ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, September 3, 2010

ಪ್ರತ್ಯಾಹಾರ

ಪ್ರತ್ಯಾಹಾರ

[ ಅನೇಕ ಹಿರಿಯ ಮಿತ್ರರು ಪ್ರತ್ಯಾಹಾರದ ಬಗ್ಗೆ ಬರೆಯಲು ಕೇಳಿದ್ದಾರೆ, ಅದರ ಸ್ಥೂಲರೂಪವನ್ನು ಜಗದಮಿತ್ರ ನಿಮಗೆ ಇಲ್ಲಿ ಕೊಟ್ಟಿದ್ದಾನೆ. ಸ್ನೇಹಿತರೇ ಶ್ರೀಕೃಷ್ಣನ ಜನ್ಮ ದಿನದ ಸಮಯದ ಸುತ್ತ ಬರೆದ ಕೃತಿಗಳನ್ನು ಓದಿ, ಹಲವಾರು ಪನವಾರ ಸ್ವೀಕರಿಸಿದಿರಿ, ಈಗ ಪರಮಾತ್ಮ ಶ್ರೀಕೃಷ್ಣ ಜಗದ್ಗುರುವಾಗಿ ಬೋಧಿಸಿದ ಗೀತೆಯಲ್ಲಿ ಆತನೇ ಹೇಳಿದ ಪ್ರತ್ಯಾಹಾರದ ಬಗ್ಗೆ ಸ್ವಲ್ಪ ಅರಿಯೋಣ ಅಲ್ಲವೇ ? ಪ್ರತ್ಯಾಹಾರ ಎಂಬುದರ ಬಗ್ಗೆ ವಿಸ್ತೃತವಾಗಿ ಓದಲಿದ್ದೀರಿ ಮುಂದಿನ ಲೇಖನದಲ್ಲಿ,ಸದ್ಯಕ್ಕೆ ಈ ಕಾವ್ಯರೂಪ ನೋಡೋಣ ]


ಹತ್ತುಸಾವಿರ ಕೋಟಿ ನಿನ್ನೆದುರು ಬಿದ್ದರೂ
ಎತ್ತಿಡಲು ಬೇಡ ನಿನ್ನದು ಅಲ್ಲದಿರಲು
ಮುತ್ತು ಮಾಣಿಕವು ಮತ್ತೆರಡು ನಿನ್ ಕಣ್ಸೆಳೆಯೆ
ಕುತ್ತು ಅದ ನೀ ಬಯಸೆ | ಜಗದಮಿತ್ರ

ಉತ್ತಿ ಬೀಜವ ಬಿತ್ತು ಪರಮಾತ್ಮನಂ ನೆನೆದು
ಬಿತ್ತ ಬೀಜಕೆ ಫಲವ ನೀ ಗುಣಿಸಬೇಡ
ಅತ್ತು ಕರೆದರೂ ಬಹದು ಲಭ್ಯ ನಿನಗಿಲ್ಲದಿರೆ
ಮತ್ತೆ ಬೇಸರವೇಕೆ ? ಜಗದಮಿತ್ರ

ನುಚ್ಚಿನುಂಡೆಯ ರಾಶಿ ಪಂಚಭಕ್ಷ್ಯಗಳಿಹವು
ಮೆಚ್ಚಿ ನಿನ್ನಿರವರಿತು ತಿನ್ನಲ್ಪವದರ
ಹುಚ್ಚೆದ್ದು ಕುಣಿದು ತನಗೇ ಎಂಬ ಮನವನ್ನು
ಬೆಚ್ಚಿಬೀಳಿಸು ಬೈದು | ಜಗದಮಿತ್ರ

ಯಾರನ್ನೂ ನೆಚ್ಚಿರದೆ ಸ್ವಾವಲಂಬನೆ ನಡೆಸು
ದಾರಿ ಹೋಕನು ನೀನು ನೆನೆಪು ನಿನಗಿರಲಿ
ಊರು ದೊಡ್ಡದೇ ಇರಲಿ ಕೇರಿ ಸಣ್ಣದೇ ಇರಲಿ
ಏರು ಮೇಲ್ಪಂಕ್ತಿಯಲಿ | ಜಗದಮಿತ್ರ

ನೀನೇನೂ ತಂದಿಲ್ಲ ಭುವಿಗೆ ಬರುವಾದಿನದಿ
ಏನೇನೋ ಕೊಂಡೊಯ್ಯಲಾರೆ ಹೊರಡುವೊಲು
ತಾನು ತನ್ನವರೆಂಬ ವ್ಯಾಮೋಹಕಿರಲಿ ಮಿತಿ
ದೀನ ನೀ ತಿಳಿದುನಡೆ | ಜಗದಮಿತ್ರ

ಇದ್ದಿಹುದ ಅನುಭವಿಸು ಇರುವನಕ ಪಡೆದುದನು
ಎದ್ದುಹೋದುದ ಬಯಸಿ ಕರುಬುವುದು ತರವೇ ?
ಉದ್ದುದ್ದ ಪೋಣಿಸುತ ಅತಿಯಾದ ಬಯಕೆಗಳ
ಒದ್ದು ಓಡಿಸು ಹೊರಗೆ | ಜಗದಮಿತ್ರ

ನೀನು ನೀನೇ ಹೊರತು ಅವನಲ್ಲ ವೆಂಬುದನು
ಸಾನುರಾಗದಿ ಮನಕೆ ನೀ ಒತ್ತಿ ಹೇಳು
ಮಾನವನು ನೀನಾಗು ಓದಿ ಜ್ಞಾನವಪಡೆದು
ಹಾನಿ ತಟ್ಟದು ನಿನಗೆ | ಜಗದಮಿತ್ರ

ಅದು ಸಿಗದು ಇದು ಸಿಗದು ಎಂಬ ಹಳವಳಿಕೆಯಲಿ
ಕುದಿಕುದಿದು ಕಂಡಲ್ಲಿ ಅಂಡಲೆಯಬೇಡ
ಒದಗುವುದು ನಿನಗೆಲ್ಲ ಭಾಗ್ಯ ಬರೆದಿರಲಲ್ಲಿ
ಹದಗೊಳಿಸು ನಿನ್ನಮನ | ಜಗದಮಿತ್ರ

18 comments:

 1. ಭಟ್ಟರೇ;ಅದ್ಭುತ ಜ್ಞಾನವನ್ನು ಅದ್ಭುತ ರೀತಿಯಲ್ಲಿ ಜಗದಮಿತ್ರನಿಂದ ಹೇಳಿಸಿದ್ದಕ್ಕೆ ಇಗೋ ನನ್ನ ಸಾಷ್ಟಾಂಗ ಪ್ರಣಾಮಗಳು ಗುರುವೇ.

  ReplyDelete
 2. ಭಟ್ ಸರ್,
  ನಿಮ್ಮ ಎಲ್ಲಾ ಬರಹಗಳಿಗೆ, ಕವನಗಳಿಗೆ ಚೆನ್ನಾಗಿದೆ ಚೆನ್ನಾಗಿದೆ ಎಂದು ಬರೆದು ಸಾಕಾಗಿದೆ ಸರ್........ ಮತ್ತೇನು ಬರೆಯಲು ಬರುತ್ತಿಲ್ಲ...... ಸೂಪರ್ ಸೂಪರ್.... ಸುಪರ್...

  ReplyDelete
 3. ಜಗದ ಮಿತ್ರನ ವಚನಗಳು ಎಂದಿನಂತೆ ಅದ್ಭುತ ಸರ್.....

  ReplyDelete
 4. "ಜಗದಮಿತ್ರ"ನ ಉಕ್ತಿಗಳು...ಮೆಚ್ಚಿದೆ.

  ReplyDelete
 5. ಸ್ವಾಮೀ ನಿಮ್ಮ ಜೀವನದಲ್ಲಿ ಸರಸ್ವತಿ ಯಾವಾಗ ಇಷ್ಟು ಜ್ಞಾನ ಇತ್ತಲೋ ಕಾಣೆ ಬ್ಲಾಗಿಗರಿಗೆ ಜ್ಞಾನದ ರಸದೌತಣ ನೀಡುತ್ತಿದ್ದೀರಿ. ಆ ಸರಸ್ವತಿ ನಿಮ್ಮನ್ನು ಹೀಗೆ ಮುನ್ನಡೆಸಲಿ ನಮಗೆ ಜ್ಞಾನದ ಮೃಷ್ಟಾನ್ನ ಹೀಗೆ ದೊರಕಲಿ.

  ReplyDelete
 6. sir.. nimage nive saati sir... nanu super chenagide annodaginta... namam kananda dalli inna uttama pada idre heli sir adanne heltivi.. ಜಗದಮಿತ್ರ nanodige nimma aa saraswati jnanana hagi hachi hilisiddira.. mattastu-madadstu barta irali sir.. namantavarige annandahunisali sir...

  ReplyDelete
 7. ಜಗದಮಿತ್ರನ ಮೂಲಕ ಗೀತಾಚಾರ್ಯನ ಜೀವನ ಸ೦ದೇಶವನ್ನ ಸರಳಭಾಷೆಯಲ್ಲಿ ಅದ್ಭುತವಾಗಿ ರಚಿಸಿ, ನಮಗೆಲ್ಲಾ ಉಣಬಡಿಸಿದ್ದಿರಾ..
  ಆ ಸರಸ್ವತಿಯು ಹೀಗೆ ತಮ್ಮ ಮುಖಾ೦ತರ ಜ್ಞಾನಧಾರೆ ಹರಿಸಿ ನಮ್ಮನ್ನು ಅದರ ಪ್ರಯೋಜಿತರನ್ನಾಗಿಸಲಿ.
  ಜೈ ಹೋ!

  ReplyDelete
 8. ಭಟ್ಟರೆ,
  ಪ್ರತ್ಯಾಹಾರದ ತಿರುಳನ್ನು ತಿಳಿಸಿದ್ದೀರಿ. ಧನ್ಯವಾದಗಳು.

  ReplyDelete
 9. ಓದುಗ ಮಿತ್ರರೇ, ಯಾರೋ ಪೂರ್ಣಿಮಾ ಅಂತೆ[ಹೆಂಗಸೋ ಅಥವಾ ಹೆಂಗಸಿನ ಹೆಸರಲ್ಲಿ ಗಂಡಸೋ ಗೊತ್ತಿಲ್ಲ] , ಕಾವ್ಯದಲ್ಲಿ ನಾನು ಮರ್ಕಟ ಮನಸ್ಸನ್ನು 'ಬೆದೆಗೆ ಬಂದ ನಾಯಿ' ಎಂದು ಬರೆದಿದ್ದಕ್ಕೆ ಬ್ಲಾಗಿಗರಿಗೆಲ್ಲ ನೋವಾಗುವಂತೆ ಅವರ ಮನಸ್ಸು ಬೆದೆ ಬಂದ ಸ್ಥಿತಿಯಲ್ಲಿ ಪ್ರತಿಕ್ರಿಯಿಸಿದ್ದನ್ನೂ ಮತ್ತು ಅವರು ಬಳಸಿದ ಅವರ ಸಂಸ್ಕಾರದ ಶಬ್ಧಗಳನ್ನೂ ನಮ್ಮ ಬ್ಲಾಗಿಗ ಮಿತ್ರರಿಗೆ ಬೇಸರವಾಗಬಾರದೆಂಬ ಕಾರಣದಿಂದ ಅಳಿಸಿದ್ದೇನೆ, ಪೂರ್ಣಿಮಾರವರೆ, ಕಾವ್ಯದಲ್ಲಿ ಶಬ್ದ ಪ್ರಯೋಗ ಅದು ಸಾಂಕೇತಿಕ ಅಷ್ಟೇ ! ಅದನ್ನೇ ಹಿಡಿದುಕೊಂಡು ಆಟವಾಡುವ ನಿಮ್ಮಂಥವರಿಗೆ ಕಾವ್ಯ ಬರೆಯಲು ಆಗುವುದಿಲ್ಲವಲ್ಲ ! ಗುಂಡಪ್ಪನವರ ಕಾವ್ಯಕ್ಕೂ ಸ್ಪರ್ಧೆ ಅಂದಿರಿ, ಇದು ಸ್ಪರ್ಧೆಯಲ್ಲ-ಅವರನ್ನು ಮಾನಸ ಗುರುವೆಂದು ಅವರ ನಡಿಗೆಯ ಹಾದಿಯಲ್ಲಿ ಅನುಸರಿಸಿದ್ದು, ನಿಮ್ಮ ಸಂತೋಷಕ್ಕಾಗಿ ಆ ಶಬ್ದವನ್ನೂ ಬದಲಾಯಿಸಿದ್ದೇನೆ ನೋಡಿ! ನಿಮಗೆ ಉತ್ತರ ನನ್ನ ಮುಂದಿನ ಲೇಖನದಲ್ಲಿ ತಕ್ಕುದಾಗಿ ಸಿಗುತ್ತದೆ,ತಲೆಕೆಡಿಸಿಕೊಳ್ಳ ಬೇಡಿ !

  ReplyDelete
 10. ಭಟ್ ಸರ್,

  ಇಂಥ ವಿಚಾರಗಳನ್ನು ನೀವು ತುಂಬಾ ಚೆನ್ನಾಗಿ ಬ್ಲಾಗಿನಲ್ಲಿ ಹೇಳುತ್ತೀರಿ. ಅದಕ್ಕಾಗಿ ಧನ್ಯವಾದಗಳು.

  ReplyDelete
 11. ಜಗದಮಿತ್ರನ ಲೇಖನಿಯಿ೦ದ ಪ್ರತ್ಯಾಹಾರದ ತಿರುಳು ತಿಳಿದು ಮನಸು ತಿಳಿಯಾಯಿತು. ಧನ್ಯವಾದಗಳು.

  ReplyDelete
 12. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ಅತ್ಯಂತ ಆಪ್ತ ನಮನಗಳು, ಕೆಲಸದ ಒತ್ತಡದಲ್ಲಿ ಪ್ರತ್ಯೇಕ ಬರೆಯಲಾಗುತ್ತಿಲ್ಲ, ದಯವಿಟ್ಟು ಇದನ್ನೇ ಪ್ರತ್ಯೇಕವೆಂದು ಪರಿಗಣಿಸಿ, ಎಲ್ಲರ ಬ್ಲಾಗಿಗೂ ದಿನವೊಪ್ಪತ್ತರಲ್ಲಿ ಬರುತ್ತೇನೆ, ನಮಸ್ಕಾರಗಳು.

  ReplyDelete
 13. ಶ್ರೀ ಉಮೇಶ ದೇಸಾಯಿಗಳೇ ಹೊಸದಾಗಿ ಬಂದು ಲಿಂಕಿಸಿಕೊಂಡ ತಮಗೆ ಸ್ವಾಗತ ಹಾಗೂ ನಮನ

  ReplyDelete
 14. ತುಂಬಾ ಚೆನ್ನಾಗಿದೆ ಬರಹ, ಜಗದಮಿತ್ರನಿಗೆ ನಮೊ ನಮ: .. :)

  ReplyDelete
 15. ಶ್ರೀ ಅಶೋಕ್ ಮತ್ತು ಶ್ರೀ ಪ್ರಸಾದ್ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

  ReplyDelete
 16. ನಿಮ್ಮಿಂದ ವಿಚಾರಧಾರೆ ಹರಿದುಬಂದು ನಮ್ಮ ಜ್ಞಾನಸಾಗರ ಸೇರುತ್ತಿದೆ..
  ಹೀಗೆ ಹರಿದುಬರುತ್ತಿರಲಿ..

  ReplyDelete