಿಗೆ ಬಹಳ ಬೇಸರದ ಸಂಗತಿ ಇದಾದರೂ ನಾವು ಸದ್ಯ ನಾಸ್ತಿಕರಲ್ಲ, ಹೀಗಾಗಿ ನಮ್ಮ ’ಒಳಗಿನ ಕರೆ’ ಮನ್ನಿಸಿ ಹಾಗೆ ನಡೆದಿದ್ದೆವು.

ಬೆಂಗಳೂರಿನಲ್ಲಿ ನಾವು ಬ್ಲಾಗಿಗರು ಸ್ನೇಹಿತರು ಭೇಟಿಯಾದದ್ದಕ್ಕಿಂತ ಹೆಚ್ಚಿನ ಸಂತೋಷದ ವಿಷಯವೆಂದರೆ ನಾನು ನನ್ನ ಬಾಲ್ಯ ಸ್ನೇಹಿತರನೇಕರನ್ನು ಅಪರೂಪಕ್ಕೊಮ್ಮೆ ಮುಖತಃ ಸಂವಹಿಸಲು ಸಾಧ್ಯವಾಯಿತು.ಸಿಕ್ಕ ಕೆಲವೇ ನಿಮಿಷಗಳ ಕಾಲ ನಾವು ನಮ್ಮ ಬಾಲ್ಯಲೋಕದಲ್ಲಿ ವಿಹರಿಸಿದೆವು. ಓದಿನಲ್ಲಿ ನಮ್ಮಲ್ಲಿದ್ದ ಕಾಂಪಿಟಿಶನ್, ಆಶುಭಾಷಣ ಸ್ಪರ್ಧೆ, ಪ್ರತೀವರ್ಷ ಮಾಸ್ತರು ನಡೆಸುವ ’ಕೊಡೆ ಮೇಲೋ ಕಂಬಳಿಮೇಲೋ’ ಚರ್ಚಾಕೂಟ, ಆಗಷ್ಟ್ ೧೫ ರ ಪ್ರಭಾತ್ ಪೇರಿ ಹಾಡುಗಳು, ಸ್ವಾತಂತ್ರ್ಯ ಸೇನಾನಿಗಳಾದ ಮಹತ್ಮಾಗಾಂಧಿ, ಲಾಲಾ ಲಜಪತರಾಯ್, ಲೋಕಮಾನ್ಯ ತಿಲಕ್, ಸರ್ದಾರ್ ಪಟೇಲ್, ಮಂಗಲಪಾಂಡೆ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದ ಹಲವರ ಕುರಿತು ಹಿರಿಯರಿಂದ ದುಂಬಾಲು ಬಿದ್ದು ಬರೆಸಿ ಬಾಯಿಪಾಠ ಮಾಡಿಕೊಂಡ ಭಾಷಣಗಳನ್ನು ಪ್ರಸ್ತುತಪಡಿಸಲು ಮುಂದಾಗುತ್ತಿದ್ದೆವು. ಕೆಲವೊಮ್ಮೆ ಕೆಲವನ್ನು ನಿಭಾಯಿಸುವ ಪೂರ್ವ ನಮ್ಮ ಹೆಸರನ್ನು ಕರೆಯುವ ಮೊದಲೇ ನಮಗೆ ಪುಕುಪುಕು ಶುರುವಾಗುತ್ತಿತ್ತು! ಭಾಷಣ ನಿಜವಾಗಿಯೂ ನಮಗೆ ಮರೆತುಹೋಗಿರದಿದ್ದರೂ ಸಭಾಕಂಪನದಿಂದ [ನರ್ವಸ್ನೆಸ್] ಕೈಕಾಲೆಲ್ಲಾ ಸಣ್ಣಗೆ ತರಗುಡಲು ಶುರುವಾಗಿ ಉಚ್ಚೆಬರುವಂತೇ ಭಾಸವಾಗಿ ಇನ್ನೇನೇನೋ ಆಗಿ ಬಹಳ ಚಡಪಡಿಸುತ್ತಿದ್ದೆವು. ಆಡಲಾರದ ಅನುಭವಿಸಲಾರದ ನಮ್ಮ ಅಂದಿನ ಸ್ಥಿತಿಯನ್ನು ಈಗ ನೆನೆಸಿಕೊಂಡರೆ ತುಂಬಾ ನಗು ಉಕ್ಕಿಬರುತ್ತದೆ. ಆಗಿನ ಆ ನಮ್ಮ ಅನಿವಾರ್ಯ ಸಹಜ ಶ್ರಮದಿಂದ ಈಗ ನಮಗೆ ಬಹಳ ವ್ಯಕ್ತಿಗಳ ಬಗ್ಗೆ ತಿಳುವಳಿಕೆ ಬರಲು ಸಾಧ್ಯವಾಯಿತು!

ಊರಕಡೆ ತೋಟತುಡಿಕೆಗಳಲ್ಲಿ ಕಾಲಹಾಕದೇ ಮತ್ತು ಕಾಲನ್ನೂ ಹಾಕದೇ ಬಹಳದಿನಗಳೇ ಸಂದಿದ್ದವು. ನಮದೇನಿದ್ದರೂ ಈಗ ಪ್ಯಾಕೇಜ್ ಟೂರ್ ಥರದ ವ್ಯವಸ್ಥೆ: ಕೆಲಸವಿರುವಾಗ ಮುಂಚಿನ ರಾತ್ರಿ ಬಸ್ಸನ್ನೋ ಕಾರನ್ನೋ ಏರುವುದು, ಮಾರನೇ ದಿನ ಬೆಳಿಗ್ಗೆ ಊರಲ್ಲಿದ್ದು ಸ್ನಾನ,ತಿಂಡಿ,ಕೆಲಸ,ಊಟ ಹೀಗೇ ಗಡಿಬಿಡಿಯಲ್ಲಿ ಎಲ್ಲವನ್ನೂ ಮುಗಿಸಿ ಇನ್ನೇನು ಯಾರಾದರೂ ನಾವು ಬಂದ ಸುದ್ದಿತಿಳಿದು ಪ್ರೀತಿಯಿಂದ ಮಾತನಾಡಿಸಲು ಬರುವಷ್ಟರಲ್ಲಿ ಈ ಆಸಾಮಿ ನಾಪತ್ತೆ>> ವಾಸಪ್ ಬೆಂಗಳೂರಿಗೆ ಹೊರಟಾಗಿರುತ್ತಿತ್ತು! ಹೀಗಾಗಿ ಊರಿಗೆ ಹೋದರೂ ನೀರಿಗೆ ಹೋಗದ ನಾರಿಯರೂ ಇದ್ದಾರೆ ಮತ್ತು ಪುರುಷರೂ ಇದ್ದಾರೆ ! ಸ್ವಾಭಾವಿಕವಾಗಿ ಹುಟ್ಟಿನ ಜಾಗದಲ್ಲಿ, ಆ ಊರಲ್ಲಿ, ಅಲ್ಲಿನ ನೆಲ-ಜಲ,ಜನವಸತಿ ಇವನ್ನೆಲ್ಲ ಬಹಳ ಹತ್ತಿರದಿಂದ ನೋಡಿ ಅದರ ನಡುವೆ ನಾವೂ ಒಬ್ಬೊಬ್ಬರಾಗಿ ಬೆಳೆದು ಬದುಕಿದ ನಮಗೆ ಅಲ್ಲಿಯೇ ನಮ್ಮ ಹೊಕ್ಕುಳ ಚೊಟ್ಟನ್ನು [ಹೊಕ್ಕುಳಬಳ್ಳಿಯನ್ನು] ಹೂತಿದ್ದರಿಂದ ಆ ಪರಿಸರದ ಸ್ನೇಹವನ್ನು ಮರೆಯಲು ಅಸಾಧ್ಯ. ಒಂದು ಹೆಚ್ಚೋ ಕಮ್ಮಿಯೋ ತುಂಬು ಗ್ರಾಮ್ಯ ಜೀವನದಲ್ಲಿ ಬೆಳೆದುಬಂದ ಕಂದಮ್ಮಗಳು ನಾವಾಗಿದ್ದರಿಂದ ಅಲ್ಲಿನ ಹಂಬಲ ನಮ್ಮನ್ನು ಬೆಂಬಿಡದೇ ಅಂಟಿಕೊಂಡೇ ಬಂದಿರುತ್ತದೆ. ತೋಟದಲ್ಲಿ ಒಂದೇ ಒಂದು ರೌಂಡ್ ಹಾಕಿಬಿಟ್ಟರೆ ಸ್ವರ್ಗಸಮಾನ ಸುಖ ನಮಗೆ ! ಅದ್ರಲ್ಲೂ ಬಾಲ್ಯಸಖರು ಸಿಕ್ಕರೆ ಕೇಳಬೇಕೇ !

ಕಾಗೆ-ಗುಬ್ಬಿ ಎಂಜಲುಗಳ ಕಾಲ ಮುಗಿದು ಹೋಗಿ, ಸ್ನೇಹಿತರುಗಳಲ್ಲಿ ಹಿರಿಯರ ತಲೆ ಬೋಳಾಗಿ ನವಿಲುಕೋಸಿನ ರೀತಿ ಮೂರ್ನಾಲ್ಕು ಕೂದಲಿನಿಂದ ಚಂದಕಂಡರೆ, ಕಿರಿಯ ಸ್ನೇಹಿತರ ಅಂದಿನ ಚೆಡ್ಡಿಯೆಲ್ಲಾ ಹಳತಾದ ಮೇಲೆ ಇಂದೀಗ ಬರ್ಮುಡಾಗಳು ಬಂದಿವೆ! ಇರುವ ಕೆರೆ-ತೊರೆಗಳು ಬತ್ತಿ, ತಿಳಿನೀರಿನ ಬಾವಿಗಳು ಕೊಳೆಕಲ್ಮಶಗಳಿಂದ ತುಂಬಿವೆ. ನನ್ನ ಸಹಪಾಠಿಗಳ ಬಾಯಿಗಳಲ್ಲಿ ಎಲ್ಲೋ ಅಪರೂಪಕ್ಕೆ ಹಿರಿಯರ ಕಣ್ತಪ್ಪಿಸಿ ಅರಳುತ್ತಿದ್ದ ತಂಬಾಕು ರಹಿತ ಎಲೆಯಡಿಕೆ ಇಂದು ಗುಟ್ಕಾದ ಮಟ್ಕಾಗಳಂತೆ ರಾರಾಜಿಸುತ್ತಿವೆ! ಕೆಲವ್ರು ದಪ್ಪಗೂ ಇನ್ನು ಕೆಲವ್ರು ತೆಳ್ಳಗೂ ಇನ್ನೂ ಹಲವರು ಉದ್ದದ್ದ ಅಡ್ಡಡ್ಡ ಹೇಗೇಗೋ ಅಂತೂ ಬೆಳೆದಿದ್ದಾರೆ. ಕೆಲವರು ವಕ್ರತುಂಡರಾದರೆ ಇನ್ನೂ ಕೆಲವರು ಪ್ಲಾಸ್ಟಿಕ್ ಹಲ್ಲುಧಾರಿಗಳು, ಕೆಲವರು ಹುಳಬಿದ್ದ ಹಲ್ಲನ್ನು ಹಾಗೇ ಇಟ್ಟುಕೊಂಡು ಹಳೆಯ ಸಂಪ್ರದಾಯವನ್ನು ಅನೂಚಾನವಾಗಿ ಮುನ್ನಡೆಸುವಂತೇ ಕಾಣಿಸುವ ಮಹಾನುಭಾವರು! ನಮ್ಮ ಓರಗೆಯ ಹುಡುಗಿಯರು ಮದುವೆಯಾಗಿ ಎಲ್ಲೆಲ್ಲಿಗೋ ಹೋಗಿ ಮೂವತ್ತು ವಯಸ್ಸಿನ ಒಳಗೇ ನಾಲ್ಕಾರು ಮಕ್ಕಳನ್ನು ಹಡೆದು ಸಂತಾನಲಕ್ಷ್ಮಿಯರಾದರೆ ಇನ್ನು ಕೆಲವರು ಪೇಟೆ-ಪಟ್ಟಣ ಸೇರಿ ’ನಾವು ಇಬ್ಬರು ನಮಗೊಬ್ಬರು’ ಎನ್ನುತ್ತಾ ಹಡೆದ ಒಂದನ್ನೇ ಸರಿಯಾಗಿ ಸಾಕಲು ಪೀಕಲಾಡುವ ಸ್ಥಿತಿಯಲ್ಲಿದ್ದಾರೆ. ಅವರಿವರ ಬಾಯಲ್ಲಿ ಒಬ್ಬೊಬ್ಬರದೂ ಕಥೆ ಕೇಳುವಾಗ ನಾನು ನಿಮಗೆ ಹಲವು ಕಥೆ ಬರೆದು ಒಪ್ಪಿಸಿಯೇನು ಎನ್ನುವ ಹೊಸ ಹುಮ್ಮಸ್ಸು ಬಂದು ಬಿಟ್ಟಿದೆ! ಓ ದೇವರೇ ಆ ಬಾಲ್ಯ ಮತ್ತೆ ಮರಳಿ ಬಾರದೇ ?

ಊರಿಗೆ ಹೋಗುವಾಗ ಬಸ್ಸಿನಲ್ಲಿ ಹೋದರೆ ಬಹಳ ಮಜಸಿಗುವುದು ಗ್ಯಾರಂಟಿ! ತಮಗೆಲ್ಲಾ ಇದು ತಿಳಿಯದೇ ಇರುವ ವಿಷಯವೇ ? ಒಮ್ಮೆ ನಾವು ಪ್ರಯಾಣಿಸುವಾಗ ಪುಟ್ಟ ಕಂದಮ್ಮ ಒಬ್ಬಳು ಹಿಂದಿನ ಸೀಟಿನಲ್ಲಿ ಹಾಡುತ್ತಿದ್ದಳು-
’ ಶ್ರೀಚಕ್ರಧಾರಿಗೇ ಶಿವಲಾಲಿ ಲಾಲಿ .....ಹಾಲ್ಗೆನ್ನೆ ಕೃಷ್ಣನಿಗೆ ’ ಅವಳ ಮುಗ್ಧ ಮನಸ್ಸಿಂದ ತಪ್ಪು ತಪ್ಪಾಗಿ ತೊದಲು ಭಾಷೆಯಲ್ಲಿ ಉಚ್ಚರಿಸಲ್ಪಟ್ಟ ಹಾಡನ್ನು ಕೇಳುವುದೇ ಒಂದು ಥ್ರಿಲ್ಲಿಂಗ್ ಇಫೆಕ್ಟ್ ಆಗಿತ್ತು. ಈಗ್ ಬಿಡಿ ಥ್ರಿಲ್ಲೇ ಥ್ರಿಲ್ಲು! ತೂಗುಯ್ಯಾಲೆಯಾಡುವ ಅಟ್ಟದಮೇಲೆ ಮೇಲೆ ಮಲಗಿಸಿಕೊಂಡು ಒಬ್ಬನೇ ಚಾಲಕನಿಂದ ಚಲಾಯಿಸಲ್ಪಟ್ಟು ಆತ ಓಡಿಸುವ ವೇಗದಲ್ಲಿ ಕಾಣದ ರಸ್ತೆಯ ಬಾವಿಗಳಲ್ಲಿ ಚಕ್ರಗಳು ಬಿದ್ದೂ ಎದ್ದೂ ಹೋರಾಡುತ್ತ ಅಂತೂ ಸೇರಬೇಕಾದ ಸ್ಥಳವನ್ನು ಸೇರಿನಿಂತಮೇಲೇ ’ಉಸ್ಸಪ್ಪಾ ದೇವರೇ ಅಂತೂ ತಂದು ಬಿಟ್ಯಲ್ಲಪ್ಪಾ ’ ಎಂದುಕೊಂಡು ಎದೆಭಾರ-ತಲೆನೋವು ಕಮ್ಮಿಮಾಡಿಕೊಳ್ಳುವ ಪ್ರಸಂಗ! ಹಿಂದೆ ಕೇವಲ ೩೬ ರೂಪಾಯಿಗೆ ಕೆಂಪುಡಬ್ಬದಲ್ಲಿ ಆರಾಮವಾಗಿ ಪ್ರಯಾಣಿಸಿದ್ದ ಹಿರಿಯ ಸ್ನೇಹಿತರೊಬ್ಬರು ಹೇಳಿದರು " ಅಲ್ಲಾ ಮಾರಾಯ ಇದು ದುಡ್ಡು ಕೊಟ್ಟು ಗ್ರಹಚಾರ ತಂದ್ಕೊಳು ಪರಿಸ್ಥಿತಿ ನೋಡು " ನೀವೇ ನೋಡಿ ನಮ್ಮ ಬಸ್ಸುಗಳಲ್ಲಿ ಎಷ್ಟು ಮಾರ್ಪಾಟುಗಳಾಗಿವೆ ಅಂತ. ನಮ್ಮ ಕಾಲಮಾಪನದಲ್ಲೂ ಅಷ್ಟೇ ಬದಲಾವಣೆಯಾಗಿದೆ! ನಮಗೆ ಇವತ್ತಿನ ಆಫೀಸು ಕೆಲಸಕ್ಕೂ ಹೋಗಬೇಕು, ರಾತ್ರಿ ಎಂಟುಗಂಟೆಗೆ ಅಫೀಸಿನಿಂದ ಮರಳಿ ದಸಬುಸನೆ ಒಂಚೂರು ತಿಂದು, ಕಾದು ಕುಳಿತ ಮನೆಯವರೊಟ್ಟಿಗೆ ಶಾಸ್ತ್ರಕ್ಕೊಂದು ಹೊಸ ಪ್ಯಾಂಟು-ಶರ್ಟು ಸಿಕ್ಕಾಕಿಕೊಂಡು ಓಡುತ್ತಾ ಏದುಸಿರುಬಿಡುತ್ತಾ ಬಸ್ ಬರುವ ಜಾಗ ತಲ್ಪಿ, ಬರುವ ಬಸ್ಸನ್ನು ಏರಿ ಕುಳಿತು ಮಾರನೇ ಬೆಳಿಗ್ಗೆ ಚೌತಿ ಹಬ್ಬಕ್ಕೋ ಗಂಗಜ್ಜಿಯ ಶ್ರಾದ್ಧಕ್ಕೋ ತಿರುಮಲೇಶನ ಮದುವೆಗೋ ಅಟೆಂಡ್ ಆಗಬೇಕು! --ಇದು ಕಥೆಯಲ್ಲ ಇಂದಿನ ಮಹಾಭಾರತ!

ಬಸ್ಸಿನಲ್ಲಿ ಹೊರಟಮೇಲಂತೂ ನಮಗೆ ನಮ್ಮದೇ ಲೋಕ. ಅಲ್ಲಿ ರಾತ್ರಿಯ ಕಾಡುಗಳ್ಳರು ನಾಟಾ ಕುಯ್ಯುವಂತೇ ಗೊರಕೆಹೊಡೆಯುವ ಜನವಿದ್ದಾರೆ, ಸಣ್ಣಗೆ ತಮ್ಮದೇ ಆದ ದನಿಯಲ್ಲಿ ಹಾಡುವವರಿದ್ದಾರೆ, ಲೋಕ ಹಾಳಾದರೆ ನಮಗೇನಂತೆ ನಾವು ಚೆನ್ನಾಗಿದ್ದರೆ ಎಲ್ಲವೂ ಚೆನ್ನ ಎಂದು ಹರಟುವ ಸಂಗೀತಾ-ಸಾಹಿತ್ಯಾ ಎಂಬ ಅಕ್ಕಂದಿರಿದ್ದಾರೆ! ತಮ್ಮ ’ಹಿಂದುಗಡೆ ಬಾಯಲ್ಲಿ’ ’ಗಮಕ’ ಹಾಡುವ ಕಲಾವಿದರಿದ್ದಾರೆ! ಲೋ ಜೀನ್ಸ್ ನಲ್ಲಿ ಊರಿಗೆ ಹೊರಟು ಫಿಲ್ಮ್ ಸ್ಟಾರ್ ಥರ ಮಿಂಚುವ ಚಂಚಲಾ ಇದ್ದಾಳೆ! ಗುಡಾಣ ಹೊಟ್ಟೆಯನ್ನು ಹೊತ್ತು ನಡೆದುಬಂದ ನಮ್ಮೂರ ಪಕ್ಕದ ಯಜಮಾನರಿದ್ದಾರೆ! ಲ್ಯಾಪ್ ಟಾಪಿಗೆ ತಮ್ಮನ್ನು ಅಂಟಿಸಿಕೊಂಡು ಟೈಪಿಸುತ್ತ ಕೂತ ಗಣಕ ತಂತ್ರಾಂಶ ಪಿಪಾಸುಗಳಿದ್ದಾರೆ! ಐಪಾಡಿಲ್ಲದೇ ಜಗತ್ತೇ ಅಸಹ್ಯವೆಂದು ಅದನ್ನೂ ಮತ್ತು ಮೊಬೈಲನ್ನೂ ಬಳಸಿ ಬೇಕು ಬೇಕಾದ ಸಾಂಗ್ ಹಾಕಿ ಕಿವಿಗೆ ಧ್ವನಿ ದಾರಸಿಕ್ಕಿಸಿ ಕಿವುಡರಂತೇ ಕಾಣುವವರಿದ್ದಾರೆ! ಸಣ್ಣ ಮಕ್ಕಳಿಗೆ " ಕನ್ನಡ ಬೇಡ ಬರೇ ಇಂಗ್ಲೀಷ್ನಲ್ಲೇ ಮಾತಾಡ್ಬೇಕು ಇಲ್ಲಾಂದ್ರೆ ಪೆದ್ದಾಗೋಗ್ತೆ " ಎನ್ನುವ ಮಮ್ಮಿ-ಡ್ಯಾಡ್ ಇದ್ದಾರೆ! ಓ ಪರಮ ಶಿವನೇ ಈ ಬಸ್ಸು ಬಹಳ ಅರ್ಥಗರ್ಭಿತ!

ಬಸ್ಸಿನಲ್ಲಿ ಹೊರಟ ಸ್ವಲ್ಪ ಹೊತ್ತಿನಲ್ಲಿ ನಮಗೆ ಅತಿಥಿ ಸತ್ಕಾರ ಸಿಗುತ್ತದೆ! ತಿಗಣೆಗಳು ಕಾಲಿಗೋ ಕೈಗೋ ಕಚ್ಚಲು ಪ್ರಾರಂಭ ಎಂದು ಅರ್ಥೈಸಿಕೊಳ್ಳಿ! ಇಂತಹ ಅತಿಥಿಗಳು ಮಗುವೊಂದನ್ನು ಕಚ್ಚಿದಾಗ ತುರಿಕೆಯಾಗಿ ಮಗು " ಅಪ್ಪಾ ತುರಿಸ್ತಾ ಇದ್ದು " ಎಂದರೆ " ಶ್ಶು ! ನೋ ಕನ್ನಡಾ, ಸೇ ಇಟ್ ಈಸ್ ಇಚ್ಚಿಂಗ್ " ಎಂದು ಹೇಳಿಕೊಡುವ ಆಂಗ್ಲಭಾಷಾ ಭಕ್ತರು ನಮ್ಮ ಮಧ್ಯೆ ಹೇರಳವಾಗಿ ಇದ್ದಾರೆ. ಅದು ನಾವೂ ನೀವೂ ಅಥವಾ ಅವರೂ ಕೂಡ ಆಗಿದ್ದರೆ ಆಶ್ಚರ್ಯವಿಲ್ಲ. ಕನ್ನಡವೇ ನಮ್ಮಮ್ಮ ಎನ್ನುವ ನಮ್ಮ ಪೈಕಿ ನಾವೆಷ್ಟು ಜನ ನಿಜವಾಗಿ ಕನ್ನಡಪ್ರಿಯರಾಗಿದ್ದೇವೆ ಎಂಬುದು ಹಲವಾರು ಸಲ ಕಂಡುಬರುತ್ತದೆ ಸ್ವಾಮೀ! ಅಂತೂ ಊರು ಬಂದೇ ಬಿಟ್ಟಿತು ಎನ್ನಿ, ಆಗ ಸ್ವಲ್ಪಕಾಲ ಇಳಿಯುವ ಗಡಿಬಿಡಿಯಲ್ಲಿ ಇಂಗ್ಲೀಷೆಲ್ಲಾ ಮಾಯವಾಗಿ " ಹೋಯ್ ಸ್ನೇಹಾ ಬ್ಯಾಗ ತಕಂಡ್ಯಾ ? " " ಅದು ನೋಡು ಅಲ್ಲೇ ಬಿಟ್ಟೋಯ್ದು " ಎಂದೆಲ್ಲಾ ಉದ್ಗಾರಗಳು ಹೊರಹೊಮ್ಮುತ್ತವೆ! ಊರಿಗೆ ಹೋಗಿ ಇಳಿದಾಗ ನಮಗೆ ಆ ಊರಿನ ಗಾಳಿ ತಟ್ಟುತ್ತದೆ. ಮರಳಿ ನಾವು ಬೆಂಗಳೂರೋ ಅಥವಾ ನಮ್ಮ ಇನ್ನವುದೋ ಶಹರವೋ ಅದನ್ನು ಸೇರುವಾಗ ಇನ್ನೇನು ಹತ್ತಿರಬರುತ್ತಿದ್ದಂತೆಯೇ ’ ಛೆ ! ಶುರುವಾಯಿತಲ್ಲಪ್ಪಾ ಗೋಳು ’ ಎಂದುಕೊಳ್ಳುತ್ತೇವೆ. ಇದು ನಮ್ಮ ಉದರಂಭರಣೆಗೆ ನಾವು ತೊಡಗಿಕೊಂಡ ಊರಿನ ಜಂಜಡ ತುಂಬಿದ ಗಾಳಿ!

ಇಷ್ಟೆಲ್ಲದರ ನಡುವೆಯೂ ವಕ್ರತುಂಡ ವಿಘ್ನೇಶ ಹಲವು ವೇಷಗಳಲ್ಲಿ ಪ್ರತೀ ವರ್ಷ ಬರುತ್ತಲೇ ಇದ್ದಾನೆ, ಹರ್ಷ ತರುತ್ತಲೇ ಇದ್ದಾನೆ. ಬರುವ ಬಹುರೂಪೀ ಗಣಪಣ್ಣನ ಬಗ್ಗೆ ನಿಮಗೆ ಹೇಳಲೇಬೇಕೆ ? ಸಾಯಿಗಣಪ, ಕಾರ್ಗಿಲ್ ಯೋಧ ಗಣಪ, ವೀರಪ್ಪನ್ ಹಂತಕ ಗಣಪ, ಗಾಂಧೀ ಗಣಪ, ಅಮಿತಾಭ್ ಗಣಪ....ಹೀಗೇ ಹೊಸ ಹೊಸ ರೂಪಗಳ ಸೃಷ್ಟಿ ನಡೆಯುತ್ತಲೇ ಇವೆ. ಹಾದಿಬೀದಿಗಳಲ್ಲಿ ಅವನನ್ನು ಕೂರಿಸಿ, ಒಂದಷ್ಟು ವಂತಿಗೆ ಎತ್ತಿ ಅದರಲ್ಲಿ ಚೂರುಪಾರು ಖರ್ಚುಮಾಡಿ, ಬೇಡದ ಸಿನಿಮಾಹಾಡುಗಳ ಆರ್ಕೆಷ್ಟ್ರಾ ನಡೆಸಿ, ಉಳಿದ ಹಣದಲ್ಲಿ ತಮಗೆ ಎಣ್ಣೆಸೇವೆಯನ್ನು ಪೂರೈಸಿಕೊಳ್ಳುವ ಬಹಳ ಯುವಕರಿದ್ದಾರೆ. ಅಂದಿನ ಆ ಕಾಲಕ್ಕೆ ಭಕ್ತಿರಸ ತುಂಬಿ ಭಾವೈಕ್ಯತೆ ಹೊಮ್ಮಲಿ ಎಂದು ಲೋಕಮಾನ್ಯ ತಿಲಕರು ಹಬ್ಬಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಈ ಮಟ್ಟ ತಲ್ಪಿದ್ದನ್ನು ನೋಡಿದರೆ ಅವರು ಈಗ ಬದುಕಿದ್ದರೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೇನೋ ಎನಿಸುವಷ್ಟು ಅಸಹ್ಯ ಹುಟ್ಟಿಸುತ್ತದೆ. ಇಲ್ಲೀಗ ಭಾವವೂ ಇಲ್ಲ;ಭಕ್ತಿಯೂ ಇಲ್ಲ, ’ಭಾವ’ ಮತ್ತು ’ಭಕ್ತಿ’ ಎಂಬಿಬ್ಬರು ಹರೆಯದ ಹುಡುಗಿಯರು ಕನಿಷ್ಠ ಉಡುಪು ಧರಿಸಿ ಬೆನಕನ ಎದುರಲ್ಲಿ ನರ್ತಿಸುತ್ತಿದ್ದಾರೆ! ಒಂದೋ ಗಣಪ ಸುಮ್ಮನೇ ಕೂತು ಸಹಿಸಿಕೊಳ್ಳಬೇಕು ಇಲ್ಲಾ ಆತ ಎದ್ದು ಬಂದು ಇಂತವರನ್ನು ವದೆಯಬೇಕು ! ಆಯ್ಕೆ ನಿನಗೇ ಬಿಟ್ಟುದ್ದು ಶ್ರೀ ಗಣರಾಜ್ , ತಾವು ತಮಗೆ ಬೇಕಾದ್ದನ್ನು ಆಯ್ದುಕೊಳ್ಳಿ!

ಎರಡು ಮೆಲುಕು ಹಾಕುವ ಕಹಿನೆನಪುಗಳೊಂದಿಗೆ ಈ ಕಥಾನಕವನ್ನು ಮುಕ್ತಾಯಗೊಳಿಸಬೇಕಾದುದು ಅನಿವಾರ್ಯ. ಇದು ನಮ್ಮ ಅನುಭವ ನಾಳೆ ನಿಮಗೆಲ್ಲಾ ಸಹಕಾರಿಯಾಗಲೂ ಬಹುದೆಂಬ ಅನುಭಾವ! ಮೊದಲನೆಯದು ಮೇಲೆ ಹೇಳಿದ ಸಾರ್ವಜನಿಕ ಗಣೇಶೋತ್ಸವ- ನಾವು ಊರಿಗೆ ಹೊರಟುನಿಂತ ಅವಸರದಲ್ಲಿ ಸುಮಾರು ೨೦ ಜನರಂತೇ ಮೂರು ಬೇರೆ ಬೇರೆ ಮೇಳಗಳು ವರ್ಗಿಣಿಗೆ ಬಂದಿದ್ದರು. " ಸಾರ್ ಗಣೇಶನ್ ಇಡ್ತೀವಿ ಕೊಡಿ " . ಹತ್ತು ಇಪ್ಪತ್ತು ರೂಪಾಯಿ ಕೊಟ್ಟರೆ ಸಾಲುವುದಿಲ್ಲ ಇಂತಿಷ್ಟೇ ಕೊಡಿ ಎಂಬ ತಾಕೀತು! "ನಾವೇನು ನಿಮ್ಮ ಹತ್ತಿರ ಗಣೇಶನ್ನ ಇಡಿ ಅಂತ ಹೇಳಿದ್ದೀವಾ ? " ಎಂದು ಗದರಿಕೊಳ್ಳುವ ಮನಸ್ಸದರೂ ಹೊರಡುವಾಗ ಕದಡುವ ಮನಸ್ಸು ಬೇಡವೆಂದು ಅವರನ್ನೆಲ್ಲಾ ಹೇಗೋ ಸಾಗಹಾಕಿದ್ದೇವೆ . ಹೇಳಿ ಈ ರೀತಿಯ ಮೋಜು ಮಜಾ ಜನರಿಗೆ ದೇಣಿಗೆ ನೀಡಬೇಕೆ ?

ಎರಡನೆಯದು ನಾವು ಹೋಗುತ್ತಿರುವ ಬಸ್ಸು ಶಿವಮೊಗ್ಗಾ ಜಿಲ್ಲೆಯ ಕುಂಸಿಯ ಹತ್ತಿರ ನಿಂತಿತು. ಮುಂದೆ ಅಪಘಾತವಾಗಿದೆ ಎಂಬ ಕಾರಣ. ಅಲ್ಲಿ ನೋಡಿದರೆ ’ಸೀ ಬರ್ಡ್’ ಕಂಪನಿಯ ಅಟ್ಟದ ಬಸ್ಸೊಂದು ಆಗತಾನೇ ಜರ್ಜರಿತವಾಗಿ ನಿಂತಿತ್ತು. ಯಾರದ್ದೂ ಸದ್ದು-ಸುದ್ದಿ ಇರಲಿಲ್ಲ! ಬೆಳಗಿನ ೫ ಘಂಟೆಯ ಸಮಯ. ಕತ್ತಲಲ್ಲಿ ಸರಿಯಾಗಿ ಕಾಣುತ್ತಲೂ ಇರಲಿಲ್ಲ. ಕಾಡಿನ ಮಧ್ಯದ ದಾರಿಯಲ್ಲಿ ಮೊಬೈಲ್ ಸಿಗ್ನಾಲ್ ಇರಲಿಲ್ಲ. ಡಿಕ್ಕಿ ಹೊಡೆದ ಬಸ್ಸು ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಅದು ಹಾಗೆ ಡಿಕ್ಕಿ ಹೊಡೆದದ್ದು ಎದುರುಗಡೆ ನಿಂತಿರುವ ಕಬ್ಬಿಣ ತುಂಬಿದ ಲಾರಿಗೆ. ಲಾರಿಯಲ್ಲಿ ಏನೋ ತೊಂದರೆಯಾಗಿ ಅದರ ಚಾಲಕ ಮತ್ತು ಸಹಾಯಕ ರಿಪೇರಿಯಲ್ಲಿ ತೊಡಗಿರಬೇಕು ಎನಿಸುತ್ತದೆ, ಆದರೆ ಲಾರಿ ಮುಖ್ಯರಸ್ತೆಯಿಂದ ಕೆಳಗೆ ಬಲಗಡೆಗೆ ಸರಿಯಾಗಿ ನಿಲ್ಲಿಸಲ್ಪಟ್ಟಿತ್ತು. ಸೀ ಬರ್ಡ್ ಚಾಲಕ ತನ್ನ ಅತಿವೇಗದಲ್ಲಿ ಬಸ್ಸನ್ನು ಓಡಿಸುತ್ತಿದ್ದ. ಯಾವುದೋ ಕೆಟ್ಟಘಳಿಗೆ ಆತನ ಕಣ್ಣಿಗೆ ಜೋಂಪು ಹತ್ತಿದೆ, ನಿಮಿಷದಲ್ಲಿ ಆತ ಜೀವಕಳೆದುಕೊಂಡಿದ್ದಾನೆ. ಬಸ್ಸಿನ ಮುಂಭಾಗ ಪೂರ್ತಿ ನಜ್ಜುಗುಜ್ಜಾಗಿತ್ತು. ಲಾರಿಯ ಮುಂಭಾಗ ನುಜ್ಜಾಗಿ ಮಹಡಿಯಿರುವ ಕಟ್ಟಡದಂತೇ ಗೋಚರಿಸುತ್ತಿತ್ತು. ಇದನ್ನು ಅವಲೋಕಿಸುವಾಗ ನನಗನಿಸಿದ್ದು ಒಬ್ಬ ಚಾಲಕನ ಕೈಯ್ಯಲ್ಲಿ ೩೫-೩೬ ಜೀವಗಳು ಇರುತ್ತವೆ. ಜೊತೆಗೆ ಅವನ ಜೀವವೂ ಕೂಡ! ಉದರನಿಮಿತ್ತ ಆತ ಹೆಣಗಾಡುತ್ತ ಹಲವರನ್ನು ಹಬ್ಬಕ್ಕೋ ಹುಣ್ಣಿಮೆಗೋ ಕರೆದೊಯ್ಯುತ್ತಿರುತ್ತಾನೆ. ಒಬ್ಬನೇ ಚಾಲಕನಿಗೆ ಒತ್ತಡ ಬಹಳವಾದರೆ ದೇಹ ಆಯಾಸಗೊಂಡು ಸಹಜವಾಗಿ ನಿದ್ರೆ ಆವರಿಸುತ್ತದೆ. ದೂರದ ಪ್ರಯಾಣಕ್ಕೆ ಇಬ್ಬರು ಚಾಲಕರು ಇರುವುದು ಬಹಳ ವಿಹಿತ. ಇದನ್ನು ನಾವೆಲ್ಲಾ ಪರಿಶೀಲಿಸಬೇಕಾಗಿದೆ ಮಾತ್ರವಲ್ಲ ಈ ವಿಷಯದಲ್ಲಿ ನಾವು ಸಾರಿಗೆ ಮಂತ್ರಿಗಳಿಗೇ ಒಂದು ಅಹವಾಲನ್ನು ತಲ್ಪಿಸಬೇಕಾಗಿದೆ. ಈ ಥರದ ಅಪಘಾತಗಳು ಬಹಳ ನಡೆಯುತ್ತಲೇ ಇವೆ. ಆದರೆ ನಾವದನ್ನು ಮರೆತು ನಮ್ಮ ಕಾಲಬುಡಕ್ಕೆ ಬಂದಾಗ ಎಚ್ಚೆತ್ತುಕೊಳ್ಳುತ್ತೇವೆ. ಅಂದು ನಮಗೆ ಹಬ್ಬದ ಬದಲಿಗೆ ಮನಸ್ಸನ್ನು ಸಂತೈಸಿಕೊಳ್ಳುವುದೇ ಕಷ್ಟವಾಗಿತ್ತು. ಪಾಪದ ಚಾಲಕ ಪರಲೋಕಕ್ಕೆ ಹೋಗಿದ್ದ;ಆತನನ್ನು ಅವಲಂಬಿಸಿದ ಆತನ ಮನೆಮಂದಿಯ ಗತಿ ಏನಾಗಿರಬೇಡ!

ಗಣೇಶ ಬರಲಿ, ನಮ್ಮೆಲ್ಲರ ಗಾಢಾಂಧಕಾರದಲಿ ಜ್ಞಾನದ ದೀವಿಗೆ ಬೆಳಗಲಿ. ಓಡುವ ಸಮಯಕ್ಕೆ ತಕ್ಕಂತೇ ನಮ್ಮ ಮನಸ್ಸನ್ನೂ ಜಾಗೃತಗೊಳಿಸಲಿ; ಆತಂಕ-ಜಂಜಡ ರಹಿತ ಬದುಕನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತ ನಿಮಗೆಲ್ಲಾ ಪುನರಪಿ ಶುಭಕೋರುತ್ತಿದ್ದೇನೆ, ನಮಸ್ಕಾರ.

Wednesday, September 8, 2010

ಬಾಲ ಗಣೇಶ

ಇಡಗುಂಜಿ ಶ್ರೀ ಮಹಾಗಣಪತಿ


ಬೆಂಗಳೂರಿನ ದೊಡ್ಡ ಗಣಪತಿ


ದಗಡು ಸೇಥ್ ಹಲವಾಯಿ ಗಣಪತಿ, ಮುಂಬೈ [ಉತ್ಸವಕ್ಕಾಗಿ ಮಾತ್ರ ಪ್ರತಿಷ್ಠಾಪಿತ ]


ಬಾಲ ಗಣೇಶ
[ನಿಮಗೊಂದು ಮಂತ್ರವನ್ನು ಹಾಡಿನಲ್ಲೇ ತೋರಿಸಿಕೊಡುತ್ತಿದ್ದೇನೆ! ಇದು ಮಹಾಗಣಪತಿಗೆ ನಾನಿತ್ತ ಮೋದಕ ]

ಎಳೆಬಾಳೆಗಿಡಗಳಾ ಒಳಗಿನಾ ಮಂಟಪದಿ
ಹೊಳೆವ ಪೀತಾಂಬರದ ಗಣಪತಿಯು ಕುಳಿತು
ನಳಿನಮುಖಿಯರು ಎತ್ತಿ ಮಂಗಳವ ಬೆಳಗುತಿರೆ
ಕಳೆಯೆಂಥದದು ನೋಡಲೆರಡಕ್ಷಿ ಸಾಕೆ ?

ಮಳೆಯ ಮಾರುತಗಳವು ಕೊಳೆತೊಳೆದು ಈ ಭುವಿಯ
ಸೆಳೆತಂದು ಭಾದ್ರಪದ ರಂಗೋಲಿ ಬರೆದು
ಬಿಳಿಯುಡುಗೆ ಅರ್ಚಕರು ಸಡಗರದಿ ಓಡಾಡಿ
ಇಳೆಯಾಯ್ತು ಸ್ವರ್ಗದಾ ಇಂದ್ರನರಮನೆಯು!

ಬಳೆಯು ಅರಿಶಿನ ಕುಂಕುಮ ಅಕ್ಷತೆಗಳಿಟ್ಟು
ಸುಳಿದಿಟ್ಟ ಫಲವ ನಿವೇದಿಸಿ ಶ್ರೀಗೌರಿಗೆ
ಬಳಗ ಸಹಿತದ ನಮ್ಮ ಬಾಲಗಣೇಶನಿಗೆ
ಬೆಳಗುತಾ ಧೂಪ ದೀಪದಾರತಿಗಳ

ಒಳಗೆ ಧ್ಯಾನಿಸಿ ನಮ್ಮ ಮುನಿಜನರು ಇತ್ತಪದ
ಬೆಳೆವ ಮಹಾಗಣಪತಿಗೆ ’ಓಂ’ ಕಾರ ರೂಪ
ಬೆಳೆತೆಗೆದು ಕಡೆದಿರಿಸಿದಾಮಂತ್ರ ’ಗಂ’ ಕಾರ
ನಳನಳಿಸುತ್ತಿರುವ ಬೆನಕ ’ಗ’ಜಮುಖಗೆ

ಘಳಿಗೆಯಲಿ ಶಿವನಿತ್ತ ಗಣನಾಯಕನ ಸ್ಥಾನ
ಅಳಿವಿರದ ಬಾಲಕನ ಅ’ಣ’ಕಿಸುತ ಮೊದಲು
ಬಳುವಳಿಯು ವಿವಿಧ ಬಂದಿತ್ತಲ್ಲಿ ಗಣ’ಪ’ನಿಗೆ
ಒಳಿತಾಯ್ತು ಕರಿಕೊಮೊಗದ ಅ’ತ’ರಾಸ ಪ್ರಿಯಗೆ

ಬಳಿದು ದೃಷ್ಟಿಯನಲ್ಲಿ ನಿವಾಳಿಸುತ ಎಸೆ’ಯೇ’
ನಳಿದೋಳುಗಳ ನೀವಿ ಓಕುಳಿಯ ಹಾ’ನ’
ಗೆಳೆಯದೇವರ ದಂಡು ಘೋಷಿಸಿತು ಆದ್ಯತೆಯ
ಬಳಿಸಾರಿ ಸುಮುಖನಿಗೆ ಜಯ ನಮೋ ನ’ಮಃ’

ಓದುಗ ಮಿತ್ರರೇ ಗಣಪತಿಯೇ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕೇ ? ಆತನ ವಿಗ್ರಹ ತರುವಾಗ ಶುರುವಾಗುವ ಆ ಆಪ್ತತೆ ವಿಗ್ರಹ ವಿಸರ್ಜನೆಯೇ ಬೇಡ ಎನಿಸುವಷ್ಟರ ಮಟ್ಟಿಗೆ ಹಬ್ಬುತ್ತದೆ, ಆದ್ರೂ ಅದು ನಡೆಸಲೇ ಬೇಕಾದ ವಿಧಿವಿಧಾನ, ಅನಿವಾರ್ಯ.
ತಮಗೆಲ್ಲ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ,
ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯಗಳು

ಗೌರೀ ಗಣೇಶ ಹಬ್ಬದ ಪ್ರಯುಕ್ತ 'ನಿಮ್ಮೊಡನೆ ವಿ.ಆರ್.ಭಟ್ ' ಕಾರ್ಯಾಲಯಕ್ಕೆ ೧೪ ನೇ ತಾರೀಕಿನ ವರೆಗೆ ರಜಾ ಇರುತ್ತದೆ, ೧೫ ರಿಂದ ಮತ್ತೆ ಎಂದಿನಂತೆ ಮುಂದುವರಿಯುತ್ತದೆ. ಅಲ್ಲಿಯವರೆಗೆ ನನ್ನ ಹಳೆಯ ಕೃತಿಗಳನ್ನು ಇಷ್ಟಪಡುವವರು ಓದಬಹುದು, ಈ ಬ್ಲಾಗಿನಲ್ಲಿ ಪ್ರಾರಂಭವಾದ ೯ ತಿಂಗಳಲ್ಲಿ ಇದು ಇನ್ನೂರನೇ ಕೃತಿ !

Tuesday, September 7, 2010

ಒಗಟು !!

ಚಿತ್ರಋಣ : ಅಂತರ್ಜಾಲ
ಒಗಟು !!

ನಾನೆಣಿಸಿದಂತಿಲ್ಲ ನನ್ನ ಹಲ ಕೆಲಸಗಳು
ನೀನಾಡುವಾ ಆಟ ನನ್ನ ಬದುಕು
ಯಾನದಲಿ ಸಹವರ್ತಿ ನೀನು ಕಣ್ಣಿಗೆ ಕಾಣೆ
ಮೌನದಲಿ ಧ್ಯಾನಿಸಲು ಕಲಿಯಬೇಕು

ಗಾಣದೆತ್ತಿನ ರೀತಿ ನನ್ನ ಈ ಜೀವನದಿ
ಮೇಣಹಚ್ಚುತ ಗಟ್ಟಿಗೊಳಿಸಿ ಜಂಜಡದಿ
ಕಾಣೆಯಾದೆನು ಇಲ್ಲಿ ನನ್ನೊಳಗಿನಾ ನಾನು
ಪ್ರಾಣಹೋದರು ಒಮ್ಮೆ ಕಾಣೆಯೇನು ?

ನನ್ನತನ ನನಗಿಲ್ಲ ಇನ್ನಿತರ ಕಾಡುವೆನು
ಸಣ್ಣತನ ಮುಂಗೋಪ ತಡೆಯದೇ ಹರಿದು
ನಿನ್ನತನದಲಿ ನನ್ನ ಹುದುಗಿಸುತ ಮುಕ್ತಿಯನು
ಮನ್ನಿಸುತ ನೀಡೆನಗೆ ದೊರೆವ ಯುಕ್ತಿಯನು

ನಿನ್ನ ಭಾಗವು ನಾನು ಎಂದರದೋ ಮುನಿಜನರು
ನನ್ನ ದೂಡುತ ದೂರ ಉಳಿವೆಯೇನು ?
ಇನ್ನೆನಗೆ ಕೊಡಬೇಡ ಇಹದ ಸಂಕಷ್ಟಗಳ
ಚೆನ್ನಾಗಿ ತಿಳಿಹೇಳು ಕರ್ಮಬಾಧೆಯನು

ಯಾಕೆ ಒಂಥರಾ ಒಗಟು ಜಗದಿ ಸಾರಾಸಗಟು ?
ಸಾಕು ಬಾ ರೂಪದಲಿ ನಿಲ್ಲೆದುರು ಒಮ್ಮೆ
ನಾಕು ನಾಕೇ ನಿಮಿಷ ನೀ ನೀಡೆ ದರುಶನವ
ಬೇಕಾದ ಭೂರಿ ಭೋಜನವನ್ನು ಪಡೆವೆ !

ತಂದೆ ನೀನು ಎನಲೇ ತಾಯ ಮಡಿಲನು ನೆನೆದು
ಒಂದಿನಿತು ಕರುಣೆ ಇಲ್ಲದ ಕೃಪಣ ನೀನು
ಸಂದೇಹವಿಲ್ಲೆನಗೆ ದೋಷವೆನ್ನಲೆ ಇಹುದು !
ಮುಂದೆ ದಾರಿಯ ತೋರಿ ಹರಿದು ಋಣಬಾಧೆ


Monday, September 6, 2010

ಬೀಸಿ ಬಂದ ಮಂದಮಾರುತ


ಬೀಸಿ ಬಂದ ಮಂದಮಾರುತ

ಬೀಸಿ ಬಂದ ಮಂದಮಾರುತ
ನೇಸರನು ಉದಿಸೆ
ಪೂಸುತಿದ್ದ ಪರಿಮಳಾಮೃತ !

ಏಸು ದಿನವು ಕಳೆದವಿಲ್ಲಿ
ಭೂಸುರರು ನಾವ್ ನಲುಗಿಹೋಗಿ
ಕೂಸುಗಳವು ಆಡುವಂತೆ
ಹಾಸಿ ಪಾರದರ್ಶಕದಲಿ !

ಸೋಸುತಿದ್ದ ರೈತಜನಕೆ
ಬೀಸದೇ ಆ ಹಗಲಿನಲ್ಲಿ
ಕೇಸರಿ ಕಸ್ತೂರಿ ಗಂಧ
ಈಸು ದಿನಕೆ ಒಮ್ಮೆ ಇತ್ತ !

ಕಾಸು ಇರುವ ಜನರು ತಮ್ಮ
ತ್ರಾಸು ಕಳೆಯಲೆಂದು ಪಂಕ
ಬೀಸಿಕೊಳಲು ವಿದ್ಯುತ್ತಿರದೆ
ಬೇಸರಾಗಿ ಕುಳಿತವೇಳೆ !

ಸಾಸಿರದಾ ದೇಶಗಳಲಿ
ಬೀಸಿ ಬೀಸಿ ಹಸಿದು ತನ್ನ
ಭೂಸತಿಂದು ದಣಿವು ಮರೆಯೆ
ಆಸುರೇಂದ್ರನಲ್ಲಿ ಕಳೆದ !

ವಾಸಿಯಾಗದಂತ ರೋಗ
ಘಾಸಿಗೊಳಿಸೆ ಹಲವು ಜನರ
ವಾಸುಕೀಶದಯದಿ ಬೀಸಿ
ವಾಸಿಮಾಡಲೆಂದು ಬಯಸಿ !

Sunday, September 5, 2010

ನಧೀಂ ಧೀಂ ತನ ........!!

ನಮ್ ಪಂಚರ್ ಶಾಪು

ನಧೀಂ ಧೀಂ ತನ ........!!


" ಯಾಕ್ಲಾ ವಾರ್ದ ಕೆಳಗೆ ಭೇಟಿ ಆಗಿದ್ದು ನೆಪ್ಪಿಲ್ವಾ ? "

" ಅಣಾ ನೆಪ್ಪೈತಣಾ ಏಳಣಾ ಹೇನಿಸ್ಯ ? "

" ಹೇನಿಲ್ಲಪ್ಪಾ ಬೆಂಗ್ಳೂರಾಗೆ ಮನೆಮನೆಗೂ ಕೊಳ್ವೆ ಬಾವಿ ಆಕುಸ್ತಾರಲ್ಲ ಜನ ಇರ್ವ್ಗೇನಾರ ತಲೆ ಐತ ? "

" ಯಾಕಣಾ, ಅವರ್ದುಡ್ಡು ಅವ್ರು ಹೊಡಸ್ಕೊಂಡ್ರೆ ನಿಂಗೇನು ಹೊಟ್ಟೆಕಿಚ್ಚು ನೀನೂ ಹೊಡಸ್ಕೋ ಬೇಕಾರೆ "

" ಅಲ್ಲಾಲೇ ಅದ್ರೊಳಗೆ ನೀರ್ಗೊಳೆಲ್ಲಾ ಎಲ್ಲಿಂದ ಬತ್ತದೆ ? ಇರೋ ಭೂಮಿ ಒಂದೇ ಅಲ್ವಾ, ಭೂಮಿನಲ್ಲೇ ನೀರಿರಿಕಿಲ್ಲಾ ಅಂದ್ಮೇಲೆ ಇವ್ರು ಹಿಂಗ್ಮಾಡುದ್ರೆ ಇನ್ನೂ ಅವಾಂತ್ರ ಅಲ್ವೇನ್ಲ ? "

" ಮತ್ತೆ ಏನ್ಮಾಡ್ಬೇಕೂಂತೀಯ ? "

" ಕಾರ್ಪೋರೇಸನ್ ನೋರು ಸಲ್ಪ ಕೇಳಿ ಹೇಳಿ ಮಾಡಿ ಏರಿಯಾಗೆ ತಕ್ನಾಗೆ ಒಂದೇನಾರ ಕಾಮನ್ ಪರಿಹಾರ ಮಾಡುದ್ರೆ ಆಯ್ತಿತ್ತು ಇದ್ನೆಲ್ಲಾ ಯಾರು ಕೇಳೋರು-ಹೇಳೋರು ? "

" ಅಂಗಂತ್ಯಾ ಇರು ನೋಡವ ಯಾರಾರು ಬತ್ತಾರೇನೋ ಕೇಳಾಕೆ "

" ಎಲ್ಲಾ ಬತ್ತಾರೆ, ಇನ್ನು ಮತ್ತೆ ಇಲೆಕ್ಸನ್ ಬರ್ಬೇಕು ಅಲ್ಲೀಗಂಟ ಯಾರೂ ಬರಾಕಿಲ್ಲ, ಅಪ್ಪಿತಪ್ಪಿ ಬಂದ್ರೂನೂ ಸುಮ್ನೆ ಹೂಂ ಗುಟ್ ಎದ್ದೋಯ್ತರೆ "

" ಜನಗಳಿಗೆ ಬುದ್ಧಿ ಇನ್ನೂ ಬಂದಿಲ್ಲಾ ಸಿವಾ ಹಂಗೇನಾರ ಬಂದಿದ್ರೆ ಕಾರ್ಪೋರೇಟರ್ ನ ಕರ್ದು ಕಾರಿಂದ ಇಳ್ಸಿ ಮಾಡ್ತೀಯ ಮಾಡೋಹಾಗೆ ಮಾಡ್ಬೇಕಾ ಅಂತ ಕೇಳ್ತಿದ್ರು "

" ಹೋಕ್ಕೊಳ್ಳಿ ಬಿಡು ಊರಿಗಾದಂಗ್ ಪೋರಂಗಾತದೆ "

--------------

" ಆಣಾ ಅದೇನ್ಲಾ ಧಾರವಡ್ದಾಗೆ ತಲೆಬುಲ್ಡೆಗೋಳು ಸಿಕ್ಕಾವಂತೆ "

" ಇಂದೆಲ್ಲೋ ಏನೋ ಆಗೋಗಿದ್ ಕಥೆ ಕಣ್ಲಾ, ಸಿಕ್ಕೈತಲ್ಲಾ ನಮ್ ಜನ ಅದಕ್ಕೆ ದೇವಸ್ಥಾನ ಕಟ್ಟುಸ್ತರೆ "

" ಅಲ್ಲಣೋ ಹದೆಲ್ಲಾ ಹಷ್ಟು ಮುಖ್ಯ ಆಗಿರ್ಲಿಲ್ಲಾ ಅಂತ್ಯಾ ? "

"ಹಲ್ಲಯ್ಯಾ, ಹುತ್ತರ ಕರ್ನಾಟಕದಾಗೆ ಇರೋ ಜನ್ವೇ ಅಂಗಾಗೋಯ್ತವ್ರೆ, ಕಳ್ದ್ ಸರ್ತಿ ಮಳೆ ಬಂದಾಗ ನೆಲಕಚ್ದ ಜನಗೋಳೆಷ್ಟು, ಅದ್ರಲ್ಲಿ ಉಳ್ಕೊಂಡಿರೋರ್ನ ಯಾರಾರಾ ಕೇಳಾರಾ ಇಲ್ಲೀತಂಕ ? "

" ಮನೆ ಕಟ್ಟುಸ್ಯವ್ರಂತೆ ಅವರ್ಗೋಳ್ಗೆ ? "

" ನೂರ್ಜನಕ್ಕೆ ಒಬ್ಬಂಗೆ ಮನೆ ಕೊಟ್ರೆ ಅದು ಸಾಕೇನ್ಲಾ? ಬಾಕಿ ಜನ ಎಲ್ಲಿಗೋಯ್ತರೆ ? "

" ಎಲ್ಲರ್ಗೂ ಸೇರ್ಸಿ ಒಂದು ಭವನಾನಾರಾ ಕಟ್ಟಿದ್ರೆ ಒಂದಷ್ಟ್ ದಿನ ಕಳ್ದಿರೋದು "

" ನಂಗ್ಯಾಕೋ ಡೌಟು ಕಣ್ಲಾ ಆ ತಲೆಬುಲ್ಡೆ ಎಲ್ಲಾ ಕಳುದ್ಸಲ ಮಳೆಬಂದಾಗ ಹೂತಾಕಿದ್ದೇ ಇರ್ಬೈದು "

" ಗೊತ್ತಾಯಾಕಿಲ್ಲ ಕಣಣ್ಣೋ ಇದ್ರೂ ಇರಬೈದು "

---------------------

" ಅಣೋ ನವಂಬರ್ ಬಂತಲ್ಲ, ರಾಜ್ಜೋಸ್ತವ ಮಡೀಕತಾರೆ ನಮ್ಮೈಕ್ಳು, ಅಂದಂಗೆ ನಮ್ ಕನಡಾ ಬಾಸೆಗೆ ಅದೇನೋ ಸ್ತಾನಾ ಮಾನಾ ಸಿಗ್ಬೇಕು ಹಂತಿದ್ರಲ್ಲ ಸಿಕ್ಕೈತೇನಣಾ ? "

" ಇರಲೇ ಸುಮ್ಕೆ, ಅದೆಲ್ಲಾ ನಡೀತಾನೇ ಇರ್ತದೆ, ನಮ್ದು ಪ್ರಜಾಪ್ರಬುತ್ವ ಹಲ್ವೇನ್ಲ,ಹಿಲ್ಲೆಲ್ಲಾ ಇಂಗೇಯ ಅಲ್ಲಿಲ್ದೇ ಹಿದ್ದಾಗ ಕಡ್ಲೆ ಕಡ್ಲೆ ಹಿಲ್ದೇ ಹಿದ್ದಾಗ ಅಲ್ಲು "

" ಯಾಕೆ ನಮ್ಗೆ ಸ್ತಾನಾ ಮಾನಾ ಕೊಡಾಕಿಲ್ವಾ ? "

" ದಮ್ಮಿಲ್ಲ ಕಣ್ಲಾ ನಮ್ ಕನಡಾ ಜನೀಕ್ಕೆ ದಮ್ಮಿದ್ರೆ ಜಾಡ್ಸಿ ಇಸ್ಕೊಂಡಿರೋರು "

" ಹಲ್ಲಣಾ ಗೌರವ್ದಿಂದಾ ಕೊಡೋದಲ್ವಾ ರಾಸ್ಟ್ರಪತಿಗೋಳು "

" ಹದೆಲ್ಲಾ ಆಯಕಿಲ್ಲಾ ಕಣ್ಲಾ ಕಂಡೂ ಕಂಡೂ ಸಾಕಾಗೋಗದೆ ಇನ್ನೇನಿದ್ರೂ ಹಕ್ಕು ಕೇಳಿ ಪಡ್ಕಂಬುದೇಯ "

" ಹಲ್ಲೂ ಬರೇ ರಾಜ್ಕೀಯ ಹಿದೇಂತ್ಯಾ ? "

" ಎಲ್ಲಾಯ್ಯಾ ಹುಟ್ದೇ ಸಿವಾ ನೀನು ಹಷ್ಟೂ ತಿಳೀದ್ ಬುದ್ದು, ನ್ಯಾಯ ಹಿದ್ರೆ ಹಿಷ್ಟೆಲ್ಲಾ ವರ್ಸ ಕಾಯಸ್ತಾ ಹಿದ್ರೇನ್ಲಾ ? "

----------------------

" ಹದೇನೋ ಯೋಗ್ರಾಜ ಭಟ್ರ್ ಪಂಚ್ರಂಗಿ ಸಿನ್ಮಾ ಬಂದೈತಂತೆ "

" ಮಾಡ್ತಾನೇ ಇರ್ತಾರೆ ಕಣ್ಲಾ, ಹಾದ್ರೆ ಹವ್ರ ಡೈಲಾಗೈತಲ್ಲ ಹದ್ನ ಕೇಳ್ನೋಡು ಒಸಿ ಏನಾರ ನಮ್ಗೆ ಪ್ರಯೋಜ್ನಕ್ ಬತ್ತದ "

" ನಾವು ಆದಿಬೀದಿಲಿ ಆಡ್ಕತೀವಲ ಹದ್ನೇ ಬರ್ದವ್ರೆ ಕಣಣ್ಣೋ "

" ಕಥೆ ಏನಾರ ಐತೇನ್ಲಾ ಹದ್ರಾಗೆ ? "

" ಜಾಸ್ತಿ ಹೇನೂ ಹಿದ್ದಂಗಿಲ್ಲ ಆದ್ರೆ ಸಾನೆ ಪ್ರಚಾರ ಮಡ್ಗವ್ರೆ "

" ಮಡ್ಗ್ಲಿ ಕಣ್ಲಾ ಹದ್ರಿಂದ್ಲಾದ್ರೂ ಜನ ಕನಡಾ ಸಿನ್ಮಾ ನೋಡ್ತರೆ ಹಿಲ್ಲಾಂದ್ರೆ ಬರೀ ತಮ್ಳು ತೆಲ್ಗೇ ಹಾಗಿರೋದು "

"ಹದೇನೋ ಹಿನ್ನೊಂದು ಕರೀಚಿರ್ತೆ ಕೂಡ ಬಂದೈತಂತೆ ? "

" ಹೆಲ್ಲೋ ಅದೂ ಬದ್ಕೈತಂತಾ ಹೀಗಿನ್ಕಾಲ್ದಲ್ಲಿ ? ಹೆಲ್ಲೋ ಉಳ್ಕಂಡಿರಾದು ಕಾಡಿಂದ ತಪ್ಪೊಸ್ಕೊಂಡಿರ್ಬೇಕು "

" ಹಲ್ಲಣೋ ಅದು ಸಿನ್ಮಾ ಹೆಸ್ರು "

" ಹೇನೆಲ್ಲಾ ಮಾಡ್ತಾರಯ್ಯ, ಹಾ ಹುಪೇಂದ್ರ ’ಗೋಕರ್ಣ’ ಹಂತಾವ ಸಿನ್ಮಾ ಮಾಡ್ದ್ನಲ್ಲ ಹಾಗ ನಮ್ಮೂರ್ ಅಜ್ಜಿ-ತಾತಂದ್ರು ಗೋಕರ್ಣ ದೂರದೆ ಹಿಲ್ಲೇ ಸಿನ್ಮಾನಾದಾಗಾದ್ರೂ ನೋಡವ ಅಂತ ಹೋಗಿದ್ರಂತೆ, ಏನ್ಕೇಳ್ತೀಯ ಪಾಪ ಅದ್ರಾಗೆ ಇರೋ ಇಸ್ಯಾನೇ ಬೇರೆ ಇತ್ತು, ಸಿವ್ಸಿವಾ ಹಂತಾನೇ ಹಂತೂ ಓಗಿದ್ದಕ್ಕೆ ಕೂತಿದ್ದು ಬಂದವ್ರೆ "


----------------------

" ಹಣಾ ನಮ್ ರಾಚಂಗೌ ಹಿದಾರಲ್ಲ ಅವ್ರ ವರ್ಕ್ಸಾಪ್ನಾಗೆ ಭಾಳ ವ್ಯವಾರ ನಡ್ದದಂತೆ ? "

" ಹಿದೆಲ್ಲಾ ಮಾಮೂಲೀ ಕಣ್ಲಾ ನಿಂಗೇನೂ ತಿಳ್ಯಾಕಿಲ್ಲ ಯಾವಾಗ್ ನೋಡ್ದ್ರು ಹಿಂತದ್ನೇ ಹಿಡ್ಕಂಬತ್ತೀಯ, ಹಲ್ಲಯ್ಯ ಹವ್ರಗೆ ತಾಕತ್ತಿಲ್ಲ, ತಾಕತ್ತಿದ್ದ್ರೆ ಏನಾರಾ ಸಲ್ಪ ಕೆಲ್ಸಾ ಮಾಡಿರೋರು, ಹವ್ರು ಮಾಡೋರೂ ಹಲ್ಲ, ಮದ್ಯ ಕೈಹಾಕೋ ಜನೀನ್ನ ಕಂಟ್ರೋಲ್ ಮಾಡಾಕು ನಾಲಾಯ್ಕು ಆ ಪಾಲ್ಟಿ "

" ಓಗ್ಲಿ ಬಿಡು ನಮ್ಗ್ಯಾಕೆ ನಾವೇನ್ ನರ್ಸ್ ಆಯಾಕೋಯ್ತೀವ.... ಆಗೋರ್ ನೋಡ್ಕತರೆ ಬಿಡು "

-------------------------

" ಅಣಾ ಸಲ್ಪ ಸೈಕಲ್ ರಿಪೇರಿ ಇತ್ತು ಹಿಲ್ಲಲ್ಲಾರ ಶಾಪ್ ಹೈತಾ "

" ಹಿಲ್ಲಕಣೋ ನಮ್ ಬಂಗಾರು ಹವ್ರಲ್ಲ ಹವ್ರು ಹವ್ರ ಮಕ್ಳು ಸೇರಿ ಹೊಸ್ತಾಗಿ ಒಂದ್ ಶಾಪ್ ಮಡೀಕಂಡು ಸಾನೆ ಪ್ರಯತ್ನ ಮಾಡ್ದ್ರು, ಆದ್ರೂ ಗಿರಾಕಿ ಕುದ್ರಲಿಲ್ಲ......ಮೊದ್ಲೆಂಗೂ ಅಡ್ಡಡ್ಡ ಯಾಪಾರ ಎಲ್ಲಾ ಹಬ್ಯಾಸ ಹಿತ್ತಲ್ಲಾ ಯಾವಾಗ್ ಇರೋಬರೋ ಸೈಕಲ್ಲೆಲ್ಲಾ ಪಂಚರ್ ಆಗೋದ್ವೋ ಸಾಯ್ಲತ್ಲಗೆ ಅಂತಾನೆಯ ಬಾಗ್ಲಾಕ್ಬುಟ್ಟು ದಾರಿನಾಗೆ ತಿರೀಕಂಡಿದ್ರು, ಯಾರೋ ಕೈ ತಾಗ್ಸಿದ್ದೇ ಕಣ್ಲಾ ಮತ್ತೆ ಹೀಗ ’ ಹ್ಯಾಂಡ್ ಗ್ಲೌಸ್’ ಶಾಪ್ನಾಗೆ ಕೆಲ್ಸಕ್ಕೆ ಸೇರ್ಕಬುಟರೆ "

" ಹಲ್ಲೇನಾರ ಹಿವ್ರಿಗೆ ಜಾಸ್ತಿ ದುಡ್ಡು ಕಾಸು ಸಿಗ್ತದಾ ? "

" ಅಳೇ ಪಿರೂತಿ ಇಸ್ವಾಸ ಇಂದ್ರೊಡ್ತಿ ಕಾಲದ್ದು! ಹೆಲ್ಲಾನಾ ಬರೇ ದುಡ್ಗೇ ಮಾಡಕಾಯ್ತದಾ... ನಟಿ ಮುದ್ಕಾದ್ಮ್ಯಾಕೂ ತಂಗೆ ಹೀರೋಯಿಣಿ ಬೇಕೂಂದ್ರೆ ಕೊಡ್ತಾರೇನ್ಲ ....ಹೆಲ್ಲಾ ಅಂಗೇಯ ಮರ್ಕೆಟ್ನಾಗೆ ಚಾಲ್ತಿಲಿರೋರ್ನ ಮಡೀಕತರೆ "

" ಮತ್ತೀಗ ಸೈಕಲ್ ಶಾಪು ? ಬೇರೆ ಯಾರಾನಾ ನಡುಸ್ತರ ? "

" ಅದು ಎದ್ದೋಗ್ ಯಾವ್ಕಾಲ ಆಯ್ತು ನೀ ಹೀಗ್ಕೇಳ್ತೀಯಲ, ಸೈಕಲ್ನೆಲ್ಲಾ ಪುಡಿ ಕಾಸಿಗೆ ಮಾರಾಟ ಮಾಡಕೂ ಹಾಗ್ದಲೇಯ ಪಂಚರ್ ಹಂಗ್ಡೀಲು ಕಾಸ್ಬರ್ದೆ ಟೆಬಲ್ಲು ಖುರ್ಚಿ ಸಮೇತ ಎಲ್ಲಾ ಅಂಗಂಗೇ ಬಿಟ್ಬುಟ್ಟವ್ರೆ "

----------------------

" ಹಿನ್ನೆನಿಸ್ಯ ಅಣಾ ನಂಗೆ ನೀ ಸಿಕ್ಬುಟ್ರೆ ಹೊಳ್ಳೇ ಸ್ವರ್ಗಾನೇ ಸಿಕ್ದಂಗೆ "

" ಯಾಕ್ಲಾ ಹಂತಾದ್ದೇನ್ಕಂಡೆ ನನ್ತಾವ ? "

" ಒಂದ್ವಾರ್ಕೆ ಸಾಕಾಗ್ವಷ್ಟು ಬ್ಯಾಟ್ರಿ ಚಾರ್ಜ್ ಮಾಡ್ಕಬುಟ್ರೆ ಆಮೇಲೆ ನಿಧಾನ್ಕೆ ಮುಂದಿನ್ವಾರ ಬಂದ್ರಾಯ್ತಲ ಇಂಗೇ ಮಾಡ್ತಾನೇ ಇರಾದು "

" ಹಲ್ಲಯ್ಯ ನೀ ಬ್ಯಾಟ್ರೀ ಹಂದಲ್ಲ ಹೇಳ್ತಾನೂವೆ ನೆಪ್ಪಾಯ್ತು ಆ ಬಿ ಎಸ್ ಎನ್ ಎಲ್ ದವ್ರು ೩ ಜಿ ಹಂತ ಏನೇನೋ ಮೊಬೈಲ್ ಬಿಟ್ಟವ್ರಂತೆ "

" ಹಲ್ಲಣೋ ಇರೋ ನೆಟ್ ವರ್ಕೇ ಸರ್ಯಾಗಿ ಕೆಲ್ಸಮಾಡಾಕಿಲ್ಲ ಇನ್ ೩ಜಿ ಬೇರೆ ಕೊಡ್ತರೆ ತಕ ತಕ "

" ಯಾಕೋ ಸರಿಯಾಗ್ ಬರಾಕಿಲ್ಲಾ ಹಂತ್ಯಾ ? "

" ಹಲ್ಲಿ ಕಾಲ್ ಸೆಂಟರ್ ಗೆ ಮೊಬೈಲ್ ಸಿಗ್ನಾಲ್ ಬತ್ತ ಹಿಲ್ಲಾಂತ ಫೋನ್ ಮಾಡು, ಎತ್ತಕೇ ಮೂರ್ಗಂಟೆ ಅದಾಗುತ್ಲೂವೆ ನಿನ್ ಎಸ್ರೂನೆಲ್ಲಾ ಕೆಳ್ವಷ್ಟೊತ್ಗೇ ಮತ್ತೆ ಕಟ್ಟಾಗೋತದೆ, ಪ್ರಯತ್ನ ಮಾಡೀ ಮಾಡೀ ನೀನು ಕಂಪ್ಲೇಟ್ ಕೋಡಾಕೋದ್ರೆ ಹಲ್ಲಿರೋ ಜನ ಫೋನ್ ಎತ್ತಿಟ್ಬುಟ್ಟು ಮ್ಯೂಜಿಕ್ ಹಾಕಿ ಒಂಟೋಯ್ತರೆ ನೀನು ಕಿವಿಮೇಲ್ ಹೂವಿಟ್ಗಂಡು ಮ್ಯೂಜಿಕ್ ಕೇಳ್ತಾನೆ ಇರು "

" ಯಾಕ್ಲಾ ಹಿದ್ನ ಯಾರೂ ಕೇಳಾಕಿಲ್ವಾ ? "

" ಕಳ್ದ ನಾಲ್ಕ್ ತಿಂಗ್ಳಿಂದ ಯೋಳ್ತಾನೇ ಇವ್ನಿ ಇನ್ನೇನು ಬಸ್ರಾದ್ ನನ್ನೆಂಡ್ರು ಅಡದ್ರೂನೂವೆ ಅವರು ಸಮಸ್ಯೆನ ಕಿವಿಗಾಕ್ಕೊಳಾಕಿಲ್ಲ "

" ಮತ್ತೆ ಯಾಕಂತೆ ಹಂತ ಯಾರೂ ಕೇಳೋರಿಲ್ವ ? "

" ಅದೊಂಥರಾ ಅಂಗೇ ಆಗ್ಬುಟ್ಟದೆ, ಬರೇ ಮ್ಯೂಜಿಕ್ ಕಂಪ್ನಿ, ಆದ್ರೆ ಜಾಹೀರಾತ್ಗೇನ್ ಕಮ್ಮಿ ಹಿಲ್ಲ ಬೆಳಗಾಗುತ್ಲೂವೆ ಯವ್ಯಾವ್ದೋ ನಂಬರಿಂದ ಕಾಲ್ ಬತ್ತದೆ, ಯಾರ್ದಪಾ ಹಂತಾ ಅರ್ಜೆಂಟು ಹಂತಾ ತಗಂಡ್ರೆ ಅದೇನೆಲ್ಲಾ ಮ್ಯೂಜಿಕ್ಕು, ಮಾತು ಆಮೇಲೆ ೩-೪ ಮಿನಿಟು ಹಾದ್ಮೇಲೇನೇ ನಿಂಗೊತ್ತಾಗೋದು ಹದು ಬಿ. ಎಸ್. ಎನ್.ಎಲ್ಲು ಹಂತಾವ "

" ಬರ್ಲೇನಣಾ ? ಹಲ್ಲಿ ತಮ್ಮ ಕಾಯ್ತವ್ನೆ "

" ಅಂಗಂತ್ಯಾ ? ಆಯ್ತು ಓಗ್ಬುಟ್ಬಾ ಮುಂದಿನವಾರ ಸಿಗವ ಮತ್ತೆ...ಒಸ್ತೇನಾರ ಬಾಟ್ಲು ಗೀಟ್ಲು ಬಂದುದ್ರೆ ಒಸಿ ತಗಂಬಾ ಸಲ್ಪ ಹಾಕ್ಕಂಡು ಒಂದೆಲ್ಡಗಂಟೆ ಗಂಟ ಹಿಲ್ಲೇ ಹಿದ್ದು ಓಗವ, ನಾವದ್ನ ಕುಡುದ್ರೆ ಸಲ್ಪ ನೀರಾರು ಉಳ್ಕತದೆ ಆಯ್ತಾ ಹಾಂ ಓಗ್ಬುಟ್ಬಾ
"

Saturday, September 4, 2010

ಲಿವಿಂಗ್ ಇನ್ ದಿ ಹೆವನ್ !


ಲಿವಿಂಗ್ ಇನ್ ದಿ ಹೆವನ್ !

ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ [ ಪಾರ್ಟ್-೧ ]

ಬುದ್ಧ ಧ್ಯಾನಾಸಕ್ತನಾಗಿದ್ದ ವೇಳೆ ಅವನಿಗೂ ಕೆಲವು ಉಪದ್ರವಗಳಿದ್ದವು ! ಏನಪ್ಪಾ ಇದುವರೆಗೂ ಕೇಳದ ಹೊಸ ಕಥೆ ಅಂತ ಹುಬ್ಬೇರಿಸಬೇಡಿ. ಬುದ್ಧನಿಗೆ ತೊಂದರೆ ಕೊಟ್ಟ ಉಪದ್ರವಿಗಳು ಬೇರಾರೂ ಅಲ್ಲ-ಬದಲಾಗಿ ಅವನೊಳಗಿನ ಬತ್ತಿರದ ಆಸೆಗಳು! ಧ್ಯಾನದಲ್ಲಿ ಆತನ ಹೆಂಡತಿ ಮತ್ತು ಮಗು ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಹೆಂಡತಿ ಕೇಳುತ್ತಾಳೆ " ಯಾಕೆ ಸ್ವಾಮೀ ನಮ್ಮನ್ನೆಲ್ಲ ಮರೆತು ಇಲ್ಲಿಗೆ ಬಂದಿರಿ? ರೂಪವತಿಯಾದ ನನ್ನನ್ನೂ ಇಗೋ ನೋಡಿ ಇಷ್ಟು ಸುಂದರವಾದ ಮಗುವನ್ನೂ ತೊರೆದು ಇಲ್ಲಿಗೆ ಬಂದಿರಲ್ಲ ಇದು ನ್ಯಾಯವೇ ? " ಬುದ್ಧ ತನ್ನ ಮನವನ್ನು ಸ್ಥಿಮಿತಕ್ಕೆ ತಂದುಕೊಂಡ, ಮತ್ತು ಮನಸ್ಸಿಗೆ ಹೇಳಿದ " ಎಲೈ ಮನವೇ ನನಗೆ ಆ ಭಾವನೆಗಳು ಬೇಡ, ಆ ಆಸೆಗಳನ್ನು ಕತ್ತರಿಸಿ ತುಂಡು ತುಂಡು ಮಾಡು ಮತ್ತು ಎಲ್ಲಾದರೂ ಬಿಸಾಡಿಬಿಡು. ಆತ ಮನಸ್ಸನ್ನು ಹಾಗೆ ಹೇಳೀ ಹೇಳೀ ಹೇಳೀ ಗೆದ್ದ. ಯಾವಾಗ ಆತ ಸಂಪೂರ್ಣ ಗೆದ್ದನೋ ಆತನೇ ಘೋಷಿಸಿದ " ಆಸೆಯೇ ದುಃಖಕ್ಕೆ ಮೂಲ" !

ಏಸುಕ್ರಿಸ್ತ ಗುಡ್ಡದ ಮೇಲೆ ಧ್ಯಾನಾಸಕ್ತನಾಗಿದ್ದವೇಳೆ ಬಹಳ ಜನ ಅನುಯಾಯಿಗಳು ಬಂದು "ನೀವು ಇಲ್ಲಿ ಏನುಮಾಡುತ್ತೀರಿ ಸ್ವಾಮೀ, ಬೇಕಾದ ಸಾಮಗ್ರಿಗಳಿರುವ ಖಜಾನೆಯೇ ಊರಲ್ಲಿರುವಾಗ ಈ ಗುಡ್ಡದಲ್ಲಿ ಅದೇನು ಕಂಡಿರಿ ? " ಏಸುವು ಮಾತನಾಡಿರಲಿಲ್ಲ, ಮೌನದಲ್ಲಿ ಹಾಗೇ ಮುನ್ನಡೆದಿದ್ದ. ಆತ ಧ್ಯಾನದಲ್ಲಿ ಪಡೆದದ್ದನ್ನೇ ಶಾಂತಿಯೆಂದು ಬೋಧಿಸಿದ. ಉತ್ತರ ಅಮೇರಿಕಾದ ಮರುಭೂಮಿಗಳಲ್ಲಿ ವಾಸಿಸಿದ್ದ ಸಂತ ಅಂತೋನಿ ಬಹಳ ದಾರ್ಶನಿಕನಾಗಿದ್ದ. ಧ್ಯಾನಾಸಕ್ತನಾಗಿ ತಿರುಗಾಡುವಾಗ ಆತನಿಗೆ ಆತನ ಪೂರ್ವಾಶ್ರಮದ ರೋಮನ್ ಚಕ್ರಾಧಿಪತ್ಯದ ರಾಜಮಹಲುಗಳೂ, ವೈಭವದ ಸಿಂಹಾಸನಗಳೂ, ರಾಜೋಪಚಾರ ಸೇವೆಗಳೂ ನೆನೆಪಿಗೆ ಬಂದವು, ಅವು ಹಾಗೇ ಆತನ ಎದುರಲ್ಲಿ ಮೂರ್ತರೂಪ ಪಡೆದು ಆತನನ್ನು ಸಾಯುವ ಸ್ಥಿತಿಗೆ ತಳ್ಳಿದಾಗ ಆತನೆಂದುಕೊಂಡ ಅವುಗಳನ್ನೆಲ್ಲ ದೂರ ಅಟ್ಟಿದರೇನೆ ತನಗೆ ಬೇಕಾದ್ದು ಸಿಗುತ್ತದೆ, ಅಂತೇಯೇ ಆತ ಅವುಗಳನ್ನೆಲ್ಲ ಮನಸ್ಸಲ್ಲೇ ಸೇರಿಸಿ ನಿವಾಳಿಸಿ ಎಸೆದ!

ಪ್ರಾಚೀನ ಹಿಂದೂಸ್ಥಾನದ ಅನೇಕ ಋಷಿಮುನಿಗಳು ಯಾಕೆ ಎಲ್ಲವನ್ನೂ ಬಿಟ್ಟು ತಪಸ್ಸನ್ನಾಚರಿಸಿದರು ? ಮಾಡಲಿಕ್ಕೆ ಬೇರೆ ಕೆಲಸವಿಲ್ಲವೆಂದೇ? ಅಥವಾ ಸನ್ಯಾಸಿಗಳಾದರೆ ಹಾಯಾಗಿರಬಹುದೆಂದೇ ? ಅಲ್ಲವಲ್ಲ ! ವಾಸ್ತವದಲ್ಲಿ ಸನ್ಯಾಸಧರ್ಮ ಅತಿ ಕಠಿಣ! ಅವರು ಸರ್ವಸಂಗ ಪರಿತ್ಯಾಗಿಗಳಾಗಿ ಎಲ್ಲಾ ಬಯಕೆಗಳನ್ನೂ ದಮನಮಾಡಿಕೊಂಡು ತನ್ಮೂಲಕ ನಿರಾಕಾರ ಮೂಲಸ್ವರೂಪ ಪರಮಾತ್ಮನ ಸಾಯುಜ್ಯವನ್ನು ಸಾಕಾರ ರೂಪದಲ್ಲಿ ಕಾಣುತ್ತಾರೆ! ನಮಗೆ ಇರುವ ಪಂಚೇಂದ್ರಿಯಗಳ ಮೂಲ ಹುಡುಕಿ ನೋಡಿದರೆ ಅದೆಲ್ಲಾ ಒಂದೇ ಮೂಲರೂಪಕ್ಕೆ ಸೇರಿದ್ದು! ಉದಾಹರಣೆಗೆ ಸೂರ್ಯನ ಬೆಳಕನ್ನು ಬೇರೆ ಬೇರೆ ರೀತಿಯ ಸ್ಪಟಿಕದ ಅಥವಾ ರಾಹುಗನ್ನಡಿಯ ಮೂಲಕ ಹಾಯಿಸಿದಾಗ ನಮಗೆ ಬೇರೆ ಬೇರೆ ಬಣ್ಣಗಳ ಮತ್ತು ಆಕಾರಗಳ ದರ್ಶನವಾಗುತ್ತದೆ. ಅವುಗಳಲ್ಲಿ ಕಾಮನಬಿಲ್ಲೂ ಒಂದು ಅಲ್ಲವೇ ? ಕಾಮನಬಿಲ್ಲಿನಲ್ಲಿ ಏಳು ಬೇರೆ ಬೇರೆ ಬಣ್ಣಗಳನ್ನು ನಾವು ಕಾಣುತ್ತೇವೆ. ಆದರೆ ಅವೆಲ್ಲಾ ಬಣ್ಣಗಳೂ ಸೇರಿದಾಗ ಬಿಳಿಯಬಣ್ಣವೇ ಆಗುತ್ತದೆ! ಕೆಲವು ಬೇರೆ ಬೇರೆ ದಪ್ಪದ ಗಾಜಿನ ಜಾಡಿಗಳಲ್ಲಿ ಒಂದೇ ವಸ್ತುವನ್ನು ಇಡುತ್ತ ಬನ್ನಿ: ಅದು ಬೇರೆ ಬೇರೆ ಗಾತ್ರಗಳಲ್ಲಿ ಗೋಚರಿಸುತ್ತದೆ. ನೀರಿನ ತೊಟ್ಟಿಯೊಂದರಲ್ಲಿ ನಾಣ್ಯವನ್ನು ಹಾಕಿ ತಳದಲ್ಲಿ ಕುಳಿತ ಅದನ್ನು ನೇರವಾಗಿ ತಾಕುವಂತೆ ಒಂದು ಕೋಲನ್ನು ಇಳಿಸಿ, ನೀವು ಮೇಲಿಂದ ನೋಡಿದ ಜಾಗಕ್ಕೆ ಕೋಲು ಇಳಿದಾಗ ನಿಜವಾಗಿಯೂ ನಾಣ್ಯ ಅಲ್ಲಿರುವುದಿಲ್ಲ ಬದಲಿಗೆ ಅದು ಅಲ್ಲಿಗೆ ಹತ್ತಿರದಲ್ಲೇ ಆಚೀಚೆ ಇರುತ್ತದೆ.

ಹೀಗೇ ನಮ್ಮೊಳಗೆ ಕುಳಿತ ಯಾವುದೋ ಒಂದು ’ಏನೋ’ ಕಣ್ಣಿನಿಂದ ಸುಂದರವಾದ ದೃಶ್ಯಗಳನ್ನು ನೋಡಬಯಸುತ್ತದೆ, ಕಿವಿಯಿಂದ ಇಂಪಾದ ಸಂಗೀತವನ್ನು ಕೇಳಬಯಸುತ್ತದೆ, ನಾಲಿಗೆಯಿಂದ ರುಚಿರುಚಿಯಾದ ತಿನಿಸುಗಳನ್ನು ತಿನ್ನಬಯಸುತ್ತದೆ, ಮೂಗಿನಿಂದ ಆಹ್ಲಾದಕರ ಸುಗಂಧವನ್ನು ಹೀರಬಯಸುತ್ತದೆ, ಚರ್ಮದಿಂದ ಮೆತ್ತನೆಯ ವಸ್ತುವನ್ನು ಸ್ಪರ್ಶಿಸಲು ಹಾತೊರೆಯುತ್ತದೆ. ಇವಿಷ್ಟನ್ನು ಬಿಟ್ಟು ಈ ಲೋಕದಲ್ಲಿ ಬೇರೇ ಏನೂ ಇಲ್ಲವೇ ಇಲ್ಲ. ಮಾನವನ ಮಿಕ್ಕುಳಿದ ಎಲ್ಲಾ ಆಸೆಗಳೂ ಇವುಗಳ ಸುತ್ತ ಬೆಸೆದ ಹಲವು ಮಜಲುಗಳಲ್ಲಿ ಹೂಡಲ್ಪಟ್ಟಿವೆ. ಕಾಣಬೇಕಾದ ಸೌಂದರ್ಯಕ್ಕೆ ಯಾರೋ ಅಡ್ಡಿಪಡಿಸಿದರೆ, ಮೂಗಿಗೆ ಕೆಟ್ಟ ವಾಸನೆ ಬಡಿದರೆ,ಚರ್ಮಕ್ಕೆ ಚುಚ್ಚುವ ಅಥವಾ ಗಟ್ಟಿಯ ವಸ್ತು ತಾಗಿದರೆ, ಕಿವಿಗೆ ಕರ್ಕಶಧ್ವನಿ ಕೇಳಿಸಿದರೆ, ನಾಲಿಗೆಗೆ ರುಚಿಯಿರದ ಪದಾರ್ಥಗಳು ತಾಗಿದರೆ ನಾವು ಕೋಪಗೊಳ್ಳುತ್ತೇವೆ! ಕೋಪ ಎಂಬುದು ನಮ್ಮೊಳಗಿನ ಆರುವೈರಿಗಳಲ್ಲಿ ಒಂದು ಎಂದು ಕೇಳಿದ್ದೇವಷ್ಟೇ? ಈ ಆರುವೈರಿಗಳೂ ಐದು ದಾರಿಗಳಿಂದ ಒಂದೆಡೆ ಸೇರಿ ನಮ್ಮ ಮೂಲರೂಪದ ಆತ್ಮನನ್ನು ನಮ್ಮೊಳಗಿಂದ ಹೊರಗೆಳೆದು ಆತನಿಗೆ ಬೇಡದ್ದನ್ನು ಅಂಟಿಸಿ ಆತನ ತೇಜೋವಧೆ ಮಾಡುತ್ತವೆ. ಯಾವಾಗ ಆ ಆತ್ಮ ಇವುಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೋ ಆವಾಗ ಇವುಗಳು ಆಡಿದ್ದೇ ಆಟ! ತನ್ನ ಮೂಲಸ್ವರೂಪವನ್ನು ಮರೆತ ಆತ್ಮ ತನ್ನ ನೈಜತೆಯನ್ನು ತೊರೆದು ಲೌಕಿಕಾಧೀನವಾಗಿ ಇಲ್ಲದ ಉಪದ್ವ್ಯಾಪಕ್ಕೆ ಈಡಾಗುತ್ತಾನೆ.[ಆತ್ಮ ಪರಮಾತ್ಮನ ರೂಪ ಎಂಬ ಕಾರಣಕ್ಕೆ ಪುಲ್ಲಿಂಗ ಸಾಂಕೇತಿಕವಾಗಿ ಬಳಸಿದ್ದೇನೆ]

ಹಾಗಾದರೆ ನಾವು ವಿಜ್ಞಾನವನ್ನು ನೋಡೋಣ. ಇಲ್ಲಿ ಕಿವಿ-ಮೂಗು-ಬಾಯಿ[ಗಂಟಲು] ಒಂದೇ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ದೆರ್ ಈಸ್ ಇಂಟರ್ ಕನೆಕ್ಟಿವಿಟಿ. ಇನ್ನುಳಿದದ್ದು ಎರಡೇ ಒಂದು ಕಣ್ಣು ಇನ್ನೊಂದು ಚರ್ಮ. ನಾನು ಅನೇಕಾವರ್ತಿ ಕಣ್ಣಿಗೆ ಕಾಯಿಲೆಬಂದಾಗ ಉಪಯೋಗಿಸಿದ ಆಲೋಪಥಿ ಔಷಧ ದ್ರವ್ಯ ಪರೋಕ್ಷ ಬಾಯಿಗೆ ಕಹಿ ಕಹಿಯಾಗಿ ಬಂದಿದ್ದನ್ನು ಹಲವಾರು ಸಲ ನೆನೆಸಿಕೊಂಡಿದ್ದೇನೆ! ಅಂದಮೇಲೆ ಕಣ್ಣಿಗೂ ಆ ಕನೆಕ್ಟಿಂಗ್ ಪಾಯಿಂಟ್ ಗೂ ಏನೋ ಅವಿನಾಭಾವ ಸಂಪರ್ಕ ಸಂಬಂಧ ಇರಲೇಬೇಕಲ್ಲವೇ? ಚರ್ಮ ನಮ್ಮನ್ನು ಎಲ್ಲೆಲ್ಲೂ ಆವರಿಸಿಕೊಂಡಿದೆ! ಹಾಗಾದ್ರೆ ಈ ಎಲ್ಲವೂ ಒಂದೇ ಮೂಲ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ಆಗಲೇ ನಮಗೆ ಲೌಕಿಕದ ಎಲ್ಲದರ ಅನುಭೂತಿ ಸಿಗುವುದು. ಒಳಗಿರುವ ಒಂದೇ ’ಏನೋ’ ಅದು/ಅವನು ಹೊರಗಡೆಗೆ ತನ್ನ ಕಿರಣಗಳನ್ನು ಕಣ್ಣು, ಮೂಗು, ಬಾಯಿ, ಕಿವಿ, ಚರ್ಮಗಳ ಮೂಲಕ ಹರಿಬಿಟ್ಟಾಗ ನಮಗೆ ಇವೆಲ್ಲಾ ಬೇರೆ ಬೇರೆ ಎಂಬ ಅನಿಸಿಕೆಯಾಗುತ್ತದೆ. ಆ ಒಳಗಿರುವ ’ಏನೋ’ ಎಂದೆನಲ್ಲ ಅದೇ ಮನಸ್ಸು. ಮನಸ್ಸು ಆತ್ಮನ ಒಂದು ಭಾಗ. ಯಾವಾಗ ಶರೀರದಲ್ಲಿ ಆತ್ಮ ಇರುವುದಿಲ್ಲವೋ ಆಗ ಕಣ್ಣು ತೆರೆದೇ ಇದ್ದರೂ ಆ ಹೆಣ ನೋಡಲಾರದು, ಕಿವಿಯಿಂದ ಕೇಳಲಾರದು,. ಬಾಯಿಂದ ತಿನ್ನಲಾರದು ಹೀಗೇ ಈ ಎಲ್ಲಾ ಕೆಲಸಗಳು ಸ್ವಸ್ಥಸ್ಥಿತಿಯಲ್ಲಿ ನಡೆಯಬೇಕಾದರೆ ಶರೀರದ ಒಳಗೆ ಆತ್ಮನಿರಬೇಕು. ಆ ಆತ್ಮದ ಭಾಗವಾದ ಮನಸ್ಸಿರಬೇಕು.

ನಮ್ಮ ಆಧುನಿಕ ವೈದ್ಯ ವಿಜ್ಞಾನ ಇಷ್ಟೆಲ್ಲಾ ಮುಂದುವರಿದರೂ ಮನಸ್ಸಿನ ರೂಪವನ್ನು ಕಂಡುಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ನಾವು ಬರೇ ಮೆಮರಿ ಸೆಲ್ಸ್ ಅಂತೀವಿ ಅಷ್ಟೇ! ಆದರೆ ಆ ಮೆಮರಿ ಸೆಲ್ಸ್ ಹೆಣದಲ್ಲಿ ಯಾಕೆ ಕೆಲಸಮಾಡುವುದಿಲ್ಲ? ನೋಡಿ ತಾವು ಕೇಳಿರುತ್ತೀರಿ-ಯಾರಾದರೂ ಆತ್ಮಹತ್ಯೆಗೆ ಪ್ರಯತ್ನಿಸಿ ಕೋಮಾದಲ್ಲಿದ್ದರೆ ವೈದ್ಯ ಪರಿಭಾಷೆಯಲ್ಲಿ ಅವರು ಹೇಳುತ್ತಾರೆ ’ ಮೈಂಡ್ ಈಸ್ ಇನ್ಸಲ್ಟೆಡ್ ಟು ದಿ ಮ್ಯಾಕ್ಸಿಮಮ್’ ! ಹಾಗಾದ್ರೆ ಮನಸ್ಸಿಗೆ ಇನ್ಸಲ್ಟ್ ಅಂದ್ರೆ ಏನು? ಯಾವುದನ್ನು ನಮ್ಮೊಳಗಿನ ಆತ್ಮ ಸ್ವೀಕರಿಸಲು ಇಷ್ಟಪಡುವುದಿಲ್ಲವೋ ಅದನ್ನು ಅದಕ್ಕೆ ಬಲವಂತವಾಗಿ ನಮ್ಮ ಇಂದ್ರಿಯಗಳ ಮೂಲಕ ನಾವು ತುರುಕಿದರೆ ಅದು ಮನಸ್ಸಿಗೆ ನಾವು ಮಾಡುವ ಇನ್ಸಲ್ಟ್ ಆಗಿರುತ್ತದೆ. ಈ ಇನ್ಸಲ್ಟ್ ಬೇರೆಯವರ ಕೃತ್ಯದಿಂದ ಆದದ್ದೂ ಆಗಿರಬಹುದು. ಇನ್ಸಲ್ಟ್ ನಲ್ಲಿ ಎರಡು ವಿಧ, ಒಂದು ಬಾಹ್ಯ ಮತ್ತೊಂದು ಆಂತರಿಕ. ಬಾಹ್ಯವಾಗಿ ನಡೆದ ಇನ್ಸಲ್ಟ್ ಬಹಳ ಮೊನಚಾಗಿ ಇಲ್ಲದಿದ್ದರೆ ಅದು ಯಾವುದೇ ವಿಪತ್ತಿಗೆ ಕಾರಣವಾಗುವುದಿಲ್ಲ, ಒಂದೊಮ್ಮೆ ಬಾಹ್ಯದಲ್ಲಿ ನಡೆಯುವ ಇನ್ಸಲ್ಟ್ ಬಹಳ ಮೊನಚಾಗಿದ್ದರೆ ಅದು ಆಂತರಿಕ ಇನ್ಸಲ್ಟ್ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಇನ್ಸಲ್ಟ್ ನಮ್ಮ ಮನಸ್ಸಿಗೆ ಒತ್ತಡ ತಂದೂ ತಂದೂ ಮನಸ್ಸು ನಮ್ಮನ್ನು ತ್ಯಜಿಸುವಂತೆ ಮಾಡುತ್ತದೆಯಲ್ಲಾ ಆಗಲೇ ಬಹುತೇಕರಿಗೆ ಹೃದಯಸ್ತಂಭನವಾಗುತ್ತದೆ!

ಮನಗೆದ್ದು ಮಾರುಗೆಲ್ಲು ಎಂಬ ಗಾದೆಯೊಂದಿದೆ. ಸಂಸ್ಕೃತದಲ್ಲಿ || ಮನಏವ ಮನುಷ್ಯಾಣಾಂ || ಎಂದಿದ್ದಾರೆ.ಇದರ ಅರ್ಥ ಅಂತರಾತ್ಮ ಯಾವುದನ್ನು ಒಪ್ಪಿ ಮಾಡುತ್ತದೋ ಅಲ್ಲಿ ಸಿದ್ಧಿಯಿದೆ.ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ನಮ್ಮೊಳಗೇ ಅಳುಕು ಇದ್ದರೆ ಅಲ್ಲಿ ನಮಗೆ ಯಶಸ್ಸು ಸಿಗುವುದಿಲ್ಲ! ವಿದ್ಯಾರ್ಥಿಯೊಬ್ಬ ಓದಿರುವುದಿಲ್ಲ, ಪರೀಕ್ಷೆಗೆ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ--ಆದರೆ ಮನೆಗೆ ಹೇಳುವುದಿಲ್ಲ. ಅಲ್ಲಿ ಆತನ ಮನಸ್ಸು ಕಳ್ಳತನಮಾಡಿದ್ದನ್ನು ದಾಖಲಿಸಿಕೊಳ್ಳುತ್ತದೆ, ಮತ್ತು ಆಗಾಗ ಅವನನ್ನೇ ತಿವಿಯುತ್ತಿರುತ್ತದೆ. ಅದಕ್ಕೇ ಕೊಲೆಸುಲಿಗೆ ಮಾಡುವವರು ಅಂತರಾತ್ಮದ ಮಾತು ಕೇಳದೇ ಮದ್ಯ ಸೇವಿಸಿ ಅಂತಹ ದುಷ್ಕೃತ್ಯಗಳಲ್ಲಿ ತೊಡಗುತ್ತಾರೆ. ಸಹಜಸ್ಥಿತಿಯಲ್ಲಿ ಅವರಿಗೆ ಆ ಕೆಲಸ ಸಾಧ್ಯವಾಗುವುದಿಲ್ಲ, ಮಾಡಿದಮೇಲೆ ಮಾಡಿದ ತಪ್ಪಿನ ಅರಿವಾಗಿ ಕೊರಗುತ್ತಾರೆ ಕೆಲವರು, ಮತ್ತೆ ಮಾಡುತ್ತ ತಮ್ಮಲ್ಲಿ ನೆಗೆಟಿವ್ ಡೆಪಾಸಿಟ್ಸ್ ಜಾಸ್ತಿ ಮಾಡಿಕೊಳ್ಳುತ್ತಾರೆ ಇನ್ನೂ ಕೆಲವರು ಹೀಗೇ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ’ಒಳಗಿನ ಕರೆ’ಯನ್ನು ಮನ್ನಿಸಿ ನಡೆದವ ಎಡಹುವುದಿಲ್ಲ. ಅಕಸ್ಮಾತ್ ಎಡವಿದ್ದರೆ ಅವನಲ್ಲಿ ಇಬ್ಬಂದಿತನವಿತ್ತು ಎಂತಲೇ ಲೆಕ್ಕ.

"ಬೀಸಿಬರುವ ಚಂಡಮಾರುತವನ್ನೂ, ಧಗಧಗಿಸುವ ಬೆಂಕಿಯನ್ನೂ, ಪ್ರಳಯಕಾಲದಂತೇ ಉಕ್ಕೇರಿದ ಸಮುದ್ರದ ಅಲೆಗಳನ್ನೂ ನೀನು ನಿಗ್ರಹಿಸ ಬಲ್ಲೆ, ಪರ್ವತದ ಬುಡವನ್ನೇ ಅಲ್ಲಾಡಿಸಬಲ್ಲೆ, ಶ್ರೀರಾಮಾ ಆದರೆ ಮನೋ ನಿಗ್ರಹ ಅದಕ್ಕಿಂತ ಕಠಿಣ" ಎಂದು ಗುರು ವಶಿಷ್ಠರು ತಮ್ಮ ಯೋಗವಾಶಿಷ್ಠದಲ್ಲಿ ಹೇಳಿದ್ದಾರೆ. ಘರ್ಜಿಸುವ ಸಿಂಹವನ್ನಾಗಲೀ, ಮದವೇರಿದ ಆನೆಯನ್ನಾಗಲೀ, ಕಡಿಯಬರುವ ಚಾಂಡಾಲನನ್ನಾಗಲೀ ನಿಗ್ರಹಿಸಬಹುದು-ಆದರೆ ಈ ಮನಸ್ಸೆಂಬುದನ್ನು ನಿಗ್ರಹಿಸುವುದು ಕಷ್ಟ ಎನ್ನುತ್ತವೆ ಹಲವು ಉಲ್ಲೇಖಗಳು. ಇವತ್ತು ನಾವಿದನ್ನೆಲ್ಲ ವೆಬ್ ಮೂಲಕ ಓದುತ್ತಿದ್ದೇವೆ, ನಮ್ಮ ಮೊಬೈಲ್ ಮೂಲಕ ಸಂಪರ್ಕಿಸುತ್ತೇವೆ, ಸಿನಿಮಾಗಳನ್ನು ನೋಡಿ ಸಂತಸಪಡುತ್ತೇವೆ, ಬೇಕಾದವರ ಪ್ರೀತಿಗೆ ಪಾತ್ರರೆಂದು ಹೆಮ್ಮೆಯಿಂದ ಬೀಗುತ್ತೇವೆ, ತಿಂಗಳಿಗೋ ವರ್ಷಕ್ಕೋ ಲೇಖನ ಬರೆದು ಕೆಲವಾರು ಒಳ್ಳೆಯ ಪ್ರತಿಕ್ರಿಯೆಗಳು ಬಂದದ್ದಕ್ಕೆ ಪುಳಕಗೊಳ್ಳುತ್ತೇವೆ, ಯಾವುದೋ ಜಾತ್ರೆ ಎಲ್ಲೋ ಹುಟ್ಟು ಹಬ್ಬ, ಮದುವೆ-ಮುಂಜಿ ಅಂತೂ ನಾವು ನಮಗೆ ಬೇಕಾದ ಹೂರಣಗಳಲ್ಲಿ ಮುಳುಗಿರುತ್ತೇವೆ. ಒಂದಿ ದಿನ ಲ್ಯಾಪ್ ಟಾಪು. ಮೊಬೈಲು, ಇಂಟರ್ನೆಟ್ಟು ಇರದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ! ಇವೆಲ್ಲಾ ಇರದೆಯೂ ನಾವು ಬದುಕಿರಲಾರೆವೇ ? ಹಿಂದೆ ಬದುಕಿರಲಿಲ್ಲವೇ ? ಇದಕ್ಕೆ ಉತ್ತರ ನಾವೇ ಕಂಡುಕೊಳ್ಳಬೇಕು.

[ನಿನ್ನೆಯ ಪ್ರತ್ಯಾಹಾರ ಕಾವ್ಯಕ್ಕೆ ಪ್ರತಿಕ್ರಿಯಿಸುತ್ತ ಪೂರ್ಣಿಮಾ ಎಂಬ ಹೆಸರಿನಿಂದ ಈ ಬ್ಲಾಗಿನಲ್ಲೂ ಹಾಗೂ ಅನಾನಿಮಸ್ ಎಂಬ ಅನಾಮಧೇಯರಾಗಿ ’ವೇದಸುಧೆ’ ಬ್ಲಾಗಿನಲ್ಲೂ ಪ್ರತಿಕ್ರಿಯಿಸಿದವಳ/ರ ಕುರಿತು ನನಗೆ ಮರುಕವುಂಟಾಗುತ್ತದೆ. ರೋಷವೇನಿಲ್ಲ! ಪಾಪ ತಿಳುವಳಿಕೆ ಕಮ್ಮಿ ಎನಿಸಿ ಸುಮ್ಮನಾಗಿ ಅದನ್ನು ಅಳಿಸಿಹಾಕಿದ್ದೇನೆ. ’ಬೆದೆಬಂದ ನಾಯಿ’ ಎನ್ನುವ ಕೀಳು ಪದವನ್ನು ಉಪಯೋಗಿಸಿದೆ ಎಂಬುದು ಅವರ ಆರೋಪ. ಇಲ್ಲಿ ಪೂರ್ಣಿಮಾ ಹೇಳುವುದು ನಾನು ಗುಂಡಪ್ಪನವರ ಕಾವ್ಯಕ್ಕೂ ಸ್ಪರ್ಧೆ ಕೊಡಲು ಹೊರಟಿದ್ದೇನಂತೆ, ಹುಳಿಯೆಂದು ದ್ರಾಕ್ಷಿಯನ್ನು ತಿನ್ನದೇ ಇರುವ ನರಿಗೂ ನಿರುಪಯುಕ್ತವಂತೆ ಆ ಬರಹ, ನರರೋಗ ತಜ್ಞರಿಗೆ ಕೈತುಂಬಾ ಕೆಲಸವಂತೆ, ಬ್ಲಾಗಿಗರೆಲ್ಲಾ ಪರಸ್ಪರ ನೆಕ್ಕುವ ದಂಡಂತೆ. ಅವರ ’ಬೆದೆ ಬಂದ’ ಮನಸ್ಥಿತಿಯೇ ಹಾಗೆಲ್ಲಾ ಬರೆಯಲು ಕಾರಣ ಎಂದುಕೊಳ್ಳುತ್ತೇನೆ ನಾನು. ಯಾಕೆಂದರೆ ನಮ್ಮ ಅನಿಯಂತ್ರಿತ ಮನಸ್ಸಿಗೂ ಹಾಗೂ ಬೆದೆಬಂದ ನಾಯಿಗೂ ಬಹಳ ಹೋಲಿಕೆಯಿದೆ. ಆ ನಾಯಿ ಹೇಗೆ ಒಂದೆಡೆ ಕೂರುವುದಿಲ್ಲವೋ ಹಾಗೇ ನಮ್ಮ ಮನಸ್ಸೂ ಕೂಡ, ಅದೇ ಕಾರಣವಾಗಿ ಅವರ ಮನಸ್ಸೂ ಹಾಗೇ ಮಾಡಿತು. ಇಂದ್ರಿಯ ನಿಗ್ರಹದಲ್ಲಿ ಕಾಮವನ್ನು ಗೆಲ್ಲುವುದೂ ಒಂದು ಸಬ್ಜೆಕ್ಟ್ ಅಲ್ಲವೇ ಪೂರ್ಣಿಮಾ / ಅನಾನಿಮಸ್ಸರೇ ? ನೀವದನ್ನು ಗೆದ್ದಿರೇ ? ಆ ಕಾಮ ತುಂಬಿದ ಮನಸ್ಸನ್ನು ಬೆದೆಬಂದ/ನೆಶೆಬಂದ ನಾಯಿಗೆ ಹೋಲಿಸಿದ್ದರಲ್ಲಿ ತಪ್ಪೇನಿದೆ ಹೇಳಿ? ಕಾವ್ಯವನ್ನು ಬರೆಯುವಾಗ ತಲೆಯಿಲ್ಲದೇ ಬರೆಯುವುದಿಲ್ಲ, ಅದರಲ್ಲೂ ಜಗದಮಿತ್ರ ಗುಂಡಪ್ಪನವರನ್ನು ತನ್ನ ಮಾನಸ ಗುರುವೆಂದು ಸ್ವೀಕರಿಸಿ ಬರೆದ ಕಾವ್ಯಗಳು ಕ್ಲೀಷೆಗಳಿಗೆ ಈಡಾಗಬಾರದಲ್ಲ. ನಿಮ್ಮ ಮನಸ್ಸು ಇನ್ನೂ ಕೂಪದೊಳಗಿನ ಮಂಡೂಕ! ಆ ಮಂಡೂಕಕ್ಕೆ ಸಮುದ್ರವನ್ನು ತೋರಿಸಿ, ಆಗ ಶಬ್ದಗಳ ಅರ್ಥ ಸರಿಯಾಗಿ ಧ್ವನಿಸುತ್ತದೆ! ನಿಮಗೆ ಅರ್ಥವಾಗುತ್ತದೆ. ಅದಿಲ್ಲವೋ ನೀವು ಹಾಗೇ ಇರಿ ನಾವು ಬರೆಯುತ್ತಲೇ ಇರುತ್ತೇವೆ-ನಿಮ್ಮ ಆ ಕ್ಷುಲ್ಲಕತನದ ಕಲ್ಲೆಸೆತಕ್ಕೆ ಧಕ್ಕೆಗೆ ಒಳಗಾಗುವ ಪುಕ್ಕಲು ಮನಸ್ಸಲ್ಲ ನಮ್ಮದು, ತಿಳಿದಿರಲಿ! ನಮ್ಮ ಬುನಾದಿ ಭದ್ರವಾಗಿದೆ, ಅದಕ್ಕೆ ಛಾವಣಿಯೂ ತಕ್ಕುದಾಗೇ ಇದೆ. ಇಲ್ಲಿ ಬರೆಯುವ ಯಾವ ಮಾಹಿತಿಯೂ ಕಡತಂದ ಸೌಭಾಗ್ಯವಲ್ಲ ಎಂಬುದು ನಿಮಗೆ ತಿಳಿದರೆ ನೀವು ಮತ್ತೆ ಹಾಗೆ ಬೇಕಾಬಿಟ್ಟಿ ಬರೆಯಲಾರಿರಿ ಅಲ್ಲವೇ ? ನಿಮ್ಮ ಮಿಂಚಂಚೆಯನ್ನು ಕೊಡಿ ಇನ್ನೂ ಬೇಕಾದ್ರೆ ನಿಮಗೆ ಮಾಹಿತಿ ನೀಡೋಣ ಮತ್ತು ನಿಮ್ಮಿಂದ ’ಸಂಸ್ಕಾರ’ ದ ಅರ್ಥ ತಿಳಿದುಕೊಳ್ಳಬೇಕಾಗಿದೆ ಕೊಡುವಿರೇ ? ಇಷ್ಟು ಸಾಕಲ್ಲವೇ ]

ಮನಸ್ಸನ್ನು ಹತೋಟಿಯಲ್ಲಿ, ಸಮಚಿತ್ತದಲ್ಲಿ ನಿಭಾಯಿಸಿದವರು ಹೃದಯ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುವುದೇ ಇಲ್ಲ. ಆದರೆ ನಮ್ಮಲ್ಲಿ ಬಹುಸಂಖ್ಯಾಕರು ನಾವಿದನ್ನು ಪಾಲಿಸದೇ ವಯಸ್ಸಿಗೆ ತಕ್ಕಂತೇ ಬರುವ ಕಾಯಿಲೆಗಳ ಗುಂಪಿಗೆ ಹೃದಯಸ್ತಂಭನ, ಮಧುಮೇಹ, ರಕ್ತದೊತ್ತಡ ಹೀಗೇ ಹೆಸರಿಸಿ ಇಟ್ಟುಕೊಂಡಿದ್ದೇವೆ. ಸತ್ಯವಾದ ಒಂದು ವಾಕ್ಯ ಕೇಳಿ- ಯಾವಾಗ ಭೌತಿಕ ಶರೀರಕ್ಕೂ ನಮ್ಮೊಳಗಿನ ಸೂಕ್ಷ್ಮ ಶರೀರಕ್ಕೂ[ಮನಸ್ಸು ಎಂದಿಟ್ಟುಕೊಳ್ಳೋಣ!] ಲೆಕ್ಕಾಚಾರದಲ್ಲಿ ಭಿನ್ನತೆ ತೋರಿಬರುತ್ತದೋ ಆವಾಗಲೇ ನಮಗೆ ಇಲ್ಲದ ಕಾಯಿಲೆಗಳು ಅಡರಿಕೊಳ್ಳಲು ತೊಡಗುತ್ತವೆ! ನಿಜವಾಗಿ ಯೋಗಿಯಾದವನು ನಿರೋಗಿಯಾಗುತ್ತಾನೆ! ಹಾಗಾದ್ರೆ ಅವನಿಗೂ ೪೦ ವಯಸ್ಸು ದಾಟುವುದಿಲ್ಲವೇ ? ಆತನಿಗೂ ಹಲವು ಕಾಯಿಲೆಗಳು ಮುಪ್ಪಡರುವ ಶರೀರಕ್ಕೆ ಬರುವುದಿಲ್ಲವೇ ? ಇಲ್ಲಾ ಸ್ವಾಮೀ, ಯೋಗಿಗಳು ಕಾಯಿಲೆಗಳನ್ನೆಲ್ಲ ಮೀರಿನಿಲ್ಲುವ ಅದ್ಬುತ ಚೈತನ್ಯ ಪಡೆದಿರುತ್ತಾರೆ! ನೀವು ಬಾಬಾ ರಾಮದೇವ್ ಅವರನ್ನೇ ಕೇಳಿ, ಅವರು ಅಷ್ಟು ಚೆನ್ನಾಗಿ ಹೊಟ್ಟೆ, ಕೈಕಾಲು ಎಲ್ಲವನ್ನೂ ತಿರುಚುತ್ತ ಯೋಗಮಾಡುತ್ತಾರಲ್ಲ ಅವರಿಗೆ ಯವುದಾದರೂ ಕಾಯಿಲೆ ಇಲ್ಲವೇ ? ಉತ್ತರ ನಾನೇ ಹೇಳುತ್ತೇನೆ-ಇಲ್ಲ! ಕಾಯಿಲೆ ಅವರ ಹತ್ತಿರ ಬರುವುದೂ ಇಲ್ಲ!

ಹೋಗಿ ಭಟ್ಟರೆ ನೀವೆಲ್ಲಾ ಆಗಹೋಗದ್ದನ್ನೇ ಹೇಳುತ್ತೀರಿ ಎನ್ನುವ ಮಟ್ಟಕ್ಕೆ ನೀವೀಗ ತಲ್ಪಿರುತ್ತೀರಿ. ಇದನ್ನೇ ನಾನೊಬ್ಬ ಯೋಗಿಯಾಗಿ ಹೇಳಿದರೆ ನನ್ನ ಶಿಷ್ಯಂದಿರಾಗಲು ತಯಾರಾಗುತ್ತೀರಿ! ಪ್ರತ್ಯಾಹಾರವನ್ನು ಅರಿಯಲು, ಅಳವಡಿಸಿಕೊಳ್ಳಲು ಕೇವಲ ಸನ್ಯಾಸಿಯೇ ಆಗಬೇಕೆಂದೇನಿಲ್ಲ, ಸಂಸಾರಿಗಳೂ ಅದನ್ನು ಸಾಧಿಸಬಹುದು. ಮಹಾಭಾರತದ ಮೂಲಕ ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ಇದನ್ನೇ ಲೋಕಾರ್ಪಣೆ ಮಾಡಿದ್ದಾನೆ. ಇದನ್ನು ಸರಿಯಾಗಿ ಅರಿತರೆ, ಅಳವಡಿಸಿಕೊಂಡರೆ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೊರಟು ಹೋಗುತ್ತದೆ! ಯಾವಾಗ ನಮ್ಮಲ್ಲಿ ಪಾಸಿಟಿವ್ ಎನರ್ಜಿ ನೆಲೆಸುತ್ತದೋ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಲು ಅದು ಕಾರಣವಾಗುತ್ತದೆ. ಯಾವಾಗ ಸಮಸ್ಯೆಗಳು ನಿವಾರಣೆಯಾಗುತ್ತವೆಯೋ ಆವಾಗ ನಮಗೆ ಜೀವನ ಹಗುರವಾಗುತ್ತದೆ, ನಿಜವಾದ ಆನಂದ ದೊರೆಯತೊಡಗುತ್ತದೆ. ಅದೇ ಸ್ವರ್ಗೀಯ ಆನಂದ! ಆ ಆನಂದವನ್ನು ಪಡೆಯ ಬಯಸುವವರು ನಿತ್ಯವೂ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಹಾಗೆ ಪಾಲಿಸುವುದರಿಂದ ಮಾತ್ರ ಆ ಆನಂದವನ್ನು ಪಡೆಯಲು ಸಾಧ್ಯವೇ ಹೊರತು ಅದು ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲ!

ಇದನ್ನೆಲ್ಲ ನೋಡಿಯೇ ನಮ್ಮ ಆದಿಶಂಕರರು ಹೇಳಿದರು :

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||

ಉಳಿದುದನ್ನು ಮುಂದಿನ ಭಾಗದಲ್ಲಿ ನೋಡೋಣ,

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾವೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ||

|| ಶ್ರೀ ಕೃಷ್ಣಾಯ ತುಭ್ಯಂ ನಮಃ ||

Friday, September 3, 2010

ಪ್ರತ್ಯಾಹಾರ

ಪ್ರತ್ಯಾಹಾರ

[ ಅನೇಕ ಹಿರಿಯ ಮಿತ್ರರು ಪ್ರತ್ಯಾಹಾರದ ಬಗ್ಗೆ ಬರೆಯಲು ಕೇಳಿದ್ದಾರೆ, ಅದರ ಸ್ಥೂಲರೂಪವನ್ನು ಜಗದಮಿತ್ರ ನಿಮಗೆ ಇಲ್ಲಿ ಕೊಟ್ಟಿದ್ದಾನೆ. ಸ್ನೇಹಿತರೇ ಶ್ರೀಕೃಷ್ಣನ ಜನ್ಮ ದಿನದ ಸಮಯದ ಸುತ್ತ ಬರೆದ ಕೃತಿಗಳನ್ನು ಓದಿ, ಹಲವಾರು ಪನವಾರ ಸ್ವೀಕರಿಸಿದಿರಿ, ಈಗ ಪರಮಾತ್ಮ ಶ್ರೀಕೃಷ್ಣ ಜಗದ್ಗುರುವಾಗಿ ಬೋಧಿಸಿದ ಗೀತೆಯಲ್ಲಿ ಆತನೇ ಹೇಳಿದ ಪ್ರತ್ಯಾಹಾರದ ಬಗ್ಗೆ ಸ್ವಲ್ಪ ಅರಿಯೋಣ ಅಲ್ಲವೇ ? ಪ್ರತ್ಯಾಹಾರ ಎಂಬುದರ ಬಗ್ಗೆ ವಿಸ್ತೃತವಾಗಿ ಓದಲಿದ್ದೀರಿ ಮುಂದಿನ ಲೇಖನದಲ್ಲಿ,ಸದ್ಯಕ್ಕೆ ಈ ಕಾವ್ಯರೂಪ ನೋಡೋಣ ]


ಹತ್ತುಸಾವಿರ ಕೋಟಿ ನಿನ್ನೆದುರು ಬಿದ್ದರೂ
ಎತ್ತಿಡಲು ಬೇಡ ನಿನ್ನದು ಅಲ್ಲದಿರಲು
ಮುತ್ತು ಮಾಣಿಕವು ಮತ್ತೆರಡು ನಿನ್ ಕಣ್ಸೆಳೆಯೆ
ಕುತ್ತು ಅದ ನೀ ಬಯಸೆ | ಜಗದಮಿತ್ರ

ಉತ್ತಿ ಬೀಜವ ಬಿತ್ತು ಪರಮಾತ್ಮನಂ ನೆನೆದು
ಬಿತ್ತ ಬೀಜಕೆ ಫಲವ ನೀ ಗುಣಿಸಬೇಡ
ಅತ್ತು ಕರೆದರೂ ಬಹದು ಲಭ್ಯ ನಿನಗಿಲ್ಲದಿರೆ
ಮತ್ತೆ ಬೇಸರವೇಕೆ ? ಜಗದಮಿತ್ರ

ನುಚ್ಚಿನುಂಡೆಯ ರಾಶಿ ಪಂಚಭಕ್ಷ್ಯಗಳಿಹವು
ಮೆಚ್ಚಿ ನಿನ್ನಿರವರಿತು ತಿನ್ನಲ್ಪವದರ
ಹುಚ್ಚೆದ್ದು ಕುಣಿದು ತನಗೇ ಎಂಬ ಮನವನ್ನು
ಬೆಚ್ಚಿಬೀಳಿಸು ಬೈದು | ಜಗದಮಿತ್ರ

ಯಾರನ್ನೂ ನೆಚ್ಚಿರದೆ ಸ್ವಾವಲಂಬನೆ ನಡೆಸು
ದಾರಿ ಹೋಕನು ನೀನು ನೆನೆಪು ನಿನಗಿರಲಿ
ಊರು ದೊಡ್ಡದೇ ಇರಲಿ ಕೇರಿ ಸಣ್ಣದೇ ಇರಲಿ
ಏರು ಮೇಲ್ಪಂಕ್ತಿಯಲಿ | ಜಗದಮಿತ್ರ

ನೀನೇನೂ ತಂದಿಲ್ಲ ಭುವಿಗೆ ಬರುವಾದಿನದಿ
ಏನೇನೋ ಕೊಂಡೊಯ್ಯಲಾರೆ ಹೊರಡುವೊಲು
ತಾನು ತನ್ನವರೆಂಬ ವ್ಯಾಮೋಹಕಿರಲಿ ಮಿತಿ
ದೀನ ನೀ ತಿಳಿದುನಡೆ | ಜಗದಮಿತ್ರ

ಇದ್ದಿಹುದ ಅನುಭವಿಸು ಇರುವನಕ ಪಡೆದುದನು
ಎದ್ದುಹೋದುದ ಬಯಸಿ ಕರುಬುವುದು ತರವೇ ?
ಉದ್ದುದ್ದ ಪೋಣಿಸುತ ಅತಿಯಾದ ಬಯಕೆಗಳ
ಒದ್ದು ಓಡಿಸು ಹೊರಗೆ | ಜಗದಮಿತ್ರ

ನೀನು ನೀನೇ ಹೊರತು ಅವನಲ್ಲ ವೆಂಬುದನು
ಸಾನುರಾಗದಿ ಮನಕೆ ನೀ ಒತ್ತಿ ಹೇಳು
ಮಾನವನು ನೀನಾಗು ಓದಿ ಜ್ಞಾನವಪಡೆದು
ಹಾನಿ ತಟ್ಟದು ನಿನಗೆ | ಜಗದಮಿತ್ರ

ಅದು ಸಿಗದು ಇದು ಸಿಗದು ಎಂಬ ಹಳವಳಿಕೆಯಲಿ
ಕುದಿಕುದಿದು ಕಂಡಲ್ಲಿ ಅಂಡಲೆಯಬೇಡ
ಒದಗುವುದು ನಿನಗೆಲ್ಲ ಭಾಗ್ಯ ಬರೆದಿರಲಲ್ಲಿ
ಹದಗೊಳಿಸು ನಿನ್ನಮನ | ಜಗದಮಿತ್ರ

Thursday, September 2, 2010

" ಕೃಷ್ಣಾ ಎನಬಾರದೇ ??"

ಚಿತ್ರಗಳ ಕೃಪೆ :ಅಂತರ್ಜಾಲ

" ಕೃಷ್ಣಾ ಎನಬಾರದೇ ??"
[ಕೃಷ್ಣಾಷ್ಟಮಿಯ ಸಡಗರದಲ್ಲಿ ಇದು ಇಂದಿನ ಕೃಷ್ಣ ಜಯಂತಿಯ ವಿಶೇಷ!]



ಚಿತ್ರಾನ್ನ
[ನಿನ್ನೆಯ ಉಪವಾಸದಿಂದ ಹಾಗೇ ಉಳಿದಿರುವ ಅನ್ನಕ್ಕೆ ಒಗ್ಗರಣೆ ಹಾಕಿದ್ದು!]


ಅಮ್ಮ ಗುಮ್ಮನ ಕರೆದಾಗ
ಶಾಲೆಯ ಮಾಸ್ತರು ಬೈದಾಗ
ಮನೆಯಲ್ಲಿ ಅಪ್ಪ ಹೊಡೆದಾಗ
ಚಿಕ್ಕಪ್ಪ ಕೋಪಿಸ್ಕೊಂಡು ಬೈದಾಗ
ಆಚೆಮನೆ ಸೀತಾರಾಂಭಟ್ರು
ನನಗಿಂತ ಮುಂದೆ ರಸ್ತೆಯಲ್ಲಿ ನಡೆಯುತ್ತಿದ್ದವರು
ಬುರ್ರೆನಿಸಿ ಬಾಯ್ತುಂಬ ಉಗುಳಿದ
ಎಲೆಯಡಿಕೆಯ ಕಾರಂಜಿಯ ತುಂತುರು ಹನಿಗಳು
ತಂದ ರಂಗು ಮೈಮೇಲೆ ರಂಗೋಲಿ ಬರೆದಾಗ
ಸಣ್ಣವನಿದ್ದೆ ತಿಳಿಯುತ್ತಿರಲಿಲ್ಲ !
ನಾನಂದು ಕೊಂಡೆ ಇವರೆಲ್ಲಾ ನನ್ನ ವಿರೋಧಿಗಳು !

ಕ್ಲಾಸಿನ ಹುಡುಗ ಸುಬ್ರಹ್ಮಣ್ಯ ದೋಸ್ತಿಬಿಟ್ಟಾಗ
ಸರಕಾರೀ ರೇಷನ್ ಅಂಗಡಿಯವ
ಸಮಯಕ್ಕೆ ಅಕ್ಕಿ-ಸಕ್ಕರೆ-ಸೀಮೆ ಎಣ್ಣೆ ಕೊಡದಾಗ
ದೇವಕಮ್ಮ ಗಂಡನ ಕಿವಿ ಊದಿ
ಯುವಕ ಸಂಘಕ್ಕೆ ವಂತಿಗೆ ನಿರಾಕರಿಸಿದಾಗ
ಸಣ್ಣಗೆ ಬಳುಕುವ ಕೊನೇ ಮನೆ ರಾಧೆ
ನಾ ದೊಡ್ಡವನಾದೆನೆಂದು ಸಂಗವನ್ನೇ ತ್ಯಜಿಸಿದಾಗ
ನಾರಣ ನಮ್ಮ ತೋಟದಲ್ಲಿ ಹಸನಾಗಿದ್ದ
ಹೊಸ ಬಾಳೆಮರದ ಎಲೆಯನ್ನು ಬಗ್ಗಿಸಿ ಕೊಯ್ದಾಗ
ಕೆಲಸಕ್ಕೆ ಬಂದ ಕುಪ್ಪ ಅಪ್ಪನನ್ನು ಹೇಳ್ದೇ ಕೇಳ್ದೇ
ಸಮಯಕ್ಕೂ ಮುಂಚೆ ಹೊತ್ತಾಯಿತೆಂದು ಹಾರೋಡಿ ಹೋದಾಗ
ಇನ್ನೂ ಪೂರ್ತಿ ಹದಿವಯಸ್ಸಿಗೆ ಬಂದಿರಲಿಲ್ಲ !
ನಾನೆಂದು ಕೊಂಡೆ ಇವರೆಲ್ಲಾ ನನ್ನ ಹಿತಶತ್ರುಗಳು !

ಮಂಚ್ಮಾಣಿ ಇಂಗ್ಲೀಷು ಕಲಿಯುತ್ತ
ನಮ್ಮ ಜೊತೆ ಬೆರೆಯದೇ ತಮ್ಮ ಗುಂಪನ್ನೇ ಬೇರೆ ಮಾಡಿಕೊಂಡಾಗ
ಸಂಚಿಹೊನ್ನಮ್ಮನಂಥ ಸುಧಾ ಗೆಳೆಯ ಸದಾನಿಗೆ
ವಿನಾಕಾರಣ ಡೈವೋರ್ಸ್ ಕೊಟ್ಟಾಗ
ಅಕ್ಕ-ತಂಗಿಯರನ್ನು ಸತಾಯಿಸುತ್ತ ಅವರ ದುಡಿಮೆಯಲ್ಲಿ
ಉಂಡು ದುರ್ದುಂಡಿಯಾಗಿ ಬೆಳೆದ ಮಂಜುವನ್ನು ನೋಡಿದಾಗ
ಏನೂ ಅರಿಯದ ಮುಗ್ಧ ನವೀನನನ್ನು
ಏನೋ ಕಾರಣದಿಂದ ಪೋಲೀಸರು ಕರೆದೊಯ್ದಾಗ
ಪರಿಹಾರ ಕೊಡಿಸುವ ನೆಪದಲ್ಲಿ ಸಣ್ಣೀರಿಯ
ಮಗಳನ್ನು ಬುಟ್ಟಿಗೆ ಹಾಕಿಕೊಂಡ ಗಾಜು
ಅವಳನ್ನು ಬಸಿರುಮಾಡಿ ಕೈಕೊಟ್ಟು ಕೈತೊಳೆದುಕೊಂಡಾಗ
ಸ್ವಲ್ಪ ವಯಸ್ಸಿಗೆ ಕಾಲಿಡುತ್ತಿದ್ದೆನಲ್ಲ !
ನಾನಂದುಕೊಂಡೆ ಇವರೆಲ್ಲಾ ದುಶ್ಯಾಸನ ಕುಲದವರು!

ವೃದ್ಧ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ
ಕಳಿಸಿದ ಮಗ-ಸೊಸೆ ಜಗನ್-ಮೋಹಿನಿಯರನ್ನು ಕಂಡಾಗ
ಪಾಪಿಜನ ಬಿಳಿಯ ದನವನ್ನು ಕದ್ದೊಯ್ದು
ಕತ್ತರಿಸಿ ತಿಂದ ಕಥೆಕೇಳಿದಾಗ
ಆಸರೆ ನೀಡುವ ರಾಜಕಾರಣಿಗಳು
ಪರಿಹಾರ ಕೊಡುವ ಬದಲು ಸಂಗ್ರಹಿಸಿದ
ನಿಧಿಯನ್ನೇ ಕದ್ದು ತಿಂದಾಗ
ಪ್ರಾಮಾಣಿಕರಾದ ಧಣಿಗಳು ಹಾಡಹಗಲೇ
ಗಣಿಯನ್ನು ಮುಕುರಿಕೊಂಡು ತಿಂದು ತೇಗುವಾಗ
ವರದಕ್ಷಿಣೆ ಹೆಚ್ಚಿಗೆ ತಾರದ ನವ ವಧುವನ್ನು
ಅತ್ತೆ-ಮಾವ-ಗಂಡ ಕತ್ತು ಹಿಚುಕಿ ಸಾಯಿಸಿದಾಗ
ವಯಸ್ಕನಾದೆ ಗೊತ್ತಾಗಹತ್ತಿತಲ್ಲ !
ನಾನಂದುಕೊಂಡೆ ಇವರೆಲ್ಲ ಕಲಿಯುಗದ ರಕ್ಕಸರು !

ಕಲಸುಮೇಲೋಗರವಾದ ಈ ಸಮಾಜದಲ್ಲಿ
ಕುಡುಕನ ಕಣ್ಣಿಗೆ ಎರಡೆರಡು ಕಾಣುವಂತೇ
ತುಮುಲಗಳು ಗೊಂದಲಗಳು ವೈಷಮ್ಯಗಳು
ಹಳಸಿದ ಬಾಂಧವ್ಯಗಳು ಕಮರಿದ ಚೈತನ್ಯಗಳು
ಮಧ್ಯೆ ಮಧ್ಯೆ ಕಾಮುಕ ಸ್ವಾಮಿಗಳು
ಒಳಗೊಂದು ಹೊರಗೊಂದು ಎಂದು ಪೇಪರಿನಲ್ಲಿ
ಹೇಳಿಕೆ ಕೊಡುವ ಸನ್ಯಾಸಿಗಳು
ಆ ಸ್ಕೀಮು ಈ ಲಾಭ ಎನ್ನುವ ಬ್ರೋಕರುಗಳು
ಜೀವದ ಬಗ್ಗೆ ಭಯ ಹುಟ್ಟಿಸಿ ಆಧರಿಸಿದವರ
ಸಲುವಾಗಿ ಇನ್ವೆಸ್ಟ್ ಮಾಡಿರೆನ್ನುವ ವಿಮೆಕಂಪನಿಗಳು
ಅಯ್ಯೋ ಶ್ರೀಕೃಷ್ಣಾ ನಿನ್ನ ಅಗತ್ಯ ಇಂದಿಗೂ ಇತ್ತು ನಮಗೆ
ನೀ ಕಲ್ಕಿಯಾಗುವ ಬದಲಿಗೆ !
---------


ಉಂಡೆ [ಬಾಯಲ್ಲಿ ತುಂಬಿಕೊಳ್ಳದೇ ಕೆನ್ನೆಯನ್ನು ಊದಿಸಿದ್ದು]

ಕಾಲೇಜಿಗೆ ಹೋಗುವಾಗ ಕೊಂಕಣಿ ಹುಡುಗಿಯ ಹಿಂದೆ ಇಬ್ಬರು ಕೊಂಕಣಿ ಹುಡುಗರು ನಡೆದುಕೊಂಡು ಹೋಗುತ್ತಿದ್ದರು. ಒಬ್ಬಾತನಿಗೆ ಅಕ್ಷರಗಳ ಸ್ಪಷ್ಟ ಉಚ್ಚಾರ ಆಗುತ್ತಿರಲಿಲ್ಲ. ಜೊತೆಗಿದ್ದವ ಜೋರಾಗಿ ನಡೆದು ಆ ಹುಡುಗಿಯನ್ನೂ ದಾಟಿ ಮುನ್ನಡೆದಾಗ ಒಬ್ಬನೇ ನಡೆಯಲು ಬೇಜಾರಾಗಿ ಹಿಂದಿದ್ದ ಇನ್ನೊಬ್ಬ ಕೊಂಕಣಿಯಲ್ಲಿ " ಗಾಬಗೇ " ಅಂದ. [ಕೊಂಕಣಿಯಲ್ಲಿ ’ರಾಬರೇ’ ಅಂದರೆ ’ನಿಲ್ಲೋ’ ಅಂತರ್ಥ. ಈತನಿಗೆ ಹೇಳುವಾಗ ರ ಕಾರ ಉಚ್ಚಾರವಾಗದ ಕಾರಣ ಗ ಕಾರವಾಗಿ ಪರಿಣಮಿಸಿತ್ತು. ’ರಾಬಗೇ’ ಎಂದರೆ ’ನಿಲ್ಲೇ’ ಅಂತರ್ಥ! ಇಲ್ಲಿ ಗಾಬಗೇ ರಾಬಗೇ ಎಂಬಂತೇ ಹುಡುಗಿಗೆ ಕೇಳಿಸಿತ್ತು ] ಮರುಕ್ಷಣದಲ್ಲಿ ಕೆನ್ನೆ ಕೆಂಪಾಗಿತ್ತು-ಎದುರಿಗೆ ಹೋಗುತ್ತಿರುವ ಕೊಂಕಣಿ ಭಾಷೆಯ ಹುಡುಗಿ ಅದನ್ನು ತನಗೇ ಉದ್ದೇಶ ಪೂರ್ವಕ ಹೇಳಿದ್ದೆಂದು ಭಾವಿಸಿ ನಿಂತಲ್ಲೇ ಉಂಡೆ ತಿನ್ನಿಸಿದ್ದಳು!

---------



ಮೊಸರನ್ನ [’ಕಣ್ಣು’ ಕೊಡು ಶ್ರೀಕೃಷ್ಣ]

ನಿನ್ನ ವ್ಯಕ್ತಿತ್ವವನು
ನನ್ನೊಳಗೆ ತುಸು ಮಿಳಿಸಿ
ಕನ್ನಯ್ಯ ಕೃಷ್ಣ ಕಾಯುವುದೆನ್ನನು
ಘನ್ನ ಮಹಿಮನೆ ನಿತ್ಯ
ನನ್ನಿನುಡಿಯುವ ನನಗೆ
ಇನ್ನೊಮ್ಮೆ ದಯೆತೋರಿ ದರುಶನವನು ||ಪ ||

ಮುನ್ನ ಮಾಡಿದ ಕರ್ಮ
ಎನ್ನ ಬಿಡದೆಂತೆಂಬ
ಮುನ್ನುಡಿಯ ಬರೆದೆ ನೀನು
ಪನ್ನಗ ಶಯನನೇ
ಪುನ್ನಾಗ ಕರವೀರ
ಸನ್ನಡೆತಯಲಿ ಕೊಡುವೆನು || ೧ ||

ಅಣ್ಣಯ್ಯ ಶ್ರೀಹರಿಯೇ
ಮಣ್ಣ ಗುಡ್ಡಕೇ ಹೊತ್ತೆ
ಕಣ್ಣಿರದ ಶಿಶುವು ನಾನು
ಹಣ್ಣಾಯ್ತು ಮನವಿಂದು
ಸಣ್ಣದೇ ಈ ಜಗವು ?
’ಕಣ್ಣು’ ಕೊಡು ನೋಡಲದನು || ೨ ||
---------


ಬೆಣ್ಣೆ [ಮಕ್ಕಳ ಫಲ]

’ಶ್ರೀ ಸಂತಾನ ಗೋಪಾಲ ಕೃಷ್ಣ’ ಮಂತ್ರವನ್ನು ಶುದ್ಧಮನದಿಂದ ಸಂಕಲ್ಪಯುಕ್ತವಾಗಿ ಪುರೋಹಿತರಿಂದ ಜಪಿಸುವಕಾರ್ಯ ನಡೆಸಿದರೆ ಮಕ್ಕಳನ್ನು ಇನ್ನೂಪಡೆಯದವರು ಮಕ್ಕಳನ್ನು ಪಡೆಯುವುದು ಸಾಧ್ಯ. ಇದು ವಿಜ್ಞಾನಕ್ಕೆ ಕಾಣಸಿಗದ ಸುಜ್ಞಾನ! ಮೈಸೂರಿಗೆ ಹತ್ತಿರದಲ್ಲಿ ಯಾರು ಏನನ್ನೇ ಬೇಡಿದ್ದನ್ನು ಕೊಡುವ [ಅವರವರ ಹುಚ್ಚಿಗೆ ತಕ್ಕಂತೇ ಫಲಕೊಡುವ] ಶ್ರೀಗೋಪಾಲಕೃಷ್ಣನಿದ್ದಾನೆ--ಆತನಿಗೆ ’ಹುಚ್ಚೂರಾಯ’ನೆಂದು ಕರೆಯುತ್ತಾರೆ,ಅಲ್ಲಿಯೂ ಕೂಡ ಪ್ರಾರ್ಥಿಸಿಬಹುದು.

Wednesday, September 1, 2010

ಬೆಣ್ಣೆ ಕದ್ದ ನಮ್ಮಾ ಕೃಷ್ಣ ಬೆಣ್ಣೆ ಕದ್ದನಮ್ಮಾ !!

ಚಿತ್ರಗಳ ಕೃಪೆ : ಅಂತರ್ಜಾಲ

ಬೆಣ್ಣೆ
ಕದ್ದ ನಮ್ಮಾ ಕೃಷ್ಣ ಬೆಣ್ಣೆ ಕದ್ದನಮ್ಮಾ!!


ಕಿಲಾಡಿ ಕಿಟ್ಟ ಎನ್ನುವುದು ನಾವು ಸಾಮಾನ್ಯವಾಗಿ ಮಕ್ಕಳಿಗೆ ಬಳಸುವ ಮಾತು. ಇದು ಹುಟ್ಟಿದ್ದೇ ಶ್ರೀಕೃಷ್ಣ ಜನಿಸಿದ ಮೇಲೆ. ಚಂದ್ರವಂಶದವರಾಗಿಯೂ, ಸ್ವತಃ ಸೋದರಮಾವ ರಾಜನಾಗಿದ್ದರೂ ಅದೇ ಸೋದರಮಾವನ ದೆಸೆಯಿಂದ ಕೃಷ್ಣ ಹುಟ್ಟಿದ್ದು ಸೆರೆಮನೆಯಲ್ಲಿ;ಗಾಢಾಂಧಕಾರದ ಗೂಡಿನಲ್ಲಿ. ಹಡೆಯುವ ಪ್ರತೀ ಮಗುವನ್ನೂ ಮಾವ ಕಂಸ ಕಿತ್ತೆಸೆದು ಸಾಯಿಸುತ್ತಿದ್ದ. ಏಳನೆಯ ಮಗು ಮಹಮ್ಮಾಯಿಯಾಗಿ ಆಗಸದಲ್ಲಿ ಹಾರಿ" ಎಲವೋ ಕಂಸಾ ನಿನ್ನ ಕಾಲ ಸನ್ನಿಹಿತವಾಗಿದೆ, ಮುಂದೆ ಜನಿಸುವ ಎಂಟನೆಯ ಶಿಶುವಿನಿಂದ ನಿನ್ನ ಹತ್ಯೆ ನಡೆಯುತ್ತದೆ" ಎಂದು ಸಾರಿ ಅದೃಶ್ಯವಾಯಿತು. ಇದೇ ಕಾರಣವಾಗಿ ದೇವಕಿ-ವಸುದೇವರಿಗೆ ಸೆರೆವಾಸ. ಯಾರ ಸಹಾಯವೂ ಇಲ್ಲದೇ ಶಾರೀರಿಕ ಮತ್ತು ಮಾನಸಿಕ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳಲು ಯಾರೂ ತಮ್ಮವರೆಂಬವರು ಸಿಗದ ದೀನ ಸ್ಥಿತಿಯಲ್ಲಿ, ಹೆರಿಗೆಯ ನೋವನ್ನೂ ಮರೆಸಿ ಜನಿಸಿದ ಚಂದ್ರವಂಶದ ಸೂರ್ಯ ಶ್ರೀಕೃಷ್ಣ! ಹುಟ್ಟಿದ ಘಳಿಗೆಯಿಂದಲೇ ಅಸಂಖ್ಯ ಪವಾಡ ನಡೆಸಿದ. ತಂದೆ ತನ್ನನ್ನು ಬುಟ್ಟಿಯಲ್ಲಿ ಹೊತ್ತು ನಡೆವಾಗ ಸುಮ್ಮನೇ ಹೊರಳಿ ಯಮುನೆಗೆ ಒಂದು ಶಾಕ್ ಕೊಟ್ಟ ನೋಡಿ-ಯಮುನೆ ಅರ್ಧಭಾಗವಾಗಿ ದಾರಿ ಬಿಟ್ಟಳು ಬಡಪಾಯಿ ವಸುದೇವನಿಗೆ. ಬುಟ್ಟಿಯಲ್ಲಿದ್ದ ವಾಸುದೇವ ನಕ್ಕ! ಸಾಕಿದ ತಾಯಿ ಯಶೋದೆಯಿಂದ ಲಾಲಿಸಲ್ಪಟ್ಟ ಬಹುಮುದ್ದು ಮಗು ಯಶೋದಾಕೃಷ್ಣ. ಗೋಕುಲ ಸೇರಿದ ಗೋಪಾಲನ ಬಾಲಲೀಲಾ ವಿನೋದಗಳು ಒಂದೆರಡೇ ? ಶಿಶುವಾಗಿರುವಾಗಲೇ ಪೂತನಿಯ ಹಾಲು ಕುಡಿದು ಕಡಬಾಯಲ್ಲಿ ಅದನ್ನು ಅಲ್ಲೇ ಸಣ್ಣಗೆ ಕಣ್ಣುಮಡಿದು ನಗುತ್ತ ಹರಿಬಿಟ್ಟವನನ್ನು ಹೇಳುವುದಾದರೆ ತುಂಟತನವೇ ಮೈವೆತ್ತ ಮಂಗಳಮೂರ್ತಿ ನಮ್ಮ ಬೆಣ್ಣೆಕಳ್ಳ! ಬೆಳೆದ ಗೋವಳ ತನ್ನ ಸಾನುರಾಗದ ಕೊಳಲ ಹರಿಯಬಿಟ್ಟಾಗ ಸೋಲದ ಗೋವುಗಳೂ ಮನುಜರೂ ಇರಲಿಲ್ಲ; ಇಂಪಾದ ವೇಣುವನ್ನು ಊದುತ್ತ ಮರದ ತಂಪಿನಲಿ ಕುಳಿತ ವೇಣುಗೋಪಾಲ ನುಡಿಸದ ರಾಗವಿಲ್ಲ!

ಬೆಳೆಯುತ್ತ ಯೌವ್ವನ ಪ್ರಾಪ್ತವಾಯಿತಲ್ಲ! ನಮನಿಮಗೆಲ್ಲ ಇರುವಂತೇ ಹುಡುಗಿಯರ ಮೇಲೆ ಕಣ್ಣು! ಅದು ಆತನ ತಪ್ಪಲ್ಲ ಆತನ ವಯೋಮಾನದ ತಪ್ಪು;ಮೂಲದಲ್ಲಿ ಎಲ್ಲದರ ಸೃಷ್ಟಿಕರ್ತನೇ ಆತನಾದರೂ ಇಲ್ಲಿ ಅದೇ ಸೃಷ್ಟಿಯ ಮಗುವಾಗಿ ಎಲ್ಲಾ ಮನುಜರಂತೇ ಕಷ್ಟ-ಸುಖವನ್ನು ಅನುಭವಿಸಿ ತೋರಿಸುತ್ತಿದ್ದ. ಅದಕ್ಕಾಗಿಯೇ ತನ್ನ ಮೂಲರೂಪವನ್ನು ಮರೆತು ಇಲ್ಲಿ ಕೇವಲ ಕೃಷ್ಣನಾಗಿಯೇ ಇರಲು ಬಯಸಿದ. ಹುಡುಗಿಯರಿಗೂ ಅಷ್ಟೇ: ಒಳಗೊಳಗೇ ತಮ್ಮ ಹೀರೋ ವನ್ನು ಬಯಸುವವರು ಅವರು. ಆತನ ಇರುವಿಕೆಯ ಪ್ರಭಾವವೇ ಹಾಗಿತ್ತು. ಆತ ಬಾರದಿದ್ದರೆ ಬದುಕು ನೀರಸವೆನಿಸುತ್ತಿತ್ತು. ಹೀಗಾಗಿ ಹೊರಗೆ ತೋರಿಕೆಗೆ ಬೆಣ್ಣೆಕಳ್ಳ, ಹೆಂಗಸರ ಮಳ್ಳ ಅಂತೆಲ್ಲಾ ಕರೆದರೂ ಆತ ತಮ್ಮ ಜೊತೆಗೇ ಇರಲಿ ಎಂಬುದು ಜನರೆಲ್ಲರ ’ಒಳ ಅಂಬೋಣ’;ಒಳತೋಟಿ, ಆತನನ್ನು ಬಿಟ್ಟು ಇನ್ನಿರಲಾರದ ಅಸಾಧ್ಯ ಆತ್ಮಾನುಸಂಧಾನ! ಈತನ ಪ್ರೀತಿ ಸ್ನೇಹಕ್ಕೆ ಗಂಟುಬಿದ್ದವರು ಬರೇ ಮಕ್ಕಳಲ್ಲ, ಹುಡುಗಿಯರಲ್ಲ, ಇಡೀ ಜನಸಮುದಾಯ. ಕಂಡವರನ್ನೆಲ್ಲಾ ತನ್ನ ಆಪ್ತವಲಯಕ್ಕೆ ಕಾಂತದಂತೆ ಎಳೆಯುತ್ತಿದ್ದ ಆತನ ವರ್ಚಸ್ಸು ಬಹಳ ಅಪರೂಪದ್ದು.


ನಡುನಡುವೆ ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಕಣಿಸಿಕೊಳ್ಳ ಹತ್ತಿದ ಈ ಕಪಟನಾಟಕ ರಂಗ ಆಡಿದ ಗಾರುಡೀ ವಿದ್ಯೆ ಕಮ್ಮಿಯದೇನಲ್ಲ. ಸುಧಾಮನ ಮಿತ್ರತ್ವಕ್ಕೂ ಕೌರವನ ಶತ್ರುತ್ವಕ್ಕೂ ಎಲ್ಲೆಲ್ಲಿ ಹೇಗೇಗೆ ನಡೆದುಕೊಳ್ಳಬೇಕೆಂದು ತೋರಿಸಿದ ಈತ ಬಹುದೊಡ್ಡ ಮ್ಯಾನೇಜಮೆಂಟ್ ಗುರು! ಆತ ಗೆಳೆಯನೆಂದರು ಕೆಲವರು, ಆತ ಚೋರನೆಂದರು ಹಲವರು, ಆತ ನಮ್ಮಾತನೇ ಎಂದರು ಇನ್ನೂ ಹಲವರು, ಆತ ಗೋವಳರವ ಎಂದು ಎದೆತಟ್ಟಿಕೊಂಡರು ಗೋಪಬಾಲರು, ಆತನ ಅಂಗಸೌಷ್ಠವ ನೋಡಿ ಸೋತರು ಗೋಪಿಕೆಯರು, ಆತನ ಬಾಲ್ಯವನ್ನು ನೆನೆದರು ಕುಚೇಲನಂಥವರು, ಆತನ ಪಾದಧೂಳಿಯ ಬಯಸಿದರು ವಿದುರನಂಥವರು, ಆತನ ಸಂಧಾನವನ್ನು ಅನುಮೋದಿಸಿದರು ಪಾಂಡುಕುವರರಂಥವರು, ಆತನ ಪೂರ್ಣರೂಪದ ಸ್ವಾನುಭವ ಬಯಸಿದರು ಭೀಷ್ಮನಂಥವರು, ಆತನ ಗೀತೋಪದೇಶವನ್ನು ಬಯಸಿದರೂ ಮೂರುಲೋಕದ ಗಂಡ-ಗಾಂಡೀವಿ ಎಂದೆನಿಸಿಯೂ ಹಳಹಳಿಸಿ ಹುಳ್ಳಗಾದವರು ಮತ್ತು ದಿವ್ಯಚಕ್ಷು ಅವನಿಂದಲೇ ಪಡೆದು ಆತನ ಸಾಕ್ಷಾತ್ಕಾರ ಪಡೆದವರು, ಪಡೆಯ ಬಯಸಿದವರು ಅರ್ಜುನನಂಥವರು!


ಅಂತೂ ಆತ ಎಲ್ಲರಿಗೂ ಒಂದಿಲ್ಲೊಂದು ಕಾರಣದಿಂದ ಬೇಕಾಗಿದ್ದ! ಸಹಿಸಲಾರೆವೆಂದು ಹೊಟ್ಟೆಕಿಚ್ಚುಪಡುವವರೂ ವಹಿಸಿಕೊಂಡು ಮಾತನಾಡುವುದು ಆತನಿಗಿದ್ದ ಗರಿಮೆ! ಯಾರನ್ನೂ ಕಡೆಗಣಿಸದೇ ಎಲ್ಲರ ಮಧ್ಯೆ ತಾನೇನೂ ಅಲ್ಲವೇನೋ ಎನ್ನುವಂತೇ ಜೀವಿಸಿ, ಕಮಲಪತ್ರದ ಮೇಲಿನ ನೀರ ಹನಿಯಂತೆ ಯಾವುದನ್ನೂ ಅಂಟಿಸಿಕೊಳ್ಳದೇ ಬದುಕಿದ ಬಹುಚಾಣಾಕ್ಷ ಮನುಷ್ಯ ಶ್ರೀಕೃಷ್ಣ. ಕಷ್ಟವನ್ನು ಬಾಯಾರೆ ಹೇಳಿಕೊಳ್ಳಲಾಗದ ಸುಧಾಮನ ಹರಕು ಪಂಚೆಯ ಹಿಡಿಯವಲಕ್ಕಿಯನ್ನೇ ಉಡಿತುಂಬ ಬೇಡಿ ತಿಂದು ಪರೋಕ್ಷ ಬಾಲ್ಯ ಸ್ನೇಹಿತನ ಬಡತನದ ಬವಣೆಯನ್ನೆಲ್ಲ ತಿಂದುಮುಗಿಸಿ, ಆತನಿಗೆ ಅಪ್ರತಿಮವಾದ ಬಂಗಲೆಯನ್ನೂ ಸ್ವರ್ಣಾಭರಣಗಳೇ ಮೊದಲಾದ ಅನರ್ಘ್ಯರತ್ನಗಳನ್ನೂ, ಬದುಕು ಪೂರ್ತಿ ಸಾಕಾಗುವ ಅಷ್ಟೈಶ್ವರ್ಯಗಳನ್ನೂ ದಯಪಾಲಿಸಿದ ಸುಮಧುರ ಸ್ನೇಹಜೀವಿ ಶ್ರೀಕೃಷ್ಣ. ರಾಧೆ-ರುಕ್ಮಿಣಿ ಮೊದಲಾದ ಹಲವು ಹೆಂಗಳೆಯರಲ್ಲಿ ಯಾರಿಗೂ ಭಾರವಾಗದಂತೇ, ಯಾರಿಗೂ ಅತಿಸುಲಭವಾಗದಂತೇ ಒಂದೇ ಹದದಲ್ಲಿ ತನ್ನ ಭಾವಮಿಳಿತವನ್ನು ಮೇಳೈಸಿದ ಮಹಾನ್ ಗಂಡ ಶ್ರೀಕೃಷ್ಣ. ಮಗುದೊಮ್ಮೆ ಭಾವತೀವ್ರತೆಯಿಂದ ಕರುಣಾರಸಪೂರಿತನಾಗಿ ಮಡದಿ ಸತ್ಯಭಾಮೆಗೆ ದೇವಲೋಕದ ಪಾರಿಜಾತವನ್ನೇ ಧರೆಗಿಳಿಸಿ ತಂದ ಉತ್ಕೃಷ್ಟ ಲವರ್ ಪ್ರೇಮಕೃಷ್ಣ. ಶ್ರೀರಾಮನ ಅನೇಕ ಅಂಶಗಳನ್ನು ತನ್ನಲ್ಲಿ ಹುದುಗಿಸಿಕೊಂಡೂ ರಾಮನಾಗದೇ ತನ್ನತನವನ್ನೇ ಬದುಕಿ ಈ ರೀತಿಯೇ ಬೇರೆ ಎಂದು ತೋರಿದ ಅಪ್ಪಟ ಯಾದವಕುಲತಿಲಕ ’ರಾಮಕೃಷ್ಣ’!



ಹೀಗೇ ಒಂದೇ ಎರಡೇ ವ್ಯಾಖ್ಯಾನಿಸಿದರೆ ಜಗವನ್ನೇ ತನ್ನ ಉಡಿಯಲ್ಲಿ ತುಂಬಿ ತಾಯಿಗೇ ಬಾಯಗಲಿಸಿ ಮೂರ್ಜಗವನ್ನು ತೋರಿಸಿದ್ದನ್ನು ನೆನೆಯಬೇಕಾಗುತ್ತದೆ! ಇದು ಮುಗಿಯದ ವಿಷಯ. ಸದ್ಯಕ್ಕೆ ಸಾಕು ಎಂದು ಇಲ್ಲಿಗೆ ಅಲ್ಪ ವಿರಾಮ ಹಾಡುತ್ತೇನೆ. ಮತ್ತೆ ಕೃಷ್ಣನ ಬಗ್ಗೆ ಹೃದಯದ ಕರೆ ಬಂದಾಗ ಹೀಗೇ ಬದುಕಿನಾದ್ಯಂತ ಅಗಾಗ ಆಗಾಗ ಬರೆಯುತ್ತಲೇ ಇರುತ್ತೇನೆ, ಯಾಕೆಂದರೆ ’ಆತ ನಮ್ಮವನೇ’! ಬಾಲ್ಯದಲ್ಲಿ ನಮ್ಗೆ ಶಾಲೆಗೆ ಹೋಗುವಾಗ ಚಕ್ಕುಲಿ,ಉಂಡೆಗಳಿತ್ತು ಚಡ್ಡಿಯ ಜೇಬು ತುಂಬಿಸಿದ ಆತ ಇಂದಿಗೂ ಎಂದಿಗೂ ನಮ್ಮಾತ್ಮೀಯ! ಅತ್ಮೀಯ ಸ್ನೇಹಿತರೇ, ಹಲವು ರೂಪಗಳಲ್ಲಿ ಮೆರೆದ ನಮ್ಮ ಬಾಲಗೋಪಾಲ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಇಂದಿಗೂ ನಮ್ಮೆಲ್ಲರ ಮನೆಗಳಲ್ಲಿ ನಾವು ಮಕ್ಕಳಿಗೆ ಮೊದಲ ವೇಷ ಹಾಕುವುದು ಬಾಲಕೃಷ್ಣನದ್ದೇ ಅಲ್ಲವೇ? ಆತನ ನೆನಪಿನಲ್ಲಿ ನಮ್ಮ ಅನುಭೂತಿಗಾಗಿ, ಕೃಷ್ಣನನ್ನೇ ಮುಟ್ಟಿದಂಥ ಅನುಭವ ಪಡೆಯಲಾಗಿ ಅಲಂಕರಿಸಿದ ಮಕ್ಕಳ ಕೆನ್ನೆ,ಗಲ್ಲ,ಸೊಂಟ ಇವನ್ನೆಲ್ಲ ಚಿವುಟುವುದು ಮನ ನೆನೆವ ಆ ಅತ್ಮೀಯ ಸ್ಪರ್ಶದ ಆನಂದಾನುಭೂತಿಗಾಗಿ ಸರಿಯಷ್ಟೇ? ಆ ಬಾಲಕೃಷ್ಣನನ್ನೊಮ್ಮೆ ನೆನೆಸಲು ಆತನ ಹುಟ್ಟಿದ ದಿನವನ್ನು ಸ್ಮರಿಸಲು, ಆತನಿಗೊಮ್ಮೆ ’ಹ್ಯಾಪಿ ಬರ್ತ್ ಡೇ ಟೂ ಯೂ ಬೆಣ್ಣೆಕಳ್ಳಾ! ’ ಎನ್ನಲು ತೆರಳೋಣ ಈ ಹಾಡಿನ ಮೂಲಕ---


ನಮ್ಮನೆಯ ಶ್ರೀಕೃಷ್ಣ !

ಗೋಕುಲ ಜನರನು ಕಾಯುವ ನೆಪದಲಿ
ಯದುಕುಲದುದಿಸುತ ಬಂದಾ ಗೋವಿಂದಾ || ಪ ||

ಕಣಕಣದಲು ಮೊಗೆ ಮೊಗೆಮೊಗೆದರ್ಪಿಸಿ
ಝಣ ಝಣ ಗೆಜ್ಜೆಯ ಕಟ್ಟಿ ತಾ ಕುಣಿದು
ಚಿಣಿಕೋಲ್ಚಂಡು ಬುಗುರಿಯನಾಡುತ
ಅಣಕವಾಡುತ ಎಲ್ಲರ ಮನಸೆಳೆದನೇ || ೧ ||

ಮೊಸರು ಕುಡಿಕೆಗಳ ಕಸುವಲಿ ಇಳಿಸುತ
ಹೆಸರು ತೋರದೆ ನವನೀತವ ಕದ್ದ
ಕೆಸರಲ್ಲಿಹ ಕಾಳೀಯನ ಮರ್ದಿಸಿ
ಉಸಿರು ಬಿಗಿಹಿಡಿಸಿದಾ ಗಾರುಡಿಗನೇ || ೨ ||

ಗೋವಳ ಗೊಲ್ಲ ಮೆಲ್ಲಗೆ ಕೊಳಲೂದುತ
ಆವುಗಳೆಲ್ಲವ ಹತ್ತಿರ ಕರೆದೂ
ತಾವರಿಯದ ಹೊಸಲೋಕವ ತೋರಿಸಿ
ಜೀವಸಂಕುಲಕೆ ಹೊಸ ಕಳೆ ಕಟ್ಟಿದ ||೩||

ನೀಲವರ್ಣ ಅರ್ಧನಿಮೀಲಿತ ನೇತ್ರದಿ
ನೀಳವೇಣಿ ರಾಧೆಯ ಮೃದುಹೃದಯಕೆ
ಗಾಳಹಾಕಿ ತನ್ನರಸಿಯ ರಮಿಸುತ
ಪಾಲನೇತ್ರ ಸಖ ಲಾಲಿಹಾಡಿದಾ || ೪ ||

ವಧಿಸಿ ಕಂಸನ ಕೌರವಾದಿಗಳ
ವಿಧಿಸಿ ಪಟ್ಟಪದ ಕುಂತೀಸುತರಿಗೆ
ಬೋಧಿಸಿ ಗೀತೆಯ ಭಾರತ ಜನರಿಗೆ
ಶೋಧಿಸಿ ಪಾರೀಜಾತ ತಂದವನೇ || ೫ ||


ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ ||


Tuesday, August 31, 2010

ಶ್ರಾವಣ ಭಾನುವಾರ!!


ಶ್ರಾವಣ ಭಾನುವಾರ!!

[ನವ್ಯ-ಕಾವ್ಯ ೫೦ : ೫೦ ]
ಬಹುತೇಕರು ಅಂದಿಕೊಂಡಿರುವುದು ಇಂದಿನ ನವ್ಯಕಾವ್ಯವನ್ನು ಕವನ ರೂಪದಲ್ಲಿ ಬರೆಯಲು ಸಾಧ್ಯವಿಲ್ಲ ಎಂದು. ಆದರೆ ಸಮಯೋಕ್ತ ಶಬ್ದ ಲಾಲಿತ್ಯದಿಂದ ಹದಹಿಡಿದು ಬರೆದಾಗ ನವ್ಯವೂ ಕೂಡ ಮಜಕೊಡುವ ಕಾವ್ಯವಾಗುತ್ತದೆ ಎಂಬುದನ್ನು ತೋರಿಸಲು, ತಮ್ಮೆಲ್ಲರ ಮುಂದೆ ಇಡಲು ಉದ್ಯುಕ್ತನಾಗಿದ್ದೇನೆ. ನಿಮ್ಮ ಯಾವುದೇ ಭಾವಗಳಿರಲಿ ಅವುಗಳನ್ನು ಕವನವಾಗಿಸಬಹುದು! ಅಂತಹ ಕವನಗಳು ಕೆಲವೊಮ್ಮೆ ಪ್ರಾಕಾರಗಳಲ್ಲಿ ಬದಲೆನಿಸಿದರೂ ರಾಗದೊಂದಿಗೆ ಎಲ್ಲರನ್ನೂ ರಂಜಿಸಲು ಅಣಿಯಾಗುತ್ತವೆ. ಹಾಡಲಾಗದ ಕವಿತೆಗಿಂತ ಹಾಡಿಕೊಂಡು ಗುನುಗುನಿಸಬಹುದಾದ ಕವನ ಬರೆದರೆ ಬಹಳ ಜನರನ್ನು ಇಂದಿಗೂ ಅದು ತಲ್ಪುತ್ತದೆ ಎಂಬುದು ನನ್ನ ಅನಿಸಿಕೆ. ಅನೇಕ ಸಿನಿಮಾ ಹಾಡುಗಳಲ್ಲಿ ಸತ್ವರಹಿತವಾಗಿದ್ದನ್ನೂ ಹಲವೊಮ್ಮೆ ಕೇವಲ ರಾಗದಿಂದ ಮತ್ತು ಜೊತೆ ಸಂಗೀತದಿಂದ ನಾವು ಇಷ್ಟಪಟ್ಟು ಆಗಾಗ ಗುನುಗುನಿಸುತ್ತೇವಲ್ಲ ? ಅದೇ ರೀತಿಯಲ್ಲಿ ಸತ್ವಯುತವಾದ ಹೂರಣವನ್ನು ಶಬ್ದಗಳ ಕಣಕದಲ್ಲಿ ತುಂಬಿದಾಗ ಹದನಾದ ಹಾಗೂ ರುಚಿಯಾದ ಹೋಳಿಗೆ ಹೊರಬರಬಹುದಲ್ಲ! ಈ ದಿಸೆಯಲ್ಲಿ ಒಂದಡಿ ಮುಂದಿಟ್ಟು ನಿಮಗೆ ಕೊಡುತ್ತಿರುವ ಡಯಾ-ಹೋಳಿಗೆ [ಸ್ವೀಟು ಕಮ್ಮಿ]ಇದು ಎಂದುಕೊಂಡರೆ ತಪ್ಪೇ ? ತಿಂದು ನೋಡಿ, ಜೀರ್ಣವೋ-ಅಜೀರ್ಣವೋ, ವಾಂತಿಯೋ-ಭೇದಿಯೋ, ಕೆಮ್ಮೋ-ದಮ್ಮೋ ಅಂತೂ ನಿಮ್ಮ ಅಭಿಪ್ರಾಯವನ್ನು ಕೀಬೋರ್ಡ್ ಜಜ್ಜಿ ಗುಜರಾಯಿಸಲು ನೇರ ದಾರಿಯಿದೆ, ನಿಮಗಿದೋ ರತ್ನಗಂಬಳಿ ಮನಸಾ ಹಾಸಿದ್ದೇನೆ--ಹೀಗೆ ದಯಮಾಡಿಸಿ >>


ನವ್ಯ

ಮೂರುಮುಕ್ಕಾಲು ಗಂಟೆ ತಿಣುಕಿ ತಿಣುಕಿ
ಬರೆದಿದ್ದು ಮೂರೇಸಾಲು
ಸಾಕು ನಮ್ಮಂಥವರ ಹಣೆಬರಹವೇ
ಹೀಗೆಂದು ಬಗೆವಾಗ
ನೆರೆಮನೆಯ ನಾಯಿ ಬಾಯಿಗೆಬೀಗವೇ ಇರಲಿಲ್ಲ
ಬೇಕಾದ ಹಾಗೆ ಬೊಗಳುತ್ತಿತ್ತು
ರೇಡಿಯೋದಲ್ಲಿ ಅಶ್ವಥ್ ಹಾಡು ಶ್ರಾವಣ ಬಂತು ನಾಡಿಗೆ
ಕೆಳಗಿನ ಮನೆಯಲ್ಲಿ ಹುರಿದ ಮೀನಿನ ಕಮಟು ವಾಸ್ನೆ
ಅಷ್ಟರಲ್ಲೇ ಮೊಬೈಲಿಗೆ ಕಾಲು
ಬಾಗಿಲ ಬೆಲ್ಲು ರಿಂಗಣಿಸಿದ ಸದ್ದು
ಅಮ್ಮಾ ಹೂವು ಎಂಬಾಕೆಯ ಕೂಗನ್ನಾಲಿಸುತ್ತ ಹೊರನಡೆದರೆ
ಮೇಲಿನ ಮನೆಯ ಕಪ್ಪು ಬೆಕ್ಕು ದುರುಗುಟ್ಟಿ ಕಂಗಾಲಾಗಿ ನೋಡಿ
ಮಿಯಾಂವ್ ಎನ್ನುತ್ತ ಹೊರಟೇ ಹೋಯಿತು

೯ ಮೊಳದ ಧೋತಿ ಉಟ್ಟ ಸುಬ್ಬಾ ಭಟ್ಟರು
ಧಾರೆಪೂಜೆಗೆ ಬನ್ನಿ ಅಂದಿದ್ದಕ್ಕೆ ಮಡಿಯಾಗಿ ಬಂದಿದ್ದರು
ರಾತ್ರಿಯಿಂದ ಯಾಕೋ ತಲೆನೋವು ಪೂಜೆಬೇಡವೆಂದು
ಅಟ್ಟಿಬಿಡಲೇ ಎಂದುಕೊಳ್ಳುವಾಗ
ನೀರು ಬಿಸಿ ಇದೆ ನೀವು ಹೋಗಿ ಎಂದ ಮಡದಿಯ ಮಾತಿಗೆ
ಎದುರಾಡದ ಪ್ರಾಮಾಣಿಕ ನಾನು!
ರಸ್ತೆಯಲ್ಲಿ ಯಾವುದೋ ಕಾರು ಬುರ್ರನೆ ಬಂದು ನಿಂತ ಶಬ್ದ
ಬಹಳದಿನವಾಯಿತು ಇಲ್ಲೇ ಬಂದಿದ್ದೆವು
ನಿಮ್ಮನ್ನೊಮ್ಮೆ ನೋಡಿಹೋಗೋಣ ಎಂದು ಬಂದೆವು ಎಂದವರ
ಮುಖನೋಡುತ್ತ ನಾವು ಕಕ್ಕಾವಿಕ್ಕಿ
ಕೂರಿಸಿ ಹೊರ ಬಾಗಿಲು ಹಾಕಿಬರಲು ಹೋದರೆ
ಸಾಬ್ ಎನ್ನುತ್ತ ದೀನಸ್ವರ ಹೊರಡಿಸುವ ಗೂರ್ಖ ನಿಂತಿದ್ದ
ಅದೇ ಕ್ಷಣ ಪೇಪರಿನವ ಹಾಲಿನವ ಎಲ್ಲಾ ಬಂದರು
ಎಲ್ಲರಿಗೂ ಬೇಕು ಕಾಸು ಯಾರಿಗೆ ಬೇಡ ಎಂದುಕೊಳ್ಳುವಷ್ಟರಲ್ಲೇ
ಬಕ್ಷೀಸು ಕೇಳಲು ಕಾರ್ಪೋರೇಷನ್ ಕಸಗುಡಿಸುವವ ಬಂದಿದ್ದ
ಎಲ್ಲರಿಗೂ ದುಡ್ಡುಕೊಟ್ಟು ಕಳುಹಿಸಿದ ಮೇಲೆ ಪೂಜೆಗೆ ಮನಸ್ಸಿರಲಿಲ್ಲ!
ಶ್ರಾವಣದ ಪೂಜೆಗೆ ಅಂತೂ ಮುಹೂರ್ತ ಮಾತ್ರ ಕೂಡಿ ಬಂದಿತ್ತು.

ಅರ್ಧಘಂಟೆಯೂ ಆಗಿರಲಿಲ್ಲ
ಭಟ್ಟರ ಮೊಬೈಲಿಗೆ ಕಾಲು
ಮಂತ್ರದ ಮಧ್ಯೆಯೇ ಅಲ್ಲೇಲ್ಲೋ ಯಾರಿಗೋ
ಅರ್ಜೆಂಟು ಸತ್ಯನಾರಯಣ ಪೂಜೆ ಮಾಡಿಸುವ ತಲುಬು
ಮಂಗಳಾರತಿಗೂ ಮುನ್ನ ಮತ್ತೆ ಬಾಗಿಲ ಬೆಲ್ಲು
ಅಮ್ಮಾ ನಾವು ಯುರೇಕಾ ಫೋರ್ಬ್ಸ್ ನಿಂದ ಬಂದಿರೋದು
ಥೂ ಇವನ ಪೂಜೆಗೂ ಬಿಡುವುದಿಲ್ಲ ಎಂದೆನಿಸುವಷ್ಟರಲ್ಲೇ
ಎಲ್.ಐ.ಸಿ ಏಜೆಂಟ್ ಗೋವಿಂದ ಬಂದಿದ್ದ
ಇವತ್ತು ಬಹಳ ಬ್ಯೂಸಿ ಮತ್ತೆ ನೋಡೋಣವೆಂದು
ಪ್ರಸಾದಕ್ಕೆ ಕೂತುಕೊಳ್ಳಲು ಹೇಳಿದೆ
ಸ್ವಾಮೀ ಶನಿಮಹಾತ್ಮನ ದೇವಸ್ಥಾನದಲ್ಲಿ
ಅನ್ನದಾನ ಇಟ್ಟ್ಕೊಂಡಿದೀವಿ ತಮ್ಮಿಂದಾದ ದೇಣಿಗೆ ಕೊಡಿ
ಎನ್ನುತ್ತ ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಗಳನ್ನು
ಇಟ್ಟುಕೊಂಡಿದ್ದ ಕಪ್ಪು ಜನ ಬಂದಿದ್ದರು
ಇನ್ನೇನು ಅವರನ್ನೂ ಹತ್ತು ರೂಪಾಯಿ ಕೊಟ್ಟು ಸಾಗಹಾಕಿದಾಗ
ಅನಾಥಾಶ್ರಮದ ಗಾಡಿ ಬಂತು
ಹಳೆಯ ಬಟ್ಟೆ ದೇಣಿಗೆ ವಗೈರೆ ಏನೆಲ್ಲಾ ಕೊಡಲು ಸಾಧ್ಯ ಕೊಡಿ
ಎಲ್ಲರನ್ನೂ ಸಂಭಾಳಿಸಿ ಕಳಿಸುವಾಗ ಸುಸ್ತೋ ಸುಸ್ತು
ಮತ್ತೆ ಎಫ್
. ಎಮ್ ರೈನ್ಬೋದಲ್ಲಿ ಹಾಡು ಬರುತ್ತಿತ್ತು
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೇ....ಓ ಬಂತು ಶ್ರಾವಣ!

-------------

ಕಾವ್ಯ

ಶ್ರಾವಣದಿ ಒಂದು ಭಾನುವಾರದಲಿ ಪೂಜೆಯನು
ನಾವೆಣಿಸಿದಂತೆ ನಡೆಸಲು ಇಷ್ಟಪಟ್ಟು
ಆವರಣ ಗುಡಿಸಿ ಮನೆಯೆಲ್ಲವನು ಶುಚಿಗೊಳಿಸಿ
ಕಾರಣವ ಹೇಳಿ ಬಾಕಿ ಕೆಲಸಗಳ ನಿಲಿಸಿ

ಹೊತ್ತಾರೆ ಎದ್ದು ಕಾವ್ಯವ ಬರೆಯೆ ತಿಣುತಿಣುಕಿ
ಮತ್ತೆ ಮೂರೇ ಸಾಲು ಬರೆದು ಮುಗಿಸಿ
ನೆತ್ತಿಯಲಿ ಬರೆದಿರುವುದೇ ಇಷ್ಟು ಇರುವಾಗ
ಒತ್ತಿ ಮನವನು ಬರೆಯಲೇನದುಪಯೋಗ ?

ನೆರೆಮನೆಯ ನಾಯಿ ಬಾಯಿಗೆ ಬೀಗವೇ ಇಲ್ಲ
ಹೊರಮನೆಯ ರೇಡಿಯೋದಲಿ ಅಶ್ವತ್ಥ್ ಹಾಡು
ಇರುವ ಹಲವನು ಮರೆಸಿ ಬಂತು ಶ್ರಾವಣವೆಂಬ
ವರಕವಿಯ ಕಾವ್ಯವದು ಸಡಿಲಿಸಿತು ಮೂಡು!

ಕೆಳಮನೆಯ ಕಡೆಯಿಂದ ಕರಿದ ಮೀನಿನ ಕಮಟು
ಕಳವಳಿಸಿ ಕೇಳುವಿರೆ ನಮ್ಮ ಗೋಳುಗಳ ?
ಒಳಗೆ ಜಂಗಮವಾಣಿ ಮೊಳಗಿರಲು ಅಬ್ಬರದಿ
ಬೆಳಗಿನಲೇ ಹೊರ ಗಂಟೆಯುಲಿತ ಕೇಳಿದೆವು !

ಹೂವಮಾರುವ ಹುಡುಗಿ " ಆಮ್ಮಾ ಹೂವು" ಎನಲು
ಭಾವ ಭಯದಲಿ ಕಪ್ಪನೆ ಬೆಕ್ಕು ಹೆದರಿ
ಆವ ಗಂಡಾಂತರವೋ ಎಂದು ಮಿಯಾಂವ್ ಎನುತ
ಕಾವೇರಿ ತಲೆಗೆ ಓಡಿತ್ತು ಮೇಲ್ಮನೆಗೆ !

ಒಂಬತ್ತು ಮೊಳದ ಧೋತಿಯನುಟ್ಟ ಸುಬ್ಭಟ್ಟರ್
ಒಂಬತ್ತಕೂ ಮುನ್ನ ಮಡಿಯಾಗಿ ಬಂದ್ರು
ತುಂಬಿತ್ತು ಗೊಂದಲವು ತಲೆನೋವು ಮೈಭಾರ
ಎಂಬಕಾರಣ ಹೇಳಿ ಅಟ್ಟಿಬಿಡಲೇನು ?

ನೀರುಬಿಸಿ ಇದೆಯೆಂದಾಗ ಮಡದಿಯೆಡೆಗೋಗೊಟ್ಟೆ
ನಾರಿಮಣಿಯವಳಿಗೆದುರಾಡುವವನಲ್ಲ
ದಾರಿಯಲಿ ಕಾರೊಂದು ಬುರ್ರೆನಿಸಿ ನಿಂತಿತ್ತು
ಆರು ಬಂದಿರಬಹುದು ಈ ನಮ್ಮ ಮನೆಗೆ ?

ಬಹಳದಿನವಾಯಿತೆನ್ನುತ ನೋಡಬಂದವರ
ಗಹನವಾದರ್ಥದಲಿ ನೋಡಿ ಕುಳ್ಳಿರಿಸಿ
ಬಹರಿಲ್ಲ ಇನ್ಯಾರು ಎನುತ ಬಾಗಿಲ ಹಾಕೆ
ಬಹು ದೀನ ಸ್ವರದಲ್ಲಿ " ಸಾಬ್ " ಎಂದ ಗೂರ್ಖ !

ಹಾಲಿನವ ಬಂದ ದಿನಪತ್ರಿಕೆವಯನೂ ಬಂದ
ಕಾಲವಿದು ಕಾಸು ಯಾರಿಗೆ ಬೇಡ ಹೇಳಿ ?
ಬಾಲವಾಡಿಪ ನಾಯಿಯತೆರದಿ ಆ ಕಸದವನು
ಕಾಲೂರೆ ಬಕ್ಷೀಸು ಕೊಟ್ಟುಮುಗಿಸಿದೆನು

ಮನಕೆ ನೆಮ್ಮದಿಯಿಲ್ಲ ಪೂಜೆಗೆ ಮನಸಿಲ್ಲ
ಘನ ಶ್ರಾವಣದ ಕಾಲ ಮೂರ್ತ ಬಂದಿಹುದು
ಗುನುಗುನಿಸಿ ಮಂತ್ರಪಠಿಸುತಲಿದ್ದ ಭಟ್ಟರಿಗೆ
ಪುನರಪೀ ಜಂಗಮದ ವಾಣಿಗಳು ಮೊಳಗೆ !

"ಬನ್ನಿ ಭಟ್ಟರೆ ತಾವು ಸತ್ಯನಾರಾಯಣನ
ತನ್ನಿ ಮನೆಗೈತಂದು ಪೂಜೆ ತ್ವರಿತದಲಿ " !
ಮನ್ನಿಸುನೀ ಹೇ ಪ್ರಭುವೆ ಮಂಗಳಾರತಿಗೈವೆ
ಮುನ್ನ ಬಾಗಿಲ ಗಂಟೆ ಮತ್ತೆ ರಿಂಗಣಿಸೆ !

" ಅಮ್ಮಾ " ಎನುತಲಿದ್ದ ಯುರೇಕಾ ಫೋರ್ಬ್ಸಿನವ
"ಸುಮ್ಮನೇ ಹೋಗಯ್ಯ" ಎನುತಿರುವ ವೇಳೆ
ಚಿಮ್ಮಿ ಬಂದಾ ನಮ್ಮ ಎಲ್.ಐ.ಸಿ.ಗೋವಿಂದ
ಒಮ್ಮೆ ಕೂತಿರು ಪ್ರಸಾದಕೆ ಬ್ಯೂಸಿಯೆಂದೆ

ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಯನಿಟ್ಟ
ಕರಡು ಪುಸ್ತಕ ಹಿಡಿದ ಕಪ್ಪು ಜನ ಬರಲು
ದೊರೆಸಾನಿ ಕೇಳಿರಲು ಬಂದವರ ಅಹವಾಲು
" ವರಶನೈಶ್ಚರನ ಸನ್ನಿಧಿಗೆ ದೇಣಿಗೆಯ " !

ಕೊಟ್ಟು ಹತ್ತು ರೂಪಾಯಿ ಭಕ್ತಿಯಲಿ ಕೈಮುಗಿದು
ಒಟ್ಟಿನಲಿ ಸಾಗಹಾಕಲು ಬೇಗನವರ
ಬಟ್ಟೆ-ಹಳೆಯದು ಮತ್ತು ದೇಣಿಗೆಯ ಪ್ರಾರ್ಥಿಸುತ
ಕಟ್ಟಕಡೆಯಲಿ ಕಂಡರನಾಥಾಶ್ರಮದವರು

ಎಲ್ಲರನೂ ತಕ್ಕಂತೆ ಉಪಚರಿಸಿ ಕಳಿಸುತ್ತ
ಒಲ್ಲೆನೆನ್ನುವ ಮನದಿ ಹರಿಯ ಧ್ಯಾನಿಸುತ
ಘಲ್ಲೆನುವ ಹಾಡಿನಾ ಹರಹು ಎಫ್.ಎಮ್. ರೈನ್ಬೋದಲಿ
ಅಲ್ಲಿ ಬಂದಿತು ಮತ್ತೆ "ಶ್ರಾವಣ..ಬಂತು " !

Monday, August 30, 2010

ಹಸಿರ ಅರಮನೆ


ಹಸಿರ ಅರಮನೆ

ಹಸಿರು ಕಾನನದ ನಡುವಿರುವ ಹಳೆ ಮನೆಯಲ್ಲಿ
ನಸುಬೆಳಕಿನಲಿ ಕುಳಿತು ಚಹ ಕುಡಿವ ಮನಕೆ
ಪಿಸುಮಾತನರಗಿಣಿಯು ಪಂಜರದಿ ಕೂಗಿರಲು
ಹೊಸ ಆಸೆ ಗರಿಗೆದರಿ ಹಾರತೊಡಗಿದೆನು

ಅಲ್ಲಿ ಜಂಜಡವಿಲ್ಲ ಜಡಹಿಡಿದ ಬದುಕಲ್ಲ
ನಲ್ಲಿ ನೀರಿಗೆ ಕಾಯ್ವ ನ್ಯೂನತೆಯು ಇಲ್ಲ
ಬಲ್ಲವರು ಬಹಳಿಹರು ಬದುಕ ತೋರಿಸುವುದಕೆ
ಸಲ್ಲದಾಮಿಷಗಳಾ ಗೊಡವೆ ಬಹದಲ್ಲ

ನೀರವದ ಇಳೆಯಲ್ಲಿ ಜುಳುಜುಳು ನಿನಾದಿಸುತ
ಆರೂರ ಸುತ್ತರಿವ ಬೆಳ್ನೊರೆಯ ತೊರೆಗಳ್
ಮೇರೆ ಮೀರಿದ ಸುಖದ ನೋಂಪಿಯದ ಭುಂಜಿಸಲು
ನೂರೆಂಟು ಸಂಗ್ತಿಗಳು ಕಣ್ಣ ತುಂಬುವವು

ಒತ್ತಡದ ದಿನವಿಲ್ಲ ಹತ್ತಿರದ ಒಡನಾಟ
ನೆತ್ತಿಯಲೆ ತುಂಬಿ ತೊನೆಯುವ ಹಣ್ಣು ಗಿಡಗಳ್
ಮತ್ತೆ ನೇಸರನ ಕಿರು ಕಿರು ನೋಟ ಕೆಲದಿನದಿ
ಒತ್ತಟ್ಟಿಗಿರುವರಲಿ ಹಬ್ಬದಾಚರಣೆ

ವಿದ್ಯುತ್ತು ಬೇಡೆಮಗೆ ನಾವೇ ತಯಾರಿಪೆವು
ಗದ್ಯ-ಪದ್ಯವನೋದೆ ಸಮಯ ಬಹಳಿಹುದು
ವಿದ್ಯೆಗಳ ಆಗರವು ಬದುಕನಾಲಂಗಿಸುತ
ಸಾದ್ಯಂತ ಸಂಸ್ಕೃತಿಯ ತವರು ನಮದಿಹುದು

ಬೆಳಗು ಬೈಗಿನ ವೇಳೆ ನಿತ್ಯವೂ ನಮಿಸುತ್ತ
ಉಳುಮೆಮಾಡುತ ಭೂಮಿ ಫಲವ ಪಡೆಯುವೆವು
ನಳನಳಿಸಿ ಬೆಳೆದಿರುವ ಹೂ ಗಿಡಗಳಂದದಲಿ
ಒಳಗೊಳಗೆ ಸಂತಸವು ತುಂಬಿ ಹರಿದಿಹುದು

Sunday, August 29, 2010

ಬೆಳೆಯದ ಪೈರು !!



ಬೆಳೆಯದ ಪೈರು
!!

[ ಹಳೆಯಬೇರು-ಹೊಸಚಿಗುರು ತತ್ವದ ಆಧಾರದಲ್ಲಿ, ಇಂಡಿಪಾಪ್ ವಿಧದಲ್ಲಿ ಗಿಟಾರ್ ಹಿಡಿದು ಹಾಡಿಕೊಳ್ಳಲು ಬರುವ ಹಾಡು, ಯಾವುದೇ ಗುರಿಯಿಲ್ಲದೇ ಎಲ್ಲವನ್ನೂ ಪ್ರಯತ್ನಿಸಿ ಮಾಡಲು ಹೊರಟು ವಿಫಲನಾದಾಗ ಏನಾಗುತ್ತದೆ ಎಂದು ತಿಳಿಸುತ್ತದೆ, ಸ್ವಲ್ಪಮಜಾ-ಸ್ವಲ್ಪ ಸಂದೇಶ, ೫೦-೫೦: ಕುಚ್ ಖಟ್ಟಾ- ಕುಚ್ ಮೀಠಾ, ಓದಿ ಎಂಜಾಯ್ ಮಾಡಿ !]


ಹತ್ತಾರು ಪೇಜು ಗೀಚಿ ಗೀಚಿ
ಹರಿದು ಬಿಟ್ಟೆನಾ
ಕುವೆಂಪುವಾಗೆ ಕವಿ ಬೇಂದ್ರೆಯಾಗೆ !
ಮತ್ತಾರು ಸೂತ್ರ ಹೆಣೆದು ಹೆಣೆದು
ಕೂತು ಬಿಟ್ಟೆನಾ
ವಿಜ್ಞಾನಿಯಾಗೆ ನಾಸಾಕ್ಕೆ ಹೋಗೆ !||ಪ||

ಬರಿ ಪಾತ್ರೆ ಏನದಿಲ್ಲ
ಬತ್ತಳಿಕೆ ಖಾಲಿ ಇದ್ಯಲ್ಲ
ಮತ್ತೇನುಮಾಡೆ ತೋಚದಾಗಿ
ಮಂಚಹಿಡಿದು ಮಲಗಿ ಬಿಟ್ಟೆನಾ ಟರಂಟ...ರಂಟ.. ಟರಂಟ ...ರಂಟ || ಅನು ಪ||

ಅತ್ತಿತ್ತ ನೋಡಿ ಕುಣಿದು ಕುಣಿದು
ಕುಸಿದು ಬಿಟ್ಟೆನಾ
ಜಾಕ್ಸನ್ನನಾಗೆ ಪ್ರಭುದೇವನಾಗೆ!
ಸುತ್ತುತ್ತ ಕೊಳಲ ಊದಿ ಊದಿ
ಕಾದು ಬಿಟ್ಟೆನಾ
ಗೋಡ್ಕಿಂಡಿ ಯಾಗೆ ಹರಿಪ್ರಸಾದರಾಗೆ !

ನಡುರಾತ್ರಿ ತಾಲೀಮಿನಲಿ
ನಡುಗಿತ್ತು ಭೂಮಿಯೆಲ್ಲ !
ಪಡಪೋಶಿ ನೀನು ಎಂದಘಳಿಗೆ
ಬೇಸರಾಗಿ ಕಂಡದಾರಿ ಹಿಡಿದುಬಿಟ್ಟೆನಾ ಟರಂಟ...ರಂಟ..
ಟರಂಟ...ರಂಟ ||೧||

ಕತ್ತೆತ್ತಿ ಬಿಡದೆ ಆಡಿ ಆಡಿ
ದಣಿದು ಬಿಟ್ಟೆನಾ
ರೆಹಮಾನನಾಗೆ ಮನೋಮೂರ್ತಿಯಾಗೆ !
ಒತ್ತಟ್ಟಿಗಿಷ್ಟು ಪ್ಯಾಂಟು ಶರ್ಟು
ತಂದು ಇಟ್ಟೆನಾ
ಅಮಿತಾಭನಾಗೆ ಅಮೀರ್ಖಾನನಾಗೆ !

ಸಂಗೀತ ನಟನೆಗಳಲಿ
ಒಟ್ಟಾಯ್ಸಿ ತಿಳಿಯಲಿಲ್ಲ
ಮಂಗಣ್ಣ ನೀನು ಮನೆಗೆ ಹೋಗು
ಎಂದವೇಳೆ ಚಪ್ಲಿಬಿಟ್ಟು ಓಡಿಹೋದೆನಾ ಟರಂಟ..ರಂಟ ಟರಂಟ.. ರಂಟ ||೨||

ಹೊತ್ತಗೆಯ ತೆರೆದು ಓದಿ ಓದಿ
ಕೂಚು ಬಟ್ಟನಾ
ವೈದ್ಯನಾಗೆ ತಂತ್ರಜ್ಞಾನಿಯಾಗೆ !
ಇಪ್ಪತ್ತು ಸರ್ತಿ ನಿಂತು ನಿಂತು
ಬಿದ್ದುಬಿಟ್ಟೆನಾ
ಮಂತ್ರಿಯಾಗೆ ಪ್ರಧಾನಿಯಾಗೆ !

ಓದಿದ್ದು ಹತ್ತಲಿಲ್ಲ
ಇಪ್ಪತ್ತು ಕೋಟಿಯಿಲ್ಲ
ನೀ ವೇಸ್ಟು ಎನಲು ಸೋತಮುಖವ
ಸಣ್ಣಗಾಗಿ ಹೊತ್ತುಬಿಟ್ಟೆನಾ ಟರಂಟ... ರಂಟ ಟರಂಟ... ರಂಟ || ೩ ||

ಉತ್ತುತ್ತ ಹೊಲವ ಬಿತ್ತು ಬಿತ್ತು
ಬೆಳೆಯದಾದೆ ನಾ
ರೈತನಾಗೆ ಅನ್ನಬೇಗೆ ನೀಗೆ !
ಹತ್ತೇರಿ ಮೇಲೆ ಹೋಗಿ ಹೋಗಿ
ತಪವಗೈಯ್ಯದಾದೆ ನಾ
ಸ್ವಾಮಿರಾಮನಾಗೆ ವಿಶ್ವಾಮಿತ್ರನಾಗೆ !

ಹುತ್ತದೊಳಗೆ ಇರುವ ಹಾವು
ಮತ್ತೇರಿ ಮರೆತು ಮೆರೆದು
ನೆತ್ತಿ ಹಿಡಿದು ಕತ್ತಲಾಗೆ
ಅತ್ತುಕರೆದು ಸತ್ತುಹೋದೆನಾ ಟರಂಟ.. ರಂಟ ಟರಂಟ... ರಂಟ || ೪ ||

Saturday, August 28, 2010

ಬಸವನ ಪಾಲು !!


ಬಸವನ ಪಾಲು !!

ಸುಬ್ರಹ್ಮಣ್ಯನನ್ನು ಕಂಡ್ರೆ ನನಗೆ ಅಷ್ಟಕ್ಕಷ್ಟೇ ಆಗಿಬಿಟ್ಟಿತ್ತು. ಆಗೆಲ್ಲ ಮತ್ತೆಮತ್ತೆ ನಾವು ಶಾಲೆಗಳಲ್ಲಿ ಟೂ ಬಿಡುತ್ತಿದ್ದೆವು. ಟೂ ಬಿಡುವಾಗ ತೋರುಬೆರಳು ಮತ್ತು ಮಧ್ಯಬೆರಳುಗಳ ತುದಿಯನ್ನು ಪರಸ್ಪರ ಸೇರಿಸಿ ಒಬ್ಬ ಹಿಡುಕೊಳ್ಳುವುದು ಇನ್ನೊಬ್ಬ ಆತನ ತೋರುಬೆರಳನ್ನು ಹಾಗೆ ಸೇರಿಸಿ ಉಂಟಾದ ಸಂದಿನಲ್ಲಿ ಹಾಕಿ ಎಳೆಯುವುದು. ಒಂದೊಮ್ಮೆ ಹಾಗೆ ತೋರುಬೆರಳನ್ನು ತೂರಿಸಿ ಎಳೆಯುವ ಬದಲು ಎರಡೂ ಬೆರಳನ್ನು ಒತ್ತಿ ಹಿಡಿದರೆ ಅದು ಮತ್ತೆ ದೋಸ್ತಿ ಅಂತರ್ಥವಾಗಿತ್ತು. ಮಕ್ಕಳಾದ ನಮ್ಮ ಮನಸ್ಸಿಗೆ ಏನಾದರೂ ಚಿಕ್ಕಪುಟ್ಟ ಅಡತಡೆಬಂದರೂ ಅದನ್ನು ಬಗೆಹರಿಸಿಕೊಳ್ಳಲು ಸುಲಭದ ಉಪಾಯ ಟೂ ಬಿಟ್ಟು ಚಡಪಡಿಸುವಂತೇ ಮಾಡುವುದು ಇಲ್ಲಾ ರಾಜಿಸೂತ್ರದಿಂದ ಏನಾದರೂ ಸುಖವಿದ್ದರೆ ದೋಸ್ತಿ ಪುನರುಜ್ಜೀವನಗೊಳಿಸುವುದು ನಮ್ಮ ನಿತ್ಯ ಕೈಂಕರ್ಯ!

ಟೂ ಬಿಟ್ಟಾಗ ನಾವು ಪಾಂಡವ ಕೌರವರಂತೇ ಆಗುತ್ತಿದ್ದೆವು! ನಮ್ಮ ಮಧ್ಯೆ ಕೃಷ್ಣ ಮತ್ತು ಶಕುನಿಯಂತಹ ಹಲವಾರು ಪಾತ್ರಗಳು ಕೆಲಸಮಾಡುತ್ತಿದ್ದವು. ಕಾಲಾನುಸಾರ ನಮ್ಮ ಚೆಡ್ಡಿಯ ಕಿಸೆ[ಜೇಬು]ಯಲ್ಲಿ ಇದ್ದ ಸುಟ್ಟ ಹುಳಿಸೇ ಬೀಜ, ಮಾವಿನ ಮಿಡಿ, ಚಕ್ಕುಲಿತುಂಡು, ಬಿಂಬಲಕಾಯಿ, ನೆಲ್ಲಿಕಾಯಿ, ಸುಟ್ಟ ಗೇರುಬೀಜ ಮುಂತಾದುವುಗಳನ್ನು ಆಗಾಗ ನಮ್ಮಿಂದ ಸಲ್ಸಲ್ಪ ಪಡೆದು ತಿಂದ ಒಬ್ಬಿಬ್ಬರು ಆಶ್ರಯವಿತ್ತ ಕೌರವನನ್ನು ಕರ್ಣ ಗೌರವಿಸಿದಂತೇ ಬಹಳ ಗೌರವದಿಂದ ಕಾಣುತ್ತಿದ್ದರು. ಅವರು ಹೇಗಿದ್ದರೂ ನಮ್ಮ ಪಕ್ಷಎಂಬುದು ನಮಗೆ ತಿಳಿದೇ ಇರುತ್ತಿತ್ತು. ಅದೂ ಕಾಲದಲ್ಲಿ ನಮ್ಮೂರಲ್ಲಿ ಯಕ್ಷಗಾನಗಳಲ್ಲಿ ರಾಮಾಯಣ-ಮಹಾಭಾರತದಕಥೆಗಳನ್ನು ನಾವು ನೋಡುತ್ತಿದ್ದುದರಿಂದ ನಮಗೆ ಬಹುತೇಕ ಕಥೆಗಳು ಮನದಲ್ಲಿ ಚಿತ್ರಿತವಾಗುತ್ತಿದ್ದವು. ಇಂತಹ ಮಹತ್ಕಾರ್ಯಮಾಡುವ ಯಕ್ಷಗಾನಕ್ಕೆ ಒಮ್ಮೆ ನಮ್ಮ ಜೈ ಹೋ ಸಲ್ಲಿಸೋಣ. ನಮ್ಮಲ್ಲಿ ನಾವು ಆಗದವರಿಗೆ ಕೆಲವು ಹೆಸರುಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೆಪ್ಪಸೀನ, ಶಾಸ್ತ್ರಿ, ಅವಲಕ್ಕಿ-ಮೊಸರು, ಮಾಯ್ನಗೊರಟೆ, ಗೆರಟೆ[ಕರಟ], ಆಟ್ಮಾಣಿ, ಕನಕಾಂಗಿ.....ಹೀಗೇ ತರಾವರಿ ಹೆಸರುಗಳು ಅವರವರ ಅಂದಿನ ವ್ಯಕ್ತಿತ್ವಾನುಸಾರ ಕೊಡಲ್ಪಡುತ್ತಿದ್ದವು. ನಿಷೇಧಾಜ್ಞೆಯನ್ನು ಮರಳಿ ಪಡೆದಂತೆ ರಾಜಿಯಾದಮೇಲೆ ಹೆಸರುಗಳನ್ನು ಅಳಿಸಿಹಾಕಲಾಗುತ್ತಿತ್ತು ಮತ್ತು ಇನ್ನು ಮುಂದೆ ಯಾರೂ ಅಂತಹ ಹೆಸರನ್ನು ಆತನಿಗೆ ಇಟ್ಟುಕರೆಯಬಾರದು ಎಂಬುದಾಗಿ ಸಭೆಕರೆದು ಹೇಳುತ್ತಿದ್ದೆವು.

ಸಭೆ ಎಂದುಬಿಟ್ಟರೆ ಸುಮ್ಮನೇ ಏನೋ ಅಂತ ತಿಳಿಯಬೇಡಿ! ಇಂದಿನ ವಿಧಾನಸೌಧದಲ್ಲಿ ನಡೆಯುವ ಶಾಸಕಾಂಗ ಸಭೆಗಾದ್ರೂಶಿಸ್ತಿಲ್ಲದೇ ಇರಬಹುದು ನಮ್ಮಲ್ಲಿನ ಸಭೆಗೆ ಮಾತ್ರ ಬಹಳ ಶಿಸ್ತು,ಬಹಳ ನಿಯಮ. ಬಹುಶಃ ಸಮಯಪಾಲನೆ ಭಾರತದಲ್ಲಿ ಸರಿಯಾಗಿ ನಡೆಯುತ್ತಿದ್ದಿದ್ದರೆ ಅದು ನಮ್ಮ ಅಂದಿನ ಸಭೆಗಳಲ್ಲೂ ಬಹಳ ಅಚ್ಚುಕಟ್ಟಾಗಿ ಇತ್ತು. ಗುಣ ಸ್ವಭಾವಗಳಲ್ಲಿ ಸ್ವಲ್ಪ ವರ್ಚಸ್ಸನ್ನು ಬೀರುವವ್ಯಕ್ತಿ[ಹುಡುಗ] ಸಭೆಗಳಿಗೆ ಅಘೋಷಿತ ಅಧ್ಯಕ್ಷನಾಗುತ್ತಿದ್ದ. ಅಧ್ಯಕ್ಷರಿಗೆ ಮರದ ಕೆಳಗಿನ ಅಗಲ ಕಲ್ಲಿನ ಬೆಂಚು ಅಥವಾ ದೇವಸ್ಥಾನದ ಪೌಳಿಯ ಒಂದು ಎತ್ತರದ ಭಾಗ ಕುಳಿತುಕೊಳ್ಳುವ ಆಸನವಾಗಿ ಪರಿಣಮಿಸುತ್ತಿತ್ತು. ನಂತರ ಮಕ್ಕಳ ಗುಂಪಿನಲ್ಲೇಒಬ್ಬ ಬಂದು ಅಲ್ಲಿಯವರೆಗಿನ ಆಗುಹೋಗುಗಳನ್ನು ಅಧ್ಯಕ್ಷರ ಸಮಕ್ಷಮ ಮಿಕ್ಕುಳಿದ ಎಲ್ಲಾ ಮಕ್ಕಳಿಗೆ ತಿಳಿಯುವಂತೆ ಹೇಳುತ್ತಿದ್ದ. ಕೆಲವೊಂದು ವಿಚಾರಗಳಲ್ಲಿ ಅಧ್ಯಕ್ಷರು ತಾನೇ ನಿರ್ಧಾರ ತೆಗೆದುಕೊಂಡರೂ ಇನ್ನು ಕೆಲವು ಸನ್ನಿವೇಶಗಳಲ್ಲಿ ಎಲ್ಲಾ ಮಕ್ಕಳನ್ನೂಕೇಳಿ ಆಮೇಲೆ ಬಹುಮತ ಬಂದದ್ದನ್ನು ತೀರ್ಮಾನವೆಂದು ಪ್ರಕಟಿಸುವ ಪ್ರಜಾಪ್ರಭುತ್ವವಿತ್ತು! ಅಕಸ್ಮಾತ್ ಯಾರಾದರೊಬ್ಬ ತಪ್ಪುಮಾಡಿ, ಹೇಳಿದರೂ ಸುಧಾರಿಸಿಕೊಳ್ಳಲಿಲ್ಲ ಎಂದಾದಲ್ಲಿ ಅಂದು ಮಕ್ಕಳ ಗುಂಪಿನಿಂದ ಆತನನ್ನು ಹೊರಹಾಕಲಾಗುತ್ತಿತ್ತು. ಮುಖಗರಿದ ಬೆಕ್ಕಿನ ಥರ ಸಣ್ಣಗೆ ಮನಸ್ಸಲ್ಲೇ ಕುರುಗುಡುತ್ತ ಆತ ನಿಧಾನವಾಗಿ ಭಾರವಾದ ಹೆಜ್ಜೆಗಳೊಂದಿಗೆ ಮನೆಗೆ ಮರಳುತ್ತಿದ್ದ. ಪ್ರಾಯಶಃ ಅಂದು ಮನೆಯಲ್ಲಿ ಆತ ಊಟವನ್ನೂ ಸೇವಿಸದೇ ಹಾಗೇ ಮಲಗುತ್ತಿದ್ದನೋ ಏನೋ ಅರಿವಿಲ್ಲ. ಆಮೇಲೆ ದಿನವೊಪ್ಪತ್ತು ತಡೆದು ತಾನಿನ್ನು ತಪ್ಪುಮಾಡುವುದಿಲ್ಲ ಎಂದುಕೃಷ್ಣ ಮುಖಾಂತರ ಹೇಳಿಕಳಿಸಿದ್ದು ಅಧ್ಯಕ್ಷರ ಕಿವಿಗೆ ಬಿದ್ದಮೇಲೆ ಮರುಪಂಚಾಯತಿ ಕರೆದು ಪುನಃ ನಮ್ಮ ಪಕ್ಷದ ನೀತಿ-ನಿಯಮಗಳನ್ನೂ, ರೀತಿ-ರಿವಾಜುಗಳನ್ನೂ ಒಪ್ಪಿಕೊಂಡರೆ ಮಾತ್ರ ಪ್ರಾಥಮಿಕ ಸದಸ್ಯತ್ವ ಲಭಿಸುತ್ತಿತ್ತು!

ನಾವು ಆಡದ ಆಟಗಳೇ ಇಲ್ಲ ಸ್ವಾಮೀ! ಕಬಡ್ಡಿ[ಸುರಗುದ್ದು], ಖೋ ಖೋ, ಸಂಗೀತಖುರ್ಚಿ, ಹಾಣೆಗೆಂಡೆ[ಚಿನ್ನಿ-ದಾಂಡು]ಕುಂಟ್ಲಿಪಿ[ಚೌಕಾಬಾರ್], ಚನ್ನೆಮಣೆ, ಮರಕೋತಿ, ಕಳ್ಳ-ಪೋಲೀಸ್, ಕಣ್ಣಾಮುಚ್ಚಾಲೆ, ಕಿವ್ರ್ ಬಿಟ್ ಕಿವ್ರ್ಯಾರು ?, ಕೇರಮ್ಮು, ಲಗೋರಿ .....ಒಂದೇ ಎರಡೇ ನೀವೆಣಿಸಿರಬಹುದು ಹಳ್ಳಿಗಳಲ್ಲಿ ಆಟವೇ ಇಲ್ಲ ಅಂತ, ಆದ್ರೆ ಗ್ರಾಮೀಣ ಕ್ರೀಡೆಗಳಷ್ಟು ಖುಷಿತರುವ ಕ್ರೀಡೆಗಳು ಪಟ್ಟಣಗಳಲ್ಲಿಲ್ಲ! ಆಡಿ ಬೇಜಾರಾದಾಗ ನಾಟಕ, ಯಕ್ಷಗಾನದ ತಾಲೀಮು ಮಾಡಿಕೊಂಡು ಕೆಲವಾರುದಿನಗಳ ಅಂತರದಲ್ಲಿ ಬಹಳ ದೊಡ್ಡಪ್ರಮಾಣದಲ್ಲಿ ಅದನ್ನು ಪ್ರಯೋಗಿಸುತ್ತಿದ್ದೆವು;ನಾವೇ ವೀಕ್ಷಕರು, ನಾವೇ ಪ್ರೇಕ್ಷಕರು, ನಾವೇಪ್ರಾಯೋಜಕರು ಆಯೋಜಕರು ಎಲ್ಲಾ! ಇವತ್ತು ಬೆಂಗಳೂರಿಂತಹ ನಗರಗಳಲ್ಲಿ ಸಾವಿರ ಸಾವಿರ ಖರ್ಚುಮಾಡಿ ಮಾಡಿದರೂ ನಿಜವಾದ ರಂಗೇರಿಸದ ಅಸಾಧ್ಯನಭೂತೋ ನಭವಿಷ್ಯತಿಎನಿಸುವ ಪಾತ್ರಗಳಲ್ಲಿ ಮಿಂಚಿದ ನಾನೇ ಬರೆಯುತ್ತಿದ್ದೇನೆಏನಂದುಕೊಂಡಿದ್ದೀರಿ ನೀವು?! ವಲಲ, ವಿಕ್ರಮಾದಿತ್ಯ, ಬಲಿಚಕ್ರವರ್ತಿ, ಎಂತೆಂತಹ ರಸವತ್ತಾದ ಪಾತ್ರಗಳವು, ನಾನುಏನನ್ನಾದರೂ ಮರೆತೇನು ಅವನ್ನು ಮರೆಯಲು ಸಾಧ್ಯವೇ ಇಲ್ಲ! ಸೈರಂಧ್ರಿಯನ್ನು ಸಮಾಧಾನಿಸುವ ವಲಲನ ಕೋಪ ಉಕ್ಕೇರಿದಾಗ ಅಕಟಕಟಾ ಎಲವೋ ಕೀಚಕಾ ನಿಲ್ಲು ಮಾಡಿಸುತ್ತೇನೆ........ಸ್ವಲ್ಪ ಇರಿ, ಇಲ್ಲಿ ಕೀಬೋರ್ಡೇ ಒಡೆದು ಹೋಯಿತೋ ಏನೋ ಪರೀಕ್ಷಿಸುತ್ತೇನೆ! ಪಾತ್ರಮುಗಿಸಿದ ಬಹುದಿನಗಳ ಕಾಲ ಪಾತ್ರದ ಪ್ರಭಾವ ಅಥವಾ ಭಾವಾವೇಶ ನಮ್ಮಲ್ಲೇ ಹುದುಗಿರುತ್ತಿತ್ತು. ಸುತ್ತಲು ಸೇರುವ ನಮ್ಮ ಮಿತ್ರರಲ್ಲಿ ಎಲ್ಲರೂ ಅಂತಹ ಪಾತ್ರವನ್ನು ಮಾಡಲು ಇಷ್ಟಪಡುತ್ತಿದ್ದರು ಆದರೆ ಹೇಗೆ ಪಾತ್ರಪೋಷಣೆಮಾಡಬೇಕೆಂದು ತಿಳಿಯದೇ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಾಗಿ ನನಗೇ ಅಂತ ಮೀಸಲಿಡುವಪಾತ್ರಗಳೇ ಇದ್ದವು. ಪಾತ್ರಮಾಡಿದ್ದನ್ನು ನೋಡಿದವರು ಕೆಲವರೇ ಆದರೂ " ಅಬ್ಬಾ ವಿ.ಆರ್.ಭಟ್ ಹ್ಯಾಂಗ್ ಮಾಡ್ತಾಮಾರಾಯ " ಎಂದು ನನಗೆ ಕೇಳಿಸುವಂತೇ ಇತರಮಕ್ಕಳಿಗೆ ಹೇಳಿ ಪರೋಕ್ಷ ನನ್ನಿಂದ ಸಿಗಬಹುದಾದ ಯಾವುದೋ ಸಹಾಯಕ್ಕೆ ಪೀಠಿಕೆಹಾಕಿಕೊಳ್ಳುತ್ತಿದ್ದರು. ಹೀಗೇ ಮೊದಲಿನಿಂದಲೂ ನಾವು ಕಲಾವಿದರೆನ್ನಿಸಿ ಪಾತ್ರಮಾಡಿ ಮುಗಿಸಿಬಿಟ್ಟಿದ್ದೇವೆ, ಈಗ ಅದನ್ನುಬರೆಯುವುದು ಮಾತ್ರ ಉಳಿದಿದೆ!

ನಮಗೆ ಶ್ರೀಕೃಷ್ಣ, ಗಣೆಶ ಎಲ್ಲಾ ದೇವರುಗಳು ಬಹಳ ಪ್ರೀತಿ. ಅವರ ಇರುವಿಕೆಯಿಂದ, ಬರುವಿಕೆಯಿಂದ ನಮಗೊಂದಷ್ಟು ಅವರ 'ಪ್ರಸಾದಕೆಲವು ದಿನ ಸಿಗುತ್ತಿತ್ತು. ತರತರದ ಉಂಡೆಗಳು, ಚಕ್ಕುಲಿ, ಮೋದಕ ಇವೇ ಮೊದಲಾದವು ನಮ್ಮ ಕಿಸೆಯಲ್ಲಿ ತಿಂಗಳೊಪ್ಪತ್ತು ಸದಾ ಸಿಗುವಂತಹ ತಿನಿಸುಗಳು. ಕಿಸೆಯೆಲ್ಲ ಎಣ್ಣೆಮಯವಾಗಿ ಬಿಸಿನೀರಲ್ಲಿ ಅದ್ದಿ ತೊಳೆದು ಹಾಕಿದ ಮೇಲೂ ಜಿಡ್ಡುಹೋಗದೇ ಬಿಳಿಯ ಗಡ್ಡಬರುವಷ್ಟರ ಮಟ್ಟಿಗೆ ನಮ್ಮ ಚಡ್ಡಿ ಕಿಸೆಗಳು ಎಣ್ಣೆಪ್ರಿಯವಾಗಿದ್ದವು! ಕೆಲವೊಮ್ಮೆ ಅಲ್ಲಲ್ಲೇ ತೂತುಬಿದ್ದು ನಮಗೆ ನಷ್ಟವಾಗುವ ಸಂಭವನೀಯತೆ ಕೂಡ ಇತ್ತು. ಹಾಗೊಮ್ಮೆ ನಷ್ಟವಾದ ಸಮಯದಲ್ಲಿ ಬೇರೆ ಮಕ್ಕಳಿಂದ ಮಮೂಲಿ ಪಡೆದು ನಷ್ಟಭರ್ತಿಯಾಗುತ್ತಿತ್ತು! ಇಲ್ಲಿ ಅನೇಕಬಾರಿ ನೀನನಗಾದರೆ ನಾನಿನಗೆ ಎಂಬ ಪ್ರಿನ್ಸಿಪಲ್ಲು ವರ್ಕ್ ಆಗುತ್ತಿತ್ತು. ಉಂಡೆಗಳ ಸಂಖ್ಯೆಕಡಿಮೆಯಿದ್ದಾಗ ಯಥಾವತ್ ಕಾಗೆ ಎಂಜಲು[ಗುಬ್ಬಿ ಎಂಜಲು]ಇತ್ಯಾದಿ ಸಮೀಕರಣ ಬಳಸುತ್ತಿದ್ದೆವು. ಹೀಗಾಗಿ ಚಕ್ಕುಲಿ ಕೋಡುಬಳೆ ನೀಡುವ ಗಣಪ ಮತ್ತು ಕೃಷ್ಣ ನಮ್ಮಂತೆಯೇ ಮೊದಲು ತಿಂದುನೀವು ಇಂಥಾದ್ದನ್ನೇ ಮಾಡಿ ಮಕ್ಕಳಿಗೆ ಕೊಡಿಎಂದು ಹರಸಿಹೋಗಿದ್ದು ಪ್ರತೀವರ್ಷಮರಳಿ ಮರಳಿ ಬಂದು ನಮಗೆ ಹರುಷ ತರುತ್ತಿದ್ದರು. ನಮಗೆ ಪೂಜೆಗಳ ಜೊತೆಜೊತೆಗೇ ಎದುರಿಗಿಡುವ ನೈವೇದ್ಯದ ಕಾಯಸ್ಸುಜಾಸ್ತಿ! ಇಂಥಿಂಥಾ ಒಳ್ಳೆಯ ನೈವೇದ್ಯ ಕೊಡುವ ಇಬ್ಬರು ದೇವರು ಸದಾ ಸುಖವಾಗಿರಲಿ, || ತಿಂಡಿದಾತಾ ಸುಖೀಭವ ||

ಕಾರ್ತೀಕಮಾಸದಲ್ಲಿ ದೇವಸ್ಥಾನಗಳಲ್ಲಿ ದೀಪೋತ್ಸವ ಅಥವಾ ದೀಪಾರಾಧನೆ ಯಾನೇ ಕಾರ್ತೀಕ ನಡೆಯುತ್ತಿತ್ತಲ್ಲ ಆಗೆಲ್ಲಈಗಲೂ] ದೇವರ ಮುಂದೆ ಅಷ್ಟು ದೂರದಲ್ಲಿ ಇರುವ ದೇವರ ವಾಹನಗಳ ಮುಂದೆ ಪನವಾರಕ್ಕೆ ಮಾಡಿದ ಪದಾರ್ಥಗಳನ್ನು ಒಂದಷ್ಟು ಬಾಳೆಲೆಯಲ್ಲಿ ಹಾಕಿಡುತ್ತಿದ್ದರು. ವಿಷ್ಣುವಿನ ದೇವಸ್ಥಾನವಾದರೆ ಗರುಡನ ಮುಂದೆ ಈಶ್ವರನ ದೇವಾಲಯವಾದರೆ ನಂದಿಯ[ಬಸವ]ಮುಂದೆ ಹಾಗೆ ನೈವೇದ್ಯ ಇರಿಸುತ್ತಿದ್ದರು. ಕಾರ್ತೀಕಮಾಸದಲ್ಲಿ 'ಅಧ್ಯಕ್ಷರೂ' ಸೇರಿದಂತೆ ಇಡೀ ಮಕ್ಕಳ ಸಮಿತಿಅಲ್ಲಿಯೇ ಇರುತ್ತಿತ್ತು. ಯಾರಾದರೂ ಬರಲಿಲ್ಲ ಅಂದರೆ ಒಂದೋ ಹುಷಾರಿಲ್ಲ ಇಲ್ಲಾ ಅಜ್ಜನಮನೆಗೋ ಎಲ್ಲೋ ಹೋಗಿದ್ದಾರೆಎಂದರ್ಥ. ಹಾಗೆ ಹೋದ ಮಕ್ಕಳು ದೀಪೋತ್ಸವ ತಪ್ಪಿಹೋಗಿದ್ದಕ್ಕೆ ಮರುಗುತ್ತಿದ್ದರು. ದೀಪೋತ್ಸವದಲ್ಲಿ ಹಣತೆ ಹಚ್ಚುವುದೊಂದು ಖುಷಿಯಾದರೆ ಕೆಲವರು [ದೀಪೋತ್ಸವ ನಡೆಸುವ ಯಜಮಾನರು] ಪಟಾಕಿಗಳನ್ನೂ ತರುತ್ತಿದ್ದರು. ನಮಗೆ ಅದರಲ್ಲೂ ಚೂರುಪಾರು ಪಾಲಿಗೆ ಬರುತ್ತಿತ್ತು. ಅದನ್ನು ಸಿಡಿಸಿದಾಗ ಮನದಲ್ಲಿ ಬ್ರಹ್ಮಾನಂದ! ಅಂತೂ ಎಲ್ಲೂ ನಾವು ಸುಮ್ಮನೇ ಕುಳಿತವರಲ್ಲ! ದೇವಸ್ಥಾನಗಳಲ್ಲಿ ದೇವರು ಯಾಕೆ ವಾಹನವನ್ನು ಮುಂದೆ ನಿಲ್ಲಿಸಿದ್ದಾನೆ ಗೊತ್ತೇ ? ಪಾಪ ನಮ್ಮಂತಹ ಮಕ್ಕಳು ಗರ್ಭಗುಡಿಗೇ ನುಗ್ಗಿ ಅವನ ತಿಂಡಿಯನ್ನೇ ಕದ್ದರೆ ಕಷ್ಟ ಹೀಗಾಗಿ ವಾಹನದವರು ಏನಾದ್ರೂ ಮಾಡಿಕೊಳ್ಳಲಿ ಅಂತ ಇರಬೇಕು ಎಂಬುದು ಇಂದು ನಮಗೆ ಹೊಳೆದ ವಿಷಯ! ಏನೂ ಇರಲಿ ದೇವರು ವಿಷಯದಲ್ಲೂ ದೊಡ್ಡವನೇ: ನಮ್ಮಂತಹ ಮಕ್ಕಳಿಗೆ ಏನಾದ್ರೂ ಸ್ವಲ್ಪ ಸಿಗಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡೇ ಮಾತಾಡದ ತನ್ನ ವಾಹನವನ್ನು ಎದುರಿಗೆ ಬಿಟ್ಟಿದ್ದಾನೆ.

ಇಂತಹ ವಾಹನಗಳ ಎದುರಿಗೆ ಇಡುವ ನೈವೇದ್ಯ ಅದು ನಮ್ಮ ಪಾಲಿಗೆ ಸಿಗುವ ಬೋನಸ್ಸು ! ನಮ್ಮಲ್ಲೇ ಕೆಲವೊಮ್ಮೆ ಮೊದಲುಹೇಳಿದ ಟೂ ಬಿಡುವ ವ್ಯಾಪಾರ ಎರಡು ಪಂಗಡಗಳಾಗಿಬಿಟ್ಟರೆ ಅಲ್ಲಿ ಸ್ವಲ್ಪ ಸಮಸ್ಯೆ ಕಾಡುತ್ತದೆ. ಸಿಗುವ ಬೋನಸ್ಸನ್ನು ಯಾರುಪಡೆಯಬೇಕು ಎಂಬುದಾಗಿ. ಹೀಗೇ ನಮ್ಮ ಈಶ್ವರ ದೇವಸ್ಥಾನದಲ್ಲಿ ಅರ್ಚಕರ ಮಗನೊಬ್ಬನಿದ್ದ. ನಮ್ಮ ಓರಗೆಯವನೇ ಅನ್ನಿ. ಆತಬೆಕ್ಕುಗಳಿಗೆ ಮಂಗ ಬೆಣ್ಣೆ ತೂಕ ಮಾಡಿಕೊಟ್ಟಂತೇ ತಾನು ಪಾಲು ಹಂಚಲು ಬರುತ್ತಿದ್ದ. ಬಂದಾತ ಪಾಲಿನಲ್ಲಿ ಅರ್ಧಕ್ಕಿಂತ ಹೆಚ್ಚುತಾನೇ ಎತ್ತಿಟ್ಟುಕೊಂಡು ಮಿಕ್ಕುಳಿದದ್ದನ್ನು ಕೊಡುತ್ತಿದ್ದ. ಇದು ಯಾವ ನ್ಯಾಯ ಹೇಳಿ. ಅದಕ್ಕೇ ನಾವು ಬಹಳ ಉಪಾಯ ಮಾಡಿ ಬಸವನ ಪಾಲನ್ನು ಆತನಿಗೆ ತಿಳಿಯದ ಹಾಗೇ 'ಹೊಡೆಯಲು' ಪ್ರಯತ್ನಿಸಿದೆವು. ಮೊದಲು ಎಲ್ಲರೂ ಟೂ ಬಿಡುವುದನ್ನು ಕಮ್ಮಿಮಾಡಿಕೊಂಡು ನಮ್ಮಲ್ಲೇ ಒಗ್ಗಟ್ಟು ಸಾಧಿಸಿಕೊಂಡೆವು. ನಂತರ ದೀಪೋತ್ಸವದ ಮಂಗಳಾರತಿ ಮುಗಿದು ಅರ್ಚಕರು ಪ್ರಸಾದವನ್ನು ಹೊರ ತರುವಷ್ಟರಲ್ಲಿ ಬಸವನ ಪಾಲು ನಾಪತ್ತೆಮಾಡಲು ಪ್ರಯತ್ನಿಸಿದೆವು. ವರ್ಕ್ ಔಟ್ ಆಯಿತು. ಅರ್ಚಕರಿಗೆ ಹೇರಳವಾಗಿ ಪ್ರಸಾದ ಕೊಡುತ್ತಿದ್ದುದರಿಂದ ಮಗನಿಗೆ ಅಲ್ಲಿ ಸಿಕ್ಕೇ ಸಿಗುತ್ತಿತ್ತು. ಆದರೂ ಬಡಪಾಯಿಗಳಾದ ನಮ್ಮ ಪಾಲನ್ನು ಆತ ಪಾಲುಹಂಚಲು ಪಡೆವ ಕಮಿಶನ್ ಜಾಸ್ತಿಯಾಗಿತ್ತು. ಅದಕ್ಕೇ ಅನ್ನುವುದು ಒಗ್ಗಟ್ಟಿನಲ್ಲಿ ಬಲವಿದೆ, ಇದನ್ನು ನಾವು ಬಸವನ ಪಾಲಿನ ಮುಖಾಂತರ ಸಾಕ್ಷೀಕರಿಸಿದ್ದೇವೆ! ಕೋಪಬಂದರೆ " ಬಸವನ ಪಾಲು ತಿಂದವ್ರೇ " ಅಂತ ಬೈಬೇಡಿ-ನಾವು ಬಹಳ ಜನ ಇದ್ದೇವೆ ಹುಷಾರು ಹಾಂ, ನಿಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಹೇಳಿಬಸವನ ಪಾಲಿಗೆ ವ್ಯವಸ್ಥೆಮಾಡೋಣ,ಹೋಗಿ ಬರಲೇ ? ನಮಸ್ಕಾರ.

Friday, August 27, 2010

ಪರಿಹಾರ


ಪರಿಹಾರ

ಪರಿಹಾರ ಬಯಸುವನೇ ನಿನ್ನ ಸಮಸ್ಯೆಗಳ
ಸರಿಯಾಗಿ ತೆರೆದು ಬೇರ್ಪಡಿಸು ಮನದಿ
ಹರವಾದ ಎದೆಯಲ್ಲೇ ಪರತತ್ವ ಅಡಗಿಹುದು
ಗುರುತು ಹಿಡಿ ಅನುಗಾಲ ನೆನೆಸುತ ವಿಧಿ

ಇಡಿಯ ವಿಶ್ವದ ತುಂಬಾ ಕೋಟಿಕೋಟಿಯ ಜನರು
ಒಡಲಾಳ ಹೊತ್ತುರಿಯೆ ಯಾರು ಬಹರಿಲ್ಲಿ !
ಅಡಿಗಡಿಗೆ ಸಂತಸದ ಪಕ್ವಾನ್ನ ನೀ ಬಡಿಸೆ
ಸಡಗರವು ದಿನವೆಲ್ಲ ಗೆಳೆಯರುಂಟಿಲ್ಲಿ !

ಒಮ್ಮೆ ಜೀವನದಲ್ಲಿ ಕಮ್ಮಿ ಸಂಪಾದಿಸಿರೆ
ನಮ್ಮದೆನ್ನುವ ಬದುಕಿಗದೆ ಮೌಲ್ಯವಿಲ್ಲ
ಜುಮ್ಮೆನುವ ಸಿರಿಯೊಡೆದು ಕಣ್ಣ ಕೋರೈಸುತಿರೆ
ತಮ್ಮವರು ನೀವೆಂಬ ಮೌಲ್ಯವಿಹುದಲ್ಲ !

ಯಾಕೆ ನೀನೀರೀತಿ ದೇಖರಿಕೆ ಇಲ್ಲದಲೆ
ಸಾಕಷ್ಟು ದುಡಿದಿಲ್ಲವೆಂಬ ಬಿರುದುಗಳು !
ಬೇಕಾದ ಫಲವನ್ನು ಕೊಡದೆ ಆಡಿಸುತಿರುವ
ನೀ ಕಾಣದಾ ಶಕ್ತಿ ಹುದುಗಿಕುಳಿತಿಹುದು

ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ
ಸುಮ್ಮನಿರಗೊಡದೆಮ್ಮ ಹರಿದು ತಿನ್ನುವುದು !
ಒಮ್ಮತಕೆ ಒಗ್ಗದಾ ಮನವು ಹತ್ತೆಣಿಸುತ್ತ
ನಮ್ಮಾತ್ಮ ಶಕ್ತಿಯನೆ ಕಳೆಗುಂದಿಸಿಹುದು

ಬಾರೋ ಆಚೆಗೆ ಇಲ್ಲಿ ಬಾ ಹೊರಗೆ ಧ್ಯಾನಿಸುತ
ದೂರದಲಿ ನಿಂತೊಮ್ಮೆ ನೋಡು ನಿನ್ನತನ !
ಆರಂಭಶೂರತನ ಇಲ್ಲದಲೆ ಅನುಭವಿಸು
ಪ್ರಾರಬ್ಧಕರ್ಮಗಳ ತೊಳೆಯೇ ಪ್ರತಿದಿನ