ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 18, 2010

ಸೂರ್ಯ ನಿಷ್ಠೆ


ಸೂರ್ಯ ನಿಷ್ಠೆ

ಸಪ್ತಾಶ್ವದ ರಥವನೇರಿ
ಸೂರ್ಯನುದಿಸಿ ಬರುವ ವೇಳೆ
ಹಾಡೊಂದಕೆ ದೇಹರಚಿಸಿ
ಭಾವತುಂಬಿ ಜೀವಬಂತು
ನವನವೀನ ಕಲ್ಪನೆ ನೂರು ವಿಧದ ಯೋಚನೆ

ಸಕಲ ಜೀವರಾಶಿಗಳಿಗೆ
ಬದುಕನೀವ ಬೆಳಕನಿತ್ತು
ವ್ಯಥಿತ ಮನದ ವ್ಯಾಕುಲಗಳ
ಕಳೆವನಾತ ಮೌನದಲ್ಲಿ
ಚಕಿತರಾಗಿ ನೋಡಿರಿ ನಿಷ್ಠೆ ನೆನೆದು ನಲಿಯಿರಿ

ಕಾಯಿಸಲೋ ಬೇಯಿಸಲೋ
ಕೆಲಸ ಕಾರ್ಯ ನಡೆಯಿಸಲೋ
ಆತ ಬಾರದಿದ್ದರೊಮ್ಮೆ
ಬೆಳೆಯುತಿತ್ತೇ ಬದುಕುಬಳ್ಳಿ ?
ರವಿಯು ಇರದ ಜಾಗವು ರೋಗಗಳಿಗೆ ಹಾರವು

ರಜೆಯ ಹಾಕಲಿಲ್ಲ ಗೆಳೆಯ
ವಿಜಯನಗೆಯ ಬೀರಲಿಲ್ಲ !
ಸುಜನ ಕುಜನ ಭೇದ ಭಾವ
ಅಳವಡಿಸುತ ನಡೆಯಲಿಲ್ಲ
ಸರ್ವರಿಗೂ ಸರಿಸಮಾನ ತತ್ವದಲ್ಲಿ ಇರಿಸಿ ಗಮನ

ಬಾಡಿಗೆಯ ಕೊಡುವೆವೇನು ?
ಬಾಳತುಂಬ ಬೆಳಗುವುದಕೆ
ಹಾಳುಮನದ ನಮಗೆ ಒಮ್ಮೆ
ಸ್ಮರಿಸದಂಥ ನಂಜುನಮದು
ನಾಳೆಗಳನು ನಡೆಸಲು ನೆನೆಯಿರಿಂದು ಮನದೊಳು

Wednesday, November 17, 2010

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........

ಅನುರೂಪ ದಾಂಪತ್ಯಕ್ಕೆ ಹಾಡಿಕೊಳ್ಳಲು ಬೇಕಾದ ಹಾಡುಗಳನ್ನೆಲ್ಲಾ ಗುತ್ತಿಗೆ ಹಿಡಿದವರಂತೇ ಬರೆಯುತ್ತಾ ಹೋದವರು ನಮ್ಮ ’ಮೈಸೂರು ಮಲ್ಲಿಗೆ’ಯ ಕವಿ ದಿ| ಶ್ರೀ ಕೆ.ಎಸ್. ನರಸಿಂಹಸ್ವಾಮಿಗಳು. ಕವಿಮನವನ್ನು ಮತ್ತು ಮನೆಯನ್ನು ಕಾಣುವ ಬಯಕೆ ಹೊತ್ತು ೧೯೯೮ ರಲ್ಲಿ ಒಮ್ಮೆ ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋಗಿದ್ದೆ. ಆಗಲೇ ಮುಪ್ಪಡರಿದ್ದ ಕವಿವರ್ಯರು ಮನೆಯ ಮುಂಭಾಗದಲ್ಲಿರುವ ಚಿಕ್ಕ ಜಾಗದಲ್ಲಿ ಬೆತ್ತದ ಖುರ್ಚಿ ಹಾಕಿಕೊಂಡು ಕುಳಿತಿದ್ದರು. ಕಣ್ಣಿಗೆ ದಪ್ಪ ಗಾಜಿನ ಸೊಲೋಚನ[ಕನ್ನಡಕ]. ಇಳಿಸಂಜೆಯಲ್ಲಿ ನಾನು ಹೋದಾಗ ಅವರ ’ಶಾರದೆ’ [ಪತ್ನಿ ದಿ| ಶ್ರೀಮತಿ ವೆಂಕಮ್ಮನವರು] ಆದರದಿಂದ ಬರಮಾಡಿಕೊಂಡರು. ಹೇಳಿಕೇಳಿ ನಾನೊಬ್ಬ ಕಾಲೇಜು ವಯಸ್ಸಿನ ಹುಡುಗ; ಗುರುತು ಪರಿಚಯ ಇಲ್ಲದವ. ಆದರೂ ಎಷ್ಟೋ ವರ್ಷಗಳ ಒಡನಾಟವಿದೆಯೇನೋ ಎಂಬಷ್ಟು ಆತ್ಮೀಯತೆಯಿಂದ ಅವರು ನಡೆಸಿಕೊಂಡ ರೀತಿ ನನಗೆ ಬಹಳ ಹಿಡಿಸಿತ್ತು. ಕವಿಗಳಿಗೆ ಕಿವಿ ಬೇರೇ ಸ್ವಲ್ಪ ಮಂದವಾಗಿತ್ತು. ಈ ಕುರಿತು ಹೇಳಿದ ವೆಂಕಮ್ಮನವರು ಸೀದಾ ಅಡುಗೆ ಕೋಣೆಗೆ ಹೋಗಿ [ಆಗ ಬೇಸಿಗೆಯ ದಿನಗಳು] ಯಾಲಕ್ಕಿಯನ್ನು ಹಾಕಿದ ಲಿಂಬೂ ಪಾನಕವನ್ನು ಮಾಡಿತಂದರು. ಆಗ ನರಸಿಂಹಸ್ವಾಮಿಗಳು ಪತ್ರಿಕೆಯೊಂದಕ್ಕೆ ವಾರದಲ್ಲಿ ಒಂದಾವರ್ತಿ ಹಾಡುಗಳನ್ನು ಬರೆದು ಕೊಡುತ್ತಿದ್ದರು; ಬರವಣಿಗೆಗೆ ಆಗುತ್ತಿರಲಿಲ್ಲವಾಗಿ ವ್ಯಕ್ತಿಯೊಬ್ಬನ ಸಹಾಯದಿಂದ ತಮ್ಮ ಕೃತಿಗಳನ್ನು ಬರಹರೂಪಕ್ಕೆ ಇಳಿಸುತ್ತಿದ್ದರು.

ಮೊದಲಿನಿಂದಲೂ ನನಗೆ ಕವಿ-ಸಾಹಿತಿಗಳೆಂದರೆ ಎಲ್ಲಿಲ್ಲದ ಆಸೆ. ಒಳ್ಳೆಯ ಕವಿ-ಸಾಹಿತಿಗಳು ಕಂಡರೆ ಅವರ ಹಿಂದೇ ಹೋಗುವುದು, ಅವರ ದೈನಂದಿನ ಬದುಕು, ಅವರ ಬಗ್ಗೆ ಒಂದಷ್ಟು ಅರಿತುಕೊಳ್ಳುವುದು ನನ್ನ ಅಭ್ಯಾಸ. ಹಾಗೆ ನೋಡಿದರೆ ನನ್ನೆಲ್ಲಾ ಸ್ನೇಹಿತರು ಸಿನಿಮಾ ತಾರೆಯರನ್ನು ನೋಡಲು ಆಸೆಪಟ್ಟದ್ದಕ್ಕಿಂತ ತುಸು ಹೆಚ್ಚಾಗಿ ನಾನು ಕವಿ-ಸಾಹಿತಿಗಳ ಸಾಂಗತ್ಯವನ್ನು ಬಯಸುತ್ತಿದ್ದೆ. ಅವರುಗಳ ಸನ್ನಿಧಾನದಲ್ಲಿ ನನಗೆ ನಿಧಿಸಿಕ್ಕದ್ದಕಿಂತ ದಿಪ್ಪಟ್ಟು ದುಪ್ಪಟ್ಟು ಖುಷಿಯಾಗುತ್ತಿತ್ತು! ನನಗೆ ಅವರ ಮನೆಯಲ್ಲಿ ಭೋಜನ, ತಿಂಡಿ ಇಂತದ್ದರ ಬಗ್ಗೇನೂ ಆಸೆಯಿರಲಿಲ್ಲ. ಅವರೊಂದಿಗೆ ಮಾತಾಡಬೇಕು, ಒಂದಷ್ಟು ಅವರ ಮನೋಗತವನ್ನು ಕೆದಕಿ ಸಿಗಬಹುದಾದ ಮುತ್ತುಗಳನ್ನು ಎತ್ತಿ ಪೋಣಿಸಿ, ನನ್ನ ಮೊಲೆಯಲ್ಲಿ ಆಪದ್ಧನವಾಗಿ ಕಾಪಿಟ್ಟುಕೊಳ್ಳುವ ಅದಮ್ಯ ಚಡಪಡಿಕೆ ನನ್ನದು. ಮುತ್ತು ಪೋಣಿಸಿಕೊಳ್ಳುವಾಗ ಹೊತ್ತುಗೊತ್ತಿನ ಪರಿವೆಯೇ ಇರುತ್ತಿರಲಿಲ್ಲ! ಹಲವು ದಿನ ಹಿರಿಯ ಮಿತ್ರ ಶತಾವಧಾನಿ ಶ್ರೀ ಆರ್.ಗಣೇಶ್ ಅವರ ಮನೆಯಲ್ಲೂ ಕೂರುತ್ತಿದ್ದೆ. ನನ್ನ ವೃತ್ತಿನಿರತ ಜಂಜಾಟಗಳ ನಡುವೆಯೂ ಸಿಗರೇಟು, ಬೀಡಿ ಚಟದವರಿಗೆ ಆಗಾಗ ಅವು ಹೇಗೆ ಬೇಕಾಗುತ್ತಾವೋ ಹಾಗೇ ಕಾವ್ಯ-ಸಾಹಿತ್ಯ-ಕುಶಲೋಪರಿ ನನ್ನಿಷ್ಟದ ವಿಷಯಗಳು. ಮದಿಸಿದ ಮದ್ದಾನೆಯೊಂದು ಕದಳೀವನಕ್ಕೆ ನುಗ್ಗಿದಂತೇ ನುಗ್ಗಲಾಗದಿದ್ದರೂ ಆಗಾಗ ಕವಿ-ಸಾಹಿತಿಗಳ ಮನೆ ಸುತ್ತಾ ಆಮೆ ನಡೆದಂತೇ ನಿಧಾನವಾಗಿ ಸುಳಿದು ಹಣಿಕಿ-ಇಣುಕಿ ’ಅವರಿದ್ದಾರೋ’ ಎಂದು ಖಾತ್ರಿಮಾಡಿಕೊಂಡು, ಅವರಿಗೆ ಸಮಯವಿದೆ ಎಂಬುದು ಗಟ್ಟಿಯಾದಮೇಲೆ ಹೋಗಿ ಕುಳಿತುಕೊಳ್ಳುವುದಾಗಿತ್ತು. ಇಂತಹುದೇ ಒಂದು ಪ್ರಯತ್ನದಲ್ಲಿ ಕೆ.ಎಸ್.ನ ಅವರ ಮನೆಗೂ ಒಮ್ಮೆ ಎಡತಾಕಿದ್ದೆ. ಸುಮಾರು ಎರಡು ಗಂಟೆಗಳಕಾಲ ಹರಟಿದ ಸೌಭಾಗ್ಯ ನನ್ನದು! ನನ್ನ ಜೀವನದ ಅವಿಸ್ಮರಣೀಯ ತುಣುಕುಗಳಲ್ಲಿ ಈ ಘಟನೆ ಕೂಡ ಒಂದು.

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ನರಸಿಂಹಸ್ವಾಮಿಗಳು ಜನವರಿ ೧೫, ೧೯೧೫ನೇ ಇಸ್ವಿಯಲ್ಲಿ ಜನಿಸಿದರು. ಹುಟ್ಟಾ ಹೊಯ್ಸಳ ಕರ್ನಾಟಕ ಬ್ರಾಹ್ಮಣರು. ಮೈಸೂರಿನಲ್ಲಿ ಆರಂಭಿಕ ಹಂತದ ವಿದ್ಯಾಭ್ಯಾಸಗಳನ್ನು ಪೂರೈಸಿದರು. ೧೯೩೪ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಅಲ್ಲಿ ಓದಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ೧೯೩೬ ರಲ್ಲಿ ತಿಪಟೂರಿನಲ್ಲಿ ವೆಂಕಮ್ಮ ಎಂಬ ಹುಡುಗಿಯನ್ನು ಮದುವೆಯಾಗಿ, ಮನೆಯನ್ನೂ-ಮನವನ್ನೂ ತುಂಬಿಸಿಕೊಂಡರು. ಮೈಸೂರಿನ ನಗರಪಾಲಿಕೆಯಲ್ಲಿ ಗುಮಾಸ್ತನಾಗಿ ಸೇವೆಸಲ್ಲಿಸುತ್ತ ವೃತ್ತಿ ಆರಂಭಿಸಿದ ನರಸಿಂಹಸ್ವಾಮಿಗಳು ನಡೆದ ದಾರಿಬಹುದೂರ.

ಕನ್ನಡ ಕಾವ್ಯಲೋಕಕ್ಕೆ ನವ್ಯ ಮತ್ತು ನವ್ಯೋತ್ತರ ಕಾವ್ಯಗಳು ಪಾದಾರ್ಪಣೆ ಮಾಡಿದ ಕಾಲವದು. ತಮಗನಿಸಿದ್ದನ್ನು ಸರಳ ಶಬ್ದಗಳಲ್ಲಿ ಯಾವುದೇ ಪ್ರಾಸ, ಛಂದಸ್ಸು ವಗೈರೆಗಳ ಮಾರ್ಗಬಂಧಿಗಳಿಲ್ಲದೇ ಬರೆಯುವವರ ಅವಶ್ಯಕತೆಯಿತ್ತು. ಅಡಿಗರು ಅದರ ಹರಿಕಾರರಾಗಿದ್ದರು. ಅಂತಹ ಸಾಲಿಗೆ ಕೆ.ಎಸ್.ನ. ಸೇರಿದರೂ ಕಾವ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಕೆ.ಎಸ್.ನ. ರಾಬರ್ಟ್ ಬರ್ನ್ಸ್ ಇವರ ಕಾವ್ಯಗಳಿಗೆ ಮೂಲಕಾರಣ. ಮೊದಲಾಗಿ ಅವನ ಕವನಗಳನ್ನೇ ಆಂಗ್ಲ ಭಾಷೆಯಿಂದ ಕನ್ನಡೀಕರಿಸಿದವರು ಕೆ.ಎಸ್.ನ. ಮುಂದೆ ಅದರಿಂದ ಪ್ರೇರಿತರಾಗಿ ತಮ್ಮ ಹೆಂಡತಿಯನ್ನೇ ಸ್ಫೂರ್ತಿಯ ಸೆಲೆಯಾಗಿ ಬಳಸಿಕೊಂಡು ಅವರು ಬರೆದ ಕವನಗಳು ಒಂದಕ್ಕಿಂತಾ ಒಂದು ಅಪ್ರತಿಮ, ಓಘ, ಅಮೋಘ.

ಒಂದುಕಾಲಕ್ಕೆ ಅವರ ಕೃತಿಗಳನ್ನು ಕೇಳುವವರೇ ಇರಲಿಲ್ಲ! ಮೂಲೆಗೆ ಬಿದ್ದು ಹಳೇ ಪೇಪರ್ ಮಾರುವವರ ಕೈಗೆ ಹೋಗಿದ್ದ ಪ್ರತಿಗಳೇ ಎಷ್ಟೋ ! ಆದರೆ ಯಾವುದೋ ಒಬ್ಬ ಸಾಹಿತ್ಯ ಪ್ರೇಮೀ ಪುಣ್ಯಾತ್ಮ ಅದನ್ನು ಎತ್ತಿಕೊಂಡು ಓದಿ, ಅದನ್ನೊಂದು ಪ್ರಕಾಶನಕ್ಕೆ ಕೊಂಡೊಯ್ದು ಕೊಟ್ಟಾಗ ಅವರು ಅದನ್ನು ಪ್ರಕಾಶಿಸಲು ಮುಂದೆ ಬಂದರು. ಪ್ರಕಾಶಕರಿಗೇ ವ್ಯವಹಾರದ ಹಕ್ಕನ್ನು ಬಿಟ್ಟುಕೊಟ್ಟ ಕೆ.ಎಸ್.ನ. ೧೯೪೨ರಲ್ಲಿ ತನ್ನ ಮೊದಲ ಕೃತಿಗೊಂದು ಪ್ರಕಟಣೆ ಕಾಣಿಸುವಲ್ಲಿ ಯಶಸ್ವಿಯಾದರು. ’ಮೈಸೂರು ಮಲ್ಲಿಗೆ’ ಯ ಕಂಪು ನಂತರ ಎಲ್ಲೆಡೆಗೂ ಪಸರಿಸಲು ಶುರುವಾಯಿತು. ಇದರಲ್ಲಿರುವ ೪೯ ಕವನಗಳು ದಾಖಲೆಯ ಪ್ರಸಾರವನ್ನು ಕಂಡವು. ಮುದ್ರಣದ ಮೇಲೆ ಮುದ್ರಣ ಕಂಡ ರೋಮಾಂಚನ ಕವನ ಸಂಕಲನ ಪ್ರಾಯಶಃ ಕನ್ನಡದಲ್ಲಿ ಮತ್ತೊಂದಿಲ್ಲ! ಕವನಗಳಲ್ಲಿ ಅದೆಷ್ಟು ಆಪ್ತತೆ ತುಂಬಿದೆಯೆಂಬುದನ್ನು ’ಅಕ್ಕಿ ಆರಿಸುವಾಗ’ ಎಂಬ ಕವನ ಓದಿ ನೋಡಿ [ಇದನ್ನೆಲ್ಲಾ ನೀವು ಈಗಾಗಲೇ ನೂರಾರು ಬಾರಿ ಕೇಳಿಯೇ ಇರುತ್ತೀರಿ. ಆದರೂ ಕೇಳಿದಷ್ಟೂ ಕೇಳಬೇಕೆನಿಸುವ ಓದಿದಷ್ಟೂ ಓದಬೇಕೆನಿಸುವ ಅತ್ಯಂತ ಆಪ್ತವಾದ ಶಬ್ದಮಾಲೆಗಳು. ಪ್ರಾಯಶಃ ಪ್ರಿಯತಮ ತನ್ನ ಪ್ರಿಯತಮೆಯ ಕಿವಿಯಲ್ಲಿ ಪಿಸುಗುಟ್ಟುವ ಹಲವು ಸಿಂಪ್ಲಿ ನಥಿಂಗ್ ಗಳು, ಆದರೂ ಬಿಡಲಾರದಂತೇ ಕಿವಿಯಲ್ಲಿ ಗುನುಗುನಿಸುತ್ತಲೇ ಗುಂಗಿನಲ್ಲಿ ತಡೆಹಿಡಿಯುವ ಹಸಿಹಸಿ ಕವಿತೆಗಳು !]



[ಗಾತ್ರ ಹಿಗ್ಗಿಸಲು ಅಕ್ಷರದ ಮೇಲೆ ಕ್ಲಿಕ್ಕಿಸಿ ]

ದುಡ್ಡು ಕೊಟ್ಟರೆ ಹಸನುಮಾಡಿದ ಆಹಾರ ಧಾನ್ಯಗಳು, ಪದಾರ್ಥಗಳು ಸಿಗುವ ಕಾಲ ಅದಾಗಿರಲಿಲ್ಲ, ಬದಲಿಗೆ ಅಕ್ಕಿ, ಬೇಳೆ-ಕಾಳುಗಳನ್ನು ಕೊಂಡು ಆಮೇಲೆ ಸ್ವಚ್ಛಗೊಳಿಸಿಕೊಳ್ಳಬೇಕಾದ ದಿನಗಳವು. ಹೆಂಡತಿಯ ಉಂಗುರವಿರದ ಬೆರಳು ಹಾಗೂ ಬಂಗಾರದ ಸರವಿಲ್ಲದ ಕತ್ತನ್ನು ಕವಿ ಗಮನಿಸುತ್ತಾರೆ.

ಕವಿ ಹೃದಯ ಎಂದರೆ ಇದೇ ತಾನೇ ? ತನ್ನ ಹೆಂಡತಿಗೆ ಬೇಕಷ್ಟು ಬಂಗಾರ ಧರಿಸುವ, ಅಲಂಕರಿಸಿಕೊಳ್ಳುವ ಆಸೆಯಾಗಲೀ, ಆಸ್ಪದವಾಗಲೀ ಇರಲಿಲ್ಲ, ಆದರೆ ಇದ್ದುದರಲ್ಲೇ ತನ್ನ ಜತೆ ಅವಳು ಹಾಯಾಗಿದ್ದಳು ಎಂಬುದನ್ನು ನೋವಿನಲ್ಲಿಯೇ ನಯವಾಗಿಯೇ ಹೇಳಿದ್ದಾರೆ ಕವಿ ಅಲ್ಲವೇ ? ಮಡದಿ ವೆಂಕಮ್ಮನವರಿಗೆ ಕವಿ ಬರೆದ ಕಾವ್ಯಗಳೇಆಭರಣಗಳಾಗಿದ್ದವು ಎಂದರೆ ತಪ್ಪಲ್ಲ. ಅಂತಹ ಬಡತನವನ್ನೂ ಅವರು ಅನುಭವಿಸಿ ಬಂದರೂ ಅವರ ಕಾವ್ಯ ಶ್ರೀಮಂತಿಕೆಯಲ್ಲಿ ಅದು ಮರೆಯಾಗಿ ಹೋಗಿತ್ತು !

ಚಲನಚಿತ್ರ ದಿಗ್ದರ್ಶಕರಾದ ಶ್ರೀಯುತ ಟಿ.ಎಸ್.ನಾಗಾಭರಣರವರು ಇವರ ಹಲವು ಗೀತೆಗಳನ್ನು ದೃಶ್ಯ/ಶ್ರಾವ್ಯ ಮಾಧ್ಯಮಕ್ಕೆ ಅಳವಡಿಸಿದರು. 'ಮೈಸೂರು ಮಲ್ಲಿಗೆ' ಯನ್ನು ಸಂಪೂರ್ಣ ಕಥಾಹಂದರ ಹೊಂದಿಸಿ ಚಲನ ಚಿತ್ರವನ್ನಾಗಿಸಿದರು. ಒಂದೊಂದು ಹಾಡೂ ಅದೆಷ್ಟು ಇಂಪು ಅದೆಷ್ಟು ತಂಪು ಅದೆಷ್ಟು ಕಂಪುಬೀರುತ್ತದೆ ಎಂಬುದನ್ನು ಸದ್ಯಕ್ಕೀಗ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ಹಾಡಿದ್ದ ಎರಡು ಹಾಡುಗಳ ಮೂಲಕ ನೋಡೋಣ:



ಗಾಯಕ ಸಿ.ಅಶ್ವಥ್ , ಗಾಯಕಿ ಎಂ.ಡಿ.ಪಲ್ಲವಿ ಹಾಗೂ ತಂಡದವರಿಗೆ ನಮ್ಮ ಧನ್ಯವಾದಗಳು.



ಬೆಂಬಿಡದ ಭಾವನೆಗಳು ನಮ್ಮನ್ನು ಗಂಧರ್ವಲೋಕಕ್ಕೇ ಕರೆದೊಯ್ಯುವಂತೇ ಅನಿಸುತ್ತದೆ. ಯವೊಂದೂ ಹಾಡನ್ನು ಕೇಳಿ ಮುಗಿಯಿತೆಂಬುದೇ ಇಲ್ಲ. ಆ ಹಾಡುಗಳು ಹಿಂದಿಗೂ, ಇಂದಿಗೂ, ಮುಂದಿನ ಜನಾಂಗಕ್ಕೂ ಇಂಪಾಗಿ ಕೇಳುತ್ತಿದ್ದರೆ ಅದಕ್ಕೆ ಅವುಗಳಲ್ಲಿನ ಒಲವಿನ ದಾಂಪತ್ಯದಿಂದ ಎರಕಹೊಯ್ದ ಸಾಹಿತ್ಯಕ ಹೂರಣವೇ ಕಾರಣ.

ನರಸಿಂಹ ಕೆಲವೊಮ್ಮೆ ನರಸಿಂಹಾವತಾರಿಯೂ ಆಗುತ್ತಿದ್ದರಂತೆ, ಅದು ಹೆಂಡತಿಯೊಂದಿಗಲ್ಲ, ಮಿಕ್ಕುಳಿದ ಜನರೊಡನೆ ಮಾತ್ರ. ಆಗ ಅಲ್ಲಿ ಮನದನ್ನೆಯ ಪ್ರವೇಶವಾಗಿಬಿಟ್ಟರೆ ಬಂದ ನಾರಸಿಂಹ ಹೊರಟುಹೋಗಿ ಕಿಕ್ಕೇರಿ ನರಸಿಂಹ ಮಾತ್ರ ಉಳಿಯುತ್ತಿದ್ದನಂತೆ! ಅವರಿಗೆ ಸ್ವರಲಾಲಿತ್ಯ, ಶಬ್ದಲಾಲಿತ್ಯ ಮತ್ತು ಶಾರೀರ ಇವಿಷ್ಟು ಇರದಿದ್ದರೆ ಕವನಗಳು ಸುತರಾಂ ಹಿಡಿಸುತ್ತಿರಲಿಲ್ಲ. ನನ್ನೇದುರೇ ಯಾರಿಗೋ ನೇರವಾಗಿ ಖಾರವಾಗಿ " ಶಾರೀರ್ವೇ ಇಲ್ಲ " ಎಂದಿದ್ದನ್ನು ಕೇಳಿದ್ದೆ. ಹಾಗಂತ ಹೃದಯ ತುಂಬಾ ಮೆದು....ನಿಮಗೆ ಗೊತ್ತಾಗೋದಿಲ್ವೇ ? ಕಲ್ಲು ಹೃದಯದಿಂದ ಕವನಗಳು ಹೊರಹರಿಯಲು ಸಾಧ್ಯವೇ ? ಒಮ್ಮೆ ಹುಟ್ಟಿದರೂ ಮರಗಳೇ ಇಲ್ಲದ ಬೋಳು ಗುಡ್ಡದಂತೇ ಅವುಗಳಿಗೆ ಭಾವನೇಯೇ ಇರುತ್ತಿರಲಿಲ್ಲ ಅಲ್ಲವೇ ?

ಕೆ.ಎಸ್.ನ ಅವರಿಗೆ ಗಾಯಕ ಸಿ. ಅಶ್ವಥ್ ಸ್ನೇಹಿತರಾಗಿದ್ದರು. ಸರಕಾರದಿಂದ ಏನಾದರೂ ಕೆಲಸವಾಗಬೇಕಾದರೆ ತಾನು ಮಾಡಿಕೊಡುತ್ತೇನೆಂದು ಹೇಳುತ್ತಿದ್ದರಂತೆ. ಒಮ್ಮೆ ಮಾತ್ರ ಯಾವುದೋ ಕೆಲವು ಹಾಡುಗಳಿಗೆ ಗೌರವಧನ ಬಂದಿದ್ದನ್ನು ಅಶ್ವಥ್ ಬಳಗ ತಮಗೆ ಕೊಡಲೇ ಇಲ್ಲ ಎಂಬುದನ್ನು ಸ್ವತಃ ಕವಿಗಳೇ ನನ್ನೊಂದಿಗೆ ನೋವಿನಲ್ಲಿ ಹೇಳಿದರು.[ದೊಡ್ಡವರ ಸಣ್ಣತನಗಳು ಕೆಲವೊಮ್ಮೆ ಕೆಲವು ಯಾರಿಗೂ ಕಾಣದ ಸಂಗತಿಗಳಾಗಿ ಉಳಿದುಹೋಗುತ್ತವೆ] ಆಗಲೇ ಬಹಳ ಮುಪ್ಪಡರಿ ಏನೂ ಕೆಲಸಮಾಡಲಾಗದೇ ಇರುತ್ತಿದ್ದ ಅವರಿಗೆ ಅಷ್ಟಿಷ್ಟು ಹಣದ ಅವಶ್ಯಕತೆಯಿತ್ತೇನೋ ಅನ್ನಿಸಿತು.

ಕೆ.ಎಸ್.ನ ಅವರ ಕೃತಿಗಳ ಬಗ್ಗೆ ತಿಳಿದುಕೊಳ್ಳೋಣವೇ ?

ಕವನ ಸಂಕಲನಗಳು

  • ಮೈಸೂರು ಮಲ್ಲಿಗೆ (೧೯೪೨)
  • ಉಂಗುರ (೧೯೪೨)
  • ಐರಾವತ (೧೯೪೫)
  • ದೀಪದ ಮಲ್ಲಿ (೧೯೪೭)
  • ಇರುವಂತಿಗೆ (೧೯೫೨)
  • ಶಿಲಾಲತೆ (೧೯೫೮)
  • ಮನೆಯಿಂದ ಮನೆಗೆ (೧೯೬೦)
  • ತೆರೆದ ಬಾಗಿಲು (೧೯೭೬)
  • ನವಪಲ್ಲವ (೧೯೮೩)
  • ಮಲ್ಲಿಗೆಯ ಮಾಲೆ (೧೯೮೬,೨೦೦೪)
  • ದುನ್ಡು ಮಲ್ಲಿಗೆ (೧೯೯೩)
  • ನವಿಲ ದನಿ (೧೯೯೯)
  • ಸನ್ಜೆ ಹಾಡು (೨೦೦೦)
  • ಕೈಮರದ ನೆಳಲಲ್ಲಿ (೨೦೦೧)
  • ಎದೆ ತುಂಬ ನಕ್ಷತ್ರ (೨೦೦೨)
  • ಮೌನದಲಿ ಮಾಥ ಹುಡುಕುತ್ತ (೨೦೦೩)
  • ದೀಪ ಸಾಲಿನ ನಡುವೆ (೨೦೦೩)
  • ಹಾಡು-ಹಸೆ (೨೦೦೩)

ಭಾಷಾಂತರಿಸಿದ ಕೃತಿಗಳು

  • ಮೀಡಿಯಾ (೧೯೬೬)
  • ರಾಬರ್ಟ್ ಬರ್ನ್ಸ್ ಕವಿಯ ಕೆಲವು ಪ್ರೇಮಗೀತೆಗಳು (೧೯೯೭)
  • ಕೆಲವು ಚೈನೀ ಕವನಗಳು (೧೯೯೭)

ಗದ್ಯ

  • ಮಾರಿಯ ಕಲ್ಲು (೧೯೪೨)
  • ಉಪವನ (೧೯೫೮)
  • ದಮಾಯಂತಿ (೧೯೬೦)
  • ಸಿರಿಮಲ್ಲಿಗೆ (೧೯೯೦)

ಪ್ರಶಸ್ತಿಗಳು

  • ೧೯೭೮ ರಲ್ಲಿ ಶ್ರೀಯುತರ ’ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  • ನರಸಿಂಹಸ್ವಾಮಿಯವರ ಕನ್ನಡ ಸೇವೆ ಮತ್ತು ಅದರ ವೈಶಿಷ್ಟ್ಯವನ್ನು ಗಮನಿಸಿದ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
  • ೧೯೯೧ ರಲ್ಲಿ ಮೈಸೂರಿನಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.
  • ೧೯೯೭ ರಲ್ಲಿ ಶ್ರೀಯುತರ ದುಂಡುಮಲ್ಲಿಗೆ ಕವನ ಸಂಕಲನಕ್ಕೆ ಪಂಪ ಸಾಹಿತ್ಯ ಪ್ರಶಸ್ತಿ ಲಭ್ಯವಾಗಿದೆ.
  • ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಇವರನ್ನು ಫೆಲೋಶಿಪ್ [ಆಸ್ಥಾನ ವಿದ್ವಾನ್] ಅಥವಾ ಸಭಾಸದಸ್ಯತ್ವ ಕೊಟ್ಟು ಗೌರವಿಸಿವೆ.

೨೭ ಡಿಸೆಂಬರ್ ೨೦೦೩ ರಂದು ಕೆ.ಎಸ್.ನ ರವರು ತಮ್ಮ ಬಾಳಯಾತ್ರೆಯನ್ನು ಮುಗಿಸಿದರು ಎನ್ನುವಾಗ ಅವರೊಂದಿಗೂ ಅವರ ಕವನಗಳೊಂದಿಗೂ ಇರುವ ಭಾವನಾತ್ಮಕ ಸಂಬಂಧ ಬಿಚ್ಚಿಕೊಂಡು ಕಣ್ಣುಗಳು ತೇವವಾಗುತ್ತವೆ. ಮನದಲ್ಲೆಲ್ಲೋ ಅವರ ಇಂಪಾದ ಹಾಡೊಂದರ ಪಲ್ಲವಿ ಸುಳಿದುಹೋಗುತ್ತದೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ..........

Tuesday, November 16, 2010

ಮಾನಸ ಪೂಜೆ


ಮಾನಸ ಪೂಜೆ

ಭಗವತ್ಪಾದ ಶ್ರೀ ಆದಿಶಂಕರರು ಪ್ರಕಾಂಡ ಪಂಡಿತರೂ ಉತ್ತಮ ಕವಿಗಳೂ ಆಗಿದ್ದರು. ಆ ದಾರ್ಶನಿಕರ ಬಗ್ಗೆ ಬರೆಯತೊಡಗಿ ಮಧ್ಯದಲ್ಲಿ ಅನಿವಾರ್ಯತೆಯಲ್ಲಿ ನಿಲ್ಲಿಸಿದ್ದೆ. ಮತ್ತೆ ಕೆಲದಿನಗಳಲ್ಲಿ ಅದನ್ನು ಆರಂಭಿಸುತ್ತಿದ್ದೇನೆ. ಮನುಷ್ಯ ಏನೂ ಇರಲಿ ಇಲ್ಲದಿರಲಿ ತನ್ನ ದೈನಂದಿನ ವ್ಯವಹಾರಗಳ ಮಧ್ಯೆ ಇದ್ದಲ್ಲೇ ಹೇಗೆ ದೈವಧ್ಯಾನ ಮಾಡಬಹುದು ಎಂಬುದನ್ನು ಅಂದೇ ಅವರು ಸೂಚಿಸಿದ್ದರು. ಪಾಂಡವರಲ್ಲಿ ಭೀಮ ಇಂತಹುದೇ ಉಪಾಸನೆಯನ್ನು ಮಾಡುತ್ತಿದ್ದ ಎಂಬುದೊಂದು ಐತಿಹ್ಯ. ಮನುಷ್ಯನ ಮನಸ್ಸೇ ಎಲ್ಲಕ್ಕೂ ಮೂಲ ಕೇಂದ್ರವಾಗಿರುವುದರಿಂದ ಅಲ್ಲೇ ಹೊರಜಗತ್ತಿನ ವೈಭವ-ವೈಭೋಗಗಳನ್ನು ಕಲ್ಪನೆಮಾಡಿಕೊಳ್ಳುತ್ತಾ ದೈವಕ್ಕೆ ಅವುಗಳಿಂದ ಮನಸಾ ಪೂಜಿಸುವುದು ಮಾನಸ ಪೂಜೆ ಎನಿಸಿದೆ. ಶುದ್ಧ ಮನಸ್ಸಿನಲ್ಲಿ ದೇವರನ್ನು ಆಹ್ವಾನಿಸಿ ನಡೆಸಬಹುದಾದ ಈ ಪೂಜೆಗೆ ಬೇಕಾಗುವ ಒಂದೇ ಪ್ರಮುಖ ವಸ್ತು--ಮನಸ್ಸು. ಶಂಕರರ ಅಡಿಗಳಿಗೆರಗುತ್ತ ಅವರು ರಚಿಸಿದ ಶಿವಮಾನಸ ಸ್ತೋತ್ರವನ್ನು ಕನ್ನಡೀಕರಿಸಲು ನನ್ನ ಶಬ್ದಗಳನ್ನೂ ಸೇರಿಸಿ ಹೀಗೆ ಪ್ರಯತ್ನಿಸಿದ್ದೇನೆ : ]

ಆಂತರ್ಯದಲಿ ಕುಳಿತು
ನನ್ನಾಳ್ವ ಓ ದೊರೆಯೇ
ಅರ್ಪಿಸುವೆ ನಿನಗಿದುವೇ
ನನ್ನ ಹಾಡು
ನಿತ್ಯವೂ ಬೆಳಗಿನಲಿ
ಮತ್ತದೇ ಬೈಗಿನಲಿ
ಸ್ವಸ್ತ ಚಿತ್ತವ ಕೊಡುವ
ಕೃಪೆಯ ಮಾಡು

ರತ್ನ ಸಿಂಹಾಸನವ
ಕಲ್ಪಿಸುವೆ ಮನಸಿನಲಿ
ಪಟ್ಟೆ ಪೀತಾಂಬರವ
ಅಣಿಗೊಳಿಸುತಲ್ಲಿ
ಜಾತೀಯ ಪುಷ್ಪಗಳ
ಧೂಪದೀಪಗಳಿಟ್ಟು
ಪ್ರೀತಿಯಲಿ ಸ್ವಾಗತಿಸಿ
ಕುಳ್ಳಿರಿಸುತಲೀ

ಅರ್ಘ್ಯ ಪಾದ್ಯಾದಿಗಳು
ಸ್ನಾನ ಪಾನೀಯಗಳು
ಭೂಷಣಕೆ ಗಂಧ
ಮಾಲೆಗಳನ್ನು ಇಡುತ
ಭೇಷಾಯ್ತು ನಿನ್ನಿರವು
ನಾ ಸೋಲದಂತಿರಲು
ಕೇಶವನೇ ಶಿವನೇ ನೀ
ಪ್ರೀತಿಸೈ ಸತತ

ನವರತ್ನ ಖಚಿತ
ಬಂಗಾರದಾ ಪಾತ್ರೆಯಲಿ
ತುಪ್ಪ ಹಾಲ್ಮೊಸರು ಪಂಚ
ಭಕ್ಷ್ಯಾದಿಗಳನು
ಬಾಳೆ ಮಾವಿತ್ಯಾದಿ
ವಿಧದ ಹಣ್ಣಿನ ಜತೆಗೆ
ಪಾನಕ ತಾಂಬೂಲವಂ
ಕೊಡುತಲಿಹೆನು

ಅವಸರದ ಜೀವನದಿ
ಮರೆತಿರುವೆ ನಿನ್ನನ್ನೇ
ಭವಸಾಗರವು ಬಹಳ
ವಿಸ್ತಾರವಹುದು
ಕ್ಷಮಿಸೆನ್ನ ಮಂದಮತಿ
ಕರುಣಿಸುತ ಚಂದಗತಿ
ಮರುಳು ಮಾನವ ಜನ್ಮ
ಮುಸುಕು ಕವಿದಿಹುದು

ಕರಚರಣ ಕೃತಪಾಪ
ಕಾಯದಲಿ ಕರ್ಮದಲಿ
ಶ್ರವಣ ನಯನಗಳಲ್ಲಿ
ಜನಿಸಿದಪರಾಧ
ವಿಹಿತವೋ ಅವಿಹಿತವೋ
ಸರ್ವವನು ಕಡೆಗಣಿಸು
ಜಯಜಯವು ಜಯವೆನುತ
ದರ್ಶಿಸುವೆ ಪಾದ

Monday, November 15, 2010

ಬಾಲ್ಯಸಖಿ

ಚಿತ್ರ ಋಣ : ಅಂತರ್ಜಾಲ

ಬಾಲ್ಯಸಖಿ

ತಣ್ಣೆಳಲು ಬಯಸುತ್ತ ತೆರಳಿ ಆಲದ ಅಡಿಗೆ
ಕಣ್ಣೆವೆಯ ಮುಚ್ಚಿ ಮಲಗಿರಲು ಸಿಹಿಗನಸು
ಬಣ್ಣಿಸಲು ಶಬ್ದ ಸೋಲುವ ಮುನ್ನ ನಾ ಬರೆದೆ
ನುಣ್ಣನೆಯ ಈ ಹಾಡು ಗುನಿಗುನಿಸುವುದಕೆ

ಹುಣ್ಣಿಮೆಯ ರಾತ್ರಿಯಲಿ ಬಂದು ಕುಳಿತಿರೆ ಇಲ್ಲಿ
ಹೆಣ್ಣು ಹರಿಣದ ಮುಖವ ಹೊತ್ತ ಆ ಮುಗುದೆ
ಬಣ್ಣ ಹಾಲಿನ ಬಿಳುಪು ಸುರಲೋಕ ಸುಂದರಿಯು
ಗಿಣ್ಣದಂತಹ ಕೆನ್ನೆ ಮೃದುಮನಸಿನವಳು

ಅಣ್ಣಕೇಳ್ ನಾ ಬಂದೆ ಸರಿರಾತ್ರಿಯಲಿ ಭರದಿ
ಸಣ್ಣ ನಡುವನು ಬಳಸಿ ಮುದ್ದಾಡಲಾಗ
ಹಣ್ಣು-ಹಂಪಲು ಹಿಡಿದು ತೋರಿದೆನು ಪ್ರೀತಿಯನು
ಬೆಣ್ಣೆ ಮುದ್ದೆಯ ಮೈಯ ಸೋಕಿಸಿದಳವಳು

ಚಿಣ್ಣರಂತಾಗಿದ್ದ ನಮ್ಮ ಮನಗಳು ಸೇರಿ
ಮಣ್ಣಾಟವಾಡಿದ ದಿನಗಳನು ನೆನೆದೂ
ತಣ್ಣನೆಯ ಸುಳಿಗಾಳಿ ಸುಂಯ್ಯೆಂದು ಬೀಸಿಬರೆ
ಸುಣ್ಣಹಚ್ಚಿದ ತಾಂಬೂಲವನು ಮೆದ್ದೂ

ಬಣ್ಣಬಣ್ಣದ ಕಾಗದಗಳನು ಅಂಟಿಸುತ
ಕಣ್ಣಳತೆ ಮೀರಿ ಹೋಗುವ ದೂರದೆಡೆಗೆ
ಮಣ್ಣಾದ ಕೈಗಳಲಿ ಹಾರಿಸುತ ಗಾಳಿಪಟ
ಹುಣ್ಣಾಗುವಷ್ಟು ನಕ್ಕುದ ನೆನೆದು ಕಡೆಗೆ

ಹೆಣ್ಣವಳು ಬಾಲ್ಯಸಖಿ ಬಾಳಬೆಳಗಿದ ಗೆಳತಿ
ಗೆಣ್ಣು ಮುರಿದಿಹ ಕಾಯಿ ನೆಲವಪ್ಪಿದಂತೇ
ಹಣ್ಣೆಲೆಯು ಕೋಲೊಂದು ಉದುರಿ ಚೀಲದಮೇಲೆ
ಟಣ್ಣೆಂದು ಬಿದ್ದ ಸದ್ದಿಗೆ ಎದ್ದು ಕುಳಿತೆ !

Sunday, November 14, 2010

ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!


ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!

ಎಷ್ಟೋ ಸಮಯ ಮಕ್ಕಳನ್ನು ನಾವು ಮರೆತೇಹೋಗುತ್ತೇವೆ. ದೈನಂದಿನ ನಮ್ಮ ವ್ಯಾವಹಾರಿಕ ಜಂಜಡಗಳಲ್ಲಿ ಮಕ್ಕಳನ್ನು ಬೈದೋ ಬಡಿದೋ ದೂರ ಅಟ್ಟುವುದೇ ನಮ್ಮ ಕ್ರಿಯೆಯಾಗಿ ಎಷ್ಟೋ ಮನೆಗಳಲ್ಲಿ ಇಂದಿಗೂ ಅಪ್ಪನೆಂದರೆ ಹೆದರಿ ಮುದುರಿಕೊಳ್ಳುವ ಮಕ್ಕಳೂ ಇದ್ದಾರೆ! ಅಪ್ಪ ಯಾಕೆ ಒಮ್ಮೊಮ್ಮೆ ಹೀಗಾಗಿ ಬಿಡುತ್ತಾನೆ ಎಂದು ಆ ಮುಗ್ಧ ಮನಸ್ಸು ಅರ್ಥೈಸಲಾಗದೇ ಸೋಲುತ್ತದೆ. ಮನೆಯಲ್ಲಿ ಅಪ್ಪ-ಅಮ್ಮ ಕೊಡುವ ಪರಿಸರ, ಸಂಸ್ಕಾರದಲ್ಲಿ ಮಕ್ಕಳು ಬೆಳೆಯುತ್ತಾರೆ. ಈ ಕುರಿತು ಗಿಳಿಮರಿಗಳೆರಡರ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಒಂದು ನೈಜ ಘಟನೆಯನ್ನು ತಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಒಂದು ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಮಾರುವ ಅಂಗಡಿಯ ಪಕ್ಕ ನನ್ನ ವಾಹನವನ್ನು ನಿಲ್ಲಿಸುತ್ತಿದ್ದೆ. ಅಲ್ಲಿ ಪಾರ್ಕಿಂಗ್ ಜಾಗದ ಹಿಂದೆ ಸಂದಿಯಲ್ಲಿ ಚಿಕ್ಕ ಹುಡುಗರಿಬ್ಬರು ನಿಂತಿದ್ದರು. ಸುಮಾರು ೬-೭ ವಯಸ್ಸಿನವರು. ಒಬ್ಬನ ತುಟಿಯೊಡೆದು ರಕ್ತ ಹೊರಚಿಮ್ಮುತ್ತಿತ್ತು. ತುಸು ಹೊತ್ತು ನೋಡಿ ಹತ್ತಿರ ಕರೆದೆ. " ಯಾಕಪ್ಪಾ ಏನಾಯಿತು ? " ಎಂದೆ. ಆತ ಅಳುವುದನ್ನು ಇನ್ನೂ ಜೋರಾಗಿಸಿದ. ಬಹುಶಃ ಒಡೆದ ದವಡೆಯ ಅಥವಾ ತುಟಿಯ ನೋವಿನಿಂದ ಆತ ಚೀರುತ್ತಿದ್ದನಿರಬೇಕು. ಗಮನಿಸಿ ನೋಡಿದಾಗ ತಿಳಿದದ್ದು : ಆತ ಯಾವುದೋ ಸ್ಲಮ್ ಹುಡುಗ, ಜೊತೆಗಾರನೂ ಸ್ಲಮ್ ಹುಡುಗನೇ. ಆಗ ಅಪರಾಹ್ನ ೪ ಗಂಟೆಯ ಸಮಯ. ಊಟಮಾಡಿದ್ದರೋ ಹಸಿದಿದ್ದರೋ ಆ ಹುಡುಗರು ತಿಳಿಯದು. ಅವರನ್ನು ಕೇಳುವವರಾರು? ದುಡಿಯುವ ಜನಸಾಮಾನ್ಯನೇ ತೊಂದರೆಯಿಂದ ಹೆಳವನಾದರೆ ಯಾರೂ ಕೇಳದ ಕಾಲವಿದು ಅಂದಮೇಲೆ ಅಂತಹ ಹುಡುಗರನ್ನೆಲ್ಲಾ ಯಾರು ಕೇಳುತ್ತಾರೆ ಅಲ್ಲವೇ ? ನಾನು ತಡೆಯದಾದೆ. ಮನಸ್ಸಿಗೆ ಬಹಳ ಬೇಸರವಾಯಿತು. ಆತ ಅಂತೂ ಉತ್ತರಿಸಿದ " ಆ ಅಂಗಡಿಯಪ್ಪ ಹೊಡೆದನಣ್ಣಾ. " ಎನ್ನುತ್ತಾ ಕೆನ್ನೆ ಮುಟ್ಟಿಕೊಂಡ. ಕೆನ್ನೆ ಊದತೊಡಗಿತ್ತು. ನಾನು ಮತ್ತೆ ಕೇಳಿದೆ " ನೀನೇನು ಮಾಡಿದೆ ಅಂತ ಹೊಡೆದರು ? " ಆತ ನಿರುತ್ತರನಾಗಿದ್ದ. ನಾನು ಅಂಗಡಿಯಾತನಲ್ಲಿ ಕೇಳಿದೆ " ಸ್ವಾಮೀ ಅಷ್ಟು ಜೋರಾಗಿ ಹೊಡೆದಿರಲ್ಲ ಯಾಕೆ ಅಂತ ಕೇಳಬಹುದೇ ? " ಅಂಗಡಿಯಾತ ಹೇಳಿದ " ಕಳನನ್ಮಕ್ಳು ಚೇರ್ ಕದೀತಾ ಇದ್ರು ಅದಕ್ಕೇ ಕೊಟ್ಟೆ ಎರಡು. " ಉತ್ತರಬಂತು. ಅರ್ಥವೂ ಆಯಿತು.

ಸ್ಲಮ್ ಹುಡುಗರಿಗೆ ಅವರ ಮಾತಾ-ಪಿತೃಗಳು ಇನ್ನೇನು ಹೇಳಿಕೊಡಲು ಸಾಧ್ಯ! ಊಟಕ್ಕೇ ಗತಿಯಿರದಿರುವಾಗ ವಿದ್ಯೆಗೆ ದಾರಿ ಇದೆಯೇ ? ಅನ್ನ-ವಸತಿಗೆ ಅನುಕೂಲವಿಲ್ಲದಾಗ ಮಿಕ್ಕಿದ ಸಂಸ್ಕಾರಗಳಿಗೆ ಪುರಸ್ಕಾರವಿರುತ್ತದೆಯೇ ? ಬಡತನದ ಬವಣೆಯ ಸಂಸಾರದಲ್ಲಿ ಹುಟ್ಟಿಬೆಳೆಯುವ ಇಂಥಾ ಮಕ್ಕಳ ಗೋಳು ಹೇಳತೀರದು. ಅಪ್ಪ-ಅಮ್ಮ ಹೇಳಿದ್ದನ್ನು ಅವರು ಪಾಲಿಸಬೇಕು. ಇಲ್ಲದಿದ್ದರೆ ಹೊಟ್ಟೆಗೆ ಸಿಗುವ ಚಿಲ್ಲರೆ ಹಿಟ್ಟೂ ಇಲ್ಲ! ಪಾಲಕರು ಹೇಳಿದ್ದನ್ನು ಆದಷ್ಟೂ ಪಾಲಿಸುವ ಅಂತಹ ಹುಡುಗರು ಹಲವೊಮ್ಮೆ ಬೆಳೆಯುತ್ತಾ ಸಹಜವಾಗಿ ಇಲ್ಲದ ಚಟಗಳಿಗೆ ಬಲಿಯಾಗುತ್ತಾರೆ. ಕೆಲಸದಲ್ಲಿ ಆಸಕ್ತಿಯಿಲ್ಲದೇ ಮಾದಕ ವ್ಯಸನಿಗಳಾಗಿ ಎಲ್ಲೋ ಬಿದ್ದಿರುವುದೂ ಇರಬಹುದು. " ಹೇಯ್ ಏಳ್ರೋ ಮೇಲೆ ಹೋಗ್ರೋ ಏನಾದ್ರೂ ಒಂದಷ್ಟ್ ಪಟಾಯ್ಸ್ಕೊಂಡ್ ಬನ್ನಿ, ಇಲ್ಲಾಂದ್ರೆ ಒದ್ದೋಡ್ಸ್ಬುಡ್ತೀನಿ " ಇಂತಹ ಬೆದರಿಕೆಯ ದನಿಗೆ ಒಂದುಕಡೆ ಬೆದರಿ ಇನ್ನೊಂದು ಕಡೆ ತಿನ್ನುವ ತುತ್ತಿಗೆ ಅನಿವಾರ್ಯವಾಗಿ ಸ್ಲಮ್ ಮಕ್ಕಳು ದಾರಿ ತಪ್ಪುತ್ತಾರೆ. ನೇರಮಾರ್ಗದ ದುಡಿಮೆಯ ಬದಲು ಅಡ್ಡಡ್ಡ ಮಾರ್ಗವನ್ನು ಹಿಡಿಯುತ್ತಾರೆ. ಅವರಲ್ಲೇ ಬಹಳ ಮಂದಿ ಅವರಿವರ ಬಂಟರಾಗಿ ರೌಡೀ ಗ್ಯಾಂಗ್ ಗಳಲ್ಲಿ ಸೇರಿಕೊಂಡರೆ ಕೆಲವರು ಮಾತ್ರ ಚಿಲ್ಲರೆ ವ್ಯಪಾರವೋ ಸಾಪಾರವೋ ಮಾಡಿ ಜೀವಿಸುತ್ತಾರೆ. ಎಲ್ಲೋ ಬೆರಳೆಣಿಕೆಯಷ್ಟು ಜನ ಕೂಲಿ, ಚಿಕ್ಕಪುಟ್ಟ ನೌಕರಿ ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ.

ಹೀಗಿರುವ ಸ್ಲಮ್ ಒಂದರಿಂದ ಬಂದಿದ್ದ ಅವರಿಬ್ಬರು ಹಸಿದ ಹೊಟ್ಟೆಯಲ್ಲೇ ಇದ್ದರೇನೋ. ಅಲ್ಲಿರುವ ಪ್ಲಾಸ್ಟಿಕ್ ಅಂಗಡಿಯಾತ ಕೂಡ ತೀರಾ ಅನುಕೂಲದವರೇನಲ್ಲ. ತಮ್ಮ ಬದುಕಿಗಾಗಿ ಇರುವುದರಲ್ಲೇ ಅಷ್ಟೋ ಇಷ್ಟೋ ಹಣಕೂಡಿಸಿಕೊಂಡು ಅಂಗಡಿ ತೆರೆದಿದ್ದವರು. ಮೇಲಾಗಿ ವ್ಯಾಪಾರದಲ್ಲಿ ವಿಪರೀತ ಪೈಪೋಟಿ ಬೇರೆ. ತನ್ನ ಅನ್ನಕ್ಕೇ ಕೈಹಾಕಿದವರು ಹುಡುಗರೇ ಆಗಿದ್ದರೂ ತಾಳಲಾರದೇ ಹುಡುಗನಿಗೆ ಎರಡು ಬಾರಿಸಿದ್ದಾರೆ. ಹೊಡೆದ ತೀವ್ರತೆಗೆ ದವಡೆಯೇ ಒಡೆದು ತುಟಿಯತನಕವೂ ಗಾಯವಾಗಿ ರಕ್ತಬಂದಿದೆ. ಇಲ್ಲಿ ಹುಡುಗರ ತಪ್ಪೋ ಅಥವಾ ಅಂಗಡಿಯವರ ತಪ್ಪೋ ನೀವೇ ಹೇಳಿ. ಒಬ್ಬ ಏನೂ ಇಲ್ಲದವ, ಇನ್ನೊಬ್ಬ ತನ್ನ ಹೊಟ್ಟೆಗೆ ವ್ಯಾಪಾರೀ ವೃತ್ತಿಯಲ್ಲಿ ತೊಡಗಿಕೊಂಡವ. ನಾನು ಅಂಗಡಿಯವರ ಕೂಡ ಮಾತನಾಡಿದೆ. " ಸ್ವಾಮೀ ಏನೋ ಹುಡುಗರು ಸ್ವಲ್ಪ ಗದರಿಸಿ ಬಿಡಬಹುದಿತ್ತು, ಇನ್ನು ಮಾಡಿದರೆ .....ಅಂತ ಹೇಳಬಹುದಿತ್ತಲ್ಲ " ಎಂದೆ. " ನಿಮಗೇನ್ ಗೊತ್ರೀ ನಮ್ ಕಷ್ಟಸುಖ ದಿನಾ ಬರ್ತಾರೆ...ನಿಂತಿರ್ತಾರೆ.....ಸ್ವಲ್ಪ ನೋಡ್ಲಿಲ್ಲಾ ಅಂದ್ರೆ ಹೊಡ್ಕೊಂಡೋಗ್ಬುಡ್ತಾರೆ...ಪಾಪಿ ನನ್ಮಕ್ಳು. "

ನಾನು ಹೆಚ್ಚಿಗೆ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಹುಡುಗ ಅಲ್ಲೇ ಅಳುತ್ತಿದ್ದ. ಆತನನ್ನು ಕರೆದು ಕೈಗೊಂದು ಹತ್ತು ರೂಪಾಯಿ ಕೊಟ್ಟು [ಇದು ಕೊಟ್ಟೆ ಎಂದು ತೋರಿಸಲು ಬರೆದದ್ದಲ್ಲ, ನಡೆದದ್ದನ್ನ ಇದ್ದಹಾಗೇ ಹೇಳುತ್ತಿದ್ದೇನೆ] " ಅಲ್ಲಯ್ಯಾ ನೀನ್ಯಾಕೋ ಕದಿಯಕ್ಕೆ ಹೋಗಿದ್ದೆ? ಕಳ್ತನ ಮಾಡೋದು ತಪ್ಪು ಅಂತ ಗೊತ್ತಿಲ್ವಾ ? " ಅಂದೆ. ಆತ ನನ್ನ ಕಣ್ಣುಗಳನ್ನು ನೋಡಿ ತನ್ನ ಅಸಹಾಯಕತೆಯನ್ನು ಕಣ್ಣುಗಳಿಂದಲೇ ತಿಳಿಸುತ್ತಿದ್ದ. ಮಕ್ಕಳ ಇಂತಹ ಗೋಳಿಗೆ ಕಾರಣ ನಮ್ಮಲ್ಲಿನ ಬಡತನವಲ್ಲವೇ ? ಹುಟ್ಟಾ ಯಾವ ಮಗುವೂ ಕಳ್ಳ ಸುಳ್ಳ ಆಗಿರುವುದಿಲ್ಲ. ಮಗುವಿಗೆ ತಾನ್ಯಾರು, ಎಲ್ಲಿದ್ದೇನೆ, ಏನುತಿನ್ನುತ್ತೇನೆ ಇವೆಲ್ಲಾ ಪರಿವೆಯೇ ಇರುವುದಿಲ್ಲ. ಅಲ್ಪಸ್ವಲ್ಪ ತಿಳುವಳಿಕೆ ಬರುವುದು ೩ ವರ್ಷಗಳ ನಂತರವಷ್ಟೇ. ಹೀಗಾಗಿ ೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದೇವರೆಂದೇ ತಿಳಿದರೆ ತಪ್ಪಿಲ್ಲ. ಅಂತಹ ಮುಗ್ಧ ಮನಸ್ಸು ಅವರದಾಗಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವ್ರು ಹುಟ್ಟಿದ ಸುತ್ತಲ ಪರಿಸರಕ್ಕೆ ಒಗ್ಗಿಕೊಳ್ಳತೊಡಗುತ್ತಾರೆ. ಅಲ್ಲಿನ ಭಾಷೆ, ಸಂಸ್ಕಾರ-ಸಂಸ್ಕೃತಿ, ಆಹಾರ-ವಿಹಾರ, ಆಚಾರ-ನಡವಳಿಕೆ ಎಲ್ಲವನ್ನೂ ಮಗು ಸೂಕ್ಷ್ಮವಾಗಿ ಅರಿಯತೊಡಗುತ್ತದೆ, ಅನುಕರಿಸತೊಡಗುತ್ತದೆ. ಯಾವುದು ತಪ್ಪು ಯಾವುದು ಒಪ್ಪು ಎನ್ನುವುದನ್ನು ಮರೆತು ತಪ್ಪನ್ನೇ ಸರಿಯೆಂಬ ಭಾವನೆಯಿಂದ ತನ್ನ ಹಿರಿಯರು ಹೇಳಿದ್ದನ್ನು ಮಾಡತೊಡಗುತ್ತದೆ.

ಎಳವೆಯಲ್ಲೇ ಇಂತಹ ಮಕ್ಕಳು ಬೀದಿಗೆ ಬಂದು ಬೇಡುವುದು-ಕಾಡುವುದು ಮುಂತಾದ ಹಲವು ಮಾರ್ಗಗಳನ್ನು ಹಿಡಿಯುತ್ತಾರೆ. ಒಮ್ಮೊಮ್ಮೆ ಯಾವುದೂ ಸಾಲದಾಗ ಪಾಲಕರು ಹೇಳಿಕೊಡುವ ಕಳ್ಳತನವೇ ಮೊದಲಾದ ಬೇಡದ ಕೆಲಸಕ್ಕೆ ಕೈಹಾಕುತ್ತಾರೆ. ಸಮಾಜ ತಮ್ಮನ್ನು ವಿರೋಧಿಸುತ್ತದೆ ಎಂದು ಅನಿಸಿದಾಗ ಸಮಾಜದ ಜನರನ್ನು ನಿಗ್ರಹಿಸಲು ಮಚ್ಚು-ಲಾಂಗುಗಳನ್ನು ಕೈಗೆತ್ತಿಕೊಂಡು ಹೆದರಿಸುವ ಕಾಯಕ ಆರಂಭವಾಗುತ್ತದೆ. ಎಳೆಯ ಮಗುವೊಂದು ಪರಿಸ್ಥಿತಿಯಿಂದ ಬೆಳೆದ ರೌಡಿಯಾಗುತ್ತದೆ! ಇದರ ಮೂಲ ಬಡತನ ಮತ್ತು ಪರಿಸರ. ಇಂತಹ ಮಕ್ಕಳಿಗೆ ಆರಂಭದಲ್ಲೇ ಒಳ್ಳೆಯ ವಿದ್ಯೆ-ಸಂಸ್ಕಾರ ಸಿಕ್ಕಿದ್ದರೆ ಅವರು ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿಸಿದಾತನಿಗೆ ಅವರ ಉದರಂಭರಣೆಯೇ ಕಷ್ಟವಾಗಿರುವಾಗ ಇನ್ನು ವಿದ್ಯೆಯೆಲ್ಲಿಂದ ಬಂತು ? ಪಾಪದ ಕೂಸುಗಳು ಪಾಪಕೂಪದ ಕೃತ್ಯಕ್ಕೆ ಇಳಿದುಬಿಡುತ್ತವೆ. ವಂಚನೆ, ಮೋಸ, ದಗಾಕೋರರಾಗಿಯೂ, ಕಳ್ಳರು-ದರೋಡೆಕೋರರಾಗಿಯೂ ಕೆಲದಿನ ಸಂಪಾದಿಸಿದ ಹಣದಿಂದ ಆಮೇಲೆ ರೋಲ್ ಕಾಲ ಮಾಡಲು ಶುರುಮಾಡಿ ರೌಡಿಗಳಾಗುತ್ತಾರೆ.

ಈಗ ಸಮಾಜದ ಇನ್ನೋಂದು ಮುಖವನ್ನು ನೋಡೋಣ. ಉಳ್ಳವರ ಮಕ್ಕಳಿಗೆ ಹೊಟ್ಟೆ-ಬಟ್ಟೆಗೆ ಹೇರಳವಾಗಿ, ಹೆಚ್ಚಾಗಿ, ತಿಂದಿದ್ದು ಕರಗದೇ ಹಲವು ಹವ್ಯಾಸ ಬೆಳೆಯುತ್ತದೆ. ಇಲ್ಲಿಯ ಸಂಸ್ಕಾರ ವಿಭಿನ್ನವಾಗಿದ್ದು ಇಲ್ಲಿ ಅಪ್ಪ-ಅಮ್ಮ ಯಾಂತ್ರಿಕವಾಗಿ ಮಕ್ಕಳನ್ನು ಬೆಳೆಸುತ್ತಾರೆ. ಆತ್ಮೀಯತೆ ತೀರಾ ಕಮ್ಮಿ ಇರುವ ವಾತಾವರಣದಲ್ಲಿ ಮಕ್ಕಳು ಅಪ್ಪ-ಅಮ್ಮನ ನಿಜವಾದ ಪ್ರೀತಿ ಸಿಗದೇ ಉಂಡಾಡಿಗಳಾಗಿ ಖರ್ಚಿಗೊಂದಷ್ಟು ಪಾಕೆಟ್ ಮನಿ ಪಡೆದು ವಿದ್ಯಾರ್ಥಿದೆಸೆಯಲ್ಲಿಯೇ ಬೇಡದ ಚಟಗಳನ್ನು ಅಂಟಿಸಿಕೊಳ್ಳಲು ತೊಡಗುತ್ತಾರೆ. ಅಪ್ಪ-ಅಮ್ಮನ ಮಧ್ಯೆ ಇರುವ ’ಅಹಂ’ ಎಂಬ ಕಂದಕದಿಂದ ಮಕ್ಕಳು ಎಲ್ಲಿದ್ದಾರೆ, ಏನುಮಾಡುತ್ತಿದ್ದಾರೆ ಎಂಬುದನ್ನು ಲಕ್ಷ್ಯಿಸುವ ದೇಖರೇಖಿಯ ಕೆಲಸ ಅಪ್ಪ-ಅಮ್ಮಂದಿರಿಗೆ ಸಾಧ್ಯವಾಗುವುದಿಲ್ಲ.

ಇದಕ್ಕೆ ಉದಾಹರಣೆ: ಕಳೆದ ಕೆಲವು ತಿಂಗಳ ಹಿಂದೆ ಅತಿ ಚಿಕ್ಕ ಹುಡುಗರಿಬ್ಬರು ಮನೆಯಿಂದ ತಪ್ಪಿಸಿಕೊಂಡಿದ್ದರು. ಆಮೇಲೆ ನೋಡಿದರೆ ಮಧ್ಯಮವರ್ಗದವರಿಗೆ ಜನ್ಮದಲ್ಲೇ ಸಾಧ್ಯವಾಗದ ರೆಸಾರ್ಟ್ ಖರ್ಚಿನ ವಾಸದಲ್ಲಿ ಅವರು ಇದ್ದರು. ಅಲ್ಲಿಗೆ ಹೋಗಿ ಏನೇನನ್ನೋ ಬಯಸಿ ಕೇಳಿಪಡೆದು ಮಜಾಮಾಡತೊಡಗಿದ್ದರು. ಇಷ್ಟು ಸಣ್ಣಮಕ್ಕಳು ಮಾಡಿದ ಕೆಲಸದ ಇತಿಹಾಸ ಕೇಳಿ ನಾವೆಲ್ಲಾ ನಿಜಕ್ಕೂ ದಂಗಾಗಿ ಹೋಗಿದ್ದೆವು. ಇವತ್ತಿನ ದಿನ ವಾರ್ತಾವಾಹಿನಿಗಳು ನಿರಂತರ ಕಾರ್ಯನಿರತವಾಗಿರುವುದರಿಂದ ಅವರ ಪತ್ತೆ ಸುಲಭಸಾಧ್ಯವಾಯಿತು. ಇಲ್ಲಾಂದರೆ ಮಕ್ಕಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದೇ ಭಾವಿಸಬೇಕಾಗುತ್ತಿತ್ತು. ಇದು ಇಂದು ನಿನ್ನೆಯದಲ್ಲ,ಹಿಂದಿನಿಂದಲೂ ನಡೆದು ಬಂದಿದ್ದು. ಉಳ್ಳವರಿಗೆ ಮಕ್ಕಳೂ ಒಂದು ಉಪಕರಣವಿದ್ದ ಹಾಗೇ! ಹೆಂಡತಿ-ಮಕ್ಕಳು ಇರಬೇಕೋ ಇರಬೇಕು ಅಷ್ಟೇ. ಬಾಕಿ ಚಟಗಳನ್ನೆಲ್ಲಾ ಅವರು ದುಡ್ಡಿಕೊಟ್ಟು ತೆವಲು ತೀರಿಸಿಕೊಳ್ಳುತ್ತಾರೆ. ಐಷಾರಾಮೀ ಬಂಗಲೆಯಲ್ಲಿ ಹಾಯಾಗಿ ಹತ್ತಾರು ಕೋಣೆಗಳು, ದೊಡ್ಡ ದೊಡ ಹಜಾರಗಳು, ಕೈಗೆ ಕಾಲಿಗೆ ಆಳುಗಳು, ಅಡಿಗೆಯವರು.....ಹೀಗೇ ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆ...ಎಲ್ಲವೂ ದುಡ್ಡಿನಲ್ಲೇ. ಕೋಣೆ ಕೋಣೆಗೆ ಫೋನು, ಟಿವಿ. ಅಪ್ಪನಿಗೊಂದು ಕೋಣೆ, ಅಮ್ಮನಿಗೆ ಇನ್ನೊಂದು ಕೋಣೆ. ಮಕ್ಕಳಿಗೆ ಒಬ್ಬೊಬರಿಗೆ ಒಂದೊಂದು ಕೋಣೆ. ಮಕ್ಕಳಿಗೆ ಹೋಮ್ ವರ್ಕ್ ಮಾಡಿಸಲು ಟ್ಯೂಶನ್ ಟೀಚರ್, ಅವರನ್ನು ಮಲಗಿಸಲು ಆಯಾಗಳು. ಇನ್ನೇನು ಬೇಕು. ಅಲ್ಲಿ ಕೊರತೆಯಿರುವುದು ಅಪ್ಪ-ಅಮ್ಮನ ಪ್ರೀತಿ ಮಾತ್ರ. ಎಲ್ಲವೂ ಯಾಂತ್ರಿಕ!

ಇಂತಹ ಸ್ಥಿತಿಯಲ್ಲಿ ಬೆಳೆದ ಹುಡುಗರು ಹಿಂದೊಮ್ಮೆ ಪರೀಕ್ಷೆಗೆ ಕುಳಿತಾಗ ತಾವು ಹೇಗೂ ಉತ್ತೀರ್ಣರಾಗುವುದಿಲ್ಲವೆಂದು ತಿಳಿದಾಗ ನೂರು ನೂರು ರೂಪಾಯಿಗಳ ನೋಟುಗಳನ್ನು ಉತ್ತರಪತ್ರಿಕೆಗೆ ಗುಂಡುಪಿನ್ನು ಚುಚ್ಚಿ ಸಿಕ್ಕಿಸಿ ಅದರ ಕೆಳಗೆ ಬರೆದ ವಚನ

’ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ’ !

ಇಂತಹ ಮಹಾಮೇಧಾವಿಗಳೇ ಮುಂದೆ ಬೆಳೆದು ರಾಜಕಾರಣಿಗಳಾಗುತ್ತಾರೆ! ನಮ್ಮನ್ನೆಲ್ಲಾ ಆಳುತ್ತಾರೆ. ಅವರಿಗೆ ಗೊತ್ತು ದುಡ್ಡು ಕೊಟ್ಟರೆ ಎಲ್ಲವೂ ಸಾಧ್ಯ. ದುಡ್ಡಿದ್ದರೆ ಏನನ್ನೂ ಖರೀದಿಸಬಹುದು ಎಂಬುದು ಅವರ ಅನುಭವ ಜನ್ಯ ಅನಿಸಿಕೆಯಾಗಿರುತ್ತದೆ. ಶಾಸಕ ಸ್ಥಾನಕ್ಕೆ ಟಿಕೀಟು ಖರೀದಿಯಾಗುತ್ತದೆ. ಆಮೇಲೆ ಚುನಾವಣೆಗೆ ಒಂದಷ್ಟು ಕೋಟಿ ಇನ್ವೆಷ್ಟಮೆಂಟ್ ಆಗುತ್ತದೆ! ಆಮೇಲೆ ಗೆದ್ದಮೇಲೆ ಮಂತ್ರಿಗಿರಿಗೆ ಮತ್ತಷ್ಟು ಕೋಟಿ ಖರ್ಚಾಗುತ್ತದೆ! ತದನಂತರ ಅವುಗಳನ್ನೆಲ್ಲಾ ಸರಿದೂಗಿಸಿ ಮುಂದಿನ ಚುನಾವಣೆಗೆ ಮತ್ತು ಐಷಾರಾಮೀ ಜೀವನಕ್ಕೆ ಬೇಕಾಗಿ ಮಿಗಿಸಲು ಲಾಬಿ ಶುರು ಹಚ್ಚಿಕೊಳ್ಳುತ್ತಾರೆ!

ಯಾವ ಮಗು ಎಳವೆಯಲ್ಲಿ ಏನನ್ನು ಬಯಸಬಾರದಿತ್ತೋ , ಯಾವ ಕಾಮಚೇಷ್ಟೆಗಳನ್ನು ಅನುಭವಿಸಬಾರದಿತ್ತೋ, ಏನನ್ನು ಕುಡಿಯಬಾರದಿತ್ತೋ ಅಷ್ಟನ್ನೂ ಮಾಡಿಮುಗಿಸಿರುತ್ತದೆ. ಮೂಲದಲ್ಲೇ ಮಹತ್ವಾಕಾಂಕ್ಷೆಯ ಆಸೆಗಳನ್ನು ಖರೀದಿಸುವ ಸಂಸ್ಕೃತಿಗೆ ಒಗ್ಗಿದ ಮಗುವಿಗೆ ಯಾವುದು ಬೇಕು ಯಾವುದು ಬೇಡ ಎಂಬುದರ ಪರಿವೆ ಹೇಗೆ ತಾನೇ ಬಂದೀತು? ಅಪ್ಪ - ಅಮ್ಮ ಪಾರ್ಟಿಗಳಲ್ಲಿ ಪೆಗ್ಗು ಹಾಕುವುದು ಕಂಡಾಗ ತಾನೇಕೆ ಮಾಡಬಾರದು ಎಂದು ಮಗುವಿನ ಮನಸ್ಸು ಅತ್ತಕಡೆ ಎಳೆಯುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಕಾಲೇಜಿಗಿನ್ನೂ ಕಾಲಿಡದವ ಎಮ್.ಜಿ. ರಸ್ತೆಯ ರೆಸ್ಟಾರೆಂಟ್ ಒಂದರಲ್ಲಿ ಕಂಠಪೂರ್ತಿ ಕುಡಿದು ದಾಂಧಲೆ ಮಾಡಿದ್ದು ನಮಗೆ ಗೊತ್ತಿರುವ ಹಳೇ ಕಥೆ. ಕಾಲಗರ್ಭದಲ್ಲಿ ಇಂತಹ ಅದೆಷ್ಟು ಕಥೆಗಳಿವೆಯೋ !

ಮಹಾತ್ಮಾ ಗಾಂಧೀಜಿ ಚಿಕ್ಕವರಿರುವಾಗ ಬೀಡಿಯೊಂದನ್ನು ಸೇದಿದ್ದರಂತೆ. ಅದು ಸರಿಯಲ್ಲವೆಂದು ಯಾವಾಗ ತಿಳಿಯಿತೋ ಮರುಕ್ಷಣದಿಂದ ತನ್ನಲ್ಲೇ ಕೊರಗಿ ಮತ್ತೆ ತಾನು ಬೀಡಿಸೇದದಂತೇ ಮನಸ್ಸನ್ನು ಹಿಡಿತದಲ್ಲಿಟ್ಟರಂತೆ. ಮನೆಯಲ್ಲಿ ನಾವೇನು ಮಾಡುತ್ತೇವೆ, ಶಾಲೆಯಲ್ಲಿ ಶಿಕ್ಷಕರು ಏನುಮಾಡುತ್ತಾರೆ ಇವೆಲ್ಲಾ ಚಿಕ್ಕಮಕ್ಕಳ ಎಳೆಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಈ ಎರಡು ಪ್ರದೇಶಗಳಲ್ಲಿ ಸಿಗುವ ವ್ಯಕ್ತಿಗಳೇ ಅಂದಿಗೆ ಮಕ್ಕಳ ರೋಲ್ ಮಾಡೆಲ್ ಆಗಿರುತ್ತಾರೆ! ನಮ್ಮಲ್ಲಿ ಯಾರೇ ಆಗಲಿ ಶ್ರೀಮಂತರಿದ್ದರೆ ಅವರಲ್ಲಿ ಒಂದು ಸವಿನಯ ವಿಜ್ಞಾಪನೆ ನನ್ನದು. ನಿಮ್ಮ ಮಕ್ಕಳನ್ನು ಯಾರದೋ ಉಸ್ತುವಾರಿಯಲ್ಲಿ ಬೆಳೆಸುವ ಬದಲು ನೀವೇ ಬೆಳೆಸಿ. ನಿಮ್ಮ ಅಂಹಕಾರ, ಶ್ರೀಮಂತಿಕೆಯನ್ನೆಲ್ಲಾ ಪಕ್ಕದಲ್ಲಿರಿಸಿ ವ್ಯವಹರಿಸಿ. ಮಹಾಲಕ್ಷ್ಮಿ ಚಂಚಲೆಯಂತೆ! ಅವಳು ನಿಂತಲ್ಲಿ ನಿಲ್ಲುವುದಿಲ್ಲವಂತೆ. ಒಂದೊಮ್ಮೆ ಯಾವುದೋ ತೊಂದರೆಯಿಂದ ಅವಾಂತರವಾಗಿ ಗಳಿಸಿದ ಶ್ರೀಮಂತಿಕೆ ನಶಿಸಿಹೋಗಿ ಬಡತನ ಬಂದುಬಿಟ್ಟರೆ ಆಗ ಹೇಗೆ ಬದುಕಬೇಕು ?

ನಾವೆಲ್ಲಾ ಎಳೆಯವರಿರುವಾಗ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಎಲ್ಲರೂ ಇರುವ ಕೂಡು ಕುಟುಂಬ ನಮ್ಮದಾಗಿತ್ತು. ೨ ವರ್ಷದವರಿದ್ದಾಗಲೇ ದಿನಾಲೂ ಬಾಯಿಪಾಠ ಹೇಳಿಸುತ್ತಿದ್ದರಂತೆ ನಮ್ಮ ಅಜ್ಜಿ. ೬ ವರ್ಷವಾದಾಗ ನಮ್ಮ ನಮ್ಮ ಬಟ್ಟೆಯನ್ನು ನಾವ್ನಾವೇ ತೊಳೆದುಕೊಳ್ಳಬೇಕು, ಶುಭ್ರ ಬಟ್ಟೆಗಳನ್ನು ಧರಿಸಬೇಕು, ಹಲ್ಲುಗಳನ್ನು ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವ ಮುನ್ನ ಹೀಗೇ ಎರೆಡಾವರ್ತಿ ಉಜ್ಜಿ ಸ್ವಚ್ಛಗೊಳಿಸಬೇಕು ಎಂದು ಹೇಳಿಕೊಟ್ಟವರು ತಾಯಿ, ಸಾಹಸದ ಗಾಥೆಗಳನ್ನು ಮನದಟ್ಟಾಗಿಸಿ ವ್ಯಕ್ತಿ ಯಾವಾಗಲೂ ಕಾರ್ಯತತ್ಪರನಾಗಿರಬೇಕೆಂದೂ ಸಾಮಾನ್ಯವಾಗಿ ಬೇಕಾಗುವ ಎಲ್ಲಾ ಕೆಲಸಗಳನ್ನೂ ಅರಿತಿರಬೇಕೆಂದೂ ಹೇಳಿ-ತಿಳಿಸಿ-ಕಲಿಸಿದವರು ಅಜ್ಜ, ಮಕ್ಕಳಿಗೆ ಬೇಕಾಗುವ ಪುಸ್ತಕ, ಪಟ್ಟಿ, ಪೆನ್ಸಿಲ್, ಬಿಸ್ಕಿಟ್ ಇವನ್ನೆಲ್ಲಾ ತಂದವರು ಚಿಕ್ಕಪ್ಪಂದಿರು, ಬದುಕಿಗೆ ಬೇಕಾಗುವ ಹಲವು ಕೆಲಸಗಳನ್ನು ಪ್ರಯೋಗಿಕವಾಗಿ ಪ್ರಾತ್ಯಕ್ಷಿಕೆ ಮಾಡಿತೋರಿಸಿದವರು, ಕಿವಿ ಹಿಡಿದು ಬುದ್ಧಿಹೇಳಿದವರು ತಂದೆ. ನಮ್ಮಂತಹ ಶುಂಠರನ್ನು, ಮೂಢರನ್ನು ತಿದ್ದಲು ಅವರು ರಾಮಾಯಣ ಮಹಾಭಾರತಗಳ ಕಥೆಗಳನ್ನು ಬಳಸಿದರು.

ಪ್ರತೀನಿತ್ಯ ದೈವಧ್ಯಾನ, ಪೂಜೆ-ಪುನಸ್ಕಾರ, ಅತಿಥಿಸತ್ಕಾರ, ಶಾಲೆ, ಪಾಠ-ಪ್ರವಚನ, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು, ಕೊಟ್ಟಿಗೆಯ ಕೆಲಸಗಳು-ಸಗಣಿ ಎತ್ತುವುದು, ಎಮ್ಮೆ-ದನಗಳನ್ನು ಮೀಯಿಸುವುದು, ಕೊಟ್ಟಿಗೆ ತೊಳೆಯುವುದು, ಗೊಬ್ಬರ ಬರಗುವುದು, ಹಾಲು ಹಿಂಡುವುದು, ಜಾನುವಾರುಗಳಿಗೆ ಮೇವು-ಅಕ್ಕಚ್ಚು [ಕಲಗಚ್ಚು]ಕೊಡುವುದು, ತೋಟದಲ್ಲಿ ಗಿಡ-ಮರಗಳಿಗೆ ನೀರು-ಗೊಬ್ಬರ ಪೂರೈಕೆ ಇವೇ ಮೊದಲಾದ ಹತ್ತಾರು ಕಾರ್ಯಗಳಲ್ಲಿ ನಾವು ತೊಡಕಿಕೊಳ್ಳುತ್ತ ಓದುವಂತೇ ಪ್ರೇರೇಪಿಸಿದ್ದರಿಂದ ಇಂದು ಮಾನವರಾಗಿದ್ದೇವೆ ಅಂದುಕೊಂಡಿದ್ದೇನೆ! ನಮ್ಮ ಹಿರಿಯರು ಪ್ರತಿನಿತ್ಯ ಹೇಳುತ್ತಿದ್ದುದು :

|| ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ ||

ಅಂದಿಗೆ ನಮಗೆ ವೇದಮಂತ್ರಗಳ, ಶ್ಲೋಕಗಳ, ಸ್ತುತಿ-ಕವಚಗಳ ಅರ್ಥವಾಗುತ್ತಿರಲಿಲ್ಲ. ಇಂದು ನಮಗೆ ಇದನ್ನೆಲ್ಲಾ ಹೇಳಿಕೊಟ್ಟರಲ್ಲಾ ಪುಣ್ಯಾತ್ಮರು ಎಂದು ಮನಸ್ಸು ಕೃತಜ್ಞವಾಗುತ್ತದೆ. ಜೀವನದಲ್ಲಿ ಯಾರಲ್ಲಿಯೂ ಬೇಡಬಾರದಂತಹ ಸ್ಥಿತಿಯಲ್ಲಿ ನಾವು ಜೀವಿಸಿ ನಂತರ ನಿರಾಯಾಸವಾಗಿ ಮರಣವಾದರೆ ಅದೇ ಸುಖವೆಂದು ಈ ಮೇಲಿನ ಶ್ಲೋಕ ಹೇಳುತ್ತದೆಯಷ್ಟೇ ? " ಮಕ್ಕಳೇ ಯಾರನ್ನೂ ದ್ವೇಷಿಸಬೇಡಿ. ಎಲ್ಲರಲ್ಲಿಯೂ ಪ್ರೀತಿಯಿರಲಿ. ಜಗತ್ತಿನ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನಿದ್ದಾನೆ. ಆದಷ್ಟೂ ಬಡವರಿಗೆ, ಆರ್ತರಿಗೆ, ಮುಪ್ಪಿನ ವಯಸ್ಸಿನವರಿಗೆ, ಅಂಗವಿಕಲರಿಗೆ ಸಹಾಯಮಾಡಿ. ಯಾರಿಗೂ ನಮ್ಮಿಂದ ಅನ್ಯಾಯ-ಅಪಚಾರವಾಗದಂತೇ ನೋಡಿಕೊಳ್ಳಿ. ಒಂದೊಮ್ಮೆ ಯಾರಾದರೂ ನಮ್ಮಿಂದ ನೊಂದುಕೊಂಡರೆ ಅಂಥವರಲ್ಲಿ ಕ್ಷಮೆಯಾಚಿಸಿ. ಸಾಧು-ಸಂತರ ಸೇವೆಮಾಡಿ. ಗೋವುಗಳನ್ನು ಚೆನ್ನಾಗಿ ಆರೈಕೆಮಾಡಿ, ನಮ್ಮ ಸುತ್ತಲಿರುವ ಪ್ರತಿಯೊಂದೂ ವಸ್ತುವಿನಲ್ಲೂ ಪರಮಾತ್ಮ ಸಾನ್ನಿಧ್ಯ ಇದೆಯೆಂದು ಭಾವಿಸಿ ನಡೆದುಕೊಳ್ಳಿ." --ಹೀಗೇ ಹಲವು ಅಂಶಗಳನ್ನು ಆಗಾಗ ಹೇಳುತ್ತಿದ್ದರಲ್ಲದೇ ಅದರಂತೇ ನಡೆದುಕೊಂಡರು; ನಮಗದು ಆದರ್ಶ.

" ದರಿದ್ರ ಏಳಗೊಡ ಭಾಗ್ಯ ಕೂರಗೊಡ. ಜಾಸ್ತಿ ಮಲಗಿದರೆ ದರಿದ್ರರಾಗ್ತೇವೆ ಕೆಲಸಮಾಡಿ ಭಾಗ್ಯ ಹುಡುಕಿಕೊಂಡು ಬರುತ್ತದೆ " ಎನ್ನುತ್ತಿದ್ದ ಅಜ್ಜಿ ನಮ್ಮೆಲ್ಲರನ್ನೂ ಹೊತ್ತಾರೆ ಎಬ್ಬಿಸಿ ದೇವರಿಗೆ ಹೂ ಕೊಯ್ಯಲು ಕಳುಹಿಸುತ್ತಿದ್ದುದು ನೆನಪಿಗೆ ಬರುತ್ತಿದೆ. ಕೆಲವೊಮ್ಮೆ ಚಳಿಗಾಲದಲ್ಲಿ ಇಂಪಾಗಿ ಹಾಡುವ ಹಕ್ಕಿಗಳ ಕಲರವದ ನಡುವೆ ಅಜ್ಜಿ ಹಾಡುತ್ತಿದ್ದ ಹಾಡು :

ಏಳು ಮುದ್ದಿನ ಗಿಣಿಯೆ ಏಳು ಸದ್ಗುಣಮಣಿಯೆ
ಏಳಯ್ಯ ಕಂದಯ್ಯ ಬೆಳಗಾಯಿತು

ಕ್ರೂರಮೃಗಗಳು ತಾವು ಗವಿಯ ಸೇರುತಲಿಹವು
ಪಾರಿಜಾತದ ಪುಷ್ಪ ಅರಳುತಿಹುದು .....

ಹಾಡು ಸುಮಾರು ಉದ್ದವಿದೆ, ಒಳ್ಳೆಯ ಸಾಹಿತ್ಯವಿದೆ. ಬರೆದ ಅಜ್ಞಾತ ಕವಿಯ ಬಗ್ಗೆ ಗೊತ್ತಿಲ್ಲ. ಈ ಹಾಡಿನ ಅರ್ಥವನ್ನು ಅಜ್ಜಿಯೇ ವಿವರಿಸುತ್ತಿದ್ದರು. ಇಂದಿಗೆ ಅಜ್ಜಿ ಕೇವಲ ನೆನಪುಮಾತ್ರ. ಅವರು ನಮ್ಮೆಲ್ಲಾ ಮಕ್ಕಳ ಹೃದಯದಲ್ಲಿ ನೆಲೆನಿಂತರು! ಇವತ್ತಿನ ದಿನದಲ್ಲಿ ಅವಿಭಕ್ತ ಕುಟುಂಬಗಳು ಎಲ್ಲೋ ಸಾವಿರಕ್ಕೆ ಒಂದು ಕಾಣಸಿಕ್ಕರೆ ನಮ್ಮ ಪುಣ್ಯ. ಇದ್ದರೂ ಮೊದಲಿನ ನಿಸ್ಪೃಹ ಜೀವನದ ವೈಖರಿ ಇವತ್ತಿನ ಜನರಲ್ಲಿಲ್ಲ. ಅಂದು ಹಿರಿಯರಿದ್ದರು ಸನ್ಮಾರ್ಗ ಬೋಧಿಸುತ್ತಿದ್ದರು; ಇಂದು ಹಿರಿಯರು ಜೊತೆಗಿರುವುದಿಲ್ಲ ಸನ್ಮಾರ್ಗ ಯಾವುದು ದುರ್ಮಾರ್ಗ ಯಾವುದು ತಿಳಿಯುವುದೇ ಇಲ್ಲ. ವಿದ್ಯೆ ಕಲಿಸುವ ಶಿಕ್ಷಣ ಕೇಂದ್ರಗಳು ಬದುಕುವ ನಿಜವಾದ ಕಲೆಯನ್ನು ಕಲಿಸುವ ಬದಲು ಬೇರೇನನ್ನೋ ಹೇಳುತ್ತವೆ. ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದಿಕೊಂಡಾತ ಕೆಟ್ಟುನಿಂತ ತನ್ನ ಮೋಟಾರ್ ರಿಪೇರಿಗೆ ಯಾವುದೋ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುತ್ತಾನೆ, ಸಿವಿಲ್ ಓದಿದವನಿಗೆ ಮನೆ ಕಟ್ಟಿಸಲು ಮತ್ತೊಬ್ಬ ಕಂತ್ರಾಟುದಾರ ಹೇಳಿಕೊಡಬೇಕಾಗುತ್ತದೆ, ಪ್ರಶಿಕ್ಷಣ ಓದಿದ ಪಂಡಿತನಿಗೆ ಪಾಠಮಾಡುವ ಪ್ರಾತ್ಯಕ್ಷಿಕೆಗೆ ಮತ್ತೆ ತರಬೇತಿ ಬೇಕು! --ಇವೆಲ್ಲಾ ಪಠ್ಯಕ್ರಮದ ನ್ಯೂನತೆಗಳು.

ಹೃದಯ ತಜ್ಞ ಡಾ| ಬಿ.ಎಮ್. ಹೆಗ್ಡೆಯವರು ಹೇಳುತ್ತಾರೆ-- ಅಲೋಪಥಿಯಲ್ಲಿ ಕೆಲವು ಮಾಪನಗಳನ್ನು ವಿದೇಶೀ ಹವಾಮಾನಕ್ಕನುಗುಣವಾಗಿ ಹೇಳುತ್ತಿದ್ದರಂತೆ. ಭಾರತದ ಹವಾಮಾನಕ್ಕೂ ಅಲ್ಲಿಗೂ ವ್ಯತ್ಯಾಸವಿರುವುದಿಲ್ಲವೇ ? ಇಲ್ಲಿ ಹೊಸದಾಗಿ ಕಲಿಯುವ ವೈದ್ಯರು ಆ ಪಠ್ಯಗಳನ್ನು ಅಭ್ಯಸಿಸಿ ಮಾಪನ ಉಪಯೋಗಿಸುವಾಗ ರೋಗಿಯ ತಪಾಸಣೆಯಾಧಾರಿತ ಅಂಕಿ ಅಂಶಗಳನ್ನು ಸರಿಯಾಗಿ ನಮೂದಿಸದೇ ಅಲ್ಲಿನ ಅಳತೆಗಳನ್ನೇ ಅವಲಂಬಿಸಿ ಬರೆಯುತ್ತಿದ್ದರಂತೆ. ಇದು ಅಷ್ಟಾಗಿ ಯಾವ ವೈದ್ಯರ ಲಕ್ಷ್ಯಕ್ಕೂ ಬರುತ್ತಿರಲಿಲ್ಲವಂತೆ. ಹೆಗ್ಡೆಯವರು ಅದನ್ನು ಪರಿಶೀಲಿಸಿ ಆ ನ್ಯೂನತೆಯನ್ನು ಹೊರಹಾಕಿದ್ದಾರೆ. --ಇದು ನಮ್ಮ ಪಠ್ಯಕ್ರಮಕ್ಕೂ ಮತ್ತು ಪ್ರಾಕ್ಟಿಕಲ್ ಗೂ ಇರುವ ವ್ಯತ್ಯಾಸ.

ಬಡತನ ನಮ್ಮಲ್ಲಿ ಇದ್ದೇ ಇದೆ. ಗದ್ದೆಯಲ್ಲಿ ಕೆಸರಿರುವಂತೇ, ಹುದ್ದೆಗೊಂದು ಜವಾಬ್ದಾರಿಯಿರುವಂತೇ ಇದು ಸದ್ಯಕ್ಕಂತೂ ಅನಿವಾರ್ಯ ಸಹಜ. ಇದನ್ನು ಒಪ್ಪಿಕೊಳ್ಳೋಣ. ಆದರೆ ಕೆಸರಿನಲ್ಲಿಯೇ ಕಮಲವೂ ಅರಳುವಂತೆ, ಆ ಅರಳಿದ ಕಮಲ ಕೆಸರನಲ್ಲಿಯೇ ಇದ್ದರೂ ಅದನ್ನು ಅಂಟಿಸಿಕೊಳ್ಳದಂತೇ ಇರುವಂತೇ ಬಡತನವಿದೆಯೆಂಬ ಭಾವವನ್ನು ತೊರೆದು ನಾವೆಲ್ಲಾ ಶ್ರೀಮಂತರೇ ಎಂಬ ಭಾವದಿಂದ ಬದುಕಬಲ್ಲೆವಷ್ಟೇ ? ನಮಗೆ ಢಾಂಬಿಕತೆ ಬೇಡ, ಇದ್ದುದನ್ನೇ ನಮ್ಮ ಶ್ರೀಮಂತಿಕೆಯೆಂದು ತಿಳಿಯಲು ಅಡ್ಡಿಯಿಲ್ಲವಲ್ಲ? ನಿಜವಾಗಿಯೂ ಹೇಳಲೇ ನಾವ್ಯಾರೂ ಬಡವರಲ್ಲ. ನಮ್ಮನ್ನು ಬಡವರನ್ನಾಗಿಸಿದವರು ಖರೀದಿಸುವ ಮನೋಭಾವದ ರಾಜಕಾರಣಿಗಳು. ಅವರು ಖೊಳ್ಳೆ ಹೊಡೆದು ಸ್ವಿಸ್ ಬ್ಯಾಂಕಿನಲ್ಲಿಟ್ಟ ಹಣ ದೇಶಕ್ಕೆ ಮರಳಿ ಬಂದಿದ್ದರೆ-ಅದನ್ನು ಬಡವರು ಪಡೆದಿದ್ದರೆ ದೇಶದಲ್ಲಿ ಬಡತನವೆಂಬುದು ಇರುತ್ತಿರಲಿಲ್ಲ. ಆಗಲಿ, ಆಗುವುದೆಲ್ಲಾ ಒಳ್ಳೆಯದಕ್ಕೇ! ಕಾಲ ಮತ್ತೆ ಬದಲಾಗುತ್ತಿರುತ್ತದೆ. ಆದರೊಂದು ಮಾತು ಮಕ್ಕಳಿಗೆ ಒಳ್ಳೆಯತನ ಮೈಗೂಡಿಸಿಕೊಳ್ಳಲು ಅನುವುಮಾಡಿಕೊಡಿ. ಸನ್ಮಾರ್ಗವನ್ನು ಕಥೆಯಲ್ಲಲ್ಲ ಕೃತಿಯಿಂದ ಬೋಧಿಸಿ ! ಮಕ್ಕಳು ಬಸವಣ್ಣನವರ ಆ ವಚನವನ್ನು ಬದಲಿಸದೇ ಮೂಲ ವಚನವನ್ನು ಹಾಗೇ ಬಳಸುವಂತೇ ಆಗಲಿ. ಮಕ್ಕಳು ಎಲ್ಲೇ ಇರಲಿ, ಅವರು ಮುಗ್ಧರೇ, ಅವರನ್ನು ತಿದ್ದುವುದು-ತೀಡುವುದು ನಮ್ಮ ಕರ್ತವ್ಯ. ಈ ದಿಸೆಯಲ್ಲಿ ತಿದ್ದುವ ನೆಪದಲ್ಲಿ ಮಕ್ಕಳನ್ನು ಗೋಳುಹುಯ್ದುಕೊಳ್ಳುವ ಕೆಲಸ ಮಾಡಬೇಡಿ. ತಿದ್ದುವ ಕ್ರಮ ನಮ್ಮ ಕಾರ್ಯರೂಪದಿಂದ ತೋರ್ಪಡುವ ಸಂಸ್ಕಾರದಿಂದ ಅವರಿಗೆ ತಂತಾನೇ ಬರಲಿ. ಮಕ್ಕಳಲ್ಲಿ ದಯೆಯಿರಲಿ, ಅನುಕಂಪವಿರಲಿ, ಪ್ರೀತಿಯಿರಲಿ, ಸಹಾನುಭೂತಿಯಿರಲಿ. ಮಂಗಳವನ್ನೂ ಶುಭವನ್ನೂ ಕೋರುವ ಹಾಡಿನ ಪಲ್ಲವಿಯೊಂದಿಗೆ ಈ ಲೇಖನಕ್ಕೆ ಮಂಗಳ ಕೋರೋಣ:

ಮಂಗಳದಾ ಈ ಸುದಿನ ಮಧುರವಾಗಲೀ ....
ನಿಮ್ಮೊಲವೇ ಈ ಮನೆಯ ನಂದಾದೀಪವಾಗಲಿ ......

Saturday, November 13, 2010

ಹಣ್ಣು ಬೇಕೇ ಹಣ್ಣು?


ಎಲ್ಲಾ ಹಿರಿಕಿರಿಯ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಹಣ್ಣು ಬೇಕೇ ಹಣ್ಣು ?

ಪಪ್ಪಾಂ ಪಿಪ್ಪೀಂ ಪೀಂ ಪೀಂ
ರಪ್ಪಾಂ ರಿಪ್ಪೀಂ ರೀಂ ರೀಂ
ಚಪ್ಪಾಂ ಚಿಪ್ಪೀಂ ಚೀಂ ಚೀಂ
ಅಚ್ಚೂ ಮೆಚ್ಚೂ ಧಾಂ ಧೂಂ

ಹಣ್ಣು ಬೇಕೇ ಹಣ್ಣು ?
ಬಣ್ಣ ಬಣ್ಣದ ಹಣ್ಣು
ಅಣ್ಣ ಅಪ್ಪ ಅಮ್ಮ
ಕೊಳ್ಳಿರೆಲ್ಲಾ ಹಣ್ಣು

ಸೇಬು ಮಾವು ಬಾಳೆ
ಹಲಸು ಸೀಬೆ ಕಿತ್ತಳೆ
ಸೀತಾಫಲ ಅನಾನಸ್ಸು
ತುಂಬುತಾವೆ ಮನಸ್ಸು

ಬನ್ನಿರಮ್ಮಾ ಕೊಳ್ಳಿ
ಬನ್ನಿರಣ್ಣಾ ತಗೊಳಿ
ಬನ್ನಿರೆಲ್ಲಾ ಬೇಗ
ಹಣ್ಣು ತಿನ್ನೋ ಯೋಗ !

ಗಾಡಿಯನ್ನು ನಾನು
ದೂಡಿಕೋತ ಮುಂದೆ
ಹಾಡಿಕೊಂಡು ಸಾಗಿ
ಆಡುತೇನೆ ಬೀಗಿ

’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ !!



’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ !!

ಹಳೆಯ ಮನೆಗೆ ಹೊಸಬಣ್ಣ
ಹಳೆಯ ಸಾಬೂನಿಗೆ ಪೌಡರ್ ಕ್ರೀಮ್
ಇತ್ಯಾದಿಗಳಿಗೆ ’ನ್ಯೂ ಇಂಪ್ರೂವ್ಡ್ ’ ಎನ್ನುವ
ಲೇಬಲ್ ಮಾಡಿಸಿದಾಗ ಅವು
ಮಾರಾಟವಾಗುವ ಜೋಶೇ ಬೇರೆ
ಅದರಲ್ಲಂತೂ ಇನ್ನೊಂದಷ್ಟು ರೇಟು ಜಾಸ್ತಿಮಾಡಿ
ಏನಾದರೂ ’ಫ್ರೀ’ ಎಂದುಬಿಟ್ಟರೆ ಸಾಕು !
ನಮಗೆ ಗೊತ್ತು ಜನರನ್ನು ಹೇಗಾದರೂ ಹಿಡೀಬೇಕು

ವ್ಯಕ್ತಿಯೊಬ್ಬನಿಗೆ ಹೇಳಿ ೧೦ ಕೀ.ಮೀ. ದೂರದಲ್ಲಿ
ದೋಸೆ ಕ್ಯಾಂಪ್ ಶುರುವಾಗಿದೆ ಒಂದಕ್ಕೊಂದು ಫ್ರೀ
ಖರ್ಚು ಹಾಕಿ ಬಸ್ಸಲ್ಲೋ ಗಾಡಿಯಲ್ಲೋ ಓಡುವ
ದಡ್ಡನನ್ಮಗನ್ನ ನೋಡಿ ನಗಬೇಕೋ ಅಳಬೇಕೋ ?

ಯಾರಿಗೋ ತಮಾಷೆಗೆ ಹೇಳಿದ್ದು
ಕಾಂಟೋನ್ಮೆಂಟ್ ಪೆಟ್ರೋಲ್ ಬಂಕಿನಲ್ಲಿ ವಾರ್ಷಿಕೋತ್ಸವ
೨ ಲೀಟರ್ ಪೆಟ್ರೋಲು ಫ್ರೀ ಆಗಿ ಕೊಡ್ತಾರಂತೆ ಅಂತ
ಗಾಡಿ ತೆಗೆದುಕೊಂಡು ಸೀದಾ ದೌಢಾಯಿಸಿದ

ಉದ್ದಿನ ಹಿಟ್ಟನ್ನು ವಡೆಯಾಕಾರದಲ್ಲಿ
ಕರಿದಾಗ ಅದು ಉದ್ದಿನ ವಡೆ ಉರುಟಾಗಿ
ಮುದ್ದೆ ಕಟ್ಟಿ ಕರಿದರೆ ಅದು ಉದ್ದಿನ ಬೋಂಡ
ಅದಕ್ಕೇ ನಿರ್ಧರಿಸಿಬಿಟ್ಟಿದ್ದೇನೆ ಇನ್ನುಮೇಲೆ
ಏನೇ ಬರೆಯಲಿ ಹಾಳೋ ಮೂಳೋ
ಹಲಸೋ ಮಾವೋ ಪೈನಾಪಲ್ಲೋ
ಮೇಲ್ಗಡೆ ಒಂದು ಲೇಬಲ್ ಹಾಕಿಬಿಡುತ್ತೇನೆ
’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ ಎಂದು
ಹೊಸ ರುಚಿಯವರು ಹಳೆರುಚಿಯವರು
ಮರ್ಯಾದಸ್ತರು ಮಾಮಲೇದಾರರು
ಹೆಣ್ ಹೆಂಗಸ್ರು [ಕ್ಷಮಿಸಿ ಗಂಡ್ ಹೆಂಗಸ್ರು ಇದ್ದಾರೋ ಇಲ್ವೋ ಗೊತ್ತಿಲ್ಲ !]
ಸಣ್ ಮಕ್ಳು ಎಲ್ಲಾ ಮುಕರ್ಕೊಂಡ್ ಕೂತ್ಗೊಂಡು
ಓದಿದ್ದೇ ಓದಿದ್ದು ಓದಿದ್ದೇ ಓದಿದ್ದು !

*
ಒಂದಷ್ಟ್ ಅಂಥದ್ನೆಲ್ಲಾ ಅಚ್ಚಾಕ್ಸಿ
ಪೇಟೇ ಚೌಕದಲ್ಲಿ ಒಬ್ಬನ್ ನಿಲ್ಲಸ್ಬುಡ್ತೀನಿ
’ಅರೇ ಒಂದಕ್ಕೊಂದ್ ಫ್ರೀ ಇಲ್ಲಿ ಒಂದಕ್ಕೊಂದ್ ಫ್ರೀ’ ಅಂತ
ಕೂಗ್ಕೋತ ಮಾರ್ಬುಡು ಒಂದಷ್ಟ್ ದುಡ್ ಬರಲಿ
ರಾಜ್ಕೀಯ ಸೇರ್ಕಂಡು ಹಾಯಾಗಿದ್ಬುಡೋದು
ಈ ಬರ್ಯೋದೆಲ್ಲಾ ಯಾರಿಗ್ಬೇಕು ಅಲ್ವೇ ?

*conditions apply

Friday, November 12, 2010

ಹಾಲುಗೆನ್ನೆ ಸುಂದರಿ

ರಾಜಾರವಿವರ್ಮ ಕೃತ ಚಿತ್ರಕೃಪೆ: ಅಂತರ್ಜಾಲ

ಹಾಲುಗೆನ್ನೆ ಸುಂದರಿ

ಹಾಲುಕೊಡಲು ಬಂದ ಅವಳು
ಬಹಳ ಹೊತ್ತು ಇರಲಿ ಎಂಬ
ಬಯಕೆಯಿಂದ ಬೊಗಸೆಕಂಗಳನ್ನೇ
ನೋಡುತಿದ್ದೆನು !

ಗಾಳಹಾಕಿ ಎಳೆದಳಲ್ಲ
ಮಾಯದಲ್ಲಿ ಅರಿವಗೊಡದೇ
ಗಾಯವಾಯ್ತು ಎದೆಯಲೆಲ್ಲೋ
ಕಾಣದಾಗಿದೆ !

ಎಂಥನಗುವಿನಪ್ಸರೆಯು
ಮಿಂಚಿ ಹಲ್ಲು ತುಸುವೇ ಸಮಯ
ಹೊಂಚುಹಾಕಿ ಎಸೆದಳೇನು

ತನ್ನ ಬಾಣವೆನ್ನೆಡೆ ?

ಜಕಣ ಶಿಲ್ಪಿ ಕಡೆದ ಮೂರ್ತಿ !
ಜತನಮಾಡಿಕೊಳಲು ನನಗೆ
ಅತಿಶಯದಾನಂದ ತರಲು
ಆಕೆ ಬರುವಳೇ ?

ಬೇಕು’ ’ಬೇಕುಎಂಬ
ಒಳಗಿನಾಸೆ
ಹೊರಟು ಜಾಸ್ತಿಯಾಗಿ
ಹೇಳಿಬಿಡುವೆನೆಂದು ನಡೆಸಿ
ತಾಲೀಮು ಪುನರಪಿ

ಕಾಲ ಕೂಡಿ ಬರುವುದಿತ್ತು
ಹಾಲು-ಮೊಸರು ಉಂಡುಬೆಳೆದ
ಹಾಲಗೆನ್ನೆಯಂಥ ಚಲುವೆ
ಪಡೆಯಲವಳನು

ನಾನು ಧೈರ್ಯ ಮಾಡಲಿಲ್ಲ
ಆಕೆಯಾಗಿ ಹೇಳಲಿಲ್ಲ
ಆಡದೆಯೇ ಹೋದ ಮಾತು
ಕಣ್ಣೊಳಿದ್ದವು !

ಬಾಳನೌಕೆಯಲ್ಲಿ ನಾನು
ಅವಳ ಜತೆಗೆ ಕೂತುಕೊಂಡು
ಭಾವಯಾನ ಮೌನದಲ್ಲಿ
ನಡೆಯುತಿದ್ದಿತು

ಹಾಲು ಚೆಲ್ಲಿ ನೆಲಕೆ ಅರ್ಧ
ಕಾಲು ತುಳಿದೆನೆಂದು ಹೆದರಿ
ನೀಲಿಕಣ್ಣ ಬೆಡಗಿ ಜಾರಿ
ತೋಳ ತೆಕ್ಕೆಗೆ

’ಏಳು ಮಗನೇ ತಾಯ ಕರೆಗೆ
ಧಿಮ್ಮನಿಳಿದು ಕನಸಹೊರಗೆ
ಆಲಿಕಲ್ಲ ಮಳೆಯ ನೆನೆದು
ಮನವು ನಲಿಯಿತು !

Thursday, November 11, 2010

ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!


ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!

ಕನ್ನಡ ಕರಾವಳಿಯ ಬಹುತೇಕ ಜನ ಬಾಯಿ ಚಪ್ಪರಿಸಿ ತಿನ್ನುವ ಅತೀ ಇಷ್ಟದ ಹೋಟೆಲ್ ತಿಂಡಿಗಳಲ್ಲಿ ಮಿಸ್ಸಳ್ ಬಾಜಿ ಮತ್ತು ಬನ್ಸ್ ಬಾಜಿ ಬಹಳ ಪ್ರಮುಖ ಸ್ಥಾನ ಪಡೆದಿವೆ. ಈ ಹೆಸರುಗಳು ಎಷ್ಟು ಪ್ರಚಲಿತವೆಂದರೆ ಇದಕ್ಕೆಂದೇ ಹೆಗ್ಗುರುತಾದ ಹೋಟೆಲ್ಗಳೂ ಅಲ್ಲಿ ಇವೆ. ಮಿಸ್ಸಳು ಇಲ್ಲದ ದಿನವನ್ನು ಅಲ್ಲಿನ ಜನ ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಂತ ಅಂಥಾದ್ದೇನಪ್ಪಾ ಅದರಲ್ಲಿ ಅಂತ ನೀವೆಲ್ಲ ಕೇಳಹೊರಟರೆ ಅದನ್ನು ತಿಂದೇ ನೋಡಿ ಸ್ವಾಮೀ ಎನ್ನಬೇಕಾಗುತ್ತದೆ.

ಮಸಾಲ್ ಪೂರಿಯ ಮಸಾಲೆಯನ್ನು ಹೋಲುವ ಸಾಂಬಾರಿನಿಂದ [ಬಾಜಿಯಿಂದ] ತುಂಬುವ ಪ್ಲೇಟಿನಲ್ಲಿ ಗುಡ್ಡದ ಮಿನಿಯೇಚರ್ ನ ರೀತಿ ಮಧ್ಯಕ್ಕೆ ಗೋಪುರಾಕಾರವಾಗಿ ನಿಲ್ಲುವ ಈ ತಿಂಡಿ ಯಾವ ಕಾಲದ ಯಾರ ಆವಿಷ್ಕಾರವೋ ತಿಳಿದುಬಂದಿಲ್ಲ. ಅಂತೂ ಕಡಲ ಕಿನಾರೆಯ ಜನ ನೆನಪಿಟ್ಟು ಕೇಳಿ ತಿನ್ನುವ ತಿಂಡಿ ಈ ಮಿಸ್ಸಳ್ ಬಾಜಿ. ಶುದ್ಧ ತೆಳು ಅವಲಕ್ಕಿ ಪ್ಲೇಟಿನಲ್ಲಿ ಹಾಕಿ, ಜೊತೆಗೆ ಅಷ್ಟೇ ಅಳತೆಯಲ್ಲಿ ಖಾರ ಮಿಕ್ಸ್ಚರ್ ಹಾಕಬೇಕು, ಅದಕ್ಕೆ ಜೊತೆಗೆ ಶೇವ್ ಚೂಡ ಮತ್ತು ಕಡ್ಲೆ ಹಿಟ್ಟಿನಲ್ಲಿ ಕರಿದ ಶೇಂಗಾ ಬೀಜಗಳನ್ನು ಸೇರಿಸುತ್ತಾರೆ. ಮೇಲಿಂದ ಈರುಳ್ಳಿಸೇರಿಸಿ ಮಾಡಿದ ಘಮಘಮಿಸುವ ಸಾಂಬಾರನ್ನು ಹಾಕಿ ತಿನ್ನಲು ಕೊಟ್ಟರೆ ಅದರಲ್ಲಿ ನಮ್ಮನ್ನೇ ನಾವು ಕಳೆದುಹೋಗುವ ಅದ್ಬುತ ರುಚಿ, ಸ್ವಲ್ಪ ಸಿಹಿ,ಖಾರ,ಹದವಾಗಿ ಉಪ್ಪು, ಮಸಾಲೆ ಪದಾರ್ಥಗಳ ಪರಿಮಳ ಎವೆಲ್ಲವುಗಳ ಮಿಶ್ರಣವಿರುವ ಈ ತಿಂಡಿಯನ್ನು ಮಳೆಗಾಲದಲ್ಲಂತೂ ಜನ ತುದಿಗಾಲಲ್ಲಿ ನಿಂತು ತಿನ್ನುತ್ತಾರೆ. ಬೇಗ ಜೀರ್ಣವಾಗುವ ಈ ತಿಂಡಿ ಹೆಚ್ಚಾಗಿ ಯಾವ ವೇಳೆಗಾದರೂ ತಿನ್ನಬಹುದಾದ ಹಿತವಾದ ಭಕ್ಷ್ಯ. " ಅರೆ ಹೋಯ್ ಪೈಮಾಮ್,ಕೈಂಯ್ ಗೆಲ್ರೆ ಮಾರಾಯ, ಮಿಸ್ಸಳ್ ಅಸ? " ಅಂತ ಕೇಳುತ್ತ ಪೈಗಳ ಹೋಟೆಲ್ ಅಥವಾ ಇನ್ನ್ಯಾವುದೋ ಲೋಕಲ್ ಹೋಟೆಲ್ ಗೆ ಹೋಗಿ ವಿಚಾರಿಸಿದರೆ ಮಿಸ್ಸಳ್ ಬಾಜಿ ಸಿಕ್ಕೇ ಸಿಗುತ್ತದೆ, ಇನ್ನೇನಾದ್ರೂ ಜನ ಜಾಸ್ತಿ ಬಂದು ತಿಂದು ಖಾಲಿ ಆಗಿದ್ದ್ರೆ ಮಾತ್ರ ಬೇರೆ ಹೋಟೆಲ್ ಹುಡುಕೋದು ಅನಿವಾರ್ಯ.

ಕರಾವಳಿಯಲ್ಲಿ ಮಳೆಯ ಆರ್ಭಟ ಬಹಳವಾಗಿರುತ್ತದೆ. ದಪ್ಪದಪ್ಪಹನಿಗಳು ಗಾತ್ರದ ಮುಸಲಧಾರೆಗಳಾಗಿ ಸುರಿಯುತ್ತಲೇ ಇರುತ್ತವೆ. ಬೆಳಗು ಬೈಗಿನ ಅಂತರವಿಲ್ಲದೇ ಬೆಳಗೇ ಬೈಗೇನೋ ಎಂಬಂತೇ ಕತ್ತಲಾವರಿಸಿ ಧೋ ಎಂದು ಸುರಿಯಲಾರಂಭಿಸಿದರೆ ಮಳೆಗೆ ಪುರುಸೊತ್ತೇ ಇಲ್ಲ. ಇಂತಹ ಮಳೆಗಾಲದಲ್ಲಿ ಅದೂ ನಾಲ್ಕು ತಿಂಗಳು ಸುರಿವ ದಿನಗಳಲ್ಲಿ ದಿನವೂ ಅದೂ ಇದೂ ಕೆಲಸ ಅಂತ ಮನೆಯ ಹೊರಗೆ ಬಂದ ಜನರ ಮೈ ಸ್ವಲ್ಪವಾದರೂ ನೆನೆಯುವುದು ಅನಿವಾರ್ಯ. ಚಳಿಹಿಡಿದ ಶರೀರಕ್ಕೆ ಒಂದಷ್ಟು ಬಿಸಿ ಪಡೆದುಕೊಳ್ಳುವ ಮತ್ತು ಹಸಿದ ಹೊಟ್ಟೆಗೆ ತುಸು ಏನಾದರೂ ತಿಂದುಕೊಳ್ಳುವ ಮನಸ್ಸಾಗುವ ಜನಕ್ಕೆ ಮೂಗರಳಿಸಿ ಕಣ್ಣು ಹಿರಿದಾಗಿಸಿ ನೋಡುವಂತೆ ಮಾಡುವ ತಿಂಡಿ ಮಿಸ್ಸಳ್. ಮಿಸ್ಸಳ್ ಬಾಜಿ ಎನ್ನಬೇಕಿಲ್ಲ ಬರೇ ಮಿಸ್ಸಳು ಎಂದರೆ ಸಾಕು! ಹೊಸದಾಗಿ ಹೋಟೆಲ್ ಹಾಕಿದ ಮಾಲೀಕನಿಗೆ ಗಲ್ಲಾಪೆಟ್ಟಿಗೆಗೆ ಗಸಗಸಿ ರೊಕ್ಕ ತುಂಬಿಸುವುದು ಮಿಸ್ಸಳು ಮತ್ತು ಬನ್ಸ್ ಬಿಟ್ಟರೆ ಈರುಳ್ಳಿ ಬಜೆ [ಈರುಳ್ಳಿ ಬಜ್ಜಿ].

ಸ್ಕೂಲು-ಕಾಲೇಜು ಹುಡುಗರು ತಮ್ಮ ತರಗತಿಯ ಅವಧಿಗಳ ಮಧ್ಯೆ ಎದ್ದುಬಂದು ತಿಂದು ಹೋಗುವುದು ಮಿಸ್ಸಳು. ಸೀತಾರಮ್ ಹೇಗ್ಡೆರು ಪೇಟೆಗೆ ಬಟ್ಟೆತರಲು ಬಂದವರು ಸುತರಾಂ ಮರೆಯದೇ ಕೇಳಿ ತಿನ್ನುವ ತಿನಿಸು ಮಿಸ್ಸಳು. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಜಾನಕಕ್ಕ ಜ್ಞಾಪಿಸಿಪಡೆದು ತಿನ್ನುವುದು ಈ ಮಿಸ್ಸಳು. ರಾಮದಾಸ್ ಕಾಮತ್ ರು "ಮಕ್ ಕಬರ್ನಾ ಅಶಿಲೆ ಮರಾಯಾ" ಅಂತ ಸುದ್ದಿ ಹೇಳುತ್ತ ತಿನ್ನುವುದು ಮಿಸ್ಸಳು. ಗೋವಿಂದ ಶೆಟ್ರು ವ್ಯಾಪಾರದ ಮಧ್ಯದಲ್ಲಿ ಗೋವಿಂದನಾಮಸ್ಮರಣೆಯೊಂದಿಗೆ ಮಗನನ್ನು ಅಂಗಡಿಯಲ್ಲಿ ಬಿಟ್ಟು ಬಂದು ತಿಂದುಹೋಗುವುದು ಮಿಸ್ಸಳು. ಗೇಬ್ರಿಯಲ್ ಗೊನ್ಸಾಲ್ವಿಸ್ ಮತ್ತು ಮ್ಯಾಥ್ಯು ಫರ್ನಾಂಡಿಸ್ ಇಗರ್ಜಿಗೆ ಹೋಗಿಬರುವಾಗ ತಿಂದುಹೋಗುವುದು ಮಿಸ್ಸಳು. ಗೇರುಸೊಪ್ಪೆಯ ಬಾಪು ಸಾಹೇಬರು " ಮಾಶಾ ಅಲ್ಲಾ " ಎನ್ನುತ ಮೆಟ್ಟಿಲು ಹತ್ತಿ ಬಂದು ತಿಂದು ತೆರಳುವುದು ಮಿಸ್ಸಳು. ಬಾಡಿಗೆ ಕಾರುಗಳು ಕ್ಯಾಬ್ ಗಳನ್ನು ಓಡಿಸುವ ಚಾಲಕ-ಮಾಲಕರು ಗುಂಪಾಗಿ ಹರಟೆ ಹೊಡೆಯುತ್ತ ಸವಿಯುವುದು ಮಿಸ್ಸಳು. ಗಡಿಬಿಡಿಯಲ್ಲಿ ಕೋರ್ಟಿಗೆ ಹೋಗುವ ವಕೀಲರುಗಳು ಕೆಲವೇ ನಿಮಿಷ ಸುಖಾಸೀನರಾಗಿ ಕೇಳುವುದು ಇದೇ- ಮಿಸ್ಸಳು! ಹೋಟೆಲ್ ನಲ್ಲಿ ಪಾರ್ಟಿ ಕೊಡುವ ಅಲ್ಲಿನ ಜನ ಮೊದಲಾಗಿ ಆದೇಶಿಸುವ ತಿಂಡಿ ಮಿಸ್ಸಳು; ಪಾರ್ಟಿ-ಪಂಗಡ ಮರೆತು ಎಲ್ಲರೂ ಒಂದೆಡೆ ಕಲೆತ ಸಂಭ್ರಮಗಳ ಸರಹದ್ದಿನಲ್ಲಿ ಸರಸರನೆ ತಿಂದುಣ್ಣುವ ತಿಂಡಿ ಇದೇ ಮಿಸ್ಸಳು. ಅಪ್ಪನ ಜೊತೆಗೆ ಪೇಟೆಗೆ ಬಂದ ಮಗ/ಮಗಳು ಅಪೇಕ್ಷಿಸಿ ತಿನ್ನುವುದು ಮಿಸ್ಸಳು, ಅಪರೂಪಕ್ಕೆ ಪೇಟೆಗೆ ಬಂದ ಸುಕ್ರು ಹಳ್ಳೇರ್ ಬಯಸುವುದೂ ಮಿಸ್ಸಳು. ಇಡೀದಿನ ರೋಗಿಗಳನ್ನು ಶುಶ್ರೂಷೆಮಾಡಿ ದಣಿದ ವೈದ್ಯ ಭಾಸ್ಕರ್ ತಮ್ಮ ಕೋಣೆಗೆ ಪಾರ್ಸೆಲ್ ತರಿಸಿಕೊಳ್ಳುವುದು ಮಿಸ್ಸಳು! ಹೀಗೇ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎನ್ನುವ ಹಾಗೇ ಎಲ್ಲುಂಟು ಎಲ್ಲಿಲ್ಲ ಎಂದೇ ಲೆಕ್ಕಕ್ಕೆ ಸಿಕ್ಕದ ಸಿಕ್ಕಾಪಟ್ಟೆ ಖರ್ಚಾಗುವ[ಬೇಗ ಖಾಲಿಯಾಗುವ]ಅಗ್ಗದ ಖರ್ಚಿನ ತಿಂಡಿ ಈ ಮಿಸ್ಸಳು. ಶಾಸ್ತ್ರ ಶಾಸ್ತ್ರವೆನ್ನುತ್ತಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಭಟ್ಟರು ದಾಯಾದರಲ್ಲಿ ಹಡೆದ ಸೂತಕ ಬಂದಾಗ ಇದೇ ಸಮಯವೆಂದು ಹೋಟೆಲಿಗೆ ನುಗ್ಗಿ ತಿಂದು ಜನಿವಾರ ಬದಲಿಸಿಕೊಳ್ಳುವುದು ಇದೇ ಮಿಸ್ಸಳು!

ಕಡಲತೀರದಲ್ಲಿ ಯಕ್ಷಗಾನ,ನಾಟಕ, ಸಂಗೀತ ರಸಸಂಜೆಗಳಿಗಂತೂ ಕಮ್ಮಿ ಇಲ್ಲವೆಂದು ತಮಗೆಲ್ಲ ತಿಳಿದಿದೆಯಷ್ಟೇ? ಪ್ರತೀಕಾರ್ಯಕ್ರಮದಲ್ಲೂ ಹೊರಾಂಗಣದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಚಹಾ ಅಂಗಡಿ ಇರುವುದಂತೂ ಕಾಯಂ. ಯಾಕೇಂದ್ರೆ ಅಲ್ಲಿನ ಜನ ಅದರಲ್ಲಂತೂ ಸಣ್ಣ ಚಟಗಳಾದ ಚಹಾ-ಬೀಡಿ-ಸಿಗರೇಟು ಇವುಗಳನ್ನು ಅಂಟಿಸಿಕೊಂಡ ಜನ, ಅವುಗಳನ್ನೆಲ್ಲ ಬಿಟ್ಟು ಬಹಳ ಹೊತ್ತು ಇರುವುದೇ ಇಲ್ಲ. ಹೀಗಾಗಿ ಚಹಾ ಅಂಗಡಿ ಇದ್ದಮೇಲೆ ಗಣಪತಿಯ ಜೊತೆಗೆ ಮೂಷಿಕವಿದ್ದಹಾಗೇ ಅಲ್ಲಿ ಮಿಸ್ಸಳಿನ ಹಾಜರಾತಿ ಇದ್ದೇ ಇರುತ್ತದೆ. ಪೂರ್ಣರಾತ್ರಿಯ ಕಾರ್ಯಕ್ರಮವಾದರೆ ಅದಕ್ಕೆ ಮಧ್ಯೆ ಮಧ್ಯೆ ಮೂತ್ರ ವಿಸರ್ಜನೆಗೆ ಎದ್ದು ಹೋದವರು, ನಿದ್ದೆ ಬರದಿರಲೆಂದು ದಂ ಎಳೆಯಲು ಹೋದವರು ಎಲ್ಲರೂ ಖುದ್ದಾಗಿ ಹೋಗಿ ಕುಕ್ಕರಿಸಿ ಕುಳಿತು ಮಟ್ಟಸವಾಗಿ ತಿಂದು ಮುಗಿಸುವ ಮನನೀಯ ತಿಂಡಿ ಈ ಮಿಸ್ಸಳು.

ಜಾಗತೀಕಅಣ ಎಲ್ಲೇ ಅಡಿಯಿಟ್ಟರೂ, ಏನೇ ಪರಿಣಾಮ ಬೀರಿದರೂ ಜಗದುದ್ದಗಲ ಬೇರೆಲ್ಲೂ ಕಾಣಲಾರದ ಅಪ್ಪಟ ದೇಶೀಯ ತಿನಿಸು ನಮ್ಮದೇ ಆದ ಉತ್ತರಕನ್ನಡದ ಮಿಸ್ಸಳು.ಪಟ್ಟಾಗಿ ಕೂತು ಪಟ್ಟಂಗ ಹೊಡೆಯುವಾಗೆಲ್ಲ ನೆನೆಪಾಗಿ ಪ್ಲೇಟಿನ ಮೇಲೆ ಪ್ಲೇಟು ಪಡೆಪಡೆದು ಗಡದ್ದಾಗಿ ತಿಂದು ತೇಗಿಮುಗಿಸುವ ಆಸೆ ಹುಟ್ಟಿಸುವ ತಿನಿಸು ನಮ್ಮದೀ ಮಿಸ್ಸಳು ! ನಮ್ಮದೀ ಮಿಸ್ಸಳು! ವಿದೇಶೀಯರೂ ಸೇರಿದಂತೆ ಹಲವು ಪ್ರವಾಸಿಗರ ಮನಸೂರೆಗೊಂಡ ಮರೆತರೆ ಮರುಗಬೇಕಾದ ಜನಪ್ರಿಯ ನೈವೇದ್ಯ ಉತ್ತರ ಕನ್ನಡದ ಮಿಸ್ಸಳು. ಸ್ವಲ್ಪ ಇರಿ ವಿದೇಶೀಯರು ನುಗ್ಗಿ ಪೇಟೆಂಟ್ ಪಡೆಯುವ ಮೊದಲು ಒಂದು ಹಾಡಿನ ತುಣಿಕು ಹಾಡಿಬಿಡುತ್ತೇನೆ ---

ಉಪ್ಪರಿಗೆಯ ಜನ ಚಪ್ಪರಿಸಿ ತಿಂದರು
ಮುಪ್ಪಡರಿದ ಜನ ನೆಪ್ಪಿನಿಂದ ನೆನೆದರು
ಸಪ್ಪೆಯಾದ ಜೀವನದಲ್ಲಿ ಕುಪ್ಪಳಿಸಲು ಕುಮ್ಮಕ್ಕು ನೀಡುವ
ಉಪ್ಪು ಖಾರ ಸಹಿತದ ಮಿಸ್ಸಳೇ ನಿನಗೆ
ಬಪ್ಪರೇ ಭಳಿರೇ ಬಹುಪರಾಕ್ ಬಹುಪರಾಕ್ !

" ಹಾಂ ಏನ್ ಕೊಡ್ಲಿ ನಿಮ್ಗೆ ? ಖಾಲಿ ದೋಸೆ,ಮಸಾಲೆ ದೋಸೆ, ಇಡ್ಲಿ, ಉಪ್ಪಿಟ್ಟು, ಶಿರ, ಪೂರಿ ಬಾಜಿ,ಬನ್ಸ್ ಬಾಜಿ, ಮಿಸ್ಸಳು " ಅಂತ ಸಪ್ಲೈಯರ್ ಲಿಸ್ಟ್ ಹೇಳುತ್ತ ಕೊನೇಗೊಮ್ಮೆ ಹೇಳುವ ಐಟೆಮ್ ಮಿಸ್ಸಳು. ಯಾಕೇಂದ್ರೆ ಅದು ಹೇಗೂ ಹೇಳದಿದ್ದ್ರೂ ಕೇಳುವಂತ ಐನಾತಿ ಐಟಮ್ ಅನ್ನೋದು ಅವರಿಗೆಲ್ಲ ಗೊತ್ತೇ ಇದೆ.

ಮಿಸ್ಸಳು ಒಂದೊಂದು ಹೋಟೆಲ್ ನಲ್ಲಿ ಅವರವರ ತಯಾರಿಕೆಗೆ ತಕ್ಕಂತೆ ಸ್ವಲ್ಸ್ವಲ್ಪ ಭಿನ್ನ ರುಚಿಯಿಂದ ಸಿಗುತ್ತದೆ. ಕೆಲವರು ತುಂಬಾ ಚೆನ್ನಾಗಿ ಮಸಾಲೆ ಹಾಕಿದರೆ ಇನ್ನು ಕೆಲವರು ಸ್ವಲ್ಪ ಕಮ್ಮಿ ಮಸಾಲೆ ಸಾಮಗ್ರಿಗಳನ್ನು ಉಪಯೋಗಿಸುತ್ತಾರೆ. ಆದರೂ ಮಿಸ್ಸಳು ರುಚಿಯೇ ಆಗಿರುತ್ತದೆ. ಹೊಸದಾಗಿ ತಿನ್ನುವವರಿಗೆ ಇದು ಅನುಭವಕ್ಕೆ ಬರುವುದಿಲ್ಲ. ತಿನ್ನುತ್ತ ಸ್ವಲ್ಪ ರೀಸರ್ಚ್ ಮಾಡಿದರೆ ಕೆಲವು ಹೋಟೆಲ್ ಗಳು ಇದಕ್ಕಾಗೇ ಹುಟ್ಟಿದವೇನೋ ಎನ್ನುವಷ್ಟು ಖುಷಿಕೊಡುವ ರುಚಿಯ ಮಾಯಾಜಗತ್ತು ಈ ಮಿಸ್ಸಳಿನದು. ಯಾವುದೇ ಕೆಲಸದ ಗಡಿಬಿಡಿಯಲ್ಲೂ ಕೆಲವೇ ನಿಮಿಷಗಳಲ್ಲಿ ತಿಂದುಮುಗಿಸಿಬಿಡಬಹುದಾದ ಈ ತಿಂಡಿ, ತಿಂದ ಕೆಲವೇ ನಿಮಿಷಗಳಲ್ಲಿ ಒಂಥರಾ ಆತ್ಮತೃಪ್ತಿಯಾಗುವಷ್ಟು ದೇಹದುದ್ದಗಲ ನರನಾಡಿಗಳಲ್ಲೂ ತನ್ನ ಘಮಘಮದಿಂದ ಮಘಮಘಿಸಿ ಜೀವಕ್ಕೆ ಹೊಸ ಚೈತನ್ಯ ತುಂಬುವ ಅತಿ ವಿಷಿಷ್ಟ ಮತ್ತು ಕಾಲಭೇದರಹಿತ ತಿಂಡಿ! ಹೋಟೆಲ್ ಮಾಲೀಕರು ಹಸಿವಾದಾಗ ತಾವೇ ಖುದ್ದಾಗಿ ಎದ್ದುಬಂದು ಒಂದಷ್ಟು ಸುರುವಿಕೊಂಡು ಚಪ್ಪರಿಸಿ ತಿನ್ನುವುದು ಕಾಣಸಿಗುವ ದೃಶ್ಯವಾದರೆ, ಸಪ್ಲೈಯರ್ ಹುಡುಗರು, ಟೇಬಲ್ ಒರೆಸುವ ಮಾಣಿಗಳು ಸದಾ ಓಎಗಣ್ಣಿನಿಂದ ಆಗಾಗ ಗಮನಿಸುವುದು ಈ ಮಿಸ್ಸಳು. ಯಜಮಾನರು ಅನುಮತಿ ಮತ್ತು ಅವಕಾಶ ಕೊಟ್ಟಾಗ ಗಬಗಬನೆ ಹಸಿದ ಹೆಬ್ಬುಲಿಯಂತೆ ಅತೀವ ಬಯಕೆಯಿಂದ ತಿನ್ನುವ ಖಾದ್ಯ ಇದೇ ಈ ಮಿಸ್ಸಳು. ಇದಕ್ಕೆ ಸಾಥ್ ನೀಡಲು ಈರುಳ್ಳಿ ಬಜೆ. ಬಜೆಯೆಂದು ಕರೆಸಿಕೊಳ್ಳುವ ಈರುಳ್ಳಿ ಬಜ್ಜಿ. ಕನ್ನಡ ಕರಾವಳಿಯ ಈರುಳ್ಳಿ ಬಜೆಯ ಶೈಲಿ ತುಸು ವಿಭಿನ್ನ. ಅಲ್ಲಿ ಸಿಗುವ ಈರುಳ್ಳಿಯ ಗುಣಮಟ್ಟ ಕೂಡ ಹಾಗೇ. ಸಿಹಿಸಿಹಿಯಾಗಿರುವ ಈರುಳ್ಳಿಯನ್ನು ಖಾರಮಿಶ್ರಿತ ಶುದ್ಧ ಕಡ್ಲೆಹಿಟ್ಟಿಗೆ ಮೈದಾ ಬೆರೆಸಿ, ಉಪ್ಪು ಇತ್ಯಾದಿ ಹಾಕಿ ಕರಿದ ಬಿಸಿ ಬಿಸಿ ಈರುಳ್ಳಿ ಬಜೆ ಸುತ್ತಲ ಕಿಲೋಮೀಟರ್ ಜಾಗಕ್ಕೆ ಪರಿಮಳ ಬೀರುತ್ತ ಗಿರಾಕಿಯನ್ನು ಹೋಟೆಲ್ಲಿಗೆ ಕರೆತರುವಲ್ಲಿ ರಾಕೆಟ್ ಉಡ್ಡಯನಮಾಡಿದಂತೇ ಯಶಸ್ವೀ ಕೆಲಸ ಮಾಡುತ್ತದೆ. ಮಿಸ್ಸಳಿನ ಜೊತೆಗೆ ಈರುಳ್ಳಿ ಬಜೆ ಸೇರಿದರೆ ಅದರ ಲೋಕವೇ ಬೇರೆ! ತಿಂದು ಕೈತೊಳೆದುಕೊಂಡವರೂ ಕೈಮೂಸಿ ನೋಡುತ್ತಿರುವಂತ ಪರಿಮಳ ಬೀರುವ ಈರುಳ್ಳಿ ಬಜೆಯದ್ದು. ಎನನ್ನೂ ತಿನ್ನಲಾರದಷ್ಟು ಹೊಟ್ಟೆಬಿರಿ ತಿಂದು ಬರೇ ಟೀ ಕುಡಿಯಲು ಬಂದ ಜನ ಸುಮ್ನೇ ಬಾಯಿಗೆ ಬಿಟ್ಟುಕೊಳ್ಳುವ ಮೆತ್ತನೆಯ ತಿಂಡಿ ಈರುಳ್ಳಿ ಬಜೆ.

ಬೆಳಿಗ್ಗೆ ಹೊಟ್ಟೆತುಂಬಾ [ಕಮ್ಮಿ ಖರ್ಚಿನಲ್ಲಿ] ತಿನ್ನಬಹುದಾದ ತಿಂಡಿ ಬನ್ಸ್ ಬಾಜಿ. ರೂಪದಿಂದ ಪೂರಿಯ ಸಹೋದರತ್ವ ಹೊಂದಿರುವ ಈ ತಿಂಡಿ ಅಕ್ಕಿಹಿಟ್ಟು, ಮೈದಾಹಿಟ್ಟು, ಬಾಳೆಹಣ್ಣು ಮತ್ತು ಉಪ್ಪು-ಅಡಿಗೆ ಸೋಡಾ ಇವುಗಳ ಮಿಶ್ರಣ. ಹಿಟ್ಟುಗಳನ್ನು ಹದಪ್ರಮಾಣದಲ್ಲಿ ಸೇರಿಸಿ, ನೀರು ಹಾಕಿ, ಬಾಳೇ ಹಣ್ಣು[ ಯಾಲಕ್ಕಿ,ಪುಟಬಾಳೆ ಅಥವಾ ಮೆಟ್ಗ ಎಂದು ಕರೆಸಿಕೊಳ್ಳುವ ಬಾಳೇ ಹಣ್ಣು] ಕಿವುಚಿ ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಸೋಡಾ ಬೆರೆಸಿ ನಾದಿದರೆ ತಯಾರಾಗುವ ಮೆತ್ತನೆಯ ಹಿಟ್ಟಿನ ಮುದ್ದೆಯನ್ನು ಪೂರಿಯನ್ನು ಒರೆದ ಹಾಗೇ ಸ್ವಲ್ಪ ಸ್ವಲ್ಪವೇ ಉಂಡೆಮಾಡಿ ಕೈಯ್ಯಿಂದಲೇ ತಟ್ಟಿ, ಕುದಿಯುತ್ತಿರುವ ಖಾದ್ಯತೈಲದಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಸಿದ್ಧವಾಯಿತು ನೋಡಿ ನಮ್ಮ ಬನ್ಸ್. ಬನ್ನಿನ್ನ ಹಾಗೇ ಮೆತ್ತಗಿದ್ದರೂ ಬನ್ನಿಗೂ ಪೂರಿಗೂ ವಿಭಿನ್ನವಾಗಿರುವ ಬನ್ಸ್ ನ ಒಳಮೈ ತೆರೆದು ನೋಡಿದರೆ ಬೆಳ್ಳನೆಯ ಪೆಟಿಕೋಟ್ ಥರದ ಒಳಮೈ ನೋಡಬಹುದು. ಸಿಹಿಯಾಗಿರುವ ಈ ತಿಂಡಿಗೆ ಜೊತೆಗೆ ನೆಂಜಿಕೊಳ್ಳಲು ಮಿಸ್ಸಳಿಗೆ ಮಾಡಿದ ರೀತಿಯಲ್ಲೇ ಸಾಂಬಾರು. ಎರಡು ತಿಂಡಿ ತಟ್ಟೆಗಳಲ್ಲಿ ಒಂದರಲ್ಲಿ ಮೂರು ಬನ್ಸ್ ಮತ್ತು ಇನ್ನೊಂದರಲ್ಲಿ ಬಾಜಿ [ಸಾಂಬಾರು] ಇಟ್ಟುಕೊಂಡು ಕುಳಿತುಬಿಟ್ಟರೆ ಈ ಜಗ ಸೋಜಿಗ!

ಒಂದು ಪ್ಲೇಟ್ ಬನ್ಸ್ ಬಾಜಿ ತಿಂದು ನಿಮ್ಮ ಕೆಲಸಕ್ಕೆ ಹೋಗಿ, ಹಸಿವೆ ಮಧ್ಯಾಹ್ನ ೧ರ ತನಕ ನಿಮ್ಮನ್ನು ಬಾಧಿಸದು, ಇದು ಗ್ಯಾರಂಟಿ, ಇಲ್ಲದಿದ್ದರೆ ನಿಮಗೆ ನಿಮ್ಮಹಣ ವಾಪಸ್! ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚು. ಮಳೆಗಾಲದ ಮಧ್ಯೆ ಬಿಸಿಲು ಬಂದರೂ ಅಷ್ಟರಲ್ಲೇ ಸೆಕೆ ಆರಂಭ. ಹೀಗಾಗಿ ಅಲ್ಲಿ ಬೆವರುವುದೂ ಹೆಚ್ಚು. ತಿಂದ ಆಹಾರ ಜೀರ್ಣವಾಗುವುದೂ ಬಹುಬೇಗ. ಇಂತಹ ಸನ್ನಿವೇಶದಲ್ಲಿ ಅಲ್ಲಿನ ಹೋಟೆಲಿಗರು ಕಂಡುಕೊಂಡ ರುಚಿಯಾದ ತಿಂಡಿ ಬನ್ಸ್ ಬಾಜಿ.

ಮಳೆಗಾಲ ಇನ್ನೇನು ಬಂತು ಎನ್ನುವಾಗ ಪೇಟೆಗೆ ಕೆಲಸಕ್ಕೆ ಹೋದರೆ ಕುಳಿತು ತಿನ್ನಲು ಸರಿಯಾಗಿ ಜಾಗವಿರುವ, ಶುಚಿ ರುಚಿಯಿಂದ ಕೂಡಿದ ಹೋಟೆಲನ್ನು ಮನಸ್ಸು ಎಣಿಸುತ್ತಾ ಇರುತ್ತದೆ. ಹೋಟೆಲ್ ನೋಡಲು ಬಹಳ ಕ್ಲಾಸಿಕ್ ಆಗಿರದಿದ್ದರೂ ನೀಡುವ ಈ ತಿಂಡಿಗಳನ್ನು ಮರೆಯಲಾಗದು. ತಿನ್ನುವ ಮನಸ್ಸುಳ್ಳವರು ಈ ತಿಂಡಿಗಳ ಹೆಸರನ್ನು ಬರೆದಿಟ್ಟುಕೊಂಡು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳಾದ ಮುರುಡೇಶ್ವರ, ಗೋಕರ್ಣ, ಯಾಣ, ಧರ್ಮಸ್ಠಳ, ಉಡುಪಿ ಹೀಗೇ ಎಲ್ಲಿಗಾದರೂ ಹೋದರೆ ಅಥವಾ ಹೊನ್ನಾವರ, ಕುಮಟಾ ಕಡೆ ಒಮ್ಮೆ ರುಚಿನೋಡಬಹುದು.

Wednesday, November 10, 2010

ಜ್ಞಾತನಾಗು

ಚಿತ್ರ ಋಣ: ಅಂತರ್ಜಾಲ

ಜ್ಞಾತನಾಗು

ಬದುಕು ಕಲಿಸುವ ಪಾಠ ಬಹಳ ಮೌಲ್ಯದ್ದಹುದು
ಕೆದಕಿ ಬರೆದರು ಹೊತ್ತಗೆಗಳ ಪೂರ್ವಜರು
ಪದಕ ಪದವಿಯ ವಿಶ್ವವಿದ್ಯಾಲಯಕಂ ಮಿಗಿಲು
ಅದಕುಂಟೆ ಸರಿಸಾಟಿ | ಜಗದಮಿತ್ರ

ಓದುತ್ತ ಅರಿ ಮೊದಲು ಮಾಡುತ್ತ ತಿಳಿ ಹಲವು
ಬಾಧಕವೇ ಬೇಡವೆನ್ನುತ ಕೂರಬೇಡ
ಹಾದಿಬೀದಿಯಲೊಮ್ಮೆ ನೋಡುತ್ತ ಕಲಿ ಕೆಲವು
ಆದರಿಸು ಆದರ್ಶ | ಜಗದಮಿತ್ರ

ದೇಹಕ್ಕೆ ಸ್ನಾನವನು ಮಾಳ್ಪ ರೀತಿಯಲೊಮ್ಮೆ
ಸಾಹಸದಿ ಮನಸನ್ನು ಸ್ನಪನಗೊಳಿಸುವೊಲು
ಆಹಾರ-ನಿದ್ದೆ-ಮೈಥುನಗಳಲಿ ಹದವಿರಿಸಿ
ವಿಹರಿಸು ಧ್ಯಾನದಲಿ | ಜಗದಮಿತ್ರ

ಮನವು ಎಲ್ಲಕು ಮೂಲ ಕಾರಣವು ಕಾರ್ಯಕ್ಕೆ
ಅನುಗೊಳಿಸು ಅಭ್ಯಸಿಸಿ ಪ್ರಾಜ್ಞ ಜೀವಿತವ
ಮನುಕುಲದಿ ಸಮಯ ಸದ್ವಿನಿಯೋಗಿಸುತ ನಡೆಸು
ನೆನೆವಂತ ಕೆಲಸಗಳ | ಜಗದಮಿತ್ರ

ಉತ್ತಮದ ಪುಸ್ತಕಗಳೇ ನಮ್ಮ ಆಸ್ತಿಗಳು
ಪತ್ತಿನಲಿ ಮನವನ್ನು ಮುದಗೊಳಿಸುವುದಕೆ
ಹೊತ್ತುಹೊತ್ತಿಗೆ ಅವುಗಳಂ ತೆರೆದು ತುಂಬುತ್ತ
ಎತ್ತು ನಿನ್ನಯ ಮಟ್ಟ | ಜಗದಮಿತ್ರ

ಸುಜ್ಞಾನಿಗಳ ಬದುಕು ಪರರಜ್ಞಾನ ನೀಗಿಸಲು
ವಿಜ್ಞಾನಿಗಳು ಶ್ರಮಿಸಿ ಸಂಶೋಧಿಸುವರು
ಅಜ್ಞಾನಕಿಂತ ಬೇರೊಂದು ದೋಷವದಿಲ್ಲ
ಪ್ರಜ್ಞಾನ ನೀ ಗಳಿಸು | ಜಗದಮಿತ್ರ

Tuesday, November 9, 2010

ಢಂ ಪುಸ್ ಡಬೋಲ್ !!


ಢಂ ಪುಸ್ ಡಬೋಲ್ !!

ದೀಪಾವಳಿಗೆ ಮೂರುದಿವಸ ದಿನಕ್ಕೊಂದರಂತೇ ಪಟಾಕಿ ಸಿಡಿಸಿದರೆ ಎಂಬ ಆಸೆ ಇತ್ತು. ಆದರೆ ಮಳೆಯಲ್ಲಿ ದೀಪಾವಳಿ ಪಟಾಕಿಯೆಲ್ಲಾ ಟುಸ್ ಆದಾಗ ಮರೆವಿನ ಹಿತ್ತಲಲ್ಲಿ ಆಪದ್ರಕ್ಷಕವಾಗಿ ಹೂತಿಟ್ಟ ಔಷಧೀಯ ಮೂಲಿಕೆಗಳನ್ನು ಹೊರತೆಗೆದು ಬಳಸಿದರೆ ಹೇಗೆ ಎಂಬ ಭಾವನೆ ಬಂತು. ಹೀಗಾಗಿ ಇವತ್ತು ಸ್ವಲ್ಪ ಮಳೆಯೂ 'ನಿಂತಿದ್ದೇನೆ ' ಅಂತ ಕೆಲವುಕಡೆ ಬೋರ್ಡು ಹಾಕಿರುವುದರಿಂದ ನಿನ್ನೆಯ ಮಳೆಯಿಂದಾದ ಶೀತ ನೆಗಡಿಗೆ ನನ್ನ ಮೂಲಿಕೆಗಳೇ ಸಾಕಾಗಬಹುದು ಎಂಬ ಭಂಡ ಧೈರ್ಯದಿಂದ ನೆಲ ಅಗೆದು ಹೊರಗೆಳೆದೆ ನೋಡಿ ....... ಆಗ ಸಿಕ್ಕಿದ್ದೇ ಢಂ ಪುಸ್ ಡಬೋಲ್ !

ಢಂ !

ನಾವು ಚಿಕ್ಕವರಿರುವಾಗ ಅಂದರೆ ಕನ್ನಡಶಾಲೆಯಲ್ಲಿ ಓದುತ್ತಿರುವಾಗ ನಮಗೆ ಓದು, ಬರಹ ಬರುತ್ತಿತ್ತೇ ವಿನಃ ಹೊರಜಗತ್ತಿನ ಯಾವುದೋ ರಾಜಕೀಯಕ್ಕೋ ವ್ಯವಹಾರಗಳಿಗೋ ತಲೆ ಹಾಕಿದ ಜನವಲ್ಲ ನಾವು. ನಾವಾಯಿತು ನಮ್ಮ ಪಾಡಾಯಿತು ದೊಗಳೆ ಚಡ್ಡಿಯನ್ನು ಜಗ್ಗುತ್ತಾ ಹರಿದ ಚಪ್ಪಲಿಯನ್ನು ಸೂಜಿ ದಾರದಿಂದ ಹೊಲಿದು ಕಿತ್ತುಹೋದ ಸಂಸಾರದ ಗಂಡ-ಹೆಂಡಿರ ವೈಮನಸ್ಯ ಬಗೆಹರಿಸಿ ವಿಚ್ಛೇದನವನ್ನು ರದ್ದುಗೊಳಿಸುವಂತೇ ಎಲ್ಲಕ್ಕೂ ಪರಿಹಾರ ಕಂಡುಕೊಳ್ಳುತ್ತಾ ಬದುಕಿದ ಬಡಪಾಯಿ ಹುಡುಗರು ನಾವು. ಯಾರಾದರೂ ದಾರಿಹೋಕರು ಕಣ್ಣುಹಿಗ್ಗಿಸಿದರೆ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುವಷ್ಟು ಅಸಾಧಾರಣ ಧೈರ್ಯವಂತರು ನಾವು. ಇರಲಿ ಬಿಡಿ ಸಾಕು ಹೇಳ ಹೊರಟಿದ್ದು ನಮ್ಮಕಥೆಯನ್ನಲ್ಲ....ಸುಬ್ಬಕ್ಕನದು.

ಸುಬ್ಬಕ್ಕ ನಮ್ಮ ಪಕ್ಕದ ಮನೆಯ ಸಂಬಂಧಿ. ಆಗಾಗ ನಮ್ಮನೆಗೆ ಬರುತ್ತಿದ್ದಳು. ಸುಮಾರು ೬೦ ವಯಸ್ಸಿನ ಹೆಂಗಸು. ನೋಡುವುದಕ್ಕೆ ಸಹ್ಯಾದ್ರಿ ಸಮೂಹದ ಯಾವುದೋ ಬೆಟ್ಟ! ಬಂದಾಗ ನಮ್ಮಲ್ಲಿ ಊಟ-ತಿಂಡಿಗೆ ನಿಲ್ಲುವುದಿತ್ತು. ಅನಿರೀಕ್ಷಿತವಾಗಿ ಬರುವ ಆಕೆ ಕೆಲವೊಮ್ಮೆ ಬೇರೆ ಅಭ್ಯಾಗತರಿರುವಾಗ ಬಂದು ಕಿರಿಕಿರಿಯುಂಟುಮಾಡುವುದೂ ಇತ್ತು. ಹಾಗಂತ ನಾವೆಂದೂ ಅವಳನ್ನು ಅವಳ ಮುಂದೆ ಬೈಯ್ಯಲಿಲ್ಲ ! ಯಾಕೆಂದರೆ ಅವಳು ಮದುವೆಯಾಗಿ, ಸಂಸಾರ ಹೂಡಿ, ಕೆಲವು ಪೆದ್ದ ಮಕ್ಕಳನ್ನು ಹೆತ್ತು ಆಮೇಲಾಮೇಲೆ ಗಂಡನಕೂಡ ಜಗಳವಾಡಿ ಕೊನೆಗೊಂದು ದಿನ ಬಡ್ಡಾಕುಳಿ ತಲೆಯ ಯಜಮಾನ ರಾಮ ತನಗೆ ಬಂದ ಕೋಪವನ್ನು ಹೆಂಡತಿಯ ಮೇಲೆ ಹಾಯಿಸುವ ರಭಸದಲ್ಲಿ ತನ್ನ ಸಂಪೂರ್ಣ ಸ್ಥಿರಾಸ್ಥಿಯನ್ನು ಅದೇ ಊರಿನ ಅಣ್ಣೇ ಮನೆಗೆ ಬರೆದುಬಿಟ್ಟ ! ಢಂ ! ಶಬ್ದ ಕೇಳಲಿಲ್ಲವೇ ? ಇದೇ ಆಗಿದ್ದು ಪಾಪ, ಜೀವಮಾನದಲ್ಲಿ ಆಕೆಗೂ ಆಕೆಯ ಮಕ್ಕಳಿಗೂ ಪರರ ಮನೆಯ ಕೂಲಿ ಕೆಲಸಮಾಡುತ್ತಾ ಹೇಗೇಗೋ ಹೊಟ್ಟೆಹೊರೆದುಕೊಳ್ಳಬೇಕಾಗಿ ಬಂತು. ಇದನ್ನೇ ವಿಧಿಯಾಟವೆನ್ನೋಣವೇ ? ಹೀಗಾದ್ದರಿಂದ ಅಲ್ಲಿಂದಲಾಗಾಯ್ತು ಸುಬಕ್ಕನದು ಎಲ್ಲಿಗೆ ಹೋದರೂ ಅದೇ ಹಾಡು: ತನ್ನ ಗಂಡನ ಬೋಳಿಗೆ ಎಣ್ಣೆ ಸವರಿ ನಮ್ಗೆಲ್ಲಾ ನಾಮಹಾಕಿದ ಅಣ್ಣೇ ಮನೆಯವರು ಹಾಳುಬಿದ್ದೋಗಲಿ --ಎಂಬುದು.

ಇಲ್ಕೇಳಿ ಹೋಯ್ ಮೊದಮೊದ್ಲು ನಮಗೂ ಆಕೆ ಯಾಕೆ ಹಾಗೆ ಹೇಳುತ್ತಾಳೆ ಎಂದು ತಿಳಿದಿರಲಿಲ್ಲ. ಅಂತೂ ನಿಧಾನವಾಗಿ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಒಮ್ಮೆ ನಮ್ಮನೆಗೆ ಬಂದ ಸುಬ್ಬಕ್ಕ

" ತಮಾ ಒಂದ್ ಕಾಗ್ದ ತಗ್ಯ ನಾ ಹೇಳ್ದಾಂಗ್ ಬರಿ ಆಯ್ತಾ " ಎಂದಳು.

ನಾನು " ಹೂಂ ಆಯ್ತು" ಅಂದೆ

ಬರ್ಯೋ " ಸುಬ್ಬಕ್ಕ ಅನಾಥರಕ್ಷಳಿರುತ್ತಾಳೆ "

ನನ್ನ ತಲೆಗೆ ಏನೂ ಹೊಳೆಯಲಿಲ್ಲ, ಎಷ್ಟೇ ಚಿಂತಿಸಿದರೂ ನನಗೆ ಆ ಶಬ್ದದ ಅರ್ಥವೇ ಆಗಲಿಲ್ಲ. ಬಹಳ ಹೊತ್ತು ಕಾಲಹರಣ ಮಾಡಲು ಸುಬ್ಬಕ್ಕನನ್ನು ಕಳಿಸಬೇಕಾಗಿತ್ತಲ್ಲ ಅದಕ್ಕೇ ಅವಳು ಹೇಳಿದಹಾಗೆಲ್ಲಾ ಬರೆದುಕೊಟ್ಟೆ.

ನಾವು ಬುದ್ಧಿ ತಿಳಿದು ದೊಡ್ಡವರಾಗುವ ಹೊತ್ತಿಗೆ ನನಗೆ ತಿಳಿದದ್ದು, ಅವಳು ಬರೆಯಿಸಿದ್ದು ಅರ್ಜಿ ಎಂಬುದು. ಅರ್ಜಿಯ ಹಲವು ಕಡೆ ಸುಬ್ಬಕ್ಕ ಅನಾಥರಕ್ಷಳು ಎಂದು ಬರೆದಿದ್ದೆನಲ್ಲ ಅದರ ಅರ್ಥ ಸುಬ್ಬಕ್ಕ ಅನಕ್ಷರಸ್ಥಳು ! ತಾನು ಅನಕ್ಷರಸ್ಥಳಾಗಿರುವುದರಿಂದ ತನಗೆ ಓದಲು/ಬರೆಯಲು ಬಾರದೇ ಇರುವುದರಿಂದ ಸ್ವಲ್ಪ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ಯಜಮಾನರು ತಮ್ಮ ಆಸ್ತಿಯನ್ನೆಲ್ಲಾ ತನಗೆ ತಿಳಿಯದೇ ಯಾರಿಗೋ ಬಿಡಿಗಾಸನ್ನೂ ತೆಗೆದುಕೊಳ್ಳದೇ ಬರೆದುಕೊಟ್ಟಿದಾರಾಗಿಯೂ ಮತ್ತು ಹಾಗೆ ಮಾಡುವಂತೇ ಅಣ್ಣೇಮನೆಯವರು ಸತತವಾಗಿ ಪ್ರೇರೇಪಿಸಿದ್ದರಿಂದ ತನ್ನ ಗಂಡನಿಗೆ ಬುದ್ಧಿಯಿಲ್ಲದ್ದನ್ನು ತಿಳಿದು ದುರುಪಯೋಗಮಾಡಿಕೊಂಡರು ಎಂದು ಕೆಲವು ಅಧಿಕಾರಿಗಳಿಗೆ ಕಳಿಸಲು ಆಕೆ ನನ್ನ ಕೈಲಿ ಅರ್ಜಿ ಬರೆಯಿಸಿದ್ದಳು !

ಪುಸ್ !

ಕೆಲವರಿಗೆ ಮಾತಿನ ಮಧ್ಯೆ ಆಗಾಗ ಏನಾದರೂ ಒಂದೆರಡು ಶಬ್ದಗಳನ್ನು ಉಪಯೋಗಿಸುವ ಹವ್ಯಾಸ. ಇಂತಹ ಒಬ್ಬರು ನಮ್ಮ ಬಳಗದಲ್ಲಿದ್ದರು. " ನಾ ಹೇಳದ್ ತಿಳೀಲಿಲ್ಲಾ ? " ಎಂಬ ಒಕ್ಕಣಿಕೆಯನ್ನು ಅವರು ಸದಾ ಉಪಯೋಗಿಸುತ್ತಿದ್ದರು. ತೀರಾ ಪುಕ್ಕಲುತನದ ಈ ಮನುಷ್ಯನಿಗೆ ಬೆಕ್ಕುಗಳೆಂದರೆ ಭಾರೀ ಹೆದರಿಕೆ. ದೂರದಲ್ಲಿ ಬೆಕ್ಕುಗಳನ್ನು ಕಂಡರೂ ದಾರಿಬದಲಾಯಿಸಿ ಹೋಗಿಬಿಡುವ ವ್ಯಕ್ತಿ ಈತ. ನಮ್ಮನೆಗೆ ಬಂದಾಗ ನಮಗೆಲ್ಲಾ ಬೆಕ್ಕುಗಳ ವರ್ಣನೆ ಮಾಡಿ ಬೆಕ್ಕುಗಳು ಹುಲಿ-ಸಿಂಹಗಳಿಗಿಂತಾ ಕ್ರೂರ ಎಂಬಂತೇ ಬಣ್ಣಿಸಿ ನಮ್ಮಲ್ಲೂ ಕೆಲವು ಕಾಲ ಹೆದರಿಕೆ ಉಂಟಾಗುವಂತೇ ಮಾಡಿಬಿಟ್ಟಿದ್ದ ಆಸಾಮಿ !

ಹಾಗಂತ ಈತ ಚಿಕ್ಕವನೇನೂ ಅಲ್ಲ. ಆಗಲೇ ಮದುವೆ ವಯಸ್ಸಿಗೆ ಬಂದ ಮಗನೂ ಇದ್ದ. ಮಗನ ಮದುವೆ ಮಾಡುತ್ತೇನೆ ಎಂದು ಊರತುಂಬಾ ಡಂಗುರ ಸಾರಿದ್ದರಿಂದ ಅನೇಕಜನ ಹೆಣ್ಣು ಹೆತ್ತವರು ಈತನ ಮಗನಿಗೆ ಹೆಣ್ಣುಕೊಡುವ ಸಲುವಾಗಿ ವಧುಪರೀಕ್ಷೆಯ ಕಾರ್ಯವನ್ನು ಇಟ್ಟುಕೊಳ್ಳುತ್ತಿದ್ದರು. ಅಲ್ಲಿ ಇಲ್ಲಿ ಕರೆದಾಗ ಈತ ಹೆಂಡತಿ ಮಗನೊಟ್ಟಿಗೆ ಹೋಗಿ ನೋಡಿಬರುತಿದ್ದ. ಒಮ್ಮೆ ಹೀಗೇ ಹೊರಟಿತ್ತು ಮೇಳ. ದಾರಿಯಲ್ಲಿ ಒಂದು ಬೆಕ್ಕು ದೂರದಲ್ಲಿ ಓಡಿಬರುತ್ತಿತ್ತು.

" ನಾ ಬರುದಿಲ್ಲ ನೀವೇ ಹೋಗ್ಬನ್ನಿ " ಕಾಲೆಳೆಯುತ್ತಾ ಅಡ್ಡರಸ್ತೆಯಲ್ಲಿ ತಿರುಗಿದ ಈತ.

" ಬನ್ನಿ ನೀವು ಬರ್ದೇ ಇದ್ರೆ ಅವ್ರು ಏನ್ ತಿಳ್ಕೋತಾರೋ ಗೊತ್ತಿಲ್ಲಾ, ಯಾಕ್ ಹೀಗೆ ಬನ್ನಿ " ಎಂದು ಹೆಂಡತಿ ಕೇಳುತ್ತಿದ್ದರೂ ಆತನಿಂದ ಉತ್ತರಬಂದಿದ್ದು ಇಷ್ಟೇ

" ನಾ ಬರುದಿಲ್ಲ ನಾ ಹೇಳದ್ ತಿಳೀಲಿಲ್ಲಾ ? "

ಹೇಗೋ ಏನೋ ಊರ ಹಲವರಿಗೆ ಈತ ಬೆಕ್ಕಿಗೆ ಹೆದರುವ ವಿಷಯ ಗೊತ್ತಿತ್ತು. ಆದರೆ ಅದನ್ನೇ ನೇರವಾಗಿ ’ಬೆಕ್ಕಿಗೆ ಹೆದರಾಂವ ’ ಎನ್ನುವ ಬದಲು ’ನಾ ಹೇಳದ್ ತಿಳೀಲಿಲ್ಲಾ’ ಎಂದು ಜನ ಈತನಿಗೆ ಅಡ್ಡಹೆಸರು ಇಟ್ಟಿದ್ದರು. ಯಾರಾದರೂ ಈತನ ಮನೆಯ ಹಾದಿಯಲ್ಲಿ ಹೋಗುವಾಗ ಬರುವಾಗ ಇನ್ನೊಬ್ಬರಿಗೆ ಅವರು ಗುರುತು ಹೇಳುತ್ತಿದ್ದುದು " ನೋಡೋ ಇದು ’ನಾ ಹೇಳದ್ ತಿಳೀಲಿಲ್ಲಾ ’ ಮನೆ." ಬೆಕ್ಕಿಗಿಂತಾ ಅಪಸಂಶಯದ ಪ್ರಾಣಿಯಾದ ಈತನ ಮಗನಿಗೆ ಯಾವ ಸಂಬಂಧಗಳೂ ಕೂಡಿಬರಲಿಲ್ಲ. ಬಹುತೇಕ ಮನೆಗಳಲ್ಲಿ ಬೆಕ್ಕುಗಳಿದ್ದವು--ಅದು ಕಾರಣ. ಇನ್ನು ಕೆಲವು ಮನೆಗಳಿಗೆ ಹೋಗುವಾಗ ಬರುವಾಗ ಬೆಕ್ಕುಗಳು ಕಣ್ಣಿಗೆ ಬಿದ್ದುದು ಕಾರಣ. ಅಪ್ಪನ ಈ ಮಹಾನಡಾವಳಿಯನ್ನು ನೋಡಿ ಜಿಗುಪ್ಸೆಗೊಂಡ ಮಗ ಒಂದಿನ ರಾತ್ರಿ ಮನೆಬಿಟ್ಟು ಓಡಿಹೋದ. ನಂತರದ ದಿನಗಳಲ್ಲಿ ಮಾನಸಿಕವಾಗಿ ಖಿನ್ನನಾದ ಈತ ತಾನೂ ಬೆಕ್ಕಿನ ರೀತಿಯಲ್ಲೇ ವರ್ತಿಸುತ್ತಿದ್ದ!

ಹಾಗಂತ ಬಹಳ ಜನ ಸೇರಿದ ಜಾಗದಲ್ಲಿ ದೂರದಲ್ಲಿ ಬೆಕ್ಕುಗಳಿದ್ದರೂ ಈತ ಆಕಡೆಗೇ ನೋಡುತ್ತಿರಲಿಲ್ಲ ಬಿಟ್ಟರೆ ಆಗೆಲ್ಲಾ ಒಳ್ಳೆ ಧೈರ್ಯ! ಇಂತಹ ಮನುಷ್ಯನಿಗೆ ಒಮ್ಮೆ ಛಾಯಚಿತ್ರದ ಗೀಳು ಹಿಡೀತು. ಮದುವೆಯೊಂದರಲ್ಲಿ ಫೋಟೋ ತೆಗೆಯುವಂತೇ ದುಂಬಾಲುಬಿದ್ದ. ಆಗೆಲ್ಲಾ ಸ್ಟಿಲ್ ಕ್ಯಾಮರಾಗಳ ಕಾಲ. ರೀಲನ್ನು ಹಾಕಿ ಫೋಟೋ ತೆಗೆದು ಅದನ್ನು ಸಂಸ್ಕರಿಸಬೇಕಾಗುತ್ತಿತ್ತು. ಇವನ ಹಠ ನೋಡಿ ಅಲ್ಲಿ ಸೇರಿದ್ದ ಕೆಲಜನ

" ನಿನ್ನ ಮುಂದಿನ ಎರಡು ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡು ಫೋಟೋ ತೊಳೆಯಲು ಬರುದಿಲ್ಲ ಮಾರಾಯ "

ಅಂದಿದ್ದೇ ತಡ ಊರಲ್ಲಿ ಮತ್ತೊಂದೆಡೆಗೆ ಮದುವೆ ನಡೆಯುವುದನ್ನೇ ಎದುರುನೋಡುತ್ತಿದ್ದ. ಒಂದು ಮದುವೆ ಇದ್ದುದು ತಿಳಿದಿತ್ತು. ಮದುವೆಗೆ ವಾರ ಮುಂಚಿತವಾಗಿ ತಯಾರಾಗಿಬಿಟ್ಟ! ಮದುವೆಯ ದಿನ ಬಂದೇ ಬಂತು. ಮದುವೆಮನೆಗೆ ಬಂದವನೇ ಅಲ್ಲಿಗೆ ಬಂದ ಅದೇ ಹಳೆಯ ಫೋಟೋಗ್ರಾಫರ್ ಕೈಲಿ ಫೋಟೋ ತೆಗೆಯುವಂತೇ ಹೇಳಿದ.

" ನೋಡಯ್ಯಾ ನೀ ಹೇಳಿದ್ಯಲ್ಲ ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡ್ಬುಡುತ್ತೆ ಅಂತ ಅದ್ಕೇ ಹೋಗಿ ಮುಂದಿನ ಹಲ್ಲು ಕಿತ್ತಾಕ್ಸೊಂಡು ಬಂದಿದೀನಿ, ತೆಗೀ ಈಗ ಫೋಟೋ, ನಾ ಹೇಳದ್ ತಿಳೀಲಿಲ್ಲಾ " ಎಂದ

ಸುತ್ತ ಇದ್ದವರಿಗೆಲ್ಲಾ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಡಬೋಲ್

ಕಡಕಾಲ್ ರಾಮಣ್ಣ ಎಂದ್ರೆ ವರ್ಲ್ಡ್ ಫೇಮಸ್ಸು ! ಆತನ ವಿಷಯ ನೀವು ನಮ್ಮೂರಿಗೆ ಹೋಗಿ ಕೇಳದ್ರೆ ಈಗ್ಲೂ ಹೇಳ್ತಾರೆ ಜನ. ಜಕಣಾಚಾರಿಯನ್ನಾದ್ರೂ ಜನ ಮರೀಬಹುದು ಆದರೆ ರಾಮಣ್ಣನನ್ನು ಮರೆಯಲು ಸಾಧ್ಯವೇ ? ಹಳೆಯ ಕಾಲಮಾನ. ಆಗ ಗದ್ದೆಗಳಲ್ಲಿ ಮಾಳಗಳನ್ನು ಹಾಕಿ ರಾತ್ರಿ ಕಾವಲು ಕಾಯುತ್ತಿದ್ದರು. ಕಾಡು ಊರಿಗೆ ಹತ್ತಿರವಿರುತ್ತಿದ್ದುದರಿಂದ ನರಿ, ತೋಳ, ಹಂದಿ ಇತ್ಯಾದಿ ಹಲವು ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಾಗೆ ಕಾಯುವುದು ಬೇಕಾಗುತ್ತಿತ್ತು. ರಾತ್ರಿ ಆಗಾಗ ಗದ್ದೆಯ ಬದುವಿನ ಮೇಲೆ ಓಡಾಡಿಬರುವುದು, ಒಮ್ಮೊಮ್ಮೆ ಕಾಲಿಯಾದ ತಗಡಿನ ಎಣ್ಣೆ ಡಬ್ಬವನ್ನು ಬೋರಲುಹಾಕಿ ಜೋರಾಗಿ ಕೋಲಿನಿಂದ ಬಡಿದು " ತಾವಿದ್ದೇವೆ " ಎಂದು ಕಾಡುಪ್ರಾಣಿಗಳಿಗೆ ಸೂಚಿಸುವುದು ರೂಢಿ. ನಾಲ್ಕು ಸೆಲ್ಲಿನ ಅಗಲ ಗಾಜಿನ ಬ್ಯಾಟರಿ [ಟಾರ್ಚ್] ಹಿಡಿದು ಗದ್ದೆಯಲ್ಲಿ ಓಡಡುವುದೆಂದರೆ ಕೆಲವರಿಗೆ ಬಹಳ ಆಸಕ್ತಿ.

ಅದರಲ್ಲಂತೂ ರಾಮಣ್ಣ ನಡುವಯಸ್ಕ. ಆತನಿಗೆ ಬೀಡೀ ಸೇದುವ ಚಟ. ಮೂವತ್ತು ಮಾರ್ಕಿನ ಬೀಡಿಗಳನ್ನು ಅಂಗಿಯ ಜೇಬಿನಲ್ಲಿ ಇಟ್ಟುಕೊಂಡು ಮಲಗಿಬಿಟ್ಟರೆ ರಾತ್ರಿ ನೆನಪಾದಾಗ ಒಂದೊಂದು ಅಂಟಿಸಿಕೊಂಡು ಸೇದುತ್ತಿದ್ದ. ಹಂದಿಗಳ ಉಪಟಳ ಜಾಸ್ತಿಯಾಗಿದ್ದರಿಂದ ನಿಗ್ರಹಿಸಲು ಸಾಧ್ಯವಾಗದೇ ಹೊಸದಾಗಿ ಕಂಡುಕೊಂಡ ದಾರಿ ಆಗಾಗ ಪಟಾಕಿ ಹೊಡೆಯುವುದು. ಆಗ ಸಿಗುತ್ತಿದ್ದ ಬಿಡಿಬಿಡಿಯಾದ ಲಕ್ಷ್ಮೀ ಪಟಾಕಿಯನ್ನು ಜೇಬಲ್ಲೇ ಬೀಡಿಯೊಟ್ಟಿಗೆ ಇಟ್ಟುಕೊಂಡುಬಿಟ್ಟ. ಮಲಗಿದವನಿಗೆ ನಿದ್ದೆಯ ಮಂಪರು ಹತ್ತಿತ್ತು. ಸ್ವಲ್ಪ ಎಚ್ಚರವಾದಂತಾದಾಗ ಅಲ್ಲೆಲ್ಲೋ ಗದ್ದೆಯ ಒಂದು ಮೂಲೆಯಲ್ಲಿ ಯಾವುದೋ ಪ್ರಾಣಿಯ ಸದ್ದು ಕೇಳಿಬರುತ್ತಿತ್ತು. ಅಪರಾತ್ರಿಬೇರೆ. ಹಂದಿಗಳು ಬಹಳ ಅಪಾಯಕಾರಿಯಾದ್ದರಿಂದ ಮಾಳ ಇಳಿದು ಹೋಗಲೂ ಹೆದರಿಕೆ.

ರಾಮಣ್ಣ ತಡಮಾಡಲೇ ಇಲ್ಲ. ಜೇಬಿನಿಂದ ಬೀಡಿಯೊಂದನ್ನು ತೆಗೆದು ಸೇದುತ್ತಾ ನೋಡೋಣ ಎಂದುಕೊಂಡ. ಹಚ್ಚಿದ ಬೀಡಿ ಸುರ್ ಸುರ್ ಎಂದು ಅರ್ಧ ನಿಮಿಷದಲ್ಲಿ " ಡಬೋಲ್ " ಎಂಬ ಸದ್ದಿನೊಡನೆ ಸ್ಪೋಟಗೊಂಡಾಗಲೇ ರಾಮಣ್ಣನಿಗೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಪಟಾಕಿಯ ನೆನಪಾಗಿದ್ದು. ಪರಿಣಾಮ ಕಣ್ಣೊಂದು ಬರ್ಬಾದಾಗಿ ಹೋಯಿತು. ಮಾರನೇದಿನ ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಕಣ್ಣು ಮರಳಿ ಬರಲೆ ಇಲ್ಲ. ದೀಪಾವಳಿಯಲ್ಲಿ ಮಿಕ್ಕುಳಿದ ಪಟಾಕಿಯನ್ನು ಹಂದಿ ಓಡಿಸಲು ರಾಮಣ್ಣ ಮಾಡಿದ ಪ್ಲಾನೇನೋ ಸರಿ. ಆದರೆ ಆತ ವಿಷಕಾರಿಯಾದ ಆ ಸ್ಪೋಟಕವನ್ನು ಬೀಡಿಯೊಂದಿಗೆ ಜೇಬಿನಲ್ಲಿಟ್ಟುಕೊಂಡು ಸೇದಿ ಬೆಳಗಾಗುವುದರೊಳಗೆ ಸುತ್ತ ಹತ್ತಾರು ಹಳ್ಳಿಗಳಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದ!

Monday, November 8, 2010

ಶಾಲಿನಿ


ಶಾಲಿನಿ

[ಸಹೃದಯೀ ಓದುಗ ಮಿತ್ರರೇ, ಇಲ್ಲೊಂದು ಹೊಸಬಗೆಯ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಕಥೆಯುದ್ದಕ್ಕೂ ಕವನವೊಂದು ಹಾದುಹೋಗುತ್ತಾ ತಮಗೆ ಕಥೆಯನ್ನೂ ಕವನವನ್ನೂ ಒಟ್ಟಾಗಿ ಕೊಡುವ ಒಂದು ವಿಭಿನ್ನ ಹೆಜ್ಜೆ ಇದು. ಪೂರಕ ಪ್ರಯತ್ನಗಳಿಲ್ಲದೇ ಕುಳಿತಾಗೊಮ್ಮೆ ಸಹಜವಾಗಿ ಮನಸ್ಸನ್ನಾವರಿಸಿದ ಭಾವಗಳಿಗೆ ಭಾಷ್ಯಬರೆಯಲು ಹೊರಟಾಗ ಕಥೆಯೂ ಕವನವೂ ಒಟ್ಟೊಟ್ಟಿಗೇ ಬಂದವು. ಸಮ್ಮಿಶ್ರ ಸರಕಾರವನ್ನು ನೋಡಿದ ನಿಮಗೆ ಅಂತಹ ಅಸಹ್ಯಕರ ಸನ್ನಿವೇಶವಂತೂ ಇದಾಗಲಾರದು ಎಂಬ ಅನಿಸಿಕೆಯಿಂದ ಬಿಸಿಬಿಸಿಯಿರುವಾಗಲೇ ಬಾಳೆಲೆಗೆ ಬಡಿಸಿದ್ದೇನೆ. ಮನೆಮಂದಿಯಾದ ನಿಮ್ಮಲ್ಲಿ ಹೇಳದ್ದೇನಿದೆ? ಹೀಗಾಗಿ ಇದನ್ನೂ ಹೇಳಿಕೊಂಡಿದ್ದೇನೆ. ಶುಭವಾದರೆ ಶುಭವೆನ್ನಿ, ಹಿತವಾದರೆ ಹಿತವೆನ್ನಿ, ಉಪ್ಪು-ಖಾರ ಜಾಸ್ತಿಯಾಗಿದ್ದರೆ ಅದನ್ನೂ ಹೇಳಿ ಆಗದೇ? ಮತ್ತೆ ಸಿಗೋಣ, ನಮಸ್ಕಾರ.]


ಕಾವೂರ ಶಾಲೆಯ ಸುತ್ತಾ ಮುತ್ತಾ ಬಹಳ ಮಂದಿ ಊರವರು ಸೇರಿದ್ದರು. ಅವರೆಲ್ಲರ ಮುಖದಲ್ಲಿ ಅವ್ಯಕ್ತವಾದ ನೋವೊಂದು ಕಾಣುತ್ತಿತ್ತು. ಕೆಲವರ ಕಣ್ಣಂಚಿನಿಂದ ಜಾರುತ್ತಿವೆ ಹನಿಗಳು. ನೀರವ ಮೌನದ ನಡುವೆ ಶಾಲೆಯ ಒಳಗೆ ನಡೆಯುತ್ತಿದ್ದ ಸಮಾರಂಭದಲ್ಲಿ ಯಾರೋ ಹುಡುಗಿ ಹಾಡಿದ ಹಾಡು ಕೇಳಿಬರುತ್ತಿತ್ತು.


ಋಣಿಯಾಗಿಹೆವು ನಿಮಗೆ
ಗಣಿತ ಇತಿಹಾಸ ಪುರಾಣದಾ ಜ್ಞಾನಗಳ
ಹಣತೆ ಬೆಳಗಿದ ಗುರುವೇ ನಿಮಗಿದೋ ವಂದನೆ ......
ಪಾದಾಭಿವಂದನೆ

ವೀರವನಿತೆಯಾಗಬೇಕೆಂಬ ಕನಸು ನನಸಾಗದಿದ್ದರೂ ಬೇಸರವಿಲ್ಲ, ಶಿಕ್ಷಕಿಯಾಗಿ ನಾಲ್ಕುಮಕ್ಕಳಿಗೆ ವೀರರ ಕಥೆಯನ್ನು ಬೋಧಿಸಿ ಅವರನ್ನು ನಾಳಿನ ಜಗತ್ತಿಗೆ ಅಣಿಗೊಳಿಸುವ ಕೆಲಸ ದೊರೆತದ್ದು ಪುಣ್ಯ ಎಂದುಕೊಂಡ ಶಾಲಿನಿಗೆ ಜೀವನವೇ ಒಂದು ನೋವಿನ ಯಾತ್ರೆಯಾಗುತ್ತದೆಂದು ಅನಿಸಿರಲೇ ಇಲ್ಲ. ಮೂರು ನಾಲ್ಕನೇ ತರಗತಿಗಳಲ್ಲಿ ಓದುವ ಚಿಕ್ಕ ಮಕ್ಕಳಿಗೆ ಇತಿಹಾಸ ಮತ್ತು ಪುರಾಣಗಳ ಕಥೆಯನ್ನು ಹೇಳುತ್ತಾ ತನ್ನನ್ನೇ ಮೈಮರೆತು ಆ ಕಥೆಗಳ ಭಾಗವೇ ಆಗಿಹೋಗುವ ಶಾಲಿನಿ ನಡೆದು ಬಂದ ದಾರಿ ಬಲುದೂರ!

ಪುಸ್ತಕವೊಂದನ್ನು ಹುಡುಕುವಾಗ ಆಕೆಗೆ ಸಿಕ್ಕಿದ್ದು ಒಂದು ಶುಭಾಶಯ ಪತ್ರ. ಆ ಪತ್ರದಲ್ಲಿ ಅಡಗಿದ ಭಾವಕ್ಕೆ ಮಾರುಹೋಗಿದ್ದಳು ಶಾಲಿನಿ. ಬೇರೇ ಬರಹಗಳು ತಿಳಿಸದ, ಮಾತುಗಳು ಧ್ವನಿಸದ, ಸಂಜ್ಞೆಗಳು ಸೂಚಿಸದ ಹಲವು ಭಾವನೆಗಳನ್ನು ಹೊತ್ತು ಬಂದ ಪತ್ರ ಅದಾಗಿತ್ತು. ಅಂದು ಅದೊಂದೇ ಪತ್ರ ತನ್ನ ಹೊಸಬಾಳಿಗೆ ಬುನಾದಿಯನ್ನು ಹಾಕಿತ್ತು! ದೂರದ ಸಂಬಂಧಿಕರ ಮಗ ರಮೇಶ್ ತನಗೆ ಯಾಕೋ ಒಳಗೊಳಗೇ ಹತ್ತಿರವಾಗತೊಡಗಿದ್ದ. ಹೇಳಬೇಕಿದ್ದ ಅನಿಸಿಕೆಗಳು ಹಲವು, ಆದರೆ ಅನಿಸಿದ್ದನ್ನೆಲ್ಲಾ ಹೇಳುವ ಸ್ವಾತಂತ್ರ್ಯವಾಗಲೀ ಧೈರ್ಯವಾಗಲೀ ಇಲ್ಲದ್ದು ಆ ಕಾಲ. ಕೈಲಿ ಮೊಬೈಲಿಲ್ಲ ಇನ್ನಾವುದೇ ಸಂಪರ್ಕ ಸಾಧನವಿರಲಿಲ್ಲ. ಹೀಗಾಗಿ ಕೇವಲ ಪತ್ರಮಾಧ್ಯಮವೊಂದೇ ಪ್ರೇಮನಿವೇದನೆಗೆ ದಾರಿಯಾಗಿತ್ತು.

ಬೈಲಾರದಲ್ಲಿ ಮದುವೆಯೊಂದಕ್ಕೆ ಹೋದಾಗ ಛಂಗನೆ ಚಿಗರೆಯಂತೇ ಜಿಗಿಯುತ್ತಿದ್ದ ಶಾಲಿನಿಗೆ ದೂರದಲ್ಲಿ ಗಂಡಿನ ದಿಬ್ಬಣದ ಕಡೆಗಿನ ಜನರ ನಡುವೆ ಕಾಣಿಸಿದ್ದ ರಮೇಶ. ಅತ್ಯಂತ ಸ್ಪುರದ್ರೂಪಿ ಹುಡುಗ, ಬಹಳ ಚಾಲಾಕಿ, ಯಾರಜೊತೆಗೋ ಹರಟುತ್ತಾ ನಗುತ್ತಾ ಇದ್ದ. ಹದಿವಯದ ಆ ಕಾಲ ಹೊಸಜಗವನ್ನು ಅನಾವರಣಗೊಳಿಸುತ್ತಿತ್ತು. ಪ್ರಕೃತಿಮಾತೆಯ ಚಪ್ಪರದಲ್ಲಿ ಭೂಮಿಗೆ ಬಾನಿನೊಡನೆ ಸಂಪರ್ಕಿಸುವ ಆಸೆ! ಬಾನಿಗೆ ಭೂಮಿಯನ್ನು ಸೇರುವ ಬಯಕೆ. ಈ ಬಯಕೆಗಳ ತಾಕಲಾಟದಲ್ಲೇ ತೇಲಾಡುತ್ತಾ ಒಳಗೊಳಗೇ ಆಗಾಗ ಆಗಾಗ ಸಿಗಬಹುದಾದ ಚಿಕ್ಕ ಪುಟ್ಟ ದರ್ಶನ ಸ್ಪರ್ಶನಗಳಿಗೆ ಪುಳಕಗೊಳ್ಳುವ ಮೈಮನ ಹದಿಹರೆಯದ ಹೆಣ್ಣು-ಗಂಡುಗಳದು. ಅವನಿಗೆ ಅವಳೆಂದರೆ ಆಯಿತು.....ಏಷ್ಟೇ ಹೊತ್ತಾದರೂ ಪರವಾಗಿಲ್ಲ ಕಾಯುವ ತವಕ...ಒಟ್ಟಾರೆ ಅವಳೊಟ್ಟಿಗೆ ಮಾತನಾಡಬೇಕು, ಹರಟಬೇಕು......ಅವಳ ಕಿವಿಯಲ್ಲಿ ಏನನ್ನಾದರೂ ಪಿಸುಗುಡುತ್ತಾ ನಗಬೇಕು....ನಕ್ಕಿ ಕಚಗುಳಿಯಿಡಬೇಕು.....ಸೋತ ಆಕೆ ಕೊನೆಗೊಮ್ಮೆ ತನ್ನ ತೋಳಿನಲ್ಲಿ ಬಂಧಿಯಾಗಿ ಬಹಳಹೊತ್ತು ತನ್ನನ್ನೇ ಮರೆಯಬೇಕು. ಅವಳಿಗೆ ಅವನೆಂದರೆ ಎಲ್ಲಿಲ್ಲದ ಆಸೆ...ಆತ ಬೇರೆಯವರ ಜೊತೆ ಹರಟುವುದನ್ನು ನೋಡುವಾಗ ತಾನೂ ಏನಾದರೂ ಮಾತನಾಡಬೇಕೆಂಬ ಚಪಲ.....ಹತ್ತಿರ ಕುಳಿತುಕೊಳ್ಳುವ ಬಯಕೆ......ಒರಗಿ ಕುಳಿತು ಛೇಡಿಸುವ ಇಚ್ಛೆ......ಜಗದ ಎಲ್ಲಾ ಸ್ಪರ್ಧೆಗಳಲ್ಲಿ ಆತನೇ ಗೆದ್ದುಬರಲೆಂಬ ಬೆಟ್ಟದೆತ್ತರದ ಆಕಾಂಕ್ಷೆ....ಆತ ತನ್ನನ್ನೇ ಪ್ರೀತಿಸಲಿ ಎಂಬ ಅಪೇಕ್ಷೆ. ಆ ದಿನಗಳೇ ಹಾಗಲ್ಲವೇ ? ಅವುಗಳನ್ನು ಪ್ರತ್ಯೇಕವಾಗಿ ಬಣ್ಣಿಸಲೇ ಬೇಕಿಲ್ಲವಷ್ಟೇ ?

ಹೀಗೇ ಮದುವೆಯ ಸಂಭ್ರಮದಲ್ಲಿ ದಕ್ಕಿದ ಮೊದಲನೋಟದಲ್ಲಿ ರಾಜಾ ವಿಷ್ಣುವರ್ಧನ ಶಾಂತಲೆಯನ್ನು ಬಂಧಿಸಿದಂತೇ, ದುಷ್ಯಂತ ಶಕುಂತಲೆಯ ಮನಕದ್ದಂತೇ ಶಾಲಿನಿಯ ಹೃದಯಚೋರನಾಗಿದ್ದ ರಮೇಶ. ಅಲ್ಲಿಂದ ಮುಂದೆ ಅನೇಕ ತಿಂಗಳುಗಳು ಪರಸ್ಪರರ ಕಾಣಬೇಕೆಂಬ ತಹತಹದಲ್ಲೇ ಕಳೆದುಹೋದವು. ಇಬ್ಬರಿಗೂ ಏನೋ ದೂರದ ನೆಂಟರು ಎಂಬುದಷ್ಟೇ ಗೊತ್ತು ವಿನಃ ಆ ಮನೆಗಳಲ್ಲಿ ಅತೀ ಹತ್ತಿರದ ಬಾಂಧವ್ಯವಿರಲಿಲ್ಲ. ಏನಾದರಾಗಲಿ ಇನ್ನು ತಾಳಲಾರೆ ಎಂದುಕೊಂಡ ರಮೇಶ ಒಂದು ಶುಭಾಶಯ ಪತ್ರವನ್ನು ಬರೆದ. ಹೇಗೋ ಏನೋ ಅವಳ ವಿಳಾಸವನ್ನು ಪತ್ತೆಹಚ್ಚಿ ಕಳಿಸೇಬಿಟ್ಟ!

ಪತ್ರ ಬಂದಿರುವ ವೇಳೆಯಲ್ಲಿ ಶಾಲಿನಿಯ ತಂದೆ ಪೇಟೆಗೆ ಹೋಗಿದ್ದರು. ತಾಯಿ ದೇವಸ್ಥಾನಕ್ಕೆ " ಏನೋ ಪೂಜೆಯಂತೆ ಕಮಲಮ್ಮ ಕರ್ದಿದಾರೆ ಹೋಗ್ಬರ್ತೀನಿ " ಎನ್ನುತ್ತಾ ಹೋಗಿದ್ದರು. ಶಾಲಿನಿಗೆ ಕಾಲೇಜಿನ ಪರೀಕ್ಷೆ ಹತ್ತಿರ ಬಂದಿದ್ದರಿಂದ ಮನೆಯಲ್ಲೇ ಕುಳಿತು ಓದುತ್ತಿದ್ದಳು. ಅನಿರೀಕ್ಷಿತವಾಗಿ ಹಳ್ಳಿಯ ಅಂಚೆಯಣ್ಣ ಕೂಗಿ ಕರೆದ. ಹೊರಗೆ ಬಂದಾಗ ಕೈಗೆ ಪತ್ರಕೊಟ್ಟು ಇದು ನಿಮ್ಮದೇ ಹೌದೋ ಎಂದ. ಗೋಣುಹಾಕಿತ್ತಾ ಅವಸರದಲ್ಲಿ ಅದನ್ನು ಹಿಡಿದವಳೇ ಅಂಚೆಯಣ್ಣನಿಗೆ ಬಾಯಾರಿಕೆಗೆ ಕೊಡಲೋ ಎಂದು ಕೇಳುವುದನ್ನೂ ಮರೆತು ಒಳಸೇರಿದ್ದಳು ಶಾಲಿನಿ. ಪತ್ರವನ್ನು ಓದಿದಳು. ಇದ್ದುದು ಮೂರ್ನಾಲ್ಕು ಸಾಲು :

ಪ್ರೀತಿಯ ಶಾಲಿನಿ,

ಬಹಳದಿನಗಳ ಹಿಂದೆ ನಾವು ಮದುವೆಯಲ್ಲಿ ಭೇಟಿಯಾಗಿದ್ದೆವು ನೆನಪಿದೆಯಲ್ಲವೇ ? ನಾನು ರಮೇಶ್, ಒಮ್ಮೆ ನಿಮ್ಮನ್ನು ಕಾಣುವ ತವಕದಿಂದ ನನ್ನ ವಿಳಾಸವನ್ನು ತಿಳಿಸುವ ಸಲುವಾಗಿ ಬರೆದೆ, ಬರೆಯಲು ಆಗದಷ್ಟು ಮಾತಾಡುವುದಿದೆ, ನಾನು ಬರೆದಿದ್ದು ಇಷ್ಟವಾದರೆ ನನಗೊಮ್ಮೆ ಉತ್ತರಿಸಿ, ಹೃದಯಾಂತರಾಳದಿಂದ ಶುಭಾಶಯಗಳು.

ಇತಿ ನಿಮ್ಮವ,
ರಮೇಶ್


ಪತ್ರ ಓದಿದ ಶಾಲಿನಿಗೆ ಬಾನು ಬಾಗಿ ಭೂಮಿಗೆ ತಲ್ಪಿದ ಅನುಭವ. ಪತ್ರವನ್ನು ಯಾರಿಗೂ ಸಿಗದಂತೇ ಅಟ್ಟದಲ್ಲಿರುವ ಹಳೆಯ ಯಾವಾಗಲೂ ತೆರೆಯದ ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟು ಜೋಪಾನಮಾಡಿದಳು. ಅಪ್ಪ-ಅಮ್ಮ ಹೊರಗೆ ಹೋದವರು ಬಂದರೂ ಅವಳಿಗೆ ತಲೆಯಲ್ಲಿ ರಮೇಶನದ್ದೇ ಗುಂಗು, ಆತನದೇ ಧ್ಯಾನ. ಪತ್ರವನ್ನು ಸದಾ ಕೈಲಿ ಹಿಡಿದೇ ಇರುವ ಆಸೆ. ಆ ಪತ್ರವನ್ನೊಮ್ಮೆ ಮೂಸಿ ಅದಕ್ಕಿರುವ ಲಘು ಆಹ್ಲಾದಕರ ಪರಿಮಳವನ್ನು ಆಘ್ರಾಣಿಸಿದ್ದಳು. ಈಗ ಎಲ್ಲರ ಎದುರಿನಲ್ಲಿ ಮತ್ತೆ ಹೊರತೆಗೆಯಲು ಸಾಧ್ಯವೇ ? ಪತ್ರವನ್ನು ಮುಟ್ಟಿದ್ದ ತನ್ನ ಕೈಯ್ಯನ್ನೇ ಮತ್ತೊಮ್ಮೆ ಆಘ್ರಾಣಿಸಿದಳು. ಮೂಡಿದ ದೇವರು ಮುಳುಗುವ ಹೊತ್ತಿಗೆ ಮನದ ತುಂಬಾ ರಮೇಶನೇ ತುಂಬಿ ಉಸಿರುಸಿರಿನಲ್ಲೂ ಅವನೇ ಉಸಿರಾಡುತ್ತಿದ್ದ. ರಾತ್ರಿಯಾವಾಗ ಬಂತೋ ತಿಳಿಯಲೇ ಇಲ್ಲ ಆಕೆಗೆ. ಮೈಯ್ಯೆಲ್ಲಾ ಬಿಸಿಬಿಸಿ ಬಿಸಿಬಿಸಿ. ರಮೇಶನನ್ನು ಹೇಗಾದರೂ ಮಾಡಿ ಕಾಣಬೇಕೆನ್ನುವ ತವಕ, ಆತನಿಗೆ ಈ ಕೂಡಲೇ ಪತ್ರವನ್ನು ಬರೆಯಬೇಕೆಂಬ ಅದಮ್ಯ ಬಯಕೆ.

ಮಾರ್ದನಿಸಿ ಎಲ್ಲೆಲ್ಲೂ ನಿಮ್ಮ ದನಿ ಮನದೊಳಗೆ
ಆರ್ದ್ರತೆಯ ಅನುಕಂಪ ಪೂಸುತಿರೆ ಮೈಗೆ
ನಿರ್ದೇಶಿಸುತ ನಿತ್ಯ ಸನ್ಮಾರ್ಗ ಕಾರ್ಯಗಳ
ಗರ್ದಭಗಳನೆಲ್ಲ ಹಯವಮಾಡಿದಿರಿ

..............ಹುಡುಗಿಯ ಇಂಪಾದ ಅಮೋಘ ಕಂಠಸಿರಿಯಲ್ಲಿ ಹಾಡು ಹೊರಳುತ್ತಿದ್ದಂತೇ ಶಾಲಿನಿಯ ಮನಸ್ಸಿನ ಬಂಡಿ ಮುಂದೆ ಚಲಿಸುತ್ತಲೇ ಇತ್ತು.

ಕೆಲವೇ ದಿನಗಳಲ್ಲಿ ಕದ್ದೂ ಮುಚ್ಚಿ ಅಂತೂ ಉದ್ದನೆಯ ಪತ್ರ ಬರೆದು ರಮೇಶ್ ತಿಳಿಸಿದ್ದ ಆ ವಿಳಾಸಕ್ಕೆ ಕಳಿಸಿದ್ದಳು ಶಾಲಿನಿ.

ಉತ್ತರಕ್ಕಾಗಿ ಕಾದ ರಮೇಶ ತಡವಾದುದರಿಂದ ನಿರಾಸೆಗೊಂಡಿದ್ದ. ಆದರೂ ಉಮ್ಮಳಿಸಿ ಬರುವ ಮನೋಗತವನ್ನು ಯಾರಲ್ಲೂ ಬಹಿರಂಗಗೊಳಿಸಲಾರ. ಕೊನೆಗೂ ಪತ್ರ ಬಂದೇ ಬಿಟ್ಟಿತ್ತು ! ಪರಮ ಸಂತೋಷದಿಂದ ಕುಣಿದಾಡಿದ ರಮೇಶನಿಗೆ ಅಂದು ಆಕಾಶ ಕೈಗೆಟುಕುವ ಹತ್ತಿರಕ್ಕೆ ಕಂಡಿತು. ಹಾಗೂ ಹೀಗೂ ಈರ್ವರ ನಡುವೆ ತರಾವರಿ ಪತ್ರಗಳ ವಿಲೇವಾರಿ ನಡೆದು ಪರಸ್ಪರ ಬಿಟ್ಟಿರಲಾರದ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಆಗಾಗ ಕಾಲೇಜಿನ ಹೊರಾವರಣದಲ್ಲಿ ಸಿಗುತ್ತಿದ್ದರು. ಆತನ ಪಟ್ಟಣವೇ ಬೇರೆಯಾದುದರಿಂದ ಆತ ಆಕೆಯನ್ನು ನೋಡಲೆಂದೇ ದೂರದ ಅವಳ ಕಾಲೇಜಿನ ಹತ್ತಿರಕ್ಕೆ ಬಂದು ನಿಲ್ಲುತ್ತಿದ್ದ. ಎಲ್ಲವೂ ಪತ್ರಗಳ ಮೂಲಕ ಮೊದಲೇ ಹೇಳಲ್ಪಡುವ ಕಾರ್ಯಕ್ರಮಗಳಾಗುತ್ತಿದ್ದವು.

ಡಿಗ್ರೀ ಮುಗಿಸಿ ನೌಕರಿ ಹಿಡಿದ ರಮೇಶ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ. ನಂತರ ಶೀಘ್ರದಲ್ಲಿ ಆತನಿಗೆ ಶಾಲಿನಿಯನ್ನು ಮದುವೆಯಾಗಿಬಿಡುವ ಬಯಕೆ ಜಾಸ್ತಿಯಾಗಿ ತಿಳಿಸಿದ್ದ. ಹೇಗೂ ಇಬ್ಬರ ಇಚ್ಛೆಯೂ ಒಂದೇ ಆಗಿದ್ದರಿಂದ ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಎಂಬಂತೇ ಆಗಿತ್ತು. ಶಾಲಿನಿಯ ಪಾಲಕರಿಗೆ ಪತ್ರದ ಮೂಲಕ ವಿನಂತಿಸಿದ್ದ ರಮೇಶ. ಮೊದ ಮೊದಲು ವಿವಾದಗಳು ವಾಗ್ವಾದಗಳು ನಡೆದವು. ಅಪ್ಪನ ಕೋಪ ಅಮ್ಮನ ಅಸಡ್ಡೆ ಎಲ್ಲವನ್ನೂ ರಮೇಶನಿಗಾಗಿ ಅನುಭವಿಸಿದ್ದಳು ಶಾಲಿನಿ. ಆದರೂ ರಮೇಶನ್ನು ಮಾತ್ರ ತೊರೆಯಲು ಸಿದ್ಧಳಿರಲಿಲ್ಲ. ಹಿತೈಷಿಗಳನೇಕರು ತಿಳಿಹೇಳಿ ಎರಡೂ ಕಡೆಯ ಬೀಗರನ್ನು ಒಪ್ಪಿಸಿದರು. ಮದುವೆ ಬಹಳ ವಿಜೃಂಭಣೆಯಿಂದ ಶಿವಮೊಗ್ಗೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ನೆಂಟರಿಷ್ಟರು, ಸ್ನೇಹಿತರು, ಬಂಧುಬಳಗ ಅಂತೇಳಿ ಸುಮಾರು ೧೫೦೦ ಜನ ಸೇರಿದ್ದರು. ಊಟೋಪಚಾರ ವಗೈರೆಯೆಲ್ಲಾ ಪೊಗದಸ್ತಾಗಿತ್ತು ಎಂದು ಬಂದವರೆಲ್ಲಾ ಖುಷಿಯಾಗಿ ಎಲೆಯಡಿಕೆ ಮೆದ್ದು ಬಾಯಾಡಿಸುತ್ತಾ ಹರಸಿ ಹೋಗಿದ್ದರು.

ಗಂಡನಮನೆ ಸೇರಿದ ಶಾಲಿನಿಗೆ ಅತೀವ ಸಂತೋಷವಾಗಿತ್ತು. ಅಕ್ಕರೆಯ ಕಕ್ಕುಲಾತಿಯಲ್ಲಿ ರಮಿಸುವ ಪ್ರೀತಿಯ ಗಂಡ, ದೇವರಂಥಾ ಅತ್ತೆ-ಮಾವ, ಒಡಹುಟ್ಟಿದವರ ಪ್ರೀತಿ ತೋರುವ ನಾದಿನಿಯರು, ಉಂಡುಟ್ಟು ಸುಖವಾಗಿದ್ದ ಸಂಸಾರ......ಇನ್ನೇನು ಬೇಕು ಬದುಕಲು?

ಸೋಲುಗಳ ಬದಿಗಿರಿಸಿ ಗೆಲುವುಗಳನರಸುತ್ತ
ಆಲದಾ ಮರದಂತೆ ನಿಂತು ಶೋಭಿಸುತಾ
ಗಾಲಿಗಳ ಸಮಗೊಳಿಸಿ ನಡೆಸಿ ಜೀವನರಥವ
ಗೇಲಿಮಾಡುವ ಜಗಕೆ ಪಥವ ತೋರಿದಿರಿ

............ಮತ್ತದೇ ಇಂಪಾದ ಕಂಠ ಮುಂದುವರಿಸಿತ್ತು ಆ ಹಾಡನ್ನು....ಎಂತಹ ಆಪ್ತತೆ ತುಂಬಿದ ಹಾಡದು, ಅಬ್ಬಾ!

ಮದುವೆಯಾಗುವ ಮುನ್ನ ನೂರಾರು ಕನಸುಗಳ ಒಡತಿಯಾಗಿದ್ದಳು ಶಾಲಿನಿ. ಭರತನಾಟ್ಯವನ್ನು ಬಹುವಾಗಿ ಪ್ರೀತಿಸುತ್ತಿದ್ದ ಆಕೆ ಬಹಳ ಸುಂದರವಾಗಿ ನರ್ತಿಸುತ್ತಿದ್ದಳು. ತಾನೊಬ್ಬ ನರ್ತಕಿಯಾಗಿಯೂ ಜನಮನ ಗೆಲ್ಲುವ ಇರಾದೆ ಅವಳಿಗಿತ್ತು. ಕಿತ್ತೂರು ಚೆನ್ನಮ್ಮನೆಂದರೆ ಆಕೆಗೆ ಎಲ್ಲಿಲ್ಲದ ಪ್ರೀತಿ. ಅವಳನ್ನು ನೆನೆದಾಗಲೆಲ್ಲಾ ಆಕೆಗೆ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು. ಅನೇಕದಿನ ತನ್ನೊಳಗೇ ರಾಣಿ ಚೆನ್ನಮ್ಮಾಜಿಯನ್ನು ಆಹ್ವಾನಿಸಿಕೊಂಡು ಆವೇಶಭರಿತಳಾಗಿ ಬ್ರಿಟಿಷರನ್ನು ಕಂಡು ಬುಸುಗುಟ್ಟುವ ಸನ್ನಿವೇಶಕ್ಕೆ ಇಳಿದುಬಿಡುತ್ತಿದ್ದಳು. ಒಂದಲ್ಲಾ ಒಂದು ದಿನ ತಾನು ವೀರವನಿತೆಯಾಗಿ ದೇಶಪ್ರೇಮವನ್ನು ಮೆರೆಯಬೇಕೆಂಬ ಹಂಬಲ ಅವಳದಾಗಿತ್ತು. ಆದರೆ ಹರೆಯದ ಕರೆಯ ಹೊರಗಿನ ಎಲ್ಲಾ ಕರೆಯನ್ನೂ ಮೀರಿಸಿ ಪ್ರೇಮದ ಸೆಳೆತದಲ್ಲಿ ಬಿದ್ದಿದ್ದಳು, ಬಿದ್ದು ಮದುವೆಯಾಗಿ ಬಂದಿದ್ದಳು ಶಾಲಿನಿ.

ಮದುವೆಯಾಗಿ ೫-೬ ವರ್ಷಗಳು ಬಹಳ ಸುಖವಾಗಿ ನಡೆಯಿತು ಸಂಸಾರ. ಆಗಲೇ ಇಬ್ಬರು ಮಕ್ಕಳು ! ಮಕ್ಕಳ ಜತೆಯಲ್ಲಿ ಆಟವಾಡುತ್ತಾ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ ಶಾಲಿನಿಗೆ. ಒಂದಿನ ಇದ್ದಕ್ಕಿದ್ದಂತೇ ಆಫೀಸಿನಿಂದ ಬರುವಾಗ ರಮೇಶ ನಡೆಯಲು ಕಾಲಲ್ಲಿ ಸತುವೇ ಇಲ್ಲ ಎನ್ನುತ್ತಾ ಮನೆಗೆ ಬಂದ. ಬಂದ ಮಾರನೇ ದಿನದಿಂದ ಆತ ಮೇಲೇಳುವುದೇ ಕಷ್ಟವಾಯಿತು. ಗರಬಡಿದವಳಂತೇ ಆದ ಶಾಲಿನಿ ಕಂಡ ಕಂಡ ವೈದ್ಯರನ್ನೂ ದವಾಖಾನೆಯನ್ನೂ ಸಂಪರ್ಕಿಸಿ ಕಾರಣವೇನೆಂದು ತಿಳಿಯ ಬಯಸಿದಳು. ಹಲವು ಸಾವಿರ ಹಣ ಖರ್ಚಾದ ಮೇಲೆ ಒಬ್ಬರೇ ಒಬ್ಬ ವೈದ್ಯರು " ಅಮ್ಮಾ, ನೀವು ಭಯಪಡುವ ಅಗತ್ಯವಿಲ್ಲ, ನೀವು ಧೈರ್ಯ ತೆಗೆದುಕೊಳ್ಳಬೇಕು, ಮನುಷ್ಯನಿಗೆ ಬರದೇ ಮಂಗನಿಗೆ ಬರುತ್ಯೇ, ಇದು ಸಾವಿರದಲ್ಲೊಬ್ಬರಿಗೆ ಬರಬಹುದಾದ ಪಾರ್ಕಿನ್ಸನ್ ಕಾಯಿಲೆ ಅಂದರೆ ಒಂದು ರೀತಿಯ ನರದೌರ್ಬಲ್ಯ. ಇದಕ್ಕೆ ಇನ್ನೂ ಸಮರ್ಪಕವಾದ ಔಷಧಗಳು ಇಲ್ಲವಾದರೂ ಜೀವಕ್ಕೆ ಏನೂ ಅಪಾಯವಿಲ್ಲ. ನೀವೇ ಆದಷ್ಟೂ ತಾಳ್ಮೆಯಿಂದ ಅವರನ್ನು ನೋಡಿಕೊಳ್ಳಬೇಕು"

ಬಿಳಿಯಬಣ್ಣವೊಂದರ ಮಧ್ಯೆ ಕಪ್ಪು ಬಳಿದಂತೇ, ಹಾಲಿನ ಪಾತ್ರೆಯಲ್ಲಿ ಹಾಲಾಹಲದ ಹನಿ ಬಿದ್ದಂತೇ ಆಗಿಬಿಟ್ಟಿತ್ತು ಆ ಸಂಸಾರದಲ್ಲಿ. ಹತ್ತಾರು ಬರಸಿಡಿಲು ಒಮ್ಮೆಲೇ ಅಪ್ಪಳಿಸಿದಂತೇ ಆಗಿ ಶಾಲಿನಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳು ಬೇರೇ ಚಿಕ್ಕವರು. ಅವರನ್ನು ಸಂಭಾಳಿಸಿ ಓದಿಸಬೇಕು, ಮನೆವಾರ್ತೆ ಕೆಲಸವಾಗಬೇಕು, ಏಳಲಾರದ ಗಂಡನಿಗೆ ಉಪಚರಿಸಬೇಕು ....ಇದೆಲ್ಲಕ್ಕಿಂತ ಮಿಗಿಲಾಗಿ ದುಡಿಮೆಗೆ ಒಂದು ದಾರಿ ಬೇಕು. ಅವಡುಗಚ್ಚಿ ಬಂದ ಪರಿಸ್ಥಿತಿಯನ್ನು ತನ್ನ ಹಸ್ತದಲ್ಲೇ ಬಂಧಿಸಿ ಓದನ್ನು ಭಾಗಶಃ ಅಂಚೆತೆರಪಿನ ವಿಶ್ವವಿದ್ಯಾಲಯದ ಮೂಲಕ ಮುಗಿಸಿದಳು. ಹಾಗೆ ಮುಗಿಸುವ ಸಮಯ ತನ್ನಲ್ಲಿ ಇದ್ದ ಬಂಗಾರದ ವಡವೆಗಳನ್ನೂ ಮಾರಬೇಕಾಗಿ ಬಂತು. ಅವರಿವರ ಕಚೇರಿಯಲ್ಲಿ ಪಾರ್ಟ್ ಟೈಮ್ ನೌಕರಿ ನಿಭಾಯಿಸಿ ದುಡಿಯುತ್ತಿದ್ದಳು. ಅದೂ ಸಾಲದಾಗ ಸಿರಿವಂತರ ಮನೆಗಳಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸಮಾಡಿ ಅಂತೂ ತನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಾಗ ದಿನಪತ್ರಿಕೆಯ ಜಾಹೀರಾತು ನೋಡಿ, ಅರ್ಜಿಹಾಕಿಕೊಂಡು ಶಾಲೆಯ ಅಧ್ಯಾಪಕಿಯಾಗಿ ಸೇರಿಕೊಂಡಳು. ಅಲ್ಲಿಂದಾಚೆಗೆ ಅವಳ ದಿನಚರಿಯೇ ಬದಲಾಯಿತು.

ಸರಕಾರೀ ನೌಕರಿಯೊಂದು ಸಿಕ್ಕಿತ್ತು. ಊಟಕ್ಕೆ ತೊಂದರೆಯಿರಲಿಲ್ಲ. ಆದರೆ ಹರೆಯದ ಕೂಗು ಆ ಬಯಕೆಗಳು, ಆ ಹಲವು ಕನಸುಗಳು ಅವೆಲ್ಲಾ ಹಾಗೇ ಮುರುಟಿಹೋದವು. ಆಗಾಗ ಆಗಾಗ ಸಹೋದ್ಯೋಗೀ ಗಂಡಸರ ಕಿರುಕುಳ ತಪ್ಪಲಿಲ್ಲ. ಸಮಾಜದ ಅವಹೇಳನಕಾರೀ ಮಾತುಗಳನ್ನೂ ಸಹಿಸಿದಳು ಶಾಲಿನಿ. ಮಕ್ಕಳನ್ನೂ ಓದಿಸುತ್ತಾ, ಗಂಡನನ್ನೂ ಪ್ರೀತಿಯಿಂದ ಸೇವೆಗೈಯ್ಯುತ್ತಾ ಊರಿಂದೂರಿಗೆ ಆಗಾಗ ವರ್ಗವಾಗಿ ಹೋಗುತ್ತಾ ಕಾವೂರಿಗೆ ಬಂದು ಹತ್ತು ವರುಷಗಳೇ ಕಳೆದಿದ್ದವು. ಅಲ್ಲಿಗೆ ಅವಳ ಕೆಲಸದ ವರ್ಷಗಳ ಮುಕ್ತಾಯ ಇನ್ನೇನು ಹತ್ತೇ ವರ್ಷವಿದ್ದುದರಿಂದ ಊರ ಸಹೃದಯರು ಅವಳನ್ನು ಅಲ್ಲೇ ಇರಿಸಿಕೊಳ್ಳುವ ಪ್ರಯತ್ನಮಾಡಿದ್ದರು. ಕಾವೂರ ಜನರಿಗೆ ದೈವಾಂಶ ಸಂಭೂತಳಂತೇ ಕಾಣಿಸಿದ ಉಚ್ಚಕುಲಪ್ರಸೂತ ಶಾಲಿನಿ ಮಕ್ಕಳಿಗೆಲ್ಲಾ ಅಮ್ಮ, ಅಕ್ಕ, ಚಿಕ್ಕಮ್ಮ ಹೀಗೆಲ್ಲಾ ಇದ್ದಂತೇ ಭಾಸವಾಗುತ್ತಿತ್ತು. ತನ್ನ ಜೀವನದಲ್ಲಿ ತಾನೇನೂ ಸಾಧಿಸಲಾಗದಿದ್ದರೂ ತನ್ನಿಂದ ಅಕ್ಷರ ಕಲಿತ ಮಕ್ಕಳಾದರೂ ಉನ್ನತ ಮಟ್ಟದಲ್ಲಿ ಬೆಳಗಲಿ ಎಂಬ ಇಚ್ಛೆ ಶಾಲಿನಿಯದ್ದಾಗಿತ್ತು.

ಬಂಧಿಯಾದರೂ ಜಗದಿ ಬಂಧನವ ಕಿತ್ತೆಸೆದು
ನಿಂದನೆಗಳನೇಕವನು ಹಿಂದೆ ದೂಡುತಲೀ
ನಂದಿಹೋಗದ ನಂದಾದೀಪವನು ತಾ ಬೆಳಗಿ
ಇಂದು ಹೊರಟಿರಿ ನಿಮಗೆ ಶುಭದಾ ವಿದಾಯ

----ಹುಡುಗಿ ಹಾಡುತ್ತಾ ಹಾಡಿನ ಕೊನೆಯ ಚರಣಕ್ಕೆ ಬರುವ ವೇಳೆಗೆ ಶಾಲಿನಿಗೆ ತನ್ನ ಇಲ್ಲಿಯವರೆಗಿನ ಬದುಕಿನ ಸಿಂಹಾವಲೋಕನವಾಗಿತ್ತು. ಸರಕಾರೀ ನಿರ್ದೇಶನದಂತೇ ವಯಸ್ಸಿನ ಮಿತಿ ದಾಟಿದ್ದರಿಂದ ಮುಪ್ಪಿನಾವಸ್ಥೆಗೆ ಕಾಲಿಡುವ ಶಾಲಿನಿಗೆ ನಿವೃತ್ತಿ ಅನಿವಾರ್ಯವಾಗಿತ್ತು. ಮಕ್ಕಳ ಪ್ರೀತಿಯನ್ನು ಮರೆತು ತಾನೆಂದೂ ದೂರಹೋಗಲಾಅದ ಸ್ಥಿತಿ ಅವಳದಾದರೂ, ಗ್ರಾಮಸ್ಥರಿಗೆ ಅವಳು ಇನ್ನೂ ತಮ್ಮ ಮಕ್ಕಳಿಗೆ ಬೋಧಿಸಲಿ ಎಂಬ ಹತ್ತಿಕ್ಕಲಾರದ ಅನನ್ಯ ಅನಿಸಿಕೆ ಇದ್ದರೂ ನಿರ್ವಾಹವಿಲ್ಲದ ದಿನ ಬಂದೇಬಿಟ್ಟಿತ್ತು. ಊರ ಜನರೆಲ್ಲಾ ಸುಮಾರು ಸಾವಿರಾರು ಮಂದಿ ಸೇರಿದ್ದರು. ಎಲ್ಲರ ಸಮ್ಮುಖದಲ್ಲಿ ಅಂದು ಶಾಲಿನಿಗೆ ಸನ್ಮಾನ ನಡೆಸಲ್ಪಟ್ಟಿತು. ಊರ ಜನ ಮೈಯ್ಯೆಲ್ಲಾ ಕಿವಿಯಾಗಿ ಶಾಲಿನಿಯ ಜೀವನಗಾಥೆಯನ್ನು ಅವಳ ಬಾಯಿಂದಲೇ ಕೇಳಿ ಣ್ಣೀರ್ಗರೆದರು. ಸರಕಾರ ಸೇವೆ ನಿಲ್ಲಿಸುವಂತೇ ತಿಳಿಸಿದರೂ ಸಾರ್ವಜನಿಕರು ಅವಳ ಸೇವೆಯನ್ನು ಇನ್ನೂ ಹಲವು ವರ್ಷ ನಡೆಸಿಕೊಡುವಂತೆಯೂ ಅದಕ್ಕೆ ಪ್ರತಿಫಲವಾಗಿ ಊರವರೇ ಅವಳ ಸಂಬಳವನ್ನು ಭರಿಸುತ್ತೇವೆಂದೂ ವಿನಂತಿಸಿದರು. ಜನರ ಪ್ರೀತಿವಿಶ್ವಾಸಗಳಿಗೆ ಮರುಗಿದ ಶಾಲಿನಿ ತನ್ನಿಂದಾಗುವಷ್ಟು ಕಾಲ ಊರವರಿಂದ ಚಿಕ್ಕಾಸನ್ನೂ ಪಡೆಯದೇ ಪ್ರೀತಿಯಿಂದ ಇನ್ನೂ ಹಲವು ಕಿತ್ತೂರು ರಾಣಿಯರನ್ನು ಸೃಜಿಸಿದಳು.

Sunday, November 7, 2010

ಕಾವ್ಯ ಕಾರಣ

ಚಿತ್ರಋಣ : ಅಂತರ್ಜಾಲ
ಕಾವ್ಯ ಕಾರಣ

[ ಚಿತ್ರವನ್ನು ಬಹಳ ಜನ ನೋಡಿರುತ್ತೀರಿ, ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತಿದ್ದರೆ ಅದರ ವಿಶೇಷ ತಿಳಿಯುತ್ತದೆ ! ಮನದ ಕಲ್ಪನೆಗೆ ಅದನ್ನು ಸಾಂಕೇತಿಕವಾಗಿ ಬಳಸಿದ್ದೇನೆ. ದೀಪಾವಳಿಯನ್ನು ಮಳೆಯಿದ್ದರೂ ಹರುಷದಿಂದಲೇ ಆಚರಿಸಿ ಬೀಳ್ಕೊಟ್ಟೆವು, ಮತ್ತೆ ಬರಲಿ ; ಶುಭವ ತರಲಿ ದೀಪಾವಳಿ ಎಂದು ಜಗನ್ನಿಯಾಮಕನಲ್ಲಿ ಪ್ರಾರ್ಥಿಸಿ ಇಂದು ಕವನವನ್ನು ನಿಮ್ಮ ಮುಂದಿಡುವ ಮನಸ್ಸು, ಓದುವಿರಲ್ಲವೇ ? ]

ಮಥಿಸಿ ಮನದ ಶರಧಿಯನ್ನು
ಚಿಂತನೆಯ ಕಡೆಗೋಲಲಿ
ಚಕಿತನಾಗಿ ಕಾದು ಕುಳಿತೆ ಬರುವ ವಿಧದ ಬರಹಕೇ
ಮುಕುತಿಯಿಲ್ಲ ಚಿಂತೆಗಳಿಗೆ
ಅಂತ್ಯವಿಲ್ಲ ನೋವುಗಳಿಗೆ
ಶಕುತನಾಗಿ ಮೀರಿ ಬೆಳೆವ ಪರಿಯ ತಿಳಿಯುವುದಕೇ

ಒಂದು ಕವನ ಬರೆಯುವಾಗ
ನೊಂದು ಬರೆವ ರೀತಿ ತರವೇ ?
ಇಂದು ನನ್ನ ಮಿತ್ರರೆಲ್ಲ ಕರೆದು ಬೈವರಲ್ಲವೇ ?
ಮಿಂದು ಸ್ವಚ್ಛವಾದ ದೇಹ
ಚಂದದಿಂದ ಹೊಳೆಯುವಂತೆ
ಬಂಧಿಸೊಮ್ಮೆ ಈ ಮನವನು ಚೊಕ್ಕಗೊಳಿಸಬೇಡವೇ ?

ಅಡಿಗೆಮಾಡುವಾಗ ಉಪ್ಪು
ಸಿಹಿಯು ಹುಳಿಯು ಖಾರವನ್ನು
ಹದವನರಿತು ಹಾಕಿದಾಗ ರುಚಿಯು ಸಹಜವಪ್ಪುದು
ಗಡಿಬಿಡಿಯಲಿ ಬರೆದು ಮೂರು
ಪದದ ಜೊತೆಗೆ ಇನ್ನೊಂದಾರು
ಸೇರಿಸಲ್ಕೆ ಬರೆದ ಪದ್ಯ ನೆಲವ ಕಚ್ಚುತಿರ್ಪುದು !

ಬರೆದುದೆಲ್ಲಾ ಓದಬೇಕೆ ?
ಓದುವುದಕೆ ಸಾಧ್ಯವುಂಟೇ ?
ನನ್ನ ಪಾತ್ರೆಯಲ್ಲಿ ಒಳಗೆ ಹಣಕಿ ಇಣುಕಿ ನೋಡುತಾ
ಚಿನ್ನದಂಥ ಶಬ್ದಗಳನು
ಕನ್ನಡಿಯೊಳು ತೆರೆದುತೋರಿ
ಬನ್ನಿರಯ್ಯ ಓದಲೆಂದು ಕರೆದು ನಿಂತು ಕಾಯುತಾ

ಜೀವದಲ್ಲಿ ಭಾವತುಂಬಿ
ಭಾವದಲ್ಲಿ ಜೀವತುಂಬಿ
ಜೀವ-ಭಾವ ಸಮ್ಮಿಳಿತದ ಸಂವಿಧಾನ ಬರೆಹವು
ಆವ ಘಳಿಗೆ ಬರೆಯಬೇಕು
ಎಲ್ಲಿ ಕುಳಿತು ಹೊಸೆಯಬೇಕು
ಯಾವೊಂದನು ತಿಳಿಯದಂಥ ಸಂಯಮದಾ ಶಿಖರವು

ಒಳಗೆ ಇರುವ ಕಾಣದಾತ
ಇಳೆಗೆ ಹಾರಿ ಹತ್ತಿ ಕುಣಿದು
ಬಳಸಿ ಬಂದು ಹರಿವ ರೂಪ ಕಾವ್ಯ-ಕಾದಂಬರಿ
ಅಳುಕು ಮನದ ಅಡುಗೆಗಳನು
ಬಳುಕುತಲೇ ಹೊರಗೆ ಇಡುವ
ಬಡಿವಾರದ ಮನದ ಕನ್ಯೆ ಆಗೆ ನಿರಾಡಂಬರಿ

Thursday, November 4, 2010

ವಿಜ್ಞಾನ ದೀಪಾವಳಿ



ವಿಜ್ಞಾನ ದೀಪಾವಳಿ

ಈ ಹೆಸರು ಬಹುಶಃ ನಿಮಗೆ ವಿಚಿತ್ರವೆನಿಸುತ್ತದೆ. ದೀಪಾವಳಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅವಲೋಕಿಸಿ ಜತೆಗೆ ಕೆಲವು ಪೌರಾಣಿಕ ಮಹತ್ವಗಳನ್ನೂ ಆಚರಣೆಯನ್ನೂ ಸ್ವಲ್ಪ ಅರಿಯೋಣವೆಂದು ಅತ್ತಕಡೆ ಹೊರಳಿದೆ. ಅದರ ಪರಿಣಾಮವಾಗಿ ಸಿಕ್ಕ ಕೆಲವು ಮಾಹಿತಿಗಳನ್ನು ಹಲವು ಶುಭಾಶಯಗಳೊಂದಿಗೆ ನಿಮಗೆ ವರ್ಗಾಯಿಸಿಬಿಟ್ಟರೆ ದೀಪಾವಳಿ ಕೆಲಮಟ್ಟಿಗೆ ಅರ್ಥಪೂರ್ಣವಾಗಬಹುದೆಂಬ ಧೋರಣೆಯಿಂದ ಈ ಲೇಖನ.

ತ್ರಯೋದಶಿ: ಆಚರಣೆ ಪ್ರಾರಂಭ
ಇವತ್ತು ಹಳ್ಳಿಗಳಲ್ಲಿ ಹಂಡೆಯನ್ನು ತೊಳೆದು, ಅದರ ಹೊರಮೈಗೆ ಕೆಮ್ಮಣ್ಣು ಬರೆದು, ನೀರನ್ನು ತುಂಬಿ, ಹಂಡೆಯ ಕಂಠಭಾಗಕ್ಕೆ ಶಿಂಡ್ಲೆ ಅಥವಾ ಹಿಂಡ್ಲೆ[ಕಹಿ ಹಿಂಡ್ಲೆ] ಬಳ್ಳಿಯನ್ನು ಸಾಂಕೇತಿಕ ರಕ್ಷಾಸೂತ್ರವಾಗಿ ಹಾಕುತ್ತಾರೆ. ಮಾರನೇ ದಿನದ ಅಭ್ಯಂಜನಕ್ಕೆ ಇಂದೇ ತಯಾರಿ. ಇಲ್ಲಿ ವಿಶೇಷವಾದ ವೈಜ್ಞಾನಿಕತೆಯಿರದಿದ್ದರೂ ತಾಮ್ರದ ಹಂಡೆಯಲ್ಲಿ ರಾತ್ರಿಯೆಲ್ಲಾ ಉಳಿಯುವ ನೀರು ಅದರ ಕಿಲುಬನ್ನು ಭಾಗಶಃ ಹೀರಿಕೊಂಡು ನಮ್ಮ ಮೈಗೆ ಬೇಕಾದ ಪೂರಕ ತಾಮ್ರದ ಅಂಶವನ್ನು ಒದಗಿಸುತ್ತದೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿದರೂ ಬಹಳ ಒಳ್ಳೆಯದೆಂಬುದು ನಮಗೆ ತಿಳಿದೇ ಇದೆ. ಲೋಹಗಳಲ್ಲಿ ಉತ್ಕೃಷ್ಟ ಲೋಹವೆಂದರೆ ಬಂಗಾರ. ನಾವು ಈಗ ಪ್ಲಾಟೀನಮ್ ಎಂದೆಲ್ಲಾ ಏನೇ ಕೊಚ್ಚಿದರೂ ಬಂಗಾರದ ಮೆರುಗು ಅದಕ್ಕಿಲ್ಲ. ನಂತರ ಬರುವುದು ಬೆಳ್ಳಿ, ಆ ನಂತರ ತಾಮ್ರ, ನಂತರ ಹಿತ್ತಾಳೆ, ನಂತರ ಕಂಚು, ನಂತರ ಕಬ್ಬಿಣ ಹೀಗೇ.... ಹಾಗಂತ ಹಂಡೆಯನ್ನು ಬಂಗಾರದಲ್ಲಿ ಹಿಂದಿನ ಕಾಲದ ಅರಸರೂ ಮಾಡಿಸಿದ್ದು ಸುಳ್ಳು. ಅದರ ಬದಲಿಗೆ ತಾಮ್ರವನ್ನೇ ಬಹುತೇಕ ಎಲ್ಲೆಡೆಗೂ ಬಳಸಲಾಗುತ್ತದೆ.

ಏನೂ ಇಲ್ಲದ ಬಡವರಿಗೆ ಮಣ್ಣಲ್ಲಿ ತಯಾರಾದ ಹಂಡೆ ಕೂಡ ಸಿಗುತ್ತದೆ. ನಮ್ಮಲ್ಲಿ ಆಚರಣೆ ನಡೆಸುವಾಗ ಎಲ್ಲರಿಗೂ ಅದು ಸಮನ್ವಯವಾಗಲಿ ಎನ್ನುವ ದೃಷ್ಟಿಯಿಂದ ಮಣ್ಣ ಹಂಡೆಗೂ ಕೂಡ ಮಹತ್ವವಿದೆ. ಮಣ್ಣ ಬೋಗುಣಿಗಳಲ್ಲಿ ಮಡಿಕೆಕುಡಿಕೆಗಳಲ್ಲಿ ಮಾಡುವ ಅಡಿಗೆಯ ರುಚಿ ಇವತ್ತಿನ ಯಾವ ಪಾತ್ರೆಯಲ್ಲೂ ನಮಗೆ ಸಿಗುವುದಿಲ್ಲ. ನಾವು ಹುಟ್ಟಿಬಂದ ಈ ಭೂಮಿಯ ಧಾತುವನ್ನೇ ಬಳಸಿ ಮಾಡುವ ಪಾತ್ರೆಗಳು ಶ್ರೇಷ್ಠವೇ ಸರಿ.

ಇನ್ನು ಹಂಡೆಯ ಸುತ್ತ ಬರೆಯುವ ಕೆಮ್ಮಣ್ಣು ಮತ್ತು ಹಾಕುವ ಶಿಂಡ್ಲೆ ಬಳ್ಳಿ ಕೇವಲ ನಮ್ಮ ಸಂಭ್ರಮಕ್ಕೆ. ಅಂದು ನರಕ ಚತುರ್ದಶಿಯಂದು ಶ್ರೀಕೃಷ್ಣ ನರಕಾರಸುರನನ್ನು ವಧಿಸಿದಾಗ ಆದ ಮೈಕೈ ನೋವನ್ನು ಅಭ್ಯಂಜನಮಾಡಿ ಕಳೆದುಕೊಂಡನಂತೆ. ಆ ನೆನಪಿಗೆ ಅಂದಿನಿಂದ ಜನ ಉತ್ಸವಕ್ಕೆ, ಉತ್ಸುಕತೆಗೆ ಬೇಕಾಗಿ ಅಲಂಕಾರಕ್ಕಾಗಿ ಅದನ್ನು ಬಳಸಿರಬೇಕು.

ಬೂದುಗಳು ಅಥವಾ ಬೂರೆ ಕಳು [ಬೂರೆ ಹಾಯುವುದು ]

ಕೆಲವುಕಡೆ ಈ ರಾತ್ರಿ ತಮಾಷೆಗೆ ಕಳ್ಳತನಮಾಡುವುದಿದೆ. ಈ ರಾತ್ರಿ ಕದ್ದವರು ಸಿಕ್ಕಿಬಿದ್ದರೂ ಯಾರೂ ಶಿಕ್ಷಿಸುವುದಿಲ್ಲ. ಆದರೆ ತಮಾಷೆ ಅತಿಯಾದರೆ ಮಾತ್ರ ಅದು ಅಪಾಯಕಾರಿಯಾಗುತ್ತದೆ! ಒಂದು ತಮಾಷೆಯ ಮತ್ತೊಂದು ಅಪಾಯದ ಎರಡು ನೈಜ ಘಟನೆಗಳನ್ನು ಹೇಳುತ್ತೇನೆ ಕೇಳುವಂತವರಾಗಿ:

ನಾವು ಚಿಕ್ಕವರಿದ್ದಾಗ ಬೂರೆಹಬ್ಬ ಅಥವಾ ಬೂದೆ ಹಬ್ಬ ಎಂದರೆ ಒಂಥರಾ ಒಳಗೊಳಗೇ ನಮಗೆಲ್ಲಾ ಹೆದರಿಕೆ ಮಿಶ್ರಿತ ಸಂತೋಷ. ಬೂದೆ ಹಬ್ಬದ ರಾತ್ರಿ ಕಳ್ಳತನ ಸರ್ವೇ ಸಾಮಾನ್ಯವಾಗಿದ್ದ ಕಾಲ. ಆ ಕಾಲದಲ್ಲಿ ನಮ್ಮ ಹಳ್ಳಿಯ ತೋಟಗಳಲ್ಲಿ ಅಡಿಕೆ-ತೆಂಗಿನ ಮರಗಳನ್ನು ಹತ್ತಿ ಗೊನೆಗಳನ್ನೂ, ಸೀಯಾಳಗಳನ್ನೂ[ಎಳೆನೀರುಗೊನೆಗಳನ್ನೂ] ಕಡಿದು ಇಳಿಸಿ ಅವುಗಳಲ್ಲಿ ಕೆಲವನ್ನು ಉಪಯೋಗಿಸಿ ಮತ್ತೆ ಕೆಲವನ್ನು ಎಲ್ಲಿಗೋ ಕೊಂಡುಹೋಗಿ ಬಿಟ್ಟುಹೋಗುತ್ತಿದ್ದರು. ಕೆಲವೊಮ್ಮೆ ಪಕ್ಕದ ಮನೇದು ನಮ್ಮನೆಗೆ ನಮ್ಮನೇದು ಮತ್ಯಾರದೋ ಮನೆಗೆ ಅದ್ಯಾವುದೂ ಇಲ್ಲದಿದ್ದರೆ ಎಲ್ಲವನ್ನೂ ಹೊತ್ತು ಹತ್ತಿರದ ದೇವಸ್ಥಾನದ ಅಂಗಳಕ್ಕೆ ಹೀಗೆಲ್ಲಾ. ಒಂದು ವರ್ಷ ರಾತ್ರಿ ಕೊಟ್ಟಿಗೆಗೆ ಹೋಗಿ, ಅಟ್ಟದಲ್ಲಿರುವ ಒಣಹುಲ್ಲು ತೆಗೆದು ದನಗಳಿಗೆ ತಿನ್ನಲು ಕೊಟ್ಟು, ಅವುಗಳನ್ನು ಹೆದರಿಸಿ ಕೂಗಿಸಿ, ಹುಲ್ಲಿನಿಂದ ಬೆಚ್ಚುಮಾಡಿ ಕೊಟ್ಟಿಗೆಯ ಬಾಗಿಲಲ್ಲಿ ನಿಲ್ಲಿಸಿ, ಅದರ ಕೈಲಿ ದೊಣ್ಣೆಯೊಂದನ್ನು ಕೊಟ್ಟು, ಆ ಬೆಚ್ಚಿನ ಕಾಲ ಪಕ್ಕದಲ್ಲಿ ಎರಡು ತಿನ್ನಲುಬಾರದಷ್ಟು ಎಳೆಯ ಬಾಳೆಗೊನೆ[ಬಾಳೆ ಜಿಕ್ಕು] ತಂದಿಟ್ಟು ಹೋಗಿದ್ದರು. ಯಾರು ಎಂದು ಯಾರೂ ಕೇಳುವುದಿಲ್ಲ, ಯಾರೂ ಆಬಗ್ಗೆ ಬೇಸರಗೊಳ್ಳುವುದೂ ಇಲ್ಲ. ಇದು ಹಬ್ಬದ ಒಂದು ಅಂಗ.

ಇನ್ನು ಅಪಾಯದ ಒಂದು ಘಟನೆ: ನಮ್ಮೂರ ಮುಖ್ಯರಸ್ತೆಯಲ್ಲಿ ನಮ್ಮೂರಿಂದ ಸುಮಾರು ೩ ಕೀ.ಮೀ ದೂರದಲ್ಲಿ, ದೊಡ್ಡ ದೊಡ್ಡ ಸೈಜುಗಲ್ಲುಗಳನ್ನು ತಂದು ಹಾಕಿ ಅದನ್ನು ತೆಂಗಿನ ಮಡಲಿನಿಂದ[ತೆಂಗಿನ ಗರಿಯಿಂದ] ಮುಚ್ಚಿಬಿಟ್ಟಿದ್ದರಂತೆ. ನಮ್ಮ ತಾಲೂಕಿನ ವೈದ್ಯರೊಬ್ಬರು ಯಾರದೋ ಅನಿವಾರ್ಯತೆಯಲ್ಲಿ ರೋಗಿಯೊಬ್ಬನಿಗೆ ಚಿಕಿತ್ಸೆ ಕೊಡಲು ಹೋಗಿದ್ದವರು ಇದೇ ರಸ್ತೆಯಲ್ಲಿ ಮರಳುತ್ತಿದ್ದರು. ಹೇಳಿಕೇಳಿ ಶೀಕು ಯಾರನ್ನೂ ಕೇಳಿಯೋ ಹಬ್ಬದ ಸಮಯ ಆಮೇಲೆ ಬರೋಣ ಅಂತೆಲ್ಲಾ ನೋಡಿಯೋ ಬರುವುದಿಲ್ಲವಲ್ಲ! ರಾತ್ರಿ ಸುಮಾರು ೧೧ ಘಂಟೆಯ ವೇಳೆ ಅಂತ ಲೆಕ್ಕ ಆಮೇಲೆ ತೆಗೆದಿದ್ದು. ಡಾಕ್ಟರು ಪರತ್ ಹೊರಟವರು ಮಬ್ಬಿನ ಬೆಳಕಿನಲ್ಲಿ, ಮುಚ್ಚಿಟ್ಟ ಕಲ್ಲುಗಳಮೇಲೆ ಬೈಕು ಓಡಿಸಿ ಬಿದ್ದು ತಲೆಯೊಡೆದು ಹೋಯಿತು. ಆ ನಂತರ ಅದು ಹಳ್ಳಿಯ ರಸ್ತೆ, ಯಾರೂ ಆ ಕಡೆಯಿಂದ ಪಾಸಾಗಿರಲಿಲ್ಲ. ಯಾರೋ ಪುಣ್ಯಾತ್ಮರು ಅನಿರೀಕ್ಷಿತವಾಗಿ ಅಲ್ಲಿಗೆ ತಮ್ಮ ಬೈಕಿನಲ್ಲಿ ಬಂದವರು ಕಂಡು ಹತ್ತಿರದ ಹಳ್ಳಿಯ ಮನೆಗಳಿಗೆ ಓಡಿ ಜನರನ್ನು ಕರೆತರುವಾಗ ವೈದ್ಯರು ಸಣ್ಣ ಜೀವದಿಂದಿದ್ದರು. ಎಲ್ಲರೂ ಸೇರಿ ಅವರಿಗೆ ನೀರು ಹಾಕಿ ಹೊತ್ತುಕೊಂಡು ಬೇರೆ ಯಾವುದೋ ಸಿಕ್ಕವಾಹನದಲ್ಲಿ ದೂರದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರಾದರೂ ವೈದ್ಯರು ಬದುಕುಳಿಯಲಿಲ್ಲ. ಅನ್ಯಾಯವಾಗಿ ಸಾವು ಉತ್ತಮ ಹಾಗೂ ಒಳ್ಳೆಯ ವೈದ್ಯರೊಬ್ಬರನ್ನು ಸೆಳೆದುಕೊಂಡಿತು.[ ಆ ವೈದ್ಯರ ಹೆಸರು ಡಾ| ಅವಧಾನಿ.] ರಸ್ತೆಯಲ್ಲಿ ಕಲ್ಲುಹಾಕಿ ಮಜಾನೋಡಿದ ಆ ಅವಿವೇಕಿಗಳು ಯಾರು ಎಂಬುದು ಇಂದಿಗೂ ನಿಗೂಢ. ಆದರೆ ಅಂತಹ ಘಟನೆ ಮತ್ತೆ ಮರುಕಳಿಸಲಿಲ್ಲ ಎಂಬುದು ಸಂತಸದ ವಿಷಯ.

ಮೊದಲನೆಯ ದಿನದ ಆಚರಣೆ

ನಸುಕಿನಲ್ಲೇ ಎದ್ದು ಮುಖಮಾರ್ಜನೆ-ಶೌಚವನ್ನು ಪೂರೈಸಿ ಒಳಬಂದಮೇಲೆ ದೇವರಕೋಣೆಯಲ್ಲಿ ಹಾಕಿರುವ ಮಣೆಯಮೇಲೆ ಮಕ್ಕಳನ್ನೂ ಸೇರಿಸಿದಂತೇ ದೊಡ್ಡವರಿಗೆಲ್ಲಾ ಹೆಂಗಳೆಯರು ಎಣ್ಣೆಹನಿಸಿ[ ನೆತ್ತಿಗೆ, ಭುಜಗಳಿಗೆ ಎಣ್ಣೆ ಯನ್ನು ಚಮಚದಿಂದ ಬಸಿಯುವುದು] ಆರತಿ ಬೆಳಗುವುದು, ಮಂಗಲಾಕ್ಷತೆ ಎರಚುವುದು ಸಂಪ್ರದಾಯ. ಅಂದಿನ ದಿನ ಶ್ರೀಕೃಷ್ಣನಿಗೆ ಮೈಗೆಲ್ಲಾ ಎಣ್ಣೆ ಹಚ್ಚಿ ಮಾಲಿಶ್ ಮಾಡಿದ್ದರಂತೆ. ಅದೇ ನೆನಪಿನಲ್ಲಿ ಈ ಪ್ರಕ್ರಿಯೆ. ವೈಜ್ಞಾನಿಕವಾಗಿ ನೋಡಿದರೆ ಈಗ ಚಳಿಗಾಲ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ. ಅದರ ರಕ್ಷಣೆಗೆ ಎಣ್ಣೆಮಜ್ಜನ ಒಳ್ಳೆಯ ಮಾರ್ಗ. ಹೀಗಾಗಿ ಚರ್ಮ ರಕ್ಷಣೆಯೇ ಮುಖ್ಯಕಾರಣವಾಗಿ ವರುಷದಲ್ಲಿ ಒಮ್ಮೆಯಾದರೂ ಈ ರೀತಿ ಸ್ನಾನ ಮಾಡಲಿ ಎಂದು ಅದನ್ನೇ ಶಾಸ್ತ್ರವನ್ನಾಗಿಸಿದರು. ನಾವು ಚಿಕ್ಕವರಿದ್ದಾಗ ಎಲ್ಲಾದರೂ ತಪ್ಪಿಸಿಕೊಂಡು ಓಡುವುದಿತ್ತು. ಅದಕ್ಕೇ "ಎಣ್ಣೆ ಹಚ್ಚಿ ಸ್ನಾನಮಾಡದವರ ಮೈ ಬೂದಿ ಬೂದಿಯಾಗುತ್ತದಂತೆ " ಎಂದು ಹೆದರಿಸುತ್ತಿದ್ದರು. ಪ್ರಾಯಶಃ ಈ ದೃಷ್ಟಿಯಲ್ಲಿ ಇದು ಬೂದೆ ಹಬ್ಬ.

ಬೂದೆ ಹಬ್ಬದ ದಿನ ಕೊಟ್ಟಿಗೆಯಲ್ಲಿರುವ ದನಗಳಿಗೂ ನಮಗೆ ಸಿಕ್ಕ ಮನ್ನಣೆಯೇ ಸಿಗುತ್ತದೆ. ನಸುಬೆಳಕಿನಲ್ಲಿ ದೀಪವೊಂದನ್ನು ಉರಿಸಿ ಎಲ್ಲಾ ದನಗಳಿಗೂ ಮಂಗಲಾಕ್ಷತೆ ಎರಚಿ, ಎಣ್ಣೆಹನಿಸುವುದು ಪದ್ಧತಿ. ಬೇಗ ಎಬ್ಬಿಸಿದ್ದು ಯಾಕೋ ಎಂದು ದನಗಳು ಕಂಗಾಲಾಗಿ ನೋಡುತ್ತಿರುವಾಗ ಹಿರಿಯದನಗಳು ಚಿಕ್ಕವುಗಳಿಗೆ ತಮ್ಮ ಹಿಂದಿನ ಅನುಭವ ಹೇಳುತ್ತಿದ್ದವೋ ಏನೋ! ಆನಂತರ ಅವುಗಳಿಗೆ ಹುಲ್ಲು ಹಾಕಿ ನಮಸ್ಕರಿಸಿದ ನಂತರವೇ ನಮಗೆಲ್ಲಾ ಎಣ್ಣೆಹನಿಸುವುದು.

ಮೂರು ದಿನದ ಭಾಗ್ಯ --ಬಲೀಂದ್ರ ರಾಜ್ಯಭಾರ

ಪ್ರಹ್ಲಾದನ ಮೊಮ್ಮಗ ಬಲಿ. ತನ್ನ ಧಾರಾಳತನದಿಂದ ಬಲಿಚಕ್ರವರ್ತಿಯಾದ. ಸಂಪತ್ತು ಹೇರಳ ಸಂಗ್ರಹಣೆಯಾದ ಮೇಲೆ ರಾಜ್ಯವನ್ನು ಬೇಕಷ್ಟು ವಿಸ್ತರಿಸಿದ. ಒಮ್ಮೆ ಆತನಿಗೊಂದು ಆಸೆ ಬಂತು. ತಾನು ಯಾಕೆ ದೇವಲೋಕವನ್ನೂ ಆಳಬಾರದು ಎಂದು. ಅದಕ್ಕೆ ಬೇಕಾಗಿ ಆತ ೧೦೦ ಯಾಗಗಳನ್ನುಮಾಡಿದ. ಯಾಗದ ಫಲವಾಗಿ ಅಜೇಯ ರಕ್ಷಾಕವಚವನ್ನೂ ಪಡೆದ. ದೇವಲೋಕಕ್ಕೆ ದಾಳಿಯಿಟ್ಟು ದೇವತೆಗಳನ್ನೆಲ್ಲಾ ನಡುಗಿಸಬೇಕು, ಅದಕ್ಕೂ ಮುನ್ನ ಪುಣ್ಯಸಂಚಯ ಸ್ವಲ್ಪ ಜಾಸ್ತಿ ಬೇಕಾಗಿ ಆಚಾರ್ಯರೆಲ್ಲಾ ಹೇಳಿದ್ದರಿಂದ ದಾನವನ್ನು ಕೈಗೊಂಡ. ಬೇಕಾದವರು ಬೇಕಾದದ್ದನ್ನೆಲ್ಲಾ ದಾನವಾಗಿ ಪಡೆದರು. ಆ ಘಳಿಗೆಯಲ್ಲಿ ದೇವತೆಗಳ ಇಚ್ಛೆಯಂತೇ ಅವರ ರಕ್ಷಣೆಮಾಡಲಾಗಿ ಮಹಾವಿಷ್ಣು ವಾಮನನಾಗಿ ಬಂದ! ವಾಮನ ಅಂದರೆ ಕುಬ್ಜ, ಕುಳ್ಳ. ಕುಬ್ಜ ಬ್ರಾಹ್ಮಣ ವಟುವೊಬ್ಬ ಬಂದು ದಾನಸ್ವೀಕರಿಸಲು ಕುಳಿತಾಗ ಬಲಿ ಆತ್ಮೀಯವಾಗಿ ಸ್ವಾಗತಿಸಿದ. ವಾಮನ ಬೇಡಿದ ಮೂರು ಹೆಜ್ಜೆ ನೆಲವನ್ನು ನೆನೆದು " ಅಷ್ಟು ಸಣ್ಣ ದಾನವನ್ನು ಯಾಕೆ ಕೇಳುತ್ತೀರಿ ಬೇರೇ ಏನನ್ನಾದರೂ ಕೇಳಬಾರದೇ ? " ಎಂದ ಬಲಿ. ವಾಮನ ತನಗಷ್ಟೇ ಸಾಕು ಎಂದ. ಬಲಿಗೆ ಬಂದವ ಮಹಾವಿಷ್ಣುವೆಂಬ ಅರಿವಿರಲಿಲ್ಲ. ಆದರೆ ಆತನ ಗುರು ಶುಕ್ರಾಚಾರ್ಯರಿಗೆ ಇದು ತಿಳಿದುಹೋಯಿತು. ಅವರು ಬಲಿಗೆ ತಿಳಿಸಿ ಹೇಳಿ ಈ ದಾನವನ್ನು ಕೊಡುವುದರ ಬದಲು ಬೇರೇನಾದರೂ ಧನಕನಕವನ್ನು ಕೊಡು ಎಂದು ಸೂಚಿಸಿದರೂ " ಕೊಟ್ಟೆ " ಎಂದು ಆಡಿದ ಮಾತಿಗೆ ತಪ್ಪಲಾರೆ ಎಂದುತ್ತರಿಸಿದ ಬಲಿ. ದಾನಕ್ಕೆ ತುಳಸೀ ನೀರು ಬಿಡುವಾಗ ಕೊಂಬಿನ ಗಿಂಡಿಯಲ್ಲಿ ಸೂಕ್ಷರೂಪದಲ್ಲಿ ಕುಳಿತು ನೀರು ಬರದ ಹಾಗೇ ತಡೆದ ಶುಕ್ರಾಚಾರ್ಯ! ಇದನ್ನರಿತ ವಾಮನ ತನ್ನಲ್ಲಿರುವ ದರ್ಬೆಯಿಂದ ಆ ತೂತಿನೊಳಗೆ ಇರಿದಾಗ ಶುಕ್ರಾಚಾರ್ಯರ ಒಂದು ಕಣ್ಣು ಹೋಯಿತಂತೆ! ಅದಕ್ಕೆ ಕೆಲವೊಮ್ಮೆ ವಾಡಿಕೆಯಲ್ಲಿ ಒಂದೇ ಕಣ್ಣಿರುವವರಿಗೆ ಒಕ್ಕಣ್ಣ ಶುಕ್ರಾಚಾರ್ಯ ಎನ್ನುವುದಿದೆ ! ಅಂತೂ ದಾನ ನಡೆದು ಹೊಯಿತು. ದಾನ ಪಡೆದ ಮರುಕ್ಷಣ ವಾಮನ ಆಕಾಶದೆತ್ತರಕ್ಕೆ ಬೆಳೆದ, ಬೆಳೆದೂ ಬೆಳೆದೂ ಆತನಿಗೆ ಜಾಗವೇ ಸಾಲದಾಯಿತು. ಮೊದಲನೇ ಹೆಜ್ಜೆಯಿಂದ ಇಡೀ ಭೂಮಂಡಲವನ್ನೂ ಎರಡನೇ ಹೆಜ್ಜೆಯಿಂದ ಇಡೀ ಸ್ವರ್ಗಲೋಕವನ್ನೂ ಆಕ್ರಮಿಸಿದ ವಾಮನ ಬಲಿಗೆ " ನೀನು ವಚನಬ್ರಷ್ಟ " ಎಂದು ಬೈದ. ದಾರಿಕಾಣದ ಬಲಿ ಎರಡೂ ಕೈಜೋಡಿಸಿ " ನಿನ್ನ ಮೂರನೇ ಹೆಜ್ಜೆಯನ್ನು ನನ್ನ ಶಿರದಮೇಲಿಡು" ಎಂಬುದಾಗಿ ವಿನಂತಿಸಿದ. ಆ ಮಾತಿನಂತೇ ಮೂರನೇ ಹೆಜ್ಜೆಯನ್ನು ಬಲಿಯ ತಲೆಯಮೇಲಿಟ್ಟ ವಾಮನ ತನ್ನ ಬಲವಾಗಿ ಬಲಿಯನ್ನು ಪಾತಾಳಕ್ಕೆ ನೂಕಿದ.

ಬಂದಾತ ಮಹಾವಿಷ್ಣುವೆಂದು ಶುಕ್ರಾಚಾರ್ಯರು ಅಂತರಂಗದಲ್ಲಿ ಕಿವಿಯಲ್ಲಿ ಉಸುರಿದ್ದು ಅರ್ಥವಾಗಿಹೋಗಿತ್ತು ಬಲಿಗೆ. ಆದರೆ ಆಡಿದ ಮಾತಿಗೆ ತಪ್ಪದ ಅಪ್ಪಟ ರಾಜರ್ಷಿ ಈ ಮಹಾಬಲಿ! ತನ್ನನ್ನು ಪಾತಾಳಕ್ಕೆ ಕಳುಹಿದ್ದು ನ್ಯಾಯವೇ ಎಂಬುದಾಗಿ ಮಹಾವಿಷ್ಣುವಿನಲ್ಲಿ ಕೇಳಲಾಗಿ, ಭಕ್ತ ಬಲಿಗೆ ಒಲಿದ ಮಹಾವಿಷ್ಣು ತನ್ನ ನಿಜರೂಪದಲ್ಲಿ ದರ್ಶನವಿತ್ತು, ಕಾರಣಗಳನ್ನೆಲ್ಲಾ ತಿಳಿಸಿ, ವರ್ಷದಲ್ಲಿ ಮೂರು ದಿನ ದೀಪಾವಳಿಯ ವೇಳೆ ಭೂಮಿ ನಿನ್ನದೇ ರಾಜ್ಯಭಾರದಲ್ಲಿರುತ್ತದೆಂದೂ ಆಗ ಸ್ವತಃ ತಾನು ಬಲಿಯ ಬಾಗಿಲ ಕಾಯುವ ಭಟನಾಗಿ ನಿಂತು ಸೇವೆಮಾಡುವೆನೆಂದೂ ವರವಿತ್ತ. ಇದು ಬಲಿಯ ದಾನಕ್ಕೆ, ಆತನ ನಿಸ್ಪೃಹ ಪ್ರವೃತ್ತಿಗೆ ಸಂದ ಗೌರವ. ಹೀಗಾಗಿ ಪ್ರತೀವರ್ಷ ಬಹುತೇಕ ಫಸಲುಗಳು ಕೈಗೆ ಬರುವ ಹೊತ್ತಿನ ಈ ದೀಪಾವಳಿಯಲ್ಲಿ ಮೂರುದಿನ ಭುವಿಯ ರಾಜ್ಯಭಾರವನ್ನು ಬಲಿ ನೆರವೇರಿಸಿ, ತನ್ನ ಸತ್ಪ್ರಜೆಗಳಿಗೆ ಹಿಂದೆ ತನ್ನ ರಾಜ್ಯದಲ್ಲಿ ಹೇಗೆ ರಾಮರಾಜ್ಯದಂತೇ ಯಾವ ಕೊರತೆಯೂ ಇರಲಿಲ್ಲವೋ ಅದೇ ರೀತಿ ಯಾವ ಕುಂದುಕೊರತೆಗಳೂ ಬಾಧಿಸದಿರಲಿ ಎಂದು ಹರಸುತ್ತಾನೆ ಎಂಬುದು ಪ್ರತೀತಿ; ಪ್ರತೀತಿ ಹೇಗಿದ್ದರೂ, ಆತ ರಕ್ಕಸಕುಲದಲ್ಲೇ ಹುಟ್ಟಿದ ರಾಜನಾದರೂ ಈ ಭೂಮಿಯ ಎಲ್ಲರಿಗೂ[ಕಥೆ ಗೊತ್ತಿರುವವರಿಗೆ] ಬಲಿಯೆಂದರೆ ಪ್ರೀತಿ. ಇಂದ್ರನಾಗಬೇಕೆಂದು ಬಯಸಿದ್ದ ಬಲಿಗೆ ಇಂದ್ರನ ಹೆಸರಲ್ಲೇ ಪೂಜೆ: ಹೀಗಾಗಿ ಆತ ಬಲೀಂದ್ರ.

ಬಲೀಂದ್ರನನ್ನು ಕರೆತರುವುದಕ್ಕೆ ತ್ರಯೋದಶಿಯ ಸಾಯಂಕಾಲವೇ ಸಾಕಷ್ಟು ಸಿದ್ಧತೆಗಳು ನಡೆದಿರುತ್ತವೆ. ನವಧಾನ್ಯಗಳನ್ನು ಲೋಟ,ಚೊಂಬು ಮುಂತಾದ ಪಾತ್ರೆಗಳಲ್ಲಿಟ್ಟು, ಕೆಮ್ಮಣ್ಣು ತೀಡಿ ಶೇಡಿ[ರಂಗೋಲಿ ಪುಡಿ]ಯಿಂದ ಹಸೆಬರೆದ ಮಣೆಯಮೇಲೆ ಅವುಗಳನ್ನು ಪೇರಿಸಿ ಇಟ್ಟು, ಬೆಳ್ಳಿ-ಬಂಗಾರದ ನಾಣ್ಯಾದಿಗಳನ್ನೆಲ್ಲಾ ಇಟ್ಟು, ತೆಂಗಿನ ಕಾಯಿ, ಮೊಗೇಕಾಯಿ[ಮಂಗಳೂರು ಸೌತೇಕಾಯಿ] ಇವುಗಳನ್ನೆಲ್ಲಾ ಇಟ್ಟಿರುತ್ತಾರೆ. ಸಾಂಕೇತಿಕವಾಗಿ ಚಕ್ರವರ್ತಿ ಬಲಿಯನ್ನು ಹೊರಾಂಗಣದಲ್ಲಿರುವ ತುಳಸಿಯ ಮುಂಭಾಗದಲ್ಲಿ ಅಡಿಕೆಗೊನೆಯ[ಕೆಲವುಕಡೆ ವೀಳ್ಯದೆಲೆಯಡಿಕೆ] ಮೇಲೆ ಆಹ್ವಾನಿಸಿ, ಅಲ್ಲಿಯೇ ಮೊದಲಾಗಿ ಒಂದು ಪೂಜೆ ನೆರವೇರಿಸಿ ಆಮೇಲೆ ದೇವರಕೋಣೆಗೆ ಬಿಜಯಂಗೈಯ್ಯುವುದು. ಬಂದ ಬಲೀಂದ್ರನಿಗೆ ಆ ದಿನವೆಲ್ಲಾ ವಿಶೇಷ ತಿನಿಸುಗಳು ಭಕ್ಷ-ಭೋಜ್ಯ ನಿವೇದಿಸಿ ಮಹಾಮಂಗಲಾರತಿ ನೆರವೇರಿಸುವುದು ನಮ್ಮಲ್ಲಿಯ ರೂಢಿ. ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರತೀ ಹೆಜ್ಜೆಯಲ್ಲೂ ಹೆಂಗಳೆಯರು ಹಾಡುವ ಅಜ್ಞಾತ ಕವಿಗಳ ಭಾವತುಂಬಿದ ಭಕ್ತಿಗೀತೆಗಳು ಹೃದಯಂಗಮ, ಆದರೆ ಇಂದು ಅವುಗಳು ಸಿಕ್ಕುವುದೇ ದುರ್ಲಭ.

ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ನಮ್ಮ ಜನ ರಾಜನೊಬ್ಬನ ಆದರ್ಶಗಳನ್ನು ಬಹುವಾಗಿ ಮೆಚ್ಚುತ್ತಿದ್ದರು. ಆದರ್ಶರಾಜ ಪ್ರಜೆಗಳಿಗೆ ದೇವರಾಗಿಬಿಡುತ್ತಿದ್ದ. ರಾಜಾ ಪ್ರತ್ಯಕ್ಷ ದೇವತಾ ಎಂಬಂತೇ ತಮ್ಮ ಕಷ್ಟ-ಸುಖಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ರಾಜನನ್ನು ಪ್ರಜೆಗಳು ಆದರಿಸುತ್ತಿದ್ದರು, ಆರಾಧಿಸುತ್ತಿದ್ದರು. ಬಲಿ ಅಂತಹ ಚಕ್ರವರ್ತಿಗಳ ಸಾಲಿನಲ್ಲಿ ಮಹಾಮೇರು. ಅಂತಹ ಬಲಿಯನ್ನು ನಮ್ಮ ಜನ ಮರೆಯಲೊಲ್ಲರು. ಮೇಲಾಗಿ ಭಗವಂತನ ಮಾತನ್ನು ಶಿರಸಾವಹಿಸುವ ಕಳಕಳಿ ಕೂಡ ಇದರಲ್ಲಿ ಅಡಗಿದೆ. ಬಲೀಂದ ರಾಜ್ಯದಲ್ಲಿ ಇರದ್ದೇ ಇಲ್ಲವಂತೆ ! ಅಷ್ಟೊಂದು ಪ್ರಜಾರಂಜಕನಾಗಿ, ರಕ್ಷಕನಾಗಿ ಎಲ್ಲರ ಹೃದಯಸಿಂಹಾಸನದಲ್ಲಿ ಶಾಶ್ವತವಾಗಿ ಕುಳಿತುಬಿಟ್ಟಿದ್ದಾನೆ ಬಲಿ. ಬಲಿಯ ಕಥೆಯನ್ನು ಕೇಳಿದರೇ ಆತನ ನಡವಳಿಕೆಯ ಮನವರಿಕೆಯಾಗುತ್ತದೆ. ಆತನ ಸ್ಮರಣ, ಪೂಜನ, ಪ್ರಾರ್ಥನೆಗಳಿಂದ ತಮ್ಮೆಲ್ಲರ ಮನೆಗಳಲ್ಲೂ ಸಮೃದ್ಧಿ ನೆಲೆಸಲಿ ಎಂಬುದು ಮನದಿಂಗಿತ.

ಎರಡನೇ ದಿನ ಅಮಾವಾಸ್ಯೆ

ಬಲೀಂದ್ರ ಸನ್ನಿಧಿಯಲ್ಲಿ ಯಾವುದಕ್ಕೂ ಕಮ್ಮಿಯೇ ಇರಲಿಲ್ಲವಂತೆ. ಅವನ ರಾಜ್ಯದಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸಿದ್ದಳು. ಈ ಹಿನ್ನೆಯಲ್ಲಿ ಬೆಳೆದುಬಂದ ಧಾನ್ಯಲಕ್ಷ್ಮಿಯೊಂದಿಗೆ ಧನಲಕ್ಷ್ಮಿಯನ್ನೂ ಆಹ್ವಾನಿಸಿ ಬಲೀಂದ್ರ ಸಮ್ಮುಖದಲ್ಲಿ, ಸನ್ನಿಧಿಯಲ್ಲಿ ಪೂಜೆ ನಡೆಸುತ್ತಾರೆ. ಕೆಲವರ ಮನೆಗಳಲ್ಲಿ ಇದು ವಿಶೇಷವಿರದಿದ್ದರೂ ಅನೇಕರು ಇದನ್ನು ನಡೆಸುವುದು ಕಂಡುಬರುತ್ತದೆ. ಇದೇ ವೇಳೆ ಅಂಗಡಿಕಾಕರು, ವ್ಯಾಪಾರಿಗಳು ತಮ್ಮ ವ್ಯವಹಾರದ ಜಾಗದಲ್ಲಿ ಲಕ್ಷ್ಮೀ ಪೂಜೆಯನ್ನು ನೆರವೇರಿಸುತ್ತಾರೆ.

ಎಲ್ಲರೀತಿಯ ಸುಗ್ಗಿಯ ಕಾಲ. ಫಸಲು ಬೆಳೆದು ರೈತನ ಕಸೇರಿರುವ ಕಾಲ. ಬೆಳೆದು ಮನೆಸೇರಲಿರುವ ಫಸಲಿಗೊಮ್ಮೆ ಲಕ್ಷ್ಮೀ ಎಂಬ ಭಾವದಿಂದ ಸಾಂಕೇತಿಕ ಪೂಜೆ. ಹೀಗೆ ಪೂಜೆ ನಡೆಸುವುದರಿಂದ ಲಕ್ಷ್ಮಿಯ ಸ್ಥಿರತೆ ಜಾಸ್ತಿಯಾಗಿ ಸಮೃದ್ಧಿ ನೆಲೆಸುತ್ತದೆ ಎಂಬುದು ಕಲ್ಪನೆ, ಭಾವನೆ.

ಈ ರಾತ್ರಿ ನಮ್ಮಲ್ಲಿ ಕಡುಬುಗಳನ್ನು ಮಾಡಿ ಬಲೀಂದ್ರನಿಗೆ ನಿವೇದಿಸಿ ನಂತರ ಕೊಟ್ಟಿಗೆಗೆ ಹೋಗಿ, ದನಕರುಗಳ ಕಾಲು-ಬಾಯಿ ತೊಳೆದು[ಸಾಂಕೇತಿಕವಾಗಿ ಉದ್ಧರಣೆಯಿಂದ ನೀರು ಹಾಕುತ್ತ] ಆಮೇಲೆ ಕಡುಬುಗಳನ್ನು ಅವುಗಳಿಗೆ ತಿನ್ನಿಸುವುದು. ತಿಂದು ಪ್ರೀತಿಯಿಂದ ನಾಲಿಗೆ ಆಡಿಸುತ್ತಿರುವಾಗ ಮತ್ತೆ ಕಾಲು-ಬಾಯಿ ತೊಳೆದು, ಹುಲ್ಲು ಹಾಕಿ ನಮಸ್ಕರಿಸಿ ಮನೆಗೆ ಮರಳುವುದರೊಂದಿಗೆ ಎರಡನೇ ದಿನದ ಮುಕ್ತಾಯ.

ಮೂರನೇ ದಿನ - ಬಲಿ ಪಾಡ್ಯ[ಮಿ]

ಬಲೀಂದ್ರ ಇವತ್ತು ತನ್ನ ರಾಜ್ಯಭಾರವನ್ನು ಪೂರೈಸಿ ಸ್ವಸ್ಥಾನಕ್ಕೆ ಹಿಂದಿರುಗುತ್ತಾನೆಂಬ ನಂಬಿಕೆ. ಗೋಪೂಜೆ ಇಂದಿನ ಮಹತ್ವದ ಕಾರ್ಯ. ಜಾವದಲ್ಲೇ ಎದ್ದು ದನಕರುಗಳಿಗೆ ಸ್ನಾನಮಾಡಿಸಿ, ಕೊಟ್ಟಿಗೆ ಶುದ್ಧೀಕರಿಸಿ, ಅವುಗಳ ಮೈಗೆ ಕೆಮ್ಮಣ್ಣು ಮತ್ತು ಶೇಡಿಗಳಿಂದ ದೊಡ್ಡ ಸೊನ್ನೆಯಾಕಾರಕ್ಕೆ ಲೋಟವೇ ಮೊದಲಾದವುಗಳನ್ನು ಬಳಸಿ ಅಚ್ಚು ಹಾಕುವುದು [ಹುಬ್ಬು ಹಾಕುವುದು]. ನಂತರ ಅವುಗಳ ಕೋಡಿಗೆ ಬಣ್ಣಗಳನ್ನು ಬಳಿಯುವುದು, ಝರಿಯ ಗೊಂಡೆಗಳನ್ನು ಕಟ್ಟುವುದು, ಕೊರಳಿಗೆ ಹೊಸ ಹಗ್ಗ ಮತ್ತು ಗಂಟೆ ಕಟ್ಟುವುದು ಇವೆಲ್ಲಾ ನಡೆಯುತ್ತವೆ. ನಂತರ ಚಂಡು ಹೂವು, ದನಮಾಲೆ [ಕಾಡಿನಲ್ಲಿ ಸಿಗುವ ಸುವಾಸ್ನೆ ಭರಿತ ಹೂಗೊಂಚಲು]ಹೂವು ಇವುಗಳನ್ನೆಲ್ಲ ಕಟ್ಟುವುದು. ಮನೆಯಲ್ಲಿ ಬಲೀಂದ್ರ ಪೂಜೆ ನೆರವೇರಿಸಿ, ಗ್ರಾಮದ ದೇವಸ್ಥಾನಗಳಿಗೆ ಹಣ್ಣು-ಕಾಯಿ ಅರ್ಪಿಸಿ ಪ್ರಸಾದ ತಂದು ಕೊಟ್ಟಿಗೆಯ ಪೂಜೆಗೆ ಮುಂದಾಗುವುದು ಕ್ರಮ.

ಮನೆಯ ಯಜಮಾನ ಕೊಟ್ಟಿಗೆಗೆ ಬಂದು, ಮಣೆಯಮೇಲೆ ಗಣಪತಿಯ ಮಂಡಲ ಬರೆದು ಮೊದಲಾಗಿ ಆತನನ್ನು ಪೂಜಿಸಿ, ನಂತರ ದನಕರುಗಳ ಮೈ,ಕಾಲು-ಬಾಯಿ ಇವುಗಳನ್ನೆಲ್ಲಾ ಸಾಂಕೇತಿಕವಾಗಿ ತೊಳೆದಮೇಲೆ ಅವುಗಳಿಗೆ ಗಂಧ, ಅರಿಶಿನ, ಕುಂಕುಮ, ಅಕ್ಷತೆ ಹಚ್ಚುತ್ತಾನೆ. ನಂತರ ಅಡಿಕೆಯ ಸರ ಹಾಗೂ ಚಾಟಿ[ ಅಡಿಕೆ, ವೀಳ್ಯದೆಲೆ, ಶಿಂಗಾರ, ತೆಳ್ಳವು ಎಂಬ ದೋಸೆ [ಇದು ಕೆಲವು ಕಡೆ ಇಲ್ಲ] ಇವುಗಳನ್ನೆಲ್ಲಾ ಸೇರಿಸಿ ಮಾಡಿದ ಮಾಲೆಯ ಥರದ್ದು] ಕಟ್ಟುವುದು. ನಂತರ ಧೂಪಾರತಿ. ಹಣ್ಣು-ಕಾಯಿ ಮತ್ತು ಗೋಗ್ರಾಸ[ಅನ್ನಕ್ಕೆ ತುಪ್ಪ, ಬೆಲ್ಲ, ಬಾಳೆಹಣ್ಣು, ಕಾಯಿತುರಿ ಸೇರಿಸಿ ಪಾಕ ಬರಿಸಿದ್ದು] ನಿವೇದಿಸಿ, ಗೋಗ್ರಾಸವನ್ನು ದನಕರುಗಳಿಗೆ ತಿನ್ನಲು ಕೊಡುತ್ತೇವೆ. ನಂತರ ಮತ್ತೆ ಅವುಗಳ ಬಾಯಿ ತೊಳೆದು ಮಂಗಳಾರತಿ. ಇದಾದಮೇಲೆ ಮಾತುಬಾರದಿದ್ದರೂ ಜೀವನದಲ್ಲಿ ಎರಡನೆಯ ಅಮ್ಮನಾಗಿ ಜೀವಿತದುದ್ದಕ್ಕೂ ಹಾಲುಣಿಸುವ ಗೋವಮ್ಮನಲ್ಲಿ ಪ್ರಾರ್ಥನೆ. ವರ್ಷವಿಡೀ ಹುಲ್ಲಿಗಾಗಲೀ ನೀರಿಗಾಗಲೀ ಚಿಂತಿಸದಿರು ಎಂಬ ಮನೋನಿವೇದನೆ. ಪ್ರಸಾದ ಸ್ವೀಕರಣೆಯಾದ ಮೇಲೆ ಜೋರಾಗಿ ಜಾಗಟೆಬಡಿಯುತ್ತಾ ದನಕರುಗಳನ್ನು ಹಗ್ಗದಿಂದ ಬಿಡಿಸಿ ಗೋಮಾಳಕ್ಕೆ ಕಳುಹಿಸುವುದು. ನಂತರ ಪ್ರಾದೇಶಿಕವಾಗಿ ಅಲ್ಲಲ್ಲಿಯ ಚೌಡಿ, ನಾಗ, ಹುಲಿಯಪ್ಪ ಹೀಗೇ ಎಲ್ಲಾ ದೇವರಿಗೂ ದನಕರುಗಳ ಸಂಖ್ಯೆಯಷ್ಟೇ ಕಾಯಿ ಒಡೆದು ಅವುಗಳ ಉಳಿವನ್ನು ಬಯಸಿ ಪ್ರಾರ್ಥಿಸುವಷ್ಟರಲ್ಲಿ ಮಧ್ಯಾಹ್ನದ ಭೋಜನದ ಸಮಯವಾಗಿರುತ್ತದೆ.

ಇದು ನಮಗೆ ಆ ಮೂಕ ಪ್ರಾಣಿಯ ಜೊತೆಗಿರುವ ಅವಿನಾಭಾವ ಸಂಬಂಧಕ್ಕೆ ಕೃತಜ್ಞತೆ ಸಲ್ಲಿಸುವ ಕ್ರಮವಾಗಿದೆ. ದಿನಂಪ್ರತಿ ಇಷ್ಟೆಲ್ಲಾ ಮಾಡಲು ಸಾಧ್ಯವೇ ? ಹಾಗಂತ ಅವುಗಳಿಗೂ ಮನ್ನಣೆ, ರಕ್ಷಣೆ ಎಲ್ಲವನ್ನೂ ತೋರಬೇಕಲ್ಲವೇ ? ತನ್ನ ಎಳೆಗರುವನ್ನು ತನ್ನ ಮುಂದೇ ದರದರನೆ ಎಳೆದು ಪಕ್ಕಕ್ಕೆ ಕಟ್ಟಿ ತನ್ನ ಹಾಲು ಹಿಂಡಿಕೊಳ್ಳುವಾಗ ಬೇಡವೆನ್ನುವುದಿಲ್ಲ ಆ ತಾಯಿ. ಹೋರಿಗರುವನ್ನು ನೀಡಿ ಅವುಗಳ ಭುಜಬಲದಿಂದ ಗದ್ದೆಯನ್ನು ಹಸನುಮಾಡಲು ಅನುಕೂಲ ಕಲ್ಪಿಸುವುದೂ ಅವಳ ಸಹಾಯ. ಬೇಕಾದ ಹೈನಕ್ಕೆ, ಗೊಬ್ಬರಕ್ಕೆ ಎಲ್ಲಕ್ಕೂ ಗೋವೇ ಮೂಲವಾಗಿ ಗೋವಾಧಾರಿತ ಜೀವನ ಕೃಷಿಕನದಾಗಿದೆ. ಅವಳ ಉಪಕಾರ ಸ್ಮರಣೆಗಾಗಿ ಈ ಕಾರ್ಯ.

ಬಲೀಂದ್ರ ವಿಸರ್ಜನೆ

ಮೂರನೇ ದಿನದ ಸಾಯಂಕಾಲ ಬಲೀಂದ್ರನಿಗೆ ಮತ್ತೆ ಪೂಜೆ. ಕೆಲಸಗಾರರು ಹಿಂದೆಲ್ಲಾ ಪ್ರೀತಿಯಿಂದ ಹಬ್ಬಗಾಣಿಕೆ ನೀಡುತ್ತಿದ್ದರು. ಹಾಗೆ ಬಂದ ಹಬ್ಬಗಾಣಿಕೆ ಹಣ್ಣು-ಕಾಯಿ-ಮರದ ಸಾಮಾನುಗಳನ್ನು ಬಲೀಂದ್ರನಿಗೆ ಅರ್ಪಿಸುವುದು ನಡೆದು ಬಂದಿತ್ತು. ಒಟ್ಟಾರೆ ಬಂದು, ಮೂರುದಿನ ನಮ್ಮ ಮನೆಗಳಲ್ಲಿದ್ದು, ನಮ್ಮ ಹಬ್ಬವನ್ನು ಚೆನ್ನಾಗಿ ನಡೆಸಿಕೊಟ್ಟು, ಅದನ್ನು ಸಾಕ್ಷೀಕರಿಸಿ ಮರಳುವ ದೊರೆರಾಯನಿಗೆ ಹಾರ್ದಿಕ ಬೀಳ್ಕೊಡುಗೆಯ ತಯಾರಿ. ಹಣ್ಣು-ಕಾಯಿ-ಹಾಲು ನೈವೇದ್ಯ. ನಾಲ್ಕಾರು ವಿಧದ ಮಂಗಳಾರತಿ. ಪ್ರಾರ್ಥನೆ. ನಂತರ ಪ್ರಸಾದ ಸ್ವೀಕರಿಸಿ, ಸಾಂಕೇತಿಕವಾಗಿ ಕುಳಿತ ಸ್ಥಾನದಿಂದ ವಿಸರ್ಜನೆ. ಆಮೇಲೆ ದೊಂದಿಗಳು, ಕರ್ಪೂರ ಜ್ಯೋತಿಗಳು, ತಾಳ, ಜಾಗಟೆ, ಶಂಖ ಮೊದಲಾದ ಹಲವು ಮನೆವಾದ್ಯಗಳೊಂದಿಗೆ ಅಡಿಕೆಗೊನೆಯನ್ನು ಎಬ್ಬಿಸಿ ನಿಧಾನಕ್ಕೆ ಕೊಂಡೊಯ್ದು ತುಳಸಿಯ ಮುಂದೆ ಕೂರಿಸುವುದರೊಂದಿಗೆ ಬಲಿಚಕ್ರವರ್ತಿ ಪಾತಾಳಕ್ಕೆ ಮರಳುತ್ತಾನೆಂಬ ಐತಿಹ್ಯ. ಆತನ ಮೈಮೇಲಿನ ಪ್ರಸಾದವನ್ನು " ಕಟ್ಟಿದ್ದೇ ಕರೆಯಲಿ, ಬಿತ್ತಿದ್ದೇ ಬೆಳೆಯಲಿ ಬಲೀಂದ್ರನ ರಾಜ್ಯವೇ ಆಗಲಿ " ಎನ್ನುತ್ತಾ ಮನೆಯ ಛಾವಣಿಯ ಮೇಲೆ ಎಸೆದು ಪ್ರಾರ್ಥಿಸುವುದು ನಮ್ಮ ಅನ್ಯೋನ್ಯತೆ! ಹೀಗೇ ಮೂರುದಿನಗಳ ರಾಜ್ಯಭಾರದ ಭಾಗ್ಯವನ್ನು ಪಡೆದ ಬಲೀಂದ್ರ ಇವತ್ತಿಗೂ ಭಾರತದಾದ್ಯಂತ ಜನಮಾನಸದಲ್ಲಿ ಸಲ್ಲುವ ಚಕ್ರವರ್ತಿ.

ಇಂದಿನಿಂದ ಆರಭ್ಯ ಕಾರ್ತೀಕ ಮಾಸ ಪೂರ್ತಿ ಪಿತೃಗಳ ನೆನಪಿಗಾಗಿ, ಸ್ವರ್ಗದಲ್ಲಿರುವ ಪೂರ್ವಜರಿಗಾಗಿ ಮುಡಿಪಾಗಿಡುವ ಆಕಾಶಬುಟ್ಟಿಗಳನ್ನು ಎತ್ತರದಲ್ಲಿ ಕಟ್ಟಿ ಅದರಲ್ಲಿ ವಿದ್ಯುದ್ದೀಪ ಉರಿಸಲಾಗುತ್ತದೆ [ಹಿಂದಕ್ಕೆ ಅವುಗಳಲ್ಲೂ ಎಣ್ಣೆಯ ದೀಪಗಳನ್ನೇ ಉರಿಸುತ್ತಿದ್ದರಂತೆ!]

ಈ ನಡುವೆ ಕೆಲವುಕಡೆ ಮೂರನೇ ದಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ ನೆನಪಿಗೆ ಗೋವರ್ಧನ ಪೂಜೆಯನ್ನೂ ಸಾಂಕೇತಿಕವಾಗಿ ನಡೆಸುತ್ತಾರೆ. ಮೂರನೇ ದಿನದ ಮಾರನೇ ದಿನ ನಮ್ಮೂರ ಕಡೆಯಲ್ಲಿ ದೇವರ ಹಬ್ಬ! ಅಂದರೆ ಇಲ್ಲೀತನಕ ಮಾಡಿದ್ದು ದೇವರ ಹಬ್ಬವಲ್ಲವೇ ? ಹಾಗಲ್ಲ ಸ್ವಾಮೀ, ಇದು ದೇವಸ್ಥಾನಗಳಲ್ಲಿ ನಡೆಯುವಂಥದ್ದು. ಗ್ರಾಮದಲ್ಲಿ ಸಾಧ್ಯವಾದ ಎಲ್ಲರೂ, ನವದಂಪತಿಗಳೊಂದಿಗೆ ದೇವಸ್ಥಾನಗಳಿಗೆ ತೆರಳುತ್ತಾರೆ. ಅಲ್ಲಿ ಸರ್ವಾಭರಣ ಭೂಷಿತವಾದ ದೇವರ ದರ್ಶನ ಪಡೆದೆಯುತ್ತಾರೆ. ಸಾರ್ವತ್ರಿಕ ಪೂಜೆಯೊಂದು ನಡೆದು ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಗುತ್ತದೆ. ಇಲ್ಲಿಗೆ ದೀಪಾವಳಿ ಇನ್ನು ಮುಂದಿನ ವರ್ಷ!


ಮೂರೂ ದಿವಸ ಜಾನಪದ ಆಟಗಳದ್ದೇ ಕಾರುಬಾರು. ಕಂಬಳಿಯಲ್ಲಿ ಅವಿತುಕೊಂಡವನಿಗೆ ಪಪ್ಪಾಯಿಯನ್ನು ಹೊಡೆಯುವ ಹೊಂಡೆ, ಈಡುಗಾಯಿ, ಕಬಡ್ಡಿ, ಓಟ, ಜಿಗಿತ, ಅದೂ-ಇದೂ ಎತ್ತುವುದು, ಎಣ್ಣೆಗಂಬ ಹತ್ತುವುದು....ಇವೇ ಮೊದಲಾದ ಆಟಗಳು. ಅನೇಕ ಕಡೆ ತಾಳಮದ್ದಲೆ, ಯಕ್ಷಗಾನಗಳು. ಹಲವು ವಿಧದ ಸ್ಪರ್ಧೆಗಳು. ಒಟ್ಟರ್ಥದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಪ್ರತೀದಿನ ಮನೋರಂಜನೆ. ಮೂರೂ ದಿನಗಳಂದು ಸಾಯಂಕಾಲ ದೀಪಗಳನ್ನು ಬೆಳಗುತ್ತಾರೆ. ಕಾರ್ತೀಕ ಮಾಸದ ಆರಂಭವಾಗುವುದರಿಂದ ಕೆಲವರು ದೇವಸ್ಥಾನಗಳಲ್ಲಿ ದೀಪೋತ್ಸವವನ್ನು [ಬಿದಿಗೆಯಿಂದ] ಆರಂಭಿಸುತ್ತಾರೆ. ಹಗಲು ಕಡಿಮೆಯಾಗಿ ಇರುಳ ಕತ್ತಲೆಯಲ್ಲಿ ಅನುಕೂಲಕ್ಕೂ ಅಲಂಕಾರಕ್ಕೂ ಆಗಲೆಂದು ಹಚ್ಚುವುದೇ ದೀಪ. ಈ ದೀಪ ಕೊಡುವ ಆನಂದವನ್ನು ವಿದ್ಯುದ್ದೀಪ ಕೊಡುವುದಿಲ್ಲ ಎಂದರೆ ತಪ್ಪಾಗಲಾರದೇನೋ. ಇಷ್ಟೆಲ್ಲಾ ಪುರಾಣ ಕೇಳಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು, ಅಭಿವಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು.