ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, August 27, 2010

ಪರಿಹಾರ


ಪರಿಹಾರ

ಪರಿಹಾರ ಬಯಸುವನೇ ನಿನ್ನ ಸಮಸ್ಯೆಗಳ
ಸರಿಯಾಗಿ ತೆರೆದು ಬೇರ್ಪಡಿಸು ಮನದಿ
ಹರವಾದ ಎದೆಯಲ್ಲೇ ಪರತತ್ವ ಅಡಗಿಹುದು
ಗುರುತು ಹಿಡಿ ಅನುಗಾಲ ನೆನೆಸುತ ವಿಧಿ

ಇಡಿಯ ವಿಶ್ವದ ತುಂಬಾ ಕೋಟಿಕೋಟಿಯ ಜನರು
ಒಡಲಾಳ ಹೊತ್ತುರಿಯೆ ಯಾರು ಬಹರಿಲ್ಲಿ !
ಅಡಿಗಡಿಗೆ ಸಂತಸದ ಪಕ್ವಾನ್ನ ನೀ ಬಡಿಸೆ
ಸಡಗರವು ದಿನವೆಲ್ಲ ಗೆಳೆಯರುಂಟಿಲ್ಲಿ !

ಒಮ್ಮೆ ಜೀವನದಲ್ಲಿ ಕಮ್ಮಿ ಸಂಪಾದಿಸಿರೆ
ನಮ್ಮದೆನ್ನುವ ಬದುಕಿಗದೆ ಮೌಲ್ಯವಿಲ್ಲ
ಜುಮ್ಮೆನುವ ಸಿರಿಯೊಡೆದು ಕಣ್ಣ ಕೋರೈಸುತಿರೆ
ತಮ್ಮವರು ನೀವೆಂಬ ಮೌಲ್ಯವಿಹುದಲ್ಲ !

ಯಾಕೆ ನೀನೀರೀತಿ ದೇಖರಿಕೆ ಇಲ್ಲದಲೆ
ಸಾಕಷ್ಟು ದುಡಿದಿಲ್ಲವೆಂಬ ಬಿರುದುಗಳು !
ಬೇಕಾದ ಫಲವನ್ನು ಕೊಡದೆ ಆಡಿಸುತಿರುವ
ನೀ ಕಾಣದಾ ಶಕ್ತಿ ಹುದುಗಿಕುಳಿತಿಹುದು

ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ
ಸುಮ್ಮನಿರಗೊಡದೆಮ್ಮ ಹರಿದು ತಿನ್ನುವುದು !
ಒಮ್ಮತಕೆ ಒಗ್ಗದಾ ಮನವು ಹತ್ತೆಣಿಸುತ್ತ
ನಮ್ಮಾತ್ಮ ಶಕ್ತಿಯನೆ ಕಳೆಗುಂದಿಸಿಹುದು

ಬಾರೋ ಆಚೆಗೆ ಇಲ್ಲಿ ಬಾ ಹೊರಗೆ ಧ್ಯಾನಿಸುತ
ದೂರದಲಿ ನಿಂತೊಮ್ಮೆ ನೋಡು ನಿನ್ನತನ !
ಆರಂಭಶೂರತನ ಇಲ್ಲದಲೆ ಅನುಭವಿಸು
ಪ್ರಾರಬ್ಧಕರ್ಮಗಳ ತೊಳೆಯೇ ಪ್ರತಿದಿನ

16 comments:

 1. [ಒಮ್ಮತಕೆ ಒಗ್ಗದಾ ಮನವು ಹತ್ತೆಣಿಸುತ್ತ
  ನಮ್ಮಾತ್ಮ ಶಕ್ತಿಯನೆ ಕಳೆಗುಂದಿಸಿಹುದು]
  ನಿಜ, ಭಟ್ಟರೇ,ನಮ್ಮ ಆತ್ಮಶಕ್ತಿಯ ಜಾಗೃತಿಯತ್ತ ನಮ್ಮ ಗಮನ ನೆಟ್ಟಿರಬೇಕು, ಇಲ್ಲವಾದರೆ [ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ
  ಸುಮ್ಮನಿರಗೊಡದೆಮ್ಮ ಹರಿದು ತಿನ್ನುವುದು]
  - ಅದ್ಭುತ ಸಾಲುಗಳು ಭಟ್ಟರೇ,
  -ಶ್ರೀಧರ್

  ReplyDelete
 2. ಅನಂತ ಕೃತಜ್ಞತೆಗಳು ಶ್ರೀ ಶ್ರೀಧರ್ .

  ReplyDelete
 3. ಭಟ್ ಸರ್,

  ನಿಮ್ಮ ಮಾತಿನಲ್ಲಿ ಮತ್ತು ಬರವಣಿಗೆಯಲ್ಲಿ ಅದ್ಯಾತ್ಮದ ಆಳವಿದೆ. ಕವನ ಓದಿದಾಗ ಗೊತ್ತಾಯಿತು.

  ReplyDelete
 4. ಜೀವನದ ಅನುಭವಾಮೃತ ಸಾರ ಉಣಬಡಿಸಿದ ಕವಿತೆ .ಇಷ್ಟವಾಯಿತು.

  ReplyDelete
 5. ಬಾರೋ ಆಚೆಗೆ ಇಲ್ಲಿ ಬಾ ಹೊರಗೆ ಧ್ಯಾನಿಸುತ
  ದೂರದಲಿ ನಿಂತೊಮ್ಮೆ ನೋಡು ನಿನ್ನತನ !
  ಆರಂಭಶೂರತನ ಇಲ್ಲದಲೆ ಅನುಭವಿಸು
  ಪ್ರಾರಬ್ಧಕರ್ಮಗಳ ತೊಳೆಯೇ ಪ್ರತಿದಿನ
  tumba arthapoornavaagide..

  ReplyDelete
 6. ನಿಮ್ಮ ಸಾಲುಗಳಲ್ಲಿ ಗಹನವಾದ ವಿಚಾರ ಅಡಕಗೊಳಿಸಿದ್ದೀರಿ. ಅದ್ಭುತವಾಗಿದೆ. ಶರಣು.

  ReplyDelete
 7. ದೂರದಲಿ ನಿಂತೊಮ್ಮೆ ನೋಡು ನಿನ್ನತನ...ಅರಿವು ಮಾಡಿಸುವ ವಿಚಾರಧಾರೆ ತುಂಬಿದ ಕವನ..ಚೆನ್ನಾಗಿದೆ.

  ReplyDelete
 8. "ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ" ಉತ್ತಮವಾದ ಸಾಲುಗಳು ತುಂಬಾ ಇಷ್ಟ ಆಯ್ತು :)

  ReplyDelete
 9. ಮೊದಲಾಗಿ ಶಿವು ಅವರಿಗೆ ಉತ್ತರಿಸುತ್ತೆನೆ : ಆಧ್ಯಾತ್ಮ ಇಲ್ಲದ ಜೀವನ ಸಿಮ್ಮಿಲ್ಲದ ಮೊಬೈಲ್ ಇದ್ದಂತೆ, ಬದುಕು ನೀರಸವಾಗಿರುತ್ತದೆ. ನೀವೇ ನೋಡಿ ಎಷ್ಟೇ ಚಂದದ ಮನೆ ಇದ್ದರೂ ಅಲ್ಲಿ ದೇವರಿಗೊಂದು ಜಾಗ ಕೊಡದಿದ್ದರೆ ಮನೆ ಪೂರ್ಣವಾದ ಅನಿಸಿಕೆ ಬರುವುದೇಇಲ್ಲ. ಆಧ್ಯಾತ್ಮದ ಒಂದಿ ಪಿಂಚ್ ಇದ್ದರೆ ಊಟಕ್ಕೆ ಉಪ್ಪಿನಕಾಯಿ ಇದ್ದಹಾಗೆ ಚೆನ್ನಾಗಿರುತ್ತದೆ, ಆ ಊಟ ಪೂರ್ಣವಾಗುತ್ತದೆ. ಅದಕ್ಕೇ ಹಿಂದೆ ಶಾಸ್ತ್ರಕಾರರು ಕಾವ್ಯವನ್ನು ಸೃಜಿಸುವವರು ಋಷಿಗಳೇ ಆಗಿರುತ್ತಾರೆ ಎಂದರು, ಅದರರ್ಥ ನಾವು ಬರೆದದ್ದೆಲ್ಲಾ ಕಾವ್ಯವಾಗಲು ಸಾಧ್ಯವಿಲ್ಲ, ಅಸಲಿಗೆ ನಾವು ಬರೆಯುವುದೆಲ್ಲ ಕವನಗಳೇ ಹೊರತು ಕಾವ್ಯವಲ್ಲ! ವಾಲ್ಮೀಕಿ ರಾಮಾಯಣ ನೋಡಿ ಅದು ಕಾವ್ಯ. ಕಾವ್ಯವನ್ನು ಬರೆಯುವಾಗ ನಮ್ಮ ರಂಜನೆಯ ಜೊತೆಗೆ ಮುಂದಿನ ಪೀಳಿಗೆಗೆ ಅದರ ಉಪಯೋಗವಾಗುವ ಹಾಗೆ ಬರೆದರೆ ಅವರೂ ಅದನ್ನು ಬಳಸಲು ಅನುಕೊಲವಾಗುತ್ತದೆ. ಇವತ್ತು ನಾವು ಬೇಂದ್ರೆ, ಮಾಸ್ತಿ,ಕುವೆಂಪು, ಡೀವೀಝಿ ಇವರನ್ನೆಲ್ಲಾ ನೆನೆಸಲು ಕಾರಣ ಅವರ ಕಾವ್ಯದ ಕಂಪು! ಹೀಗಾಗಿ ಆಧ್ಯಾತ್ಮದ ರಸಾನುಭೂತಿ ಇರುವ್ದು ಬಹಳ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಮತ್ತು ಅನುಭವ ಕೂಡ. ನಿಮಗೆ ಧನ್ಯವಾದಗಳು.

  * ಶ್ರೀ ತರುಣ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  * ಶ್ರೀ ಬಾಲು, ನಿಮಗೆ ಕೃತಜ್ಞನಾಗಿದ್ದೇನೆ

  * ಶ್ರೀ ವೆಂಕಟೇಶ್, ಬಹಳ ರಸಾಸ್ವಾದನೆ ಮಾಡಿದಿರಿ, ಇನ್ನೂ ನಾಳೆ ನಿಮಗೆ ಕಾಡಿನ ಮನೆಯ ಕವಿತೆ ಕೊಡಲಿದ್ದೇನೆ, ಧನ್ಯವಾದಗಳು.

  * ಶ್ರೀ ಪರಾಂಜಪೆ, ಗಹನವಾದ ವಿಚಾರ ಎಂದಿರಿ, ನಿಮ್ಮ ಅನಿಸಿಕೆಗೆ ತಲೆಬಾಗಿದ್ದೇನೆ, ನಮಸ್ಕಾರಗಳು.

  * ಶ್ರೀ ಶೀಕಾಂತ್ ತಮ್ಮ ಅಭಿಪ್ರಾಯಕ್ಕೆ ಋಣಿ

  * ಶ್ರೀ ನಾರಾಯಣ ಭಟ್ಟರೆ, ವಿಚಾರ ಪೂರಿತ ಎಂದು ಅಭಿಪ್ರಾಯಪಟ್ಟಿರಿ, ನಿಮಗೆ ಹಲವು ನೆನಕೆಗಳು

  * ಶ್ರೀ ದಿನಕರ್, ಸೂಪರ್ ಎಂದಿರಿ, ನಿಮಗೆ ಸೂಪರ್ ಆಗಿರುವ ಶೈಲಿಯಲ್ಲಿ ನಮನ: ಎಂದುಮಾರಾಯರೆ ನಿಮಗೆ ಗೊತ್ತಿಲ್ಲವೋ ಇದೆಲ್ಲಾ ನಮಗೆ ಮಾಮೂಲು, ನಿಮಗೆ ನಮ್ಮ ಮಂಗಳೂರಿನ ನಮಸ್ಕಾರಗಳು ಮಾರಾಯರೆ

  * ಶ್ರೀ ದೊಡ್ಡಮನಿ ಮಂಜು ಅವರೆ ನಿಮಗೆ ಸ್ವಾಗತ ಮತ್ತು ನಮನಗಳು.

  ಬ್ಲಾಗಿಗೆ ಹೊಸಾದಾಗಿ ಬಂದ ಶ್ರೀ ಪ್ರದೀಪ್ ರಾವ್ ನಿಮಗೆ ಸ್ವಾಗತ ಹಾಗೂ ನಮನ.

  ReplyDelete
 10. ತೀವ್ರ ಸಂದೇಶದ ಕವನ. ಬದುಕು ಬಕುವ ಪರಿಯನ್ನು ಬಿಚ್ಚಿಡುವ ಕವನ ಮನಕ್ಕೆ ಆಪ್ತವೆನಿಸಿತು. ಧನ್ಯವಾದಗಳು.

  ReplyDelete
 11. ಈ ಸಾಲುಗಳು ಅದ್ಭುತ "
  ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ
  ಸುಮ್ಮನಿರಗೊಡದೆಮ್ಮ ಹರಿದು ತಿನ್ನುವುದು !
  ಒಮ್ಮತಕೆ ಒಗ್ಗದಾ ಮನವು ಹತ್ತೆಣಿಸುತ್ತ
  ನಮ್ಮಾತ್ಮ ಶಕ್ತಿಯನೆ ಕಳೆಗುಂದಿಸಿಹುದು"

  ReplyDelete
 12. Bhatre,

  once again superbbbb....Tumbaa adbhuta saalugalu sir....

  ReplyDelete