ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, September 2, 2010

" ಕೃಷ್ಣಾ ಎನಬಾರದೇ ??"

ಚಿತ್ರಗಳ ಕೃಪೆ :ಅಂತರ್ಜಾಲ

" ಕೃಷ್ಣಾ ಎನಬಾರದೇ ??"
[ಕೃಷ್ಣಾಷ್ಟಮಿಯ ಸಡಗರದಲ್ಲಿ ಇದು ಇಂದಿನ ಕೃಷ್ಣ ಜಯಂತಿಯ ವಿಶೇಷ!]ಚಿತ್ರಾನ್ನ
[ನಿನ್ನೆಯ ಉಪವಾಸದಿಂದ ಹಾಗೇ ಉಳಿದಿರುವ ಅನ್ನಕ್ಕೆ ಒಗ್ಗರಣೆ ಹಾಕಿದ್ದು!]


ಅಮ್ಮ ಗುಮ್ಮನ ಕರೆದಾಗ
ಶಾಲೆಯ ಮಾಸ್ತರು ಬೈದಾಗ
ಮನೆಯಲ್ಲಿ ಅಪ್ಪ ಹೊಡೆದಾಗ
ಚಿಕ್ಕಪ್ಪ ಕೋಪಿಸ್ಕೊಂಡು ಬೈದಾಗ
ಆಚೆಮನೆ ಸೀತಾರಾಂಭಟ್ರು
ನನಗಿಂತ ಮುಂದೆ ರಸ್ತೆಯಲ್ಲಿ ನಡೆಯುತ್ತಿದ್ದವರು
ಬುರ್ರೆನಿಸಿ ಬಾಯ್ತುಂಬ ಉಗುಳಿದ
ಎಲೆಯಡಿಕೆಯ ಕಾರಂಜಿಯ ತುಂತುರು ಹನಿಗಳು
ತಂದ ರಂಗು ಮೈಮೇಲೆ ರಂಗೋಲಿ ಬರೆದಾಗ
ಸಣ್ಣವನಿದ್ದೆ ತಿಳಿಯುತ್ತಿರಲಿಲ್ಲ !
ನಾನಂದು ಕೊಂಡೆ ಇವರೆಲ್ಲಾ ನನ್ನ ವಿರೋಧಿಗಳು !

ಕ್ಲಾಸಿನ ಹುಡುಗ ಸುಬ್ರಹ್ಮಣ್ಯ ದೋಸ್ತಿಬಿಟ್ಟಾಗ
ಸರಕಾರೀ ರೇಷನ್ ಅಂಗಡಿಯವ
ಸಮಯಕ್ಕೆ ಅಕ್ಕಿ-ಸಕ್ಕರೆ-ಸೀಮೆ ಎಣ್ಣೆ ಕೊಡದಾಗ
ದೇವಕಮ್ಮ ಗಂಡನ ಕಿವಿ ಊದಿ
ಯುವಕ ಸಂಘಕ್ಕೆ ವಂತಿಗೆ ನಿರಾಕರಿಸಿದಾಗ
ಸಣ್ಣಗೆ ಬಳುಕುವ ಕೊನೇ ಮನೆ ರಾಧೆ
ನಾ ದೊಡ್ಡವನಾದೆನೆಂದು ಸಂಗವನ್ನೇ ತ್ಯಜಿಸಿದಾಗ
ನಾರಣ ನಮ್ಮ ತೋಟದಲ್ಲಿ ಹಸನಾಗಿದ್ದ
ಹೊಸ ಬಾಳೆಮರದ ಎಲೆಯನ್ನು ಬಗ್ಗಿಸಿ ಕೊಯ್ದಾಗ
ಕೆಲಸಕ್ಕೆ ಬಂದ ಕುಪ್ಪ ಅಪ್ಪನನ್ನು ಹೇಳ್ದೇ ಕೇಳ್ದೇ
ಸಮಯಕ್ಕೂ ಮುಂಚೆ ಹೊತ್ತಾಯಿತೆಂದು ಹಾರೋಡಿ ಹೋದಾಗ
ಇನ್ನೂ ಪೂರ್ತಿ ಹದಿವಯಸ್ಸಿಗೆ ಬಂದಿರಲಿಲ್ಲ !
ನಾನೆಂದು ಕೊಂಡೆ ಇವರೆಲ್ಲಾ ನನ್ನ ಹಿತಶತ್ರುಗಳು !

ಮಂಚ್ಮಾಣಿ ಇಂಗ್ಲೀಷು ಕಲಿಯುತ್ತ
ನಮ್ಮ ಜೊತೆ ಬೆರೆಯದೇ ತಮ್ಮ ಗುಂಪನ್ನೇ ಬೇರೆ ಮಾಡಿಕೊಂಡಾಗ
ಸಂಚಿಹೊನ್ನಮ್ಮನಂಥ ಸುಧಾ ಗೆಳೆಯ ಸದಾನಿಗೆ
ವಿನಾಕಾರಣ ಡೈವೋರ್ಸ್ ಕೊಟ್ಟಾಗ
ಅಕ್ಕ-ತಂಗಿಯರನ್ನು ಸತಾಯಿಸುತ್ತ ಅವರ ದುಡಿಮೆಯಲ್ಲಿ
ಉಂಡು ದುರ್ದುಂಡಿಯಾಗಿ ಬೆಳೆದ ಮಂಜುವನ್ನು ನೋಡಿದಾಗ
ಏನೂ ಅರಿಯದ ಮುಗ್ಧ ನವೀನನನ್ನು
ಏನೋ ಕಾರಣದಿಂದ ಪೋಲೀಸರು ಕರೆದೊಯ್ದಾಗ
ಪರಿಹಾರ ಕೊಡಿಸುವ ನೆಪದಲ್ಲಿ ಸಣ್ಣೀರಿಯ
ಮಗಳನ್ನು ಬುಟ್ಟಿಗೆ ಹಾಕಿಕೊಂಡ ಗಾಜು
ಅವಳನ್ನು ಬಸಿರುಮಾಡಿ ಕೈಕೊಟ್ಟು ಕೈತೊಳೆದುಕೊಂಡಾಗ
ಸ್ವಲ್ಪ ವಯಸ್ಸಿಗೆ ಕಾಲಿಡುತ್ತಿದ್ದೆನಲ್ಲ !
ನಾನಂದುಕೊಂಡೆ ಇವರೆಲ್ಲಾ ದುಶ್ಯಾಸನ ಕುಲದವರು!

ವೃದ್ಧ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ
ಕಳಿಸಿದ ಮಗ-ಸೊಸೆ ಜಗನ್-ಮೋಹಿನಿಯರನ್ನು ಕಂಡಾಗ
ಪಾಪಿಜನ ಬಿಳಿಯ ದನವನ್ನು ಕದ್ದೊಯ್ದು
ಕತ್ತರಿಸಿ ತಿಂದ ಕಥೆಕೇಳಿದಾಗ
ಆಸರೆ ನೀಡುವ ರಾಜಕಾರಣಿಗಳು
ಪರಿಹಾರ ಕೊಡುವ ಬದಲು ಸಂಗ್ರಹಿಸಿದ
ನಿಧಿಯನ್ನೇ ಕದ್ದು ತಿಂದಾಗ
ಪ್ರಾಮಾಣಿಕರಾದ ಧಣಿಗಳು ಹಾಡಹಗಲೇ
ಗಣಿಯನ್ನು ಮುಕುರಿಕೊಂಡು ತಿಂದು ತೇಗುವಾಗ
ವರದಕ್ಷಿಣೆ ಹೆಚ್ಚಿಗೆ ತಾರದ ನವ ವಧುವನ್ನು
ಅತ್ತೆ-ಮಾವ-ಗಂಡ ಕತ್ತು ಹಿಚುಕಿ ಸಾಯಿಸಿದಾಗ
ವಯಸ್ಕನಾದೆ ಗೊತ್ತಾಗಹತ್ತಿತಲ್ಲ !
ನಾನಂದುಕೊಂಡೆ ಇವರೆಲ್ಲ ಕಲಿಯುಗದ ರಕ್ಕಸರು !

ಕಲಸುಮೇಲೋಗರವಾದ ಈ ಸಮಾಜದಲ್ಲಿ
ಕುಡುಕನ ಕಣ್ಣಿಗೆ ಎರಡೆರಡು ಕಾಣುವಂತೇ
ತುಮುಲಗಳು ಗೊಂದಲಗಳು ವೈಷಮ್ಯಗಳು
ಹಳಸಿದ ಬಾಂಧವ್ಯಗಳು ಕಮರಿದ ಚೈತನ್ಯಗಳು
ಮಧ್ಯೆ ಮಧ್ಯೆ ಕಾಮುಕ ಸ್ವಾಮಿಗಳು
ಒಳಗೊಂದು ಹೊರಗೊಂದು ಎಂದು ಪೇಪರಿನಲ್ಲಿ
ಹೇಳಿಕೆ ಕೊಡುವ ಸನ್ಯಾಸಿಗಳು
ಆ ಸ್ಕೀಮು ಈ ಲಾಭ ಎನ್ನುವ ಬ್ರೋಕರುಗಳು
ಜೀವದ ಬಗ್ಗೆ ಭಯ ಹುಟ್ಟಿಸಿ ಆಧರಿಸಿದವರ
ಸಲುವಾಗಿ ಇನ್ವೆಸ್ಟ್ ಮಾಡಿರೆನ್ನುವ ವಿಮೆಕಂಪನಿಗಳು
ಅಯ್ಯೋ ಶ್ರೀಕೃಷ್ಣಾ ನಿನ್ನ ಅಗತ್ಯ ಇಂದಿಗೂ ಇತ್ತು ನಮಗೆ
ನೀ ಕಲ್ಕಿಯಾಗುವ ಬದಲಿಗೆ !
---------


ಉಂಡೆ [ಬಾಯಲ್ಲಿ ತುಂಬಿಕೊಳ್ಳದೇ ಕೆನ್ನೆಯನ್ನು ಊದಿಸಿದ್ದು]

ಕಾಲೇಜಿಗೆ ಹೋಗುವಾಗ ಕೊಂಕಣಿ ಹುಡುಗಿಯ ಹಿಂದೆ ಇಬ್ಬರು ಕೊಂಕಣಿ ಹುಡುಗರು ನಡೆದುಕೊಂಡು ಹೋಗುತ್ತಿದ್ದರು. ಒಬ್ಬಾತನಿಗೆ ಅಕ್ಷರಗಳ ಸ್ಪಷ್ಟ ಉಚ್ಚಾರ ಆಗುತ್ತಿರಲಿಲ್ಲ. ಜೊತೆಗಿದ್ದವ ಜೋರಾಗಿ ನಡೆದು ಆ ಹುಡುಗಿಯನ್ನೂ ದಾಟಿ ಮುನ್ನಡೆದಾಗ ಒಬ್ಬನೇ ನಡೆಯಲು ಬೇಜಾರಾಗಿ ಹಿಂದಿದ್ದ ಇನ್ನೊಬ್ಬ ಕೊಂಕಣಿಯಲ್ಲಿ " ಗಾಬಗೇ " ಅಂದ. [ಕೊಂಕಣಿಯಲ್ಲಿ ’ರಾಬರೇ’ ಅಂದರೆ ’ನಿಲ್ಲೋ’ ಅಂತರ್ಥ. ಈತನಿಗೆ ಹೇಳುವಾಗ ರ ಕಾರ ಉಚ್ಚಾರವಾಗದ ಕಾರಣ ಗ ಕಾರವಾಗಿ ಪರಿಣಮಿಸಿತ್ತು. ’ರಾಬಗೇ’ ಎಂದರೆ ’ನಿಲ್ಲೇ’ ಅಂತರ್ಥ! ಇಲ್ಲಿ ಗಾಬಗೇ ರಾಬಗೇ ಎಂಬಂತೇ ಹುಡುಗಿಗೆ ಕೇಳಿಸಿತ್ತು ] ಮರುಕ್ಷಣದಲ್ಲಿ ಕೆನ್ನೆ ಕೆಂಪಾಗಿತ್ತು-ಎದುರಿಗೆ ಹೋಗುತ್ತಿರುವ ಕೊಂಕಣಿ ಭಾಷೆಯ ಹುಡುಗಿ ಅದನ್ನು ತನಗೇ ಉದ್ದೇಶ ಪೂರ್ವಕ ಹೇಳಿದ್ದೆಂದು ಭಾವಿಸಿ ನಿಂತಲ್ಲೇ ಉಂಡೆ ತಿನ್ನಿಸಿದ್ದಳು!

---------ಮೊಸರನ್ನ [’ಕಣ್ಣು’ ಕೊಡು ಶ್ರೀಕೃಷ್ಣ]

ನಿನ್ನ ವ್ಯಕ್ತಿತ್ವವನು
ನನ್ನೊಳಗೆ ತುಸು ಮಿಳಿಸಿ
ಕನ್ನಯ್ಯ ಕೃಷ್ಣ ಕಾಯುವುದೆನ್ನನು
ಘನ್ನ ಮಹಿಮನೆ ನಿತ್ಯ
ನನ್ನಿನುಡಿಯುವ ನನಗೆ
ಇನ್ನೊಮ್ಮೆ ದಯೆತೋರಿ ದರುಶನವನು ||ಪ ||

ಮುನ್ನ ಮಾಡಿದ ಕರ್ಮ
ಎನ್ನ ಬಿಡದೆಂತೆಂಬ
ಮುನ್ನುಡಿಯ ಬರೆದೆ ನೀನು
ಪನ್ನಗ ಶಯನನೇ
ಪುನ್ನಾಗ ಕರವೀರ
ಸನ್ನಡೆತಯಲಿ ಕೊಡುವೆನು || ೧ ||

ಅಣ್ಣಯ್ಯ ಶ್ರೀಹರಿಯೇ
ಮಣ್ಣ ಗುಡ್ಡಕೇ ಹೊತ್ತೆ
ಕಣ್ಣಿರದ ಶಿಶುವು ನಾನು
ಹಣ್ಣಾಯ್ತು ಮನವಿಂದು
ಸಣ್ಣದೇ ಈ ಜಗವು ?
’ಕಣ್ಣು’ ಕೊಡು ನೋಡಲದನು || ೨ ||
---------


ಬೆಣ್ಣೆ [ಮಕ್ಕಳ ಫಲ]

’ಶ್ರೀ ಸಂತಾನ ಗೋಪಾಲ ಕೃಷ್ಣ’ ಮಂತ್ರವನ್ನು ಶುದ್ಧಮನದಿಂದ ಸಂಕಲ್ಪಯುಕ್ತವಾಗಿ ಪುರೋಹಿತರಿಂದ ಜಪಿಸುವಕಾರ್ಯ ನಡೆಸಿದರೆ ಮಕ್ಕಳನ್ನು ಇನ್ನೂಪಡೆಯದವರು ಮಕ್ಕಳನ್ನು ಪಡೆಯುವುದು ಸಾಧ್ಯ. ಇದು ವಿಜ್ಞಾನಕ್ಕೆ ಕಾಣಸಿಗದ ಸುಜ್ಞಾನ! ಮೈಸೂರಿಗೆ ಹತ್ತಿರದಲ್ಲಿ ಯಾರು ಏನನ್ನೇ ಬೇಡಿದ್ದನ್ನು ಕೊಡುವ [ಅವರವರ ಹುಚ್ಚಿಗೆ ತಕ್ಕಂತೇ ಫಲಕೊಡುವ] ಶ್ರೀಗೋಪಾಲಕೃಷ್ಣನಿದ್ದಾನೆ--ಆತನಿಗೆ ’ಹುಚ್ಚೂರಾಯ’ನೆಂದು ಕರೆಯುತ್ತಾರೆ,ಅಲ್ಲಿಯೂ ಕೂಡ ಪ್ರಾರ್ಥಿಸಿಬಹುದು.

12 comments:

 1. Bhatre,
  en helodu...enu helolla naanu.....Verryyyyyyyyyyyyyyyyyyyyyyyyyyyyyy Niceeeeeeeeeeeeeeeeeeeeeeeeeeeeeeeeeeee....iste saaku.....

  ReplyDelete
 2. ತುಂಬಾ ಚೆನ್ನಾಗಿ ಬಂದಿದೆ.. ಬರಹಗಳನ್ನ ತಿಂಡಿಯ ಜೊತೆಗೆ ಕೊಟ್ಟಿರೋದು ಸಖತ್ತಾಗಿದೆ! ಖುಷಿ ಆಯ್ತು ಓದಿ!

  ReplyDelete
 3. ಸ್ವಾಮಿ ಭಟ್ರೇ, ನಾನು ಕ್ಲೀನ್ ಬೌಲ್ಡ್ ಆಗಿಬಿಟ್ಟೆ. ತು೦ಬಾ ಚೆನ್ನಾಗಿದೆ.

  ReplyDelete
 4. ಭಟ್ ಸರ್‍,
  ಚಿತ್ರ-ಬರಹ ತುಂಬಾ ಚೆನ್ನಾಗಿದೆ.. ಓದಿ ಖುಷಿ ಆಯ್ತು.

  ಸ್ನೇಹದಿಂದ,

  ReplyDelete
 5. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ನಮನಗಳು.

  ReplyDelete
 6. ವಾವ್ ಸ್ವಾಮೀ ಭಟ್ರೇ ನಮೋನ್ನಮಃ !!! ನಿಮಗೆ ನೀವೇ ಸಾಟಿ. ಅದ್ಸರಿ ಮೈಸೂರಿಗೆ ಸಮೀಪದಲ್ಲಿರುವ ಹುಚ್ಚೂರಾಯನ ಬಗ್ಗೆ ನನಗೆ ಗೊತ್ತಿಲ್ಲ ಸ್ವಲ್ಪ ಹೇಳಿ ಸ್ವಾಮೀ.ನನಗೆ ಹಿಮವದ್ ಗೋಪಾಲ ಸ್ವಾಮೀ, ಕೆ.ಆರ್.ಎಸ .ಗೋಪಾಲ ಕೃಷ್ಣ,ಸೋಮನಾಥಪುರದ ಗೋಪಾಲ ಕೃಷ್ಣ,ಹೊಸ ಹೊಳಲು ವಿನ ಗೋಪಾಲ ಕೃಷ್ಣ ಹೆದತಲೇ ಗೋಪಾಲ ಕೃಷ್ಣ, ಇನೂ ಹಲವಾರು ಇಂತಹ ಶ್ರೀ ಕೃಷ್ಣ ಸನ್ನಿದಿ ಗೊತ್ತು ಆದರೆ ನೀವು ಹೇಳಿದ ಜಾಗದ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಒಲಿದದ್ದು ನಾನು ನೀಡುತ್ತೇನೆ.ನಿಮ್ಮ ಈ ಲೇಖನ ಅದ್ಬುತ ವಾಗಿದೆ

  ReplyDelete
 7. ಬಾಲು ಸರ್, ನಂಜನಗೂಡಿಗೆ ಸಮೀಪದ ಒಂದು ಹಳ್ಳಿ ಈ ಹುಚ್ಚೂರಾಯನ ವಾಸಸ್ಥಾನ, ತಾವು ನಂಜನಗೂಡಿನಲ್ಲಿ ಪರಿಚಯವಿರುವವರನ್ನು ಸಂಪರ್ಕಿಸಿದರೆ ಅವರೇ ಹೇಳುತ್ತಾರೆ, ಅಲ್ಲಿ ಒಂದು ವಿಶೇಷ ಶಕ್ತಿಯ ದಂಡ ಕೂಡ ಇದೆ ಎಂದು ಕೇಳಿದ್ದೇನೆ, ಕೃಪಯಾ ತಾವು ಅಲ್ಲಿನ ವರದಿ ಒದಗಿಸಿಸಲು ಸಾಧ್ಯವಾದರೆ ತಮಗೆ ಋಣಭಾರಿಯಾಗಿರುತ್ತೇನೆ, ತಾವು ಸ್ವಲ್ಪ ಪ್ರಯತ್ನಿಸುವುದು, ನಿಮ್ಮ ಪ್ರತಿಕ್ರಿಯೆಗೆ ಅನಂತ ಅಭಿವಂದನೆಗಳು

  ReplyDelete
 8. ಧನ್ಯವಾದಗಳು ಸೀತಾರಾಮ್ ರಾಯರೇ, ಕೆಲವೊಮ್ಮೆ ಭಗವಂತ ಹಲವು ರೂಪಗಳಲ್ಲಿ ಕಾಣುತ್ತಾನಲ್ಲ, ಮಕ್ಕಳು ನಾಗದೋಷ ಸಂಬಂಧದಿಂದ ಆಗದಿದ್ದ ಪಕ್ಷದಲ್ಲಿ ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತಾರೆ ಒಳ್ಳೆಯದು, ಒಂದೊಮ್ಮೆ ಹಾಗೇನೂ ಇಲ್ಲದಿದ್ದರೆ ಗೋಪಾಲಕೃಷ್ಣನ ಸೇವೆ ಒಳ್ಳೆಯದು, ಅಂತೂ ದೃಢ ನಂಬಿಕೆ ಮತ್ತು ಶೃದ್ಧೆ ಮುಖ್ಯ!

  ReplyDelete
 9. ಕೃಷ್ಣಜನ್ಮಾಷ್ಠಮಿ ನಿಮಿತ್ತದ ಕುರುಕುರೆ ತಿ೦ಡಿಗಳು ಒ೦ದಕ್ಕೊ೦ದು, ಚಿತ್ರಾನ್ನದ ಜೊತೆಗೆ ಪೊಗದಸ್ತಾಗಿವೆ.
  ಮೈಸೂರಿನಿ೦ದ ಬೆ೦ಗಳೂರಿಗೆ ಬರುವಾಗ ದೊಡ್ಡಮಾಳೂರು ಎ೦ಬ ಗ್ರಾಮವಿದೆ. ಅದರಲ್ಲಿ ಅಪ್ರಮೇಯ ದೇವರ ದೇವಸ್ಥಾನವಿದೆ. ಅಪ್ರಮೇಯ ದೇವರ ಸನ್ನಿಧಿಯ ಪಕ್ಕದಲ್ಲಿ ಅ೦ಬೆಗಾಲು ಬಾಲಕೃಷ್ಣನ ಗುಡಿಯೊ೦ದಿದೆ. ಈ ದೇವರಿಗೆ ಬೆಣ್ಣೆಪೂಜೆ ಮತು ಬೆಳ್ಳಿತೊಟ್ಟಿಲ ಹರಕೆ ಹೇಳಿಕೊ೦ಡ ದ೦ಪತಿಗಳಿಗೆ ಮಕ್ಕಳಾಗುವದೆ೦ಬ ಪ್ರತೀತಿ ಇದೆ. ನಾನು ಇದನ್ನು ಹೋದ ವರ್ಷ ನೋಡಿದ್ದೇನೆ. ಗರ್ಭಗುಡಿಯ ತು೦ಬ ಭಕ್ತರು ಕೊಟ್ಟ ಸಣ್ಣ ಬೆಳ್ಳಿತೊಟ್ಟಿಲುಗಳನ್ನೆಲ್ಲಾ ತೂಗು ಹಾಕಿರುವರು.
  ಪುಟ್ಟ ಅ೦ಬೆಗಾಲಿನ ಕೃಷ್ಣನ ಮೂರ್ತಿಯ ದೇವಸ್ಥಾನ ದೇಶದಲ್ಲಿ ಇದು ಒ೦ದೇ ಅ೦ತೇ! ನೋಡಲು ಮುದ್ದಾಗಿದೆ ಜೊತೆಗೆ ಮುಖ್ಯ ದೇವಾಲಯ ಅಪ್ರಮೇಯ ದೇವರದೂ ಚೆನ್ನಾಗಿದೆ.

  ReplyDelete
 10. ತುಂಬಾ ಚನ್ನಾಗಿದೆ.

  ReplyDelete