ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 7, 2010

ಕಾವ್ಯ ಕಾರಣ

ಚಿತ್ರಋಣ : ಅಂತರ್ಜಾಲ
ಕಾವ್ಯ ಕಾರಣ

[ ಚಿತ್ರವನ್ನು ಬಹಳ ಜನ ನೋಡಿರುತ್ತೀರಿ, ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತಿದ್ದರೆ ಅದರ ವಿಶೇಷ ತಿಳಿಯುತ್ತದೆ ! ಮನದ ಕಲ್ಪನೆಗೆ ಅದನ್ನು ಸಾಂಕೇತಿಕವಾಗಿ ಬಳಸಿದ್ದೇನೆ. ದೀಪಾವಳಿಯನ್ನು ಮಳೆಯಿದ್ದರೂ ಹರುಷದಿಂದಲೇ ಆಚರಿಸಿ ಬೀಳ್ಕೊಟ್ಟೆವು, ಮತ್ತೆ ಬರಲಿ ; ಶುಭವ ತರಲಿ ದೀಪಾವಳಿ ಎಂದು ಜಗನ್ನಿಯಾಮಕನಲ್ಲಿ ಪ್ರಾರ್ಥಿಸಿ ಇಂದು ಕವನವನ್ನು ನಿಮ್ಮ ಮುಂದಿಡುವ ಮನಸ್ಸು, ಓದುವಿರಲ್ಲವೇ ? ]

ಮಥಿಸಿ ಮನದ ಶರಧಿಯನ್ನು
ಚಿಂತನೆಯ ಕಡೆಗೋಲಲಿ
ಚಕಿತನಾಗಿ ಕಾದು ಕುಳಿತೆ ಬರುವ ವಿಧದ ಬರಹಕೇ
ಮುಕುತಿಯಿಲ್ಲ ಚಿಂತೆಗಳಿಗೆ
ಅಂತ್ಯವಿಲ್ಲ ನೋವುಗಳಿಗೆ
ಶಕುತನಾಗಿ ಮೀರಿ ಬೆಳೆವ ಪರಿಯ ತಿಳಿಯುವುದಕೇ

ಒಂದು ಕವನ ಬರೆಯುವಾಗ
ನೊಂದು ಬರೆವ ರೀತಿ ತರವೇ ?
ಇಂದು ನನ್ನ ಮಿತ್ರರೆಲ್ಲ ಕರೆದು ಬೈವರಲ್ಲವೇ ?
ಮಿಂದು ಸ್ವಚ್ಛವಾದ ದೇಹ
ಚಂದದಿಂದ ಹೊಳೆಯುವಂತೆ
ಬಂಧಿಸೊಮ್ಮೆ ಈ ಮನವನು ಚೊಕ್ಕಗೊಳಿಸಬೇಡವೇ ?

ಅಡಿಗೆಮಾಡುವಾಗ ಉಪ್ಪು
ಸಿಹಿಯು ಹುಳಿಯು ಖಾರವನ್ನು
ಹದವನರಿತು ಹಾಕಿದಾಗ ರುಚಿಯು ಸಹಜವಪ್ಪುದು
ಗಡಿಬಿಡಿಯಲಿ ಬರೆದು ಮೂರು
ಪದದ ಜೊತೆಗೆ ಇನ್ನೊಂದಾರು
ಸೇರಿಸಲ್ಕೆ ಬರೆದ ಪದ್ಯ ನೆಲವ ಕಚ್ಚುತಿರ್ಪುದು !

ಬರೆದುದೆಲ್ಲಾ ಓದಬೇಕೆ ?
ಓದುವುದಕೆ ಸಾಧ್ಯವುಂಟೇ ?
ನನ್ನ ಪಾತ್ರೆಯಲ್ಲಿ ಒಳಗೆ ಹಣಕಿ ಇಣುಕಿ ನೋಡುತಾ
ಚಿನ್ನದಂಥ ಶಬ್ದಗಳನು
ಕನ್ನಡಿಯೊಳು ತೆರೆದುತೋರಿ
ಬನ್ನಿರಯ್ಯ ಓದಲೆಂದು ಕರೆದು ನಿಂತು ಕಾಯುತಾ

ಜೀವದಲ್ಲಿ ಭಾವತುಂಬಿ
ಭಾವದಲ್ಲಿ ಜೀವತುಂಬಿ
ಜೀವ-ಭಾವ ಸಮ್ಮಿಳಿತದ ಸಂವಿಧಾನ ಬರೆಹವು
ಆವ ಘಳಿಗೆ ಬರೆಯಬೇಕು
ಎಲ್ಲಿ ಕುಳಿತು ಹೊಸೆಯಬೇಕು
ಯಾವೊಂದನು ತಿಳಿಯದಂಥ ಸಂಯಮದಾ ಶಿಖರವು

ಒಳಗೆ ಇರುವ ಕಾಣದಾತ
ಇಳೆಗೆ ಹಾರಿ ಹತ್ತಿ ಕುಣಿದು
ಬಳಸಿ ಬಂದು ಹರಿವ ರೂಪ ಕಾವ್ಯ-ಕಾದಂಬರಿ
ಅಳುಕು ಮನದ ಅಡುಗೆಗಳನು
ಬಳುಕುತಲೇ ಹೊರಗೆ ಇಡುವ
ಬಡಿವಾರದ ಮನದ ಕನ್ಯೆ ಆಗೆ ನಿರಾಡಂಬರಿ

7 comments:

 1. ಭಟ್ ಸಾರ್
  ಮೊದಲ ಪ್ಯಾರಾದ ಮಾತುಗಳು ತುಂಬಾ ಇಷ್ಟವಾಯಿತು. ಮನವನ್ನು ಮಥಿಸಿದಷ್ಟೂ.. ವಿಚಾರಗಳ ಮಹಾಪೂರವೇ ಹರಿಯುವುದಂತೆ. ಎಲ್ಲವೂ ನಮ್ಮ ಅಂತರಾಳದಲ್ಲೇ ಅಡಗಿರುವುದರಿಂದ ಚಿಂತನ-ಮಂಥನ ನಡೆಯುತ್ತಲೇ ಇರಬೇಕು ಅಲ್ವಾ..? ಬರೆದುದೆಲ್ಲಾ ಓದಬೇಕೆ..? ಓದುವುದಕೆ ಸಾಧ್ಯವುಂಟೆ ಎಂದಿದ್ದೀರಿ, ಎಷ್ಟು ಸತ್ಯವಾದ ಮಾತುಗಳು... ಏನೋ ಹೊಸದಾಗಿದೆ ಅನ್ನಿಸಿತು. ಒಂದೊಂದು ಸಾಲಿಗೂ ನಮ್ಮದೇ ಅರ್ಥಗಳನ್ನು ವಿಶ್ಲೇಷಿಸಿ ಕೊಳ್ಳುತ್ತಾ ಹೋಗುವಂತಿದೆ. ಪ್ರತಿಕ್ರಿಯೆ ತೀರಾ ಉದ್ದಾವಾದೀತೆಂದು..... :-).. ನಿಮ್ಮ ಕವನದ ಮೂಲಕ ಒಂದು ಹೊಸ ಚಿಂತನೆ ಹುಟ್ಟು ಹಾಕಿದ್ದೀರಿ.. ಧನ್ಯವಾದಗಳು.
  ಶ್ಯಾಮಲ

  ReplyDelete
 2. ಚಿತ್ರ ಹಾಗೂ, ತಮ್ಮ ಕವನ ಎರಡೂ ಒಂದಕ್ಕೊಂದು ಹಾಸು ಹೊಕ್ಕಾಗಿದೆ. ನಿಮ್ಮ ಕಾವ್ಯ, ಕಾದಂಬರಿಯ ವ್ಯಾಖ್ಯಾನ ತುಂಬಾ ಚೆನ್ನಾಗಿದೆ

  ReplyDelete
 3. ಚಿತ್ರ ಕವನ ಚೆನ್ನಾಗಿದೆ.

  ReplyDelete
 4. ಕವನರಚನೆಯ ಬಗೆಗೆ ಉತ್ತಮ ತಿಳಿವಳಿಕೆಯ ಲೇಖನ. ಒಳಗೆ ಇರುವಾತನು ಇಳೆಗೆ ಹಾರಿದಾಗಲೇ, ಅದು ಶ್ರೇಷ್ಠ ರಚನೆ. ಮನದ ಬಡಿವಾರ ಆಗ ಕರಗುವದೂ ಸತ್ಯ.

  ReplyDelete
 5. ಭಟ್ಟರೆ...

  ಸರಳವಾದ ಶಬ್ಧಗಳಲ್ಲಿ...
  ಒಳಗೂಡಾರ್ಥಗಳನ್ನು ಬಿಚ್ಚಿಡುವದು ಸುಲಭವಲ್ಲ...

  ನನಗೆ ಮೊದಲೆರಡು ಪ್ಯಾರದ ಮಾತುಗಳು ಇಷ್ಟವಾದವು...

  ಜೈ ಹೋ...!!

  ReplyDelete
 6. ಒ೦ದೊ೦ದು ಸಾಲೂ ಹಲವು ಅರ್ಥ ಹೊಮ್ಮಿಸುವಷ್ಟು ಶಕ್ತ. ಚೆನ್ನಾಗಿದೆ.

  ReplyDelete
 7. ಓದಿದ, ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೂ ಅನಂತ ವಂದನೆಗಳು. ಬ್ಲಾಗಿಗೆ ಹೊಸದಾಗಿ ಲಿಂಕಿಸಿಕೊಂಡ ಶೀಲಾ ನಾಯಕ್ ಮತ್ತು ಪ್ರಕಾಶ್ ಕಿಣಿಯವರಿಗೆ ಸ್ವಾಗತ ಹಾಗೂ ನಮನಗಳು

  ReplyDelete