ಜ್ಞಾತನಾಗು
ಬದುಕು ಕಲಿಸುವ ಪಾಠ ಬಹಳ ಮೌಲ್ಯದ್ದಹುದು
ಕೆದಕಿ ಬರೆದರು ಹೊತ್ತಗೆಗಳ ಪೂರ್ವಜರು
ಪದಕ ಪದವಿಯ ವಿಶ್ವವಿದ್ಯಾಲಯಕಂ ಮಿಗಿಲು
ಅದಕುಂಟೆ ಸರಿಸಾಟಿ | ಜಗದಮಿತ್ರ
ಓದುತ್ತ ಅರಿ ಮೊದಲು ಮಾಡುತ್ತ ತಿಳಿ ಹಲವು
ಬಾಧಕವೇ ಬೇಡವೆನ್ನುತ ಕೂರಬೇಡ
ಹಾದಿಬೀದಿಯಲೊಮ್ಮೆ ನೋಡುತ್ತ ಕಲಿ ಕೆಲವು
ಆದರಿಸು ಆದರ್ಶ | ಜಗದಮಿತ್ರ
ದೇಹಕ್ಕೆ ಸ್ನಾನವನು ಮಾಳ್ಪ ರೀತಿಯಲೊಮ್ಮೆ
ಸಾಹಸದಿ ಮನಸನ್ನು ಸ್ನಪನಗೊಳಿಸುವೊಲು
ಆಹಾರ-ನಿದ್ದೆ-ಮೈಥುನಗಳಲಿ ಹದವಿರಿಸಿ
ವಿಹರಿಸು ಧ್ಯಾನದಲಿ | ಜಗದಮಿತ್ರ
ಮನವು ಎಲ್ಲಕು ಮೂಲ ಕಾರಣವು ಕಾರ್ಯಕ್ಕೆ
ಅನುಗೊಳಿಸು ಅಭ್ಯಸಿಸಿ ಪ್ರಾಜ್ಞ ಜೀವಿತವ
ಮನುಕುಲದಿ ಸಮಯ ಸದ್ವಿನಿಯೋಗಿಸುತ ನಡೆಸು
ನೆನೆವಂತ ಕೆಲಸಗಳ | ಜಗದಮಿತ್ರ
ಉತ್ತಮದ ಪುಸ್ತಕಗಳೇ ನಮ್ಮ ಆಸ್ತಿಗಳು
ಪತ್ತಿನಲಿ ಮನವನ್ನು ಮುದಗೊಳಿಸುವುದಕೆ
ಹೊತ್ತುಹೊತ್ತಿಗೆ ಅವುಗಳಂ ತೆರೆದು ತುಂಬುತ್ತ
ಎತ್ತು ನಿನ್ನಯ ಮಟ್ಟ | ಜಗದಮಿತ್ರ
ಸುಜ್ಞಾನಿಗಳ ಬದುಕು ಪರರಜ್ಞಾನ ನೀಗಿಸಲು
ವಿಜ್ಞಾನಿಗಳು ಶ್ರಮಿಸಿ ಸಂಶೋಧಿಸುವರು
ಅಜ್ಞಾನಕಿಂತ ಬೇರೊಂದು ದೋಷವದಿಲ್ಲ
ಪ್ರಜ್ಞಾನ ನೀ ಗಳಿಸು | ಜಗದಮಿತ್ರ
ಭಟ್ ಸರ್;ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲವೆಂದು ಜಗದ ಮಿತ್ರನ ಮೂಲಕ ತಿಳಿಸಿದ್ದೀರಿ.ನಿಮ್ಮ ಜ್ಞಾನ ಸುಧೆಯನ್ನು ಬ್ಲಾಗಿನ ಮೂಲಕ ನಮಗೆಲ್ಲಾ ಹಂಚುತ್ತಿರುವುದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteಭಟ್ ಸರ್ ಕೆಲವು ಪದಗಳಲ್ಲಿ ಹಳೆಗನ್ನಡ ಬೆರತಂತಿದೆ .ಅರ್ಥವಾಗದೇ ಅರ್ಥವಾದದ್ದು ಇದೆ ಪೂರ್ವಜರು ಉಳಿಸಿಹೋದ ಪಳೆಯುಳೆಕಗಳ ಬಗ್ಗೆ ಯಾವೋದು ಒಂದು ಪುಸ್ತಕ ಓದಿದಂತಿದೆ ಈ ನಿಮ್ಮ ಕವನ , ನಿಜಕ್ಕು ತುಂಭಾ ಚನ್ನಾಗಿದೆ. ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಬನ್ನಿ,,,,,
ReplyDeleteಪ್ರಜ್ಞಾನವೇ ಬಾಳಿನ ಗುರಿ ಎನ್ನುವ ಸಂದೇಶವು ಅರ್ಥಪೂರ್ಣವಾಗಿದೆ.
ReplyDeleteಅದ್ಭುತ..ಅದ್ಭುತ...ಅದ್ಭುತ
ReplyDeletenice
ReplyDeleteಜಗದಮಿತ್ರ ನ ನುಡಿಗಳು ಹೀಗೆ ಬರಲಿ, ಜಡ್ಡುಗಟ್ಟಿರುವ ಮೈಮನಸ್ಸುಗಳನ್ನು ತಟ್ಟಲಿ. ತು೦ಬಾ ಚೆನ್ನಾಗಿದೆ.
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು
ReplyDelete