ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 1, 2010

ಬೆಣ್ಣೆ ಕದ್ದ ನಮ್ಮಾ ಕೃಷ್ಣ ಬೆಣ್ಣೆ ಕದ್ದನಮ್ಮಾ !!

ಚಿತ್ರಗಳ ಕೃಪೆ : ಅಂತರ್ಜಾಲ

ಬೆಣ್ಣೆ
ಕದ್ದ ನಮ್ಮಾ ಕೃಷ್ಣ ಬೆಣ್ಣೆ ಕದ್ದನಮ್ಮಾ!!


ಕಿಲಾಡಿ ಕಿಟ್ಟ ಎನ್ನುವುದು ನಾವು ಸಾಮಾನ್ಯವಾಗಿ ಮಕ್ಕಳಿಗೆ ಬಳಸುವ ಮಾತು. ಇದು ಹುಟ್ಟಿದ್ದೇ ಶ್ರೀಕೃಷ್ಣ ಜನಿಸಿದ ಮೇಲೆ. ಚಂದ್ರವಂಶದವರಾಗಿಯೂ, ಸ್ವತಃ ಸೋದರಮಾವ ರಾಜನಾಗಿದ್ದರೂ ಅದೇ ಸೋದರಮಾವನ ದೆಸೆಯಿಂದ ಕೃಷ್ಣ ಹುಟ್ಟಿದ್ದು ಸೆರೆಮನೆಯಲ್ಲಿ;ಗಾಢಾಂಧಕಾರದ ಗೂಡಿನಲ್ಲಿ. ಹಡೆಯುವ ಪ್ರತೀ ಮಗುವನ್ನೂ ಮಾವ ಕಂಸ ಕಿತ್ತೆಸೆದು ಸಾಯಿಸುತ್ತಿದ್ದ. ಏಳನೆಯ ಮಗು ಮಹಮ್ಮಾಯಿಯಾಗಿ ಆಗಸದಲ್ಲಿ ಹಾರಿ" ಎಲವೋ ಕಂಸಾ ನಿನ್ನ ಕಾಲ ಸನ್ನಿಹಿತವಾಗಿದೆ, ಮುಂದೆ ಜನಿಸುವ ಎಂಟನೆಯ ಶಿಶುವಿನಿಂದ ನಿನ್ನ ಹತ್ಯೆ ನಡೆಯುತ್ತದೆ" ಎಂದು ಸಾರಿ ಅದೃಶ್ಯವಾಯಿತು. ಇದೇ ಕಾರಣವಾಗಿ ದೇವಕಿ-ವಸುದೇವರಿಗೆ ಸೆರೆವಾಸ. ಯಾರ ಸಹಾಯವೂ ಇಲ್ಲದೇ ಶಾರೀರಿಕ ಮತ್ತು ಮಾನಸಿಕ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳಲು ಯಾರೂ ತಮ್ಮವರೆಂಬವರು ಸಿಗದ ದೀನ ಸ್ಥಿತಿಯಲ್ಲಿ, ಹೆರಿಗೆಯ ನೋವನ್ನೂ ಮರೆಸಿ ಜನಿಸಿದ ಚಂದ್ರವಂಶದ ಸೂರ್ಯ ಶ್ರೀಕೃಷ್ಣ! ಹುಟ್ಟಿದ ಘಳಿಗೆಯಿಂದಲೇ ಅಸಂಖ್ಯ ಪವಾಡ ನಡೆಸಿದ. ತಂದೆ ತನ್ನನ್ನು ಬುಟ್ಟಿಯಲ್ಲಿ ಹೊತ್ತು ನಡೆವಾಗ ಸುಮ್ಮನೇ ಹೊರಳಿ ಯಮುನೆಗೆ ಒಂದು ಶಾಕ್ ಕೊಟ್ಟ ನೋಡಿ-ಯಮುನೆ ಅರ್ಧಭಾಗವಾಗಿ ದಾರಿ ಬಿಟ್ಟಳು ಬಡಪಾಯಿ ವಸುದೇವನಿಗೆ. ಬುಟ್ಟಿಯಲ್ಲಿದ್ದ ವಾಸುದೇವ ನಕ್ಕ! ಸಾಕಿದ ತಾಯಿ ಯಶೋದೆಯಿಂದ ಲಾಲಿಸಲ್ಪಟ್ಟ ಬಹುಮುದ್ದು ಮಗು ಯಶೋದಾಕೃಷ್ಣ. ಗೋಕುಲ ಸೇರಿದ ಗೋಪಾಲನ ಬಾಲಲೀಲಾ ವಿನೋದಗಳು ಒಂದೆರಡೇ ? ಶಿಶುವಾಗಿರುವಾಗಲೇ ಪೂತನಿಯ ಹಾಲು ಕುಡಿದು ಕಡಬಾಯಲ್ಲಿ ಅದನ್ನು ಅಲ್ಲೇ ಸಣ್ಣಗೆ ಕಣ್ಣುಮಡಿದು ನಗುತ್ತ ಹರಿಬಿಟ್ಟವನನ್ನು ಹೇಳುವುದಾದರೆ ತುಂಟತನವೇ ಮೈವೆತ್ತ ಮಂಗಳಮೂರ್ತಿ ನಮ್ಮ ಬೆಣ್ಣೆಕಳ್ಳ! ಬೆಳೆದ ಗೋವಳ ತನ್ನ ಸಾನುರಾಗದ ಕೊಳಲ ಹರಿಯಬಿಟ್ಟಾಗ ಸೋಲದ ಗೋವುಗಳೂ ಮನುಜರೂ ಇರಲಿಲ್ಲ; ಇಂಪಾದ ವೇಣುವನ್ನು ಊದುತ್ತ ಮರದ ತಂಪಿನಲಿ ಕುಳಿತ ವೇಣುಗೋಪಾಲ ನುಡಿಸದ ರಾಗವಿಲ್ಲ!

ಬೆಳೆಯುತ್ತ ಯೌವ್ವನ ಪ್ರಾಪ್ತವಾಯಿತಲ್ಲ! ನಮನಿಮಗೆಲ್ಲ ಇರುವಂತೇ ಹುಡುಗಿಯರ ಮೇಲೆ ಕಣ್ಣು! ಅದು ಆತನ ತಪ್ಪಲ್ಲ ಆತನ ವಯೋಮಾನದ ತಪ್ಪು;ಮೂಲದಲ್ಲಿ ಎಲ್ಲದರ ಸೃಷ್ಟಿಕರ್ತನೇ ಆತನಾದರೂ ಇಲ್ಲಿ ಅದೇ ಸೃಷ್ಟಿಯ ಮಗುವಾಗಿ ಎಲ್ಲಾ ಮನುಜರಂತೇ ಕಷ್ಟ-ಸುಖವನ್ನು ಅನುಭವಿಸಿ ತೋರಿಸುತ್ತಿದ್ದ. ಅದಕ್ಕಾಗಿಯೇ ತನ್ನ ಮೂಲರೂಪವನ್ನು ಮರೆತು ಇಲ್ಲಿ ಕೇವಲ ಕೃಷ್ಣನಾಗಿಯೇ ಇರಲು ಬಯಸಿದ. ಹುಡುಗಿಯರಿಗೂ ಅಷ್ಟೇ: ಒಳಗೊಳಗೇ ತಮ್ಮ ಹೀರೋ ವನ್ನು ಬಯಸುವವರು ಅವರು. ಆತನ ಇರುವಿಕೆಯ ಪ್ರಭಾವವೇ ಹಾಗಿತ್ತು. ಆತ ಬಾರದಿದ್ದರೆ ಬದುಕು ನೀರಸವೆನಿಸುತ್ತಿತ್ತು. ಹೀಗಾಗಿ ಹೊರಗೆ ತೋರಿಕೆಗೆ ಬೆಣ್ಣೆಕಳ್ಳ, ಹೆಂಗಸರ ಮಳ್ಳ ಅಂತೆಲ್ಲಾ ಕರೆದರೂ ಆತ ತಮ್ಮ ಜೊತೆಗೇ ಇರಲಿ ಎಂಬುದು ಜನರೆಲ್ಲರ ’ಒಳ ಅಂಬೋಣ’;ಒಳತೋಟಿ, ಆತನನ್ನು ಬಿಟ್ಟು ಇನ್ನಿರಲಾರದ ಅಸಾಧ್ಯ ಆತ್ಮಾನುಸಂಧಾನ! ಈತನ ಪ್ರೀತಿ ಸ್ನೇಹಕ್ಕೆ ಗಂಟುಬಿದ್ದವರು ಬರೇ ಮಕ್ಕಳಲ್ಲ, ಹುಡುಗಿಯರಲ್ಲ, ಇಡೀ ಜನಸಮುದಾಯ. ಕಂಡವರನ್ನೆಲ್ಲಾ ತನ್ನ ಆಪ್ತವಲಯಕ್ಕೆ ಕಾಂತದಂತೆ ಎಳೆಯುತ್ತಿದ್ದ ಆತನ ವರ್ಚಸ್ಸು ಬಹಳ ಅಪರೂಪದ್ದು.


ನಡುನಡುವೆ ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಕಣಿಸಿಕೊಳ್ಳ ಹತ್ತಿದ ಈ ಕಪಟನಾಟಕ ರಂಗ ಆಡಿದ ಗಾರುಡೀ ವಿದ್ಯೆ ಕಮ್ಮಿಯದೇನಲ್ಲ. ಸುಧಾಮನ ಮಿತ್ರತ್ವಕ್ಕೂ ಕೌರವನ ಶತ್ರುತ್ವಕ್ಕೂ ಎಲ್ಲೆಲ್ಲಿ ಹೇಗೇಗೆ ನಡೆದುಕೊಳ್ಳಬೇಕೆಂದು ತೋರಿಸಿದ ಈತ ಬಹುದೊಡ್ಡ ಮ್ಯಾನೇಜಮೆಂಟ್ ಗುರು! ಆತ ಗೆಳೆಯನೆಂದರು ಕೆಲವರು, ಆತ ಚೋರನೆಂದರು ಹಲವರು, ಆತ ನಮ್ಮಾತನೇ ಎಂದರು ಇನ್ನೂ ಹಲವರು, ಆತ ಗೋವಳರವ ಎಂದು ಎದೆತಟ್ಟಿಕೊಂಡರು ಗೋಪಬಾಲರು, ಆತನ ಅಂಗಸೌಷ್ಠವ ನೋಡಿ ಸೋತರು ಗೋಪಿಕೆಯರು, ಆತನ ಬಾಲ್ಯವನ್ನು ನೆನೆದರು ಕುಚೇಲನಂಥವರು, ಆತನ ಪಾದಧೂಳಿಯ ಬಯಸಿದರು ವಿದುರನಂಥವರು, ಆತನ ಸಂಧಾನವನ್ನು ಅನುಮೋದಿಸಿದರು ಪಾಂಡುಕುವರರಂಥವರು, ಆತನ ಪೂರ್ಣರೂಪದ ಸ್ವಾನುಭವ ಬಯಸಿದರು ಭೀಷ್ಮನಂಥವರು, ಆತನ ಗೀತೋಪದೇಶವನ್ನು ಬಯಸಿದರೂ ಮೂರುಲೋಕದ ಗಂಡ-ಗಾಂಡೀವಿ ಎಂದೆನಿಸಿಯೂ ಹಳಹಳಿಸಿ ಹುಳ್ಳಗಾದವರು ಮತ್ತು ದಿವ್ಯಚಕ್ಷು ಅವನಿಂದಲೇ ಪಡೆದು ಆತನ ಸಾಕ್ಷಾತ್ಕಾರ ಪಡೆದವರು, ಪಡೆಯ ಬಯಸಿದವರು ಅರ್ಜುನನಂಥವರು!


ಅಂತೂ ಆತ ಎಲ್ಲರಿಗೂ ಒಂದಿಲ್ಲೊಂದು ಕಾರಣದಿಂದ ಬೇಕಾಗಿದ್ದ! ಸಹಿಸಲಾರೆವೆಂದು ಹೊಟ್ಟೆಕಿಚ್ಚುಪಡುವವರೂ ವಹಿಸಿಕೊಂಡು ಮಾತನಾಡುವುದು ಆತನಿಗಿದ್ದ ಗರಿಮೆ! ಯಾರನ್ನೂ ಕಡೆಗಣಿಸದೇ ಎಲ್ಲರ ಮಧ್ಯೆ ತಾನೇನೂ ಅಲ್ಲವೇನೋ ಎನ್ನುವಂತೇ ಜೀವಿಸಿ, ಕಮಲಪತ್ರದ ಮೇಲಿನ ನೀರ ಹನಿಯಂತೆ ಯಾವುದನ್ನೂ ಅಂಟಿಸಿಕೊಳ್ಳದೇ ಬದುಕಿದ ಬಹುಚಾಣಾಕ್ಷ ಮನುಷ್ಯ ಶ್ರೀಕೃಷ್ಣ. ಕಷ್ಟವನ್ನು ಬಾಯಾರೆ ಹೇಳಿಕೊಳ್ಳಲಾಗದ ಸುಧಾಮನ ಹರಕು ಪಂಚೆಯ ಹಿಡಿಯವಲಕ್ಕಿಯನ್ನೇ ಉಡಿತುಂಬ ಬೇಡಿ ತಿಂದು ಪರೋಕ್ಷ ಬಾಲ್ಯ ಸ್ನೇಹಿತನ ಬಡತನದ ಬವಣೆಯನ್ನೆಲ್ಲ ತಿಂದುಮುಗಿಸಿ, ಆತನಿಗೆ ಅಪ್ರತಿಮವಾದ ಬಂಗಲೆಯನ್ನೂ ಸ್ವರ್ಣಾಭರಣಗಳೇ ಮೊದಲಾದ ಅನರ್ಘ್ಯರತ್ನಗಳನ್ನೂ, ಬದುಕು ಪೂರ್ತಿ ಸಾಕಾಗುವ ಅಷ್ಟೈಶ್ವರ್ಯಗಳನ್ನೂ ದಯಪಾಲಿಸಿದ ಸುಮಧುರ ಸ್ನೇಹಜೀವಿ ಶ್ರೀಕೃಷ್ಣ. ರಾಧೆ-ರುಕ್ಮಿಣಿ ಮೊದಲಾದ ಹಲವು ಹೆಂಗಳೆಯರಲ್ಲಿ ಯಾರಿಗೂ ಭಾರವಾಗದಂತೇ, ಯಾರಿಗೂ ಅತಿಸುಲಭವಾಗದಂತೇ ಒಂದೇ ಹದದಲ್ಲಿ ತನ್ನ ಭಾವಮಿಳಿತವನ್ನು ಮೇಳೈಸಿದ ಮಹಾನ್ ಗಂಡ ಶ್ರೀಕೃಷ್ಣ. ಮಗುದೊಮ್ಮೆ ಭಾವತೀವ್ರತೆಯಿಂದ ಕರುಣಾರಸಪೂರಿತನಾಗಿ ಮಡದಿ ಸತ್ಯಭಾಮೆಗೆ ದೇವಲೋಕದ ಪಾರಿಜಾತವನ್ನೇ ಧರೆಗಿಳಿಸಿ ತಂದ ಉತ್ಕೃಷ್ಟ ಲವರ್ ಪ್ರೇಮಕೃಷ್ಣ. ಶ್ರೀರಾಮನ ಅನೇಕ ಅಂಶಗಳನ್ನು ತನ್ನಲ್ಲಿ ಹುದುಗಿಸಿಕೊಂಡೂ ರಾಮನಾಗದೇ ತನ್ನತನವನ್ನೇ ಬದುಕಿ ಈ ರೀತಿಯೇ ಬೇರೆ ಎಂದು ತೋರಿದ ಅಪ್ಪಟ ಯಾದವಕುಲತಿಲಕ ’ರಾಮಕೃಷ್ಣ’!ಹೀಗೇ ಒಂದೇ ಎರಡೇ ವ್ಯಾಖ್ಯಾನಿಸಿದರೆ ಜಗವನ್ನೇ ತನ್ನ ಉಡಿಯಲ್ಲಿ ತುಂಬಿ ತಾಯಿಗೇ ಬಾಯಗಲಿಸಿ ಮೂರ್ಜಗವನ್ನು ತೋರಿಸಿದ್ದನ್ನು ನೆನೆಯಬೇಕಾಗುತ್ತದೆ! ಇದು ಮುಗಿಯದ ವಿಷಯ. ಸದ್ಯಕ್ಕೆ ಸಾಕು ಎಂದು ಇಲ್ಲಿಗೆ ಅಲ್ಪ ವಿರಾಮ ಹಾಡುತ್ತೇನೆ. ಮತ್ತೆ ಕೃಷ್ಣನ ಬಗ್ಗೆ ಹೃದಯದ ಕರೆ ಬಂದಾಗ ಹೀಗೇ ಬದುಕಿನಾದ್ಯಂತ ಅಗಾಗ ಆಗಾಗ ಬರೆಯುತ್ತಲೇ ಇರುತ್ತೇನೆ, ಯಾಕೆಂದರೆ ’ಆತ ನಮ್ಮವನೇ’! ಬಾಲ್ಯದಲ್ಲಿ ನಮ್ಗೆ ಶಾಲೆಗೆ ಹೋಗುವಾಗ ಚಕ್ಕುಲಿ,ಉಂಡೆಗಳಿತ್ತು ಚಡ್ಡಿಯ ಜೇಬು ತುಂಬಿಸಿದ ಆತ ಇಂದಿಗೂ ಎಂದಿಗೂ ನಮ್ಮಾತ್ಮೀಯ! ಅತ್ಮೀಯ ಸ್ನೇಹಿತರೇ, ಹಲವು ರೂಪಗಳಲ್ಲಿ ಮೆರೆದ ನಮ್ಮ ಬಾಲಗೋಪಾಲ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಇಂದಿಗೂ ನಮ್ಮೆಲ್ಲರ ಮನೆಗಳಲ್ಲಿ ನಾವು ಮಕ್ಕಳಿಗೆ ಮೊದಲ ವೇಷ ಹಾಕುವುದು ಬಾಲಕೃಷ್ಣನದ್ದೇ ಅಲ್ಲವೇ? ಆತನ ನೆನಪಿನಲ್ಲಿ ನಮ್ಮ ಅನುಭೂತಿಗಾಗಿ, ಕೃಷ್ಣನನ್ನೇ ಮುಟ್ಟಿದಂಥ ಅನುಭವ ಪಡೆಯಲಾಗಿ ಅಲಂಕರಿಸಿದ ಮಕ್ಕಳ ಕೆನ್ನೆ,ಗಲ್ಲ,ಸೊಂಟ ಇವನ್ನೆಲ್ಲ ಚಿವುಟುವುದು ಮನ ನೆನೆವ ಆ ಅತ್ಮೀಯ ಸ್ಪರ್ಶದ ಆನಂದಾನುಭೂತಿಗಾಗಿ ಸರಿಯಷ್ಟೇ? ಆ ಬಾಲಕೃಷ್ಣನನ್ನೊಮ್ಮೆ ನೆನೆಸಲು ಆತನ ಹುಟ್ಟಿದ ದಿನವನ್ನು ಸ್ಮರಿಸಲು, ಆತನಿಗೊಮ್ಮೆ ’ಹ್ಯಾಪಿ ಬರ್ತ್ ಡೇ ಟೂ ಯೂ ಬೆಣ್ಣೆಕಳ್ಳಾ! ’ ಎನ್ನಲು ತೆರಳೋಣ ಈ ಹಾಡಿನ ಮೂಲಕ---


ನಮ್ಮನೆಯ ಶ್ರೀಕೃಷ್ಣ !

ಗೋಕುಲ ಜನರನು ಕಾಯುವ ನೆಪದಲಿ
ಯದುಕುಲದುದಿಸುತ ಬಂದಾ ಗೋವಿಂದಾ || ಪ ||

ಕಣಕಣದಲು ಮೊಗೆ ಮೊಗೆಮೊಗೆದರ್ಪಿಸಿ
ಝಣ ಝಣ ಗೆಜ್ಜೆಯ ಕಟ್ಟಿ ತಾ ಕುಣಿದು
ಚಿಣಿಕೋಲ್ಚಂಡು ಬುಗುರಿಯನಾಡುತ
ಅಣಕವಾಡುತ ಎಲ್ಲರ ಮನಸೆಳೆದನೇ || ೧ ||

ಮೊಸರು ಕುಡಿಕೆಗಳ ಕಸುವಲಿ ಇಳಿಸುತ
ಹೆಸರು ತೋರದೆ ನವನೀತವ ಕದ್ದ
ಕೆಸರಲ್ಲಿಹ ಕಾಳೀಯನ ಮರ್ದಿಸಿ
ಉಸಿರು ಬಿಗಿಹಿಡಿಸಿದಾ ಗಾರುಡಿಗನೇ || ೨ ||

ಗೋವಳ ಗೊಲ್ಲ ಮೆಲ್ಲಗೆ ಕೊಳಲೂದುತ
ಆವುಗಳೆಲ್ಲವ ಹತ್ತಿರ ಕರೆದೂ
ತಾವರಿಯದ ಹೊಸಲೋಕವ ತೋರಿಸಿ
ಜೀವಸಂಕುಲಕೆ ಹೊಸ ಕಳೆ ಕಟ್ಟಿದ ||೩||

ನೀಲವರ್ಣ ಅರ್ಧನಿಮೀಲಿತ ನೇತ್ರದಿ
ನೀಳವೇಣಿ ರಾಧೆಯ ಮೃದುಹೃದಯಕೆ
ಗಾಳಹಾಕಿ ತನ್ನರಸಿಯ ರಮಿಸುತ
ಪಾಲನೇತ್ರ ಸಖ ಲಾಲಿಹಾಡಿದಾ || ೪ ||

ವಧಿಸಿ ಕಂಸನ ಕೌರವಾದಿಗಳ
ವಿಧಿಸಿ ಪಟ್ಟಪದ ಕುಂತೀಸುತರಿಗೆ
ಬೋಧಿಸಿ ಗೀತೆಯ ಭಾರತ ಜನರಿಗೆ
ಶೋಧಿಸಿ ಪಾರೀಜಾತ ತಂದವನೇ || ೫ ||


ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ ||


13 comments:

 1. ಭಟ್ ಸರ್;ಅದ್ಭುತ ಕಥನ!ಸುಂದರ ಕವನ!ಶ್ರೀ ಕೃಷ್ಣನ ಲೀಲೆಯ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನಿಸುತ್ತದೆ ಅಲ್ಲವೇ!!? ಸರ್ವಂ ಕೃಷ್ಣ ಮಯಂ ಜಗತ್!ಜೈ ಶ್ರೀ ಕೃಷ್ಣ!

  ReplyDelete
 2. ಭಟ್ ಸರ್,
  ಬೆಣ್ಣೆ ಕಳ್ಳನ ಬಗ್ಗೆ ಇಷ್ಟೆಲ್ಲಾ ತಿಳಿಸಿದ್ದಕ್ಕೆ ಧನ್ಯವಾದ....

  ReplyDelete
 3. ಅದ್ಭುತವಾಗಿದೆ.. ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

  ReplyDelete
 4. ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.. :-)

  ReplyDelete
 5. ಚೆನ್ನಾಗಿದೆ ಲೆಖನ.ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು..

  ReplyDelete
 6. ಮನ ಮುದಗೊಳಿಸಿತು ನಿಮ್ಮ ಲೇಖನ ಮತ್ತು ಕವನ.

  ReplyDelete
 7. ಭಟ್ಟರೆ,
  ನಿಮ್ಮೊಡನೆ ನಾನೂ ದನಿಗೂಡಿಸುತ್ತಿದ್ದೇನೆ:
  "Happy Birthday to you, Krishna!"

  ReplyDelete
 8. ಬೆಣ್ಣೆ ಕೃಷ್ಣನ ಹುಟ್ಟುಹಬ್ಬದ ಸಡಗರದಲ್ಲಿ ನಿಮ್ಮ ಆಖ್ಯಾನ ಮತ್ತು ಕವನ ಎರಡೂ ಸೂಪರ್ ಆಗಿವೆ. ಶುಭಾಶಯ

  ReplyDelete
 9. Bhatre,

  laikitt marre, odi tumbaa kushi aith.....

  ReplyDelete
 10. ತುಂಟ ಕೃಷ್ಣನ ಬಾಲ್ಯದ ಸುಂದರ ನೋಟದ ಅನಾವರಣ .ಶ್ರೀ ಕೃಷ್ಣ ನ ಆಶೀರ್ವಾದ ನಿಮಗೆ ಹಾಗು ಎಲ್ಲರಿಗೂ ಲಭಿಸಲಿ.

  ReplyDelete
 11. ಪ್ರತಿಕ್ರಿಯಿಸಿದ ಎಲ್ಲಾ ಹಿರಿ-ಕಿರಿಯ ಮಿತ್ರರಿಗೂ ನಮನಗಳು, ನಿಮ್ಮೆಲ್ಲರ ಬ್ಲಾಗಿಗೂ ಬರುತ್ತೇನೆ, ಅನ್ಯಥಾ ಭಾವಿಸಬೇಡಿ, ಒತ್ತಡದಲ್ಲಿ ಬರಲಾಗಲಿಲ್ಲ, ಕ್ಷಮೆಯಿರಲಿ, ಧನ್ಯವಾದಗಳು.

  ReplyDelete
 12. ಒಪ್ಪಿಕೊಳ್ಳೋಣ..
  ಆದರೆ ಕುರುಕ್ಷೇತ್ರ' ವಿಷಯದಲ್ಲಿ ಆತನ ಕಿತಾಪತಿಗಳನ್ನು ಕೇಳಿದರೆ ಆತನ ಮೇಲೆ ಕೋಪಬರುವುದು ಖಡಾಖಂಡಿತ..
  * ಪಾಂಡವ ಸುತರಿಗೆ ಅಕ್ಷಯ ವಿದ್ಯೆ ತಿಳಿಯದ ಹಾಗೆ ಮಾಡಿದ್ದು..,ತಿಳಿದ ಸಹದೇವನ ಬಾಯಿ ಮುಚ್ಚಿಸಿದ್ದು.., ಅಭಿಮನ್ಯುವಿಗೆ ಅರ್ಧ ಮಾತ್ರ ಚಕ್ರವ್ಯೂಹ ವಿದ್ಯೆ ಹೇಳಿದ್ದೂ..ಹೀಗೆ ಒಂದೇ ಎರಡೇ ಆತನ ಕುತಂತ್ರಗಳು..

  ಇರಲಿ..
  ನಿಮ್ಮ ಒಕ್ಕೊರಲಿನೊಂದಿಗೆ ಆತನಿಗೆ ಶುಭಾಷಯ ಹೇಳಲು ನನ್ನದೊಂದು ಸಣ್ಣ ಧ್ವನಿ..

  ReplyDelete
 13. ಕತ್ತಲೆಮನೆಯವರೇ,
  ಪಡೆದು ಬಂದಿದ್ದನ್ನು ಅವರವರು ಅನುಭವಿಸಲೇ ಬೇಕೆಂದು ಕೃಷ್ಣನೇ ಗೀತೆಯಲ್ಲಿ ಹೇಳುತ್ತಾನಲ್ಲ ! ಹಾಗಾಗಿ ಅವರವರ ಸಂಚಿತ ಕರ್ಮಕ್ಕೆ ಅನುಗುಣವಾಗಿ ಅವರು ಫಲವನ್ನು ಪಡೆದಿದ್ದಾರೆ, ಅದಕ್ಕೆ ಕೃಷ್ಣ ಕೇವಲ ನೆಪಮಾತ್ರ! ಅಭಿಮನ್ಯುವಿಗೆ ಚಕ್ರವ್ಯೂಹದಲ್ಲೇ ಸಾವು ಬರೆದಿತ್ತು -ಹೀಗಾಗಿ ಸತ್ತ, ಅದಕ್ಕೆ ಸರ್ವಜ್ಞ ಹೇಳುತ್ತಾನೆ --

  ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
  ಮತ್ತೆ ಮಾತುಲನು ಶ್ರೀಹರಿಯಿರಲು
  ಅಭಿಮನ್ಯು ಸತ್ತನೇಕಯ್ಯ | ಸರ್ವಜ್ಞ

  ಇದರರ್ಥ ನಿಮಗಾಗಿರಬಹುದು ಎಂದುಕೊಳ್ಳುತ್ತೇನೆ, ಹೀಗಾಗಿ ಯಾವುದೋ ಕಾರಣಕ್ಕಾಗಿ ಕೃಷ್ಣನನ್ನು ಹೀಗಳೆಯುವುದು ತಪ್ಪು, ಮಹಾಭಾರತದ ಕಾಲದಲ್ಲಿ ತಪ್ಪು ಮಾಡದ ಅಪರೂಪದ ವ್ಯಕ್ತಿ ಶ್ರೀಕೃಷ್ಣ, ನಿಮ್ಮ ಅನಿಸಿಕೆಗೆ ಧನ್ಯವಾದಗಳು

  ReplyDelete